ಸಂಗೀತ ಕಲಾಕ್ಷೇತ್ರದಲ್ಲಿ ಉತ್ತಮಸೇವೆ ಸಲ್ಲಿಸಿ ನಾಡು, ಹೊರನಾಡುಗಳಲ್ಲಿ ಕರ್ನಾಟಕದ ಕಲಾಸಂಸ್ಕೃತಿಯ ಸವಿಯುಣಿಸಿದ್ದರೂ ಹೆಚ್ಚು ಪ್ರಚಾರಕ್ಕೆಬಾರದ ಹಲವು ಕಲಾವಿದರು ನಮ್ಮಲ್ಲುಂಟು. ಈ ಸಾಲಿನಲ್ಲೇ ಬರುವವರು ಹೆಚ್‌.ಆರ್. ನಾಗರಾಜಶಾಸ್ತ್ರಿಗಳು. ಕಲಾವಿದರನ್ನು ಕುರಿತಂತೆ ಮುದ್ರಿತವಾಗಿರುವ ಬಹುತೇಕ ಪುಸ್ತಕಗಳಲ್ಲಿ ಇವರ ಬಗೆಗೆ ಮಾಹಿತಿ ವಿವರವಾಗಿ ದೊರಕದಿರುವುದು ನಿಜಕ್ಕೂ ಖೇದದ ಸಂಗತಿ.

ನಾಗರಾಜಶಾಸ್ತ್ರಿಗಳು ವೈದಿಕ ಮನೆತನವೊಂದರಲ್ಲಿ ೧೯೧೮ರ ನವೆಂಬರ್ ೧೮ನೇ ತಾರೀಖಿನಹಂದು ಜನಿಸಿದರು. ಇವರ ಜನ್ಮಸ್ಥಳ ಹಾಸನ. ತಂದೆ ಹೆಸರಾಂತ ಹರಿಕಥಾ ವಿದ್ವಾಂಸರೂ. ಕಾವ್ಯವಾಚನ ಪರಿಣತರೂ ಆಗಿದ್ದ ಗಮಕಿ ರಾಮಕೃಷ್ಣಶಾಸ್ತ್ರಿಗಳು. ಅಂದಿನ ಮೆಟ್ಟಿಕ್ಯುಲೇಷನ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ರಾಮಕೃಷ್ಣಶಾಸ್ತ್ರಿಗಳು ಬಹುಮುಖ ಪ್ರತಿಭೆಯುಳ್ಳವರು. ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಇವರಿಗೆ ಪ್ರಭುತ್ವವಿದ್ದಿತು. ಕೀರ್ತನಕಾರರಾಗಿ ನಾಟಕಕಾರರಾಗಿ, ನಾಟಕಗಳಿಗೆ ಸಂಗೀತನಿರ್ದೇಶನ ಮಾಡಿದ್ದರು. ಮೈಸೂರು ವಾಸುದೇವಾಚಾರ್ಯರಂತಹ ಹಲವು ವಿದ್ವಾಂಸರಲ್ಲಿ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿ ಮುತ್ತಯ್ಯ ಭಾಗವತರಮತೆ ಹರಿಕಥೆ ಮಾಡುವುದನ್ನು ರೂಢಿಸಿಕೊಂಡಿದ್ದರು. ಇಷ್ಟಲ್ಲದೆ ಗಮಕವಾಚನ ಮಾಡುತ್ತಾ ಗಮಕಿ ರಾಮಕೃಷ್ಣಶಾಸ್ತ್ರಿಗಳೆಂದೇ ಖ್ಯಾತರಾಗಿದ್ದರು. ಇಂತಹ ಪ್ರತಿಭಾವಂತರ ಪುತ್ರರಾಗಿ ಜನಿಸಿದ ನಾಗರಾಜ ಶಾಸ್ತ್ರಿಗಳೂ ಪ್ರತಿಭಾವಂತ ಕಲಾವಿದರೇ ಆದುದು ಸಹಜವೇ. ವಾಸ್ತವವಾಗಿ ಪ್ರತಿಭೆ ಎಂಬುದಕ್ಕೆ ಸ್ಪೂರ್ತಿ ಮತ್ತು ಸ್ವಂತಿಕೆಗಳು ಮೂಲ ಎಂದು ಹೇಳುವುದುಂಟು. ಅಂತಹ ತಮ್ಮ ಸ್ವಂತಿಕೆಯನ್ನು ಮೆರೆದು ಅತ್ಯುತ್ತಮ ಕಲಾವಿದರೆನಿಸಿದ್ದರು ನಾಗರಾಜಶಾಸ್ತ್ರಿಗಳು.

ಶಾಲಾದಿನಗಳಲ್ಲಿ ನಾಟಕಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಅಭಿನಯದಿಂದ ಅಧ್ಯಾಪಕರು ಹಾಗೂ ಗೆಳೆಯರ ಮೆಚ್ಚುಗೆಗೆ ಪಾತ್ರರಾಗಿದ್ದರು. ವಿದ್ವಾನ್‌ ಬಿ.ಎಸ್‌. ರಮಯ್ಯರ್ ಮತ್ತು ವಿದ್ವಾನ್‌ ಎನ್‌. ಚೆನ್ನಕೇಶವಯ್ಯನವರಲ್ಲಿ ಶಾಸ್ತ್ರೀಯ ಸಂಗೀತವನ್ನು ಅವರು ಅಭ್ಯಾಸಮಾಡಿದ್ದರು. ಪೂರ್ವಕರ್ಮವೋ, ದುರದೃಷ್ಟವೋ ಬಹುಕಾಲ ಇವರು ಗಾಯನದಲ್ಲಿ ತೊಡಗಲಾಗಲಿಲ್ಲ. ಶಾರೀರದ ತೊಂದರೆ ಮೊದಲಾಯಿತು. ಹೀಗಾಗಿ ಶಾಸ್ತ್ರಿಗಳು ವಾದ್ಯಸಂಗೀತಾಭ್ಯಾಸ ಆರಂಭಿಸಿದರು. ಈ ವೇಳೆಗಾಗಲೇ ಅವರಿಗೆ ಗಾಯನದ ಮೂಲಕ ರಾಗಗಳ ಪರಿಚಯ, ಗಮಕಾದಿಗಳ ಅಳವಡಿಕೆ, ಕೃತಿರಚನೆಗಳ ಬಗೆಗೆ ಅರಿವಿದ್ದುದರಿಂದ ವಾದ್ಯಸಂಗೀತ ಕಲಿಯುವುದು ಸುಲಭವಾಯಿತು. ಮೊದಲಿಗೆ ಅವರು ಚಾಮುಂಡೇಶ್ವರಿ ನಾಟಕ ಕಂಪನಿಯಲ್ಲಿದ್ದ ಶಿವಪ್ಪ ಎಂಬುವರಲ್ಲಿ ಹಾರ್ಮೋನಿಯಂ ಅಭ್ಯಾಸ ಮಾಡಿದರು. ಇದಕ್ಕೆ ಕಾರಣ, ತಮ್ಮ ತಂದೆಯವರು ನಡೆಸುತ್ತಿದ್ದ ಹರಿಕಥಾ ಕಾರ್ಯಕ್ರಮಕ್ಕೆ ಪಕ್ಕವಾದ್ಯ ನುಡಿಸುವುದಾಗಿದ್ದಿರಬಹುದು. ಅಂತೆಯೇ ಸಾಕಷ್ಟು ತರಬೇತಿಯಾದನಂತರ ತಂದೆಯವರ ಎಷ್ಟೋ ಹರಿಕಾ ಕಾರ್ಯಕ್ರಮಗಳಿಗೆ ವಾದ್ಯಸಹಕಾರ ನೀಡಿದರು.

ಮುಂದೆ ಸುಗಮಸಂಗೀತ, ಚಿತ್ರಸಂಗೀತ ಹಾಗೂ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತಗಳ ಪ್ರಾವೀಣ್ಯ ಪಡೆದಿದ್ದ ಶ್ರೀ.ಪಿ. ಕಾಳಿಂಗರಾಯರಿಂದ ಹಿಂದೂಸ್ತಾನಿ ಸಂಗೀತ ಕಲಿಯಲಾರಂಭಿಸಿದರು. ಅನಂತರ ಸ್ವಯಂ ಆಚಾರ್ಯರಾಗಿ ಹಿಂದೂಸ್ತಾನೀ ವಾದ್ಯವಾದ ದಿಲ್‌ರುಬಾವನ್ನು ನುಡಿಸಲು ಅಭ್ಯಸಿಸಿ ಈ ವಾದ್ಯದೊಂದಿಗೇ ವಿಶೇಷವಾಗಿ ಗುರುತಿಸಲ್ಪಟ್ಟರು. ಇವರ ಹೆಸರಿನೊಂದಿಗೇ ದಿಲ್‌ರುಬಾ ವಾದ್ಯ ಸೇರಿಕೊಂಡು “ದಿಲ್‌ರುಬಾ ನಾಗರಾಜಶಾಸ್ತ್ರಿಗಳು” ಎಂದೇ ಕರೆಯಲ್ಪಟ್ಟರು.

ಕರ್ನಾಟಕ ಸಂಗೀತ ಪದ್ಧತಿಯೇ ಹೆಚ್ಚು ಪ್ರಚಲಿತವಿದ್ದ ಕಾಲದಲ್ಲಿ ಹಿಂದೂಸ್ತಾನೀ ಸಂಗೀತ ಪದ್ಧತಿಯ ದಿಲ್‌ರುಬಾ ವಾದ್ಯದಲ್ಲಿ ತನಿ ಕಚೇರಿಗಳನ್ನು ಮಾಡಿರುವುದುಂಟು. ಅಂತೆಯೇ ೧೯೪೫ರಲ್ಲಿ ಇವರು ಮದರಾಸು ಆಕಾಶವಾಣಿ ಕೇಂದ್ರದಿಂದ ಅವರ ಕಚೇರಿ ಪ್ರಸಾರವಾಯಿತು. ಮೈಸೂರು, ಹಾಸನ, ಧಾರವಾಡ ಮುಂತಾಗಿ ಸ್ವದೇಶದಲ್ಲೂ ಪೂರ್ವ ಮತ್ತು ಪಶ್ಚಿಮ ಜರ್ಮನಿಯಂತಹ ವಿದೇಶಗಳಲ್ಲೂ ಅವರು ಕಾರ್ಯಕ್ರಮ ನೀಡಿದರು. ಅಲ್ಲದೆ ಹಿಂದೂಸ್ತಾನೀ ಸಂಗೀತ ಕ್ಷೇತ್ರದ ದಿಗ್ಗಜರದ ಪಂಡಿತ್‌ ಭೀಮ್‌ಸೇನ್‌ ಜೋಷಿ, ಡಾ. ಗಂಗೂಬಾಯಿ ಹಾನಗಲ್, ಪಂಡಿತ್‌ ಬಸವರಾಜ ರಾಜಗುರು, ಪಂಡಿತ್‌ ಅರ್ಜುನ್‌ ಸಾ ನಾಕೋಡ್‌, ಹೀರಾಬಾಯಿ, ಬರೋಡೇಕರ್, ಬೇಗಂ ಅಕ್ತರ್, ಸರಸ್ವತೀ ಬಾಯಿ ರಾಣೆ ಮೊದಲಾದವರಿಗೂ ಸಾಥಿ ನೀಡಿದ ಹೆಗ್ಗಳಿಕೆ. ಅವರ ಪ್ರತಿಭೆಯನ್ನು ಗುರುತಿಸಿದ ಕರ್ನಾಟಕ ಸರ್ಕಾರವು ಅವರಿಗೆ ಮಾಸಾಶನವನ್ನು ಕೊಟ್ಟು ಗೌರವಿಸಿತು.

ಶಾಸ್ತ್ರಿಗಳ ಸಂಗೀತ ವಿದ್ವತ್ತನ್ನೂ ವಾದ್ಯ ನುಡಿಸುವ ಶೈಲಿಯನ್ನೂ ಮೆಚ್ಚಿದ ಎಷ್ಟೋ ಮಂದಿ ಕರ್ನಾಟಕ ಸಂಗೀತಜ್ಞರೂ ಉಂಟು. ಅಂತಹವರಲ್ಲಿ ವೀಣಾ ವಿದ್ವಾನ್‌ ಎಂ.ಜೆ. ಶ್ರೀನಿವಾಸ ಅಯ್ಯಂಗಾರ್ಯರೂ ಒಬ್ಬರು. ಎಂ.ಜೆ.ಎಸ್‌. ಅವರು  ಒಮ್ಮೆ ತಮ್ಮ ಶಿಷ್ಯರೊಂದಿಗಿರುವಾಗ ದೂರದಲ್ಲಿ ಕುಳಿತಿದ್ದ ನಾಗರಾಜಶಾಸ್ತ್ರಿಗಳನ್ನು ತೋರಿಸಿ, ‘ಅವರ್ಯಾರು ನಿಮಗೆ ಗೊತ್ತೇ?’ ಎಂದು ಶಿಷ್ಯರನ್ನು ಕೇಳಿದರಂತೆ. ಉತ್ತರಿಸಲಾಗದಿದ್ದ ವಿದ್ಯಾರ್ಥಿಗಳಿಗೆ “ಇವರೊಬ್ಬ ಅಪೂರ್ವ ಕಲಾವಿದರು. ದಿಲ್‌ರುಬಾ ತುಂಬ ಚೆನ್ನಗಿ ನುಡಿಸುತ್ತಾರೆ.” ಎಂದು ಹೇಳಿದರಂತೆ.

ಸಾಧಾರಣ ಮೈಕಟ್ಟಿನ, ಆರೋಗ್ಯವಂತ ನಾಗರಾಜ ಶಾಸ್ತ್ರಿಗಳು ಸ್ವಭಾವತಃ ಸೌಜನ್ಯಶೀಲರು ಹಾಗೂ ಸ್ನೇಹಪರರು. ಎಲ್ಲರೊಂದಿಗೂ ಮೈತ್ರಿಯಿಂದಿದ್ದವರು. ತಮ್ಮ ಜೊತೆಯಲ್ಲಿದ್ದ ಬೇರೆ ಯಾರಲ್ಲೇ ಆಗಲಿ ಮನಸ್ತಾಪವೇನಾದರೂ ಏರ್ಪಟ್ಟರೆ ಪರಸ್ಪರ ರಾಜಿಮಾಡಿಸಿ ಸ್ನೇಹ ಎಂದಿನಂತೆಯೇ ಉಳಿಯುವಂತೆ ಮಾಡುತ್ತಿದ್ದರು.

ನಾಗರಾಜಶಾಸ್ತ್ರಿಗಳು ಮೈಸೂರು, ಬೆಂಗಳೂರು ಆಕಾಶವಾಣಿ ನಿಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಂದು ಮೈಸೂರು ಆಕಾಶವಾಣಿ ವಾದ್ಯಗೋಷ್ಠಿಯು ಅತ್ಯಂತ ಉನ್ನತ ಮಟ್ಟದ್ದು ಎಂಬ ಪ್ರಶಂಸೆಗೆ ಪತ್ರವಾಗಿದ್ದಿತು. ಈ ಗೋಷ್ಠಿಯಲ್ಲಿದ್ದ ಕಲಾವಿದರಲ್ಲಿಕ ನಾಗರಾಜಶಾಸ್ತ್ರಿಗಳೂ ಒಬ್ಬರಾಗಿದ್ದರು. ಇದೇ ನಿಲಯದಿಂದ ಪ್ರಸಾರಗೊಳ್ಳುತ್ತಿದ್ದ ನಾಟಕಗಳಲ್ಲೂ ಅವರು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಪ್ರಸಾರಗೊಳ್ಳಲಿದ್ದ ನಾಟಕಗಳಲ್ಲಿ ಸಮಯೋಚಿತವಾಗಿ ಹಿನ್ನೆಲೆಯ ವಿಶಿಷ್ಟ effect ಗಳನ್ನು ತರುವಲ್ಲಿ ಶಾಸ್ತ್ರಿಗಳು ಬಹಳ ಚತುರರಿದ್ದರು. ಇವರೊಂದಿಗೆ ಗೋಟುವಾದ್ಯ ವಾದಕ ಎಂ.ವಿ.ವರಾಹಸ್ವಾಮಿಯವರೂ ಸೇರಿ ಇಂತಹ effect ಗಳನ್ನು ಪರಿಣಾಮಕಾರಿಯಾಗಿ ಮೂಡಿಸುತ್ತಿದ್ದುದು ಇವರ ಸೃಜನಾತ್ಮಕತೆಗೆ ಒಂದು ನಿದರ್ಶನ.

ಒಮ್ಮೆ ಇಂತಹ ರೇಡಿಯೋ ನಾಟಕವೊಂದರಲ್ಲಿ, ಮದುವೆಯಾಗಲಿರುವ ಯುವ ಪ್ರೇಮಿಗಳಿಬ್ಬರು ತೋಟದಲ್ಲಿ ಕಟ್ಟಿದ್ದ ಉಯ್ಯಾಲೆಯಾಡುವ ಪ್ರಸಂಗ. ಉಯ್ಯಾಲೆ ಅತ್ತಿಂದಿತ್ತ ತೂಗಾಡುವ ಶಬ್ದ ಮೂಡಿಸಲು ನಿಜವಾದ ದೊಡ್ಡದೊಡ್ಡ ಕೊಂಬೆಗಳನ್ನೇ ಕಡಿದು ತಂದು ಮೂನಾಲ್ಕು ಮಂದಿ ಸೇರಿ ಅವುಗಳನ್ನು ಅತ್ತಿಂದಿತ್ತ ಉಯ್ಯಾಲೆ ತೂಗಿದಂತೆ ಜೋರಾಗಿ ಆಡಿಸುತ್ತ ದಿಟವಾದ ಉಯ್ಯಲೆಯೇ ಆಡುತ್ತಿದೆ ಎಂಬ ಭಾವನೆಯನ್ನು ತಂದಿದ್ದರಂತೆ. ಈ ನಾಟಕವನ್ನು ಕೇಳಿದ ಅನೇಕ ಶ್ರೋತೃಗಳು ಇಂತಹ ಶಬ್ದವನ್ನು ಪ್ರಸಾರದಲ್ಲಿ ಹೇಗೆ ಉತ್ಪತ್ತಿಸಿದಿರಿ ಎಂದು ಚಕಿತರಾಗಿದ್ದರಂತೆ! ಇಂತಹ ಎಷ್ಟೋ ಸಂದರ್ಭಗಳಲ್ಲಿ ಶಾಸ್ತ್ರಿಗಳು ಸಕ್ರಿಯವಾಗಿ ಪಾಲ್ಗೊಂಡು ಸೃಜನಾತ್ಮಕತೆ ಮೆರೆದಿದ್ದರೆಂಬುದು ಗಮನಾರ್ಹ.

ನಾಗರಾಜಶಾಸ್ತ್ರಿಗಳು ಮೈಸೂರಿನ ಶ್ರೀರಾಮಕೃಷ್ಣಾಶ್ರಮದ ಕೆಲವು ಯತಿಗಳಿಗೆ ಸಂಗೀತಪಾಠ ಹೇಳುತ್ತಿದ್ದರು. ೧೯೫೬ರಿಂದ ೧೯೭೯ರವರೆಗೆ ಬೆಂಗಳೂರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಮೈಸೂರಿನ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಲ್ಲಿದ್ದರು.

ಶಾಸ್ತ್ರಿಗಳ ಮನೆತನವೇ ಕಲಾವಿದರ ಮನೆತನವಾಗಿದ್ದು ಇವರ ಸಹೋದರ ಎಚ್‌.ಆರ್. ಸೀತಾರಾಮಶಾಸ್ತ್ರಿಗಳು ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತಗಳೆರಡರಲ್ಲೂ ಮುಂಚೂಣಿಯಲ್ಲಿದ್ದರು. ಸಹೋದರಿ ಗಾಯಿತ್ರಿಸುಬ್ಬರಾವ್‌ ಆಕಾಶವಾಣಿ ಕಲಾವಿದೆಯಾಗಿದ್ದಾರೆ.

 

ನಾಗರಾಜಶಾಸ್ತ್ರಿಗಳನ್ನು ಕುರಿತ ಈ ಲೇಖನ ಸಿದ್ಧಪಡಿಸುವಲ್ಲಿ ಮಾಹಿತಿ ನೀಡಿ ಸಹಾಯಮಾಡಿದ ಮೈಸೂರು ಆಕಾಶವಾಣಿ ನಿಲಯದ ನಿರ್ದೇಶಕಿಯರಾಗಿದ್ದ ಶ್ರೀಮತಿ ಪುಟ್ಟತಾಯಮ್ಮನವರು, ಗಮಕಿ ಕೃ.ರಾಮಚಂದ್ರ ಅವರು, ಬೆಂಗಳೂರು  ಆಕಾಶವಾಣಿ ನಿಲಯ ಕಲಾವಿದರಾದ ವಿಶ್ವನಾಥ ನಾಕೋಡ್‌ರವರು ಮುಂತಾದವರಿಗೆ ಕೃತಜ್ಞತೆಗಳನ್ನು ಸಲ್ಲಿಸಲಿಚ್ಛಿಸುತ್ತೇನೆ.