ಶ್ರೀಮತಿ ಎಚ್‌.ಆರ್ ಲೀಲಾವತಿಯವರು ನಮ್ಮೆದುರಿನ ಸುಗಮ ಸಂಗೀತ ಪ್ರಕಾರದ ಮೊದಲ ಪರಂಪರೆಯವರು. ಸುಗಮ ಸಂಗೀತದ ಸಾಮ್ರಾಜ್ಞಿಯಾಗಿ, ಸುಗಮ ಸಂಗೀತದ ಬನದಲ್ಲಿ ಚೈತ್ರ ಚಿಮ್ಮಿಸಿದ ಕರ್ನಾಟಕದ ಕೋಗಿಲೆಯಾಗಿ ಐವತ್ತೆರಡು ವಸಂತಗಳಿಂದ ಹಾಡುತ್ತಾ ಬಂದಿರುವ ಅಪೂರ್ವ ಗಾಯಕಿ. ಸಾಧನೆ ಬೋಧನೆಗಳೆರಡರಲ್ಲೂ ದೊಡ್ಡ ಹೆಸರು ಮಾಡಿದವರು. ಐವತ್ತರ ದಶಕದಿಂದ ನಾಲ್ಕು ದಶಕಗಳವರೆಗೆ ಸುಗಮ ಸಂಗೀತ ಸಾಮ್ರಾಜ್ಞಿಯಾಗಿ ಮೆರೆದ ಇವರ ಗಾಯನದ ನಾದಸುಖ ಕೇಳಿದವರಿಗಷ್ಟೇ ಅನುಭವ. ಮಂಜುಳ ದನಿಯಲ್ಲಿ ನಾದದಲೆಗಳು ಉಲಿಯುವ ಉಲಿತ, ಬಿರಕಗಳು, ಅಸ್ಸಾಮಿ, ಗುಜರಾತಿ, ಮಲಯಾಳ ಭಾಷೆಗಳಿಂದ ಮಾತೃಭಾಷೆಯಾದ ಕನ್ನಡ ಭಾಷೆಯ ಭಾವಗಈತೆಗಳವರೆಗೆ ಇವರ ಗಾನ ಸಾಮ್ರಾಜ್ಯ ವಿಸ್ತಾರವಾಗಿದೆ. ಶ್ರುತಿಬದ್ಧ, ಲಯಬದ್ಧವಾದ ಅವರ ಗಾಯನದಲ್ಲಿ ಎಂದೂ ಆವೇಶ, ಉದ್ವೇಗ, ಸಂದೇಹಗಳ ಸುಳಿವಿಲ್ಲ. ಖಚಿತ, ಶಾಂತ, ಗಂಭೀರ ಶೈಲಿಯ ಗಾಯನಕ್ಕೆ ಮಾಧುರ್ಯದ ಮಹತ್‌ ಸ್ಪರ್ಶ. ಕರ್ನಾಟಕದ ಮೂಲೆ ಮೂಲೆಗೂ ಕಾವ್ಯ ಕಂಪನ್ನು ಪಸರಿಸಿದ ಕೀರ್ತಿ ಲೀಲಾವತಿಯವರಿಗೆ ಸಲ್ಲುತ್ತದೆ. ಸಂಗೀತ ಸಂಯೋಜನೆ, ಗೀತೆಗಳ ರಚನೆ, ಗೀತಗಾಯನ ಈ ಮೂರು ಕ್ಷೇತ್ರಗಳಲ್ಲಿಯೂ ಲೀಲಾವತಿಯವರು ಲೀಲಾಜಾಲವಾಗಿ ಕೈಯಾಡಿಸಿ ತಮ್ಮ ಛಾಪು ಮೂಡಿಸಿದ್ದಾರೆ. ಸಂಗೀತದಲ್ಲಿ ಬದುಕನ್ನು, ಬದುಕಿನಲ್ಲಿ ಸಂಗೀತವನ್ನೂ ತುಂಬಿಕೊಂಡ ಅಪರೂಪದ ಗಾಯಕಿ, ಬೋಧಕಿ, ಸಂಯೋಜಕಿ, ಲೇಖಕಿ.

ಅಠಾಣ ರಾಮಣ್ಣ ಎಂದೇ ತಮ್ಮ ವಿಶಿಷ್ಟ ಗಾಯನದಿಂದ ಬಿರುದಾಂಕಿತರಾಗಿದ್ದ ಹಾಸನದ ರಾಮಣ್ಣ ಮತ್ತು ಜಯಲಕ್ಷ್ಮಮ್ಮನವರ ಮುದ್ದಿನ ಮಗಳಾಗಿ ೮.೨.೧೯೩೪ರಂದು ಇಸವಿ ಬೆಂಗಳೂರಿನಲ್ಲಿ ಲೀಲಾವತಿಯವರು ಜನಿಸಿದರು . ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಪ್ರಸಿದ್ಧ ರಾಗವಾದ ಅಠಾಣ ರಾಘದ ಅಸಾಧಾರಣ ಗಾಯನದಿಂದ ಬಾಪು ರಾಮಣ್ಣನವರಿಗೆ ಅಠಾಣ ರಾಮಣ್ಣ ಎಂದೇ ಜನ ಕರೆಯುವುದು ವಾಡಿಕೆಯಾಗಿತ್ತು. ಲೀಲಾವತಿಯವರ ತಂದೆ-ತಾಯಿ ಇಬ್ಬರ ಮನೆತನದಲ್ಲೂ ಸಂಗೀತ ಸಾಹಿತ್ಯದ ವಾತಾವರಣ ಢಾಳಾಗಿಯೇ ಇದ್ದಿದ್ದರಿಂದ ಬಾಲ್ಯದಿಂದಲೇ ಸಂಗೀತ ಅಂತರ್ಗತವಾಗಲು ಪ್ರಾರಂಭಿಸಿತು. ರಾಮಣ್ಣನವರ ತಾಯಿ ಮರಿಯಮ್ಮ ಹಾಡಿನ ಮರಿಯಮ್ಮ ಎಂದೇ ಪ್ರಖ್ಯಾತರಾಗಿದ್ದರು. ಶಾಸ್ತ್ರೀಯ ಸಂಗೀತ ಕಲಿಯದಿದ್ದರೂ, ಸಂಪ್ರದಾಯ ಹಾಡುಗಳು, ದೇವರನಾಮ, ಹಬ್ಬದ ಹಾಡುಗಳ ಪರಂಪರೆ ಮರಿಯಮ್ಮನವರಿಗಿತ್ತು. ಲೀಲಾವತಿಯವರ ತಾಯಿ ಜಯಲಕ್ಷ್ಮಮ್ಮನವರ ತಾತ, ‘ಹರಿಕಥೆ ರಾಮಣ್ಣ’ ಎಂದೇ ಪ್ರಸಿದ್ಧರಾಗಿದ್ದರು. ಹೀಗೆ ಲೀಲಾವತಿಯವರು ಅಂಬೆಗಾಲಿಡುವ ಅಂಗಳದಲ್ಲೇ ಸಂಗೀತ ಸಾಹಿತ್ಯದ ರಂಗವಲ್ಲಿ ಎಳೆಎಳೆಯಾಗಿ ಬಿಡಿಸಲ್ಪಟ್ಟಿತ್ತು.

ಅಠಾಣ ರಾಮಣ್ಣನವರು ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರ ಶಿಷ್ಯರಾಗಿದ್ದರು. ಶ್ರೀಯವರ ಇಂಗ್ಲಿಷ್‌ಗೀತೆಗಳಿಗೆ ರಾಗಸಂಯೋಜನೆ ಮಾಡಿ ಹಾಡುತ್ತಿದ್ದರು. ರನ್ನ, ಪಂಪ, ಜನ್ನ, ಹರಿಹರರ ಕಾವ್ಯಗಳನ್ನು ವಾಚನ ಮಾಡುತ್ತಿದ್ದರು. ಜಯಲಕ್ಷ್ಮಮ್ಮನವರು ವೃತ್ತಿರಂಗಭೂಮಿಯ ಪ್ರಸಿದ್ಧ ನಟರಾಗಿದ್ದ ಕೊಟ್ಟೂರಪ್ಪನವರ ಶಿಷ್ಯೆಯಾಗಿದ್ದರು. ಶಾಸ್ತ್ರೀಯ ಸಂಗೀತದೊಂದಿಗೆ ಹಿಂದಿ ಹಾಡುಗಳನ್ನು ಕಲಿತಿದ್ದರು. ಸ್ತೋತ್ರಗಳು, ಸಂಪ್ರದಾಯ ಹಾಡುಗಳು, ಕಥನ ಕವನಗಳು ಅವರ ದೈನಂದಿನ ರೂಢಿಯಾಗಿತ್ತು. ಬಾಲಕಿ ಲೀಲಾವತಿ ತಾಯ ಮಡಿಲಲ್ಲೇ ಇವೆಲ್ಲದರ ಗಾಢ ಪರಿಮಳವನ್ನು ಆಸ್ವಾದಿಸಿ ಅರಳುತ್ತ ಹೋದಳು. ಎಳವೆಯಲ್ಲೇ ಚಿಗುರಿದ ಆಸೆಗೆ ಮನೆಯ ವಾತಾವರಣ ನೀರೆರೆದು ಪೋಷಿಸಲು ತೊಡಗಿತು. ದೊಡ್ಡವರು ಮನೆಯಲ್ಲಿ ಪ್ರತಿದಿನ ಮಕ್ಕಳನ್ನು ದೇವರ ಮುಂದೆ ಕೂರಿಸಿ ಭಜನೆ, ಸ್ತೋತ್ರಗಳನ್ನು ಕಲಿಸುವುದು ಪರಿಪಾಟವಾಗಿದ್ದು ಲೀಲಾವತಿ ಇಬ್ಬರು ಅಣ್ಣಂದಿರು ಹಾಗೂ ಒಬ್ಬ ತಮ್ಮನೊಡನೆ ಪ್ರತಿದಿನ ಸಂಜೆ ಭಜನೆ ಸ್ತೋತ್ರ ಮಾಲೆಗಳನ್ನು ಹಾಡಿಕೊಳ್ಳುತ್ತಿದ್ದರು . ಮನೆಯಲ್ಲಿ ಹಿರಿಯರಿಂದ, ಕಿರಿಯವರೆಗೆ ಎಲ್ಲರೂ ಹಾಡುತ್ತಿದ್ದರು . ಗ್ರಾಮೊಫೋನ್‌ ಇದ್ದಿದ್ದರಿಂದ ಸೈಗಾಲ್‌, ಪಂಕಜ್‌ ಮಲ್ಲಿಕ್‌, ಜೂತಿಕಾರಾಯ್‌ ಮುಂತಾದವರು ಹಾಡಿದ ಸಿನಿಮಾ ಹಾಡುಗಳು, ಬಾಲಕಿ ಲೀಲಾವತಿಗೆ ಕಂಠಪಾಠವಾಗಿತ್ತು . ಅಂದು ದೊಡ್ಡ ಹೆಸರಾಗಿದ್ದ ಹಿಂದುಸ್ತಾನಿಗಿದ್ದ ಗಾಯಕಿರಾದ ಗೋಹರ್ ಜಾನ್‌, ಕೇಸರ್ ಬಾಯಿ ಅವರುಗಳು ಹಾಡಿದ ಧ್ವನಿ ತಟ್ಟೆಗಳು ಬಾಲಕಿ ಲೀಲಾವತಿ ಕಿವಿಯ ಮೇಲೆ ಬಿದ್ದು ಶಾಸ್ತ್ರೀಯ ಸಂಗೀತಕ್ಕೆ ಹದವಾದ ಭೂಮಿಕೆಯನ್ನು ಸಿದ್ಧಪಡಿಸಿದ್ದವು.

ಬಾಲೆ ಲೀಲಾವತಿ ಕೇಳಿದೊಡನೆ ಯಾವುದೇ ಹಾಡನ್ನು ಗುನುಗುನುಗಿಸುತ್ತಾ ಕರತಲಾಮಲಕ ಮಾಡಿಕೊಳ್ಳಲು ಮನೆಯ ಸಂಗೀತ ವಾತಾವರಣ ಕಾರಣವಾಯಿತು. ಹಾಡೆಂದರೆ ಸಾಕು ಎಲ್ಲಿಗಾದರೂ ಓಡಿಹೋಗಿ ನಿಂತು, ಕೇಳಿ, ಕಲಿತು ಬರುತ್ತಿದ್ದ ಲೀಲಾವತಿ ತನ್ನ ಗೆಳತಿಯರಾರಾದರೂ  ಹೊಸ ಹಾಡನ್ನು ಹಾಡಿದರೆ ಆ ಕೂಡಲೆ ಅವರಿಂದ ಆ ಹಾಡನ್ನು ಕಲಿತೇ ಬರುತ್ತಿದ್ದಳು. ಹಾಡಿಗೆ ಬದಲಾಗಿ ಅಜ್ಜ ತಂದಿಟ್ಟಿದ್ದ ಕಿಕ್ಕೇರಿಯ ಹಲಗೆ ಬೆಲ್ಲವನ್ನೇ ಗೆಳತಿಯರ ಮಡಿಲಿಗೆ ತುಂಬುತ್ತಿದ್ದಳು.

ತೆಲುಗು, ಹಿಂದಿ, ಮರಾಠಿ ಹಾಡುಗಳನ್ನು ಕಲಿಯುತ್ತಿದ್ದವಳಿಗೆ ಸಂಗೀತದ ಓಂಕಾರ ಪ್ರಾರಂಭವಾದದ್ದು ಏಳು ವರುಷದವಳಾದಾಗ. ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸರೂ, ಊಂಛ ವೃತ್ತಿ ಮಾಡುತ್ತಿದ್ದವರೂ ಆದ ರಾಮಸ್ವಾಮಿ ಎಂಬುವರಲ್ಲಿ ಲೀಲಾವತಿಗೆ ಶಾಸ್ತ್ರೀಯ ಸಂಗೀತದ ಮೊಲದಲ ಪಾಠ ಆರಂಭವಾಗಿ ವರ್ಣದ ಪಾಠದ ತನಕ ಬಂದು ನಿಂತಿತು. ಕಾರಣ ಲೀಲಾವತಿಯವರ ತಂದೆ ಬಾಪುರಾಮಣ್ಣನವರು ಸಿಲ್ಕ್‌ ಫಿಲೇಚರ್ ನಲ್ಲಿ ಮ್ಯಾನೇಜರಾಗಿದ್ದರಿಂದ ಊರಿಂದ ಊರಿಗೆ ಅವರಿಗೆ ವರ್ಗವಾಗುತ್ತಿತ್ಗತು.

ಲೀಲಾವತಿಗೆ ರಂಗ ಸಂಗೀತದ ಗುಂಗು ಹತ್ತಿದ್ದು, ತಂದೆ ರಾಮಣ್ಣನವರಿಗೆ ಟಿ. ನರಸಿಪುರಕ್ಕೆ ವರ್ಗವಾದಾಗ ಗುಬ್ಬಿವೀರಣ್ಣನವರ ಕಂಪನಿ, ಶೇಷಕಮಲ ಕಲಾ ಮಂಡಳಿ “ಮಂಜುನಾಥ ಥಿಯೇಟರ್ಸ್”, ಕರ್ನಾಟಕ ನಾಟಕ ಕಂಪನಿ ಇವುಗಳೆಲ್ಲ ಟಿ. ನರಸಿಪುರದಲ್ಲಿ ಟೆಂಟು ಹಾಕಿ ನಾಟಕ ಪ್ರದರ್ಶನವಿಡುತ್ತಿದ್ದರು. ನಾಟಕ ಪ್ರದರ್ಶನವೇ ಅಂದಿನ ಪ್ರಮುಖ ಮನೋರಂಜನೆಯಾಗಿದ್ದ ಕಾಲ. ಗುಲೇಬಕಾವಲಿ, ರಾಮಾಂಜನೇಯ ಯುದ್ಧ, ಕೃಷ್ಣಲೀಲೆ, ಸದಾರಮೆ, ನಿರುಪಮ, ಸುಭದ್ರಾ ಪರಿಣಯ, ದಾನಶೂರ ಕರ್ಣ ಮುಂಥಾದ ನಾಟಕಗಳಲು ಅಂಧು ಪ್ರಸಿದ್ಧವಾಗಿದ್ದವು. ಆ ಊರಿನ ಹಿರಿಯರಾಗಿದ್ದ ರಾಮಣ್ಣನವರಿಗೆ ಎಲ್ಲಾ ನಾಟಕ ಪ್ರದರ್ಶನಕ್ಕೂ ಆಹ್ವಾನವಿರುತ್ತಿತ್ತು. ಹನ್ನೆರಡು ವರುಷದ ಬಾಲೆಲೀಲಾವತಿ ತಾಯಿತಂದೆಯರೊಡೆನ ಪ್ರತಿಯೊಂದು ನಾಟಕವನ್ನು ತಪ್ಪದೆ ನೋಡುತ್ತಿದ್ದಳು. ಲೀಲಾವತಿ ನಾಟಕದ ಹಾಡುಗಳನ್ನು  ಒಮ್ಮೆ ಕೇಳಿದಾಗಲೇ ಕಂಠಪಾಠ ಮಾಡಿಕೊಳ್ಳುತ್ತಿದ್ದಳು ನಾಟಕದ ಕಲಾವಿದರು ಮರುದಿನ ಅವರ ಮನೆಗೆ ಅತಿಥಿಗಳಾಗಿ ಬರುವುದು ಸರ್ವೇ ಸಾಮಾನ್ಯವಾಗಿತ್ತು. ಅಂಥಾ ಕಲಾವಿದರು ಮನೆಗೆ ಅತಿಥಿಗಳಾಗಿ ಬಂದಾಗ ತನಗೆ ಪ್ರಿಯವಾದ ಹಾಡುಗಳನ್ನು ಕಲಿಯುವುದು ಹನ್ನೆರಡರ ಪೋರಿ ಲೀಲಾವತಿಯ ಕಾಯಕವಾಯಿತು. ವೃತಿರಂಗ ನಾಟಕಗಳ ಸೊಗಸು, ರಂಗಗೀತೆಗಳ ಗುಂಗು ಲೀಲಾವತಿಯ ಕಂಠಕ್ಕೆ ಹೊಸ ಅನುಭವಗಳನ್ನು ತಂದಿಟ್ಟವು.

ಲೀಲಾವತಿಯ ಸಂಗೀತ ಶಿಕ್ಷಣ ಮುಂದುವರೆದದ್ದು ಆಕೆಯ ತಂದೆಗೆ ಚಾಮರಾಜನಗರಕ್ಕೆ ವರ್ಗವಾದಾಗ ಚಾಮರಾಜನಗರದ ‘ಸಂಪತ್‌’ ಎನ್ನುವ ಸಂಗೀತ ವಿದ್ವಾಂಸರ ಬಳಿ ಲೀಲಾವತಿಯ ಸಂಗೀತ ಪಾಠ ಮುಂದುವರೆಯಿತು. ವರ್ಣ ಮತ್ತು ಕೀರ್ತನೆಗಳ ಪಾಠವಾಗುತ್ತಿದ್ದಂತೆ ರಾಮಣ್ಣನವರಿಗೆ ಮತ್ತೆ ಮೈಸೂರಿಗೆ ವರ್ಗವಾಯಿತು. ಮೈಸಊರಿನಲ್ಲಿದ್ದ ಎನ್‌. ಚೆನ್ನಕೇಶವಯ್ಯನವರ ಬಳಿ ಲೀಲವತಿಯ ಸಂಗೀತ ಪಾಠ ಮುಂದುವರೆಯಿತು. ಕ್ರೈಸ್ತದ ಕಿಂಗ್‌ ಕಾನ್ವೆಂಟಿನಲ್ಲಿ ಓದುತ್ತಿದ್ದ ಲೀಲಾವತಿ ಶಾಲೆ ಮುಗಿದೊಡನೆಯೇ ಡಿ. ಸುಬ್ಬಯ್ಯ ರಸ್ತೆಯಲ್ಲಿದ್ದ ಗುರುಗಳ ಮನೆಗೆ ಹೋಗಿ ಸಂಗೀತ ಪಾಠ ಹೇಳಿಸಿಕೊಂಡು ಬರುತ್ತಿದ್ದಳು. ಸರಳರೂ, ಸಜ್ಜನರರೂ ಆಗಿದ್ದ ಚೆನ್ನಕೇಶವಯ್ಯನವರು ಶಾಲೆಯಿಂದ ದಣಿದು ಬಂದ ಶಿಷ್ಯೆಗೆ ಮೊದಲು ತಿಂಡಿ ಕಾಫಿ ಕೊಡಿಸಿ ನಂತರ ಸಂಗೀತ ಪಾಠ ಮಾಡುತ್ತಿದ್ದರು. ಹೀಗೆ ಹಲವಾರು ವರುಷಗಳು ಸಂಗೀತ ಪಾಠಗಳಾದವು.

ತಮ್ಮ ಶಿಷ್ಯೆ ಕೋಗಿಲೆಯ ಮರಿ ಎಂಬುದು ಗುರು ಚೆನ್ನಕೇಶವಯ್ಯನವರಿಗೆ ಆರಂಭದಲ್ಲೇ ತಿಳಿಯಿತು. ತಂದೆಯ ಪ್ರೀತಿ, ಗುರುವಿನ ನೀತಿಯಿಂದ ಶಿಷ್ಯೆಯನ್ನು ನೋಡಿಕೊಂಡು, ನಿಸ್ವಾರ್ಥದಿಂದ ತಮ್ಮ ವಿದ್ಯೆಯನ್ನು ಧಾರೆ ಎರೆದರು. ತಾವು ಕಲಿಸಿದ್ದೇ ಅಲ್ಲದೆ ತಮ್ಮ ಸ್ನೇಹಿತರಾದ ನಾಗಪುರದ ಸುಬ್ಬರಾಯರಿಂದಲೂ ಲೀಲಾವತಿಗೆ ಹಿಂದಿ ವರ್ಣ, ಕೀರ್ತನೆ, ಭಜನೆಗಳ ಪಾಠ ಮಾಡಿಸಿದರು. ಚೆನ್ನಕೇಶವಯ್ಯನವರ ಗುರುಗಳಾದ ಮೈಸೂರು  ವಾಸುದೇವಾಚಾರ್ಯರು, ರಾಳ್ಳಪಲ್ಲಿ ಅನಂತಕೃಷ್ಣಶರ್ಮರು, ಚಿಂತಲಪಲ್ಲಿ ವೆಂಕಟರಾಯರು ಮುಂತಾದ ಮಹನೀಯರೆಲ್ಲರ ಮುಂದೆ ಶಿಷ್ಯೆಯ ಕೈಯಲ್ಲಿ ಹಾಡಿಸಿ ಹೊಗಳಿ ಹುರಿದುಂಬಿಸಿ ಅವಳಲ್ಲಿ ಆತ್ಮ ವಿಶ್ವಾಸ, ಧೈರ್ಯ ತುಂಬಿದರು.

ಆಕಾಶವಾಣಿಯಯವರು ಹೊಸ ಹೊಸ ಪ್ರತಿಭೆಗಳನ್ನು ಗುರುತಿಸುವುದಕ್ಕಾಗಿ ಗಾಯನ ಸ್ಪರ್ಧೆ ಏರ್ಪಡಿಸಿ ಅಭ್ಯರ್ಥಿಗಳನ್ನು ಆಹ್ವಾನಿಸಿದ್ದರು. ಶಾಲೆಯನ್ನು ಪ್ರತಿನಿಧಿಸಲು ಲೀಲಾವತಿಯೂ ಭಾಗವಹಿಸಿದ್ದಳು. ಹತ್ತಾರು ಶಾಲೆಗಳಿಂದ ಅಭ್ಯರ್ಥಿಗಳು ಬಂದಿದ್ದರು. ಶ್ರೀಯವರು ಅನುವಾದ ಮಾಡಿದ ಥಾಮಸ್‌ ಹುಡ್‌ನ `Bridge of Sighs’ ಗೀತೆ ‘ಅನಾಥೆ ಇವಳಿನ್ನೊಬ್ಬಳೀ ಜನ್ಮ’ ಎಂಬ ಕವನ ಹಾಡಿ ಬಹುಮಾನ ಗೆದ್ದ ಲೀಲಾವತಿ, ಆಕಾಶವಾಣಿಯಲ್ಲಿ ಮೊದಲ ಬಾರಿ ಹಾಡಿ ತಾರೆಯಾಗಿ ಮಿಂಚಿದಳು. ತಂದೆ ರಾಮಣ್ಣನವರು ರಾಗಸಂಯೋಜನೆ ಮಾಡಿದ ಹಾಡನ್ನು ಹಾಡಿ ಭೇಷ್‌ ಎನಿಸಿಕೊಂಡಳು. ಹಿಂದಿ ಹಾಡುಗಳನ್ನೂ ಕಲಿತು ಹಾಡತೊಡಗಿದಳು. ಅವಕಾಶವಿದ್ದಾಗಲೆಲ್ಲಾ ರಾಮಣ್ಣನವರು ಮಗಳನ್ನು ವೇದಿಕೆ ಹತ್ತಿಸಿ ಹಾಡಿಸಿ ಧೈರ್ಯ ತುಂಬುತ್ತಿದ್ದರು. ಲೀಲಾವತಿಗೆ ಮನೆಯಲ್ಲಿ ಯಾವ ಪ್ರೋತ್ಸಾಹವಿತ್ತೋ ಹಾಗೆ ಶಾಲೆಯಲ್ಲೂ ಉತ್ತಮ ಪ್ರೋತ್ಸಾಹವಿತ್ತು.

ಶಾಲೆಯಲ್ಲಿ ಶಾಲಾ ಕಾರ್ಯಕ್ರಮ ಕೇಳಲು ರೇಡಿಯೋ ಇದ್ದು, ಶಾಲಾ ವಿದ್ಯಾರ್ಥಿನಿಯರು ಕಾರ್ಯಕ್ರಮಗಳನ್ನು ಕೇಳಲೇಬೇಕಾಗಿತ್ತು. ಅಂದೊಂದು ದಿನ ಲೀಲಾವತಿಯ ಸಂಗೀತ ಜೀವನದ ಭಾಗ್ಯದ ಬಾಗಿಲು ತೆರೆಯುವ ಶುಭಘಳಿಗೆ ತಾನಾಗಿಯೇ ಬಂದಿತು. ಶಾಲೆಯ ರೇಡಿಯೋವಿನಿಂದ ಪ್ರಸಾರವಾದ ‘ಪುಣ್ಯಭೂಮಿ ಭಾರತಿ’ ಮತ್ತು ‘ಜಯ ಜಯ ಜಯ ವಿಜಯೀಭವ’ ಎಂಬ ಎರಡು ಹಾಡುಗಳ ಮಾಧುರ್ಯ, ಸಂಯೋಜನೆಯ ಶೈಲಿ ಲೀಲಾವತಿಯನ್ನು ಮೋಡಿ ಮಾಡಿಬಿಟ್ಟವು. ಆ ಸಮೂಹ ಗಾಯನ ಶೈಲಿ ಲೀಲಾವತಿಗೆ ರೋಮಾಂಚನ ತಂದಿತ್ತು. ಆ ಹಾಡುಗಳ ರಾಗಸಂಯೋಜನೆ, ಸಂಗೀತ ನಿರ್ದೇಶಕರಾದ ಶ್ರೀ ಕೃಷ್ಣಮಾಚಾರ್ಯರದ್ದುಎಂಬುದು ತಿಳಿದೊಡನೆಯೆ ಹಾಡುಗಳನ್ನು ಕಲಿಯುವುದಾದರೆ ಅವರ ಬಳಿಯೇ ಕಲಿಯಬೇಕೆಂದು ಮನಸ್ಸು ಮಾಡಿದಳು. ಕೃಷ್ಣಮಾಚಾರ್ಯರನ್ನು ಹುಡುಕುವುದೇ ಗುರಿಯಾಯಿತು. ಗೆಳತಿ ಪ್ರಭಾವತಿ ಎಂಬುವಳ ಬಳಿ ತನ್ನ ಅಳಲು ತೋಡಿಕೊಂಡಾಗ ‘ನೀನು ಎ.ವಿ. ಕೃಷ್ಣಮಾಚಾರ್ಯರನ್ನು ನೋಡಬೇಕೇನೇ? ಅವನೇ ನಮ್ಮ ಕಿಟ್ಟಿ’ ಎಂದಳು. ರಾಳ್ಳಪಲ್ಲಿ ಅನಂತಕೃಷ್ಣ ಶರ್ಮರ ಮಗಳಾದ ಪ್ರಭಾವತಿ ಲೀಲಾವತಿಯ ಸಹಪಾಠಿಯಾಗಿದ್ದರು. ಎ.ವಿ. ಕೃಷ್ಣಮಾಚಾರ್ಯರು ರಾಳ್ಳಪಲ್ಲಿಯವರ ಬಳಿ ಸಂಗೀತ ಕಲಿಯುತ್ತಿದ್ದರು. ಲೀಲ;ಆವತಿ ಅವರ ಮನೆಗೆ ಹೋಗಿ ಅವರ ಬಳಿ ಭಾವಗೀತೆಗಳನ್ನು  ಕಲಿಯುವ ಆಸೆಯನ್ನು ತೋಡಿಕೊಂಡೊಡನೆಯೇ ಕೃಷ್ಣಮಾಚಾರ್ಯರು ‘ಆಗಲಿ ಬನ್ನಿ’ ಎಂದು ಒ‌ಪ್ಪಿಕೊಂಡರು.

ಕೃಷ್ಣಮಾಚಾರ್ಯರ ಬಳಿ ಲೀಲಾವತಿ ಸುಗಮ ಸಂಗೀತವನ್ನು ಕಲಿಯಲು ಪ್ರಾರಂಭಿಸಿದ ಎಂಟೇ ದಿನಗಳಲ್ಲಿ ಆಕಾಶವಾಣಿಯಿಂದ ಹಾಡಲು ಕರೆ ಬಂತು. ‘ಗೌರಿ ತವರಿಗೆ ಹೋಗಿ ಬಂದ’ ಎನ್ನುವ ಜನಪದಗೀತೆ ೧೯೫೦ರ ಆಗಸ್ಟ್‌ ೧೪ರಂದು ಆಕಾಶವಾಣಿಯ ಕೃಷಿರಂಗ ಕಾರ್ಯಕ್ರಮದ ಮೂಲಕ ಬಿತ್ತರಗೊಂಡಿತು. ಹದಿನಾರರ ಹರಯದ ಲೀಲಾವತಿ ಸಂಭ್ರಮದಲ್ಲಿ ತೇಲಿ ಹೋಗುತ್ತಲೇ ಸುಗಮ ಸಂಗೀತದ ವಿವಿಧ ಮಜಲುಗಳಲ್ಲಿ ಹಾರಾಡಿದಳು. ವಿವಿಧ ಭಾಷೆಯ ಹಾಡಿಗೂ ದನಿಗೂಡಿಸಿದಳು. ೧೯೫೧ರಲ್ಲಿ ಮೈಸೂರು ಆಕಾಶವಾಣಿಯಲ್ಲಿ ಮೊಟ್ಟಮೊದಲು ಪ್ರಸಾರವಾದ ಹಿಂದಿ ಭಾವಗೀತೆಗಳನ್ನು ಹಾಡಿದ್ದು ಲೀಲಾವತಿಗೆ ಮತ್ತೊಂದು ಗರಿ ಮೂಡಿಸಿತು. ಅಬ್ದುಲ್‌ ಗಫೂರ್, ಮೀರಾಬಲ್ಸೆ, ಮುಂತಾದ ಪ್ರಸಿದ್ಧ ಹಿಂಧಿ ಗಾಯಕ ಗಾಯಕಿಯರೊಂದಿಗೆ ಹಿಂದಿಗೀತೆಗಳನ್ನು ಹೆಚ್ಚು ಹೆಚ್ಚು ಹಾಡಿದ್ದ ಲೀಲಾವತಿ, ಕನ್ನಡ ಭಾವಗೀತೆಗಳನ್ನು ಹಾಡುವಾಗ ಬೇರೆ ಬೇರೆಯಾಗಿ ಕೇಳುತ್ತಿತ್ತು. ಕನ್ನಡ ಭಾವಗೀತೆಗಳನ್ನು ಹಾಡುವ ಲೀಲಾವತಿಯೇ ಬೇರೆ, ಹಿಂದಿ ಗೀತೆಗಳನ್ನು ಹಾಡುವ ಲೀಲಾವತಿಯೇ ಬೇರೆ ಎಂಬ ಭ್ರಮೆ ಬಹಳ ಕಾಲ ಕಾಡಿತು.

೧೯೫೩-೫೪ರಿಂದ ಆಕಾಶವಾಣಿಯಲ್ಲಿ ಧ್ವನಿ ಪರೀಕ್ಷೆ ಮಾಡುವ ಪರಿಪಾಟ ಪ್ರಾರಂಭವಾಯಿತು. ಲೀಲಾವತಿ ಮತ್ತು ಪಿ. ಕಾಳಿಂಗರಾವ್‌ ಅವರಿಗೆ ಈ ಧ್ವನಿ ಪರೀಕ್ಷೆಯಲ್ಲಿ ವಿನಾಯಿತಿ ಸಿಕ್ಕಿದ್ದಲ್ಲದೆ, ದೆಹಲಿಯಿಂದ, ದೇವರನಾಮ ಮತ್ತು ಜನಪದ ಗೀತೆಗಳ ಧ್ವನಿ ಪರೀಕ್ಷೆಯಿಂದಲೂ ವಿನಾಯಿತಿ ಸಿಕ್ಕಿತು. ಎಲ್ಲಾ ಶೈಲಿಯ ಹಾಡುಗಳು ಧಾರೆ ಧಾರೆಯಾಗಿ ಹರಿದು ಕರ್ನಾಟಕದ ಎಲ್ಲ ಮೂಲೆ ಮೂಲೆಗಳಲ್ಲೂ ತುಂಬಿ ತುಳುಕಾಡಿದವು. ಮೆಚ್ಚುಗೆ ಪತ್ರಗಳೂ ಸುರಿಮಳೆಗರೆದವು. ನಾಡಿನಾದ್ಯಂಥ ಲೀಲವತಿಯ ಕೋಗಿಲೆಯ ದನಿ ಕುಕಿಲು ತೊಡಗಿತು. ನೂರಾರು ಸಂಘ ಸಂಸ್ಥೆಗಳಿಂದ ನೂರಾರು ಕಾರ್ಯಕ್ರಮಗಳಿಗೆ ಆಹ್ವಾನ ಬಂದಿತು. ಲೀಲಾವತಿ ಹಾಡದ ಸಂಘ ಸಂಸ್ಥೆಗಳೇ ಉಳಿಯಲಿಲ್ಲ. ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ಎರಡೂ ಪ್ರಕಾರಗಳಲ್ಲೂ ಕಾರ್ಯಕ್ರಮ ನೀಡುತ್ತಿದ್ದ ಲೀಲಾವತಿ ಸುಗಮಸಂಗೀತಕ್ಕೇ ತನ್ನನ್ನು ಅರ್ಪಿಸಿಕೊಂಡಳು. ಎ.ವಿ. ಕೃಷ್ಣಮಾಚಾರ್ಯರು ‘ಪದ್ಮಚರಣ’ರಾಗಿ ಸುಗಮ ಸಂಗೀತ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕುತ್ತಾ, ತಮ್ಮ ಶಿಷ್ಯೆಯನ್ನು ತಮ್ಮೆತ್ತರಕ್ಕೆ ಬೆಳೆಸಿದರು. ವರುಷಗಳು ಉರುಳುರುಳಿದರೂ ಗುರುಶಿಷ್ಯೆಯರ ಸಾಧನೆ, ಕಲಿಕೆ ಹೊಚ್ಚ ಹೊಸದಾಗಿಯೇ ಚಿಗುರುತ್ತಾ, ಬೆಳೆದು ಟಿಸಿಲು ಟಿಸಿಲಿನಲ್ಲಿ ಹೂ ಬಿಟ್ಟು ವಿಜೃಂಭಿಸಿದವು. ಲೀಲಾವತಿ ತಮ್ಮ ಗುರು ಪದ್ಮ ಚರಣ್‌ರ ಬಳಿ ಸುಮರು ೨೩ ವರ್ಷಗಳ ಕಾಲ ನಿರಂತರವಾಗಿ ಶಿಷ್ಯವೃತ್ತಿ ಮಾಡಿ ಭೇಷ್‌ ಎನಿಸಿಕೊಂಡರು. ಭಾವಗೀತಾ ಗಾಯನದಿಂದ ಮೆಚ್ಚುಗೆ, ಸಂಭ್ರಮ, ಆನಂದ, ಹಣ, ಕೀರ್ತಿ ಎಲ್ಲವೂ ಸಂತೃಪ್ತಿಯಾಗುವಷ್ಟು ಹರಿದು ಬಂದಿತು.

ಸಾಧನೆಯಿಂದ ಬೋಧನೆಯತ್ತ ಮನಸ್ಸು ತುಡಿಯತೊಡಗಿತು. ಶಾಸ್ತ್ರೀಯ ಸಂಗೀತದಿಂದ ಬೋಧನೆ ಆರಂಭಿಸಿದ ಲೀಲಾವತಿ ತಾವೇ ರಾಗ ಸಂಯೋಜಿಸಿದ ಭಾವಗೀತೆಗಳವರೆಗೆ ಇದರ ಹರಹನ್ನು ಹರಡಿದರು. ತಾವೇ ರಾಗ ಸಂಯೋಜಿಸಿ ಮಕ್ಕಳಿಗೆ ಹಾಡಲು ಕಲಿಸುವುದರಲ್ಲಿ ಲೀಲಾವತಿಯವರಿಗೆ ಅನಿರ್ವಚನೀಯವಾದ ಆನಂದ ದೊರೆಯಿತು. ಭಾವಗೀತೆ, ವಚನ, ದೇವರನಾಮ, ಜನಪದಗೀತೆ ಎಲ್ಲವನ್ನ  ಕಲಿಸುತ್ತ ಹೊರಟ ಲೀಲಾವತಿಯವರ ಶಿಷ್ಯರ ಸಂಖ್ಯೆ ಕ್ರಮೇಣ ಹತ್ತರಿಂದ ನೂರಾಗಿ ಗುಣಿತವಾಗುತ್ತಾ ಹೋಯಿತು.

ಲೀಲಾವತಿ ಮಹಾರಾಜ ಕಾಲೇಜಿನಲ್ಲಿ ಬಿ.ಎ. ತರಗತಿಯಲ್ಲಿದ್ದಾಗಲೇ ಪ್ರಖ್ಯಾತ ಗಾಯಕಿಯಾಗಿದ್ದರು . ಕಾಲೇಜಿನ ಮಿತ್ರರು ಕಾರ್ಯಕ್ರಮಗಳಲ್ಲಾಗಲಿ, ಘಟಿಕೋತ್ಸವದಂತಹ ವಿಶಿಷ್ಟ ಸಂಧರ್ಭಗಳಲ್ಲಾಗಲಿ, ಅಥವಾ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಏರ್ಪಡಿಸುತ್ತಿದ್ದ ಬೀಳ್ಕೊಡುಗೆ ಸಮಾರಂಭದಲ್ಲಾಗಲಿ ಅಥವಾ ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಸಮಾವೇಶಗಳಲ್ಲಾಗಲಿ ಲೀಲಾವತಿಯವರ ಗಾಯನವಿದ್ದೇ ಇರುತ್ತಿತ್ತು. ‘ಮಹಾರಾಜ ಕಾಲೇಜಿನ ಲತಾಮಂಗೇಶ್ಕರ್ ಎಂದೇ ಕರೆಯಲ್ಪಟ್ಟಿದ್ದರು. ಡಾ. ಹಾ.ಮಾ. ನಾಯಕ, ನ. ರತ್ನ, ಯು.ಆರ್. ಅನಂತಮೂರ್ತಿ, ಸಿಂಧುವಳ್ಳಿ ಅನಂತಮೂರ್ತಿ, ಕೆ.ವಿ. ಸುಬ್ಬಣ್ಣ, ಎಂ.ಎಚ್‌. ರಾಜಾರಾವ್‌, ಸಾ.ಶೀ. ಮರುಳಯ್ಯ ಮುಂತಾದ ಪ್ರಖ್ಯಾತರು ಲೀಲಾವತಿಯವರ ಸಹಪಾಠಿಗಳಾಗಿದ್ದರು. ಲೀಲಾವತಿಯವರು ಹಾಡಲು ಪ್ರಾರಂಭಿಸಿದೊಡನೆಯೇ ಕಾಲೇಜಿನ ಹುಡುಗರು ಕೋಗಿಲೆ ಬಂತು ಕೋಗಿಲೆ ಎಂದು ಹೇಳುತ್ತಿದ್ದರು.

ಲೀಲಾವತಿಯವರ ಕೋಗಿಲೆ ಕಂಠವನ್ನು ಮೆಚ್ಚಿ ಅರಾಧಿಸಿದವರಲ್ಲಿ ಎಸ್‌.ಜಿ. ರಘುರಾಂ ಎಂಬ ಪ್ರಖ್ಯಾತ ಹಾಡುಗಾರರು ಲೀಲಾವತಿಯವರನ್ನು ಮೆಚ್ಚಿ ಮದುವೆಯಾದರು. ಲೀಲಾವತಿಯವರು ಹಾಡುವ ಶೈಲಿ, ರಾಗಮಾಧುರ್ಯ, ಸಾಹಿತ್ಯದ ಉಚ್ಚಾರಣೆ ಯಾರೂ ಅನುಸರಿಸಲಾಗದ ವೈಖರಿಗೆ ರಘುರಾಂ ಆಕರ್ಷಿತರಾದುದು ಸಹಜವೇ ಆಗಿತ್ತು. ವೃತ್ತಿ ಪ್ರವೃತ್ತಿಗಳು ಕೈ ಕೈ ಹಿಡಿದು ಪ್ರೀತಿಯ ನಾವೆಯಲ್ಲಿ ಸಾಗಿದವು. ರಘುರಾಂ ಅವರು ಲೀಲಾವತಿಯವರ ಸುಗಮಸಂಗೀತದ ಬೆಳವಣಿಗೆಗೆ ಮತ್ತಷ್ಟು ಪ್ರಕಾರಗಳನ್ನು ಹಮ್ಮಿಕೊಟ್ಟು ಆಸರೆಯಾದರು.

೧೯೭೬ರ ಮಾರ್ಚಿ ೨೫ರಂದು ಲೀಲಾವತಿ ಆಕಾಶವಾಣಿಯಲ್ಲಿ ಸಂಗೀತ ಸಂಯೋಜಕರಾಗಿ ಕೆಲಸಕ್ಕೆ ಸೇರಿದ್ದು ಆಕೆಗೆ ಸಂಗೀತದ ಮೇಲಿದ್ದ ನಿಷ್ಠೆಯೇ ಕಾರಣವಾಯಿತು. ಹತ್ತಾರು ವರುಷಗಳ ಹಿಂದೆಯೇ ಸಿಕ್ಕಿದ್ದ ಆಕಾಶವಾಣಿಯ ಉದ್ಘೋಷಕಿಯ ಕೆಲಸಕ್ಕೆ ಒಲ್ಲೆನೆಂದ ಲೀಲಾವತಿ ತನಗೆ ಪ್ರಿಯವಾದ ‘ಸಂಗೀತ ಸಂಯೋಜಕಿ’ಕೆಲಸವನ್ನು  ಪ್ರೀತಿಯಿಂದ ಅಪ್ಪಿಕೊಂಡರು. ಕೇವಲ ಭಾವಗೀತೆಗಳಿಗಷ್ಟೇ ಅಲ್ಲದೆ, ನಾಟಕ ಮತ್ತು ಅವುಗಳ ಸನ್ನಿವೇಶಕ್ಕೆ ಹೊಂದುವಂತಹ ಸಂಗೀತವನ್ನು ಸಂಯೋಜಿಸುವುದೂ ಒಂದು ಸವಾಲಾಯಿತು. ಆಕಾಶವಾಣಿಯ ಸನ್ನಿವೇಶಗಳಿಗನುಗುಣವಾಗಿ ಸಾಂದರ್ಭಿಕ ಗೀತೆಗಳನ್ನು ರಚಿಸಿ ಸಂಗೀತ ಸಂಯೋಜಿಸುವುದು, ಸಂಗೀತ ರೂಪಕಗಳನ್ನು ರಚಿಸಿ ಸಂಯೋಜಿಸುವುದು, ಲೀಲಾವತಿ ಸೃಜನಾತ್ಮಕವಾಗಿ ಬೆಳೆಯಲು ಬಹುಮಟ್ಟಿಗೆ ಸಹಾಯವಾದವು. ಸಂಗೀತ ಸಂಯೋಜನೆಯ ವೈವಿಧ್ಯತೆಯ ಅನುಭವವಾಯಿತು.

ಮೈಸೂರು ಆಕಾಶವಾಣಿಯಲ್ಲಿ ಮಕ್ಕಳಿಗಾಗಿ ಕಥೆ ಹೇಳುವ ಕಾರ್ಯಕ್ರಮವನ್ನು ಯೋಜಿಸಿದವರು ಮಗುವಿನ ತಾಯಿಯು ಸಂತೃಪ್ತ ಗೃಹಿಣಿಯು ಆಗಿದ್ದ ಲೀಲಾವತಿಯವರು. ಮುದ್ದಿನ ಮಗ ಸುಕುಮಾರನಿಗೆ ಮಲಗುವ ಮುನ್ನ ಹೇಳಬೇಕಾಗುತ್ತಿದ್ದ ಕಥೆಗಳಿಗಾಗಿ ಗ್ರಂಥಾಲಯವನ್ನೇ ಮೇಲೆ ಕೆಳಗೆ ಮಾಡಬೇಕಾಗುತ್ತಿತ್ತು. ಅವನ ಸಲುವಾಗಿ ಪಂಚತಂತ್ರ ಫೇರಿ ಟೇಲ್ಸ್‌, ಚಂದಮಾಮ ಕಥೆಗಳು, ಬೇರೆ ಬೇರೆ  ದೇಶದ ಭಾಷೆಯ ಕಥೆಯನ್ನು ಕನ್ನಡಕ್ಕೆ ಅನುವಾದಿಸುತ್ತಾ ಹೇಳುತ್ತಿದ್ದರು. ದಿನಕ್ಕೆ ನಾಲ್ಕು ಕಥೆಗಳಂತೆ ಹೇಳುತ್ತಾ ಬಂದು, ಕೊನೆಗೆ ಸಾಮಗ್ರಿ ಮುಗಿದು ಹೊಸದಾದ ಕಥೆಕಟ್ಟಿ ಹೇಳುತ್ತಿದ್ದರು. ಇದೇ ಕಥೆಗಳನ್ನೇ ಚಿಕ್ಕಮ್ಮನಾಗಿ ಆಕಾಶವಾಣಿಯಲ್ಲಿ ಹೇಳುತ್ತಿದ್ದ ರೀತಿ ಅತ್ಯಂತ ಆಕರ್ಷಕವಾಗಿತ್ತು. ರೇಡಿಯೋ ಮುಂದೆ ಮಕ್ಕಳು ಕಣ್ಣರಳಿಸಿ, ಕಿವಿ ನಿಮಿರಿಸಿ ಕೂರುವುದನ್ನು ನೋಡಲು ಅಪ್ಯಾಯಮಾನವಾಗಿತ್ತು.

ಕೋಲ್ಕತ್ತೆಯ ರಾಬಿನ್‌ರೇರವರಲ್ಲಿ ರವೀಂದ್ರ ಸಂಗೀತವನ್ನು ಕಲಿತ ಲೀಲಾವತಿಯವರು ಆಕಾಶವಾಣಿ ವಿವಿಧ ಕೇಂದ್ರಗಳಾದ, ಕೋಲ್ಕತ್ತ, ಗುವಾಹತಿ, ಪಾಟನಾ, ರಾಂಚಿ, ಚೆನ್ನೈ ಮುಂತಾದೆಡೆಯಲ್ಲಿ ಹಾಡಿದರು. ಬೆಂಗಾಲಿ, ಹಿಂದಿ, ತೆಲುಗು, ಅಸ್ಸಾಮಿ, ಗುಜರಾತಿ, ಮರಾಠಿ, ಮಲಯಾಳ ಭಾಷೆಗಳಲ್ಲಿ ನೂರಾರು ಹಾಡನ್ನು ಹಾಡಿ ಹಿರಿಮೆಯನ್ನು ಹೊತ್ತರು.

ಸಂಗೀತವನ್ನು ಅಪ್ಪಿಕೊಂಡಂತೆ ಸಾಹಿತ್ಯವನ್ನು ಎರಡೂ ಕರಗಳಿಂದ ಬಾಚಿಕೊಂಡರವರು ಲೀಲಾವತಿ. ಕಥೆ, ಕವನ, ಹಾಸ್ಯ ಲೇಖನ, ವೈಜ್ಞಾನಿಕ ಲೇಖನ, ಚುಟುಕ, ಮಕ್ಕಳ ಸಾಹಿತ್ಯ, ನಾಟಕ, ಕಾವ್ಯ ಲೇಖನ ಸಂಕಲನ ಎಲ್ಲಾ ಪ್ರಕಾರಗಳಲ್ಲೂ ಪರಿಶ್ರಮ ಗಳಿಸಿದರು. ನಾಟಕ, ಕಾವ್ಯ, ಲೇಖನ, ಸಂಕಲನಕ್ಕೆ ಪ್ರಶಸ್ತಿಯೂ ಬಂದು ಅವರಲ್ಲಿ ಆತ್ಮವಿಶ್ವಾಸ ಮೂಡಿಸಿತು.

೧೯೮೩ರಲ್ಲಿ ಲೀಲಾವತಿ ದಂಪತಿಗಳು ಅಮೆರಿಕಕ್ಕೆ ತೆರಳಿದ ಪ್ರಥಮ ಸುಗಮ ಸಂಗೀತ ಕಲಾವಿದರೆಂಬ ಹೆಮ್ಮೆಗೂ ಪಾತ್ರರಾದರು. ೧೯೮೫ರಲ್ಲಿ ಸ್ಥಾಪಿಸಿದ ಇವರ ಸುಗಮ ಸಂಗೀತ ಅಕಾಡೆಮಿಗೆ ಈಗ ಹತ್ತೊಂಬತ್ತರ ಹರಯ. ಹಲವಾರು ಕಲಾವಿದರು ಬೆಳಕು ಕಂಡ ಈ ಅಕಾಡೆಮಿಯ ಕೊಡುಗೆ ಅಪಾರ.

೧೯೮೨ರಲ್ಲಿ ಕರ್ನಾಟಕ ಕಲಾತಿಲಕ, ೧೯೯೨ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೧೯೯೮ರಲ್ಲಿ ಸುಗಮಸಂಗೀತಕ್ಕೆ ನೀಡುವ ಅತ್ಯುನ್ನತ ಶಿಶುನಾಳ ಷರೀಫ್ ಪ್ರಶಸ್ತಿ ಯಲ್ಲದೆ ನೂರಾರು ಬಿರುದು ಬಾವಲಿಗಳನ್ನು ಪಡೆದರು.

೧೯೯೫ರಲ್ಲಿ ಬೆಂಗಳೂರು ಗಾಯನ ಸಮಾಜದ ಸಂಗೀತ ಸಮ್ಮೇಳನದ ವರುಷದ ಕಲಾವಿದೆ ಎಂದು ಸನ್ಮಾನಿತರಾದರು. ಇವರು ರಚಿಸಿದ ಸಾಹಿತ್ಯ ಕೃತಿಗಳಿಗೂ ಹಲವಾರು ಪ್ರಶಸ್ತಿಗಳು ಬಂದವು. Family foundAtion of india ಸಂಸ್ಥೆಯಿಂದ ‘ಮಧುಚಂದ್ರ’ ನಾಟಕಕ್ಕೆ ೧೯೮೩ರಲ್ಲಿ ಮೊದಲನೆಯ ಬಹುಮಾನ, ೧೯೯೨ರಲ್ಲಿ ಭಾರತೀಯ ಕರ್ನಾಟಕ ಸಂಘ ಬೆಂಗಳೂರಿನಲ್ಲಿ ಶ್ರೀಮತಿ ವಿಶಾಲಾಕ್ಷಿದತ್ತಿನಿಧಿ-ವೈಚಾರಿಕ ಲೇಖನಕ್ಕಾಗಿ ಮೊದಲ ಬಹುಮಾನ, ೧೯೯೨ರಲ್ಲಿ ‘ಸಾವಿರದ ಸಂಚಯ’ಕ್ಕೆ ರತ್ನಮ್ಮ ಹೆಗಡೆ ಪ್ರಶಸ್ತಿ. ‘ಸುಗಮ ಸಂಗೀತ ಒಂದು ಸಿಂಹಾವಲೋಕನ’ ಪುಸ್ತಕಕ್ಕೆ ಅತ್ತಿಮಬ್ಬೆ ಪ್ರತಿಷ್ಠಾನದಿಂದ ಎರಡನೆಯ ಬಹುಮಾನ ಹೀಗೆ ಪ್ರಶಸ್ತಿ, ಬಹುಮಾನಗಳ  ಸರಣಿಯೇ ಈಕೆಯನ್ನು ಅರಸಿ ಬಂದವು.

ಲೀಲಾವತಿಯವರ ಸಂಗೀತ ಸಾಹಿತ್ಯ ಸೇವೆಯನ್ನು  ಪರಿಗಣಿಸಿ ಸಂಗೀತ ನೃತ್ಯ ಅಕಾಡೆಮಿಯು ತೊಡಿಸಿರುವ ಅಧ್ಯಕ್ಷರ ಕಿರೀಟ ಅವರ ವ್ಯಕ್ತಿತ್ವನ್ನು ಉತ್ತುಂಗಕ್ಕೇರಿಸಿದೆ. ಪ್ರಸ್ತುತ ಮೈಸೂರಿನ ಕುವೆಂಪುನಗರದಲ್ಲಿ ನೆಲೆಸಿ ಸುಖ ಸಂತೃಪ್ತ ಜೀವನ ನಡೆಸುತ್ತಿರುವ ಲೀಲಾವತಿಯವರು ಪಾಕಶಾಸ್ತ್ರ ಪರಿಣತರು, ಅಂಗಳದ ಹೂಬನದ ಪಾಲಕರು. ನಮ್ಮೊಡನಿರುವ ‘ಅಪರೂಪದ ಪ್ರತಿಭಾವಂತೆ’ ಸಮಚಿತ್ತವನ್ನು ಕಾಪಾಡಿಕೊಂಡಿರುವ ಸೃಜನಶೀಲ ಮಹಿಳೆ. ಸುಗಮ ಸಂಗೀತ ಲೋಕದ ಸಾರ್ವಕಾಲಿಕ ಮಿನುಗುತಾರೆ.