ಭಾರತೀಯ ಸಂತ ಪರಂಪರೆಯಲ್ಲಿ ದೇವರ ಇರುವಿಕೆಯನ್ನು ಕಣ್ಣಿಂದ ಕಾಣಲಾಗದಿದ್ದರೂ, ಇದ್ದಂತೆ ಭಾವಿಸಿ ಅವನ ಕಥೆಯನ್ನು ಹೇಳುವ ಕ್ರಮಕ್ಕೆ ಕೀರ್ತನೆ ಎನ್ನುತ್ತಾರೆ. ಅದರಲ್ಲಿ ಹರಿ ಪಾರಮ್ಯವಾದ ಕಥೆಗೆಕ ಹರಿಕಥೆಯೆಂತಲೂ ಶಿವಪಾರಮ್ಯವಾದ ಕಥೆಗೆ ಶಿವಕಥೆ ಎಂತಲೂ ಕರೆಯುವ ವಾಡಿಕೆ ನಮ್ಮಲ್ಲಿದೆ. ದೇವರನ್ನು ಕಾಣಲು ಹೊರಟವರನ್ನು ಸಹ ದೈವತ್ವದ ಪಟ್ಟಿ ಕಟ್ಟಿ ಹೊಗಳುವ ಪರಿಪಾಟ ಬೆಳೆದಿದೆ. ಅವರಲ್ಲಿನ ಗುಣ ವಿಶೇಷಣಗಳನ್ನು ವೈಭವೀಕರಿಸುವುದರ ಮೂಲಕ ಗುರು ಅಥವಾ ದೇವರು, ದೈವ ಎಂಬ ಭಾವನೆಯಿಂದಲೇ ನೋಡುತ್ತೇವೆ. ಈ ರೀತಿ ಭಾವನೆ ಬರಲು ಪುರಾಣ, ಕೀರ್ತನೆ, ಕಥೆಗಳ ಮೂಲಕ ಹೇಳುವವರನ್ನು ಹರಿಕಥೆದಾಸರು, ಪುರಾಣಿಕ, ಕೀರ್ತನಕಾರ ಇತ್ಯಾದಿ ಪದಗಳಿಂದ ಸಂಭೋಧಿಸುತ್ತೇವೆ. ಇಂತಹವರಲ್ಲಿ ಶಿವಲಿಂಗಸ್ವಾಮಿ ಹಿರೇಮಠ ಒಬ್ಬರು.

ಶಿವಲಿಂಗಸ್ವಾಮಿ ಹಿರೇಮಠರವರ ಪೂರ್ವಿಕರು ಉತ್ತರ ಕರ್ನಾಟಕ ಭಾಗದಿಂಧ ಬಂದವರು. ಜಂಗಮ ಮಠ ಮನೆತನ, ಹಿಂದೆಲ್ಲ ಶಾಲಾ ಕಾಲೇಜು ಇಲ್ಲದುದರಿಂದ ಮಠಗಳೇ ಅಕ್ಷರಾಭ್ಯಾಸದ ಕೇಂದ್ರಗಳಾಗಿದ್ದವು. ಅಲ್ಲಿನ ಗುರುಗಳ ಸೇವೆ ಮಾಡಿಕೊಂಡು ವಿದ್ಯೆಕಲಿಯ ಬೇಕಾಗಿತ್ತು. ಅವುಗಳಲ್ಲಿ ಸಣ್ಣ ಪ್ರಮಾಣದ ಮಠಗಳು ಇದ್ದವು , ದೊಡ್ಡ ಪ್ರಮಾಣದವು ಇದ್ದವು. ಅವುಗಳಲ್ಲೆಲ್ಲಾ ಹಿರಿದಾದ ಮಠಕ್ಕೆ ಹಿರೇಮಠ ಎನ್ನುತ್ತಿದ್ದರು. ಅಲ್ಲೇ ಇದ್ದು ಓದಿಸುವ ಕಲಿಸುವ ಅಯ್ಯನವರುಗಳನ್ನು ಗೌರವದಿಂದ ಹಿರೇಮಠದವರು ಎಂದು ಸಂಬೋಧಿಸುತ್ತಿದ್ದರು, ಅದು ಕ್ರಮೇಣ ಅವರವರ ಹೆಸರಿನ ಮುಂದೆ ಸೇರಿಸಿಕೊಳ್ಳುವ ಪರಿಪಾಠವಾಗಿ ಬೆಳೆದು ಬಂದಿರುವುದನ್ನು ಉತ್ತರ ಕರ್ನಾಟಕದ ಸಾಂಸ್ಕೃತಿಕ ಇತಿಹಾಸದ ಅವಲೋಕನದಿಂದ ತಿಳಿದು ಬರುತ್ತದೆ. ಹಿರೇಮಠರ ತಂದೆ ಆಸ್ಥಾನ ವಿದ್ವಾನ್‌ ಜಿ. ನಂಜುಡಾರಾಧ್ಯ ಶಾಸ್ತ್ರಿಗಳು, ತಾಯಿ ಸಂಗೀತ ವಿದುಷಿ ಕಾತ್ಯಾಯಿನಿ ದೇವಿ ಈರ್ವರೂ ವಿದ್ಯಾವಂತರೇ. ತಂದೆ ಶಿವಕಥೆ ಮಾಡುವ ಕಾಯಕವುಳ್ಳವರಾಗಿದ್ದರು.

ಸಾಹಿತ್ಯ ವಾತಾವರಣವಿದ್ದ ಮೆನಯಲ್ಲಿ ಒಂದು ಸಾವಿರದ ಒಂಬೈನೂರ ಹದಿನೈದನೇ ಇಸವಿ ನವೆಂಬರ್ ಹನ್ನೊಂದರಂದು (೧೧.೧೧.೧೯೧೫)_ ಜನಿಸಿದರು ಶಿವಲಿಂಗಸ್ವಾಮಿ.

ತಂದೆ ಶಿವಕಥೆ ಮಾಡುತ್ತಿದ್ದುದರಿಂದ ಬೇರೆ ಬೇರೆ ವಿದ್ವಾಂಸರು, ವಾದ್ಯಗಾರರು ಮನೆಗೆ ಬರುತ್ತಿದ್ದರು. ಭಜನೆ ನಡೆಯುತ್ತಿತ್ತು. ಜನ ಸೇರುತ್ತಿದ್ದರು. ಅವರಿದ್ದಲ್ಲಿಗೆ ಬಂದು ಸಂಸ್ಕೃತ ಪಾಠ ಹೇಳುವ ಧಾರವಾಡದ ಕಾಶಪ್ಪಯ್ಯ ಶಾಸ್ತ್ರಿಗಳು ಅಮರಕೋಶವನ್ನು ಚೆನ್ನಾಗಿ ಸ್ಪುಟವಾಗಿ ಹೇಳುವುದಕ್ಕೆ ಕಲಿಸಿದ್ದರು. ಇದರಿಂದಾಗಿ ಅಲ್ಪಪ್ರಾಣ, ಮಹಾಪ್ರಾಣಗಳ ಸ್ವರೋಚ್ಚಾರಣೆ ಸುಲಲಿತವಾಗಿ ಬರಲು ಸಹಾಯಕವಾಯಿತು. ಹಾಗೆಯೇ ವೇದಾಧ್ಯಯನ ಮಾಡಿ ಪಾಂಡಿತ್ಯ ಪರೀಕ್ಷೆ ಪೂರೈಸಿಕೊಂಡರು . ಕೇವಲ ತಮ್ಮ ಒಂಬತ್ತನೇ ವಯಸ್ಸಿಗೆ ಶ್ರೀ ರಾಮಜನನದ ಕಥೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ತಂದೆಯೊಡನೆ ಎಲ್ಲಾ ಶಿವಕಥಾ ಕೀರ್ತನೆ ಸ್ಥಳಕ್ಕೆ ಹೋಗುತ್ತಿದ್ದು, ಪ್ರಾರಂಭದಲ್ಲಿ ಪ್ರಾರ್ಥನಾ ಗೀತ ಹಾಡಲು ಬಾಲಕ ಶಿವಲಿಂಗ ಸ್ವಾಮಿಯನ್ನು ಬಿಡುತ್ತಿದ್ದರು.

ಸಭಿಕರ ಮುಂದೆ ನಿಲ್ಲುವುದು ಬಾಲ್ಯದಿಂದಲೇ ರೂಢಿ ಆದುದರಿಂದ ಸಭಾಕಂಪನ ಎಂಬುದು ಅವರ ಬಳಿ ಸುಳಿಯಲೇ ಇಲ್ಲ. ಆಟವಾಡುವುದರಿಂದ ಹಿಡಿದು ವೇದಿಕೆಯ ಮೇಲಿನ ಎಲ್ಲಾ ಸಾಹಿತ್ಯಪರವಾದ ಸ್ಪರ್ಧೆಗಳಲ್ಲಿ ಮೊದಲ ಹೆಸರು ಇವರದೆ. ಜೊತೆಗೆ ಮನೆಯ ಸಮೀಪವೇ ಇದ್ದ ಗರಡಿ ಮನೆಗೆ ಹೋಗಿ ಸಾಮು, ಬೈಸಿಗೆ, ಉಟ್‌ ಬೈಸಿಗೆ ಹೊಡೆದು, ನುಣುಪುಗಂಬದ ಮೇಲೇರಿ, ಕೈಯಲ್ಲಿ ಗದೆಹಿಡಿದು ತಿರುಗಿಸಿ, ಕೆಲಕಾಲ ಮಟ್ಟಿಯ ಮೇಲೆ ಹೊರಳಾಟಿ(ಕೆಮ್ಮಣ್ಣು) ದಣಿವಾರಿಸಿಕೊಂಡು ಬರುತ್ತಿದ್ದರು./ ನಂತರ ಮರಕೊಂಠಿನ ಮಠ ಎಂಬ ಪೈಲ್ವಾನನಿಂದ ಕುಸ್ತಿ ವರಸೆ ಕಲಿತು ಸ್ಥಳೀಯ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದರು. ಮನೆಯಲ್ಲಿ ಅವರ ತಾಯಿ ಬೇವಿನ ಕಷಾಯ ಕುಡಿಯಲು ಕೊಡುತ್ತಿದ್ದರು. ಯಾವುದೇ ಖಾಯಿಲೆ ಬಾರದಂತೆ ತಡೆಗಟ್ಟುವ ಉದ್ದೇಶ ಅವರದಾಗಿತ್ತು. ಕ್ರಮೇಣ ಗಂಟಲಿನ ಮೇಲೆ ಪರಿಣಾಮ ಬೀರಿದುದರಿಂದ ಕಷಾಯಕ್ಕೆ ತಿಲಾಂಜಲಿ ಇತ್ತರು. ಹಿಂದುಸ್ತಾನಿ ಸಮಗೀತವನ್ನು ಅಬ್ದುಲ್‌ ಕರೀಂಖಾನರ ಶಿಷ್ಯರಾದ ಮಾನೆಯವರಲ್ಲಿ, ಕರ್ನಾಟಕ ಸಂಗೀತವನ್ನು ಮತ್ತು ಕೀರ್ತನೆ ಮಾಡುವ ವಿಧಾನವನ್ನು ಅವರ ತಂದೆಯವರಿಂದಲೇ ಕಲಿತರು. ಅಣ್ಣನವರಾದ ಲೆಕ್ಕದಯ್ಯಸ್ವಾಮಿ ಮಠ ಅವರು  ತತ್ವಪದ ಹಾಡುವುದರಲ್ಲಿ ಹೆಸರುಗಳಿಸಿದವರಾದ್ದರಿಂದ ಅವರಲ್ಲಿ ಕೊಂಚಕಾಲ ಅದನ್ನೂ ಕಲಿತು ಜ್ಞಾನ ವೃದ್ಧಿಸಿಕೊಂಡರು. ಹದಿನೆಂಠನೇ ವಯಸ್ಸಿಗಾಗಲೇ ಕರ್ನಾಟಕ, ಹಿಂದುಸ್ತಾನಿ ಸಂಗೀತಗಳೆರಡರ ಅಭ್ಯಾಸವಾಗಿತ್ತು. ಸ್ವತಂತ್ರವಾಗಿ ಕಥೆ ಮಾಡುವ ಚೈತನ್ಯ ಬಂದಿತ್ತು. ತಂದೆಯವರು ಅನಾರೋಗ್ಯದಿಂದಾಗಿ ಹೋಗಲಾಗದ ಒಪ್ಪಿತ ಕಾರ್ಯಕ್ರಮಗಳಿಗೆ ಮಗ ಹಿರೇಮಠ ಅವರನ್ನೇ ಕಳಿಸುತ್ತಿದ್ದರು. ಕ್ರಮೇಣ ಜನ ಶಿವಲಿಂಗಸ್ವಾಮಿಯವರನ್ನೇ ಬಯಸಿದರು. ತಂದೆಯವರು ಕಥೆ ಮಾಡುವ ಕಾಯಕ ನಿಲ್ಲಿಸಿ, ಜ್ಯೋತಿಷ್ಯ ಹೇಳುವುದು. ಯಂತ್ರ, ಮಂತ್ರ, ಮುಂತಾದವುಗಳಲ್ಲಿ ತೊಡಗಿಕೊಂಡರು.

ಶಿವಲಿಂಗಸ್ವಾಮಿ ಹಿರೇಮಠ ಅವರು ನೃತ್ಯಭ್ಯಾಸವನ್ನು ಯಾರಿಂದ ಕಲಿತರು ಎಂಬುದು ನಿಶ್ಚಿತವಾಗಿ ತಿಳಿಯುವುದಿಲ್ಲವಾದರೂ ಕಥೆಯಲ್ಲಿ ನವರಸ ಪ್ರತಿಪಾದನೆ ಮಾಡುವುದು. ಅವರ ಉದ್ದೇಶವಾದ್ದರಿಂದ, ಗುಬ್ಬಿ ನಾಟಕ ಕಂಪನಿಯಲ್ಲಿ ನಟನಾಗಿ ಇದ್ದುದರಿಂದ ನೃತ್ಯವನ್ನು ಅಲ್ಲಿ ಕಲಿತಿರಬಹುದೆಂದು ಅವರ ಸಮಕಾಲಿನರ ಅನಿಸಿಕೆ. ಹೊಸ ಹೊಸತನ್ನ ಕಲಿಯುವ, ಅದನ್ನು ತಮ್ಮ ಕಥಾ ಮಾಧ್ಯಮದಲ್ಲಿ ಅಳವಡಿಸಿಕೊಳ್ಳುವ ಹಂಬಲ ಅವರದು. ಸತತವಾದ ಅಧ್ಯಯನ ಅವರನ್ನು ಕ್ರಿಯಾಶೀಲರನ್ನಾಗಿ ಮಾಡಿತು. ಕಥೆ, ಕೀರ್ತನೆ ಇವು ರಾಜಾಶ್ರಯದ್ದಲ್ಲವಾದ್ದರಿಂದ ಜನಾಶ್ರಯವೇ ಆಧಾರವೆಂದು ತಿಳಿದಿದ್ದ ಇವರು ಎಲ್ಲಾ ಧರ್ಮೀಯರಿಗೂ ಅನ್ವಯಿಸುವಂತೆ ಜನರ ಮನದಿಂಗಿತ ಅರಿತು, ಸ್ಥಾನೋಚಿತ, ಸಂದರ್ಭೋಚಿತಗಳನ್ನು ತಿಳಿದು ಕಥೆ ಮಾಡುತ್ತಿದ್ದುದರಿಂದಲೇ ಜನ ಮೇಲಿಂದ ಮೇಲೆ ಅವರ ಕಥೆಗಳನ್ನುಣ ಬಯಸುತ್ತಿದ್ದರು.

ಹಿರೇಮಠರವರು ಹರಿಕಥೆ, ಶಿವಕಥೆ, ದಾಸಕೀರ್ತನೆ, ವಚನಗಾಯನಗಳೇ ಅಲ್ಲದೆ ರಂಗಗೀತೆಗಳನ್ನು ಹಾಡಿ ಜನರನ್ನು ರಂಜಿಸುತ್ತಿದ್ದರು.

ಅತಿ ಹೆಚ್ಚಿನ ಕಥೆ ಮಾಡಿರುವುದು ಹೇಮರೆಡ್ಡಿ ಮಲ್ಲಮ್ಮ. ೧೯೪೫ನೇ ಇಸವಿಯಲ್ಲಿಯೆ ಸತತವಗಿ ೧೧೩ ದಿನ ಅದೊಂದನ್ನೇ ಮಾಡಿದ್ದಾರೆಂಬುದು  ಕೀರ್ತನ ಕಲಾ ಇತಿಹಾಸದಲ್ಲಿ ಒಂದು ದಾಖಲೆಯ ಸರಿ. ರಾಮಾಯಣ, ಮಹಾಭಾರತ, ಬಸವ ಪುರಾಣ, ಶಿವಪುರಾಣಗಳನ್ನು  ಮಠ, ಮಂದಿರಗಳಲ್ಲಿ ತಿಂಗಳುಗಟ್ಟಲೆ ಪುರಾಣ ಹೇಳಿರಬಹುದು. ಈಗಲೂ ಹೇಳುತ್ತಿರುವುದನ್ನು ನಗರದಿಂದ ಹೊರತು ಪಡಿಸಿದ ಅನೇಕ ಸ್ಥಳಗಳಲ್ಲಿ ಕಾಣಬಹುದು. ಆದರೇ ಸಾಮಾಜಿಕ ನೆಲೆಯಲ್ಲಿನ ಭಕ್ತಿ ಪೂರ್ವಕ ಕಥೆಯೊಂದನ್ನು ಮೂನಾಲ್ಕು ತಿಂಗಳು ಮಾಡುವುದೆಂದರೇ ಸುಲಭದ ಮಾತಲ್ಲ. ದೃಶ್ಯ ಮಾಧ್ಯಮವಾದ ಚಲನಚಿತ್ರ ಒಂದು ನೂರು ದಿನ ನಡೆದರೇ ಅದೊಂದು ದಾಖಲೆ ಎನ್ನುತ್ತೇವೆ. ಅದರಲ್ಲಿ ಅನೇಕ ಪಾತ್ರಗಳು ವೈವಿಧ್ಯಮಯವಾದ ಸುಂದರ ದೃಶ್ಯಗಳು, ನೃತ್ಯ ಸಂಗೀತಗಳು ಕಣ್ಣಿಗೆ ಗೋಚರಿಸುತ್ತವೆ. ಆದರೇ ಕೀರ್ತನೆಯಲ್ಲಿ ಎಲ್ಲಾ ಪಾತ್ರಗಳನ್ನು ಓರ್ವರೇ ರೂಪಿಸಬೇಕು. ರೂಪಿಸುವಾತ ತಯಾರಿದ್ದರೂ ಕೇಳುಗರು ಮುಖ್ಯವಲ್ಲವೆ? ಕೇಳುವ ಜನ ಬರುವಂತೆ ಮಾಡುವ ಕಲೆಯೇ ಅದ್ಭುತಕಲೆ. ಇದನ್ನು ಕರಗತ ಮಾಡಿಕೊಂಡಿದುದರ ಪರಿಣಾಮವೇ ಕೀರ್ತನಾರಂಭಕ್ಕೆಕ ಒಂದು ಗಂಟೆ ಮುಂಚಿತವಾಗಿ ಬಂದು ಕುಳಿತು ಕೊಳ್ಳುತ್ತಿದ್ದರು. ೧೪ನೇ ಶತಮಾನದಲ್ಲಿ ನಡೆದಿದೆ ಎನ್ನಲಾದ ತೆಲುಗು ಮೂಲ (ಆಂಧ್ರ) ಕಥೆಯಾದ ಹೇಮರೆಡ್ಡಿ ಮಲ್ಲಮ್ಮನ್ಲಿ ಬರುವ ಪಾತ್ರಗಳು ವೈವಿಧ್ಯಮಯವಾಗಿವೆ. ಅದನ್ನೆಲ್ಲಾ ತಮ್ಮ ಅಭಿನಯದ ಮೂಲಕವೂ ತೋರಿಸುತ್ತಿದ್ದರು.

ಶೋಕ, ಕರುಣೆ, ಭೀಭತ್ಸ ರಸಗಳೇ ಪ್ರಧಾನವಾದ ಈ ಕತೆಯಲ್ಲಿ ಬರುವ ಮಾತಿಗಿಂತ ಮುಖದ ಹಾವ ಭಾವಗಳಿಂದ ವ್ಯಕ್ತ ಪಡಿಸುತ್ತಿದ್ದ ರೀತಿ ನೋಡಿದವರಿಗೆ ಮತ್ತೊಮ್ಮೆ ನೋಡಬೇಕೆಂದೆನಿಸುತ್ತಿತ್ತು. ನಾನು ಬಾಲಕಲನಾಗಿದ್ದಾಗ ನನ್ನ ತಾಯಿಯೊಡಗೂಡಿ ಹೋಗುತ್ತಿದ್ದಾಗ ನೋಡಿದ ಆ ದೃಶ್ಯ ಇನ್ನು ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಪ್ರಾಯಶಃ ಒಂಧು ಸಾರಿ ಕೇಳಿದ ಕಥೆಯನ್ನು ಮತ್ತೊಮ್ಮೆ ಕೇಳಲು ಯಾರು ಇಚ್ಚಿಸುವುದಿಲ್ಲ. (ಈಗಂತೂ ಕೇಳುವವರೇ ಇಲ್ಲ) ಅಂತಹದರಲ್ಲಿ ೧೧೩ ದಿನ ಒಂದೇ ಕಡೆಕ ನಡೆದು ಶತದಿನ ಕಂಡ ಸಂಕೇತವಾಗಿ ಶಾಲು ಹೊದಿಸಿ, ಬಂಗಾರದ ಪದಕ ಹಾಕಿ ಸನ್ಮಾನಿಸಿದುದು ಮೈಸೂರಿನ ಕೀರ್ತನ ಇತಿಹಾಸದಲ್ಲಿ ಒಂದು ದಾಖಲೆಯೆಂದೇ ಹೇಳಬಹುದು. ಬಹುಶಃ ನನಗೆ ತಿಳಿದ ಮಟ್ಟಿಗೆ ಈ ಕಥೆಯನ್ನೇ ಸಾವಿರಕ್ಕೆ ಮಿಗಿಲಾಗಿ ಹಳೇ ಮೈಸೂರಿನ ಭಾಗದಲ್ಲಿ ಮಾಡಿದ್ದಾರೆ.

ಮೈಸೂರಿನ ಮಂಡಿ ಮೊಹಲ್ಲಾದಲ್ಲಿರುವ ಕಾಳಮ್ಮನ ಗುಡಿ ಬೀದಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು ಅಲ್ಲಿನ ಚೌಡೇಶ್ವರು ದೇವಾಲಯದಲ್ಲಿ ಪ್ರತಿವರ್ಷ  ಶ್ರಾವಣದಲ್ಲಿ ಕಥೆ ಮಾಡುತ್ತಿದ್ದರು. ಸಂಜೆ ೭ಕ್ಕೆ ಪ್ರಾರಂಭವಾದರೇ ರಾತ್ರಿ ೯ ಕ್ಕೆ ಪೂರೈಸುತ್ತಿದ್ದರು. ದೂರ ದೂರದ ಊರುಗಳಲ್ಲಿ ಕಥೆ ಮಾಡಿಸ ಬಯಸುವವರು ಅದರಲ್ಲೂ ಶ್ರಾವಣ , ಕಾರ್ತೀಕಗಳಲ್ಲಿ ಪುರಾಣ ಹೇಳಿಸಬೇಕೆಂದು ಒಂದೆರಡು ವರ್ಷ ಮುಂಚಿತವಗಿಯೇ ಅವರ ಡೈರಿಯಲ್ಲಿ ಬರೆಸಿಕೊಂಡು ಮುಂಗಡ ಕೊಡುತ್ತಿದ್ದರು. ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬಂತೆ ಯಾರಿಗೂ ಅಹಿತವಾಗದಂತೆ ನಡೆದುಕೊಳ್ಳುವ ಗುಣ ಅವರದು. ಮೈಸೂರಿನ ಅಗ್ರಹಾರ ಅಂದರೇ ಈಗ ಪ್ರಸಿದ್ಧಿ ಹೊಂದಿರುವ ನೂರೊಂದು ಗಣಪತಿ ವೃತ್ತದಲ್ಲಿ ಪ್ರತಿ ವರ್ಷ ತಪ್ಪದೇ ಇವರ ಕಥೆ ಇರುತ್ತಿತ್ತು.

ಶುಭ್ರವಾದ ಬಿಳಿಯ ಕಚ್ಚೆ ಪಂಚೆ, ಜುಬ್ಬಾ, ನಡುವಿಗೆ ಸುತ್ತಿರುವ ವಸ್ತ್ರ, ಹಣೆಯಲ್ಲಿ ಎದ್ದು ಕಾಣುವ ಹಾಗೆ ವಿಭೂತಿ, ಕೊರಳಲ್ಲಿ ರುದ್ರಾಕ್ಷಿಸರ, ಮೇಲೊಂದು ಪುಷ್ಪಾಹಾರ ಇದು ಅವರ ಬಾಹ್ಯನೋಟ, ಕತೆ ಮಾಡುವಾಗ ಎಡಬಲಗಳಲ್ಲಿ ಹಾರ್ಮೋನಿಯಂ ಮತ್ತು ತಬಲಾದವರು ಹಿಂದೆ ಶೃತಿ ಮೀಟುವವರೋರ್ವರು ಇರುತ್ತಿದ್ದರು. ಮಧ್ಯದಲ್ಲಿ ಹಿರೇಮಠರವರು ನಿಂತುಕೊಂಡೆ ಕೀರ್ತನೆ ಮಾಡುತ್ತಿದ್ದರು. ಇವರು ಕತೆಗೆ ಸಂದರ್ಭೋಚಿತವಗಿ ನೃತ್ಯ ಮಾಡುತ್ತಿದ್ದದರಿಂದ ಸುಮಾರು ಐದಾರು ಅಡಿ ಉದ್ದಗಲದ ಖಾಲಿ ಸ್ಥಳದ ಅವಶ್ಯಕತೆ ಇತ್ತು. ಹಾಗಾಗಿ ಯಾವುದೇ ಕಥಾಕಾಲಕ್ಷೇಪ ಏರ್ಪಡಿಸಲಿ ಅದರ ಜಾಗದ ಬಗ್ಗೆ ಕಾಳಜಿ ವಹಿಸಬೇಕಾಗಿತ್ತು. ಸಾವಿರಾರು ಜನ ಸೇರುತ್ತಿದ್ದುದರಿಂದ ಕತೆಮಾಡುವ ಸಂಧರ್ಭದಲ್ಲಿನ ಅವರ ಹಾವ ಭಾವ. ಚಲನವಲನ ನೋಡಲಿಕ್ಕಗಿಯೇ ಜನಸಮೂಹ ಸೇರುತ್ತಿದ್ದುದರಿಂದ ಎತ್ತರದ ವೇದಿಕೆಯು ತೀರಾ ಅಗತ್ಯವಾಗಿತ್ತು. ಕತೆಯ ಆರಂಭಕಾಲದಲ್ಲಿ ಗಣಪತಿ ಸ್ತುತಿ ಮಾಡಿ ನಂತರ ಹೇಳಿಕೊಟ್ಟ ಗುರುವಿನ ಬಗ್ಗೆ ಪದ್ಯ ಹಾಡಿ ಕೊನೆಯ ಪ್ರಾಸವನ್ನು ಕೋಡಿ ಮಠವಸ ಶ್ರೀ ಘನಲಿಂಗೇಶ ಎಂದು ಪೂರೈಸಿ ತಾವು ಮಾಡಬೇಕಾದ ಕತೆಯ ವೇದಿಕಾ ಭಾಗಕ್ಕೆ ಬರುತ್ತಿದ್ದರು. ಕಂಚಿನ ತಾಳ ಇವರ ಪ್ರಮುಖ ವಾದ್ಯ. ಎರಡು ಕಡೆಯ ಪಕ್ಕ ವಾದ್ಯದವರಿಗೂ ಹುರಿದುಂಬಿಸಲು ಒಂದೊಂದು ಕಡೆ ಒಂದೊಂದು ಸಲ ತಿರುಗಿ ತಾಳ ಅಥವಾ ಕೈಯಲ್ಲಿ ಚಿಟಕಿ ಹಾಕುವ ಮೂಲಕ ನಾದ ಮತ್ತು ಲಯವಾದ್ಯಗಾರರಿಗೆ ಉತ್ಸಾಹ ತರುತ್ತಿದ್ದರು . ಸ್ವರಗಳ ಏರಿಳಿತ, ಹಾಡಿನ ಗತ್ತು ಇವುಗಳಿಂದ ವಾದ್ಯನುಡಿಸುವವರಿಗೆ ಪ್ರೋತ್ಸಾಹಿಸಿ, ರಾಗದ ವಿಸ್ತಾರ ನೆರವಲ್‌ ಮತ್ತು ಕಲ್ಪನಾ ಸ್ವರಗಳಿಗೆ ಅವಕಾಶಕೊಡುತ್ತಿದ್ದರು. ಅವರು ಯಾವಾಗ ವಾಚಿಸುವುದನ್ನು ನಿಲ್ಲಿಸಿ, ಹಾಡುವುದಕ್ಕೆ ಆರಂಭಿಸುತ್ತಾರೆ, ಅಥವಾ ಹಾಡುವುದನ್ನು ನಿಲ್ಲಿಸಿ ವಾಚಿಸಲು ತೊಡಗುತ್ತಾರೆ ಎಂಬುದರ ಪೂರ್ಣನಿಗಾ ವಾದ್ಯಗಾರರಿಗೆ ಅವಶ್ಯವಾಗಿರಬೇಕಾಗುತ್ತಿತ್ತು. ಇದೇ ಅವರ ವೈಶಿಷ್ಟ್ಯ.

ಕನ್ನಡ, ಮರಾಠಿ, ಉರ್ದು, ತೆಲುಗು, ಹಿಂದಿ, ತಮಿಳು ಭಾಷೆ ಬಲ್ಲವರಾದ್ದರಿಂದ ಆಯಾಯ ಭಾಗದ ಸಾಧು ಸಂತರ ಹೆಸರನ್ನು ಹೇಳಿ ಅವರ ಭಕ್ತಿಯ ಪರಾಕಾಷ್ಟತೆಯನ್ನು ಹೇಳುತ್ತಿದ್ದರು. ಉಪಕಥೆಗಳತೂ ಧಾರಾಳ. ಸಂತ ಜ್ಞಾನದೇವ, ತುಕಾರಾಮ, ಪುರಂದರದಾಸರ ಹಾಡುಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. ವಚನಗಳಂತೂ ಇವರಿಗೆ ಕರತಲಾಮಲಕ. ೬೩ ಪುರಾತನರ ಹೆಸರನ್ನು ಎಲ್ಲಿಯೂ ನಿಲ್ಲಿಸದಂತೆ ತಡೆರಹಿತ ಬಸ್ಸಿನಂತೆ ಅದಕ್ಕೊಂದು ಹಾಡುಕಟ್ಟಿ ಹೇಳುತ್ತಿದ್ದರು. ಜನ ‘ಓನ್ಸ್‌ಮೋರ್’ ಎಂದು ಒತ್ತಾಯಿಸುತ್ತಿದ್ದರು.

ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿಯೋಜಿತ ಕಲಾವಿದರಾಗಿ ಮಾಡಿದ ಕಥೆಗಳು ಹಲವಾರು. ಜನರಾಡುವ ಭಾಷೆಯಲ್ಲಿಯೇ ಅವರಿಗೆ ಮನ ಮುಟ್ಟುವಂತೆ ರಚಿಸಿದ ಕಥೆಗಳು ಸುಮಾರು ಒಂದು ಗಂಟೆಯೊಳಗಾಗಿ ಮುಗಿಯುವಂತೆ ಇದ್ದವು. ಸರ್ಕಾರದ ಯೋಜನೆಗಳನ್ನು ಜನತೆಗೆ ಮುಟ್ಟಿಸುವುದು ಅದರ ಉದ್ದೇಶ. ಭಕ್ತಿಯ ಸೆಲೆಯಲ್ಲಿಯೇ, ಪುರಾಣ ಪ್ರಸಂಗಗಳೊಂದೊಂದನ್ನು ಸಾಮಾಜಿಕ ವಿಷಯಗಳಿಗೆ ತಳಕು ಹಾಕಿ ಜನತೆಯ ಮನಸ್ಸಿಗೆ ಮುಟ್ಟಿಸುವ ಕೆಲಸ ಅವರದು. ಕುಟುಂಬ ಯೋಜನೆ ಯಾರಿಗೆ ತಾನೇ ಬೇಡ. ಪ್ರಸ್ತುತದ ಜನಸಂಖ್ಯಾ ಹೆಚ್ಚಳದಿಂದ ಪ್ರತಿಯೊಬ್ಬರ ಕುಟುಂಬದಲ್ಲಿ ಆಗುವ ಪರಿಣಾಮಗಳನ್ನು ಅವರವರೇ ಬಲ್ಲರು. ನಾಗರಿಕ ಜನ ಅದರಿಂದ ಎಚ್ಚೆತ್ತು ಕೊಂಡರೆ, ಗ್ರಾಮ್ಯ ಜನ ಅದರ ಬಗ್ಗೆ ತಿಳುವಳಿಕೆ ಸಾಲದೆ ದೇವರು ಕೊಟ್ಟನೆಂಬ ಭ್ರಮೆ ಇರುವುದನ್ನು ತಿಳಿಸಲೋಸುಗೆ ಮಾಡ ಬೇಡಿರಣ್ಣ ಮಕ್ಕಳ, ಕೊಡಬೇಡಿರಣ್ಣ ಕಿರುಕುಳ ಎಂಬ ಕಥೆ ರೂಪಿಸಿ ನೂರರು ಕತೆಮಾಡಿದರು. ವಾರ್ತಾ ಇಲಾಖೆಯ  ಮುಖ್ಯಭಾಗವಾದ ಸರ್ಕಾರದ ಕಾರ್ಯಕ್ರಮ ಪ್ರಚಾರ ಪಡಿಸುವ ಹಿನ್ನೆಲೆಯಲ್ಲಿ ಶಾಲೆಗೆ ಸೇರಿಸಿ ಮಕ್ಕಳ (ವಿದ್ಯಭ್ಯಾಸ ಕುರಿತಂತೆ), ಕುಡಿತ ತುಡಿತ (ಮದ್ಯಪಾನದಿಂದಾಗುವ ಹಾನಿ ಕುರಿತು), ದೇಶ ಸುತ್ತು ಕೋಶ ಓದು (ಪ್ರವಾಸಿ ಸ್ಥಳ ಪರಿಚಯ ಜನತೆಗೆ ಮುಟ್ಟಿಸುವ ಯೋಜನೆ), ಭಾಷೆ ಕಲಿ ಬಹುಜನರಲ್ಲಿ ಬೆರಿ (ಕೋಮು ಸೌಹಾರ್ದತೆಯನ್ನುಂಟು ಮಾಡುವ ವಿಚಾರಧಾರೆ), ಹಣ ಉಳಿಸು ಗುಣ ಬೆಳೆಸು (ಉಳಿತಾಯ ಯೋಜನೆಯ ಪ್ರಚಾರ), ಕಾಡು ಬೆಳೆದರೇ ನಾಡು ಉಳಿದೀತು (ಪರಿಸರ ರಕ್ಷಣೇ ಎಲ್ಲರ ಆದ್ಯ ಕರ್ತವ್ಯ ಎಂಬ ಭಾವನೆ ಮೂಡಿಸುವುದು), ಸಂಸ್ಕೃತಿ ಉಳಿಸಿ ಸದಾಚಾರ ಬೆಳೆಸಿ (ಪ್ರವಾಸಿ ತಾಣ ಸಂರಕ್ಷಣೆಯ ಅಗತ್ಯ ಕುರಿತು), ವಿದ್ಯುತ್ ವಿದ್ವತ್ ವಿದ್ಯುತ್‌ ಅಂದರೆ ಕರೆಂಟ್‌ ಜೀವನದ ಎಲ್ಲದರಲ್ಲಿಯೂ, ಕಾರ್ಖಾನೆಯ ಉತ್ಪತ್ತಿ ಮಾಡುವುದು ಸೇರಿದಂತೆ ವಿದ್ಯುತ್‌ ಬೇಕೇ ಬೇಕು. ಹಾಗೆಯೇ ವಿದ್ವತ್‌ ಅಂದರೇ ಜ್ಞಾನ ತಿಳುವಳಿಕೆ ಎಲ್ಲರಿಗೂ ಅಗತ್ಯ. ಪರಸ್ಪರ ಇತರರೊಡನೆ ಬೆರೆತು ನಡೆಯುವುದು. ಇತರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವುದು ಇತ್ಯಾದಿ ಸಾಮಾಜಿಕ ತಿಳುವಳಿಕೆ ಪಡೆಯುವುದೇ ವಿದ್ವತ್‌. ಇದು ಕರೆಂಟನಷ್ಟೇ ಅವಶ್ಯಕ. ಇಂತಹ ವಿಷಯಗಳನ್ನು ಕುರಿತು ಜನರಿಗೆ ಕತೆ ಮಾಡುವ ಮೂಲಕ ಕರ್ನಾಟಕದ ಉದ್ದಗಲಕ್ಕೂ ಅಡ್ಡಾಡಿದ್ದಾರೆ. ಜನರ ಮೇಲೆ ಅಗಾಧ ಪರಿಣಾಮವನ್ನುಂಟು ಮಾಡಿದೆ. ಇದೇ ವಿಷಯವನ್ನು ಕುರಿತು ಭಾರತ ಸರ್ಕಾರದ ಅಪೇಕ್ಷೆ ಮೇರೆಗೆ ಕಾಶಿ,ದೆಹಲಿ, ಆಗ್ರಾ, ಅಜ್ಮಿರ್, ಶ್ರೀನಗರ, ಅಹಮದಾಬಾದ್‌, ಬರೋಡಾ, ಮುಂಬೈ, ಮದರಾಸ್‌, ಹೈದರಾಬಾದ್‌ ಮುಂತಾದೆಡೆಗಳಲ್ಲಿ ಜನಜಾಗೃತಿ ಮೂಡುವ ಕೀರ್ತನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕಥೆ ಮಾಡುವ ಸಂದರ್ಭ ಬಂದಾಗಲೆಲ್ಲಾಚಿಕ್ಕ ಪೇಟೆಯಲ್ಲಿರುವ ಕಲ್ಯಾಣಭವನದಲ್ಲಿ ಇರುತ್ತಿದ್ದರು. ನಾನು ಒಮ್ಮೆ ಅವರಿದ್ದ ವಸತಿ ಸ್ಥಳಕ್ಕೆ ಹೋಗಿ ಭೇಟಿ ಮಾಡಿ ನಿಮ್ಮ ಸಂದರ್ಶನಕ್ಕಾಗಿ ಬಂದೆ, ಮೈಸೂರಿಗೆ ತಾವು ಬಂದಾಗಲೆಲ್ಲಾ ತಮ್ಮ ಕಥೆಗಳನ್ನು  ಕೇಳಿ ಆಕರ್ಷಿತನಾದವನು . ಪತ್ರಿಕೆಯಲ್ಲಿ ತಮ್ಮ ಬಗ್ಗೆ ಲೇಖನ ಬರೆಯುವ ಆಸಕ್ತಿ ಇದೆ ದಯವಿಟ್ಟು ಅನುಮತಿ ಕೊಡಿ ಅನ್ನುತ್ತಿದ್ದಂತೆ ‘ಅದಕ್ಕೇಕೆ ಚಿಂತಿ ಮಾಡ್ತಿಯೋ ತಮ್ಮಾ, ಬಾ ಕೂರು ಇಲ್ಲಿ, ನೀ ಚಲೋ ಕೆಲಸ ಮಾಡಲಿಲಕ್ಕೆ ಹತ್ತಿ, ಧೈರ್ಯವಾಗಿ ಬರಿ’ ಎಂದು ತಮ್ಮಲ್ಲಿರುವ ಎಲ್ಲಾ ಮಾಹಿತಿ ಒದಗಿಸಿದರು. ಸಾಕಷ್ಟು ಸಮಯ ಕುಳಿತು ಮಾತನಾಡಿದರು.  ಅವರು ಯಾವುದೇ ಕಥೆ ಮಾಡಲಿ ಒಮ್ಮೆ ಹಳಿದ ಉಪಕಥೆಯನ್ನು ಮತ್ತೊಮ್ಮೆ ಹೇಳುತ್ತಿರಲಿಲ್ಲ. ಅಗಾಧಾವಾದ ನೆನಪಿನ ಬುತ್ತಿ ಅವರಲ್ಲಿತ್ತು. ಕಥೆ ಸಂಜೆಯಾದರೇ ಬೆಳಿಗ್ಗೆ ಸ್ನಾನ ಪೂಜಾದಿಗಳನ್ನು ಪೂರೈಸಿದ ನಂತರ ಕಥೆಗೆ ಪೂರ್ವಸಿದ್ಧತೆ ಮಾಡಿಕೊಳ್ಳುವ ಪದ್ಧತಿ ಅವರದು, ಏನೋ ತೋಚಿದುದನ್ನು ಹೇಳಿ ಸಮಯ ಸಾಗಿಸಿ ಹಣ ಪಡೆದು ಬರುವ ಗುಣ ಅವರದಲ್ಲ. ಸಂಗೀತ ಜ್ಞಾನ, ಶಾರೀರ ಸಂಪತ್ತು, ವಾಕ್‌ ಚತುರತೆಯನ್ನು ಮೈಗೂಡಿಸಿಗೊಂಡಿದ್ದ ಇವರು ಸುಮ್ಮನೆ ಕೂರುವ ಜಾಯಮಾನದವರಾಗಿರಲಿಲ್ಲ.

ಕಛೇರಿ ಕೆಲಸದಂತೆ ತಿಂಗಳ ಸಂಬಳವನ್ನು ಕಾಣುವಂತಹ ಉದ್ಯೋಗವಲ್ಲವಾದುದರಿಂದ ಹರಿಕಥೆ ಮಾಡುವ ಸಂದರ್ಭ ಬಂದಾಗ ಮಾತ್ರ ಮಾಡಿ ಇನ್ನಿತರ ಸಮಯದಲ್ಲಿ ಉದರ ಪೋಷಣೆಗೆ ಬೇರೆ ದಾರಿಯನ್ನು ಹಿಡಿಯಬೇಕಾದ ಅನಿವಾರ್ಯತೆ ಇತ್ತು. ಅದಕ್ಕಾಗಿಯೇ ಗುಬ್ಬಿ ಕಂಪೆನಿಗೆ ಸೇರಿ ನಟನಾಗಿ ಅಭಿನಯಿಸಿದರು. ಹೆಸರನ್ನು ಗಳಿಸಿದರು.  ಅವರಿಗಾದ ತೊಡಕೆಂದರೇ ವೃತ್ತಿ ನಾಟಕ ಕಂಪನಿಯಾದುದರಿಂದ ಖಾಯಂ ಆಗಿ ತನಗೆನೀಡಿದ ಪಾತ್ರವನ್ನು ಮಾಡಲೇಬೇಕು. ಕೀರ್ತನೆ ಮಾಡಲು ಎಲ್ಲಿಗೂ ಹೋಗವು ಹಾಗಿಲ್ಲ.ಹಾಗಾಗಿ ಕೀರ್ತನೆ-ನಾಟಕ ಇವೆರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದು ಕೊನೆಗೆ ಕೀರ್ತನೆಯನ್ನೇ ಆರಿಸಿಕೊಂಡು. ಅನೇಕ ಕಷ್ಟ ನಷ್ಟಗಳ ನಡುವೆಯೇ ಕೀರ್ತಿಯ ಶಿಖರವನ್ನೇರಿದರು. ನಂತರದಲ್ಲಿ ತಮ್ಮದೇ ಆದ ಮಾರುತಿ ವಿಲಾಸ ನಾಟ್ಯ ಸಂಘ ಸ್ಥಾಪಿಸಿ ನೂರಾರು ಕಲಾಸಕ್ತರಿಗೆ ತರಬೇತಿ ನೀಡಿದರು . ಕೆಲಕಾಲ ‘ಉಷಾ’ ಎಂಬ ಕನ್ನಡ ಮಾಸ ಪತ್ರಿಕೆಯ ಸಂಪಾದಕರಾಗಿದ್ದರು.

ಚಲನ ಚಿತ್ರ ಕ್ಷೇತ್ರವು ಇವರನ್ನು ಕೈಬೀಸಿ ಕರೆಯಿತು. ಶಶಿಕಲಾ ಫಿಲಂಸ್‌ರವರು ತಯಾರಿಸಿದ ಜಗಜ್ಯೋತಿ ಬಸವೇಶ್ವರ ಚಿತ್ರದಲ್ಲಿ ಎಚ್‌.ಎಸ್‌. ಶಿವಲಿಂಗಸ್ವಾಮಿ ಹಿರೇಮಠರವರು ಶೀಲವಂತನ ಪಾತ್ರದಲ್ಲಿ ಮಿಂಚಿದರು (೧೯೫೯) ನಂತರ ಅಬಚೂರಿನ ಪೋಸ್ಟಾಫೀಸ್ ಮತ್ತಿತರ ಚಲನ ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು. ಆಕಾಶವಾಣಿ ಮತ್ತು ದೂರದರ್ಶನದ ಕಲಾವಿದರಾಗಿ ನೇಮಕಗೊಂಡಿದ್ದರು. ತಮ್ಮ ೨೦ ನೇ ವಯಸ್ಸಿನಲ್ಲಿಯೇ ಕೀರ್ತನೆ ಮೂಲಕ ಸ್ವಾತಂತ್ರ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿ ಬ್ರಿಟಿಷರ ಕೆಂಗಣ್ಣಿಗೆ ಪಾತ್ರರಾದದ್ದು ಉಂಟು. ಕರ್ನಾಟಕ ಏಕೀಕರಣ ಚಳುವಳಿಯಲ್ಲಿ, ಕೋಮು ಸೌಹಾರ್ದ ಬೆಳೆಸುವಲ್ಲಿ ಹೈದರಾಬಾದ್‌ ಕರ್ನಾಟಕ ಪ್ರಗತಿ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು . ಈಗ ಇರುವ ಹಾಗೆ ಧ್ವನಿ ಸುರುಳಿ (ಕ್ಯಾಸೆಟ್‌),; ಸಿ.ಡಿ. ಇತ್ಯಾದಿ ಆಧುನಿಕ ತಂತ್ರಜ್ಞಾನ ಹೆಚ್ಚಾಗಿ ಬೆಳೆದಿರಲಿಲ್ಲವಾದ್ದರಿಂದ ಶಿವಲಿಂಗಸ್ವಾಮಿಯವರ ಕಥೆಗಳು ಯಾವುವೂ ಧ್ವನಿ ಸುರಳಿಗಳಾಗಲೇ ಇಲ್ಲ. ಆದರೇ ಅಮೆರಿಕಾದ ಯೂನಬಿವರ್ಸಿಟಿ ಡಾಕ್ಯುಮೆಂಟರಿ ಫಿಲಂ ಟೀಂನವರು ಕೋಳೂರು ಕೊಡಗೂಸು ಕಥೆಯನ್ನು ೪೫ ನಿಮಿಷ ದೃಶ್ಯ ಮತ್ತು ಶ್ರವ್ಯ ಮಾಧ್ಯಮದಲ್ಲಿ ದಾಖಲಿಸಿಕೊಂಡಿದ್ದಾರೆ.

ದೆಹಲಿಯಲ್ಲಿ ನಡೆದ ದಿ ವರ್ಲ್ಡ್ ಯೂನಿವರ್ಸಿಟಿ ಫಿಲಾಸಫಿ ಸಂಸ್ಥೆಯ ಸ್ವರ್ಣ ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕದ ಪರವಗಿ ಭಾಗವಹಿಸಿದ ಏಕೈಕ ಕಲಾವಿದರಾಗಿದ್ದರು. ಮೂರು ದಿನಗಳ ಕಾಲ ನಡೆದ ಅಂತರಾಷ್ಟ್ರೀಯ ಮಟ್ಟದ ಈ ಸಮ್ಮೇಳನದಲ್ಲಿ ಪ್ರಪಂಚದ ನಾನಾ ಮೂಲೆಗಳಿಂದ ತತ್ವಜ್ಞಾನ ಚಿಂತಕರು ಆಗಮಿಸಿದ್ದರು. ಭಾರತದ ತತ್ವಜ್ಞಾನ ವಿಶ್ವಕ್ಕೆ ಎಷ್ಟು ಸಹಾಯಕಾರಿ ಎಂಬ ವಿಚಾರವನ್ನು ಹಿರೇಮಠರವರು ಮಂಡಿಸಿದರು. ಇದಾದ ಕೆಲ ದಿನಗಳಲ್ಲಿಯೇ ದೆಹಲಿಯ ಕನ್ನಡ ಸಂಘವು ಅಂದಿನ ಉಪ ರಾಷ್ಟ್ರಪತಿ ಬಿ.ಡಿ. ಜತ್ತಿಯವರ ನೇತೃತ್ವದಲ್ಲಿ ಅಲ್ಲಿನ ಮುಖ್ಯನ್ಯಾಯಾಧೀಶರಾದ ತಾತಾಚಾರಿ ಅವರ ಅಧ್ಯಕ್ಷತೆಯಲ್ಲಿ ಇವರನ್ನು ಸನ್ಮಾನಿಸಿತು (೧೮.೧೦.೧೯೭೬), ಗುಜಾರಾತ್‌ ಮತ್ತು ಮಹಾರಾಷ್ಟ್ರ ಫಿಲಂ ಯೂನಿಟ್‌ರವರು ಒಗ್ಗೂಡಿ ಅಂದಿನ ಖ್ಯಾತ ಚಲನ ಚಿತ್ರ ತಾರೆ ಮಧುಬಾಲ ಮತ್ತು ಶಿವಲಿಂಗಸ್ವಾಮಿ ಹಿರೇಮಠರವರನ್ನು ಮುಂಬೈನ ಕೊಲಾಬಾದಲ್ಲಿ ಸನ್ಮಾನಿಸಿತು (೧೮.೧೦.೧೯೮೨).

ಮೈಸೂರಿನ ಮಹಾರಾಜರಾದ ಶ್ರೀ ಜಯಚಾಮರಾಜ ಒಡೆಯರ್ ಅವರು ಆಸ್ಥಾನ ವಿದ್ವಾನ್ ಪದವಿ ನೀಡಿ ಗೌರವಿಸಿದರು. ಇದಲ್ಲದೆ ಸಾಕಷ್ಟು ಖಾಸಗಿ ಸಂಸ್ಥೆಗಳು, ಮಠಗಳು ಗೌರವಿಸಿದವೆ. ಸಂದ ಬಿರುದುಗಳು ಅನೇಕ.  ನವರಸ ಕೀರ್ತನಾಲಂಕಾರ, ಕೀರ್ತನ ಕಲಾಪ್ರವೀಣ, ಕೀರ್ತನ ಕಲಾ ಸಾರ್ವಭೌಮ, ಕೀರ್ತನ ಕೇಸರಿ ಮುಂತಾದವು. ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಸಹ ೧೯೮೭-೮೮ನೇ ಸಾಲಿನ ಪ್ರಶಸ್ತಿ ನೀಡಿದೆ. ಅಕಾಡೆಮಿ ನಡೆಸಿದ ಸೋಮನಾಥ ಪುರ ನೃತ್ಯ ಸಂಗೀತೋತ್ಸವದಲ್ಲಿ (೧೯೮೮ನೇ ಮಾರ್ಚಿ ೧೯ ರಿಂಧ ೨೧) ಆಹ್ವಾನಿತ ಕಲಾವಿದರಲ್ಲಿ ಒಬ್ಬರಾಗಿ ಭಾಗವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಾರ್ವಜನಿಕ ಸನ್ಮಾನವನ್ನು ಬೆಂಗಳೂರಿನ ಕನ್ನಡ ಸಾಃಇತ್ಯ ಪರಿಷತ್‌ ಸಭಾಂಗಣದಲ್ಲಿ ಏರ್ಪಡಿಸಿ ಪರಿಷತ್‌ ಅಧ್ಯಕ್ಷರಾದ ಗೊ.ರು. ಚೆನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಗೌರವಿಸಿತು (೨೦.೮.೧೯೮೯). ಆ ವೇಳೆಗಾಗಲೇ ಆರೋಗ್ಯ ಕ್ಷಿಣಿಸಿತ್ತು. ಧ್ವನಿ ಬದಲಾಗಿತ್ತು. ತಮ್ಮ ನಿವಾಸವಾದ ಚಿಕ್ಕಮಗಳೂರು ಜಿಲ್ಲೆಯ ದೇವನೂರಿನಲ್ಲಿಲಯೇ ಇವರ ಕೊನೆಯ ದಿನಗಳನ್ನು  ಕಳೆದರು. ಪರಂಪರಾಗತವಾಗಿ ಬಂದಿದ್ದ ಜ್ಯೋತಿಷ್ಯ ವಿದ್ಯೆ, ಯಂತ್ರ, ಮಂತ್ರದಕ ಕಾಯಕ ದೇಹಾಂತ್ಯದ ಕೊನೆಯ ಕಾಯಕವಾಗಿತ್ತು. ಆದರೇ ೧೯೯೧ರಲ್ಲಿ ಅವರ ವಿಳಾಸಕ್ಕೆ ಬರೆದ ಕಾಗದಕ್ಕೆ ಉತ್ತರವೇ ಬರಲಿಲ್ಲ. ಆ ವೇಳೆಗಾಗಲೇ ಅವರು ಇಹಲೋಕವನ್ನು ತ್ಯಜಿಸಿದ್ದರು. ಅವರ ಕೀರ್ತನೆಯನ್ನು ಕೇಳಿದವರಿಗೆ ಮಾತ್ರ ನೆನಪಾಗಿ ಉಳಿದರು.