‘ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ ……..’ ಆಕಾಶವಾಣಿಯಿಂದ ತೇಲಿಬಂದಾಗ ಆ ಹಾಡುಗಾರಿಕೆಯಲ್ಲಿದ್ದ ಗಾಂಭೀರ್ಯ ಹಾಗೂ ಮಾಧುರ್ಯಕ್ಕೆ ಮರುಳಾಗಿ ಹೋದೆ. ಯಾರು ಈ ಗಾಯಕ ಎಂದು ಯೋಚಿಸುತ್ತಿರುವಷ್ಟರಲ್ಲೇ ಹೆಚ್‌.ಕೆ. ನಾರಾಯಣ ಅವರಿಂದ ಭಾವಗೀತೆಯನ್ನು ಕೇಳಿದಿರಿ ಎಂದುಲಿಯಿತು ಧ್ವನಿ. ತದನಂತರ ಅವರು ಹಾಡಿದ ‘ನನ್ನ ಪುಟ್ಟ ಪುರಂದರವಿಠ್ಠಲ’, ‘ಶುಭ ನುಡಿಯೆ ಶಕುನದ ಹಕ್ಕಿ’, ‘ಪೋರಿ ನೀನು’, ಇದರ ಜೊತೆಜೊತೆಗೆ ಶಾಸ್ತ್ರೀಯ ಸಂಗೀತ, ದೇವರನಾಮಗಳು, ವಚನಗಳು … ಹೀಗೇ ಕೇಳಿದಷ್ಟು ಇನ್ನೂ ಕೇಳಬೇಕೆಂಬ ಹಂಬಲ ಮೂಡಿಸುವ ಸುಗಮ ಸಂಗೀತ ಹಾಗೂ ಶಾಸ್ತ್ರೀಯ ಸಂಗೀತದ ಅಪರೂಪದ ಸಂಗಮ ಹೊಳೆನರಸೀಪುರ ಕೇಶವಯ್ಯ ನಾರಾಯಣರವರದು.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿ ಮಾರ್ಚ್ ೧೪, ೩೪ರಲ್ಲಿ ಶ್ರೀ ಕೇಶವಯ್ಯ ಹಾಗೂ ಶ್ರೀಮತಿ ಸಣ್ಣಮ್ಮನವರಿಗೆ ಜನಿಸಿದ ಸುಪುತ್ರ ಹೆಚ್‌.ಕೆ. ನಾರಾಯಣ. ತಂದೆ ಶ್ರೀ ಕೇಶವಯ್ಯನವರು ಸಂಗೀತ ಮನೆತನದಿಂದ ಬಂದವರಾಗಿ ‘ಶಾರದಾ ಸಂಗೀತ ಪಾಠಶಾಲೆ’ ತೆರೆದು ಪಿಟೀಲು ಹಾಗೂ ಹಾಡುಗಾರಿಕೆಯನ್ನು ಹೇಳಿಕೊಡುತ್ತಿದ್ದರು. (ಖ್ಯಾತ ಪಿಟೀಲು ವಾದಕ ಹೆಚ್‌.ಕೆ. ನರಸಿಂಹಮೂರ್ತಿ ಇವರ ಶಿಷ್ಯರು). ನಾರಾಯಣ ಅವರು ಬಹಳ ಚಿಕ್ಕ ವಯಸ್ಸಿನಿಂದಲೇ ಸಂಗೀತದಿಂದ ಪ್ರಭಾವಿತರಾಗಿ ತಮ್ಮ ಆರನೇ ವಯಸ್ಸಿನಲ್ಲೇ ತಂದೆಯವರಿಂದ ಪಿಟೀಲು ವಾದನವನ್ನು ಕಲಿಯಲು ಪ್ರಾರಂಭಿಸಿದರು. ಆದರೆ ಒಂದು ಕುತೂಹಲ ಘಟನೆ ಅವರು ಪಿಟೀಲನ್ನು ಬಿಟ್ಟು ಹಾಡುಗಾರಿಕೆಯನ್ನು ಪ್ರಾರಂಭಿಸಲು ಪ್ರೇರೇಪಿಸಿತು. ಒಂದು ದಿನ ಆಕಸ್ಮಿಕವಾಗಿ ಪಿಟೀಲು ಮುರಿದುಹೋಗಿ ರಿಪೇರಿಗೆ ಕೊಡಲಾಯಿತು. ಆದರೆ ರಿಪೇರಿ ಅಂಗಡಿಯಿಂದ ಪಿಟೀಲು ವಾಪಸ್ಸು ಬರಲೇ ಇಲ್ಲ. ಹಾಗಾಗಿ ಹಾಡುಗಾರಿಕೆಯನ್ನೇ ಮುಂದುವರಿಸಿ ಸೀನಿಯರ್ ಪರೀಕ್ಷೆಯನ್ನು ಮುಗಿಸಿದರು. ಅನಂತರ ಮೈಸೂರಿಗೆ ಬಂದು ಶ್ರೀ ಆರ್.ಕೆ. ಶ್ರೀಕಂಠನ್‌ ಅವರಲ್ಲಿ ಸಂಗೀತ ಪಾಠವನ್ನು ಮುಂದುವರಿಸಿದರು ಗುರುಗಳಿಗೆ ಸಂಗೀತ ಪರೀಕ್ಷೆಗಳಲ್ಲಿ ಅಷ್ಟಾಗಿ ಆಸಕ್ತಿ ಇಲ್ಲದಿದ್ದರೂ ಸಹ ವಿದ್ವತ್‌ ಪರೀಕ್ಷೆಯಲ್ಲಿ ಚಿನ್ನದ ಪದಕವನ್ನು ಗಳಿಸಿ ತಮ್ಮ ತಂದೆಯವರು ಕಂಡ ಕನಸನ್ನು ನನಸಾಗಿಸಿದರು. ಗುರುಗಳ ಬಗ್ಗೆ ಅಪಾರ ಭಕ್ತಿ, ಗೌರವವನ್ನು ಹೊಂದಿರುವ ನಾರಾಯಣ ತಮಗೆ ಸಂಗೀತಪಾಠವನ್ನು ಕಲಿಸುತ್ತಿದ್ದ ರೀತಿಯನ್ನು ಬಹಳ ಆತ್ಮೀಯವಾಗಿ ಮೆಲುಕು ಹಾಕುತ್ತಾರೆ. ಸಂಜೆ ಪಾಠಕ್ಕೆ ಕುಳಿತಾಗ ದೀಪವನ್ನು ಆರಿಸಿ ಕತ್ತಲೆಯಲ್ಲಿ ೧-೨ ಘಂಟೆಗಳ ಕಾಲ ರಾಗದ ಆಲಾಪನೆ, ನೆರವಲ್‌ ಮಾಡುವಾಗ ಸಿಗುತ್ತಿದ್ದ ಆನಂದ, ತನ್ಮಯತೆ ಬಹಳ ಸೊಗಸಾಗಿತ್ತೆಂದು ನೆನಸಿಕೊಳ್ಳುತ್ತಾರೆ.

೧೯೫೩ರಲ್ಲಿ ಎಸ್‌.ಎಸ್‌.ಎಲ್‌.ಸಿ. ಮುಗಿಸಿ ಮುಂದೆ ಓದಬೇಕೆಂದು ಮೈಸೂರಿಗೆ ಬಂದವರು ಆಕಾಶವಾಣಿಯ ನಂಟು ಬೆಳೆಸಿಕೊಂಡರು. ೧೯೫೪ರಲ್ಲಿ ನಿಲಯದ ಕಲಾವಿದರಾಗಿ ಆಕಾಶವಾಣಿಯನ್ನು ಪ್ರವೇಶಿಸಿದರಾದರೂ ಅದಕ್ಕೆ ಮುಂಚೆ ಸಂಗೀತ ಕಾರ್ಯಕ್ರಮಗಳಿಗೆ ‘ಸ್ವರ ಪ್ರಸ್ತಾರ’ ಬರೆದುಕೊಡುವ ಮೂಲಕ ಸಂಪರ್ಕವಿಟ್ಟುಕೊಂಡಿದ್ದರು. ಮೈಸೂರು ಆಕಾಶವಾಣಿಯಲ್ಲಿ ನಿಲಯ ಕಲಾವಿದರಾಗಿ ಹಿಂದೂಸ್ತಾನಿ ಗಾಯನ ಮತ್ತು ಹಾರ್ಮೋನಿಯಂ ನುಡಿಸುತ್ತಿದ್ದ ಶ್ರೀ ಎಂ.ಪಿ. ನಾಗಮುತ್ತು ಅವರ ಮನೆಯಲ್ಲೇ ಉಳಿದಿದ್ದ ನಾರಾಯಣ್‌ ಅವರು ಹಿಂದುಸ್ತಾನಿ ಸಂಗೀತದಲ್ಲೂ ಆಸಕ್ತಿ ಬೆಳೆಸಿಕೊಂಡರು. ಇದು ಮುಂದೆ ಅವರು ಸುಗಮಸಂಗೀತದ ರಾಗ ಸಂಯೋಜನೆ ಮಾಡುವಲ್ಲಿ ಬಹಳ ಪ್ರಭಾವ ಬೀರಿತು. ೧೯೫೫ರಲ್ಲಿ ಆಕಾಶವಾಣಿ ಬೆಂಗಳೂರಿಗೆ ವರ್ಗಾವಣೇಯಾಯಿತು.

ಶ್ರೀ ಎಂ.ಪಿ. ನಾಗಮುತ್ತು ಅವರ ಮಗಳಾದ ಕಥಕ್‌ ನೃತ್ಯಗಾರ್ತಿ ಕಾಂತಾ ಅವರನ್ನು ೧೯೬೨ರಲ್ಲಿ ಕೈಹಿಡಿದು ವೈವಾಹಿಕ ಜೀವನವನ್ನು ಪ್ರಾರಂಭಿಸಿದರು. ಹಿರಿಯ ಮಗಳು ಕು. ಮಂಜು ನಾರಾಯಣ್‌ ತಂಜಾವೂರು ಶೈಲಿಯ ಕುಂಚ ಕಲಾವಿದೆ ಹಾಗೂ ಪಾಶ್ಚಾತ್ಯ ಗಿಟಾರ್ ವಾದಕರು. ಎರಡನೆಯ ಮಗಳು ಕು. ಚಂದ್ರಿಕ ನಾರಾಯಣ್‌ ನೃತ್ಯ ಕಲಾವಿದೆ. ‘ನೂಪುರ’ದ ಗುರು ಲಲಿತಾ ಶ್ರೀನಿವಾಸನ್‌ ಅವರ ಶಿಷ್ಯೆ, ದೇಶ ವಿದೇಶಗಳಲ್ಲಿ ಇವರು ನೃತ್ಯ ಕಾರ್ಯಕ್ರಮವನ್ನು ನೀಡಿದ್ದಾರೆ. ಅವರ ಕಾರ್ಯಕ್ರಮಗಳಿಗೆ ನಾರಾಯಣ್‌ರವರದೇ ಹಾಡುಗಾರಿಕೆ. ಜೊತೆಗೆ ಪಾಶ್ಚಾತ್ಯ  ಪಿಟೀಲು ವಾದಕರೂ ಹೌದು. ದುಃಖದ ಸಂಗತಿಯೆಂದರೆ ೧೯೮೭ರಲ್ಲಿ ನಾರಾಯಣರ ಒಂಬತ್ತು ವರ್ಷದ ಮಗ ಮನೆಯಲ್ಲಿ ಅಡಿಗೆ ಅನಿಲ ಸ್ಫೋಟದ ದುರಂತದಲ್ಲಿ ಅಸುನೀಗಿದ್ದು. ಆ ದುಃಖ ನಾರಾಯಣ್‌ರವರನ್ನು  ಕಾಡುತ್ತಲೇ ಇದೆ. ‘ಪುತ್ರ ಶೋಕಂ ನಿರಂತರಂ’ ಎಂಬಂತೆ.

ಬೆಂಗಳೂರು ಆಕಾಶವಾಣಿಯಲ್ಲಿ ೧೯೭೪ ರಲ್ಲಿ ಜೂನಿಯರ್ ಮ್ಯೂಸಿಕ್‌ ಕಂಪೋಸರ್ ಹುದ್ದೆಗೆ ನಾರಾಯಣ್‌ ಕುಳಿತರು . ಶ್ರೀದೊರೆಸ್ವಾಮಿ ಅಯ್ಯಂಗಾರ್ ಅವರು ಇಬ್ಬರಿಗೂ ಕುವೆಂಪು ಅವರ ‘ಜೀವನ ಸಂಜೀವನ ನನ್ನ ಹೃದಯಕೆ ನೀನೆ’ ಎಂಬ ಕವನವನ್ನು ಕೊಟ್ಟು ಅರ್ಧ ಘಂಟೆ ಕಾಲಾವಧಿಯಲ್ಲಿ ರಾಗ ಸಂಯೋಜನೆ ಮಾಡಿ ಹಾಡಬೇಕು ಎಂದರು. ವಿಶೇಷ ಸಂಗತಿಯೆಂದರೆ ನಾರಾಯಣ್‌ರವರು ತಮ್ಮ ಗುರುಗಳಿಂದಲೇ ಆ ಹಾಡನ್ನು ಹಾಡಿಸಿದರು. ಆ ಪ್ರಸಂಗವನ್ನು ಬಹಳ ಅಭಿಮಾನದಿಂದ ನೆನೆಸಿಕೊಳ್ಳುತ್ತಾರೆ. ಶ್ರೀಕಂಠನ್‌ ಅವರು ತಾವೇ ಹಾಡನ್ನು ಬರೆದುಕೊಂಡು ‘ಕೊಡಪ್ಪ ಮುಜುಗರ ಪಡಬೇಡ’ ಅಂತ ಹೇಳಿ ಹಾಡಿದರಂತೆ. ಎಷ್ಟು ಜನಕ್ಕೆ ಈ ಭಾಗ್ಯ ಸಿಗುತ್ತದೆ? ಹೀಗೆ ಜೂನಿಯರ್ ಕಂಪೋಸರ್ ಆಗಿ ನೇಮಕಗೊಂಡರು. ೧೯೭೬ರಲ್ಲಿ ಸೀನಿಯರ್ ಕಂಪೋಸರ್ ಆದರು. ೧೯೮೨ರಲ್ಲಿ ಮ್ಯೂಸಿಕ್‌ ಪ್ರೊಡೂಸರ್ ಆಗಿ ಬಡ್ತಿ ಹೊಂದಿದರು. ಈಗ ಅವರು ‘ಎ ಟಾಪ್‌’ ಶ್ರೇಣಿಯ ಕಂಪೋಸರ್ (ಕರ್ನಾಟಕದಲ್ಲಿ ಇರುವುದು ಒಬ್ಬರೇ ಎಂಬ ಹೆಗ್ಗಳಿಕೆ). ಸುಮಾರು ೩೬ ವರ್ಷಗಳ ಕಾಲ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿರುವ ನಾರಾಯಣ ಅವರು ಸುಗಮ ಸಂಗೀತ ಹಾಗೂ ಶಾಸ್ತ್ರೀಯ ಸಂಗೀತದ ಗಾಯನದಲ್ಲಿ ‘ಎ’ ಶ್ರೇಣಿಯ ಕಲಾವಿದರು.

ಆಕಾಶವಾಣಿ ತಮ್ಮ ಕಲಾಜೀವನದ ಬಹುಮುಖ್ಯ ಅಂಗವಾಗಿದ್ದು ತಮ್ಮ ಗಾಯನವನ್ನು ಜನರತ್ತ ತಲುಪಿಸಲು ಪ್ರಮುಖ ಪಾತ್ರ ವಹಿಸಿದೆ ಎನ್ನುತ್ತಾರವರು. ಆಕಾಶವಾಣಿಯಲ್ಲಿದ್ದಾಗ ಸುಗಮ ಸಂಗೀತ ಹಾಡಲು ಪ್ರಾರಂಭಿಸಿದ ಅವರು ಲೆಕ್ಕವಿಲ್ಲದಷ್ಟು ಗೀತೆಗಳಿಗೆ ರಾಗಸಂಯೋಜನೆ ಮಾಡಿದ್ದಾರೆ. ಇದರ ಜೊತೆಗೆ ಅನೇಕ ಸಂಗೀತ ರೂಪಕಗಳಿಗೆ ರಾಗ ಸಂಯೋಜನೆಯನ್ನು ಮಾಡಿದ್ದಾರೆ. ಇದರಲ್ಲಿ ಪ್ರಮುಖವಾದುವು ಜಯದೇವನ ‘ಶೃಂಗಾರ ನಾಯಕ’, ಕುವೆಂಪು ಅವರ ‘ಚಿತ್ರಾಂಗದ’,ರವೀಂದ್ರನಾಥ  ಠಾಗೋರ್ ರ ‘ಗೀತಭಾರತಿ’ (ಬಂಗಾಳಿ ಸಾಹಿತ್ಯದ ಅನುವಾದಕ್ಕೆ ಕರ್ನಾಟಕ ಸಂಗೀತ) ಹೀಗೆ ಅನೇಕ ರೂಪಕಗಳಿಗೆ ತಮ್ಮ ಅಮೋಘವಾದ ಸಂಗೀತ ನೀಡಿ ಅಪಾರ ಪ್ರಶಂಸೆಗೆ ಪಾತ್ರರಾಗಿದ್ದಾಋಎ. ಇವರು ಶ್ರೀ ರಜನೀಕಾಂತರಾವ್‌ರೊಂದಿಗೆ ಸಂಗೀತ ನೀಡಿದ ಮೇಘ ಸಂದೇಶ’ ರೂಪಕಕ್ಕೆ ರಾಷ್ಟ್ರೀಯ ಕಾರ್ಯಕ್ರಮ ಸ್ಪರ್ಧೆಯಲ್ಲಿ ಮೊದಲನೆಯ ಬಹುಮಾನ ದೊರೆತಿದೆ. ದೂರದರ್ಶನದಲ್ಲಿಯೂ ಅನೇಕಕ ಸುಗಮ ಸಂಗೀತ ಕಾರ್ಯಕ್ರಮವನ್ನು ನೀಡಿದ್ದಾರೆ.

ಹಿಂದೆ ಆಕಾಶವಾಣಿಯಲ್ಲಿ ಸುಗಮಸಂಗೀತ ಕಾರ್ಯಕ್ರಮಗಳು ಬಹಳ ವಿಶೇಷವಾಗಿದ್ದುವು ಎನ್ನುತ್ತಾರೆ. ನಾರಾಯಣ್‌ರವರು. ವಿ.ಸೀತಾರಾಮಯ್ಯ, ನಾ. ಕಸ್ತೂರಿ ಹಾಗೂ ಶ್ರೀರಂಗ ಅವರ ನೇತೃತ್ವದಲ್ಲಿ ಬಹಳ ಉನ್ನತವಾದ ಕಾರ್ಯಕ್ರಮಗಳು ಹೊರಹೊಮ್ಮುತ್ತಿದ್ದುದನ್ನು  ನೆನೆದು ಇತ್ತೀಚಿನ ದಿನಗಳಲ್ಲಿ ಇದು ಕಾಣಸಿಗದಾಗಿದೆ ಎಂದು ವಿಷಾದಿಸುತ್ತಾರೆ. ವಿ.ಸೀ. ಅವರು ಪ್ರೊಡ್ಯೂಸರ್ ಆಗಿದ್ದಾಗ ಹಿಂದಿನ ದಿನವೇ ಕಲಾವಿದರನ್ನು ಕರೆಸಿ ಅವರಿಂದ ಹಾಡಿಸಿ, ಸಾಹಿತ್ಯ ಅಥವಾ ಸಂಗೀತದಲ್ಲಿ ಲೋಪದೋಷಗಳಿದ್ದಲ್ಲಿ ಅವನ್ನು ಸರಿಪಡಿಸಿ ನಂತರ ಪ್ರಸಾರಮಾಡುತ್ತಿದ್ದರಂತೆ. ಅಷ್ಟು, ಶಿಸ್ತು, ಕಾಳಜಿ ಇತ್ತು ಅನ್ನುತ್ತಾರೆ. ನಾರಾಯಣರ ಸಂಗೀತ ಜೀವನದಲ್ಲಿ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿಗಳು  ಆರ್.ಕೆ. ಶ್ರೀಕಂಠನ್‌, ಎಂ.ಪಿ. ನಾಗಮುತ್ತು ಹಾಗೂ ಆಕಾಶವಾಣಿಯಲ್ಲಿ ಪ್ರೊಡೂಸರ್ ಆಗಿದ್ದ ಎಂ.ಡಿ. ಪಾರ್ಥಸಾರಥಿಯವರು. ಅಂದಿನ ದಿನಗಳಲ್ಲಿ ಶಾಸ್ತ್ರೀಯ ಸಂಗೀತಗಾರರು ಸುಗಮಸಂಗೀತವನ್ನು ಹಾಡುವುದಿರಲಿ ಅದನ್ನು ಸ್ವೀಕರಿಸಲೂ ತಯಾರಿರಲಿಲ್ಲ. ಹಾಗಿದ್ದಲ್ಲಿ ನಾರಾಯಣ್‌ರವರು ಇದನ್ನು ಹೇಗೆ ನಿಭಾಯಿಸಿದರು ಅನ್ನುವ ಪ್ರಶ್ನೆ ಮೂಡುವುದು ಸಹಜ. ಶಾಸ್ತ್ರೀಯ ಸಂಗೀತದತ್ತ ಒಲವು ಹೆಚ್ಚಿದ್ದರೂ ಕೂಡ ಸುಗಮಸಂಗೀತ ಅಥವಾ ಬೇರೆ ಪ್ರಕಾರಗಳನ್ನು ಹಾಡಬಾರದು ಎನ್ನುವ ಮಡಿವಂತಿಕೆ ಮಾದಲಿಂದಲೂ ನನ್ನಲ್ಲಿಲ್ಲ. ಒಬ್ಬ ನಿಪುಣ ಸಂಗೀತಗಾರ ಎಲ್ಲವನ್ನೂ ಹಾಡಬಲ್ಲ. ಎಲ್ಲವೂ ಸ್ವರ, ತಾಳ, ಶೃತಿ, ಸಾಹಿತ್ಯದ ಮಿಶ್ರಣವೇ ಅಲ್ಲವೇ ಎನ್ನುತ್ತಾರೆ ನಾರಾಯಣ್‌ರವರು.

ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯಕ್ಕೆ ಗಾಯನವನ್ನು ದೇಶದೆಲ್ಲೆಡೆ ಹಾಗೂ ವಿದೇಶದಲ್ಲಿ ನೀಡುತ್ತಿರುವ ಇವರು ಅಮೇರಿಕಾ (ಮೂರು  ಭಾರಿ), ಇಂಗ್ಲೆಂಡ್‌, ಸಿಂಗಪೂರ್, ಹಾಂಗಾ ಕಾಂಗ್‌, ಸಿಲಓನ್‌, ಮಂಗೋಲಿಯಾ, ರಷ್ಯ (ಎರಡು ಬಾರಿ), ಮನಿಲಾ ಎಲ್ಲೆಡೆ ಹಾಡಿ ತಮ್ಮದೇ ಆದ ಶ್ರೋತೃವೃಂದವನ್ನು ಬೆಳೆಸಿಕೊಂಡಿದ್ದಾರೆ. ವಿದೇಶದಲ್ಲಿನ ಭಾರತೀಯರಲ್ಲದೆ ಅಲ್ಲಿಯವರಿಗೂ ನಮ್ಮ ಸಂಗೀತ ಬಹಳ ಅಚ್ಚುಮೆಚ್ಚು ಎನ್ನುತ್ತಾರೆ. ಇದಲ್ಲದೆ ‘ರಮಣಾಂಜಲಿ’ (ರಮಣಮಹರ್ಷಿಗಳ ಗೀತೆಗಳ ಗಾಯನ) ತಂಡದ ಸದಸ್ಯರಾಗಿ ಕಳೆದ ಇಪ್ಪತ್ತೈದು ವರ್ಷಗಳಿಂದ ಶ್ರೀ ರಾಜಕುಮಾರ್ ಭಾರತಿಯವರೊಂದಿಗೆ ಎಲ್ಲಾ ಭಾಷೆಗಳಲ್ಲೂ ಸುಮಾರು ೧೫೦ ಕ್ಯಾಸೆಟ್‌ಗಳಲ್ಲಿ ಹಾಡಿ ಅನೇಕ ನೃತ್ಯರೂಪಕ (ಇಪ್ಪತ್ತೈದಕ್ಕೂ ಮೇಲ್ಪಟ್ಟು) ಕಾರ್ಯಕ್ರಮಗಳನ್ನು ದೇಶವಿದೇಶಗಳಲ್ಲಿ ನೀಡಿದ್ದಾರೆ.

ಸಾವಿರಾರು ಗೀತೆಗಳಿಗೆ ರಾಗಸಂಯೋಜನೆ ಮಾಡಿರುವ ನಾರಾಯಣ್‌ರವರ ಸಂಗೀತದ ವಿಶಿಷ್ಟತೆಯೆಂದರೆ ಮಧುರತೆ, ಮಿತವದ ವಾದ್ಯಗಳ ಬಳಕೆ ಹಾಗೂ ಸಾಧ್ಯವಾದಷ್ಟು ಒಂದೇ ರಾಗದಲ್ಲಿ (ಮಿಶ್ರಣವಿಲ್ಲದೆ) ಹಾಡುವುದು. ಅವರ ಸಂಗೀತದಲ್ಲಿ ಶಾಂತತೆ ಇದೆ ಮತ್ತು ಕಿವಿಗಳಿಗೆ ಇಂಪೆರೆಯುವ ತಂಪಿದೆ. ಹೀಗೆ ಸಂಯೋಜನೆಮಾಡಿ ಎಲ್ಲಾ ಪ್ರಕಾರಗಳಲ್ಲಿಯೂ ಹೊರಬಂದಿರುವ ಕ್ಯಾಸೆಟ್‌ಗಳ ಸಂಖ್ಯೆ ಪ್ರಾಯಶಃ ಅವರಿಗೇ ನೆನಪಿಲ್ಲ. ಸುಗಮಸಂಗೀತದಲ್ಲಿ ‘ನೀಲಾಂಜನ’, ‘ಛಾಯಾ’, ‘ಗೆಳತಿ’, ‘ಸಂಗೀತ’ ಮತ್ತು ‘ಅಗ್ನಿ ಹಂಸ’ ಬಹಳ ಜನಪ್ರಿಯವಾಗಿದೆ. ಇವರ ‘ತೊರೆದು ಹೋಗದಿರಓ ಜೋಗಿ …..’ ಸಂಗೀತ ರಸಿಕರ ಮನಸ್ಸನ್ನು ಸೂರೆಗೊಂಡಿದೆ. ಇದಲ್ಲದೆ ಶಾಸ್ತ್ರೀಯ ಸಂಗೀತ, ವಚನಗಳು, ದಾಸರಪದಗಳು, ರಮಣಾಂಜಲಿ ಗೀತೆಗಳನ್ನಾಧರಸಿ ನೂರಾರು ಧ್ವನಿಸುರುಳಿಗಳು ಹೊರಬಂದಿವೆ. ಶ್ರೀ ವಿದ್ಯಾಭೂಷಣರ ೭೫ ಕ್ಯಾಸೆಟ್‌ಗಳಿಗೆ ನಾರಾಯಣ್‌ರವರು ಸಂಗೀತ ನೀಡಿದ್ದಾರೆ.

ಬಹುತೇಕ ಸುಗಮಸಂಗೀತ ಕಾರ್ಯಕ್ರಮಗಳು ತೃಪ್ತಿಕೊಟ್ಟಿದೆಯಾದರೂ ಆಕಾಶವಾಣಿಯ ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ಕ್ಯಾಲಿಕಟ್‌ನಲ್ಲಿ (ಮೂರು ಮಲೆಯಾಳ ಭಾಷೆ ಗೀತೆಗಳಿಗೆ ರಾಗಸಂಯೋಜನೆ ಮಾಡಿದ್ದರು) ಹಾಗೂ ಆಂಧ್ರಪ್ರದೇಶದ ಮಂಗಮಪಳ್ಳಿಯಲ್ಲಿ ನಡೆದ ಕಾರ್ಯಕ್ರಮಗಳು ಬಹಳ ತೃಪ್ತಿ ಕೊಟ್ಟಿವೆ ಎನ್ನುತ್ತಾರೆ. ಇಷ್ಟೆಲ್ಲ ಸಾಧನೆ, ಪರಿಶ್ರಮ, ವೃತ್ತಿಯ ಸಿಹಿ-ಕಹಿಗಳನ್ನುಂಡ ಇವರನ್ನು ಅನೇಕ ಪ್ರಶಸ್ತಿ-ಸನ್ಮಾನಗಳು ಅರಸಿಕೊಂಡು ಬಂದಿವೆ. ತಾವೆಂದೂ ಅವನ್ನು ಹಿಂಬಾಲಿಸಲಿಲ್ಲ. ನಾನು ಮಾಡಿರುವ ಹಾಗೂ ಮಾಡುತ್ತಿರುವ ಕೆಲಸ ಆತ್ಮ ತೃಪ್ತಿಕೊಟ್ಟಿದೆ ಎನ್ನುತ್ತಾರೆ. ಪ್ರಶಸ್ತಿಗಳ ಪಟ್ಟಿ ಬಹಳ ದೊಡ್ಡದಾಗಿದ್ದರೂ ಅದರಲ್ಲಿ ಪ್ರಮುಖವಾದುವೆಂದರೆ

೧೯೮೪-೮೫ರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾತಿಲಕ ಪ್ರಶಸ್ತಿ, ೧೯೮೭-೮೮ರ ರಾಜ್ಯೋತ್ಸವ ಪ್ರಶಸ್ತಿ, ೨೦೦೦ರ ಸಾಲಿನ ಪ್ರತಿಷ್ಠಿತ ಸಂತ ಶಿಶುನಾಳ ಶರೀಫ ಪ್ರಶಸ್ತಿ

ಸುಗಮ ಸಂಗೀತ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಅತ್ಯುನ್ನತ ಪ್ರಶಸ್ತಿಗಳು ಇವರಿಗೆ ಸಂದಿವೆ. ಹಾಗಿದ್ದರೂ ಮಾಧ್ಯಮದಲ್ಲಾಗಲೀ, ಇತರ ಕಡೆಗಳಲ್ಲಾಗಲೀ ತಮ್ಮನ್ನು ತಾವು ಎಂದೂ ‘ಪ್ರೊಜೆಕ್ಟ್‌’ ಮಾಡಿಕೊಂಡವರಲ್ಲ. ಅಪಾರ ಶಿಷ್ಯರನ್ನು ಹೊಂದಿರುವ ಇವರು ನಿವೃತ್ತಿಯ ನಂತರ ತರಳಬಾಳು ಕೇಂದ್ರದಲ್ಲಿ (ಮ್ಯೂಸಿಕ್‌ ಡೈರೆಕ್ಟರ್) ಹಾಗೂ ಭಾರತೀಯ ವಿದ್ಯಾಭವನದಲ್ಲಿ ಸುಗಮಸಂಗೀತ ಹಾಗೂ ಶಾಸ್ತ್ರೀಯ ಸಂಗೀತವನ್ನು ಮುಂದಿನ ಪೀಳಿಗೆಗೆ ಧಾರೆಯೆರೆಯುತ್ತಿದ್ದಾರೆ. ಸುಗಮಸಂಗೀತವನ್ನು ಹಾಡಬೇಕಾದರೆ ಶಾಸ್ತ್ರೀಯ ಸಂಗೀತದ ಬುನಾದಿ ಅತ್ಯಗತ್ಯ ಎನ್ನುವ ಇವರು ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಕಲಿಯವ ಸಹನೆ, ಆಸಕ್ತಿ ಕಡಿಮೆ. ಕಲಿಯುತ್ತಿರುವಂತೆಯೇ ತಕ್ಷಣ ಕಾರ್ಯಕ್ರಮಗಳನ್ನು ನೀಡಿ ಹೆಸರು ಪಡೆಯಬೇಕು ಎನ್ನುವ ಹಂಬಲ ಆರೋಗ್ಯಕರವಲ್ಲ ಹಾಗೂ ನಶಿಸಿಹೋಗುತ್ತಿರುವ ಗುರುಪರಂಪರೆಯ ಬಗ್ಗೆ ಕಳವಳ ಇದೆ. ಕ್ಯಾಸೆಟ್ಟಿನಲ್ಲಿರುವುದಷ್ಟೇ ಸುಗಮಸಂಗೀತವಲ್ಲ; ವ್ಯಕ್ತಪಡಿಸುತ್ತಾರೆ. ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳು ಉತ್ತಮವಾದ ಸುಗಮಸಂಗೀತ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು ಎನ್ನುತ್ತಾರೆ ನಾರಾಯಣ್‌ಅವರು.

ಸುಗಮ ಸಂಗೀತ ಶ್ರೀಮಂತವಾಗಿರಬೇಕಾದರೆ ಅನೇಕ ಹೆಚ್‌.ಕೆ. ನಾರಾಯಣರಂತಹ ಅನೇಕ ನಿಸ್ವಾರ್ಥ ಮನೋಭಾವದರಾದ ಸಂಯೋಜಕರು ಈ ಕ್ಷೇತ್ರಕ್ಕೆ ಬರಬೇಕಾಗಿದೆ. ಹೆ‌ಚ್‌.ಕೆ. ನಾರಾಯಣ್‌ಅವರನ್ನು ಸಂಗೀತ ಪ್ರೇಮಿಗಳು ಸುಗಮಸಂಗೀತ ಹಾಗೂ ಶಾಸ್ತ್ರೀಯಸಂಗೀತದ ಅಪರೂಪದ ಸಂಗಮವೆಂದೇ ನೆನೆಸಿಕೊಳ್ಳುತ್ತಾರೆ. ‘ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ’ ಎಂದವರು ತಾವು ಇಂಪಾಗಿ ಉಲಿಯುವ ಹಕ್ಕಿಯಾಗಿ ನಮ್ಮನ್ನೆಲ್ಲ ತಲೆದೂಗಿಸುವಂತೆ ಮಾಡಿದ್ದಾರೆ ಮಾಡುತ್ತಿದ್ದಾರೆ ಕೂಡಾ!.