ನೆಲಮಂಗಲ ತಾಲ್ಲೂಕು ಹ್ಯಾಡಾಳು ಗ್ರಾಮದಲ್ಲಿ ೯-೩-೧೯೯೩ ರಂದು ಜನಿಸಿದ ರಾಮಾಚಾರ್ ಅವರ ಮೊದಲ ಗುರುಗಳು ತಂದೆಯೇ. ಆಗಲೇ ಸುಪ್ರಸಿದ್ಧ ವಿದ್ವಾಂಸರಾಗಿದ್ದ ಪುಟ್ಟಾಚಾರ್ ಮಗನಿಗೆ ಮೃದಂಗ ಹಾಗೂ ಖಂಜರಿ ವಾದ್ಯಗಳಲ್ಲಿ ಶಿಕ್ಷಣ ನೀಡಿದರು. ಮುಂದೆ ಪುದುಕೋಟೆ ಸುಬ್ರಹ್ಮಣ್ಯ ಅಯ್ಯರ್ ಅವರಲ್ಲಿ ಹೆಚ್ಚಿನ ವ್ಯಾಸಂಗ ಪಡೆದ ರಾಮಾಚಾರ್ ಸಂಗೀತ ಕ್ಷೇತ್ರದ ಎಲ್ಲ ಹಿರಿಯ ಕಿರಿಯ ವಿದ್ವಾಂಸರುಗಳಿಗೂ ಸುಮಾರು ನಾಲ್ಕು-ಐದು ದಶಕಗಳಿಗೂ ಮಿಗಿಲಾಗಿ ಮೃದಂಗ ಹಾಗೂ ಖಂಜರಿ ವಾದನಗಳಲ್ಲಿ ಸಹಕಾರ ನೀಡಿದ್ದಾರೆ. ಭಾರತದ ಎಲ್ಲಾ ಪ್ರಮುಖ ಸಭೆ, ಸಮ್ಮೇಳನ, ಉತ್ಸವಗಳಲ್ಲಿಯೂ ಭಾಗವಹಿಸಿರುವ ಕೀರ್ತಿ ಇವರದು.

ಬೆಂಗಳೂರು ಅಕಾಶವಾಣಿಯ ನಿಲಯದ ಕಲಾವಿದರಾಗಿಯೂ ಹಲವಾರು ವರ್ಷಗಳು ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿ ದೂರದರ್ಶನಗಳಿಂದಲೂ ಇವರ  ವಾದನ ಕಾರ್ಯಕ್ರಮಗಳು ಮೂಡಿ ಬರುತ್ತಿರುತ್ತವೆ.

ಕೇವಲ ಏಳು ವರ್ಷ ವಯಸ್ಸಿನ ಬಾಲಕನಾಗಿದ್ದಾಗಲೇ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರಿಂದ ‘ಮಾಸ್ಟರ್ ಬಾಲ ವಿದ್ವಾನ್‌’ ಎಂದು ಪ್ರಶಂಸೆ ಹೊಂದಿದ್ದ ರಾಮಾಚಾರ್ ಅವರ ವೃತ್ತಿ ಜೀವನದ ಮುನ್ನಡೆ ಅಷ್ಟೇ ದೃಢವಾಗಿ ಸಾರ್ಥಕವಾಗಿದೆ. ಖಂಜರಿ ವಾದ್ಯದಲ್ಲಿ ಹೆಚ್ಚಿನ ಪ್ರಯೋಗಗಳನ್ನು ನಡೆಸಿ ಈ  ವಾದ್ಯಕ್ಕೆ ಸಂಬಂಧಿಸಿದಂತೆ ಅನೇಕ ಪ್ರಾತ್ಯಕ್ಷಿಕ ಭಾಷಣ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ವಿದೇಶಗಳಲ್ಲೂ ಪ್ರವಾಸ ಮಾಡಿರುವ ರಾಮಾಚಾರ್ ಅವರು ಹಿಂದೂಸ್ಥಾನಿ ಸಂಗೀತ ಕ್ಷೇತ್ರದ ದಿಗ್ಗಜಗಳಿಗೂ ಖಂಜರಿ ವಾದ್ಯ ಸಹಕಾರ ನೀಡಿರುವುದೊಂದು ಹೆಗ್ಗಳಿಕೆ. ‘ಮಹಿಳಾಲಯ ಮಾಧುರಿ’ – ಕೇವಲ ಮಹಿಳೆಯರೇ ಲಯ ವಾದ್ಯಗಳನ್ನು ನುಡಿಸುವ ತಂಡ ರಾಮಾಚಾರ್ ಅವರ ಪ್ರಯತ್ನದ ಫಲ. ಈ ತಂಡವು ದೇಶ-ವಿದೇಶಗಳಲ್ಲಿ ಕಾರ್ಯಕ್ರಮ ನೀಡಿ ಪ್ರಖ್ಯಾತವಾಗಿದೆ.

ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಶ್ರೀಯುತರಿಗೆ ಲಭಿಸಿರುವ ಬಿರುದುಗಳೂ, ಪ್ರಶಸ್ತಿಗಳೂ, ಸನ್ಮಾನಗಳೂ ಅಸಂಖ್ಯ. ‘ಲಯ ವಾದ್ಯ ಗಂಭೀರ’, ‘ಲಯ ಕಲಾ ನಿಪುಣ’, ‘ಗಾಂಧರ್ವ ವಿದ್ಯಾನಿಧಿ’, ‘ಕರ್ನಾಟಕ ಕಲಾಶ್ರೀ’, ‘ಖಂಜರಿ ಪ್ರವೀಣ’, ‘ಖಂಜರಿ ಸಾರ್ವಭೌಮ’, ‘ನಾದ ಸುಧಾರ್ಣವ’, ‘ಲಯ ವಾದ್ಯ ರತ್ನ’, ‘ಕಲಾ ಭೂಷಣ’, ‘ತಾಳ ವಾದ್ಯ ಶಿಖಾಮಣಿ’ ಮುಂತಾದುವು ಗಮನಾರ್ಹವಾದುವು.

ಈ ಲೇಖನ ಮಾಲೆಯನ್ನು ಬರೆಯುತ್ತಿದ್ದ ಸಂದರ್ಭದಲ್ಲಿಯೇ ೨೩-೬-೨೦೦೬ ರಂದು ರಾಮಾಚಾರ್ ಅವರ ಶ್ರೀಮಂತ ಕಲಾ ಜೀವನ ಅಂತ್ಯವಾಯಿತು.