ಶ್ರೀ ಎಚ್‌. ಯೋಗನರಸಿಂಹಂ ಜನಿಸಿದ್ದು ೧೮೯೭ನೆಯ ಇಸವಿ ಮೇ ೧೭ರಂದು, ಕೋಲಾರದಲ್ಲಿ, ತಂದೆಯವರು ಹೊಳೇನರಸೀಪುರ ಶ್ರೀ ನಾರಣಪ್ಪನವರು, ತಾಯಿ ಪಾಲಹಳ್ಳಿಯ ಶ್ರೀಮತಿ ಲಕ್ಷ್ಮೀದೇವಮ್ಮನವರು. ಈ ದಂಪತಿಗಳಿಗೆ ಲಕ್ಷ್ಮೀನರಸಿಂಹಯ್ಯ. ವಿಜಯನರಸಿಂಹಯ್ಯ, ಗೌರಮ್ಮ ಮತ್ತು ಯೋಗನರಸಿಂಹಯ್ಯ ಎಂಬ ನಾಲ್ವರು ಮಕ್ಕಳು. ಯೋಗನರಸಿಂಹಯ್ಯ ಮುಂದೆ ಯೋಗನರಸಿಂಹಂ ಆದರು.

ಯೋಗನರಸಿಂಹಂ ಬೆಳೆದದ್ದು ಸಂಗೀತದ ವಾತಾವರಣದಲ್ಲಿ, ಅವರ ತಾಯಿ ಲಕ್ಷ್ಮೀದೇವಮ್ಮ (ನನ್ನ ಅಜ್ಜಿ) ಒಳ್ಳೆಯ ಗಾಯಕಿ. ಅವರು ಕುಳಿತಾಗ, ನಿಂತಾಗ, ಕೆಲಸ ಮಾಡುವಾಗಲೆಲ್ಲ ಹಾಡುತ್ತಿದ್ದುದನ್ನು, ಅವರ ಇಳಿವಯಸ್ಸಿನಲ್ಲಿ ನಾನು ಕಂಡಿದ್ದೆ, ಕೇಳಿದ್ದೆ. ಉದ್ದುದ್ದ ಪಂಕ್ತಿಗಳಿರುವ ಭಾಗವತ, ರಾಮಾಯಣ, ಪುರಾಣ ಕತೆಗಳಿಗೆ ಸಂಬಂಧಿಸಿದ ಕನ್ನಡ, ಸಂಸ್ಕೃತ ಹಾಡುಗಳನ್ನು ಕಂಠಪಾಠದಿಂದ ಹಾಡುತ್ತಿದ್ದರು. ಅವರ ತೊಂಭತ್ತೇಳು ವರ್ಷಗಳ ದೀರ್ಘ ಜೀವಿತದಲ್ಲಿ ಇದ್ದಕ್ಕಿದಂತೆ ಅವರು ‘ಈ ಹಾಡು ನಲವತ್ತು ವರ್ಷಗಳಿಂಧ ಮರೆತೇ ಹೋಗಿತ್ತು. ನೋಡು, ಇವತ್ತು ಜ್ಞಾಪಕಕ್ಕೆ ಬಂತು’-ಎಂದು ಜ್ಞಾಪಕ ಮಾಡಿಕೊಂಡಿದ್ದುಂಟು. ತಮ್ಮ ಐದನೆಯ ವಯಸ್ಸಿನಲ್ಲಿ ಅವರು ಮೈಸೂರು ಸದಾಶಿವರಾಯರನ್ನು ನೋಡಿದ್ದುದಾಗಿ ಹೇಳುತ್ತಿದ್ದರು. ಅವರ ಕೃತಿಗಳೂ ಅಜ್ಜಿಗೆ ತಿಳಿದಿತ್ತು. ಅಂತಹ ಒಂದು ಸದಾಶಿವರಾಯರ ಕೃತಿಯನ್ನು ಅಜ್ಜಿ ಸಾಐಉವ ಕೊಂಚಕಾಲ ಮುಂಚೆ ಜ್ಞಾಪಕ ಮಾಡಿಕೊಂಡು ಹಾಡಿದ್ದರನ್ನು ನಮ್ಮ ತಂದೆ ಬರೆದಿರಿಸಿಕೊಂಡರು. ಮುಂದೆ ಆ ಕೃತಿ ಮದರಾಸಿನ Journal of Music Academyಯಲ್ಲಿ ಪ್ರಕಟವಾಯಿತು. ಸಂಪ್ರದಾಯದ ಹಾಡುಗಳನ್ನೂ ಪ್ರತಿಯೊಂದು ಸಂದರ್ಭಕ್ಕೂ ಬೇಕಾದ ಹಾಡುಗಳನ್ನೂ ನಮ್ಮ ಅಜ್ಜಿ (ಅವರನ್ನು ಅಮ್ಮಣ್ಣಮ್ಮ ಎಂದು ಕರೆಯುವ ವಾಡಿಕೆ) ಮತ್ತು ಅವರ ಮಗಳು ಗೌರಮ್ಮನವರು ನನ್ನ ಸೋದರತ್ತೆ ಇವರಿಬ್ಬರೂ ಕೂಡಿ ಹಾಡುತ್ತಿದ್ದರಂತೆ. ನಮ್ಮ ನೆಂಟರಿಷ್ಟರ ಮನೆಗಳಲ್ಲಿ ಮದುವೆ, ಮುಂಜಿ, ಪೂಜೆ ಪುನಸ್ಕಾರಗಳಿಗೆಕ ಈ ತಾಯಿ ಮಗಳು ಇಬ್ಬರನ್ನೂ ಹಾಡಲು ಆಹ್ವಾನಿಸುತ್ತಿದ್ದರಂತೆ. ನಮ್ಮ ತಂದೆಯವರು “ನಮ್ಮಕ್ಕನಿಗೆ ಎಂ.ಎಸ್‌. ಸುಬ್ಬಲಕ್ಷ್ಮಿಯಂಥ ಕಂಠ ಇತ್ತಮ್ಮ” ಎಂದು ಅಭಿಮಾನದಿಂದ ಹೇಳುತ್ತಿದ್ದುದನ್ನು ಕೇಳಿದ್ದೆ. ನಮ್ಮಜ್ಜಿಯದು ಶಕ್ತಿಯುತ ಶಾರೀರ. ಏಕಾದಶಿ ಮುಂತಾದ ಉಪವಾಸದ ದಿವಸಗಳಲ್ಲಿ ಆಯಾಸವೇ ಇಲ್ಲದೆ ಗಂಟೆಗಟ್ಟಲೆ ಹಾಡುತ್ತಿದ್ದರು.

ಅಪ್ಪನ ಅಣ್ಣಂದಿರು ಲಕ್ಷ್ಮೀನರಸಿಂಹಯ್ಯ ಮತ್ತು ವಿಜಯನರಸಿಂಹಯ್ಯನವರೂ ಸಂಗೀತ ಅಭ್ಯಾಸ ಮಾಡಿದ್ದರು. ಲಕ್ಷ್ಮೀನರಸಿಂಹಯ್ಯನವರ ಮೊಮ್ಮಗ ಆರ್. ಸುಬ್ಬರಾವ್‌ ತಾತನ ಬಳಿ ಕಲಿತದ್ದಲ್ಲದೆ ಮುಂದೆ ವಿದ್ವನ್‌ ಎನ್‌. ಚನ್ನಕೇಶವಯ್ಯನವರ ಬಳಿ ಹೆಚ್ಚಿನ ಸಂಗೀತ ಅಭ್ಯಾಸ ಮಾಡಿದರು. ವಿಜಯನರಸಿಂಹಯ್ಯನವರ ಕುಟುಂಬದಲ್ಲೂ, ಗೌರಮ್ಮನವರ ಕುಟುಂಬದಲ್ಲೂ ಈ ಸಂಗೀತದ ರುಚಿ ಹರಿದು ಬಂದಿದೆ. ನಮ್ಮ ಅಜ್ಜಿಯೇ ಸಾಕಿ ಬೆಳೆಸಿದ ಅವರ ತಮ್ಮಂದಿರಾದ ಕಿಟ್ಟಿಯ್ಯ ಮತ್ತು ಪುಟ್ಟಯ್ಯ ಇವರೂ ಕಲಾವಿದರು. ಕಿಟ್ಟಯ್ಯನವರನ್ನು ಒಮ್ಮೆ ಇಳಿ ವಯಸ್ಸಿನಲ್ಲಿ ಕಂಡಾಗ ಅವರೊಂದು ಕುರ್ಚಿಯಲ್ಲಿ ಠೀವಿಯಿಂದ ತಮ್ಮ ಗಿರಿಜಾ ಮೀಸೆಯನ್ನು ತಿರುವುತ್ತಾ ಕುಳಿತಿದ್ದರು. ಅದನ್ನು ನೋಡಿ ನಾನು ಇವರೇನು ರಾಜಾ ಪಾರ್ಟು ಮಾಡುವವರಂತೆ ಕುಳಿತಿದ್ದಾರೆ ಎಂದುಕೊಂಡಿದ್ದೆ.ಕ ಅನಂತರ ನಮ್ಮ ತಾಯಿಯವರಿಂದ ತಿಳಿಯಿತು, ಅವರು ನಿಜಕ್ಕೂ ನಾಟಕಗಳಲ್ಲಿ ರಾಜಾ ಪಾರ್ಟು ಮಾಡುತ್ತಿದ್ದರೆಂದು. ಪುಟ್ಟಯ್ಯ ಎಂದರೆ ಲಕ್ಷ್ಮೀ ನಾರಾಯಣ ಭಾಗವತರು ಇವರು ಹರಿಕಥಾ ವಿದ್ವಾಂಸರು. ಅದ್ಭುತವಾಗಿ ಹಾಡಿ, ಕಥೆ ಮಾಡುತ್ತಿದ್ದರೆಂದು ಕೇಳಿದ್ದೆ. ಅವರ ಮಕ್ಕಳೇ ಹರಿಕಥಾ ವಿದ್ವಾಂಸರಾದ ಎನ್‌. ಲಕ್ಷ್ಮೀನಾರಾಯಣ ಭಾಗವತರು, ನರಸಿಂಹಮೂರ್ತಿ ಮತ್ತು ಸ್ವಾಮಿ. ಅಪ್ಪನ ತಂದೆ ನಾರಾಣಪ್ಪನವರೇನೂ ಸಂಗೀತ ಪ್ರಿಯರಲ್ಲ. ಅವರ ವಿರೋಧವನ್ನೂ ಲೆಕ್ಕಿಸದೆ ಈ ಮನೆಯಲ್ಲಿ ಸಂಗೀತ ಅಭಿವೃದ್ಧಿಯಾಯಿತು.

ತಂದೆ ನಾರಣಪ್ಪನವರು ಹೈಸ್ಕೂಲು ಓದುವ ಆಸೆ ಹೊತ್ತು ಹೊಳೇನರಸೀಪುರ ಬಿಟ್ಟು ಕಾಲ್ನಡಿಗೆಯಲ್ಲೇ ಮೈಸೂರಿಗೆ ಓಡಿ ಬಂದು ಬ್ರಾಹ್ಮಣರ ಮನೆಗಳಲ್ಲಿ ವಾರನ್ನ ಮಾಡಿಕೊಂಡು, ಓದಿ, ಮುಂದೆ ಅರಮನೆಯಲ್ಲಿ ಅಕೌಂಟೆಂಟ್‌ಆದರು. ಲಕ್ಷ್ಮೀನರಸಿಂಹಯ್ಯನವರು ಎಸ್‌.ಎಸ್‌.ಎಲ್‌.ಸಿ. ಓದಿರಬಹುದು. ವಿಜಯನರಸಿಂಹಯ್ಯನವರು ಪ್ಲೀಡರ್ ಪರೀಕ್ಷೆ ಓದಿದರು. ಕೊನೆಯ ಮಗ ಯೋಗನರಸಿಂಹಂ ಇವರಿಗೆ ಮನೆಯಲ್ಲಿ ಮುದ್ದಿನ ಹೆಸರು ‘ದೇವುಡು’. ಚಿಕ್ಕಂದಿನಿಂದಲೂ ಬಹಳ ವಿದ್ಯಾಸಕ್ತಿಯನ್ನು ತೋರಿಸುತ್ತಿದ್ದರು. ಮರಿಮಲ್ಲಪ್ಪನವರ ಶಾಲೆಯಲ್ಲಿ ಓದುತ್ತಿದ್ದಾಗಲೇ ಅವರಿಗೆ ವೃದ್ಧಪಿತಾಮಹ ತಾತಯ್ಯ (ವೆಂಕಟಕೃಷ್ಣಯ್ಯ) ನವರ ಆಶೀರ್ವಾದ ದೊರೆತಿತ್ತು. ೧೯೧೬ರಲ್ಲಿ ಪ್ರತ್ಯೇಕ ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪಿತವಾದಾಗ ಮಹಾರಾಜಾ ಕಾಲೇಜಿಗೆ ಪ್ರವೇಶ ಪಡೆದು ೧೯೧೮ರಲ್ಲಿ ಮೊದಲ ತಂಡದ ಬಿ.ಎ. ಪದವೀಧರರಾಗಿ ಬಂದರು. ೧೯೧೯ರಲ್ಲಿ ವಾಜಪೇಯಂ ವೆಂಕಟಸುಬ್ಬಯ್ಯನವರ ಮಗಳು ಸರಸ್ವತಿಯೊಂದಿಗೆ ವಿವಾಹವಾಯಿತು. ವಾಜಪೇಯಂ ವೆಂಕಟಸುಬ್ಬಯ್ಯನವರು ಸರ್ವೆಂಟ್ಸ್ ಆಫ್ ಇಂಡಿಯಾ ಮದರಾಸ್‌ ಶಾಖೆಯ ಆದ್ಯ ಸದಸ್ಯರಲ್ಲೊಬ್ಬರು. ಸರಸ್ವತಮ್ಮನವರೂ “ಮೈಸೂರು ಮಕ್ಕಳ ಕೂಟ”ದ ಮೂಲಕ ಕಸಮಾಜ ಸೇವಕಿಯಾಗಿ, ಗ್ರಂಥಕರ್ತೆಯಾಗಿ, ಎಲ್ಲಕ್ಕಿಂತ ಮಿಗಿಲಾಗಿ ಆದರ್ಶ ಪತ್ನಿ, ಆದರ್ಶ ತಾಯಿಯಾಗಿ ಮೆರೆದವರು. ಯೋಗನರಸಿಂಹಂ ಅವರು ೧೯೨೧ರಲ್ಲಿ ಎಂ.ಎ. ಪದವೀಧರರಾದರು. ಈ ಪರೀಕ್ಷೆಯಲ್ಲಿ ಅವರು ಚಿಲನ್ನದ ಪದಕ ಗಳಿಸಿದ್ದರು.

ನರಸಿಂಹಂ ವಿದ್ಯಾರ್ಥಿಯಾಗಿದ್ದಾಗ ಅಲ್ಲಿದ್ದ ಗುರುಕುಲ ಹೇಗಿತ್ತು? ಎಂಬುದನ್ನು ಅಣ್ಣ ಶಾರದಾಪ್ರಸಾದ್‌ ಅವರ ಮಾತಿನಲ್ಲಿ ಹೇಳುವುದಾದರೆ ಆಗ ಮಹಾರಾಜಾ ಕಾಲೇಜು ಒಂದರಲ್ಲಿಯೇ ಇಡೀ ನಾಡಿನ ವಿದ್ವತ್ತಿನ ತೋಟದ ಆಯ್ದ ಹೂವುಗಳು ಎಂಬಂತಿದ್ದವರು ಅಧ್ಯಾಪಕರಾಗಿದ್ದರು. ಸಿ.ಆರ್.ರೆಡ್ಡಿ, ಸರ್ವೇಪಲ್ಲಿ ರಾಧಾಕೃಷ್ಣನ್‌, ಕೆ.ಟಿ. ಶಹಾ, ಎಂ. ಹಿರಿಯ ಣ್ಣ, ಎನ್‌.ಎಸ್‌. ಸುಬ್ಬರಾವ್‌, ಆರ್. ಶ್ಯಾಮಶಾಸ್ತ್ರಿ, ಜೆ.ಸಿ. ರಾಲೋ, ಎ. ಆರ್. ವಾಡಿಯಾ, ರಾಧಾ ಕುಮುದ ಮುಖರ್ಜಿ, ಎಸ್‌.ವಿ. ವೆಂಕಟೇಶ್ವರ, ವಿ. ಸುಬ್ರಹ್ಮಣ್ಯ ಅಯ್ಯರ್ ಎಂಥ ಹೆಸರುಗಳು! ಇಂತಹ ಗುರುಗಳಿಂದ ಆಗಬಹುದಾದ ಪ್ರಭಾವ ಸಂಸ್ಕಾರಗಳಿಂದ ಯೋಗನರಸಿಂಹ ಅವರು ಉತ್ತಮ ಲೇಖಕರಕ ಸಾಹಿತ್ಯ ಓದಿ ಅರಗಿಸಿಕೊಂಡರು. ಇಂಗ್ಲೀಷ್‌ ಸಾಹಿತ್ಯದಲ್ಲಿ ಒಲುಮೆ ಇದ್ದುದರಿಂದ ಷೇಕ್ಸ್ ಪಿಯರ್ ನಾಟಕಗಳನ್ನೂ ಬ್ರೌನಿಂಗ್‌ ಕವಿತೆಗಳನ್ನೂ ಬಹಳ ಪ್ರೀತಿಯಿಂದ ಓದಿದ್ದರು. ಸಂಸ್ಕೃತ ಅವರ ವ್ಯಾಸಂಗ ವಿಷಯ. ಕಾಳಿದಾಸ, ಭವಭೂತಿ ಮುಂತಾದವರ ಕಾವ್ಯಗಳನ್ನು ಹೃದ್ಗತ ಮಾಡಿಕೊಂಡಿದ್ದರು. ತತ್ತ್ವಶಾಸ್ತ್ರವನ್ನು ವಿಶೇಷವಾಗಿ ವ್ಯಾಸಂಗ ಮಾಡಿದ್ದರು. ಈ ಎಲ್ಲ ವ್ಯಾಸಂಗದ ಪರಿಣಾಮವಾಗಿ ಅಧಿಕಾರಯುತವಾಗಿ ಹೇಳಬಲ್ಲಷ್ಟು ಉತ್ತಮ ಜ್ಞಾನ ಸಂಸ್ಕಾರಗಳನ್ನು ಪಡೆದುಕೊಂಡಿದ್ದರು.

ಸಂಗೀತ ಕೃಷಿ: ಇದೇ ಸಮಯದಲ್ಲಿ ಮೈಸೂರು ನಿಜವಾಗಿಯೂ ಸಾಂಸ್ಕೃತಿಕ ರಾಜಧಾನಿಯೇ ಆಗಿತ್ತು. ಮೈಸುರು ಅರಸರು ಉತ್ತಮ ಕಲಾವಿದರನ್ನೆಲ್ಲ ಇಲ್ಲಿಗೆ ಬರಮಾಡಿಕೊಂಡು ಅವರನ್ನು ಪೋಷಿಸುವುದಲ್ಲದೆ, ಕಲಾವಿದರು ತಮ್ಮ ಕಲೆಯನ್ನು ಅಭಿವೃದ್ಧಿಗೊಳಿಸಿಕೊಳ್ಳಲೂ, ಜನಸಾಮಾನ್ಯರು ಅದರ ಪ್ರಯೋಜನ ಪಡೆದುಕೊಳ್ಳಲೂ ಕಾರಣರಾಗಿದ್ದರು. ಸಂಗೀತ ಕಲಿಯಲು ಆಸಕ್ತಿಯುಳ್ಳವರಿಗೆ ಆಗ ಅರಮನೆಯಲ್ಲಿ ಸಂಗೀತ ಶಾಲೆಯನ್ನು ಕೂಡ ಆರಂಭಿಸಿದ್ದು, ವೀಣೆ ಶೇಷಣ್ಣ, ಸುಬ್ಬಣ್ಣ, ಬಿಡಾಋಂ ಕೃಷ್ಣಪ್ಪ, ಕೆ. ವಾಸುದೇವಾಚಾರ್ಯ, ವೆಂಕಟಗಿರಿಯಪ್ಪ ಮುಂತಾದ ಹೆಸರಾಂತ ಕಲಾವಿದರು ಅಲ್ಲಿ ಶಿಕ್ಷಣ ನೀಡುತ್ತಿದ್ದರು. ಮೈಸೂರು ಮಲ್ಲಿಗೆಯಂತೆ ಶಾಸ್ತ್ರೀಯ ಸಂಗೀತ ಮೈಸೂರಿನಲ್ಲೆಲ್ಲ ಹರಡಿ, ತನ್ನ ಕಂಪು ಸೂಸುತ್ತಿರಬೇಕು. ಮನೆಯಲ್ಲೇ ಸ್ವಾಭಾವಿಕವಾಗಿ ಒದಗಿ ಬಂದ ಸಂಗೀತಾಸಕ್ತಿ, ಹೊರಗಿನ ವಾತಾವರಣದಲ್ಲಿ ಒದಗಿ ಬಂದ ಉತ್ತಮ ಸಂಗೀಥದ ವಿನಿಕೆ, ಇವುಗಳಿಂದ ವಿಶೇಷವಾಗಿ ಆಕರ್ಷಿತರಾಗಿ, ನಮ್ಮ ತಂದೆ ಸಾಹಿತ್ಯ ಸಂಗೀತಗಳನ್ನು ಪೋಷಿಸಿಕೊಳ್ಳುತ್ತ ಬಂದರು. ಅವರು ಬಿಡಾರಂ ಕೃಷ್ಣಪ್ಪನವರ ಭವ್ಯ ಶಾರೀರಕ್ಕೆ ಮಾರು ಹೋಗಿದ್ದರು. ಕೃಷ್ಣಪ್ಪನವರು ಹಾಡುತ್ತಿದ್ದ ಅನೇಕ ಕೃತಿಗಳನ್ನು ಸ್ವರಪಡಿಸಿಕ ಬರೆದಿಟ್ಟು ಕೊಂಡು ಅಭ್ಯಾಸ ಮಾಡಿದ್ದರು. ಪ್ರತ್ಯಕ್ಷ ಯಾವ ಗುರುಗಳ ಮುಖೇನ ಪಾಠ ಮಾಡಿಲ್ಲ. ಆದರೆ ಅವರಿಗೆ ಹೆಚ್ಚಿನ ಮಾರ್ಗದರ್ಶನ ಕೆ. ವಾಸುದೇವಾಚಾರ್ಯರಿಂದ ದೊರಕಿತ್ತು. ಪ್ರಯೋಗ ಶಾಸ್ತ್ರ, ಎರಡರಲ್ಲೂ ಅವರಿಂದ ಬಹಳ ಪ್ರಭಾವಿತರಾಗಿ ಅವರನ್ನು ಗುರುವಾಗಿ ಭಾವಿಸಿ ಗೌರವಿಸುತ್ತಿದ್ದರು. ಅವರಿಗೆ ಸಂಸ್ಕೃತ, ಕನ್ನಡ, ತೆಲುಗು, ಇಂಗ್ಲೀಷ್‌, ಇವೆಲ್ಲದರಲ್ಲೂ ಪಾಂಡಿತ್ಯವಿದ್ದುದರಿಂದ ಸಂಗೀತ ಶಾಸ್ತ್ರ ಗ್ರಂಥಗಳ ಮೂಲಗಳನ್ನು ತಾವೇ ಸ್ವಂತವಗಿ ಓದಿ ಪಾಂಡಿತ್ಯ ಪಡೆದುಕೊಂಡಿದ್ದರು. ತಾವು ಪಡೆದುಕೊಂಡ ಜ್ಞಾನವನ್ನು ಗುರು ವಾಸುದೇವಾಚಾರ್ಯರಲ್ಲೂ, ಸಂಗೀತ ಮಿತ್ರರಾದ ಎನ್‌. ಚನ್ನಕೇಶವಯ್ಯ, ರಾಳ್ಳಪಲ್ಲಿ ಅನಂತಕೃಷ್ಣಶರ್ಮ, ಬಿ.ಕೆ. ಪದ್ಮನಾಭರಾಯರಲ್ಲೂ ಚರ್ಚಿಸಿ ಖಚಿತ ಪಡಿಸಿಕೊಳ್ಳುತ್ತಿದ್ದರು. ಹೀಗೆ ಕಾಲೇಜು ವ್ಯಾಸಂಗದೊಂದಿಗೆ ಸ್ವಸಾಮರ್ಥ್ಯದಿಂದ ಸಂಗೀತವನ್ನೂ ಅಭ್ಯಾಸ ಮಾಡಿಕೊಂಡರು. ಈ ಸಮಾನ ಮನೋಧರ್ಮವುಳ್ಳ ಸ್ನೇಹಿತರು ಕಲೆತು ಆಗಾಗ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ವಾರದಲ್ಲಿ ಒಂದು ದಿನ ರಾಳ್ಳಪಳ್ಳಿ ಅವರ ಮನೆಯಲ್ಲೂ, ಮತ್ತೊಂದು ದಿನ ಚನ್ನಕೇಶವಯ್ಯನವರ ಮನೆಯಲ್ಲೂ ಶನಿವಾರದಂದು ನಮ್ಮ ಮನೆಯಲ್ಲೂ, ಸಂಜೆ ಭಜನಾ ಕಾರ್ಯಕ್ರಮ, ಅಲ್ಲಿ ಮನಃ ತೃಪ್ತಿಯಾಗಿ ಹಾಡುವುದು. ಇಂತಹ ವಾತಾವರಣದಲ್ಲಿ ಹಾಡುವವರಿಗೆ ಸ್ಫೂರ್ತಿ ಸಹಜವಾಗಿ, ಸಭಿಕರಿಗೆ ರಸವತ್ತಾದ ಔತಣವಾಗುತ್ತಿತ್ತು.

ಸಂಗೀತವನ್ನು ಅವರು ಕಲಿತದ್ದು ಸ್ವಸಂತೋಷಕ್ಕಾಗಿ. ಅದರಿಂದ ಅವರು ಹೆಸರು, ಧನಾರ್ಜನೆ ಮಾಡುವ ಉದ್ದೇಶ ಹೊಂದಿರಲಿಲ್ಲ. ಸ್ವಾನುಭವಕ್ಕಾಗಿ ಆತ್ಮೋನ್ನತಿಗಾಗಿ ಕಲಿತರು. ಕಲೆಯಾಗಿ ಅಭ್ಯಾಸ ಮಾಡಿದರು. ಹೆಚ್ಚಾಗಿ ಕಚೇರಿ ಮಾಡಿದವರಲ್ಲ. ಮನೆಯಲ್ಲಿ ದಿನವೂ ಹಾಡುತ್ತಿದ್ದರು. ನೆಂಟರಿಷ್ಟರ ಮನೆಯ ಸಮಾರಂಭಗಳಲ್ಲಿ, ಅಪೇಕ್ಷೆ ಪಟ್ಟವರೆದುರು ಹಾಡುತ್ತಿದ್ದರು.

“ಅವರ ಹಾಡಿನಲ್ಲಿ ನಾನು ಕಂಡಿದ್ದೇನೆಂದರೆ, ಅತಿರೇಕವಿಲ್ಲ, ಚಪ್ಪಾಳೆ ತಟ್ಟಿಸಿಕೊಳ್ಳಬೇಕೆಂಬ ಅವಸರವಿಲ್ಲ. ತಮ್ಮ ಆನಂದಕ್ಕೆ ಮಾತ್ರ ಹಾಡುತ್ತಿದ್ದುದ್ದು ಒಂದು ದೊಡ್ಡ ಗುಣ. ಸಂಗೀತದ ನಿಜವಾದ ಪ್ರಯೋಜನವನ್ನು ಪಡೆದವರಲ್ಲಿ ಯೋಗತನರಸಿಂಹಂ ಒಬ್ಬರು.”-ಎನ್ನುತ್ತಾರೆ. ಪದ್ಮಭೂಷಣ ವೀಣಾ ವಿ. ದೊರೆಸ್ವಾಮಿ ಅಯ್ಯಂಗಾರ್ಯರು. ಯೋಗನರಸಿಂಹಂ ಅವರು ತಮ್ಮದೇ ಆದ ವಿಲಕ್ಷಣ ಶೈಲಿಯನ್ನು ರೂಢಿಸಿಕೊಂಡಿದ್ದರು. ಅವರು ಕಹಾಡುತ್ತಿದ್ದ ಸಂಗತಿಗಳು ಬೇರೆಯವರು ಹಾಡಿದರೆ ಕಳೆ ಕಟ್ಟುತ್ತಿರಲಿಲ್ಲ. ಅವೇ ಸಂಗತಿಗಳು ಅವರ ಶಾರೀರದಲ್ಲಿ ಬೆಳೆದು ಬಂದಾಗ ವಿಶೇಷ ಕಂಪನಗಳಿಂದ ಕೂಡಿ ಅದು ಅಪೂರ್ವ ಮೆರುಗನ್ನು ಪಡೆಯುತ್ತಿತ್ತು. ಮೋಹನ ರಾಗದಲ್ಲಿ ಅವರ “ನಾದದಿ ತುಂಬಿತು ಗೋವರ್ಧನಗಿರಿ-ಸಾಗವಧಾನದಿ ಹರಿದಳು ಯಮುನಾ” ಈ ಸಾಲು ಕೇಳುವವರಿಗೆ ಪುಲಕ ಉಂಟಾಗುತ್ತಿತ್ತು. ಶಂಕರಾಭರಣ, ತೋಡಿ, ಕಾಂಭೋಜಿ, ಕಲ್ಯಾಣಿಗಳಲ್ಲದೆ ಅವರು ಅಮೃತವರ್ಷಿಣಿ, ನಾಟಕುರಂಜಿ, ಮುಖಾರಿ, ಧನ್ಯಾಸಿ, ಶಹನಾ, ಯದುಕುಲ ಕಾಂಭೋಜಿ, ನವರೋಜು, ಆರಭಿ, ಸರಸ್ವತಿ, ರಾಗಗಳನ್ನು ಬಹಳ ವಿಶೇಷವಾಗಿ ಹಾಡುತ್ತಿದ್ದರು. ನಾಟಕುರಂಜಿ ಅವರಂತೆ ಹಾಡಿದ್ದನ್ನು ಬೇರೆಲ್ಲೂ ಕೇಳಿಲ್ಲವೆಂದು ಅವರ ಆಪ್ತ ಸ್ನೇಹಿತರಾಗಿದ್ದ ಮದರಾಸಿನ ಎಸ್‌. ಪಾರ್ಥಸಾರಥಿ ಮತ್ತು ಅವರ ಪತ್ನಿ ರಂಗನಾಯಕಮ್ಮನವರು (ವೀಣೆ ವೆಂಕಟಗಿರಿಯಪ್ಪನವರ ಶಿಷ್ಯೆ) ಪದೇಪದೇ ಜ್ಞಾಪಿಸಿ ಕೊಳ್ಳುತ್ತಿದ್ದರು. ಒಮ್ಮೆ ವೀಣಾ ವೆಂಕಟಗಿರಿಯಪ್ಪನವರ ಮನೆಯಲ್ಲಿ ಕೆಲವರು ಸಂಗೀತ ಪ್ರೇಮಿಗಳು ಸೇರಿದ್ದರು. ಆ ಸಂದರ್ಭದಲ್ಲಿ ನಮ್ಮ ತಂದೆಯವರನ್ನು ವೆಂಕಟಗಿರಿಯಪ್ಪನವರು ಹಾಡುವಂತೆ ಉತ್ತೇಜಿಸಿದರು. ಚೆನ್ನಾಗಿ ಶ್ರುತಿಯಾದ ತಂಬೂರಿಯೊಂದಿಗೆ ಅವರು ಅಮೃತವರ್ಷಿಣಿ ರಾಗವನ್ನು ಹಾಡಿ, ದೀಕ್ಷಿತರ”ಆನಂದಾಮೃತಾಕರ್ಷಿಣಿ” ಕೃತಿಯನ್ನು ಹಾಡಿದ ಸೊಗಸಿಗೆ ಅಲ್ಲಿದ್ದವರೆಲ್ಲರೂ ಆನಂದಾಮೃತವನ್ನು ಕಣ್ಣುಗಳಿಂದ ಹರಿಸಿದ್ದರು!.

ಸಂಸ್ಕೃತ ಶ್ಲೋಕಗಳನ್ನಂತೂ ಅರ್ಥವಾಗುವಂತೆ ಬಿಡಿಸಿ ಕಬಿಡಿಸಿ ದೀರ್ಘಾಕ್ಷರಗಳಲ್ಲಿ ರಾಗದ ರಸವನ್ನು ಗಮಕವನ್ನೂ ತುಂಬಿಸಿ ಬಹಳ ಚೆನ್ನಗಿ ಹಾಡುತ್ತಿದ್ದರು.

೧೯೨೪ರಲ್ಲಿ ಶ್ಯಾಮಲಾನವ ರತ್ನಮಾಲಾ ಎಂಬ ಆದಿಶಂಕರರದ್ದೆಂದೇ ಪ್ರಸಿದ್ಧವಾಗಿರುವ ‘ಓಂಕಾರಕ ಪಂಜರ ಶುಕೀಂ’ ಶ್ಲೋಕವನ್ನು ರಾಗಮಾಲಿಕೆಯಾಗಿ ಅಳವಡಿಸಿದ್ದರು. ಇದರಲ್ಲಿ ಬರುವ ಘನ ಮತ್ತು ರಕ್ತಿ ರಾಗಗಳ ಜೋಡಣೆ, ಪ್ರತಿ ಚರಣರದ ಕೊನೆಯಲ್ಲೂ ಆಯಾ ರಾಗದಲ್ಲಿ ಅಲಂಕಾರಯುತವಾದ ಚಿಟ್ಟೆಸ್ವರಗಳಿವೆ. ಕೊನೆಯಲ್ಲಿ ವಿಲೋಮ ಕ್ರಮದಲ್ಲಿ ಚಿಟ್ಟೆಸ್ವರಗಳು ಪಲ್ಲವಿಗೆ ಅದ್ಭುತವಾಗಿ ಬಂದು ಸೇರುತ್ತವೆ. ಇದನ್ನು ಶೃಂಗೇರಿಕ ಆಚಾರ್ಯ ಶ್ರೀ ಚಂದ್ರಶೇಖರ ಭಾರತಿಯವರ ಸಮ್ಮುಖ ಹಾಡಿ ಬಹುಮಾನ ಪಡೆದಿದ್ದರಂತೆ. ಇದನ್ನು ಮುಂದೆ ಮೂರು ದಶಕಗಳ ನಂತರ ರೇಡಿಯೋಕ್ಕಾಗಿ ರೆಕಾರ್ಡು ಮಾಡಿ ಬಿತ್ತರಿಸಿದರು. ಅಲ್ಲಿಂದ ಮುಂದೆ ಅವರ ಸರ್ಕಾರೀ ಕೆಲಸಗಳ ಮಧ್ಯೆ ಸಂಗೀತ ರಚನಾ ಕಾರ್ಯ ಸ್ವಲ್ಪ ಹಿಂದುಳಿದಿದ್ದರೂ ತಮ್ಮ ಬಿಡುವಿನ ವೇಳೆಯಲ್ಲಿ ಅವರು ಅಭ್ಯಾಸ ಮುಂದುವರೆಸುತ್ತಿದ್ದರು. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾದಾಗಲೆಲ್ಲ ಆ ವೇಳೆಯನ್ನು ಅವರು ಹೊಸ ವರ್ಣ, ಕೃತಿಗಳನ್ನು ಕಲಿಯಲು ಉಪಯೋಗಿಸುತ್ತಿದ್ದರು.

ಕೆಲಸದ ಒತ್ತಡ, ವರ್ಗಾವಣೆಗಳಿಂದಾಗಿ ಸಂಗೀತ ಕಲಿಸಿ ಶಿಷ್ಯರನ್ನು ಬೆಳೆಸಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಆಗಾಗ್ಗೆ ಯಾರಾದರೂ ವಿಶೇಷವಾಗಿ ಕೆಲವು ರಾಗಗಳನ್ನೂ ಕೃತಿಗಳನ್ನೂ ಕಲಿಯಲು ಬರುತ್ತಿದ್ದರು. ಇವರ ಬಳಿ ಸಂಗೀತ ಕಲಿತವರ ಪೈಕಿ ವಿ.ಹೆಚ್‌.ಆರ್. ರಾಧಾಕೃಷ್ಣ ಒಬ್ಬರು. ಎಸ್‌.ಕೆ. ರಾಮಚಂದ್ರರಾವ್‌ ಮತ್ತೊಬ್ಬರು. ಮನೆಯಲ್ಲಿ ಮಕ್ಕಳು (ನಾವು ಎಂಟು ಜನ) ಎಲ್ಲರೂ ಒಟ್ಟಾಗಿ ಭಜನೆ, ಸಂಗೀತ ಕೃತಿಗಳನ್ನೂ ಹಾಡಲು ಅಭ್ಯಾಸ ಮಾಡಿಸಿದ್ದರು. ನಮಗೆಲ್ಲ ಸಂಗೀತದಲ್ಲಿ ಒಳ್ಳೆಯ ಅಭಿರುಚಿಯನ್ನು ಬೆಳೆಸಿಕೊಳ್ಳಲು ಮಾರ್ಗದರ್ಶನ ನೀಡಿದರು.

ವೃತ್ತಿ ಜೀವನ: ಸಂಸ್ಕೃತ ಎಂ.ಎ. ನಂತರ ಮೈಸೂರಿನ ವಿದ್ಯಾ ಇಲಾಖೆಯಲ್ಲಿ ೧೯೨೫ರಲ್ಲಿ ಸಂಸ್ಕೃತ ಶಾಲಾ ಇನ್ಸ್‌ಪೆಕ್ಟರ್ ಆಗಿದ್ದರು. ೧೯೨೯ರಲ್ಲಿ ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲರಾಗಿದ್ದು, ಮುಂದೆ ೧೯೩೭ರ ನಂತರ ಬೆಂಗಳೂರಿನ ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲರಾಗಿಯೂ ಕೆಲಸ ಮಾಡಿದರು. ೧೯೪೧-೪೨ರಲ್ಲಿ ಬಿ.ಟಿ. ಪದವಿಗೆ ಓದಿದರು. ೧೯೪೨ ರಿಂದ ಸುಮಾರು ಹತ್ತು ವರ್ಷಗಳಲ್ಲಿ ಕೆಲವುಕಾಲ ನಂಜನಗೂಡು, ದಾವಣಗೆರೆ, ತೀರ್ಥಹಳ್ಳಿ, ಕೋಲಾರ ಹೈಸ್ಕೂಲ್‌ಗಳ ಮುಖ್ಯೋಪಾಧ್ಯಾಯರಾಗಿಯೂ, ಶಿವಮೊಗ್ಗ ಜಿಲ್ಲೆಯ ಶಿಕ್ಷಣ ಅಧಿಕಾರಿಯೂ ಆಗಿದ್ದು, ೧೯೫೨ರಲ್ಲಿ ನಿವೃತ್ತರಾದರು. ಇವರು ತೀರ್ಥಹಳ್ಳಿಯಲ್ಲಿದ್ದಾಗ ಡಾ.ಯು.ಆರ್. ಅನಂತಮೂರ್ತಿ, ಡಾ.ಹಾ.ಮಾ. ನಾಯಕ್‌ ಇವರುಗಳು ಶಿಷ್ಯರಾಗಿದ್ದರೆಂದೂ ಅವರು ಆದರ್ಶ ಗುರುಗಳಾಗಿದ್ದರೆಂದೂ ಆ ಹಿರಿಯರ ಅನಿಸಿಕೆ.

ಕೆಲಸದ ಜಂಜಾಟ, ವರ್ಗಾವಣೆ, ಸಂಸಾರದ ಬವಣೆಗಳ ನಡುವೆಯೂ ಅವರು ಸಮಾಧಾನ ಚಿತ್ತರಾಗಿ ಇರುತ್ತಿದ್ದರು. ಸಂಗೀತವೇ ಅವರ ಜೀವನದ ಸಾರಸರ್ವಸ್ವವಾಗಿತ್ತು. ಹಿರಿಯ ಅಣ್ಣ ಶಾರದಾ ಪ್ರಸಾದ್‌ ೧೯೪೨ರ ಸ್ವಾತಂತ್ಯ್ರ ಚಳುವಳಿಯಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಬೇಕಾಯಿತು.

ಸರ್ಕಾರೀ ಸೇವೆಯಲ್ಲಿರುವವರ ಮಕ್ಕಳು ಬ್ರಿಟಿಷ್‌ ಸರಕಾರದ ವಿರುದ್ಧ ಹೋರಾಡುವುದು ತಪ್ಪೆಂದೂ ಮಗನಿಗೆ ಬುದ್ಧಿ ಹೇಳಬೇಕೆಂದೂ, ಇವರಿಗೆ ಆದೇಶ ಬಂದಾಗ, ತಾವು ಮಾತ್ರ ಸರಕಾರೀ ನೌಕರರೆಂದೂ ತಮ್ಮ ಮಕ್ಕಳೂ ಹೆಂಡತಿಯೂ ಸ್ವಂತ ನಿರ್ಧಾರ ತೆಗೆದು ಕೊಳ್ಳುವ ಸ್ವಾತಂತ್ಯ್ರ ಪಡೆದಿರುವುದಾಗಿಯೂ ಧೈರ್ಯವಾಗಿ ಹೇಳಿ, ತತ್ಪರಿಣಾಮವಾಗಿ ಕೆಲಸದಲ್ಲಿ ಬರಬೇಕಾದ ಬಡ್ತಿಗಳೆಲ್ಲ ತಪ್ಪಿ ಹೋಯಿತಂತೆ. ಈ ನಿರ್ಧಾರ ತೆಗೆದುಕೊಳ್ಳುವಾಗ ನಮ್ಮ ತಾಯಿ ಅಪ್ಪನಿಗೆ ನೀಡಿದ ಸ್ಫೂರ್ತಿ, ಉತ್ತೇಜನ, ನಮ್ಮನ್ನೆಲ್ಲ ಧನ್ಯರಾಗಿ ಮಾಡಿದೆ.

೧೯೫೨ ರಲ್ಲಿ ಕೆಲಸದಿಂದ ನಿವೃತ್ತಿ ಹೊಂದಿ ಮೈಸೂರಿಗೆ ಹಿಂತಿರುಗಿದರು. ನಮ್ಮೆಲ್ಲರ ವಿದ್ಯಾಭ್ಯಾಸದ ಸಲುವಾಗಿ, ಹೊರಗಿನ ಊರುಗಳಲ್ಲಿ ಒಬ್ಬರೇ ಇರುತ್ತಿದ್ದು, ನಾವೆಲ್ಲ ಮೈಸೂರಿನಲ್ಲೇ ಇರುತ್ತಿದ್ದೆವು. ನಿವೃತ್ತರಾದ ಮೇಲೆ ಅವರಿಗೆ ಕೆಲಸಮಾಡದೆ ಕುಳಿತಿರುವುದು ಕಷ್ಟವಾಗಿ, ಮೈಸೂರಿನ ಶಾರದಾವಿಲಾಸ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಮೊದಲಿಟ್ಟರು. ೧೯೫೩ರಿಂದ ಮೈಸೂರು ಆಕಾಶವಾಣಿಯಲ್ಲೂ ಅನಂತರ ಆಕಾಶವಾಣಿ ಬೆಂಗಳೂರಿಗೆ ವರ್ಗಾವಣೆ ಆದ ಮೇಲೆ ಬೆಂಗಳೂರಿನಲ್ಲೂ ಕೆಲಸ ಮಾಡಿದರು.

ಇವರಿಗೆ ಸಂಸ್ಕೃತ, ಸಂಗೀತಗಳಲ್ಲೂ ಒಳ್ಳೆಯ ಪಾಂಡಿತ್ಯವಿದ್ದುದರಿಂದ ರಸಮಂಜರಿ ಎಂಬ ಸಂಸ್ಕೃತ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದರು. ಅವರ ನಿರ್ದೇಶನದಲ್ಲಿ ಕಾಳಿದಾಸನ ‘ಶಾಕುಂತಲ’ ನಾಟಕಕ ಅನೇಕ ಭಾಗಗಳಲ್ಲಿ ಪ್ರಸಾರವಾಯಿತು. ಆ ನಾಟಕದಲ್ಲಿ ಹಾಡಬೇಕಾದ ಸಂಸ್ಕೃತ ಶ್ಲೋಕಗಳನ್ನು ಅವರೇ ರಸವತ್ತಾಗಿ ರಾಗಗಳನ್ನು ಹಾಕಿ ಹಾಡಿಸುತ್ತಿದ್ದರು. ಸ್ವತಃ ತಾವೇ ಕಣ್ವ ಋಷಿಯ ಪಾತ್ರವನ್ನು ವಹಿಸಿದ್ದರು. ಶಕುಂತಲೆಯನ್ನು ದುಷ್ಯಂತನ ಬಳಿಗೆ ಕಳಿಸಿಕೊಡುವಾಗ ಕಣ್ವನು ‘ಯಾಸ್ಯ ತ್ಯದ್ಯ ಶಕುಂತಲೇsತಿ ಹೃದಯಂ’ ಎಂದು ಆರಂಭವಾಗುವ ಶ್ಲೋಕದಲ್ಲಿ ವನವಾಸಿಯಾದ ತನಗೇ ಸಾಕುಮಗಳನ್ನು ಕಳಿಸಿಕೊಡುವಾಗ ಇಂಥಹ ದುಃಖವಾದರೆ ಇನ್ನು ಗೃಹಸ್ಥರ ಪಾಡೇನು? ಎಂಬ ಕಣ್ವನ ಸಂವೇದನೆಯನ್ನು ಶುಧ್ಧಧನ್ಯಾಸಿ ರಾಗದಲ್ಲಿ ಮನಕರಗುವಂತೆ ಹಾಡಿದ್ದರು. ಭಾಸನ ‘ಪ್ರತಿಮಾ’ ನಾಟಕವೂ ಅವರ ನಿರ್ದೇಶನದಲ್ಲಿ ಪ್ರಸಾರವಾಗಿತ್ತು. ಅವರು ಯುವಕರಾಗಿದ್ದಾಗ ಅಮೆಚೂರ್‌ ಡ್ರಾಮಾಟಿಕ್‌ ಅಸೋಸಿಯೇಶನ್‌-A        .D.A. ನಲ್ಲಿ ಕೆಲವು ನಾಟಕಗಳಲ್ಲಿ ಪಾತ್ರವಹಿಸಿದ್ದುದು ಸ್ಮರಿಸಬೇಕಾದ ಸಂಗತಿ.ರೇಡಿಯೋಗಾಗಿ ತಯಾರಿಸಿದ ಕಾರ್ಯಕ್ರಮಗಳೆಂದರೆ-‘ಓಂಕಾರ ಪಂಜರ ಶುಕೀಂ’ ಸ್ತೋತ್ರಕ್ಕೆ ವಿವರಣೆಯನ್ನು ಕೊಟ್ಟು ನುರಿತ ಕಲಾವಿದರಿಂದ ಹಾಡಿಸಿದ್ದು; ‘ರಾವಣ ಶಿವ ತಾಂಡವ ಸ್ತೋತ್ರ’ಕ್ಕೆ ಸಂಗೀತ ಸಂಯೋಜಿಸಿ ಹಾಡಿಸಿದ್ದು, ಇತ್ಯಾದಿ. ವೀಣಾ ವಿದ್ವಾನ್‌ ಆರ್.ಎನ್‌. ದೊರೆಸ್ವಾಮಿಯವರು ಯೋಗನರಸಿಂಹಂ ಅವರನ್ನು ಕುರಿತು ‘ಒಂದು ನೆನಪು’ ಎಂಬ ಲೇಖನದಲ್ಲಿ, ‘ಓಂಕಾರಕ ಪಂಜರ ಶುಕೀಂ’, ‘ಶಾಮಲಾದಂಡಕ’, ‘ನಾದಬ್ರಹ್ಮ’ ಎಂಬ ಸಂಗೀತರೂಪಕಗಳನ್ನು ಅವರು ನಿರ್ದೇಶಿಸಿದ್ದುದು, ಇವುಗಳಲ್ಲಿ ತಾವು ಭಾಗವಹಿಸಿದ್ದುದನ್ನು ಜ್ಞಾಪಿಸಿಕೊಂಡಿದ್ದಾರೆ. ಇದೇ ಸರಿಸುಮಾರಿನಲ್ಲಿ ಅವರು ಅನೇಕ ಶರಣ ವಚನಗಳಿಗೆ ರಾಗ ಸಂಯೋಜನೆ ಮಾಡಿ, ಬಸವಣ್ಣನವರ, ಅಕ್ಕಮಹಾದೇವಿಯ ವಚನಗಳು ಕೆಲವನ್ನು, ಆಗ ಕನಿಲಯ ವಿದ್ವಾಂಸರುಗಳಾಗಿದ್ದ ಶೆಲ್ವ ಪುಳ್ಳೆ ಅಯ್ಯಂಗಾರ್ ಮತ್ತು ಆರ್.ಕೆ. ಶ್ರೀಕಂಠನ್‌ ಅವರಿಂದ ಹಾಡಿಸಿ ಪ್ರಸಾರ ಮಾಡಿದ್ದರು. ತಮ್ಮ ಕಾಲೇಜು ದಿನಗಳಿಂದಲೂ ಅವರ ಸಹಪಾಠಿಗಳಾಗಿದದ ವಿ.ಸೀ. ಅವರೂ ಕಾರ್ಯಕ್ರಮ ನಿರ್ದೇಶಕರಾಗಿದ್ದು, ಆಕಾಶವಾಣಿಯಲ್ಲಿ ಇಬ್ಬರೂ ಮತ್ತೆ ಕಲೆತು ಕೆಲಸ ಮಾಡುವ ಸುಯೋಗ ಒದಗಿತ್ತು. ಒಬ್ಬರಲ್ಲಿ ಪ್ರೀತ್ಯಾದರ ಗೌರವ ಭಾವಗಳಿದ್ದವಗು. ಮುಂದೆ ವಿ.ಸೀ. ಅವರು ತಂದೆಯವರ ಕೃತಿಗಳ “ಗೀತಕುಸುಮಾಂಜಲಿ” ಪುಸ್ತಕಕ್ಕೆ ಅಮೂಲ್ಯವಾದ ಮಮತೆಯ ಮುನ್ನಡಿ ಬರೆದುಕೊಟ್ಟಿದ್ದರು.

ಸಂಗೀತ ಕಲಾಭಿವರ್ಧಿನೀ ಸಭಾ: ಸರ್ಕಾರೀ ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಮೈಸೂರಿನಲ್ಲಿರುವಾಗ ಮೈಸೂರಿನ ಕಲಾವಿದರ ಪ್ರೋತ್ಸಾಹಕ್ಕೆಂದೇ ಇಲ್ಲಿನ ವಿದ್ವಾಂಸರೆಲ್ಲ ಕೂಡಿ ‘ಸಂಗೀತ ಕಲಾಭಿವರ್ಧಿನೀ ಸಭೆಯನ್ನು ಆರಂಭಿಸಿದರು. ಆ ಸಭೆಯ ಆಜೀವ ಅಧ್ಯಕ್ಷರಾಗಿ ವಿದ್ವಾನ್‌. ಕೆ. ವಾಸುದೇವಾಚಾರ್ಯರೂ, ಉಪಾಧ್ಯಕ್ಷರಾಗಿ ಯೋಗನರಸಿಂಹಂ ಅವರೂ ಇದ್ದರು. ಆಚಾರ್ಯರು ಸ್ವರ್ಗಸ್ಥರಾದ ಮೇಲೆ ಅಪ್ಪ ಅಧ್ಯಕ್ಷರಾಗಿ ಮುಂದುವರೆದರು. ಆ ಸಭೆಯ ಚಟುವಟಿಕೆಗಳೆಂದರೆ ಪ್ರತಿ ತಿಂಗಳೂ ಇಲ್ಲಿಯ ಕಲಾವಿದರಿಂದ ಕಚೇರಿ ಏರ್ಪಡಿಸುವುದು, ಸ್ಪರ್ಧೆಗಳನ್ನು ನಡೆಸುವುದು ಎಲ್ಲಕ್ಕಿಂತ ಮಿಗಿಲಾಗಿ ಆ ಸಭೆಯ ಶೈಶವಾವಸ್ಥೆಯಲ್ಲೇ ಮೈಸೂರು ವಾಗ್ಗೇಯಕಾರರ ರಚನೆಗಳನ್ನು ಪ್ರಕಟಿಸುವ ಸಾಹಸ ಕೈಗೊಂಡಿದ್ದು. ಮೈಸೂರು ಸದಾಶಿವರಾಯರ ಕೃತಿಗಳು ಪುಸ್ತಕ ೧೯೫೪ರಲ್ಲಿ ಪ್ರಕಟಗೊಂಡಿತು. ಸಂಪಾದಕ ಸಮಿತಿಯಲ್ಲಿ ಸಂಗೀತ ವಿದ್ವಾಂಸರಾದ ಎನ್‌. ಚೆನ್ನಕೇಶವಯ್ಯನವರು, ಬಿ.ಕೆ. ಪದ್ಮನಾಭರಾಯರು ಮತ್ತು ನಮ್ಮ ತಂದೆ ಇದ್ದರು. ೧೯೬೫ರಲ್ಲಿ ಮೈಸೂರು ವೀಣಾ ಶೇಷಣ್ಣವರ ಕೃತಿಗಳು ಪುಸ್ತಕ ಪ್ರಕಟಗೊಂಡಿತು. ಈ ಪುಸ್ತಕ ಪ್ರಕಾಶನದ ಸಂಪಾದಕ ಸಮಿತಿಯಲ್ಲಿ ಬಿ.ಕೆ. ಪದ್ಮನಾಭರಾವ್‌, ಆರ್.ಎನ್‌. ದೊರೆಸ್ವಾಮಿ ಮತ್ತು ನಮ್ಮ ತಂದೆ ಇದ್ದರು. ಈ ಎರಡೂ ಪ್ರಕಾಶನಗಳು ಸಂಗೀತ ಕ್ಷೇತ್ರಕ್ಕೆ ಅತ್ಯಮೂಲ್ಯ ಕೊಡುಗೆಗಳಾಗಿ ಅತಿ ಬೇಡಿಕೆಯ ಪುಸ್ತಕಗಳಾಗಿವೆ. “ಮೈಸೂರು ಸದಾಶಿವರಾಯರ ಕೃತಿಗಳು” ಪುಸ್ತಕಕ್ಕೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಸಹ ದೊರಕಿತ್ತು. ಈ ಪುಸ್ತಕಗಳ ಕರಡಚ್ಚು ತಯಾರಿ, ಇತರ ಪತ್ರ ವ್ಯವಹಾರಗಳೆಲ್ಲದರಲ್ಲೂ ಅವರು ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಎರಡು ಪುಸ್ತಕಗಳಲ್ಲೂ ಸ್ವರಲಿಪಿ ಕನ್ನಡದಲ್ಲಿದ್ದು ಸಾಹಿತ್ಯ ಕನ್ನಡ, ದೇವನಾಗರಿಯಲ್ಲಿದೆ. ಶೇಷಣ್ಣನವರ ಕೃತಿಗಳ ಪುಸ್ತಕದಲ್ಲಿ ತಮಿಳಿನಲ್ಲೂ ಸಾಹಿತ್ಯ ಭಾಗ ಕೊಟ್ಟಿರುವುದು ವಿಶೇಷ.

ಮಾಲಿಯೇ ನ ಫ್ರೆಂಚ್‌ ನಾಟಕವನ್ನಾಧರಿಸಿದ “ಮನ್ಸಿಲ್ಲದ್ಮದ್ವೆ”, ಮಾರಿಸ್‌ ಬೇರಿಂಗ್‌ ಅವರ ಆಂಗ್ಲ ನಾಟಕದ ಆಧಾರವಾಗಿ “ನಾಟಕದ ಪ್ರಾಕ್ಟೀಸು” ಎಂಬ ಎರಡು ಪ್ರಹಸನಗಳನ್ನು ಬರೆದಿದ್ದರು. ಇವು ೧೯೩೦ ರ ದಶಕದಲ್ಲಿ ಬರುತ್ತಿದ್ದ “ರಂಗಭೂಮಿ” ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದಲ್ಲದೆ ಮಹರ್ಷಿ ಕರ್ವೆಯವರ ಆತ್ಮ ಚರಿತ್ರೆಯ ಕನ್ನಡಾನುವಾದ ‘ಸಿಂಹಾವಲೋಕನ’ ಎಂಬ ಪುಸ್ತಕವನ್ನೂ, ಬರ್ಟ್ರೆಂಡ್‌ ರಸೆಲ್ಲರ “The conquest of Happiness” ಪುಸ್ತಕದ ಕನ್ನಡಾನುವಾದ “ಸುಖ ಸಾಧನೆ” ಯನ್ನೂ ಬರೆದಿದ್ದಾರೆ. ಇದಲ್ಲದೆ `HINDU’ ಪತ್ರಿಕೆಗಾಗಿ ಪುಸ್ತಕ ವಿಮರ್ಶೆಗಳನ್ನು ಬರೆಯುತ್ತಿದ್ದರು. ತಾಯಿನಾಡು ಪತ್ರಿಕೆಗೆ ಸಂಗೀತ ವಿಮರ್ಶೆ ಬರೆಯುತ್ತಿದ್ದರು.

ಅವರು ಹಲವು ಕಾಲ ಆಕಾಶವಾಣಿಯ Music Audition Board ನ ಸದಸ್ಯರಾಗಿಯೂ, ಆಕಾಶವಾಣಿಯ Music Advisory Board ನ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.

ಸಂಗೀತ ರಚನೆಗಳು: ತಮ್ಮ ಚಿಕ್ಕ ವಯಸ್ಸಿನಿಂದಲೇ ಆಗೊಮ್ಮೆ, ಈಗೊಮ್ಮೆ ರಚನೆಗಳನ್ನು ಮಾಡುತ್ತಿದ್ದರು. ‘ಚಂದ್ರಶೇಖರ ಭಾರತೀಯತಿನಂ’ ಎಂಬ ಕಾಮವರ್ಧಿನಿ ರಾಗದ ರಚನೆಯನ್ನು ಮಾಡಿ ಆ ಯತಿಗಳೆದುರಿನಲ್ಲಿ ಹಾಡಿದ್ದರಂತೆ. ಅವರು ‘ಈ ನರಸ್ತುತಿ ಏಕೆ, ದೇವರ ಸ್ತುತಿ ಮಾಡಿ’ ಎಂದರಂತೆ. ಮುಂದೆ ‘ಕಮಲಾಮನಮೋಹನ’ ಎಂಬ ಮೋಹನ ರಾಗದ ವರ್ಣ ರಚಿತವಾಯ್ತು. ಬಹಳ ಕಾಲ ಸ್ವಂತ ರಚನೆಗಳಾಗದೆ ೧೯೬೪-೬೫ ರಲ್ಲಿ ಕಾಂಬೋಜಿ ರಾಗದಲ್ಲಿ ‘ಹೇಮಾತೀರ’ ಎಂಬ ಕೃತಿಯನ್ನು ರಚಿಸಿ ತಮ್ಮ ಮಿತ್ರ ಎಸ್‌.ಕೃಷ್ಣಯ್ಯಂಗಾರ್ ಎದುರಿನಲ್ಲಿ ನನ್ನಿಂದ ಹಾಡಿಸಿದರು. ಅದನ್ನು ಕೇಳಿದ ಮಿತ್ರರು ಸಂತೋಷಗೊಂಡು ಹೆಚ್ಚು ಹೆಚ್ಚಾಗಿ ರಚಿಸಲು ಪ್ರೋತ್ಸಾಹಿಸಿದರು. ತಮ್ಮ ದಿನಚರಿಯಲ್ಲಿ ಸಂಧ್ಯಾವಂದನೆ, ವಾಕಿಂಗ್‌, ವ್ಯಾಸಂಗ ಮತ್ತು ಸಂಗೀತಾಭ್ಯಾಸಗಳೊಂದಿಗೆ ಸಂಗೀತ ರಚನೆಯೂ ಸೇರಿಕೊಂಡಿತು.

ಅವರ ರಚನೆಗಳು ಹೀಗಿವೆ: ಸ್ವರಜತಿ-೧, ವರ್ಣಗಳು-೫, ಕೃತಿಗಳು-೧೭, ಪದ-೧, ಜಾವಳಿ: ಕನ್ನಡ-೧, ತಿಲ್ಲಾನಗಳು-೫, ರಾಗಮಾಲಿಕೆಗಳು-೨, ದಿವ್ಯನಾಮ-೧. ಕರ್ನಾಟಕ ಸಂಗೀತದಲ್ಲಿ ವಾಡಿಕೆಯಲ್ಲಿರುವಕ ಎಲ್ಲ ಪ್ರಕಾರಗಳಲ್ಲೂ ಪದವರ್ಣವನ್ನು ಹೊರತುಪಡಿಸಿ ರಚನೆಗಳನ್ನು ಅಪ್ಪ ಮಾಡಿದ್ದಾರೆ. ಇವರ ರಚನೆಗಳು ಕನ್ನಡ, ತೆಲುಗು ಮತ್ತು ಸಂಸ್ಕೃತದಲ್ಲಿದೆ. ರಾಷ್ಟ್ರಧ್ವಜ ವಂದನೆಯ ಹಾಡು ಕನ್ನಡದಲ್ಲಿದೆ. ‘ಅರ್ಭಕ ಗೀತಮ್‌’ ಎಂಬುದು ಮಕ್ಕಳಿಗೆ ಆಶೀರ್ವಚನ ರೂಪದಲ್ಲಿ ಬರೆದಿರುವ ಸಂಸ್ಕೃತ ಕವಿತೆ, ಇದು ರಾಗ ಮಾಲಿಕೆಯಲ್ಲಿದೆ.

ಇವರು ಬಳಕೆಯಲ್ಲಿರುವ ‘ಶಂಕರಾಭರಣ’, ‘ಬೇಗಡೆ’, ‘ಕಾಂಬೋಜಿ’ ಅಲ್ಲದೆ ‘ಪ್ರಣವಾಕಾರಿ’ (೬೪ನೇ ಮೇಳಜನ್ಯ), ‘ಕುಂತಲ ಕುಸುಮಾವಳಿ’ (೬೫ನೇ ಮೇಳ ಜನ್ಯ), ‘ಗಗನ ಮೋಹಿನಿ’(೬೪ನೇ ವಾಚಸ್ಪತಿ ಜನ್ಯ), ‘ಭಾನುಧನ್ಯಾಸಿ’ (೫೪ನೇ ಶುಭಪಂತುವರಾಳಿಜನ್ಯ) ಈ ರಾಗಗಳಿಗೆ ಮೊದಲ ಸಲ ಧಾತು ರೂಪ ಕೊಟ್ಟಿದ್ದಾರೆ. ಇವರು ‘ಕೋಲಾಹಲ’, ‘ನಾದವರಾಂಗಿಣಿ’ ಎಂಬ ಎರಡುರಾಗಗಳಲ್ಲಿ ರಚಿಸಿದ್ದಾರೆ. ಈ ರಾಗಗಳಲ್ಲಿ ತ್ಯಾಗರಾಜ ರಚನೆಗಳು ಇದ್ದರೂ ವೇದಿಕೆ ಸಂಗೀತದಲ್ಲಿ ಅಷ್ಟಾಗಿ ಕೇಳಿಬಂದಿಲ್ಲ. ‘ಲತಾಂತ ಪ್ರಿಯ’ ರಾಗದಲ್ಲಿ ‘ಮರಚಿತಿವೋ’, ‘ಶಾಂತಿರುಪಾಸ್ಯತಾಂ’ ಎಂಬ ಎರಡು ರಚನೆಗಳನ್ನು ರಚಿಸಿ, ದೀಕ್ಷಿತರ ಸಂಪ್ರದಾಯರ ‘ಶುದ್ಧಸಾವೇರಿ‘ರಾಗಕ್ಕೆ ತಾವು ತಚ್ಚೂರು ಸಿಂಗ್ರಾಚಾರ್ಯರ ‘ಲತಾಂತ ಪ್ರಿಯ’ ಎಂಬ ಹೆಸರನ್ನು ಬಳಸಿರುವುದಾಗಿ ಹೇಳಿದ್ದಾರೆ. ರಚನೆಗಳು ಸರಳ ಸುಂದರವಾಗಿದೆ. ಈ ರಚನೆಗಳನ್ನೆಲ್ಲ ತಮ್ಮ ಅಂತ್ಯಕಾಲದಲ್ಲಿ, ‘ಗೀತಕುಸುಮಾಂಜಲಿ’ ಎಂಬ ಪುಸ್ತಕ ರೂಪದಲ್ಲಿ ಹೊರತರಬೇಕೆಂದು ಕರಡು ಪ್ರತಿ ತಯಾರಿಸಲು ಮೊದಲಿಟ್ಟಿದ್ದರು. ಆದರೆ ತಮ್ಮ ರಚನೆಗಳನ್ನು ಪುಸ್ತಕ ರೂಪದಲ್ಲಿ ಬಂದುದನ್ನು ಕಾಣುವ ಅವಕಾಶ ಅವರಿಗೆ ದೊರೆಯಲಿಲ್ಲ. ಅವರ ಅತ್ಯುತ್ತಮ ಕೃತಿಗಳಾಗಿ ಹೆಸರಿಸಬಹುದಾದದ್ದು ರಂಜನಿ ರಾಗದ ‘ಸದಾ ಸಾರಂಗ ನಯನೇ’ ಮತ್ತು ಅವರು ನಿಧನರಾಗುವ ಕೊಂಚ ಮೊದಲಲ್ಲಿ ರಚಿಸಿದ ‘ಗೌರೀ ಮನೋಹರೀ’ರಾಗದ “ರಾಜ ಭೋಗವೆನಿತಿದ್ದರೇನು” ಎಂಬ ಕೃತಿ. ‘ಸದಾಸಾರಂಗ ನಯನೇ’ ಎಂಬ ಕೃತಿಯಲ್ಲಿನ ಪಾರ್ವತಿಯ ವರ್ಣನೆಗಳು ಅವರು ಕಾಳಿದಾಸನಿಂದ ಪ್ರಭಾವಿತರಾಗಿದ್ದರೆಂಬುದನ್ನು ತೋರಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯ. ‘ರಾಜಭೋಗವೆನಿತಿದ್ದರೇನು’ ಕೃತಿಯಲ್ಲಿ ಅವರ “ಹೊರಗೆ ಒಳಗೆ ಸಮರಸವಿರಲಿ” ಎಂಬ ಆಶಯ ಆ ರಚನೆಯಲ್ಲಿ ಪಾಕಗಟ್ಟಿದೆ. ಜೀವನದ ಕೊನೆಗಾಲದಲ್ಲಿ ಅವರಿಗೆ ನೆಮ್ಮದಿ ಕೊಟ್ಟಿದ್ದು ಸಂಗೀತ ರಚನೆಗಳು. ಅನಾರೋಗ್ಯದಲ್ಲೂ ರಚನಾ ಸ್ಫೂರ್ತಿ ಬತ್ತಿರಲಿಲ್ಲ. ಅವರು ೧೯೭೧ರ ಮೇ ೧೪ ರಂದು ನಿಧನರಾದರು.

ಶ್ರೀ ಯೋಗನರಸಿಂಹಂ ಅವರ ಸಮಗ್ರ ರಚನೆಗಳನ್ನೊಳಗೊಂಡ “ಗೀತ ಕುಸುಮಾಂಜಲಿ” ಪುಸ್ತಕ ೧೯೮೧ರಲ್ಲಿ ಪ್ರಕಟವಾಯಿತು.

ಅವರ ಕೃತಿಗಳನ್ನು ಮೊದಲು ಕೈಗೆತ್ತಿಕೊಂಡವರು ಎಂ.ಎಸ್‌. ಸುಬ್ಬುಲಕ್ಷ್ಮಿಯವರು. ಹೊಸಕೃತಿಗಳನ್ನು ಆರಿಸಿ ಹಾಡುವ, ಯೋಗ್ಯತೆಗೆ ಬೆಲೆ ಕೊಡುವ, ಕಲಾ ಸೌಂದರ್ಯವನ್ನು ಗುರುತಿಸಿ ಆಸ್ಪಾದಿಸುವ ಸದ್ಗುಣವಂತರಾದ ಎಂ.ಎಸ್‌. ಹೀಗೆ ಮಾಡಿದ್ದು ಆಶ್ಚರ್ಯವೇನಲ್ಲ. ತಂದೆಯವರ ಹಲವಾರು ಹಾಡುಗಳ ಧ್ವನಿಮುದ್ರಿಕೆಯ ಕ್ಯಾಸೆಟ್‌ ಅನ್ನು ಹೊರತಂದಿದ್ದಾರೆ. ಅವರ ಹಲವು ಕೃತಿಗಳ ಗಾಯನ ಕಾರ್ಯಕ್ರಮವು ಆಕಾಶವಾಣಿ ಪಾಂಡಿಚೇರಿಯಿಂದ ಬೊಂಬಾಯಿ ಸಹೋದರಿಯರಿಂದಲೂ, ಆಕಾಶವಾಣಿ ಬೆಂಗಳೂರಿನಿಂದ ವಿದ್ವಾಂಸರಾದ ಆರ್.ಕೆ. ಶ್ರೀಕಂಠನ್‌ ಮುಂತಾದವರಿಂದಲೂ ಪ್ರಸಾರಗೊಂಡಿವೆ. ಮೈಸೂರಿನ ಶ್ರೀತ್ಯಾಗರಾಜ ಸಂಗೀತ ಸಭಾ ಟ್ರಸ್ಟ್‌ನವರು “ವಾಗ್ಗೇಯ ವಾಹಿನಿ” ಕಾರ್ಯಕ್ರಮದಲ್ಲಿ ಮೂರುದಿವಸದ ಉತ್ಸವವಾಗಿ ಅವರ ಸಮಗ್ರ ಕೃತಿಗಳನ್ನು ನಾಡಿನ ಸುಪ್ರಸಿದ್ಧ ಗಾಯಕರಿಂದ ಹಾಡಿಸಿದ್ದಾರೆ.

ಅವರ ಕೃತಿಗಳ ಸಂಖ್ಯೆ ಮೂವತ್ತಾರು ಮಾತ್ರ. ಆದರೆ ಅದನ್ನು ರಚಿಸುವಾಗ ಅದರ ಸಂದರ್ಭ, ಅವರಿಗೆ ಒದಗಿದ ಸ್ಫೂರ್ತಿ, ಅದರ ಚಿಂತನಮಂಥನಗಳು ಅವರಿಗೆ ಕೊಟ್ಟಿರಬಹುದಾದ ಸಂತೃಪ್ತಿ ಅಳತೆಗೆ ಮೀರಿದ್ದು.

ವ್ಯಕ್ತಿತ್ವ: ಯೋಗನರಸಿಂಹಂ ಮೆಲು ನುಡಿಯ ಮಂದಹಾಸದ ವ್ಯಕ್ತಿ. ಎಂದೂ ಯಾರಿಗೂ ಚುಚ್ಚು ನುಡಿಯಾಡಿ ಬೇಸರಿಸಿದವರಲ್ಲ. ಕಾಲದ ಸದ್ವಿನಿಯೋಗ ಮಾಡುತ್ತಿದ್ದರು. ವಿರಾಮದಕ ವೇಳೆಯನ್ನು ಸಂಗೀತಕ್ಕೆಂದೇ ವಿನಿಯೋಗಿಸುತ್ತಿದ್ದರು. ಕೊನೆಯವರೆಗೂ ಸ್ವತಃ ಸಂಗೀತಾಭ್ಯಾಸ ಮಾಡುತ್ತಿದ್ದರು. ಕೃತಿಗಳನ್ನು ರಚಿಸುತ್ತಿದ್ದರು. ಅವರು ಉಡಿಗೆಯಲ್ಲಿ ಬಹಳ ಅಚ್ಚುಕಟ್ಟು. ಲಕ್ಷಣವಾದಕ ಸುಸಂಸ್ಕೃತವಾದ ಮುಖ. ಅದಕ್ಕೊಪ್ಪುವಂತೆ ಬಹಳ ಸೊಗಸಾಗಿ ಕಚ್ಚೆ ಪಂಚೆ, ರುಮಾಲು, ಕೋಟು ತೊಟ್ಟು ಕೊಳ್ಳುತ್ತಿದ್ದರು. ಮನೆಯಲ್ಲಿ ಎಲ್ಲ ಶುಚಿಯಾಗಿ, ಒಪ್ಪ ಓರಣವಾಗಿ ಅಂದವಾಗಿರಬೇಕು. ಊಟದ ವಿಷಯದಲ್ಲೂ ಹಾಗೆ, ಎಲ್ಲ ಹದವಾಗಿ ಅತಿರೇಕಗಳಿಲ್ಲದೆ ರುಚಿಯಾದ ಆಹಾರ, ಹಿತಮಿತವಾಗಿರಬೇಕು. ಮಕ್ಕಳನ್ನು ವಯಸ್ಸಿಗೆ ಬಂದ ಮೇಲೆ ಮಿತ್ರರಂತೆ ನಡೆಸಿಕೊಳ್ಳುತ್ತಿದ್ದರು.

ಶ್ರುತಿ ಶುದ್ಧ, ಲಯ ಶುದ್ಧ ಸಂಗೀತವನ್ನು ಭೇದವೆಣಿಸದೆ ಸವಿಯುತ್ತಿದ್ದರು. ೧೯೯೭ರಲ್ಲಿ ಅವರ ಜನ್ಮಶತಾಬ್ದಿಯ ಆಚರಣೆ ಒಂದು ಅವಿಸ್ಮರಣೀಯ ಸಮಾರಂಭವಾಗಿ ನಡೆಯಿತು. ಮುಂದೆ ಅದರ ನೆನಪಿಗಾಗಿ ಹೊರತಂದ “ಸಂಗೀತದ ಸಿರಿ ಎಚ್‌. ಯೋಗನರಸಿಂಹಂ” ಪುಸ್ತಕ ಖ್ಯಾತ ‘ವಿ.ಸೀ. ಸಂಪದ’ದಿಂದ ಪ್ರಕಟಿಸಲ್ಪಟ್ಟು, ಇದು ಯೋಗನರಸಿಂಹಂ ಅವರ ಬಹುಮುಖ ಪ್ರತಿಭೆಯನ್ನು ತೋರಿಸುವ ದರ್ಪಣವಾಗಿದೆ. ಕರ್ನಾಟಕಕ ಸಂಗೀತಕ್ಕೆ ವಾಗ್ಗೇಯಕಾರರಾಗಿ ಅವರು ನೀಡಿರುವ ಕೊಡುಗೆ ವೈಶಿಷ್ಟ್ಯ ಪೂರ್ಣವಾದದ್ದು.