ಜನನ : ೨೨-೨-೧೯೩೪ ರಂದು ಶಿವಮೊಗ್ಗಾದಲ್ಲಿ

ಮನೆತನ : ಕೃಷಿಕ ಮನೆತನ. ತಂದೆ ರಾಮಸ್ವಾಮಿ ಶಾಸ್ತ್ರಿಗಳು ಸಂಸ್ಕೃತ ವಿದ್ವಾಂಸರು, ಗಾಯಕರು, ಅಣ್ಣ ರಾಮಾಶಾಸ್ತ್ರಿಗಳು ಗಮಕ ಹಾಗೂ ಸಂಗೀತ ವಿದ್ವಾಂಸರು ತಾಯಿ ಲಕ್ಷ್ಮಿದೇವಮ್ಮ

ಶಿಕ್ಷಣ : ಮೊದಲಿಗೆ ತಂದೆ ರಾಮಸ್ವಾಮಿ ಶಾಸ್ತ್ರಿ ಹಾಗೂ ಟಿ. ರಾಮಾಶಾಸ್ತ್ರಿಗಳ ಮಾರ್ಗದರ್ಶನ, ತಂದೆಯವರು ವಾಚಿಸುತ್ತಿದ್ದ ಸಂಸ್ಕರತ ಕಾವ್ಯಗಳೇ ಇವರ ವಾಚನ ಕಲೆಯನ್ನು ರೂಢಿಸಿಕೊಳ್ಳಲು ಸ್ಫೂರ್ತಿ. ಅನಂತರ ಹಿರಿಯ ಗಮಕಿಗಳು ರಂಗಭೂಮಿ ಕಲಾವಿದರೂ ಆಗಿದ್ದ ಕೆ.ಎಸ್. ವೆಂಕಟೇಶಯ್ಯನವರ ಬಳಿ ಕ್ರಮವಾದ ಗಮಕ ವಾಚನ ಶಿಕ್ಷಣ ಪಡೆದು ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದಾರೆ. ಸಾಮಾನ್ಯ ವಿದ್ಯಾಭ್ಯಾಸ ಇಂಟರ್ ಮೀಡಿಯಟ್ ತೇರ್ಗಡೆ.

ಸಾಧನೆ :  ಕಳೆದ ನಲವತ್ತು ವರ್ಷಗಳಿಂದ ನಿರಂತರವಾಗಿ ಗಮಕ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದ್ದಾರೆ. ಹಿರಿಯ ವ್ಯಾಖ್ಯಾನಕಾರರಾಗಿದ್ದ ವ್ಯಾಖ್ಯಾನ ವಾಚಸ್ಪತಿ ಮತ್ತೂರು ಲಕ್ಷ್ಮಿಕೇಶವ ಶಾಸ್ತ್ರಿಯವರ ವ್ಯಾಖ್ಯಾನದೊಂದಿಗೆ ಸಮಗ್ರ ಕುಮಾರವ್ಯಾಸ ಭಾರತದ ೧೩೫ ಧ್ವನಿ ಸುರುಳಿಗಳು, ಶ್ರೀ ಮಾರ್ಕಂಡೇಯ ಅವಧಾನಿ ಅವರ ವ್ಯಾಖ್ಯಾನದೊಂದಿಗೆ ೩೫ ಧ್ವನಿ ಸುರುಳಿಗಳಲ್ಲಿ ಜೈಮಿನಿ ಭಾರತ, ಹೆಗ್ಗೋಡು, ಮತ್ತೂರು, ಶಿವಮೊಗ್ಗ, ಮೈಸೂರು, ಬೆಂಗಳೂರು, ಗದಗ ಹಾಗೂ ಹೊರ ರಾಜ್ಯಗಳಲ್ಲೂ ಅನೇಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಹೊಸಹಳ್ಳಿಯ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಗಮಕ ತರಗತಿಗಳನ್ನು ನಡೆಸಿ, ಮತ್ತೂರು ಶಿವಮೊಗ್ಗಾ ಮುಂತಾದೆಡೆ ಅನೇಕ ವಿದ್ಯಾರ್ಥಿಗಳಿಗೆ ಗಮಕ ಶಿಕ್ಷಣ ನೀಡಿರುತ್ತಾರೆ. ಡಾ|| ಮತ್ತೂರು ಕೃಷ್ಣಮೂರ್ತಿ ಮತ್ತು ಕೇಶವಮೂರ್ತಿಗಳ ಜೋಡಿ ಜಗತ್ಪ್ರಸಿದ್ಧ. ಹೆಚ್. ಎಂ.ಟಿ. ಸಂಸ್ಥೆಯ ಸಹಕಾರದಿಂದ ಇವರಿಬ್ಬರ ವಾಚನ ವ್ಯಾಖ್ಯಾನದಲ್ಲಿ ಕುಮಾರವ್ಯಾಸ ಭಾರತದ ೨೦೦ ಕ್ಯಾಸೆಟ್ಟುಗಳು ಬಿಡುಗಡೆಯಾಗಿವೆ.

ಪ್ರಶಸ್ತಿ – ಪುರಸ್ಕಾರಗಳು : ನ್ಯಾಯಧೀಶ ಸಾಹಿತಿ ಕೊ. ಚನ್ನಬಸಪ್ಪನವರಿಂದ ’ಗಮಕ ಕೋಕಿಲ’ ಹೊಸಹಳ್ಳಿ ಗಮಕ ಕಲಾಪರಿಷತ್ತಿನಿಂದ ’ಗಮಕ ಗಂಧರ್ವ’, ಶಿವಮೊಗ್ಗ ರಸಿಕ ಶ್ರೋತೃಗಳಿಂದ ’ಗಮಕ ಗಾನವಾರಿಧಿ’, ಕರ್ನಾಟಕ ಗಮಕ ಕಲಾ ಪರಿಷತ್ತು ನಡೆಸಿದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಸನ್ಮಾನ, ಬೆಂಗಳೂರಿನ ಅತ್ತಿಮಬ್ಬೆ ಪ್ರತಿಷ್ಠಾನದಿಂದ ಗ’ಮಕ ಸಿಂಧು’ ಮೊದಲಾದ ಬಿರುದು ಗಳಿಸಿರುವ ಕೇಶವಮೂರ್ತಿಯವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೪-೯೫ರ ಸಾಲಿನ ’ಕರ್ನಾಟಕ ಕಲಾತಿಲಕ’ ಬಿರುದನ್ನು ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರ ’ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದೆ. ಇತ್ತೀಚೆಗೆ ಇವರಿಗೆ ೭೦ ವರ್ಷ ತುಂಬಿದ ಸವಿನೆನಪಿಗಾಗಿ ಹೊಸಹಳ್ಳಿ ಗಮಕ ಪರಿಷತ್ತು ’ಗಮಕ ಗಂಧರ್ವ’ ಎಂಬ ಅಭಿನಂದನಾ ಗ್ರಂಥವನ್ನು ಹೊರತಂದು ಇವರಿಗೆ ಅರ್ಪಿಸಿತು. ಶಿವಮೊಗ್ಗಾ ಜಿಲ್ಲಾ ಗಮಕ ಪರಿಷತ್ತಿನ ಜಿಲ್ಲಾ ಮಟ್ಟದ ಸಮ್ಮೇಳನದ ಅಧ್ಯಕ್ಷರಾಗಿ ಸನ್ಮಾನಿಸಲ್ಪಟ್ಟಿದ್ದಾರೆ. ಕರ್ನಾಟಕ ಗಾನ ಕಲಾ ಪರಿಷತ್ತಿನ ೩೭ನೇ ಸಮ್ಮೇಳನದ ವಿದ್ವತ್ ಸದಸ್ಸಿನಲ್ಲಿ ಸನ್ಮಾನಿಸಲ್ಪಟ್ಟಿದ್ದಾರೆ.