ನೃತ್ಯ ಕಲೆಯು ಋಷಿ ಮುನಿಗಳಿಂದ ಸೃಷ್ಟಿಸಲ್ಪಟ್ಟು ಅನೇಕ ಶತಮಾನಗಳಿಂದ ಸಾಂಸ್ಕೃತಿಯ ಪರಂಪರೆಯಲ್ಲಿ ಬೆಳೆದು ಬಂದಿರುವ ಭವ್ಯಕಲೆ. ೧೯೧೯ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹೋಚಿಹಳ್ಳಿಯಲ್ಲಿ ಶ್ರೀ ಜಿ. ರಾಮಸ್ವಾಮಯ್ಯ ಮತ್ತು ಶ್ರೀಮತಿ ಸೀತಮ್ಮನವರ ಪುತ್ರರಾಗಿ ಜನಿಸಿದ ಶ್ರೀ ಹೆಚ್. ಆರ್. ಕೇಶವಮೂರ್ತಿಗಳು, ಬಾಲ್ಯದಲ್ಲಿ ಚಿಕ್ಕಪ್ಪ ಶ್ರೀ ಮೊಸಳೆ ನರಸಿಂಹಯ್ಯನವರಿಂದ ಸಂಸ್ಕೃತ, ಸಂಗೀತ, ವೇದಗಳನ್ನು ಕಲಿತುದಲ್ಲದೆ ನಾಟಕದಲ್ಲೂ ಪಾತ್ರ ವಹಿಸುತ್ತಿದ್ದರು. ಆಸ್ಥಾನ ವಿದ್ವಾನ್ ಕೀರ್ತಿಶೇಷ ಶ್ರೀ ಸಿ. ಎಸ್. ಶ್ರೀನಿವಾಸಮೂರ್ತಿಯವರಿಂದ ಕೊಳಲು ಮತ್ತು ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತರು.

ನೃತ್ಯಕಲಾ ಪಟು ಸೋಹನ್ ಲಾಲರಿಂದ ಕಥಕ್ ನೃತ್ಯಾಭ್ಯಾಸ ಮಾಡಿದ ಇವರು ನೃತ್ಯ ಕಲೆಯ ಪರಿಪೂರ್ಣತೆ ಭರತನಾಟ್ಯದಲ್ಲೇ ಎಂದು ಮನಗಂಡು, ಭರತನಾಟ್ಯ ಪ್ರವೀಣ ನಟುವನಾರ್ ಗುಂಡಪ್ಪನವರ ಹತ್ತಿರ ಅಚ್ಚ ಮೈಸೂರು ಶೈಲಿಯ ಭರತನಾಟ್ಯವನ್ನು ಕಲಿತು ಅತ್ಯುತ್ತಮ ಕಲಾವಿದರೆಂದು ಖ್ಯಾತಿ ಪಡೆದರು. ೩೨ ವರ್ಷ ವಯಸ್ಸು ತುಂಬಿರುವ ಕೇಶವ ನೃತ್ಯ ಶಾಲೆ ’ಸರ್ಟಿಫಿಕೇಟ್ ಕೋರ್ಸ್‌’, ’ಡಿಪ್ಲೋಮಾ ಕೋರ್ಸ್‌’ ಮತ್ತು ’ಡಿಗ್ರಿ ಕೋರ್ಸ್‌’ಗಳಿಗೆ ಶಿಕ್ಷಣ ನೀಡುವ ಉಚ್ಚ ಮಟ್ಟದ ಸಂಸ್ಥೆಯಾಗಿದೆ.

’ಶ್ರೀ ಚನ್ನಕೇಶವ’, ’ಮೋಹಿನಿ ಭಸ್ಮಾಸುರ’, ’ಪುರಂದರ ಕೃಷ್ಣ’, ’ದಶಾವತಾರ’, ’ನವರಸ ರಾಯಾಯಣ’, ’ಶ್ರೀಕೃಷ್ಣ ತಲಾಭಾರ’, ’ಪಂಚವಟಿ’, ಕುವೆಂಪು ರಾಮಾಯಣ ದರ್ಶನದ ಆಧಾರದ ಮೇಲೆ ರಚಿತವಾದ ’ಸೀತಾರಾಮ ಕಲ್ಯಾಣ’ ’ಗಿರಿಕೃಷ್ಣ ಪಾರ್ವತಿ’, ಅಲ್ಲದೆ ಮಕ್ಕಳಿಗಾಗಿ ’ತಿರುಕನ ಕನಸು’, ’ಧೀರ ಬಾಲಕರು’, ಮುಂತಾದ ಹಲವು ನೃತ್ಯ ರೂಪಕಗಳನ್ನು ರಚಿಸಿ ಕರ್ನಾಟಕದಲ್ಲೇ ಅಲ್ಲದೆ ಇಡೀ ಭಾರತದಲ್ಲೇ ಅತ್ಯುತ್ತಮ ನಾಟ್ಯ ಕಲಾವಿದರೆಂದು ಖ್ಯಾತರಾಗಿದ್ದಾರೆ. ’ತಾಳ ಪ್ರಕರಣ’ ’ಸಪ್ತ ತಾಳೇಶ್ವರಿ’, ’ಪಂಚತ್ರಿಂಶತಾಳ’, ಸ್ವರಜ್ಯತಿ ನವರಸ ಪ್ರಕರಣದಲ್ಲಿ ’ನವರತ್ನರಾಗಿ ಮಾಲಿಕೆ’, ’ನವರಸ ರಾಮಾಯಣ’ ಮತ್ತು ಅನೇಕ ನೃತ್ಯ ಗೀತೆಗಳು, ನೃತ್ಯ ನಾಟಕಗಳಿಗೆ ಸ್ವರ ಸಂಯೋಜಿಸಿ ನೃತ್ಯ ಜೋಡಣೆಯನ್ನು ಮಾಡಿ ಯಶಸ್ವಿ ಪ್ರಯೋಗ ಮಾಡಿದ್ದಾರೆ.

ಸರಳ ವ್ಯಕ್ತಿತ್ವದ ಹೆಚ್. ಆರ್. ಕೇಶವಮೂರ್ತಿಗಳು ಕಲೆಯ ಸೇವೆಯೇ ಒಂದು ಆರಾಧನೆ ಎಂದು ನಂಬಿ ಕಲೆಯನ್ನು ಉದಾರವಾಗಿ ಬಿಚ್ಚುಮನಸ್ಸಿನಿಂದ ಶಿಷ್ಯಕೋಟಿಗೆ ಧಾರೆ ಎರೆದಿದ್ದಾರೆ. ಭರತನಾಟ್ಯಾಚಾರ್ಯರಾಗಿ ಶಿಷ್ಯರಿಗೆ ಮಾರ್ಗದರ್ಶಕರಾಗಿ, ಸತತವಾಗಿ ದುಡಿಯುತ್ತಿರುವ ಶ್ರೀ ಕೇಶವಮೂರ್ತಿಗಳಿಗೆ ೧೯೮೦-೮೧ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿ ನೀಡಿ ಗೌರವಿಸಿದೆ.

ಮುಂದೆ ಶ್ರೀಯುತರಿಗೆ ರಾಜ್ಯದ ಅತ್ಯುನ್ನತ ಗೌರವವಾದ “ಶಾಂತಲಾ” ಪ್ರಶಸ್ತಿಯಲ್ಲದೇ ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ ಪ್ರಶಸ್ತಿಯೂ ಸಂದಿದೆ.