ಜನನ: ೮-೨-೧೯೩೫ ಬೆಂಗಳೂರಿನಲ್ಲಿ

ಮನೆತನ: ಕಲಾವಿದರ ಮನೆತನ: ತಂದೆ ಬಾಪು ಹೆಚ್. ರಾಮಣ್ಣನವರು ಗಮಕ ವಿದ್ವಾಂಸರು ಹಾಗೂ ಭಾವಗೀತೆ ಗಾಯಕರು. ಶತಾಯುಷಿಗಳಾಗಿ ಇತ್ತೀಚೆಗೆ ನಿಧನರಾದರು. ತಾಯಿ ಜಯಮ್ಮ ಸಂಗೀತದಲ್ಲಿ ಪರಿಶ್ರಮವಿದ್ದವರು. ಪತಿ ಎಸ್.ಜಿ. ರಘುರಾಂ ಸಹ ಸುಗಮ ಸಂಗೀತ ಗಾಯಕರು.

ಗುರು ಪರಂಪರೆ: ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಆಸ್ಥಾನ ವಿದ್ವಾನ್ ಎನ್. ಚೆನ್ನಕೇಶವಯ್ಯನವರಲ್ಲಿ ಪಡೆದು. ಎ.ವಿ. ಕೃಷ್ಣಮಾಚಾರ್ಯರಲ್ಲಿ ಸುಗಮ ಸಂಗೀತವನ್ನೂ ರಾಬಿನ್ ರೇ ಅವರಲ್ಲಿ ರಬೀಂದ್ರ ಸಂಗೀತದಲ್ಲೂ ಶಿಕ್ಷಣ ಪಡೆದಿದ್ದಾರೆ. ಸಂಗೀತದಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ತೇರ್ಗಡೆ.

ಸಾಧನೆ: ಬಾಲ ಪ್ರತಿಭೆಯಾಗಿ ಅನೇಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ೧೯೫೦ರಿಂದ ಮೈಸೂರು ಆಕಾಶವಾಣಿಯ ಮೂಲಕ ಭಾವಗೀತೆಗಳ ಗಾಯನ ಪ್ರಸಾರದಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯದ ಎಲ್ಲ ಪ್ರಮುಖ ನಗರಗಳೇ ಅಲ್ಲದೆ. ಹೊರ ರಾಜ್ಯಗಳಾದ ದೆಹಲಿ, ಮುಂಬೈ, ತಮಿಳು ನಾಡು, ಆಂಧ್ರ ಹಾಗೂ ಇತರ ಕಡೆಗಳಲ್ಲೂ ಪ್ರವಾಸ ಮಾಡಿ ಸಾವಿರಾರು ಕಾರ್ಯಕ್ರಮಗಳನ್ನು ನೀಡಿ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ಅಮೆರಿಕಾದ ವಾಷಿಂಗ್ಟನ್, ಫಿಲಡೆಲ್ಫಿಯಾ, ಬಾಸ್ಟನ್ ನಗರಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ.

ಮೈಸೂರು ಆಕಾಶವಾಣಿಯಲ್ಲಿ ಸಂಗೀತ ಸಂಯೋಜಕರಾಗಿ ಅನೇಕ ಕನ್ನಡ ಗೀತೆಗಳಿಗೆ ರಾಗ ಸಂಯೋಜನೆ ಮಾಡಿರುತ್ತಾರೆ. ಅನೇಕ ಧ್ವನಿ ಮುದ್ರಿಕೆಗಳು, ಧ್ವನಿ ಸುರುಳಿಗಳು ಇವರ ಕಂಠದಿಂದ ಹೊರಹೊಮ್ಮಿವೆ. ಕೇವಲ ಭಾಷೆಯೇ ಅಲ್ಲದೆ-ಇತರ ಭಾಷೆಗಳಲ್ಲೂ ಹಾಡುವ ಸಾಮರ್ಥ್ಯ ಹೊಂದಿದ್ದು ಬಂಗಾಲಿ, ಹಿಂದಿ ಮರಾಠಿ ಭಾಷಾ ಗೀತೆಗಳನ್ನು ಆಯಾಯಾ ನಗರಗಳಲ್ಲಿ ಹಾಡಿ ಸೈಯೆನಿಸಿಕೊಂಡವರು. ಇವರು ರಷ್ಯಾ ಪ್ರವಾಸದಲ್ಲಿದ್ದಾಗ ಮಾಸ್ಕೊ ರೇಡಿಯೋದಿಂದ ಇವರು ಹಾಡಿದ ಕನ್ನಡ ಗೀತೆಗಳು ಪ್ರಸಾರಗೊಂಡಿದೆ.

ಲೇಖಕಿಯಾಗಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಧಾರಿಣಿ, ಸಾವಿರದ ಸಂಚಯ, ಸುಗಮ ಸಂಗೀತ ಒಂದು ಸಿಂಹಾವಲೋಕನ, ಮಧುಚಂದ್ರ ನಾಟಕ ಮುಂತಾದವು ಪ್ರಕಟವಾಗಿವೆ. ಸಾವಿರದ ಸಂಚಯಕ್ಕೆ ರತ್ನಮ್ಮ ಹೆಗಡೆ ಪ್ರಶಸ್ತಿ, ಸುಗಮ ಸಂಗೀತ-ಒಂದು ಸಿಂಹಾವಲೋಕನಕ್ಕೆ ಅತ್ತಿಮಬ್ಬೆ ಪ್ರಶಸ್ತಿ ದೊರೆತಿದೆ.

ಪ್ರಶಸ್ತಿ-ಸನ್ಮಾನ: ೧೯೮೧-೮೨ರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ೧೯೯೨ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೧೯೯೮ರಲ್ಲಿ ಪ್ರತಿಷ್ಠಿತ ಸಂತ ಶಿಶುನಾಳ ಪ್ರಶಸ್ತಿ ಇವರ ಮಡಿಲಿಗೆ ಬಂದು ಬಿದ್ದಿವೆ. ಅಲ್ಲದೆ ೨೦೦೧ ರಿಂದ ೨೦೦೩ರ ಅವಧಿಯಲ್ಲಿ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಮೈಸೂರಿನಲ್ಲಿ ಸುಗಮ ಸಂಗೀತ ಅಕಾಡೆಮಿ ಸ್ಥಾಪಿಸಿ ತನ್ಮೂಲಕ ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ ಮಾಡುತ್ತಿದ್ದಾರೆ.