ಜನನ : ೩೦-೧೧-೧೯೨೪ ರಂದು ತಿಪಟೂರು ತಾಲೂಕಿಗೆ ಸೇರಿದ ಹೀಚನೂರು ಗ್ರಾಮದಲ್ಲಿ

ಮನೆತನ : ಸಂಪ್ರದಾಯಸ್ಥರ ಮನೆತನ. ತಂದೆ ಕೃಷ್ಣಪ್ಪ ತಾಯಿ ನಾಗಮ್ಮನವರು ಸಂಗೀತ ಬಲ್ಲವರಾಗಿದ್ದರು.

ಗುರುಪರಂಪರೆ : ಕಳಲೆ ಸಂಪತ್ಕುಮಾರಾಚಾರ್ಯರ ಶಿಷ್ಯರದ ಎಂ. ಎಸ್. ಚಂದ್ರಶೇಖರಯ್ಯ ಅವರಲ್ಲಿ ಗಮಕ ಶಿಕ್ಷಣವನ್ನು ಹೆಚ್. ಕೃಷ್ಣಶಾಸ್ತ್ರಿ ಅವರಲ್ಲಿ ಸಂಗೀತ ಶಿಕ್ಷಣವನ್ನೂ ಪಡೆದಿದ್ದಾರೆ. ಸಾಮಾನ್ಯ ವಿದ್ಯಾಭ್ಯಾಸ ಇಂಟರ್ ಮಿಡಿಯಟ್.

ಕ್ಷೇತ್ರ ಸಾಧನೆ : ಸುಮಾರು ಆರು ದಶಕಗಳಿಗೂ ಮಿಕ್ಕಿ ಗಮಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುತ್ತಾರೆ. ರಾಜ್ಯದಾದ್ಯಂತ ಸಂಚಾರ ಮಾಡಿ ತಮ್ಮ ಮಾಧ್‌ಉರ್ಯಯುಕ್ತ ಕಂಠದಿಂದ ಗಮಕ ಸೌರಭವನ್ನು ರಸಿಕರಿಗೆ ಉಣಬಡಿಸಿದ್ದಾರೆ. ಚಾಮರಾಜನಗರದ ಗಮಕ ಕಲಾ ಸಂಘದ ಅಧ್ಯಕ್ಷರಾಗಿ ವರ್ಷಂಪ್ರತಿ ಮೂರು ದಿನಗಳ ಕಾಲ ಗಮಕ ಕಲಾರಾಧನೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿದ ’ಕಾವ್ಯಾನುಭವ’ ಪುಸ್ತಕ ವಿಮರ್ಶೆ ಮಾಡಿರುತ್ತಾರೆ. ಬೆಂಗಳುರು ಆಕಾಶವಾಣಿ, ದೂರದರ್ಶನ ಕೇಂದ್ರಗಳಿಂದ ಇವರ ವಾಚನ ಕಾರ್ಯಕ್ರಮಗಳು ಪ್ರಸಾರಗೊಂಡಿವೆ. ಸಂಗೀತಾ, ನಾದ, ಲಹರಿ ಗಾನ ಲಹರಿ ಮುಂತದ ಧ್ವನಿ ಸುರುಳಿ ಸಂಸ್ಥೆಗಳು ಇವರಿಂದ ಹಲವಾರು ಪ್ರಸಂಗಗಳನ್ನು ಹಾಡಿಸಿ ಕ್ಯಾಸೆಟ್‌ಗಳನ್ನು ಹೊರತಂದಿದ್ದಾರೆ. ಮಂಡ್ಯದಲ್ಲಿ ನಡೆದ ಜಿಲ್ಲಾ ಮಟ್ಟದ ಗಮಕ ಸಮ್ಮೇಳನದ ಅಧ್ಯಕ್ಷತೆಯ ಗೌರವ ಇವರಿಗೆ ಸಂದಿದೆ. ಹೊರ ರಾಜ್ಯಗಳಾದ ಹೈದರಾಬಾದ್, ಮುಂಬೈಗಳಲ್ಲೂ ಇವರ ಕಾರ್ಯಕ್ರಮ ನಡೆದಿದೆ. ಸರಕಾರದ ಸಂಸ್ಕೃತಿ ಪ್ರಸಾರ, ವಿಶ್ವವಿದ್ಯಾಲಯದ ಪ್ರಸಾರಾಂಗಗಳ ಆಶ್ರಯದಲ್ಲಿ ಹಲವಾರು ವರ್ಷಗಳ ಕಾಲ ಗಮಕ ಪ್ರಚಾರ ಕಾರ್ಯನಿರ್ವಹಿಸಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ಅನೇಕ ಸಂಘ ಸಂಸ್ಥೆಗಳು, ಮಠ ಮಾನ್ಯಗಳು ಇವರನ್ನು ಗೌರವಿಸಿ ಬಿರುದು –  ಖಿಲ್ಲತ್ತುಗಳನ್ನು ನೀಡಿವೆ. ಗಮಕ ಕಲಾ ಭೂಷಣ, ಗಮಕ ಪಾರಾವಾರ‍, ಗಮಕ ಭಾಸ್ಕರ, ಗಮಕ ಕಲಾ ಕೋವಿದ ಮುಂತಾದ ಬಿರುದುಗಳಿಗೆ ಪಾತ್ರರಾಗಿರುವ ರಾಮಸ್ವಾಮಿಯವರಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ರಾಜ್ಯಮಟ್ಟದ ಸಮ್ಮೇಳನದಲ್ಲಿ ಸನ್ಮಾನಿತರಾಗಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಇವರಿಗೆ ತನ್ನ ೨೦೦೧-೦೨ ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.