ಮಂಡ್ಯ ಜಿಲ್ಲೆಯ ಹೊಳಲು ಗ್ರಾಮದಲ್ಲಿ ೧೯೩೬ರಲ್ಲಿ ಜನಿಸಿದ ತಾಂಡವಮೂರ್ತಿಯವರು ಆಸ್ಥಾನ ವಿದ್ವಾಂಸರುಗಳಾಗಿದ್ದ ಬಿ.ಎಂ. ಶಿವಪ್ಪನವರಲ್ಲಿ ಗಾಯನ, ಎ.ಎಸ್‌. ಶಿವರುದ್ರಪ್ಪನವರಲ್ಲಿಯೂ ಮೈಸೂರು ಟಿ. ಚೌಡಯ್ಯನವರಲ್ಲಿಯೂ ಪಿಟೀಲು ವಾದನ ಹಾಗೂ ಟಿ. ಎಂ. ವೆಂಕಟೇಶ್‌ ಅವರಲ್ಲಿ ಕೊನಗೋಲು ಹೇಳುವುದನ್ನು ಅಭ್ಯಾಸ ಮಾಡಿದರು. ವೀಣಾ ವಾದನದಲ್ಲಿ ಸ್ವಲ್ಪ ಪರಿಶ್ರಮವಿರುವ ಈ ಗಾಯಕರು ವೈದ್ಯರ ಅಚಾತುರ್ಯದಿಂದ ದೃಷ್ಟಿ ಕಳೆದುಕೊಂಡು ಅಂಧರಾದರು.

ಬೆಂಗಳೂರು ಚಾಮರಾಜಪೇಟೆ ರಾಮೋತ್ಸವ, ಶ್ರೀ ಶೃಂಗೇರಿ ಶಾರದಾಂಬೆಯ ಸನ್ನಿಧಿ, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರನ ಸನ್ನಿಧಿ ಮುಂತಾದ ಮುಖ್ಯ ವೇದಿಕೆಗಳಿಂದ ಕಚೇರಿ ನೀಡಿರುವ ಇವರು ೧೯೫೬ರಲ್ಲಿ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಚಿನ್ನದ ಪದಕ ಪಡೆದಿದ್ದರು.

ಮಂಡ್ಯದಲ್ಲಿ ಶ್ರೀ ತಾಂಡವೇಶ್ವರ ವಿದ್ಯಾ ಮಂದಿರದ ಮೂಲಕ ಅನೇಕರಿಗೆ ಹಾಡುಗಾರಿಕೆ, ಪಿಟೀಲು, ವೀಣೆ, ಮೃದಂಗ ಇತ್ಯಾದಿ ಮಾಧ್ಯಮಗಳಲ್ಲಿ ಶಿಕ್ಷಣ ನೀಡಿದ್ದರು. ಪ್ರತಿವರ್ಷವೂ ತ್ಯಾಗರಾಜರ ಆರಾಧನೆಯನ್ನು ಬಹು ವೈಭವದಿಂದ ನಡೆಸಿ ಹಿರಿಯ ಕಲಾವಿದರೊಬ್ಬರಿಗೆ ಸನ್ಮಾನಿಸುತ್ತಿದ್ದರು.

ಇವರಿಗೆ ಮಂಡ್ಯ ಜಿಲ್ಲೆಯ ಸಮಿತಿಯಿಂದ ‘ಸಂಗೀತ ವಿಶಾರದ’, ರಾಜ್ಯಮಟ್ಟದಲ್ಲಿ ಅಂಧ ಕಲಾವಿದರ ಸಂಘದಿಂದ ‘ಸಂಗೀತ ಕಲಾ ಶಿರೋಮಣಿ’, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗಳು ಲಭಿಸಿದ್ದುವು. ರಾಜ್ಯ ಸರ್ಕಾರವು ನಡೆಸುವ ಸಂಗೀತ ಪರೀಕ್ಷೆಗಳಿಗೆ ಪರೀಕ್ಷಕರಾಗಿಯೂ ಹಲವಾರು ವರ್ಷಗಳು ಸೇವೆ ಸಲ್ಲಿಸಿದ್ದರು. ಇವರ ಸಂಗೀತ ಸೇವೆಯೂ, ಜೀವನಯಾತ್ರೆಯೂ ಅಂತ್ಯವಾಯಿತಾದರೂ ಇವರು ಆರಂಭಿಸಿದ ಶಿಕ್ಷಣ ಸಂಸ್ಥೆ ಇವರ ನೆನಪನ್ನು ಹಸಿರಾಗಿಸಿದೆ.