‘ತಾರ ಶಹನಾಯಿ’ ಹಿಂದೂಸ್ಥಾನಿ ಸಂಗೀತದ ಒಂದು ಅಪರೂಪದ ವಾದ್ಯ ಪ್ರಕಾರ. ಅದನ್ನು ಅವಿಷ್ಕರಿಸಿದವರು ಹೆಸರಾಂತ ಸಂಗೀತಜ್ಞ ಹಾಗೂ ಸಂಗೀತ ವಿಮರ್ಶಕ ಶ್ರೀ ಮೋಹನ ನಾಡಕರ್ಣಿ ಅವರು. ಇಂತಹ ಅಪರೂಪದ ವಾದ್ಯವನ್ನು ಕೈಗೆತ್ತಿಕೊಂಡು ಅದರಲ್ಲಿ ಅಪೂರ್ವ ಸಾಧನೆ ಮಾಡಿರುವ ಪಂ.ಎಚ್‌. ಟಿ. ಕೊಪ್ಪಿಕರ ಅವರು ಕರ್ನಾಟಕದ ಏಕಮೇವ ‘ತಾರ ಶಹನಾಯಿ’ ವಾದಕರು. ಸಂಗೀತದ ತವರಾದ ಧಾರವಾಡದಲ್ಲಿ ೨೬ ಜನವರಿ, ೧೯೧೮ರಲ್ಲಿ ಜನಿಸಿದ ಶ್ರೀ ಹೆಚ್‌. ಟಿ. ಕೊಪ್ಪೀಕರ ಅವರದು ಸಂಗೀತದ ಮನೆತನ. ತಂದೆ ತ್ರಿಯಂಬಕ ಕೊಪ್ಪೀಕರ ಸಿತಾರ್ ವಾದಕರು ಮತ್ತು ಕನ್ನಡ, ಮರಾಠಿ, ಹಿಂದಿ ಭಜನೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಯಾವುದೇ ಸಂಗೀತ ಕಲಾವಿದರು ಧಾರವಾಡಕ್ಕೆ ಬಂದರೆ ಅವರನ್ನು ಮನೆಗೆ ಕರೆಸಿ ಪುಟ್ಟ ಕಾರ್ಯಕ್ರಮ ಏರ್ಪಡಿಸುತ್ತಿದ್ದರು ತ್ರಿಯಂಬಕ ಕೊಪ್ಪೀಕರ. ಹಾಗಾಗಿ ಬಾಲ್ಯದಲ್ಲೇ ಕೊಪ್ಪೀಕರರವರಿಗೆ ಉಸ್ತಾದ್‌ ರಹಮತ್‌ ಖಾನ್‌, ಪಂಡಿತ್‌ ಪಂಚಾಕ್ಷರಿ ಗವಾಯಿ, ಪಂಡಿತ್‌ ದಿಲೀಪ್‌ಚಂದ್ರ ವೇದಿ, ಸ್ವಾಮಿ ವಲ್ಲಭ ದಾಸ ಮುಂತಾದ ದಿಗ್ಗಜರ ಮಾರ್ಗದರ್ಶನ ಪಡೆಯುವ ಅವಕಾಶ ದೊರೆಯಿತು. ತಮ್ಮ ಅಣ್ಣ ಪಂಡಿತ್‌ ಗಣೇಶ್‌ ಕೊಪ್ಪೀಕರ್ ಅವರಿಂದ ಆರಂಭದಲ್ಲಿ ದಿಲ್‌ರೂಬಾ ಅಭ್ಯಾಸ ಮಾಡಿದ ಶ್ರೀಯುತರು. ನಂತರ ಪಂಡಿತ್‌ ಹನುಮಂತರಾವ್‌ ವಾಳವೆಕರ್ ಅವರಿಂದ ಗಾಯಕಿ ಶೈಲಿಯ ಹಾರ್ಮೋನಿಯಂ ವಾದನ ಮತ್ತು ಪಂಡಿತ್‌ ವಿಠಲ್ ರಾವ್‌ ಕೋರಗಾಂವಕರ ಅವರಲ್ಲಿ ಗಾಯನವನ್ನು ಅಭ್ಯಾಸ ಮಾಡಿದರು.

ಪಂಡಿತ್‌ ಮೋಹನ ನಾಡಕರ್ಣಿ ಆವಿಷ್ಕಾರಗೊಳಿಸಿದ ತಾರ್ ಶಹನಾಯಿಗಳನ್ನು ಆಗ್ರಾ ಘರಾಣೆ ಶೈಲಿಯಲ್ಲಿ ನುಡಿಸುವುದನ್ನು ಕಲಿತು, ಕರ್ನಾಟಕದ ವಿವಿಧ ಭಾಗಗಳಲ್ಲಿ ಹಾಗೂ ಮಹಾರಾಷ್ಟ್ರದ ಸತಾರಾ ಮತ್ತು ಇತರ ಭಾಗಗಳಲ್ಲಿ ತಾರ್ ಶಹನಾಯಿ ಕಾರ್ಯಕ್ರಮ ನೀಡುತ್ತಾ ಬಂದರು. ಈಗ ಕರ್ನಾಟಕದಲ್ಲಿ ತಾರ್ ಶಹನಾಯಿ ನುಡಿಸುವ ಕಲಾವಿದ ಇವರೊಬ್ಬರೇ. ಈಗಲೂ ತಾರ್ ಶಹನಾಯಿ ವಾದ್ಯದ ಬಗ್ಗೆ ಶ್ರೀಯುತರು ಸೋದಾಹರಣ ಉಪನ್ಯಾಸಗಳನ್ನು ನೀಡುತ್ತಿರುತ್ತಾರೆ.

ಆಕಾಶವಾಣಿ ಕಲಾವಿದರಾಗಿರುವ ಶ್ರೀ ಕೊಪ್ಪೀಕರ್ ಅವರ ಕಾರ್ಯಕ್ರಮಗಳು ಆಕಾಶವಾಣಿಯಲ್ಲಿ ಮೇಲಿಂದ ಮೇಲೆ ಪ್ರಸಾರವಾಗುತ್ತಲೇ ಇರುತ್ತವೆ. ತಮ್ಮ ನಿರಂತರ ಸಂಗೀತ ಚಟುವಟಿಕೆಗಳ ನಡುವೆಯೂ ಶ್ರೀಯುತರು ಅನೇಕ ಸಂಘ ಸಂಸ್ಥೆಗಳ ಒಡನಾಟವನ್ನು ಇಟ್ಟುಕೊಂಡು ಸಂಗೀತ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ಕಾರವಾರ ಮತ್ತು ಅಂಕೋಲಾ ಡೆಕ್ಕನ್‌ ಎಜುಕೇಶನ್‌ ಸೊಸೈಟಿ, ಮಹಾರಾಷ್ಟ್ರದ ಸತಾರಾದ ನಟರಾಜ ಮಂದಿರ, ಗದುಗಿನ ಶ್ರೀ ವೀರೇಶ್ವವರ ಪುಣ್ಯಾಶ್ರಮ, ಹೊಸಪೇಟೆಯ ಸಂಗೀತ ಭಾರತಿ ಮುಂತಾದ ಸಂಘ ಸಂಸ್ಥೆಗಳ ಗೌರವಾಭಿನಂದನೆಗಳಲ್ಲದೆ ಗುಳೇಗುಡ್ಡದ ಸ್ವಾಮಿ ದತ್ತಾತ್ರೇಯ ಪರ್ವತೀಕರ ಪುರ್ಣಯ ಸಂಗೀತೋತ್ಸವದಲ್ಲಿ ಮತ್ತು ಶ್ರೀ ಪುಟ್ಟರಾಜ ಗವಾಯಿಗಳವರ ತುಲಾಭಾರ ಗುರುವಂದನಾ ಕಾರ್ಯಕ್ರಮದಲ್ಲಿ ನಡೆದು ಸನ್ಮಾನ-ಇವೆಲ್ಲಾ ಶ್ರೀ ಹೆಚ್‌. ಟಿ. ಕೊಪ್ಪೀಕರ್ ಅವರ ಸಂಗೀತ ಸೇವೆಗೆ ಸಂದ ಗೌರವ ಪುರಸ್ಕಾರಗಳು. ಶ್ರೀಯುತರಿಗೆ ಕರ್ನಾಟಕ ಸಂಗೀತ

ನೃತ್ಯ ಅಕಾಡೆಮಿ ೨೦೦೪-೦೫ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.