ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದ ತಮ್ಮಯ್ಯನವರ ಸುಪುತ್ರರಾಗಿ ೨೬-೯-೧೯೨೨ ರಲ್ಲಿ ಜನಿಸಿದ ನಾಗಣ್ಣನವರು ವಿಜ್ಞಾನ ಪದವೀಧರರು. ಅಣ್ಣಂದಿರಾದ ನರಸಿಂಹಮೂರ್ತಿ ಘಟವಾದ್ಯ ವಾದಕರು. ಶ್ಯಾಮಣ್ಣ ಹರಿಕಥಾ ವಿದ್ವಾಂಸರು, ರಾಮಸ್ವಾಮಿ ಗಾಯಕರು. ಹೀಗೆ ಸಂಗೀತಮಯ ವಾತಾವರಣದಲ್ಲಿ ಹುಟ್ಟಿ ಬೆಳೆದ ನಾಗಣ್ಣನವರು ತಂದೆಯವರಿಂದಲೇ ಮೊದಲು ತಬಲ ವಾದನ ಕಲಿತರು. ಪಂಡಿತ್‌ಪಂಚಾಕ್ಷರಿ ಗವಾಯಿ ಅವರೊಂದಿಗೆ ತಬಲ ನುಡಿಸಿದ್ದು ಇವರ ಜೀವನದ ಒಂದು ಮುಖ್ಯ ಘಟನೆ. ಮುಂದೆ ಪಾಲ್ಘಾಟ್‌ ಸುಬ್ಬಯ್ಯನವರಲ್ಲಿ ಮೃದಂಗ ವಾದನದಲ್ಲಿ ಶಿಕ್ಷಣ ಪಡೆದು ಮೃದಂಗ-ಗಾಯನಗಳೆರಡರಲ್ಲೂ ವಿದ್ವತ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಮೈಸೂರು ಮಹಾರಾಜರ ಸಮಕ್ಷಮದಲ್ಲೂ, ನಾಡಿನ ಮತ್ತು ಹೊರ ನಾಡುಗಳ ಪ್ರಮುಖ ಸಭೆ-ಸಂಸ್ಥೆಗಳ ಆಶ್ರಯದಲ್ಲಿ ಹಿರಿಯ ಸಂಗೀತ ಕಲಾವಿದರನೇಕರೊಡನೆ ಇವರ ಮೃದಂಗ ಪಕ್ಕವಾದ್ಯದಲ್ಲಿ ಕಛೇರಿಗಳು ನಡೆದಿವೆ. ಆಕಾಶವಾಣಿಯಿಂದಲೂ ಇವರ ವಾದನದ ಕಾರ್ಯಕ್ರಮಗಳು ಪ್ರಸಾರವಾಗಿವೆ. ಪಾಶ್ಚಿಮಾತ್ಯ ದೇಶಗಳಲ್ಲೂ ಸಂಚರಿಸಿ ತಮ್ಮ ಕಲೆಯ ಪ್ರತಿಭೆಯನ್ನು ಹರಡಿದ್ದಾರೆ. ಹುಬ್ಬಳ್ಳಿಯ ‘ನಾದಬ್ರಹ್ಮ’ ಸಂಗೀತ ಸಭೆಯ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ನಾಗಣ್ಣನವರು ತಮ್ಮ ಸಾಧನೆಗಳ ಮೂಲಕವಾಗಿ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ‘ನಾದಬ್ರಹ್ಮ’ ‘ಲಯ ವಾದ್ಯ ಧುರೀಣ’. ‘ಲಯ ವಾದ್ಯ ಚತುರ’, ‘ಲಯ ವಾದ್ಯ ದುರಂಧರ’, ‘ರಾಜ್ಯೋತ್ಸವ ಪ್ರಶಸ್ತಿ’, ‘ಕರ್ನಾಟಕ ಕಲಾ ತಿಲಕ’- ಇವರಿಗೆ ದೊರೆತ ಹಲವು ಸನ್ಮಾನಗಳಲ್ಲಿ ಕೆಲವು. ಆಕಾಶವಾಣಿಯ ಕಲಾವಿದರಾಗಿ ಸೇವೆ ಸಲ್ಲಿಸಿದ ಶ್ರೀಯುತರು ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇಂತಹ ಬಹುಮುಖ ಪ್ರತಿಭೆ ಶ್ರೀಯುತರು ೨೦೦೩ರಲ್ಲಿ ಭೌತಿಕವಾಗಿ ಕಣ್ಮರೆಯಾದರು.