ಮೈಸೂರು ಆಸ್ಥಾನ ಪಿಟೀಲು ವಿದ್ವಾನ್‌ ಹೆಚ್‌. ತಮ್ಮಯ್ಯ-ಲಕ್ಷ್ಮೀದೇವಮ್ಮ ದಂಪತಿಗಳ ಪುತ್ರರಾಗಿ ೨೦-೬-೧೯೨೮ ರಂದು ಜನಿಸಿದವರು ರಾಮಸ್ವಾಮಿ. ಪದವೀಧರರೂ ಆಗಿರುವ ಇವರ ಸಂಗೀತ ಗುರುಗಳು ಮೈಸೂರು ವಾಸುದೇವಾಚಾರ್ಯರು ಹಾಗೂ ಅವರ ಪ್ರಥಮ ಶಿಷ್ಯರಾಗಿದ್ದ ಬಿ.ಕೆ. ಪದ್ಮನಾಭರಾಯರು.

ರಾಜ್ಯದಲ್ಲೂ ಹೊರ ರಾಜ್ಯಗಳಲ್ಲೂ ಅನೇಕಾನೇಕ ಸಭೆಗಳಲ್ಲಿ ಸಂಗೀತ ಕಛೇರಿಗಳನ್ನು ಮಾಡಿರುತ್ತಾರೆ. ಅನೇಕ ಸಂಗೀತ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ. ಹಾಡುಗಾರಿಕೆ ವಾದ್ಯ ಸಂಗೀತಗಳೆರಡರಲ್ಲೂ ತರಬೇತಿ ನೀಡಿರುವ ಇವರು ವಾಸುದೇವಾಚಾರ್ಯರಿಂದ ಸ್ಥಾಪಿತವಾದ ಕಲಾವರ್ಧಿನಿ ಸಂಗೀತ ಸಭೆ, ಬಿಡಾರಂ ಕೃಷ್ಣಪ್ಪನವರ ರಾಮಮಂದಿರಂ ಮುಂತಾದೆಡೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರವು ನಡೆಸುವ ವಿಶೇಷ ಸಂಗೀತ ಪರೀಕ್ಷೆಗಳಲ್ಲಿ ಪರೀಕ್ಷಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಆಕಾಶವಾಣಿ ಹಾಗೂ ದೂರದರ್ಶನ ಕೇಂದ್ರಗಳಿಂದ ಇವರ ಕಾರ್ಯಕ್ರಮಗಳು ಪ್ರಸಾರವಾಗಿ ಸಂಗೀತ ರಸಿಕರಿಗೆ ಸಂವಹನವಾಗಿವೆ.

ಹುಬ್ಬಳ್ಳಿಯ ನಾದ ಬ್ರಹ್ಮ ಸಭಾದಿಂದ ‘ರಾಗಾಲಾಪನ ಚತುರ’; ತ್ಯಾಗರಾಜ ಸಂಗೀತ ಸಭಾದ ‘ಗಾಯನ ಚತುರ’; ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾ ತಿಲಕ’ – ಮುಂತಾದ ಪ್ರಶಸ್ತಿಗಳನ್ನು ಹೊಂದಿರುವ ಇವರನ್ನು ರಾಜ್ಯದ ಅನೇಕ ಪ್ರತಿಷ್ಠಿತ ಸಂಘ-ಸಂಸ್ಥೆಗಳು ಗೌರವಿಸಿವೆ. ದೇವರನಾಮ ವಚನಗಳನೇಕಕ್ಕೆ ಅಪೂರ್ವ ರಾಗಗಳನ್ನು ಸಂಯೋಜಿಸಿರುತ್ತಾರೆ.

ಐದಾರು ದಶಕಗಳು ಸಂಗೀತ ಕ್ಷೇತ್ರಕ್ಕೆ ಸೇವೆ ಸಲ್ಲಿಸಿ ಶ್ರೀಯುತರು ದೇವಿ ಶಾರದೆಯ ಸನ್ನಿಧಿಗೆ ತೆರಳಿದರು.