ಜನನ : ೩೧-೧೦-೧೯೨೯ ರಂದು ಕಬ್ಬಹಳ್ಳಿಯಲ್ಲಿ

ಮನೆತನ : ಸಂಗೀತ ಸಾಹಿತ್ಯಸಕ್ತಿಯುಳ್ಳ ಕುಟುಂಬ. ತಂದೆ ಎಸ್. ಹನುಮಂತಯ್ಯ, ತಾಯಿ ಪಾರ್ವತಮ್ಮ ವೃತ್ತಿಯಲ್ಲಿ ಶಿಕ್ಷಕರು.

ಗುರುಪರಂಪರೆ : ಶ್ರೀ ಹೆಚ್. ಕೆ. ರಾಮಸ್ವಾಮಿಯವರಲ್ಲಿ ಗಮಕ ಶಿಕ್ಷಣವನ್ನು ಪಡೆದಿರುತ್ತಾರೆ.

ಕ್ಷೇತ್ರ ಸಾಧನೆ : ಮೈಸೂರಿನಲ್ಲಿ ವ್ಯಾಸಂಗದಲ್ಲಿದ್ದಾಗ ಅನೇಕ ಗಮಕಿಗಳ ಕಾವ್ಯ ವಾಚನಗಳನ್ನು ಕೇಳಿ ಪ್ರಭಾವಿತರಾಗಿ ಗಮಕ ಕಲೆಯ ಕಡೆಗೆ ವಾಲಿದರು. ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಎಲ್ಲ ಪ್ರಕಾರಗಳ ಗಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ. ಚಾಮರಾಜನಗರದ ಆಸುಪಾಸಿನ ಎಲ್ಲಾ ಹಳ್ಳಿಗಳಲ್ಲಿ ಗಮಕ ವಾಚನದ ಕಂಪನ್ನು ಬೀರಿದ್ದಾರೆ. ಹಳೆಗನ್ನಡ ಕಾವ್ಯಗಳಿಂದ ಹಿಡಿದು ಇಂದಿನ ಆಧುನಿಕ ಕಾವ್ಯಗಳವರೆಗೆ ಎಲ್ಲಾ ಪ್ರಕಾರದ ಛಂದಸ್ಸುಗಳ ಕಾವ್ಯಗಳ ವಾಚನವನ್ನು ಮಾಡುವ ಪರಿಶ್ರಮವಿದೆ. ಕರ್ನಾಟಕ ಗಮಕ ಕಲಾ ಪರಿಷತ್ತಿನ ವತಿಯಿಂದ ಗಮಕ ತರಗತಿಗಳನ್ನು ನಡೆಸುತ್ತಾ ಬಂದಿದ್ದಾರೆ. ಜಿಲ್ಲಾ ಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಗುರುಗಳಾದ ಹೆಚ್. ಕೆ. ರಾಮಸ್ವಾಮಿಯವರು ಚಾಮರಾಜನಗರದಲ್ಲಿ ಆರಂಭಿಸಿದ ವಾರ್ಷಿಕ ಗಮಕೋತ್ಸವವನ್ನು ಇವರು ಮುಂದುವರಿಸಿಕೊಂಡು ಬರುತ್ತಿದ್ದು ಅನೇಕ ಗಮಕಿಗಳಿಂದ ವಾಚನ – ವ್ಯಾಖ್ಯಾನಗಳನ್ನು ಏರ್ಪಡಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸುತ್ತೂರು ಮಠಾಧೀಶರ ಸಮ್ಮುಖದಲ್ಲಿ ಕಳೆದ ಒಂದು ದಶಕಗಳಿಂದಲೂ ನಿರಂತರವಾಗಿ ಶೈವ ಕಾವ್ಯಗಳನ್ನು ವಾಚನ ಮಾಡಿ ಮಠದ ಶ್ರೀಗಳ ಅನುಗ್ರಹಕ್ಕೆ ಪಾತ್ರರಾಗಿರುತ್ತಾರೆ. ತಮ್ಮ ಹುಟ್ಟೂರು, ಚಾಮರಾಜನಗರವೇ ಅಲ್ಲದೆ ಮೈಸೂರು ಬೆಂಗಳೂರು ವಿಜಾಪುರದ ತೊರವೇ ಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಚಾಮರಾಜನಗರದ ಅಗ್ರಹಾರದ ಶ್ರೀ ಪಟ್ಟಾಭಿರಾಮ ದೇವಾಲಯದಲ್ಲಿ ಕಳೆದ ೨೦ ವರ್ಷಗಳಿಂದಲೂ ಕಾವ್ಯ ವಾಚನ ಮಾಡುತ್ತಾ ಬಂದಿರುತ್ತಾರೆ.

ಪ್ರಶಸ್ತಿ – ಪುರಸ್ಕಾರಗಳು : ಚಾಮರಾಜನಗರದ ಅಭಿಮಾನಿಗಳಿಂದ ’ಗಮಕ ಕಲಾ ಭೂಷಣ’ ಕನಕಗಿರಿ ಲಲಿತ ಕಲಾ ಸಂಘದ ವತಿಯಿಂದ ಬಿಜಾಪುರದ ತೊರವಿ ಕ್ಷೇತ್ರದಲ್ಲಿ ನಡೆದ ಕಾವ್ಯೋತ್ಸವದ ಸಂದರ್ಭದಲ್ಲಿ ಸನ್ಮಾನಿಸಲ್ಪಟ್ಟಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಇವರಿಗೆ ತನ್ನ ೨೦೦೨-೦೩ ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.