೧೯೧೯ರಲ್ಲಿ ಜನಿಸಿದ ವೆಂಕಟೇಶಯ್ಯನವರಿಗೆ ಮೊದಲ ಗುರುವಾಗಿ ಸಂಗೀತ ಕಲಿಸಿದ್ದು ಅಜ್ಜ ಮೇಷ್ಟು ಎಂದೇ ಪ್ರಖ್ಯಾತರಾಗಿದ್ದ ಬಸವಾಪಟ್ಟಣದ ಸೂರ್ಯನಾರಾಯಣಪ್ಪನವರು. ನಂತರ ಟಿ. ಚೌಡಯ್ಯನವರ ಸೋದರ ಟಿ. ಪುಟ್ಟಸ್ವಾಮಯ್ಯನವರಲ್ಲಿ ಉನ್ನತ ಶಿಕ್ಷಣ ಪಡೆದು ಉತ್ತಮ ಗಾಯಕರಾದರು.

ಇವರ ಕಛೇರಿ ಜೀವನ ೧೯೪೩ರಲ್ಲಿ ಆರಂಭವಾಯಿತು. ಅನೇಕ ಕಾರ್ಯಕ್ರಮಗಳಲ್ಲಿ ಗಾಯನ ಮಾಡಿರುವ ಇವರು ಉತ್ತಮ ಗುರುವಾಗಿ ಹಲವಾರು ಶಿಷ್ಯರನ್ನು ತರಬೇತಿ ನೀಡಿ ಕ್ಷೇತ್ರಕ್ಕೆ ಕೊಟ್ಟಿರುತ್ತಾರೆ.

ಬಿಡಾರಂ ಕೃಷ್ಣಪ್ಪನವರ ರಾಮ ಮಂದಿರದಲ್ಲಿ ತಿಂಗಳಿಗೊಮ್ಮೆಯಂತೆ ಸತತವಾಗಿ ಹದಿದನಾಲ್ಕು ಕಛೇರಿಗಳನ್ನು ನಡೆಸಿದ ಹೆಗ್ಗಳಿಗೆ ಇವರದು. ಗಾನ ಕಲಾಪರಿಷತ್ತಿನ ನಾಲ್ಕನೇ ಸಂಗೀತ ಸಮ್ಮೇಳನದಲ್ಲಿ ರಾಮಸ್ವಾಮಿ ದೀಕ್ಷಿತರ ಅಷ್ಟೋತ್ತರ ಶತರಾಗ ತಾಳ ಮಾಲಿಕೆಯ ಕೆಲವು ಭಾಗಗಳನ್ನು ಪ್ರಸ್ತುತ ಪಡಿಸಿ ವಿದ್ವಜ್ಜನರ ಮನ್ನಣೆ ಪಡೆದಿದ್ದರು.

ಮೈಸೂರು ಹಾಗೂ ಬೆಂಗಳೂರು ಆಕಾಶವಾಣಿಯ ಮೂಲಕ ಇವರ ಗಾಯನ ಕಾರ್ಯಕ್ರಮಗಳು ಪ್ರಸಾರವಾಗಿವೆ. ‘ಸಂಗೀತ ಕಲಾ ಭೂಷಣ’ ಎಂಬ ಬಿರುದಿನಿಂದ ಮಾನ್ಯರಾಗಿದ್ದ ಶ್ರೀಯುತರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ನಾಟಕ ರಾಜ್ಯೋತ್ಸವ ಸಮಿತಿ, ಹೊಳೆ ನರಸೀಪುರ ತಾಲ್ಲೂಕು, ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರಿನ ಬ್ಯಾಂಕ್‌ ನೌಕರರ ಕನ್ನಡ ಸಂಘ, ತ್ಯಾಗರಾಜ ಸಂಗೀತ ಸಭಾ, ಗಮಕ ಕಲಾ ಪರಿಷತ್ತು ಮುಂತಾದ ಸಂಸ್ಥೆಗಳಿಂದಲೂ ಗೌರವ ಪಡೆದಿದ್ದರು.