ಜನನ : ೨೭-೫-೧೯೧೩ ರಂದು ಮಂಡ್ಯದಲ್ಲಿ

ಮನೆತನ : ಹೆಸರಾಂತ ಕೀರ್ತನಕಾರರ ಮನೆತನ. ಇವರ ಪೂರ್ವಿಕರು ಹರಿಕಥಾ ವಿದ್ವಾಂಸರಾಗಿದ್ದವರು. ತಂದೆ ಹೆಚ್. ಎನ್. ಸುಬ್ಬರಾಯರು ಮತ್ತು ತಾಯಿ ವೆಂಕಮ್ಮನವರು. ಮಗಳು ಗೀತ ಗೋಪಾಲ್ ಉತ್ತಮ ಕೊಳಲು ವಾದಕಿ.

ಗುರುಪರಂಪರೆ : ಮನೆಯಲ್ಲಿ ಹರಿಕಥಾ, ಪುರಾಣ ಶ್ರವಣಗಳ ವಾತಾವರಣ. ಹೀಗಾಗಿ ಚಿಕ್ಕಂದಿನಿಂದಲೇ ಹರಿಕಥೆ, ಗಮಕ ಕಲೆಗಳಲ್ಲಿ ಆಸಕ್ತಿ. ಮೈಸೂರಿನಲ್ಲಿ ಭಾರತ ಬಿಂದೂರಾಯರ ಹಾಗೂ ಕೃಷ್ಣಗಿರಿ ರಾಯರ ವಾಚನ ಕಾರ್ಯಕ್ರಮಗಳನ್ನು ಕೇಳಿ ಅವರ ಮಾರ್ಗದರ್ಶನದಲ್ಲಿ ಗಮಕ ಕಲೆಯನ್ನು ಅಭ್ಯಸಿಸಿದರು. ಕೀರ್ತನ =ಸಂಗೀತವನ್ನೂ ಅಭ್ಯಸಿಸಿದ್ದಾರೆ.

ಸಾಧನೆ : ಸುಮಾರು ೪೫ ವರ್ಷಗಳಿಗೂ ಮಿಕ್ಕಿ ಗಮಕ ಕಲಾ ಪ್ರಚಾರ ಮಾಡಿದವರು. ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಗಮಕ ಪರೀಕ್ಷೆಗಳ ಪರೀಕ್ಷಕರಾಗಿ ನಾಡಿನ ನಾನಾ ಭಾಗಗಳಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಹರಿಕಥಾ ಕಲೆಯಲ್ಲೂ ನಿಷ್ಣಾತರಾದ ಇವರು ಸುಮಾರು ೨೬ ಕಥಾ ಪ್ರಸಂಗಗಳನ್ನು ರಚಿಸಿ ಬೋಧಿಸಿರುತ್ತಾರೆ. ಮಂಡ್ಯದಲ್ಲಿ ತಮ್ಮದೇ ಆದ ಶ್ರೀ ವಿದ್ಯಾಗಪತಿ ಗಮಕ ಶಿಕ್ಷಣ ಶಾಲೆಯನ್ನು ಸ್ಥಾಪಿಸಿ ಅದರ ಪ್ರಾಂಶುಪಾಲರಾಗಿ ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿರುವುದೇ ಅಲ್ಲದೆ ನೂರಾರು ಗಮಕ ಹಾಗೂ ಕಥಾ ಕೀರ್ತನ ಕಾರ್ಯಕ್ರಮಗಳನ್ನು ನಡೆಸಿರುತ್ತಾರೆ. ಶಿಕ್ಷಣಾಲಯದ ವಾರ್ಷಿಕೋತ್ಸವ ಸಂದರ್ಭದಲ್ಲಿ ಗೀತಾ ಜಯಂತಿಯನ್ನು ಅದ್ದೂರಿಯಾಗಿ ನಡೆಸಿ ಅನೇಕ ವಿದ್ವಾಂಸರುಗಳಿಂದ ಮೆಚ್ಚುಗೆ ಗಳಿಸಿದ್ದಾರೆ. ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ಇವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ಮಂಡ್ಯದಲ್ಲಿ ನಡೆದ ಗಮಕ ಸಮ್ಮೆಳನದಲ್ಲಿನ ಗಮಕ ಗೋಷ್ಠಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡದ ಸುಪ್ರಸಿದ್ಧ ಕವಿಗಳ ಕವನಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ದಿ|| ಕೆಂಗಲ್ ಹನುಮಂತಯ್ಯನವರು ಕೈಗೊಂಡ ಸಂಸ್ಕೃತಿ ಪ್ರಚಾರ ಯೋಜನೆಯಡಿಯಲ್ಲಿ ಮಂಡ್ಯ ಜಿಲ್ಲೆಯ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿ ಗಮಕ ಪ್ರಚಾರ ಮಾಡಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ೧೯೮೩ ರಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ’ಗಮಕ ಕಲಾರತ್ನ’, ಚಿಕ್ಕಮಗಳೂರಿನ ಭಾರ್ಗವ ಪ್ರಕಾಶನದಿಂದ ’ಅಳಸಿಂಗ’ ಪ್ರಶಸ್ತಿ, ಕೀರ್ತನ ಕೇಸರಿ, ಕೀರ್ತನ ಕಲಾ ವಿಚಕ್ಷಣ ಮುಂತಾದ ಬಿರುದು ಗೌರವಗಳು ಸಂದಿವೆ. ಕರ್ನಾಟಕ ಗಮಕ ಕಲಾ ಪರಿಷತ್ತಿನ ನಾಲ್ಕನೆ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಇವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೪-೯೫ರ ಸಾಲಿನ ’ಕರ್ನಾಟಕ ಕಲಾತಿಲಕ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಂಡ್ಯದ ಜನತೆ ಇವರನ್ನು ಗೌರವಿಸಿ ಒಂದು ಸಂಸ್ಮರಣ ಸಂಚಿಕೆಯನ್ನು ಹೊರತಂದಿದ್ದಾರೆ.

ಇವರು ೨೦-೮-೨೦೦೧ ರಂದು ನಿಧನರಾದರು.