ಯಾವ ಪತ್ರಿಕೆ ತೆರೆದರೂ, ಯಾವ ಛಾನೆಲ್ ನೋಡಿದರೂ ಈ ಹಂದಿಜ್ವರದ್ದೇ ಸುದ್ದಿಯಲ್ಲ ಎಂದು ಬೇಸರಿಸಿದ್ದೀರಾ? ನಿಜ. ಈ ಹಿಂದೆ ಬೇರಾವ ಜ್ವರ, ಖಾಯಿಲೆಗೂ ಇಲ್ಲದಷ್ಟು ಪ್ರಚಾರ ಹಂದಿಜ್ವರಕ್ಕೆ ಸಿಗುತ್ತಿದೆ ಅನ್ನುವುದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು ಸುದ್ದಿ ಮಾಧ್ಯಮಗಳ ವ್ಯಾಪ್ತಿ ಹಾಗೂ ಎರಡನೆಯದು ಸಾರ್ವತ್ರಿಕ ಖಾಯಿಲೆ, ಸೋಂಕು ರೋಗಗಳ ನಿರ್ವಹಣೆಯ ವಿಷಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಅಸಾಧಾರಣ ಮುನ್ನಡೆ.

ಇದೀಗ ಎಲ್ಲರೂ ಉಸಿರುಗಟ್ಟಿ ನೋಡುವಷ್ಟು ಶೀ್ರವಾಗಿ ವ್ಯಾಪಿಸುತ್ತಿರುವ ಶೀತಜ್ವರಕ್ಕೆ (ಫ್ಲೂ) ಹೊಸ ಹೆಸರನ್ನು ಕೊಟ್ಟಿದ್ದಾರೆ. ಈ ಮೊದಲು ಅದನ್ನು ಹಂದಿಜ್ವರ ಅಥವಾ ಮೆಕ್ಸಿಕನ್ ಫ್ಲೂ ಎಂದು ಹೆಸರಿಸಲಾಗಿತ್ತು. ಆದರೆ ಇವೆರಡೂ ಯುಕ್ತವಲ್ಲ ಅನ್ನುವ ಅಭಿಪ್ರಾಯ ಬಂದದ್ದರಿಂದಲೇ ಹೆಸರನ್ನು ಬದಲಿಸಲಾಗಿದೆ. ಹಂದಿಜ್ವರ ಎನ್ನುವುದಕ್ಕೆ ಆಕ್ಷೇಪಣೆ ಬಂದದ್ದು ಆ ಪದ ಕೆಲವು ಧಾರ್ಮಿಕ ಪಂಥಗಳಿಗೆ ರುಚಿಸುವುದಿಲ್ಲ ಎನ್ನುವುದಕ್ಕೂ ಅಲ್ಲ, ಅಥವಾ ಕೋಟ್ಯಂತರ ಡಾಲರುಗಳಷ್ಟು ವಾರ್ಷಿಕ ವಹಿವಾಟಿರುವ ಹಂದಿಮಾಂಸದ ಕೈಗಾರಿಕೆಗೆ ಇದರಿಂದ ಪೆಟ್ಟು ಬೀಳುತ್ತದೆ ಎನ್ನುವ ಕಾರಣಕ್ಕೂ ಅಲ್ಲ. ವಾಸ್ತವವಾಗಿ ಹಂದಿಜ್ವರ ಅಥವಾ ಮೆಕ್ಸಿಕನ್ ಜ್ವರ ಎನ್ನುವ ಹೆಸರುಗಳಿಗೆ ಆಕ್ಷೇಪಣೆ ಮೊದಲು ಬಂದದ್ದು ವೈದ್ಯ ವಿಜ್ಞಾನಿಗಳಿಂದ, ವೈಜ್ಞಾನಿಕ ಕಾರಣಗಳಿಗಾಗಿ.

ಹೆಚ್1ಎನ್1 ಎನ್ನುವ ಜ್ವರಕ್ಕೆ ಮೂಲ ಒಂದು ವೈರಸ್. ಜ್ವರದ ಲಕ್ಷಣಗಳ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಸಾಮಾನ್ಯ ನೆಗಡಿಯಂತೆಯೇ ಮೂಗು ಸೋರುವುದರಿಂದ ಆರಂಭವಾಗುವ ಈ ಫ್ಲೂ ಉಲ್ಬಣಗೊಂಡಾಗ ಶ್ವಾಸಕೋಶವನ್ನು ತಾಕುತ್ತದೆ. ಉಸಿರುಗಟ್ಟಿಸಿ, ಸಾವುಂಟು ಮಾಡುತ್ತದೆ.  ಕಔಷಧಿ ತೆಗೆದುಕೊಂಡರೆ ಏಳು ದಿವಸ, ಇಲ್ಲದಿದ್ದರೆ ಒಂದು ವಾರಕಿ ಎಂದು ನೆಗಡಿಯ ಬಗ್ಗೆ ಸಾಮಾನ್ಯವಾಗಿ ಗೇಲಿ ಮಾಡುವುದುಂಟು. ಈ ಲಕ್ಷಣಗಳನ್ನೇ ಹೊತ್ತು ಬರುವ ಹೆಚ್1ಎನ್1 ಸೋಂಕು ರೋಗಿಯನ್ನು ಸಂಪೂರ್ಣ ನಿತ್ರಾಣನನ್ನಾಗಿ ಮಾಡಿಬಿಡುತ್ತದೆ.  ಮಳೆಗಾಲ ಬಂದಾಗ ಎಲ್ಲರನ್ನೂ ಕಾಡುವ ಶೀತಜ್ವರದ (ಫ್ಲೂ) ಸಂಬಂಧಿ ಇದು. ಆದರೆ ಒಂದು ವ್ಯತ್ಯಾಸ. ಶೀತಜ್ವರ ಬಂದಾಗ ಅದು ಸಾಂಕ್ರಾಮಿಕ ಎನ್ನುವಂತೆ ಹರಡುವುದಿಲ್ಲ. ಈ ಹೆಚ್1ಎನ್1 ಹಾಗಿಲ್ಲ. ಮೆಕ್ಸಿಕೋದ ರಾಜಧಾನಿ ಮೆಕ್ಸಿಕೋನಗರವೊಂದರಲ್ಲೇ ಸಾವಿರಾರು ಜನರನ್ನು ಈ ಜ್ವರ ತಾಕಿರುವ ಶಂಕೆ ಇದೆ.

ಮೆಕ್ಸಿಕೋನಗರದಲ್ಲಿ ಸಾಂಕ್ರಾಮಿಕ ರೋಗವಾಗಿ ಕಾಣಿಸಿಕೊಂಡದ್ದರಿಂದಲೇ ಇದನ್ನು ಮೆಕ್ಸಿಕೊಜ್ವರ ಎಂದು ಹೆಸರಿಸಿದ್ದರು. ಆದರೆ ರೋಗಾಣು ಮೊದಲು ಕಾಣಿಸಿಕೊಂಡ ಸ್ಥಳದ ಹೆಸರನ್ನು ಆಯಾ ಜ್ವರಕ್ಕೆ ಇಡುವುದು ಪದ್ಧತಿ. ಉದಾಹರಣೆಗೆ, ಜಪಾನಿ ಮಿದುಳುಜ್ವರ ಮತ್ತು ಕ್ಯಾಸನೂರು ಕಾಡುಜ್ವರ(ಕೆಎಫ್ಡಿ). ಆದರೆ ಈ ಜ್ವರದ ವೈರಸ್ನ ಮೊದಲ ಅವತರಣ ಮೆಕ್ಸಿಕೋದಲ್ಲಿಯೇ ಆಯಿತು ಎನ್ನುವುದಕ್ಕೆ ಪುರಾವೆಗಳಿಲ್ಲ.  ಈ ವೈರಸ್ ಇದಕ್ಕೆ ಮುನ್ನವೇ ಏಷ್ಯಾದ ಕೆಲವು ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಹೀಗಾಗಿ ಈ ಜ್ವರಕ್ಕೆ ಮೆಕ್ಸಿಕೋಜ್ವರ ಎಂದು ಹೆಸರಿಟ್ಟದ್ದು ಮೆಕ್ಸಿಕನ್ನರನ್ನು ಉರಿಸಿದೆ.

ಹಂದಿಜ್ವರ ಎನ್ನುವ ಹೆಸರು ಏಕೆ ಬಂತೆನ್ನುವ ಕುತೂಹಲವಿದೆಯೇ? ಹೆಚ್1ಎನ್1 ವೈರಸ್ನ ದೇಹದ ಕೆಲವು ತುಣುಕುಗಳು ಹಂದಿಗಳಲ್ಲಿ ಫ್ಲೂ ತರುವ ವೈರಸ್ನ್ನು ಹೋಲುತ್ತವೆ. ಹೀಗಾಗಿ ಮೊದಲ ನೋಟಕ್ಕೆ ಇದನ್ನು ಹಂದಿಜ್ವರದ ವೈರಸ್ ಎಂದೇ ಭಾವಿಸಲಾಯಿತು. ಆದರೆ ಕೂಲಂಕಷವಾಗಿ ಪರೀಕ್ಷಿಸಿದ ಅನಂತರ ಅದು ಮನುಷ್ಯರಲ್ಲಿ ಸಾಮಾನ್ಯವಾಗಿ ಫ್ಲೂ ಉಂಟುಮಾಡುವ ಇನಫ್ಲುಯೆಂಜಾ-ಎ ವೈರಸ್ನ ಒಂದು ಬಗೆ ಇರಬಹುದೆಂದು ಅನುಮಾನಿಸಲಾಗಿದೆ.

ಫ್ಲೂ ವೈರಸ್ನ್ನು ಅದರ ಹೊರಮೈ ಕವಚದಲ್ಲಿರುವ ಎರಡು ವಿಶಿಷ್ಟ ಪ್ರೊಟೀನುಗಳ ಮೂಲಕ ಗುರುತಿಸಬಹುದು. ಇವೇ ಹೀಮಗ್ಲುಟಿನಿನ್ (ಹೆಚ್) ಮತ್ತು ನ್ಯೂರಾಮಿನಿಡೇಸ್ (ಎನ್) ಪ್ರೋಟೀನುಗಳು. ಈ ಪ್ರೊಟೀನುಗಳು ಒಂದೊಂದರಲ್ಲೂ ಸಾಕಷ್ಟು ವೈವಿಧ್ಯವಿದೆ. ವಿವಿಧ ಪ್ರಾಣಿಗಳನ್ನು ಕಾಡುವ ಇನ್ಫ್ಲುಯೆಂಜಾ ವೈರಸ್ಗಳಲ್ಲಿ ಹದಿನಾರು ಬಗೆಯ ಹೆಚ್ ಪ್ರೊಟೀನನ್ನು ಗುರುತಿಸಲಾಗಿದೆ. ಇವುಗಳಲ್ಲಿ ಹೆಚ್1 ಎನ್ನುವ ಪ್ರೊಟೀನಷ್ಟೆ ಮಾನವನನ್ನು ಕಾಡುವ ವೈರಸ್ನಲ್ಲಿ ಕಾಣುತ್ತದೆ. ಅಪರೂಪಕ್ಕೆ ಹೆಚ್3 ವೈರಸ್ ಕೂಡ ಕಾಣುವುದುಂಟು. ಇತ್ತೀಚೆಗೆ ಮಾನವರಲ್ಲಿ ಕಾಣಿಸಿಕೊಂಡ ಕೋಳಿಜ್ವರದ ವೈರಸ್ನಲ್ಲಿ ಇರುವುದು ಕೋಳಿಗಳನ್ನು ಕಾಡುವ ಫ್ಲೂ ವೈರಸ್ನಲ್ಲಿರುವ ಹೆಚ್5 ಬಗೆಯ ಪ್ರೊಟೀನು. ಆದ್ದರಿಂದಲೇ ಅದಕ್ಕೆ ಕೋಳಿಜ್ವರ ಎಂದು ಹೆಸರು. ಕೋಳಿಗಳಲ್ಲಿರುವ ವೈರಸ್ ಮಾನವನಿಗೆ ದಾಟಿ ಬಂದಿರಬಹುದೆಂಬ ಶಂಕೆಗೂ ಇದೇ ಕಾರಣ.

ಇದೀಗ ಹೆಚ್1ಎನ್1 ಜ್ವರ ಉಂಟುಮಾಡುವ ವೈರಸ್ನ್ನು ಹಂದಿಜ್ವರ ಎಂದು ಕರೆಯಬಾರದೆನ್ನುವ ಪಶುವೈದ್ಯರ ಆಕ್ಷೇಪಣೆಗೆ ಇದೇ ಕಾರಣ. ಹಂದಿಗಳಲ್ಲಿ ಫ್ಲೂ ಉಂಟು ಮಾಡುವ ವೈರಸ್ನಲ್ಲಿ ಹೆಚ್1ಎನ್1 ಪ್ರೊಟೀನುಗಳು ಇರುವುದಿಲ್ಲ. ಅವುಗಳು ಏನಿದ್ದರೂ ಮನುಷ್ಯರ ಫ್ಲೂ ವೈರಸ್ಗಳಲ್ಲಷ್ಟೆ ಇರುತ್ತವೆ. ಹಂದಿಗಳಲ್ಲಿ ಉಂಟಾಗುವ ಫ್ಲೂ ಅಧ್ಯಯನ ಮಾಡಿದವರ ಪ್ರಕಾರ ಕಳೆದ ನೂರು ವರ್ಷಗಳಲ್ಲಿ ಹಂದಿ ಫ್ಲೂನಿಂದಾಗಿ ಮನುಷ್ಯರಲ್ಲಿ ಸೋಂಕುಂಟಾದ ಉದಾಹರಣೆಗಳು ಇಲ್ಲವೇ ಇಲ್ಲ. ಹೀಗಾಗಿ ಹಂದಿಯಿಂದ ಈ ವೈರಸ್ ಬಂದಿದೆ ಎನ್ನುವುದನ್ನು ನಂಬಲಾಗುವುದಿಲ್ಲ. ಆದ್ದರಿಂದ ಇದನ್ನು ಹಂದಿಜ್ವರ ಎನ್ನಬಾರದು ಎನ್ನುವುದು ಅವರ ತರ್ಕ.

ಹೆಸರಿನಲ್ಲೇನಿದೆ ಬಿಡಿ! ಒಟ್ಟಾರೆ ಇದೊಂದು ಹೊಸ ಮಾರಿ ಅಲ್ಲವೇ? ಆದರೂ ಇಲ್ಲೊಂದು ವಿಶೇಷವಿದೆ. ಇನ್ಫ್ಲುಯೆಂಜಾ-ಎ ಅಪರೂಪದ ಖಾಯಿಲೆಯೇನಲ್ಲ. ಪ್ರತಿವರ್ಷವೂ ಮಳೆಗಾಲದಲ್ಲಿ ಇದು ಬಹಳಷ್ಟು ಜನರ ಮೂಗಿನಿಂದ ನೀರಿಳಿಸುತ್ತದೆ. ಅಮೆರಿಕದಂತಹ ಸಮಶೀತೋಷ್ಣ ಪ್ರದೇಶಗಳಲ್ಲಿ ಛಳಿಗಾಲದ ಸೋಂಕು ಎಂದೇ ಇದು ಪ್ರಖ್ಯಾತಿ. ವಾರ್ಷಿಕ ಸುಮಾರು 250000 ಜನರನ್ನು ಇದು ಕೊಲ್ಲುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಈ ಸಂಖ್ಯೆಗೆ ಹೋಲಿಸಿದಾಗ ಈಗ ಕಾಣಿಸಿಕೊಂಡಿರುವ ಹೊಸ ವೈರಸ್ನ ಹೊಡೆದ ಕಡಿಮೆ ಎಂದೇ ಹೇಳಬೇಕು. ಸದ್ಯಕ್ಕೆ ಸುಮಾರು 200 ಜನರನ್ನು ಈ ಹೊಸ ವೈರಸ್ ಬಲಿ ತೆಗೆದುಕೊಂಡಿದೆ.

ಇನ್ಫ್ಲುಯೆಂಜಾ-ಎ ಸೋಂಕಿದಾಗ ಬಹಳಷ್ಟು ಜನರನ್ನು ಒಂದು ವಾರಕಾಲ ಹೈರಾಣಾಗಿಸಿ ಮರೆಯಾಗುತ್ತದೆ.  ಮಕ್ಕಳು ಹಾಗೂ ಮುದುಕರನ್ನೇ ಇದು ಕಾಡುವುದು ಹೆಚ್ಚು. ಏಕೆಂದರೆ ಸಾಮಾನ್ಯವಾಗಿ ಅವರ ರೋಗನಿರೋಧಕ ಸಾಮಥ್ರ್ಯ ಕಡಿಮೆ. ಆದರೆ ಮೆಕ್ಸಿಕೋಸಿಟಿಯಲ್ಲಿ ಕಾಣಿಸಿಕೊಂಡ ಜ್ವರ ಮಕ್ಕಳು, ಮುದುಕರಿಗಿಂತಲೂ, ಪ್ರೌಢರಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿರುವುದು ಒಂದು ವಿಶೇಷ. ಆದ್ದರಿಂದಲೇ ಇದೊಂದು ಹೊಸ ವೈರಸ್ ತಳಿ ಇರಬೇಕು ಎನ್ನುವ ಗುಮಾನಿ. ಇನ್ಫ್ಲುಯೆಂಜಾ ವೈರಸ್ ರೂಪ ಬದಲಿಸಿಕೊಳ್ಳುವುದು ಸಾಮಾನ್ಯ. ಆದರೆ ಹೊಸದಾಗಿರುವುದರಿಂದ ಶೀ್ರವಾಗಿ ಹರಡಬಹುದು ಎನ್ನುವ ಆತಂಕ. ಈ ಆತಂಕ ಸುಳ್ಳಾಗಲೂಬಹುದು. ಆದರೆ ಹೊಸ ಮಾರಿಯನ್ನು ಹತ್ತಿಕ್ಕುವುದಕ್ಕಿಂತಲೂ, ಹರಡದಂತೆ ಕಾಯ್ದುಕೊಳ್ಳುವುದು ಉತ್ತಮ ಉಪಾಯ ಎನಿಸಿದ್ದರಿಂದಲೇ ವಿಶ್ವ ಆರೋಗ್ಯ ಸಂಸ್ಥೆ ಪ್ರಪಂಚದಾದ್ಯಂತ ಇದರ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

ಈ ಜ್ವರದ ಪ್ರಥಮ ರೋಗಿಯ ತಪಾಸಣೆ ನಡೆದಿದ್ದು ಏಪ್ರಿಲ್ 21ರಂದು. ಹತ್ತೇ ದಿನಗಳೊಳಗೆ ಈ ವೈರಸ್ನ ಬಗ್ಗೆ ಮಾಹಿತಿ, ಅದನ್ನು ತಡೆಯುವ ಕ್ರಮ, ಅದರ ಸ್ವರೂಪ ಮುಂತಾದ ಮಹತ್ವದ ಮಾಹಿತಿ ಪ್ರಪಂಚದಾದ್ಯಂತ ದೊರೆಯುವಂತಾಗಿದೆ. ಅತ್ಯಾಧುನಿಕ ತಂತ್ರಗಳ ನೆರವಿರುವುದರಿಂದಲೇ ಇನ್ಫ್ಲುಯೆಂಜಾ-ಎಯ ಹೊಸ ತಳಿ ಎಂದೂ, ಹಂದಿಜ್ವರಕ್ಕೂ ಈ ಖಾಯಿಲೆಗೂ ನಂಟಿಲ್ಲವೆನ್ನುವುದನ್ನೂ ತಿಳಿಯಲು ಸಾಧ್ಯವಾಯಿತು. ಇದು ವೈದ್ಯಕೀಯ ಸಂಶೋಧನೆಯ ಚುರುಕಿಗೂ, ಇಂಟರ್ನೆಟ್ ಮತ್ತು ಟೀವಿ ಮಾಧ್ಯಮಗಳ ವ್ಯಾಪ್ತಿಗೂ ಉತ್ತಮ ಉದಾಹರಣೆ.