೧೧೯. ನಮ್ಮ ಮುಜರಿ

 

ಸಲಾಮಂದರ ಗುಲಾಮನ್ನಬ್ಯಾಡ್ರಿ | ಸಣ್ಣ ದೊಡ್ಡವರಿಗೆ ನಮ್ಮ ಮುಜರಿ
ಸಣ್ಣ ದೊಡ್ಡವರಿಗೆ ನಮ್ಮ ಮುಜರಿ | ಗುರು ಹಿರಿಯರಿಗೆ ಮೇಲ್ಮುಜರಿ
ಅನ್ಯಾಯ ಮಾಡಿದರ ಪುಣ್ಯೆ ಬರಾಕಿಲ್ಲ | ಹೆಣ್ಣು ಮಕ್ಕಳಿಗೆ ನಮ್ಮ ಮುಜರಿ
ಹೆಣ್ಣು ಮಕ್ಕಳಿಗೆ ನಮ್ಮ ಮುಜರಿ | ತಾಯಿ ತಂದಿಗೆ ಮೇಲ್ಮುಜರಿ
ಇರುವಿ ಎಂಬತ್ತು ಕೋಟಿ ಜೀವರಾಶಿಗೆ | ಅನ್ನ ಹಾಕು ಬಸವಗ ನಮ್ಮ ಮುಜರಿ
ಅನ್ನ ಹಾಕು ಬಸವಗ ನಮ್ಮ ಮುಜರಿ | ಯೋಗಿ ಭೋಗಿಗೆ ಮೇಲ್ಮುಜರಿ
ಕಟ್ಟಿಮ್ಯಾಲೆ ಕುಂತಗೊಂಡು ಹಂಚೀಕಿ ಹಾಕ್ತೀರಿ | ಮಸೂತಿಗೆ ಹೋಗೂನು ನಡಿರಿ
ಮಸೂತಿಗೆ ಹೋಗೂನು ನಡಿರಿ | ಮಕ್ತುಮ್ಹುಸೇನಿಗೆ ನಮ್ಮ ಮುಜರಿ
ಸಲಾಮಂದರ ಗುಲಾಮನ್ನಬ್ಯಾಡ್ರಿ ಸಣ್ಣ ದೊಡ್ಡವರಿಗೆ ನಮ್ಮ ಮುಜರಿ

೧೨೦. ಬಂತೋ ಮೊಹರಂ ಹೊಡೆದಂಗ ಬಾಣಾ

ಬಂತೋ ಮೊಹರಂ ಹೊಡದಂಗ ಬಾಣಾ | ಕಟ್ಟಬೇಕೋ ಬಿರದಾ
ಕಟ್ಟಬೇಕೋ ಬಿರುದಾ ವೈರಿಯ ಕಳಿಸಬೇಕೋ ಮುರದಾ
ತಲಿಮ್ಯಾಲ ನೀವು ಕರಾಪ ಬಿಟಗೊಂಡ ಮಾಡತೀರಿ ಡೌಲಾ
ಮಾಡತಿರಿ ಡೌಲಾ ನಿಮಗ ಹೆಂಗಸೂರು ಅಂಜೂದಿಲ್ಲಾ
ಕೆಂಪು ನಿಶಾನಿ ಬಿದರಿನ ಕಾಳಿ ಬಂತ ನಮ್ಮ ಟೋಳಿ
ಬಂತ ನಮ್ಮ ಟೋಳಿ ನೀ ಎಂದ ಹಾಡಿದ್ಯೋ ಮೂಳಿ
ಹೆಂಗಸರ ಮಾತಕೇಳಿ ಕೇಳಿ ಜಗಳಕ ಬರತೀರಿ
ಜಗಳಕ ಬರತೀರಿ ಒಮ್ಮೆ ದಕ್ಕಿ ತಿಂತೀರಿ ||
ನಿಮ್ಮ ಮ್ಯಾಳದಾಗ ಯಾಂವ ಬಂಟಾ ಅದಾನೋ ಯಪ್ಪಾ
ಅವನ ತಲಿಯ ಮ್ಯಾಲೆ ಹೊರಸೇವಿ ರೊಟ್ಟಿಯ ಗಂಟಾ
ಹಿಂದಕ ಸರದರ ಮುಂದಕ ಬಂದರ ತಿಳಿಯಾಕಿಲ್ಲಪ್ಪಾ
ಡಗ್ಗಾತಾಳ ಕಸಗೊಂಡ ಕಳಸೇವಿ ಓಡಿಹ್ವಾದಿ ಯಪ್ಪಾ ||

೧೨೧. ಮಸೂತಿ ಓಣಿ ಮ್ಯಾಳಾ

ಅಲಿಹಬ್ಬದೊಳು ಹುಲಿ ಹಾರಿದಂಗ ಮಸೂತಿ ಓಣಿಮ್ಯಾಳಾ
ಸಿಡಿಮದ್ದು ಸಿಡಿದಾಂಗ ಸಪ್ಪಳಾ ನಮಗ ಹಾದಿಬಿಡರಿ ಏಳುಮೊಳಾ
ನಮಗ ಹಾದಿಬಿಡರಿ ಏಳುಮೊಳಾ ಬಂತೋ ನಮ್ಮ ಮ್ಯಾಳಾ
ಹುಲಿಯ ಬಣ್ಣಕ ಹೋಗಿ ನರಿಯ ಮೈಯಾನ ಸುಟ್ಟಾವ ತುಪ್ಪಳಾ
ಸುಟ್ಟಾವ ತುಪ್ಪಳಾ ನರಿಯು ಆಗೇತಿ ನಿಚ್ಚಳಾ
ಇದರಂತೆ ಬರುವುದು ಮೂರು ಮೊಳಾ ಬಂತೋ ನಮ್ಮ ಮ್ಯಾಳಾ
ಬಾಳ ಜಿಗದಾಡಬ್ಯಾಡ ಮೂಗಿನೊಳಗಿಂದ ಬಂದಿತೋ ಸುಂಬಳಾ
ಬಂದಿತೋ ಸುಂಬಳಾ ಕಣ್ಣೀರು  ಹರಿದಾವೋ ದಳದಳಾ
ಇದರಂತೆ ಬರುವುದು ಮೂರು ಮೂಳಾ ಬಂತೋ ನಮ್ಮ ಮ್ಯಾಳಾ

೧೨೨. ಹೆಜ್ಜಿ ಮ್ಯಾಳಾ

ನೋಡ ನೋಡ ನನ್ನ ವಸ್ತಾದಿ ಎಂಥಾ ಚೆಲುವಾ
ತಿರುಗಿ ನೋಡಿದರ ಮುರುಗಿ ಹಾಕತಾನ ಮುರಗಿ ಸುಟ್ಟ ಕೈಯಾಗ ಹಿಡಿದಾ
ಬಾಡ್ಯಾ ಮ್ಯಾಳಾ ಕಟ್ಯಾನಲ್ಲಾ ತಿನ್ನಾಕ ಇಂವಗ ಕೂಳ ಇಲ್ಲಾ
ಜಿನಗ ದೋತರ ಉಟ್ಟಾನಲ್ಲಾ ಕೇಸರಿ ಶರ್ಟು ಹಾಕ್ಯಾನಲ್ಲಾ
ತಾಳ ಬಿಟ್ಟು ಪದಾ ಹಾಡತಾನಲ್ಲಾ ಹರಕರ ಮ್ಯಾಳ ಕೂಡಿಸ್ಯಾನಲ್ಲಾ
ಇಂಥ ಪದಗಳು ನಮಕಡೆ ಬಾಳ ಒಯ್ದರ ಒಯ್ಯೋ ಕೈಗಡ ಮೊದಲಾ
ವಸ್ತಾದಿ ಗುಂಡಪ್ಪಣ್ಣನ ಮ್ಯಾಳಾ ಅಗಸಿ ಓಣ್ಯಾಗ ಇರತೇವಿ ಮೊದಲಾ

೧೨೩. ಚಿಕ್ಕ ಮಕ್ಕಳ ಚಿಣಿಕೋಲಾಟ

ಚಿಕ್ಕಮಕ್ಕಳ ಚಿಣಿಕೋಲಾಟ ಚಿಗರಿ ಜಿಗಿದಾಂಗ
ಗೋದಿಯ ಸಸಿಯೊಳು ನಲಗಮಾಡಿ ನವಲು ಕುಣದಾಂಗ
ಕೇಳೋ ಸೂರಾ ಪ್ಯಾರಲ ಗಿಡದಾಗ ಗಿಳಿಯು ಕೂಗಿದಾಂಗ
ಗುಂಪು ವನದಾಗ ಸಂಪು ಕೇಳೋ ನೀನು ಕೋಗಿಲಿ ಸೊರದಾಂಗ
ಬಾಳಿ ವನದಾಗ ಮೊಲಾ ಮೇಯುತಿತ್ತು  ಬೆಳಗಿನ ಜಾವದಾಗ
ಮೊಲದ ವಾಸನಿಗೆ ನಾಯಿ ಬಂದಿತೋ ಸಿಗಲಿಲ್ಲ ಆವಾಗ
ಪಲ್ಲ ಪಲ್ಲವಿ ಕೂಡಿಸಿ ಹಾಡೋ ಕೂಡಿದ ಸಭೆದಾಗ
ಹಾಡದಿದ್ದರ ಮಾರಿಗೆ ಹೊಡದೇವೋ ಹೋಗೋ ನೀನೀಗ ||

೧೨೪. ಕಪ್ಪಿ ಸಾಯತಾವೋ ಮರಮರಗಿ

ಊರ ಮುಂದಿನ ಕಾಳವ್ವನ ಕೆರಿಯಾಗ ಕಪ್ಪಿ ಸಾಯತಾವೋ ಮರಮರಗಿ
ಕಪ್ಪಿ ಸಾಯತಾವೋ ಮರಮರಗಿ ನಿನಗೇನ ತಿಳಿದೀತೋ ಕಸಬರಗಿ
ಹತ್ತು ಹುಡುಗರು ನಾವು ಜತ್ತೀಲೆ ಬರುವಾಗ ತಿರಗಿಸಬ್ಯಾಡೋ ಮುಕಳಿಮಾರಿ
ತಿರುಗಿಸಬ್ಯಾಡೋ ಮಕಳಿಮಾರಿ ತ್ವಾಟಿ ಹಿರದೇನೋ ದುಬ್ಬದ ಹುರಿ
ಜರದ ಸೆಲ್ಲೇವ ಮೇಲೆ ತಂದ ಹಾಸತೀರಿ ನೀವು ಹಳೇ ಕಂಬಳಿ ಕೋರಿ
ನೀವು ಹಳೇ ಕಂಬಳಿ ಕೋರಿ ಎಂದಿಗೆ ಆದೀರೋ ನಮ್ಮ ಸರಿ ||

೧೨೫. ಗುಲ್ಲ ಕೊಟ್ಟೇವಿ ಗಲ್ಲದ ಮ್ಯಾಲ

ಹೆಜ್ಜಿ ಆಡೂದು ಹೀಂಗಲ್ಲ ತಮ್ಮಾ ಗೆಜ್ಜೀಲೆ ಹೊಡದರ ಬಿಟ್ಟಿತೋ ದಿಮ್ಮಾ
ಗೆಜ್ಜೀಲೆ ಹೊಡದರ ಬಿಟ್ಟೀತೋ ದಿಮ್ಮಾ ಕರಿಲಾಕ ಬಂದಾಳೋ ಹೋಗೋ ನಿಮ್ಮಮ್ಮಾ
ಥಕತೋಡಿ ಮಾನಗೇಡಿ ನಿನಗೇನಂದಿಲ್ಲಾ ಅಲ್ಲಂದರ ಗುಲ್ಲ ಕೊಟ್ಟೇವಿ ಗಲ್ಲದ ಮ್ಯಾಲಾ ||

೧೨೬. ಮಂದಿಗೆ ಹೇಳತೀರಿ ಆಚಾರ

ಸವಾಲ ಹೇಳತೇನಿ ಹಾಳರಟಿ  ನಿಮಗೇನ ತಿಳುವತೈತಿ ಮುಲಗೊಟ್ಟಿ
ಹಾರಿ ಹೋತೋ ನಿನ್ನ ಗುಳಬುಟ್ಟಿ ನಮ್ಮ ಜಪಾಟ್ಯಾಗ ಸಿಕ್ಕು ಬಾಯ್ಬಿಟ್ಟಿ
ತತ್ವ ವಿಚಾರ ಬಾಯಿಲಿ ಹೇಳತೀರಿ ನೀವು ನಡೆ ನುಡಿ ಇಲ್ಲದೆ ಕೆಡತೀರಿ
ಮಂದಿಗೆ ಹೇಳತೀರಿ ಆಚಾರಾ ಕೆಟ್ಟ ಗುಣ ಇಟ್ಟ ಮಾಡತೀರಿ ಕಾರಬಾರಾ
ಹೆಜ್ಜಿಗೊಮ್ಮೆ ಹರಹರಾ ನಿಮಗ್ಹ್ಯಾಂಗ ಒಲಿದಾನ ಶಂಕರಾ ||

೧೨೭. ನೀವೆಂತ ಗಂಡಸೂರಾ

ಗೆಳ್ಯಾಗ ನಮಗ ಬೀಳಲಿ ಸವಾಲ ಬ್ಯಾಡೆನ್ನುವರಾರು
ಬ್ಯಾಡೆನ್ನುವರಾರು ನಮ್ಮ ಕೂಡ ಮಾಡಬ್ಯಾಡ ತಕರಾರ
ಮೂರ‍್ನಾಲ್ಕು ಪದಗಳ ಮುರಕಾ ಮಾಡಿ ಹಾಡತೀರಿ ನೀವೆಂತ ಗಂಡಸೂರಾ
ನೀವೆಂತ ಗಂಡಸೂರಾ ನಮ್ಮ ಕೂಡ ಮಾಡಬ್ಯಾಡ ತಕರಾರು

೧೨೮. ಕಾಲೊಳಗೆ ಗೆಜ್ಜಿ ಗಿಲ್ ಗಿಲ್

ಆಡಿರಿ ಅಲಾವಿ ಕೂಡಿರಿ ಮ್ಯಾಳದಿ ಕಾಲೊಳಗೆ ಗೆಜ್ಜಿ ಗಿಲ್ ಗಿಲ್
ಕಾಲೊಳಗೆ ಗೆಜ್ಜಿ ಗಿಲ್ ಗಿಲ್ ಮಾಡಬ್ಯಾಡರಿ ನೀವು ಗುಲ್ ಗುಲ್
ಮಹಾ ಮೊಹರಂ ಚಂದ್ರ ನೋಡಿ ಸಬಾ ಧೀನ್ ಧೀನ್
ತಿಳಿ ಹೊಳಿ ಶರಣರ ಸ್ತುತಿ ಆಗಿ ಹೋತೋ ಕರ್ಬಲದಿಗತಿ
ಕರ್ಬಲದೊಳಗ ಗರ್ದಿ ಸಭಾ ಧೀನ್ ಧೀನ್

೧೨೯. ಕೊಡತಾಳ ಉಂಡಿ
ಟಕ್ಕ ನಕ್ಕು ಟಕ್ಕ ಟಾಕಿ ನಮ್ಮ ಹುಡುಗರನ ಕೆಡಸಿರಿ ಜ್ವಾಕಿ
ಕೈಯಾಗ ಎಲಿ ಕಿವಿಯಾಗ ವಾಲಿ ಒಳ್ಳೊಳ್ಳೆ ಹುಡುಗರಿಗೆ ಹಾಕತಾಳ ಮಾಲಿ
ಕೈಯಾಗ ಸುಣ್ಣ ಮಾಡತಾಳ ಬಣ್ಣ ಒಳ್ಳೊಳ್ಳೆ ಹುಡುಗರಿಗೆ ಹಚ್ಚತಾಳ ಬಣ್ಣ
ತಲಿಮ್ಯಾಲ ಹೊರಿ ಕೈಯಾಗ ಕಟಗಿ ಒಳ್ಳೊಳ್ಳೆ ಹುಡುಗರಿಗೆ ಹೊಡಿತಾಳ ಲಟಗಿ
ಉಡೇದಾಗ ಪುಂಡಿ ಕೈಯಾಗ ಗಿಂಡಿ ಒಳ್ಳೊಳ್ಳೆ ಹುಡುಗರಿಗೆ ಕೊಡತಾಳ ಉಂಡಿ

೧೩೦. ಬಾರಲೆ ಮುಂದಕ್ಕ

ಹಾಳಗ್ವಾಡಿಯ ಮ್ಯಾಲೆ ಹಾಲಕ್ಕಿ ನುಡಿದಂಗ ನುಡಿದಲೆ ಇವತ್ತ
ನುಡಿದಲೆ ಇವತ್ತ ನೀನು ಬಾರಲೆ ಮುಂದಕ್ಕ
ಹತ್ತು ಜನರು ಕೂಡ್ಯಾರೋ ತಮ್ಮಾ ಇಂದಿನ ಸಬಾಕ
ಇಂದಿನ ಸಭಾಕ ತಮ್ಮಾ ತಿಳಿಯಲಿ ನಿನ್ನ ಬೆಳಕ
ವಹಿ ಇಲ್ಲದ ಹಾಡೋ ತಮ್ಮಾ ಬೆಳ್ಳ ಬೆಳತನಕ
ಬೆಳ್ಳ ಬೆಳತನಕ ತಿಳಿಯಲಿ ನಮ್ಮ ನಿಮ್ಮ ಬೆಳಕ
ಇದ್ದಲಿ ಕುಂತು ಮಸಿಗೆ ಬುದ್ದಿ ಹೇಳಿದಂಗ ನಿಮ್ಮ ತರಕ
ರಠ ಈಕ ಗ ಇಞ ಣ ಕಲಿಯೋ ಮುಂದಕ ||

೧೩೧. ಬಿಲ್ಲಿಗೆ ಸೇರ ಕೇರ

ಯಾಕೋ ಮುಡದಾರ ನನ್ನ ಕೂಡ ಮಾಡತೀದಿ ತಕರಾರ
ಕಿವಿ ಗರಗರ ತಿರುವಿ ಒಗದೇವಿ ಪೂರ
ಮಲ್ಲಾಡ ದೂರ ಅಲ್ಲಿ ಬಿಲ್ಲಿಗೆ ಸೇರ ಕೇರ
ಬಿಲ್ಲಿಗೆ ಸೇರ ಕೇರ ಹುಡಿ ನೋಡಿ ಬಡದೇವರಿ ಪೂರ

೧೩೨. ಗೆಜ್ಜಿ ಕಟ್ಟಿ ಬಂದೇವಿ

ಗೆಜ್ಜಿ ಕಟ್ಟಿ ಬಂದೇವಿ ತಮ್ಮಾ ಹೆಜ್ಜಿಯಾಡುದಕ
ಹೆಜ್ಜಿಯಾಡುದಕ ನಿಮ್ಮನ್ನ ಕಂಡ ಕೇಳುದಕ
ಹಾಡೂದಂತು ಹಾಡತಾವ ಗೊತ್ತ ಇಲ್ಲಿವಕ
ತಾಳ ಜಾತಿ ಕೇಳಿದರ ಹೋಗತಾವ ಸುಮ್ಮಕ

೧೩೩. ಆಡೂನು ಅಲಾವಿ

ಕೂಡಿದ ಮ್ಯಾಳ ಆಡೂನು ಅಲಾವಿ ತಾಳದೊಳಗ ಹೆಜ್ಜಿ ಚೆಲ್ ಚೆಲ್
ಮಾಡಬ್ಯಾಡರಿ ನೀವು ಗುಲ್ ಗುಲ್ ಕಾಲೊಳಗ ಗೆಜ್ಜಿ ಸಪ್ಪಳ ಗಿಲ್ ಗಿಲ್
ದೇಶದೊಳಗ ನಮ್ಮ ಕಾಸ ಬಂಡಿವಾಡ ಈಶ ಮಾರುತೇಶನ ಕೂಡ ಕೂಡ
ಹಿಂತ ಪದಗಳ ವರ್ಣಿಸಿ ಹಾಡ ಹಾಡ ಹಾಡದಿದ್ದರ ಬಗ್ಗಿಸಿ ಬಡದೇವಿ ನೋಡ ನೋಡ

೧೩೪. ನಾಚ ಮಾಡತಿದಿ ತತ್ತಗಿರಿಗಿರಿ

ಪಾತರದಾಕಿಯಾಂಗ ನಾಚಮಾಡತಿದಿ ತತ್ತಗಿರಿಗಿರಿ ತತ್ತಗಿರಿಗಿರಿ ತೋಂ ಶರಣಾ
ಹೊಂಟೈತಿ ಸವಾರಿ ನೋಡಲಿಲ್ಲಾ ಜನಾ ರಮ್‌ಜಾನ್ ರಮ್‌ಜಾನ್ ಧಮ್ ಶರಣಾ
ಮ್ಯಾಳಕಟ್ಟಿ ನೀನಾ ಪದಾ ಹಾಡತೀದಿ ತಾಳ ನುಡಿಸೋ ತಮ್ಮಾ ಜಂಜಂಜಣ್ಣಾ
ಪದಾ ಹಾಡದಿದ್ದರ ಕತಿ ಮಾಡಿ ಹೇಳತೇನಿ ಮನಿಗೆ ಒಗಿ ನಿಮ್ಮ ಪಯಣಾ

೧೩೫. ಹವೀಜ ಮಾರಿ

ಹೌದಲೇ ಹವೀಜಮಾರಿ ಹೌಹಾರಿದ ಕೋತಂಬರಿ
ಪ್ಯಾಟ್ಯಾಗ ಹಚ್ಚಿಸಿಕೊಂಡಿ ಪಾವು ಸೇರ ತೂಗಿಸಿಕೊಂಡಿ ಅಚ್ಚೇರ
ಚಪ್ಪರ ಹಿಂದಲೆ ಬಿತ್ತಿಸಿಕೊಂಡಿ ಹೌದಲೆ ಟಾಣೆ ಟುಣೆ
ಟೊಮೆಟೋ ಹಣ್ಣು ಹಾಕಿದ ಹದಿನಾಲ್ಕು ದಿವಸಕ್ಕ ಕೀಳಿಸಕೊಂಡಿ
ಒಳ್ಳಾಗ ಹಾಕಿ ಕುಟ್ಟಿಸಿಕೊಂಡಿ ಹೌದಲೆ ಹವೀಜಮಾರಿ

೧೩೬. ಹೆಜ್ಜಿ ನೋಡ ಹುಡುಗರ ಗೆಜ್ಜಿ ನೋಡ

ತಾಳ ನೋಡ ಹುಡುಗರ ಮ್ಯಾಳಾ ನೋಡ ಗೋಕುಲ ಬಸವನ ತೇರನೋಡ
ತೇರನೋಡ ತೇರಿನ ಕಳಸನೋಡ ಹೆಜ್ಜಿನೋಡ ಹುಡುಗರ ಗೆಜ್ಜಿನೋಡ
ಒಂದ ವಾರಿಗಿ ಹುಡುಗರ ಮಜಲ ನೋಡ ಹುಡುಗರ ಯಮಕ ನೋಡ

ಚುಟುಕು ಪದಗಳು

ಕಾಜಿನ ಬುರುಡಿ ಮಜಾದ ಹುಡುಗರು | ಬಾಜಾರ ಹಿಡಿದು ಬರತಾರ
ಬಾಜಾರ ಹಿಡಿದು ಬರತಾರ | ಮಲಕಿನ ಹೆಜ್ಜಿ ಕಲಿತಾರು ||
* * *
ಅಲ್ಯಾಕ ನಿಂತಿ ಸಂದ್ಯಾಗ | ಮುಂದಕ ಬಾರೋ ಮಂದ್ಯಾಗ
ಮುಂದಕ ಬಾರೋ ಮಂದ್ಯಾಗ | ಹೋಗಾಕ ಬಿಡೂದಿಲ್ಲ ಸಂದ್ಯಾಗ ||
* * *
ದುಂಧಲೇ ಬಲು ದುಂಧಲೇ ಕೆಂಧೂಳು ಹಾರೂದು ನೋಡಲೇ
ಕೆಂಧೂಳು ಹಾರೂದು ನೋಡಲೇ ಸಂದಿ ಬಿದ್ದರ ಓಡಲೇ ||
* * *
ಗಾಡಿ ಬಂತೋ ಒತ್ತರಾ ಟಿಕೇಟು ಕೊಡೋ ಮಾಸ್ತರಾ
ಟಿಕೇಟು ಕೊಡೋ ಮಾಸ್ತರಾ | ಹೋಗಬೇಕೋ ತುಮಕೂರಾ ||
* * *