ರೈತರ ನಡುಮನೆಯಿಂದ ಮಹಿಳೆಯರ ಬದುಕಿನಿಂದ ಚಿತ್ತಾರ ರೂಪಾಂತರಗೊಂಡು ದೂರದ ನಗರಗಳನ್ನು ಸೇರುತ್ತಿದೆ.  ಕೆಮ್ಮಣ್ಣು, ಅಕ್ಕಿಹಿಟ್ಟಿನ ಜಾಗವನ್ನು ರೆಡ್‌ಆಕ್ಸೈಡ್, ಅಕ್ರೆಲಿಕ್ ಬಣ್ಣಗಳು ಆಕ್ರಮಿಸುತ್ತಿವೆ.  ಈ ಘಟ್ಟದಲ್ಲಿ ಉಗಮಸ್ಥಾನದಲ್ಲಿ ಈ ಕಲೆ ಹೇಗೆ ಕೃಷಿ ಬದುಕಿನೊಂದಿಗೆ ಅವಿಭಾಜ್ಯವಾಗಿತ್ತು ಎನ್ನುವುದನ್ನು ಇಲ್ಲಿ ಚಿತ್ರಿಸಿದ್ದಾರೆ.

ಪಡಗೋಡು ಸಾಗರ ತಾಲ್ಲೂಕಿನ ಪುಟ್ಟಹಳ್ಳಿ.  ನೆಲ್ಲೂರು ಮನೆತನ ಊರಲ್ಲೇ ಹೆಸರುವಾಸಿ. ಆ ಮನೆಯಲ್ಲಿ ಮದುವೆಯಾದರೆ ಇನ್ನಷ್ಟು ಸಂಭ್ರಮ.  ಅಂದು ವೀಳ್ಯಶಾಸ್ತ್ರ.  ಅದೇ ಶುಭ ಮುಹೂರ್ತದಲ್ಲಿ ಮದುವೆಶಾಸ್ತ್ರ ನಡೆಯುವ ಹಸೆಗೋಡೆಗೆ ಚಿತ್ತಾರ ಬರೆಯಲು ಪ್ರಾರಂಭಿಸಬೇಕು.

ಚಿತ್ತಾರ ಬರೆಯುವುದು ವಧೂವರರ ಅಕ್ಕತಂಗಿಯರು, ಸೋದರತ್ತೆ, ತಾಯಿಯ ಅಕ್ಕತಂಗಿಯರ ಹಕ್ಕು. ನೆಲ್ಲೂರು ಮನೆಯ ಚಿತ್ರಿ ಎಂದೇ ಹೆಸರಾದ ಕಲಾವಿದೆ ಗೌರಮ್ಮ ಬಾಣಂತಿ.  ಚಿತ್ತಾರ ಬಿಡಿಸಲು ಹೇಳಿದರೆ ತಂಗಿಯ ನಕಾರ.  ಗೌರಮ್ಮ ಪುಸಲಾಯಿಸಿದಳು.  ಹೊಡೆದಳು.  ಗದ್ದಲ ಹೆಚ್ಚಿತು.  ಅಪ್ಪ ಬಾರುಕೋಲಿನಿಂದ ಬಾರಿಸಿದರೂ ತಂಗಿ ಚಿತ್ತಾರ ಬರೆಯಲು ಮನ ಮಾಡಲಿಲ್ಲ.

ಬಾಣಂತಿ ಗೌರಮ್ಮ ಅಂದು ಬಿಡಿಸಿದ ಚಿತ್ತಾರ ಊರುಕೇರಿ ದಾಟಿ ಬೀಗರ ಮನೆಯಲ್ಲೂ ಮೆಚ್ಚುಗೆ ಗಳಿಸಿತು.

ನಲವತ್ತು ವರ್ಷಗಳ ನಂತರ ಅದೇ ಚಿತ್ತಾರಕಲೆ ನೆಲ್ಲೂರಮನೆ ಗೌರಮ್ಮನಿಗೆ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟಿತು.

ನೆಲ್ಲೂರುಮನೆ ಗೌರಮ್ಮ ನೆನಪಿಸಿಕೊಳ್ಳುತ್ತಾರೆ.  ಹಗಲೆಲ್ಲಾ ಮದುವೆ ಕೆಲಸ, ಕಟಪಟೆ.  ರಾತ್ರಿ ಹರಳೆಣ್ಣೆ ದೀಪದ ಬೆಳಕಲ್ಲಿ ಚಿತ್ತಾರದ ಕೆಲಸ.

ಚಿತ್ತಾರ ಬಿಡಿಸೋಕೆ ಬರ್‍ದೇ ಇದ್ದೋಳು-ದೀಪ ಹಿಡಿಯೋಕೆ ಸೋಪತಿ, ಹಾಡು ಹೇಳೋಕೆ ಬರ್‍ದೇ ಇದ್ದೋಳು-ಹರಿಒಲೆ ಮನೆಗೆ ಸೋಪತಿ (ಸೋಪತಿ-ತಕ್ಕವಳು) ಎನ್ನುತ್ತಿದ್ದರು.

ದೀಪ ಹಿಡಿದು ನಿಲ್ಲುವವಳೊಬ್ಬಳು.  ದಾರಕ್ಕೆ ಬಣ್ಣ ಹಚ್ಚಿ ಅಳತೆಗೆ ಸರಿಯಾಗಿ ಗೋಡೆಯ ಮೇಲಿಟ್ಟು ದಾರವನ್ನು ಟಪ್ಪೆಂದು ಎಳೆದುಬಿಡಲು ಇಬ್ಬರು.  ಕೆಲಸ ಬೇಸರ ತರಬಾರದೆಂದು ಹಾಡುಗಳು, ಒಗಟುಗಳು, ಗಾದೆಗಳು.  ಇಡೀ ಕ್ರಿಯೆಯೇ ಸಡಗರದ್ದು.  ಸಂಭ್ರಮದೊಂದಿಗೆ ಮೂಡುವ ಚಿತ್ತಾರ.  ಈ ಕಲಾರೂಪ ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಹಲವು ಭಾಗಗಳಲ್ಲಿ ರೂಢಿಯಲ್ಲಿದೆ.

ಅದೆಷ್ಟು ವಿಧ!

ಚಿತ್ತಾರದಲ್ಲಿ ಹಸೆಚಿತ್ತಾರ, ಬುಟ್ಟಿಚಿತ್ತಾರ, ಬಾಗಿಲುಚಿತ್ತಾರ, ಆರ್‍ತಿ, ಇಡುಕಲು ಚಿತ್ತಾರ, ಪಳತ (ಕಣಜ)ಕ್ಕೆ ಬರೆವ ಚಿತ್ತಾರ, ಹೆಜ್ಜೆ, ತೇರು, ವಂಕಿಗಿಡ, ಸೀತಾಳೆ ಕೊಡೆ, ತಿರುಗಿ ಮಣೆ ಹೀಗೆ ಅನೇಕ ವಿಧಗಳು.

ಹಸೆ ಎಂದರೆ ಮದುಮಕ್ಕಳು ಕೂರುವ ಜಾಗದಲ್ಲಿ ಹಾಕುವ ಈಚಲುಹುಲ್ಲಿನ ಚಾಪೆ.  ಹಸೆ ಹಾಕಿದ ಹಿಂಭಾಗ ಗೋಡೆಯೇ ಹಸೆಗೋಡೆ.  ಆ ಗೋಡೆಯ ಮೇಲೆ ಬರೆಯುವುದು ಹಸೆ ಚಿತ್ತಾರ.

ಭೂಮಿಹುಣ್ಣಿಮೆ ಹಬ್ಬಕ್ಕೆ ಮಾಡಿದ ನೈವೇದ್ಯ, ಪೂಜಾಸಾಮಗ್ರಿ, ಹಚ್ಚಂಬ್ಲಿಗಳನ್ನು ಬೆಳೆಗಳ ಪೂಜೆಗೆ ಹೊಲಕ್ಕೆ ಒಯ್ಯಲು ಬಳಸುವ ಬುಟ್ಟಿಗಳೇ ಭೂಮಣ್ಣಿ ಬುಟ್ಟಿಗಳು.  ಇವುಗಳ ಮೇಲೆ ಬಿಡಿಸಿದ್ದೇ ಬುಟ್ಟಿಚಿತ್ತಾರ.

ಮನೆಯ ಬಾಗಿಲು, ವಾಸ್ತುಬಾಗಿಲು, ಕಿಟಕಿಗಳಿಗೆ ಮೂರೂ ಬದಿಯಲ್ಲಿ ಬರೆದ ಚಿತ್ತಾರಗಳೇ ಬಾಗಿಲುಚಿತ್ತಾರ.

ಅಡುಗೆಮನೆಯ ಒಲೆಯ ಪಕ್ಕ ಅರ್ಧ ಅಡಿ ಎತ್ತರದ ಮಣ್ಣಿನ ಕಟ್ಟೆ.  ಅದರ ಮೇಲೆ ಆಗಿಹೋದ ಹಿರಿಯರಿಗಾಗಿ ಒಂದು ಹಂಡೆ, ಒಂದು ಕೊಡದಲ್ಲಿ ನೀರನ್ನು ತುಂಬಿ ಇಟ್ಟಿರುತ್ತಾರೆ.  ಇವೇ ಇಡುಕಲು.  ಇವುಗಳ ಹಿಂಬದಿ ಗೋಡೆಯ ಮೇಲೆ ಬರೆದ ಚಿತ್ತಾರವೇ ಇಡುಕಲು ಚಿತ್ತಾರ.

ಧಾನ್ಯಗಳನ್ನು ತುಂಬಿಟ್ಟ ಪಳತ(ಕಣಜ)ದ ಮೇಲೆ ದೀಪಾವಳಿಯ ಪೂಜೆಗೆ ಬಿಡಿಸುವ ಚಿತ್ತಾರವೇ ಪಳತ ಚಿತ್ತಾರ.

ದೀಪಾವಳಿಯಂದು ಗೋಪೂಜೆಗೆ ಗೋವು ಕಟ್ಟಿದ ಕಂಬ ಹಾಗೂ ಮನೆ ಮುಖ್ಯಸ್ಥಳಗಳಲ್ಲಿ ಬರೆವ ಗೋವಿನ ಹೆಜ್ಜೆಯ ಚಿತ್ತಾರವೇ ಹೆಜ್ಜೆ.  ತುಳಸಿಕಟ್ಟೆ ಬಿಡಿಸುವ ಚಿತ್ತಾರವೇ ವಂಕಿಗಿಡ.  ತಿರುಪತಿ ವೆಂಕಟರಮಣನ ತೇರು, ಮನೆ ಬಾಗಿಲ ಬಳಿ ರಂಗೋಲಿಯಂತೆ ಮೂಲೆಗಳಿರುವ ಆರತಿ ಚಿತ್ತಾರ ಹೀಗೆ ಚಿತ್ತಾರಗಳು ಎಲ್ಲೆಲ್ಲೂ ಸಿಗುತ್ತದೆ.

ಈ ಚಿತ್ರಗಳನ್ನು ಕರೆ ಒಕ್ಕಲಿಗರು, ಕೊಟ್ಟೆ ಒಕ್ಕಲಿಗರು, ದಲಿತರು, ಹಸಲರು, ಕುಣಬಿಗಳು, ಗೊಂಡರು, ನಾಮಧಾರಿಗಳು, ಉಪ್ಪಾರರು, ಬೋವಿಗಳು, ಮಡಿವಾಳರು, ದೀವರಮನೆಗಳಲ್ಲಿ ಕಾಣಬಹುದು.  ಮೊಗವೀರರು ಈ ಚಿತ್ರಗಳನ್ನು ಹಸಗರು ಎನ್ನುತ್ತಾರೆ.  ಹಾಲಕ್ಕಿಗೌಡರು ಇದನ್ನು ಹಲಿ, ಬಾಸಿಂಗ ಹಲಿ ಎನ್ನುತ್ತಾರೆ.  ಒಕ್ಕಲಿಗರು ಇದನ್ನು ಮದುವೆ ಹಸೆ ಎನ್ನುತ್ತಾರೆ.  ದೀವರು ಚಿತ್ತಾರವೆನ್ನುತ್ತಾರೆ.

ಹಿಂದಿನ ಮನೆಗಳಲ್ಲಿ ಅಡಿಕೆ ದಬ್ಬೆ, ಬಿದಿರಿನ ಗಳುಗಳ ಗೋಡೆ, ಅದರ ಮೇಲೆ ಬಿದಿರಿನ ಬೇಸಲತಟ್ಟಿ (ಚಾಪೆಯ ರೀತಿ ಇರುವ)ಗೆ ಸಗಣಿ, ಮಣ್ಣು ಸಾರಿಸುವುದು.  ಕೆಮ್ಮಣ್ಣು ಹಚ್ಚಿ ಒಣಗಿಸುವುದು, ಬಿಳಿ ಜೇಡಿ, ಅಕ್ಕಿಹಿಟ್ಟಿನ ಬಣ್ಣ ತಯಾರಿಸಿ ಚಿತ್ತಾರ ಬರೆಯುತ್ತಿದ್ದುದನ್ನು ಲೇಖಕ ನಾ.ಡಿಸೋಜ ದಾಖಲಿಸಿದ್ದಾರೆ.

ಹೆಣ್ಮಕ್ಕಳದೇ ಮುಂಗೈ

ದೀವರದು ಮಾತೃಪ್ರಧಾನ ಕುಟುಂಬ.  ಉಳುಮೆ ಬಿಟ್ಟು ಬೇರೆಲ್ಲಾ ಕೃಷಿ ಕೆಲಸಗಳನ್ನು ಹೆಣ್ಮಗಳೇ ನಿರ್ವಹಿಸುತ್ತಾಳೆ.  ಕಾಡಿನಿಂದ ಕಟ್ಟಿಗೆ, ಸೊಪ್ಪು, ದರಕು, ಸೀಗೆಕಾಯಿ, ಅಂಟಾಳಕಾಯಿ ಮುಂತಾದ ಉಪಉತ್ಪನ್ನಗಳನ್ನು ತರುವುದು ಆಕೆಯೇ.  ಒಡವೆಗಳಲ್ಲಿ ಬೆಳ್ಳಿಯ ಮೇಲೆ ಪ್ರೀತಿ.  ಟೀಕೆ, ನಾಗರ, ಗೊಂಡೆ, ಹೂವು, ಅಡ್ಡಿಕೆ, ಪಟ್ಟಿ, ಡಾಬು, ಕಡಗ, ಬೇಸರಿ, ನತ್ತು ಇನ್ನೂ ಏನೆಲ್ಲಾ.  ಉಡುವುದು ಗಾಡಿ ದಡಿ, ತೋಪಿನ ಸೆರಗಿನ ಸೀರೆ.

ದೈನಂದಿನ ಕೃಷಿ, ನಿಸರ್ಗ, ಆಭರಣ, ತೊಡುಗೆ ಹೀಗೆ ನೇರವಾಗಿ ಕಾಣುವ ವಸ್ತುಗಳು, ಪರಿಕರಗಳು, ಜೀವಿಗಳೇ ಚಿತ್ತಾರದಲ್ಲಿ ಪ್ರತಿಬಿಂಬಿಸುತ್ತಿದ್ದವು.  ಕಲ್ಪನೆಗೆ ಅವಕಾಶ ಕಡಿಮೆ.

ಚಿತ್ತಾರದಲ್ಲಿ ಬರುವ ದಂಡಿಗೆ ಈಗಿಲ್ಲ.

ಆದರೆ…

ಅಂದುಳ್ಳ ಊರಿಗೊಂದು ಚಂದುಳ್ಳ ದೇವಸ್ಥಾನ
ಚಂದ್ರಾಮರೆಂಬ ಹೊಸಕೆರೆ | ಏರಿಮ್ಯಾಲೆ
ದಂಡಿಗೆ ತಮ್ಮಯ್ಯ ಇಳಿದಾರೆ ||
ಪಾಲಿಕೆ ತಮ್ಮಯ್ಯ ಇಳಿದಾರೆ ||

ಎಂಬ ಮದುವೆ ಹಾಡಿನಲ್ಲಿರುವ ದಂಡಿಗೆ, ಪಲ್ಲಕ್ಕಿಯನ್ನು ಈ ಕಲಾವಿದೆಯರು ಬರೆಯದೇ ಬಿಡಲು ಒಪ್ಪುವುದಿಲ್ಲ.  ಇಡೀ ಚಿತಾರಕ್ಕೆ ಸೊಬಗು ನೀಡುವುದೇ ದಂಡಿಗೆ ಎನ್ನುತ್ತಾರೆ ಜನಪದ ತಜ್ಞ ಹುಚ್ಚಪ್ಪ ಮಾಸ್ತರು.

ಚಿತ್ತಾರದ ಮೆರವಣಿಗೆ

ಭೂಮಿಹುಣ್ಣಿಮೆ ಹಬ್ಬವೆಂದರೆ ಭೂಮಿತಾಯಿಗೆ ಸೀಮಂತ.  ಹೊಡೆಯೊಡೆದು ನಿಂತ ಭತ್ತದ ಗದ್ದೆಗಳಿಗೆ ಪೂಜೆ, ನೈವೇದ್ಯ ಅರ್ಪಣೆ.  ಅದನ್ನೆಲ್ಲಾ ಒಯ್ಯಲು ಬಳಸುವ ಬುಟ್ಟಿಗಳೇ ಭೂಮಣ್ಣಿ ಬುಟ್ಟಿ, ಪೂಜಾಬುಟ್ಟಿ ದೊಡ್ಡದು.  ಹಚ್ಚಂಬ್ಲಿ ಬುಟ್ಟಿ ಚಿಕ್ಕದು.

ಬಿದಿರಿನ ಬುಟ್ಟಿಗಳಿಗೆ ಸಗಣಿ ಅಥವಾ ಗದ್ದೆಮಣ್ಣಿಂದ ಸಾರಿಸಿ ಸಮತಟ್ಟು ಮಾಡುತ್ತಾರೆ.  ಒಣಗಿದ ಮೇಲೆ ಕೆಮ್ಮಣ್ಣು ಹಚ್ಚುತ್ತಾರೆ.  ಅದರ ಮೇಲೆ ಅಕ್ಕಿಹಿಟ್ಟಿನ ಚಿತ್ತಾರ.

ಪೂಜಾಬುಟ್ಟಿ ನಾಲ್ಕು ಮುಖಗಳನ್ನು ಹೊಂದಿರುತ್ತದೆ.  ಮೊದಲ ಮುಖದಲ್ಲಿ ಕೃಷಿ ಪರಿಕರಗಳು, ಎರಡನೇ ಮುಖದಲ್ಲಿ ಎತ್ತುಗಾಡಿಗಳು, ಮೂರನೇ ಮುಖದಲ್ಲಿ ಗದ್ದೆ, ಸಸಿ, ಗೊಣಬೆ, ಏಣಿ, ಕೋಳಿಗಳು, ನಾಲ್ಕನೇ ಮುಖದಲ್ಲಿ ಬುಟ್ಟಿ ಹೊತ್ತೊಯ್ಯುತ್ತಿರುವ ಮನುಷ್ಯರ ಚಿತ್ತಾರಗಳು.

ಮುಖಗಳು ಸಂಧಿಸುವ ಮೂಲೆಗಳಲ್ಲಿ ಅಡಿಕೆಮರ, ಬಾಳೆಮರ, ಜೋಗಿಜಡೆ, ಭತ್ತದ ಸಸಿಗಳು ಇತ್ಯಾದಿ ಇರುತ್ತದೆ.  ಕೃಷಿಗೆ ಆದ್ಯತೆ.  ಚಿತ್ತಾರದ ಮೇಲೆ, ಕೆಳಗೆ ಗೊಂಬೆಸಾಲು, ನಿಲಿ, ನಿಲಿಕೊಚ್ಚು, ಬಾಸಿಂಗನಿಲಿ ಹೀಗೆ ಬುಟ್ಟಿಯ ಹೊರಮೈಪೂರ್ತಿ ಚಿತ್ತಾರಗಳು.

ಒಳಮೈಯಲ್ಲಿ ಈಶ್ವರಲಿಂಗ, ತುಳಸಿಗಿಡಗಳು ಇರುತ್ತವೆ.  ಭೂಮಿಯ ಫಲವಂತಿಕೆ ಹೆಚ್ಚಲು ಸೌತೆ, ಕೆಸ, ಹೀರೆ, ಕುಂಬಳ, ಹರಿವೆ, ಕಂಚಿ, ಮುಳಗಾಯಿ, ಕಾಕಿ, ಅಮಟೆ ಮುಂತಾದ ೧೦೧ ಜಾತಿಯ ಸೊಪ್ಪನ್ನು ಬೆರೆಸಿ ಹಚ್ಚಂಬ್ಲಿ ತಯಾರಿಸುತ್ತಾರೆ.  ಹಚ್ಚಂಬ್ಲಿ ಬುಟ್ಟಿಯಲ್ಲಿ ತುಂಬಿ ಗದ್ದೆಗೆ ಬೀರುತ್ತಾರೆ.

ನೈವೇದ್ಯಕ್ಕಾಗಿ ಕಡುಬು, ಪಾಯಸ, ಹೋಳಿಗೆ, ಕರ್ಜಿಕಾಯಿ, ಹಾಲು-ತುಪ್ಪದ ಅನ್ನ, ಮೊಸರನ್ನ, ಚಿತ್ತಾನ್ನ, ಅತಿರಸ, ಕೆಸುವಿನ ಪಲ್ಲೆ, ಸೌತೆ ಪಚಡಿ, ಹೀರೆಸಾರು ಹೀಗೆ ೨೦ ರೀತಿಯ ಸೀಮಂತದ ಅಡುಗೆ.

ಪೂಜೆಗೆ ತಮ್ಮ ಕೊರಳಿನ ಕರಿಮಣಿ ಸರವನ್ನೇ ನೀಡುತ್ತಾರೆ.  ಪೂಜೆಗೆ ಮೂರು ಎಡೆಗಳು (ಎಡೆ-ಆಹಾರ) (ಕೆಲವರಲ್ಲಿ ಐದು) ಸಸಿ ಎಡೆ, ಕಾಗೆ ಎಡೆ, ಇಲಿ ಎಡೆ, ಭೂಮಿಯೊಳಗಿನ ಸೂಕ್ಷ್ಮಜೀವಿಗಳಿಗೆ, ಕಾಗೆ ಮುಂತಾದ ಪಕ್ಷಿಗಳಿಗೆ, ಇಲಿ ಮುಂತಾದ ಧಾನ್ಯ ತಿನ್ನುವ ಪ್ರಾಣಿಗಳಿಗೆ ಇವು ಸೇರುತ್ತವೆ.  ಉಳಿದಿದ್ದನ್ನು ಮನೆಯವರೆಲ್ಲಾ ಗದ್ದೆಯಲ್ಲಿಯೇ ಸೇವಿಸುತ್ತಾರೆ.

ಈ ಬುಟ್ಟಿಗಳಿಗೆ ಮಹಾನವಮಿಯಿಂದಲೇ ಚಿತ್ತಾರ ಬರೆಯಲು ಪ್ರಾರಂಭ.  ಯಾರೂ ಬರೆಯಬಹುದು.  ಭೂಮಣ್ಣಿ ಹಬ್ಬದ ದಿನ ಬೆಳಗ್ಗೆ ಬುಟ್ಟಿ ಹೊತ್ತೊಯ್ಯುತ್ತಿರುವ ಗಂಡಸರನ್ನು ನೋಡಿದರೆ ಚಿತ್ತಾರಗಳ ಮೆರವಣಿಗೆ ನಡೆದಿರುತ್ತದೆ.

ಹಸೆಚಿತ್ತಾರಗಳಿಗಿಂತಲೂ ಬುಟ್ಟಿ ಚಿತ್ತಾರಗಳಲ್ಲಿ ಬದಲಾವಣೆಗಳು ಹೆಚ್ಚಿವೆ.  ಇಂದು ಬಳಸುವ ಪರಿಕರಗಳು, ವಾಹನಗಳು, ಬಳ್ಳಿ ರಂಗೋಲಿಗಳೂ ಇವೆ.

ಬುಟ್ಟಿ ಚಿತ್ತಾರಗಳ ಆಯುಸ್ಸು ಒಂದೇ ವರ್ಷ.  ಮಣ್ಣು, ಬಣ್ಣಗಳು ಮಾಸಿಯೋ, ಉದುರಿಯೋ ಹಾಳಾದ ಬುಟ್ಟಿಗಳನ್ನು ಮರುಬಳಕೆ ಮಾಡಬಹುದು.  ಆದರೆ ಅದೇ ಬುಟ್ಟಿಯನ್ನು ಕೃಷಿಕೆಲಸಗಳಿಗೂ ಬಳಸುವುದರಿಂದ ಹೊಸ ಬುಟ್ಟಿ ತರುವವರೇ ಅಧಿಕ.

ನೈಸರ್ಗಿಕ ಬಣ್ಣಗಳ ಬಳಕೆ

ಚಿತ್ತಾರ ಬಿಡಿಸಲು ನೈಸರ್ಗಿಕ ಬಣ್ಣಗಳ ಬಳಕೆ.  ಬಿಳಿ ಜೇಡಿಮಣ್ಣು, ಕೆಮ್ಮಣ್ಣು, ಕೆಂಪುಕಲ್ಲು, ಬಿಳಿಅಕ್ಕಿ ನೆನೆಸಿ ಅಂಟಾಗುವ ರೀತಿ ನುಣ್ಣಗೆ ಬೀಸಿ ಬಳಸುವಿಕೆ, ಕೆಂಪಕ್ಕಿಯನ್ನು ಹುರಿದು ಕಪ್ಪಾಗಿಸಿ ನುಣ್ಣಗೆ ಬೀಸುವುದು.  ಅದಕ್ಕೆ ಗುಡ್ಡೆಗೇರು ಬೀಜದ ರಸ ಸೇರಿಸಿ ಕಪ್ಪು ಹೊಳಪು ಮಾಡಿಕೊಳ್ಳುವುದು.

ಗುರಿಗೆಮರದ ಹಣ್ಣನ್ನು ಒಣಗಿಸಿ, ಅದರೊಳಗಿನ ಬೀಜವನ್ನು ಕುಟ್ಟಿ ಪುಡಿ ಮಾಡಿ, ತೆಳುಬಟ್ಟೆಯಲ್ಲಿ ಗಾಳಿಸಿ (ಸೋಸಿ) ಅರಿಸಿನ ಬಣ್ಣಕ್ಕಾಗಿ ಬಳಕೆ.  ಗುರಿಗೆಮರದಲ್ಲಿ ಬರುವ ಅರಿಸಿನಬಣ್ಣದ ಹಗುನ (ರಸ) ಸಹ ಉಪಯುಕ್ತ.  ಕೆಲವರು ಅರಿಸಿನ ಕೊಂಬು ತೇಯ್ದು ಬಳಸುತ್ತಿದ್ದರು.

ಒಟ್ರಾಶಿಮ್ಯಾಲೆ ನಮ್ಮ ಸುತ್ತಮುತ್ಲು ಶಿಗಾ ಬಣ್ಣಾ ಹಚ್ಚಾದು ಪರಿಪಾಟ ಎನ್ನುತ್ತಾರೆ ನೆಲ್ಲೂರಮನೆ ಗೌರಮ್ಮ.

ತಯಾರಿಸಿದ ಬಣ್ಣಗಳನ್ನು ಗೆರಟೆಗಳಲ್ಲಿ ಇಟ್ಟುಕೊಳ್ಳುತ್ತಿದ್ದರು.  ಗೆರೆ ಎಳೆಯಲು ದಪ್ಪ ದಾರ.  ಸಣ್ಣಗೆರೆಗಳಿಗೆ ಪುಂಡಿನಾರು, ಅಡಿಕೆ ಸಿಪ್ಪೆ ನಾರು, ತೆಂಗಿನಕಡ್ಡಿಗಳ ಬಳಕೆ, ಭತ್ತದ ಹುಲ್ಲಿನ ಕೊಳವೆಯೊಳಗೆ ಈ ನಾರುಗಳನ್ನು ಕಟ್ಟಿ ಕುಂಚಗಳ ತಯಾರಿಕೆ.  ಇವೇ ಪರಿಕರಗಳು.

ಹಸೆಚಿತ್ತಾರ ಬಿಡಿಸಲು ನಿಯಮಗಳಿವೆ.  ನೇಮ ತಪ್ಪಿದ್ರೆ ಅಮಂಗಳ ಆಗೇ ಆಕೈತಿ ಹಸವಂತೆಯ ಮೈಲಮ್ಮ ಅಭಿಪ್ರಾಯಪಡುತ್ತಾರೆ.

ಮದುಮಕ್ಕಳ ತಾಯಂದಿರು ಹಸೆಚಿತ್ತಾರ ಬಿಡಿಸುವಂತಿಲ್ಲ.  ವೀಳ್ಯಶಾಸ್ತ್ರದ ದಿನ ಪ್ರಾರಂಭಿಸಿ ದಿಬ್ಬಣ ಬರುವುದರೊಳಗೆ ಮುಗಿಸಬೇಕು. ಚಿತ್ತಾರವು ಮನೆಯ ನಡುಮನೆಯಲ್ಲಿ ಉತ್ತರ ಅಥವಾ ಪೂರ್ವದಿಕ್ಕಿನಲ್ಲಿರಬೇಕು.  ಒಮ್ಮೆ ಹಾಕಿದ ಗೆರೆ ಅಳಿಸುವಂತಿಲ್ಲ.  ಒಮ್ಮೆ ಬರೆದ ಚಿತ್ತಾರವನ್ನು ಮೂರು ವರ್ಷಗಳ ಕಾಲ ಅಳಿಸುವಂತಿಲ್ಲ.  ಮರುವರ್ಷ ಇನ್ನೊಂದು ಮದುವೆ ಅದೇ ಮನೆಯಲ್ಲಾದರೆ ಪಕ್ಕದಲ್ಲಿ ರಚಿಸಬಹುದು.  ಚಿತ್ತಾರಕಾರ್‍ತಿಯರಿಗೆ ಖಣ, ರೂಪಾಯಿಗಳ ಮರ್ಯಾದೆ ನೀಡಬೇಕು.

ಹಸೆಚಿತ್ತಾರಗಳಲ್ಲಿ ಎರಡು ವಿಧಗಳು.  ಮುಂಡಿಗೆ ಚಿತ್ತಾರ, ಪೋಪ್ಳಿ ಚಿತ್ತಾರ. ಮುಂಡಿಗೆ ಚಿತ್ತಾರಗಳು ಪುರಾತನ.  ಪೋಪ್ಳಿ ಚಿತ್ತಾರಗಳಿಗೆ ಸುಮಾರು ನೂರು ವರ್ಷ ಚರಿತ್ರೆ ಇರಬಹುದೆನ್ನುವುದು ಚಿತ್ತಾರಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಹಸುವಂತೆ ಈಶ್ವರನಾಯ್ಕರ ಊಹೆ.

ಸರಳರೇಖೆಗಳೇ ಹೆಚ್ಚು

ಚಿತ್ತಾರದಲ್ಲಿ ಸರಳಗೆರೆಗಳಿಗೆ ಒತ್ತು.  ವಕ್ರಗೆರೆಗಳು ತೀರಾ ಕಡಿಮೆ.  ಎರಡು ತ್ರಿಕೋನ ಬರೆದು ಕೈಕಾಲುಗಳಿಗೆ ಗೆರೆ ಎಳೆದು ತಲೆ ಬಿಡಿಸಿದರೆ ಮನುಷ್ಯ.  ಅದನ್ನೇ ಅಡ್ಡಡ್ಡ ಬರೆದು ಬಾಲ ಬರೆದರೆ ಪ್ರಾಣಿ.  ಅಡ್ಡ ತ್ರಿಕೋನಗಳಿಗೆ ತಲೆ, ಕೊಕ್ಕು, ಪುಕ್ಕ ಬಿಡಿಸಿದರೆ ಪಕ್ಷಿ.  ಇವೆಲ್ಲಾ ನೇರವಾಗಿ ನೋಡಿದ ಕೂಡಲೇ ಅರ್ಥವಾಗುವ ಚಿತ್ರಗಳು.  ಆದರೆ ಗೊಣಬೆ, ಚಕ್ಕಲುಬಕ್ಕಲು ಚಿನ್ನಾಣಿ, ಮದ್ನಕೈ, ಕೌಳಿಮಟ್ಟಿ ಮುಂತಾದವುಗಳನ್ನು ಸಂಕೇತಗಳ ರೂಪದಲ್ಲಿ ಚಿತ್ರಿಸಿರುತ್ತಾರೆ.

ಹಸೆಚಿತ್ತಾರಗಳಲ್ಲಿ ಉದ್ದ ಅಗಲಗಳಲ್ಲಿ ಮುಂಡಿಗೆಗಳು ಕಾಣುತ್ತವೆ.  ಇವು ಮನೆಯೊಳಗಿನ ಕಂಬಮುಂಡಿಗೆ ತೊಲೆಗಳು.  ಇವುಗಳ ಒಡಲ ತುಂಬಾ ಉದ್ದಗೆರೆಗಳು. ಇವು ನಿಲಿ. ಅದಕ್ಕೆ ಅಡ್ಡಗೆರೆ ಹಾಕಿದರೆ ನಿಲಿಕೊಚ್ಚು. ತ್ರಿಕೋಣಾಕಾರದಲ್ಲಿದ್ದರೆ ಬಾಸಿಂಗನಿಲಿ.  ಮುಂಡಿಗೆಗಳಿಗೆ ಚೆಂಡುಹೂವಿನ ಮಾಲೆಯ ಅಲಂಕಾರ.  ಇನ್ನಿತರ ಅಲಂಕಾರಗಳೂ ಇರಬಹುದು.

ಮುಂಡಿಗೆಗಳ ಎರಡೂ ಪಕ್ಕ ಮೇಲೆದ್ದಿರುವ ತೋಳುಗಳಂತಹ ರಚನೆಯೇ ಮಾದ್ನಕೈಗಳು.  ಇವುಗಳ ತುದಿಯಲ್ಲಿ ಗೊಣಬೆ, ಮಾವಿನೆಲೆಗಳು.

ಮೇಲ್ಭಾಗದಲ್ಲಿ ಗೋಪುರಗಳು, ಕಲಶಗಳು, ಗೊಣಬೆಗಳನ್ನು ಬರೆಯುತ್ತಾರೆ.  ಅಲಂಕಾರಕ್ಕಾಗಿ ಜಲ್ಲಿಸಾಲು, ಯಾಲಕ್ಕಿಗೊನೆ, ಸೀತೆಮುಡಿ, ಜೋಗಿಜಡೆ, ಕೊಟ್ಟೆಬಳ್ಳಿ, ತಿರಗಿಮಣಿ, ತೊಂಡೆಚಪ್ಪರ ಮುಂತಾದ ವಿನ್ಯಾಸಗಳು.

ಮಧ್ಯದಲ್ಲಿ ದಂಡಿಗೆ, ದಂಡಿಗೆಯೊಳಗೆ ವಧೂವರರು.  ದಂಡಿಗೆ ಹೊರುವವರು, ವಾದ್ಯದವರು, ದಿಬ್ಬಣದವರು.  ಅಲಂಕಾರಕ್ಕಾಗಿ ಮಾವಿನತೋರಣ, ಅಡಿಕೆಹಾರ, ಚೆಂಡುಹೂ ಮಾಲೆ, ಬೀಸಣಿಕೆ ಇನ್ನೂ ಏನೆಲ್ಲಾ.

ಎರಡು ಮದುವೆಗಳು ಒಟ್ಟಿಗೆ ಆದರೆ ಎರಡು ದಂಡಿಗೆ, ಎಂಟು ಮದ್ನಕೈಗಳು.  ನಾಲ್ಕು ಅಥವಾ ಎಂಟು ಕಲಶಗಳು, ಎಂಟು ಮುಂಡಿಗೆಗಳು ಇರುತ್ತವೆ.  ಗೊಣಬೆಯ ಮೇಲೆ ಕೋಳಿಗಳು.  ಮೇಲಿನ ಮೂಲೆ ಜಾಗಗಳಲ್ಲಿ ಗೂಡಿನಹಕ್ಕಿ ಇರುತ್ತದೆ.

ಚಿತ್ತಾರದ ಸುತ್ತಲೂ ಒಂದು ಅಡ್ಡಿಕೆ, ಎರಡು ಅಡ್ಡಿಕೆಯ ಚೌಕಟ್ಟು.  ಸುತ್ತಲೂ ಮಲ್ಲಿಗೆ ಮೊಗ್ಗು ಸಾಲು, ಕೋಳಿಸಾಲು, ಅರಳಿ ಎಲೆ ಸಾಲು, ಏಣಿಗಳ ಚೌಕಟ್ಟು ಇರುತ್ತದೆ.

ಪೋಪ್ಳಿ ಚಿತ್ತಾರಗಳಲ್ಲಿ ಮುಂಡಿಗೆಗಳು ಇರುವುದಿಲ್ಲ.  ಕೇವಲ ಕಪ್ಪುಬಿಳಿ ಚೌಕಳಿಗಳು ಮಾತ್ರ.  ಇದನ್ನೇ ಮೂರು ಸಾಲು, ಆರು ಸಾಲುಗಳಲ್ಲಿ ಬರೆದಿರುತ್ತಾರೆ.  ಪೋಪ್ಳಿ ಎಂದರೆ ಕಣ್ಣುಗಳು ಎನ್ನುವ ಅನ್ವರ್ಥ.  ಕೆಂಪು, ಅರಿಸಿನ ಬಣ್ಣಗಳ ಪೋಪ್ಳಿಗಳೂ ಇವೆ.

ಮುಂಡಿಗೆ ಚಿತ್ತಾರಗಳು ಮನೆತನದ ಶ್ರೀಮಂತಿಕೆ, ಕಲಾನೈಪುಣ್ಯಗಳ ಚಿತ್ರಣ.  ಪೋಪ್ಳಿ ಚಿತ್ತಾರ ಕಣ್ಣಿಗೆ ಆಕರ್ಷಕ.  ಆನಂದ ನೀಡುತ್ತದೆ.  ಬಣ್ಣಗಳ ವಿನ್ಯಾಸದಿಂದಾಗಿ ಸುಂದರವಾಗಿ ಕಾಣುತ್ತದೆ.

ಉತ್ತುಂಬಿಗರ ಮನೆಯ ಸಾಣಚಾಚ ಮನೆಗೆ
ಸುತ್ತಾ ನಾಗೊಂದೀಗೆ ತಳಿ ಹಲಗೆ |
ಗೋಡೆಮೇಲೆ
ಚಿತ್ತಾರ ನೀನ್ಯಾರೆ ಬರದೋಳುಮದನಗಿತ್ತಿ.   ಎನ್ನುವ ಪ್ರಶ್ನೆಗೆ

ಅಕ್ಕಮ್ಮೋದುವಾಲೆ ಬರೆದಾಳೆ |
ತಂಗ್ಯಮ್ಮೋದುವಾಲೆ ಬರೆದಾಳೆ | ಎನ್ನುವ ಉತ್ತರ ಮದನಗಿತ್ತಿಯದು.

ಒಬ್ಬರಿಗಿಂತ ಒಬ್ಬರು ಮೇಲಾಗಲು ಪೈಪೋಟಿಯಿಂದ ಚಿತ್ತಾರಗಳಲ್ಲಿ ವೈವಿಧ್ಯ ತುಂಬಲು ಕಾರಣವಾಗುತ್ತಿತ್ತು.

ಎರಡೂವರೆ ಅಡಿ ಸುತ್ತಳತೆಯ ಚಿತ್ತಾರವನ್ನು ಮದುವೆಗೆ ಬಂದವರಿಗೆ ನೋಡದೇ ಇರಲು ಆಗುತ್ತಿರಲಿಲ್ಲ.

ಚಿತ್ತಾರ ಬರಿ ಅಂದ್ರೆ ಮಂದಾರ ಬರದಾಳಯ್ಯ |
ಮಂದಾರದ ಕೆಳಗೆ ಮದ್ನಕೈಯೇ ಸೋಬಾನವೇ||

(ಮಂದಾರ ಹೂವಿಗಿಂತಲೂ ಚಿತ್ತಾರವೇ ಚೆನ್ನಾಗಿದೆ ಎಂದರ್ಥ) ಎನ್ನುವ ಪ್ರಶಂಸೆ ಸಿಗುತ್ತಿತ್ತು.

ಮದುವೆಯ ಕಾರ್ಯಕ್ರಮಗಳೆಲ್ಲಾ ಹಸೆಚಿತ್ತಾರದ ಕೆಳಗೆ ಜರುಗುತ್ತಿತ್ತು.   ತಮ್ಮ ಮನೆಯ ಹಸೆಚಿತ್ತಾರವೇ ಚೆನ್ನಾಗಿದೆ ಎಂದು ಹಾಡಿನ ಜಗಳಗಳೂ ನಡೆಯುತ್ತಿದ್ದವು.  ಹಸೆಚಿತ್ತಾರ, ಹಾಡುಗಳ ಮೂಲಕ ಆ ಮನೆಯವರ ಗುಣ, ಬದುಕು, ಕಲಾವಂತಿಕೆಗಳನ್ನು ತಿಳಿಯಲಾಗುತ್ತಿತ್ತು.

ಸಂಕೇತಗಳು

ಚಿತ್ತಾರಗಳಲ್ಲಿ ಕಾಣುವ ಮಾದ್ನಕೈಗಳು, ಪೀಟೆಗಳು ಕಾಮದ ಸಂಕೇತ.  ಕೋಳಿಗಳು ಆರ್ಥಿಕತೆಯ ಸಂಕೇತ.  ಗೂಡಿನಹಕ್ಕಿ ಪ್ರೇಮದ, ಗರ್ಭಧಾರಣೆಯಾದ ಸಂಕೇತ.  ಹೀಗೆ ಸಂಕೇತಗಳ ಗೂಢಾರ್ಥಗಳನ್ನು ದೀವರ ಜನಾಂಗದ ಅಧ್ಯಯನ ಮಾಡಿದ ಡಾ. ಮೋಹನ ಚಂದ್ರಗುತ್ತಿ ಬಿಡಿಸಿಡುತ್ತಾರೆ.

ಒಮ್ಮೆ ನೆಲ್ಲೂರಮನೆ ಗೌರಮ್ಮನವರು ಬರೆದ ಚಿತ್ತಾರ ಏರುಪೇರಾಗಿತ್ತು.  ಗೌರಮ್ಮನವರ ಚಿಕ್ಕಪ್ಪನವರಾದ ಹಿರಿಯಪ್ಪನವರು ಅದನ್ನು ನೋಡಿದವರೇ ಗುತ್ತಿಬಿತ್ತು-ಸಿಕ್ರ ಎತ್ತು ಎಂದರಂತೆ.

ಸೊರಬ ತಾಲ್ಲೂಕು ಚಂದ್ರಗುತ್ತಿಯ ರೇಣುಕಾಂಬೆ ಇವರ ದೇವರು.  ಇದೊಂದು ಗಾದೆ.  ಸಿಕ್ರ ಎತ್ತು ಎಂದರೆ ಶಿಖರ ಏರಿದೆ-ಧಾನ್ಯಗಳ ಬೆಲೆ ಏರುತ್ತದೆ.  ಗುತ್ತಿ ಏರಿದರೆ-ಧಾನ್ಯಗಳ ಬೆಲೆ ಇಳಿಯುತ್ತದೆ ಎಂದರ್ಥ.

ದೀವರ ಚಿತ್ತಾರಗಳಲ್ಲಿ ಕಾಣುವ ಕೆಲವು ವಸ್ತುಗಳು ಹಸಲರಲ್ಲಿ, ಒಕ್ಕಲಿಗರಲ್ಲಿ ಇಲ್ಲ.  ಕಾಡಿನ ಪ್ರಾಣಿಗಳು, ಮರ ಹತ್ತುವುದು, ಜೇನು, ಇರುವೆ ಮುಂತಾದ ಕೀಟಗಳು ಹಸಲರ ಚಿತ್ರಗಳಲ್ಲಿವೆ.  ಕುಣಬಿಗಳು, ಒಕ್ಕಲಿಗರಲ್ಲಿ ಗುಡಿಸಲು, ಗದ್ದೆ, ಕೊಟ್ಟಿಗೆ, ಗಾಡಿ ಎತ್ತು, ಹಸೆಚಿತ್ತಾರದೊಳಗೆ ಇರುತ್ತವೆ.  ಹಾಲಕ್ಕಿಗೌಡರಲ್ಲಿ ಬಾಸಿಂಗ, ತೊಂಡಿಲು, ಮಣಿಗಳು ಮಾತ್ರ.  ಮೊಗವೀರರಲ್ಲಿ ಸೂರ್ಯ, ಚಂದ್ರ, ರಂಗೋಲಿ, ಬಾಚಣಿಕೆ, ಬೀಸಣಿಕೆಗಳ ಮಧ್ಯೆ ವಧೂವರರು.

ಬಣ್ಣಗಳ ವಿನ್ಯಾಸಗಳೇ ಹಸೆಚಿತ್ತಾರಗಳ ವಿಭಿನ್ನತೆಗೆ ಕಾರಣ.  ಕೆಮ್ಮಣ್ಣಿನ ಹಿನ್ನೆಲೆಯಲ್ಲಿ ಅಕ್ಕಿಹಿಟ್ಟು, ಬಿಳಿ ಜೇಡಿಮಣ್ಣಿನ ಚಿತ್ರಗಳು.  ಅರಿಸಿನಬಣ್ಣದ ಚಿತ್ರಗಳು, ಅಕ್ಕಿಹಿಟ್ಟು, ಬಿಳಿ ಜೇಡಿಯ ಹಿನ್ನೆಲೆಯಲ್ಲಿ ಕೆಮ್ಮಣ್ಣಿನ ಚಿತ್ರಗಳು, ಕಪ್ಪುಬಣ್ಣದ ಚಿತ್ರಗಳು ಹೀಗೆ ನಾಲ್ಕು ವಿನ್ಯಾಸಗಳಲ್ಲಿ ದೀವರು ಚಿತ್ರಿಸುತ್ತಾರೆ.

ಮನೆತನಗಳ ಇಷ್ಟಬಣ್ಣಗಳು

ಬಣ್ಣಗಳ ವಿನ್ಯಾಸ ಆಯಾ ಕುಟುಂಬಗಳಿಗೆ ಮೀಸಲು.  ಹಸವಂತೆಯ ಕಾನ್‌ಮನೆ ಮನೆತನದವರು ಕೆಂಪು ಹಿನ್ನೆಲೆಯಲ್ಲಿ ಬಿಳಿಯ ಚಿತ್ತಾರ, ಯಲಕುಂದ್ಲಿಯ ಬರಿಗೆ ಮನೆತನದವರದು ಬಿಳಿ ಹಿನ್ನೆಲೆಯಲ್ಲಿ ಕೆಂಪು ಚಿತ್ತಾರ.  ಆದರೆ ಮಧ್ಯ ಖಾಲಿ ಬಿಡುತ್ತಾರೆ.  ದಂಡಿಗೆ ಬರೆಯುವುದಿಲ್ಲ.  ಹುಳೇಗಾರು ಹಾಲಮ್ಮ, ಮಾಲ್ವೆ ಶಾರದ ಇವರುಗಳದು ಬಿಳಿ ಹಿನ್ನೆಲೆಯ ಕಪ್ಪುಚಿತ್ತಾರ, ಮಧ್ಯೆ ಕೆಂಪು ಹಿನ್ನೆಲೆಯಲ್ಲಿ ಬಿಳಿದಂಡಿಗೆ ಇರುತ್ತದೆ.  ಪುಂಡಿ ಜಾತಿಯವರು ಮಾತ್ರ ಕೆಂಪು ಹಿನ್ನೆಲೆಯಲ್ಲಿ ಹಳದಿ ಚಿತ್ತಾರಗಳನ್ನು ಬರೆಯುತ್ತಾರೆ.  ಕೆಲವರದು ಬರೇ ಬೊಟ್ಟುಗಳ ಚಿತ್ತಾರ.

ಬಣ್ಣಗಳ ವಿನ್ಯಾಸ ದೀವರ ಒಳಪಂಗಡಗಳು, ಜಾತ್ಯಾಂತರ ವಿವಾಹ, ಕೂಡಿಕೆ (ವಿಧವಾ ವಿವಾಹ) ಮೊದಲಾದ ಸಂಬಂಧಗಳನ್ನು ಸೂಚಿಸುತ್ತವೆ ಎನ್ನುತ್ತಾರೆ ಹಸುವಂತೆ ಈಶ್ವರನಾಯ್ಕರು.

ಹಸಲರು ಹಾಗೂ ದಲಿತರಲ್ಲಿ ಇದೆಲ್ಲದರೊಂದಿಗೆ ಕಪ್ಪು ಹಿನ್ನೆಲೆಯ ಬಿಳಿಚಿತ್ರಗಳೂ ಇವೆ.  ಬಣ್ಣಗಳ ವಿನ್ಯಾಸ ವಿಭಿನ್ನವಾದರೂ ಬಿಡಿಸುವ ಚಿತ್ರಗಳೆಲ್ಲಾ ಒಂದೇ ರೀತಿ.  ಆದರೆ ಅನುಕರಣೆಯಲ್ಲ.  ಕಲಾವಿದೆಯರ ಅಭಿವ್ಯಕ್ತಿ.

ಕೆಳದಿ, ಕ್ಯಾಸನೂರು, ಬಿಳಿಗಿ ಸೀಮೆಗಳಲ್ಲಿ ಈ ಕಲೆ ಅತ್ಯುತ್ತಮವಾಗಿದೆ ಎನ್ನುತ್ತಾರೆ ಡಾ. ಮೋಹನ್ ಚಂದ್ರಗುತ್ತಿ.

ಕೃಷಿ ಏರಿಳಿತ ಹೊಂದಿ

ಕರೂರು, ಆವಿನಹಳ್ಳಿ, ಯಲ್ಲಾಪುರ, ಶಿರಸಿಗಳಲ್ಲಿ ಯಾವುದೋ ಹಂತದಲ್ಲಿ ಇವು ನಿಶ್ಚಲವಾಗಿರುವುದನ್ನು ಗುರುತಿಸಲಾಗಿದೆ.

ಜೀವವೈವಿಧ್ಯ, ಕೃಷಿ ಚಟುವಟಿಕೆಗಳು ಹೆಚ್ಚಿರುವ ಜಾಗಗಳಲ್ಲಿ, ಕಲಾವಿದೆಯರ ಪೈಪೋಟಿ ಹೆಚ್ಚಿರುವ ಕಡೆ ಈ ಕಲೆ ಅಭಿವೃದ್ಧಿಯಾಗಿದೆ.  ಜನಾಂಗೀಯ ಜೀವಂತಿಕೆಯೇ ಕಲೆಯ ಜೀವಂತಿಕೆಗೆ ಕಾರಣ ಎಂಬ ಅನಿಸಿಕೆ ಡಾ. ಮೋಹನ್ ಚಂದ್ರಗುತ್ತಿಯವರದು.

ಕಲೆ ಅತ್ಯುತ್ತಮವಾಗಿರುವ ಪ್ರದೇಶಗಳಲ್ಲಿ ಕೆಮ್ಮಣ್ಣು ಬಳಿದ ಮಣ್ಣಿನ ಗೋಡೆ ಇಲ್ಲ.  ಅಡ್ಡಾದಿಡ್ಡಿ ಚಿತ್ತಾರಗಳಿರುವ ಹಳ್ಳಿಗಳಲ್ಲಿ ಮನೆಗೋಡೆಗಳು ಮಣ್ಣಿನದೇ ಆಗಿದೆ.  ಅದಕ್ಕೆ ಕೆಮ್ಮಣ್ಣು ಬಳಿದಿದ್ದಾರೆ.  ಜೇಡಿ, ಗುರಿಗೆ ಅರಿಸಿನದ ಚಿತ್ರಗಳನ್ನು ಬಿಡಿಸಿದ್ದಾರೆ.  ಹೀಗೂ ಈ ಚಿತ್ತಾರಗಳು ಶ್ರೀಮಂತ ಬಡ ಅಂತರ ತೆರೆದಿಡುತ್ತವೆ.

ಬಿಳಿ ಚಿತ್ತಾರ ಬರೆಯುವವರು ತಮ್ಮ ಎತ್ತುಗಳಿಗೆ ಬಾಸಿಂಗ ಕಟ್ಟುವುದಿಲ್ಲ.  ಅದಕ್ಕೆ ಚಿತ್ತಾರದೊಳಗಿನ ವಧೂವರರಿಗೆ ಬಾಸಿಂಗ, ತೊಂಡ್ಲು ಬಿಡಿಸುವುದಿಲ್ಲ.  ಒಂದೊಮ್ಮೆ ಎತ್ತುಗಳಿಗೆ ಬಾಸಿಂಗ ಕಟ್ಟುವ ಮನೆತನಕ್ಕೆ ಹೆಣ್ಣು ಕೊಟ್ಟಾಗ ಚಿತ್ರಿಸುತ್ತಾರೆ.  ಯಲಕುಂದ್ಲಿಯ ಕೆಂಪು ಚಿತ್ತಾರಗಳಲ್ಲಿ ದಂಡಿಗೆ ಇಲ್ಲದ ಕಾರಣ ಅವರು ವೆಂಕಟರಮಣನ ಒಕ್ಕಲು ಅಲ್ಲ ಎನ್ನುತ್ತಾರೆ.  ಚಿತ್ತಾರಗಳು ಈ ರೀತಿಯಾಗಿ ಇತಿಹಾಸವನ್ನು ಪಿಸುಗುಡುತ್ತವೆ.

ಹಸುವಂತೆ ಈಶ್ವರನಾಯ್ಕರು ಶಿಲಾಯುಗಕ್ಕೆ ಹೋಗುತ್ತಾರೆ.  ಪುರಾತನ ಗುಹೆಗಳ ಚಿತ್ರಗಳು, ದೀವರ ಚಿತ್ತಾರಗಳೆರಡೂ ಕೇವಲ ಸರಳ ಗೆರೆಗಳಿಂದಲೇ ಆಗುವ ಕಾರಣ ದೀವರು ಆದಿವಾಸಿಗಳು ಎನ್ನುವ ಪ್ರತಿಪಾದನೆ.

ದೀವರ ಮಹಿಳೆಯರು ಗಂಡಿಗಿಂತಲೂ ಹೆಚ್ಚು ಕೃಷಿ ಕೆಲಸಗಾರ್ತಿಯರು.  ಆಕೆಗೆ ಕೃಷಿ ಉಪಕರಣಗಳೆಲ್ಲಾ ಚೆನ್ನಾಗಿ ಗೊತ್ತು.  ಹಾಲು ಹೈನದ ವಹಿವಾಟು ಬಲ್ಲಳು.  ಗಂಡನ್ನು ಅವಲಂಬಿಸದೇ ತನ್ನೆಲ್ಲಾ ಖರ್ಚುವೆಚ್ಚಗಳನ್ನು ನಿರ್ವಹಿಸುತ್ತಾಳೆ.  ಮನೆಯ ಪ್ರಮುಖ ನಿರ್ಣಯಗಳೆಲ್ಲಾ ಆಕೆಯದು.  ಬದುಕೆಲ್ಲಾ ಜೇನುಹುಳುವಿನಷ್ಟೇ ಕ್ರಿಯಾಶೀಲ.  ಚಿತ್ತಾರದಲ್ಲಿ ಅಕೆಯ ಅಭಿವ್ಯಕ್ತಿ, ಕೃಷಿಬದುಕು, ನಿಸರ್ಗ ಸಂಬಂಧ, ಒಡವೆ, ವಸ್ತ್ರ, ಆರ್ಥಿಕತೆ, ಕಾಮ, ಪ್ರೇಮ, ಆಸೆ ಹೀಗೆ ಏನೆಲ್ಲಾ ಚಿತ್ತಾರವಾಗಿ ಮೂಡುತ್ತದೆ.  ಚಿತ್ತಾರದ ಆವರಣದಲ್ಲಿ, ಚಿತ್ತಾರದ ಒಳಗೆ, ಹೊರಗೆ ಎಲ್ಲೂ ಗಂಡಿಗೆ ಪ್ರವೇಶವಿಲ್ಲ.  ಹೀಗಾಗಿ ಚಿತ್ತಾರವು ಸ್ತ್ರೀತನವನ್ನು ಹೊರಸೂಸುತ್ತಿರುತ್ತದೆ.  ಹೀಗಾಗಿಯೇ ಚಿತ್ತಾರದಲ್ಲಿ ಶಿಸ್ತಿದೆ, ಲಾಲಿತ್ಯವಿದೆ, ಸಂಪ್ರದಾಯವಿದೆ.  ಆಕೆಯ ನೋವು ನಲಿವುಗಳಿವೆ.  ಬಹುಶಃ ಪ್ರಪಂಚದಲ್ಲಿಯೇ ಹೆಣ್ಣಿನ ಅಭಿವ್ಯಕ್ತಿಯಾಗಿರುವ ಏಕೈಕ ಕಲೆ ಚಿತ್ತಾರ.

ಇದು ಗಂಡಿನ ಕೈಗೆ ಸಿಕ್ಕಮೇಲೆ ನಡುಮನೆಯಿಂದ ಬಿಡುಗಡೆ ಹೊಂದಿತು.  ಊರು ಕೇರಿ ದಾಟಿ ರಾಜಧಾನಿಗೆ ನಡೆಯಿತು.  ದೇಶವಿದೇಶಗಳಲ್ಲಿ ಸ್ಥಾಪನೆಯಾಯಿತು.

ನಡುಮನೆಯಿಂದ ನಾಲ್ದೆಸೆಗೆ

ಚಿತ್ತಾರವಿಂದು ರೈತರ ನಡುಮನೆಯೊಳಗಷ್ಟೇ ಉಳಿದಿಲ್ಲ.  ಮಹಿಳೆಯರ ಬದುಕಿನಿಂದ ಹಾರಿ ಪಟ್ಟಣ ಸೇರಿದೆ.  ರೂಪಾಂತರಗೊಂಡಿದೆ.  ನಗರಗಳಲ್ಲಿ ನರ್ತಿಸಿದೆ.  ಸಮಾರಂಭಗಳ ಕೇಂದ್ರಬಿಂದುವಾಗಿದೆ.  ಶ್ರೀಮಂತರ ಮನೆಯ ಗೋಡೆಗಳನ್ನು ಇನ್ನಷ್ಟು ಶ್ರೀಮಂತಗೊಳಿಸಿದೆ.  ವಿದೇಶಗಳಲ್ಲಿ ಅಚ್ಚರಿ ಮೂಡಿಸಿದೆ.  ಹಲವು ನಿಯಕಾಲಿಕಗಳ ಸೌಂದರ್ಯ ಹೆಚ್ಚಿಸಿದೆ.

ಇಸವಿ ೧೯೮೭ರಲ್ಲಿ ನೆಲ್ಲೂರುಮನೆ ಗೌರಮ್ಮ (ಹಿರೇಮನೆ ಹುಚ್ಚಪ್ಪ ಮಾಸ್ತರ ಪತ್ನಿ)ನವರು ಮೊದಲು ಹಸೆಚಿತ್ತಾರ, ಬುಟ್ಟಿಚಿತ್ತಾರಗಳನ್ನು ಬೆಂಗಳೂರಲ್ಲಿ ನಡೆದ ರಾಜ್ಯ ಕರಕುಶಲ ಮೇಳದಲ್ಲಿ ಪ್ರದರ್ಶಿಸಿದರು.  ಮುಂದೆ ಅನೇಕ ಪ್ರದರ್ಶನಗಳಲ್ಲಿ ಭಾಗವಹಿಸಿ ಜನರಲ್ಲಿ ಚಿತ್ತಾರದ ಬಗೆಗೆ ಆಸಕ್ತಿ ಮೂಡಿಸಿದರು.  ಅನೇಕ ಹೆಣ್ಣುಮಕ್ಕಳಿಗೆ, ಯುವಕರಿಗೆ ತರಬೇತಿ ನೀಡಿದರು. ಇಸವಿ ೨೦೦೭ರಲ್ಲಿ ನೆಲ್ಲೂರುಮನೆ ಗೌರಮ್ಮನವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ದೊರೆಯಿತು.

ಇದೇ ಸಮಯದಲ್ಲಿ ಹೆಗ್ಗೋಡಿನಲ್ಲಿರುವ ಚರಕ ಮಹಿಳಾ ಗ್ರಾಮೋದ್ಯೋಗ ಘಟಕದಲ್ಲಿದ್ದ ಹೊನ್ನೇಸರದ ಗೌರಮ್ಮನವರ ಚಿತ್ರಗಳಿಗೆ ಹೊಸ ವೇದಿಕೆ ಸಿಕ್ಕಿತು.  ಗ್ರಾಮೋದ್ಯೋಗ ಉತ್ಪನ್ನಗಳಾದ ಲೆಟರ್‌ಪೌಚ್, ಫೈಲ್‌ಗಳು, ಗ್ರೀಟಿಂಗ್ಸ್, ಅಂಗಿ, ಚೀಲ ಮುಂತಾದವುಗಳ ಮೇಲೆ ಸ್ಕ್ರೀನ್ ಪ್ರಿಂಟಿಂಗ್ ತಂತ್ರ ಬಳಸಿ ಚಿತ್ರ ಅಚ್ಚು ಹಾಕಿದರು.  ಇದನ್ನೇ ನೂರಾರು ಮಹಿಳೆಯರಿಗೆ ಕಲಿಸಿದರು.

ಗ್ರಾಮೀಣ ಕಲೆಯನ್ನು ವ್ಯಾಪಾರಕ್ಕೆ ಬಳಸುತ್ತಾರೆ.  ಸಂಪ್ರದಾಯವನ್ನೆಲ್ಲಾ ಹಾಳು ಮಾಡಿದರು ಎನ್ನುವ ಆರೋಪ ಬಂತು.  ಹಸೆಚಿತ್ತಾರಕ್ಕೆ ಆಧುನಿಕ ರೂಪ ಕೊಟ್ಟದ್ದನ್ನು ಹಳ್ಳಿಯವರು ನಿರಾಕರಿಸಿದ ಚಿತ್ರಣ ನೀಡುತ್ತಾರೆ ಹೊನ್ನೇಸರದ ಗೌರಮ್ಮ.

ಗ್ಲಾಸ್ ಮೇಲೆ, ರಟ್ಟಿನ ಮೇಲೆ, ಮಡಿಕೆಗಳ ಮೇಲೆ ಹೀಗೆ ವಿವಿಧ ಹಿನ್ನೆಲೆಗಳಲ್ಲಿ ಇವರು ಚಿತ್ರ ರಚಿಸತೊಡಗಿದರು.  ಇದೊಂದು ಪ್ರಮುಖ ಆದಾಯದ ಮೂಲವಾಯಿತು.  ಬೆಂಗಳೂರಿನಲ್ಲಿರುವ ದೇಸಿ ಅಂಗಡಿಯ ಮೂಲಕ ಇದಕ್ಕೆ ವ್ಯಾಪಕ ಮಾರುಕಟ್ಟೆಯೂ ದೊರಕಿತು.  ಬೆಂಗಳೂರಿನ ಹೊಸಮನೆಗಳಲ್ಲಿ ಚಿತ್ತಾರಕ್ಕಾಗಿ ಕರೆ ಬರತೊಡಗಿತು.

ಅಶೋಕ ಫೌಂಡೇಶನ್, ಚಿತ್ತಾರದ ಅಧ್ಯಯನಕ್ಕೋಸ್ಕರ ಶಿರವಂತೆಯ ಸಮೀಪದ ಗಡೆಮನೆ ಲಕ್ಷ್ಮೀಯವರಿಗೆ ಫೆಲೋಶಿಪ್ ನೀಡಿತು.  ಅಲ್ಲೊಂದು ಚಿತ್ತಾರದಂಗಳ ಹುಟ್ಟಿತು.  ಚಿತ್ತಾರವು ಇನ್ನಷ್ಟು ಹೊಸ ಆಯಾಮ ಪಡೆಯಿತು.

ರಾಷ್ಟ್ರಪ್ರಶಸ್ತಿ

ಚಿತ್ತಾರವು, ಮನುಷ್ಯ ಪ್ರಕೃತಿಯನ್ನು ಆರಾಧಿಸುವ ಮಾಧ್ಯಮ.  ಮನುಷ್ಯ ಮನುಷ್ಯರನ್ನು ಆರಾಧಿಸುವ ವಿವರಣೆ ನೀಡುತ್ತದೆ.  ಇಡೀ ಬದುಕಿನ ವಿಭಿನ್ನ ಮಜಲುಗಳನ್ನು ನೀಡುತ್ತದೆ ಎನ್ನುವ ಹಸುವಂತೆ ಈಶ್ವನಾಯ್ಕರು ತಮ್ಮ ಆರಾಧನಾ ಎನ್ನುವ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

ಸಂಪೂರ್ಣ ಸಂಪ್ರದಾಯದಿಂದ ಕೂಡಿದ ಎಲ್ಲಾ ರೀತಿಯ ಚಿತ್ತಾರಗಳ ಅನನ್ಯ ಸಂಬಂಧಗಳಿಂದ ಆರಾಧನಾ ಜನಿಸಿತ್ತು.  ದೀವರ ಬದುಕು ಅಲ್ಲಿ ಪ್ರತಿಬಿಂಬಿತವಾಗಿತ್ತು.  ಚಿತ್ತಾರ ಬೆಂಗಳೂರಿನಿಂದ ದೆಹಲಿಗೆ ನೆಗೆದಿತ್ತು.

ಈಶ್ವರನಾಯ್ಕರ ಚಿತ್ತಾರ ಚಾವಡಿಗೆ ಬಿಡುವಿಲ್ಲದಷ್ಟು ಕೆಲಸ.  ಜಡಚಿತ್ತಾರಗಳಿಗೆ ಚಲನೆ ನೀಡಿದ್ದು, ಮ್ಯೂರಲ್‌ಗಳಾಗಿ ಚಿತ್ರಿಸತೊಡಗಿದ್ದು ಬೆಳವಣಿಗೆ.

(ಚಲನ ಎಂದರೆ ಆಚೆ ಈಚೆ ವಿರುದ್ಧ ದಿಕ್ಕಿನಲ್ಲಿರುವ ಮನುಷ್ಯರ ಪಾದಗಳನ್ನು ಒಂದೇ ದಿಕ್ಕಿಗೆ ಮಾಡಿದ್ದು, ಹಸು ಕರೆಯುವಿಕೆ, ಭತ್ತ ಕುಟ್ಟುವಿಕೆ, ಗಾಳಿಪಟ ಹಾರಿಸುವ ಕ್ರಿಯೆಗಳನ್ನೆಲ್ಲಾ ಚಿತ್ತಾರದ ಆವರಣದೊಳಗೆ ತಂದರು)  ಆಧುನಿಕತೆಯು ಸಂಪ್ರದಾಯವನ್ನು ಮೆಟ್ಟಬಾರದೆಂಬ ಎಚ್ಚರಿಕೆ.

ಅನೇಕ ವರ್ಷಗಳಿಂದ ಮಾಡಿದ ಚಿತ್ತಾರದ ಬಗೆಗಿನ ದಾಖಲಾತಿ, ಲೇಖನಗಳ ಪುಸ್ತಕವನ್ನು ಸಾಹಿತಿ ನಾ.ಡಿಸೋಜಾರವರು ಚಿತ್ತಾರವೆನ್ನುವ ಹೆಸರಿನಲ್ಲೇ ಹೊರತಂದರು.

ಚರಕದಿಂದ ಪ್ರೇರಿತರಾದ ಬಂದಗದ್ದೆ ರಾಧಾಕೃಷ್ಣ ಹಸೆಮನೆ ಕಟ್ಟಿದರು.  ಚಿತ್ತಾರವನ್ನು ಆಧರಿಸಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದರು.  ಗಣೇಶನ ಚಿತ್ರ, ವೆಂಕಟರಮಣನ ಚಿತ್ರಗಳು, ಬೇರೆ ಬೇರೆ ಬಣ್ಣಗಳ ಮಣ್ಣನ್ನು ಬಣ್ಣಗಳಾಗೇ ಬಳಸುವಿಕೆ ಹೀಗೆ ಏನೆಲ್ಲಾ.  ಪುಸ್ತಕಗಳ ಮುಖಪುಟ, ಒಳಪುಟಗಳ ಸೌಂದರ್ಯ ಹೆಚ್ಚಿಸಲು ಬಳಸತೊಡಗಿದರು.

ಧಾರವಾಡ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ತರಬೇತಿ, ಸಾಗರದ ಸಂಜಯ ಪಾಲಿಟೆಕ್ನಿಕ್‌ನಲ್ಲಿ ತರಬೇತಿ, ಶಿವಮೊಗ್ಗದ ಜನಶಿಕ್ಷಣ ಸಂಸ್ಥೆಯಡಿಯಲ್ಲಿ ತರಬೇತಿ ನೀಡಿದರು.  ಹಸೆ ಎನ್ನುವ ಪುಸ್ತಿಕೆಯನ್ನೂ ಹೊರತಂದರು.

ಸಾಗರದ ಸುರಭಿ ಗ್ರಾಮೀಣ ಉದ್ಯೋಗ ಸಂಸ್ಥೆಯವರು ತಮ್ಮ ಬಿದಿರಿನ ಕಲಾಕೃತಿಗಳ ಮೇಲೆ ಚಿತ್ತಾರದ ಚಿಕ್ಕ ಚಿಕ್ಕ ರೂಪಕಗಳನ್ನು ಬಳಸತೊಡಗಿದರು.  ಚಿತ್ತಾರದ ಚಿತ್ರಗಳಿಂದಾಗಿಯೇ ಮಾರಾಟ ಹೆಚ್ಚಿದ್ದು ಹೌದು ಎನ್ನುವ ಪ್ರಾಮಾಣಿಕ ಒಪ್ಪಿಗೆ ಸುರಭಿಯ ಪರಮೇಶ್ವರರದು.

ಶಿವಾನಂದ ಕುಗ್ವೆ, ವಸಂತ ಕುಗ್ವೆ ಮೊದಲಾದವರೂ ಚಿತ್ತಾರವನ್ನು ಮರದ ಮಾಧ್ಯಮ, ಇನ್ನಿತರ ಪ್ರಯೋಗಗಳ ಮೂಲಕ ಹರಡಲು ಪ್ರಯತ್ನಿಸಿದರು.

ಶಿರವಂತೆಯ ಚಂದ್ರಶೇಖರ-ಗೌರಮ್ಮ ದಂಪತಿಗಳು ಚಿತ್ರಸಿರಿಯ ಮೂಲಕ ಯುವಕ, ಯುವತಿಯರಿಗೆ ತರಬೇತಿ ನೀಡಿದರು.  ಪರದೆಗಳ ಮೇಲೆ, ಪಟಗಳ ಮೇಲೆ ಚಿತ್ತಾರ ಬರೆದರು.  ಅತ್ಯಂತ ದೊಡ್ಡ ಚಿತ್ತಾರಗಳನ್ನು ಬರೆದು ಪ್ರದರ್ಶಿಸಿದರು.

ಹೆಣ್ಣಿನ ಮಡಿಲಿನಿಂದ ಗಂಡಸರ ತೋಳಿಗೆ ಬಂದ ಮೇಲೆಯೇ ಚಿತ್ತಾರಕ್ಕೆ ಇಷ್ಟೆಲ್ಲಾ ವ್ಯಾಪಕತೆ ಸಿಕ್ಕಿತು.  ಈಗ ಇಂಗ್ಲೆಂಡ್, ಕೆನಡಾ, ಅಮೇರಿಕಾ, ಜರ್ಮನ್‌ಗಳಿಗೂ ಹೋಗಿದೆ.

ಕೆಮ್ಮಣ್ಣು, ಅಕ್ಕಿಹಿಟ್ಟು, ಗುರಿಗೆಪುಡಿಗಳ ಚಿತ್ತಾರಕ್ಕೆ ಆಯುಸ್ಸು ಅಬ್ಬಬ್ಬಾ ಎಂದರೆ ಮೂರು ವರ್ಷ ಮಾತ್ರವಾಗಿತ್ತು.  ಹುರಿಮಂಜು (ರೆಡ್ ಆಕ್ಸೈಡ್), ಅಕ್ರಲಿಕ್, ಫೆವಿಕಾಲ್‌ಗಳು ಬಂದಮೇಲೆ ಚಿತ್ತಾರದ ಆಯುಸ್ಸು ಹೆಚ್ಚಿದೆ.  ಅನೇಕರ ಬದುಕಿಗೆ ಚಿತ್ತಾರದಿಂದಲೇ ಬಣ್ಣ ಬಂದಿದೆ.

ಬಾಗಿಲು ಚಿತ್ತಾರ

ಈ ಚಿತ್ತಾರಗಳು ಆಭರಣ, ಸೀರೆ, ರವಿಕೆಗಳಲ್ಲಿರುವ ವಿನ್ಯಾಸಗಳ ಅನುಕರಣೆ.  ಇವುಗಳಿಗೆ ಬಣ್ಣದ ಕಟ್ಟುಪಾಡಿಲ್ಲ.

ಒಂದು ಅಡಿಕೆ, ಎರಡು ಅಡಿಕೆ (ಅಡಿಕೆ=ಅಡ್ಡಿಕೆ ಎನ್ನುವ ಆಭರಣದಲ್ಲಿರುವ ವಿನ್ಯಾಸ) ನಾಗಮುರಿ, ತಿರಿಗಿಮಣಿ, ಗಾಡಿದಡಿ, ಹೂವು, ಗಡ, ಬಳ್ಳಿಗಳು ಹೀಗೆ ಅನೇಕ ನಮೂನೆಗಳಿವೆ.  ಹಸೆಚಿತ್ತಾರದ ಚೌಕಟ್ಟುಗಳೇ ಇಲ್ಲಿವೆ.

ಬಾಗಿಲ ದಾರಂದದ ಸುತ್ತಾ ಮೂರು ದಿಕ್ಕಿನಲ್ಲಿ ಪಟ್ಟಿಯಂತೆ ನೇರವಾಗಿ ಶಿಸ್ತಾಗಿ ಬರೆಯುತ್ತಾರೆ.  ಅದೇ ರೀತಿ ಕಿಟಕಿಗಳ ಸುತ್ತ ಗೊಂಬೆಸಾಲು, ಪೊಪ್ಳಿ ಮುಂತಾದವುಗಳನ್ನು ಬರೆಯುತ್ತಾರೆ.

ಬಾಗಿಲು, ಕಿಟಕಿಗಳ ಮಧ್ಯದ ಜಾಗಗಳಲ್ಲಿ ವೆಂಕಿಗಿಡ, ಕೌಳಿಮಟ್ಟಿ, ತೇರು, ತೊಂಡೆಚಪ್ಪರ, ಆಲದಮರ, ಅರಳೀಕಟ್ಟೆ ಇವುಗಳ ರಚನೆ.

ಹೆಬ್ಬಾಗಿಲು, ವಾಸ್ತುಬಾಗಿಲುಗಳ ಪಕ್ಕದ ಗೋಡೆಗಳಲ್ಲಿ ಮಾತ್ರ ಈ ಚಿತ್ರಗಳಿರುತ್ತವೆ.

ತೇರು ರಂಗೋಲಿ

ಅರಿಸಿನ ಬಣ್ಣದಲ್ಲಿ ಬರೆಯುವ ಮುಖ್ಯ ಚಿತ್ತಾರವೇ ತೇರು.  ತಿರುಪತಿ ತಿಮ್ಮಪ್ಪನದಿರಬಹುದೆಂಬುದು ಊಹೆ?!  ತೇರಿನ ಕಂಬಗಳು ಬಾಸಿಂಗ ನಿಲಿಯಿಂದ ಅಲಂಕೃತ.  ಗೋಪುರ ಸಹ.  ತೇರಿಗೆ ಚಕ್ರಗಳಿವೆ.

ತೇರು ಮನೆಬಾಗಿಲಿಗೆ ಬಂದಾಗ ಆರತಿ ಎತ್ತುವುದು ಪದ್ಧತಿ.  ಇದನ್ನೇ ಬಾಗಿಲಲ್ಲಿ ರಂಗೋಲಿಯಂತೆ ಬರೆಯುತ್ತಾರೆ.  ಇದರಲ್ಲಿ ಎಂಟು ಮೂಲೆಯಿಂದ ೧೦೮ ಮೂಲೆ ಆರತಿಯವರೆಗೂ ಬರೆಯುವವರಿದ್ದಾರೆ.  ಈ ಆರತಿಯೂ ಸಹ ಚಿತ್ತಾರ.  ಮೂಲೆಗಳಲ್ಲಿ ವೃತ್ತಗಳಿರುವ ಚಿತ್ತಾರ ಎನ್ನುತ್ತಾರೆ ಹಸುವಂತೆ ಈಶ್ವರನಾಯಕ.

ಮಾಹಿತಿ ಸಹಾಯ;
ಶ್ರೀ ಹುಚ್ಚಪ್ಪ ಮಾಸ್ತರ್ ಮತ್ತು ಶ್ರೀಮತಿ ಗೌರಮ್ಮ ಹುಚ್ಚಪ್ಪ ಮಾಸ್ತರ್ ದೂ : ೦೮೧೮೩-೨೨೦೨೦೪,೯೪೪೯೯೮೪೧೨೪
ಶ್ರೀ ಈಶ್ವರನಾಯ್ಕ ಹಸುವಂತೆ ದೂ : ೯೪೪೯೨೦೫೨೦೯, ೦೮೧೮೩-೨೫೪೪೬೮
ಶ್ರೀ ಹೊನ್ನೇಸರದ ಗೌರಮ್ಮ ದೂ : ೯೪೪೯೪೨೭೦೬೧
ಶ್ರೀ ಶಿರವಂತೆ ಚಂದ್ರಶೇಖರ್ ದೂ : ೯೪೪೯೬೯೮೯೭೯
ಶ್ರೀಮತಿ ಗೌರಮ್ಮ ಚಂದ್ರಶೇಖರ್
ಶ್ರೀ ಡಾ. ಮೋಹನ್ ಚಂದ್ರಗುತ್ತಿ ದೂ : ೯೪೪೯೦೬೬೪೯೧
ಶ್ರೀ ರಾಧಾಕೃಷ್ಣ ಬಂದಗದ್ದೆ ದೂ : ೦೮೧೮೩-೨೬೦೩೩೭
ಶ್ರೀ ನಾ. ಡಿಸೋಜ
ಯಲಕುಂದ್ಲಿ ಮತ್ತು ಬೇಳೂರು ಗ್ರಾಮಸ್ಥರು