ಹೆಬ್ಬಳ್ಳಿ ಭೂರಹಿತ ರೈತ ಕೂಲಿಕಾರರ ಹೋರಾಟ ಮುಕ್ತಾಯವಾಗಿ ೫ ದಶಕಗಳು ಸಂದಿವೆ. ಸದ್ಯಕ್ಕೆ ಹೆಬ್ಬಳ್ಳಿಯಲ್ಲಿ ಹೋರಾಟದಲ್ಲಿ ಪಾಲ್ಗೊಂಡ ಒಬ್ಬ ರೈತನೂ ಬದುಕಿಲ್ಲ. (ಈಗೇನಿದ್ದರೂ ಹೋರಾಟದಲ್ಲಿ ಪಾಲ್ಗೊಂಡವರ ಮಕ್ಕಳು ಹಿರಿಯರಿಂದ ಕೇಳಿದ ಬಗ್ಗೆಯೇ ಹೇಳುತ್ತಾರೆ.) ಅಚ್ಚರಿಯೆಂದರೆ ಈಗಿನ ಹೆಬ್ಬಳ್ಳಿ ಗ್ರಾಮಸ್ಥರಿಗೆ ನೀಲಗಂಗಯ್ಯ ಅಂದರೆ ಯಾರು ಎಂಬುದು ಗೊತ್ತಿಲ್ಲ. ಅವರೊಬ್ಬರು ಬದುಕಿದ್ದಾರೆ ಎನ್ನುವುದೂ ತಿಳಿದಿಲ್ಲ. ಹೆಬ್ಬಳ್ಳಿ ಹೋರಾಟದ ಮಿತಿಗಳೇನೇ ಇರಲಿ ಅದು ಗ್ರಾಮದ ರೈತರಿಗೆ, ಕೂಲಿಕಾರ್ಮಿಕರಿಗೆ ಭೂಮಿ ಹಂಚುವಲ್ಲಿ ಪರಿಣಾಮಕಾರಿಯಾದ ಪತ್ರ ನಿರ್ವಹಿಸಿತ್ತು. ಅದಕ್ಕೆ ಮುಂದಾಳುವಾಗಿದ್ದ ವ್ಯಕ್ತಿಯೊಬ್ಬನನ್ನು ತಲತಲಾಂತರದವರೆಗೂ ನೆನಪಿಟ್ಟುಕೊಳ್ಳದಿದ್ದರೂ, ಕನಿಷ್ಟ ಆ ವ್ಯಕ್ತಿ ಬದುಕಿರುವಾಗಲೇ ಗ್ರಾಮಸ್ಥರು ಮರೆಯುವುದು ವಿಚಿತ್ರವಾಗಿ ತೋರುತ್ತದೆ. ಹೇಗೆ ಹೋರಾಟ ಮುಕ್ತಾಯಗೊಂಡ ನಂತರದಲ್ಲಿ ಕೆಲವೊಮ್ಮೆ ಮಾತ್ರ ನೀಲಗಂಗಯ್ಯ ಪೂಜಾರ ಹೆಬ್ಬಳ್ಳಿಗೆ ಹೋಗಿದ್ದು ಬಿಟ್ಟರೆ, ಕಳೆದ ೩೦-೪೦ ವರ್ಷಗಳಲ್ಲಿ ಅವರು ಮತ್ತೆ ಆ ಗ್ರಾಮಕ್ಕೆ ಭೇಟಿಕೊಟ್ಟಿಲ್ಲ. ೧೯೫೦ರ ದಶಕದ ಅಂತ್ಯದಲ್ಲಿ ಹೆಬ್ಬಳ್ಳಿ ಗ್ರಾಮದ ಜನಜೀವನದ ಭಾಗಬಾಗಿದ್ದ ವ್ಯಕ್ತಿಯೊಬ್ಬರು ಈಗ ಗ್ರಾಮದಲ್ಲಿ ಯಾರೊಬ್ಬರಿಗೂ ನೆನಪೇ ಇಲ್ಲದೆ ಬದುಕುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರಿಗಾಗಲಿ ನೀಲಗಂಗಯ್ಯ ಪೂಜಾರರಿಗಾಗಲಿ ಯಾವುದೇ ಬೇಸರವಿಲ್ಲ. ಈ ಬಗ್ಗೆ ನೀಲಗಂಗಯ್ಯನವರನ್ನು ಕೇಳಿದಾಗ ಅವರು ನಕ್ಕು, ಸುಮ್ಮನಾದರು. ಹೋರಾಟದ ಮುಖಂಡರನ್ನು ಹೆಬ್ಬಳ್ಳಿ ಮರೆತಿರಬಹುದು; ಆದರೆ ನೀಲಗಂಗಯ್ಯ ಪೂಜಾರರು ಹೋರಾಟವನ್ನು ಮರೆಯಲಿಲ್ಲ. ತಮ್ಮ ಜೀವನದುದ್ದಕ್ಕೂ ಅವರು ಹೋರಾಟಗಳನ್ನು ಮಾಡುತ್ತಲೇ ಇರುವರು.

ಹೆಬ್ಬಳ್ಳಿ ಹೋರಾಟದ ನಂತರ ಮಮ್ಮಿಗಟ್ಟಿ, ಗರಗ ಗ್ರಾಮಗಳಲ್ಲಿ ಅವರು ರೈತ ಸಂಘಟನೆ ಮಾಡಿದರು. ಮಮ್ಮಿಗಟ್ಟಿ ದೇಸಾಯಿಗಳು ೫೦೦ ಎಕರೆ ಭೂಮಿಯನ್ನು ಗೇಣಿದಾರರಿಗೆ ಉಳಲಿಕ್ಕೆ ಬಿಟ್ಟಿದ್ದರು. ಇವರು ಆ ಗೇಣಿದಾರರನ್ನು ಸಂಘಟಿಸಿ ಹೋರಾಟ ಕೈಗೊಂಡರು. ಈ ಹೋರಾಟದೊಳಗೂ ಯಶಸ್ಸುಕಂಡ ನಿಲಗಂಗಯ್ಯ ಪೂಜಾರ್ ಅವರು. ಪರಿಶಿಷ್ಠ ಜಾತಿ ಪಂಗಡಗಳಿಗೆ ಈ ಭೂಮಿಯನ್ನು ಹಂಚಿಕೆ ಮಾಡುವಲ್ಲಿ ಸಫಲರಾದರು. ೧೯೭೦ರ ದಶಕದಲ್ಲಿ ಬರಗಾಲ ಬಂದು ಆಹಾರ ಧಾನ್ಯಗಳ ಕೊರತೆಯುಂಟಾದಾಗ ಹುಬ್ಬಳ್ಳಿಯ ಸೆಂಟ್ರಲ್ ಗೋಡೌನ್ ಅನ್ನು ಲೂಟಿ ಮಾಡಿ ಬಡವರಿಗೆ ಆಹಾರ ಧಾನ್ಯ ಹಂಚುವ ಕುರಿತು ಆಲೋಚಿಸಿದರು. ಈ ಸಂಬಂಧವಾಗಿ ಕಮ್ಯುನಿಸ್ಟ್ ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರು. ಕಮ್ಯುನಿಸ್ಟ್ ಮುಖಂಡರಾಗಿದ್ದ ಎ.ಜೆ.ಮುಧೋಳ್ ಅವರೊಂದಿಗೆ ಸೇರಿ ಗೋಡೌನ್ ಮೇಲೆ ದಾಳಿ ಮಾಡುವ ಸಿದ್ಧತೆ ಇರುವಾಗ ಪೋಲೀಸರಿಂದ ಬಂಧನವಾಗಿ ೧ ವಾರ ಜೈಲುವಾಸ ಅನುಭವಿಸಿದರು.

೧೯೭೭ರ ಸುಮಾರಿನಲ್ಲಿ ಹುಬ್ಬಳ್ಳಿಯಲ್ಲಿ ಪೂಜಾರರು ನಿವೇಶನರಹಿತರ ಸಂಘಟನೆ ಮಾಡಿದರು. ಸುಮಾರು ೧೦ ಸಾವಿರ ಜನರಿಗಾದರೂ ನಿವೇಶನ ಒದಗಿಸಬೇಕೆಂಬ ಗುರಿಯೊಂದಿಗೆ ಹುಬ್ಬಳ್ಳಿ ಮುನ್ಸಿಪಾಲ್ ಕಾರ್ಪೋರೇಷನ್ ಜಾಗ ವಶಪಡಿಸಿಕೊಂಡು ಗುಡಿಸಲುಗಳನ್ನು ಕಟ್ಟಿಕೊಳ್ಳಲಿಕ್ಕೆ ಪೋಲಿಸರ ನೆರವಿನೊಂದಿಗೆ ಗುಡಿಸಲುಗಳಿಗೆ ಬೆಂಕಿ ಇಟ್ಟರು. ಅಲ್ಲದೆ ನೀಲಗಂಗಯ್ಯ ಪೂಜಾರ್ ಅವರೊಂದಿಗೆ ೩೦ ಜನರನ್ನು ಬಂಧಿಸಿದರು. ಆಗ ಜೈಲಿನಲ್ಲಿಯೇ ಪೂಜಾರ್ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದರು. ಸತತ ನಾಲ್ಕು ದಿವಸಗಳ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಗುಂಡುರಾವ್ ಸರಕಾರ ಇವರ ಹೋರಾಟಕ್ಕೆ ಮಣಿದು ಸುಮಾರು ೭ ಸಾವಿರ ನಿವೇಶನಗಳನ್ನು ಕೊಟ್ಟಿತು. ಹುಬ್ಬಳ್ಳಿಯಲ್ಲಿ ಈ ಮನೆಗಳ ಕಾಲೋನಿಯನ್ನು ಆನಂದ ನಗರ ಎಂದು ಕರೆಯಲಾಗುತ್ತದೆ. ಮುಂದೆ ಇದೇ ಹುಬ್ಬಳ್ಳಿಯಲ್ಲಿ ನಿವೇಶನರಹಿತರಾಗಿ ಉಳಿದ ಜನರಿಗಾಗಿ ಮತ್ತೊಂದು ಹೋರಾಟವನ್ನು ನೀಲಗಂಗಯ್ಯನವರು ಮಾಡಿದರು. ಈ ಹೋರಾಟವೂ ಮೂರು ವರ್ಷಗಳ ಕಾಲ ನಡೆಯಿತು. ಕೊನೆಗೆ ಬಂಗಾರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ೩ ಸಾವಿರ ಜನರಿಗೆ ನಿವೇಶನಗಳನ್ನು ನಿರ್ಮಿಸಿಕೊಡಲಾಯಿತು. ಇಲ್ಲಿ ನಿರ್ಮಾಣವಾದ ಬಡಾವಣೆಯನ್ನು ಈಗಲೂ ಡಾ. ರಾಮಮನೋಹರ ಲೋಹಿಯಾ ನಗರ ಎಂತಲೇ ಕರಯಲಾಗುತ್ತದೆ.

ಈಗ್ಗೆ ಕೆಲವು ವರ್ಷಗಳಿಂದ ಧಾರವಾಡದಲ್ಲಿ ಪೂಜಾರರು ನಿವೇಶನ ರಹಿತರ ಆಂದೋಲನವನ್ನು ಆರಂಭಿಸಿದ್ದಾರೆ. ಈ ಹೋರಾಟದಲ್ಲಿ ಅಲ್ಪ ಯಶಸ್ಸನ್ನು ಪಡೆದಿದ್ದಾರೆ. ಈ ಹೋರಾಟದ ಫಲವಾಗಿ ೨೦೦೫ರಲ್ಲಿ ಧಾರವಾಡದ ಹೊರಭಾಗದಲ್ಲಿ ನಿವೇಶನರಹಿತರಿಗಾಗಿ ಸರ್ಕಾರ ಭೂಮಿ ಮಂಜೂರು ಮಾಡಿದೆ. ಅಲ್ಲಿ ಮನೆ ಕಟ್ಟಲಿಕ್ಕಾಗಿ ಪ್ಲಾಟ್‍ಗಳನ್ನು ತಯಾರಿಸಲಾಗುತ್ತಿದೆ. ಅಲ್ಲದೆ ನಿವೇಶನರಹಿತರಿಂದ ಅರ್ಜಿಗಳನ್ನೂ ಸರಕಾರದವರು ಕರೆದಿದ್ದಾರೆ. ಈ ಸಂಬಂಧವಾಗಿ ಪ್ರತಿ ಆದಿತ್ಯವಾರ ಸಾಯಂಕಾಲ ನಿವೇಶನರಹಿತರ ಸಭೆ ಕರಯಲಾಗುತ್ತದೆ. ನೀಲಗಂಗಯ್ಯ ಪೂಜಾರ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗುತ್ತದೆ. ಅದು ಇಂದಿಗೂ ನಡೆಯುತ್ತದೆ. ತಮ್ಮ ವೃದ್ದಾಪದಲ್ಲಿಯೂ ಕೂಡ ನೀಲಗಂಗಯ್ಯ ಪೂಜಾರ್ ಈ ಸಭೆಗೆ ತಪ್ಪದೇ ಹಾಜರಾಗಿ ನಿವೇಶನರಹಿತರೊಂದಿಗೆ ಮಾತುಕತೆ ನಡೆಸುತ್ತಾರೆ. ಇದಕ್ಕಾಗಿ ಯಾರೂ ಕೂಡ ಹಣ ಖರ್ಚು ಮಾಡುತ್ತಿಲ್ಲ. ಎಲ್ಲರೂ ತಮ್ಮ ಸ್ವತಃ ಖರ್ಚಿನಲ್ಲಿ ಸಭೆಗೆ ಹಾಜರಾಗುತ್ತಾರೆ.

ಈ ಮಧ್ಯೆ ೧೯೭೮ರಲ್ಲಿ ರಾಜಕೀಯದಿಂದ ನೀಲಗಂಗಯ್ಯ ಪೂಜಾರ್ ನಿವೃತ್ತರಾಗಿದ್ದರು. ಜನತಾಪಾರ್ಟಿಯಲ್ಲಿ ಜಯಪ್ರಕಾಶ ನಾರಾಯಣ ಮತ್ತು ಹಲವು ಸಮಾಜವಾದಿ ಗೆಳೆಯರಿದ್ದಾರೆಂದು ಅವರೊಂದಿಗೆ ಇದ್ದರು. ಯಾವಾಗ ಜನತಾ ಪಾರ್ಟಿ ಒಡೆದು ಜನತಾದಳ ಆಯಿತೋ, ಆಗ ಬೇಸತ್ತು ರಾಜಕೀಯ ಪಕ್ಷಗಳೊಂದಿಗಿನ ಒಡನಾಟವನ್ನು ಕಡಿದುಕೊಂಡರು. ಹಾಗೆ ನೋಡಿದರೆ ನೀಲಗಂಗಯ್ಯನವರು ಸಮಾಜವಾದಿ ಪಾರ್ಟಿಯಲ್ಲಿದ್ದಾಗಲೂ ಪಕ್ಷದ ಸಭೆಗಳಿಗೆ ಹಾಜರಾಗುತ್ತಿದದ್ದು ಕಡಿಮೆ.

ತಮ್ಮೆಲ್ಲ ಹೋರಾಟಗಳನ್ನು ಅವರು ಪಕ್ಷದ ಸಿದ್ಧಾಂತದ ಸಂಘಟನೆಯ ಆಧಾರದ ಮೇಲೆ ಕಟ್ಟಿಕೊಂಡಿರಲಿಲ್ಲ. ವೈಯಕ್ತಿಕ ಆಸಕ್ತಿಯಿಂದ ಹೋರಾಟ ಕೈಗೊಳ್ಳುತ್ತಿದ್ದರು. ಈಗಲೂ ಸಮಾಜವಾದಿ ಮುಖಂಡರೆನಿಸಿಕೊಂಡ ಅನೇಕರಿಗೆ ಅವರು ಮಾಡಿದ ಹೋರಾಟಗಳ ಬಗ್ಗೆ ಹೆಚ್ಚು ತಿಳಿದಿಲ್ಲ.

ಪೂಜಾರರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜಾರ್ಜ್‌ ಫರ್ನಾಂಡಿಸ್ ಕಳುಹಿಸಿ ಕೊಡುತ್ತಿದ್ದ ಕಾರ್ಯಕರ್ತರನ್ನು ಪೋಲಿಸರಿಗೆ ತಿಳಿಯದಂತೆ ಕಾಪಾಡುತ್ತಿದ್ದರು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಯಾರನ್ನಾದರೂ ಜೈಲಿನಲ್ಲಿಟ್ಟರೆ ಅವರ್ ಪರ ವಕಾಲತ್ ವಹಿಸಿ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದರು. ಈ ಮಧ್ಯೆ ನೀಲಗಂಗಯ್ಯ ಪೂಜಾರ್ ೧೯೭೨ ಮತ್ತು ೧೯೭೮ರಲ್ಲಿ ಚುನಾವಣೆಗೆ ನಿಂತರು. ೧೯೭೨ರಲ್ಲಿ ಸಮಾಜವಾದಿ ಪಕ್ಷ ಜನಸಂಘದೊಂದಿಗೆ ಸೇರಿದ್ದನ್ನು ವಿರೋಧಿಸಿ ಕಲಘಟಗಿ ಕ್ಷೇತ್ರದಿಂದ ಚುನಾವಣೆಗೆ ನಿಂತರು. ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‍ನ ಹಸಬೀ ಮತ್ತು ಪಕ್ಷೇತರರಾಗಿ ಬಿ.ಎ. ದೇಸಾಯಿ ಎನ್ನುವವರು ಇದ್ದರು. ಈ ಚುನಾವಣೆಯಲ್ಲಿ ಹಣ ಖರ್ಚು ಮಾಡಲಾಗದ ನೀಲಗಂಗಯ್ಯ ಪುಜಾರ್ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು. ನಂತರ ೧೯೭೮ರಲ್ಲಿ ಜನತಾ ಪಾರ್ಟಿಯಿಂದ ಚುನಾವಣೆಗೆ ಸ್ಪರ್ಧಿಸಿದರು. ಈ ಸ್ಪರ್ಧೆಯಲ್ಲಿಯೂ ಅವರು ಸೋತರು. ನಂತರದ ದಿನಗಳಲ್ಲಿಯೇ ಅವರು ಚುನಾವಣಾ ರಾಜಕಾರಣ ಹಾಗೂ ಪಕ್ಷ ರಾಜಕಾರಣದಿಂದ ನಿವೃತ್ತಿ ಹೊಂದಿದರು.

ಪೂಜಾರರು ಈಗ ಧಾರವಾಡದ ವಿನಾಯಕನಗರದಲ್ಲಿರುವ ತಮ್ಮ ಮಗನ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಭೇಟಿಯಾದಗಲೆಲ್ಲಾ ತೀರಿಹೋದ ತಮ್ಮ ಹೆಂಡತಿಯನ್ನು ನೆನಪಿಸಿಕೊಂಡು ಮಾತನಾಡುತ್ತಾರೆ. ಕೌಟುಂಬಿಕ ಜೀವನದಲ್ಲಿ ಅವರಿಗೆ ಬೇಸರ ಉಂಟಾದಂತಿದೆ. ಪ್ರಸ್ತುತ ಬದುಕಿನ ಬಗ್ಗೆ ಕೇಳಿದಾಗಲೆಲ್ಲಾ ಅವರು ಮೌನವಾಗುತ್ತಾರೆ. ಸಮಾಜದಲ್ಲಿ ಸಾವಿರಾರು ಜನರ ಬೆಂಬಲವಿರುವ ಪೂಜಾರ್ ಅವರು ಒಬ್ಬಂಟಿ ಎಂದು ಭಾಸವಾಗುತ್ತದೆ.

ಇನ್ನು ಹೋರಾಟದ ಸಂದರ್ಭದಲ್ಲಿದ್ದ ಇನ್ನೊಬ್ಬ ಪ್ರಮುಖ ಮುಖಂಡರಾದವರೆಂದರೆ ಜಿ.ಟಿ. ಪದಕಿ. ಶ್ರೀಯುತರು ಹೆಬ್ಬಳ್ಳಿ ಭೂ ಹೋರಾಟದ ನಂತರ ವಕೀಲ ವೃತ್ತಿಯನ್ನು ಸಮರ್ಥವಾಗಿ ಮುಂದುವರಿಸಿದರು. ಧಾರವಾಡ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದರು. ಧಾರವಾಡಕ್ಕೆ ಹೈಕೋರ್ಟ್ ಸ್ಥಾಪನೆಯ ಅಗತ್ಯತೆಯನ್ನು ಯಶವಂತಸಿಂಗ್ ಆಯೋಗದ ಎದುರು ಸಮರ್ಥವಾಗಿ ಪ್ರತಿಪಾದಿಸಿದ ಮೊದಲಿಗರು ಇವರಾಗಿದ್ದರು. ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಮೂರು ಬಾರಿ ಧಾರವಾಡ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸೋತರು. ಸಮಾಜವಾದಿ ಪಕ್ಷ ಬಿಟ್ಟು ಜನತಾದಳ ಸೇರಿದರು. ಜನತಾದಳದ ಜಿಲ್ಲಾ ಅಧ್ಯಕ್ಷರಾದರು. ಬದುಕಿರುವ ಕೊನೆ ದಿನಗಳಲ್ಲಿ ಹೆಬ್ಬಳ್ಳಿ ಮತ್ತು ಗರಗ ಕ್ಷೇತ್ರೀಯ ಸೇವಾ ಸಂಘದ ಅಧ್ಯಕ್ಷರಾಗಿದ್ದರು. ಇವರ ವಕೀಲ ವೃತ್ತಿಯ ಸೇವೆ ಗಮನಿಸಿ ೨೦೦೬ ಅಕ್ಟೋಬರ್ ೧ ರಂದು ರಾಜ್ಯ ಉಚ್ಚನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿಗಳಿಂದ ಸನ್ಮಾನ ಏರ್ಪಡಿಸಲಾಗಿತ್ತು. ೨೦೦೬ನೇ ನವೆಂಬರ್ ೨೭ರಂದು ತಮ್ಮ ೮೦ನೇ ವಯಸ್ಸಿನಲ್ಲಿ ಜಿ.ಟಿ. ಪದಕಿ ವಕೀಲರು ನಿಧನರಾದರು.

೧೯೫೮ರ ನಂತರದಲ್ಲಿ ಹೆಬ್ಬಳ್ಳಿಯ ಜಾಗೀರದಾರರಲ್ಲಿ ಇನ್ನೂ ಉಳಿದಿದ್ದ ಸಾವಿರಾರು ಎಕರೆ ಭೂಮಿಯನ್ನು ದೇವರಾಜ ಅರಸು ಅವರ ಕಾಲದಲ್ಲಿ ಸರ್ಕಾರ ಪೂರ್ತಿ ವಶಪಡಿಸಿಕೊಂಡಿತು. ಈ ಸಂದರ್ಭದಲ್ಲಿಯೂ ಸರ್ಕಾರದ ಮೇಲೆ ಪ್ರಭಾವ ಬೀರಲು ಈ ಮನೆತನದ ಕೆಲವರು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ವೆಂಕಟೇಶ್ವರ ದೇವಸ್ಥಾನ ಹಾಗೂ ಪಾಂಡುರಂಗ ದೇವಾಲಯಗಳಿಗೆ ನೀಡಲಾಗಿದ್ದ ಇನಾಂ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿತು. ೧೯೭೪ರ ನಂತರದಲ್ಲಿ ಜಾಗೀರುದಾರರು ಆರ್ಥಿಕವಾಗಿ ಬಲಹೀನರಾದರು. ವಿದ್ಯಾಭ್ಯಾಸ ಮಾಡಿಕೊಂಡ ಕುಟುಂಬದ ಕೆಲವರು ಚೆನ್ನಾಗಿಯೇ ಬದುಕುತ್ತಿದ್ದಾರೆ. ೧೯೫೨ರಲ್ಲಿ ಭೂಮಿ ಕಳೆದುಕೊಂಡಾಗ ಇದ್ದ ಪ್ರಮುಖ ಜಾಗೀರದಾರರಾದ ನರಸಿಂಗರಾವ್ ಅವರ ಮಗ ಲಕ್ಷ್ಮಣರಾವ್ ಅವರ ಪುತ್ರರಲ್ಲಿ ಒಬ್ಬ ಪ್ರತಾಪ್ ಹೆಬ್ಳಿಕರು ಅಮೇರಿಕಾದಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ಇನ್ನೊಬ್ಬ ಪುತ್ರ ಎನ್.ಎಲ್. ಹೆಬ್ಳಿಕರ್ ಬೆಂಗಳೂರಿನಲ್ಲಿ ರಿಸರ್ವ್ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.

ಇನ್ನೊಬ್ಬ ಜಾಗೀರದಾರರಾದ ಗಣಪತಿರಾಯರಿಗೆ ಅಶೋಕ ಮತ್ತು ಸುಹಾಸ್ ಎಂಬ ಇಬ್ಬರು ಮಕ್ಕಳಾದರು. ಸುಹಾಸ್ ಹೆಬ್ಳಿಕರ್ ಅವರು ರಾಜಕೀಯ ಜೀವನ ನಡೆಸುತ್ತಿದ್ದಾರೆ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯಿತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈಗ ಹೆಬ್ಬಳ್ಳಿಯಲ್ಲಿ ಅವರು ರಾಜಕೀಯವಾಗಿ ಪ್ರಮುಖ ಮುಖಂಡರು.

ಶ್ರೀನಿವಾಸರಾಯ ಎನ್ನುವ ಜಾಗೀರದಾರರಿಗೆ ನಾಲ್ಕು ಮಕ್ಕಳಾದರು. ಇವರಲ್ಲಿ ಸುರೇಂದ್ರ ಮತ್ತು ವಿಜಯೇಂದ್ರ ಅತ್ಯಂತ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ಉಳಿದಂತೆ ಬಾಗರಾಜ್ ಮತ್ತು ಮುರುಳಿ ಇಂಜಿನಿಯರ್ ಆಗಿ ಸರ್ಕಾರಿ ನೌಕರಿ ಮಾಡುತ್ತಿದ್ದಾರೆ.

ಪ್ರಹ್ಲಾದರಾವ್ ಮತ್ತು ಶೇಷಗಿರಿರಾವ್ ಜಾಗೀರದಾರರು ತಮ್ಮ ಹೆಸರಿಗಿದ್ದ ದೊಡ್ಡ ವಾಡೆಯನ್ನು ಗೊಂದಾವಲೆ ಮಠಕ್ಕೆ ಬಿಟ್ಟು ಕೊಟ್ಟರು. ಹಾಗೆ ಕೊಡುವ ಮುಂಚೆ ವಾಡೆಯ ಕಿಟಕಿ ಬಾಗಿಲುಗಳ ಸಮೇತ ಕಿತ್ತು ಮಾರಿಕೊಂಡರೆಂದು ಸ್ಥಳೀಯರು ಹೇಳುತ್ತಾರೆ. ಈಗ ವಾಡೆಯಿಂದ ಸ್ಥಳದಲ್ಲಿ ಗೊಂದಾವಲೆ ಮಠವು ನಿರ್ಮಾಣವಾಗಿದೆ.

ಕೃಷ್ಣರಾವ್ ಅವರ ಮಗನಾದ ಪಾಂಡುರಂಗರಾವ್ ಅವರು ಹೆಬ್ಬಳ್ಳಿಯ ಉಪ್ಪಿನಮೆಳೆ ವಾಡೆಯಲ್ಲಿ ವಾಸಿಸುತ್ತಿದ್ದಾರೆ. ಇವರ ಪಾಲಿಗೆ ೫೨ ಎಕರೆ ಭೂಮಿ ಉಳಿದಿದೆ. ಈ ಸದ್ಯದಲ್ಲಿ ಹೆಬ್ಬಳ್ಳಿ ಜಾಗೀರ್ ಮನೆತನದ ಬಗ್ಗೆ ಹೆಚ್ಚು ಮಾಹಿತಿ ಹೊಂದಿರುವ ಹಿರಿಯರೆಂದರೆ ಇವರೇ. ತಮ್ಮ ಪುತ್ರನೊಂದಿಗೆ ಹೆಬ್ಬಳ್ಳಿಯಲ್ಲಿಯೇ ಬದುಕುತ್ತಿದ್ದಾರೆ.

ಇನ್ನು ಹೆಬ್ಬಳ್ಳಿ ಭೂ ಹೋರಾಟದ ಬಗ್ಗೆ ತಿಳುವಳಿಕೆ ಇರುವವರು ಬಹಳ ಕಡಿಮೆ. ಅದರಲ್ಲೂ ಇತ್ತೀಚಿನ ಯುವಕರನ್ನು ಈ ಹೋರಾಟದ ಬಗ್ಗೆ ಕೇಳಿದರೆ ಏನೆಂದರೆ ಏನೂ ಗೊತ್ತಿಲ್ಲ. ಈ ಬಗ್ಗೆ ಹಲವಾರು ಯುವಕರ ಪ್ರತಿಕ್ರಿಯೆ ಕೇಳಿದಾಗ ಅಚ್ಚರಿಯಾಗುತ್ತದೆ. ಇಲ್ಲಿನ ಅದೆಷ್ಟೊ ಹಿರಿಯರಿಗೇ ನೀಲಗಂಗಯ್ಯ ಪೂಜಾರ್ ಹಾಗೂ ಪದಕಿ ವಕೀಲರ ಬಗ್ಗೆ ತಿಳಿದಿಲ್ಲದಿರುವಾಗ ಯುವಕರ ಬಗ್ಗೆ ಏನು ತಾನೇ ಆಕ್ಷೇಪಿಸಬಹುದು? ಮಾಹಿತಿ ಸಿಗುತ್ತದೆ ಎಂದು ನಿರೀಕ್ಷಿಸಲಾಗದು. ಆದರೆ ಹೋರಾಟದ ನಂತರದ ದಿನಗಳಲ್ಲಿ ಅದು ಪಡೆಯುವ ರೂಪಾಂತರ ಎಂತಹದ್ದು ಎಂದು ತಿಳಿಯಲು ಇವರ ಅನಿಸಿಕೆ ಸಹಾಯಕವಾಗುತ್ತದೆ. ಊರಿನಲ್ಲಿ ಸೋಮಾರಿಗಳಂತೆ ತಿರುಗುವ ಯುವಕರನ್ನು ಉದ್ದೇಶಿಸಿ ಇಲ್ಲೊಂದು ಮಾತು ರೂಢಿಯಲ್ಲಿದೆ. ‘ಪುಗ್ಸಟ್ಟೆ ಜಾಗೀರ‍್ದಾರ ಭೂಮಿ ಬಂದಿದೆ ಅದಕ್ಕೆ ಹಾಗೆ ಮಾಡ್ತಾನ ಇಲ್ಲವ ದುಡುದು ಗಳ್ಸಿದ್ರೆ ಗೊತ್ತಾಗ್ತಿತ್ತು, ರಾಯರ್ ಭೂಮಿ ಆಟಾಡ್ಸತೈತಿ’ ಈ ಮಾತು ಊರೊಳಗೆ ಹಲವಾರು ಬಾರಿ ಕಿವಿಗೆ ಬಿದ್ದಿದೆ. ಸದ್ಯದ ವರ್ತನೆಗೆ ಚರಿತ್ರೆಯ ಪ್ರಸಂಗ ಕಾರಣವಾಗಿಸುವುದು ಕಂಡುಬರುತ್ತಿದೆ.

೫೦ರ ದಶಕದ ಭೂ ಹೋರಾಟದ ನಂತರ ಈ ಭಾಗದಲ್ಲಿ ಇದುವರೆಗೂ ರೈತ ಪ್ರತಿಭಟನೆಗಳಾಗಲಿ ಹೋರಾಟಗಳಾಗಲಿ ನಡೆದಿಲ್ಲ. ಹಾಗಂತ ಇಲ್ಲಿನ ರೈತರಿಗೆ ಸಂಕಷ್ಟಗಳೇ ಇಲ್ಲ ಎಂದರ್ಥವಲ್ಲ. ಆದರೆ ಹೋರಾಟದ, ಪ್ರತಿಭಟನೆಯ ಕಾವು ಕಳೆದು ಹೋಗಿದೆ. ಇವರನ್ನು ಪ್ರತಿಭಟನೆಗೆ ಉದ್ದೀಪಿಸುವ ನಾಯಕತ್ವವೂ ಈಗಿಲ್ಲ. ಈ ಭಾಗದ ಸದ್ಯದ ರೈತ ನಾಯಕರೆಂದರೆ ಜಿ.ಎಸ್.ಪಾಟೀಲ್ ಕುಲಕರ್ಣಿ ಎಂಬ ಬಿ.ಜೆ.ಪಿ. ಮುಖಂಡರು. ಇವರು ಇಲ್ಲಿನ ರೈತರು ಬೆಳೆನಷ್ಟವಾದಾಗ ವಿಮೆ ಪಾಲಿಸಿ ಮಾಡಿಸಿ ನೆರವಿಗೆ ಬಂದಿದ್ದಾರೆ. ಇವರಿಂದಾಗಿ ಹೆಬ್ಬಳ್ಳಿ ಸುತ್ತಲಿನ ಗ್ರಾಮಗಳು ವಿಮಾ ಗ್ರಾಮಗಳೆಂದು ನಮೂದಿಸಲ್ಪಟ್ಟಿವೆ. ಕರ್ನಾಟಕದಲ್ಲಿಯೇ ಅತಿ ಹೆಚ್ಚು ಹಣವನ್ನು ಬೆಳೆವಿಮೆಯಿಂದ ಇಲ್ಲಿನ ಗ್ರಾಮಗಳು ಪಡೆಯುತ್ತವೆ. ಹೀಗಾಗಿ ಸದ್ಯ ಜಿ.ಎಸ್. ಪಾಟೀಲ್ ಕುಲಕರ್ಣಿ ಇಲ್ಲಿನ ಪ್ರಮುಖ ರೈತ ಮುಖಂಡರಾಗಿ ರೂಪುಗೊಂಡಿದ್ದಾರೆ. ಒಂದೊಮ್ಮೆ ನೀಲಗಂಗಯ್ಯನವರು ಹೆಬ್ಬಳ್ಳಿಗೆ ಬಂದರೆ, ಅವರನ್ನು ಗುರುತು ಹಿಡಿಯುವವರು ಇಲ್ಲ; ಇದೊಂದು ಚರಿತ್ರೆಯ ವ್ಯಂಗ್ಯವೋ ಕಾಲಗತಿಯ ಪರಿಣಾಮವೊ ತಿಳಿಯದಾಗಿದೆ.