ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮವು ಧಾರವಾಡ ನಗರದಿಂದ ನವಲಗುಂದ ಮಾರ್ಗವಾಗಿ ೧೨ ಕಿ.ಮೀ. ದೂರದಲ್ಲಿದೆ. ಈ ಗ್ರಾಮ ಪ್ರಾಚೀನ ಶಾಸನಗಳಲ್ಲಿ ‘ಅನಾದ್ ಬಣಂಜುಪಟ್ಟಣ’, ‘ಹೆರ್ಬ್ಬಳ್ಳಿ’, ‘ಹೆಬ್ಬಳ್ಳಿ’ ಎಂದೇ ಉಲ್ಲೇಖಿತಗೊಂಡಿದೆ. ಹಿಂದೆ ಇದು ಬೆಳ್ವೊಲ – ೩೦೦ಕ್ಕೆ ಸೇರಿತ್ತೆಂದು ಹೇಳಲಾಗಿದೆ. ಮುಂಬೈ ಇಲಾಖೆಯ ಗೆಜೆಟಿಯರ್ ನಲ್ಲಿ ಹೆಬ್ಬಳ್ಳಿ ಗ್ರಾಮವನ್ನು ಪೇಶ್ವೇ ನಾನಾ ಸಾಹೇಬನು ಮೊದಲು ನರಗುಂದದ ಒಡೆಯನಾಗಿದ್ದ ಸರದಾರನಿಗೆ ೧೭೪೮ರಲ್ಲಿ ಜಹಗೀರು ಹಾಕಿಕೊಟ್ಟನು. ಅದು ಅವನ ವಂಶದವರಿಗೆ ಈಗಲೂ ನಡೆಯುತ್ತಿದೆ. ಎಂದು ದಾಖಲಿಸಿದೆ. ೧೯೫೨ರ ತನಕ ಈ ಜಾಗೀರದಾರ ವಂಶದವರೇ ಇಡೀ ಹೆಬ್ಬಳ್ಳಿಯ ಭೂಮಿಯ ಒಡೆತನ ಹೊಂದಿದ್ದರು; ನಂತರದಲ್ಲಿ ಈ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡು ಉಳುವ ರೈತರಿಗೆ ಹಾಗೂ ಭೂರಹಿತ ರೈತ ಕೂಲಿಕಾರ್ಮಿಕರಿಗೆ ಹಂಚಿತು.

೨೦೦೪-೦೫ರ ಜನಗಣತಿಯ ಪ್ರಕಾರ ಹೆಬ್ಬಳ್ಳಿಯಲ್ಲಿರುವ ಒಟ್ಟು ಜನಸಂಖ್ಯೆ ೧೧,೯೨೪. ಇವರಲ್ಲಿ ೫೮೨೭ ಸ್ತ್ರೀಯರು ಹಾಗೂ ೬೦೬೭ ಪುರುಷರು ಇದ್ದಾರೆ. ಪರಿಶಿಷ್ಟ ಜಾತಿಯವರು ೫೮೬ ಜನರಿದ್ದಾರೆ. ಪರಿಶಿಷ್ಟ ಪಂಗಡದವರು ೯೭ ಜನರಿದ್ದಾರೆ. ಮುಸ್ಲಿಂ ಸಮುದಾಯದವರು ೧೨೪೫ ಮಂದಿ ಇದ್ದರೆ, ಇತರೆ ಸಾಮಾನ್ಯವರ್ಗದವರಾದ ಲಿಂಗಾಯತ, ಬ್ರಾಹ್ಮಣ ಮುಂತಾದವರು ೮೭೫೦ ಜನರಿದ್ದಾರೆ. ಈ ಗ್ರಾಮದಲ್ಲಿ ೧ ಸಾವಿರಕ್ಕಿಂತ ಹೆಚ್ಚು ಜನ ಅನಕ್ಷರಸ್ತರಿದ್ದಾರೆ.

ಗ್ರಾಮದಲ್ಲಿ ನೆಹರೂ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯವಿದೆ. ಇದಲ್ಲದೆ, ಮೂರು ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆಗಳು ಹಾಗೂ ಒಂದು ಇಂಗ್ಲೀಷ್ ಮಾಧ್ಯಮ ಶಾಲೆಯೂ ಇದೆ. ಒಂದು ಉರ್ದು ಮಾಧ್ಯಮ ಪ್ರಾಥಮಿಕ ಶಾಲೆಯೂ ಇದೆ. ಇಲ್ಲಿರುವ ಶಾಲಾ ಕಟ್ಟಡಗಳಾಗಲಿ, ಆಟದ ಮೈದಾನಗಳಾಗಲಿ ಸುಸಜ್ಜಿತವಾಗಿಲ್ಲ. ನಾನು ನೋಡಿದ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ೧೫ ರಿಂದ ೨೦ ಮಕ್ಕಳಿದ್ದರು. ಅಲ್ಲಿ (ಫೆಬ್ರವರಿ ೨೦೦೭) ಉಪಾಧ್ಯಾಯರು ಇರಲಿಲ್ಲ. ಈ ಬಗ್ಗೆ ವಿಚಾರಿಸಿದರೆ, ಶಾಲೆಯ ಚಿಕ್ಕ ಮಕ್ಕಳು ‘ಮೇಷ್ಟ್ರು ಈಗ ಬರ್ತಾರ, ಮನಿಗಿ ಹೋಗ್ಯಾರ’ ಎಂದು ಹೇಳಿದರು.

ಇನ್ನು ಕೃಷಿಗೆ ಸಂಬಂಧಿಸಿದಂತೆ ಒಟ್ಟು ಗ್ರಾಮದ ಭೌಗೋಳಿಕ ಕ್ಷೇತ್ರ ೧೩,೫೧೮ ಎಕರೆ ಇದೆ. ಗ್ರಾಮದಲ್ಲಿನ ಕೃಷಿ ಹೆಚ್ಚಾಗಿ ಮಳೆಯನ್ನೇ ಅವಲಂಬಿಸಿದ್ದು, ೨೦೦೪-೦೫ರಲ್ಲಿ ೯೬೦.೮ ಮಿ.ಮೀ ಮಳೆಯಾಗಿದೆ. ಹಾಗೆ ನೋಡಿದರೆ ಧಾರವಾಡ ಜಿಲ್ಲೆಯ ಸರಾಸರಿ ಮಳೆಯ ಪ್ರಮಾಣ ೮೯.೭ ಮಿ.ಮೀ(೧೯೯೨) ಇದ್ದು, ಹೆಬ್ಬಳ್ಳಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಹೆಚ್ಚಾಗಿದೆ. ಇನ್ನುಳಿದಂತೆ ಧಾರವಾಡ ನಗರದ ಜನತೆ ಬಳಸಿ ಬಿಟ್ಟ ಕೊಳಚೆ ನೀರೆಲ್ಲ ಹೊಳೆಯಾಗಿ ಹೆಬ್ಬಳ್ಳಿ ಗ್ರಾಮದ ಹೊರಭಾಗದಲ್ಲಿ ಹರಿಯುತ್ತದೆ. ಇದು ಇಲ್ಲಿನ ೧೫೦ ಎಕರೆ ಭೂಮಿಗೆ ನೀರಾವರಿ ಒದಗಿಸುತ್ತದೆ. ಈ ನೀರಿನಲ್ಲಿ ವಿಷದ ಪ್ರಮಾಣ ಹೆಚ್ಚುತ್ತಿದ್ದು ಅದು, ಭೂಮಿಯ ಸತ್ವವನ್ನು ನಿಧಾನವಾಗಿ ಹಾಳುಗೆಡುವುತ್ತಿದೆ. ಇಲ್ಲಿನ ಒಟ್ಟು ಕೃಷಿ ಭೂಮಿಯಲ್ಲಿ ೬೬ ಬೋರ್‌ವೆಲ್‍ಗಳಿವೆ. ವಿವಿಧ ಕೃಷಿಕರು ಕೊರೆಸಿರುವ ಈ ಬೋರ್‌ವೆಲ್‍ಗಳಲ್ಲಿ ಸರಾಸರಿ ೪೦೦ ಅಡಿ ಆಳದಲ್ಲಿ ನೀರು ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನೂರಾರು ಬೋರ್‌ವೆಲ್‍ಗಳನ್ನು ಕೊರೆಸಿದ್ದರೂ ನೀರು ಅತ್ಯಲ್ಪ ಪ್ರಮಾಣದಲ್ಲಿ ದೊರಕುತ್ತಿದೆ. ಒಟ್ಟಾರೆ ಹೆಬ್ಬಳ್ಳಿ ಗ್ರಾಮದ ಕೃಷಿ ಭೂಮಿಗೆ ಬರುವ ನೀರೇ ಹೆಬ್ಬಳ್ಳಿಗೆ ಖಾಯಂ ನೀರಾವರಿ ಸೌಲಭ್ಯವುಳ್ಳ ವ್ಯವಸ್ಥೆಯಾಗಿದೆ.

ಹೆಬ್ಬಳ್ಳಿಯ ಸುತ್ತಮುತ್ತಲೂ ಕಪ್ಪು ಮಣ್ಣಿನ ಭೂಮಿ ಇದ್ದು, ಹತ್ತಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಅಲ್ಲದೆ ದ್ವಿದಳ ಧಾನ್ಯಗಳಾದ ಕಡಲೆ, ಹೆಸರು, ಮತ್ತು ಗೋಧಿ ಬೆಳೆಯಲಾಗುತ್ತದೆ. ಇಲ್ಲಿನ ಪ್ರತಿ ಎಕರೆಗೆ ಮಾರುಕಟ್ಟೆಯಲ್ಲಿ ಒಂದು ಲಕ್ಷ ರೂಪಾಯಿ ಮೌಲ್ಯವಿದೆ. ಇತ್ತೀಚಿನ ರೈತರು ಕೃಷಿಗೆ ಆಧುನಿಕ ತಾಂತ್ರಿಕತೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ೧೧ ಟ್ರ್ಯಾಕ್ಟರ್‌ಗಳಿದ್ದು, ಸಾಮಾನ್ಯವಾಗಿ ಸ್ಥಳೀಯ ಕೃಷಿಕರು ಹೊಲ ಸಾಗುವಳಿ ಮಾಡಲು ಇವುಗಳನ್ನೇ ಬಾಡಿಗೆ ಪಡೆಯುತ್ತಾರೆ. ಆಧುನಿಕ ಟ್ರ್ಯಾಕ್ಟರ್ ಮತ್ತು ಮಿಷನ್‍ಗಳ ಬಳಕೆಯಿಂದಾಗಿ ಕೃಷಿಕಾರ್ಯಗಳು ಕ್ಷಿಪ್ರವಾಗಿ ಸಾಗುತ್ತಿವೆ. ಈ ಆಧುನಿಕ ಸೌಲಭ್ಯಗಳ ಕುರಿತು ಕೆಲವರಿಗೆ ಅಸಮಾಧಾನವೂ ಇದೆ. ಒಮ್ಮೆ ಹೆಬ್ಬಳ್ಳಿಯ ಕೆಲವರನ್ನು ಮಾತಿಗೆಳೆದಾಗ ಅವರಲ್ಲೊಬ್ಬ ‘ಈಗಿನ ಕಾಲ್ದಾಗ ಎಲ್ಲ ಮಿಷನ್‍ಗಳೇ ಮಾಡ್ತವೆ, ನಾವ್ ಮಾಡದೇನೈತಿ’ ಎಂದು ಹೇಳಿದ. ಈ ಮಾತಿನಲ್ಲಿ ಆತನನ್ನು ನಿರುದ್ಯೋಗಿಯನ್ನಾಗಿಸಿದ ಆಧುನಿಕ ತಾಂತ್ರಿಕತೆಯ ಬಗ್ಗೆ ಒಂದು ರೀತಿಯ ಅಸಮಾಧಾನ ಇದ್ದಂತಿತ್ತು. ಆಧುನಿಕತೆಯಿಂದಾಗಿ ಕೆಲಸವಿಲ್ಲದೆ ಇಲ್ಲಿನ ಬಸ್‍ನಿಲ್ದಾಣದಲ್ಲಿ, ದೇವಸ್ಥಾನಗಳ ಕಟ್ಟೆಯ ಮೇಲೆ ಯಾವಾಗಲೂ ಹಲವು ಜನ ಕೂತು ಮಾತನಾಡುವುದು ಕಾಣಬಹುದಾಗಿದೆ. ಗ್ರಾಮದಲ್ಲೊಂದು ‘ಕರ್ನಾಟಕ ನೇಕಾರರ ಸೊಸೈಟಿ’ ಇದ್ದು, ಸ್ಥಳೀಯ ನೇಕಾರರು ತಾವು ನೇಯ್ದ ಬಟ್ಟೆಗಳನ್ನು ಸೊಸೈಟಿಯ ಮೂಲಕ ಮಾರಾಟ ಮಾಡುತ್ತಾರೆ.

ಇಲ್ಲಿನ ಗ್ರಾಮದಲ್ಲಿ ಕುಡಿವ ನೀರಿನ ಸೌಲಭ್ಯ ಉತ್ತಮ ಎನ್ನಬಹುದಾದ ಸ್ಥಿತಿಯಲ್ಲಿದ್ದು, ನಾಲ್ಕು ನೀರಿನ ಟ್ಯಾಂಕುಗಳನ್ನು ಕಟ್ಟಿಸಲಾಗಿದೆ. ಈ ನಾಲ್ಕು ಟ್ಯಾಂಕ್‍ಗಳಿಂದ ನಾಲ್ಕೂವರೆ ಲಕ್ಷ ಲೀಟರ್ ನೀರನ್ನು ಸಂಗ್ರಹಿಸಬಹುದಾಗಿದೆ. ಗ್ರಾಮದಲ್ಲಿ ಒಟ್ಟಾರೆ ೩೩ ನೀರಿನ ಕೈಪಂಪುಗಳಿದ್ದು, ಇವುಗಳಲ್ಲಿ ೧೫ ಕೈಪಂಪುಗಳು ಕೆಟ್ಟು ಹಲವು ವರ್ಷಗಳೇ ಆಗಿವೆ. ಇವು ಸದ್ಯಕ್ಕೆ ದುರಸ್ತಿ ಆಗುವಂತೆ ಕಾಣುತ್ತಿಲ್ಲ. ಕಾರಣ ಕೇಳಿದರೆ ಗ್ರಾಮ ಪಂಚಾಯಿತಿಯಲ್ಲಿ ಹಣವಿಲ್ಲ ಎನ್ನುವ ಉತ್ತರ ಬಂತು. ಆದರೆ ಗ್ರಾಮದ ಕೃಷಿ ಭೂಮಿ, ಕುಡಿವ ನೀರು, ವ್ಯಾಪಾರಿ ಮಳಿಗೆ ಮುಂತಾದವುಗಳಿಂದ ಪ್ರತಿವರ್ಷ ೪೦ ರಿಂದ ೫೦ ಸಾವಿರದವರೆಗೆ ಗ್ರಾಮಪಂಚಾಯಿತಿಗೆ ಆದಾಯ ಬರುತ್ತದೆ. ಇದನ್ನೆಲ್ಲಾ ಪ್ರಶ್ನಿಸುವಂತೆಯೇ ಇಲ್ಲ. ಪ್ರಶ್ನಿಸಿದರೆ ಖಚಿತ ಉತ್ತರ ದೊರಕುವ ಭರವಸೆ ನನಗೂ ಇಲ್ಲದ್ದರಿಂದ ನಾನೂ ಸುಮ್ಮನಾದೆ.

ಗ್ರಾಮದಲ್ಲಿ ಪ್ರಮುಖವಾಗಿ ಹೆಸರಿಸಬಹುದಾದವರು ಎಂದರೆ ಜಾಗೀರ್‌ದಾರ್ ಮನೆತನ ಹಾಗೂ ನಾಡಿಗೇರ್ ಮನೆತನ. ಮೂಲತಃ ಜಾಗೀರದಾರರ ನಾಲ್ಕು ಮನೆಗಳಿವೆ. ಅದರಲ್ಲಿ ಈ ಮನೆತನಕ್ಕೆ ಸೇರಿದ ಉಪ್ಪಿನಮಳಿ ವಾಡೆಯಲ್ಲಿರುವ ಪಾಂಡುರಂಗರಾವ್ ಹೆಬ್ಳೀಕರ್ ಹಾಗೂ ಬಸ್ ನಿಲ್ದಾಣದ ಹತ್ತಿರವಿರುವ ಸುಹಾಸ್ ಹೆಬ್ಳೀಕರ ಅವರು ವಾಸಿಸುತ್ತಾರೆ. ಸುಮಾರು ೫೦ ವರ್ಷಗಳ ಹಿಂದೆ ಜಾಗೀರದಾರರಾಗಿದ್ದ ನಾಡಿಗೇರ ಮನೆತನದವರು ಹೆಬ್ಬಳ್ಳಿ ಗ್ರಾಮದ ಗೌಡರಾಗಿದ್ದರು. ಸಾವಿರಾರು ಎಕರೆ ಕೃಷಿ ಭೂಮಿಯ ಒಡೆಯರಾಗಿದ್ದರು. ಇವರು ಈಗ ಭೂಸುಧಾರಣೆ ಕಾಯ್ದೆ ಅನ್ವಯ ತಮ್ಮ ಹೆಚ್ಚುವರಿ ಭೂಮಿಯನ್ನೆಲ್ಲಾ ಕಳಿದುಕೊಂಡಿದ್ದು, ಸಾಮಾನ್ಯರಂತೆ ಬದುಕುತ್ತಿದ್ದಾರೆ. ಬ್ರಾಹ್ಮಣ ಜನಾಂಗದ ನಾಡಿಗೇರ ಮನೆತನದ ವೆಂಕನಗೌಡ ನಾಡಿಗೇರ ಎಂಬುವವರು ೧೯೮೪ರ ಸುಮಾರಿಗೆ ಮಹಾರಾಷ್ಟ್ರದ ಸತಾರ ಜಿಲ್ಲೆಯ ಗೊಂದಾವಲೇಕರ ಮಹಾರಜರನ್ನು ಹೆಬ್ಬಳ್ಳಿಗೆ ಕರೆತಂದರು. ಇವರ ನೇತೃತ್ವದಲ್ಲಿ ಇಲ್ಲಿ ಚೈತನ್ಯಾಶ್ರಮ ಆರಂಭವಾಯಿತು. ಈಗಲೂ ನಾಡಿಗೇರ ಮನೆತನದವರೇ ಈ ಆಶ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇದಲ್ಲದೆ ಹಿಂದಿನ ಕಾಲದಿಂದಲೂ ಹೆಬ್ಬಳ್ಳಿಯಲ್ಲಿ ಶ್ರೀ ವೆಂಕಟೇಶ್ವರ ದೇವಸ್ಥಾನ, ಪಾಂಡುರಂಗ ದೇವಸ್ಥಾನ, ಚಿದಂಬರೇಶ್ವರ ದೇವಸ್ಥಾನ, ಶ್ರೀ ಚಿಂತಾಮಣಿ ಮಹಾಗಣಪತಿ ಮಂದಿರ, ಶ್ರೀ ರಾಮ ತ್ರೈಂಬಕೇಶ್ವರ ದೇವಸ್ಥಾನ ಇದೆ. ಇವುಗಳೊಂದಿಗೆ ವೀರಣ್ಣ, ಹನುಮಂತ, ಮೈಲಾರ, ಮಲ್ಲಯ್ಯ, ಬಸವಣ್ಣ, ದ್ಯಾಮವ್ವ, ದುರ್ಗವ್ವ, ಶಂಕರಮ್ಮ, ಲೋಕೂರು ದ್ಯಾಮವ್ವ, ಚೆಂಗಲವ್ವನ ಗುಡಿಗಳಿವೆ. ಹಿಂದೆ ಗ್ರಾಮದ ಬಳಿ ಒಂದು ಕೆರೆ ಇತ್ತೆಂದು ಹೇಳಲಾಗುತ್ತದೆ. ಆದರೆ ಈಗ ಅದು ಇಲ್ಲ. ಕೆರೆ ಇತ್ತೆಂದು ಹೇಳಲಾಗುವ ಸ್ಥಳದಲ್ಲಿ ಚಂದ್ರಪರಮೇಶ್ವರಿ ಗುಡಿ ಇದ್ದು, ಇದು ಶಿಥಿಲ ಅವಸ್ಥೆಯಲ್ಲಿದೆ. ಮಸೀದಿ ಹಾಗೂ ಮೆಹಬೂಬು ಸುಬಾನಿಯ ದರ್ಗಾ ಕೂಡ ಇದ್ದು, ಇಲ್ಲಿ ಉರುಸ್ ನಡೆಯುತ್ತದೆ. ಚೈತನ್ಯಾಶ್ರಮವು ಚೈತನ್ಯ ಪ್ರಕಾಶನ ಎನ್ನುವ ಪ್ರಕಟನಾ ಸಂಸ್ಥೆಯನ್ನು ಸ್ಥಾಪಿಸಿಕೊಂಡಿದ್ದು, ಕೆಲವು ಪುಸ್ತಕಗಳನ್ನು ಪ್ರಕಟಿಸಿದೆ. ಅಲ್ಲದೆ ಈ ಆಶ್ರಮದಲ್ಲಿ ನಿರಂತರವಾಗಿ ಭಜನಾ ಕಾರ್ಯಕ್ರಮ, ಗೊಂದಾವಲೇಕರ ಮಹಾರಾಜರ ಜಯಂತಿ, ಪುಣ್ಯತಿಥಿ, ಶ್ರೀರಾಮನವಮಿ, ಶ್ರೀಕೃಷ್ಣಾಷ್ಟಮಿ ಮುಂತಾದ ಕಾರ್ಯಕ್ರಮಗಳನ್ನು ಆಚರಿಸಿಕೊಳ್ಳುತ್ತಾ ಬರಲಾಗಿದೆ. ಉಳಿದ ಹಲವು ಧಾರ್ಮಿಕ ಕೇಂದ್ರಗಳು ಹೆಚ್ಚಾಗಿ ಕಾಡು ಹರಟೆಗೆ ಇಲ್ಲವೆ ಮಲಗುವ ಜಾಗಗಳಾಗಿ ಮಾರ್ಪಟ್ಟಿವೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)