ಹೆಬ್ಬಳ್ಳಿಯ ಜಾಗೀರದಾರ ಮನೆತನಕ್ಕೆ ೨೫೦ ವರ್ಷಗಳ ಇತಿಹಾಸವಿದೆ. ದಿನಗಳಲ್ಲಿ ವಿವಿಧ ಸಾಮ್ರಾಜ್ಯಗಳ ಅಡಿಯಲ್ಲಿ ಇವರು ಕಾರ್ಯನಿರ್ವಹಿಸಿದ್ದಾರೆ. ಪೇಶ್ವೆಗಳು, ನವಾಬರು, ಬ್ರಿಟೀಷರು, ಜಾಗೀರದಾರ ಮನೆತನದ ಏಳು-ಬೀಳುಗಳಿಗೆ ಕಾರಣರಾಗಿದ್ದಾರೆ. ಈ ವಿವಿಧ ಪ್ರಭುತ್ವಗಳು ಹಾಗೂ ಅವುಗಳ ಅಧಿಕಾರ ಕೇಂದ್ರಗಳು, ಹೆಬ್ಬಳ್ಳಿ ಜಾಗೀರದಾರರನ್ನೇನು ಆರ್ಥಿಕವಾಗಿ ದುರ್ಬಲರನ್ನಾಗಿಸಿಲ್ಲ. ಹಾಗೆ ನೋಡಿದರೆ ಜಾಗೀರದಾರ ಮನೆತನವನ್ನು ಸಂಪೂರ್ಣವಾಗಿ ದುರ್ಬಲರನ್ನಾಗಿಸಿದ್ದು, ೧೯೫೨ರಲ್ಲಿ ಬಾಂಬೆ ಸರ್ಕಾರ ಕೈಗೊಂಡ ಭೂ ಸುಧಾರಣಾ ಕ್ರಮಗಳು. ಈ ಸಂದರ್ಭದಲ್ಲಿ ಬಾಂಬೆ ಸರ್ಕಾರವು ಹೆಬ್ಬಳ್ಳಿ ಜಾಗೀರದಾರರಿಗೆ ಸೇರಿದ್ದೆನ್ನಲಾದ ಸುಮಾರು ೧೩ ಸಾವಿರ ಎಕರೆ ಭೂಮಿ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿತು.

ಹೆಬ್ಬಳ್ಳಿಯಲ್ಲಿ ಈಗಿರುವ ಉಪ್ಪಿನಮಳಿ ವಾಡೆ ಗಮನಿಸಿದರೆ, ಜಾಗೀರದಾರ ಮನೆತನದ ಹಿಂದಿನ ವೈಭವ ಅರಿವಿಗೆ ಬರುತ್ತದೆ. ಸುಮಾರು ಎರಡೂವರೆ ಎಕರೆ ವಿಸ್ತೀರ್ಣವಿರುವ ವಾಡೆಸುತ್ತಲೂ ಮಣ್ಣಿನ ಗೋಡೆಯನ್ನು ಕಟ್ಟಿದ್ದಾರೆ. ದೊಡ್ಡ ಪ್ರವೇಶದ್ವಾರದ ಮೂಲಕ ಒಳಗಡೆ ಹೋದರೆ ಬಹುದೊಡ್ಡ ಮನೆ ಇದೆ. ಸಾಮಾನ್ಯವಾಗಿ ಆ ಮನೆಯ ವಿಸ್ತೀರ್ಣವೇ ಅರ್ಧ ಎಕರೆ ಇದೆ. ಮನೆಯ ಎಡಭಾಗದಲ್ಲಿ ವಿಸ್ತಾರವಾದ ಬಯಲಿದೆ. ಇಲ್ಲಿ ೧೫-೨೦ ಕುದುರೆಗಳನ್ನು ಸಾಕುತ್ತಿದ್ದುದಾಗಿ ಈಗಿರುವ ಜಾಗೀರದಾರ ಮನೆತನದ ಪಾಂಡುರಂಗರಾವ್ ಹೆಬ್ಳೀಕರ್ ತಿಳಿಸಿದರು. ಮನೆಯ ಮುಂಭಾಗದಲ್ಲಿ ಬಾವಿ ಇದ್ದು, ಸುತ್ತಲೂ ಕಟ್ಟೆಯನ್ನು ಕಟ್ಟಿದ್ದಾರೆ. ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ತೂಗು ಮಂಚವೊಂದು ಇದೆ. ಇದನ್ನು ಬಿಟ್ಟರೆ ಮನೆಯ ಗೋಡೆಗಳಿಗೆ ಯಾವುದೇ ಹಳೆಯ ವೈಭವ ಕಂಡುಬರುವುದಿಲ್ಲ. ನನಗೆ ಪಾಂಡುರಂಗರಾವ್ ಹೆಬ್ಳಿಕರ್ ಇದರ ಮೇಲೆ ಕೂತು ವಿವರಣೆ ನೀಡಿದರು. ಎದುರುಗಡೆ ಚಿಕ್ಕದೊಂದು ಬಾಗಿಲಿನ ಮೆಟ್ಟಿಲ ಮೇಲೆ ಕೂತು ಅವರು ಹೇಳಿದ್ದನ್ನೆಲ್ಲಾ ನಾನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದೆ. ಮನೆಯಲ್ಲಿದ್ದ ಇಬ್ಬರು ಹೆಂಗಸರು ಹೊರಗಡೆ ಬಾರದೆ ಬಾಗಿಲ ಹಿಂದೆ ನಿಂತು ನಮ್ಮ ಮಾತು ಕೇಳಿಸಿಕೊಳ್ಳುತ್ತಿದ್ದುದು ಕಂಡುಬಂತು. ನನಗೊಮ್ಮೆ ಟೀ ಕೊಡಲು ಬಂದ ವೃದ್ದ ಹೆಂಗಸನ್ನು ‘ತಮ್ಮ ಮಡದಿ’ ಎಂದು ಪಾಂಡುರಂಗರಾವ್ ಹೆಬ್ಳೀಕರ್ ಪರಿಚಯಿಸಿದರು. ಟೀ ಕುಡಿದ ನಂತರದಲ್ಲಿ ‘ಕಪ್ ತೊಳೆದಿಡಬೇಕು’ ಎಂದು ಸೂಚಿಸುವಂತೆ ಈ ವೃದ್ದರು ಒಂದು ಪ್ಲಾಸ್ಟಿಕ್ ತಂಬಿಗೆ ತುಂಬಾ ನೀರು ತಂದಿಟ್ಟರು. ನಾನು ಅಂಗಳಕ್ಕೆ ಬಂದು ಕಪ್ ತೊಳೆದು ಮನೆಯೊಳಗಡೆಯ ಮೂಲೆಯಲ್ಲಿಟ್ಟೆ. ಹಾಗೆ ನೋಡಿದರೆ ತಮ್ಮ ಪಾಲಿನ ಭೂಮಿಯನ್ನೆಲ್ಲಾ ಕಳೆದುಕೊಂಡು ೪೮ ಎಕರೆ ಭೂಮಿಯಲ್ಲಿ (ಈತ ಮತ್ತೆ ೪ ಎಕರೆ ಜಮೀನು ಖರೀದಿಸಿದ್ದಾರೆ) ಬದುಕುವುದನ್ನು ಹೆಬ್ಬಳ್ಳಿಯ ಜಾಗೀರುದಾರ ಮನೆತನದವರು ರೂಢಿಸಿಕೊಂಡಿದ್ದಾರೆ. ಆದರೆ ಮನೆತನದ ಪೂರ್ವಜರ ಜಾಗೀರದಾರರ ಗತ್ತನ್ನಾಗಲಿ ನಡುವಳಿಕೆಗಳನ್ನಾಗಲಿ ಇನ್ನೂ ಕಳೆದುಕೊಂಡಿಲ್ಲ ಎನಿಸಿತು.

ಹೆಬ್ಬಳ್ಳಿ ಜಾಗೀರದಾರ ಮನೆತನದ ಮೂಲ ಪ್ರಮುಖ ವ್ಯಕ್ತಿಯೆಂದರೆ ಅಪ್ಪಾಜಿರಾವ್ ಸೂರೋ. ಇವರು ಮಹಾರಾಷ್ಟ್ರದ ಫಂಡರಾಪುರ ಬಳಿಯ ಕರ್ಕಂಭೋಸ್ ಎನ್ನುವ ಗ್ರಾಮದವರು. ಅಪ್ಪಾಜಿರಾವ್ ಸೂರೋ ಅವರ ತಂದೆ-ತಾಯಿ ಅಲ್ಪಕಾಲದಲ್ಲಿಯೇ ದುರ್ಮರಣಕ್ಕೀಡಾದರು. ಆಗಿನ್ನೂ ಚಿಕ್ಕವರಿದ್ದ ಅಪ್ಪಾಗಿರಾವ್ ಸೂರೋ ಮಾವ ರಾಮಚಂದ್ರರಾವ್ ಅವರೊಂದಿಗೆ ಬೆಳೆದರು. ರಾಮಚಂದ್ರರಾವ್ ಶಿವಾಜಿಯೊಂದಿಗೆ ರಾಯಘಡದಲ್ಲಿದ್ದರು. ಶಿವಾಜಿಯ ಸೇವೆಯಲ್ಲಿದ್ದ ಇವರಿಗೆ ೫೦೦ ಕುದುರೆಗಳ ಸರದಾರರು ಎನ್ನುವ ಬಿರುದು ಇತ್ತು. ಶಿವಾಜಿಯ ಪುತ್ರ ರಾಜರಾಮ್ ಆಡಳಿತದ ಸಂದರ್ಭದಲ್ಲಿ ಅಪ್ಪಾಜಿರಾವ್ ಸೂರೋ ಅವರನ್ನು ನರಗುಂದ-ರಾಮದುರ್ಗಗಳ ಜಾಗೀರದಾರರನ್ನಾಗಿ ನೇಮಿಸಲಾಯಿತು. ಅಪ್ಪಾಜಿರಾವ್ ಸೂರೋ ನರಗುಂದಕ್ಕೆ ಬಂದು ನೆಲೆಸಿದರು. ಇವರಿಗೆ ಮಂತ್ರಿಯಾಗಿ ವೆಂಕಟರಾವ್ ಧಾವೆ (ಇವರು ಭೂದಾನ ಚಳುವಳಿಯ ನೇತಾರರಾದ ವಿನೋಭಾಭಾವೆ ಬಂಧುಗಳು) ಜೊತೆಗಿದ್ದರು. ಅಪ್ಪಾಜಿರಾವ್ ಸೂರೋ ಅವರಿಗೆ ಬಹುದಿನಗಳ ನಂತರ ಬಲವಂತರಾವ್ ಎಂಬ ಪುತ್ರ ಜನಿಸಿದನು. ಬಲವಂತರಾವ್‌ನಿಗೆ ಅಧ್ಯಾತ್ಮದೆಡೆಗೆ ಒಲವು ಇದ್ದಿದ್ದರಿಂದ, ಮಂತ್ರಿ ವೆಂಕಟರಾವ್ ಭಾವೆ ಆಡಳಿತದಲ್ಲಿ ಪ್ರಧಾನ ಪಾತ್ರವಹಿಸಿದ್ದರು. ಒಮ್ಮೆ ಬಲವಂತರಾವ್ ತಿರುಪತಿಗೆ ತೆರಳಿದ ಸಂದರ್ಭದಲ್ಲಿ ನರಗುಂದದ ಪಟ್ಟವನ್ನು ಮಂತ್ರಿ ವೆಂಕಟರಾವ್, ತನ್ನ ಪುತ್ರ ರಾಮರಾವ್ ಭಾವೆಗೆ ವಹಿಸಿದ. ಇದರಿಂದ ಅಪ್ಪಾಜಿರಾವ್ ಸೂರೋ ಪುತ್ರ ಬಲವಂತರಾವನಿಗೂ ಹಾಗೂ ಮಂತ್ರಿ ವೆಂಕಟರಾವ್ ಭಾವೆ ಪುತ್ರ ರಾಮರಾವ್ ಭಾವೆಗೂ ಮಧ್ಯೆ ಭಿನ್ನಾಭಿಪ್ರಾಯ ಉಂಟಾಯಿತು. ಈ ಕಲಹದ ಇತ್ಯರ್ಥಕ್ಕಾಗಿ ಪೇಶ್ವೆ ಬಳಿ ದೂರನ್ನು ಒಯ್ಯಲಾಯಿತು.

ಈ ಮಧ್ಯೆ ಸವಣೂರಿನ ನವಾಬ ಮಜೀದಖಾನ (೧೭೨೪-೪೯) ಹೈದರಾಬಾದ್‍ನ ನಿಜಾಂ ಉಲ್ ಮುಲ್ಕನೊಂದಿಗೆ ಯುದ್ಧ ಮಾಡಿದನು. ಈ ಯುದ್ಧದಲ್ಲಿ ಪೇಶ್ವೆಗಳ ಅಪ್ಪಣೆ ಮೇರೆಗೆ ನರಗುಂದದ ಬಲವಂತರಾವ್ ಹಾಗೂ ರಾಮ್‍ರಾವ್ ಭಾವೆ ಸವಣೂರಿನ ನವಾಬನಿಗೆ ಸಹಾಯ ಮಾಡಿದರು. ಈ ಯುದ್ಧದಲ್ಲಿ ಸವಣೂರಿನ ನವಾಬನು ಗೆದ್ದನು. ಅಲ್ಲದೆ ಸಹಾಯ ಹಸ್ತ ಚಾಚಿದ್ದಕ್ಕಾಗಿ ಹೆಬ್ಬಳ್ಳಿ ಗ್ರಾಮದ ಭೂಮಿಯ ಜಾಗೀರದಾರ ಪಟ್ಟವನ್ನು ಬಲವಂತರಾವ್ ಉಡುಗೊರೆಯಾಗಿ ಕೊಟ್ಟನು. ಯಾವಾಗ ನರಗುಂದದಲ್ಲಿ ಬಲವಂತರಾವನಿಗೂ ಹಾಗೂ ರಾಮರಾವ್ ಭಾವೆಗೂ ಭಿನ್ನಾಭಿಪ್ರಾಯ ಉಂಟಾಯಿತೋ, ಆಗ ಪೇಶ್ವೆಗಳು ಮತ್ತು ಸವಣೂರಿನ ನವಾಬರು ಹೆಬ್ಬಳ್ಳಿ ಗ್ರಾಮದಲ್ಲಿ ಬಂದಿರಲು ಬಲವಂತರಾವನಿಗೆ ಸೂಚಿಸಿದರು. ಈ ಹಿನ್ನಲೆಯಲ್ಲಿ ಹೆಬ್ಬಳ್ಳಿ ಗ್ರಾಮದ ಜಾಗೀರದಾರರಾಗಿ ಬಲವಂತರಾವ್ ಅವರು ೧೭೫೪ರಲ್ಲಿ ಇಲ್ಲಿಗೆ ಬಂದು ನೆಲೆಸಿದರು.

ಬಲವಂತರಾವ್ ಅವರಿಗೆ ಶೂರರಾವ್ ಹಾಗೂ ರಾಮಚಂದ್ರರಾವ್ ಎಂಬ ಇಬ್ಬರು ಮಕ್ಕಳು. ಈ ಇಬ್ಬರಲ್ಲಿ ಆಸ್ತಿ ಭಾಗ ಮಾಡುವ ಸಂಬಂಧವಾಗಿ ಕಲಹ(೧೭೯೦) ಉಂಟಾಯಿತು. ಆಗ ಮುರುಗೋಡದ ಚಿದಂಬರ ದೀಕ್ಷಿತ ಎಂಬ ಸಂತರ ನೇತೃತ್ವದಲ್ಲಿ ಇಬ್ಬರಿಗೂ ಆಸ್ತಿ ಭಾಗ ಮಾಡಿ ರಾಜಿ ಮಾಡಲಾಯಿತು. ಈ ಸಂದರ್ಭದಲ್ಲಿಯೇ ಚಿದಂಬರ ದೀಕ್ಷಿತರ ಮಂದಿರವನ್ನು ಹೆಬ್ಬಳ್ಳಿಯಲ್ಲಿ ಸ್ಥಾಪಿಸಲಾಯಿತು.

ಮುಂದೆ ಪೇಶ್ವೆಗಳ ಪತನಾನಂತರ (೧೮೧೮) ಬ್ರಿಟೀಷರಿಗೆ ಹೆಬ್ಬಳ್ಳಿ ಜಾಗೀರದಾರರು ನಿಷ್ಟೆ ತೋರಿದರು. ಇದರಿಂದಾಗಿ ಬ್ರಿಟೀಷರು ಇವರ ಜಾಗೀರದಾರತನವನ್ನು ಮಾನ್ಯ ಮಾಡಿದರು. ಅಲ್ಲದೆ ಹೆಬ್ಬಳ್ಳಿ ಸಮೀಪವಿರುವ ತಲವಾಯಿ ಮತ್ತು ಕುರುಡಾಪುರ ಗ್ರಾಮಗಳ ಭೂಮಿಯನ್ನು ಇವರ ಅಧೀನಕ್ಕೆ ಒಪ್ಪಿಸಿದರು.

ಉತ್ತರ ಭಾರತದಲ್ಲಿ ೧೮೫೭ರ ಸಂದರ್ಭದಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅಥವಾ ಬ್ರಿಟಿಷರ ದೃಷ್ಟಿಯಲ್ಲಿ ಸಿಪಾಯಿದಂಗೆ ಅನಿಸಿಕೊಂಡ ವಿದ್ಯಾಮಾನ ಪ್ರಭಾವದಿಂದಾಗಿ ದಕ್ಷಿಣದಲ್ಲಿಯೂ ಬ್ರಿಟೀಷರ ವಿರುದ್ಧ ದಂಗೆಗಳಾದವು. ಅವುಗಳಲ್ಲಿ ಮುಂಡರಗಿ ಭೀಮರಾಯನ ದಂಗೆಯೂ (೧೮೫೮) ಒಂದು. ಮುಂಡರಗಿಯ ಭೀಮ್‍ರಾವ್ ನಾಡಿಗೇರ ನರಗುಂದದ ಜಾಗೀರದಾರರೊಂದಿಗೆ ಸೇರಿ ಬ್ರಿಟೀಷರ ವಿರುದ್ಧ ಬಂಡಾಯವೆದ್ದನು. ಈ ಬಂಡಾಯದಲ್ಲಿ ಭಾಗಿಯಾಗಿದ್ದ ನರಗುಂದದ ಜಾಗೀರದಾರರು ಹಾಗೂ ಹೆಬ್ಬಳ್ಳಿಯ ಜಾಗೀರದಾರರು ನಿಕಟವರ್ತಿಗಳು. ಅಲ್ಲದೆ ಹೆಬ್ಬಳ್ಳಿ ಗ್ರಾಮದ ಗೌಡರಾದ ನಾಡಿಗೇರ ಮನೆತನ ಮತ್ತು ಮುಂಡರಗಿಯ ಭೀಮರಾವ್ ನಾಡಿಗೇರ ನಿಕಟ ಬಂಧುಗಳಾಗಿದ್ದರು. ಈ ಹಿನ್ನಲೆಯಲ್ಲಿ ಬ್ರಿಟೀಷರ ವಿರುದ್ಧದ ಈ ಬಂಡಾಯಕ್ಕೆ ಹೆಬ್ಬಳ್ಳಿ ಜಾಗೀರದಾರರು ಸಹಾಯ ಮಾಡಿದರು. ಈ ದಂಗೆಯಲ್ಲಿ ಹೆಬ್ಬಳ್ಳಿ ಜಾಗೀರದಾರರಾಗಿದ್ದ ವಿಠಲರಾವ್ ಮಡಿದರು.

ಹೆಬ್ಬಳ್ಳಿ ಜಾಗೀರದಾರ ಮನೆತನದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದ ಏಕೈಕ ವ್ಯಕ್ತಿಯೆಂದರೆ ಈ ವಿಠಲ್‍ರಾವ್. ಮುಂದಿನ ದಿನಗಳಲ್ಲಿ ಈ ಮನೆತನದ ಯಾರೊಬ್ಬರೂ ಬ್ರಿಟೀಷರ ವಿರುದ್ಧ ಹೋಗಲಿಲ್ಲ. ಬ್ರಿಟೀಷರು ಅಂತಹದ್ದೊಂದು ಬಿಗಿ ಹಿಡಿತವನ್ನು ಈ ಜಾಗೀರದಾರರ ಮೇಲೆ ಹೊಂದಿದ್ದರು. ಮುಂಡರಗಿ ಭೀಮರಾಯನ ಬಂಡಾಯದ ನಂತರ ಆತನಿಗೆ ಸಹಾಯ ಮಾಡಿದವರ ಬಗ್ಗೆ ಬ್ರಿಟೀಷರು ಆಕ್ರೋಶಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಹೆಬ್ಬಳ್ಳಿಯ ಭೂಮಿಯನ್ನು ಸರಂಜಾಮ್ ಭೂಮಿಯನ್ನಾಗಿ ಮಾರ್ಪಡಿಸಿದರು. ಈ ಮಾರ್ಪಾಡಿನಿಂದ ಜಾಗೀರದಾರ ಮನೆತನದ ಮೇಲೆ ಹಲವು ಪರಿಣಾಮ ಬೀರಿತು. ಇದರಿಂದಾಗಿ ೧. ಹೆಬ್ಬಳ್ಳಿ ಭೂಮಿಯ ಒಡೆತನ ಬ್ರಿಟೀಷರದ್ದಾಯಿತು. ೨. ಈ ಒಡೆತನದ ಉಸ್ತುವಾರಿಯನ್ನು ಮಾತ್ರ ಹೆಬ್ಬಳ್ಳಿ ಜಾಗೀರದಾರರು ನೋಡಿಕೊಳ್ಳಬೇಕು. ೩. ಈ ಭೂಮಿಯನ್ನು ಮನೆತನದ ಸದಸ್ಯರಲ್ಲಿ ಭಾಗ ಮಾಡುವಂತಿಲ್ಲ. ೪. ಭೂಮಿಯ ಉಸ್ತುವಾರಿ ಕುಟುಂಬದ ಹಿರಿಯ ಮಗನಿಗೆ ವಹಿಸಿಕೊಡಲಾಯಿತು. ೫. ಬ್ರಿಟೀಷರು ಬಯಸಿದಲ್ಲಿ ಈ ಒಡೆತನವನ್ನು ಬೇರೊಬ್ಬರಿಗೆ ವಹಿಸಿಕೊಡಬಹುದಾಗಿತ್ತು. ೬. ಇದರಿಂದಾಗಿ ಹೆಬ್ಬಳ್ಳಿ ಜಾಗೀರದಾರ ಮನೆತನದವರು ಏನಿದ್ದರೂ ಬರೀ ಕಂದಾಯ ವಸೂಲಿ ಮಾಡುವ ಅಧಿಕಾರವನ್ನು ಮಾತ್ರ ಹೊಂದಿರುವವರಾದರು.

ಈ ಮಾರ್ಪಾಡಿನಿಂದ ಸ್ಥಳೀಯ ರೈತರ ಮೇಲೆ ಗಂಭೀರ ಪರಿಣಾಮ ಉಂಟಾಯಿತು. ಜಾಗೀರದಾರರು ಈಗ ರೈತರ ಮೇಲೆ ಹೆಚ್ಚು ಹೆಚ್ಚು ಕಂದಾಯವನ್ನು ನಿಗದಿಪಡಿಸಿದರು; ವಸೂಲಿ ಮಾಡುವಾಗಲೂ ಹೆಚ್ಚು ನಿರ್ದಯ ಆಗತೊಡಗಿದರು. ಏಕೆಂದರೆ ಬ್ರಿಟೀಷರು ಯಾವ ಸಂದರ್ಭದಲ್ಲಾದರೂ ಅವರ ಜಾಗೀರದಾರ ಅಧಿಕಾರವನ್ನು ಕಿತ್ತುಕೊಂಡು ಬೇರೊಬ್ಬರಿಗೆ ವರ್ಗಾಯಿಸಬಹುದಾಗಿತ್ತು. ಹೀಗಾಗಿ ಇರುವಷ್ಟು ದಿನ ಹೆಚ್ಚು ಕಂದಾಯ ವಸೂಲಿ ಮಾಡುವ ಮೂಲಕ ಶ್ರೀಮಂತರಾಗತೊಡಗಿದರು. ಇದೇ ವೇಳೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಹತ್ತಿ ಬೆಳೆಯಲ್ಲಿ ಗಣನೀಯ ಹೆಚ್ಚಳ ಉಂಟಾಯಿತು. ಧಾರವಾಡ ಜಿಲ್ಲಾ ಗೆಜೆಟಿಯರ್ ಪ್ರಕಾರ ‘ಜಿಲ್ಲೆಯಲ್ಲಿ ಅಮೆರಿಕನ್ ಹತ್ತಿ ಬೆಳೆ ೧೮೪೨ರಲ್ಲಿ ಕೇವಲ ೨ ಎಕರೆ ಇದ್ದದ್ದು, ೧೮೭೮ರಲ್ಲಿ ೨.೪೬ ಲಕ್ಷ ಎಕರೆ ಆಯಿತು. ಇದರಲ್ಲಿ ಹೆಬ್ಬಳ್ಳಿ ಗ್ರಾಮದ ಕೃಷಿಕರ ಪಾಲೂ ಇದೆ. ಏಕೆಂದರೆ ಹತ್ತಿ ನೂಲುವ ನೇಕಾರರು ಹೆಬ್ಬಳ್ಳಿಯಲ್ಲಿ ಬಹುಸಂಖ್ಯಾತರಿದ್ದಾರೆ. ೧೯೪೫ರಲ್ಲಿಯೇ ಅವರು ನೇಕಾರರ ಸಂಘ ಸ್ಥಾಪಿಸಿಕೊಂಡಿದ್ದಾರೆ. ಅಲ್ಲದೆ ನೇಕಾರರ ಸೊಸೈಟಿ ಮೂಲಕ ಹತ್ತಿ ನೂಲುವ ಕಾಯಕವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

೧೮೬೦ರಲ್ಲಿ ಹೆಬ್ಬಳ್ಳಿ ಗ್ರಾಮದಲ್ಲಿ ಜಾಗೀರದಾರ ಮನೆತನದವರು ಇನ್ನೆರಡು ವಾಡೆಗಳನ್ನು ನಿರ್ಮಿಸಿದರು. ಈಗ ಒಂದು ವಾಡೆ ಇದ್ದು ಇದರಲ್ಲಿ ಸುಹಾಸ್ ಹೆಬ್ಳಿಕರ್ ಎನ್ನುವವರು ವಾಸಿಸುತ್ತಿದ್ದಾರೆ. ಇನ್ನೊಂದು ವಾಡೆ ಸಂಪೂರ್ಣ ನಾಶವಾಗಿದ್ದು ಆ ಸ್ಥಳವನ್ನು ಚಿದಂಬರ ದೀಕ್ಷಿತ ಮಂದಿರಕ್ಕೆ ವಹಿಸಿಕೊಡಲಾಗಿದೆ.

ಭೂಮಿಯ ಒಡೆತನಕ್ಕೆ ಸಂಬಂಧಿಸಿದಂತೆ ಅಧಿಕಾರದಲ್ಲಾದ ಬದಲಾವಣೆಯ ಕುರಿತು ಜಾಗೀರದಾರ ಮನೆತನದ ಪಾಂಡುರಂಗರಾವ್ ಹೆಬ್ಳಿಕರ್ ಅವರೊಂದಿಗೆ ಮಾತನಾಡುತ್ತಲೇ ‘ನಿಮ್ಮ ಮನೆತನದಲ್ಲಿ ಮತ್ತ್ಯಾರಾದರೂ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದಾರೆಯೇ?’ ಎಂದು ಕೇಳಿದೆ. ಇದಕ್ಕೆ ಅವರು ಕೊಟ್ಟ ಉತ್ತರವು ಒಟ್ಟು ಜಾಗೀರದಾರ ಮನೆತನಗಳ ಬದುಕುತ್ತಿದ್ದ ರೀತಿಗೆ ಕೈಗನ್ನಡಿಯಾಗಿತ್ತು. ‘ಭಾರತ ಸ್ವಾತಂತ್ರ್ಯವಾಗುವವರೆಗೂ ನಮ್ಮ ಮನೆತನದಲ್ಲಿ ಬ್ರಿಟೀಷರ ವಿರುದ್ಧ ಚಕಾರವನ್ನೆತ್ತಿಲ್ಲ, ಬ್ರಿಟೀಷರ ವಿರುದ್ಧ ನಾವು ಹೋದರೆ ಇರುವ ಅಧಿಕಾರವನ್ನು ಕಸಿದುಕೊಂಡಾರು ಎನ್ನುವ ಭಯ ಮನೆತನದ ಹಿರಿಯರಿಗಿತ್ತು’ ಎಂದು ಪಾಂಡುರಂಗರಾವ್ ಹೆಬ್ಳೀಕರ್ ಹೇಳಿದರು. ಈ ಭಯ ಬರೀ ಹೆಬ್ಬಳ್ಳಿ ಜಾಗೀರದಾರರ ಮನೆತನದವರದು ಮಾತ್ರವಾಗಿರಲಿಲ್ಲ. ಕರ್ನಾಟಕದ ಅದೆಷ್ಟೋ ಭೂಮಾಲಿಕರ ಹಾಗೂ ಜಾಗೀರದಾರರ ಭಯವಾಗಿತ್ತು. ಹಾಗೆ ನೋಡಿದರೆ ಬ್ರಿಟೀಷರ ವಿರುದ್ಧ ಹೋರಾಡಿದ ಆರಂಭದ ಹೋರಾಟಗಾರರಲ್ಲಿ ತುಂಡರಸರು ಹಾಗೂ ಭೂಮಾಲಿಕರದ್ದೇ ಪ್ರಮುಖ ಪಾತ್ರ. ಇವರೆಲ್ಲ ತಮ್ಮ ಅಧಿಕಾರವನ್ನೋ, ಭೂಮಿಯ ಮೇಲಿನ ಸ್ವಾಮ್ಯವನ್ನೋ ಬ್ರಿಟೀಷರು ಕಸಿದುಕೊಂಡದ್ದಕ್ಕಾಗಿ ಅದರ ವಿರುದ್ಧ ತಿರುಗಿ ಬಿದ್ದಿದ್ದರು. ಕೊಡಗಿನ ಸ್ವಾಮಿ ಅಪರಂಪಾರ ಪುಟ್ಟಬಸಪ್ಪ, ಕಿತ್ತೂರಿನ ರಾಣಿ ಚೆನ್ನಮ್ಮ, ಸುರಪುರದ ವೆಂಕಟಪ್ಪನಾಯಕ, ನರಗುಂದದ ಬಾಬಾಸಾಹೇಬ ಮುಂತಾದವರ ದಂಗೆಗೆ ಮುಖ್ಯ ಕಾರಣಗಳಲ್ಲಿ ಇದೂ ಒಂದಾಗಿತ್ತು.

ಮುಂಡರಗಿಯ ಭೀಮರಾಯನ ಜೊತೆ ಸೇರಿದ್ದ ಹೆಬ್ಬಳ್ಳಿಯ ವಿಠಲರಾವ್‌ರಿಗೆ ಚಿದಂಬರ ರಾವ್ ಎನ್ನುವ ಮಗನಿದ್ದ. ಈತ ೧೯೨೦ರಲ್ಲಿ ನಿಧನ ಹೊಂದಿದರು. ಇವರಿಗೆ ಇಬ್ಬರು ಮಕ್ಕಳು. ಒಬ್ಬರು ವಿಠಲರಾವ್ ಮತ್ತೊಬ್ಬರು ಮಾಧವರಾವ್ ಎಂದು. ಮಾಧವರಾವ್ ಅವರಿಗೆ ಮಕ್ಕಳಿರಲಿಲ್ಲ. ವಿಠಲರಾವ್ ಅವರಿಗೆ ಕೃಷ್ಣರಾವ್ ಎಂಬ ಮಗನಿದ್ದ. ೧೯೪೪ರಲ್ಲಿ ಹೆಬ್ಬಳ್ಳಿಯ ಜಾಗೀರದಾರ ಮನೆತನ ಮೂಲದಿಂದ ಹಲವು ಕವಲುಗಳಾಗಿತ್ತು. ಬ್ರಿಟೀಷರು ಜಾಗೀರದಾರ ಭೂಮಿಯನ್ನು ಸ್ವಂತ ಆಸ್ತಿಯಂತೆ ಹಂಚಿಕೊಳ್ಳುವಂತಿಲ್ಲ ಎಂದು ೧೮೫೮ರಲ್ಲಿ ತೀರ್ಮಾನಿಸಿದರು. ಆದರೆ ಅಷ್ಟರೊಳಗಾಗಿ ಸುಮಾರು ೧೩ ಸಾವಿರ ಎಕರೆ ಜಾಗೀರ‍್ದಾರ ಕುಟುಂಬಗಳ ಹಲವರಲ್ಲಿ ಹಂಚಿಕೆಯಾಗಿತ್ತು. ಹಾಗೆ ಹಂಚಿಕೆ ಮಾಡಿಕೊಂಡು ಬದುಕುತ್ತಿದ್ದವರಲ್ಲಿ ಕೆಲವರು ಧಾರವಾಡ, ಬೆಳಗಾವಿ, ಪುಣೆ, ಬೆಂಗಳೂರುಗಳಲ್ಲಿ ವಾಸಮಾಡುತ್ತಿದ್ದರು. ಇವರ ಆಸ್ತಿಯನ್ನು ಈ ಮನೆತನದ ಬಂಧುಗಳು ನೋಡಿಕೊಳ್ಳುತ್ತಿದ್ದರು.

೧೮೫೨ರಲ್ಲಿ ಬಾಂಬೆ ಸರ್ಕಾರವು ಸುಮಾರು ೧೩ ಸಾವಿರ ಎಕರೆ ಹೆಬ್ಬಳ್ಳಿ ಜಾಗೀರ ಭೂಮಿ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ, ಮನೆತನದ ಹಲವರ ಹೆಸರಿನಲ್ಲಿ ಭೂಮಿ ಹಂಚಿಕೆಯಾಗಿತ್ತು. ಈ ಕುರಿತು ಧಾರವಾಡ ತಾಲೂಕು ಕಚೇರಿಯ ‘೬೪೦ ಡ’ ಎನ್ನುವ ಕಡತದಲ್ಲಿ ದಾಖಲಿಸಲಾಗಿದ್ದು, ಕಚೇರಿಯ ಹಳೇ ಕಡತಗಳ ಭಂಡಾರದಲ್ಲಿ ಇದನ್ನು ಕಾಪಾಡಲಾಗಿದೆ. ಇದರ ಅನ್ವಯ ಹೆಬ್ಬಳ್ಳಿ ಜಾಗೀರದಾರ ಮನೆತನದ ವಿವಿಧ ಸದಸ್ಯರಲ್ಲಿ ಹಂಚಿಕೆಯಾಗಿದ್ದ ಭೂಮಿಯ ವಿವರ ಇಂತಿದೆ.

೧. ಶೇಷಗಿರಿರಾವ್ ಮಾಧವರಾವ್ ಜಾಗೀರದಾರ – ೩,೪೬೮೦೦೦ ಎಕರೆ

೨. ಕೃಷ್ಣರಾವ್ ವಿಠಲ್‍ರಾವ್ ಜಾಗೀರದಾರ – ೨,೪೨೪.೩೫ ಎಕರೆ

೩. ಶ್ರೀನಿವಾಸರಾವ್ ಲಕ್ಷ್ಮಣ್ ರಾವ್ ಜಾಗೀರದಾರ – ೭೬೬.೯ ಎಕರೆ

೪. ಲಕ್ಷ್ಮಣ್ ರಾವ್ ನರಸಿಂಗರಾವ್ ಜಾಗೀರದಾರ – ೬೧೧.೩೯ ಎಕರೆ

೫. ದತ್ತೋಬರಾವ್ ಲಕ್ಷ್ಮಣ್ ರಾವ್ ಜಾಗೀರದಾರ – ೪೬೯.೨೨ ಎಕರೆ

೬. ಲಕ್ಷ್ಮೀಬಾಯಿ ಲಕ್ಷ್ಮಣ್ ರಾವ್ ಜಾಗೀರದಾರ – ೩೯೨.೦೦ ಎಕರೆ

೭. ರಘುನಾಥರಾವ್ ಕೃಷ್ಣ ರಾವ್ ಜಾಗೀರದಾರ – ೨೬೦.೧೫ ಎಕರೆ

೮. ಶ್ರೀನಿವಾಸರಾವ್ ಗುರುರಾಯರಾವ್ ಜಾಗೀರದಾರ – ೨೦೨.೦೦ ಎಕರೆ

ಇವರಲ್ಲದೆ ಇನ್ನು ಹಲವು ಜಾಗೀರು ಮನೆತನದ ಸದಸ್ಯರಲ್ಲಿ ಹಂಚಿಕೆಯಾಗಿದ್ದ ಭೂಮಿಯನ್ನು ೧೯೫೨ರಲ್ಲಿ ಬಾಂಬೆ ಸರ್ಕಾರ ವಶಪಡಿಸಿಕೊಂಡಿತು. ಹಾಗೆ ವಶಪಡಿಸಿಕೊಳ್ಳಲು ಪ್ರಮುಖ ಕಾರಣರಾದವರು ಕ್ಷೌರಿಕಜಾತಿಯ ಒಬ್ಬ ಸಾಮಾನ್ಯ ಮನುಷ್ಯ, ಅವರ ಹೆಸರು, ಬಿ.ಎಸ್. ಹೀರೆ. ಇವರು ಮಹಾರಾಷ್ಟ್ರ ಪ್ರಾಂತ್ಯದ ಜಾಗೀರದಾರ ಮನೆತನಗಳ ಆರ್ಥಿಕ ಶಕ್ತಿಯನ್ನು ಸಂಪೂರ್ಣವಾಗಿ ಕುಗ್ಗಲು ಕಾರಣವಾದರು. ಅವರು ಜಾಗೀರದಾರ ಮನೆತನಗಳಿಗೆ ಉಂಟು ಮಾಡಿದ ನಷ್ಟ ಅದ್ಯಾವ ಪರಿ ಇತ್ತೆಂದರೆ, ಐದು ದಶಕಗಳು ಕಳೆದರೂ ನನಗೆ ಮಾಹಿತಿ ನೀಡುತ್ತಿದ್ದ ಜಾಗೀರದಾರ ಮನೆತನದ ಪಾಂಡುರಂಗರಾವ್ ಹೆಬ್ಳೀಕರ್ ಮಾತಿನುದ್ದಕ್ಕೂ ಬಿ.ಎಸ್. ಹೀರೆಯವರನ್ನು ಬಯ್ಯುತ್ತಲೇ ಇದ್ದರು. ಬಿ.ಎಸ್. ಹೀರೆ ಅವರ ಪ್ರಸಂಗ ಸ್ವಾರಸ್ಯಕರವಾಗಿದೆ.