ಬಿ.ಎಸ್. ಹೀರೆಯವರ ಪೂರ್ಣ ಹೆಸರು ಬಾವು ಸಾಹೇಬ ಹೀರೆ. ಇವರು ಮೂಲತಃ ನಾಸಿಕದ ತ್ರೈಂಬಕೇಶ್ವರ ದೇವಾಲಯದ ಬಳಿ ಕ್ಷೌರಿಕ ವೃತ್ತಿ ಮಾಡುವ ಮನೆತನದವರು. ಸ್ವತಂತ್ರ್ಯ ಹೋರಾಟದ ಸಂದರ್ಭದಲ್ಲಿ (೧೯೪೨ರ ಕ್ವಿಟ್ ಇಂಡಿಯಾ ಚಳುವಳಿ) ಜೈಲುವಾಸ ಅನುಭವಿಸಿದ್ದ ಹೀರೆ, ಆಗಲೇ ಮಹಾರಾಷ್ಟ್ರ ಪ್ರಾಂತ್ಯದಲ್ಲಿ ರಾಜಕೀಯದಲ್ಲಿ ಪ್ರಸಿದ್ಧರಾಗಿದ್ದರು.

ಅದು ೧೯೫೨ರ ಕಾಲ, ಮಹಾರಾಷ್ಟ್ರ, ಅಸೆಂಬ್ಲಿಯ ಪ್ರಥಮ ಚುನಾವಣೆ. ನಾಸಿಕ್ ಕ್ಷೇತ್ರದಿಂದ ಸ್ವತಂತ್ರ್ಯ ಅಭ್ಯಾರ್ಥಿಯಾಗಿ ಸ್ಥಳೀಯ ಜಾಗೀರದಾರರಾದ ಸರ್ದಾರ ವಿಂಚೂರ‍್ಕರ ಚುನಾವಣಾ ಉಮೇದುದಾರರಾಗಿದ್ದರು. ಇವರ ಎದುರುಗಡೆ ಕಾಂಗ್ರೆಸ್ ಪಕ್ಷದಿಂದ ಬಿ.ಎಸ್. ಹೀರೆ ನಾಮಪತ್ರ ಸಲ್ಲಿಸಿದರು. ರಾಷ್ಟ್ರದಾದ್ಯಂತ ಸ್ವಾತಂತ್ರ್ಯ ಹೋರಾಟದ ನೆನಪು ಇನ್ನೂ ಅಚ್ಚಳಿಯದೆ ಉಳಿದಿತ್ತು. ಅದರಲ್ಲೂ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಪಕ್ಷವಾಗಿತ್ತು.

ಸ್ವತಂತ್ರ್ಯ ಅಭ್ಯರ್ಥಿಯಾಗಿದ್ದ ಸರ್ದಾರ ವಿಂಚೂರ್ಕರ ಹೆಬ್ಬಳ್ಳಿ ಜಾಗೀರದಾರರ ಬಂಧುಗಳಾಗಿದ್ದರು. ೧೯೫೨ರಲ್ಲಿ ಹೆಬ್ಬಳ್ಳಿ ಜಾಗೀರದಾರರಲ್ಲಿ ಪ್ರಮುಖರಾಗಿದ್ದ ಕೃಷ್ಣರಾವ್ ಅವರಿಗೆ ಮಾವನಾಗಿದ್ದವರು; ಸರ್ದಾರ್ ವಿಂಚೂರ‍್ಕರ್ ಆಗಲಿ, ಅವರ ಮನೆತನದ ಇತರೆ ಸದಸ್ಯರಾಗಲಿ ಎಂದೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲ. ಬ್ರಿಟೀಷರ ವಿರುದ್ಧ ಹೋರಾಟಕ್ಕಿಳಿದರೆ ಜಾಗೀರದಾರ ಭೂಮಿಯನ್ನು ಕಳೆದುಕೊಳ್ಳುವ ಭಯ ಇವರಿಗೂ ಇತ್ತು. ಅಲ್ಲದೆ ಬ್ರಿಟೀಷರ ಪರವಾಗಿ ಸ್ವಾತಂತ್ರ್ಯ ಹೋರಾಟಗಾರರನ್ನು ಹಿಡಿದು ಕೊಡುತ್ತಿದ್ದುದಾಗಿ ಸಹ ಹೇಳಲಾಗುತ್ತದೆ. ಈ ಹಿನ್ನಲೆಯಲ್ಲಿ ಸ್ಥಳೀಯ ಜನತೆಯ ವಿಶ್ವಾಸವನ್ನು ಸರ್ದಾರ್ ವಿಂಚೂರ‍್ಕರ್ ಕಳೆದುಕೊಂಡಿದ್ದರು.

ಇಂತಹ ವಿಂಚೂರ‍್ಕರ್ ಚುನಾವಣೆಯಲ್ಲಿ ತಮ್ಮ ಎದುರಾಳಿ ಆಗಿದ್ದ ಬಿ.ಎಸ್. ಹೀರೆ ಕುರಿತು ಲಘುವಾಗಿ ಮಾತನಾಡಿದ್ದರು. ಹೆಬ್ಬಳ್ಳಿ ಭೂಹೋರಾಟದ ನಾಯಕರಾದ ಶ್ರೀನೀಲಂಗಯ್ಯ ಪೂಜಾರರ ಪ್ರಕಾರ ‘ಕ್ಷೌರಿಕನೊಬ್ಬ ಚುನಾವಣೆಯಲ್ಲಿ ನನ್ನನೇನು ಸೋಲಿಸಿಯಾನು?’ ಎಂದು ದರ್ಪದಿಂದ ಹೀಯಾಳಿಸಿದ್ದರು. ವಿಂಚೂರ‍್ಕರ್ ಅವರಲ್ಲಿದ್ದ ದರ್ಪ ಹಾಗೂ ಸ್ಥಳೀಯರೊಂದಿಗೆ ಅವರಿಗಿದ್ದ ವೈಯಕ್ತಿಕ ಸಂಬಂಧ, ೧೯೫೨ರ ಚುನಾವಣೆಯಲ್ಲಿ ಬಿ.ಎಸ್. ಹೀರೆಯವರ ವಿರುದ್ಧ ಸೋಲುವಂತೆ ಮಾಡಿತು. ಮಹಾರಾಷ್ಟ್ರದ ಪ್ರಥಮ ಸರ್ಕಾರದಲ್ಲಿಯೇ ಬಿ.ಎಸ್. ಹೀರೆ ಅವರು ಮುಖ್ಯಮಂತ್ರಿ ಆಗುವ ಅವಕಾಶ ಒದಗಿಬಂದಿತ್ತು. ಆದರೆ ಆ ಚುನಾವಣೆಯಲ್ಲಿ ಸೋತಿದ್ದರೂ ಮುರಾರ್ಜಿ ದೇಸಾಯಿಯವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಯಿತು. ಸರ್ಕಾರದಲ್ಲಿ ಮೊದಲ ಕಂದಾಯ ಸಚಿವರಾಗಿ ಬಿ.ಎಸ್. ಹೀರೆ ಪ್ರಮಾಣ ವಚನ ಸ್ವೀಕರಿಸಿದರು. ಕಂದಾಯ ಸಚಿವರಾಗುತ್ತಿದ್ದ ಕೂಡಲೆ ಬಿ.ಎಸ್.ಹೀರೆ ಮಾಡಿದ ಮೊದಲ ಕೆಲಸವೆಂದರೆ ಮಹಾರಾಷ್ಟ್ರ, ಪ್ರಾಂತ್ಯದ ಎಲ್ಲ ಜಾಗೀರದಾರ್ ಭೂಮಿಯನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡಿದ್ದು. ಇದೇ ವೇಳೆ ಎದುರಾಳಿಯಾದ ವಿಂಚೂರ‍್ಕರ್ ಪಾಲಿನ ಜಾಗೀರದಾರ ಭೂಮಿಯನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡರು. ಹೀಗೆ ವಶಕ್ಕೆ ತೆಗೆದುಕೊಳ್ಳಲು ಇದ್ದ ಅನುಕೂಲವೆಂದರೆ ಈ ಭೂಮಿಯು ರಾಜಕೀಯ ಉಡುಗೊರೆಗಳಾಗಿ ಇನಾಮಿನ ರೂಪದಲ್ಲಿ ಜಾಗೀರದಾರರ ವಶಕ್ಕೆ ಬಂದಿದ್ದವಾಗಿದ್ದವು. ರಾಜಕೀಯ ಇನಾಂ ಭೂಮಿಯು ಕಾನೂನಿನ ಅಡಿಯಲ್ಲಿ ಸ್ವಂತ ಆಸ್ತಿಗಳಾಗಿ ಪರಿಗಣಿತವಾಗುವುದಿಲ್ಲ ಎಂದು ತಿಳಿದಿದ್ದ ಬಿ.ಎಸ್. ಹೀರೆ ಈ ಭೂಮಿಯನ್ನು ವಶಪಡಿಸಿಕೊಳ್ಳುವುದಕ್ಕಾಗಿ ಯಾವುದೇ ವಿನೂತನ ಶಾಸನವನ್ನು ಜಾರಿ ಮಾಡಲಿಲ್ಲ. ಬಾಂಬೆ ಪ್ರಾಂತ್ಯದಲ್ಲಿದ್ದ ಎಲ್ಲ ಜಾಗೀರದಾರ ಭೂಮಿಯನ್ನು ಆಡಳಿತಾತ್ಮಕ ಕ್ರಮಗಳ ಮೂಲಕವೇ ಸರ್ಕಾರದ ವಶಕ್ಕೆ ತೆಗೆದುಕೊಂಡರು. ಹಾಗೆ ಸರ್ಕಾರದ ವಶಕ್ಕೆ ಹೋದ ಜಾಗೀರದಾರ ಭೂಮಿಗಳಲ್ಲಿ ಆಗಿನ ಬಾಂಬೆ ಪ್ರಾಂತ್ಯಕ್ಕೆ ಸೇರಿದ್ದ ಹೆಬ್ಬಳ್ಳಿ ಮತ್ತು ಗಜೇಂದ್ರಗಡದ ಜಾಗೀರು ಭೂಮಿಯೂ ಇತ್ತು.

೧೯೫೨ರ ನವೆಂಬರ್ ೧ರಂದು ಹೆಬ್ಬಳ್ಳಿಯ ಜಾಗೀರದಾರ ಭೂಮಿಯನ್ನು ಮಹಾರಾಷ್ಟ್ರ ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿತು. ಸರ್ಕಾರಿ ದಾಖಲೆ ಪ್ರಕಾರ ಸರ್ಕಾರಿ ವಶಕ್ಕೆ ಹೋದ ಒಟ್ಟು ಹೆಬ್ಬಳ್ಳಿಯ ಜಾಗೀರದಾರ ಭೂಮಿ ೧೨,೬೫೫.೩೭ ಎಕರೆ. ಹೀಗೆ ಕಳೆದುಕೊಂಡ ಭೂಮಿಯನ್ನು ಮರಳಿ ಪಡೆಯುವ ಪ್ರಯತ್ನವನ್ನು ಜಾಗೀರದಾರ ಮನೆತನದವರು ತೀವ್ರವಾಗಿ ಪ್ರಯತ್ನಿಸಿದರು. ಈ ಕುರಿತು ಬಿ.ಎಸ್. ಹೀರೆ ಹಾಗೂ ಮುರಾರ್ಜಿ ದೇಸಾಯಿ ಅವರನ್ನು ಅವರು ಹಲವು ಬಾರಿ ಭೇಟಿ ಮಾಡಿ ಚರ್ಚಿಸಿದರು.

ಹೆಬ್ಬಳ್ಳಿ ಜಾಗೀರದಾರರಾದ ಕೃಷ್ಣರಾವ್ ವಿಠಲ್ ರಾವ್, ಶೇಷಗಿರಿ ರಾವ್ ಮಾಧವರಾವ್ ಹಾಗೂ ಗಜೇಂದ್ರಗಡದ ಜಾಗೀರದಾರರಾದ ಮಾಲೋಜಿರಾವ್ ಅವರು ಬಾಂಬೆ ಸರ್ಕಾರದ ಕಂದಾಯ ಸಚಿವರಾಗಿದ್ದ ಬಿ.ಎಸ್. ಹೀರೆಯವರನ್ನು ಭೇಟಿ ಮಾಡಿ (೧೯೫೪, ಏಪ್ರಿಲ್ ೧೯ರಂದು) ಚರ್ಚಿಸಿದರು. ಕಳೆದುಕೊಂಡ ಭೂಮಿಗೆ ಪರಿಹಾರ ಮೊತ್ತ ಕೊಡುವಂತೆ ಬೇಡಿಕೊಂಡರು. ಆದರೆ ಬಿ.ಎಸ್. ಹೀರೆ ಕಾನೂನಿನ ವ್ಯಾಪ್ತಿಯ ಹೊರಗೆ ಯಾವುದೇ ಸಹಾಯ ನೀಡಲು ಸಿದ್ಧರಿರಲಿಲ್ಲ. ಆಗಿನ ಕಾನೂನಿನಂತೆ ಜಾಗೀರದಾರ ಭೂಮಿ ಕಳೆದುಕೊಂಡ ಪ್ರತಿ ಕುಟುಂಬದ ನಿರ್ವಹಣೆಗೆ ೧೧೦ ಎಕರೆ ಭೂಮಿ ನೀಡಲು ಸಿದ್ಧರಿದ್ದರು. ಇದಕ್ಕಿಂತ ಹೆಚ್ಚಿನ ಸಹಾಯ ಸಾಧ್ಯವಿಲ್ಲವೆಂದು ಜಾಗೀರದಾರರನ್ನು ವಾಪಸ್ಸು ಕಳುಹಿಸಿದ್ದರು. ಇದೇ ವೇಳೆ ಹೆಬ್ಬಳ್ಳಿಯ ಕೃಷ್ಣರಾವ್ ವಿಠಲರಾವ್ ಅವರು ಮುರಾರ್ಜಿ ದೇಸಾಯಿಯವರ ಬಳಿ ಹೆಚ್ಚಿನ ಪರಿಹಾರ ನೀಡಲು ವಿನಂತಿಸಿಕೊಂಡರು. ಅದರಲ್ಲೂ ಕೃಷ್ಣರಾವ್, ವಿಠಲರಾವ್ ಮತ್ತು ಮುರಾರ್ಜಿ ದೇಸಾಯಿಯವರು ರಾಯಗಢದಲ್ಲಿ ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಸ್ನೇಹಿತರಾಗಿದ್ದರು. ಅಲ್ಲದೇ ಮುರಾರ್ಜಿ ದೇಸಾಯಿಯವರು ಜಾಗೀರದಾರ್ ಮನೆತನಗಳ ಬಗ್ಗೆ ಹೆಚ್ಚು ಉದಾರಿಗಳಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಭೂಮಿ ಕಳೆದುಕೊಂಡ ಹೆಬ್ಬಳ್ಳಿ ಜಾಗೀರದಾರರಿಗೆ ತಲಾ ೭೦೦ ಎಕರೆ ಭೂಮಿಯನ್ನು ಮರಳಿ ಕೊಟ್ಟರು. ಅಲ್ಲದೆ ಹೆಬ್ಬಳ್ಳಿಯ ವೆಂಕಟೇಶ ದೇವಾಲಯದ ಉಸ್ತುವಾರಿ ನೋಡಿಕೊಳ್ಳಲೆಂದು ಇದ್ದ ೪೫೦ ಎಕರೆ ಇನಾಂ ಭೂಮಿಯನ್ನು ಬಿಟ್ಟುಕೊಟ್ಟರು. ಅಧಿಕೃತವಾಗಿ ಈ ಸಂದರ್ಭದಲ್ಲಿ ಜಾಗೀರದಾರರಿಗೆ ಮರಳಿ ಬಂದ ಒಟ್ಟು ಭೂಮಿ ೩ ಸಾವಿರ ಎಕರೆ. ಈ ಬಗ್ಗೆ ಪ್ರಶ್ನೆ ಮಾಡಿದವರೆಂದರೆ ಬಿ.ಎಸ್. ಹೀರೆಯೊಬ್ಬರು ಮಾತ್ರ. ಉಳಿದಂತೆ ಅಂದು ಪ್ರಮುಖ ವಿರೋಧ ಪಕ್ಷಗಳಾಗಲಿ ಪ್ರಭಾವಿ ಸಮೂಹ ಮಾಧ್ಯಮಗಳಾಗಲಿ ಇರದಿದ್ದರಿಂದ, ಇದ್ದರೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸದಿದ್ದರಿಂದ ಮುರಾರ್ಜಿ ದೇಸಾಯಿಯವರ ಕ್ರಮಕ್ಕೆ ಯಾರೂ ಅಡ್ಡಿ ಉಂಟು ಮಾಡಲಿಲ್ಲ.

ಇಷ್ಟಾಗುವ ಹೊತ್ತಿಗಾಗಲೇ ಜಾಗೀರದಾರ ಮನೆತನದವರು ತೀವ್ರವಾಗಿ ಹತಾಶಗೊಂಡಿದ್ದರು. ತಮ್ಮ ವ್ಯಾಪ್ತಿಯಲ್ಲಿದ್ದ ಸಾವಿರಾರು ಎಕರೆ ಕೈತಪ್ಪಿ ಹೋಗಿದ್ದರಿಂದ ಮಾನಸಿಕವಾಗಿ ಕುಗ್ಗಿ ಹೋದರು. ಕೃಷ್ಣರಾವ್ ವಿಠಲರಾವ್ ಅವರು ಆಧ್ಯಾತ್ಮದೆಡೆಗೆ ಹೆಚ್ಚಿನ ಒಲವು ತೋರಿದರೆ, ಶೇಷಗಿರಿರಾವ್ ಮಾಧವ್‍ರಾವ್ ಅವರು ಕೊನೆಯ ದಿನದ ತನಕವೂ ಬಿ.ಎಸ್. ಹೀರೆಯವರನ್ನೂ ಮಹಾರಾಷ್ಟ್ರ ಸರ್ಕಾರವನ್ನು ಬೈಯುತ್ತಾ ಕಳೆದರು.

ಈ ಹೊತ್ತಿಗಾಗಲೇ ಸ್ಥಳೀಯ ರೈತರು ಜಾಗೀರದಾರರಿಗೆ ಮೊದಲಿನಂತೆ ಹೆದರುವುದನ್ನು ಕಡಿಮೆ ಮಾಡಿದ್ದರು. ಹಲವಾರು ವರ್ಷಗಳಿಂದ ಜಾಗೀರ ಭೂಮಿಯನ್ನು ಉಳುತ್ತಿದ್ದ ರೈತರಿಗೆ ಭೂ ಸುಧಾರಣಾ ಕಾಯ್ದೆಗಳು ಆತ್ಮವಿಶ್ವಾಸವನ್ನು, ಧೈರ್ಯವನ್ನು ತಂದುಕೊಟ್ಟಿದ್ದವು. ಅದರಲ್ಲೂ ಬಾಂಬೆ ಪ್ರಾಂತ್ಯದಲ್ಲಿದ್ದ ಗೇಣಿ ಕಾನೂನುಗಳು ಉಳುವವರ ಪರವಾಗಿದ್ದವು. ‘ಬಾಂಬೆ ಗೇಣಿ ಕಾನೂನು ೧೯೩೯’ ಕಾಯ್ದೆಯನ್ನು ತಿದ್ದುಪಡಿ ಮಾಡಿ ೧೯೪೮ರಲ್ಲಿ ಜಾರಿಗೆ ತರಲಾಯಿತು. ಇದರ ಪ್ರಕಾರ ನಿಗದಿತ ಮೊತ್ತವನ್ನು ಪ್ರತಿವರ್ಷ ಗೇಣಿದಾರ ಭೂಮಾಲಕನಿಗೆ ಕೊಡಬೇಕು, ಭೂಮಾಲಿಕ ಬೇಕಾದ ಹಾಗೆ ಗೇಣಿ ಹೆಚ್ಚಿಸುವಂತಿಲ್ಲ. ಗೇಣಿದಾರರನ್ನು ಒಕ್ಕಲೆಬ್ಬಿಸುವಂತಿಲ್ಲ. ಭೂಮಾಲಿಕ ವ್ಯವಸಾಯೇತರ ಉದ್ದೇಶಗಳಿಗಾಗಿ ಜಮೀನನ್ನು ಗೇಣೀದಾರನಿಗೇ ಮಾರಬೇಕು’ ಮುಂತಾದ ಪ್ರಮುಖ ಕಾನೂನುಗಳು ಉಳುವ ರೈತರಿಗೆ ಅನುಕೂಲಕರವಾಗಿದ್ದವು. ಈ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಬಯಸಿದ ಸ್ಥಳೀಯ ರೈತರು ಜಾಗೀರದಾರರಿಂದ ಬಿಡುಗಡೆಗೆ ಹಂಬಲಿಸುತ್ತಿದ್ದರು. ಅಲ್ಲದೆ ಸ್ಥಳೀಯ ರೈತರು ಭೂಸುಧಾರಣಾ ಕಾಯ್ದೆ ಅನ್ವಯ ಲಾವಣಿಯ ಆರು ಪಟ್ಟು ಹಣ ಸರ್ಕಾರಕ್ಕೆ ಪಾವತಿಸಿ ಉಳುವ ಭೂಮಿಯನ್ನು ಸ್ವಂತದ್ದನ್ನಾಗಿಸಿಕೊಳ್ಳಲು ಬಯಸಿದ್ದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಕಿಸಾನ್ ವಿಭಾಗದ ಸಂಘಟಕರಾಗಿ ಸರ್ದಾರ್ ವೀರನಗೌಡ ಪಾಟೀಲರನ್ನು ಕಾಂಗ್ರೆಸ್ ಪಕ್ಷ ನೇಮಿಸಿತ್ತು. ಮೂಲತಃ ಧಾರವಾಡ ಭಾಗದವರಾಗಿದ್ದ ಇವರು ಹೆಬ್ಬಳ್ಳಿಯ ರೈತರನ್ನು ಸಂಘಟಿಸಿದರು. ಗಾಂಧೀ ಅನುಯಾಯಿಗಳಾಗಿದ್ದ ಸರ್ದಾರ್ ವೀರನಗೌಡ್ರು ಹರಿಜನ ಸೇವಾಶ್ರಮದ ಮೂಲಕ ಸಾರ್ವಜನಿಕ ಸೇವೆ ಸಲ್ಲಿಸುತ್ತಿದ್ದರು. ಇವರು ಹೆಬ್ಬಳ್ಳಿಯ ರೈತರ ಪರವಾಗಿ ಮಹಾರಾಷ್ಟ್ರ ಸರ್ಕಾರದಲ್ಲಿ ಪ್ರಭಾವ ಬೀರುತ್ತಿದ್ದರು. ಹೆಬ್ಬಳ್ಳಿಯಲ್ಲಿ ಮಳೆ ಇಲ್ಲದೆ ಇಳುವರಿ ಕಡಿಮೆಯಾಗಿದೆ ಎಂದು ಹೇಳಿ, ಕಂದಾಯವನ್ನು ಕಡಿಮೆ ನಿಗದಿ ಮಾಡುವಂತೆ ಅವರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಈ ಸಂದರ್ಭದಲ್ಲೆಲ್ಲಾ ಜಾಗೀರದಾರ ಮನೆತನದವರು ಮುರಾರ್ಜಿ ದೇಸಾಯಿಯವರ ಬಳಿ ಹೋಗಿ ಮತ್ತೆ ಕಂದಾಯ ನಿಗದಿಯನ್ನು ಹೆಚ್ಚಿಸಿಕೊಂಡು ಬರುತ್ತಿದ್ದರು. ಹೀಗೆ ಕಂದಾಯ ನಿಗದಿಪಡಿಸುವ ಸಂಬಂಧವಾಗಿ ಸರ್ದಾರ ವೀರನಗೌಡ್ರು, ಸ್ಥಳೀಯ ರೈತರಿಂದ ಸಾಕಸ್ಟು ಹಣವನ್ನು ವಸೂಲಿ ಮಾಡುತ್ತಿದ್ದರೆಂದೂ, ಅದನ್ನು ವೈಯಕ್ತಕಿಕವಾಗಿಯೂ ಬಳಸಿಕೊಳ್ಳುತ್ತಿದ್ದರೆಂದೂ ನೀಲಗಂಗಯ್ಯ ಪೂಜಾರರು ತಿಳಿಸಿದರು.

೧೯೫೧-೫೨ರ ಸುಮಾರಿನ ಹೆಬ್ಬಳ್ಳಿಯಲ್ಲಿದ್ದ ಒಟ್ಟು ಜನಸಂಖ್ಯೆಯಲ್ಲಿ (೫೦೭೮) ೬೦೦ಕ್ಕಿಂತ ಹೆಚ್ಚು ಕುಟುಂಬಗಳು ಕೃಷಿಯನ್ನೇ ನಂಬಿ ಬದುಕುತ್ತಿದ್ದವು. ಇದರಲ್ಲಿ ಕೃಷಿಕರು, ರೈತ ಕೂಲಿ ಕಾರ್ಮಿಕರೂ ಇದ್ದರು. ಈ ಜನರನ್ನು ಅಂದಿನ ಧಾರವಾಡ ಜಿಲ್ಲಾ ಕಲೆಕ್ಟರ್ ಆಗಿದ್ದ ಆರ್.ಜಿ.ರೆಬೆಲ್ಲೋ ಖುದ್ದಾಗಿ ಭೇಟಿ ಮಾಡಿ ಚರ್ಚಿಸಿದರು. ಇದೇ ವೇಳೆ ಸರ್ಕಾರದ ನಿಯಮದಂತೆ ಉಳುತ್ತಿರುವ ರೈತನಿಗೆ ೪೮ ಭೂಮಿಯನ್ನು ಮಂಜೂರು ಮಾಡುವ ಕುರಿತು ಭರವಸೆಯನ್ನು ನೀಡಿದರು. ಅಲ್ಲದೆ ಹೆಚ್ಚುವರಿ ಭೂಮಿಯನ್ನು ಕೂಲಿಕಾರ್ಮಿಕರಿಗೆ ಕೊಡಿಸುವುದಾಗಿ ಭರವಸೆ ಇತ್ತರು. ಈ ಕುರಿತು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಾಖಲಾತಿ ಇದೆ.

ಬಿ.ಎಸ್. ಹೀರೆಯವರು ಜಾಗೀರುದಾರರ ಜಮೀನನ್ನು ೧೯೫೨ರಲ್ಲಿ ಸರ್ಕಾರದ ವಶಕ್ಕೆ ತೆಗೆದುಕೊಂಡರೂ ಭೂಮಿ ಉಳುವ ರೈತರಿಗೆ, ಕೂಲಿ ಕಾರ್ಮಿಕರಿಗೆ ಸ್ವಂತದ್ದಾಗಿ ಮಾಡಿಕೊಳ್ಳಲು ಮತ್ತೊಂದು ಹೋರಾಟವೇ ಬೇಕಾಯಿತು. ಈ ಹೋರಾಟವನ್ನು ಬಡ ರೈತ ಕೂಲಿಕಾರ್ಮಿಕರು ಕೈಗೊಂಡರು. ಈ ಹೋರಾಟದ ನೇತೃತ್ವ ವಹಿಸಿದವರು. ಶ್ರೀ ನೀಲಗಂಗಯ್ಯ ಪೂಜಾರ ಮತ್ತು ಜಿ.ಪಿ. ಪದಕಿ ಎಂಬ ಸಮಾಜವಾದಿ ಪಕ್ಷದ ಮುಖಂಡರು. ಇದು ನಡೆದಿದ್ದು ೧೯೫೮ ಮೇ ತಿಂಗಳಲ್ಲಿ. ೧೯೫೨ ರಿಂದ ೧೯೫೮ರ ಹೋರಾಟದ ದಿನಗಳವರೆಗೆ ನಡೆದ ಭೂವ್ಯಾಜ್ಯಗಳು, ಭೂಸಂಬಂಧಿ ಆಡಳಿತ ಕ್ರಮಗಳು ಹೆಬ್ಬಳ್ಳಿ ರೈತರನ್ನು ಹಾಗೂ ಸಮಾಜವಾದಿ ಮುಖಂಡರನ್ನು ಆಕ್ರೋಶಕ್ಕೀಡು ಮಾಡಿದ್ದವು.