೯೫೨ರಿಂದ ೧೯೫೮ರ ಅವಧಿಯು ಧಾರವಾಡ ಜಿಲ್ಲೆಯ ರೈತರಿಗೆ ಭೂಮಾಲಿಕರಿಗೆ, ಸಂಘರ್ಷದ ಕಾಲ. ಇದೇ ವೇಳೆಯಲ್ಲಿ ಪ್ರವರ್ಧಮಾನಕ್ಕೆ ಬಂದ ವಿನೋಭಾ ಭಾವೆಯರ ಭೂದಾನ ಚಳುವಳಿ, ಕರ್ನಾಟಕದ ಏಕೀಕರಣ, ಭೂಮಾಲಿಕ ಸಂಘಗಳ ಚಟುವಟಿಕೆಗಳು ಹಾಗೂ ಜತ್ತಿ ಸಮಿತಿಯ ಶಿಫಾರಸ್ಸುಗಳು ಒಟ್ಟಾರೆ ಈ ಭಾಗದ ರೈತರ ಜೀವನದಲ್ಲಿ ಮಹತ್ತರ ಪರಿಣಾಮಗಳನ್ನು ಬೀರಿದವು. ಏಕೀಕರಣದಿಂದಾಗಿ ಮುಂಬೈಯೊಂದಿಗೆ ಇದ್ದ ಭೂಸಂಬಂಧಗಳು ಬೆಂಗಳೂರಿಗೆ ವರ್ಗಾವಣೆಗೊಂಡವು.

ಕರ್ನಾಟಕದ ಏಕೀಕರಣಗೊಳ್ಳುವುದಕ್ಕಿಂತ ಸುಮಾರು ೨ ತಿಂಗಳು ಮೊದಲು, ಅಂದರೆ ಆಗಸ್ಟ್ ೨೫ ರಂದು, ಧಾರವಾಡ ಜಿಲ್ಲಾ ಕಲೆಕ್ಟರ್ ಆದ ಡಿ.ಡಿ. ಸಾಠೆ ಹೆಬ್ಬಳ್ಳಿಗೆ ಭೇಟಿ ಕೊಟ್ಟರು. ಅಲ್ಲದೆ ಸ್ಥಳೀಯ ರೈತರನ್ನು, ಕೂಲಿ ಕಾರ್ಮಿಕರನ್ನು ಭೇಟಿ ಮಾಡಿ ಜಾಗೀರದಾರ್ ಭೂಮಿಯ ಕುರಿತು ಚರ್ಚೆ ಮಾಡಿದರು. ಹಾಗೆ ಚರ್ಚಿಸಿದ ಬಳಿಕ ಡಿ.ಡಿ. ಸಾಠೆಯವರು ಸರ್ಕಾರಕ್ಕೆ ಈ ಬಗ್ಗೆ ಟಿಪ್ಪಣಿ ಬರೆದು ಕಳಿಸಿದರು. ಈ ಟಿಪ್ಪಣಿಯು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈಗಲೂ ಇದೆ. ಇದರಲ್ಲಿ ಮುಖ್ಯವಾಗಿ ೫ ಅಂಶಗಳ ಪ್ರಸ್ತಾಪವಿದೆ. ಅವುಗಳೆಂದರೆ-

೧. ೧೯೫೨ರಲ್ಲಿ ಜಾಗೀರದಾರರಿಂದ ವಶಪಡಿಸಿಕೊಂಡ ಭೂಮಿಯಲ್ಲಿ ಕೆಲವು ಜಮೀನುಗಳನ್ನು ಮರಳಿ ಕೊಡುವ ಭರವಸೆಯನ್ನು ಸರ್ಕಾರವು ಕೊಟ್ಟಿದೆ. ಅದರಂತೆ ಈಗ ಸರ್ಕಾರಿ ಆದೇಶವಾಗಿದ್ದು, ಈ ಸವಲತ್ತು ರೈತರಿಗೆ ಸಿಗಲಾರದು. (The collector explained to the ryots that the saranjamdar were originally the holders of these lands and their lands were resumed under the saranjam resumption rules, they were promised relief from the date.when they were deprivedof their lands. In view ofthis position, the royts, were informed that the retrosospective.effect from Ist November 1952,and that it was not possible to extend the same benifits to them (ryots) also. In any case this matter will have be dicided by Government)

೨. ರೈತರು ಸರ್ಕಾರಕ್ಕೆ ತಾವು ಸಾಗುವಳಿ ಮಾಡಿದ ಜಮೀನುಗಳ ೧೯೫೪-೫೫ನೇ ಸಾಲಿನ ಹಾಗೂ ೧೯೫೫-೫೬ನೇ ಸಾಲಿನ ಲಾವಣಿ ಹಣ ಕೊಡುವುದು ಬಾಕಿ ಇದ್ದು, ಅದನ್ನು ಪಾವತಿಸಬೇಕು. ಅಲ್ಲದೆ ಜಮೀನುಗಳ ಲಾವಣಿಯ ಆರುಪಟ್ಟು ಹಣ ಪಾವತಿಸಿ ಭೂಮಿಯನ್ನು ಸ್ವಂತದ್ದನ್ನಾಗಿಸಿಕೊಳ್ಳಬಹುದು ಎಂದು ರೈತರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅಲ್ಲದೆ ಯಾವ ರೈತರಿಗೆ ಲಾವಣಿ ಹಣ ಹಾಗೂ ಭೂಮಿ ಸ್ವಂತದ್ದನ್ನಾಗಿಸಿಕೊಳ್ಳಲು ಆರ್ಥಿಕ ಶಕ್ತಿ ಇಲ್ಲವೋ ಅವರಿಗೆ ಸಹಾಯ ಮಾಡಲು ಸಹಕಾರಿ ಸಂಘಗಳಿಗೆ ಶಿಫಾರಸ್ಸು ಮಾಡಲಾಗುವುದು. ಈ ಸಹಕಾರಿ ಸಂಘಗಳು ಕೊಟ್ಟ ಸಾಲವನ್ನು ನಿಗದಿತ ಕಂತುಗಳಲ್ಲಿ ವಾಪಸ್ಸು ಮಾಡುವ ಕರಾರಿಗೆ ಒಳಪಟ್ಟು ಹಣವನ್ನು ಪಡೆಯಬಹುದಾಗಿದೆ.

೩. ಜಾಗೀರು ಭೂಮಿಯನ್ನು ಸಾಗುವಳಿ ಮಾಡುತ್ತಿರುವ ರೈತರು ತಮ್ಮ ಕುಟುಂಬದ ಪ್ರತಿಯೊಬ್ಬರ ಹೆಸರಿನಲ್ಲಿ ಭೂಮಿಯನ್ನು ಸ್ವಂತದ್ದನ್ನಾಗಿಸಿಕೊಳ್ಳುವ ಪ್ರಯತ್ನ ಮಾಡಿದ್ದು, ಇದನ್ನು ಖಂಡಿಸಲಾಗುವುದು. ಅಲ್ಲದೆ, ಸರ್ಕಾರದ ನಿಯಮದಂತೆ ಒಂದು ಕುಟುಂಬದಲ್ಲಿ ಕನಿಷ್ಠ ೧೬ ಎಕರೆಯಿಂದ ಗರಿಷ್ಠ ೪೮ ಎಕರೆ ಕಂಡುಬಂದಲ್ಲಿ ಹಾಗೂ ಸಾಕ್ಷಿಸಮೇತ ಖಾತ್ರಿ ಮಾಡಿದಲ್ಲಿ, ಅಂತಹ ಹೆಚ್ಚುವರಿ ಭೂಮಿಯನ್ನು ವಶಪಡಿಸಿಕೊಂಡು ಭೂರಹಿತ ರೈತ ಕೂಲಿಕಾರ್ಮಿಕರಿಗೆ ಹಂಚಲಾಗುವುದು.

೪. ರೈತರಿಗೆ ಹಂಚಿ ಉಳಿದ ಹೆಚ್ಚುವರಿ ಭೂಮಿಯನ್ನು ಭೂರಹಿತ ರೈತ ಕೂಲಿಕಾರ್ಮಿಕರಿಗೆ ಮುಂದಿನ ಸೂಚನೆಯಂತೆ ಕೊಡಲಾಗುವುದು.

ಎ. ರೈತ ಕೂಲಿಕಾರ್ಮಿಕರು ಒಕ್ಕಲುತನ ಸಹಕಾರಿ ಸಂಘಗಳನ್ನು ಸ್ಥಾಪಿಸಿಕೊಂಡು ಹೆಚ್ಚುವರಿ ಭೂಮಿಯನ್ನು ಸಂಘದ ಸಹಾಯದಿಂದ ಸಾಮೂಹಿಕವಾಗಿ ಸಾಗುವಳಿ ಮಾಡತಕ್ಕದ್ದು.

ಬಿ. ಹೆಚ್ಚುವರಿ ಭೂಮಿಯಲ್ಲಿ ಬೇರೊಂದು ಊರನ್ನು ನಿರ್ಮಿಸುವ ವಿಚಾರವಿದ್ದು, ಅಲ್ಲಿಯೂ ವಾಸವಾಗಿ ಸಾಗುವಳೀ ಮಾಡಬಹುದು. (It is possible that about 2000 to 2500 acres of land will remain as surplus. The land less agriculturists were informed that this surplus are will be given to then, if they agree to form a tentat farming Society and cultivate. These Lands on a co-operative basis. They are further informed that it is proposed to establish a separate Housing coloney out side the present Gouthana, where in these Landless agriculturists cultivating the surplus area. an a co-operative basis will be housed, without distinction as to castes or creeds giving preference to Harijans and other B.C.persons. The landless agriculturists agreed to this arrengements.)

೫. ಶ್ರೀ ವೆಂಕಟೇಶ್ವರ ಮತ್ತು ಶ್ರೀ ಪಾಂಡುರಂಗ ದೇವಸ್ಥಾನಗಳಿಗೆ ಕೆಲವೊಂದು ಜಮೀನುಗಳನ್ನು ಹಿಂದಿನಿಂದಲೇ ದೇವಸ್ಥಾನದ ಇನಾಂ ಹಾಕಿಕೊಟ್ಟಿದ್ದಾರೆ. ಅದರಂತೆ ಮಹತ್ವವಿರುವ ಇನ್ನುಳಿದ ದೇವಸ್ಥಾನಗಳ ಉಸ್ತುವಾರಿಗೆ ಭೂಮಿ ಕೊಡುವ ಕುರಿತು ಕೆಲವು ದೂರುಗಳು ಬಂದಿದ್ದು, ಈ ಕುರಿತು ಯೋಗ್ಯ ನಿರ್ಣಯ ಕೈಗೊಳ್ಳಲಾಗುವುದು. ಈ ಟಿಪ್ಪಣಿಯ ಪ್ರತಿಯನ್ನು ಧಾರವಾಡ ತಾಲೂಕು ಮಾಮಲೇದಾರರಿಗೆ ಹಾಗೂ ಅಸಿಸ್ಟೆಂಟ್ ಕಲೆಕ್ಟರ್ ಅವರಿಗೆ ಜಿಲ್ಲಾ ಕಲೆಕ್ಟರ್ ಆದ ಡಿ.ಡಿ. ಸಾಠೆ ಹೆಬ್ಬಳ್ಳಿಗೆ ಭೇಟಿಕೊಟ್ಟ ದಿನವೇ ಬರೆದು ಕಳುಹಿಸಿದ್ದಾರೆ. ಆದರೆ ಇವುಗಳಲ್ಲಿ ಕೆಲವು ಅಂಶಗಳು ವಾಸ್ತವದಲ್ಲಿ ಜಾರಿಗೆ ಬರಲೇ ಇಲ್ಲ. ಇನ್ನು ಕೆಲವನ್ನು ರೈತರೇ ವಿರೋಧಿಸಿದ್ದರು.

ಆರ್ಥಿಕವಾಗಿ ದುರ್ಬಲವಾಗಿರುವ ರೈತರಿಗೆ ಸಹಕಾರಿ ಸಂಘಗಳು ಧನಸಹಾಯ ಮಾಡುವಂತೆ ಶಿಫಾರಸ್ಸು ಮಾಡಾವುದಾಗಿ ತಿಳಿಸಿದ್ದ ಜಿಲ್ಲಾಧಿಕಾರಿ ಡಿ.ಡಿ. ಸಾಠೆ, ಯಾವುದೇ ಸಂಘಗಳಿಗೂ ಶಿಫಾರಸ್ಸು ಮಾಡಲಿಲ್ಲ. ಅಲ್ಲದೆ ಬಡ ರೈತರನ್ನು ನಂಬಿ ಯಾವುದೇ ಸಹಕಾರಿ ಸಂಘಗಳು ಹಣವನ್ನು ಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ಮುಖ್ಯವಾಗಿ ಸಹಕಾರಿ ಸಂಘಗಳಿಗೆ ಒತ್ತೆ ಇಡಲು ರೈತರಲ್ಲಿ ಏನೂ ಇರಲಿಲ್ಲ. ಅವರು ಉಳುತ್ತಿದ್ದ ಭೂಮಿಯೂ ಅಧಿಕೃತವಾಗಿ ರೈತರ ಹೆಸರಿನಲ್ಲಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಜಾಮೀನು ಇಲ್ಲದೇ ಧನಸಹಾಯ ನೀಡಲು ಸಹಕಾರಿ ಸಂಘಗಳು ಮುಂದೆ ಬರಲಿಲ್ಲ. ಅಲ್ಲದೆ ಈ ಬಗ್ಗೆ ಹಲವು ಬಾರಿ ಜಿಲ್ಲಾಧಿಕಾರಿಗಳನ್ನು ಕಾಣುವ ಪ್ರಯತ್ನವನ್ನು ರೈತರು ಮಾಡಿದರು. ಈ ಬಗ್ಗೆ ಸ್ಥಳೀಯ ಸಮಾಜವಾದಿ ಮುಖಂಡರಾದ ಜಿ.ಟಿ. ಪದಕಿ ವಕೀಲರು ಹೆಬ್ಬಳ್ಳಿ ರೈತರನ್ನು ಒಗ್ಗೂಡಿಸಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ೧೯೫೬ ಅಕ್ಟೋಬರ್ ನಲ್ಲಿ ಮನವಿ ಪತ್ರ ಸಲ್ಲಿಸಿದರು. ಇದಕ್ಕೂ ಯಾವುದೇ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.

ಇಷ್ಟು ಹೊತ್ತಿಗಾಗಲೇ ಧಾರವಾಡ ಜಿಲ್ಲೆಯು ಮೈಸೂರು ರಾಜ್ಯಕ್ಕೆ ಸೇರುವ ಸ್ಪಷ್ಟ ಸೂಚನೆಗಳು ಕಂಡುಬಂದಿದ್ದವು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಕಾನೂನುಗಳು ಹಾಗೂ ಮೈಸೂರು ರಾಜ್ಯದ ಕಾನೂನುಗಳ ವ್ಯತ್ಯಾಸವು ಆಡಳಿತಾತ್ಮಕವಾಗಿ ಅಡ್ಡಿ ಉಂಟು ಮಾಡಿದ್ದವು. ಅಲ್ಲದೆ ಮಹಾರಾಷ್ಟ್ರ ಸರ್ಕಾರದ ಭೂಸುಧಾರಣಾ ಕಾಯ್ದೆಗಳು ಗೇಣಿದಾರರ ಪರವಾಗಿದ್ದವು. ಆದರೆ ಮೈಸೂರು ರಾಜ್ಯದ ಭೂಸುಧಾರಣಾ ಕಾಯ್ದೆಗಳು ಭೂ ಮಾಲಿಕರ ಪರವಾಗಿದ್ದವು. ಅಲ್ಲದೆ ಮುಂಬೈ ಕರ್ನಾಟಕದ ಸಹಕಾರಿ ಸಂಘಗಳು ಮೈಸೂರು ರಾಜ್ಯಕ್ಕೆ ವಿಲೀನವಾಗುವ ಸಂದರ್ಭಕ್ಕೆ ಆಡಳಿತಾತ್ಮಕವಾಗಿ ಸಿದ್ಧಗೊಳ್ಳುತ್ತಿದ್ದವು. ಹೀಗಾಗಿ ಸಹಕಾರಿ ಸಂಘಗಳು ಹೆಬ್ಬಳ್ಳಿ ರೈತರ ಅಗತ್ಯಕ್ಕೆ ಬೇಕಾದಾಗ ಸಾಲ ನೀಡುವಲ್ಲಿ ವಿಫಲವಾದವು.

ಡಿ.ಡಿ. ಸಾಠೆಯವರ ಟಿಪ್ಪಣಿಯಲ್ಲಿನ ಮೂರನೇ ಅಂಶದಲ್ಲಿ ನಮೂದಿಸಿರುವಂತೆ ಕೆಲವರು ಕುಟುಂಬದ ಪ್ರತಿಯೊಬ್ಬ ಸದಸ್ಯರ ಹೆಸರಿನಲ್ಲಿಯೂ ಗರಿಷ್ಟ ಮಟ್ಟದ ಭೂಮಿಯನ್ನು (೪೮ ಎಕರೆ) ದಾಖಲಿಸಿದ್ದಾರೆ. ಹೀಗೆ ಮಾಡುವಾಗ ಒಂದೇ ಕುಟುಂಬದ ಸದಸ್ಯರು ಪ್ರತ್ಯೇಕ ಕುಟುಂಬಗಳೆನ್ನುವಂತೆ ದಾಖಲೆ ಸೃಷ್ಟಿಸಿದ್ದಾರೆ. ಹೆಬ್ಬಳ್ಳಿಯ ಬಸಪ್ಪನಾಯ್ಕರ್ ಎಂಬ ವ್ಯಕ್ತಿಯೊಬ್ಬರು ೬೬ ಎಕರೆ ಭೂಮಿ ಉಳುತ್ತಿದ್ದರು. ಕುಟುಂಬದ ನಿರ್ವಹಣೆಗೆ ಗರಿಷ್ಟ ೪೮ ಎಕರೆ ಭೂಮಿಯನ್ನು ನಿಗದಿಪಡಿಸುತ್ತಿದ್ದಂತೆ ತನ್ನ ಹೆಚ್ಚುವರಿ ೧೮ ಎಕರೆಯನ್ನು ಮಗ ಶಾಂತಪ್ಪ ನಾಯ್ಕರ್ ಹೆಸರಿನಲ್ಲಿ ನಮೂದಿಸಿ, ಇವರದು ಪ್ರತ್ಯೇಕ ಕುಟುಂಬ ಎನ್ನುವಂತೆ ದಾಖಲೆ ಸೃಷ್ಟಿಸಿದ್ದರು. ಅಲ್ಲದೆ ವೆಂಕಟರಾವ್ ಗಣಪತರಾವ್ ಹೆಸರಿನಲ್ಲಿ ೩೭ ಎಕರೆ, ಕೃಷ್ಣರಾವ್ ಗಣಪತರಾವ್ ೫೮ ಎಕರೆ, ಮಾಧವ್‍ರಾವ್ ಗಣಪತರಾವ್ ೩೬ ಎಕರೆ, ಹಣಮಂತರಾವ್ ಗಣಪತರಾವ್ ೫೨ ಎಕರೆ ಭೂಮಿಯನ್ನು ಹೊಂದಿದ್ದರು. ಅಲ್ಲದೆ ಶ್ರೀನಿವಾಸರಾವ್ ಲಕ್ಷಣರಾವ್ ೭೬೬.೯ ಎಕರೆ, ಲಕ್ಷ್ಮೀಬಾಯಿ ಲಕ್ಷ್ಮಣ್ ರಾವ್ ೩೯೨ ಎಕರೆ, ಕೃಷ್ಣರಾವ್ ಲಕ್ಷ್ಮಣ್ ರಾವ್ ೧೩೫ ಎಕರೆ, ದತ್ತೋಬರಾವ್ ಲಕ್ಷ್ಮಣ್ ರಾವ್ ೪೬೯.೨೨ಎಕರೆ ಭೂಮಿಯನ್ನು ಹೊಂದಿದ್ದರು. ಮೂಲತಃ ಇವರೆಲ್ಲ ಗಣಪತಿರಾವ್, ಲಕ್ಷ್ಮಣ್ ರಾವ್ ಎಂಬ ಕುಟುಂಬಗಳ ಇತರ ಸದಸ್ಯರು. ಇದು ಸ್ಥಳೀಯ ರೈತರಿಗೆ ತಿಳಿದಿದ್ದರೂ ಅಗತ್ಯ ದಾಖಲೆಗಳನ್ನು ಸಂಗ್ರಹಿಸುವುದಾಗಲೀ, ಸರ್ಕಾರಕ್ಕೆ ಆದ ಅನ್ಯಾಯ ಮನವರಿಕೆ ಮಾಡುವ ಶಕ್ತಿಯಾಗಲಿ ಇರಲಿಲ್ಲ.

ಶ್ರೀಮಂತರು ಕುಟುಂಬದ ಸದಸ್ಯರ ಹೆಸರಿಗೆ ಭೂಮಿಯನ್ನು ಹೊಂದಲು ಆ ಸಂದರ್ಭದಲ್ಲಿದ್ದ ಸರಪಂಚನಾದ ಉಳುವಪ್ಪ ಮಲ್ಲಪ್ಪ ತಿರ್ಲಾಪುರ ಅಗತ್ಯ ದಾಖಲೆ ಸೃಷ್ಟಿಸಿದ್ದನೆಂದು ಹೇಳಲಾಗುತ್ತದೆ. ಇವರು ೧೯೪೧ರಿಂದಲೂ ಹೆಬ್ಬಳ್ಳಿಯ ಸರಪಂಚರಾಗಿ ಕಾರ್ಯನಿರ್ವಹಿಸುತ್ತಿದ್ದರು. (ವರದಿ : ಸಂಯುಕ್ತ ಕರ್ನಾಟಕ, ೫-೫-೧೯೫೭)

ಧಾರವಾಡ ಜಿಲ್ಲಾ ಕಲೆಕ್ಟರ್ ಡಿ.ಡಿ. ಸಾಠೆಯವರ ಟಿಪ್ಪಣಿಯಲ್ಲಿ ಮಂಡಿಸಿರುವ ಮತ್ತೊಂದು ವಿಚಾರವೆಂದರೆ ರೈತ ಕೂಲಿಕಾರರು ಹೆಚ್ಚುವರಿ ಭೂಮಿಯನ್ನು ಸಹಕಾರಿ ತತ್ವದ ಮೇಲೆ ಕೃಷಿ ಮಾಡಲು ಸೂಚಿಸಿದ್ದರು. ಈ ಸಲಹೆಗೆ ಅಂದಿನ ಸಭೆಯಲ್ಲಿಯೇ ವಿರೋಧ ವ್ಯಕ್ತವಾಗಿತ್ತು. ಸಭೆಯಲ್ಲಿ ಹಾಜರಿದ್ದ ರೈತ ಕೂಲಿಕಾರ್ಮಿಕರಾದ ಗುರುಸಿದ್ಧಪ್ಪ ಗಡೇಕಾರ, ಚಂದ್ರಪ್ಪ ಚಲುವಾದಿ, ಬಾಬುಸಾಬ್ ಎಲಿಗಾರ ಮುಂತಾದವರು ವಿರೋಧ ವ್ಯಕ್ತಪಡಿಸಿದ್ದರು. ಏಕೆಂದರೆ ಸಹಕಾರಿ ತತ್ವದ ಆಧಾರದ ಮೇಲೆ ಕೃಷಿ ಮಾಡುವುದು ಕಷ್ಟಕರವಾಗಿತ್ತು. ಹೆಚ್ಚುವರಿ ಭೂಮಿ ಒಂದೇ ಸ್ಥಳದಲ್ಲಿ ದೊರೆಯುತ್ತಿರಲಿಲ್ಲ. ಈ ಕೃಷಿ ಪದ್ಧತಿಯಲ್ಲಿ ತೊಡಗಿಕೊಂಡ ರೈತರಲ್ಲಿ ಶ್ರದ್ಧೆಯ ಕೊರತೆ ಸಹ ಕಂಡುಬರುತ್ತಿರಲಿಲ್ಲ. ಸ್ವಂತ ಭೂಮಿಯಲ್ಲಿ ಕೃಷಿ ಮಾಡುವ ಶ್ರದ್ಧೆ ಸಾಮೂಹಿಕ ಕೃಷಿಯಲ್ಲಿ ಕಂಡುಬರುವುದಿಲ್ಲ. ಅಲ್ಲದೆ ರೈತ ಕಾರ್ಮಿಕರೆಲ್ಲ ಸಾಮೂಹಿಕ ಕೃಷಿ ಕೈಗೊಳ್ಳಲು ಸ್ಥಾಪಿಸಿಕೊಳ್ಳುವ ಸಹಕಾರಿ ಸಂಘಗಳು ಮುಂದೊಂದು ದಿನ ಶ್ರೀಮಂತರ, ಭೂಮಾಲಿಕರ ಕೈವಶವಾಗಬಹುದೆಂಬ ಭಯವಿತ್ತು. ರೈತ ಕೂಲಿಕಾರ್ಮಿಕರಲ್ಲಿ ಭಿನ್ನಾಭಿಪ್ರಾಯ ಉಂಟಾದಲ್ಲಿ ಅದು ಕೃಷಿ ಬೆಳೆಯ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಹಲವು ಕಾರಣಗಳಿಗಾಗಿ ಈ ಸೂಚನೆಯನ್ನು ವಿರೋಧಿಸುವುದು ರೈತ ಕೂಲಿಕಾರ್ಮಿಕರಿಗೆ ಅನಿವಾರ್ಯವಾಗಿತ್ತು. ಅಲ್ಲದೆ ಹೆಚ್ಚುವರಿ ಭೂಮಿಯಲ್ಲಿ ಹೊಸತೊಂದು ಊರನ್ನು ನಿರ್ಮಿಸುವ ಬಗ್ಗೆ ಆಲೋಚನೆ ಇದೆ ಎಂದು ತಮ್ಮ ಟಿಪ್ಪಣಿಯಲ್ಲಿ ಡಿ.ಡಿ. ಸಾಠೆ ಪ್ರಸ್ತಾಪಿಸಿದ್ದರು. ಈ ಬಗ್ಗೆಯೂ ರೈತರಲ್ಲಿ ಸಹಮತ ಇರಲಿಲ್ಲ. ಅಲ್ಲದೆ ಒಂದು ಊರನ್ನೇ ಹೊಸದಾಗಿ ನಿರ್ಮಿಸುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ರೈತ ಕೂಲಿಕಾರ್ಮಿಕರನ್ನು ಹೆಬ್ಬಳ್ಳಿಯಿಂದ ಪ್ರತ್ಯೇಕಿಸುವುದು ಹಾಗೂ ಕೃಷಿ ಜಮೀನಿನ ಬಳಿಯೇ ಅವರಿಗೆ ವಾಸಸ್ಥಳ ನಿಗದಿಗೊಳಿಸುವುದು ಅವರ ದುಡಿಮೆಗೆ ಕೃಷಿಗೆ ಸಹಕಾರಿಯಾಗಬಲ್ಲದಾಗಿತ್ತು. ಆದರೆ ಜೀವನ ನಿರ್ವಹಣೆ ಎನ್ನುವುದು ಬರೀ ದುಡಿಮೆ ಅಥವಾ ಆರ್ಥಿಕ ಸ್ವಾವಲಂಬನೆಯ ಮೇಲೆಯೇ ನಿಂತಿರುವುದಿಲ್ಲ. ನೆರೆ-ಹೊರೆಯ ಬಾಂಧವ್ಯ, ಧಾರ್ಮಿಕ ಆಚರಣೆ, ಸಾಮಾಜಿಕ ಸಂಬಂಧಗಳೂ ಬದುಕಿಗೆ ಅನಿವಾರ್ಯವಾಗಿರುತ್ತದೆ. ಸರ್ಕಾರಿ ಅಧಿಕಾರಿಯಾಗಿದ್ದ ಶ್ರೀ ಡಿ.ಡಿ. ಸಾಠೆಯವರು ರೈತರ ಬಗ್ಗೆ ಕಾಳಜಿಯಿದ್ದರೂ ಅವರ ಸಾಂಸ್ಕೃತಿಕ ಬದುಕಿನ ಈ ಕಷ್ಟಗಳನ್ನು ಗಮನಿಸದೇ ಇಂತಹದ್ದೊಂದು ಟ್ಟಿಪ್ಪಣಿ ಬರೆದು, ಸಲಹೆ ಸೂಚನೆ ನೀಡಿದ್ದರು; ವಾಸ್ತವವಾಗಿ ಇವತ್ತಿನವರೆಗೂ ಇಲ್ಲಿ ಪ್ರತ್ಯೇಕ ಊರಾಗಲಿ, ವಾಸಸ್ಥಳವಾಗಲಿ ಸ್ಥಳೀಯ ರೈತ ಕೂಲಿಕಾರರು ಸ್ಥಾಪಿಸಿಕೊಂಡಿಲ್ಲ.

ಕೊನೆಯದಾಗಿ ಶ್ರೀ ವೆಂಕಟೇಶ ದೇವಸ್ಥಾನ ಹಾಗೂ ಪಾಂಡುರಂಗ ದೇವಸ್ಥಾನಗಳಿಗೆ ಇನಾಂ ಭೂಮಿಯನ್ನು ಉಳಿಸಿದ್ದು, ಈ ಭೂಮಿಯ ಪ್ರಮಾಣ ಸುಮಾರು ೪೫೦ ಎಕರೆಗಳಿತ್ತು. ಇದರ ಉಸ್ತುವಾರಿಯನ್ನು ಜಾಗೀರದಾರ ಕುಟುಂಬಗಳೇ ನೋಡಿಕೊಳ್ಳುತ್ತಿದ್ದವು. ದೇವಸ್ಥಾನಗಳಿಗೆ ಸಂಬಂಧಿಸಿದ ಈ ಭೂಮಿ ಜಾಗೀರದಾರರ ಖಾಸಗೀ ಆಸ್ತಿ ಎನ್ನುವಂತೆಯೇ ಉಪಯೋಗವಾಗುತ್ತಿತ್ತು. ಕಲೆಕ್ಟರರು ದೇವಾಲಯಗಳ ಖರ್ಚು-ವೆಚ್ಚಕ್ಕಾಗಿ ಇಷ್ಟೊಂದು ಭೂಮಿಯನ್ನು ಉಳಿಸುವ ನಿರ್ಣಯ ಮಾಡಿದ್ದರ ಔಚಿತ್ಯ ತಿಳಿಯುತ್ತಿರಲಿಲ್ಲ. ಇದಲ್ಲದೆ ತಮ್ಮ ಟಿಪ್ಪಣಿಯಲ್ಲಿ ಊರಿನ ಇನ್ನಿತರ ಮಹತ್ವದ ದೇವಾಲಯಗಳಿಗೂ ಭೂಮಿ ನೀಡುವ ಕುರಿತು ವಿಚಾರಿಸಿ ಯೋಗ್ಯ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ನಮೂದಿಸಿದ್ದರು. ಆದರೆ ಇದುವರೆಗೂ ಯಾವುದೇ ಸರಕಾರವು ಹೆಬ್ಬಳ್ಳಿಯ ಇತರೆ ದೇವಾಲಯಗಳಿಗೆ ಕಿಂಚಿತ್ತು ಭೂಮಿಯನ್ನು ನೀಡಿಲ್ಲ.

ಗ್ರಾಮೀಣ ಬದುಕಿನ ಅಥವಾ ಕೃಷಿ ಸಮಾಜದ ಬಗ್ಗೆ ಸಂಪೂರ್ಣ ಜ್ಞಾನವಿಲ್ಲದ ಒಬ್ಬ ಉನ್ನತ ಅಧಿಕಾರಿಯ ಟಿಪ್ಪಣಿಗಳ ಮಿತಿಗಳನ್ನು ಇಲ್ಲಿ ಕಾಣಬಹುದು. ಇಂತಹ ಟಿಪ್ಪಣಿಗಳಾಗಲಿ, ಸರಕಾರಿ ದಾಖಲೆಗಳಾಗಲಿ, ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಸಿಗುತ್ತವೆ. ಭಾರತದ ಅಧಿಕಾರಿ ಶಾಹಿಯು ಗ್ರಾಮೀಣ ಜಗತ್ತಿನ ಸಮಸ್ಯೆಗಳಲ್ಲಿ ಕೆಲಸ ಮಾಡುವಾಗ ಉಂಟಾಗುತ್ತಿದ್ದ ಸಮಸ್ಯೆಗಳಿವು.

೧೯೫೨ರಿಂದ ೧೯೫೮ರ ಇದೇ ಸಂದರ್ಭದಲ್ಲಿ ಧಾರವಾಡ ಭಾಗದಲ್ಲಿ ಭೂಮಿಗೆ ಸಂಬಂಧಿಸಿದಂತೆ ವಿನೋಬಾ ಭಾವೆ ನೇತೃತ್ವದ ಭೂದಾನ ಚಳುವಳಿಯ ಪ್ರಭಾವವು ಚಾಲ್ತಿಯಲ್ಲಿತ್ತು. ೧೯೫೧ರಂದು ಆಂಧ್ರಪ್ರದೇಶ ಪುಜಂಪಲ್ಲಿ ಎಂಬ ಗ್ರಾಮದಿಂದ ವಿನೋಬಾ ಭಾವೆ ಆರಂಭಿಸಿದ್ದ ಭೂದಾನ ಯಾತ್ರೆ ಭಾರತದಾದ್ಯಂತ ಸುದ್ದಿಯಲ್ಲಿತ್ತು. ಆಂಧ್ರಪ್ರದೇಶ, ಕೇರಳ, ಒರಿಸ್ಸಾ, ತಮಿಳುನಾಡು ಮುಂತಾದೆಡೆ ವಿನೋಭಾವೆ ಪಾದಯಾತ್ರೆಯ ಮೂಲಕ ಲಕ್ಷಾಂತರ ಭೂಮಿಯನ್ನು ಭೂಮಾಲಿಕರಿಂದ ದಾನವಾಗಿ ಪಡೆದಿದ್ದರು. ೧೯೫೭ರ ಸೆಪ್ಟೆಂಬರ್ ನಿಂದ ೧೯೫೮ರ ಮಾರ್ಚ್ ರವರೆಗೆ ಕರ್ನಾಟಕದಲ್ಲಿ ಪಾದಯಾತ್ರೆ ಕೈಗೊಂಡಿದ್ದ ವಿನೋಬಾ ಭಾವೆ ೧೦ ಸಾವಿರ ಎಕರೆಗಿಂತ ಹೆಚ್ಚು ಭೂಮಿಯನ್ನು ದಾನವಾಗಿ ಪಡೆದರು. ಭೂಮಿಗಾಗಿ ಮಾರ್ಕ್ಸ್ ವಾದಿಗಳು ಹಾಗೂ ಸಮಾಜವಾದಿಗಳು ನಡೆಸುತ್ತಿದ್ದ ಹೋರಾಟವನ್ನು ಈ ಭೂದಾನ ಚಳುವಳಿಯು ಅಣಕಿಸುವಂತಿತ್ತು. ಭೂದಾನವಾಗಿ ಬಂದ ಭೂಮಿಯ ಗುಣಮಟ್ಟ ಹಾಗೂ ಭೂದಾನ ಚಳುವಳಿಯ ಯಶಸ್ಸಿನ ಬಗ್ಗೆ ಎಂಥದೇ ಮಿತಿಗಳಿರಲಿ, ಅದು ಕರ್ನಾಟಕದಲ್ಲಿ ಹಾಗೂ ಭಾರತದ ಸಮಾಜವಾದಿಗಳು ತಮ್ಮ ಹೋರಾಟದಿಂದ ಪಡೆದ ಭೂಮಿಯ ಪ್ರಮಾಣಕ್ಕಿಂತ ಹೆಚ್ಚಿನದಾಗಿತ್ತು.

ಧಾರವಾಡದಲ್ಲಿ ಆಗಿನ ಸಂದರ್ಭದಲ್ಲಿ ವಿನೋಬಾ ಭಾವೆ ಪ್ರಭಾವ ತೀವ್ರವಾಗಿತ್ತು. ಭಾರತದಲ್ಲಿಯೇ ಪ್ರಥಮವಾಗಿ ಮಹಿಳಾ ಭೂದಾನ ಕಾರ್ಯಕರ್ತೆಯರ ತಂಡವೊಂದು ೧೯೫೮ರ ಸಂದರ್ಭದಲ್ಲಾಗಲೇ ರೂಪುಗೊಂಡಿತ್ತು. ಭಾಗೀರಥಿ ಬಾಯಿ ಪ್ರಭು, ಮೀರಾಬಾಯಿ ಕೊಪ್ಪೀಕರ, ಕೃಷ್ಣಬಾಯಿ ಪಂಡಿತ, ಲಕ್ಷ್ಮೀಬಾಯಿ, ಶ್ರೀಮತಿ ಚೆನ್ನಮ್ಮ ಹಳ್ಳೀಕೆರೆ ಮುಂತಾದವರು ಒಟ್ಟುಗೂಡಿ ರಚಿಸಿಕೊಂಡಿದ್ದ ಈ ತಂಡ ಭೂದಾನ ಪಡೆಯಲು ಹಾಗೂ ಸರ್ವೋದಯ ಗ್ರಾಮ ನಿರ್ಮಾಣ ಮಾಡಲು ಶ್ರಮಿಸುತ್ತಿದ್ದರು. ಈ ಸಂಬಂಧವಾಗಿ ಹೆಬ್ಬಳ್ಳಿ ಜಾಗೀರದಾರರಾದ ಕೃಷ್ಣರಾವ್ ಅವರನ್ನು ಅವರನ್ನು ಭಾವೆಯವರು ಭೇಟಿ ಮಾಡಿ ಭೂಮಿಯನ್ನು ದಾನವಾಗಿ ಕೊಡುವಂತೆ ಕೇಳಿಕೊಂಡಿದ್ದರು. ಆದರೆ ಇಷ್ಟೊತ್ತಿಗಾಗಲೇ ತಮ್ಮಲ್ಲಿನ ಅಧಿಕ ಜಾಗೀರು ಭೂಮಿಯನ್ನು ಸರ್ಕಾರದ ವಶಕ್ಕೆ ಒಪ್ಪಿಸಿದ್ದರಿಂದ ಕೃಷ್ಣರಾವ್ ಅವರು ಭೂದಾನ ನೀಡಲು ನಿರಾಕರಿಸಿದರು.

ಅಲ್ಲದೆ ಭೂದಾನಿಗಳ ಈ ಮಹಿಳಾ ತಂಡ ಆಚಾರ್ಯ ವಿನೋಬಾ ಭಾವೆ ಅವರ ಆದೇಶದಂತೆ ಮಹಾರಾಷ್ಟ್ರದ ಪಾಂಡಪುರದಲ್ಲಿ ೧೯೫೮ ಮೇ ೩೦, ೩೧ ರಂದು ನಡೆದ ಸರ್ವೋದಯ ಸಮ್ಮೇಳನಕ್ಕೆ ಪಾದಯಾತ್ರೆಯ ಮೂಲಕ ಹೋದರು. ಭಾರತದಲ್ಲಿಯೇ ಭೂದಾನ ಮಹಿಳಾ ತಂಡ ಇದಾಗಿದ್ದರಿಂದ ಇವರನ್ನು ವಿಶೇಷವಾಗಿ ಆಹ್ವಾನಿಸಿ ಮಾನ್ಯತೆ ನೀಡಲಾಗಿತ್ತು.

ಭೂಮಾಲಿಕರಿಂದ ಭೂಮಿಯನ್ನು ಪಡೆದುಕೊಳ್ಳುವ ಈ ಮೇಲಿನ ಪ್ರಕ್ರಿಯೆ ಒಂದೆಡೆಯಾದರೆ ಭೂಮಿಯನ್ನು ತಮ್ಮಲ್ಲೇ ಬಳಸಿಕೊಳ್ಳುವ ಭೂಮಾಲಿಕರ ಚಟುವಟಿಕೆಗಳು ಇನ್ನೊಂದೆಡೆ. ಆಗ ಧಾರವಾಡ ಜಿಲ್ಲೆಯ ಭೂಮಾಲಿಕರ ಸಂಘಟನೆಯೊಂದು ಮಾಡಿಕೊಂಡು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಪ್ರಯತ್ನಿಸಿದರು. ಭೂಮಾಲಿಕರ ಸಂಘದ ಚಟುವಟಿಕೆಗಳನ್ನು ಆ ಸಂದರ್ಭದಲ್ಲಿ ಪ್ರಚಲಿತದಲ್ಲಿದ್ದ ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆ ಸಾಕಷ್ಟು ವರದಿ ಮಾಡಿದೆ. ಅದರ ಪ್ರಕಾರ ಮುಂಬೈ ಕರ್ನಾಟಕಕ್ಕೆ ಸೇರಿದ ಬೆಳಗಾಂ, ಬಿಜಾಪುರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಭೂಮಾಲಿಕರು ಸೇರಿಕೊಂಡು ‘ಮುಂಬೈ ಕರ್ನಾಟಕ ಹೊಲದೊಡೆಯರ ಸಂಘ’ ಸ್ಥಾಪಿಸಿಕೊಂಡಿದ್ದರು. ಏಕೀಕರಣದ ನಂತರದಲ್ಲಿ ಭೂಸುಧಾರಣೆ ಸಂಬಂಧವಾಗಿ ರೂಪುಗೊಂಡಿದ್ದ ಜತ್ತಿ ಸಮಿತಿಗೆ ಮನವಿ ಪತ್ರ ಸಲ್ಲಿಸಿ ತಮ್ಮ ಹಿತಾಸಕ್ತಿ ಕಾಯಲು ವಿನಂತಿಸಿಕೊಂಡಿದ್ದರು. ಅಲ್ಲದೆ ಪ್ರತಿ ತಿಂಗಳು ಹುಬ್ಬಳ್ಳಿಯ ನಗರಸಭೆಯ ಅಟ್ಟದ ಮೇಲೆ ಭೂಮಾಲಿಕರು ಸಭೆ ಸೇರುತ್ತಿದ್ದರು. (ವರದಿ : ೩-೫-೧೯೫೭, ಸಂಯುಕ್ತ ಕರ್ನಾಟಕ) ಅಲ್ಲದೆ ಒಮ್ಮೆ ನಡೆದ ವಾರ್ಷಿಕ ಸಭೆಯು ರಾ.ಬಿ.ಬಿ.ಎಲ್. ಪಾಟೀಲರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಈ ಸಭೆಯಲ್ಲಿ ಚರ್ಚಿತವಾದ ಮುಖ್ಯ ಅಂಶಗಳೆಂದರೆ, ಕೆಲವೇ ದಿನಗಳಲ್ಲಿ ಮೈಸೂರು ರಾಜ್ಯದ ಭೂ ಒಡೆಯರ ಪರಿಷತ್ತು ಸೇರಿಸುವುದು; ಮುಂದೆ ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಭೂ ಒಡೆಯರ ಸಂಘಟನೆ ಮಾಡುವುದು; ಆ ಮೂಲಕ ಪ್ರದಾನಿ ನೆಹರೂ ಹಾಗೂ ಯೋಜನಾ ಆಯೋಗದ ಸದಸ್ಯರೆಲ್ಲರಿಗೂ ಈಗಿನ ಭೂ ಸುಧಾರಣಾ ಕಾಯ್ದೆಗಳಿಂದ ಆಗುವ ಅನಿಷ್ಟ ಪರಿಣಾಮಗಳನ್ನು ಕುರಿತು ಮನವರಿಕೆ ಮಾಡುವುದು ಮುಂತಾದ ವಿಷಯಗಳ ಬಗೆಗೆ ಚರ್ಚಿಸುವುದು. (ವರದಿ : ೨೬-೫-೧೯೫೮, ಸಂಯುಕ್ತ ಕರ್ನಾಟಕ) ಈ ಭೂಮಾಲಿಕ ಸಂಘದ ಸಭೆಗಳಿಗೆ ಹೆಬ್ಬಳ್ಳಿ ಜಾಗೀರದಾರ ಮನೆತನ ಹಾಗೂ ಹೆಬ್ಬಳ್ಳಿ ಗೌಡರ ಮನೆತನವಾದ ಬಾಡಿಗೇರ ಮನೆತನದ ಸದಸ್ಯರು ಹೋಗಿ ತಮ್ಮ ಸ್ಥಿತಿಯ ಕುರಿತು ವಿವರಿಸುತ್ತಿದ್ದರು.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ೧೯೫೮ರ ಸುಮಾರಿಗೆ ಹೆಬ್ಬಳ್ಳಿಯ ಜಾಗೀರದಾರ ಭೂಮಿಗೆ ಸಂಬಂಧಿಸಿದಂತೆ ಸರ್ಕಾರದಲ್ಲಿ ವಶವಾದ ಭೂಮಿ, ರೈತರಿಗೆ ಹಂಚಿಕೆಯಾದ ಭೂಮಿ ವಿವಾದವಾಗಿ ಉಳಿದ ಭೂಮಿಯ ವಿವರ ಇಂತಿದೆ.

೧. ಹೆಬ್ಬಳ್ಳಿ ಜಾಗೀರದಾರ ಒಟ್ಟು ಭೂಮಿ ೧೨,೬೫೫.೩೭(ಎಕರೆಗಳಲ್ಲಿ)

೨. ೧೯೫೨ರಲ್ಲಿ ಸರಕಾರ ವಶಕ್ಕೆ ತೆಗೆದುಕೊಂಡ ಭೂಮಿ – ೧೨,೬೫೫.೩೭

೩. ಜಾಗೀರದಾರರಿಗೆ ಮರು ಹಂಚಿಕೆಯಾದ ಭೂಮಿ – ೩,೦೨೦.೩೭

೪. ಗೇಣಿದಾರರಿಗೆ ಮಂಜೂರಾದ ಭೂಮಿ – ೯,೫೫೫.೨೬

೫. ಯಾರಿಗೂ ಮಂಜೂರಾಗದೆ ಉಳಿದ ಭೂಮಿ – ೮೦.೧೪

ಈ ಮಾಹಿತಿಗಳು ಧಾರವಾಡ ತಾಲೂಕು ಕಚೇರಿಯ ಕಡತಗಳಲ್ಲಿ ನಮೂದಾಗಿದ್ದು, ಈ ಭೂಮಿಯ ಕುರಿತು ೧೯೫೮ರ ಸಂದರ್ಭದಲ್ಲಿ ಯಾವ ರೈತರಿಗೂ ಅಧಿಕೃತ ದಾಖಲು ಪತ್ರಗಳನ್ನು ಸರ್ಕಾರ ವಿತರಿಸಲಿಲ್ಲ. ಈ ದಾಖಲೆಗಳನ್ನು ರೈತರು ಪಡೆಯಲಿಕ್ಕಾಗಿ ಹಾಗೂ ಹೆಚ್ಚುವರಿ ಭೂಮಿಯ ಹಂಚಿಕೆಗಾಗಿ ಸರ್ಕಾರದೊಡನೆ ರೈತರು ಹೋರಾಟಕ್ಕಿಳಿದರು. ಈ ಹೋರಾಟದ ನೇತೃತ್ವ ವಹಿಸಿದವರು ಧಾರವಾಡ ಭಾಗದ ಸಮಾಜವಾದಿಗಳು. ಸಮಾಜವಾದಿಗಳು ಪ್ರವೇಶಿಸಿದ್ದರಿಂದ ಹೆಬ್ಬಳ್ಳಿಯ ಭೂಮಿಗೆ ರೈತರು ಅಧಿಕೃತ ವಾರಸುದಾರರಾದರು. ಅಲ್ಲದೆ ಸ್ಥಳೀಯ ರೈತ ಕೂಲಿಕಾರ್ಮಿಕರಿಗೆ ಭೂಮಿ ದೊರಕುವಂತಾಯಿತು. ಇದೊಂದು ಸಮಾಜವಾದಿಗಳ ಸದ್ದಿಲ್ಲದ ಹೋರಾಟವಾಗಿತ್ತು.