‘ಉಳುವವನೇ ನೆಲದೊಡೆಯ’, ಇದು ಕರ್ನಾಟಕದ ರೈತರ ಹೋರಾಟಗಳ ಪ್ರಸಿದ್ಧ ಹೇಳಿಕೆ. ಇಲ್ಲಿನ ಬಹಳಷ್ಟು ರೈತ ಹೋರಾಟಗಳು ಈ ಹೇಳಿಕೆಯನ್ನು ತಮ್ಮ ಹೋರಾಟದ ಪ್ರಮುಖ ಭಾಗವನ್ನಾಗಿಸಿಕೊಂಡು ಬೆಳೆದಿವೆ. ಭೂಸುಧಾರಣಾ ಕಾಯ್ದೆಗಳು, ಆಯೋಗಗಳೂ ಈ ಹೇಳಿಕೆಯ ಅರ್ಥಕ್ಕೆ ಹೆಚ್ಚಿನ ಒತ್ತುಕೊಟ್ಟು ಕಾನೂನುಗಳನ್ನು ತರಲು ಪ್ರಯತ್ನಿಸಿವೆ. ಆದರೆ ಕರ್ನಾಟಕದ ಈ ಸಂಗತಿಗಳು ನಿಜವಾಗಿಯೂ ಉಳುವವನಿಗೆಯೇ ಭೂಮಿಯ ಒಡೆತನವನ್ನು ನೀಡಿವೆಯೇ? ಎನ್ನುವುದು ಪ್ರಶ್ನೆ.

ಅದರಲ್ಲೂ (೧೯೫೯ರ ದಶಕದಲ್ಲಿ ಧಾರವಾಡ ಜಿಲ್ಲೆಯಲ್ಲಿ ಭೂಮಾಲಿಕರು ತಮ್ಮ ಹಿಡಿತದಲ್ಲಿ ಅತಿ ಹೆಚ್ಚಿನ ಭೂಮಿಯನ್ನು ಹೊಂದಿದ್ದರು. ೧೯೫೫-೫೬ರಲ್ಲಿ ಎರಡು ಹೆಕ್ಟೇರ್‌ಗಿಂತ (೧ ಹೆಕ್ಟೇರ್ = ೨.೪೭ ಎಕರೆ) ಕಡಿಮೆ ಇದ್ದು ಭೂ ಹಿಡುವಳಿಗಳ ಸಂಖ್ಯೆ = ೧,೧೩,೬೦೦, ಅವುಗಳ ವಿಸ್ತೀರ್ಣ ೧,೧೨,೧೮,೫೦೦ ಹೆಕ್ಟೇರ್ (೨,೭೭,೦೯,೬೯೫ ಎಕರೆ), ೨ ರಿಂದ ೪ ಹೆಕ್ಟೇರ್(೫ ರಿಂದ ೧೦ ಎಕರೆ) ಭೂ ಹಿಡುವಳಿಗಳ ಸಂಖ್ಯೆ ೬೦,೬೦೦, ಅವುಗಳ ವಿಸ್ತೀರ್ಣ ೧,೭೩,೩೪೦೦ ಹೆಕ್ಟೇರ್ (೪,೨೮,೧೪,೯೮೦ ಎಕರೆ), ೪ ರಿಂದ ೬ ಹೆಕ್ಟೇರ್ (೧೦ ರಿಂದ ೧೫ ಎಕರೆ) ಇದ್ದ ಭೂ ಹಿಡುವಳಿಗಳ ಸಂಖ್ಯೆ ೨೯,೮೦೦, ಹೆಕ್ಟೇರ್‌ಗಳಲ್ಲಿ ಅವುಗಳ ವಿಸ್ತೀರ್ಣ ೧,೪೯,೦೪,೦೦೦ (೩,೬೮,೧೨,೮೮೦ ಎಕರೆ) ೬ ರಿಂದ ೧೨ ಹೆಕ್ಟೇರ್ (೧೫ ರಿಂದ ೨೫ ಎಕರೆ) ಇದ್ದ ಭೂ ಹಿಡುವಳಿಗಳ ಸಂಖ್ಯೆ ೩೪,೩೦೦ ಅವುಗಳ ೨,೯೦,೩೮,೫೦೦ ಹೆಕ್ಟೇರ್ (೭,೧೭,೨೫,೦೯೫ ಎಕರೆ) ೧೨ ರಿಂದ ೨೪ ಹೆಕ್ಟೇರ್ (೩೦ ರಿಂದ ೬೦ ಎಕರೆ) ಇದ್ದ ಭೂಹಿಡುವಳಿಗಳ ಸಂಖ್ಯೆ ೧೨,೯೦೦. ಅವುಗಳ ವಿಸ್ತೀರ್ಣ ೨,೧೧,೮೧,೫೦೦ ಹೆಕ್ಟೇರ್. (೫೨೩,೧೮,೩೦೫ ಎಕರೆ) ಮತ್ತು ೨೦ ರಿಂದ ೪೦ ಹೆಕ್ಟೇರ್(೫೦ ರಿಂದ ೧೦೦ ಎಕರೆ) ವರೆಗೆ ಭೂ ಹಿಡುವರಿಗಳ ಸಂಖ್ಯೆ ೨,೬೦೦. ಅವುಗಳ ವಿಸ್ತೀರ್ಣ ೮೦,೫೯,೫೦೦ ಹೆಕ್ಟೇರ್ (೧,೯೯,೦೬,೯೬೫ ಎಕರೆ) ಆಗಿತ್ತು. ಕೇವಲ ೯೦೦ ಜನರು ೪೦ ರಿಂದ ೮೦ ಹೆಕ್ಟೇರ್ (೧೦೦ ರಿಂದ ೨೦೦ ಎಕರೆ) ಭೂ ಹಿಡುವಳಿ ಹೊಂದಿದ್ದು ಅದರ ವಿಸ್ತೀರ್ಣ ೪೯,೮೧೫ ಹೆಕ್ಟೇರ್ (೧,೨೩,೦೪೩ ಎಕರೆ) ೮೦ ಹೆಕ್ಟೇರ್ (೨೦೦ ಎಕರೆ)ಕ್ಕಿಂತ ಹೆಚ್ಚಿಗೆ ವಿಸ್ತೀರ್ಣದ ಭೂ ಹಿಡುವಳಿಗಳನ್ನು ೨೫೦ ಜನರು ಹೊಂದಿದ್ದು, ಅವುಗಳ ವಿಸ್ತೀರ್ಣ ೩೮,೦೭೦ ಹೆಕ್ಟೇರ್ (೯೪,೦೩೨ ಎಕರೆ) ಆಗಿತ್ತು. (ಧಾರವಾಡ ಜಿಲ್ಲಾ ಗೆಜೆಟಿಯರ್ ೧೯೯೫, ಪು.೨೬೩).

ಹೆಬ್ಬಳ್ಳಿ ಸಂಬಂಧಿಸಿದಂತೆ ಇರುವ ಒಟ್ಟೂ ಜಾಗೀರದಾರ್ ಭೂಮಿಸುಮಾರು ೧೩ ಸಾವಿರ ಎಕರೆ. ಇದರಲ್ಲಿ ೩೦೦ ರಿಂದ ೩೫೦ ರೈತರು ಈ ಬಗ್ಗೆ ಸರ್ಕಾರಿ ದಾಖಲೆಯಲ್ಲಿ ಸ್ಪಷ್ಟತೆ ಇಲ್ಲ. ಹಾಗೂ ನೀಲಗಂಗಯ್ಯ ಪೂಜಾರ್ ಅವರೊಂದಿಗೆ ಮಾತನಾಡುವಾಗಲೂ ಅವರು ಭೂಮಿ ಹಂಚಿಕೊಂಡ ರೈತರ ನಿರ್ದಿಷ್ಟ ಸಂಖ್ಯೆ ಹೇಳಲಿಲ್ಲ. ೯.೫೪೧ ಎಕರೆ ಜಮೀನನ್ನು ತಮ್ಮಲ್ಲಿ ಹಂಚಿಕೊಂಡರು. ಪ್ರತಿ ರೈತರು ಗರಿಷ್ಟ ಪ್ರಮಾಣದಲ್ಲಿ ೪೮ ಎಕರೆ ಜಮೀನನ್ನು ಹೊಂದಿ (ತಮ್ಮ ಸ್ವಂತ ಜಮೀನು ಹಾಗೂ ಜಾಗೀರುಭೂಮಿ ಸೇರಿ), ಹೆಚ್ಚುವರಿಯಾದ ೨,೫೦೦ ಎಕರೆ ಜಮೀನು ಉಳಿಯಿತು. ಈ ಭೂಮಿ ಪಡೆಯಲಿಕ್ಕಾಗಿ ಗ್ರಾಮದಲ್ಲಿ ೩೦೦ ಕ್ಕಿಂತ ಅಧಿಕ ರೈತ ಕೂಲಿಕಾರ್ಮಿಕರಿದ್ದರು. ಈ ರೈತ ಕೂಲಿಕಾರರಿಗೆ ಬೇರ್ಯಾವ ಸ್ವಂತ ಭೂಮಿ ಇಲ್ಲದೆ ಗ್ರಾಮದ ವಿವಿಧ ರೈತರಲ್ಲಿ ಭೂಮಿಗಳಲ್ಲಿ ಕೂಲಿ ಕೆಲಸ ಮಾಡಿ ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳಬೇಕಿತ್ತು. ೪೮ ಎಕರೆ ಗರಿಷ್ಟ ಭೂಮಿ ಹೊಂದಿದ್ದ ಗ್ರಾಮದ ಅದೆಷ್ಟೋ ಕುಟುಂಬಗಳು ಇಂತಹ ರೈತ ಕೂಲಿ ಕಾರ್ಮಿಕರಿಗೆ ದಿನಗೂಲಿಯೋ ವಾರದ ಕೂಲಿಯೋ ಕೊಟ್ಟು ತಮ್ಮ ಭೂಮಿಯನ್ನು ಸಾಗುವಳಿ ಮಾಡಿಸುತ್ತಿದ್ದರು. ಅಂದರೆ ಮಧ್ಯಮ ವರ್ಗದ ಈ ರೈತ ಕುಟುಂಬಗಳು ತಮ್ಮ ವಶದಲ್ಲಿದ್ದ ೪೮ ಎಕರೆಯಲ್ಲಿ ತಮ್ಮ ಕೈಲಾದ ಹಲವು ಎಕರೆ ಪ್ರದೇಶವನ್ನು ಸ್ವಂತ ಸಾಗುವಳಿ ಮಾಡಿದರೆ, ಉಳಿದ ಭೂಮಿಯನ್ನು ರೈತ ಕೂಲಿ ಕಾರ್ಮಿಕರಿಂದ ಸಾಗುವಳಿ ಮಾಡಿಸುತ್ತಿದ್ದರು. ಅಂದರೆ ಹೆಬ್ಬಳ್ಳಿಯ ಹೆಚ್ಚುಪಾಲು ಭೂಮಿಯನ್ನು ಉಳುತ್ತಿದ್ದುದು ಇಂತಹ ಕೆಳವರ್ಗದ ರೈತ ಕೂಲಿಕಾರ್ಮಿಕರೇ ಹೊರತು ಮಧ್ಯಮ ರೈತ ಕುಟುಂಬಗಳಲ್ಲ. ಆದರೆ ಜಾಗೀರದಾರರ ಬಹುಪಾಲು ಭೂಮಿ ಹೆಬ್ಬಳ್ಳಿಯ ರೈತ ಕೂಲಿಕಾರ್ಮಿಕರಿಗೆ ಹಂಚಿಕೆಯಾಗುವ ಬದಲು ಗ್ರಾಮದ ಮಧ್ಯಮ ವರ್ಗದ ರೈತ ಕುಟುಂಬಗಳಲ್ಲಿ ಹಂಚಿಕೆಯಾಗಿತ್ತು. ‘ಉಳೂವವನೇ ನೆಲದೊಡೆಯ’ ಎನ್ನುವ ಸ್ಲೊಗನ್ ಹಾಗೂ ಭೂ ಸುಧಾರಣಾ ಕಾಯ್ದೆಗಳು ಕೈಗೊಂಡಿದ್ದ ಕೃಷಿ ಸಮಾಜದ ಬದಲಾವಣೆಗಳು ತಮ್ಮ ಅರ್ಥವನ್ನು ಕಳೆದುಕೊಂಡಿದ್ದವು.

ಈ ರೀತಿಯ ಅನರ್ಥತೆ ಬರಿ ಹೆಬ್ಬಳ್ಳಿಯ ಪ್ರಸಂಗದಲ್ಲಿ ಮಾತ್ರವಲ್ಲ ಕರ್ನಾಟಕದ ಹಲವು ಭಾಗಗಳಲ್ಲಿ ನಡೆದಿದೆ. ೧೯೬೧ರಲ್ಲಿ ಧಾರವಾಡ ಜಿಲ್ಲೆಯಲ್ಲಿದ್ದ ಕೃಷಿ ಕೂಲಿಕಾರ್ಮಿಕರ ಸಂಖ್ಯೆ ೨,೩೦,೨೮೫ ಆಗಿತ್ತು. ೧೯೭೧ರಲ್ಲಿ ಈ ಪ್ರಮಾಣ ೨೦,೧೮೭ರಷ್ಟಾಗಿದೆ. (ಅದೇ, ಪು.೨೬೦) ಈ ೧೦ ವರ್ಷಗಳಲ್ಲಿ ಜನಸಂಖ್ಯೆ ಹೆಚ್ಚಾಗಿದೆ ಎನ್ನಬಹುದಾದರೂ ಕೃಷಿ ಕೂಲಿಕಾರ್ಮಿಕರಲ್ಲಿ ಅದೆಷ್ಟು ಮಂದಿ ಸ್ವಂತ ಸಾಗುವಳಿದಾರರಾಗಿದ್ದಾರೆ ಎನ್ನುವುದು ಪ್ರಶ್ನೆ? ಏಕೆಂದರೆ ಇದೇ ಅವಧಿಯಲ್ಲಿ ಸ್ವಂತ ಸಾಗುವಳಿ ಮಾಡಿಕೊಳ್ಳುವವರ ಪ್ರಮಾಣ ಹೆಚ್ಚಾಗುವ ಬದಲು ಕುಗ್ಗಿದೆ. ೧೯೬೧ರಲ್ಲಿ ಸಾಗುವಳಿದಾರರ ಸಂಖ್ಯೆ ೩,೬೯,೧೭೪ ಇದ್ದರೆ ೧೯೭೧ರಲ್ಲಿ ೨,೪೯,೭೫೬ ಜನ ಸಾಗುವಳಿದಾರರಿದ್ದಾರೆ.(ಅದೇ, ಪು.೨೬೦)

ಈ ಅಂಕಿ-ಅಂಶಗಳು ಸೂಚಿಸುತ್ತಿರುವುದೇನೆಂದರೆ ಈ ಅವಧಿಯಲ್ಲಿ ಉಂಟಾದ ಭೂ ಸುಧಾರಣಾ ಕಾಯ್ದೆಗಳು ಭೂ ಹಂಚಿಕೆಯ ಮೂಲಕ ಸಾಗುವಳಿದಾರರನ್ನು ಹೆಚ್ಚಿಸುವುದಕ್ಕಿಂತ ಅವರಿಗೆ ಮಾರಕವಾಗಿ ಪರಿಣಮಿಸಿ ಸ್ವಂತ ಸಾಗುವಳಿದಾರರನ್ನೂ ಕೂಲಿಕಾರ್ಮಿಕರನ್ನಾಗಿಸಿವೆ. ಹಾಗಾದರೆ ಕರ್ನಾಟಕದ ಆರಂಭದ ಭೂಸುಧಾರಣಾ ಕಾಯ್ದೆಗಳು ಭೂ ಹಂಚಿಕೆಗಿಂತ ಭುಮಿಯ ಕೇಂದ್ರೀಕರಣದ ಬಗೆಗೆ ಹೆಚ್ಚಿನ ಒಲವು ಹೊಂದಿದ್ದವು ಎನಿಸುತ್ತದೆ. ಅದರಲ್ಲೂ ಬಿ.ಡಿ.ಜತ್ತಿ ಸಮಿತಿ ವರದಿಯು ಸ್ವಂತ ಸಾಗುವಳಿ ಮಾಡುವುದಾದರೆ ಭೂಮಾಲಿಕರು ತಮ್ಮ ಭುಮಿಯನ್ನು ಉಳುತ್ತಿದ್ದ ಗೇಣಿದಾರರನ್ನು ಒಕ್ಕಲೆಬ್ಬಿಸುವುದಕ್ಕೆ ಅವಕಾಶವನ್ನು ಮಾಡಿಕೊಟ್ಟಿತ್ತು.

೧೯೫೨ರಲ್ಲಿ ಮಹಾರಾಷ್ಟ್ರ ಸರ್ಕಾರ ಹೆಬ್ಬಳ್ಳಿಯ ಭೂಮಿಯನ್ನು ವಶಪಡಿಸಿಕೊಂಡ ನಂತರದಲ್ಲಿ ಈ ಭೂಮಿಯನ್ನು ಅನುಭೋಗಿಸುವುದರಲ್ಲಿ ಹೆಚ್ಚಿನವರು ಮಧ್ಯಮವರ್ಗದವರೇ ಆಗಿದ್ದಾರೆ. ಇವರು ಲಿಂಗಾಯುತರು ಮತ್ತು ಬ್ರಾಹ್ಮಣ ಜಾತಿಗೆ ಸೇರಿದವರು. ರೈತ ಕೂಲಿಕಾರ್ಮಿಕರಲ್ಲಿ ಹೆಚ್ಚಿನವರು ಕೆಳವರ್ಗದ ಹರಿಜನರು, ನೇಕಾರರು, ಪಿಂಜಾರರು, ಚಲುವಾದಿಯವರು ಇದ್ದರು. ಈ ವರ್ಗಗಳು ಅನಕ್ಷರಸ್ಥರು, ವೈಯಕ್ತಕಿಕವಾಗಿ ಪ್ರತಿಭಟಸುವ ಆತ್ಮಸ್ಥೈರ್ಯವನ್ನು ಕಳೆದುಕೊಂಡಿದ್ದವರಾಗಿದ್ದರು. ಇವರಿಗೆ ಸರ್ಕಾರಿ ಕಾಯ್ದೆಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅವಕಾಶ ನೀಡಬೇಕಿತ್ತು. ಆದರೆ ಭೂಮಿಗೆ ಸಂಬಂಧಿಸಿದ ಕರ್ನಾಟಕದ ಅದೆಷ್ಟೋ ಹೋರಾಟಗಳು, ಕಾಯ್ದೆಗಳು ಸಾಮಾಜಿಕವಾಗಿ ಮೇಲ್ವರ್ಗವಾಗಿರುವ ಲಿಂಗಾಯಿತರಿಗೆ, ಒಕ್ಕಲಿಗರಿಗೆ, ಬ್ರಾಹ್ಮಣರಿಗೆ ಆರ್ಥಿಕವಾಗಿ ಬಲಿಷ್ಟವಾಗಲು ಸಹಾಯ ಮಾಡಿದವು. ಈ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷ ೧೯೫೮ನೇ ವರ್ಷದಲ್ಲಿ ಹೆಬ್ಬಳ್ಳಿಯಲ್ಲಿ ಭೂರಹಿತ ರೈತಕೂಲಿ ಕಾರ್ಮಿಕರ ಹೋರಾಟ ಕೈಗೊಳ್ಳಲು ಸಿದ್ಧವಾಯಿತು. ನೀಲಗಂಗಯ್ಯ ಪೂಜಾರ್ ಅವರು ದಲಿತರನ್ನು ಹಾಗೂ ದುಡಿಯುವ ವರ್ಗಗಳನ್ನೇ ಮುಖ್ಯವಾಗಿಸಿಕೊಂಡು ಹೋರಾಟಕ್ಕಿಳಿಯಲು ಸಿದ್ಧರಾದರು. ಅಲ್ಲದೆ ಈ ಹೋರಾಟ ಕೈಗೊಳ್ಳದಿದ್ದರೆ ಹೆಚ್ಚುವರಿಯಾಗಿದ್ದ ಸುಮಾರು ೨೫೦೦ ಎಕರೆ ಭೂಮಿಯೂ ಮಧ್ಯಮ ರೈತ ವರ್ಗದ ಪಾಲಾಗುವ ಅವಕಾಶವಿತ್ತು. ಹೆಚ್ಚುವರಿ ಭೂಮಿಯಲ್ಲಿ ಹೆಬ್ಬಳ್ಳಿಯ ಎಲ್ಲ ರೈತ ಕೂಲಿಕಾರ್ಮಿಕರಿಗೂ ಭೂಮಿ ಹಂಚುವ ಸಾಧ್ಯತೆ ಇರಲಿಲ್ಲ. ಆದರೂ ಸಮಾಜವಾದಿಗಳು ಕೈಗೊಂಡಿದ್ದ ರೈತ ಕೂಲಿಕಾರ್ಮಿಕರ ಸಂಘಟನೆಗೆ ಗ್ರಾಮದ ಎಲ್ಲ ರೈತ ಕೂಲಿಕಾರ್ಮಿಕರು ಬೆಂಬಲ ಸೂಚಿಸಿದರು. ಹೋರಾಟಕ್ಕೆ ಸಿದ್ಧರಾದರು.

ಈ ಸಂಬಂಧವಾಗಿ ದಿನಾಂಕ ೧೮ ಏಪ್ರಿಲ್, ೧೯೫೮ರಂದು ಸಮಾಜವಾದಿ ಮುಖಂಡರಾದ ನೀಲಗಂಗಯ್ಯ ಪೂಜಾರ್ ಮತ್ತು ಗಂಗಾಧರ್ ಪದಕಿಯವರು ಹೆಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆ ನಡೆಸಿದರು. ೫೦೦ಕ್ಕಿಂತ ಹೆಚ್ಚು ಜನ ಭಾಗವಹಿಸಿದ್ದ ಈ ಸಭೆಯಲ್ಲಿ ರೈತ ಕೂಲಿಕಾರ್ಮಿಕರೇ ಹೆಚ್ಚಿದ್ದರು. ಹೋರಾಟವನ್ನು ಕೈಗೊಳ್ಳುವ ರೂಪು-ರೇಷೆಯ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ರೈತ ಕೂಲಿಕಾರ್ಮಿಕರಿಗೆ ಹೆಚ್ಚುವರಿಯಾಗಿ ಉಳಿದಿರುವ ಸುಮಾರು ೨,೫೦೦ ಎಕರೆ ಭೂಮಿಯನ್ನು ಶೀಘ್ರವೇ ಹಂಚಿಕೆ ಮಾಡಿ ಅಧಿಕೃತ ಮಾನ್ಯತಾ ಪತ್ರ (ಪಹಣಿ ಪತ್ರ)ವನ್ನುಸರ್ಕಾರ ನೀಡಬೇಕು, ಈಗಾಗಲೇ ರೈತರು ಉಳುತ್ತಿರುವ ಜಾಗೀರು ಭೂಮಿಗೆ ಮಾನ್ಯತೆ ನೀಡಿ ಅವರಿಗೂ ಸಹಿತ ಪಹಣಿಪತ್ರವನ್ನು ನೀಡಬೇಕೆಂದು ನಿರ್ಣಯಿಸಲಾಯಿತು. (ಮಾಧ್ಯಮ ರೈತ ವರ್ಗ ಹಾಗು ರೈತ ಕೂಲಿಕಾರ್ಮಿಕರ ಮಧ್ಯದ ಅಸಮಾನತೆಯ ಬಗ್ಗೆ ಸ್ಪಷ್ಟತೆಯಿದ್ದ ನೀಲಗಂಗಯ್ಯ ಪೂಜಾರ್ ಅವರು ಶ್ರೀಮಂತ ಜಾಗೀರದಾರರರಿಂದ ಮಧ್ಯಮ ರೈತ ವರ್ಗಕ್ಕಾದರೂ ಭೂಮಿ ಸಿಗುತ್ತದೆ ಎನ್ನುವ ಬಗ್ಗೆ ಒಲವಿದ್ದರು. ಹಾಗಾಗಿ ಸಭೆಯಲ್ಲಿ ಈ ವರ್ಗಗಳು ಉಳುತ್ತಿರುವ ಭೂಮಿಗೆ ಸರ್ಕಾರವು ಅಧಿಕೃತ ಮಾನ್ಯತಾ ಪತ್ರ (ಪಹಣಿಪತ್ರ) ನೀಡಲು ಒತ್ತಾಯಿಸಿ ನಿರ್ಣಯ ಸ್ವೀಕರಿಸಲು ಬಯಸಿದರು. ಈ ನಿರ್ಣಯ ಹೋರಾಟದಲ್ಲಿ ಪಾಲ್ಗೊಂಡವರಿಗೆ ಗ್ರಾಮಸ್ಥರಿಂದ ಹೆಚ್ಚಿನ ಬೆಂಬಲ ನೀಡಿತು.) ಅಂದಿನ ಸಭೆಯಲ್ಲಿಯೇ ದಿನಾಂಕ ೨೦-೪-೧೯೫೮ ರಂದು ಧಾರವಾಡ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿಪತ್ರವನ್ನು ಸಲ್ಲಿಸಲು ತೀರ್ಮಾನಿಸಲಾಯಿತು.

ದಿನಾಂಕ ೨೦-೪-೧೯೫೮ರಂದು ಹೆಬ್ಬಳ್ಳಿಯಿಂದ ಧಾರವಾಡ ಜಿಲ್ಲಾಧಿಕಾರಿಗಳವರ ಕಚೇರಿಯವರೆಗೆ ೩೦೦ಕ್ಕಿಂತ ಹೆಚ್ಚು ಭೂರಹಿತ ಕೂಲಿಕಾರ್ಮಿಕರು ಸಮಾಜವಾದಿ ಮುಖಂಡರ ನೇತೃತ್ವದಲ್ಲಿ ಕಾಲ್ನಡಿಗೆಯಲ್ಲಿ ಮೆರವಣಿಗೆ ಮಾಡಿದರು. ಅಂದಿನ ಧಾರವಾಡ ಜಿಲ್ಲಾಧಿಕಾರಿ ವಿ.ಎಸ್.ಹಿರೇಮಠ ಅವರನ್ನು ಭೇಟಿ ಮಾಡಿದ ಭೂರಹಿತ ರೈತ ಕೂಲಿಕಾರ್ಮಿಕರು, ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು. ಈ ಸಂಬಂಧವಾಗಿ ಮನವಿಪತ್ರ ಸಲ್ಲಿಸಿದರು. ಬೇಡಿಕೆ ಈಡೇರಿಸಲು ೧೫ ದಿನಗಳ ಗಡವು ನೀಡಿದರು. ದಿನಾಂಕ ೧೫-೫-೧೯೫೮ರ ಒಳಗಾಗಿ ಬೇಡಿಕೆ ಈಡೇರದಿದ್ದರೆ ಹೋರಾಟ ಕೈಗೊಳ್ಳುವುದಾಗಿ ಸರ್ಕಾರಕ್ಕೆ ಎಚ್ಚರಿಸಿದರು.

ಈ ಹದಿನೈದು ದಿನಗಳಲ್ಲಿ ಸರ್ಕಾರದ ಯಾವುದೇ ಪೂರಕ ಪ್ರತಿಕ್ರಿಯೆ ವ್ಯಕ್ತವಾಗುವ ಸೂಚನೆ ಕಂಡುಬರಲಿಲ್ಲ. ಸಮಾಜವಾದಿ ಮುಖಂಡರು ಮತ್ತೊಮ್ಮೆ ಗ್ರಾಮದಲ್ಲಿ ರೈತ ಕೂಲಿಕಾರ್ಮಿಕಾರ ಸಭೆ ನಡೆಸಿದರು. ಈ ಸಭೆಯಲ್ಲಿ ಬಡಕೂಲಿ ಕಾರ್ಮಿಕರು ತಮ್ಮ ಜೀವನ ನಿರ್ವಹಣೆಯ ಕಷ್ಟಗಳನ್ನು ಹಂಚಿಕೊಂಡರು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದರಿಂದ ಅವರು ತಮ್ಮ ದಿನದ ಆದಾಯವನ್ನು ಕಳೆದುಕೊಳ್ಳಬೇಕಿತ್ತು. ಪ್ರತಿದಿನ ದುಡಿದರೆ ಮಾತ್ರ ಜೀವನ ನಿರ್ವಹಣೆ ಸಾಗುತ್ತಿದ್ದ ರೈತ ಕೂಲಿಕಾರ್ಮಿಕರು ಹೋರಾಟದಿಂದಾಗಿ ತಮ್ಮ ಕುಟುಂಬದ ನಿರ್ವಹಣೆ ಕಷ್ಟವಾಗುವುದೆಂದು ತಿಳಿಸಿದರು. ಅದರಲ್ಲೂ ಪಿಕೆಟಿಂಗ್ ಮಾಡಿ ಬಮ್ಧನಕ್ಕೊಳಗಾದರೆ ಹಲವು ದಿನಗಳ ಸೆರೆವಾಸ ಸಹಜವಾಗಿತ್ತು. ಈ ಹಿನ್ನೆಲೆಯಲ್ಲಿ ರೈತ ಕೂಲಿಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ಹೋರಾಟ ಕೈಗೊಳ್ಳಲು ಸಭೆಯಲ್ಲಿ ಚರ್ಚಿಸಲಾಯಿತು. ಕೊನೆಗೆ ಪ್ರತಿದಿನ ೧೦ ರಿಂದ ೧೫ ರೈತ ಕೂಲಿಕಾರರು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪಿಕೆಟಿಂಗ್ ಮಾಡುವುದು ಎಂದು ನಿರ್ಧರಿಸಲಾಯಿತು. ಇದರಿಂದ ಬೇಡಿಕೆ ಈಡೇರುವವರೆಗೂ ಹೋರಾಟದ ಬಿಸಿಯನ್ನು ಉಳಿಸಿಕೊಳ್ಳಲು ಸಾದ್ಯವಿತ್ತು. ಅಲ್ಲದೆ ಸಾಮೂಹಿಕವಾಗಿ ಪ್ರತಿಭಟನೆ ಮಾಡಿ ಎಲ್ಲರೂ ಬಂಧನವಾಗುವುದರಿಂದ ಗ್ರಾಮದ ಕೃಷಿ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತಿತ್ತು. ಈ ಹಿನ್ನೆಲೆಯಲ್ಲಿ ರೈತ ಕೂಲಿಕಾರ್ಮಿಕರು ಸರದಿಯ ಪ್ರಕಾರ ಪ್ರತಿಭಟಿಸುವುದು ಸರಿಯಾದ ಕ್ರಮವಾಗಿತ್ತು. ಹೋರಾಟದ ಎಲ್ಲ ಸಂದರ್ಭದಲ್ಲಿಯೂ ನೀಲಗಂಗಯ್ಯ ಪೂಜಾರ್ ಮತ್ತು ಗಂಗಾಧರ ಪದಕಿಯವರು ಹೆಬ್ಬಳ್ಳಿಯಲ್ಲಿಯೇ ಉಳಿದು ರೈತರು ಕೈಗೊಳ್ಳಬೇಕಾದ ಮುಂದಿನ ತೀರ್ಮಾನಗಳ ಬಗ್ಗೆ ಸಲಹೆ ಸೂಚನೆ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಈ ಮುಖಂಡರು ರೈತ ಕೂಲಿಕಾರ್ಮಿಕರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪಿಕೆಟಿಂಗ್ ಮಾಡಿ ಬಂಧನಕ್ಕೊಳಗಾಗುವುದನ್ನು ಇಷ್ಟಪಡಲಿಲ್ಲ.

ದಿನಾಂಕ ೭-೫-೧೯೫೮ ಬುಧವಾರ ಹೋರಾಟದ ಮೊದಲ ದಿನ. ಅಂದು ಹೆಬ್ಬಳ್ಳಿಯಲ್ಲಿ ಹೋರಾಟಗಾರರು ಮೆರವಣಿಗೆ ಮಾಡಿದರು. ‘ಉಳುವವನಿಗೇ ಭೂಮಿ’ ರೈತ ಕೂಲಿಕಾರ್ಮಿಕರ ಹೋರಾಟಕ್ಕೆ ಜಯವಾಗಲಿ ‘ಸಮಾಜವಾದಿ ಪಕ್ಷಕ್ಕೆ ಜಯವಾಗಲಿ’ ಈ ಮೂರು ಘೋಷಣೆಗಳನ್ನು ಕೂಗುತ್ತಾ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ಹೋರ‍ಾಟ ಮುಕ್ತಾಯಗೊಳ್ಳುವವರೆಗೂ ಈ ಮೂರು ಘೋಷಣೆಗಳನ್ನು ಮಾತ್ರ ಕೂಗುತ್ತಿದ್ದರು. (ಮಾಹಿತಿ : ಜಿ.ವಿ.ಪದಕಿ) ಅಂದು ಹೆಬ್ಬಳ್ಳಿಯಲ್ಲಿ ಮೆರವಣಿಗೆ ಮಾಡಿ ಅದರಲ್ಲಿ ಈಗಾಗಲೇ ನಿರ್ಧರಿಸಿದ್ದ ೧೧ ಮಂದಿಯನ್ನು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಲು ಬೀಳ್ಕೊಟ್ಟರು. ಪಾದಯಾತ್ರೆಯಲ್ಲಿಯೇ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದ ಈ ಹೋರಾಟಗಾರರು ಅಲ್ಲಿ ಮೂರು ಘೋಷಣೆಗಳನ್ನು ಕೂಗುತ್ತಾ ಬಂಧನಕ್ಕೊಳಗಾದರು. ಆದರೆ ಹೀಗೆ ಬಂಧನಕ್ಕೊಳಗಾದವರು ಯಾರು ಎಂಬ ಬಗ್ಗೆ ಹೆಚ್ಚಿನ ವಿವರಣೆಗಳು ತಿಳಿದುಬಂದಿಲ್ಲ. ಆದರೆ ಹೋರಾಟದ ಮೊದಲದಿನದ ಬಂಧನ ಹೆಬ್ಬಳ್ಳಿಯಲ್ಲಿ ಸಂಚಲನವನ್ನು ಉಂಟುಮಾಡಿತು. ಪ್ರತಿದಿನ ಸಂಜೆ ನಡೆಯುತ್ತಿದ್ದ ಸಮಾಜವಾದಿ ಮುಖಂಡರ ಸಭೆಗೆ ಅಂದು ಹೆಚ್ಚಿನ ಸಂಖ್ಯೆಯಲ್ಲಿ ರೈತ ಕೂಲಿಕಾರರು ಸೇರಿದರು. ಸಭೆಯಲ್ಲಿ ಸ್ತ್ರೀಯರೂ ಮಕ್ಕಳೂ ಬಂದಿದ್ದರು. ಈ ಬಂಧನ ರೈತರಲ್ಲಿ ದುಗುಡವನ್ನುಂಟು ಮಾಡಿತ್ತು. ಅದರಲ್ಲಿ ಬಂಧಿತ ಕುಟುಂಬಗಳು ಈ ಘಟನೆಯಿಂದ ಆತಂಕಗೊಂಡಿದ್ದವು. ಸಭೆಯಲ್ಲಿ ಅವರಿಗೆ ಧೈರ್ಯ ತುಂಬಲಾಯಿತು. ಬಂಧಿತರನ್ನು ಶೀಘ್ರವೇ ಸರ್ಕಾರ ಬಿಡುಗಡೆ ಮಾಡುತ್ತದೆ ಎಂದು ತಿಳಿಹೇಳಲಾಯಿತು. ಹೋರಾಟ ಮಾಡಿ ಬಿಡುಗಡೆ ಮಾಡಿಸುವುದಾಗಿ ಮೂಲತಃ ವಕೀಲರಾಗಿದ್ದ ನೀಲಗಂಗಯ್ಯ ಪೂಜಾರ್ ಮತ್ತು ಗಂಗಾಧರ್ ಪದಕಿಯವರು ಸ್ಪಷ್ಟವಾಗಿ ತಿಳಿಸಿದರು.

ಹೋರಾಟಕ್ಕೆ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡ ಸ್ಥಳೀಯ ರೈತ ಕೂಲಿಕಾರ್ಮಿಕರೆಂದರೆ ಬಾಬುಸಾಬ ಎಲಿಗಾರ, ಚಂದ್ರಪ್ಪ ಚಲುವಾದಿ, ಲಿಂಬಣ್ಣ ನಾಯ್ಕರ್, ಗುರುಸಿದ್ದಪ್ಪ ಗಡೇಕಾರ, ಮೂಗಯ್ಯ ಪೂಜಾರ ಇನ್ನು ಮುಂತಾದವರು. ಅದರಲ್ಲೂ ಬಾಬುಸಾಬ್ ಎಲಿಗಾರ ಎಂಬ ಪಿಂಜಾರ್ ಜಾತಿಯ ಯುವಕ ಸಮಾಜವಾದಿ ಚಳುವಳಿಯ ಕುರಿತು ಆಸಕ್ತಿ ಹೊಂದಿದ್ದ. ಸ್ಥಳೀಯ ರೈತ ಕೂಲಿಕಾರ್ಮಿಕರು ಈತನ ಮಾತಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಬಾಬುಸಾಬ್ ಎಲಿಗಾರ ಹೆಬ್ಬಳ್ಳಿಯವನೇ ಆಗಿದ್ದರಿಂದ ಸ್ಥಳೀಯರಲ್ಲಿ ಈತನ ಮಾತಿಗೆ ಬೆಲೆ ಇತ್ತು. ನೀಲಗಂಗಯ್ಯ ಪೂಜಾರ ಅವರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದ ಈತ ಅವರ ಅಣತಿಯಂತೆ ರೈತ ಕೂಲಿಕಾರ್ಮಿಕರನ್ನು ಸಂಘಟಿಸುವ ಹಾಗೂ ಹೋರಾಟದ ಸ್ಫೂರ್ತಿಯನ್ನು ತುಂಬುವ ಕೆಲಸ ಮಾಡುತ್ತಿದ್ದ. ಚಂದ್ರಪ್ಪ ಚಲುವಾದಿ ಎನ್ನುವ ಇನ್ನೊಬ್ಬ ಹೋರಾಟಗಾರ ಯಾವಾಗಲೂ ಸಭೆಗಳಲ್ಲಿ ತತ್ವಪದಗಳನ್ನು ಹಾಡುತ್ತಿದ್ದ. ಪಾದಯಾತ್ರೆ ಕೈಗೊಳ್ಳುವ ಸಂದರ್ಭದಲ್ಲಿ ಹೋರಾಟದ ಘೋಷಣೆಗಳು ಬಿಟ್ಟರೆ ಈತನ ಹಾಡುಗಳೇ ಪ್ರಮುಖ ಸ್ಫೂರ್ತಿ. ಶಿಶುನಾಳ ಷರೀಫ, ಕನಕದಾಸ, ಪುರಂದರದಾಸರ ಗೀತೆಗಳನ್ನು ಹಾಗೂ ಜನಪದ ಹಾಡುಗಳನ್ನು ಹಾಡುತ್ತಿದ್ದನು. (ಮಾಹಿತಿ : ನೀಲಗಂಗಯ್ಯ ಪೂಜಾರ)

ದಿನಂಕ ಮೇ ೮ ರಂದು (ಗುರುವಾರ) ಹಾಗೂ ಮೇ ೯ ರಂದು (ಶುಕ್ರವಾರ) ಕ್ರಮವಾಗಿ ೧೧ ಹಾಗೂ ೧೨ ಮಂದಿ ರೈತ ಕೂಲಿಕಾರ್ಮಿಕರು ಹೆಬ್ಬಳ್ಳಿಯಿಂದ ಕಾಲ್ನಡಿಗೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪಿಕೆಟಿಂಗ್ ಮಾಡಿ ಬಂಧನಕ್ಕೊಳಗಾದರು. ಈ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಧಾರವಾಡ ಜಿಲ್ಲಾ ಕಾರ್ಯದರ್ಶಿಯಾದ ಗಂಗಾಧರ್ ಪದಕಿಯವರು ಪತ್ರಿಕಾ ಹೇಳಿಕೆಯೊಂದನ್ನು ನೀಡಿದರು. ಅದರಲ್ಲಿ ‘ಬಿತ್ತುವ ಕಾಲವು ಸಮೀಪಿಸಿರುವ ಈ ಸಂದರ್ಭದಲ್ಲಿ ಹೊಲದ ಕೆಲಸಗಾರರು. ಈ ರೀತಿ ಬಂಧನವಾಗುತ್ತಾ ನಡೆದರೆ ಹೆಬ್ಬಳ್ಳಿ ಗ್ರಾಮದಲ್ಲಿ ಹೊಲ ಸಾಗುವಳಿ ವ್ಯತ್ಯಯ ಬಂದು ಭೂಮಿಯೆಲ್ಲಾ ಪಾಳು ಬೀಳಬಹುದೆಂದು ಜನರು ಹೇಳುತ್ತಿದ್ದಾರೆ. ಸರ್ಕಾರದವರು ಇದಕ್ಕೆ ಅವಕಾಶ ಕೊಡದೆ ಬೇಗನೆ ಮಧ್ಯಸ್ಥಿಕೆ ವಹಿಸಿ ಭೂರಹಿತ ಒಕ್ಕಲಿಗರ ಬೇಡಿಕೆಯನ್ನು ಮನ್ನಿಸಬೇಕೆಂದೂ, ಅಲ್ಲದೆ ನಾಳೆ (ಶನಿವಾರ) ಮತ್ತು ನಾಡಿದ್ದು (ಆದಿತ್ಯವಾರ) ಎರಡು ದಿವಸ ಸತ್ಯಾಗ್ರಹ ಇಲ್ಲವೆಂದೂ, ಸೋಮವಾರದಿಂದ ಮತ್ತೆ ಎಂದಿನಂತೆ ಸತ್ಯಾಗ್ರಹಿಗಳ ತಂಡಗಳು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪಿಕೆಟಿಂಗ್ ಮಾಡುವುದೆಂದೂ ತಿಳಿಸಿದರು. (ವರದಿ : ಸಂಯುಕ್ತ ಕರ್ನಾಟಕ, ೧೦-೫-೧೯೫೮) ಶನಿವಾರ ಮತ್ತು ಆದಿತ್ಯವಾರ (ಮೇ ೧೦ ಮತ್ತು ೧೧)ಜಿಲ್ಲಾಧಿಕಾರಿಗಳ ಕಛೇರಿ ರಜೆ ಇದ್ದ ಕಾರಣವಾಗಿ ಆ ಎರಡು ದಿನಗಳ ಕಾಲ ಪ್ರತಿಭಟನೆಯನ್ನು ಮುಂದೂಡಲಾಗಿದೆ. ಆದರೆ ಹೋರಾಟದ ಬಿಸಿ ಮಾತ್ರ ಕಡಿಮೆಯಾಗಿರಲಿಲ್ಲ. ಮತ್ತೆ ದಿನಾಂಕ ೧೨ ಮತ್ತು ೧೩ ರಂದು ಕ್ರಮವಾಗಿ ೧೦ ಹಾಗೂ ೧೨ ರೈತರು ಬಂಧಿಸಲ್ಪಟ್ಟರು. ಇಷ್ಟು ಹೊತ್ತಿಗಾಗಲೇ ಭೂರಹಿತ ರೈತ ಕೂಲಿಕಾರ್ಮಿಕರ ಹೋರಾಟವನ್ನು ತೀವ್ರಗೊಳಿಸಬೇಕೆಂದು ಸಭೆಗಳಲ್ಲಿ ರೈತರು ಒತ್ತಾಯಿಸಲಾರಂಭಿಸಿದರು. ಈ ಸಂದರ್ಭದಲ್ಲಿಯೇ ಬಾಬುಸಾಬ್ ಎಲಿಗಾರ ಹೋರಾಟವನ್ನು ತೀರ್ವಗೊಳಿಸಲು ಮಾರಡಗಿ, ಗೋವನಕೊಪ್ಪ ಗ್ರಾಮಗಳಲ್ಲಿನ ರೈತಕೂಲಿಕಾರ್ಮಿಕರನ್ನು ಸಂಘಟಿಸುವ ಯತ್ನ ಮಾಡಿದರು. ಈ ಬಗ್ಗೆ ಆ ಗ್ರಾಮಗಳಲ್ಲಿ ಸಭೆಯನ್ನು ನಡೆಸಲಾಯಿತು. ಹೋರಾಟಕ್ಕೆ ಧುಮುಕುವ ಕುರಿತು ಸುತ್ತಲಿನ ಗ್ರಾಮಸ್ಥರು ರೈತ ಕೂಲಿಕಾರ್ಮಿಕರು ನಿರ್ಧರಿಸಿದರು.

ದಿನಾಂಕ ಮೇ ೧೪ ರಂದು ಮತ್ತೆ ಸರದಿಯಂತೆ ಹೆಬ್ಬಳ್ಳಿ ರೈತ ಕೂಲಿಕಾರ್ಮಿಕರು ಪ್ರತಿಭಟನೆಗೆ ಸಜ್ಜಾದರು. ಕಾಲ್ನಡಿಗೆಯಲ್ಲಿ ಹೋದ ೧೨ ಮಂದಿ ಹೋರಾಟಗಾರರು ಪಿಕೆಟಿಂಗ್ ಮಾಡಿ ಬಂಧಿತರಾದರು. ಅದುವರೆಗೂ ೬೮ ಮಂದಿ ರೈತ ಕೂಲಿಕಾರ್ಮಿಕರು ಬಂಧಿತರಾಗಿದ್ದರು. ಇದರಲ್ಲಿ ೩೮ ಮಂದಿ ರೈತರನ್ನು ಬಂಧಿಸಿದ ದಿನವೇ ಸಾಯಂಕಾಲ ಬಿಡುಗಡೆ ಮಾಡಿದ್ದರು. ಉಳಿದ ೩೦ ಮಂದಿ ರೈತ ಕೂಲಿಕಾರರ ಮೇಲೆ ಖಟ್ಲೆ ಹಾಕಲಾಯಿತು. ಅದರಲ್ಲೂ ಈ ೩೦ ಮಂದಿ ಹೋರಾಟಗಾರರ ಮೊದಲ ಮೂರು ದಿನಗಳಲ್ಲೇ ಬಂಧಿತರಾಗಿದ್ದರು. ಇವರ ಮೇಲೆ ಖಟ್ಲೆ ಹಾಕಲು ಕಾರಣವೆಂದರೆ ಪ್ರತಿಭಟನೆಯನ್ನು ಮಾಡುವುದಲ್ಲದೆ, ಜಿಲ್ಲಾಡಳಿತ ಕಾರ್ಯನಿರ್ವಹಿಸಲು ಅಡ್ಡಿ ಉಂಟು ಮಾಡಿದ್ದಾರೆಂದು ಆಪಾದಿಸಲಾಗಿತ್ತು. ಈ ಹೋರಾಟಗಾರರ ಪರವಾಗಿ ನೀಲಗಂಗಯ್ಯ ಪೂಜಾರ್ ಮತ್ತು ಗಂಗಾಧರ್ ಪದಕಿಯವರು ಕೋರ್ಟಿನಲ್ಲಿ ವಾದಮಾಡಲು ಸಿದ್ಧರಾಗಿದ್ದರು. ಈ ಬಗ್ಗೆ ಹೆಬ್ಬಳ್ಳಿ ರೈತರಲ್ಲಿ ಅವರು ಧೈರ್ಯವನ್ನು ತುಂಬಿದರು.

ಹೆಬ್ಬಳ್ಳಿ ರೈತ ಕೂಲಿಕಾರರ ಬಂಧನ ದಿನದಿನಕ್ಕೂ ಹೆಚ್ಚುತ್ತಾ ಹೋಯಿತು. ಹೋರಾಟವನ್ನು ತೀವ್ರಗೊಳಿಸಲು ರೈತರು ನಿರ್ಧರಿಸಿದ್ದರು. ಬೃಹತ್ ಪ್ರತಿಭಟನೆ ಕೈಗೊಳ್ಳುವ ಕುರಿತು ಮತ್ತಷ್ಟು ಒತ್ತಡಗಳನ್ನು ಮುಖಂಡರ ಮೇಲೆ ಹೇರಲಾಯಿತು. ಸರ್ಕಾರ ಪೂರಕ ಪ್ರತಿಕ್ರೆಯೆ ಕೈಗೊಳ್ಳುವ ಸೂಚನೆ ಕಂಡುಬರದಿದ್ದರಿಂದ ಹೋರಾಟವನ್ನು ಹೆಚ್ಚು ದಿನಗಳ ಕಾಲ ಉಳಿಸುವ ಅವಶ್ಯಕತೆ ನೀಲಗಂಗಯ್ಯ ಪೂಜಾರ್ ಅವರಿಗಿತ್ತು. ಹಾಗಾಗಿ ಅವರು ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳುವ ಕುರಿತು ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಎಂದಿನಂತೆ ಸರದಿ ಪ್ರತಿಭಟನೆಗೆ ಒಲವು ತೋರಿದರು.

ಮೇ ೧೫ ರಂದು ಬಾಬುಸಾಬ್ ಎಲಿಗಾರ, ಚಂದ್ರಪ್ಪ ಚಲುವಾದಿ ಒಳಗೊಂಡಂತೆ ೮ ಜನ ರೈತಕೂಲಿಕಾರ್ಮಿಕರು ಬಂಧಿತರಾದರು. ಮೇ ೧೬ ರಂದು ನಡೆದ ಪ್ರತಿಭಟನೆಯಲ್ಲಿ ೧೪ ಹೋರಾಟಗಾರರು ಬಂಧಿತರಾದರು. ಮೇ ೧೬ ರಂದು ನಡೆದ ಪ್ರತಿಭಟನೆಯಲ್ಲಿ ೧೪ ಹೋರಾಟಗಾರರು ಬಂಧಿತರಾದರು. ಇವರಲ್ಲಿ ಮೂವರನ್ನು ಉಳಿದಂತೆ ಎಲ್ಲ ರೈತರನ್ನು ಬಂಧಿತವಾದ ಸಂಜೆಯೇ ಬಿಡುಗಡೆ ಮಾಡಿದರು. ‘ಮೇ ೭ ರಿಂದ ಪ್ರಾರಂಭವಾದ ರೈತ ಕೂಲಿಕಾರ್ಮಿಕರ ಹೋರಾಟದಲ್ಲಿ ಇದುವರೆಗೂ (ಮೇ ೧೬) ಬಂಧಿತರಾದ ಒಟ್ಟು ರೈತ ಕೂಲಿಕಾರ್ಮಿಕರು ೯೦ ಮಂದಿ. ಇದರಲ್ಲಿ ೩೩ ಜನರ ಮೇಲೆ ಖಟ್ಲೆ ಹಾಕಲಾಯಿತು. ಅಲ್ಲದೆ ದಿನಾಂಕ ೧೭ ಮತ್ತು ೧೮ ರಂದು ಸತ್ಯಾಗ್ರಹವು ನಡೆಯುದಿಲ್ಲವೆಂದು ಧಾರವಾಡ ಜಿಲ್ಲಾ ಸಮಾಜವಾದಿ ಪಕ್ಷವು ಪ್ರಕಟಣೆ ಹೊರಡಿಸಿತು (ವರದಿ : ಸಂಯುಕ್ತ ಕರ್ನಾಟಕ ೧೯-೫-೧೯೫೮).

ಇಷ್ಟರಲ್ಲಾಗಲೇ ರಾಜ್ಯ ರಾಜಕೀಯ ಹಲವು ಬದಲಾವಣೆಗಳು ನಡೆದಿದ್ದವು. ೧೯೫೨ರ ಆರಂಭದ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಶ್ರೀ ಎಸ್. ನಿಜಲಿಂಗಪ್ಪನವರು ಇದ್ದರು. ಇವರು ಒಮ್ಮೆ ಧಾರವಾಡಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಹೆಬ್ಬಳ್ಳಿಯಿಂದ ರೈತ ಕೂಲಿಕಾರ್ಮಿಕರನ್ನು ಕರೆದುಕೊಂಡು ಹೋಗಿದ್ದ ನೀಲಗಂಗಯ್ಯ ಪೂಜಾರ್, ನಿಜಲಿಂಗಪ್ಪನವರನ್ನು ಭೇಟಿ ಮಾಡಿದ್ದರು. ಹಾಗೂ ರೈತ ಕುಳಿಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನೂ ಸಲ್ಲಿಸಿದ್ದರು. (ಇದು ಜನವರಿ ೧೯೫೮ರಲ್ಲಿ ನಡೆದಿದೆ. ಸ್ಪಷ್ಟ ದಿನಾಂಕ ತಿಳಿದಿಲ್ಲ. ಮಾಹಿತಿ : ಗಂಗಾಧರ ಪದಕಿ) ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಹೋರಾಟ ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ನೀಡಿದರು. ಆಗ ನೂತನ ಮುಖ್ಯಮಂತ್ರಿಯಾಗಿ ಬಿ.ಡಿ. ಜತ್ತಿ ನೇಮಕಗೊಂಡರು. ಬಿ.ಡಿ. ಜತ್ತಿ ಮುಖ್ಯಮಂತ್ರಿಯಾಗಿ ನೇಮಕಗೊಂಡ ನಂತರದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಚರ್ಚೆ ಮಾಡುವ ಸಂದರ್ಭದಲ್ಲಿ ಹೆಬ್ಬಳ್ಳಿ ರೈತ ಕೂಲಿಕಾರ್ಮಿಕರ ಹೋರಾಟದ ಕುರಿತು ಪ್ರಸ್ತಾಪ ಬಂತು. ಬಿ.ಡಿ. ಜತ್ತಿಯವರು ಕೂಡಲೇ ಹೆಬ್ಬಳ್ಳಿ ರೈತ ಕೂಲಿಕಾರ್ಮಿಕರ ಹೋರಾಟದ ಮಾಹಿತಿ ಸಂಗ್ರಹಿಸಿದರು. ಈಗಾಗಲೇ ನೀಲಗಂಗಯ್ಯ ಪೂಜಾರ್ ಅವರ ಪರಿಚಯವಿದ್ದ ಅವರು ಹೋರಾಟವನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸಲು ಆಲೋಚಿಸಿದರು. ಧಾರವಾಡ ಜಿಲ್ಲಾಧಿಕಾರಿ ವಿ.ಎಸ್. ಹಿರೇಮಠ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ನೀಲಗಂಗಯ್ಯ ಪೂಜಾರ್ ಅವರೊಂದಿಗೆ ಮಾತನಾಡುವ ಬಯಕೆ ವ್ಯಕ್ತಪಡಿಸಿದರು. ಕೂಡಲೇ ಜಿಲ್ಲಾಧಿಕಾರಿಗಳು ನೀಲಗಂಗಯ್ಯ ಪೂಜಾರ್ ಅವರ ಮನೆಗೆ ಇಬ್ಬರು ಪೋಲಿಸ್ ಪೇದೆಗಳನ್ನು ಕಳುಹಿಸಿ ಅವರನ್ನು ಕರೆತರಲು ಸೂಚಿಸಿದರು. ಆದರೆ ಅ ಸಂದರ್ಭದಲ್ಲಿ ನೀಲಗಂಗಯ್ಯ ಪೂಜಾರ್ ಅವರು ಹೆಬ್ಬಳ್ಳಿಗೆ ಹೋಗಿದ್ದರು. ಕೂಡಲೇ ಜಿಲ್ಲಾಧಿಕಾರಿಗಳು ವಾಹನವನ್ನು ಕೊಟ್ಟು ಅವರನ್ನು ಕರೆತರಲು ಹೆಬ್ಬಳ್ಳಿಗೆ ಕಳುಹಿಸಿದರು. ಹೆಬ್ಬಳ್ಳಿಯಲ್ಲಿ ಕೂಲಿಕಾರ್ಮಿಕರೊಂದಿಗೆ ಚರ್ಚಿಸುತ್ತಿದ್ದ ನೀಲಗಂಗಯ್ಯ ಪೂಜಾರ್ ಅವರನ್ನು ಬಂಧಿಸಲು, ಪೋಲಿಸರು ಬಂದಿದ್ದಾರೆ ಎಂದು ತಿಳಿದು ಗ್ರಾಮದ ಸಾವಿರಾರು ಜನ ಸೇರಿದರು. ಆ ಗ್ರಾಮಸ್ಥರು ಪೋಲಿಸರೊಂದಿಗೆ ನೀಲಗಂಗಯ್ಯ ಪೂಜಾರ್ ಹೋಗುವುದನ್ನು ವಿರೋಧಿಸಿದರು. ಕೊನೆಗೆ ಧಾರವಾಡ ಜಿಲ್ಲಾಧಿಕಾರಿಗಳು ಜಿಲ್ಲಾ ವರಿಷ್ಠಾಧಿಕಾರಿಗಳನ್ನು ಹೆಬ್ಬಳ್ಳಿಗೆ ಕಳುಹಿಸಿ ಕೊಟ್ಟರು. ಮತ್ತು ಮುಖ್ಯಮಂತ್ರಿಗಳು ತಮ್ಮೊಂದಿಗೆ ಮಾತನಾಡಬೇಕೆಂದು ಬಯಸಿರುವ ವಿಷಯವನ್ನೂ ತಿಳಿಸಿದರು. ಆಗ ಜಿಲ್ಲಾ ವರಿಷ್ಠಾಧಿಕಾರಿಗಳೊಂದಿಗೆ ನೀಲಗಂಗಯ್ಯ ಪೂಜಾರ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಖ್ಯಮಂತ್ರಿ ಜತ್ತಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ದೂರವಾಣಿಯಲ್ಲಿಯೇ ನೀಲಗಂಗಯ್ಯ ಪೂಜಾರ್ ಅವರು ‘ಜಾಗೀರದಾರ್ ಭೂಮಿಯನ್ನು ೧೯೫೨ರಲ್ಲಿ ಸರ್ಕಾರ (ಮಹಾರಾಷ್ಟ ಸರ್ಕಾರ) ವಶಪಡಿಸಿಕೊಂಡಿದ್ದು, ಈ ಸಂಬಂಧವಾಗಿ ಯಾವುದೇ ರೀತಿಯ ಶಾಸನ ರಚಿಸುವ ಅವಶ್ಯಕತೆ ಇಲ್ಲದೆ, ಆಡಳಿತಾತ್ಮಕ ಪ್ರಯತ್ನಗಳ ಮೂಲಕವೇ ಜಾರಿಗೆ ತರಬಹುದಾದ ಮುಂದಿನ ಕ್ರಮಗಳನ್ನು, ಸೂಚಿಸಿದರು. ಅಲ್ಲದೆ ಹೆಚ್ಚುವರಿ ಭೂಮಿಯನ್ನು ರೈತ ಕೂಲಿಕಾರರಿಗೆ ಹಂಚುವ ಕುರಿತು ಹೇಳಿದರು. ಈಗಾಗಲೇ ಹಂಚಿಕೆಯಾಗಿರುವ ಭೂಮಿಗೆ ಸಂಬಂಧಿಸಿದಂತೆ ಅಧಿಕೃತ ಮಾನ್ಯತಾ ಪತ್ರ (ಪಹಣಿಪತ್ರ) ನೀಡುವ ಕುರಿತು ಬಿ.ಡಿ.ಜತ್ತಿಯವರಲ್ಲಿ ಒತ್ತಾಯಿಸಿದರು. ದೂರವಾಣಿಯಲ್ಲಿ ನಡೆದ ಈ ಸಂಭಾಷಣೆಯಲ್ಲಿಯೇ ಬಿ.ಡಿ.ಜತ್ತಿ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸ್ಪಷ್ಟ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಡಲು ಮನವಿ ಮಾಡಿಕೊಂಡರು. ಹಾಗು ಪ್ರತಿಭಟನೆಯಲ್ಲಿ ಬಂಧಿತರಾಗಿರುವ ರೈತ ಕೂಲಿಕಾರ್ಮಿಕರ ಮೇಲಿನ ಖಟ್ಲೆ ವಾಪಾಸ್ ತೆಗೆದುಕೊಳ್ಳುವ ಬಗ್ಗೆ ಸ್ಪಷ್ಟ ಭರವಸೆ ನೀಡಿದರು. ಅಲ್ಲದೆ ಆಡಳಿತಾತ್ಮಕವಾಗಿ ಈ ಸಮಸ್ಯೆಯನ್ನು ಬಗೆಹರಿಸುವ ಕುರಿತು ಸಲಹೆಯನ್ನೂ ಪಡೆದರು.

ಬಿ.ಡಿ. ಜತ್ತಿಯವರು ನೀಡಿದ ಪೂರಕ ಪ್ರತಿಕ್ರಿಯೆಯಿಂದಾಗಿ ಭೂರಹಿತ ಕೂಲಿಕಾರ್ಮಿಕರ ಹೋರಾಟವನ್ನು ನಿಲ್ಲಿಸುವ ಕುರಿತು ನೀಲಗಂಗಯ್ಯ ಪೂಜಾರ್ ಮತ್ತು ಗಂಗಾಧರ ಪದಕಿ ನಿರ್ಧರಿಸಿದರು. ಈ ಸಂಬಂಧವಾಗಿ ಅಂತಿಮ ನಿರ್ಧಾರ ಕೈಗೊಳ್ಳುವುದಕ್ಕಾಗಿ ಹೆಬ್ಬಳ್ಳಿಯಲ್ಲಿ ರೈತ ಕೂಲಿಕಾರ್ಮಿಕರ ಸಭೆಯನ್ನೂ (೧೮-೫-೧೯೫೮) ಕರೆದರು. ಈ ಸಭೆಗೆ ಜಿಲ್ಲಾಧಿಕಾರಿ ವಿ.ಎಸ್. ಹಿರೇಮಠರು ಆಗಮಿಸಿದರು. ಸಭೆಯಲ್ಲಿ ಸರ್ಕಾರವು ನಿಮ್ಮ ಎಲ್ಲ ಸಮಸ್ಯೆಗಳನ್ನು ಈಡೇರಿಸಲು ಬದ್ಧವಾಗಿದೆ ಎಂದು ಸರ್ಕಾರದ ನಿಲುವನ್ನು ವಿವರಿಸಿದರು. ಅಲ್ಲದೆ ಅಧಿಕೃತವಾಗಿ ಹೋರಾಟ ನಿಲ್ಲಿಸಿದ ಮರುಕ್ಷಣವೇ ಬಂಧಿತರಾದ ೩೩ ರೈತ ಕೂಲಿಕಾರ್ಮಿಕರ ಮೇಲಿನ ಖಟ್ಲೆಗಳನ್ನು ವಾಪಾಸ್ ಪಡೆಯುದಾಗಿಯೂ ಭರವಸೆ ನೀಡಿದರು.ಈ ಹಿನ್ನೆಲೆಯಲ್ಲಿ ಹೋರಾಟವನ್ನು ಪೂರ್ಣವಾಗಿ ನಿಲ್ಲಿಸುವ ಕುರಿತು ಅಂತಿಮ ನಿರ್ಣಯವನ್ನು ಕೈಗೊಳ್ಳಲಾಯಿತು. ಅಂದೇ ಧಾರವಾಡ ಜಿಲ್ಲಾ ಸಮಾಜವಾದಿ ಕಾರ್ಯದರ್ಶಿಯಾಗಿದ್ದ ಗಂಗಾಧರ್ ಪದಕಿಯವರು ಪ್ರಕಟಣೆಯನ್ನು ಬಿಡುಗಡೆ ಮಾಡಿದರು. ಅದರಲ್ಲಿ ‘ಧಾರವಾಡ ಜಿಲ್ಲಾಧಿಕಾರಿಗಳು ಹೆಬ್ಬಳ್ಳಿಗೆ ಬಂದು ಸರ್ಕಾರದ ನಿಲುವನ್ನು ವಿವರಿಸಿದ್ದಾರೆ. ಹಾಗೂ ಈ ಸ್ಪಷ್ಟೀಕರಣದಿಂದ ಸಮಾಧಾನ ಹೊಂದಿದ ಚಳುವಳಿ ಸಂಘಟಕರು ಸತ್ಯಾಗ್ರಹ ನಿಲ್ಲಿಸಲು ನಿರ್ಧರಿಸಿದ್ದಾರೆ. ಸಾಯಂಕಾಲ ಸಭೆ ಸೇರಿ ಸತ್ಯಾಗ್ರಹ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ದಿನಾಂಕ ಮೇಲೆ ೭ ರಂದು ಆರಂಭವಾಗಿ ೧೧ ದಿನಗಳವರೆಗೆ ನಡೆದ ಹೋರಾಟದಲ್ಲಿ ಒಟ್ಟು ೯೧ ಮಂದಿ ಬಂಧಿಸಲ್ಪಟ್ಟರು. ಇವರಲ್ಲಿ ೩೩ ಜನರ ಮೇಲೆ ಮಾತ್ರ ಕಟ್ಲೆ ಹಾಕಲಾಗಿದ್ದು ಉಳಿದವರನ್ನು ಬಿಟ್ಟು ಕೊಡಲಾಗಿದೆ. ಸತ್ಯಾಗ್ರಹ ನಿಲ್ಲಿಸಿದ ಬಗ್ಗೆ ಚಳುವಳಿ ಸಂಘಟಕರು ಅಧಿಕೃತವಾಗಿ ತಿಳಿಸಿದ ನಂತರ ಈ ೩೩ ರೈತ ಕೂಲಿಕಾರರ ಮೇಲಿನ ಖಟ್ಲೆಗಳನ್ನು ಸಹ ಹಿಂತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿಗಳ ಎದುರು ಭರವಸೆ ಇತ್ತರೆಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಸಂಘಟಕರು ಈ ಪ್ರಕಟಣೆಯ ಮೂಲಕವೇ ಪ್ರತಿಭಟನೆ ನಿಲ್ಲಿಸಿರುವುದಾಗಿ ತಿಳಿಸಿದ್ದು, ಇದರಲ್ಲಿ ಸಹಕರಿಸಿದ ಎಲ್ಲ ಕಾರ್ಯಕರ್ತರಿಗೂ ಹಾಗೂ ಇನ್ನಿತರರಿಗೂ ಧನ್ಯವಾದಗಳನ್ನು ಅರ್ಪಿಸಲಾಗಿದೆ ಎಂದು ತಿಳಿಸಿದರು. (ವರದಿ : ೧೯-೫-೧೯೫೮, ಸಂಯುಕ್ತ ಕರ್ನಾಟಕ)

ಇಡೀ ಹೋರಾಟದ ೧೧ ದಿನಗಳಲ್ಲಿ ಹಲವು ರೀತಿಯ ಜನರು ಸಹಾಯ ಹಸ್ತ ಚಾಚಿದರು. ಈಗಾಗಲೇ ಮಾಜಿ ಶಾಸಕರಾಗಿದ್ದ ನೀಲಗಂಗಯ್ಯ ಪೂಜಾರ್ ತಮ್ಮ ವ್ಯಕ್ತಿತ್ವದಿಂದಾಗಿ ಹಲವಾರು ಜನರನ್ನು ಪ್ರಭಾವಿಸಿದ್ದರು. ೧೧ ದಿನಗಳಲ್ಲಿ ಒಮ್ಮೆಯೂ ಪೋಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮೇಲೆ ಅನುಚಿತವಾಗಿ ವರ್ತಿಸಲಿಲ್ಲ. ಅಲ್ಲದೆ ಹೋರಾಟಕ್ಕೆ ತಮ್ಮ ಅಮೂಲ್ಯ ಸಲಹೆ ಸೂಚನೆಗಳ ಮೂಲಕ ಕೊಡುಗೆಯನ್ನು ನೀಡಿದರು. ಪೋಲಿಸ್ ಇಲಾಖೆಯ ಗುಪ್ತದಳ ವಿಭಾಗದ ಮೂಗಿ ಎಂಬ ಅಧಿಕಾರಿಗಳು ಹೋರಾಟವನ್ನು ಪರೋಕ್ಷವಾಗಿ ಬೆಂಬಲಸಿದ್ದರು. ಪ್ರತಿದಿನ ಸರದಿಯ ಪ್ರಕಾರ ೧೦-೧೫ ರೈತ ಕೂಲಿಕಾರರು ಪ್ರತಿಭಟನೆ ಮಾಡುವುದರಿಂದ ಹೋರಾಟದ ತೀವ್ರತೆಯನ್ನು ಹೆಚ್ಚು ದಿನ ಉಳಿಸಿಕೊಳ್ಳಲು ಸಾಧ್ಯವೆಂದು ಆರಂಭದಲ್ಲಿ ಇವರೇ ಹೇಳಿದ್ದರು. ಅಲ್ಲದೆ ಈ ಹೋರಾಟವು ಸದ್ಯಕ್ಕೆ ಸ್ಥಗಿತಗೊಳ್ಳಲಾರದೆಂದೂ ದಿನದಿನಕ್ಕೂ ತೀವ್ರಗೊಳ್ಳುತ್ತಾ ಸರ್ಕಾರಕ್ಕೆ ಮುಜುಗರ ಉಂಟು ಮಾಡಬಲ್ಲದೆಂದೂ ಬಿ.ಡಿ.ಜತ್ತಿಯವರಿಗೆ ಮಾಹಿತಿ ರವಾನಿಸಿದ್ದರು. ಆ ಮೂಲಕ ಬಿ.ಡಿ.ಜತ್ತಿಯವರು ಹೆಬ್ಬಳ್ಳಿ ರೈತ ಕೂಲಿಕಾರರ ಹೋರಾಟವನ್ನು ಮುಕ್ತಾಯಗೊಳಿಸಲು,ಅವರೆಲ್ಲಾ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸಲು ಕಾರಣರಾಗಿದ್ದರು. (ಮಾಹಿತಿ : ನೀಲಗಂಗಯ್ಯ ಪೂಜಾರ್) ಪ್ರತಿದಿನವು ಹಲವು ಪೋಲೀಸ್ ಅಧಿಕಾರಿಗಳು ಹೋರಾಟದ ಕುರಿತು ಆಡಳಿತ ವರ್ಗದ ಧೋರಣೆಯನ್ನು ನೀಲಗಂಗಯ್ಯ ಪೂಜಾರ್ ಅವರಿಗೆ ರವಾನಿಸುತ್ತಿದ್ದರು. ಇದು ಹೋರಾಟವು ಹೆಚ್ಚು ಸಂಘರ್ಷಾತ್ಮಕವಾಗಿಸದೆ ತಮ್ಮ ಗುರಿ ಈಡೇರಿಸಿಕೊಳ್ಳಲು ರೈತ ಕೂಲಿಕಾರರಿಗೆ ಸಹಾಯಕವಾಯಿತು. ಕಾಗೋಡು ಚಳುವಳಿಯ ಸಂದರ್ಭದಲ್ಲಿನ ಅಧಿಕಾರಿಗಳ ಧೋರಣೆ ಹಾಗೂ ಸರ್ಕಾರದ ಪಾತ್ರದೊಂದಿಗೆ ಹೆಬ್ಬಳ್ಳಿಯ ಹೋರಾಟವನ್ನು ಹೋಲಿಸಿದರೆ, ಇಲ್ಲಿನ ಹೋರಾಟಗಾರರು ಹೇಗೆ ಈ ಎರಡನ್ನೂತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಗುರಿ ಈಡೇರಿಸಿಕೊಂಡರು ಎಂಬುದು ಅರಿವಾಗುತ್ತದೆ.

ಈ ಹೋರಾಟಕ್ಕೆ ಸಹಾಯ ಮಾಡಿದ ಮತ್ತೊಬ್ಬ ಮುಖ್ಯ ವ್ಯಕ್ತಿ ಎಂದರೆ ಗುಬ್ಬಿ ರಾಮಣ್ಣ ಎನ್ನುವವರು. ಇವರು ಒಂದು ಚೀಲ ಜೋಳವನ್ನು ಹೋರಾಟಕ್ಕೆ ಕೊಡುಗೆ ಯಾಗಿ ನೀಡಿದರು. ಈ ಜೋಳದ ಚೀಲವನ್ನು ೨೦ ರೂಪಾಯಿಗೆ ಮಾರಾಟ ಮಾಡಿದ ಹೋರಾಟಗಾರರು, ಅದರಲ್ಲಿ ತಮಗೆ ಬೇಕಾದ ಅವಶ್ಯಕ ಖರ್ಚುಗಳನ್ನು ನಿಭಾಯಿಸಿದರು. ಇದಲ್ಲದೆ ನೇಕಾರ ಜಾತಿಯ ಪರಪ್ಪ ನವಲೂರ ಎನ್ನುವವರು ಹೋರಾಟಕ್ಕೆ ೧೦ ರೂ.ಗಳನ್ನು ನೀಡಿದರು. ಒಟ್ಟು ಹೋರಾಟಕ್ಕೆ ಖರ್ಚು ಮಾಡಿದ್ದು ೮೦ ರೂಪಾಯಿಗಳು (ಮಾಹಿತಿ : ನೀಲಗಂಗಯ್ಯ ಪೂಜಾರ್) ಇದರಲ್ಲಿ ಮನವಿ ಪತ್ರಗಳನ್ನು ಬರೆಯಲು ಕಾಗದ-ಪೆನ್ನು ಬಿಟ್ಟರೆ ಮತ್ತೊಂದು ವಿಶೇಷ ಖರ್ಚು ಇರಲಿಲ್ಲ. ಗೋಡೆ ಬರಹಗಳಾಗಲಿ, ಯಾವುದೇ ಕರಪತ್ರಗಳನ್ನಾಗಲಿ ಈ ಹೋರಾಟದ ಸಂದರ್ಭದಲ್ಲಿ ಬಳಸಿಕೊಂಡಿಲ್ಲ. ೮೦ ರೂಪಾಯಿಗಳಲ್ಲಿ ಉಳಿದ ಹಣವನ್ನು ಹೋರಾಟ ಮುಗಿದ ನಂತರ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಖರ್ಚು ಮಾಡಲಾಯಿತು.

ಆಗಿನ ಸಂದರ್ಭದಲ್ಲಿಯಾದರೂ ಹೋರಾಟಗಾರರ ಮುಖಂಡರಾಗಿದ್ದ ಗಂಗಾಧರ್ ಪದಕಿ ಮತ್ತು ನೀಲಗಂಗಯ್ಯ ಪೂಜಾರ್ ಅವರ ದಿನಚರಿ ಅತ್ಯಂತ ಸರಳ ಹಾಗೂ ಯಾವುದೇ ಖರ್ಚಿಲ್ಲದ್ದಾಗಿತ್ತು. ಹೆಬ್ಬಳ್ಳಿಗೆ ಹೊಗಬೇಕಾದರೆ ಸೈಕಲ್ ಇಲ್ಲವೆ ಯವುದಾದರೂ ಎತ್ತಿನ ಬಂಡಿಗಳಲ್ಲಿ ಅವರು ಹೊರಡುತ್ತಿದ್ದರು. ಬರುವಾಗಲೂ ಅಷ್ಟೆ ಯಾರಾದರೂ ಕೃಷಿಕರು ಬಂಡಿಗಳಲ್ಲಿ ಧಾರವಾಡ ತಲುಪಿಸುತ್ತಿದ್ದರು. ಕೆಲವೊಮ್ಮೆ ಕಾಲ್ನಡಿಗೆ ಪ್ರಯಾಣವನ್ನೂ ಮಾಡುದ್ದುಂಟು. (ಮಾಹಿತಿ : ಗಂಗಾಧರ್ ಪದಕಿ) ಪ್ರತಿದಿನ ಹೆಬ್ಬಳ್ಳಿಗೆ ಬಂದಾಕ್ಷಣ ಆ ದಿನ ಸರದಿಯಲ್ಲಿ ಪ್ರತಿಭಟನೆ ಮಾಡುವ ಹೋರಾಟಗಾರರಿಗೆ ಸಲಹೆಗಳನ್ನು ನೀಡುತ್ತಿದ್ದರು. ಸಂಜೆಯ ಸಭೆಯಲ್ಲಿ ಆ ದಿನದ ಕಾರ್ಯಕ್ರಮಗಳ ಪುನರಾವಲೋಕನ ಹಾಗೂ ಮರುದಿನ ಕೈಗೊಳ್ಳಬೇಕಾದ ಹೋರಾಟದ ಬಗ್ಗೆ ಚರ್ಚೆ ಮಾಡುತ್ತಿದ್ದರು. ಆಗ ಹೆಬ್ಬಳ್ಳಿಯಲ್ಲಿಯೇ ಊಟ ಮಾಡುವ ಪ್ರಸಂಗ ಬರುತ್ತಿತ್ತು. ಹಾಗೆ ಊಟ ಮಾಡಬೇಕಾದಲ್ಲಿ ಹೋರಾಟದ ಕೆಲವು ಸದಸ್ಯರು ಗ್ರಾಮದಲ್ಲಿ ತಿರುಗಿ ರೊಟ್ಟಿ ಭಿಕ್ಷಾ ಮಾಡಿಕೊಂಡು ತರುತ್ತಿದ್ದರು. ಹಾಗೆ ತಂದ ರೊಟ್ಟಿಗೆ ಹೆಚ್ಚೆಂದರೆ ಮೆಣಸಿನ ಖಾರ ಹಾಗೂ ಎಣ್ಣೆಯನ್ನು ಹಾಕಿಕೊಂಡು ತಿನ್ನುತ್ತಿದ್ದರು.

ಒಂದು ಕ್ಷೇತ್ರದ ಶಾಸಕರಾಗಿದ್ದ (ರೋಣಕ್ಷೇತ್ರ) ನೀಲಗಂಗಯ್ಯ ಪೂಜಾರ್ ಹಾಗೂ ಪ್ರಸಿದ್ಧ ವಕೀಲರಾಗಿದ್ದ ಮತ್ತು ಧಾರವಾಡ ಜಿಲ್ಲೆಯ ಸಮಾಜವಾದಿ ಪಕ್ಷದ ಕಾರ್ಯದರ್ಶಿಯಾಗಿದ್ದ ಗಂಗಾಧರ್ ಪದಕಿಯವರು ಇಷ್ಟೊಂದು ಸರಳವಾಗಿ ಬದುಕುತ್ತಿದ್ದುದು, ಅವರು ನಂಬಿದ ಜನಪರ ಕಾಳಜಿಗೆ, ಪಕ್ಷದ ಸಿದ್ಧಾಂತಗಳಿಗೆ ಅವರಿಗಿದ್ದ ಬದ್ಧತೆಗೆ ಸಾಕ್ಷಿಯಾಗಿದೆ. ಇಂದಿನ ಮಾಜಿ ಶಾಸಕರು ಬದುಕುತ್ತಿರುವ ರೀತಿ ಹಾಗೂ ‘ಜನಪರ’ವೆಂದು ಕರೆಸಿಕೊಳ್ಳುವ ಹೋರಾಟಗಳಿಗೆ ಪಕ್ಷಗಳು ಖರ್ಚು ಮಾಡುತ್ತಿರುವುದನ್ನು ಗಮನಿಸಿದರೆ ಹೆಬ್ಬಳ್ಳಿ ಹೋರಾಟದ ಮುಖಂಡರು ಸರಳತೆ ಹಾಗೂ ಬದ್ಧತೆ ಎಷ್ಟಿತ್ತೆಂಬುದು ಅರಿವಾಗುತ್ತದೆ.

ಇಂತಹದ್ದೊಂದು ಹೋರಾಟಕ್ಕೆ ಜಾಗೀರದಾರ ಮನೆತನದವರು ಹಿಂಸಾಚಾರ ನಡೆಸುವುದಾಗಲಿ, ಬಹಿರಂಗವಾಗಿ ವಿರೋಧ ವ್ಯಕ್ತಪಡಿಸುವ ಪ್ರಯತ್ನವಾಗಲಿ ಮಾಡಲಿಲ್ಲ. ೧೯೫೨ರಲ್ಲಿಯೇ ತಮ್ಮೆಲ್ಲ ಭೂಮಿಯನ್ನು ಸರ್ಕಾರದ ವಶಕ್ಕೆ ಒಪ್ಪಿಸಿದ್ದ ಜಾಗೀರದಾರ ಮನೆತನದವರು ಹೋರಾಟದಲ್ಲಿ ಪರ-ವಿರೋಧವಾಗದೇ ತಟಸ್ಥರಾಗಿದ್ದರು. ೧೯೫೮ ರಲ್ಲಾಗಲೇ ಕಳೆದುಕೊಂಡ ಜಾಗೀರು ಭೂಮಿ ಮರಳಿ ಬರುವುದಿಲ್ಲ ಎನ್ನುವುದು ಅವರಿಗೆ ಖಾತ್ರಿಯಾಗಿತ್ತು. ಅಲ್ಲದೆ ಗ್ರಾಮದ ರೈತರು ಜಾಗೀರು ಭೂಮಿ ಉಳುತ್ತಿರುವುದಕ್ಕಾಗಿ ಕಂದಾಯ ಕೊಡುವುದನ್ನು ಬಿಟ್ಟು ಆರು ವರ್ಷಗಳೇ ಆಗುತ್ತಾ ಬಂದಿದ್ದವು. ಈ ಹಿನ್ನೆಲೆಯಲ್ಲಿ ಹೋರಾಟವನ್ನು ವಿರೋಧಿಸುವ ಪ್ರಯತ್ನವನ್ನೇ ಮಾಡಲಿಲ್ಲ. ಅದರಲ್ಲೂ ಅವರು ಜಾತಿಯಲ್ಲಿ ಬ್ರಾಹ್ಮಣರಾಗಿದ್ದರಿಂದ ಜನಸಾಮಾನ್ಯರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆಯದೇ ಒಂದು ರೀತಿಯಲ್ಲಿ ಅಂತರವನ್ನು ಕಾಯ್ದುಕೊಂಡು ಬಂದಿದ್ದರು. ಜಾತಿ ಹಾಗೂ ಅಂತಸ್ತು ಅವರು ಜನರ ವಿಶ್ವಾಸಗಳಿಸಿಕೊಳ್ಳಲು ಅಡ್ಡಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಜಾಗೀರುದಾರರು ಹೋರಾಟವ ವಿರೋಧಿಸಿದರೂ ಅದನ್ನು ಗಣನೆಗೆ ತೆಗೆದುಕೊಳ್ಳಲಾಗಲಿ, ಮಾನ್ಯತೆ ನೀಡಲಾಗಲಿ ಯಾರೂ ಸಿದ್ಧರಿರಲಿಲ್ಲ. ಹೀಗಾಗಿ ತಮ್ಮ ಆಪ್ತರೊಡನೆ ಮಾತ್ರ ಜಾಗೀರ್ ಮನೆತನದವರು ಈ ರೈತ ಕೂಲಿಕಾರರ ಕುರಿತು ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದರೇ ವಿನಃ, ಬಹಿರಂಗವಾಗಿ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಜಾಗೀರ ಮನೆತನದವರೇ ಈ ಹೋರಾಟದ ಬಗ್ಗೆ ನಿರ್ಲಿಪ್ತರಾಗಿದ್ದುದು ಹೋರಾಟವು ಹೆಚ್ಚು ಶಾಂತಿಯುತವಾಗಿ ನಡೆಯಲು ಸಹಕಾರಿಯಾಯಿತು. ರಾಜಕೀಯವಾಗಿಯೂ ಸಹಿತ ಈ ಕುಟುಂಬದಲ್ಲಿ ಯಾರೊಬ್ಬರೂ ಪ್ರಬಲರಾಗಿರಲಿಲ್ಲ. ಏಕೆಂದರೆ ಈ ಮನೆತನಗಳ ಯಾರೊಬ್ಬರೂ ಜನನಾಯಕರಾಗಿಯೋ, ಚುನಾವಣಾ ಕಣದಲ್ಲಿ ಧುಮುಕಿ ಪಕ್ಷಗಳ ಮುಖಂಡರಾಗಿಯೋ ರೂಪುಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಡಳಿತಾತ್ಮಕವಾಗಿಯಾಗಲಿ, ರಾಜಕೀಯ ತಂತ್ರಗಾರಿಕೆಯ ಮೂಲಕವಾಗಲಿ ಇಲ್ಲವೇ ಹಿಂಸೆಯ ಮೂಲಕವಾಗಲಿ ರೈತ ಕೂಲಿಕಾರ್ಮಿಕರ ಹೋರಾಟವನ್ನು ವಿಫಲಗೊಳಿಸುವ ಪ್ರಯತ್ನ ಮಾಡಲಿಲ್ಲ.

ಹೋರಾಟದ ಸಂದರ್ಭದಲ್ಲಿ ಸಂಯುಕ್ತ ಕರ್ನಾಟಕ ಹಾಗೂ ಪಾಟೀಲ್ ಪುಟ್ಟಪ್ಪನವರ ‘ಪ್ರಪಂಚ’ ಪತ್ರಿಕೆ ಧಾರವಾಡ ಭಾಗದಲ್ಲಿ ಅತ್ಯಂತ ಜನಪ್ರಿಯವಾಗಿದ್ದವು. ಪಾಪು ಅವರು ವೈಯಕ್ತಿಕವಾಗಿ ಗಂಗಾಧರ್ ಪದಕಿಯವರಿಗೆ ಉತ್ತಮ ಗೆಳೆಯರಾಗಿದ್ದರು. ಆದರೂ ಸಹಿತ ಈ ಸಮಾಜವಾದಿ ಹೋರಾಟದ ಬಗ್ಗೆಯಾಗಲಿ, ಜಾಗೀರದಾರ ಭೂಮಿಯ ಹಂಚಿಕೆಯ ಕುರಿತಾಗಲಿ ಅವರು ಆ ಸಂದರ್ಭದಲ್ಲಿ ಯಾವುದೇ ವರದಿ, ವಿಶೇಷ ಲೇಖನ ಪ್ರಕಟಿಸಿಲ್ಲ. ಕಾಗೋಡು ಚಳುವಳಿಯ ಸಂದರ್ಭದಲ್ಲಿ ಪತ್ರಿಕಾ ವರದಿಗಳು, ರೇಡಿಯೋ ವಾರ್ತೆಗಳು, ಹೋರಾಟದ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದವು. ಆದರೆ ಹೆಬ್ಬಳ್ಳಿ ರೈತ ಕೂಲಿಕಾರ್ಮಿಕರ ಹೋರಾಟದ ಬಗ್ಗೆ ಮಾಧ್ಯಮಗಳಲ್ಲಿ ಯಾವುದೇ ಲೇಖನ ಅಥವಾ ಪ್ರಭಾವ ಬೀರುವ ರೀತಿಯಲ್ಲಿ ವಿಶೇಷ ವರದಿ ಪ್ರಕಟವಾಗಲಿಲ್ಲ. ಇದೊಂದು ಭೂರಹಿತ ರೈತ ಕೂಲಿಕಾರ್ಮಿಕರಿಗೆ ಸಂಬಧಿಸಿದ ಸಮಾಜವಾದಿಗಳ ಸದ್ದಿಲ್ಲದ ಹೋರಾಟವಾಗಿತ್ತು. ಸಮಾಜವಾದಿ ಮುಖಂಡರು ಕೂಡ ಮಾಧ್ಯಮಗಳನ್ನು ಬಳಸಿಕೊಳ್ಳಬೇಕೆಂಬ ಬಗ್ಗೆ ಆಸಕ್ತಿಯನ್ನೇ ಹೊಂದಿರಲಿಲ್ಲ.

ಕಾಗೋಡು ಚಳುವಳಿಯ ಸಂದರ್ಭದಲ್ಲಿ ನಾಡಿನ ಪತ್ರಿಕೆಗಳು (ಅದರಲ್ಲೂ ಪ್ರಜಾವಾಣಿ) ಹೋರಾಟದ ಪರ-ವಿರೋಧವಾಗಿ ಕಾರ್ಯ ನಿರ್ವಹಿಸುತ್ತಾ ಅದಕ್ಕೊಂದು ರಾಜ್ಯವ್ಯಾಪಿ ಚರ್ಚೆಯನ್ನು ರೂಪಿಸಿತ್ತು. ಇಮ್ತಹ ಅವಕಾಶ ಹೆಬ್ಬಳ್ಳಿ ರೈತಕೂಲಿಕಾರರ ಹೋರಾಟದ ಸಂದರ್ಭದಲ್ಲಿ ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಗೆ ಒದಗಿಬಂದಿತ್ತು. ಆದರೆ ವರದಿಯ ವಿಷಯ ಮತ್ತು ನಿರೂಪಣೆ ಅತ್ಯಂತ ಚಿಕ್ಕದಾಗಿದ್ದರಿಂದ ನಾಡಿನ ಪ್ರಜ್ಞಾವಂತರನ್ನು ಅದು ಸೆಳೆಯಲಿಲ್ಲ. ತನ್ನಲ್ಲಿ ವರದಿಗಳಲ್ಲೂ ಹೋರಾಟದ ಪರವಾಗಿಯಾಗಲಿ ಇಲ್ಲವೆ ವಿರೋಧಿಯಾಗಿಯಾಗಲಿ ಕಾರ್ಯ ನಿರ್ವಹಿಸದೆ ಅದು ನಿರ್ಲಿಪ್ತತೆ ವಹಿಸಿತ್ತು.

ಪ್ರಶ್ನೆ ಏನೆಂದರೆ ಒಂದು ಸಂಗತಿಯ ಕುರಿತು ಅದರಲ್ಲೂ ಬಡ ರೈತ ಕೂಲಿಕಾರರ ಹೋರಾಟದ ಕುರಿತು ನಿರ್ಲಿಪ್ತವಾಗಿ ವರದಿ ಮಾಡುವುದೆ ಪತ್ರಿಕಾ ಧರ್ಮವೇ? ಮಾಧ್ಯಮಗಳಿಗೆ ಸಾಮಾಜಿಕ ಜವಾಬ್ದಾರಿಗಳಿಲ್ಲವೇ? ಏಕೆಂದರೆ ‘ಪ್ರಪಂಚ’ ಹೋರಾಟದ ಬಗೆಗೆ ಕಿವುಡಾಗಿ ಅಥವಾ ಕುರುಡಾಗಿ ವರ್ತಿಸಿದರೆ ‘ಸಂಯುಕ್ತ ಕರ್ನಾಟಕ’ ಅದೊಂದು ಸಾಮಾನ್ಯ ಸುದ್ಧಿ ಎನ್ನುವಂತೆ ಬಿಂಬಿಸಿದೆ. ಹೆಬ್ಬಳ್ಳಿ ರೈತಕೂಲಿಕಾರರ ಹೋರಾಟಕ್ಕೆ ಸಂಬಂಧಿಸಿದಂತೆ ಈ ಎರಡೂ ಪತ್ರಿಕೆಗಳ ವರ್ತನೆ ಆಶ್ಚರ್ಯ ಹುಟ್ಟಿಸುತ್ತದೆ.

ಈ ಎಲ್ಲವುಗಳ ಮಧ್ಯೆಯೂ ರೈತ ಕೂಲಿಕಾರ್ಮಿಕರು ಹಾಗೂ ಸಮಾಜವಾದಿ ಮುಖಂಡರು ರಾಜ್ಯ ಸರ್ಕಾರದಿಂದ ಭೂ ಹಂಚಿಕೆ ಕುರಿತು ಸ್ಪಷ್ಟ ಭರವಸೆಯನ್ನು ಪಡೆದಿದ್ದರು. ಈ ಹಿನ್ನೆಲೆಯಲ್ಲಿ ನೀಲಗಂಗಯ್ಯ ಪೂಜಾರ್ ಅವರು ಸಮಾಜವಾದಿ ಪಕ್ಷದ ಹಿರಿಯ ಮುಖಂಡರನ್ನು ವಿಜಯೋತ್ಸವ ಕಾರ್ಯಕ್ರಮಕ್ಕೆ ತರಲು ಸಮಾಜವಾದಿ ಮುಖಂಡರಲ್ಲಿ ಅತ್ಯಂತ ಪ್ರಖ್ಯಾತರಾಗಿದ್ದವರೆಂದರೆ ರಾಮಮನೋಹರ ಲೋಹಿಯಾ, ಜಯಪ್ರಕಾಶ ನಾರಾಯಣ್ ಮತ್ತು ಮಧುಲಿಮಯೆ. ಇವರಲ್ಲಿ ಲೋಹಿಯಾ ಮತ್ತು ಮಧಿಲಿಮಯೆ ಕೆಲಸದ ಒತ್ತಡಗಳ ಮಧ್ಯೆ ಹೆಬ್ಬಳ್ಳಿಗೆ ಬರಲು ನಿರಾಕರಿಸಿದರು. ಈ ಸಂಬಂಧವಾಗಿ ಗಂಗಾಧರ ಪದಕಿಯವರು ಮಧುಲಿಮಯೆ ಪತ್ರ ಬರೆದರು. ರೈತಕೂಲಿಕಾರ್ಮಿಕರ ಹೋರಾಟದ ವಿಜಯೋತ್ಸವ ಕಾರ್ಯಕ್ರಮಕ್ಕೆ ಮಧುಲಿಮೆ ಬರಲು ಸಿದ್ಧರಾದರು. ಆಗಸ್ಟ್ ತಿಂಗಳಲ್ಲಿ (ದಿನಾಂಕ ತಿಳಿದಿರುವುದಿಲ್ಲ) ಬಾಂಬೆಯಿಂದ ಹುಬ್ಬಳ್ಳಿಗೆ ರೈಲಿನಲ್ಲಿ ಬರುವ ಸೂಚನೆಯನ್ನು ಮಧುಲಿಮಯೆ ಅವರಿಗೆ ನೀಡಲಾಯಿತು. ಅದರಂತೆಯೆ ನಿಗಧಿತ ದಿನದಂದು ಸಮಾಜವಾದಿ ಪಕ್ಷದ ಹಿರಿಯ ನಾಯಕರಾದ ಮಧುಲಿಮಯೆ ರಾತ್ರಿ ಹುಬ್ಬಳ್ಳಿಗೆ ಬಂದರು. ಅವರನ್ನು ಕರೆದು ತರಲು ನೀಲಗಂಗಯ್ಯ ಪೂಜಾರ್ ಅವರು ಮೊದಲೇ ಹೋಗಿ ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಮಲಗಿದ್ದರು. ರಾತ್ರಿ ಮೂರುಗಂಟೆಯ ಸುಮಾರಿಗೆ ಮಧುಲಿಮಯೆ ರೈಲಿನಲ್ಲಿ ಬಂದಿಳಿದರು. ಅವರೊಂದಿಗೆ ಯಾವುದೇ ಸಮಾಜವಾದಿ ಕಾರ್ಯಕರ್ತರಾಗಲಿ, ಗೆಳೆಯರಾಗಲಿ ಇರಲಿಲ್ಲ. ಮತ್ತು ಆ ರಾತ್ರಿ ನೀಲಗಂಗಯ್ಯ ಪೂಜಾರ್ ಅವರೊಂದಿಗೂ ಯಾವುದೇ ಕಾರ್ಯಕರ್ತರಾಗಲಿ, ಆಪ್ತರಾಗಲಿ ಇರಲಿಲ್ಲ. ಅಂದು ರಾತ್ರಿ ಮಧುಲಿಮೆಯವರನ್ನು ಕಾರಿನಲ್ಲಿ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಕರೆತರಲಾಯಿತು. ಮತ್ತು ಪಕ್ಷದ ಕಚೇರಿಯಲ್ಲಿಯೇ ವಿಶ್ರಾಂತಿಗಾಗಿ ಉಳಿಸಲಾಯಿತು.

ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಹೆಬ್ಬಳ್ಳೀಯಲ್ಲಿ ಮಧುಲಿಮಯೆಗೆ ಭವ್ಯ ಮೆರವಣಿಗೆ ಮಾಡಲಾಯಿತು. ಅಂದು ಸುಮಾರು ನಾಲ್ಕರಿಂದ ಐದು ಸಾವಿರ ಜನರು ಸಭೆಯಲ್ಲಿ ಸೇರಿದ್ದರು. ಅಂದು ರೈತ ಕೂಲಿಕಾರ್ಮಿಕರನ್ನು, ಸಾರ್ವಜನಿಕರನ್ನು ಉದ್ದೇಶಿಸಿ ಮಧುಲಿಮಯೆ ಹಿಂದಿಯಲ್ಲಿ ಭಾಷಣ ಮಾಡಿದರು. ಈ ಹಿಂದಿ ಭಾಷಣವನ್ನು ಬಳಿಕ ನೀಲಗಂಗಯ್ಯ ಪೂಜಾರ್ ಅವರು ಕನ್ನಡಕ್ಕೆ ಭಾಷಾಂತರಿಸಿ ಹೇಳಿದರು. ಮಧುಲಿಮಯೆ ತಮ್ಮ ಭಾಷಣದಲ್ಲಿ ಸಮಾಜವಾದಿ ಚಳುವಳಿ, ಕರ್ನಾಟಕದಲ್ಲಿ ಪಕ್ಷದ ಬೆಳವಣಿಗೆ ಹಾಗೂ ರೈತರ ಸಮಸ್ಯಗಳ ಕುರಿತು ಪ್ರಸ್ತಾಪಿಸಿದರು. ಅಂದಿನ ಸಭೆಯ ಬಳಿಕ ರೈತರೇ ಸ್ವಯಂ ಸ್ಫೂರ್ತಿಯಿಂದ ಹಣಸಂಗ್ರಹಿಸಿ ಅಡುಗೆ ಮಾಡಿಸಿದ್ದರು. ನಾಲ್ಕರಿಂದ ಐದು ಸಾವಿರ ಜನ ಅಂದು ಸಿಹಿ ಊಟವನ್ನು (ಕರಿಗಡುಬು ಮತ್ತು ತುಪ್ಪ) ಊಟ ಮಾಡಿದರೆಂದು ಹೇಳಲಾಗುತ್ತದೆ. (ಮಾಹಿತಿ : ನೀಲಗಂಗಯ್ಯ ಪೂಜಾರ್) ಅಂದು ಕಾರ್ಯಕ್ರಮ ಮುಗಿಸಿದ ಮಧುಲಿಮಯೆ ಸಂಜೆಯೇ ಮುಂಬೈಗೆ ಪ್ರಯಾಣ ಬೆಳೆಸಿದರು.

ಇಡೀ ಹೋರಾಟದಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಸಂಗತಿಯೆಂದರೆ ಕರ್ನಾಟಕದ ಇನ್ನಿತರ ಸಮಾಜವಾದಿ ಮುಖಂಡರ ವರ್ತನೆ. ಸಾವಿರಾರು ಎಕರೆ ಭೂಮಿಯ ಹಂಚೆಕೆ ಮತ್ತು ಅದಕ್ಕೆ ಅಧಿಕೃತ ಮಾನ್ಯತಾಪತ್ರ ಪಡೆಯುವ ಈ ಹೋರಾಟವನ್ನು ಇತರ ಸಮಾಜವಾದಿ ಮುಖಂಡರು ಗಮನಿಸಲೇ ಇಲ್ಲ. ಅಗಲೇ ತಮ್ಮ ವರ್ತನೆಗಳ ಮೂಲಕ ಸಮಾಜವಾದಿ ಮುಖಂಡರೆನಿಸಿಕೊಂಡವರು ಹಲವು ಮಂದಿ ಇದ್ದರು. ಅದರಲ್ಲೂ ಶಾಂತವೇರಿ ಗೌಪಾಲಗೌಡರು (ಶಿವಮೊಗ್ಗ), ಅಬ್ಬಿಗೇರಿ ವಿರೂಪಾಕ್ಷಪ್ಪ (ರೋಣ) ಅಮ್ಮೆಂಬಳ ಬಾಳಪ್ಪ (ಅಂಕೋಲ), ಸದಾಶಿವ ಕಾರಂತ (ಮುಂಬೈ), ಕೆ.ಜಿ.ಮಹೇಶ್ವರಪ್ಪ (ದಾವಣಗೆರೆ), ಕಾಶಿನಾಥ ಬೇಲೂರೆ (ಬೀದರ್), ಪೊನ್ನಮ್ಮಾಳ್(ಶಿವಮೊಗ್ಗ) ಮುಂತಾದವರು ಸಮಾಜವಾದಿ ಚಳುವಳಿಗಳಲ್ಲಿನ ಹೋರಾಟಗಳು ಅವರಿಗೆ ಜನಸಾಮಾನ್ಯರಲ್ಲಿ ವರ್ಚಸ್ಸನ್ನು ಬೆಳೆಸಿದ್ದವು. ಆದರೆ ಈ ನಾಯಕರು ಇಂತಹುದೇ ಜನಸಾಮಾನ್ಯರ ಹೋರಾಟವಾಗಿದ್ದ ಹೆಬ್ಬಳ್ಳಿ ರೈತ ಕೂಲಿಕಾರ್ಮಿಕರಹೋರಾಟದ ಕುರಿತು ಮೌನವಹಿಸಿದ್ದರೆಕೇ? ಹೋರಾಟದಲ್ಲಿ ಪಾಲ್ಗೊಳ್ಳದಿದ್ದರೂ ಅದಕ್ಕೊಂದು ಬೆಂಬಲ ವ್ಯಕ್ತಪಡಿಸಲಿಲ್ಲ ಏಕೆ? ಮಧುಮಲಿಮಯೆಂತಹ ಸಮಾಜವಾದಿ ಪಕ್ಷದ ರಾಷ್ಟ್ರೀಯ ಮುಖಂಡರು ಹೆಬ್ಬಳ್ಳಿಯ ವಿಜೋಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದರೂ ರಾಜ್ಯದ ಇತರ ನಾಯಕರು ಪಾಲ್ಗೊಳ್ಳಲಿಲ್ಲ ಏಕೆ? ಇವರೆಲ್ಲರ ಮಧ್ಯೆ ಸಂಪರ್ಕದ ಕೊರತೆ ಇತ್ತೇ? ಸಮಾಜವಾದಿ ಸಿದ್ಧಾಂತ ಇವರಲ್ಲಿ ರೂಪಿಸಿದ ವ್ಯಕ್ತಿತ್ವ ಎಂತಹದು? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಾ ಹೋದರೆ ಕೇವಲ ಹೆಬ್ಬಳ್ಳಿ ರೈತ ಕೂಲಿಕಾರ್ಮಿಕರ ಹೋರಾಟಕ್ಕೆ ಸಂಬಂಧಿಸಿದ ಸಮಾಜವಾದಿಗಳ ನಿಲುವು ಮಾತ್ರ ಬಹಿರಂಗವಾಗದೆ, ಒಟ್ಟು ಕರ್ನಾಟಕದ ಸಮಾಜವಾದಿಗಳು ಇದ್ದ ಪರಿಸ್ಥಿತಿ, ಆ ಪಕ್ಷ ರಾಜ್ಯದಲ್ಲಿ ಬೆಳವಣಿಗೆ ಹೊಂದಲು ಇರುವ ಅಡ್ಡಿ ಆತಂಕಗಳು ಏನೆಂಬುದು ತಿಳಿದುಬರುತ್ತದೆ.

ಕರ್ನಾಟಕದ ಸಮಾಜವಾದಿಗಳು ಸಾಮೂಹಿಕವಾಗಿ ಹೋರಾಟ ಕೈಗೊಂಡಿದ್ದೇ ಇಲ್ಲ. ಸಮಾಜವಾದಿಗಳ ಹೋರಾಟಗಳೇನಿದ್ದರೂ ವೈಯಕ್ತಿಕ ವರ್ಚಸ್ಸನ್ನು ಅಥವಾ ಪಕ್ಷಕಟ್ಟುವ ಭಾಗವಾಗಿರಲಿಲ್ಲ. ಸಮಾಜವಾದಿಗಳ ಪ್ರಮುಖ ಹೋರಾಟವೆನಿಸಿಕೊಂಡಿದ್ದ ಕಾಗೋಡು ಚಳುವಳಿಯಲ್ಲಾಗಲಿ ಶಿವಮೊಗ್ಗದ ಸಮಾಜವಾದಿಗಳೇ ಪ್ರಮುಖವಾಗಿದ್ದರು. ನೀಲಗಂಗಯ್ಯ ಪೂಜಾರ್, ಸದಾಶಿವ ಕಾರಂತ, ಕಾಶಿನಾಥ ಬೇಲೂರೆ, ವಿರೂಪಾಕ್ಷಪ್ಪ ಅಬ್ಬಿಗೇರಿ ಮುಂತಾದವರು ಈ ಹೋರಾಟದಲ್ಲಿ ಭಾಗವಹಿಸಲೇ ಇಲ್ಲ. ಹಾಗೆಯೇ ಕಾಶಿನಾಥ ಬೇಲೂರೆ ಅವರು ಬೀದರ್ ಭಾಗದಲ್ಲಿ ಸಾವಿರಾರು ಎಕರೆ ಜಮೀನ್ದಾರರಾದ ಗೇಣಿ ಮನೆತನದ ವಿರುದ್ಧ ಹೋರಾಟ ಮಾಡಿದ್ದರು. ಆದರೆ ಈ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಲಿ ಬೆಂಬಲಿಸುವುದಾಗಲಿ ಯಾವ ಸಮಾಜವಾದಿಗಳೂ ಮಾಡಲಿಲ್ಲ. ಸಾರ್ವಜನಿಕ ತಿಳುವಳಿಕೆಯ ಭಾಗವಾಗಿರದ ಹಲವಾರು ಹೋರಾಟಗಳನ್ನು ಸಮಾಜವಾದಿಗಳು ಕೈಗೊಂಡಿದ್ದಾರೆ. ಆದರೆಈ ಹೋರಾಟಗಳು ದ್ವೀಪಗಳ ರೀತಿಯಲ್ಲಿ ಇನ್ನಿತರ ಸಂಬಂಧಗಳನ್ನು ಕತ್ತರಿಸಿಕೊಂಡಿದ್ದವು. ಇದಕ್ಕೆ ಕಾರಣ ಸಾಂಘಿಕ ಯತ್ನಕ್ಕಿಂತ ವೈಯಕ್ತಿಕ ಪ್ರಯತ್ನಗಳ ಮೂಲಕವೇ ಹೋರಾಟಗಳನ್ನು ರೂಪಿಸಲಾಗುತ್ತಿದ್ದುದು.

೧೯೫೦ರ ದಶಕದಲ್ಲಿ ಒಮ್ಮೆ ರಾಮಮನೋಹರ್ ಲೋಹಿಯಾ ರೋಣ ತಾಲೂಕಿಗೆ (ಆಗ ಅದು ಧಾರವಾಡ ಜಿಲ್ಲೆಯಲ್ಲಿತ್ತು. ಈಗ ಗದಗ ಜಿಲ್ಲೆಗೆ ಸೇರ್ಪಡೆಗೊಂಡಿದೆ) ಬಂದಿದ್ದರು. ಆ ಸಂದರ್ಭದಲ್ಲಿ ಅವರನ್ನು ಬರಮಾಡಿಕೊಂಡವರೆಂದರೆ ವಿರೂಪಾಕ್ಷಪ್ಪ ಅಬ್ಬಿಗೇರಿಯವರೊಬ್ಬರೇ. ಕರ್ನಾಟಕದ ಹಲವಾರು ಪ್ರಮುಖ ಸಮಾಜವಾದಿ ಮುಖಂಡರು ಲೋಹಿಯಾರನ್ನು ಭೇಟಿ ಮಾಡುವ ಪ್ರಯತ್ನ ಮಾಡಿಲ್ಲ. ಇದೇ ರೋಣ ಕ್ಷೇತ್ರದಿಂದ ನೀಲಗಂಗಯ್ಯ ಪೂಜಾರ್ ಅವರು ಒಮ್ಮೆ ಶಾಸಕರಾಗಿದ್ದರು. ಆದರೂ ರೋಣದಲ್ಲಿ ಜರುಗಿದ ಕಾರ್ಯಕ್ರಮಗಳಿಗೆ ಅವರು ಹಾಜರಾಗಿರಲಿಲ್ಲ. ಹಾಗೆಯೇ ಮಧುಲಿಮೆ ಹೆಬ್ಬಳ್ಳಿಗೆ ಬಂದು ಸಂದರ್ಭದಲ್ಲಿ ಯಾರೊಬ್ಬರೂ ಅವರನ್ನು ಭೇಟಿ ಮಾಡಿರಲಿಲ್ಲ. ಯಾಕೆ ಹೀಗೆ? ಪಕ್ಷದ ಮುಖಂಡರೊಂದಿಗಿನ ಚರ್ಚೆಯಿಂದ ರಾಜ್ಯದಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟಿಸುವ, ಮುನ್ನೆಡೆಸುವ ಬಗ್ಗೆ ಹೆಚ್ಚಿನ ಸಲಹೆ ಸೂಚನೆಗಳನ್ನು ಪಡೆಯಲು ಸಾಧ್ಯವಿರಲಿಲ್ಲವೇ? ಕರ್ನಾಟದ ಸಮಾಜವಾದಿ ಮುಖಂಡರು ಲೋಹಿಯಾ ಅಥವಾ ಸಮಾಜವಾದಿ ಎಂಬ ಒಂದೇ ಬೀಜದಿಂದ ಶಕ್ತಿ ಪಡೆದು ಬೆಳೆದಿದ್ದರೂ ಕೂಡಿಕೊಳ್ಳಲಾಗದ ಎಷ್ಟೊಂದು ಕವಲೊಡೆದಿದ್ದವು. ಇಲ್ಲಿನ ಸಮಾಜವಾದಿಗಳು ವೈಯಕ್ತಿಕ ವರ್ಚಸ್ಸಿಗೆ ಮಹತ್ವ ನೀಡುತ್ತಿದ್ದರೆನಿಸುತ್ತದೆ. ಗೋಪಾಲಗೌಡರಂತೂ ೧೯೫೫ರಲ್ಲಿ ಹೈದರಾಬಾದಿನಲ್ಲಿ ನಡೆದ ಸಮಾಜವಾದಿ ಸಮ್ಮೇಳನದಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿಗೆ ಆಯ್ಕೆಯಾಗಿದ್ದರು.‘ಮುಂಬೈ, ಹೈದರಾಬಾದ್, ದಿಲ್ಲಿ, ಪಾಟ್ನಾ, ಲಖನೌಗಳ ಸಾಂದರ್ಭಿಕ ಭೇಟಿ, ಅದರ ಜೊತೆಗೆ ವಿವಿಧ ಪ್ರದೇಶ ಭಾಷೆಗಳನ್ನು ಪ್ರತಿನಿಧಿಸುವ ರಾಜಕೀಯ ನಾಯಕರ ಸಂಪರ್ಕ, ಸಹಚರ್ಯಗಳ ಮೂಲಕ ಹುಟ್ಟಿಕೊಂಡ ಅಗ್ಗಳಿಕೆಯ ಭಾವನೆಯು ಅವರನ್ನು ಸುತ್ತಿಕೊಂಡು, ಅವರು ನಿರಂತರ ಮುಖವಾಡದ ಮರೆಯಲ್ಲೇ ಮುಖಮರೆಸಿಕೊಂಡು ಇರುವಂತಾಯಿತು’. (ಶಾಂತವೇರಿ ಗೋಪಾಲಗೌಡರು : ಒಂದು ಚಿತ್ರ, ಸಂಕ್ರಮಣ, ಸೆಪ್ಟೆಂಬರ್ ೧೯೯೮, ಪು.೩೭) ಗೋಪಾಲಗೌಡರಿಗಂತೂ ಕಾಗೋಡು ಚಳುವಳಿಯ ನಂತರ ಮತ್ತೊಂದು ಹೋರಾಟ ಸಂಘಟಿಸುವುದು ಸಾಧ್ಯವೇ ಆಗಲಿಲ್ಲ ರಾಜ್ಯದ ಪ್ರಮುಖ ನಾಯಕರಾಗಿ ಇತರ ಸಮಾಜವಾದಿಗಳ ಹೋರಾಟಗಳನ್ನು ಬೆಂಬಲಿಸುವ ಪ್ರಯತ್ನವನ್ನು ಸಹ ಮಾಡಲಿಲ್ಲ.

ಇನ್ನು ಸದಾಶಿವ ಕಾರಂತರು ೧೯೪೯ರಲ್ಲಿ ಬಾಂಬೆಗೆ ಹೋಗಿ ನೆಲೆಸಿದವರು ರಾಜ್ಯದ ಸಮಾಜವಾದಿಗಳಬಗ್ಗೆ ಚಿಂತಿಸಲೇ ಇಲ್ಲ. ಲೋಹಿಯಾ ಅವರೊಂದಿಗೆ ಆತ್ಮೀಯಸಂಪರ್ಕ ಬೆಳೆಸಿಕೊಂಡ ಇವರು, ಕೆಲವು ದಿನ ಲೋಹಿಯಾರೊಂದಿಗೆ ದೆಹಲಿಯಲ್ಲಿ ವಾಸಮಾಡುತ್ತಿದ್ದರು. ‘ಸದಾಶಿವಕಾರಂತರು ತಮ್ಮ ಸಮಾಜವಾದಿ ದೀಕ್ಷಾಗುರು’ ಎಂದು ನೀಲಗಂಗಯ್ಯ ಪೂಜಾರ್ ತಿಳಿದಿದ್ದರು. ಆದರೆ ತಮ್ಮ ಶಿಷ್ಯನ ಸಮಾಜವಾದಿ ಚಟುವಟಿಕೆಗಳ ಬಗೆಗೆ ಅವರಲ್ಲಿ ಆಸಕ್ತಿ ಇರಲಿಲ್ಲ.

ನೀಲಗಂಗಯ್ಯ ಮತ್ತು ಗಂಗಾಧರ ಪದಕಿಯವರು ಸಹಿತ ಇತರ ಸಮಾಜವಾದಿಗಳನ್ನು ತಮ್ಮ ಹೋರಾಟದಲ್ಲಿ ಸೇರ್ಪಡೆ ಮಾಡಿಕೊಳ್ಳಲಿಲ್ಲ. ಈ ಬಗ್ಗೆ ಯಾವುದೇ ನಾಯಕರ ಸಲಹೆ-ಸಹಕಾರ್ ಕೋರಲಿಲ್ಲ. ಇದರ ಬಗ್ಗೆ ಯಾರೊಂದಿಗೂ ಪತ್ರ ಸಂವಾದವನ್ನೂ ಮಾಡಲಿಲ್ಲ. ಈ ಕಾರಣಕ್ಕಾಗಿಯೇ ಹೆಬ್ಬಳ್ಳಿ ಭೂರಹಿತ ರೈತ ಕೂಲಿಕಾರ್ಮಿಕರ, ಹೋರಾಟ ತನ್ನ ತತ್ ಕ್ಷಣದ ಗುರಿಯಾದ ಭೂಮಿ ಹಂಚಿಕೆಯ ಕುರಿತು ಸರ್ಕಾರದಿಂದ ಸ್ಪಷ್ಟ ಭರವಸೆಯನ್ನು ಪಡೆಯುತ್ತಿದ್ದ. ಹಾಗೆ ಹೋರಾಟ ಆಗಿಯೇ ಇಲ್ಲವೇನೋ ಎನ್ನುವಷ್ಟು ಸ್ತಬ್ಧವಾಯಿತು.

ಹಾಗೆ ನೋಡಿದರೆ ಕಾಗೋಡು ಚಳುವಳಿಯಿಂದ ಸಮಾಜವಾದಿಗಳು ಹೋರಾಟದ ಪಾಠಗಳನ್ನೇ ಕಲಿಯಲಿಲ್ಲವೇನೋ? ಕಾಗೋಡಿನಲ್ಲಿ ಚಳುವಳಿ ನಂತರದಲ್ಲಿ ಅದನ್ನು ಪರಮರ್ಶಿಸುವ ಗುರಿ ಸಾಧಿಸುವಲ್ಲಿ ಅಥವಾ ಸಾಧಿಸುವಲ್ಲಿ ಅಥವಾ ಸಾಧಿಸಬೇಕಿರುವಲ್ಲಿ ಎದುರಾಗಿದ್ದ ಅಡ್ಡಿ ಆತಂಕಗಳ ಕುರಿತು ಮರು-ವಿಮರ್ಶೆಗೆ ಸಮಾಜವಾದಿಗಳು ತೊಡಗಿಕೊಳ್ಳಲಿಲ್ಲ. ಹೆಬ್ಬಳ್ಳಿ ಪ್ರಸಂಗದಲ್ಲಿಯೂ ಕೂಡ ರೈತ ಕೂಲಿಕಾರ್ಮಿಕರಿಗೆ ಭೂಮಿ ಸಿಕ್ಕಿತೋ ಇಲ್ಲವೋ ಎನ್ನುವ ಬಗ್ಗೆ ನಿಲಗಂಗಯ್ಯ ಪುಜಾರ್ ಆಗಲಿ, ಗಂಗಾಧರ್ ಪದಕಿಯವರಾಗಲಿ ನಂತರದ ದಿನಗಳಲ್ಲಿ ಗಮನಿಸುವ ಪ್ರಯತ್ನ ಮಾಡಲಿಲ್ಲ. ಹೋರಾಟದ ನಂತರ ಎಲ್ಲರಿಗೂ ಭೂಮಿ ದೊರೆಯಲಿಲ್ಲ. ಸ್ವತಃ ಸಾಗ್ಯ್ವಲಿ ಮಾಡುತ್ತಿದ್ದ ಕೂಲಿಕಾರರು ತಮ್ಮ ಹೆಸರಿಗೆ ಭೂಮಿ ಪಡೆದುಕೊಳ್ಳಲು ೨೦ ರಿಂದ ೩೦ ವರ್ಷ ಕೋರ್ಟಿಗೆ ಮತ್ತು ಧಾರವಾಡ ತಾಲೂಕು ಕಚೇರಿಗೆ ಅಲೆದರು. ಹೆಬ್ಬಳ್ಳಿ ಭೂ ಹೋರಾಟವಾಗಿ ಸುಮಾರು ೫೦ ವರ್ಷಗಳು ಸಂದಿವೆ. ಇಂದಿಗೂ ಆರು ಪ್ರಕರಣಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಹೆಸರಿಗೆ ಭೂಮಿ ಸ್ವಂತದ್ದಾಗಿಲ್ಲ. ಈ ಪ್ರಕರಣಗಳ ಇತ್ಯರ್ಥಕ್ಕಾಗಿ ಅಧಿಕಾರಿಗಳಿಗೆ ವಕೀಲರಿಗೆ ಸಾವಿರಾರು ರೂಪಾಯಿಗಳನ್ನು ಬಡರೈತ ಕೂಲಿಕಾರ್ಮಿಕರು ಕಳೆದುಕೊಂಡಿದ್ದಾರೆ.

ಹೆಬ್ಬಳ್ಳಿ ಕ್ಷೇತ್ರದ ಸಾಗುವಳಿದಾರರಾದ ಮೊರಬದ ಗದಿಗಪ್ಪ (ಸರ್ವೇ ನಂ, ೬೭೪), ಮಳಾಪುರ ಪಕ್ಕೀರಪ್ಪ ಸಿದ್ಲಿಂಗಪ್ಪ, ಕಡೇಮನಿ ಸಿದ್ದಪ್ಪ ಭೀಮಪ್ಪ (ಸರ್ವೇ ನಂ.೬೭೮), ಮುಲ್ಲಾ ಅಬ್ದುಲ್ ಸಾಬ್ ಹಯಾತ್ ಸಾಬ್ (ಸರ್ವೇ ನಂ. ೬೭೫, ೬೭೭), ಕಡೇಮನಿ ವೀರಭದ್ರಪ್ಪ ನಾಗಪ್ಪ (ಸರ್ವೇ ನಂ.೬೭೭) ತೇಗೂರು ಅಡಿವೆಪ್ಪ ಗುರಪ್ಪ (ಸರ್ವೇ ನಂ.೩೫೬)ಕುಂದಗೊಳ್ ಹನುಮಂತಪ್ಪ (ಸರ್ವೇ ನಂ.೧೪೭) ಇವರಿಗೆ ಈ ಹೊತ್ತಿಗೂ ಕೂಡ ಅಧಿಕೃತ ಮಾನ್ಯತಾ ಪತ್ರವನ್ನು (ಪಹಣಿಪತ್ರ) ಸರ್ಕಾರ ನೀಡಿಲ್ಲ. ಈ ಸಮ್ಬಂಧವಾಗಿ ಕಾನೂನಿನ ಪ್ರಕಾರ ನಡೆದುಕೊಂಡಿದ್ದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ರೈತರು ತಾಲೂಕು ಕಚೇರಿಗೂ, ಕೋರ್ಟಿಗೂ ಅಲೆದಾಡುತ್ತಿದ್ದಾರೆ.

೨೦೦೩ರಲ್ಲಿ ಸರ್ಕಾರದಿಂದ ಅಧಿಕೃತವಾಗಿ ಮಂಜೂರಾತಿ ಪಡೆಯದೇ ಇರುವ ೨೫ ಪ್ರಕರಣಗಳು ಇದ್ದವು. ಇವುಗಳಲ್ಲಿ ೧೯ ಪ್ರಕರಣಗಳು ಇತ್ಯರ್ಥವಾಗಿವೆ. ಇನ್ನು ಆರು ಪ್ರಕರಣಗಳು ಬಾಕಿ ಉಳಿದಿವೆ. ಈ ಯಾವ ಪ್ರಕರಣಗಳಲ್ಲಿಯೂ ಕೂಡ ಮತ್ತೆ ಸಮಾಜವಾದಿಗಳು ಸಹಾಯಕ್ಕೆ ಬಂದಿಲ್ಲ. ನೀಲಗಂಗಯ್ಯ ಪೂಜಾರ ಮತ್ತು ಗಂಗಾಧರ ಪದಕಿಯವರು ವಕೀಲರಾಗಿದ್ದೂ ಬಡ ರೈತ ಕೂಲಿಕಾರರಿಗೆ ಸಹಾಯ ಒದಗಿಸಲಿಲ್ಲವೆಂದರೆ, ಹೋರಾಟ ನಂತರದ ದಿನಗಳಲ್ಲಿ ಪಡೆದುಕೊಂಡ ರೂಪ ಎಂತಹುದು ಎಂದು ತಿಳಿದುಬರುತ್ತದೆ.ಈ ಬಡರೈತಕೂಲಿಕಾರರು ತಮ್ಮ ಪಾಲಿಗೆ ಬರಬಹುದಾದ ೬-೭ ಎಕರೆ ಭೂಮಿಗಾಗಿ ಕಳೆದ ೫೦ ವರ್ಷಗಳು ಹೋರಾಡುತ್ತಿದ್ದಾರೆಂದರೆ ನೀಲಗಂಗಯ್ಯ ಪೂಜಾರ ಮತ್ತು ಗಂಗಾಧರ ಪದಕಿಯವರಂತಹ ಸಮಾಜವಾದಿಗಳ ೧೧ ದಿನಗಳ ಹೋರಾಟ ಸಾಧಿಸಿದ್ದಾದರೂ ಏನು ಎಂಬ ಪ್ರಶ್ನೆ ಉಳಿಯುತ್ತದೆ.

ಈ ಕಾರಣಕ್ಕಾಗಿಯೇ ಗಂಗಾಧರ ಪದಕಿಯವರು ಮಾತಿನ ಮಧ್ಯದಲ್ಲಿ ‘ನಾವು ಹೋರಾಟದ ನಂತರದ ದಿನಗಳಲ್ಲಿ ಹೆಬ್ಬಳ್ಳಿಯ ಕಡೆಗಮನ ಹರಿಸಲಾಗಲಿಲ್ಲ. ಅಲ್ಲಿಯ ರೈತ ಕೂಲಿಕಾರರು ಹೇಗೆ ಬದುಕುತ್ತಿದ್ದಾರೆಂಬುದೂ ತಿಳಿಯಲಿಲ್ಲ. ಕಳೆದ ಮೂವತ್ತು ನಲವತ್ತು ವರ್ಷಗಳಲ್ಲಿ ನಾನು ಹೆಬ್ಬಳ್ಳಿಗೆ ಹೋಗಿಲ್ಲ. ಹಾಗೆ ನೋಡಿದರೆ ಹೋರಾಟದ ಫಲ ಏನು ಎಂಬುದನ್ನು ಗಮನಿಸಬೇಕಿತ್ತು. ಈ ವಿಷಯದಲ್ಲಿ ನಾವು ಫೇಲ್ಯೂರ್ ಆಗಿದ್ದೀವಿ’ ಎಂದಿದ್ದರು.

ನೀಲಗಂಗಯ್ಯ ಪೂಜಾರ್ ತಮ್ಮದೊಂದು ಲೇಖನದಲ್ಲಿ (ಶಾಂತವೆರಿ ಗೋಪಾಲಗೌಡರು ಒಂದು ಚಿತ್ರ, ಸಂಕ್ರಮಣ, ಸೆಪ್ಟೆಂಬರ್ ೧೯೯೮, ಪು.೪೬-೪೭) ಶಾಂತವೇರಿ ಗೋಪಾಲಗೌಡರ ಬಗ್ಗೆ ಹಾಗೂ ಕಾಗೋಡಿನ ಬಗ್ಗೆ ಬರೆಯುತ್ತಾ ‘ಕಾಗೋಡು ಚಳುವಳಿಯನ್ನು ರಾವುಗನ್ನಡಿ ಹಾಕಿ ತೋರಿಸಿ ಅದರ ಬಗ್ಗೆ ಮಿಥ್ಯಗಳನ್ನು ಸೃಷ್ಟಿಸಲಾಗಿದೆ’ ಎಂದು ಆಕ್ಷೇಪಿಸಿದ್ದರು. ಅಲ್ಲದೆ ಕಾಗೋಡು ಚಳುವಳಿಯ ನಂತರದ ಸ್ಥಿತಿಯನ್ನು, ಶಿವಮೊಗ್ಗ ಸೋಷಿಯಲಿಸ್ಟರ ಧೋರಣೆಯನ್ನು ಅವರು ಖಂಡಿಸಿದ್ದಾರೆ. ಆದರೆ ಸ್ವತಃ ಇವರೇ ರೈತ ಕೂಲಿಕಾರ್ಮಿಕರ ಹೋರಾಟದ ನಂತರ ಹೆನ್ನಳ್ಳಿಯನ್ನು ಮರೆತರು. ಆದರೂ ತಮ್ಮ ನೇತೃತ್ವದ ಹೆಬ್ಬಳ್ಳಿ ಹೋರಾಟದ ಇಂಥದ್ದೊಂದು ಅದ್ಭುತ ಫಲದಾಯಿಯಾಗಿ ಪರ್ಯಾವಸನಗೊಂಡಿಲ್ಲ. ಎದ್ದು ಕಾಣುವಂತೆ ನಮ್ಮ ಎಲ್ಲ ಸತ್ಯಾಗ್ರಹಿಗಳ ಮುಂದುಗಡೆಯಲ್ಲಿ ಹರಿಜನ, ಹುಲಸೇರ, ಬೋಯಿಗಳನ್ನು ನಿಲ್ಲಿಸಲು ನಾವು ಮರೆತಿರಲಿಲ್ಲ. ಮೊದಲು ಬಂಧಿತರಾಗುತ್ತಿದ್ದವರೂ ಅವರೇ. ಹತ್ತು ದಿನಗಳ ಸತ್ಯಾಗ್ರಹಕ್ಕೆ ಐನೂರು ಸತ್ಯಾಗ್ರಹವನ್ನು ಪ್ರಾರಂಬಿಸಿ ಹತ್ತನೇ ದಿನಕ್ಕೆ ಸತ್ಯಾಗ್ರಹ ಮುಕ್ತಾಯಗೊಳಿಸಿದ್ದೆವು. ವಿಜಯವನ್ನು ಅಂಗೈಯಲ್ಲಿಟ್ಟುಕೊಂಡು ಮುಕ್ತಾಯಗೊಳಿಸಿದೆವು.’ (ಅದೇ, ಪು.೩೭) ಎಂದು ಅವರು ಹೇಳುತ್ತಾರೆ.

ಆದರೆ ಈ ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿಯೂ ಕೂಡ ಪ್ರತಿ ಜಾಗೀರದಾರ ಕುಟುಂಬಗಳು ೨೦೦ ಎಕರೆ ಭೂಮಿ ಹೊಂದಿದ್ದವು. ಶ್ರೀ ವೆಂಕಟೇಶ್ವರ ಹಾಗು ಪಾಂಡುರಂಗ ದೇವಲಾಯಗಳಿಗೆ ಒಟ್ಟಾಗಿ ೪೫೦ ಎಕರೆ ಭೂಮಿ ಇತ್ತು. ಜಾಗೀರದಾರ ಮನೆತನಕ್ಕೆ ಒಟ್ಟಾರೆಯಾಗಿ ಮರು ಹಂಚಿಕೆಯಾದ ಭೂಮಿಯೇ ಸುಮಾರು ೩ ಸಾವಿರ ಎಕರೆ ಇತ್ತು. (ಈ ಬಗ್ಗೆ ‘೬೪೦ ಡ’ ಎಂಬ ದಾಖಲಾತಿಯಲ್ಲಿ ವಿವರ ಇದೆ) ಈ ಬಗ್ಗೆ ಸಮಾಜವಾದಿಗಳು ಗಮನಹರಿಸಲಿಲ್ಲ. ಅವರಿಗೆ ತಮ್ಮ ತತ್ ಕ್ಷಣದ ಬೇಡಿಕೆಯಾದ ರೈತ ಕೂಲಿಕಾರ್ಮಿಕರಿಗೆ ಭೂಮಿ ಹಂಚಿಕೆ ಹಾಗೂ ಅಧಿಕೃತ ಮಾನ್ಯತಾ ಪತ್ರ ಪಡೆಯುವ ಬಗ್ಗೆ ಮಾತ್ರ ಆಸಕ್ತಿ ಇದ್ದಂತೆ ತೋರುತ್ತದೆ. ಆ ಬಗ್ಗೆ ಸರ್ಕಾರದಿಂದ ಸ್ಪಷ್ಟ ಭರವಸೆ ದೊರಕುತ್ತಿದ್ದ ಹಾಗೆ ಅದನ್ನೇ ನಂಬಿ ಹೋರಾಟವನ್ನು ಹಿಂತೆಗೆದುಕೊಂಡಿದ್ದು ೧೯೭೪ರಲ್ಲಿ ದೇವರಾಜ್ ಅರಸು ಅವರು ಜಾರಿಗೆ ತಂದ ಭೂಸುಧಾರಣಾ ಕಾಯ್ದೆಯಿಂದ ಅಲ್ಲಿವರೆಗೆ ಜಾಗೀರ್ ದಾರ್ ಮನೆತನದವರೇ ಇ ಸುಮಾರು ೩ ಸಾವಿರ ಎಕರೆ ಭೂಮಿಯನ್ನು ಅನುಭೋಗಿಸುತ್ತಿದ್ದರು.

ಸಮಾಜವಾದಿಗಳ ಈ ಹೋರಾಟದಿಂದ ಹೆಚ್ಚಿನ ಲಾಭ ಪಡೆದವರೆಂದರೆ ಮಧ್ಯಮ ವರ್ಗದ ರೈತ ಕುಟುಂಬಗಳು. ಈ ಕುಟುಂಬಗಳು ಜಾಗೀರ್ ದಾರ್ ಭೂಮಿಯಲ್ಲಿ ಗರಿಷ್ಠ ೪೮ ಎಕರೆಯನ್ನು ಸಾಗುವಳಿ ಮಾಡುತ್ತಿದ್ದರು. ಹಾಗಾಗಿ ಆದಾಯವೂ ಹೆಚ್ಚಿತ್ತು. ಹೋರಾಟದ ನಂತರದಲ್ಲಿ ಸರ್ಕಾರವು ಅಧಿಕೃತ ಮಾನ್ಯತಾ ಪತ್ರ ನೀಡುವಾಗ ಅಧಿಕಾರಿಗಳಿಗೆ, ಒಂದಿಷ್ಟು ಹಣ ನೀಡಿ ತ್ವರಿತವಾಗಿ ತಮ್ಮ ಹೆಸರಿಗೆ ಭೂಮಿಯನ್ನು ನೊಂದಾಯಿಸಿಕೊಂಡರು. ಗರಿಷ್ಠ ೪೮ ಎಕರೆ ಹೊಂದಿದ ಸಾಗುವಳಿದಾರರೆಲ್ಲ ೧೯೬೦ರ ದಶಕದಲ್ಲಿಯೇ ತಮ್ಮ ಹೆಸರಿಗೆ ಭೂಮಿ ನೊಂದಾಯಿಸಿಕೊಂಡರು.

ಈಗ ಎತ್ತಿರುವ ಪ್ರಶ್ನೆಗಳು ಹಾಗೂ ಚರ್ಚಿಸಿರಬಹುದಾದ ಮಿತಿಗಳೇನೇ ಇರಲಿ, ಸಮಾಜವಾದಿಗಳು ಕರ್ನಾಟಕದಲ್ಲಿ ಕೈಗೊಂಡಿರಬಹುದಾದ ರೈತ ಭೂಹೋರಾಟಗಳಲ್ಲಿ ‘ಹೆಬ್ಬಳ್ಳಿ ರೈತಕೂಲಿಕಾರರ ಹೋರಾಟಕ್ಕೆ ವಿಶಿಷ್ಟಸ್ಥಾನವಿದೆ. ಸಾಮಾನ್ಯವಾಗಿ ರೈತ ಹೋರಾಟವೊಂದು ಇಷ್ಟೊಂದು ಶಾಂತಿಯುಕವಾಗಿ ಮುಕ್ತಾಯಗೊಂಡಿದ್ದು ಇದೇ ಹೋರಾಟದಲ್ಲಿರಬೇಕು. ಮುಖ್ಯವಾಗಿ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿ ಹೋರಾಟಗಾರರು ಯಶಸ್ವಿಯಾಗಿದ್ದರು. ಸರ್ಕಾರದಿಂದಾಗಲಿ ಪೋಲೀಸ್ ಅಧಿಕಾರಿಗಳಿಂದಾಗಲಿ ಹೋರಾಟಕ್ಕೆ ವಿರೋಧ ವ್ಯಕ್ತವಾಗಿರಲಿಲ್ಲ . ಖುದ್ದು ಜಾಗೀರದಾರ ಮನೆತನದವರು ಹೋರಾಟದ ಕುರಿತು ತಟಸ್ಥರಾಗಿರುವಂತೆ ಮಾಡಲಾಗಿತ್ತು. ಹೋರಾಟದ ಸಂದರ್ಭದಲ್ಲಾಗಲಿ, ಬೇರಾವ ಸನ್ನಿವೇಶದಲ್ಲಾಗಲಿ ಜಾಗೀರ್‍ದಾರರನ್ನು ಕೆಣಕುವ ಪ್ರಯತ್ನವನ್ನು ಯಾರೂ ಮಾಡಿರಲಿಲ್ಲ. ಅಂತಹದ್ದೊಂದು ಶಿಸ್ತುಬದ್ಧವಾದ ರೀತಿಯಲ್ಲಿ ಹೋರಾಟವನ್ನು ಸಂಘಟಿಸಲಾಗಿತ್ತು. ಹೋರಾಟ ಬಹುದಿನಗಳವರೆಗೆ ಮುಂದುವರೆದಿದ್ದರೂ ನಿರಾಸಕ್ತಿ ಹೊಂದದಂತೆ ರೈತ ಕೂಲಿಕಾರ್ಮಿಕರನ್ನು ಸರದಿಯ ಪ್ರಕಾರ ಪ್ರತಿಭಟನೆಗೆ ಕಳುಹಿಸಲಾಗುತ್ತಿತ್ತು. ಇದು ಹೋರಾಟದ ಸಂದರ್ಭದಲ್ಲಿಯೇ ರೈತ ಕೂಲಿಕಾರ್ಮಿಕರ ಕುಟುಂಬ ನಿರ್ವಹಣೆಗೆ ಸಹಾಯಕವಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಹೋರಾಟವು ಅತ್ಯಲ್ಪ ಹಣದಲ್ಲಿಯೇ ಮುಕ್ತಾಯಗೊಂಡಿತ್ತು. ಹೋರಾಟಕ್ಕಾಗಿ ಯಾವುದೇ ಕರಪತ್ರಗಳನ್ನು, ಗೋಡೆಬರಹಗಳನ್ನಾಗಲಿ ಮಾಡಿರಲಿಲ್ಲ. ಕೇವಲ ೮೦ ರೂಪಾಯಿಗಳ ಖರ್ಚಿನಲ್ಲಿ ಹೋರಾಟವನ್ನು ಮುಕ್ತಾಯಗೊಳಿಸಲಾಗಿತ್ತು. ಸುಮಾರು ೧೩ ಸಾವಿರ ಎಕರೆ ಭೂಮಿಯ ಹಂಚಿಕೆಗೆ ಸಂಬಂಧಿಸಿದಂತೆ ಕೈಗೊಂಡ ಹೋರಾಟ ೮೦ ರೂಪಾಯಿಗಳಲ್ಲಿ ಮುಕ್ತಾಯಗೊಂಡಿತೆನ್ನುವುದು ಸಮಾಜವಾದಿ ಮುಖಂಡರ ಸರಳತೆಗೆ ಸಾಕ್ಷಿಯಾಗಿತ್ತು. ಹೆಬ್ಬಳ್ಳಿಯ ರೈತಕೂಲಿಕಾರ್ಮಿಕರ ಹೋರಾಟ ಮುಕ್ತಾಯಗೊಂಡಿರಬಹುದು; ಆದರೆ ನೀಲಗಂಗಯ್ಯ ಪೂಜಾರರ ಹೋರಾಟದ ಜೀವನ ಮುಕ್ತಾಯಗೊಳ್ಳಲಿಲ್ಲ. ಮುಂದೆ ಅವರು ‘ಹುಬ್ಬಳ್ಳಿ ನಿವೇಶನ ರಹಿತ ನಾಗರಿಕರ ಹೋರಾಟ’ ಸಂಘಟಿಸಿ ೩ ಸಾವಿರಕ್ಕಿಂತ ಹೆಚ್ಚು ಬಡವರಿಗೆ ನಿವೇಶನವನ್ನು ಕೊಡಿಸುವಲ್ಲಿ ಯಶಸ್ವಿಯಾದರು.