ಈ ಅಧ್ಯಯನ ವರದಿಯನ್ನು ರೂಪಿಸಲು ನಮ್ಮನ್ನು ಪ್ರೇರೇಪಿಸಿದ ವಿಶ್ವವಿದ್ಯಾಲಯದ ಅಂದಿನ ಕುಲಪತಿಗಳಾಗಿದ್ದ ಡಾ. ಬಿ ಎ ವಿವೇಕ ರೈ ಅವರಿಗೆ ಮತ್ತು ಈ ಅಧ್ಯಯನಕ್ಕೆ ಹಣಕಾಸಿನ ನೆರವು ನೀಡಿದ ಹಿಂದುಳಿದ ವರ್ಗಗಳ ಇಲಾಖೆಯ ಅಂದಿನ ಆಯುಕ್ತರಾಗಿದ್ದ ಮೊನ್ನಪ್ಪನವರಿಗೆ, ಈ ಯೋಜನೆಯ ನೀಲನಕ್ಷೆ ತಯಾರಿಸಿ ಅಧ್ಯಯನಕ್ಕೆ ಅನುವು ಮಾಡಿಕೊಟ್ಟ ಹಿರಿಯರಾದ ಡಾ. ಹಿ ಚಿ ಬೋರಲಿಂಗಯ್ಯನವರಿಗೆ ಮೊದಲು ಕೃತಜ್ಞತೆಗಳು ಸಲ್ಲಬೇಕು.

ಅಧ್ಯಯನಕ್ಕಾಗಿ ಊರೂರು ಸುತ್ತುವಾಗ ನನ್ನ ಜೊತೆ ಅಲೆದಾಡಿ ವಿವರಗಳನ್ನು ಸಂಗ್ರಹಿಸಲು ನನ್ನ ವಿದ್ಯಾರ್ಥಿ ಮಿತ್ರ ಇಸ್ಮಾಯಿಲ್ ಜಬ್ಬೀರ್ ಅಪಾರವಾಗಿ ಶ್ರಮಿಸಿದ್ದಾರೆ. ಕಡೂರಿನ ವಕೀಲರಾದ ಎಂ ಎಸ್ ಹೆಳವರ್, ಬೆಂಗಳೂರಿನ ಶ್ರೀ ಬಸವ ಭೃಂಗೇಶ್ವರ ಸ್ವಾಮೀಜಿ ಅನೇಕ ವಿಷಯಗಳನ್ನು ನನ್ನೊಡನೆ ಚರ್ಚಿಸಿದ್ದಾರೆ. ಬೆಂಗಳೂರಿನ ವಕೀಲರಾದ ಶ್ರೀ ಚಂದ್ರಶೇಖರ್, ರಾಮಸ್ವಾಮಿ ಮತ್ತು ಗೋಕಾಕಿನ ಅಮೃತ ಹೆಳವಿ, ಹೆಳವರ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪನವರು ವಿಶೇಷವಾಗಿ ನೆರವಾಗಿದ್ದಾರೆ. ಪ್ರಶ್ನಾವಳಿಯಲ್ಲಿನ ಅಂಕೆಸಂಖ್ಯೆಗಳನ್ನು ಕೋಷ್ಟಕಗಳಲ್ಲಿ ಹಿಡಿದಿಡಲು ನಮ್ಮ ವಿಭಾಗದ ವಿದ್ಯಾರ್ಥಿಗಳು ನೆರವಾಗಿದ್ದಾರೆ. ದೇವರಾಜ ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಚಂದ್ರಮಾ ಎಸ್ ಕಣಗಲಿ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಶ್ರೀ ಗಣಪತಿಯವರು ಉಪಯುಕ್ತ ಆಕರ ಸಾಮಗ್ರಿಗಳನ್ನು ನೀಡಿದ್ದಾರೆ. ಜೊತೆಗೆ ಊರೂರು ಅಲೆದಾಡಲು ಹೋದಾಗೆಲ್ಲ ತಮ್ಮ ಅಪಾರ ತಿಳುವಳಿಕೆಯನ್ನು ನನ್ನ ಜೊತೆ ಹಂಚಿಕೊಂಡ ಹೆಳವ ಸಮುದಾಯದ ಎಲ್ಲ ಬಂಧುಗಳಿಗೆ ನನ್ನ ಕೃತಜ್ಞತಾಪೂರ್ವಕ ನಮಸ್ಕಾರಗಳು.

ಈ ವರದಿಯು ೨೦೦೬ರಲ್ಲಿ ಸಿದ್ಧಗೊಂಡು ದೇವರಾಜು ಅರಸು ಸಂಶೋಧನಾ ಸಂಸ್ಥೆಗೆ ಸಲ್ಲಿಸಲ್ಪಟ್ಟಿತ್ತು ಕೇವಲ ಆರು ತಿಂಗಳ ಅವಧಿಯಲ್ಲಿ ಸಿದ್ಧಗೊಂಡ ವರದಿ ಇದು. ಕೆಲವು ಅಕ್ಷರ ದೋಷಗಳನ್ನು ಸರಿಪಡಿಸಿರುವುದನ್ನು ಬಿಟ್ಟರೆ ವರದಿ ಯಥಾವತ್ತು ಹಾಗೆಯೇ ಪ್ರಕಟವಾಗುತ್ತಿದೆ. ಇದನ್ನು ಪ್ರಕಟಿಸಲು ಮುಂದಾದ ನಮ್ಮ ಪ್ರೀತಿಯ ಕುಲಪತಿಗಳಾದ ಡಾ, ಎ ಮುರಿಗೆಪ್ಪನವರಿಗೆ ಮತ್ತು ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿಯವರಿಗೆ ಧನ್ಯವಾದಗಳು. ಹಾಗೆಯೇ ಪುಟಗಳನ್ನು ವಿನ್ಯಾಸಗೊಳಿಸಲು ಸಹಾಯ ಮಾಡಿದ ಸುಜ್ಞಾನಮೂರ್ತಿಯವರಿಗೆ ಮತ್ತು ಪ್ರಸಾರಾಂಗದ ಆಡಳಿತವರ್ಗಕ್ಕೆ ವಂದನೆಗಳು.

ಎ. ಎಸ್. ಪ್ರಭಾಕರ