ಪೀಠಿಕೆ

ಇಂಡಿಯಾದ ಶ್ರೇಣಿಕೃತ ವ್ಯವಸ್ಥೆಯಲ್ಲಿ ಹಲವು ಬಗೆಯ ಜಾತಿ ಸಮುದಾಯಗಳು ಕಂಡುಬರುತ್ತವೆ. ಸಾವಿರಾರು ವರ್ಷಗಳ ಕಾಲ ಪೋಷಿಸಿಕೊಂಡು ಬಂದಿರುವ ಈ ವಿಷಯ ಸಾಮಾಜಿಕ ವ್ಯವಸ್ಥೆಯಲ್ಲಿ ವಿಕ್ಷಿಪ್ತ ಆಳ್ವಿಕೆ ಮತ್ತು ಅಸಹಾಯಕ ಶರಣಾಗತಿಗಳು ಅನೂಚಾನವಾಗಿ ನಡೆದು ಬಂದಿದೆ. ಅಲ್ಪಸಂಖ್ಯಾತ ಆಳುವ ವರ್ಗ ಬಹುಸಂಖ್ಯಾತ ಶ್ರಮಿಕರನ್ನು ಹೀನಾಯವಾಗಿ ಜಾತಿ ಶ್ರೇಣಿಗಳಲ್ಲಿ ಜೋಡಿಸಿಕೊಂಡು ಬಂದಿದೆ. ಮೇಲು ನೋಟಕ್ಕೆ ಇದು ಕೇವಲ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಬಹುಸಂಖ್ಯಾತ ಶ್ರಮಿಕರನ್ನು ವಂಚಿಸುವ ಹುನ್ನಾರದಂತೆ ಕಂಡರೂ ಸಹ, ಈ ಹುನ್ನಾರದ ಹಿಂದೆ ಶ್ರಮಿಕರ ಉತ್ಪಾದನೆಯ ಮೇಲೆ ಮೈಲ್ವರ್ಗಗಳು ನಿರ್ಣಾಯಕ ಹಿಡಿತ ಸಾಧಿಸುವ ರಾಜಕಾರಣ ವ್ಯವಸ್ಥಿತವಾಗಿ ಕೆಲಸ ಮಾಡುತ್ತ ಬಂದಿದೆ. ಮನುಷ್ಯನ ಬದುಕಿಗೆ ರೂಪ ಕೊಡುವ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ತಲೆ ಎತ್ತಿ ನಡೆಯುವ ಆತ್ಮ ಪ್ರತ್ಯಯವನ್ನು ಸಂಚಯಿಸುವ ಆರ್ಥಿಕ ಸ್ವಾವಂಬನೆಯನ್ನೇ ಈ ದೇಶದ ಆಳುವ ವರ್ಗ ನಾಶಮಾಡುತ್ತ ಬಂದಿದೆ. ಬಹುಸಂಖ್ಯಾತ ಶ್ರಮಿಕರು ಇನ್ನೂ ಆರ್ಥಿಕ ರಂಗದಲ್ಲಿ ಶತಮಾನಗಳಷ್ಟು ಹಿನ್ನೆಡೆ ಅನುಭವಿಸಿರುವುದಕ್ಕೆ ಈ ದೇಶದಲ್ಲಿ ನಿರಂತರವಾಗಿ ಸಾಕಿಕೊಂಡು ಬಂದಿರುವ ಅಮಾನವೀಯ ಅಸಮಾನತೆಯೇ ಕಾರಣ. ವೃತ್ತಿಗನುಗುಣವಾಗಿ ಜಾತಿಗಳನ್ನು ವಿಂಗಡಿಸಿದರೂ ಸಹ, ಉತ್ಪಾದನೆಯ ಅತ್ಯಂತಿಕ ಫಲಗಳನ್ನು ಆಳುವ ವರ್ಗವೇ ಅನುಭವಿಸುತ್ತಾ ಬಂದಿದೆ. ಆದರೆ ಕಸಬುಗಳನ್ನಾಧರಿಸಿ ರೂಪುಗೊಂಡ ಸಾಮಾಜಿಕ ಅಸಮಾನತೆ ಮತ್ರ ಸಮುದಾಯಗಳನ್ನು ನಿರಂತರವಾಗಿ ಕಾಡುತ್ತಲೇ ಬಂದಿದೆ. ಇದರ ಜೊತೆಗೆ ಉತ್ಪಾದನಾ ಕ್ಷೇತ್ರದಲ್ಲಿ ಯಾವ ಆಯ್ಕೆಗಳೂ ಇಲ್ಲದೆ ಆತ್ಮ ಪ್ರತ್ಯಯವಿಲ್ಲದ ಅಸಹಾಯಕ ಸ್ಥಿತಿಯಲ್ಲಿ ಬಹುಸಂಖ್ಯಾತ ಶ್ರಮಿಕರು ಈ ದೇಶದ ಚರಿತ್ರೆಯುದ್ದಕ್ಕೂ ಬದುಕಿ ಬಂದಿದ್ದಾರೆ.

ಒಂದು ದೇಶದ ಚರಿತ್ರೆಯ ನಿರ್ಮಾಣದಲ್ಲಿ ಆ ದೇಶದ ಉತ್ಪಾದನಾ ಶಕ್ತಿಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಒಂದು ದೇಶದ ಸಮಾಜ, ಸಂಸ್ಕೃತಿ ಮತ್ತು ಐಕ್ಯತೆಗಳು ಸಾಧಿತವಾಗುವುದು ಆ ದೇಶದ ಶ್ರಮಿಕರಿಂದಲೇ, ಆದರೆ ಭಾರತವೆಂಬ ದೇಶದ ಚರಿತ್ರೆಯುದ್ದಕ್ಕೂ ನಡೆದ ಅನೇಕ ಯುದ್ಧಗಳಲ್ಲಿ ಸಂಘರ್ಷಗಳಲ್ಲಿ ತಮ್ಮನ್ನು ಅರ್ಪಿಸಿಕೊಂಡು, ಈ ದೇಶದ ಸಂಸ್ಕೃತಿ ಸೌಧದ ಅಡಿಗಲ್ಲುಗಳಾಗಿ ಬದುಕಿಗೆ ಹಂಬಲಿಸುತ್ತಿವೆ. ಈ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸ, ‘ಹೆಮ್ಮೆ’ಯಿಂದ ಹೇಳಿಕೊಳ್ಳಲಾಗುವ ಸಾಸ್ಕೃತಿಕ ಪರಂಪರೆ ಇದ್ದರೂ ಇವುಗಳನ್ನು ನಿರ್ಮಾಣ ಮಾಡಿದ ಸಮುದಾಯಗಳು ಇಂದಿಗೂ ಒಪ್ಪೊತ್ತಿನ ಊಟಕ್ಕೆ ದಿಕ್ಕಿಲ್ಲದೆ ದಿನ ಕಳೆಯುತ್ತಿವೆ. ಕಾರಣ ಆರ್ಥಿಕ ಮತ್ತು ಉತ್ಪಾದನಾ ಕ್ಷೇತ್ರದ ಮೇಲೆ ಆಳುವ ವರ್ಗಗಗಳು ಸಾಧಿಸಿದ ಹಿಡಿತವು ಜಾತಿ ವ್ಯವಸ್ಥೆಯನ್ನು ಲೌಕಿಕವಾಗಿ ಪೋಷಿಸಿಕೊಂಡು ಬಂದಿದೆ. ಜಾತಿ ವ್ಯವಸ್ಥೆಯ ಸಂರಕ್ಷಣೆಯೆಂದರೆ, ಅತ್ಯಂತಿಕವಾಗಿ ಆಳುವ ವರ್ಗಗಳು ಉತ್ಪಾದನಾ ಕ್ಷೇತ್ರದ ಮೇಲೆ ಸಾಧಿಸುವ ನಿರ್ಣಾಯಕ ಹಿಡಿತವೆಂದೇ ಅರ್ಥ. ಅಲೌಕಿಕ ಕಾರಣಗಳು, ಹುಟ್ಟಿನಿಂದಾಗಿಯೇ ತನ್ನ ಬದುಕಿನ ಕಾಲಾವಧಿಯ ಉದ್ದಕ್ಕೂ ಸಾಮಾಜಿಕ ಮತ್ತು ಆರ್ಥಿಕ ಅಧಿಕಾರಿಗಳಿಲ್ಲದೆ ತುಟಿ ಕಚ್ಚಿ ಬದುಕಿ ಇಲ್ಲವಾಗುವ ಅನೇಕ ಜಾತಿ ಸಮುದಾಯಗಳು ಇಂದೂ ಇಂಡಿಯಾದಲ್ಲಿ ಜೀವಂತವಾಗಿವೆ. ಸಾವಿರಾರು ವರ್ಷಗಳ ಕಾಲ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದ ಯಜಮಾನರಾಗಿ ಈ ದೇಶದ ವಿಷಮತೆಯನ್ನು ಸಾಂಗೋಪಾಂಗವಾಗಿ ರಕ್ಷಿಸಿಕೊಂಡು ಬಂದವರು ಇನ್ನೂ ಆಳುವ ವರ್ಗವಾಗಿದ್ದುಕೊಂಡೇ ಭ್ರಮೆಗಳನ್ನು ಹಂಚುತ್ತಿದ್ದಾರೆ. ಈ ಭೂಮಿಯ ಯಾವುದೋ ನಿರ್ವಾತದಲ್ಲಿರುವ ಗ್ರಹಿವೊಂದರಲ್ಲಿ ಜೀವಸಂಕುಲವಿದೆಯೋ ಇಲ್ಲವೋ ಎಂದು ಶೋಧಿಸಲು ಮನುಷ್ಯ ಆಕಾಶವನ್ನು ಗುರಿ ಮಾಡಿ ಹಾರುತ್ತಿದ್ದರೆ, ಇಂಡಿಯಾದ ದನಿ ಇಲ್ಲದ ಸಮುದಾಯಗಳು ಈ ಹೊತ್ತಿನ ಊಟಕ್ಕೆ ಬೀದಿಗಳಲ್ಲಿ ಬೆವರಾಗಿ, ಪರಂಪರೆಯ ನಿಕೃಷ್ಠ ಕಸಬುಗಳನ್ನೆ ಅವಲಂಬಿಸಿ ಬದುಕುತ್ತಿವೆ. ಈ ಸಮುದಾಯಗಳಿಗೆ ವರ್ತಮಾನದಲ್ಲಿ ವೃತ್ತಿಗಳನ್ನು ಬದಲಿಸಿಕೊಳ್ಳುವಷ್ಟು ಆತ್ಮ ವಿಶ್ವಾಸವಿಲ್ಲ. “ಜಾತಿ ಪದ್ಧತಿಯಿಂದಾದ ಈ ವೃತ್ತಿ ವಿಭಾಗ ಅಥವಾ ಕೆಲಸಗಳ ನೆಮಕವು ಖಂಡಿತವಾಗಿ ವಿನಾಶಕಾರಿಯಾಗಿದೆ. ಉದ್ಯಮ ಎಂದೂ ನಿಂತ ನೀರಲ್ಲ. ಅದರಲ್ಲಿ ತೀವ್ರವಾದ ಹಾಗೂ ಆಕಸ್ಮಿಕವಾದ ಬದಲಾವಣೆಗಳಾಗುತ್ತಲೇ ಇರುತ್ತವೆ. ಹೀಗೆ ಬದಲಾವಣೆಗಳಾಗುತ್ತಿರುವಗ ವ್ಯಕ್ತಿಗೆ ತಮ್ಮ ವೃತ್ತಿಯನ್ನು ಬದಲಾಯಿಸುವ ಸ್ವಾತಂತ್ರ್ಯ ಅವಶ್ಯಕವಾಗುತ್ತದೆ. ಬದಲಾಗುವ ಪರಿಸ್ಥಿತಿಗೆ ಹೊಂದಿಕೊಳ್ಳುವ ಸ್ವಾತಂತ್ರ್ಯವಿಲ್ಲದಿದ್ದರೆ ಅವನಿಗೆ ಜೀವನೋಪಾಯವೇ ಅಸಾಧ್ಯವಾಗುವುದು. ಜಾತಿ ಪದ್ಧತಿಯಲ್ಲಿ ಇಂತಹ ಸ್ವಾತಂತ್ರ್ಯವಿಲ್ಲ. ತನ್ನ ಜಾತಿಗೆ ಹೊಸದಾದ ವೃತ್ತಿಯನ್ನು ಕೈಕೊಳ್ಳುವ ಬದಲಾಗಿ, ಉಪವಾಸ ಬೀಳುವದೇ ಹಿಂದೂವಿನ ಗತಿಯಾಗಿದ್ದರೆ, ಅದಕ್ಕೆ ಮೂಲಕಾರಣ ಜಾತಿಯೇ ಆಗಿದೆ” (ಡಾ. ಅಂಬೇಡ್ಕರ್, ಸಂ. ೧, ಪು ೬೮, ೧೯೯೦) ಎನ್ನುತ್ತಾರೆ ಅಂಬೇಡ್ಕರ್. ಅಂದರೆ ಜಾತಿ ವ್ಯವಸ್ಥೆಯ ಆಚರಣೆಯು ಅಂತಿಮವಾಗಿ ಒಂದು ವ್ಯವಸ್ಥಿತ ಆರ್ಥಿಕ ವಂಚನೆಯೇ ಆಗಿದೆ. ಯಾವುದೇ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದ ಆತ್ಮ ಪ್ರತ್ಯಯವನ್ನು ನಾಶ ಮಾಡಬೇಕೆಂದರೆ, ಮೊದಲು ಆ ಸಮುದಾಯದ ಆರ್ಥಿಕ ಸ್ವಾವಲಂಬನೆಯನ್ನು ನಾಶ ಮಾಡಲಾಗುತ್ತದೆ. ಇಂಡಿಯಾದ ಜಾತಿ ಶ್ರೇಣೀಕರಣ ಶತಮಾನಗಳಿಂದ ಈ ಕೆಲಸವನ್ನು ಶ್ರದ್ಧೆಯಿಂದ ಮಾಡಿಕೊಂಡು ಬಂದಿದೆ. ಈ ಕಾರಣಕ್ಕಾಗಿ ಜಗತ್ತಿನ ಎಲ್ಲ ಬಗೆಯ ಅಸಮಾನತೆಗಳಿಗಿಂತ, ಶೋಷನೆಗಳಿಗಿಂತ ಇಂಡಿಯಾದ ಸಾಮಾಜಿಕಾರ್ಥಿಕ ರಂಗದ ವಿಷಮತೆ ಮತ್ತು ಶೋಷಣೆಯ ಆಯಾಮಗಳು ಅತ್ಯಂತ ಕ್ರೂರವಾದವುಗಳು.

ಜಾಗತೀಕರಣದ ಈ ಹೊತ್ತು ಜಗತ್ತಿನ ಎಲ್ಲ ಸಮುದಾಯಗಳು ಆರ್ಥಿಕ ಸ್ವಾಲಂಬನೆಯ ಮೂಲಕ ತಮ್ಮ ಬದುಕಿಗೆ ಆತ್ಮಪ್ರತ್ಯಯವನ್ನು ತಂದು ಕೊಳ್ಳುವತ್ತ ಹೆಜ್ಜೆ ಹಾಕುತ್ತಿವೆ ಎಂದು ನಂಬಲಾಗಿದೆ. ಮನುಷ್ಯ ದೇವರನ್ನೇ ನಿಬ್ವೆರಗಾಗಿಸುವ ಸಾಧನೆಗಳನ್ನು ಮಾಡುತ್ತ ಅಚ್ಚರಿಗಳನ್ನು ಸೃಷ್ಟಿಸುತ್ತಿದ್ದಾನೆ. ಔದ್ಯೋಗಿಕ ರಂಗದಲ್ಲಿ ರೂಪುಗೊಂಡ ಉದ್ಯೋಗವಕಾಶಗಳನ್ನು ಪಡೆಯುವತ್ತ ಸಮುದಾಯಗಳು ವೇಗವಾಗಿ ಹೆಜ್ಜೆ ಇರಿಸುತ್ತಿವೆ. ಸಮುದಾಯಗಳ ಪರಂಪರೆಯ ಕುರುಹುಗಳು ಇಲ್ಲವಾಗುತ್ತಾ ಹೋಗುತ್ತಿವೆ. ದಿನ ಬೆಳಗಾದರೆ ಈ ಭೂಮಿಯ ಮೇಲೆ ಮನುಷ್ಯ ಅದ್ಭುತಗಳನ್ನು ಎತ್ತಿ ನಿಲ್ಲಿಸುತ್ತಿದ್ದಾನೆ. ಸುಖದ ಆಯಾಮಗಳು ಮನುಷ್ಯನ ಬದುಕನ್ನು ಅವರಿಸಿಕೊಳ್ಳುತ್ತಿವೆ. ಆದರೆ ಇಂಡಿಯಾದಲ್ಲಿ ಸಾವಿರ ವರ್ಷಗಳ ಹಿಂದಿನ ಸಮಾಜ ಇನ್ನೂ ಜೀವಂತವಾಗಿರುವ ವೈರುಧ್ಯ ಕಣ್ಣಿಗೆ ಎದ್ದು ಕಾಣುತ್ತಿದೆ. ಒಂದೆಡೆ ಜಗತ್ತಿನ ಅನಂತ ಸುಖಗಳನ್ನು ಅನುಭವಿಸುವ ಕಾರ್ಪೋರೇಟ್ ಜಗತ್ತು ಬದುಕುತ್ತಿದ್ದರೆ, ಅದರ ಕೂಗಳತೆಯ ದೂರದಲ್ಲಿ ಗವಿಗಳಲ್ಲಿ ವಾಸಿಸುತ್ತಾ ಗಡ್ಡೆಗೆಣಸುಗಳನ್ನು ತಿನ್ನುತ್ತಾ ಬದುಕುತ್ತಿರುವ ಆದಿವಾಸಿ ಸಮುದಾಯಗಳು ಅಸ್ತಿತ್ವದಲ್ಲಿವೆ. ಇದು ದೇಶವೊಂದರ ಸಮಾಜದ ಅಮಾನವೀಯ ಮತ್ತು ಅನೈಸರ್ಗಿಕ ಬೆಳವಣಿಗೆ. ಇದು ಇಂಡಿಯಾದಂತಹ ಪಾರಂಪರಿಕ ಸಮಾಜದಲ್ಲಿ ಸಹಜವಾಗಿಯೇ ಮೈದಾಲಿಬಿಡುವ ವೈರುಧ್ಯವೂ ಹೌದು.

ಇಂದಿಗೂ ಇಂಡಿಯಾದ ದುಡಿದ ವರ್ಗಗಳಿಗೆ ಆರ್ಥಿಕ ಸ್ವಾಲಂಬನೆ ಇಲ್ಲ. ಇಲ್ಲಿನ ಕೆಲಜಾತಿಗಳು ತಮ್ಮ ಪಾರಂಪರಿಕ ವೃತ್ತಿಗಳಲ್ಲಿಯೇ ಬದುಕುವ ಅನಿವಾರ್ಯತೆಯನ್ನು ಅನುಭವಿಸುತ್ತಿವೆ. ಅದರಲ್ಲೂ ಪಾರಂಪರಿಕ ವೃತ್ತಿಗಳಲ್ಲಿ ಬುದುಕುತ್ತಿರುವುದು ಹೆಚ್ಚಾಗಿ ಈ ದೇಶದ ಕೆಳಜಾತಿಗಳು. ಅದರಲ್ಲೂ ಅಲೆಮಾರಿಗಳು ಮತ್ತು ಅರೆಅಲೆಮಾರಿಗಳೂ ಹೆಚ್ಚಾಗಿ ರೂಢಿಗತ ಅರ್ಥ ವ್ಯವಸ್ಥೆಯನ್ನೇ ನೆಚ್ಚಿಕೊಂಡು ಇನ್ನೂ ತಮ್ಮ ಪಾರಂಪರಿಕ ಕಸಬುಗಳನ್ನು ಬಿಟ್ಟುಕೊಡಲಗದ ಸ್ಥಿತಿಯಲ್ಲಿ ಈ ಸಮುದಾಯಗಳಿವೆ. ಇಂತಹ ಸಮುದಾಯಗಳಲ್ಲಿ ಹೆಳವ ಸಮುದಾಯವೂ ಒಂದು.

ಈ ಸಮಾಜದ ಪರಿಚಯವಿರುವ ಎಲ್ಲರಿಗೂ ಹೆಳವರೆಂದಾಕ್ಷಣ ಕೆಲವು ಸ್ಪಷ್ಟ ಚಿತ್ರಗಳು ಕಣ್ಮುಂದೆ ಬರುತ್ತವೆ. ಎತ್ತಿನ ಮೇಲೆ ಚಿಪ್ಪೋಡುಗಳನ್ನು ಹಿಡಿದುಕೊಂಡು ತಮ್ಮ ಒಕ್ಕಲು ಮನೆಗಳಿಗೆ ಅಲೆದು ಅವರ ವಂಶಾವಳಿ ಹೇಳಿ ತಮ್ಮ ವರ್ಷದ ಪಾಲನ್ನು (ಭಿಕ್ಷೆ) ಅವರಿಂದ ಪಡೆಯುವ ಒಂದು ವಿಶಿಷ್ಟ ಸಮುದಾಯವಿದು. ಆಧುನಿಕ ಪೂರ್ವ ಕರ್ನಾಟಕದ ಸಮಾಜದಲ್ಲಿ ಹೆಳವರಿಗೆ ತಮ್ಮ ಒಕ್ಕಲು ಮನೆಗಳ ಉತ್ಪಾದನೆಯಲ್ಲಿ ಒಂದು ನಿಶ್ಚಿತ ಪಾರಂಪರಿಕ ವಾರ್ಷಿಕ ಪಾಲು ಇರುತ್ತಿತ್ತು. ಜೊತೆಗೆ ಸಾಮಾಜಿಕ ಗೌರವವೂ ಸಾಂದರ್ಭಿಕವಾಗಿ ಲಭ್ಯವಾಗುತ್ತಿತ್ತು. ಆದರೆ ಇಂದು ಹೆಳವರಿಗೆ ಅಂತಹ ಅವಕಾಶಗಳಿಲ್ಲ. ಅವರೇ ಹೇಳುವಂತೆ ಇಂದು ಹೆಳವರಿಗೆ ನಿಶ್ಚಿತ ಉತ್ಪಾದನೆಯೂ ಇಲ್ಲ ಸಾಮಾಜಿಕ ಗೌರವವೂ ಇಲದಂತಾಗಿದೆ. ವರ್ತಮಾನದಲ್ಲಿ ಹೆಳವರೆಲ್ಲರೂ ಪಾರಂಪರಿಕ ವೃತ್ತಿಯನ್ನು ಅವಲಂಬಿಸಿಲ್ಲ. ಹಲವರಿಗೆ ತಮ್ಮ ಪಾರಂಪರಿಕ ವೃತ್ತಿಯಲ್ಲಿ ಮುಂದುವರೆಯುವ ಮನಸ್ಸಿಲ್ಲ. ಈಗಾಗಲೇ ಕೆಲವರು ಆಧುನಿಕ ಶಿಕ್ಷಣದಿಂದಾಗಿ ನೌಕರಿ ಪಡೆದು ತಮ್ಮ ಸಮುದಾಯದ ಪರಂಪರೆಯಿಂದ ‘ಹೊರಗಿನವರಾಗಿ’ ಬದುಕುತ್ತಿದ್ದಾರೆ. ಪರಂಪರೆಯ ವೃತ್ತಿಯಲ್ಲಿಯೇ ಬದುಕುತ್ತಿರುವ ಗುಂಪು ಮಾತ್ರ ಅಲೆಮಾರಿಯಾಗಿಯೇ ಬದುಕುತ್ತಿದೆ. ಈ ಅಲೆಮಾರಿ ಗುಂಪಿಗೆ ತಮಗಿಂತ ಭಿನ್ನವಾದ ವೃತ್ತಿಗಳಲ್ಲಿ ಬದುಕುತ್ತಿರುವ ತಮ್ಮವರೇ ‘ಹೊರಗಿನವರಾಗಿ’ ಕಾಣುತ್ತಾರೆ. ಇವರು ತಮ್ಮ ವೃತ್ತಿಗೆ ಸಂಬಂಧಿಸಿದಂತೆ ತಮ್ಮ ಬಂಧುಗಳನ್ನೇ ಅನುಮಾನಿಸುತ್ತಾರೆ. ಇನ್ನು ‘ಹೊರಗಿನವರಿಗೆ’ ಈ ಅಲೆಮಾರಿಗಳ ಬದುಕಲ್ಲಿ ಪ್ರವೇಶವಿಲ್ಲ. ಹಾಗೊಂದು ವೇಳೆ ಪ್ರವೇಶ ಸಿಕ್ಕರೂ ಅವರಿಂದ ಯಾವ ಮಾಹಿತಿಯನ್ನೂ ಪಡೆಯಲು ಸಾಧ್ಯವಿಲ್ಲ. ಇಂದು ಹೆಳವರಲ್ಲಿ ಮೂರು ಗುಂಪುಗಳು ಕಂಡುಬರುತ್ತವೆ. ಆ ಗುಂಪುಗಳು ಈ ಕೆಳಗಿನಂತಿವೆ.

೧. ಪಾರಂಪರಿಕ ವೃತ್ತಿಯಲ್ಲಿಯೇ ಮುಂದುವರೆದು ಅಲೆಮಾರಿಗಳಾಗಿ ಬದುಕುತ್ತಿರುವವರು.

೨. ಪಾರಂಪರಿಕ ವೃತ್ತಿಯಲ್ಲಿ ಗೌರವವಿಟ್ಟುಕೊಂಡೂ ಸಾಮಾಜಿಕ ಸ್ಥಾನಮಾನಗಳನ್ನು ಉನ್ನತೀಕರಿಸಿಕೊಳ್ಳಲು ಭಿನ್ನ ವೃತ್ತಿಗಳನ್ನು ಅವಲಂಬಿಸಿರುವವರು.

೩. ಪಾರಂಪರಿಕ ವೃತ್ತಿಯಲ್ಲಿ ಯಾವ ಗೌರವವೂ ಇಲ್ಲದೆ ಆಧುನಿಕ ಶಿಕ್ಷಣ ಪಡೆದು ಸರಕಾರಿ ಉದ್ಯೋಗದಲ್ಲಿರುವವರು.

ಪ್ರಸ್ತುತ ಅಧ್ಯಯನವು ಹೆಳವರ ಸಾಮಾಜಿಕ ಆರ್ಥಿಕ ಸ್ಥಿತಿಗಳನ್ನು ವಿವರಿಸಿಕೊಳ್ಳುವ ಒಂದು ಪ್ರಯತ್ನವಾಗಿದೆ. ಕರ್ನಾಟಕದಾದ್ಯಂತ ಬದುಕುತ್ತಿರುವ ಹೆಳವರನ್ನು ಇಲ್ಲಿ ಅಧ್ಯಯನಕ್ಕೆ ಒಳಪಡಿಸಲಾಗಿದೆ.

೨. ಯೋಜನೆಯ ಗುರಿಗಳು

ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೇಗಳಲ್ಲಿ ಇಂದು ಹೆಳವರು ವಾಸಿಸುತ್ತಿದ್ದಾರೆ. ಆಧುನಿಕವಾಗಿ ಹೆಳವರಲ್ಲಿ ಅನೇಕ ವೃತ್ತಿಗಳನ್ನು ಅವಲಂಬಿಸಿರುವವರಿದ್ದಾರೆ. ಪ್ರಸ್ತುತ ಅಧ್ಯಯನವು ಹೆಳವ ಸಮುದಾಯದ ಚಾರಿತ್ರಿಕ ಬೆಳವಣಿಗೆ ಮತತು ವರ್ತಮಾನದ ಸ್ಥಿತಿಗತಿಗಳನ್ನು ವಿವರಿಸಲು ಪ್ರಯತ್ನಿಸುತ್ತದೆ. ಪ್ರಸ್ತುತ ಅಧ್ಯಯನದ ಉದ್ದೇಶಗಳು ಈ ಕೆಳಗಿನಂತಿವೆ.

೧. ಹೆಳವ ಸಮುದಾಯದ ಚಾರಿತ್ರಿಕ ಬೆಳವಣಿಗೆಯನ್ನು ವಿವರಿಸಿಕೊಳ್ಳುವುದು.

೨. ಹೆಳವ ಸಮುದಾಯದ ಸಾಮಾಜಿಕ ಸ್ಥಿತಿಗತಿಗಳನ್ನು ವಿಶ್ಲೇಷಿಸುವುದು.

೩. ಹೆಳವ ಸಮುದಾಯದ ಆರ್ಥಿಕ ಬದುಕಿನ ರೂಪಾಂತರಗಳನ್ನು ಕಂಡುಕೊಳ್ಳುವುದು.

೪. ಹೆಳವ ಸಮುದಾಯದ ವರ್ತಮಾನದ ಸಾಮಾಜಿಕಾರ್ಥಿಕ ಸ್ಥಿತಿಗತಿಗಳನ್ನು ವಿವರಿಸಿಕೊಳ್ಳುವುದು.

ಅಧ್ಯಯನ ವಿಧಾನ

ಮುಖ್ಯವಾಗಿ ಇದು ಕ್ಷೇತ್ರಕಾರ್ಯಧಾರಿತ ಅಧ್ಯಯನವಾಗಿದೆ. ಈಗಾಗಲೇ ಈ ಸಮುದಾಯದ ಮೇಲೆ ನಡೆದ ಅಧ್ಯಯನಗಳನ್ನು ಗಮನಿಸಿ, ಅದರ ಹಿನ್ನೆಲೆಯಲ್ಲಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿರುವ ಈ ಸಮುದಾಯದ ವರ್ತಮಾನದ ಸ್ಥಿತಿಗತಿಗಳನ್ನು ಅಧ್ಯಯನ ಮಾಡುವ ಸಲುವಾಗಿ ಈ ಕೆಳಗಿನ ವಿಧಾನಗಳನ್ನು ಅವಲಂಬಿಸಿದೆ.

೧. ಚಾರಿತ್ರಿಕ ವಿಧಾನ

ಪ್ರಸ್ತುತ ಅಧ್ಯಯನದಲ್ಲಿ ಹೆಳವ ಸಮುದಾಯದ ಚಾರಿತ್ರಿಕ ಬೆಳವಣಿಗೆಯನ್ನು ಅಧ್ಯಯನಕ್ಕೊಳಪಡಿಸಲಾಗಿದೆ. ಹೆಳವ ಸಮುದಾಯವು ಇಂಡಿಯಾದ ಪಾರಂಪರಿಕ ಸಮಾಜದಲ್ಲಿ ಬೆಳೆದು ಬಂದ ಬಗೆಯನ್ನು ವಿವರಿಸಿಕೊಳ್ಳಲು ಪ್ರಯತ್ನಿಸಲಾಗಿದೆ. ಜೊತೆಗೆ ಬೇರೆ ಬೇರೆ ಸಾಹಿತ್ಯ ಕೃತಿಗಳಲ್ಲಿ ಹೆಳವರ ಕುರಿತು ಇರುವ ಉಲ್ಲೇಖಗಳನ್ನು ಬಳಸಿಕೊಳ್ಳಲಾಗಿದೆ. ಏಕೆಂದರೆ ಪಾರಂಪರಿಕ ಸಮಾಜದಲ್ಲಿ ಬದುಕುವ ಸಮುದಾಯಗಳ ವರ್ತಮಾನದ ಬದುಕಿನ ಗುಟ್ಟುಗಳು ಬಹುತೇಕ ಚರಿತ್ರೆಯಲ್ಲಿ ಅಡಗಿರುತ್ತವೆ. ಈ ಕಾರಣದಿಂದಾಗಿ ಚಾರಿತ್ರಿಕ ಭೌತವಾದದ ಹಿನ್ನೆಲೆಯಲ್ಲಿ ಹೆಳಲು ಸಮುದಾಯದ ಚಾರಿತ್ರಿಕ ರೂಪಾಂತರಗಳನ್ನು ಅಧ್ಯಯನಕೊಳ್ಳಪಡಿಸಲು ಪ್ರಯತ್ನಿಸಲಾಗಿದೆ.

೨. ಪ್ರಶ್ನಾವಳಿ ವಿಧಾನ

ಹೆಳವ ಸಮುದಾಯದ ವರ್ತಮಾನದ ಸ್ಥಿತಿಗತಿಗಳನ್ನು ಕಂಡುಕೊಳ್ಳುವ ಸಲುವಾಗಿ ಕೆಲವು ಮಾದರಿಗಳನ್ನು ಆಯ್ಕೆ ಮಾಡಿಕೊಂಡು ಸಾಮಾಜಿಕಾರ್ಥಿಕ ಸಂಗತಿಗಳನ್ನು ಅಂಕಿ ಸಂಖ್ಯೆಗಳ ಮೂಲಕ ಕ್ರೋಢೀಕರಿಸಲು ಪ್ರಯತ್ನಿಸಲಾಗಿದೆ. ಅದಕ್ಕಾಗಿ ಒಂದು ನಿಶ್ಚಿತ ಪ್ರಶ್ನಾವಳಿಯನ್ನು ರೂಪಿಸಿಕೊಳ್ಳಲಾಗಿದೆ. ಸದರಿ ಪ್ರಶ್ನಾವಳಿಯು ಆಯ್ದುಕೊಂಡ ಕುಟುಂಬದ ಸಾಮಾನ್ಯ ಮಾಹಿತಿಯನ್ನು ಕಲೆ ಹಾಕುವ ಸಲುವಾಗಿ ರೂಪಿಸಲ್ಪಟ್ಟಿದೆ. ಕುಟುಂಬವೊಂದರ ಸಮಗ್ರ ಮಾಹಿತಿಯನ್ನು ಅಂಕೆ ಸಂಖ್ಯೆಗಳಲ್ಲಿಯೂ ಈ ಪ್ರಶ್ನಾವಳಿಯು ದಾಖಲಿಸುತ್ತದೆ.

೩. ಸಂದರ್ಶನ ವಿಧಾನ

ಕರ್ನಾಟಕದಾದ್ಯಂತ ಇರುವ ಹೆಳವಸಮುದಾಯದ ವಿವಿಧ ಗುಂಪುಗಳ ಆಯ್ದ ವ್ಯಕ್ತಿಗಳನ್ನು ಸಂದರ್ಶನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಸಂದರ್ಶನದ ಮೂಲಕ ಒಬ್ಬ ವ್ಯಕ್ತಿಯನ್ನು ಮುಖ್ಯವಾಗಿಟ್ಟುಕೊಂಡು ಸಮುದಾಯದ ಒಟ್ಟಾರೆ ತಿಳುವಳಿಕೆಯನ್ನು ಸಂಗ್ರಹಿಸಲಾಗಿದೆ. ಈ ಸಲುವಾಗಿ ಪ್ರಶ್ನಾವಳಿಯನ್ನು ರೂಪಿಸಿಕೊಳ್ಳಲಾಗಿದೆ. ಈ ವಿಧಾನದ ಮೂಲಕ ವಿವಿಧ ವ್ಯಕ್ತಿಗಳನ್ನು ಸಂದರ್ಶನಕ್ಕೆ ಒಳಪಡಿಸಲಾಗಿದೆ. ಈ ಸಂದರ್ಶನ ವಿಧಾನದ ಮೂಲಕ ಪಡೆದ ಅನುಭವವನ್ನು ಪ್ರಸ್ತುತ ಅಧ್ಯಯನಲದಲ್ಲಿ ಮುಖ್ಯವಾಗಿ ಬಳಸಿಕೊಳ್ಳಲಾಗಿದೆ.

೪. ಮಾದರಿಗಳ ಆಯ್ಕೆ

ಈ ಯೋಜನೆಯು ಅಲ್ಪಾವಧಿಯದ್ದಾಗಿರುವುದರಿಂದ ಹೆಳವ ಸಮುದಾಯದ ಸಮಗ್ರ ಸಮೀಕ್ಷೆಯನ್ನು ಕೈಗೊಳ್ಳಲಾಗಿಲ್ಲ. ಹೆಳವ ಸಮುದಾಯದ ಸಾಮಾಜಿಕರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಸ್ಯಾಂಪಲಿಂಗ್ ಸರ್ವೆ ವಿಧಾನವನ್ನು ಅನುಸರಿಸಲಾಗಿದೆ. ಮುರ್ಖಯವಾಗಿ ಹೆಳವರಲ್ಲಿ ಎತ್ತಿನ ಹೆಳವರು, ಚಾಪೆ ಹೆಳವರು ಮತ್ತು ಗಂಟೆ ಹೆಳವರು ಎಂಬ ಮೂರು ಉಪಪಂಗಡಗಳಿವೆ. ಈ ಮೂರೂ ಉಪಪಂಗಡಗಳು ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ವಾಸಿಸುತ್ತಿವೆ. ಕರ್ನಾಟಕದ ವಾಯುವ್ಯ ಜಿಲ್ಲೆಗಳಲ್ಲಿ ಎತ್ತಿನ ಹೆಳವರು, ಈಶಾನ್ಯ ಭಾಗದಲ್ಲಿ ಚಾಪೆ ಹೆಳವರು ಮತ್ತು ದಕ್ಷಿಣ ಕರ್ನಾಟಕದಲ್ಲಿ ಗಂಟೆ ಹೆಳವರು ವಾಸಿಸುತ್ತಿದ್ದಾರೆ. ಈ ಮೂರು ಉಪಪಂಗಡಗಳು ವಾಸಿಸುವ ಎಲ್ಲ ಜಿಲ್ಲೆಗಳಲ್ಲಿ ಸರ್ವೆ ಕೆಲಸ ಅಸಾಧ್ಯವಾದ ಕಾರಣ ಕೆಲವು ಆಯ್ದ ಜಿಲ್ಲೆಗಳಲ್ಲಿನ ಗ್ರಾಮಗಳನ್ನು ಸ್ಯಾಂಪಲಿಂಗ್ ಸರ್ವೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಆಯ್ಕೆ ಮಾಡಿಕೊಂಡ ಜಿಲ್ಲೆಗಳಲ್ಲಿ ಹೆಳವರ ಮೂರು ಪಂಗಡಗಳೂ ವಾಸಿಸುತ್ತಿವೆ. ಈ ಕಾರಣದಿಂದಾಗಿ ನಾವು ಮಾಡಿದ ಸ್ಯಾಂಪಲಿಂಗ್ ಸರ್ವೆಯಲ್ಲಿ ಹೆಳವರ ಮೂರೂ ಪಂಗಡಗಳಿಂದ ಮಾದರಿಗಳನ್ನು ಆಯ್ದುಕೊಂಡಂತಾಗಿದೆ. ಜೊತೆಗೆ ಕರ್ನಾಟಕದ ಬೇರೆ ಬೇರೆ ಪ್ರದೇಶದಲ್ಲಿ ವಾಸಿಸುವ ಹೆಳವ ಸಮುದಾಯವು ನಮ್ಮ ಸ್ಯಾಂಪಲಿಂಗ್ ಸರ್ವೆಯ ವ್ಯಾಪ್ತಿಗೆ ಒಳಪಟ್ಟಂತಾಗಿದೆ.

ಈ ಕೆಳಗಿನ ಜಿಲ್ಲೆಗಳ ಗ್ರಾಮಗಳಲ್ಲಿ ಸರ್ವೆ ಮಾಡಲಾಗಿದೆ.

೧. ಬೀದರ್ ಜಿಲ್ಲೆ

೧. ಔರಾದ್
೨. ಬೀದರ್
೩. ಭಂಗೂರು
೪. ಸೋಮರಾಜಪುರ
೫. ಮಲ್ಕಾಪುರ
೬. ಚಿದ್ರಿ
೭. ಅಷ್ಟೂರು

೨. ಗುಲ್ಬರ್ಗಾ ಜಿಲ್ಲೆ

೧. ಮಾಗಾಂವ್
೨. ಗುಲ್ಬರ್ಗಾ
೩. ರಟಗಲ್
೪. ಮಟಕೆ
೫. ಯಾಳಗಿ

೩. ಬೆಳಗಾವಿ ಜಿಲ್ಲೆ

೧. ಶಿಲ್ತಿಭಾವಿ
೨. ಹುಲಿಕಟ್ಟಿ
೩. ಹಿರೇನಂದಿ
೪. ಜೋಕಾನಹಟ್ಟಿ
೫. ಗೋಕಾಕ್
೬. ಶಿವಪುರ
೭. ಮುನ್ನಾಳ
೮. ಮೂಡಲಗಿ
೯. ಮುಸಗುಪ್ಪಿ
೧೦. ಧರಮಿಟ್ಟಿ
೧೧. ಸಂಗನಕೇರಿ
೧೨. ಬೆಂಚಿನ ಮರಡಿ
೧೩. ಗೋಜನಹಟ್ಟಿ
೧೪. ತಾಳಕಟ್ನಾಳ್

೪. ಹಾವೇರಿ ಜಿಲ್ಲೆ

೧. ಸೋಮಸಾಗರ

೫. ಚಿತ್ರದುರ್ಗ ಜಿಲ್ಲೆ

೧. ಜಡೇಕುಂಟೆ
೨. ರಂಗನಾಥಪುರ
೩. ಗೋಪನಹಳ್ಳಿ
೪. ದಿಂಡಾವರ
೫. ಬುರುಡೆಕುಂಟೆ

೬. ಚಿಕ್ಕಮಗಳೂರು ಜಿಲ್ಲೆ

೧. ಹರಳಘಟ್ಟ
೨. ಹೆಳವರ ಹಟ್ಟಿ

೭. ಮಂಡ್ಯ ಜಿಲ್ಲೆ

೧. ಹೆಳವರ ಕೊಪ್ಪಲು
೨. ಕುಡಲ ಕುಪ್ಪೆ
೩. ಬೊಮ್ಮೂರ ಅಗ್ರಹಾರ
೪. ಹೆಳವರ ಹಟ್ಟಿ

ಈ ಮೇಲಿನ ಏಳು ಜಿಲ್ಲೆಗಳ ೩೮ ಗ್ರಾಮಗಳನ್ನು ಸರ್ವೆ ಮಾಡಲು ಆಯ್ಕೆ ಮಾಡಿಕೊಳ್ಳಲಾಗಿದೆ.

೫. ಅಂಕಿ ಅಂಶಗಳ ಸಂಗ್ರಹಣೆ

ಈ ಹಿಂದೆ ಉಲ್ಲೇಖಿಸಿದ ಏಳು ಜಿಲ್ಲೆಗಳಲ್ಲಿನ ೩೮ ಗ್ರಾಮಗಳನ್ನು ಸರ್ವೆಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಒಂದು ನಿಶ್ಚಿತ ಪ್ರಶ್ನಾವಳಿಯನ್ನು ರೂಪಿಸಿ, ಈ ೩೮ ಗ್ರಾಮಗಳಲ್ಲಿ House Hold Survey ಮಾಡಲಾಗಿದೆ. ಮುಖ್ಯವಾಗಿ ಈ ಪ್ರಶ್ನಾವಳಿಯಲ್ಲಿ ಹೆಳವ ಸಮುದಾಯದ ಕುಟುಂಬವೊಂದರ ಸಾಮಾನ್ಯ ಮಾಹಿತಿಯನ್ನು ಮತ್ತು ಮನೆ ಮಾದರಿ, ಭೂಹಿಡುವಳಿ, ಪಶು ಸಂಪತ್ತು ಮತ್ತು ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಕುರಿತು ಅಂಕಿ ಅಂಶಗಳನ್ನು ಸಂಗ್ರಹಿಸಲಾಗಿದೆ.

೬. ಅಧ್ಯಯನದ ಮಿತಿ

ಈ ಯೋಜನೆಯನ್ನು ಕೇವಲ ಆರು ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ಈಗಾಗಲೇ ಹೆಲವ ಅಲ್ಲದೆ ೧೦೦೦ ಕುಟುಂಬಗಳ House Hold Surveyಯನ್ನು ಮಾತ್ರ ಮಾಡಲಾಗಿದೆ. ಜೊತೆಗೆ ಒಂದು ನೂರು ಜನ ಹೆಳವ ಸಮುದಾಯದ ಪ್ರಮುಖರನ್ನು ಸಂದರ್ಶಿಸಲಗಿದೆ. ಹೆಳವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ವಿವರಿಸುವುವುದು ಈ ಅಧ್ಯಯನದ ಉದ್ದೇಶವಾಗಿದೆ. ಅಲ್ಪಾವಧಿಯಲ್ಲಿ ಈ ಅಧ್ಯಯನ ರೂಪುಗೊಂಡಿದೆ.

೭. ಅಧ್ಯಯನದ ವ್ಯಾಪ್ತಿ

ಹೆಳವರು ಕರ್ನಾಟಕದ ೨೭ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ೨೦೦೫ನೇ ಇಸ್ವಿಯಲ್ಲಿ ಕರ್ನಾಟಕ ರಾಜ್ಯ ಹೆಳವರ ಸಂಘ ನಡೆಸಿದ ಗಣತಿಯ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ ೧೩೯೨೩ ಜನ ವಾಸಿಸುತ್ತಿದ್ದರೆ, ಕೊಪ್ಪಳ ಜಿಲ್ಲೆಯಲ್ಲಿ ಅತಿಕಡಿಮೆ ಅಂದರೆ ೩೦೨ ಜನ ವಾಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಒಟ್ಟು ೨೭ ಜಿಲ್ಲೆಗಳಲ್ಲಿ ೧೩,೦೧೬ ಕುಟುಂಬಗಳು ವಾಸವಾಗಿದ್ದು, ೭೫,೭೮೪ ಜನಸಂಖ್ಯೆಯನ್ನು ಈ ಸಮುದಾಯ ಹೊಂದಿದೆ. ಪ್ರಸ್ತುತ ಅಧ್ಯಯನವು ಅಲ್ಪಾವಧಿಯದ್ದಾದ್ದರಿಂದ, ಅಧ್ಯಯನದ ಉದ್ದೇಶಗಳಿಗೆ ಅನುಗುಣವಾಗಿ ಕರ್ನಾಟಕದ ಏಳು ಜಿಲ್ಲೆಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಬೀದರ್, ಗುಲ್ಬರ್ಗಾ, ಬೆಳಗಾವಿ, ಹಾವೇರಿ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಮಂಡ್ಯ ಜಿಲ್ಲೆಗಳನ್ನು ಮಾತ್ರ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಏಳು ಜಿಲ್ಲೆಗಳ ೩೮ ಗ್ರಾಮಗಳಲ್ಲಿ ವ್ಯಾಪಕ ಕ್ಷೇತ್ರಕಾರ್ಯ ಕೈಗೊಳ್ಳಲಾಗಿದೆ. ಒಟ್ಟು ೧೦೦೦ ಕುಟುಂಬಗಳ ಅಂಕಿಅಂಶಗಳನ್ನು ನಿಶ್ಚಿತ ಪ್ರಶ್ನಾವಳಿಯ ಮೂಲಕ ಸಂಗ್ರಹಿಸಲಾಗಿದೆ. ಹೆಳವ ಸಮುದಾಯದ ವಿವಿಧ ಪಂಗಡಗಳು ನನ್ನ ಅಧ್ಯಯನದ ವ್ಯಾಪ್ತಿಗೆ ಒಳಪಡುತ್ತವೆ. ಸರ್ವೆಗೆ ಒಳಪಟ್ಟ ಹೆಳವ ಸಮುದಾಯದ ಜಿಲ್ಲೆ ಮತ್ತು ತಾಲೂಕುವಾರು ಜನಸಂಖ್ಯೆ ಕೋಷ್ಟಕ ಒಂದರಲ್ಲಿದೆ.

ಹೆಳವ ಸಮುದಾಯದ ಭೌಗೋಳಿಕ ನೆಲೆಗಳು

ಹೆಳವರು ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಚದುರಿದಂತೆ ವಾಸಿಸುತ್ತಿದ್ದಾರೆ. ಇವರು ಶುದ್ಧಾಂಗವಾಗಿ ಅಲೆಮಾರಿಗಳಲ್ಲ. ಅರೆ ಅಲೆಮಾರಿಗಳಾಗಿ ಉತ್ತರ ಕರ್ನಾಟಕದಲ್ಲಿ ಜಾರಿಯಲ್ಲಿದೆ. ಪಾರಂಪರಿಕ ವೃತ್ತಿಯನ್ನು ಅವಲಂಬಿಸಿರುವವರು ಮಾತ್ರ ಅರೆ ಅಲೆಮಾರಿ ಗುಂಪುಗಳಲ್ಲಿ ಊರುಗಳನ್ನು ಸುತ್ತುತ್ತಾರೆ. ಈ ಬಗೆಯ ಪಾರಂಪರಿಕ ವೃತ್ತಿಯ ಅವಲಂಬನೆಯು ಹೆಚ್ಚಗಿ ಉತ್ತರ ಕರ್ನಾಟಕದ ಬೆಳಗಾಂ, ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕಂಡು ಬರುತ್ತದೆ. ಈ ಹಿಂದೆ ಹೇಳಿದಂತೆ ಹೆಳವರು ಕರ್ನಾಟಕದ ೨೭ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿ ಹೆಚ್ಚು ಹೆಳವ ಜನಸಂಖ್ಯೆ ಇದ್ದು, ಕೊಪ್ಪಳದಲ್ಲಿ ಅತಿ ಕಡಿಮೆ ಜನ ಹೆಳವರು ವಾಸಿಸುತ್ತಿದ್ದಾರೆ. ೨೦೦೫ನೇ ಸಾಲಿನಲಿ ಹೆಳವ ಸಮುದಾಯದ ಸಂಘಟನೆಯ ಕೈಗೊಂಡು ಜನಗಣತಿಯ ಪ್ರಕಾರ ಹೆಳವರ ಜನಸಂಖ್ಯೆ ೭೫,೭೮೪. House Hold Survey ಯ ಮೂಲಕ ವಿವಿಧ ಜಿಲ್ಲೆಗಳಲ್ಲಿನ ತಾಲೂಕುವಾರು ಹೆಳವರ ಜನಸಂಖ್ಯೆಯನ್ನು ಕೋಷ್ಟಕ ೧ ರಲ್ಲಿ ಕೊಡಲಗಿದೆ.

ಕೋಷ್ಟಕ ೧: ಹೆಳವರ ಜಿಲ್ಲಾ ಮತ್ತು ತಾಲೂಕುವಾರು ಜನಸಂಖ್ಯೆ

ಕ್ರ ಸಂ ಜಿಲ್ಲೆ ತಾಲೂಕು ಕುಟುಂಬಗಳ ಸಂಖ್ಯೆ ಒಟ್ಟು ಜನಸಂಖ್ಯೆ ಗಂಡು ಹೆಣ್ಣು
೦೧ ಚಿಕ್ಕಮಗಳೂರು ಕಡೂರು ೮೦ ೪೫೩ ೨೪೧ ೨೧೨
೦೨ ಚಿತ್ರದುರ್ಗ ಹಿರಿಯೂರು ೯೦ ೪೨೩ ೨೨೦ ೨೦೩
ಚಳ್ಳಕೆರೆ ೧೩೮ ೫೩೪ ೨೮೧ ೨೫೩
೦೩ ಮಂಡ್ಯ ಶ್ರೀರಂಗಪಟ್ಟಣ ೩೪ ೧೨೬ ೬೨ ೬೪
ಪಾಂಡವಪುರ ೪೦ ೧೭೮ ೯೦ ೮೮
೦೪ ಬೀದರ್ ಬೀದರ್ ೧೩೭ ೭೧೫ ೩೩೭ ೩೩೮
ಔರಾದ್ ೧೫ ೮೩ ೪೩ ೪೦
೦೫ ಗುಲ್ಬರ್ಗಾ ಗುಲ್ಬರ್ಗಾ ೫೩ ೨೭೪ ೧೪೪ ೧೩೦
ಚಿಂಚೋಳಿ ೧೦ ೪೮ ೨೨ ೨೬
ಅಳಂದ ೦೩ ೧೨ ೦೭ ೦೫
ಸುರಪುರ ೪೪ ೨೦೩ ೧೦೬ ೯೭
೦೬ ಬೆಳಗಾಂ ಗೋಕಾಕ್ ೨೭೦ ೧೨೩೩ ೭೦೬ ೫೨೭
೦೭ ಹಾವೇರಿ ಹಾನಗಲ್ ೮೬ ೩೫೬ ೧೮೫ ೧೭೧
ಒಟ್ಟು ೧೦೦೦ ೪೬೩೮ ೨೪೮೪ ೨೧೫೪