ಪೀಠಿಕೆ

‘ಹೆಳವ’ ಎಂಬ ಹೆಸರು ಈ ಸಮುದಾಯಕ್ಕೆ ಏಕೆ ಬಂದಿತು ಎಂಬುದನ್ನು ವಿಶ್ಲೇಷಿಸಲು ವಿದ್ವಾಂಸರು ಹಲವು ಪ್ರಯತ್ನಗಳನ್ನು ಮಾಡಿದ್ದಾರೆ. ಹೆಳವ ಪದದ ಹುಟ್ಟಿನ ಕುರಿತು, ಅದರ ಪದಶಃ ಅರ್ಥದ ಕುರಿತು ಅನೇಕ ಜಿಜ್ಞಾಸೆಗಳು ನಡೆದಿವೆ. ಮುಖ್ಯವಾಗಿ ಈ ಹೆಸರು ಸದರಿ ಸಮುದಾಯಕ್ಕೆ ಬರಲು ಕಾರಣವೇನು ಎಂಬ ಕುರಿತ ಚರ್ಚೆಗಳು ಎರಡು ಬಗೆಗಳಲ್ಲಿ ನಡೆದಿವೆ. ೧) ‘ಹೆಳವ’ ಎಂಬ ಪದದ ಶಬ್ದಕೋಶದ ಅರ್ಥವನ್ನು ಪರಿಗಣಿಸಿ ಮತ್ತು ಹೆಳವರ ಸೃಷ್ಟಿಪುರಾಣ, ಅಂದರೆ ಅವರು ತಮ್ಮ ಹುಟ್ಟಿನ ಕುರಿತು ಹೇಳುವ ಮೌಖಿಕ ಚರಿತ್ರೆಯನ್ನು ಆಧರಿಸಿ ಕೆಲವರು ಚರ್ಚೆ ನಡೆಸಿದ್ದಾರೆ. ೨) ‘ಹೆಳವ’ ಎಂಬ ಪದವು ‘ಹೇಳುವವ’ ಎಂಬ ಪದದಿಂದ ನಿಷ್ಪತ್ತಿಯಾಗಿದೆ ಎಂದು ಕೆಲವರು ಚರ್ಚಿಸಿರುವುದು ಕಂಡು ಬರುತ್ತದೆ.

ಸಮುದಾಯಗಳ ಸಾಮಾಜಿಕ ಚರಿತ್ರೆಯನ್ನು ಬರೆಯುವಾಗ ಸಾಮಾನ್ಯವಾಗಿ ಸಾಮಾಜಿಕ ಮಾನವಶಾಸ್ತ್ರಜ್ಞರು ಅಭಿಜಾತ (classical) ದಾಖಲೆಗಳನ್ನು ಹುಡುಕಿಕೊಂಡು ಹೋಗುವುದು ಸಾಮಾನ್ಯ. ಈ ಅಭಿಜಾತ ದಾಖಲೆಗಳೆಂದರೆ, ಮಹಾಕಾವ್ಯಗಳು, ಶಾಸನಗಳೂ ಮತ್ತು ಶಿಷ್ಟ ಪುರಾಣದಲ್ಲಿನ ಉಲ್ಲೇಖಗಳು. ಉದಾಹರಣೆಗೆ, ಪಂಪನ ಆದಿಪುರಾಣದಲ್ಲಿ ಯಾವುದಾದರೊಂದು ಸಮುದಾಯದ ಉಲ್ಲೇಖ ಮತ್ತು ಅವರ ವೃತ್ತಿಗೆ ಸಂಬಂಧಿಸಿದ ಸಂಗತಿಗಳು ಉಲ್ಲೇಖಿತಗೊಂಡಿದ್ದರೆ ಅದೇ ಉಲ್ಲೇಖವನ್ನು ಆಧರಿಸಿ ಕೆಲವು ತೀರ್ಮಾನಗಳಿಗೆ ಬರುವುದು ಒಂದು ವಾಡಿಕೆಯಂತೆ ನಡೆದು ಬಂದಿದೆ. ಈ ಬಗೆಯ ಅಭಿಜಾತ ದಾಖಲೆಗಳನ್ನು ನೆಚ್ಚಿಕೊಳ್ಳುವ ವಿದ್ವಾಂಸರು ತಾವು ಅಧ್ಯಯನ ಮಾಡುವ ಸಮುದಾಯವೇ ಶತಮಾನಗಳಿಂದ ಕಟ್ಟಿಕೊಂಡು ಬಂದ ಮೌಖಿಕ ಇತಿಹಾಸವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಕೆಲವೊಮ್ಮೆ ಈ ಬಗೆಯ ಜಾನಪದ ಆಕರವನ್ನು ಒಂದು ಪ್ರಮಾಣಬ್ಧ ದಾಖಲೆ ಎಂದು ಪರಿಗಣಿಸುವಾಗ ಶಿಷ್ಟ ಆಕರದ ಜೊತೆ ಮೌಖಿಕ ಚರಿತ್ರೆಯನ್ನು ಹೋಲಿಸಿ ಅದರ ಪ್ರಮಾಣಬದ್ಧತೆಯನ್ನೇ ಪ್ರಶ್ನಿಸುವುದು ಕನ್ನಡದ ಶೈಕ್ಷಣಿಕ ಸಂದರ್ಭದಲ್ಲಿ ವಾಡಿಕೆಯೆಂಬಂತೆ ನಡೆದುಕೊಂಡು ಬಂದಿದೆ. ಉಪಸಂಸ್ಕೃತಿ ಮಾಲೆಯ ಪುಸ್ತಕಗಳಲ್ಲಿ ಮತ್ತು ಸಮುದಾಯ ಅಧ್ಯಯನ ಕೈಗೊಂಡ ಯಾವುದೇ ಪಿ.ಎಚ್.ಡಿ ಪ್ರಬಂಧದಲ್ಲಿ ಲಿಖಿತ ದಾಖಲೆಗಳನ್ನು ಮಾತ್ರ ಪ್ರಮಾಣಬದ್ಧ ಆಕರಗಳೆಂದು ನಂಬುವ ಪ್ರವೃತ್ತಿ ಕಾಣಿಸುತ್ತದೆ. ಇಲ್ಲಿ ಅಧ್ಯಯನಕ್ಕೊಳಗಾಗುವ ಸಮುದಾಯ ತಾನೇ ತನ್ನ ಚರಿತ್ರೆಯನ್ನು ಕಟ್ಟಿಕೊಂಡು ಬಂದಿದ್ದರೂ ಅದು ‘ನಮ್ಮ’ ಸಮಾಜದ ಇತಿಹಾಸವನ್ನು ಬರೆಯುವಾಗ ನಂಬಲಾರ್ಹವಲ್ಲದ ಆಕರವಾಗುತ್ತದೆ. ಲಿಖಿತ ಮತ್ತು ಶಿಷ್ಟ ಆಕರಗಳನ್ನು ಪ್ರಮಾಣಬ್ಧವೆಂದು ನಂಬುವ ಮುಗ್ಧತೆಯನ್ನು ಯುರೋಪಿನ ಮಾನವಶಾಸ್ತ್ರದ ಅಧ್ಯಯನ ವಿಧಾನವು ನಮ್ಮಲಿ ಹುಟ್ಟು ಹಾಕಿದೆ. ಆಯಾ ಕಾಲಘಟ್ಟದ ಸಮಾಜದ ಚರಿತ್ರೆಯನ್ನು ಬರೆಯುವಾಗ ಲಿಖಿತ ಮತ್ತು ಶಿಷ್ಟ ಆಕರಗಳು ನಿಖರ ಮತ್ತು ನಂಬಲಾರ್ಹ ಚಿತ್ರಣವನ್ನು ನೀಡುತ್ತವೆ ಎಂದು ಇಂದಿಗೂ ನಂಬಲಾಗುತ್ತದೆ.

ಹೆಳವರೆಂದರೆ ಯಾರು? ಅವರಿಗೆ ಈ ‘ಹೆಳವ’ ಎಂಬ ಹೆಸರು ಯಾಕಾಗಿ ಬಂದಿತು? ಎಂದು ತೀರ್ಮಾನಿಸುವಾಗೆಲ್ಲ ಈ ಬಗೆಯ ಶೈಕ್ಷಣಿಕ ನಂಬಿಕೆ ಬಹುತೇಕ ಎಲ್ಲ ಅಧ್ಯಯನಗಳಲ್ಲಿ ಕಾಣಿಸುತ್ತದೆ. ಹೆಳವ ಸಮುದಾಯದ ಕುರಿತು ವಿವಿಧ ವಿದ್ವಾಂಸರು ಈ ಕೆಳಗಿನಂತೆ ವಿವರಿಸಿದ್ದಾರೆ.

೧೯೦೯ರಲ್ಲಿ ದಕ್ಷಿಣ ಭಾರತದ ಆದಿವಾಸಿಗಳ ಮತ್ತು ವಿವಿಧ ಜಾತಿ ಸಮುದಾಯಗಳ ಅಧ್ಯಯನ ಕೈಗೊಂಡ ಎಡ್ಗರ್ ಥರ್ಸಟನ್ ಅವರು ಹೆಳವರನ್ನು ಹೀಗೆ ವಿವರಿಸುತ್ತಾರೆ. “ಹೆಳವ ಎಂದರೆ ಕಾಲಿಲ್ಲದವನು ಎಂದರ್ಥ. ಹೆಳವರೆಂದರೆ ಭಿಕ್ಷೆ ಬೇಡುತ್ತ ಬದುಕುವ ಒಂದು ಜನವರ್ಗ. ಇವರು ಬಳ್ಳಾರಿ, ಮೈಸೂರು ಮುಂತಾದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಇವರು ಹಳ್ಳಿಗಳ ಚರಿತ್ರೆಯನ್ನು ಕಟ್ಟಿಕೊಂಡು ಬಂದವರು. ಇವರು ಸಾಮಾನ್ಯವಾಗಿ ಎತ್ತಿನ ಮೇಲೆ ಹತ್ತಿಕೊಂಡು ಹಳ್ಳಿಗಳನ್ನು ಸುತ್ತುತ್ತಾರೆ. ಹೀಗೆ ಎತ್ತಿನ ಮೇಲೆ ಹತ್ತಿಕೊಂಡು ತಮ್ಮ ಒಕ್ಕಲು ಮನೆಗಳಿಗೆ ಹೋಗುವಾಗ ತಮ್ಮ ಕಾಲುಗಳನ್ನು ಉಣ್ಣೆಯ ಚದಾರದಿಂದ ಮುಚ್ಚಿಕೊಂಡಿರುತ್ತಾರೆ. ಇವರು ತಮ್ಮ ಒಕ್ಕಲು ಮನೆಗಳಿಗೆ ತೆರಳಿ ಅವರ ಕುಟುಂಬದ ಇತಿಹಾಸವನ್ನು ಹೇಳುತ್ತಾರೆ.”[1]

೧೯೩೦ರಲ್ಲಿ ಮೈಸೂರಿನ ಆದಿವಾಸಿಗಳ ಮತ್ತು ಜಾತಿ ಸಮುದಾಯಗಳ ಅಧ್ಯಯನ ಮಾಡಿದ ಎಚ್. ವಿ. ನಂಜುಡಯ್ಯ ಮತ್ತು ಅನಂತಕೃಷ್ಣ ಅಯ್ಯರ್ ಅವರು ಈ ಕೆಳಗಿನಂತೆ ಅಭಿಪ್ರಾಯಪಡುತ್ತಾರೆ. “ಹೆಳವ ಎಂದರೆ ಕಾಲಿಲ್ಲದವನು ಎಂದರ್ಥ. ಹೆಳವರೆಂದರೆ ಒಂದು ಭಿಕ್ಷುಕ ಜನವರ್ಗ. ಇವರು ಒಕ್ಕಲಿಗರ ಮನೆಯಲ್ಲಿ ಮಾತ್ರ ಭಿಕ್ಷೆ ಬೇಡುತ್ತಾರೆ. ಇವರು ರಾಜ್ಯದ ಎಲ್ಲ ಕಡೆ ವಾಸಿಸುತ್ತಿದ್ದಾರೆ.”[2]

೧೯೨೨ರಲ್ಲಿ ಬಾಂಬೇ ಪ್ರಾಂತ್ಯದ ಜನಸಮುದಾಯಗಳ ಅಧ್ಯಯನ ಮಾಡಿದ ಎಂಥೋವನ್ ಅವರು ಹೆಳವರನ್ನು ಹೀಗೆ ವಿವರಿಸುತ್ತಾರೆ. “ಹೇಳವರೆಂದರೆ ಕಾಲಿಲ್ಲದವರೆಂದು ಅರ್ಥ. ಹೆಳವರು ಪಾರಂಪರಿಕ ಭಿಕ್ಷಾವೃತ್ತಿಯನ್ನು ಅನುಸರಿಸಿಕೊಂಡು ಬದುಕುತ್ತಿರುವ ಜನವರ್ಗವಾಗಿದೆ. ಇವರು ಬೆಳಗಾಂ, ಬಿಜಾಪುರ, ಧಾರವಾಡ ಮತ್ತು ಕರಾವಳಿ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಹೆಳವರು ಹಿಂದೂಗಳಲ್ಲಿನ ಭಿಕ್ಷುಕ ಸಮುದಾಯವಾಗಿರುವ ಪಂಗುಲರನ್ನು ಕೆಲವು ಸಂಗತಿಗಳಲ್ಲಿ ಹೋಲುತ್ತಾರೆ. ಇವರು ತಾವು ಲಿಂಗಾಯ್ತರೆಂದು ಹೇಳಿಕೊಂಡರೂ ಲಿಂಗಾಯತರಿಗಿಂತ ಇವರು ಭಿನ್ನರು. ಹೆಳವರು ತಾವು ನಿಜಾಮನ ರಾಜ್ಯದ ಕಲ್ಯಾಣದಿಂದ ಬಂದವರೆಂದು ಹೇಳಿಕೊಳ್ಳುತ್ತಾರೆ.”[3]

೧೯೫೦ರ ಸುಮಾರಿಗೆ ಹೈದರಾಬಾದ್ ನಿಜಾಮನ ಪ್ರಾಂತ್ಯದ ಸಮುದಾಯಗಳನ್ನು ಅಧ್ಯಯನ ಮಾಡಿದ ಸಯದ್ ಸಿರಾಜ್ ಉಲ್ ಹಸನ್ ಅವರ ವಿವರಣೆ ಹೀಗಿದೆ “ಪಿಚ್ಚ ಕುಂಟಲ, ಪಿಚ್ಚಗುಂಟ, ಭಕ್ತೋಳ್ಳು ಮತ್ತು ಗೊಲ್ಲಕುಲಮ್ ಎಂದು ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಸಮುದಾಯ ಮೂಲ೬ತಃ ತೆಲುಗು ದೇಶದ ಅಲೆಮಾರಿ ಭಿಕ್ಷುಕ ಸಮುಧಾಯವಾಗಿದೆ. ಇವರು ವಿವಿಧ ವಂಶಾವಳಿಗಳ ವಿವರಗಳನ್ನು ದಾಖಲಿಸುವ ವಂಶಾವಳಿಶಾಸ್ತ್ರಜ್ಞರು ಮತ್ತು ಚಾಪೆ ಹೆಣೆಯುವವರು, ‘ಪಿಚ್ಚಕುಂಟ’ ಭಿಕ್ಷಾ ಕುಂಟ್ಲು (Bhiksha Kuntlu) ಎಂಬ ಪದದಿಂದ ಬಂದಿದೆ. (ಭಕ್ಷಾ – ಭಿಕ್ಷೆ ಬೇಡುವುದು, ಕುಂಟಾ ಎಂದರೆ ಕಾಲಿಲ್ಲದವನು) ‘ಪಿಚ್ಚಗುಂಟ’ ಎಂಬುದುದು ಕಾಲಿಲ್ಲದ ಭಿಕ್ಷುಕನಿಗೆ ಇರುವ ನಿಮದಾನಾತ್ಮಕ ಗುಣವಾಚಕವಾಗಿದೆ.”[4]

ಬಿ.ಎಂ. ತೆಳಗಡಿಯವರು ಹೆಳವರನ್ನು ಕುರಿತು, “ಹೆಳವ, ಹೆಳವಯ್ಯ, ಒಕ್ಕಾಲ ಭೃಂಗಿ ನಂದಿವಾಲ ಮೊದಲಾದ ಹೆಸರುಗಳಿಂದ ಇವರನ್ನು ಕರೆಯುತ್ತಾರೆ. ಹೆಳವ, ಶಬ್ಧಕ್ಕೆ ಕಾಲಿಲ್ಲದವ, ಕುಂಟ, ಅಂಗಹೀನ ಎಂಬ ಅರ್ಥವಿದೆ ಎಂದು ವಿವರಿಸುತ್ತಾರೆ”[5]. ನಿಂಗಣ್ಣ ಸಣ್ಣಕ್ಕಿಯವರು “ಹೆಳವರಿಗೆ ಹೇಳುವವರು ಎಂಬುದು ಜಾನಪದರ ನಾಲಿಗೆಯ ಮೇಲಿರುವ ಅರ್ಥ ಜೀವಂತವಾಗಿದೆ. ಏನನ್ನು ಹೇಳುವವರು? ಜನಾಂಗಗಳ ಕಥೆಗಳನ್ನು ಹೇಳುವವರು, ತಿಳಿಸುವವರು ಎಂಬುದು ಜನಮನಗಳಲ್ಲಿ ಗೊತ್ತಿರದ ವಿಷಯವಾಗಿದೆ”[6] ಎನ್ನುತ್ತಾರೆ. ಪಿ.ಕೆ. ರಾಜಶೇಖರ್ ಅವರ ವಿವರಣೆ ಈ ರೀತಿ ಇದೆ “ಗಂಟೆ ಬಾರಿಸಿಕೊಂಡು ಕಿಣಿ ಕಿಣಿ ನಾದ ಮಡುತ್ತಾ ಕೊರಳಿನಲ್ಲೊಂದು ಭಾರಿ ಜೋಳಿಗೆಯನ್ನು ಹೊತ್ತು ದವಸ ಧಾನ್ಯಗಳ ಹೊರನ್ನು ಬಸವನ ಹೆಗಲಲ್ಲಿ ಹಾಕಿ ಮನೆ ಮನೆಯ ಮುಂದೆ ನಿಂತು ಕುಲಪುರಾಣಗಳನ್ನು ಹೇಳುವವರು ಹೆಳವರು”[7]. ಕೆ.ಎಸ್. ಸಿಂಗ್‌ರವರು ತಮ್ಮ ‘ಇಂಡಿಯಾಸ್ ಕಮ್ಯುನಿಟಿಸ್’ ಗ್ರಂಥದಲ್ಲಿ ಹೀಗೆ ವಿವರಿಸುತ್ತಾರೆ. “ಹೆಳವ ಎಂಬ ಕರ್ನಾಟಕದ ಈ ಸಮುದಾಯವನ್ನು ಆಂಧ್ರ ಪ್ರದೇಶದಲ್ಲಿ ‘ಪಿಚ್ಚಗುಂಟ್ಲ’ ಎಂದು ಮಹಾರಾಷ್ಟ್ರದಲ್ಲಿ ‘ಹೆಳ್ವೆ’ ಎಂದು ಕರೆಯಲಾಗುತ್ತದೆ. ಹೆಳವ ಎಂದರೆ ಕುಂಟ ವ್ಯಕ್ತಿ ಎಂದು ಅರ್ಥ”[8].

ಪೀಪಲ್ ಆಫ್ ಇಂಡಿಯಾ ಮಾಲಿಕೆಯಲ್ಲಿ ಕರ್ನಾಟಕದ ಸಮುದಾಯಗಳು ಕುರಿತು ಎರಡು ಸಂಪುಟಗಳು ಪ್ರಕಟವಾಗಿವೆ. ಸಂಪುಟ ಎರಡರಲ್ಲಿ ಆರ್. ಗುಪ್ತ ಎನ್ನುವವರು ಹೆಳವರ ಕುರಿತು ಹೀಗೆ ವಿವರಿಸುತ್ತಾರೆ. “ಹೆಳವರು ಆಂಧ್ರಪ್ರದೇಶದಲ್ಲಿ ಪಿಚ್ಚಗುಂಟ್ಲ ಎಂದು ಕರೆಯಲ್ಪಡುತ್ತಾರೆ. ‘ಹೆಳವ’ ಎಂದರೆ ಕುಂಟ ವ್ಯಕ್ತಿ ಎಂದರ್ಥ”[9]. ಜೀ.ಶಂ. ಪರಮಶಿವಯ್ಯನವರು ತಮ್ಮ ಗ್ರಂಥದಲ್ಲಿ ಹೆಳವರನ್ನು ಕುರಿತು ಈ ರೀತಿ ವಿವರಿಸುತ್ತಾರೆ. “ಒಕ್ಕಲಿಗರ ಒಂದು ವರ್ಗವೆಂದೇ ನಂಬುತ್ತಾರೆ. ಹೆಳವನಾಗಿದ್ದ ಇವರ ಮೂಲ ಪುರಷ ಒಕ್ಕಲಿಗರ ಮೂಲ ಪುರುಷರಲ್ಲಿ ಒಬ್ಬನೆಂದೂ, ಅಂಗವಿಕಲನಾಗಿ ಅಸಹಾಯಕನಾಗಿದ್ದುರಿಂದ ಅವನು ಉಳಿದ ಸೋದರರನ್ನು ಆಶ್ರಯಿಸಿ ಜೀವಿಸಬೇಕಾಯಿತೆಂದೂ ಕತೆಗಳಿವೆ. ಕ್ರಮೇಣ ಈ ಹೆಳವನ ಮಕ್ಕಳು, ಮೊಮ್ಮಕ್ಕಳು ಮರಿಮಕ್ಕಳು ಬೆಳೆದು ಒಂದು ಪ್ರತ್ಯೇಕ ವರ್ಗವಾಗಿಯೇ ಉಳಿದರು”[10]. ಹಿರಿಯ ಜಾನಪದ ವಿದ್ವಾಂಸರಾದ ಎಚ್.ಎಲ್. ನಾಗೇಗೌಡರು ಹೆಳವರ ಬಹುತೇಕ ಎಲ್ಲ ಐತಿಹ್ಯ ಮತ್ತು ದಂತಕಥೆಗಳನ್ನು ಗಮನದಲ್ಲಿಟ್ಟುಕೊಂಡು ಹೆಳವರ ಕುರಿತು ಹೀಗೆ ವಿಶ್ಲೇಷಿಸುತ್ತಾರೆ. “ಸೂಕ್ಷ್ಮವಾಗಿ ಗಮನಿಸಿದಾಗ ‘ಹೆಳವರು ಹೆಳವರೂ ಹೌದು, ಹೇಳುವವರೂ ಹೌದು’ ಎಂದು ಹೇಳಬೆಕಾಗುತ್ತದೆ. ಇವರ ಮೂಲ ಪುರಷ ಹೆಳವನಾಗಿದ್ದ ಕಾರಣ ಇವರು ಹೆಳವರು. ಅವರು ತಮ್ಮ ಕುಲಗಳ ವೃತ್ತಾಂತವನ್ನು ಹೇಳುವವರಾದ್ದರಿಂದ “ಹೇಳುವವರು’”[11].

ಇನ್ನು ಕನ್ನಡದಲ್ಲಿ ಮಾನವಶಾಸ್ತ್ರೀಯ ವಿಧಾನದ ಮೂಲಕ ಹೆಳವರ ಕುರಿತು ನಡೆದ ಮೊದಲ ಶಾಸ್ತ್ರಬ್ಧ ಅಧ್ಯಯನವೆಂದರೆ ಹರಿಲಾಲ್ ಪವಾರ್ ಅವರ ‘ಕರ್ನಾಟಕದ ಹೆಳವರು ಒಂದು ಜಾನಪದೀಯ ಅಧ್ಯಯನ’ ಎಂಬ ಮಹಾಪ್ರಬಂಧ. ೧೯೯೦ ರಲ್ಲಿ ಪವಾರ್ ಅವರು ಈ ಅಧ್ಯಯನವನ್ನು ಪೂರೈಸಿದ್ದಾರೆ. ಸಾಹಿತ್ಯ ಅಕಾಡೆಮಿಯಿಂದ ೧೯೯೩ರಲ್ಲಿ ಇದೇ ಲೇಖಕರ ‘ಹೆಳವರ ಸಂಸ್ಕೃತಿ’ ಎಂಬ ಪುಸ್ತಕ ಪ್ರಕಟವಾಗಿದೆ. ಪ್ರಾಯಶಃ ಸದರಿ ಪುಸ್ತಕವು ಪವಾರರ ಮಹಾಪ್ರಬಂಧದ ಸಂಕ್ಷಿಪ್ತ ರೂಪವೆಂದು ಕಾಣುತ್ತದೆ. ಈ ಪುಸ್ತಕದಲ್ಲಿ ಪವಾರ್ ಅವರು “ ಕರ್ನಾಟಕದ ಜನಪದ ವೃಂದಗಳಲ್ಲಿ ಹೆಳವರದೂ ಒಂದು ವಿಶಿಷ್ಟ ಸಮೂಹ. ಸ್ಥಿರ ವಸತಿ ಕಲ್ಪನೆಯ ಕೃಷಿಕ ಗುಂಪನ್ನು ಹೊಂದಿಕೊಂಡೇ ಜೀವನ ನಡೆಸುತ್ತ ಬಂದ ಹೆಳವರು, ವಿವಿಧ ಪ್ರದೇಶದ ಪ್ರಭಾವಶಾಲಿ ಮನೆತನಗಳ ವಂಶಾವಳಿಗಳನ್ನು ತಮ್ಮ ಮೌಖಿಕ ಪರಂಪರೆಯ ಮೂಲಕ, ಕಾಲಾನಂತರ ಚಿಪ್ಪೋಡುಗಳಲ್ಲಿ ದಾಖಲೆಗೊಳಿಸಿ ಕಾಪಾಡಿಕೊಂಡು ಬಂದ ಹಿರಿಮೆ ಇವರದಾಗಿದೆ. ಕುಲಕೊಂಡಾಡುವುದನ್ನೇ ತಮ್ಮ ಮುಖ್ಯ ವೃತ್ತಿಯನ್ನಾಗಿ ಸ್ವೀಕರಿಸಿದ ಹೆಳವರು, ತಮ್ಮ ಉಪಜೀವನಕ್ಕೆ ಈ ವೃತ್ತಿಯನ್ನೇ ಹೆಚ್ಚಾಗಿ ಅವಲಂಬಿಸಿದ್ದು ಕಂಡು ಬರುತ್ತದೆ”[12]. ಎಂದು ವಿವರಿಸುತ್ತಾರೆ.

ಮೇಲಿನ ಎಲ್ಲ ಉಲ್ಲೇಖಗಳು ಬಹುತೇಕ ಎರಡು ಮುಖ್ಯ ತೀರ್ಮಾನಗಳಿಗೆ ಬರುತ್ತವೆ.

೧. ಹೆಳವರ ಮೂಲ ಪುರುಷನು ಹೆಳವನಾಗಿದ್ದ (ಕಾಲಿಲ್ಲದವನು) ಅವನು ಭಿಕ್ಷೆ ಬೇಡುತ್ತಾ ಬದುಕಿದನಾದ್ದರಿಂದ ಅವನ ಸಂತತಿಯು ಮುಂದೆ ಹೆಳವ ಸಮುದಾಯವಾಗಿ ರೂಪುಗೊಂಡಿತು.

೨. ಹೆಳವರು ವಂಶಾವಳಿಶಾಸ್ತ್ರಜ್ಞರು. ಅವರು ತಮ್ಮ ಒಕ್ಕಲುಗಳ ವಂಶಾವಳಿಯನ್ನು ಹೇಳುವವರು. ಈ ಹೇಳುವ ವೃತ್ತಿಯಿಂದಾಗಿಯೇ ಇವರಿಗೆ ಹೆಳವ ಎಂಬ ಹೆಸರು ಬಂದಿರಬೇಕು ಎಂಬ ತೀರ್ಮಾನಕ್ಕೆ ಬರುತ್ತಾರೆ.

ವಂಶಾವಳಿಯನ್ನು ‘ಹೇಳುವ’ದರಿಂದ ಇವರಿಗೆ ‘ಹೆಳವ’ ಎಂಬ ಹೆಸರು ಬಂದಿರಬಹುದೇ ಹೆಳವ ಸಮುದಾಯದ ಹಿರಿಯರ ಜೊತೆ ಚರ್ಚಿಸಲಾಯಿತು. ಆದರೆ ಯಾರೂ ವಂಶಾವಳಿ ‘ಹೇಳುವ” ಕಾರಣಕ್ಕಾಗಿ ಹೆಳವ ಎಂಬ ಹೆಸರು ಬಂದಿತು ಎಂಬ ಅಭಿಪ್ರಾಯವನ್ನು ಪುಷ್ಟೀಕರಿಸಲಿಲ್ಲ. ಈ ಅಧ್ಯಯನಕ್ಕೆ ಹೆಳವರ ಹೆಸರನ್ನು ವಿಶ್ಲೇಷಿಸುವ ಉದ್ದೇಶವಿಲ್ಲದಿದ್ದರೂ ಸಹ ಕುತೂಹಲಕ್ಕೆ ಈ ಕುರಿತು ಹಲವರ ಜೊತೆ ಚರ್ಚಿಸಲಾಯಿತು. ಹೆಳವ ಸಮುದಾಯದ ಹಿರಿಯರು ತಮ್ಮ ಸಮುದಾಯದ ಮೂಲ ಪುರಷನ ಹುಟ್ಟಿನ ಕುರಿತು ಹೇಳುತ್ತಿದ್ದ ಸೃಷ್ಟಿಪುರಾಣಗಳನ್ನು ಸಂಗ್ರಹಿಸಲಾಯಿತು. ಹೆಳವರು ತಮ್ಮ ಮೂಲಪುರಷನ ಹುಟ್ಟಿನ ಕುರಿತು ಹೇಳುವ ಸೃಷ್ಟಿಪುರಾಣಗಳು ಈಗಾಗಲೇ ವಿವಿಧ ವಿದ್ವಾಂಸರಿಂದ ಸಂಗ್ರಹವಾಗಿರುವುದರಿಂದ ಅವುಗಳನ್ನೇ ಈ ಅಧ್ಯಯನದಲ್ಲಿ ಬಳಸಲಾಗಿದೆ. ಈ ಸೃಷ್ಟಿಪುರಾಣಗಳು ಹೆಳವ ಸಮುದಾಯದ ಹುಟ್ಟಿನ ಮೇಲೆ ಬೆಳಕು ಚೆಲ್ಲುತ್ತವೆ.

ಹೆಳವ ಸಮುದಾಯ ಕುರಿತು ಇರುವ ಪುರಾಣಗಳು

ಬಹುತೇಕ ಕೆಳಜಾತಿ ಮತ್ತು ದುಡಿವ ವರ್ಗಗಳ ಇತಿಹಾಸ ಅವುಗಳ ಮೌಖಿಕ ಸಾಹಿತ್ಯದಲ್ಲಿ ಹುದುಗಿರುತ್ತದೆ. ಈ ದೇಶದ ಅಭಿಜಾತ ಆಕರ ಸಾಮಾಗ್ರಿಗಳಲ್ಲಿ ಈ ಸಮುದಾಯಗಳ ಚಿತ್ರಣ ಅತ್ಯಂತ ಅಸ್ಪಷ್ಟವಾದದ್ದು. ಜೊತೆಗೆ ಈ ಅಭಿಜಾತ ಆಕರಗಳು ಕಟ್ಟಿಕೊಡುವ ಇತಿಹಾಸವೂ ಸಹ ಅರ್ಧ ಸತ್ಯದ್ದಾಗಿರುತ್ತದೆ. ಈ ಕಾರಣದಿಂದಾಗಿ ಆಯಾ ಸಮುದಾಯದ ಮೌಖಿಕ ಸಾಹಿತ್ಯವನ್ನೇ ನಾವು ಚರಿತ್ರೆಯ ಆಕರವನ್ನಾಗಿ ಪರಿಗಣಿಸಬೇಕಿದೆ. ಈ ಮೌಖಿಕ ಆಕರಗಳನ್ನು ಪ್ರಮಾಣಬದ್ಧ ಆಕರಗಳೆಂದೇ ವಿದ್ವಾಂಸರು ಪರಿಗಣಿಸಬೇಕು. ಇಂಡಿಯಾದ ಶೋಷಿತ ಸಮುದಾಯಗಳ ಇತಿಹಾಸವು ಆಯಾ ಸಮುದಾಯಗಳು ಕಟ್ಟಿಕೊಂಡು ಬಂದ ಪುರಾಣಗಳಲ್ಲಿ ಮತ್ತು ಕಥೆಗಳಲ್ಲಿ ಅಡಕವಾಗಿರುತ್ತದೆ. ಹೆಳವ ಸಮುದಾಯದ ಕುರಿತು ಇರುವ ಪುರಾಣಗಳನ್ನು, ಈ ಸಮುದಾಯದ ಚರಿತ್ರೆಯನ್ನು ಕಟ್ಟಿಕೊಡುವಾಗ ಮುಖ್ಯವಾಗಿ ಗಮನಿಸಬೇಕಾಗುತ್ತದೆ.

ಪುರಾಣ – ೧

ಒಕ್ಕಲಿಗ ವ್ಯಕ್ತಿಯೊಬ್ಬನಿಗೆ ಏಳು ಜನ ಮಕ್ಕಳಿದ್ದರು. ಅದರಲ್ಲಿ ಕಿರಿಯವನು ಹುಟ್ಟತ್ತಲೇ ಕುಂಟನಾಗಿದ್ದ. ತನ್ನ ಕಿರಿಯ ಮಗನನ್ನು ಅದರಲ್ಲೂ ಕುಂಟನಾಗಿದ್ದ ಕಾರಣಕ್ಕಾಗಿಯೇ ಏನೋ ಅವನ ತಾಯಿ ಆತನನ್ನು ತುಂಬಾ ಪ್ರೀತಿಸುತ್ತಿದ್ದಳು. ಇದನ್ನು ಕಂಡು ಉಳಿದ ಆರು ಜನ ಅಣ್ಣಂದಿರು ತಾವು ದುಡಿಯುತ್ತಿರುವುದನ್ನು ನೋಡಿಯೂ ಏನೂ ದುಡಿಯದ ಕುಂಟನನ್ನು ಪ್ರೀತಿಸುವ ತಾಯಿಯ ಪಕ್ಷಪಾತವನ್ನು ಆಕ್ಷೇಪಿಸುತ್ತಿದ್ದರು. ಅಲ್ಲದೆ ತಮ್ಮ ಕಿರಿಯ ಸಹೋದರನನ್ನು ಈ ಕಾರಣಕ್ಕಾಗಿಯೇ ದ್ವೇಷಿಸುತ್ತಿದ್ದರು. ಜೊತೆಗೆ ತಮ್ಮ ಅಂಗವಿಕಲ ಸಹೋದರನನ್ನು ಕೊಲ್ಲಲು ಪ್ರಯತ್ನಿಸಿದರು. ಹಾಗೆ ಅವರು ಕೊಲ್ಲುವ ಪ್ರಯತ್ನ ಮಾಡಿದಾಗೆಲ್ಲ ಕುಂಟ ಸಹೋದರನನ್ನು ಅವರ ಮನೆಯ ಹೋರಿಯೊಂದು ಸದಾ ರಕ್ಷಿಸುತ್ತಿತ್ತು. ತಮ್ಮ ಪ್ರಯತ್ನಗಳೆಲ್ಲ ವಿಫಲವಾದಾಗ ಅವರು ತಮ್ಮ ಆಸ್ತಿ ಹಂಚಿಕೆ ಮಾಡಿಕೊಂಡು ಕುಂಟ ತಮ್ಮನನ್ನು ಒಂಟಿಯಾಗಿಸಲು ಮುಂದಾದರು. ಕುಂಟ ವ್ಯಕ್ತಿ ಆಸ್ತಿಯನ್ನು ತೆಗೆದುಕೊಂಡು ದುಡಿದು ಬದುಕಲು ಸಾಧ್ಯವೇ ಎಂದು ಯೋಚಿಸಿದ ಶಿವನು ಅಣ್ಣ ತಮ್ಮಂದಿರ ಮಧ್ಯೆ ರಾಜೀ ಸೂತ್ರವೊಂದನ್ನು ಏರ್ಪಡಿಸಿದನು. ಪಿತ್ರಾರ್ಜಿತವಾಗಿ ಬಂದ ಆಸ್ತಿ ಎಲ್ಲವನ್ನು ಆರು ಜನ ಅಣ್ಣತಮ್ಮಂದಿರು ಹಂಚಿಕೊಳ್ಳಬೇಕು. ಆದರೆ ಅಂಗವಿಕಲ ತಮ್ಮ ತನ್ನ ಅಣ್ಣಂದಿರ ಮನೆಗೆ ಎತ್ತಿನ ಮೇಲೆ ಹೋಗಿ ಗಂಟೆ ಬಾರಿಸಿ ಅವರಿಂದ ತನ್ನ ಪಾಲು ಪಡೆದು ಬದುಕಬೇಕು ಎಂದು ಶಿವನು ತೀರ್ಪು ನೀಡಿದನು. ಅಣ್ಣಂದಿರು ಅವನಿಗೆ ಬೇಕಾದ ದಾನ ನೀಡುತ್ತಾ ಬಂದರು. ಕುಂಟ (ಹೆಳವ) ವ್ಯಕ್ತಿ ಎತ್ತಿನ ಮೇಲೆ ಏರಿ ಗಂಟೆ ಬರಿಸುತ್ತಾ ಅಣ್ಣಂದಿರ ಮನೆಗೆ ಹೋಗಿ ತನ್ನ ಪಾಲನ್ನು ಪಡೆಯುವುದು ಮುಂದುವರೆದುಕೊಂಡು ಬಂದಿತು. ಮುಂದೆ ಈತನ ತಲೆಮಾರಿನ ಎಲ್ಲರೂ ಇದೇ ವೃತ್ತಿಯನ್ನು ಅನುಸರಿಸಿಕೊಂಡು ಬಂದರು. ಈ ಕುಂಟ (ಹೆಳವ) ನ ಸಂತತಿಯೇ ಮುಂದೆ ಹೆಳವರೆಂದು ಕರೆಯಲ್ಪಟ್ಟರು. ಇವರು ತಮ್ಮ ಒಕ್ಕಲಿಗರ ಮನೆಗೆ ಹೋಗಿ ಅವರ ಕುಲಗೋತ್ರಗಳ ಇತಿಹಾಸವನ್ನು ಹೇಳುತ್ತ ಭಿಕ್ಷೆ ಪಡೆಯುತ್ತ ಜೀವಿಸಲಾರಂಭಿಸಿದರು.[13]

ಪುರಾಣ – ೨

ಹೆಳವರು ತಮ್ಮನ್ನು ನಿಜಾಮನ ಆಳ್ವಿಕೆಗೊಳಪಟ್ಟಿದ್ದ ಕಲ್ಯಾಣದಿಂದ ಬಂದವರೆಂದು ಹೇಳುತ್ತಾರೆ. ಹನ್ನೆರಡನೇ ಶತಮಾನದ ಹೊತ್ತಿಗೆ ಶೈವಧರ್ಮವು ಅವನತಿಯ ಕಡೆಗೆ ಸಾಗುತ್ತಿತ್ತು. ಆಗ ಜೈನ ಧರ್ಮವು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಅದನ್ನು ನೋಡಿದ ಶಿವನು ತನ್ನ ಪ್ರಮಥರನ್ನು ಕರೆದು ಭೂಮಿಗೆ ಹೋಗಿ ಲಿಂಗಾಯಿತ ಧರ್ಮವನ್ನು ಉಳಿಸಿ ಎಂದು ಆಜ್ಞಾಪಿಸುತ್ತಾನೆ. ಹೀಗೆ ಶಿವನ ಆಜ್ಞೆಯಂತೆ ಭೂಮಿಗೆ ಬಂದ ಪ್ರಮಥರಲ್ಲಿ ಒಕ್ಕಾಲು ಭೃಂಗಿಯೂ (ಒಂಟಿಕಾಲಿನ ಭೃಂಗಿ) ಒಬ್ಬನು. ಹೆಳವರು ತಮ್ಮನ್ನು ಈ ಒಕ್ಕಾಲು ಭೃಂಗಿಯ ವಂಶಸ್ಥರು ಎಂದು ಹೇಳಿಕೊಳ್ಳುತ್ತಾರೆ. ಭೂಮಿಗೆ ಬಂದ ಪ್ರಮಥರೆಲ್ಲ ಮಾಸಲು ಕಂದು ಬಣ್ಣದ ಉಡುಪನ್ನು ಧರಿಸಿದ್ದರು. ಜೊತೆಗೆ ಎತ್ತುಗಳ ಮೇಲೆ ಕುಳಿತುಕೊಂಡು ಮನೆ ಮನೆಗೆ ಹೋಗಿ ಶಿವನ ಗುಣಗಾನ ಮಾಡಲಾರಂಭಿಸಿದರು. ಹೆಳವರು ತಮ್ಮನ್ನು ಈ ಒಕ್ಕಾಲು ಭೃಂಗಿಯ ವಂಶಸ್ಥರೆಂದು ಹೇಳಿಕೊಳ್ಳುತ್ತಾ ಎತ್ತುಗಳು ಮೇಲೆ ಹತ್ತಿಕೊಂಡು ಒಕ್ಕಲು ಮನೆಗಳಿಗೆ ಹೋಗಿ ಶಿವನ ಕಥೆಗಳನ್ನು ಹೇಳಿ ಭಿಕ್ಷೆ ಬೇಡುವುದನ್ನೇ ವೃತ್ತಿಯನ್ನಾಗಿಸಿಕೊಂಡರು. ಒಕ್ಕಾಲು ಭೃಂಗಿ ತಮ್ಮ ಮೂಲ ಪುರಷನಾಗಿದ್ದರಿಂದಾಗಿ, ಈವತ್ತಿನ ಹೆಳವರೂ ಸಹ ಕಾಲನ್ನು ಬಟ್ಟೆಯಿಂದ ಮರೆ ಮಾಡಿಕೊಳ್ಳುತ್ತಾರೆ.[14]

ಪುರಾಣ – ೩

ದೇವಲೋಕದಲ್ಲಿ ವಿಷ್ಣು, ಲಕ್ಷ್ಮಿ, ಬ್ರಹ್ಮ ಸರಸ್ವತಿ ಮತ್ತು ಶಿವ ಪಾರ್ವತಿಯರ ವಿವಾಹ ಏರ್ಪಟ್ಟಿತ್ತು. ಇವರ ವಿವಾಹ ನಡೆಯುವ ಸಂದರ್ಭದಲ್ಲಿ ವಧುವರರ ಗೋತ್ರಗಳನ್ನು ಹೇಳುವ ವ್ಯಕ್ತಿಯೊಬ್ಬನ ಅವಶ್ಯಕತೆ ಉಂಟಾಯಿತು. ಆಗ ಮಣ್ಣಿನಿಂದ ಬೊಂಬೆಯೊಂದನ್ನು ಮಾಡಿ ಅದಕ್ಕೆ ಜೀವ ತುಂಬಲಾಯಿತು. ಈ ಬೊಂಬೆಯ ಒಂದು ಕಾಲು ಕುಂಟಾಗಿತ್ತು. ತ್ರಿಮೂರ್ತಿಗಳಿಂದ ಜೀವ ಪಡೆದ ಈ ವ್ಯಕ್ತಿಯು ನವ ವಧುವರರ ಗೋತ್ರಗಳನ್ನು ಹೇಳಿದನು. ತ್ರಿಮೂರ್ತಿಗಳು ಈ ಕುಂಟ ವ್ಯಕ್ತಿಯನ್ನು ಗೋತ್ರ ಹೇಳುವ ಈ ವೃತ್ತಿಯನ್ನೇ ಅವಲಂಬಿಸಿ ಬದುಕು ಎಂದು ಆಶೀರ್ವದಿಸಿದರು. ಈ ಕುಂಟ ವ್ಯಕ್ತಿಯ ವಂಶದವರೇ ಈ ಪಿಚ್ಚಗುಂಟಲ ಸಮುದಾಯವಾಗಿದೆ. ಇವರೇ ಮುಂದೆ ಗೋತ್ರ ಹೇಳುವ ವಂಶಾವಳಿಶಾಸ್ತ್ರಜ್ಞರಾಗಿ ರೂಪುಗೊಂಡರು. ಇವರು ಕಾಪು ಮತ್ತು ಗೊಲ್ಲ ಸಮುದಾಯದ ಮನೆಗಳಿಗೆ ಹೋಗಿ ಗೋತ್ರ ಹೇಳುತ್ತಾ ಭಿಕ್ಷೆ ಬೇಡಿ ಬದುಕುತ್ತಿದ್ದಾರೆ.[15]

ಪುರಾಣ – ೪

ಏಳು ಜನಗೊಲ್ಲ ಮಹಿಳೆಯರಿಗೆ ಮಕ್ಕಳಿರಲಿಲ್ಲ. ಇವರು ತಮಗೆ ಸಂತಾನ ಕರುಣಿಸುವಂತೆ ಶಿವನನ್ನು ಬೇಡಿದರು. ಶಿವ ಅವರಿಗೆ ಒಬ್ಬ ಕುಂಟ ಬಾಲಕನನ್ನು ಕೊಟ್ಟನ್ನು. ಅಲ್ಲದೆ ಶಿವನ ವರದಿಂದಾಗಿ ಈ ಏಳು ಜನ ಮಹಿಳೆಯರು ಗರ್ಭಿಣಿಯರಾದರು. ಅಲ್ಲದೆ ಏಳೂ ಜನ ಏಳು ಹೆಣ್ಣು ಕೂಸುಗಳಿಗೆ ಜನ್ಮ ನೀಡಿದರು. ದೇವರ ಅಣತಿಯಂತೆ ತನ್ನ ಏಳೂ ಜನ ಹೆಣ್ಣು ಮಕ್ಕಳನ್ನು ಕುಂಟ ಬಾಲಕನಿಗೆ ಕೊಟ್ಟು ಮದುವೆ ಮಾಡಿದರು. ಆನಂತರ ಈ ಕುಂಟ ವ್ಯಕ್ತಿಯು ಶಂಖ, ಗಂಟೆ, ಒಂದು ಎತ್ತು ಮತ್ತು ಗಜಶೂಲವನ್ನು ಪಡೆದುಕೊಂಡು ಅಲೆಮಾರಿಯಾಗಿ ಭಿಕ್ಷೆ ಬೇಡುತ್ತ ಬದುಕಲಾರಂಭಿಸಿದ. ಎತ್ತಿನ ಮೇಲೆ ಹತ್ತಿಕೊಂಡು ಊರೂರು ಸುತ್ತತೊಡಗಿದ. ಪಿಚ್ಚಗುಂಟ್ಲ ಸಮುದಾಯದವರು ಈತನನ್ನೇ ತಮ್ಮ ಮೂಲ ಪುರುಷ ಎಂದು ಹೇಳಿಕೊಳ್ಳುತ್ತಾರೆ.[16]

ಪುರಾಣ – ೫

ಶಿವನ ಒಡ್ಡೋಲಗದಲ್ಲಿ ವಿರಾಜಿಸುವ ಶಿವಗಣದಲ್ಲಿ ಶೃಂಗಿ ಹಾಗೂ ಒಕ್ಕಾಲ ಭೃಂಗಿ ಪ್ರಮುಖರು. ಶೃಂಗಿ ಶಿವಪಾರ್ವತಿಯರನ್ನು ಸಮಾನವಾಗಿ ಗೌರವಿಸುತ್ತಿದ್ದ, ಭಕ್ತಿಯಿಂದ ಇಬ್ಬರಿಗೂ ಕೈಮುಗಿಯುತ್ತಿದ್ದ, ಒಕ್ಕಾಲಭೃಂಗಿಯ ಸ್ವಭಾವ ವಿಚಿತ್ರವಾಗಿತ್ತು. ಅವನು ತನ್ನ ಒಲವನ್ನೆಲ್ಲ ಶಿವನಿಗೆ ಮಾತ್ರ ಮೀಸಲಾಗಿಟ್ಟಿದ್ದ. ಪಾರ್ವತಿಗೆ ನಮಸ್ಕಾರವನ್ನು ಮಾಡುತ್ತಿರಲಿಲ್ಲ. ಈ ಸೋಜಿಗದ ಸಂಗತಿಯನ್ನರಿತ ನಾರದ, ಭೃಂಗಿಯ ಭಕ್ತಿಯ ರೀತಿಯನ್ನು ಒಮ್ಮೆ ಪಾರ್ವತಿಗೆ ತಿಳಿಸಿದ. ಸ್ವಾಭಿಮಾನಿಯಾದ ಪಾರ್ವತಿ ಇದನ್ನು ಸೂಕ್ಷ್ಮವಾಗಿ ಗಮನಿಸಿ, ಭೃಂಗಿಯನ್ನುದ್ವೇಶಿಸಿ ‘ನಿನ್ನ ದೇಹದಲ್ಲಿ ಪ್ರವಹಿಸುವ ಶಕ್ತಿಯ ಸಂಚಯವೆಲ್ಲ ನನ್ನದಾಗಿದ್ದರೂ ನೀನು ನನಗೇಕೆ ನಮಸ್ಕರಿಸುವುದಿಲ್ಲ, ಗೌರವಿಸುವುದಿಲ್ಲ’ ಎಂಧು ಪ್ರಶ್ನಿಸಿದಳು. ನಿರ್ವಿಕಾರ ಮನಸ್ಸಿನಿಂದ ಭೃಂಗಿ ‘ದೇವಿ, ಶಿವನೇ ನನ್ನ ಪರಮ ದೈವ, ಅವನೊಬ್ಬನೇ ಸರ್ವಶಕ್ತ, ಸಂರಕ್ಷಕ, ಆದ್ದರಿಂದ ನನ್ನ ಭಕ್ತಿ ಅವನೊಬ್ಬನಿಗೇ ಮೀಸಲಾಗಿದೆ’ ಎಂದು ಉತ್ತರಿಸದ. ಅವನ ಮಾರುತ್ತರ ಕೇಳಿ, ಪಾರ್ವತಿ ಕೆರಳಿ ಕೆಂಡವಾದಳು. ಅವನ ದೇಹದಲ್ಲಿರುವ ತನ್ನ ಶಕ್ತಿಯನ್ನೆಲ್ಲ ಸೆಳೆದುಕೊಂಡಳು, ಭೃಂಗಿ ನಿಶ್ಚೇಷ್ಟಿತ ಮಾಂಸದ ಮುದ್ದಿಯಾಗಿ ಬಿದ್ದ. ತನ್ನ ಪರಮ ಭಕ್ತಿನಿಗೊದಗಿದ ದುರಂತವನ್ನು ಕಂಡು ಪರಮಾತ್ಮನ ಹೃದಯ ಕರಗಿತು ಕರುಣೆಯಿಂದ ಭೃಂಗಿಗೆ ತನ್ನ ಶಕ್ತಿಯನ್ನೇ ಧಾರೆಯೆರೆದ. ಅದರಿಂದ ಭೃಂಗಿ ಸ್ವಲ್ಪ ಚೇತರಿಸಿಕೊಂಡನಾದರೂ, ಸರಿಯಾಗಿ ಚಲಿಸುವ ಶಕ್ತಿ ಬರಲಿಲ್ಲ. ಬೇರಾವ ಕೆಲಸ ನಿರ್ವಹಿಸಲು ಅವನು ಅಸಮರ್ಥನಾದ, ಅದರಿಂದ ಅನುಕಂಪಗೊಂಡ ಪರಮಾತ್ಮ ಅವನಿಗೆ ನಂದಿವಾಹನ ಕೊಟ್ಟ. ಆದರ ಮೇಲೆ ಕುಳಿತು ಭಕ್ತರ ವಂಶಾವಳಿಯನ್ನು ಹೇಳಿ, ಜೀವಿಸೆಂದು ಆಶೀರ್ವದಿಸಿದ. ಆ ಒಕ್ಕಾಲ ಭೃಂಗಿಯ ವಂಶಜರೇ ಮುಂದೆ ಹೆಳವರಾದರು[17].

ಪುರಾಣ – ೬

ಶಿವನ ಆಸ್ಥಾನದಲ್ಲಿರುವ ೬೩ ಪುರಾತನರಲ್ಲಿ ಒಕ್ಕಾಲ ಭೃಂಗಿಯೂ ಒಬ್ಬ. ಅವನಿಗೆ ಬಲಗಾಲು, ಅವನ ಹೆಂಡತಿಗೆ ಎಡಗಾಲು ಇದ್ದಿರಲಿಲ್ಲ. ಆದರೂ, ಅವನು ಭಕ್ತಿಯಿಂದ ನರ್ತನ ಮಾಡಿ, ಶಿವನಿಗೆ ಬಲಗೈಯಿಂದ, ಪಾರ್ವತಿಗೆ ಎಡಗೈಯಿಂದ ನಮಸ್ಕರಿಸುತ್ತಿದ್ದ ಅವನು ನಮಸ್ಕರಿಸುವ ವಿಚಿತ್ರ ರೀತಿಯನ್ನು ಕಂಡು, ಪಾರ್ವತಿ ಅವನನ್ನೊಮ್ಮೆ ‘ಹೀಗೇಕೆ”? ಎಂಧು ವಿಚಾರಿಸಿದಳು. ಅದಕ್ಕೆ ಭೃಂಗಿ, ‘ನಮ್ಮಪ್ಪನ ಎಡಕ್ಕೆ ಕುಳಿತು ಮದುವೆ ಆಗಿರುವುದರಿಂದ ನೀನು ಎಡ, ನಮ್ಮಪ್ಪ ಬಲ, ಆದ್ದರಿಂದ ನಿನಗೆ ಎಡಗೈಯಿಂಧ ಎಡಕ್ಕೆ ನಮಸ್ಕರಿಸುವೆನು.’ ಎಂದು ನುಡಿದ. ಕುಷಿತಳಾದ ಪಾರ್ವತಿ, ಅವನಲ್ಲಿರುವ ತನ್ನ ಶಕ್ತಿ ಸಂಚಯದ ‘ರೋಮ’ಗಳನ್ನು ಕೇಳಿದಳು. ಅದರಿಂದ ಸ್ವಲ್ಪವೂ ಧೃತಿಗೆಡದ ಅವನು, ಹೆಬ್ಬೆರಳಿನಿಂದ ಹಿಡಿದು ತನ್ನ ಇಡೀ ದೇಹದ ತ್ವಚವನ್ನು ಸುಲಿದುಕೊಟ್ಟನು. ಕಳವಳಗೊಂಡ ಸಕಲ ಪುರಾತನರು, ಭೃಂಗಿಯನ್ನುದ್ಧರಿಸಲು ಪರಮಾತ್ಮನಲ್ಲಿ ಪ್ರಾರ್ಥಿಸಿದರು. ಪ್ರಸನ್ನನಾದ ಶಿವನು, ಅವನನ್ನು ಮುನ್ನಿನಂತೆ ಮಾಡಿ, ನಂದಿವಾಹನ ಕೊಟ್ಟನು. ಅದರ ಮೇಲೆ ಕುಳಿತು, ೬೩ ಪುರಾತನರ ವಂಶಾವಳಿ ಹೊಗಳುತ್ತಾ ಜೀವಿಸೆಂದು ಆಶೀರ್ವದಿಸಿದ. ಆ ಒಕ್ಕಾಲ ಭೃಂಗಿಯ ವಂಶಜರೇ ಹೆಳವರಾದರು.[18]

ಪುರಾಣ – ೭

ನಾರದನಿಗೆ ಅರವತ್ತು ಮೂರು ಮಕ್ಕಳಂತೆ, ಅವರಲ್ಲಿ ಒಬ್ಬ ಕುಂಟ ಹುಟ್ಟಿದನಂತೆ. ನಾರದನು ಭಕ್ತಿಯಿಂದ ಶಿವನನ್ನು ಪ್ರಾರ್ಥಿಸಿ, ಕುಂಟ ಮಗನಿಗೆ ಜೀವನೋಪಾಯವನ್ನು ಕಲ್ಪಿಸಿಕೊಂಡು ಎಂದು ಕೇಳಿದಂತೆ, ಆಗ ಶಿವನು ಒಂದು ನಂದಿಯನ್ನು ಕೊಟ್ಟು, ಅದರ ಮೇಲೆ ಕೂತು ಅರವತ್ತು ಮೂರು ಜನ ಪುರಾತನರ ವಂಶಾವಳಿಯನ್ನು ಹೇಳಿಕೊಂಡು ಜೀವಿಸು ಎಂದು ಹೇಳಿದನಂತೆ. ಅಂದಿನಿಂದ ಎತ್ತು ಅವರಿಗೆ ಬಳುವಳಿಯಾಗಿ ಬಂದು, ‘ಎತ್ತಿನ ಹೆಳವರು’ ಎಂದು ಹೆಸರಾಯಿತಂತೆ.[19]

ಪುರಾಣ – ೮

ಒಂದಾನೊಂದು ಕಾಲದಲ್ಲಿ ಮೂವತ್ತಮೂರು ಕೋಟಿ ದೇವಾದಿ ದೇವತೆಗಳು ಶಿವನೊಡ್ಡೋಲಗದಲ್ಲಿ ಸಭೆ ಸೇರಿದರು. ಆ ಸಭೆಯಲ್ಲಿ ಶೃಂಗಿ ಹಾಗೂ ಭೃಂಗಿ ಅಷ್ಟೇ ಪ್ರಮುಖರು. ‘ಶೃಂಗಿ’ ಶಿವಪಾರ್ವತಿಯರನ್ನು ಸರಿಸಮವಾಗಿ ಭಕ್ತಿಗೌರವದಿಂದ ಕೈಮೂಗಿಯುತ್ತಿದ್ದನು. ಆದರೆ ಭೃಂಗಿಯ ಭಕ್ತಿ ಶಿವನೊಬ್ಬನಿಗೆ ಮೀಸಲು. ಈ ಸೋಜಿಗದ ಸಂಗತಿಯನ್ನರಿತ ಪಾರ್ವತಿಯು ಭೃಂಗಿಯನ್ನುದ್ದೇಶಿಸಿ, ಶಿವನೊಬ್ಬನಿಗೆ ನಮಸ್ಕಾರ ಮಾಡುವಿ, ನನಗೇಕೆ ನಮಸ್ಕರಿಸುವುದಿಲ್ಲ? ಎಂಧು ಕೇಳಿದಳು. ಆಗ ತಾಯಿ ನನ್ನ ಪರಮದೈವ ಶಿವನೊಬ್ಬನೇ, ನನ್ನ ಭಕ್ತಿ ಗೌರವ ಶಿವನೊಬ್ಬನಿಗೆ ಮೀಸಲಿಟ್ಟಿರುವೆ ಎಂದನು. ಈ ಮಾತುಗಳನ್ನು ಸಹಿಸದೇ ಕುಪಿತಳಾದ ಪಾರ್ವತಿ ಕ್ಷಣಾರ್ಧದಲ್ಲಿಯೇ ಭೃಂಗಿಗೆ ಕೈಕಾಲು ಊನವಾಗುವಂತೆ ಶಾಪ ವಿಧಿಸಿದಳು. ಮಾತ್ರವಲ್ಲ ಅವನ ದೇಹದಲ್ಲಿರುವ ರಕ್ತ ಮಾಂಸಗಳನ್ನು ದೃಷ್ಟಿಮಾತ್ರದಿಂದಲೇ ಹೀರಿಕೊಂಡಳು. ಕೊನೆಗೆ ಅಲ್ಲಿ ಉಳಿದದ್ದು ಭೃಂಗಿಯ ಎಲುಬಿನ ಹಂದರ. ಅದು ಕೂಡ ಕಣ್ಣ ಮೂಂದೆ ಇರಬಾರದೆಂದು ಆಕಾಶ ಭೂಮಿಯ ಮಧ್ಯ ಹಾರಾಡುವಂತೆ ಮಾಡಿದಳು. ಶಿವನಿಗೆ ಈ ವಿಷಯ ನಾರದನಿಂದ ಗೊತ್ತಾದಾಗ, ಪಾರ್ವತಿಯನ್ನು ಕರೆದು ಕೋಪದಿಂದ ಗದರಿಸಿದನು. ಅವರಿಬ್ಬರ ನಡುವೆ ವಾಗ್ವಾದ ನಡೆಯಿತು. ಭೃಂಗೇಶ್ವರ ನನ್ನ ಮಗ, ಅವನ ಭಕ್ತಿ ಗೌರವಕ್ಕೆ ಮೆಚ್ಚಿರುವೆನು, ಅವನಿಗೆ ಈ ಶಿಕ್ಷೆ ಆಗಬಾರದೆಂದು ಹೇಳಿ ತನ್ನ ಕೈಯಲ್ಲಿಯ ತ್ರಿಶೂಲ ಆಧಾರವಾಗಿಟ್ಟನು. ಕ್ಷಣಾರ್ಧದಲ್ಲಿಯೇ ಭೃಂಗಿಯ ಎಲುಬಿನ ಹಂದರ ತ್ರಿಶೂಲದ ಮೇಲೆ ಬಂದು ನಿಂತಿತು. ಕೊನೆಗೆ ಪಾರ್ವತಿ ಸೋತೆನೆಂದು ಶಿವನಿಗೆ ಶರಣಾದಳು. ಶಿವನ ಅಪ್ಪಣೆ ಮೇರೆಗೆ ಭೃಂಗೇಶ್ವರನಿಗೆ ವಿಧಿಸಿದ ಶಾಪ ಹಿಂತೆಗೆದುಕೊಂಡು, ಮತ್ತೆ ರಕ್ತ ಮಾಂಸವನ್ನು ಧಾರೆ ಎರೆದಳು. ಭೃಂಗೇಶ್ವರನಿಗೆ ಶಿವನಂದಿ ಮತ್ತು ಲಿಂಗ ಮುದ್ರೆ ಕೊಟ್ಟು ಈ ಭೂಮಂಡಲ ಇರುವವರೆಗೆ ನಿನ್ನ ಕೀರ್ತಿ ಚಿರಾಯುವಾಘಲಿ. ಜಾತಿ ಮತ ಭೇದವನ್ನು ಅರಿತು ಕುಲಗೋತ್ರ ಆಗುಹೋಗುಗಳನ್ನು ಹೊಗಳುತ್ತ ಅವರಿಂದ ಸಂಭಾವನೆಯಾಗಿ ದವಸ ಧಾನ್ಯಗಳನ್ನು ಪಡೆದು ಜೀವನ ಸಾಗಿಸು ಎಂದು ಆಶೀರ್ವದಿಸಿ ಮಾಯವಾದರು. ಮುಂದೆ ಭೃಂಗೇಶ್ವರನಿಂದ ಹೆಳವ ಪರಂಪರೆ ಬೆಳೆಯಿತು. ಕಾರಣ ಭೃಂಗೇಶ್ವರ ಹೆಳವರ ಮೂಲಪುರುಷನೆಂದು ಐತಿಹ್ಯ.[20]

ಪುರಾಣ – ೯

ಬಸವಣ್ಣನವರ ಕಾಲದದಲ್ಲಿ ಒಕ್ಕಲು ಗೌಡನಿಗೆ ಏಳು ಜನ ಗಂಡುಮಕ್ಕಳಿದ್ದರು. ಅವರಲ್ಲಿ ಕಿರಿಯವ ಹುಟ್ಟಾ ಅಂಗಹೀನ ಇದ್ದ. ಆದ್ದರಿಂದ ಜನರು ಅವನನ್ನು ‘ಹೆಳವ’ ಎಂದೇ ಕರೆಯುತ್ತಿದ್ದರು. ಮಕ್ಕಳು ದೊಡ್ಡವರಾದ ಬಳಿಕ ಯೋಗ್ಯ ಕನ್ಯೆ ನೋಡಿ ಮದುವೆ ಮಾಡಿದರು. ಆದರೆ ಹೆಳವನಿಗೆ ಯಾರೂ ಹೆಣ್ಣು ಕೊಡಲಿಲ್ಲ. ಮುಂದೆ ಅಣ್ಣಂದಿರು ಬೇರೆಯಾದರು. ಎಲ್ಲರಿಗೂ ಆಸ್ತಿಯನ್ನು ಸಮಾನಾಗಿ ಹಂಚಿಕೊಟ್ಟರು. ಹೆಳವನಿಗೆ ಏನೂ ಕೊಡಲಿಲ್ಲ. ಅವರೆಲ್ಲರೂ ದಿನನಿತ್ಯ ಪ್ರತಿಯೊಬ್ಬರ ಮನೆಗೆ ಬಂದು ಊಟ ಮಾಡಿ ಹೋಗು, ಆಸ್ತಿಯಲ್ಲಿ ಪಾಲು ತೆಗೆದುಕೊಂಡು ನೀನೇನ್ ಮಾಡ್ತಿ ಎಂದು ಹೇಳಿದರು. ಹೆಳವನ ತಾಯಿ ಸದಾ ಅವನಿಗೆ ಬೆಂಗಾವಲಾಗಿ ಇದ್ದಳು. ಕುಂಟ ಮಗ ಹೇಗೆ ಜೀವನ ಸಾಗಿಸುವನು ಎಂದು ಚಿಂತೆ ಮಾಡುತ್ತಿದ್ದಳು. ಹೆಳವನು ಯಾರ ಹಂಗಿನಲಲ್ಯೂ ಇರಬಾರದೆಂದು ಯೋಚಿಸಿ ಬಡಬಗ್ಗರಿಗೆ ಅನ್ನದಾತನಾಗಿದ್ದ ಬಸವಣ್ಣನವರ ಬಳಿ ಕಲ್ಯಾಣಕ್ಕೆ ಬಂದನು. ಅಲ್ಲಿ ಸಾವಿರಾರು ಜನ ದೀನದಲಿತರಿಗೆ ಮತ್ತು ಶರಣರಿಗೆ ಸ್ಥಳಾವಕಾಶವಿತ್ತು. ಅವರ ಮಧ್ಯದಲ್ಲಿಯೇ ಹೆಳವ ಇರತೊಡಗಿದ.

ಬಸವಣ್ಣನವರು ಕಲ್ಯಾಣದಲ್ಲಿ ಅರವತ್ತ ಮೂರು ಜನ ಶಿವಶರಣರಿಗೆ ಒಂದೊಂದು ಕಾಯಕ ಒದಗಿಸಿಕೊಟ್ಟಿದ್ದರು. ಆಗ ಹೆಳವನು ಬಸವಣ್ಣನವರ ಬಳಿ ಬಂದು ನನಗೂ ಯಾವುದಾದರೊಂದು ಕಾಯಕ ಕೊಡಬೇಕೆಂದು ಕೇಳಿಕೊಂಡನು. ಆಗ ಬಸವಣ್ಣನವು ಹೆಳವನಿಗೆ ಯಾವ ಕೆಲಸ ಹಚ್ಚಬೇಕು? ಇವನು ಕುಂಟ ಇವನಿಗೆ ಕೆಲಸ ಹಚ್ಚಿದರೆ ಹೇಹೆ ಮಾಡುವನು ಎಂದು ಯೋಚಿಸಿದರು. ಕೊನೆಗೆ ಒಂದು ಉಪಾಯ ಮಾಡಿ ಹೆಳವನಿಗೆ ಕುಳಿತುಕೊಳ್ಳಲಿಕ್ಕೆ ನಂದಿ ಕೊಟ್ಟು ಪ್ರತಿದಿನ ಬೆಳಗಾಗುವ ಪೂರ್ವದಲ್ಲಿಯೇ ಅರವತ್ತ ಮೂರು ಜನ ಪುರೋಹಿತರ ಮನೆಗಳಿಗೆ ಹೋಗಿ ಅವರ ಆಗುಹೋಗುಗಳ ಬಗ್ಗೆ ವಿಚಾರಿಸಿಕೊಂಡು ಬರಬೇಕೆಂದು ಹೇಳಿದರಂತೆ. ಹೆಳವನು ದಿನಾಲು ಅದೇ ವೃತ್ತಿ ಮಾಡತೊಡಗಿದ. ಇದು ಒಂದು ವೃತ್ತಿಯಾಗಿಯೇ ಬೆಳೆಯಿತು. ಮುಂದೆ ಪುರೋಹಿತರು ಯಾವ ಊರುಗಳಿಗೆ ಹೋಗಿ ನೆಲೆಸಿದರೋ ಅಲ್ಲಯೋ ಹೋಗತೊಡಗಿದ. ಇವನನ್ನು ಕಂಡು ಕಾಳು – ಕಡಿಗಳನ್ನು ಕೂಡತೊಡಗಿದರು. ಇದು ಒಂದು ವೃತ್ತಿಯಾಗಿಯೇ ಮುಂದುವರಿಯಿತು.

ಕೆಲವು ದಿನಗಳಾದ ಬಳಿಕ ಹೆಳವನಿಗೆ ಮದುವೆಯಾಯಿತು. ಅವನ ಹೊಟ್ಟೆಯಿಂದ ಮಕ್ಕಳು, ಮರಿಮಕ್ಕಳು ಹುಟ್ಟಿಕೊಂಡರು. ಅವರು ಕೂಡ ಇದೇ ವೃತ್ತಿಯ್ನು ಅವಲಂಬಿಸಿಕೊಂಡರು. ಹೆಳವನ ಹೊಟ್ಟೆಯಿಂದು ಹುಟ್ಟಿದ್ದಕ್ಕೆ ಜನ ಹೆಳವನ ಮಕ್ಕಳು ಎಂದು ಕರೆಯತೊಡಗಿದರು.[21]

ಪುರಾಣ – ೧೦

ವಿಜಯನಗರ ಪಟ್ಟಣದಲ್ಲಿ ಭೂಮಿಪುತ್ರನಾಗಿ ಮುದ್ದುರಾಜೇಗೌಡ ಹುಟ್ಟಿದ. ಹನ್ನೆರಡು ವರ್ಷ ಅಲ್ಲಿ ಒಗೆತನ ಮಾಡಿಕೊಂಡಿರಬೇಕಾದರೆ ‘ಸುಲ್ತಾನ್ ಮಹಮದ್’ ವಿಜಯನಗರವನ್ನು ಆಕ್ರಮಿಸಿಕೊಂಡು ಒಕ್ಕಲು ಮಕ್ಕಳಿಗೆ ಕಿರುಕುಳಕೊಡತೊಡಗಿದ. ರಾಜೇಗೌಡನಿಗೆ ಹದಿನೆಂಟು ಮಂದಿ ಗಂಡು ಮಕ್ಕಳು, ಹದಿನೆಂಟು ಮಂದಿ ಹೆಣ್ಣು ಮಕ್ಕಳು. ತನ್ನಷ್ಟೇ ವೈಭವದಿಂದ ಬಾಳುತ್ತಿದ್ದ ರಾಜೇಗೌಡನ, ಅವನ ಮಕ್ಕಳ ಕಂಚಿನ ಕದಗಳನ್ನು ಕೀಳಿಸಿ ಹಾಳುಗೆಡವಬೇಕೆಂಬುದು ಸುಲ್ತಾನನ ಇಚ್ಛೆಯಾಯಿತು. ಅವನ ಕಿರುಕುಳವನ್ನು ತಾಳಲಾರದೆ ಅಟ್ಟದಲ್ಲಿದ್ದ ‘ಹೊನ್ನು ಚಿನ್ನ’ ವನ್ನೆಲ್ಲ ಹೇರಿಕೊಂಡು ‘ಅವು ಗೋವನ್ನೆಲ್ಲ’ ಸಾಗಿಸಿಕೊಂಡು ಮುಂದಲ ಸೀಮೆಗೆ ಹೊರಟರು.

‘ಹತ್ತಚಿತ್ತೆ’ ಮಳೆಯಾಗಿ ಕರುಹೊಳೆ ತುಂಬಿ ಪರಿಯುತ್ತಿತ್ತು. ಮುಂದೆ ಇವರಿಗೆ ದಾರಿಯೇ ತೋರದೆ ಗಂಗಮ್ಮನನ್ನು ಬೇಡಿದರು, ಒಂದು ‘ಬಂಡಿ ಹೊಳೆ’ ದಾರಿ ಬಿಡುವಂತೆ. ಗಂಗಮ್ಮ ಮಾತಾಡಲಿಲ್ಲ. ಮತ್ತೆ ಮತ್ತೆ ಬೇಡಿದರು. “ನಿನ್ನ ಗಂಗೆ ದಡದಲ್ಲಿ ನೂರೊಂದು ಊರ ಕಟ್ಟುತೀವಿ, ನೂರೊಂದು ಕೇರಿ ಮಾಡುತೀವಿ, ನಮಗೆ ಆಚೆಗೆ ಬಿಟ್ಟುಕೊಡುತಾಯಿ” ಎಂದು ಬಿದ್ದು ಬಿದ್ದು ಬೇಡಿದರು. ಗಂಗೆಗೆ ಕರುಣೆ ಬಂದಿತು. ‘ಕೆಳಗಲ ನೀರೆಲ್ಲ ಬಸ್ತು ಹೋಯಿತು, ಮೇಗಲ ನೀರೆಲ್ಲ ನಂದಿ ಪರ್ವತವಾಗಿ ನಿಂತು ಹೋಯಿತಂತೆ, ಶಿವನೆ!’

ಗಂಗೆಯನ್ನು ದಾಟಿ ಬಂದು ಆಚೆಯ ದಡದಲ್ಲಿ ದೊಡ್ಡ ಗ್ರಾಮವನ್ನು ಕಟ್ಟಿದರು. ಗಂಗೆಗೆ ಬಲಿಕೊಡಬೇಕು. ಯಾರನ್ನು ಕೊಡಬೇಕೆಂದು ಯೋಚನೆಯಾಯಿತು. ನಟ್ಟನಡುವೆ ಹುಟ್ಟಿದ ಜಲದೀರು ಬಪ್ಪರಾಯನಿಗೆ ಇಲ್ಲದ ‘ಹುಚ್ಚು ತೊಳಗ ಬಂತಂತೆ: ಇಲ್ಲದ ಬೆಪ್ಪು ತೊಳಗ ಬಂದು ಬಿಟ್ಟಿತು. ಚಿನ್ನದ ಗಂಡುಗತ್ತರಿ ಮಾಡಿಸಿಕೊಂಡು’ ನಡು ಗಂಗೆಗೆ ಹೋಗಿ “ಸುಲ್ತಾನ ಮಹಮದನಿಗೆ ದಾರಿಬಿಡಬೇಡ” ಎಂದು ಹೇಳಿ, ತಲೆಯನ್ನು ಕತ್ತರಿಸಿ ಗಂಗಮ್ಮನಿಗೆ ಅರ್ಪಿಸಿದ. ಆಗಿ ಗಂಗೆ “ಇವತ್ತಿನ ದಿನದಲ್ಲಿ ನನ್ನ ಗಂಗೆ ಒಳಗೆ ಒಬ್ಬ ಹತನೆಮಾಡಿದರೆ, ನನ್ನ ಮುಂದಿನ ಗಂಗೆಗೆ ಮಗನಾರು? ತುಂಬಿದ ಕೆರೆ ತೂಬೆತ್ತಾಕಿಲ್ಲ!” ಎಂದು ಯೋಚಿಸಿ ಗಂಗೆ ಬೊಪ್ಪರಾಯನ ಪ್ರಾಣವನ್ನು ಪಡೆದಳು. “ತುಂಬಿದ ಕೆರೆಯಲ್ಲಿ ಮೀನು ಮಿಡಚೆ ಹಿಡಕೊಂಡು. ನನ್ನ ಗಂಗೆ ಮಗನಾಗಿ ಅಂಬಿಗರೋನಾಗಿ ಇರಪ್ಪ” ಎಂದು ಹರಸಿದಳು.

ಮುಂದೆ ‘ಕರುಹೊಳೆ’ಯ ತೀರದ ಗ್ರಾಮದ ಗೌಡಗಳು ಹನ್ನೆರಡು ವರ್ಷ ಬದುಕುಬಾಳು ಮಾಡಿ ‘ನೂರೊಂದು ಕುಲ, ಹದಿನೆಂಟು ಪಣಕಟ್ಟು’ ಹಂಚಿಕೊಳ್ಳಬೇಕೆಂದು ಕುಲಜಾತಿ ಹಂಚುವಾಗ ‘ಕುಂತಿದ್ದವನು ಕುಂಚ ಒಕ್ಕಲಿಗನದ, ನಿಂತಿದ್ದವನು ನಿಜೊಕ್ಕಲಿಗನಾದ, ಬೆಳ್ಳೆ ಹುಟ್ಟಿದಾಗ ಬೆಳ್ಳಿಗುಲದವನಾದ…’ ಹೀಗೆ ಒಂದೊಂದು ಕುಲವಾಗಿ ನಿಂತಾಗ ಹದಿನೆಂಟು ಗೌಡಗಳ ಪೈಕಿ, ಒಬ್ಬ ಹೆಳವ. ಅವನಿಗೂ ಹದಿನೆಂಟರಲ್ಲಿ ಒಂದು ಪಾಲು ತೆಗೆದರು. ಎಲ್ಲರೂ ತಮ್ಮ ಹೆಂಡತಿ ಮಕ್ಕಳು ಕಟ್ಟಿಕೊಂಡವರು ಇಚ್ಛೆ ಬಂದ ಕಡೆ ಹೋದರು. ಹೆಳವನನ್ನು ಯಾರೂ ಮಾತಾಡಿಸಲಿಲ್ಲ. ಅನ್ನ ನೀರು ಇಲ್ಲದೆ ಹೆಳವ ಕಣ್ಣೀರು ಹರಿಸುತ್ತಿದ್ದ. ಗಂಗೆಗೆ ಬಿದ್ದು ಪ್ರಾಣ ಬಿಡಬೇಕೆಂದು ಹೆಳವ ಕಾಲಿಲ್ಲದ್ದರಿಂದ ಉರುಳಿಕೊಂಡು ಹೋಗುತ್ತಿದ್ದದನ್ನು ಶಿವಪಾರ್ವತಿಯರು ನೊಡಿದರು. ನೊಳೇಣಿಯಲ್ಲಿ ಇಳಿದು ಬಂದು ಅವನ ಕಷ್ಟವನ್ನು ವಿಚಾರಿಸಿದರು. ಅವನಿಗೆ ‘ಶಿವಚಿತ್ತ’ ಕೊಟ್ಟು “ನೀನು ಬಸವೇಶ್ವರ ಎಲ್ಲಿ ಹೋಗುವುದಾದರೆ ಅಲ್ಲಿಗೆ ಹೋಗಿ ಶ್ರೀಶೈಲವನ್ನು ಸೇರಿಕೋ” ಮಕ್ಕಳಲ್ಲಿ ಒಬ್ಬಳನ್ನು ಹೆಂಡತಿಯಾಗಿಯೂ ಪಡೆದ. ಅವನ ಹೊಟ್ಟೆಯಲ್ಲಿ ಹದಿನೆಂಟು ಮಂದಿ ಗಂಡುಮಕ್ಕಳು ಹುಟ್ಟಿದರು. ಶಿವನ ಇಚ್ಛೆಯಂತೆ ಕುಲಜಾತಿಯನ್ನು ಹಂಚಿಕೊಂಡು ಅವರ ಮನೆಯ ಬಾಗಿಲಿಗೆ ಹೋಗಿ ‘ಧರ್ಮದ ಪಾಲನ್ನು’ ಪಡೆಯುವಂತಾಯಿತು. ‘ದಾಯಾದ ಪಾಲ’ನ್ನೆಲ್ಲ ಅವರಿಗೆ ಹಂಚಿ ತನ್ನ ಧರ್ಮದ ಪಾಲನ್ನು ಉಳಿದ ಅಣ್ಣಂದಿರಿಂದ ಪಡೆಯುವ ಅವಕಾಶ ಅವನಿಗೆ ಲಭ್ಯವಾಯಿತು. ಹೆಳವ ಪರಂಪರೆ ಹೀಗೆ ಬೆಳೆದು ಬಂದಿತು.[22]

ಪುರಾಣ – ೧೧

ಅನೇಕ ಶತಮಾನಗಳ ಇತಿಹಾಸ ಇರುವ ಹೆಳವರ ಬಗ್ಗೆ ಬೇರೆ ಏನಾದರೂ ಗ್ರಂಥದ ಆಧಾರಗಳಿವೆಯೇ ಎಂದು ನೋಡಿದಾಗ ಪಾಲ್ಕುರಿಕೆ ಸೋಮನಾಥನು ರಚಿಸಿದ ’ಪಂಡಿತಾರಾಧ್ಯ ಚರಿತೆ’ ಎಂಬ ದ್ವಿಪದ ಕಾವ್ಯದಲ್ಲಿ ಶ್ರೀಶೈಲ ಪರ್ವತವನ್ನು ಏರುತ್ತಿದ್ದ ‘ಪಿಚ್ಛುಕುಂಟುಲು’ ಎಂಬ ಭಿಕ್ಷುಕರ ವರ್ಣನೆ ಇರುವುದನ್ನು ಕಾಣಬಹುದು. ಶ್ರೀಶೈಲಕ್ಕೆ ಹೋಗುವ ಭಕ್ತರನ್ನು ದಾನ ಮಾಡಿದರೆಂದು ಪಿಚ್ಚುಕುಂಟರು ಬೇಡುತ್ತಾರೆ. ಆ ಪಿಚ್ಚುಕುಂಟರ ವರ್ಣನೆ ಹೀಗಿದೆ.

ಶರೀರದ ಮೇಲ್ಭಾಗ ಬಹು ಸುಂದರ, ಕೆಳಗಿನ ಭಾಗ (ಕಾಲು, ಬೆರಳು, ಕುಂಡೆಗಳು)ಲೋಪಭೂಯಿಷ್ಠ. ಬೆರಳುಗಳಿಲ್ಲದ ಪದಗಳು, ಮಣ್ಣಿನಿಂದ ಮಾಡಲ್ಪಟ್ಟ ಕಾಲುಗಳು, ತೊಗಲಿನಿಂದ ಮಾಡಲ್ಪಟ್ಟ ಕಾಲುಗಳು, ಸಣ್ಣ ಕಾಲುಗಳು, ಗಿಡ್ಡ ಕಾಲುಗಳು, ಚಿಕ್ಕ ಚಿಕ್ಕ ಕೈಗಳು, ತೊಗಲು ಕೈಗಳು ಈ ರೀತಿ ಅಂಗಹೀನರಾಗಿಯೂ, ನೋಡಲು ಅಸಹ್ಯವಾಗಿಯೂ ಇರುತ್ತಾರೆ. ಇವರು ತಮ್ಮ ಸ್ತ್ರೀಯರನ್ನೂ (ಇವರು ಹೇಗಿದ್ದರೋ ತಿಳಿಯದು) ಆಶ್ರಿತರನ್ನೂ ಯಾತ್ರಿಕರಿಗೆ ತೋರಿಸಿ ದೈನ್ಯತೆಯ ನೋಟಗಳನ್ನು ಬೀರಿ ಕರುಣಾರಸವು ಉಕ್ಕಿಬರುವಂತೆ ಬೇಡಿಕೊಳ್ಳುತ್ತಿದ್ದರು. ಕಹಳೆಗಳನ್ನು (ಗಂಟೆಗಳನ್ನಲ್ಲ) ಹಿಡಿದು, ನೇತಾಡುವ ಜಡೆಗಳಿಂದ ಕೂಡಿ, ಕೋಣಗಳನ್ನು ಎತ್ತುಗಳನ್ನೂ ಹತ್ತಿ ಜನರೆಲ್ಲರೂ ದಾನಮಾಡಿರೇ! ಬಸವದಂಡನಾಯಕ ಬಹಳ ಒಳ್ಳೆಯ ದಾತ. ಅವನು ದೀನರನ್ನು ಬೇರೆ ದೇಶಗಳಿಗೆ ಕಳುಹಿಸದೆ ಭೂದಾನ ಇತ್ಯಾದಿ ದಾನಗಳನ್ನೂ ಕುದುರೆ ಎತ್ತುಗಳನ್ನು ಕೊಡುತ್ತಿದ್ದ ಅಂತಹ ದಾನಿ ಈ ಪ್ರಪಂಚದಲ್ಲಿ ಇಲ್ಲವೇ, ಮಲ್ಲಿನಾಥನೇ! ದೀನರನ್ನು ಬಾರೋ ಎಂದು ಕರೆದು ಗೃಹದಾನ ಇತ್ಯಾದಿಗಳನ್ನು ಮಾಡುತ್ತಿದ್ದ ಸಿರಿಯಾಲಶೆಟ್ಟಿ. ಸುಂದರ ಬಲ್ಲಹನ, ವೀರಚೋಳ, ಕರಿಕಲ ಚೋಡ, ಅರಿಯಮರಾಜ, ಏಣಾಧಿನಾಥಯ್ಯ ಚೇರಮರಾಜ, ಕರಯೂರಿ ಚೋಡ, ಶಿವಲಿಂಗದೇವ ಸಿದ್ಧರಾಮಯ್ಯ, ಸವರದ ನಾಚಯ್ಯ ಸರಿಮದೇವ ಮುಂತಾದವರನ್ನು ಹೋಲುವ ಸ್ವಾಮಿ ಭಕ್ತನು ಪ್ರಪಂಚದಲ್ಲಿ ಬೇರೊಬ್ಬನಿಲ್ಲವೇ ಮಲ್ಲಿನಾಥನೇ! ನಾವು ಕುರುಡರು, ಪಿಚ್ಚಿಗುಂಟರು. ನಮ್ಮನ್ನು ಬಾರೋ ಎಂದು ಕರೆದು ಕರುಣೆಯಿಂದ ನಮ್ಮ ಮಾತುಗಳನ್ನು ಕೇಳಿ ಅಯ್ಯೋ ಎನ್ನರೇ! ನಮ್ಮ ಮೇಲೆ ದಯೆ ತೋರಿರಪ್ಪಾ. ಸುಂಕರ ಬಂಕಯ್ಯ, ಸುರಿಯ ಬಂಕಯಯ್, ಸುರಿಯ ಚೌಡಯ್ಯ, ಶಂಕರ ದಾಸಯ್ಯ, ಲೆಂಕ ಮಂಚಯ್ಯ, ದೇವರ ದಾಸಯ್ಯ, ತೆಲುಗು ಬೊಮ್ಮಯ್ಯ, ಬಾಪೂಲಿ ಬ್ರಹ್ಮಯ್ಯ, ಬಾಚೀರಾಚಯ್ಯ – ಇಂತಹ ಭಕ್ತರನ್ನು ಹೋಲುವ ಸ್ವಾಮಿಭಕ್ತರು ಈ ಭೂಮಿಯಲ್ಲಿ ಬೇರೊಬ್ಬರಿಲ್ಲವೇ ಮಲ್ಲಿನಾಥನೇ! – ಹೀಗೆ ಹಾಡುತ್ತ ದಾನಮಾಡಿರೇ ಎಂದು ಬೇಡುತ್ತಾ ಪಿಚ್ಚುಕುಂಟರ ಸಮೂಹ ಬಂದಿತು.

ಅಲ್ಲದೆ ಈ ಪಿಚ್ಚುಕಕುಂಟರೆಲ್ಲರೂ ವೀರಶೈವರಾಗಿದ್ದರೆಂದೂ ಇವರ ಕಂಠಗಳಲ್ಲಿ ಲಿಂಗ, ಕೊರಳಲ್ಲಿ ರುದ್ರಾಕ್ಷಿಮಾಲೆ, ಹಣೆಯಲ್ಲಿ ವಿಭೂತಿ, ತಲೆಯ ಮೇಲೆ ದುಂಡಾದ ಕಿರೀಟ ಇದ್ದುವೆಂದೂ ವರ್ಣಿಸಲಾಗಿದೆ.

ಈ ವರ್ಣನೆ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಭಿಕ್ಷುಕರ ವಿವರವಾದ ವರ್ಣನೆ ಇದೆ. ಅವರ ವಾಹನಗಳೇನೆಂದು ಹೇಳಿದೆ. ಕೋಣಗಳೂ ಅವರ ವಾಹನವಾಗಿದ್ದವೆಂಬುದು ವಿಶೇಷ ಗಮನಾರ್ಹ. ಅವರಿಗೆ ಒಮ್ಮೆ ಆಶ್ರಯದಾತನಾಗಿದ್ದ ಬಸವಣ್ಣ ಮುಂತಾದವರ ಉಲ್ಲೇಕವಿದೆ. ಅವರೆಲ್ಲ ವೀರಶೈವರಾಗಿ ಲಿಂಗಧಾರಿಗಳಾಗಿದ್ದರೆಂದೂ ಹೇಳಲಾಗಿದೆ.[23]

ಪುರಾಣ – ೧೨

ಕಲ್ಯಾಣಪುರಿ ಪಟ್ಟಣದಲ್ಲಿ ಮುಕ್ಕಾಲು (ಮುಕ್ಕಾದ ಕಾಲು – ಊನಾದ ಕಾಲು) ಭೃಂಗೀಶ್ವರನು ಭಿಕ್ಷೆ ಬೇಡಿ ಜೀವಿಸುತ್ತಿದ್ದ. ಆಗ ರಾಜ್ಯ ಆಳುತ್ತಿದ್ದ ರಾಜ ಜೈನಮತದ ಬಿಜ್ಜಳ. ಅವನ ಮಂತ್ರಿ ಶಿವಾಚಾರದ ಬಸವಣ್ಣ. ಎಲ್ಲೆಲ್ಲೂ ಶಿವಾಚಾರವನ್ನೇ ಹೆಚ್ಚಿಸಬೇಕೆಂದು ಬಸವಣ್ಣನ ಆಸೆ. ಕಾಲಿಲ್ಲದ ಹೆಳವ (ಭೃಂಗೀಶ್ವರ) ನನ್ನು ಕರೆದು ‘ನೀನು ಕುಂಟದ್ದೀ. ನಾನು ಕೊಟ್ಟಂತ ನಂದಿ ಹತ್ತಿಕೊಂಡು ಭಕ್ಷೆ ಆಡಿಕೊತ್ತಿರು’ ಅಂತ ಹೇಳಿ ಎತ್ತಿನ ಕೊರಳಿಗೆ ಗಂಟೆ ಕಟ್ಟದ ಓಂ ಶಿವಾ, ಓಂ ಶಿವಾ ಎಂಬ ಶಬ್ದ ಆ ಗಂಟೆಯಿಂದ ಹೇಳಬಂತು ಹೆಳವನು ವಂಶಾವಳಿ, ಕುಲ, ಬೆಡಗ ಹೇಳಲು ಪ್ರಾರಂಭಿಸಲಾಗಿ ಹುಡುಗರು ಅವನ ನಂದಿವಾಹನವನ್ನು ಹಿಂಬಾಲಿಸಿದರು. ಎಲ್ಲೇಲ್ಲೂ ಶಿವನ ಶಬ್ದ ಹೆಚ್ಚಾಯಿತು. ಲಿಂಗಾಯತ ಮತ ಹೆಚ್ಚಿತು. ಬಿಜ್ಜಳನಿಗೆ ಚಿಂತೆ ಉಂಟಾಯಿತು. ‘ಶಿವಾ ಆಂದೋನ ನಾಲಗೆ ಕೊಯ್ಯಬೇಕು, ವಿಭೂತಿ ಹಚ್ಚಿದೋನ ಹಣೆ ಕೆತ್ತಬೇಕು’ ಎಂದು ಆಜ್ಞೆ ಮಾಡಿದ. ಕ್ರಮೇಣ ಕಲ್ಯಾಣಪುರಿ ಹಾಳಾಗಿ ಪಟ್ಟಣ ಒಡೆದು ಹದಿನೆಂಟು ಜಾತಿ ಆಗಿ ಜನರು ಬೇರೆ ಬೇರೆ ಕಡೆ ಹೊರಟರು. ಆದರೆ ಹೆಳವ ಮಾತ್ರ ಅಲ್ಲಿಯೇ ಉಳಿದ. ಆಗ ಪರಮೇಶ್ವರ ಪ್ರತ್ಯಕ್ಷನಾಗಿ ಹೆಳವನ ನಾಲಗೆಯ ಮೇಲೆ ನಾಲ್ಕಕ್ಷರ ಬರೆದು ‘ನಿನನ್ ಬಾಯಲ್ಲಿ ಏನು ವಚನ ಬರ್ತದೆ ಅದು ಸುಳ್ಳಾಗಬಾರ್ದು’ ಎಂದು ಹೇಳಿದ. ಅದರಂತೆ ಹೆಳವ ಎತ್ತಿನ ಮೇಲೆ ಕುಳಿತು ಹೊರಟ. ಕಲ್ಯಾಣಪುರಿ ಬಿಟ್ಟು ಬೇರೆ ಬೇರೆ ಊರುಗಳಲ್ಲಿ ನೆಲೆಸಿದ್ದವರಲ್ಲಿಗೆ ಅವನು ಹೋಗಿ ‘ನೀವು ಕಲ್ಯಾಣಪುರಿಯಿಂದ ಬಂದೋರು, ನಿಮ್ಮ ತಾತ ಮುತ್ತಾತರು ಇಂಥಾವು. ನಿಮ್ಮ ಬೆಡಗು ಇಂಥಾದ್ದು’ ಹೀಗೆಲ್ಲ ಹೇಳುತ್ತಾ ಅವರನ್ನು ಸಂತೋಷಪಡಿಸಿದ. ಅವರು ಅವನಿಗೆ ಹತ್ತುವುದಕ್ಕೆ ಎತ್ತು. ಉಡುವುದಕ್ಕೆ ಬಟ್ಟೆ ಕೊಟ್ಟರು. ಈ ಹೆಳವನಿಂದಲೇ ಹೆಳವ ಸಂತತಿ ಮುಂದುವರೆಯಿತು.[24]

ಪುರಾಣ – ೧೩

ಇನ್ನೊಂದು ಕತೆ ಬಾಗಲಕೋಟೆ ತಾಲ್ಲೂಕು ಮುಗಳೊಳ್ಳಿ ಹೆಳವರಿಂದ ಸಂಗ್ರಹಿಸಿದ್ದು. ಅದೇನೆಂದರೆ: ಕಕ್ಕಯ್ಯ, ಕವುರಯ್ಯ, ಎಕ್ಕದ ಮಾರಯ್ಯ, ಗಟ್ಟಿತಾಳ ಸಿದ್ದಯ್ಯ, ಹಡಪದ ಹಂಪಯ್ಯ, ಗುಂಡು ಬ್ರಹ್ಮಯ್ಯ, ಮ್ಯಾದರ ಕ್ಯಾತಯ್ಯ, ಅಂಬಿಗೇರ ಚೌಡಯ್ಯ ಇತ್ಯಾದಿ ೮೩ ಶರಣರೊಳಗೆ ಹೇಳಯ್ಯನವರೂ ಒಬ್ಬರು. ಈ ಹೇಳಯ್ಯನವರನ್ನು ಕಂಡರೆ ಬಸವಣ್ಣನವರಿಗೆ ತುಂಬ ಅಭಿಮಾನ. ಕಲ್ಯಾನ ಪಟ್ಟಣದಲ್ಲಿ ಬಸವಣ್ಣನವರು ತಮ್ಮ ನಿಯಮದಂತೆ ನಿತ್ಯವೂ ಒಂದು ಲಕ್ಷ ತೊಂಬತ್ತಾರು ಸಾವಿರ ಗಣಂಗಳಿಗೆ ಅನ್ನ ಪ್ರಸಾದ ಕೊಡುತ್ತಿದ್ದ ಕಾಲದಲ್ಲಿ ಹೇಳಯ್ಯನವರನ್ನು ಈ ಕಾರ್ಯಕ್ಕೆ ಮೇಲ್ವಿಚಾರಕರನ್ನಾಗಿ ನೇಮಿಸಿದರು. ಮೊದಲಮೊದಲು ನಯವಿನಯದಿಂದಲೇ ಮೇಲ್ವಿಚಾರಣೆ ಕೆಲಸ ಮಾಡುತ್ತಿದ್ದ ಹೇಳಯ್ಯನವರಿಗೆ ಅಧಿಕಾರದ ಮತ್ತು ತಲೆಗೇರಿತು. ಈ ಸುದ್ಧಿ ತಿಳಿದ ಬಸವಣ್ಣನವರು ಹೇಳಯ್ಯನವರ ಅಹಂಕಾರವನ್ನು ಪರೀಕ್ಷೆಮಾಡಿ ‘ನೀವು ಕಡಿಬೆಡಿಕೊಂಡು ತಿನ್ನಿ’ ಎಂದು ಶಾಪಕೊಟ್ಟರಂತೆ. ಈಗ ಇರುವವರು (ಹೆಳವರು) ಈ ಹೇಳಯ್ಯನವರ ವಂಶಸ್ಥರು. ಹೆಳವ ಜಾತಿ ಉತ್ಪತ್ತಿಯಾದುದೇ ಹೇಳಯ್ಯನವರಿಂದ. ‘ಹೇಳಯ್ಯನವರಿಗೆ ಇದ್ದುದು ಒಂದೇ ಕಾಲು. ಆದ್ದರಿಂದ ಅವರನನ್ನು ಒಕ್ಕಾಲು ಭೃಂಗೀಶ್ವರ’ ಎಂದೂ ಕರೆಯುತ್ತಿದ್ದರೂ ಬಸವಣ್ಣನವರ ಪ್ರಭಾವದಿಂದಾಗಿ ಅವರಿಗೆ ಲಿಂಗಧಾರಣೆಯೂ ಆಗಿತ್ತು. ಈಗ ‘ಕಪ್ಪಕಡಿ’ (ಮಾಂಸ ಇತ್ಯದಿ) ತಿನ್ನೋದು ಕುಡಿಯೋದು ಇದೆ ಅಂತ ಹೇಳಿ ಹೇಳಯ್ನವರಿಗೆ ಲಿಂಗಧಾರಣೆ ಆಗಿದ್ದ ವಿಷಯವನ್ನು ಬೇಕೆಂದೇ ಕೆಲವರು ಮುಚ್ಚಿಡುತ್ತಾರೆ.[25]

ಪುರಾಣ – ೧೪

ಇವಕ್ಕಿಂತಲೂ ಇನ್ನೂ ಹೆಚ್ಚು ವಾಸ್ತವಿಕವಾದ ಅಂಶಗಳು ಬಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕು ಹಂದ್ರಾಳದಿಂದ ವಲಸೆಬಂದ ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ನೆಲೆಸಿರುವ ಹೆಳವರಿಂದ ದೊರೆಯುತ್ತವೆ. ಅವೇನೆಂದರೆ ಹೆಳವ ಜಾತಿಯು ಬಸವಣ್ಣನವರ ಕಾಲದಿಂದ ಉದ್ಭವಿಸಿತು. ಅವರು ತಮ್ಮ ರಾಜ್ಯದಲ್ಲಿಯ ಹಳ್ಳಿಗಳಲ್ಲಿ ಇದ್ದ ಜನರ ಜನನ ಮರಣ ದಾಖಲೆಗಳನ್ನೂ ಬೇರೆ ಸ್ಥಳಗಳಿಂದ ತಮ್ಮ ರಾಜ್ಯಕ್ಕೆ ಬಂದ ಜನರನ್ನು ತಿಳಿದುಕೊಳ್ಳುವುದಕ್ಕೂ ಮತ್ತು ಸಂಬಂಧ ಬೆಳೆಸುವ ಜನರನ್ನು ಕಂಡುಹಿಡಿಯುವುದಕ್ಕೂ ಕೆಲವು ಜನರನ್ನು ನೇಮಿಸಿ ಇಂತಿಂಥ ಹಳ್ಳಿಗಳನ್ನು ಅವರಿಗೆ ವಹಿಸಿದ್ದರು. ಆ ಹಳ್ಳಿಗಳಿಗೆ ಹೋಗಲು ಅನುಕೂಲವಾಗಲೆಂದು ಅವರಿಗೆ ಮಾತ್ರ ಎತ್ತುಗಳನ್ನು ಒದಗಿಸಿದರು. ಈ ಎತ್ತುಗಳ ಮೇಲೆ ಹಳ್ಳಿಗಳ ಮನೆಮನೆಗೆ ಹೋಗಿ ವಹಿಸಿದ ಕಾಯಕ ಮಾಡುತ್ತಿದ್ದವರಿಗೆ ಹೇಳವರು ಎಂದು ಹೆಸರಿಟ್ಟರು. ಬಸವಣ್ಣನವರು ಕೆಲವು ಕುಂಟರನ್ನು ಈ ಕಾಯಕಕ್ಕೆ ನೇಮಿಸಿದ್ದರಿಂದ ಅವರ ವಂಶಜರೆಲ್ಲರೂ ‘ಹೆಳವ’ ಜನಾಂಗದವರೆಂದು ಮುಂದುವರೆದರು.[26]

 

[1] Edgar Thurston, K Rangachari, Castes & Tribes of Southern India, Vol, 2, P 328, 1909

[2] H.V. Nanjundiah, Ananth Krishnna Lyer, The Mysore Tribes And Castes, Vol, 3, P 309, 1909

[3] Enthoven R E, The Tribes And Castes of Bomby, Vol, 2, P 72, 1922

[4] Syed Siraj Ul Hasan, The Castes And Tribes of The H E H The Nizames Dominion, P 568, 1950

[5] ತೆಳಗಡಿಬಿಎಂ, ಹೆಳವರು, ಪು೧೩೦, ೧೯೮೦

[6] ನಿಂಗಣ್ಣಸಣ್ಣಕ್ಕಿ, ಹೆಳವರು, ಪು೧೯, ೧೯೮೦

[7] ರಾಜಶೇಖರ್ಪಿಕೆ, ಹೆಳವರು, ಪು೨೭೨, ೧೯೮೦

[8] Singh K S, Indias Communitises, P 1277, 1998

[9] Gupta R, People of India, Karnataka, P 622, 2008

[10] ಪರಮಶಿವಯ್ಯಜೀಸಂ, ಹೆಳವರು, ಪು೨೬೫, ೧೯೭೯

[11] ನಾಗೇಗೌಡಎಚ್ಎಲ್, ಹೆಳವರುಮತ್ತುಅವರಕಾವ್ಯಗಳು, ಪುxxi, ೧೯೮೨

[12] ಹರಿಲಾಲ್ಪವಾರ್, ಹೆಳವರಸಂಸ್ಕೃತಿ, ಪು೬, ೧೯೯೩

[13] Edgar Thurston, K Rangachari, Castes & Tribes Of Southern India, Vol, 1, P 310 1909

[14] Enthoven R E, The Tribes And Castes of Bomby, Vol, 2, P 72, 1922

[15] Syed Siraj UI Hasan, The Castes And Tribes of The H E H The Nizames Dominion, P 569, 1950

[16] Ibid, P 569

[17] ತೆಳಗಡಿಬಿಎಂ, ಹೆಳವರು, ಪು೧೩೨, ೧೩೩೧೯೮೦

[18] ಅದೇ, ಪು, ೧೩೩

[19] ಚನ್ನಬಸಪ್ಪಗೊರು, ಕರ್ನಾಟಕದಜನಪದಕಲೆಗಳು, ಪು೧೯೩೧೯೮೦

[20] ಹರಿಲಾಲ್ಪವಾರ್, ಹೆಳವರಸಂಸ್ಕೃತಿ, ಪು೧೨, ೧೩., ೧೯೯೩

[21] ಹರಿಲಾಲ್ಪವಾರ್, ಹೆಳವರಸಂಸ್ಕೃತಿ, ಪು೧೩,೧೪, ೧೯೯೩

[22] ಪರಮಶಿವಯ್ಯಜೀಸಂ, ಹೆಳವರು, ಪು೨೬೫, ೨೬೬, ೧೯೭೯

[23] ನಾಗೇಗೌಡಎಚ್ಎಲ್, ಹೆಳವರುಮತ್ತುಅವರಕಾವ್ಯಗಳು, ಪುxii xii xiv, ೧೯೮೨

[24] ಅದೇ, ಪು, xv

[25] ಅದೇ, ಪು, xvi

[26] ಅದೇ, ಪು, xvi xvii