ಕಥೆಗಳು

ಹೆಳವರ ಹೆಳವರ ಕುರಿತ ಮೇಲಿನ ಕಥೆಗಳು ಪುರಾಣಗಳ ಜೊತೆ ತಮ್ಮನ್ನು ಸಮೀಕರಿಸಿಕೊಳ್ಳುತ್ತವೆ. ಪುರಾಣದ ಮತ್ತು ಇತಿಹಾಸದ ಕೆಲವು ವ್ಯಕ್ತಿಗಳು ಈ ಕಥೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಹೆಳವರ ಕುರಿತು ಕೆಲವು ಕಥೆಗಳೂ ಇವೆ. ಅವುಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಕಥೆ – ೧

ಒಕ್ಕಲಿಗರು ಕುರುಬರು ಲಿಂಗಾಯಿತರ ಈ ಮೂವರು ದಾಯಾದಿಗಳೆಂದು ಹೇಳುವ ಹೆಳವರು ಆಸ್ತಿಪಸ್ತಿಯೆಲ್ಲ ಹಿಸ್ಸೆಯಾದಾಗ ತಮ್ಮ ಪಾಲೆಲ್ಲ ಈ ಮೂರು ಮನೆತನದವರಿಗೆ ಕೊಡಲ್ಪಟ್ಟಿತ್ತೆಂದೂ ಅವರೆಲ್ಲರೂ ವರ್ಷ ವರ್ಷ ತಮಗೆ ಕಾಳುಕಡಿಗಳನ್ನು ಕೊಟ್ಟು ನೆರವಾಗುತ್ತಿದ್ದರೆಂದೂ ಹೇಳಿ ಇದಕ್ಕೆ ಕಾರಣವಾದ ಹೆಳವನ ಕಥೆಯನ್ನು ಹೇಳುತ್ತಾರೆ. ನಾಲ್ಕು ಜನ ಅಣ್ಣ ತಮ್ಮಂದಿರಲ್ಲಿ ಕೊನೆಯವನು ಕುಂಟನಂತೆ. ಅವನು ಆಸ್ತಿಪಾಸ್ತಿಯನ್ನು ತೆಗೆದುಕೊಂಡು ಪ್ರತಿವರ್ಷವೂ ಬೆಳೆದ ಕಾಳುಕಡಿಯನ್ನು ಅವನಿಗೂ ಹಂಚುತ್ತಿದ್ದರಂತೆ. ಕುಂಟನಾದುದರಿಂದ ಕಿರಿಯವನನ್ನು ಹೆಳವಯ್ಯನೆಂದು ಕರೆಯುತ್ತಿದ್ದರಂತೆ. ಹೆಳವಯ್ಯನಿಗೆ ಮದುವೆ ಮಾಡಬೇಕೆಂದಾಗ ‘ಕುಂಟನಿಗೇಕೆ ಮದುವೆ?’ ಎಂದು ಎಲ್ಲರೂ ಅಣಕಿಸಿ ಹೆಣ್ಣು ಕೊಡಲಿಲ್ಲವಂತೆ. ಆಗ ತೆಲುಗುದೇಶದ ಕುಟುಂಬದವರು ಕಡು ಬಡವರಾಗಿದ್ದರಿಂದ ಹೊಟ್ಟೆಗಿಲ್ಲದೆ ಸಾಯುವುದಕ್ಕಿಂತ ಆ ಕುಂಟನ ಮನೆಯಲ್ಲಾದರೂ ಬದುಕಿಕೊಳ್ಳಲಿ ಎಂದು ಹೇಳಿ ತಮ್ಮ ಮಗಳನ್ನು ಹೆಳವಯ್ಯನಿಗೆ ಧಾರೆ ಎರೆದುಕೊಟ್ಟರಂತೆ. ಇದರಿಂದಾಗಿ ಹೆಳವಯ್ಯನ ಮಕ್ಕಳ ಮಾತೃಭಾಷೆ ತೆಲುಗಾದರೂ ವ್ಯವಹಾರ ಭಾಷೆ ಕನ್ನಡವಾಯಿತು.[1]

ಕಥೆ – ೨

‘ಉತ್ತರ ಕರ್ನಾಟಕದಲ್ಲಿ ಕ್ರಿ.ಶ. ೧೫೬೦ರಲ್ಲಿ ಬಿಜಾಪುರ ಜಿಲ್ಲೆಯ ಬಾದಾಮಿಯಲ್ಲಿ ಶ್ರೀಶಂಕರಪ್ಪ ಎಂಬುವರು ಮಾದಪ್ಪಗೌಡ ಎಂಬವರಲ್ಲಿ ಜನಿಸಿದರು. ಇವರು ‘ಗೌಡ’ ಮನೆತನಕ್ಕೆ ಸೇರಿದ್ದು ಕೃಷಿ ಜೀವನ ಸಾಗಿಸುತ್ತಿದ್ದರು. ಮಾದಪ್ಪಗೌಡ ಎಂಬರಿಗೆ ಮುರು ಜನ ಗಂಡು ಮಕ್ಕಳಿದ್ದರು. ಒಂದನೇ ಮಗ ತಾಯಿ ಗರ್ಭದಿಂದ ಜನಿಸುವಾಗಲೇ ಕಾಲು ಇಲ್ಲದವನಾಗಿ (ಅಂಗವಿಕಲ) ಜನಿಸಿದನು. ಕನ್ನಡದಲ್ಲಿ ಹೆಳವ ಎಂದರೆ ಕಾಲಿಲ್ದವನೆಂಬ ಇನ್ನೊಂದು ಅರ್ಥವಿದೆ.[2]

ಈ ಪುರಾಣ ಮತ್ತು ಕಥೆಗಳಿಂದ ಕೆಲವು ಸಮಾನ ಅಂಶಗಳನ್ನು ಹೀಗೆ ಗುರುತಿಸಬಹುದು.

೧. ಒಂದು ಕೃಷಿಕ ಪರಂಪರೆಯ ಹಿನ್ನೆಲೆ ಈ ಸಮುದಾಯಕ್ಕೆ ಇದೆ. ಇವರ ಮೂಲ ಪುರುಷನೆಂದು ಹೇಳಲ್ಪಡುವ ವ್ಯಕ್ತಿಯ ಮೂಲದಲ್ಲಿ ಒಬ್ಬ ಕೃಷಿಕನ ಮಗ. ಆದರೆ ಕೃಷಿ ಮಾಡಲಾಗದ ವೈಕಲ್ಯ ಆತನಿಗೆ ಪ್ರಾಪ್ತವಾಗಿದೆ.

೨. ಶಿವನ ಆಜ್ಞೆ ಮೇರೆಗೆ ಕೈಲಾಸದ ಪ್ರಮಥರು ಧರ್ಮವನ್ನು ಉಳಿಸಲು ಭೂಮಿಗೆ ಬರುತ್ತಾರೆ. ಕೈಲಾಸದಿಂದ ಬಂದ ಈ ತಂಡದಲ್ಲಿ ಒಂಟಿಕಾಲಿನ ಭೃಂಗಿಯೂ ಒಬ್ಬ. ಈತನನ್ನೂ ಸೇರಿದಂತೆ ಎಲ್ಲರೂ ಎತ್ತುಗಳ ಮೇಲೆ ಊರೂರಿಗೆ ಹೋಗಿ ಶಿವನ ಕಥೆಗಳನ್ನು ಹೇಳಲಾರಂಭಿಸಿದರು. ಒಂದು ಕಾಲಿನ ಭೃಂಗಿಯ ವಂಶದವರು ಹೆಳವರು.

೩. ತ್ರಿಮೂರ್ತಿಗಳಿಗೆ ತಮ್ಮ ಗೋತ್ರಗಳನ್ನು ತಿಳಿದುಕೊಳ್ಳಲು ವ್ಯಕ್ತಿಯೊಬ್ಬನ ಅವಶ್ಯಕತೆ ಇತ್ತು. ಅವರು ಬೊಂಬೆಯೊಂದನ್ನು ಮಾಡಿ ಅದಕ್ಕೆ ಜೀವ ಕೊಡುವ ಸಂದರ್ಭದಲ್ಲಿ ಆ ಬೊಂಬೆಯ ಕಾಲು ಊನಗೊಂಡು ಕುಂಟಾಯಿತು. ಹೀಗೆ ಜೀವ ಪಡೆದ ವ್ಯಕ್ತಿ ತ್ರಿಮೂರ್ತಿಗಳ ಗೋತ್ರ ಕಾಲು ಊನಗೊಂಡ ಈ ವ್ಯಕ್ತಿಯನ್ನು ಗೋತ್ರಗಳನ್ನು ಹೇಳಲೆಂದೇ ತ್ರಿಮೂರ್ತಿಗಳು ಭೂಮಿಗೆ ಕಳುಹಿಸಿದರು.

೪. ಮಕ್ಕಳಾಗದ ಏಳು ಜನ ಹೆಣ್ಣುಮಕ್ಕಳಿಗೆ ವರದ ರೂಪದಲ್ಲಿ ಶಿವ ಅವರಿಗೆ ಕುಂಟ ವ್ಯಕ್ತಿಯನ್ನು ನೀಡುತ್ತಾನೆ. ಆತನಿಂದ ಅವರು ಏಳು ಮಕ್ಕಳನ್ನು ಪಡೆಯುತ್ತಾರೆ. ಮತ್ತು ಇವರೇ ಹೆಳವರಾಗುತ್ತಾರೆ. ಕುಂಟ ವ್ಯಕ್ತಿ ಹೆಳವರ ಮೂಲ ಪುರುಷನಗುತ್ತಾನೆ.

೫. ಒಕ್ಕಾಲ ಭೃಂಗಿ ಶಿವ ಪಾರ್ವತಿಯರ ಮಗ. ಈತ ಶಿವ ಪಾರ್ವತಿಯರಿಗೆ ನಮಿಸುವಾಗ ಶಿವನಿಗೆ ಹೆಚ್ಚು ಮಹತ್ವ ನೀಡುತ್ತಿರುತ್ತಾನೆ. ಪಾರ್ವತಿ ಸಿಟ್ಟಾಗಿ ಅವನನ್ನು ಶಿಪಿಸುತ್ತಾಳೆ. ಅವಳ ಶಿಕ್ಷೆಯಿಂದ ಭೃಂಗಿಗೆ ಶಾಶ್ವತ ವೈಕಲ್ಯ ಪ್ರಾಪ್ತಿಯಾಗುತ್ತದೆ. ಶಿವ ನಂದಿಯನ್ನು ಭೃಂಗಿಗೆ ಕೊಟ್ಟು ಭೂಲೋಕಕ್ಕೆ ಹೋಗಿ ಭಿಕ್ಷೆ ಬೇಡಿ ಬದುಕಲು ಹೇಳುತ್ಥಾನೆ.

೬. ಕೃಷಿಕನೊಬ್ಬನ ಏಳು ಜನ ಗಂಡು ಮಕ್ಕಳಲ್ಲಿ ಒಬ್ಬ ಒಂಟಿಕಾಲಿನವನು. ಸಹೋದರರು ಅವನನ್ನು ತಾತ್ಸಾರದಿಂದ ನೋಡಿ, ಅವನಿಗೆ ಆಸ್ತಿಯಲ್ಲಿ ಪಾಲುಕೊಡದೇ ಇದ್ದಾಗ, ಈತ ಕಲ್ಯಾಣಕ್ಕೆ ಬಂದು ಬಸವಣ್ಣನ ಆಣತಿಯ ಮೇರೆಗೆ ಮನೆ ಮನೆಗೆ ಹೋಗಿ ಭಕ್ಷೆ ಬೇಡಿ ಬದುಕಲರಂಬಿಸುತ್ತಾನೆ. ಈತನ ಮಕ್ಕಳೇ ಮುಂದೆ ಹೆಳವರಾದರು.

೭. ಒಕ್ಕಲಿಗ, ಕುರುಬ, ಲಿಂಗಾಯಿತರು ಮತ್ತು ಹೆಳವರು ದಾಯಾದಿಗಳು. ಇವರು ತಮ್ಮ ಆಸ್ತಿಯನ್ನು ಪಾಲು ಮಾಡಿಕೊಳ್ಳುವಾಗ ಹೆಳವರ ಮೂಲ ಪುರಷನಾದ ಕೊನೆಯವನು ಕುಂಟನಾಗಿದ್ದ ಕಾರಣಕ್ಕೆ ಈ ಮೂರೂ ಜನ ದಾಯಾದಿಗಳು ಅವನಿಗೆ ಆಸ್ತಿಯಲ್ಲಿ ಪಾಲು ಕೊಡದೆ ವರ್ಷಕ್ಕೆ ನಿಗದಿತ ಪ್ರಮಾಣದ ಕಾಳು ಕಡಿಯನ್ನು ಕೊಡಲಾರಂಭಿಸಿದರು. ಈ ಕುಂಟನಿಗೆ ಯಾರೂ ಹೆಣ್ಣು ಕೊಡದೇ ಇದ್ದಾಗ ಕಡು ಬಡವರಾದ ತೆಲುಗರು ಈತನಿಗೆ ಹೆಣ್ಣು ಕೊಟ್ಟರು. ಈತನಿಗೆ ಮಕ್ಕಳಾಗಿ ಮುಂದೇ ಇವರೇ ಹೆಳವರಾದರು. ಈ ಕಾರಣಕ್ಕಾಗಿ ಮನೆ ಭಾಷೆ ತೆಲುಗಾಯಿತು ಮತ್ತು ವ್ಯವಹಾರದ ಭಾಷೆ ಕನ್ನಡವಾಯಿತು.

ಈ ಮೇಲಿನ ಅಂಶಗಳನ್ನು ಗಮನಿಸಿದರೆ ಹೆಳವವರ ಮೂಲ ಪುರಷ ಹುಟ್ಟುತ್ತಲೇ ಅಂಗವಿಕಲನಾಗಿ ಹುಟ್ಟುತ್ತಾನೆ. ಇಲ್ಲವೇ ದೇವತೆಗಳ ಸಿಟ್ಟಿಗೆ ಕಾರಣವಾಗಿ ಅಂಗ ವೈಕಲ್ಯವನನ್ನು ಅನುಭವಿಸುತ್ತಾನೆ. ಒಟ್ಟಿನಲ್ಲಿ ಅಂಗವೈಕಲ್ಯ ಈ ಮೂಲ ಪುರಷನ ಸಾಮಾಜಿಕ ಮತ್ತು ಆರ್ಥಿಕ ಬದುಕನ್ನು ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಮುಖ್ಯವಾದ ಸಂಗತಿ ಯವುದೆಂದರೆ, ಹೆಳವರ ಮೂಲ ಪುರಷ ಒಂದು ಕೃಷಿಕ ಕುಟುಂಬದಿಂದ ಬಂದವನು ಮತ್ತು ಏಳು ಜನ ಮಕ್ಕಳಾಗದೆ ಪರಿತಪಿಸುತ್ತದ್ದ ಪಶುಪಾಲಕ ಗೊಲ್ಲ ಸಮುದಾಯಕ್ಕೆ ಸೇರಿದ ಹೆಣ್ಣುಮಕ್ಕಳನ್ನು ಮದುವೆಯಾಗುವನು. ಮತ್ತೊಂದು ಕಥೆಯಲ್ಲಿ ಈತ ತನ್ನದಲ್ಲದ ಭಾಷೆಯಾದ ತೆಲುಗರ ಬಡ ಕುಟುಂಬದ ಮಹಿಳೆಯನ್ನು ಮದುವೆಯಾಗುತ್ತಾನೆ. ಕೈಲಾಸದ ಗಣಗಳಲ್ಲಿ ಪ್ರಮುಖನಾದ ಈತ ಧರ್ಮವನ್ನು ಉಳಿಸಲು ಭೂಮಿಗೆ ಬಂದವನು. ಮತ್ತು ಈತನ ಎಲ್ಲ ಆಗುಹೋಗುಗಳಲ್ಲಿ ಶಿವ ಪ್ರಮುಖ ಪಾತ್ರ ವಹಿಸುತ್ತಾನೆ. ಸಾಮಾನ್ಯವಾಗಿ ಈ ಬಗೆಯ ಅಲೆಮಾರಿ ಸಮುದಾಯಗಳ ಸೃಷ್ಟಿ ಪುರಾಣಗಳಲ್ಲಿ ಶಿವ ಆಪತ್ ರಕ್ಷಕನಾಗಿ ನಿಲ್ಲುವುದು ಸಹಜ.ಹುಟ್ಟುತ್ತಾ ಕೃಷಿಕನಾಗಿರುವ ಹೆಳವನು ಪಶುಪಾಲಕ ಗೊಲ್ಲ. ಮಹಿಳೆಯರನ್ನು ಮದುವೆಯಾಗಿ ಎರಡು ಭಿನ್ನ ಸಮುದಾಯಗಳ ನಡುವೆ ಸೇತುವೆಯಆಗುತ್ತಾನೆ. ಈ ಸಂಸರ್ಗದಿಂದ ಹೆಳವ ಸಮುದಾಯ ರೂಪುಗೊಳ್ಳುತ್ತದೆ. ಹೆಳವರು ಕೃಷಿಕ ಸಮುದಾಯಗಳನ್ನು ಆಶ್ರಯಿಸಿಯೇ ತಮ್ಮ ಪಾರಂಪರಿಕ ಕುಲಕಸಬನ್ನು ರೂಢಿಸಿಕೊಂಡು ಬಂದಿದ್ದಾರೆ. ಈ ಆರ್ಥಿಕ ಅವಲಂಬನೆಯೇ ಅವರಿಗೆ ಅಲೆಮಾರಿತನವನ್ನೂ ದಯಪಾಲಿಸಿದೆ. ಮತ್ತು ಈ ಅಲೆಮಾರಿತನಕ್ಕೆ ಮುಕ್ಯವಾಗಿ ಬಳಸುವುದು ಎತ್ತನ್ನ. ಎತ್ತು ಕೃಷಿ ಸಂಸ್ಕೃತಿಯನ್ನು ಪ್ರತಿನಿಧಿಸುವ ಪ್ರಾಣಿ.

ಪೌರಾಣಿಕವಾಗಿ ಹೀಗೊಂದು ವಿಲಕ್ಷಣ ಸನ್ನಿವೇಶದಲ್ಲಿ ಹೆಳವರ ಮೂಲ ಪುರುಷ ಪಡೆಯುವ ಅಂಗ ವೈಕಲ್ಯ, ಅವಲಂಬಿಸುವ ವೃತ್ತಿ ಮತ್ತು ಅನ್ಯ ಸಮುದಾಯದ ಜೊತೆಗಿನ ಸಂಕರನ, ಇಂದಿಗೂ ಹೆಳವ ಸಮಾಜದ ಪರಿಪ್ರೇಕ್ಷ್ಯದಲ್ಲಿ ಇವೆಲ್ಲ ಸಂಕೇತದ ಮಟ್ಟದಲ್ಲಿ ತನ್ನ ಕುರುಹುಗಳನ್ನು ಉಳಿಸಿಕೊಂಡು ಬಂದಿವೆ. ಹೀಗಾಗಿ ಹೆಳವರು ಅಲೆಮಾರಿಗಳೇ? ಹೌದು. ಆದರೆ ಶುದ್ಧಾಂಗ ಅಲೆಮಾರಿಗಳೇನಲ್ಲ. ಪಾರಂಪರಿಕ ವೃತ್ತಿಯನ್ನು ಅವಲಂಬಿಸಿರುವ ಹೆಳವರ ಉಪಪಂಗಡಗಳ ಅನೇಕ ಗುಂಪುಗಳು ವರ್ಷದ ಕೆಲ ಅವಧಿಯಲ್ಲಿ ತಮ್ಮ ಒಕಕ್ಲು ಮನೆಗಳಿಗೆ ಪಾಲು ಕೇಳಲು ಎತ್ತಿನಗಾಡಿ ಮತ್ತು ದನ ಕರುಗಳ ಸಮೇತ ಊರು ಬಿಡುತ್ತಾರೆ. ಊರೂರು ಅಲೆಯುತ್ತಾರೆ. ಇಲ್ಲೂ ಅವರು ತಮ್ಮ ಒಕ್ಕಲುಗಳಿಂದ ಬೇಡಿ ಪಡೆಯುವುದು ಧಾನ್ಯ ಮತ್ತು ದನ ಕರುಗಳನ್ನು ಮಾತ್ರ. ಉತ್ತರ ಕರ್ನಾಟಕದಲ್ಲಿ ಈ ಅಲೆಮಾರಿ ಗುಂಪುಗಳು ತುಸು ಹೆಚ್ಚೇ ಇವೆ. ಅಲೆಮಾರಿತನ, ಭಿಕ್ಷೆ ಬೇಡುವುದು, ಚಿಪ್ಪೋಡಿನಲ್ಲಿಯ ಅವರು ಬರೆದ ವಂಶಾವಳಿಯೇ ಚರಿತ್ರೆಯ ನಿಜದ ಪಾಠಗಳೆಂದು ನಂಬುವುದು ಸರ್ವೇಸಾಮಾನ್ಯ. ಅಲೆಮಾರಿತನ ಅವರಿಗೆ ಒಂದು ರೀತಿಯಲ್ಲಿ ಒಪ್ಪಿತ ಸ್ಥಿತಿ. ಕುಲಕೋಂಡಾಡುವದು ‘ಪರಂಪರೆಯ ಕಸಬು’ ಆ ಕಾರಣದಿಂದ ಈ ಗುಂಪುಗಳಿಗೆ ಅದು ಪ್ರಿಯವಾದದ್ದು. ಅಲೆಮಾರಿತನ ಮತ್ತು ಭಿಕ್ಷೆ ಬೇಡುವುದನ್ನು ಇವರು ತಮ್ಮ ಅಭಿವೃದ್ಧಿಗೆ ಮತ್ತು ಸ್ವಾಭಿಮಾನಕ್ಕೆ ದಕ್ಕೆ ತರುತ್ತದೆ ಎಂದು ಭಾವಿಸುವುದೇ ಇಲ್ಲ. ಅವರ ಜೊತೆ ಅಲೆಮಾರಿತನ ಬಿಟ್ಟುಕೊಟ್ಟು ನೆಲೆನಿಲ್ಲುವ ಕುರಿತು ಚರ್ಚಿಸುತ್ತಿದ್ದಾಗ ಈ ಅಧ್ಯಯನಕಾರನನ್ನು ಈ ಅಲೆಮಾರಿ ಗುಂಪಿನ ಮುಖಂಡರು ಖಾರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದು ಹೋಯಿತು. ‘ಹೆಳವತನ’ ಪರಂಪರೆಯಿಂದ ಬಂದ ಕಾರಣಕ್ಕೆ ಅವರಿಗೆ ಅದರ ಮೇಲೆ ಭಾವುಕವಾದ ಅವಲಂಬನೆ ಇದೆ. ಪುರಾಣದ ಕಥೆಗಳು, ವೃತ್ತಿಯ ಮೇಲಿನ ರೂಢಿಗತ ಅವಲಂಬನೆ ಇವೆಲ್ಲ ಅವರ ಅಲೆಮಾರಿತನವನ್ನು ಸಮರ್ಥಿಸಿಕೊಳ್ಳುವುದಕ್ಕೆ ಪೂರಕವಾಗಿಬಿಟ್ಟಿವೆ. ಹೆಳವರಲ್ಲದೆ ಅನೇಕ ಅಲೆಮಾರಿ ಸಮುದಾಯಗಳು, ಕುಲಕಸಬುಗಳನ್ನು ಬಿಟ್ಟು ಅಲೆಮಾರಿತನವನ್ನೂ ತೊರೆದು ನೆಲೆಸಿರುವ ತಮ್ಮದೇ ಸಮುದಾಯದ ಜನರನ್ನು ಈ ಅಲೆಮಾರಿಗಳು ಹೊರಗಿನವರಂತೆ ಪರಿಗಣಿಸುತ್ತಾರೆ.

ಈ ಮೇಲಿನ ಹೆಳವರ ಕುರಿತ ೧೪ ಪುರಾಣಗಳನ್ನು ಮತ್ತು ಈ ಎರಡು ಕಥೆಗಳನ್ನು ವಿಶ್ಲೇಷಿಸಿದರೆ ಹೆಳವರ ಮೂಲದ ಕುರಿತು ಕೆಲವು ಹೊಳಹುಗಳು ಸಿಗುತ್ತವೆ. ಈ ಎಲ್ಲ ಕಥೆಗಳಲ್ಲಿ ಹೆಳವರ ಮೂಲಪುರಷ ಹುಟ್ಟತ್ತಲೇ ಕುಂಟನಾಗಿರುವುದು ಕಂಡು ಬರುತ್ತದೆ. ಮತ್ತು ದೇವಲೋಕದ ವ್ಯಕ್ತಿಯೊಬ್ಬ ಶಾಪಗ್ರಸ್ತನಾಗಿ ಭೂಲೋಕಕ್ಕೆ ಬಂದು ಹೆಳವ ವೃತ್ತಿಯನ್ನು ಆರಂಭಿಸಿದ ಸಂಗತಿ ಕೆಲವು ಕಥೆಗಳಲ್ಲಿ ವ್ಯಕ್ತವಾಗಿದೆ. ಕೆಲವು ಕಥೆಗಳಲ್ಲಿ ಹೆಳವರು ವಚನ ಚಳುವಳಿಯ ನಂತರದಲ್ಲಿ ಅಸ್ತಿತ್ವಕ್ಕೆ ಬಂದರು ಎಂಬ ಸಂಗತಿ ಗೊತ್ತಾಗುತ್ತದೆ.

ವೈಕಲ್ಯದ ಶಾಪಗ್ರಸ್ತ ಹುಟ್ಟು

ಇಂಡಿಯಾದ ಶ್ರೇಣೀಕೃತ ವ್ಯವಸ್ಥೆಯಲ್ಲಿ ಅಲೆಮಾರಿಗಳು ಸಹಜವಾಗಿಯೇ ಕೆಳಜಾತಿಯ ಸ್ಥಾನಮಾನ ಪಡೆದಿರುವುದು ನಮಗೆಲ್ಲ ಗೊತ್ತಿರುವ ಸಂಗತಿಯೇ ಆಗಿದೆ. ಆದರೆ ನೆಲೆನಿಂತು ನಿಶ್ಚಿತ ಆದಾಯದ ಮೂಲಗಳನ್ನು ಕಂಡು ಕೊಂಡಿರುವ ಕೆಳಜಾತಿಗಳಿಗೂ ಅಲೆಮಾರಿಗಳೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅನೇಕ ಭಿನ್ನತೆಗಳು ಇಂದಿಗೂ ಉಳಿದುಕೊಂಡು ಬಂದಿವೆ. ಈ ಅಲೆಮಾರಿಗಳ ಮೂಲವನ್ನು ಕಂಡುಕೊಳ್ಳುವ ಸಂದರ್ಭದಲ್ಲಿ ನಮಗೆ ಸಿಕ್ಕುವ ಆಕರಗಳೆಂದರೆ ಈ ಸಮುದಾಯಗಳೂ ಕಟ್ಟಿಕೊಂಡು ಬಂದ ಸೃಷ್ಟಿ ಪುರಾಣಗಳು. ಈ ಸೃಷ್ಟಿಪುರಾಣಗಳಲ್ಲಿ ಆಯಾ ಸಮುದಾಯಗಳು ರೂಪುಗೊಂಡ ಚಾರಿತ್ರಿಕ ಸಂದರ್ಭವು ದಾಖಲಾಗಿರುತ್ತದೆ. ಬಹುತೇಕ ಎಲ್ಲ ಅಲೆಮಾರಿಗಳ ಸೃಷ್ಟಿ ಪುರಾಣಗಳನ್ನು ಗಮನಿಸಿದರೆ, ಆಯಾ ಸಮುದಾಯಗಳ ಹುಟ್ಟು ಯವುದೋ ಪೌರಾಣಿಕ ವ್ಯಕ್ತಿಯ ಶಾಪದಿಂದ ಸಂಭವಿಸುತ್ತದೆ. ಇಲ್ಲವೆ ಹುಟ್ಟು ಅಂಗ ವೈಕಲ್ಯದಿಂದಲೇ ಒಂದು ಸಮುಧಾಯದ ಮೂಲ ಪುರುಷ ಜನಿಸುತ್ತನೆ. ಈ ಮೂಲಪುರಷ ಒಂದು ವಿಲಕ್ಷಣ ಚಾರಿತ್ರಿಕ ಅಥವಾ ಪೌರಾಣಿಕ ಸಂದರ್ಭದಲ್ಲಿ ಜನಿಸುತ್ತಾನೆ. ಈಗೆ ಜನಿಸುವ ವ್ಯಕ್ತಿ ತನ್ನ ಸಮುದಾಯದ ಒಟ್ಟಾರೆ ಸಾಮಾಜಿಕಾರ್ಥಿಕ ಚಟುವಟಿಕೆಗಳು ಚಾರಿತ್ರಿಕವಾಗಿ ರೂಪುಗೊಳ್ಳಲು ಒಟ್ಟಾರೆ ಸಾಮಾಜಿಕಾರ್ಥಿಕ ಚಟುವಟಿಕೆಳು ಚಾರಿತ್ರಿಕವಾಗಿ ರೂಪಗೊಳ್ಳಲು ಕಾರಣನಾಗುತ್ತಾನೆ. ಮತ್ತು ಆಸಮುದಾಯದ ಸಾಮಾಜಿಕಾರ್ಥಿಕ ಸ್ಥಿತಿಗತಿಗಳನ್ನು ಸಾಂಕೆತಿಕವಾಗಿ ಈತ ಪ್ರತಿನಿಧಿಸುತ್ತಾನೆ.

ಈ ಕಾರಣದಿಂದಾಗಿ, ಯಾವುದೋ ಕಾರಣದಿಂದ ಪ್ರಾಪ್ತವಾಗಿ ಬಿಡುವ ಶಾಪವು ಸಾಂಕೇತಿಕವಾಗಿ ಮಾತ್ರವಲ್ಲದೆ ಲೌಕಿಕ ಜಗತ್ತಿನಲ್ಲೂ ಈ ಸಮುದಾಯಗಳ ಸಾಮಾಜಿಕ ಆರ್ಥಿಕ ಚುಟುವಟಿಕೆಗಳನ್ನು ನಿರ್ಣಾಯಕವಾಗಿ ನಿಯಂತ್ರಿಸಿಬಿಡುತ್ತದೆ. ಹೀಗೆ ಸೃಷ್ಟಿಪುರಾಣಗಳನ್ನು ನಾವು ರಮ್ಯ ಜಗತ್ತುಗಳೆಂದು ಭಾವಿಸುತ್ತೇವೆ. ಆದರೆ ಆ ರಮ್ಯಜಗತ್ತುಗಳ ಒಳಗೂ ಅಲೆಮಾರಿಗಳು ಹುಟ್ಟು ವೈಕಲ್ಯದಿಂದ ಇಲ್ಲವೆ ಶಾಪದಿಂದ ಸಂಭವಿಸುತ್ತದೆ. ಈ ರಮ್ಯ ಜಗತ್ತುಗಳ ಒಳಗೆ ಈ ಸಮುದಾಯಗಳ ಬದುಕು ಛಿದ್ರಗೊಂಡೇ ದಾಖಲಾಗಿರುವುದನ್ನು ಕಾಣಬಹುದಾಗಿದೆ. ಯಾವುದೋ ಕಾಲದಲ್ಲಿ ಕಟ್ಟಿಕೊಂಡಿರಬಹುದಾದ ಸೃಷ್ಟಿಪುರಾಣಕ್ಕೂ ಅಲೆಮಾರಿಗಳ ಇಂದಿನ ಸ್ಥಿತಿಗತಿಗಳಿಗೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ಪ್ರಶ್ನಿಸಬಹುದು. ಅಲೆಮಾರಿಗಳ ಸದ್ಯ ಸ್ಥಿತಿಗೂ ಅವರು ಕಟ್ಟಿಕೊಂಡು ಬಂದಿರುವ ಸೃಷ್ಟಿಪರಾಣಗಳಲ್ಲಿನ ಅವುಗಳ ಹುಟ್ಟಿನ ಸಂಗತಿಗೂ ಸಾಂಕೇತಿಕ ಸಂಬಂಧವಿದೆ. ಈ ಕಾರಣದಿಂದಾಗಿ ಅವರ ಸೃಷ್ಟಿ ಪುರಾನಗಳು ಅಲೆಮಾರಿಗಳ ಸಾಮಾಜಿಕ ಚರಿತ್ರೆಯನ್ನು ರೂಪಿಸುವಾಗ ಮಹತ್ವದ ಪಾತ್ರ ವಹಿಸುತ್ತವೆ.

ಕರ್ನಾಟಕವನ್ನೂ ಸೇರಿದಂತೆ ದೇಶದ ಹಲವು ಅಲೇಮಾರಿಗಳ ಸೃಷ್ಟಿಪುರಾಣಗಳಲ್ಲಿ ಅಂಗವೈಕಲ್ಯದ ಮೂಲಪುರುಷ, ದೇವಲೋಕದಿಂದ ಶಾಪಗ್ರಸ್ತನಾಗಿ ಭೂಮಿಗೆ ಬರುವ ಮೂಲಪುರುಷ ಮತ್ತು ಭೂಮಿಗೆ ಬಂದ ಮೇಲೂ ಅನೇಕ ಕಾರಣಗಳಿಗೆ ತನ್ನ ಉತ್ಪಾದನೆಯ ಮೂಲಗಳನ್ನೇ ಕಳೆದುಕೊಂಡು ನಿರ್ಗತಿಕನಾಗಿ ಬಿಡುವ ಮೂಲಪುರಷರು ಸಿಗುವುದು ಸಾಮಾನ್ಯ. ಕರ್ನಾಟಕದ ನೇಕ ಅಲೆಮಾರಿ ಸಮುದಾಯಗಳು ಈ ಬಗೆಯ ಆತ್ಮನಿಂದನೆಯ್ಲಲಿಯತೇ ತಮ್ಮ ಸೃಷ್ಟಿಪುರಾಣಗಳನ್ನು ಕಟ್ಟಿಕೊಂಡಿವೆ. ಇಲ್ಲವೆ ಇಂತಹ ಸೃಷ್ಟಿಪುರಾಣಗಳನ್ನು ಕಟ್ಟಿಕೊಳ್ಳುವಂತೆ ಈ ಶ್ರೇಣೀಕೃತ ಸಮಾಜ ಅವರನ್ನು ಒತ್ತಾಯಿಸಿದೆ. ಶಿವನ ಸೇವೆಯನ್ನು ಮಾಡಲೆಂದೇ ಸುಡುಗಾಡು ಸಿದ್ಧರು. ತಮ್ಮ ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಶಾಪಕ್ಕೆ ಒಳಗಾಗುತ್ತಾರೆ. ಪಾರ್ವತಿ ಶಾಪದಿಂದ ಸುಡುಗಾಡು ಸಿದ್ಧರು ತಮ್ಮ ಆರ್ಥಿಕ ಮೂಲಗಳನ್ನು ಕಳೆದುಕೊಂಡು ಶಿವನ ಸೇವೆಗೆ ನಿಲ್ಲುತ್ತಾರೆ.[3] ವ್ಯಾಘ್ರಾಸುರನ ಸಂಹಾರಕ್ಕೆ ಭೂಮಿಗೆ ಇಳಿದು ಬಂದು, ವ್ಯಾಘ್ರಾಸುರನನ್ನು ಕೊಂದ ನಂದಿಯನ್ನು ಲೋಕದ ಕಲ್ಯಾಣಕ್ಕಾಗಿ ಊರುರಲ್ಲಿ ಅಡಿಸಲೆಂದೇ ಕವಲೆತ್ತಿನವರು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ.[4] ತಮ್ಮ ಸಹೋದರರಾದ ಮಾರ್ವಾಡಿಗಳು ತಮ್ಮ ಪಾಲಿನ ಆಸ್ತಿಯನ್ನು ಅಪಹರಿಸಿದರೆಂದು ದಕ್ಷಿಣಕ್ಕೆ ವಲಸೆ ಬಂದ ಹಕ್ಕಿಪಿಕ್ಕಿಗಳು ಇಮದಿಗೂ ಅಲೆಮಾರಿಗಳಾಗಿದ್ದಾರೆ.[5]

ಇದೇ ರೀತಿ ಹೆಳವರ ಮೂಲ ಪುರುಷ ಅಂಗ ವೈಕಲ್ಯದಿಂದಲೇ ಜನಿಸುತ್ತಾನೆ. ಇಲ್ಲ, ಕೈಲಾಸದ ಒಕ್ಕಾಲು ಭೃಂಗೇಶ್ವರ ಪಾರ್ವತಿಯ ಶಾಪಕ್ಕೆ ಒಳಗಾಗಿ ಭೂಲೋಕಕ್ಕೆ ಬರುತ್ತಾನೆ. ಇವರ ಮೂಲ ಪುರುಷ ಬಹುತೇಕ ಪುರಾಣಗಳಲ್ಲಿ ಶಾಪ್ಗ್ರಸ್ತನಾಗುತ್ತಾನೆ. ಜೊತೆಗೆ ವೈಕಲ್ಯ, ಅದು ಹುಟ್ಟು ವೈಕಲ್ಯ ಹೆಳವರ ಮೂಲ ಪುರುಷನಿಗೆ ಇತ್ತು ಎಂದು ಬಹುತೇಕ ಎಲ್ಲ ಪುರಾಣಗಳು ಹೇಳುತ್ತವೆ. ಈ ಕಾರಣದಿಂದ ಹೆಳವರ ಮೂಲಪುರುಷ ಕುಂಟನಾಗಿದ್ದ ಎಂಬುದು ತಿಳಿದು ಬರುತ್ತದೆ.

ಮತ್ತೆ ಈ ಪರುಣಗಳನ್ನು ಪ್ರಮಾಣಬ್ಧ ದಾಖಲೆಗಳೆಂದು ನಂಬುವ ಪ್ರಶ್ನೆ ಹಲವರನ್ನು ಕಾಡಬಹುದು. ಶೋಷಿತ ಜನಾಂಗಗಳ ಚರಿತ್ರೆ ಯಾವತ್ತೂ ಅಸಹಾಯಕತೆಯ ಕುಲುಮೆಯಲ್ಲಿ, ತೀವ್ರವಾದ ಆತ್ಮದ್ವೇಷದಲ್ಲಿ ರೂಪುಗೊಳ್ಳುತ್ತದೆ. ತಮ್ಮ ಮೂಲ ಪುರುಷ ಕುಂಟನಾಗಿದ್ದ, ಅಲ್ಲದೆ ಆತ ಶಾಪಗ್ರಸ್ತಾನಾಗಿ ಭೂಮಿಗೆ ಬಂದವನು ಎಂದು ಆತ್ಮ ದ್ವೇಷದ ಪುರಾಣ ಕಟ್ಟಿಕೊಳ್ಳುವಷ್ಟು ದುಡಿವ ವರ್ಗಗಳು ಅಸಹಾಯಕವಾಗಿವೆ. ಇಲ್ಲಿ ಹೆಳವರ ಮೂಲ ಪುರುಷನನ್ನು ಶಪಿಸುವುದಾಗಲಿ, ಅಂಗವೈಕಲ್ಯದಿಂದ ಅವನನ್ನು ಸೃಷ್ಟಿಸುವುದಾಗಲಿ ದೇವತೆಗಳೆ. ಅಂದರೆ ಮೇಲಿನ ಜನ, ಮೇಲಿನ ಜನರೆಂದರೆ ಆಳುವವರು, ಅಪ್ಪಣೆ ಜಾರಿ ಮಾಡುವವರು ಮತ್ತು ದುಡಿಸಿಕೊಳ್ಳುವವರು. ಈ ಕಾರಣದಿಂದ ಸೃಷ್ಟಿ ಪುರಾನಗಳು ಕೇವಲ ‘ಕ್ಷುದ್ರ’ ರಚನೆಗಳಲ್ಲದ. ಅವು ಕೆಳಜಾತಿಗಳ ಆತ್ಮದ್ವೇಷವನ್ನು ಆಂತರ್ಯದಲ್ಲಿಟ್ಟುಕೊಂಡ ತಪ್ತ ಜ್ವಾಲಾಮುಖಿಗಳು. ಇದರಿಂದಾಗಿ ಸೃಷ್ಟಿ ಪುರಾಣಗಳನ್ನು ನಾವು ಆಯಾ ಸಮುದಾಯಗಳ ಆತ್ಮ ಕಥೆಗಳೆಂದೇ ಭಾವಿಸಬೇಕಾಗುತ್ತದೆ. ‘ಈ ಸೃಷ್ಟಿ ಪುರಾಣಗಳ ಮೂಲಕ ತಮ್ ಜಾತಿ ಅನುಸರಿಸಿಕೊಂಡು ಬಂದ ಆರ್ಥಿಕ ಚಟುವಟಿಕೆಗಳಿಗೆ ಇವರು ಒಂದು ಚರಿತ್ರೆಯ ಆಯಾಮವನ್ನು ಕಲ್ಪಿಸುತ್ತಾರೆ.[6] ಕಾರಣಈ ದೇಶದ ಚರಿತ್ರೆಯಲ್ಲಿ ಆಳುವವರಿಮದ ಈ ಅಲೆಮಾರಿಗಳು ತಮ್ಮ ಆರ್ಥಿಕ ಮೂಲಗಳನ್ನು ಕಳೆದುಕೊಳ್ಳುತ್ತಾ ಬಂದಿದ್ದಾರೆ. ನಿಶ್ಚಿತ ಆರ್ಥಿಕ ಮೂಲವನ್ನು ಕಳೆದುಕೊಂಡವನು ಪುರಾಣಗಳಲ್ಲಿ ಸಾಂಕೇತಿಕವಾಗಿ ಸಾಧ್ಯವಾಗದೆ ಆತ್ಮ ದ್ವೇಷದಲ್ಲಿ ನಲುಗುತ್ತಲೇ ಬುದುಕುತ್ತಾನೆ. ಕರ್ಮಸಿದ್ಧಾಂತವನ್ನು ಗಾಢವಾಗಿ ಪ್ರತಿಪಾದಿಸುವ ಭಾರತದಲ್ಲಿ ‘ಪೂರ್ವಜನ್ಮದ’ ಶಾಪದಿಂದ ಈ ಜನ್ಮದಲ್ಲಿ ನಿರ್ಗತಿಕನೆಂದು ಬದುಕಬೇಕಾದ ಸ್ಥಿತಿಯನ್ನು ಅನುಭವಿಸುತ್ತ ಆತ್ಮ ಮರುಕದಲ್ಲಿಯೇ ಬದುಕನ್ನೂ ಕಳೆಯುತ್ತಾನೆ.

ಹೀಗಾಗಿ ಹೆಳವ ಸಮುದಾಯಕ್ಕೆ ‘ಹೆಳವ’ ಎಂಬ ಹೆಸರು ಯಾಕಾಗಿ ಬಂದಿತು ಎಂದು ವಂಶಾವಳಿಗಳನ್ನು ‘ಹೇಳುವ’ ವೃತ್ತಿಯಿಂದ ‘ಹೆಳವ’ ಎಂಬ ಹೆಸರು ಬಂತು ಎಂಬುದಕ್ಕಿಂತ ಅವರ ಮೂಲ ಪುರಷ ಅಂಗವಿಕಲನಾಗಿದ್ದ ಕಾರಣಕ್ಕಾಗಿ ಅವರಿಗೆ ಈ ಹೆಸರು ಬಂದಿದೆ ಎಂದು ತೀರ್ಮಾನಕ್ಕೆ ಬರುವುದು ಹೆಚ್ಚು ಸೂಕ್ತ ಎಂದು ಕಾಣುತ್ತದೆ. ‘ಹೇಳುವ’ ಎಂಬ ಪದ ವಿರೂಪಗೊಂಡು ‘ಹೆಳವ’ ಎಂಬ ಪದ ರೂಪಗೊಂಡಿತು ಎನ್ನುವುದು ತೀರಾ ಸಹಜ ತೀರ್ಮಾನದಂತೆ ಕಾಣುವುದೇ ಇಲ್ಲ. ಶಬ್ದನಿಷ್ಪತ್ತಿಶಾಸ್ತ್ರದ ಈ ವಿವರಣೆಯು, ಸ್ವತಃ ಹೆಳವ ಸಮುದಾಯ ಕಟ್ಟಿಕೊಂಡು ಬಂದ ಸೃಷ್ಟಿ ಪುರಾಣಗಳನ್ನೇ ಬದಿಗೆ ಸರಿಸಿ ಬಿಡುತ್ತದೆ. ಮತ್ತು ಶಬ್ಧನಿಷ್ಪತ್ತಿಶಾಸ್ತ್ರದ ಮೂಲಕವೇ ಒಂದು ಸಮುದಾಯದ ಹೆಸರಿನ ಮೂಲವನ್ನು ಕಂಡುಕೊಳ್ಳುವುದು ಒಂದು ಬಗೆಯಲ್ಲಿ ಬರೀ ಶೈಕ್ಷಣಿಕ ಕಸರತ್ತಿನಂತೆ ಮಾತ್ರ ಕಾಣುತ್ತದೆ. ಈ ಕಾರಣದಿಂದ ಅಂಗವಿಕಲಾನಾದ ವ್ಯಕ್ತಿ ಇವರ ಮೂಲಪುರುಷನಾಗಿದ್ಧ ಕಾರಣಕ್ಕಾಗಿ ಈ ಸಮುದಾಯಕ್ಕೆ ‘ಹೆಳವ’ ಎಂಬ ಹೆಸರು ಬಂದಿರಬೇಕು ಎಂದು ತೀರ್ಮಾನಿಸುವುದು ಸೂಕ್ತ.

 

[1] ರಾಜಶೇಖರ್ಪಿಕೆ, ಹೆಳವರು, ಪು೨೭೩, ೧೯೮೦

[2] ನಿಂಗಣ್ಣಸಣ್ಣಕ್ಕಿ, ಹೆಳವರು, ಪು೨೦, ೧೯೮೦

[3] ಖಂಡೋಬಪಿಕೆ, ಸುಡುಗಾಡುಸಿದ್ದರಸಂಸ್ಕೃತಿ, ೧೯೯೩

[4] ಲಠ್ಠೆಎಂಎಸ್, ಕವಲೆತ್ತಿನವರು, ೨೦೦೦

[5] ರಾಜಪ್ಪದಳವಾಯಿ, ಹಕ್ಕಿಪಿಕ್ಕಿಯರಸಂಸ್ಕೃತಿ, ೧೯೯೩

[6] ಪ್ರಭಾಕರಎಎಸ್, ಅಲೆಮಾರಿಗಳಶಾಪಗ್ರಸ್ತಪಯಣ, ಪು೧೦೨, ೨೦೦೫