ಹೆಳವರಲ್ಲಿ ನ್ಯಾಯ ತೀರ್ಮಾನಗಳು ಅಥವಾ ಯಾವುದೇ ವ್ಯಾಜ್ಯಗಳು ತಮ್ಮ ತಮ್ಮಲ್ಲಿಯೆ ಬಗೆಹರಿಯಲ್ಪಡುತ್ತವೆ. ಈ ಸಮುದಾಯದ ನ್ಯಾಯಪಂಚಾಯತಿಯೆ ಮುಖಂಡತ್ವ ವಂಶಪಾರಂಪರ್ಯವಾಗಿ ಬಂದುದಾಗಿರುತ್ತದೆ. ಯಾವುದೇ ಕಾರಣಕ್ಕೆ ಕೋರ್ಟು, ಕಛೇರಿಗೆ ಹೋಗುವುದಿಲ್ಲ. ಬಹುತೇಕ ತಮ್ಮಲ್ಲಿಯೇ ವ್ಯಾಜ್ಯಗಳನ್ನು ಬಗೆಹರಿಸಿಕೊರ್ಳಳುತ್ತಾರೆ. ಕೋರ್ಟು ಕಛೇರಿಗೆ ಅಲೆಯುವ ಕೆಲವು ಉದಾಹರಣಗಳೂ ಸಿಗುತ್ತವೆ. ಒಂದು ವೇಳೆ ಹಗೆ ಕೋರ್ಟು, ಕಛೇರಿಗೆ ಹೋಗಿದ್ದೇ ಅದರೆ ಅಂತಹವರನ್ನು ಕುಲದಿಂದ ಹೊರ ಹಾಕುವ ಅಥವಾ ದಂಡ ವಿಧಿಸುವ ಪದ್ಧತಿ ಜಾರಿಯಲ್ಲಿದೆ. ಪ್ರಸ್ತುತ ಸಂದರ್ಭದಲ್ಲಿಯೂ ಕೂಡ ಈ ರೀತಿಯ ಪದ್ದತಿ ಜಾರಿಯಲ್ಲಿದೆ ಎಂದರೆ ಆಶ್ಚರ್ಯದ ಸಂಗತಿಯೇ. ಹೆಳವರದು ಸಂಕೀರ್ಣ ಬದುಕು. ಆಧುನಿಕತೆಗೂ ಒಗ್ಗದೆ, ಪರಂಪರೆಯನ್ನು ಬಿಟ್ಟುಕೊಡದ ರೀತಿಯಲ್ಲಿಯೇ ಬದುಕುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಇವರು ಮಿಶ್ರಹಾರ ಪದ್ಧತಿಯನ್ನು ಅನುಸರಿಸುತ್ತಾರೆ. ಉತ್ತರ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಸಸ್ಯಹಾರಿಗಳಿದ್ದಾರೆ. (ಬೀದರ್, ಗುಲ್ಬರ್ಗಾದ ಅನೇಕ ಕಡೆಗಳಲ್ಲಿ ಸಸ್ಯಾಹಾರವನ್ನು ಉಪಯೋಗಿಸುತ್ತಾರೆ). ಆಚರಣೆಗಳಿಗೆ ಸಂಬಂಧಿಸಿದಂತೆ ಇವರದು ಬಹು ಶಿಸ್ತಿನ ಜೀವನ, ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುತ್ತಾರೆ. ಮತ್ತು ಕಟ್ಟು ನಿಟ್ಟಾದ ವಿಧಿನಿಷೇಧಗಳನ್ನು ಅನುಸರಿಸುತ್ತಾರೆ.

ಸಾಮಾಜಿಕ ಸ್ತರ ವಿನ್ಯಾಸದಲ್ಲಿ ಹೆಳವರು ಅಂತಹ ಮೇಲ್ಮಟ್ಟದ ಸ್ಥಿತಿಯಲ್ಲಿ ಇಲ್ಲ, ಆದರೂ ಹೊಲೆಯರು, ಮಾದಿಗರು, ಕೊರವರು, ದುರುಗು ಮುರುಗಿಯರಿಗೆ ಹೋಲಸಿಸಿದರೆ ಇವರದು ಮೇಲ್ಮಟ್ಟದ ಬದುಕೇ ಅಗಿದೆ. ಇವರಿಗೆ ದೇವಾಲಯಗಲ್ಲಿ ಮುಕ್ತವಾದ ಪ್ರವೇಶವಿದೆ ಮತ್ತು ಮೇಲ್ವರ್ಗದ ಜನರ ಮನೆಗಳಲ್ಲಿಯೂ ಇವರಿಗೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ. ಆದರೆ ಚಾಪೆ ಹೆಳವರಿಗೆ ಈ ರೀತಿಯ ಯಾವುದೇ ಭಾಗ್ಯವಿಲ್ಲ. ಇವರು ಎತ್ತಿನ ಹೆಳವರು ಮತ್ತು ಗಂಟೆ ಹೆಳವರ ಮನೆಗಳಲ್ಲಿಯೂ ಕೂಡ ಹೋಗುವಂತಿಲ್ಲ. ಚಾಪೆ ಹೆಳವರನ್ನು ಗಂಟೆ ಮತ್ತು ಎತ್ತಿನ ಹೆಳವರು ಕೀಳಾಗಿಯೇ ಕಾಣುತ್ತಾರೆ. ಅವರನನ್ನು ತಮ್ಮ ಮದುವೆ, ಇತ್ಯಾದಿ ಕಾರ್ಯಕ್ರಮಗಳಲ್ಲಿಯೂ ಕೂಡ ಕರೆಯುವುದಿಲ್ಲ. ಸಮಾಜದಲ್ಲಿ ಎತ್ತಿನ ಹೆಳವರು, ಗಂಟೆ ಹೆಳವರಿಗಿದ್ದಷ್ಟು ಗೌರವ, ಸ್ಥಾನಮಾನಗಳು ಚಾಪೆ ಹೆಳವರಿಗಿಲ್ಲ.

ಈ ಮೊದಲೇ ಹೇಳಿದಂತೆ ಈ ದೇಶದ ಶ್ರೇಣಿಕೃತ ವ್ಯವಸ್ಥೆ ಮತ್ತು ಊಳಿಗಮಾನ್ಯ ಸಮಾಜಗಳ ಪ್ರಭಾವದಿಂದ ಯಾವ ಜಾತಿ ಸಮುದಾಯಗಳು ಮುಕ್ತವಾಗಿಲ್ಲ. ಜಾತಿ ಜಾತಿಗಳ ನಡುವೆ ಅಂತರಗಳಿದ್ದಂತೆ, ಜಾತಿಗಳ ಒಳಗೇ ಇರುವ ಉಪಪಂಗಡಗಳ ನಡುವಯೆ ಆಂತರಿಕ ಶ್ರೇಣೀಕರಣ ರೂಪುಗೊಳ್ಳುತ್ತಲೇ ಬಂದಿದೆ. ಇದಕ್ಕೆ ಕಾರಣ ಒಂದೇ ಜಾತಿಯಲ್ಲಿನ ಜನರ ಗುಂಪುಗಳು ಅನುಸರಿಸುವ ಆರ್ಥಿಕ ಚಟುವಟಿಕೆಗಳು. ಎತ್ತಿನ ಹೆಳವರು ಮತ್ತು ಗಂಟೆ ಹೆಳವರು ಪರಂಪರೆಯ ವೃತ್ತಿಯನ್ನು ಅನುಸರಿಸಿ ತಮ್ಮ ಸಮಾಜದ ಒಳಗೇ ಶ್ರೇಷ್ಠರಾದರೆ, ಸಾಂದರ್ಭಿಕ ಅನಿವಾರ್ಯತೆಗೆ ಚಾಪೆ ಹೆಣೆಯುವ ವೃತ್ತಿಯನ್ನು ಅನುಸರಿಸಿದ ಚಾಪೆ ಹೆಳವರು ತಮ್ಮದೇ ಸಮುದಾಯದಲ್ಲಿ ಕನಿಷ್ಠರಾಗುತ್ತಾರೆ. ಈ ಕಾರಣದಿಂದಾಗಿ ಭಾರತದ ಜಾತಿ ಶ್ರೇಣೀಯಲ್ಲಿ ಶ್ರೇಷ್ಠ ಮತ್ತು ಕನಿಷ್ಠಗಳ ಮೌಲ್ಯ ಮಾಪನವು ಒಂದು ಜಾತಿ ಅಥವಾ ಜಾತಿಯ ಒಳಗಿನ ಉಪಪಂಗಡವು ಯಾವ ಬಗೆಯ ವೃತ್ತಿಯನ್ನು ಅನುಸರಿಸುತ್ತಿದೆ ಎಂಬುದನ್ನು ಅವಲಂಬಿಸಿದೆ.

ಇನ್ನು ಹೆಳವರಲ್ಲಿನ ಉಳಿದ ಉಪಪಂಗಡಗಳು ಈ ಸಮುದಾಯದ ನಿರಂತರ ಅಲೆಮಾರಿತನದಿಂದ ರೂಪುಗೊಂಡಿರುವ ಸಾಧ್ಯತೆ ಇದೆ. ಈ ಉಪಪಂಗಡಗಳು ಅನೇಕ ಬಗೆಯ ವೃತ್ತಿಗಳಲ್ಲಿ ತೊಡಗಿರುವುದು ಕೇವಲ ಸಂದರ್ಭದ ಅನಿವಾರ್ಯತೆಯ ಕಾರಣಕ್ಕೆ. ಅಲೆಮಾರಿಗಳ ಸಮಾಜದಲ್ಲಿ ಈ ಬಗೆಯ ವೈರುಧ್ಯಗಳು ಸಹಜ ಮತ್ತು ಅನಿವಾರ್ಯವೆಂದು ಕಾಣುತ್ತದೆ. ಮುಂದಿನ ಭಾಗದಲ್ಲಿ ಹೆಳವ ಸಮುದಾಯದ ಬಳಿಗಳು ಅಥವಾ ಬೆಡಗುಗಳನ್ನು ವಿವರಿಸಲಾಗಿದೆ.

ನಂಜುಂಡಯ್ಯ ಮತ್ತು ಅನಂತ ಕೃಷ್ಣ ಅಯ್ಯರ್ ಅವರು ಹೆಳವರ ಬಳಿಗಳನ್ನು ಹೀಗೆ ಪಟ್ಟಿ ಮಾಡುತ್ತರೆ.

೧. ಅರಳಿ ಕುಲ – ಮರ

೨. ಅವರಿಕೆ ಕುಲ – ಒಂದು ಗಿಡ

೩. ಬಳಗರ ಕುಲ – ಈ ಪಂಗಡದವರು ಮದುವೆಯಲ್ಲಿ ಬಳೆಗಳನ್ನು ಪೂಜಿಸುತ್ತಾರೆ.

೪. ಬಂಡಿಕುಲ – ಎತ್ತಿನ ಬಂಡಿ

೫. ಬಂಗಾರ ಕುಲ – ಚಿನ್ನ

೬. ಬಸರಿ ಕುಲ – ಒಂದು ಮರ

೭. ಬೆಳ್ಳಿ ಕುಲ – ಬೆಳ್ಳಿ

೮. ಬೊಟ್ಟು ಕುಲ – ಹೆಂಗಸಿನ ಹೆಣೆಯ ಮೇಲಿನ ಹೊಳೆವ ತಿಲಕ

೯. ಗಡ್ಡಮು ಕುಲ – ಗಡ್ಡ

೧೦. ಗಂಟ ಕುಲ – ಗಂಟೆ

೧೧. ಹಂಚಿ ಕುಲ – ಒಂದು ಬಗೆಯ ಹುಲ್ಲು

೧೩. ಹೂವು ಕುಲ – ಹೂವು

೧೪. ಜ್ಯೋತಿ ಕುಲ – ಇವರು ದೀಪವನ್ನು ಬಾಯಿಯಿಂದ ಊದಿ ಆರಿಸುವುದಿಲ್ಲ

೧೫. ಕುಂಚಿ ಕುಲ – ಕೋಟು

೧೬. ಮರ್ರಿ ಕುಲ – ಒಂದು ಮರ

೧೭. ಮುಮ್ಮಡಿ ಕುಲ – ಒಂದು ಮರ

೧೮. ನೇರಳೆ ಕುಲ – ನೇರಳೆ ಜಂಬುಲ

೧೯. ಒರಳು ಕುಲ – ಒರಳು

೨೦. ಒಣಕೆ ಕುಲ – ಒಣಕೆ

೨೨. ಸಿಂಗರಾಜು ಕುಲ – ಸಿಂಹ

೨೩. ಸಿಪದಾ ಕುಲ – ಈ ಕುಲದವರು ಈ ಮರವನ್ನು ಪೂಜಿಸುತ್ತರೆ. ಕಡಿಯುವುದಿಲ್ಲ.

೨೪. ಉದುರು ಪಖು ಕುಲ – ಒಂದು ಮರ[1]

ಬಾಂಬೇ ಪ್ರಾಂತ್ಯದ ಸಮುದಾಯಗಳನ್ನು ಅಧ್ಯಯನ ಮಾಡಿದ ಆರ್. ಇ. ಥೋವನ್ ಹೆಳವರ ಹತ್ತು ಬೆಡಗುಗಳನ್ನು ಉಲ್ಲೇಖಿಸುತ್ತಾನೆ.

೦೧. ಯರಸನವ

೦೨. ಬೊಮ್ಮಲಿಂಗನವ

೦೩. ಅಂಧಕನವ

೦೪. ಸೋಮ ದೇವನವ

೦೫. ಕುಂಚಯನವ

೦೬. ತೆಂಕನವ

೦೭. ಬಂಡಿಯವ

೦೮. ಇಮ್ಮಡಿಯವ

೦೯., ಭೀಮಶೆಟ್ಟಿಯವ

೧೦. ಯಕಪಟ್ಟನವ[2]

ಸೈಯದ್ ಸಿರಾಜ್ ಉಲ್ ಹಸನ್‌ರವರು ಗೋತ್ರ ಮತ್ತು ಮನೆತನದ ಹೆಸರುಗಳೆಂದು ೨೪ ಬಳಿಗಳನ್ನು ಪಟ್ಟಿ ಮಾಡುತ್ತಾರೆ.

ಗೋತ್ರಗಳು

೦೧. ಇಟ್ಲ

೦೨. ಥಿಮೊಳ್ಳು

೦೩. ಗಂಟೆದೊಳ್ಳು

೦೪. ಬಂಡರೋಳ್ಳು

೦೫. ಯಿರ್ಲೋಳ್ಳು

೦೬., ಅಬ್ಬವವಂತಿನೋಳ್ಳು

೦೭. ಸಿಂಗಮೋಳ್ಳು

೦೮. ಸಂದ್ರವಲೋಳ್ಳು

೦೯. ಯಿರ್ಗೆತೋಳ್ಳು

೧೦. ಪರಂಥೋಳ್ಳು

೧೧. ಪಿದಮೊಳ್ಳು

೧೨. ಅಂತುಗುಳೋಳ್ಳು

ಮನೆತನದ ಹೆಸರುಗಳೂ

೦೧. ಕುಮ್ಮದವರು

೦೨. ತದ್ಲವರು

೦೩. ಭನಮ್ವರು

೦೪. ತಪಿರನಿವರು

೫. ಗಂಡಿಸರಿವರು

೬. ಅತ್ಯಲವರು

೭. ಬಟೊನಿವಂಡ್ಲು

೮. ಚಲುಕಿನವರು

೯. ಕುಂಕುಲವರು

೧೦. ಮರ್ಪುವರು

೧೧. ಕಟಿಯಲವರು

೧೨. ಪೊಪಲವರು[3]

ಕೆ. ಎಸ್. ಸಿಂಗ್ ಮತ್ತು ಗುಪ್ತರವರು ಅನಂತಕೃಷ್ಮ ಅಯ್ಯರ್ ಉಲ್ಲೇಖಿಸಿದ ಬಳಿಗಳೆ ಪುನಃ ಉಲ್ಲೇಖಿಸುತ್ತಾರೆ. ಆದರೆ ಶ್ರೀ ಹರಿಲಾಲ್ ಪವಾರ್ ಅವರು ೧.೨೨ ಬಳಿಗಳನ್ನು ಗುರುತಿಸುತ್ತಾರೆ,

೧. ಅಡಕಿಲವರು

೨. ಅಂಧಕಲವರು

೩. ಅವರಿಲವರು

೪. ಅರಳಿಲರು

೫. ಅಜ್ಜೆಲವರು

೬. ಅನೆಲವರು

೭. ಅರೆಲವರು

೮. ಆವಿನವಲರು

೯. ಇಮ್ಮಡಿಲವರು

೧೦. ಇರಲವರು

೧೧. ಉರಸನ್ನವರು

೧೨. ಉದಿಲವರು

೧೩. ಎಮ್ಮೆಲವರು

೧೪. ಎಕ್ಕೇಲವರು

೧೫. ಒನೆಕೆಲವರು

೧೬. ಓರಲವರು

೧೭. ಔಡಲವರು

೧೮. ಕಡಗದವರು

೧೯. ಕಡ್ಡೇಲವರು

೨೦. ಕಡಹಟ್ಟಿಲವರು

೨೧. ಕಂಬಳಿಲವರು

೨೨. ಕಸ್ತೂರಿಲವರು

೨೩. ಕಾಮಲವರು

೨೪. ಕುರಿಹಾಲಿನವರು

೨೫. ಕುಂಚಿಲವರು

೨೬. ಕೆಂಗುರಿಲವರು

೨೭. ಕೊಂಬಿನವರು

೨೮. ಕೋರಿಲವರು

೨೯. ಗಡ್ಡೆಲವರು

೩೦. ಗಾಲೇನವರು

೩೧. ಗೀಜಗನವರು

೩೨. ಗೋಪಾಲನವರು

೩೩. ಗೌಡಲವರು

೩೪. ಚಿಪ್ಪಡಲವರು

೩೫. ಚಿಟಿಮಲ್ಲನವರು

೩೬. ಚಿನ್ನಿಲವರು

೩೭. ಚಿನ್ನಿ ಕೋರಿಲವರು

೩೮. ಜಂಗಮಲವರು

೩೯. ಜಂಗಿನವರು

೪೦. ಜುಂಜಲವರು

೪೧. ಜೋತಿಲವುರ

೪೨. ಟಿಂಕಲದವರು

೪೩. ತುಪ್ಪದವರು

೪೪. ತುರಬಿನವರು

೪೫. ತೆಲಗಾಬತ್ತಲರು

೪೬. ದರ್ಶನಲವರು

೪೭. ದನೇಲರು

೪೮. ದಾಸರಿಲವರು

೪೯. ದಿಬ್ಬಕುಲದವರು

೫೦. ದೇವಾಲವರು

೫೧. ನಡ (ಹಟ್ಟಿ)ವಟ್ಟಿಲವರು

೫೨. ನೆರಲವರು

೫. ಪಳಸಿದವರು

೫೪. ಪರ್ವಲವರು

೫೫. ಪತ್ರೆಯವರು

೫೬. ಪುರಾತನದವರು

೫೭. ಪೆಟ್ಟಿಗೆಲದವರು

೫೮. ಬಂಡಿಲದವರು

೫೯. ಬಂಗಾದವರು

೬೦. ಬಸರಿಲವರು

೬೧. ಬಣ್ಣಗುಲದವರು

೬೨. ಬನ್ನಿಲವರು

೬೩. ಬಂಢಾರದವರು

೬೪. ಬಳೆಗಾರದವರು

೬೫. ಬಾಗಲದವರು

೬೬. ಭಾಳೆಲವರು

೬೭. ಭಾಚಿಳೞಱು

೬೮. ಬ್ಯಾಲನವರು

೬೯. ಬಿಳಿಗುರಿಲವರು

೭೦. ಬಿಳಿಗರಿಲವರು

೭೧. ಭೀಮನವರು

೭೨. ಬುಡಮಲ್ಲನವರು

೭೩. ಬೆಳಗೂಗಿನವರು

೭೪. ಬೆಳ್ಳಿಲವರು

೭೫. ಬೇವಿನವರು

೭೬. ಬೊಟ್ಟಿಲವರು

೭೭. ಬೊಮ್ಮ (ಬಮ್ಮ)ಡ ದೇವನವರು

೭೮. ಮಲ್ಲಗಿನವರು

೭೯. ಮಲ್ಲನವರು

೮೦. ಮಜ್ಜಲವರು

೮೧. ಮಳಕನ್ನೇಲವು

೮೨. ಮೆಟ್ಟಿಲವರು

೮೩. ಮೆಂಗಲವರು

೮೪. ಮಳಶೆಟ್ಟಿಲವರು

೮೫. ಮಾರಿಲವರು

೮೬. ಮ್ಯಾಕಲವರು

೮೭. ಮುರಿಂಡಲವರು

೮೮. ಮುಮ್ಮಡಲವರು

೮೯. ಮುತ್ತಿನ ಸತ್ತರಗಿಲವರು

೯೦. ಮೂರಾ ಹೆಂಡಿನವರು

೯೧. ಮನೆಗಲವರು

೯೨. ಯಾತ್‌ಪತ್‌ದವರು

೯೩. ಯಾಗಸತ್ತೇದವರು

೯೪. ರಾಯಣ್ಣದವರು

೯೫. ವಜಮೂನಿಯವರು

೯೬. ಶುಂಠಿಲವರು

೯೭. ಸಂಕಲವರು

೯೮. ಸಣ್ಣಕ್ಕಿಲವರು

೯೯. ಸದರಿನವರು

೧೦೦. ಸರ್ವಲವರು

೧೦೧. ಸಮೇಲವರು

೧೦೨. ಸಾವಂತಲವರು

೧೦೩. ಸಿಪಾರಲವರು

೧೦೪. ಸೋಮದೇವರನವರು

೧೦೫. ಹನಚಿಲವರು

೧೦೬. ಹಟ್ಟೇಲವರು

೧೦೭. ಹಂಗೇಬನ್ನೆಲವರು

೧೦೮. ಹಾಲಿನವರು

೧೦೯. ಹಾವುಲವರು

೧೧೦. ಹುಲಿನವರು

೧೧೧. ಹೆಣ್ಣಿನವರು

೧೧೨. ಹೊನ್ನುಂಗರದವರು

೧೧೩. ಹೊನ್ನಗಂಟಿಯವರು

೧೧೪. ಹೊನ್ನಛೇಜಿಯವರು

೧೧೫. ಹೊನ್ನ ಕಠಾರಿಯವರು

೧೧೬. ಹೊನ್ನ ವೀರಗಂಟೆಯವರು

೧೧೭. ಹೊನ್ನ ದಾಸ್ಯಾಳದವರು

೧೧೮. ಹೊನ್ನ ಸಿಂಪಗೆಯವರು

೧೧೯. ಹೊನ್ನ ಗುಳೇಲವರು

೧೨೦. ಹೊನ್ನ ಕೋರಿಲವರು

೧೨೧. ಹೊನ್ನ ಬನ್ನೆಲವರು

೧೨೨. ಹೂವುಲವರು[4]

ಮೇಲೆ ಪಟ್ಟಿ ಮಾಡಿರುವ ಬಳಿಗಳಿಗೂ ಹೊರತಾಗಿಸಿ ಇನ್ನೂ ಬೇರೆ ಬಳಿಗಳು ಇರಬಹುದು. ಆದರೆ ಇಲ್ಲಿ ಉಲ್ಲೇಖಗೊಂಡ ಬಳಿಗಳಲ್ಲಿ ಮರ, ಗಿಡ, ಸಸ್ಯ, ಪ್ರಾಣಿ ಮತ್ತು ವೃತ್ತಿಗಳ ಹೆಸರುಗಳಿಂದ ಉತ್ಪನ್ನಗೊಂಡ ಬಳಿಗಳಿವೆ. ಈ ಬಳಿಗಳನ್ನು ನೋಡಲಾಗಿ, ಹೆಳವರು ಒಂದು ಆದಿಮ ಕುರುಹುಗಳಿರುವ ಸಮಾಜ ಎಂದು ಪರಿಗಣಿಸಬಹುದಾಗಿದೆ. ಅಲ್ಲದೆ ಹೆಳವರ ಬಳಿಗಳಲ್ಲಿ ಕುರುಬ ಸಮಾಜದ ಕೆಲವು ಬಳಿಗಳು ಸಹ ಸೇರಿಕೊಂಡಿವೆ.

ಹೆಳವರು ತಮ್ಮ ಮೂಲ ಪುರುಷನ ಕುರಿತು ಹೇಳುವಾಗಿ ಪದುಮಣ್ಣ ಎಮದು ವ್ಯಕ್ತಿಯ ಹೆಸರನ್ನು ಹೇಳುತ್ತಾರೆ. ಈತ ಕುರುಬ ಸಮುದಾಯಕ್ಕೆ ಸೇರಿದವನು. ಹೆಳವರು ಇದೇ ಸಂಗತಿಯನ್ನು ಡಾ. ಎಚ್.ಎಲ್. ನಾಗೇಗೌಡರು ಸಹ ಉಲ್ಲೇಖಿಸುತ್ತಾರೆ.[5] ಪ್ರಾಯಶಃ ಸಮುದಾಯವಾಗಿರಬಹುದು. ಜೊತೆಗೆ ಒಂದು ಕಾಲಕ್ಕೆ ಹೆಳವರು ಪಶುಪಾಲಕರೂ ಆಗಿದ್ದಿರಬಹುದೆಂದು ಊಹಿಸಬಹುದಾಗಿದೆ.

ವರ್ತಮಾನದ ಸಾಮಾಜಿಕ ಸ್ಥಿತಿಗತಿಗಳು

ಈ ಮೊದಲೇ ಹೇಳಿದಂತೆ ಹೆಳವರು ಶುದ್ಧಾಂಗವಾಗಿ ಅಲೆಮಾರಿಗಳೇನಲ್ಲ. ಈ ಸಮುದಾಯದ ಹಲವು ಗುಂಪುಗಳು ಅಲೆಮಾರಿಗಳಾಗಿ ಬದುಕುತ್ತಿವೆ. ಈಗಲೂ ಅಲೆಮಾರಿಗಳಾಗಿ ಬದುಕುತ್ತಿರುವವರು ಎತ್ತಿನ ಹೆಳವ ಮತ್ತು ಗಂಟೆ ಹೆಳವ ಪಂಗಡದ ಕೆಲವು ಗುಂಪುಗಳೂ ತಮ್ಮ ಒಕ್ಕಲು ಮನೆಗಳಿಗೆ ತೆರಳಿ ತಮ್ಮ ಪಾರಂಪಕ ವೃತ್ತಿಗನುಗುಣವಾಗಿ ವಂಶಾವಳಿಯನ್ನು ಇವರು ಹೇಳುತ್ತಾರೆ. ಆದರೆ ಒಟ್ಟಾರೆಯಾಗಿ ಇವರ ಸಂಖ್ಯೆ ಕಡಿಮೆ ಎಂದೇ ಹೇಳಬೇಕು. ಬೆಳಗಾಂ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಕೆಳವರು ಇಂದಿಗೂ ಈ ವೃತ್ತಿಯನ್ನು ಜತನದಿಂದ ನಿರ್ವಹಿಸುತ್ತಿದ್ದಾರೆ. ತಮ್ಮ ಪಾರಂಪರಿಕ ವೃತ್ತಿಯ ಕುರಿತು ಇವರಿಗೆ ಇನ್ನಿಲ್ಲದ ಮೋಹ. ಇಂದಿಗೂ ಹೆಳವರ ಅನೇಕ ಉಪಪಂಗಡಗಳು ಲಾಭದಾಯಕವಲ್ಲದ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಾಮಾಜಿಕವಾಗಿ ಹಿಂದುಳಿದಿದ್ದಾರೆ.

ಎಲ್ಲಾ ಕೆಳಜಾತಿಗಳಿಗೆ ಸಾಮಾಜಿಕವಾಗಿ ಕೆನ ಪದರ ಸ್ಥಿತಿಯೊಂದಿರುತ್ತದೆ. ಈ ಸ್ಥಿತಿಯಲ್ಲಿರುವವರು ಶಿಕ್ಷಣ ಪಡೆದು ಸರಕಾರಿ ಹುದ್ದೆಯಲ್ಲಿದ್ದು ಸಾಮಾಜಿಕವಾಗಿ ಆರ್ಥಿಕವಾಗಿ ಮುಂದುವರೆದಿದ್ದಾರೆ. ಹೆಳವ ಸಮುದಾಯದಲ್ಲೂ ಕೆಲವರು ಆರ್ಥಿಕವಾಗಿ ಉನ್ನತಿಯನ್ನು ಸಾಧಿಸಿ ಸಾಮಾಜಿಕ ಸ್ಥಾನಮಾನಗಳನ್ನು ಪಡೆದಿದ್ದಾರೆ. ಆದರೆ ಇವರ ಸಂಖ್ಯೆ ಕಡಿಮೆಯಂದೇ ಹೇಳಬೇಕಾಗುತ್ತದೆ. ಮಧ್ಯ ಮತ್ತು ದಕ್ಷಿಣ ಕರ್ನಾಟಕದ ಹೆಳವರಲ್ಲಿ ಕೆಲವರು ಮಾತ್ರ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದಾರೆ. ಆದರೆ ಬಹುಸಂಖ್ಯಾತ ಹೆಳವರು ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿದ್ದಾರೆ. ಜಾಗತೀಕರಣದ ಈ ಸಂದರ್ಭದಲ್ಲಿಯೂ ಶತಮಾನಗಳ ಹಿಂದೆ ರೂಪುಗೊಂಡಿರಬಹುದಾಗಿ ಪಾರಂಪರಿಕ ಅಲೆಮಾರಿ ವೃತ್ತಿಗಳನ್ನು ಇನ್ನು ಈ ಸಮುದಾಯಗಳು ಅವಲಂಬಿಸಿ ಬದುಕುತ್ತಿವೆ ಎಂದರೆ ಅದು ಭಾರತದಲ್ಲಿ ಮಾತ್ರ. ಈ ಬಗೆಯ ವೈರುಧ್ಯಗಳು ಅಸಮಾನತೆಯನ್ನು ಜತನದಿಂದ ಪೋಷಿಸುವ ಸಮಾಜದಲ್ಲಿ ಮಾತ್ರ ಜೀವಂತವಾಗಿರಲು ಸಾಧ್ಯ. ಆಧುನಿಕತೆ ತನ್ನೆಲ್ಲ ತಂತ್ರಜ್ಞಾನದಿಂದ ಮತ್ತು ಸಮಗ್ರವಾಗಿ ವ್ಯಾಪಿಸುವ ತನ್ನ ಆಗಾಧ ಶಕ್ತಿಯಿಂದ ಭಾರತದ ಸಾಂಪ್ರದಾಯಿಕ ಸಮಾಜಗಳನ್ನು ಬದಲಿಸಿಬಿಡಬಹುದೆಂದು ಮೊದಲಿಗೆ ನಂಬಲಾಗಿತ್ತು. ಆದರೆ ಈ ಸಮಾಜವು ಊಳಿಗಮಾನ್ಯ ಸ್ಥಿತಿಯಿಂದ ವಸಾಹತುಶಾಹಿಗೆ, ವಸಾಹತುಶಾಹಿಯಿಂದ ಬಂಡವಾಳಶಾಹಿಯ ಕಡೆಗೆ ನಡೆದು ಹೋಯಿತು. ಹೀಗೆ ಬದಲಾದ ಆರ್ಥಿಕ ಸಂದರ್ಭದಲ್ಲಿ ಈ ದೇಶದ ಶೋಷಿತರ ಸ್ಥಿತಿ ಯಾವ ವಿಧದಲ್ಲೂ ಉತ್ತಮಗೊಳ್ಳಲಿಲ್ಲ. ಇದಕ್ಕೆ ಉದಾಹರಣೆಗಳು ಹೆಳವರಂತಹ ಅಲೆಮಾರಿ ಸಮುದಾಯಗಳಿವೆ.

ಈವತ್ತೂ ಸಹ ಹೆಳವರ ವಿವಿಧ ಪಂಗಡಗಳು ತಮ್ಮ ಪಾರಂಪರಿಕ ವೃತ್ತಿಯಲ್ಲಿ ಬದುಕುತ್ತಾ ಹಿಂದುಳಿದಿವೆ. ಗುಲ್ಬರ್ಗಾ ಜಿಲ್ಲೆಯ ಸುರಪುರ ತಾಲ್ಲೂಕು ಚಕೇಲಿ ಅಡವಿಯಲ್ಲಿ ಅಡವಿ ಹೆಳವರ ಒಂದು ಪಂಗಡವಿದೆ.[6] ಇಂತಹ ಉದಾಹರಣೆಗಳನ್ನು ಇಟ್ಟುಕೊಂಡು ನಾವು ೨೧ ನೇ ಶತಮಾನಕ್ಕೆ ಹೋಗುತ್ತಿದ್ದೇವೆ ಎಂದರೆ ಅದಕ್ಕಿಂತ ಆಶ್ಚರ್ಯ ಮತ್ತೊಂದಿಲ್ಲ. ಈ ದೇಶದ ಸಮಾಜದಲ್ಲಿ ವೈರುಧ್ಯಗಳನ್ನು ಉದ್ದೇಶಪೂರ್ವಕವಾಗಿ ಆಳುವ ವರ್ಗ ಜೀವಂತವಾಗಿಟ್ಟುಕೊಂಡು ಬಂದಿದೆ. ಅದರಲ್ಲೂ ಪಾರಂಪರಿಕ ವೃತ್ತಿಯನ್ನು ಅನುಸರಿಸುವ ಕೆಳಜಾತಿ ಸಮುದಾಯಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ರಕ್ಷಿಸಬೇಕು ಎಂಬ ಶೈಕ್ಷಣಿಕ ಚರ್ಚೆಗಳು ನಡೆಯುತ್ತಿವೆ. ಆದರೆ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನಮ್ಮ ಚರಿತ್ರೆಯ ವಿಕಾಸದ ಯಾವುದೋ ಹಂತದಲ್ಲಿ ಕಾಲೂರಿ ನಿಂತಿರುವ ಸಮುದಾಯಗಳು ಹಾಗೆಯೇ ಮೂಲ ಸ್ಥಿತಿಯಲ್ಲಿ, ಮ್ಯೂಸಿಯಂ ಪೀಸ್‌ಗಳ ತರಹ ಇರಬೇಕೆಂದು ಹಲವು ಜನ ಬಯಸುತ್ತಿದ್ದಾರೆ. ಹೆಳವ ಸಮುದಾಯದ ಕೆಲವು ಗುಂಪುಗಳೂ, ಆದರಲ್ಲೂ ಪಾರಂಪರಿಕ ವೃತ್ತಿಯಲ್ಲಿರುವ ಅಲೆಮಾರಿಗಳು ಇಂದಿಗೂ ತಮ್ಮ ವೃತ್ತಿಯನ್ನು ಬಿಟ್ಟುಕೊಡದೆ ಊರೂರು ತಿರುಗುತ್ತ ವಂಶಾವಳಿ ಹೇಳುವುದನ್ನು ಮುಂದುವರೆಸಿರುವುದು ಇನ್ನೊಂದು ಬಗೆಯ ದುರಂತವೆಂದೇ ಭಾವಿಸಬೇಕಾಗುತ್ತದೆ. ಇದರಿಂದಾಗಿ ಹೆಳವರಂತಹ ಸಮುದಾಯಗಳು ಇಂದಿಗೂ ಆಧುನಿಕತೆ ಮತ್ತು ವರ್ತಮಾನದ ಅನೇಕ ಲಾಭಗಳಿಂದ ದೂರವೇ ಉಳಿದಿವೆ.

 

[1] H.V. Nanjundiah, ananth krishnna lyer, the mysore tribes and castes, p3 11, 1922

[2] Enthoven R E, The Tribes And Castes Of Bomby, Vol, 2, p 72, 1922

[3] Syed Siraj Ui Hasan, The Castes And Tribes Of The H E H The Nizames Dominion, P 569, 1950

[4] ಹರಿಲಾಲ್ಪವಾರ್, ಹೆಳವರಸಂಸ್ಕೃತಿ, ಪು೨೧, ೨೨, ೨೩, ೧೯೯೩

[5] ನಾಗೇಗೌಡಎಚ್ಎಲ್, ಹೆಳವರುಮತ್ತುಅವರಕಾವ್ಯಗಳು, ಪುxxvii, ೧೯೮೨

[6] ಹರಿಲಾಲ್ಪವಾರ್, ಹೆಳವರಸಂಸ್ಕೃತಿ, ಪು೧೯, ೧೯೯೩