ಪೀಠಿಕೆ

ಹೆಳವರು ಇಂದು ಶುದ್ಧಾಂಗವಾಗಿ ಅಲೆಮಾರಿಗಳೇನಲ್ಲ. ಆದರೆ ಅಲೆಮಾರಿಗಳಾಗಿದ್ದವರು. ಮತ್ತು ಈವತ್ತಿಗೂ ಈ ಸಮುದಾಯದ ಹಲವು ಗುಂಪುಗಳು ಅಲೆಮಾರಿಗಳಾಗಿ ಬದುಕುತ್ತಿವೆ. ಇಂಡಿಯಾದ ಬಹುತೇಕ ಅಲೆಮಾರಿಗಳು ಈ ದೇಶದ ಶ್ರೇಣಿಕೃತ ವ್ಯವಸ್ಥೆಯ ಕಾರಣಕ್ಕಾಗಿ ರೂಪುಗೊಂಡವರು. ಭಾರತದ ಸಮಾಜದ ಇಂತಹುದ್ದೇ ಕಾಲಘಟ್ಟದಲ್ಲಿ ಅಲೆಮಾರಿಗಳು ಸೃಷ್ಟಿಯಾದರು ಎಂದು ಹೇಳಲಾಗುವುದಿಲ್ಲ. ಭಾರತದ ಸಾಮಾಜಿಕ ವ್ಯವಸ್ಥೆ ಎಷ್ಟು ಸಂಕೀರ್ಣವೋ, ಆ ವ್ಯವಸ್ಥೆಯ ಅಂತರ್ಗತ ಭಾಗವಾಗಿರುವ ಅಲೆಮಾರಿಗಳು ರೂಪುಗೊಳ್ಳುವುದಕ್ಕೆ ಕಾರಣವಾಗಿರುವ ಸಾಮಾಜಿಕ ಆರ್ಥಿಕ ಸಂಗತಿಗಳೂ ಸಹ ಅಷ್ಟೇ ಸಂಕೀರ್ಣವಾಗಿವೆ. ಶ್ರೇಣೀಕರಣದ ಕಾರಣಕ್ಕಾಗಿ ಇಂಡಿಯಾದಲ್ಲಿ ಬದುಕುತ್ತಿರುವ ದುಡಿವ ಕೆಳಜಾತಿ ಸಮುದಾಯಗಳು ಯಾವ ಯಾವ ಹಂತಗಳನ್ನು ದಾಟಿ ಬಂದಿರುವರೋ ಆ ಎಲ್ಲ ಹಂತಗಳನ್ನು ಅಲೆಮಾರಿಗಳೂ ಹಾದು ಬಂದಿದ್ದಾರೆ. ಭಾರತದ ರಾಜಕೀಯಾರ್ಥಿಕ ಚಲನೆಗಳು ಇಲ್ಲಿನ ಉತ್ಪದನಾ ಸಂಬಂಧಗಳನ್ನು ಸ್ಪಷ್ಟವಾಗಿ ನಿಯಂತ್ರಿಸಿವೆ. ಈ ಕಾರಣದಿಂದಾಗಿ ಭಾರತದ ಸಮಾಜವು ಹಲವು ಸ್ತರಗಳಲ್ಲಿ ಛಿದ್ರಗೊಂಡಿದೆ. ಹೀಗಾಗಿ ಭಾರತದ ಸಮಾಜದ ಪ್ರಧಾನ ಲಕ್ಷಣವೆಂದರೆ ಜಾತಿವ್ಯವಸ್ಥೆ. ಜಾತಿ ವ್ಯವಸ್ಥೆಯ ಮುಖ್ಯ ಉದ್ದೇಶ ಈ ದೇಶದ ಸಮಾಜದ ಒಟ್ಟಾರೆಯ ರಾಜಕೀಯಾರ್ಥಿಕ ಸ್ಥಿತಿಯನ್ನು ಸಾಮಾಜಿಕ ಶ್ರೇಣೀಕರಣದ ಮೂಲಕ ಸಮರ್ಥಿಸುವುದು. ಈ ಶ್ರೇಣೀಕರಣ ಮತ್ತು ಜಾತಿ ವ್ಯವಸ್ಥೆ ದುಡಿವವರ ಮತ್ತು ದುಡಿಸಿಕೊಳ್ಳುವವರ ಮಧ್ಯೆ ಬಂದು ಅಸಹಜ ಸಾಮಾಜಿಕ ಸಂಬಂಧವಾಗಿ ಏರ್ಪಟ್ಟಿದೆ. ಈ ಕಾರಣದಿಂದಾಗಿ ಭಾರತದ ಶ್ರೇಣೀಕರಣವು ಜಗತ್ತಿನ ಎಲ್ಲ ತಾರತಮ್ಯ ವ್ಯವಸ್ಥೆಗಳಿಗಿಂತ ಹೆಚ್ಚು ಸಂಕೀರ್ಣವೂ ಮತ್ತು ಅಷ್ಟೇ ಕ್ರೂರ ವ್ಯವಸ್ಥೆಯಾಗಿದೆ.

ಭಾರತದಲ್ಲಿ ಒಂದು ಜಾತಿಯೆಂದರೆ, ಶ್ರಮ ವಿಭಜನೆಯ ಆಧಾರದಲ್ಲಿ ರೂಪುಗೊಂಡ ಒಂದು ಉತ್ಪಾದನಾ ಘಟಕ. ಪ್ರತಿಯೊಂದು ಜಾತಿ ಒಂದು ಸ್ವಯಂಪೂರ್ಣ ಉತ್ಪಾದನಾ ಘಟಕವಾಗಿ ತನ್ನ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳುತ್ತಲೇ ಬಂದಿದೆ. ಜಾತಿಯೊಂದು ತನ್ನ ಆಚರಣೆ, ಲಾಂಛನ, ಭಾಷೆ ಇವುಗಳ ಮೂಲಕ ಭಾವನಾತ್ಮಕವಾಗಿ ತನ್ನ ಅಸ್ತಿತ್ವವನ್ನು ನಿಖರಗೊಳಿಸಿಕೊಳ್ಳುತ್ತಲ್ಲೇ ಬಂದಿದೆ. ತಾನು ಅನುಸರಿಸುವ ಕಸುಬಿನಿಂದಾಗಿ ಒಂದು ಸಾಮಾಜಿಕ ಗುಂಪು ಸ್ವಯಂಪೂರ್ಣವಾಗಿ ಇನ್ನೊಂದು ಜಾತಿ ಸಮುದಾಯದಿಂದ ಅನೇಕ ಬಗೆಗಳಲ್ಲಿ ಭಿನ್ನವಾಗಿ ನಿಲ್ಲಲು ಯತ್ನಿಸುತ್ತದೆ. ಈ ಬಗೆಯ ಸ್ವಯಂಪೂರ್ಣತೆಂದು ಮತ್ತು ಅನನ್ಯತೆಯ ಕಾಳಜಿಗಳು ಸಮುದಾಯದ ಬದುಕಿನ ಒಟ್ಟಾರೆ ಚಲನಶೀಲತೆಯ ಭಾಗವಾಗಿರದೆ, ಈ ಶ್ರೇಣೀಕರಣದ ರಾಜಕೀಯ ಒತ್ತಡಗಳಿಂದಲೂ ರೂಪುಗೊಂಡಂತವುಗಳು. ಎಷ್ಟೋ ಸಲ ಅನನ್ಯತೆಯ ಕುರಿತ ಬಿಕ್ಕಟ್ಟು ಬಾಹ್ಯ ಜಗತ್ತಿನ ಒತ್ತಡಗಳ ಕಾರಣಕ್ಕೆ ಸಮುದಾಯಗಳನ್ನು ಕಾಡುತ್ತಲೇ ಇರುತ್ತದೆ. ಈ ಬಿಕ್ಕಟ್ಟಿನ ಕಾರಣಕ್ಕಾಗಿಯೇ ಭಾರತದ ಉತ್ಪಾದಕ ಶಕ್ತಿಗಳ ಸಾಮಾಜಿಕಾರ್ಥಿಕ ಸ್ಥಿತಿಗತಿಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಸಂಭವಿಸಲಿಲ್ಲ. ಕಾಲದಿಂದ ಕಾಲಕ್ಕೆ ಈ ದೇಶವನ್ನು ನಿಯಂತ್ರಿಸಿದ ಆಳುವ ವರ್ಗ ರೂಪಾಂತರಗೊಂಡಂತೆ ಇಲ್ಲಿನ ದುಡಿವ ವರ್ಗಗಳ ಜೀವನ ವಿಧಾನಗಳೂ ಬದಲಾಗುತ್ತಲೇ ಬಂದವು. ಆದರೆ ದುಡಿವ ವರ್ಗದ, ಕೆಳಜಾತಿಗಳ ರಾಜಕೀಯಾರ್ಥಿಕ ಬದುಕಲ್ಲಿ ಅಗಾಧ ಬದಲಾವಣೆಗಳು ಸಂಭವಿಸಲಿಲ್ಲ. ಈ ಕಾರಣದಿಂದ ಭಾರತದ ಕೆಳಜಾತಿಗಳು ತಮ್ಮ ಸಾಮಾಜಿಕ ಸ್ಥಿತಿಗತಿಗಳನ್ನು ಪರಂಪರೆಯ ಅವಶೇಷವೋ ಎಂಬತೆ ಅನಿವಾರ್ಯವಾಗಿ ಒಪ್ಪಿಕೊಂಡು ಬಂದಿವೆ ಅದರಲ್ಲಂತೂ ಅಲೆಮಾರಿಗಳು ಈ ದೇಶದ ಒಟ್ಟಾರೆ ಚರಿತ್ರೆಯ ಅನೂಹ್ಯ ಕಾಲಘಟ್ಟದಲ್ಲಿ ಬದುಕುತ್ತಿರುವಂತೆ ಭಾಸವಾಗುತ್ತಿದೆ.

ಸಾಮಾಜಿಕವಾಗಿ ಅಲೆಮಾರಿಗಳು ಯಾವತ್ತೂ ಉನ್ನತೀಕರಣಗೊಳ್ಳದಂತೆ ನಿಯಂತ್ರಿಸಿದ್ದು ಅವರ ಆರ್ಥಿಕ ಅವಲಂಬನೆ. ಆರ್ಥಿಕವಾಗಿ ಯಾವತ್ತೂ ಪರಾವಲಂಬಿಯಾಗಿ ಬದುಕಿದ ಅಲೆಮಾರಿಗಳು ಸಾಮಾಜಿಕವಾಗಿ ಅವಶೇಷಗಳ ಮಾದರಿಯಲ್ಲಿ ಬದುಕಿ ಬಂದಿದ್ದಾರೆ. ಕಾರಣ ಈ ದೇಶದ ಆರ್ಥಿಕ ಚರಿತ್ರೆಯ ಒಟ್ಟಾರೆ ಬೆಳವಣಿಗೆಯ ಒಂದು ಹಂತದಲ್ಲಿ ಜಡವಾಗಿ ನೆಲೆಯೂರಿದ ಅಲೆಮಾರಿ ಸಮುದಾಯಗಳು, ಈ ದೇಶದ ಸಮಾಜದ ಬೆಳವಣಿಗೆಯ ಓಘದಲ್ಲಿ ಸುಲ್ಲಿತವಾಗಿ ಹರಿದು ಬದಲಾಗಲಿಲ್ಲ. ಇದರಿಂದಾಗಿ ಒಮ್ಮೊಮ್ಮೆ ಈ ಅಲೆಮಾರಿಗಳು ಎಷ್ಟೋ ಶತಮಾನಗಳ ಹಿಂದೆ ವಿಕಾಸವಾಗದ ಹಂತದಲ್ಲಿಯೇ ಬದುಕುತ್ತಿದ್ದಾರೆ ಎಂದೆನ್ನಿಸಿಬಿಡುತ್ತದೆ. ಒಂದು ನಿಶ್ಚಿತ ಸಮುದಾಯಕ್ಕೆ ಸಾಮಾಜಿಕ, ರಾಜಕೀಯ ಸಮಗ್ರತೆ ಮತ್ತು ಚಹರೆಗಳು, ರೂಪುಗೊಳ್ಳುವುದು ಆ ಸಮುದಾಯ ಯಾವ ಬಗೆಯ ಉತ್ಪಾದನೆಯಲ್ಲಿ ತೊಡಗಿದೆ ಎಂಬುದನ್ನು ಅವಲಂಬಿಸಿರುತ್ತದೆ. ಅಲೆಮಾರಿಗಳ ಒಟ್ಟಾರೆಯ ಆರ್ಥಿಕತೆಯು ಈ ದೇಶದ ಊಳಿಗಮಾನ್ಯ ಮತ್ತು ಅರೆ ಊಳಿಗಮಾನ್ಯ ವ್ಯವಸ್ಥೆಯನ್ನು ಇಡಿಯಾಗಿ ಅವಲಂಬಿಸಿದ ಕಾರಣಕ್ಕೆ ಈ ಸಮುದಾಯಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳಲ್ಲಿ ಭಾರೀ ಬದಲಾವಣೆಗಳು ಸಂಭವಿಸಲಿಲ್ಲ. ಹೆಳವರೂ ಸಹ ಈ ದೇಶದ ಆರ್ಥಿಕತೆಯ ಎಲ್ಲ ಹಂತಗಳನ್ನೂ ದಾಟಿ ಬಂದಿದರೂ ಸಹ ಅಲೆಮಾರಿಗಳಾಗಿ, ಅರೆ ಅಲೆಮಾರಿಗಳಾಗಿ ಬದುಕುತ್ತಿದ್ದಾರೆ. ಈ ಅಧ್ಯಯದಲ್ಲಿ ಹೆಳವ ಸಮುದಾಯದ ಸಾಮಾಜಿಕ ಸಂರಚನೆಯನ್ನು ಅವಲೋಕಿಸಲಾಗಿದೆ.

ಹೆಳವ ಸಮಾಜದ ಚಾರಿತ್ರಿಕ ಬೆಳವಣಿಗೆ

ಭಾರತದ ಸಮಾಜದಲ್ಲಿ ಜಾತಿಯೊಂದು ನಿಶ್ಚಿತ ಉತ್ಪಾದನಾ ಘಟಕ ಎಂದು ಭಾವಿಸಲಾಗಿದೆ. ಒಂದು ನಿರ್ದಿಷ್ಟ ಸಂಸ್ಕೃತಿ, ಭಾಷೆ, ಜೀವನ ವಿಧಾನ ರೂಪುಗೊಳ್ಳಲು ಸಮಾಜವೊಂದಕ್ಕೆ ಆರ್ಥಿಕ ಸಮಗ್ರತೆಯೊಂದು ಸಾಧ್ಯವಾಗಲೇಬೇಕು. ಆರ್ಥಿಕತೆಯು ಸಮಾಜವೊಂದರ ಸಮಗ್ರ ಚಟುವಟಿಕೆಗಳ ಕೇಂದ್ರಬಿಂದು. ಈ ವಾದವನ್ನು ಜಗತ್ತಿನ ಬಹುತೇಕ ಎಲ್ಲ ಸಮಾಜಶಾಸ್ತ್ರಜ್ಞರು ಅನುಮೋದಿಸುತ್ತಾರೆ. ಭಾರತದ ಸಮಾಜದ ಚಾರಿತ್ರಿಕ ರೂಪಾಂತರಗಳನ್ನು ಅಧ್ಯಯನ ಮಾಡಿದ ಸಮಾಜಶಾಸ್ತ್ರಜ್ಞ ಭಗವತ್ ಶರಣ್ ಉಪಾಧ್ಯಾಯ “ಗತಕಾಲದಲ್ಲಿ ಸ್ಪಷ್ಟವಾದ ಆರ್ಥಿಕ ಕಾರಣಗಳೇ ಸಾಮಾಜಿಕ ವ್ಯವಸ್ಥೆಯನ್ನು ಹುಟ್ಟು ಹಾಕಿದವು ಎಂಬುದರಲ್ಲಿ ಸಂದೇಹವಿಲ್ಲ”[1] ಎನ್ನುತ್ತಾರೆ. ಈ ಕಾರಣದಿಂದ ನಿದರ್ದಿಷ್ಟ ಸಮುದಾಯದ ಜೀವನ ವಿಧಾನದ ಬೆಳವಣಿಗೆಗೆ ಆರ್ಥಿಕ ಅಂಶಗಳು ಕಾರಣವಾಗುತ್ತವೆ. ಈ ಅಂಶವನ್ನು ಸ್ಪಷ್ಟಪಡಿಸಿಕೊಳ್ಳಲು ಭಾರತದ ಸಮಾಜದ ಚಾರಿತ್ರಿಕ ಬೆಳವಣಿಗೆಯನ್ನು ಅವಲೋಕಿಸಬಹುದಾಗಿದೆ.

ಭಾರತದಲ್ಲಿ ವರ್ಣಗಳ ಕಾಲದಿಂದ ಆರಂಭವಾದ ಸಮಾಜದ ವಿಭಜನೆಯ ಪ್ರಹಸನವು ಇಂದಿಗೂ ತನ್ನ ವಿಕಟ ಅಟ್ಟಹಾಸವನ್ನು ತಣಿಸಿಕೊಂಡಿಲ್ಲ. ಯಾವುದೋ ಕಾಲಘಟ್ಟದಲ್ಲಿ ಉತ್ಪಾದನೆಯ ವಿಧಗಳನ್ನು ಆಧರಿಸಿ ಶ್ರೇಷ್ಠ ಮತ್ತು ಕನಿಷ್ಠ ಆರ್ಥಿಕ ರಚನೆಗಳು ರೂಪುಗೊಂಡವು. ಶ್ರೇಷ್ಠ ಸ್ಥಾನಮಾನಗಳು ವರ್ಣ ವ್ಯವಸ್ಥೆಯ ಮೇಲಿನ ಸಮುದಾಯಗಳಿಗೆ ಮಾತ್ರ ದಕ್ಕಿದವು. ಆದರೆ ಕನಿಷ್ಠವೆನ್ನಿಸುವ ಆರ್ಥಿಕ ಚುಟುವಟಿಕೆಗಳು ಬಹುಸಂಖ್ಯಾತ ದುಡಿವ ವರ್ಗಗಳ ಮೇಲೆ ಹೇರಲ್ಪಟ್ಟವು. ಅಂಬೇಡ್ಕರ್ ಈ ಚರ್ಚೆಯನ್ನು ಹೀಗೆ ವಿವರಿಸಿದ್ದಾರೆ. “ಸಾಮಾಜಿಕ ರ್ಶರಮ ವಿಭಜನೆಯ ಕಟ್ಟಳೆಗೆ ಒಳಪಟ್ಟು ಉಳಿದ ವರ್ಗಗಳು ತಾರತಮ್ಯಗಳಿಗೆ ಒಳಗಾದವು. ಕೆಲವು ದೊಡ್ಡವಾದವು. ಉಳಿದವು ಸಣ್ಣಪುಟ್ಟ ಉಳಿದ ವರ್ಗಗಳು ತಾರತಮ್ಯಗಳಿಗೆ ಒಳಗಾದವು. ಕೆಲವು ದೊಡ್ಡವಾದವು. ಉಳಿದವು ಸಣ್ಣಪುಟ್ಟ ಗುಂಪುಗಳಾದವು. ವೈಶ್ಯ ಮತ್ತು ಶೂದ್ರ ವರ್ಗಗಳು ಮೂಲ ಜೀವ ದ್ರವ್ಯವಾಗಿದ್ದು ಇಂದಿನ ಅಸಂಖ್ಯಾತ ಜಾತಿಗಳಿಗೆ ಆಕರವಾದವು.”[2]. ಒಟ್ಟಾರೆ ಸಮಾಜದ ಅಂತಃಸ್ಸತ್ವವಾದ ದುಡಿವ ವರ್ಗಗಳು ಆಳುವ ವರ್ಗದ ಅಟ್ಟಹಾಸಕ್ಕೆ, ಪರಮೋಚ್ಛ ಸಾಮಾಜಿಕ ಅಧಿಕಾರ ದಾಹಕ್ಕೆ ವಿಘಟಿತಗೊಂಡು ಜಾತಿಗಳಾದವು. ಕೇವಲ ಶ್ರಮ ವಿಭಜನೆಯ ಲೌಕಿಕ ಕಾರಣಕ್ಕೆ ವಿಭಜನೆಗೊಂಡ ಜಾತಿಗಳಿಗೆ ಅಲೌಕಿಕವೆನ್ನಿಸುವ, ಆಧ್ಯಾತ್ಮಿಕ ಸ್ತರದಲ್ಲಿ ಅವುಗಳನ್ನು ನ್ಯಾಯಬದ್ಧಗೊಳಿಸಲಾಯಿತು. ಶಾಸ್ತ್ರಗಳ ಮೂಲಕ, ಸಾಮಾಜಿಕ ಕಾನೂನುಗಳ ಮೂಲಕ ಜಾತಿಗಳೂ ಸಾಮಾಜಿಕವಾಗಿ ಸ್ವಯಂಪೂರ್ನಗೊಂಡವು. ಕೇವಲ ಜಾತಿಯೊಂದು ತನ್ನ ಅಸ್ತಿತ್ವದ ಕಾರಣವನ್ನು ಮುಖ್ಯವಾಗಿಸಿಕೊಂಡು ಈ ದೇಶದ ಪರಂಪರೆಯ ರಚನೆಗಳನ್ನು ಮೋಹಿಸಿತು ಈ ಕಾರಣಕ್ಕಾಗಿಯೇ ಜಾತಿಗಳು ತಮ್ಮ ಮಧ್ಯೆ ತೆಳುವಾದ ಬೇಲಿಗಳನ್ನೇ ಹೆಣೆದುಕೊಂಡವು. ದುರಂತವೆಂದರೆ, ಜಾತಿಯೊಂದು ಅಂತರಿಕವಾಗಿ ತನ್ನನ್ನು ತಾನೇ ಶ್ರೇಣಿಕರಣಕ್ಕೊಳಪಡಿಸಿಕೊಂಡಿತು. ಈ ಕಾರಣಕ್ಕಾಗಿ ಜಾತಿಯ ಒಳಗೇ ಶ್ರೇಷ್ಠ, ಕನಿಷ್ಠ ವೈರುಧ್ಯಗಳೂ ಬೆಳೆದು ನಿತಂವು. ಒಟ್ಟಾರೆಯಾಗಿ ಭಾರತದ ಜಾತಿ ಶ್ರೇಣೀಕರಣವು ಒಂದು ಅಸಹಜ ಸಾಮಾಜಿಕ ಸಂರಚನೆಯಗಿ ರೂಪುಗೊಂಡಿತು. ಮುಂದೆ ಈ ಸಂರಚನೆಯೇ ಕಾಲಕಾಲಕ್ಕೆ ವಿರಾಟ್ ನ್ಯಾಯಬದ್ಧ ಅಸ್ತಿತ್ವವನ್ನು ಪಡೆದುಕೊಂಡು ಬಿಟ್ಟಿತು.

ಇದರಿಂದಾಗಿ, ಭಾರತದ ಆರ್ಥಿಕ ರಂಗದಲ್ಲಾದ ಒಟ್ಟಾರೆ ಬದಲಾವಣೆಗಳಿಗೆ ಅನುಗುಣವಾಗಿ ಇಲ್ಲಿನ ಸಮಾಜದಲ್ಲಿ ಅನೇಕ ರೂಪಾಂತರಗಳು ಸಂಭವಿಸಿದವು. ಭಾರತದ ಆರ್ಥಿಕತೆ ಹೆಚ್ಚು ಹೆಚ್ಚು ಸಂಕೀರ್ಣಗೊಂಡಂತೆಲ್ಲ ಇಲ್ಲಿನ ಸಾಮಾಜಿಕ ರಚನೆಗಳೂ ಸಂಕೀರ್ಣಗೊಳ್ಳುತ್ತ ಹೋದವು. ಕಾಲ ಕಾಲಕ್ಕೆ ಶೋಷಕ ಮತ್ತು ಶೋಷಿತರ ಪಾತ್ರಗಳು ಬದಲಾಗುತ್ತ ಹೋದರೂ ಸಹ, ಅದೊಂದು ಕ್ಷಣಿಕ ಮೇಲಾಟವಾಗಿ ಕೊನೆಗೊಂಡಿತು. ಈ ದೇಶದ ಸಾಮಾಜಿಕ ಕಾನೂನುಗಳು ಮಾತ್ರ ದುಡಿವ ವರ್ಗ ಮತ್ತು ಮಹಿಳೆಯ ವಿಷಯದಲ್ಲಿ ಮಾತ್ರ ಕ್ರೂರವಾಗುತಲೇ ಹೋದವು. ಭಾರತದ ಒಟ್ಟಾರೆಯ ಆರ್ಥಿಕ ರೂಪಾಂತರಗಳು ದುಡಿವ ವರ್ಗಗಳು ಬದುಕಲ್ಲಿ ಹಿಂಸೆಯನ್ನು ಧಾರಾಳವಾಗಿ ಸಂಚಯಿಸಿ ವಿಜಯದ ನಗು ನಕ್ಕವು. ಈ ಆರ್ಥಿಕ ರೂಪಾಂತರಗಳು ನಿಶ್ಚಿತವಾಗಿ ದುಡಿವ ವರ್ಗಗಳನ್ನು ಹಿಂಸಿಸಿ ಪಶುಗಳು ಕಿತ್ತು ತಿಂದವು. ಭಾರತದ ಸಮಾಜದ ಚಾರಿತ್ರಿಕ ಬೆಳವಣಿಗೆಯನ್ನು ಸಾಮಾಜಶಾಸ್ತ್ರಜ್ಞರು ಅನೇಕ ಬಗೆಗಳಲ್ಲಿ ವಿಮಗಡಿಸುತ್ತಾರೆ. ಧರ್ಮಗಳ ಬೆಳವಣಿಗೆಯ ಆಧಾರದಲ್ಲಿ, ವೇದಗಳ ಕಾಲ, ಬೌದ್ಧರಕಾಲ, ಜೈನಧರ್ಮ, ವೈಷ್ಣವ ಧರ್ಮ ಹೀಗೆ ಆಯಾ ಕಾಲ ಘಟ್ಟದಲ್ಲಿ ಧರ್ಮಗಳು ಸಮಾಜದ ಮೇಲೆ ಸಾಧಿಸಿದ ಹಿಡಿತವನ್ನು ಆಧರಿಸಿ ಸಾಮಾಜಿಕ ಚರಿತೆಯನ್ನು ರೂಪಿಸುವ ಕ್ರಮವನ್ನು ಕೆಲವರು ಅನುಸರಿಸುತ್ತರೆ. ಇನ್ನು ಕೆಲವರು ಗುಪ್ತರಯುಗ, ಮೌರ್ಯರ ಯುಗ, ಶಾತವಾಹನರ ಯುಗ ಎಂದು ರಾಜರ ಆಳ್ವಿಕೆಯ ಆಧಾರದ ಮೇಲೆ ಈ ಸಮಾಜದ ಚಾರಿತ್ರಿ ಬೆಳವಣಿಗೆಯನ್ನು ಗುರುತಿಸಲು ಯತ್ನಿಸುತ್ತಾರೆ. ಆದರೆ ಮಾರ್ಕ್ಸ್‌ವಾದಿ ಅಧ್ಯಯನಕಾರರು ಸಮಾಜದ ಉತ್ಪಾದನೆಯ ವಿಧಾನದ ಆಧಾರದ ಮೇಲೆ ಅದರ ಚಾರತ್ರಿಕ ಬೆಳವಣಿಗೆಯನ್ನು ಅಧ್ಯಯನ ಮಾಡುತ್ತಾರೆ. ಒಂದು ಕಾಲಘಟ್ಟದ ಉತ್ಪಾದನಾ ವಿಧಾನವು ಆ ಕಾಲಘಟ್ಟದ ಉತ್ಪಾದನಾ ಸಂಬಂಧಗಳನ್ನು ಪ್ರಭಾವಿಸುತ್ತದೆ ಎಂಬ ಸಿದ್ಧಾಂತದ ಮೇಲೆ ಸಮಾಜದ ಚರಿತ್ರೆಯನ್ನು ಗ್ರಹಿಸಲು ಪ್ರಯತ್ನಿಸಲಾಗುತ್ತದೆ. ಈ ಕಾರಣದಿಂದ ಭಾರತದ ಸಮಾಜವನ್ನು,

೧. ಆದಿಮ ಸಮತಾವಾದಿ ಸಮಾಜ

೨. ರಾಜಶಾಹಿ ಯುಗ

೩. ಆರಂಭದ ಊಳಿಗಮಾನ್ಯ ಕಾಲ

೪. ಮಧ್ಯಯುಗೀನ ಊಳಿಗಮಾನ್ಯ ಕಾಲ

೫. ಸಾಮಂತಶಾಹಿ ಅಥವಾ ಅರೆ ಊಳಿಗಮಾನ್ಯ ಕಾಲ

೬. ವಸಾಹತು ಕಾಲಘಟ್ಟ

ಎಂದು ವಿಂಗಡಿಸಲಾಗುತ್ತದೆ. ಕೆಲವು ಸಲ ಈ ವಿಂಗಡನೆಯು ಸರಳವೂ ಮತ್ತು ಸಂಕೀರ್ಣವೂ ಆಗಿ ಕಾಣುತ್ತದೆ. ಅಲ್ಲದೆ ಸಮಾಜದ ಬೆಳವಣಿಗೆಯ ಹಂತಗಳನ್ನು ಸ್ಥೂಲವಾಗಿಯಾಗಲಿ, ನಿರ್ದಿಷ್ಟವಾಗಿಯಾಗಲಿ ವಿಂಗಡಿಸಲಾಗುವುದಿಲ್ಲ. ಆದರೆ ಸಾಮಾಜದ ಬೆಳವಣಿಗೆಗಳನ್ನು ಅಧ್ಯಯನ ಮಾಡುವ ಸಲುವಾಗಿ ಮೇಲಿನಂತೆ ಸರಳವಾಗಿ ವಿಂಗಡಿಸಬಹುದಾಗಿದೆ.

ಮೇಲಿನ ಆರು ಹಂತಗಳಲ್ಲಿ ಈ ದೇಶದ ದುಡಿವ ವರ್ಗ ಹಲವು ಬಗೆಯ ರೂಪಾಂತರಗಳಿಗೆ ಮುಖಾಮುಖಿಯಾಗುತ್ತ ಬಂದಿವೆ. ಈಗಾಗಲೇ ಹೇಳಿದಂತೆ ದುಡಿವ ವಿಭಜನಗೊಳ್ಳುತ್ತಾ ಹೋದವು. ಕೆಲವು ಜಾತಿಗಳು ಸಮಾಜದ ಉತ್ಪಾದನೆಯಲ್ಲಿ ಮುಖ್ಯ ಪಾತ್ರ ವಹಿಸಿದರೆ, ಇನ್ನು ಕೆಲವು ಜಾತಿಗಳು ಉತ್ಪಾದನೆಗೆ ಪೂರಕವಾಗುವ ಪೋಷಕ ವರ್ಗಗಳಾಗಿ ರೂಪುಗೊಂಡಿವು. ಕೃಷಿಯೆಂಬ ಪ್ರಧಾನ ಉತ್ಪಾದನೆಯನ್ನು ಪೋಷಿಸಲು, ಬಡಗಿ, ಕಮ್ಮಾರ, ಅಕ್ಕಸಾಲಿಗ, ಕುಂಬಾರ ಮುಂತಾದ ಕುಶಲಕರ್ಮಿ ಜಾತಿಗಳು ರೂಪುಗೊಂಡವು. ಹೀಗೆಯೇ ಸಮಾಜವನ್ನು ರಂಜಿಸುವ ಮನರಂಜಕವರ್ಗ ಮತ್ತು ಊಳಿಗಮಾನ್ಯ ಪ್ರಭುಗಳ ಆಶ್ರಯಿಸಿದ ‘ಅನುತ್ಪಾದಕ’ ಜಾತಿಗಳೂ ಹುಟ್ಟಿಕೊಂಡವು. ಮುಖ್ಯವಾಗಿ ಕುಶಲ ಕರ್ಮಿಗಳು ಮತ್ತು ಮನರಂಜಕ ಜಾತಿಗಳು ಮತ್ತು ‘ಅನುತ್ಪಾದಕ’ ಜಾತಿಗಳೆಲ್ಲ ಊಳಿಗಮಾನ್ಯ ಉತ್ಪದನಾ ವ್ಯವಸ್ಥೆಯನ್ನು ಅವಲಂಬಿಸಿಯೇ ಬದುಕಬೇಕಿತ್ತು. ಹೀಗೆ ಊಳಿಗಮಾನ್ಯ ವ್ಯವಸ್ಥೆಯನ್ನು ಒಪ್ಪಿಕೊಂಡ ಅದಕ್ಕೆ ಪೂರಕವಾಗುವ ಉತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಕೊಂಡ ಈ ಸಮುದಾಯಗಳು ಆರ್ಥಿಕವಾಗಿ ಸ್ವಯಂಪೂರ್ಣ ವಾಗಲಿಲ್ಲ. ಊಳಿಗಮಾನ್ಯ ಆರ್ಥಿಕತೆಯಲ್ಲಿ ಈ ಸಮುದಾಯಗಳು ‘ಸೇವಕ ಸಮುದಾಯಗಳು’ ಮತ್ತು ‘ಅನುತ್ಪಾದಕ ಸಮುದಾಯಗಳು’. ಈ ಕಾರಣದಿಂದ ಊಳಿಗಮಾನ್ಯ ಆರ್ಥಿಕ ವ್ಯವಸ್ಥೆಯಲ್ಲಿ ಆದ ಬದಲಾವಣೆಗಳೆಲ್ಲ ಈ ವರ್ಗಗಳನ್ನು ಪ್ರಭಾವಿಸುತ್ತಿದ್ದವು. ಮತ್ತು ಯಾವಾಗ ಊಳಿಗಮಾನ್ಯ ವ್ಯವಸ್ಥೆಯು ಪಲ್ಲಟಗೊಂಡು ಆಧುನಿಕ ಉತ್ಪಾದನಾ ವ್ಯವಸ್ಥೆ ರೂಪಗೊಂಡಿತೋ ಅಂದಿನಿಂದ ಊಳಿಗಮಾನ್ಯ ವ್ಯವಸ್ಥೆಯನ್ನು ಅವಲಂಬಿಸಿದ್ದ ಸಮುದಾಯಗಳು ದಿಕ್ಕೆಟ್ಟು ಹೋದವು. ಈ ಸಮುದಾಯಗಳನ್ನು ಆರ್ಥಿಕವಾಗಿ ಪೋಷಿಸುತ್ತದ್ದ ಊಳಿಗಮಾನ್ಯತೆಯು ವಿಘಟನೆಗೊಂಡ ಮೇಲೆ ಕುಶಲಕರ್ಮಿಗಳು, ಮನರಂಜಕ ಸಮುದಾಯಗಳು ಮತ್ತು ‘ಅನುತ್ಪಾದಕ’ ಜಾತಿ ಸಮುದಾಯಗಳು ಅನಿವಾರ್ಯವಾಗಿ ತಮ್ಮ ಸಾಮಾಜಿಕ ಮತ್ತು ಆರ್ಥಿಕ ನೆಲೆಗಳನ್ನು ಕಳೆದುಕೊಂಡವು.

ದಕ್ಷಿಣ ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ಬ್ರಾಹ್ಮಣ, ದೇವಾಲಯ ಮತ್ತು ಭೂಮಾಲಿಕ ತ್ರಿಕೂಟ ವ್ಯವಸ್ಥೆಯು ಕುಶಲಕರ್ಮಿಗಳನ್ನು ಮತ್ತು ಆಶ್ರತ ಸೇವಕ ಜಾತಿಗಳನ್ನು ಅತ್ಯಂತ ಹೀನಯವಾಗಿ ಶೋಷಣೆಗೊಳಪಡಿಸಿದ್ದವು. “ಬ್ರಾಹ್ಮಣರಿಗೆ ಮತ್ತು ದೇವಾಲಯಗಳಿಗೆ ಕುಶಲಕರ್ಮಿ ವರ್ಗ ಮತ್ತು ಸೇವೆ ಮಾಡುವ ಉಳಿದ ಶೂದ್ರ ಜಾತಿಗಳು ಅನಿವಾರ್ಯವಾಗಿ ಬಿಟ್ಟಿ ಚಾಕರಿ ಮಾಡಬೇಕಿತ್ತು. ಈ ಬಿಟ್ಟಿ ಸೇವೆ ಸಾಮಾಜಿಕ ಕಟ್ಟಳೆಯ ಭಾಗವಾಗಿಯೇ ನ್ಯಾಯಬದ್ಧವಾಗಿತ್ತು. ಇದರಿಂದಾಗಿ ಈ ಎರಡೂ ವರ್ಗಗಳು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹೀನಾಯ ಶೋಷಣೆಗೆ ಒಳಪಟ್ಟವು”[3] ಎಂದು ಆರ್. ಎನ್. ನಂದಿಯವರು ವಿವರಿಸುತ್ತಾರೆ. ಈ ಹಂತದಲ್ಲಿಯೇ ಕರ್ನಾಟಕದಲ್ಲಿ ಕುಶಲಕರ್ಮಿ ಮತ್ತು ಕೆಳಜಾತಿ ಸಮುದಾಯಗಳ ಆಶಯಗಳ ಭಾಗವಾಗಿ ವಚನ ಚಳುವಳಿ ರೂಪುಗೊಂಡಿತು. ಆದರೆ ಸೀಮಿತ ಚೌಕಟ್ಟಿನ ಪ್ರತಿರೋಧದ ಕಾರಣಕ್ಕಾಗಿ ಮತ್ತು ಹಲವು ರಾಜಕೀಯ ಪಿತೂರಿಗಳ ಕಾರಣಕ್ಕಾಗಿ ಈ ಚಳುವಳಿ ದುರಂತದ ಅಂತ್ಯ ಕಂಡಿತು.

ಆದರೆ ಊಳಿಗಮಾನ್ಯ ಕಾಲಘಟ್ಟದಲ್ಲಿ ಈ ವರ್ಗಗಳ ಸೇವೆಯನ್ನು ನ್ಯಾಯಬದ್ಧಗೊಳಿಸಲಾಯಿತು. ಬ್ರಾಹ್ಮಣ ಮತ್ತು ದೇವಾಲಯಗಳ ಬಿಟ್ಟಿ ಚಾಕರಿಯ ಹೊರತಾಗಿ ಕುಶಲಕರ್ಮಿ ಮತ್ತು ಸೇವಕ ವರ್ಗವು ಭೂಮಾಲಿಕರನ್ನು ಅವಲಂಬಿಸಿತು. “ಈ ಕುಶಲಕರ್ಮಿಗಳ ಮತ್ತು ಸೇವಕ ವರ್ಗಗಳ ದುಡಿಮೆಗೆ ಮತ್ತು ಉತ್ಪಾದಿತ ವಸ್ತುಗಳಿಗೆ ಹಣದ ರೂಪದಲ್ಲಿ ಬೆಲೆ ನಿಗದಿ ಮಾಡಲಾಯಿತು. ಇಲ್ಲವೆ ಗೇಣಿ ಆಧಾರದಲ್ಲಿ ಭೂಮಾಲಿಕರು ತಮ್ಮ ಜಮೀನುಗಳನ್ನು ಈ ವರ್ಗಗಳಿಗೆ ಕೊಡಲಾರಂಭಿಸಿದರು. ಈ ಸಮುದಾಯಗಳು ಒಂದು ರೀತಿಯ ಜೀತದ ಕ್ರಮದಲ್ಲಿ ನಿರ್ದಿಷ್ಟಗೊಳ್ಳಲ್ಪಟ್ಟವು.”[4] ಆದರೆ ಯಾವತ್ತು ಭೂಮಾಲಿಕ ವರ್ಗವು ತನ್ನ ಚಹರೆಗಳನ್ನು ಮತ್ತು ಆರ್ಥಿಕ ನಡೆಗಳನ್ನು ಬದಲಿಸುತ್ತಿತ್ತೋ ಆಗೆಲ್ಲ ಈ ಸಮುದಾಯಗಳು ವಿಚಲಿತಗೊಳ್ಳುತ್ತಿದ್ದವು. ಈ ಆರ್ಥಿಕ ಕಾರಣಕ್ಕಾಗಿಯೇ ಅಲೆಮಾರಿಗಳು ಭಾರತದ ಸಮಾಜದಲ್ಲಿ ರೂಪುಗೊಂಡರು. ಹೆಳವ ಸಮಾಜ ಇಂತಹ ಚಾರಿತ್ರಿಕ ಕಾಲಘಟ್ಟದಲ್ಲಿಯೇ ರೂಪುಗೊಂಡಿರಬೇಕು. ಜೊತೆಗೆ ಭೂಮಾಲಿಕ ಮತ್ತು ರಾಜಶಾಹಿ ವರ್ಗಗಳ ಸೇವೆಗೆಂದೇ ನಿಯುಕ್ತಗೊಂಡ ಕಾರಣಕ್ಕೆ ಹೆಳವರಂತಹ ಅನೇಕ ಅಲೆಮಾರಿ ಸಮುದಾಯಗಳ ಸಮಾಜದಲ್ಲೂ ಊಳಿಗಮಾನ್ಯ ಗುಣ ಸಹಜವಾಗಿಯೇ ಸಂಚಯಿತಗೊಂಡಿದೆ. ಇವು ಊಳಿಗಮಾನ್ಯ ಸಾಮಾಜಿಕ ಮೌಲ್ಯಗಳನ್ನೇ ಅನುಸರಿಸಿಕೊಂಡು ಬಂದವು. ಇದರಿಂದಾಗಿ ಭಾರತದ ಕೆಳಜಾತಿ ಸಮುದಾಯಗಳು ತಮ್ಮ ಸ್ಮೃತಿಕೋಶದ ಒಳಗೆ ಎಂತಹುದೇ ಸಮಾನತೆಯ ಮತ್ತು ಜನತಾಂತ್ರಿಕ ಆಶಯಗಳನ್ನು ಹೊಂದಿದ್ದರೂ ಲೌಕಿಕದ ಬದುಕಲ್ಲಿ ಅವು ಊಳಿಗಮಾನ್ಯ ಸಮಾಜದ ಮೌಲ್ಯಗಳನ್ನು ಅಳವಡಿಸಿಕೊಂಡಿರುತ್ತವೆ. ಸಂಕೇತದ ಮಟ್ಟದಲ್ಲಿ ಆಚರಣೆಯ ರೂಪದಲ್ಲಿ ಈ ಸಮುದಾಯಗಳು ಆದಿಮ ಚಹರೆಗಳನ್ನು ಪ್ರಕಟಿಸುವುದನ್ನು ಬಿಟ್ಟರೆ, ನಿತ್ಯದ, ಬದುಕಲ್ಲಿ ಸಮುದಾಯಗಳು ಆದಿಮ ಚಹರೆಗಳನ್ನು ಪ್ರಕಟಿಸುವುದನ್ನು ಬಿಟ್ಟರೆ, ನಿತ್ಯದ ಬದುಕಲ್ಲಿ ತಮ್ಮನ್ನು ಶೋಷಣೆ ಮಾಡಿದ ಭೂಮಾಲಿಕ ವ್ಯವಸ್ಥೆಯ ಆಶಯಗಳನ್ನೇ ಪ್ರಕಟಿಸುತ್ತವೆ. ಈ ತರಹದ ಉದಾಹರಣೆಗಳನ್ನು ನೀವು ಹೆಳವರಲ್ಲಿ ಇಂದಿಗೂ ಕಾಣಬಹುದು.

ಹೆಳವರೂ ಸಹ ಈ ದೇಶದ ಎಲ್ಲ ಕೆಳಜಾತಿಗಳು ಅನುಸಂಧಾನ ಮಾಡಿದ ವಿವಿಧ ಸಾಮಾಜಿಕಾರ್ಥಿಕ ಸ್ವರಗಳನ್ನು ಹಾದು ಬಂದಿದಾರೆ. ಹೆಳವರು ಈ ದೇಶದ ಸಮಾಜ, ವರ್ಗ ಸಮಾಜವಾಗಿ ರೂಪುಗೊಂಡ ನಂತರದ ಕಾಲಘಟ್ಟದಲ್ಲಿ ಅಸ್ತಿತ್ವಕ್ಕೆ ಬಂದವರೆಂದು ಊಹಿಸಬಹುದಾಗಿದೆ. ಇವರು ಸೃಷ್ಟಿ ಪುರಾಣಗಳನ್ನು ಗಮನಿಸಿದರೆ, ಸಮಾಜದ ಮೂಲ ಘಟಕವಾದ ಕುಟುಂಬವು ಸ್ಪಷ್ಟವಾಗಿ ಅಸ್ತಿತ್ವಕ್ಕೆ ಬಂದಿರುವುದನ್ನು ಮತ್ತು ಊಳಿಗಮಾನ್ಯ ಕಾಲಘಟ್ಟದ ಸಮಾಜದ ಎಲ್ಲ ಲಕ್ಷಣಗಳನ್ನು ಇಲ್ಲಿ ಕಾಣಬಹುದಾಗಿದೆ. ಅಲ್ಲದೆ ಕಲ್ಯಾಣದ ಜೊತೆಗಿನ ಇವರ ಸಂಬಂಧವು ಸ್ಪಷ್ಟವಾಗಿ ಇವರನ್ನು ಊಳಿಗಮಾನ್ಯ ಕಾಲದ ಸಮಾಜದ ಸೃಷ್ಟಿಯೆಂದು ನಂಬಬಹುದಾಗಿದೆ. ಏಕೆಂದರೆ ಹೆಳವರ ಕುರಿತ ನಿರ್ದಿಷ್ಟ ಕಾಲಘಟ್ಟದ ಶಾಸನಗಳಾಗಿಲಿ, ಮಹಾಕಾವ್ಯಗಳಲ್ಲಿನ ಉಲ್ಲೇಖಗಳಾಗಲಿ ನಮಗೆ ಸಿಕ್ಕಿಲ್ಲ. ಇನ್ನು ಜನ್ನ ಕವಿಯ ಅನಂತನಾಥ ಪುರಾಣದಲ್ಲಿನ ಉಲ್ಲೇಖಗಳಾಗಲಿ ನಮಗೆ ಸಿಕ್ಕಲ್ಲ ಇನ್ನು ಜನ್ನ ಕವಿಯ ಅನಂತನಾಥ ಪುರಾಣದಲ್ಲಿನ ಉಲ್ಲೇಖವನ್ನು ಪವಾರ್ ಅವರು ನೀಡುತ್ತಾರೆ.[5] ಜನ್ನ ೧೩ನೇ ಶತಮಾನದ ಕವಿ. ಸೋಮನಾಥನ ಪಂಡಿತರಾಧ್ಯ ಚರಿತೆಯಲ್ಲಿನ ಉಲ್ಲೇಖವನ್ನು ಎಚ್. ಎಲ್. ನಾಗೇಗೌಡರು ನೀಡುತ್ತಾರೆ.[6] ಈ ಪಂಡಿತರಾಧ್ಯ ಚರಿತೆಯೂ ಸಹ ೧೩ ನೇ ಶತಮಾನದ ಕೃತಿಯಾದ್ದರಿಂದ ಹೆಳವರ ಕುರಿತ ಪ್ರಾಚೀನ ದಾಖಲೆಗಳೆಂದರೆ ಅವರ ಸೃಷ್ಟಿ ಪುರಾಣಗಳೆ. ಈ ಸೃಷ್ಟಿ ಪರಾಣಗಳ ಪ್ರಕಾರ ಹೆಳವರು ಊಳಿಗಮಾನ್ಯ ಕಾಲಘಟ್ಟದಲ್ಲಿ ಭೂಮಾಲಿಕ ವ್ಯವಸ್ಥೆಯನ್ನು ಆರ್ಥಿಕವಾಗಿ ಅವಲಂಬಿಸಿದ ಸಮುದಾಯವನಾಗಿ ರೂಪುಗೊಂಡಿರುವುದು ಸ್ವಷ್ಟವಾಗುತ್ತದೆ.

ಈ ದೇಶದ ಸಮಾಜಗಳು ಅನೇಕ ರಾಜಕೀಯಾರ್ಥಿಕ ಮತ್ತು ಧಾರ್ಮಿಕ ಪ್ರಭಾವಗಳನ್ನು ಹಾದು ಬಂದು ಅನೇಕ ಬದಲಾವಣೆಗಳನ್ನು ಕಂಡಿವೆ. ಕೆಲವು ಸಮಾಜಗಳು ತಮ್ಮ ಚಹರೆಗಳನ್ನೇ ಕಳದುಕೊಂಡು ವಿಶ್ವಗ್ರಾಮದ ಸಮಗ್ರ ಸಮುದಾಯಗಳ ಮದ್ಯೆ ಸೇರಿ ಹೋಗಿವೆ. ಆದರೆ ಹೆಳವ ಸಮಾಜದಲ್ಲಿ ಬದಲಾವಣೆಗಳು ಸಂಭವಿಸಿದರೂ, ಪಾರಂಪರಿಕ ವೃತ್ತಿಯಲ್ಲಿ ಬದುಕುವ ಗುಂಪುಗಳು ಈ ಸಮುದಾಯದಲ್ಲಿ ಇನ್ನೂ ಇವೆ ಎಂಬುದೊಂದೇ ವಿಪರ್ಯಾಸ.

೨. ಸಾಮಾಜಿಕ ಸಂರಚನೆ

ಒಂದು ನಿರ್ದಿಷ್ಟ ಅಲೆಮಾರಿ ಸಮಾಜದ ಲಕ್ಷಣಗಳೆಲ್ಲವೂ ಹೆಳವರ ಸಮಾಜದಲ್ಲಿ ಅಂತರ್ಗತವಾಗಿವೆ. ಹೆಳವರು ಶುದ್ಧಾಂಗವಾಗಿ ಅಲೆಮಾರಿಗಳಾಗಿ ಉಳಿದುಕೊಂಡಿಲ್ಲ. ಈ ದೇಶವು ಹಾದು ಬಂದ ಅನೇಕ ರಾಜಕೀಯಾರ್ಥಿಕ ಮತ್ತು ದಾರ್ಮಿಕ ಪ್ರಭಾವಗಳನ್ನು ಎಲ್ಲ ಸಮುದಾಯಗಳಂತೆ ಈ ಸಮುದಾಯವೂ ಹಾದು ಬಂದು ತನ್ನಲ್ಲಿ ಅನೇಕ ಬದಲಾವಣೆಗಳನ್ನು ತಂದುಕೊಂಡಿದೆ. ನಿಶ್ಚಿತ ಆರ್ಥಿಕ ಮೂಲಗಳಿಲ್ಲದಿದ್ದರೂ ಚಾರಿತ್ರಿಕವಾಗಿ ಊಳಿಗಮಾನ್ಯ ವ್ಯವಸ್ಥೆಯನ್ನೇ ಅವಲಂಬಿಸಿ ಬದುಕಿದ ಕಾರಣಕ್ಕಾಗಿ ಈ ಸಮಾಜದಲ್ಲೂ ಊಳಿಗಮಾನ್ಯ ಮೌಲ್ಯಗಳು ಸಹಜವಾಗಿಯೇ ಮೇಳೈಸಿವೆ. ಕಾರಣ ಇದು ಪುರುಷ ಪ್ರಧಾನ ಸಮಾಜ. ಪುರುಷ ಕುಟುಂಬದ ಒಟ್ಟಾರೆ ನಿರ್ಣಯಗಳ ಕೇಂದ್ರಬಿಂದು. ಜಾತಿಯ ನಿಯಮಗಳೂ ಕಟ್ಟುನಿಟ್ಟಾಗಿವೆ. ಇಂದಿಗೂ ಕುಲಪಂಚಾಯ್ತಿಯು ನ್ಯಾಯ ನಿರ್ಣಯಗಳ ಸಂದರ್ಭದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಸ್ವಗೋತ್ರ ವಿವಾಹ ಮತ್ತು ವಿಧಿನಿಷೇಧಗಳು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿರುವುದರಿಂದಾಗಿ ಹೆಳವ ಸಮಾಜವು ತನ್ನ ಚಹರೆಗಳನ್ನು ಇನ್ನೂ ಉಳಿಸಿಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ.

ಭಾರತದ ಎಲ್ಲ ಅಲೆಮಾರಿ ಸಮುದಾಯಗಳ ಸಾಮಾಜಿಕ ವ್ಯವಸ್ಥೆಯಂತೆಯೇ ಹೆಳವರದೂ ಸಹ ಒಂದು ವಿಘಟಿತ ಸಮಾಜವಾಗಿದೆ. ಈ ಬಗೆಯ ವಿಘಟನೆಗೆ ಸಮುದಾಯಗಳ ಅಲೆಮಾರಿತನ ಮತ್ತು ಅಧಿಕಾರ ರಹಿತ ಸ್ಥಿತಿಗಳು ಕಾರಣವಾಗುತ್ತವೆ. ಯಾವ ಸಮುದಾಯಗಳಿಗೆ ಆರ್ಥಿಕ ರಂಗದಲ್ಲಿ ಪಾರಂಪರಿಕವಾಗಿ ಹಕ್ಕುಳಗ ಪ್ರಾಪ್ತವಾಗಿರುವುದಿಲ್ಲವೋ, ಯಾವ ಸಮುದಾಯಗಳು ಈ ದೇಶದ ಹೀನಾಯ ಶೋಷಣೆಗೆ ಒಳಗಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪರಾವಲಂಬಿಗಳಾಗಿ ಬದುಕಿ ಬಂದಿರುವವೋ ಆ ಎಲ್ಲ ಸಮಾಜಗಳು ಒಂದು ಅರ್ಥದಲ್ಲಿ ವಿಘಟಿತಗೊಂಡಿವೆ. ಒಂದು ರೀತಿಯಲ್ಲಿ ಭಗ್ನಗೊಂಡಿವೆ. ಈ ಭಗ್ನತೆಯು ಸಮುದಾಯದ ಚಹರೆಗಳನ್ನು ನಾಶ ಮಾಡುವಂತಹುದ್ದಲ್ಲ. ಈ ವಿಘಟನೆಯಲ್ಲಿಯೂ ಒಂದು ಬಗೆಯ ಸಾಹಿತ್ಯವಿದೆ. ಆದರೆ ಸಾಮಾಜಿಕ ಅಧಿಕಾರಗಳಿಲ್ಲದ ಸಮುದಾಯಗಳು ಸಹಜವಾಗಿಯೇ ಭಗ್ನಗೊಂಡು ವಿಘಟಿತವಾಗುತ್ತವೆ. ಇದಕ್ಕೆ ಹೆಳವರಲ್ಲಿಯ ಅನೇಕ ಉಪಪಂಗಡಗಳೇ ಸಾಕ್ಷಿ. ಜೊತೆಗೆ ಈ ವತ್ತಿನ ಉಪಪಂಗಡಗಳಲ್ಲಿ ಬದುಕುತ್ತಿರುವ ಸಮುದಾಯದ ಜನ ವರ್ತಮಾನದ ಕುರಿತು ಚಿಂತಿಸುತ್ತಿರುವುದನ್ನು ಗಮನಿಸಿದರೆ, ಒಂದೇ ಸಮುದಾಯದ ಒಳಿರುವ ಅನೇಕ ಅಭಿಪ್ರಾಯ ಬೇಧಗಳು ಮತ್ತು ಸಾಮಾಜದ ಚಹರೆಗಳ ಕುರಿತು ಅವರಿಗಿರುವ ಗ್ರಹಿಕೆಗಳು ಸ್ಪಷ್ಟವಾಗುತ್ತವೆ.

ಭಾರತದಲ್ಲಿ ಅಲೆಮಾರಿಗಳನ್ನು ವಿಶೇಷವಾಗಿ ಅಧ್ಯಯನ ಮಾಡಿರುವ ಪಿ. ಕೆ. ಮಿಶ್ರ ಅಲೆಮಾರಿಗಳನ್ನು ಪಾರಂಪರಿಕ ಭಾರತದ ಪ್ರತಿನಿಧಿಗಳೆಂದು ಕರೆಯುತ್ತಾರೆ.[7] ಹಿಂದೂ ಸಮಾಜದ ಪಳಯುಳಿಕೆಗಳನ್ನು ರಕ್ಷಿಸಿಕೊಂಡು ಬರುತ್ತಿರುವವರು ಎಂದು ಅಲೆಮಾರಿಗಳನ್ನು ಪರಿಗಣಿಸಲಾಗುತ್ತದೆ. ಆದರೆ ಯಾವ ಭಾರತದ, ಯವ ಪರಂಪರೆಯ ಪಳಯುಳಿಕೆಗಳನ್ನು ಅಲೆಮಾರಿಗಳು ಉಳಿಸಿಕೊಂಡು ಬರುತ್ತಿದ್ದಾರೆ? ಯಾಕಾಗಿ ಇವರೇ ಭಾರತದ ಪರಂಪರೆಯನ್ನು ರಕ್ಷಿಸಬೇಕು? ಎಂಬ ಪ್ರಶ್ನೆಗಳು ಈ ಚರ್ಚೆಗಳಲ್ಲಿ ಗೈರು ಹಾಜರಾಗುತ್ತವೆ.

ಮೊದಲೇ ಹೇಳಿದಂತೆ ಅಲೆಮಾರಿಗಳದು ಒಂದು ಬಗೆಯ ವಿಘಟಿತ ಸಮಾಜ. ಒಂದು ಕಾಲಘಟ್ಟದಲ್ಲಿ ಹೆಳವ ಸಮುದಾಯವು ಏಕ ಸ್ವರೂಪಿಯಾಗದ್ದಿರಬಹುದು. ಆದರೆ ಕಾಲಾನಂತರದಲ್ಲಿ ತಮ್ಮ ಅಲೆಮಾರಿತನದಿಂದ ಮತ್ತು ಭಿನ್ನ ಸಾಮಾಜಿಕಾರ್ಥಿಕ ಪ್ರಭಾವಗಳಿಂದ ಮತ್ತು ಹಲವು ಸಂದರ್ಭಗಳ ಅನಿವಾರ್ಯತೆಯ ಕಾರಣಗಳಿಗಾಗಿ ಹೆಳವರಲ್ಲಿ ಅನೇಕ ಪಂಗಡಗಳು ರೂಪಗೊಂಡಿರುವುದನ್ನು ಕಾಣಬಹುದಾಗಿದೆ. ಈ ಬಗೆಯ ಪಂಗಡಗಳು ಬಹುತೇಕ ಎಲ್ಲ ಅಲೆಮಾರಿಗಳಲ್ಲಿ ಇದೇ ಕಾರಣಕ್ಕಾಗಿ ರೂಪುಗೊಂಡಿವೆ.

ಹೆಳವರ ಉಪ ಪಂಗಡಗಳು

ಅಲೆಮಾರಿಗಳು ಬಹಳ ಸುಲಭವಾಗಿ ತಮ್ಮದಲ್ಲದ ಅಪರಿಚಿತ ಸಾಮಾಜಿಕ ಸಂದರ್ಭದ ಪ್ರಭಾವಗಳಿಗೆ ಬಹಳ ಬೇಗ ಪಕ್ಕಾಗುತ್ತಾರೆ. ಇದೊಂದು ಅನಿವಾರ್ಯದ ಸಾಮಾಜಿಕ ಪ್ರಕ್ರಿಯೆ. ಜೊತೆಗೆ ನಿಶ್ಚಿತ ಆರ್ಥಿಕ ಮೂಲಗಳಿಲ್ಲದ ಕಾರಣಕ್ಕೆ ಅಲೆಮಾರಿಗಳು ಅವಲಂಬಿಸುವ ಭಿನ್ನ ಆರ್ಥಿಕ ಚುಟುವಟಿಕೆಗಳು ಅವರ ಸಾಮಾಜಿಕ ಸ್ಥಾನಮಾನವನ್ನು ಬದಲಾಯಿಸುತ್ತಲೇ ಇರುತ್ತವೆ. ಈ ಕಾರಣದಿಂದಾಗಿ, ಅಲೆಮಾರಿಗಳಲ್ಲಿ ಸಹಜವಾಗಿಯೇ ಅನೇಕ ಉಪಪಂಗಡಗಳು ಸೃಷ್ಟಿಯಾಗುವುದು ಸಹಜ. ಹೆಳವರ ಸಮಾಜ ಒಂದು ಕಾಲಕ್ಕೆ ಒಂದೇ ಆರ್ಥಿಕ ಚುಟುವಟಿಕೆಯನ್ನು ಹೊಂದಿದ್ದ ಸಮಾಜವಾಗಿತ್ತು ಎನ್ನುವುದಕ್ಕೆ ಅವರ ಸೃಷ್ಟಿ ಪುರಾಣಗಳಲ್ಲಿಯೇ ಪುರಾವೆಗಳು ಸಿಕ್ಕುತ್ತವೆ. ವಂಶಾವಳಿಯನ್ನು ಹೇಳಿ ಭಿಕ್ಷೆ ಬೇಡುತ್ತಾ ಬದುಕುವುದು ಹೆಳವ ಸಮಾಜದ ಕುಲ ವೃತ್ತಿಯಾಗಿತ್ತು. ಪ್ರಾಯಶಃ ಆ ಕಾಲಘಟ್ಟದಲ್ಲಿ ಹೆಳವರ ಸಮಾಜದಲ್ಲಿ ಈಗಿರುವಂತೆ ಉಪ ಪಂಗಡಗಳು ಇದ್ದಿರಲಾರವು. ಆದರೆ ಈ ದೇಶದಲ್ಲಿ ಕಾಲದಿಂದ ಕಾಲಕ್ಕೆ ಬದಲಾದ ಆರ್ಥಿಕ ಚಟುವಟಿಕೆಗಳು ಆಳಿಸಿಕೊಳ್ಳಲ್ಪಡುವ ಸಮಾಜಗಳ ರೂಪಗಳನ್ನು ಬದಲಿಸುತ್ತಲೇ ಬಂದವು. ಏಕೆಂದರೆ ಯಾವ ಸಮುದಾಯ, ಯಾವ ಆರ್ಥಿಕತೆಯನ್ನು ಅವಲಂಬಿಸಿದೆ ಎನ್ನುವುದರ ಮೇಲೆ ಆ ಸಮಾಜದ ಲೌಕಿಕದ ರೂಪುರೇಷೆಗಳು ನಿರ್ಧಾರವಾಗುತ್ತಿದ್ದವು. ಅಲೆಮಾರಿಗಳು ಸಹಜವಾಗಿಯೇ ತಮಗೆ ಅನುಕೂಲವಾಗುವ ಸಾಂದರ್ಭಿಕ ಆರ್ಥಿಕ ಚಟುವಟಿಕೆಗಳನ್ನು ಅವಲಂಬಿಸುವುದು ಅನಿವಾರ್ಯವೂ ಆಗಿತ್ತು. ಈ ಕಾರಣದಿಂದ ಹೆಳವ ಸಮುದಾಯದಲ್ಲಿ ಭಿನ್ನ ವೃತ್ತಿಗಳಿಗನುತಗುಣವಾಗಿ ಅನೇಕ ಉಪಪಂಗಡಗಳಿನೆ. ಆ ಪಂಗಡಗಳ ಕುರಿತು ಈ ಭಾಗದಲ್ಲಿ ಚರ್ಚಿಸುವ ಅಗತ್ಯವಿದೆ.

ಎಚ್ ವಿ ನಂಜುಂಡಯ್ಯ ಮತ್ತು ಅನಂತ ಕೃಷ್ಣ ಅಯ್ಯರ್ ಹೆಳವರಲ್ಲಿ ಮುಖ್ಯವಾಗಿ ಎರಡು ಪಂಗಡಗಳನ್ನು ಗುರುತಿಸುತ್ತಾರೆ.

೧. ಗಂಟೆ ಹೆಳವರು

೨. ಬಸವನ ಹೆಳವರು ಅಥವಾ ಎತ್ತಿನ ಹೆಳವರು[8]

ನಿಜಾಮನ ಆಳಿಕೆಯ ಪ್ರದೇಶದ ಸಮುದಾಯಗಳ ಅಧ್ಯಯನ ಮಾಡಿದ ಸೈಯದ್ ಸಿರಾಜ್ ಉಲ್ ಹಸನ್ ರವರು ಹೆಳವರ ಪಂಗಡಗಳನ್ನು ಹೀಗೆ ಪಟ್ಟಿ ಮಾಡುತ್ತಾರೆ.

೧. ಗೊಲ್ಲ

೨. ತೆಲಗ ಅಥವಾ ಭಿಕ್ಷಾ

೩. ಗಂಟಾ

೪. ತುರುಕಾ

೫. ಸೊಗರು

೬. ಮಂಡ[9]

ಆರ್ ಗುಪ್ತಾ ಅವರು ಮೂರು ಉಪಪಂಗಡಗಳನ್ನು ಗುರುತಿಸುತ್ತಾರೆ.

೧. ಶಾಂತಿ ಹೆಳವ

೨. ಪಂಗಿ ಹೆಳವ

೩. ಎತ್ತಿನ ಹೆಳವ[10]

ಕೆ. ಎಸ್. ಸಿಂಗ್ ರವರು ಸಹ ಹೆಳವರ ಮೂರು ಪಂಗಡಗಳನ್ನು ಗುರುತಿಸುತ್ತಾರೆ.

೧. ಗಂಟಿ ಹೆಳವ

೨. ಪಂಗಿ ಹೆಳವ

೩. ಎತ್ತಿನ ಹೆಳವ[11]

ಬಿ. ಎಂ. ತೆಳಗಡಿಯವರು

೧. ಗಂಟೆ ಹೆಳವ

೨. ಎತ್ತಿನ ಹೆಳವ

೩. ಚಾಪೆ ಹೆಳವ ಎಂದು ಮೂರು ಪಂಗಡಗಳನ್ನು ಗುರುತಿಸುತ್ತಾರೆ.[12]

ನಿಂಗಣ್ಣ ಸಣ್ಣಕ್ಕಿಯರವರು ಹೆಳವರ ಉಪಪಂಗಡಗಳನ್ನು ಹೀಗೆ ಗುರುತಿಸುತ್ತಾರೆ.

೧. ಎತ್ತಿನ ಹೆಳವ ಅಥವಾ ವಸನ ಹೆಳವ (ಉತ್ತರ ಕರ್ನಾಟಕ)

೨. ಗಂಟೆ ಹೆಳವ (ದಕ್ಷಿಣ ಕರ್ನಾಟಕ).[13]

ಜೀ. ಶಂ. ಪರಮಶಿವಯ್ಯನವರು ಎರಡು ಉಪಪಂಗಡಗಳನ್ನು ಗುರುತಿಸುತ್ತಾರೆ.

೧. ಗಂಟೆ ಹೆಳವರು

೨. ಚಾಪೆ ಹೆಳವರು.[14]

ಎಚ್. ಎಲ್. ನಾಗೇಗೌಡರು ಈ ರೀತಿ ದಾಖಲಿಸುತ್ತಾರೆ.

೧. ಎತ್ತಿನ ಹೆಳವರು ಮತ್ತು ಬಸವನ ಹೆಳವರು (ಉತ್ತರ ಕರ್ನಾಟಕ)

೨. ಗಂಟೆ ಹೆಳವರು (ದಕ್ಷಿಣ ಕರ್ನಾಟಕ).[15]

ಶ್ರೀ ಹರಿಲಾಲ್ ಪವಾರ್ ಅವರು ವಿಸ್ತೃತ ಕ್ಷೇತ್ರಕಾರ್ಯದ ಮೂಲಕ ಹೆಳವರಲ್ಲಿನ ಅನೇಕ ಉಪಪಂಗಡಗಳನ್ನು ಹೀಗೆ ಗುರುತಿಸುತ್ತಾರೆ.

ಪ್ರಮುಖ ಪಂಗಡಗಳು

೧. ಎತ್ತಿನ ಹೆಳವರು (ಉತ್ತರ ಕರ್ನಾಟಕ)

೨. ಗಂಟೆ ಹೆಳವರು (ದ. ಕರ್ನಾಟಕ)

೩. ಚಾಪೆ ಹೆಳವರು (ಬೀದರ್, ಗುಲ್ಬರ್ಗಾ, ರಾಯಚೂರು, ಬಳ್ಳಾರಿ, ಶಿವಮೊಗ್ಗ)

ಉಪ ಪಂಗಡಗಳು

೧. ಹಂದಿ ಹೆಳವರು – ಬೀದರ್, ಗುಲ್ಬರ್ಗಾ, ಬಳ್ಳಾರಿ

೨. ದೂದಿ ಹೆಳವರು – ಬೀದರ್, ಗುಲ್ಬರ್ಗಾ, ಬಸವಕಲ್ಯಾಣ

೩. ಎತ್ತಿನೆಳವರು – ಬಳ್ಳಾರಿ, ರಾಯಚೂರು, ಗುಂತಕಲ್, ಅನಂತಪುರ, ಧಡೇಕರ್

೪. ಕೂಕಣಿ ಹೆಳವರು – ರಾಯಚೂರು, ಬಳ್ಳಾರಿ, ಕೊಟ್ಟೂರು, ಕೂಡ್ಲೀಗಿ

೫. ಮಂದಲ ಹೆಳವರು – ಮೈಸೂರು, ಬೆಂಗಳೂರು, ಕೋಲಾರ ಬಳ್ಳಾರಿ

೬. ಕಂಬಿ ಹೆಳವರು –

೭. ಅಡವಿ ಹೆಳವರು – ಗುಲ್ಬರ್ಗಾ

೮. ಊರ ಹೆಳವರು –

೯. ಸಾದು ಹೆಳವರು – ಚಿತ್ರದುರ್ಗ

೧೦. ಜಾತಿ ಹೆಳವರು –

೧೧. ತಂಬೂರಿ ಹೆಳವರು[16]

ಪ್ರಮುವಾಗಿ ಈ ಉಲ್ಲೇಖಗಳಿಂದ ತಿಳಿದು ಬರುವ ಸಂಗತಿ ಎಂದರೆ ಎತ್ತಿನ ಹೆಳವ, ಗಂಟೆ ಹೆಳವ ಮತ್ತು ಚಾಪೆ ಹೆಳವರನ್ನು ಬಹುತೇಕ ಎಲ್ಲ ವಿದ್ವಾಂಸರು ಗುರುತಿಸುವುದು. ಪ್ರಾಯಶಃ ಊಳಿಗಮಾನ್ಯ ಕಾಲಘಟ್ಟದ ನಂತರ ಹೆಳವರ ಸಮುದಾಯದ ವಲಸೆಗಳಿಂದ ಹಲವು ಉಪಪಂಗಡಗಳು ಹುಟ್ಟಿಕೊಂಡಿರಬಹುದು. ಆದರೆ ಹೆಳವರು ಮೂಲತಃ ಒಂದೇ ಆಗಿದ್ದರು. ಕಾಲಕ್ರಮೇಣ ಇವರು ಮುಖ್ಯವಾಗಿ ಮೂರು ಪಂಗಡಗಳಾಗಿ ಹರಿದು ಹಂಚಿ ಹೋದರು. ಇದಕ್ಕೆ ಮುಖ್ಯ ಕಾರಣ ಬದುಕಿನ ಅನಿವಾರ್ಯತೆ. ಅಂದರೆ ಆರ್ಥಿಕ ಕಾರಣಗಳು. ಸಾಮಾಜಿಕ ಸ್ಥಿತ್ಯಂತರಗಳಿಗೆ ಆರ್ಥಿಕ ಕಾರಣಗಳು ಬಹು ಮುಖ್ಯವಾಗುತ್ತವೆ. ಮತ್ತೆ ಹೆಳವರ ಈ ಮೂರು ಪಂಗಡಗಳಲ್ಲಿ ಅನೇಕ ಉಪ ಪಂಗಡಗಳಾಗಿ ಒಡೆದು ಹೋಗಿದ್ದರೆ. ಎಷ್ಟೆಲ್ಲಾ ಪಂಗಡಗಳಾಗಿದ್ದರೂ ಇವರಲ್ಲಿ (ಎತ್ತಿನ ಹೆಳವರು ಮತ್ತು ಗಂಟೆ ಹೆಳವರು) ಯಾವುದೇ ರೀತಿಯ ಮಹತ್ವದ್ದೆನ್ನಿಸುವ ವೈರುಧ್ಯಗಳು ಕಾಣಿಸುವುದಿಲ್ಲ. ಕುಲಕೊಂಡಾಡಲು ಹೋಗುವಾಗ ಎತ್ತಿನ (ನಂದಿ) ಹೆಳವರು ಎತ್ತಿನ ಮೇಲೆ ಹೋಗುತ್ತಾರೆ. ತಮ್ಮ ಒಕ್ಕಲು ಮನೆಗಳಿಗೆ ಗಂಟೆ ಹೆಳವರು ಗಂಟೆಯನ್ನು ಆಯಾ ಒಕ್ಕಲುಮನೆಯವರೇ ಕೊಡಿಸಿರುತ್ತಾರೆ. ಜೊತೆಗೆ ಬೇರೆ ಬೇರೆ ಒಕ್ಕಲುಗಳು ಕೊಡಿಸಿರುವ ಗಂಟೆಗಳನ್ನು ಅದಲು – ಬದಲು ಮಾಡುವುದಿಲ್ಲ. ಉದಾ. ಗೊಲ್ಲರ ಒಕ್ಕಲಿಗೆ ಬಳಸುವ ಗಂಟೆಯನ್ನು ಗಾಣಿಗರ ಒಕ್ಕಲಿಗೆ ಬಳಸುವುದಿಲ್ಲ. ಉದಾ. ಗೊಲ್ಲರ ಒಕ್ಕಲಿಗೆ ಬಳಸುವ ಗಂಟೆಯನ್ನು ಗಾಣಿಗರ ಒಕ್ಕಲಿಗೆ ಬಳಸುವುದಿಲ್ಲ. ಈ ರೀತಿ ಬಳಸುವುದು ಅಪರಾಧವೆಂದೇ ಇವರು ನಂಬುತ್ತಾರೆ. ಮತ್ತು ಬೇರೆ ಒಕ್ಕಲಿಗೆ ಬಳಸುವುದರಿಂದ ಆ ಒಕ್ಕಲಿನವರು ಕುಲ ಕೊಂಡಾಡಲು ಬಿಡುವುದಿಲ್ಲ ಎನ್ನುತ್ತಾರೆ. ಈ ವೈರುಧ್ಯವೊಂದನ್ನು ಹೊರತು ಪಡಿಸಿದರೆ ಗಂಟೆ ಹೆಳವರು ಮತ್ತು ಎತ್ತಿನ ಹೆಳವರಲ್ಲಿ ಯವುದೇ ರೀತಿಯ ವೈರುಧ್ಯಗಳಿಲ್ಲ. ಎರಡೂ ಪಂಗಡಗಳ ಜೀವನ ವಿಧಾನದಲ್ಲಿ ಸಾಮ್ಯತೆಯೇ ಇದೆ.

ಆದರೆ ಚಾಪೆ ಹೆಳವರು, ಗಂಟೆ ಮತ್ತು ಎತ್ತಿನ ಹೆಳವರಲ್ಲಿ ಅನೇಕ ಸಾಮಾಜಿಕ ವೈರುಧ್ಯಗಳಿರುವುದನ್ನು ಕಾಣಬಹುದು. ಚಾಪೆ ಹೆಳವರು ಗಂಟೆ ಮತ್ತು ಎತ್ತಿನ ಹೆಳವರಂತೆ ಒಕ್ಕಲು ಮನೆಗಳಿಗೆ ಕುಲ ಕೊಂಡಾಡಲು ಹೋಗುವುದಿಲ್ಲ. ಗಂಟೆ ಮತ್ತು ಎತ್ತಿನ ಹೆಳವರಲ್ಲಿ (ಅನೇಕ ಕಡೆ) ಚಾಪೆ ಹೆಳವರು ಹೆಳವರೇ ಅಲ್ಲ ಅನ್ನುವಂತಹ ಅಭಿಪ್ರಾಯವಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಚಾಪೆ ಹೆಳವರು ಅವರಂತೆ ಕುಲ ಕೊಂಡಾಡಲು ಹೋಗದಿರುವುದು. ಇದರ ಜೋತೆಗೆ ಇವರು ಹಂದಿಗಳನ್ನು ಸಾಕುವುದರಿಂದ ಅವರಿಗೆ ಈ ರೀತಿ ಅನಿಸಿರಬೇಕು. ಚಾಪೆ ಹೆಳವರಂತೆಯೇ ಇನ್ನೂ ಇತರೆಪಪಂಗಡಗಳಿವೆ. ಅವರೂ ಕೂಡ ಇವರಿಗಿಂತ ಭಿನ್ನ. ಉದಾ. ಕೂಕಣಿ ಹೆಳವರು, ದೂದಿ ಹೆಳವರು, ತಿತ್ತಿ ಹೆಳವರು, ಮಂದಲ ಹೆಳವರು, ಕಂಬಿ ಹೆಳವರು, ಇತ್ಯಾದಿ. ಎತ್ತಿನ ಹೆಳವರು ಮುಖ್ಯವಾಗಿ ಉತ್ತರ ಕರ್ನಾಟಕದಲ್ಲಿ ಕಂಡು ಬರುತ್ತಾರೆ. ಗಂಟೆ ಹೆಳವರು ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡು ಬರುತ್ತದೆ. ಆದರೆ ಚಾಪೆ ಹೆಳವರು ಬೀದರ್, ಗುಲ್ಬರ್ಗ, ಬಳ್ಳಾರಿ, ರಾಯಚೂರು, ಶಿವಮೊಗ್ಗ ಹೀಗೆ ಕರ್ನಾಟಕದ ಎಲ್ಲಾ ಕಡೆ ಕಂಡು ಬರುತ್ತಾರೆ.
ಸಾಜಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಯಾವುದೇ ರೀತಿಯ ಕೊಡುಕೊಳೆಗಳಿದ್ದರೆ ಅದು ಗಂಟೆ ಹೆಳವರು ಮತ್ತು ಎತ್ತಿನ ಹೆಳವರ ಮಧ್ಯೆ ಮಾತ್ರವೇ. ಇದಕ್ಕೆ ಮುಖ್ಯ ಕಾರಣ ಇವರ ವೃತ್ತಿಗಳೇ ಎನ್ನಬೇಕು. ಚಾಪೆ ಹೆಳವರ ವೃತ್ತಿ, ಗಂಟೆ ಮತ್ತು ಎತ್ತಿನ ಹೆಳವರಿಗೆ ಸರಿ ಬರುವುದಿಲ್ಲ. ಚಾಪೆ ಹೆಳವರನ್ನು ಇವರು ಕೀಳಾಗಿಯೇ ಕಾಣುತ್ತಾರೆ. ಎತ್ತಿನ ಮತ್ತು ಗಂಟೆ ಹೆಳವರಲ್ಲಿ ಮಾತ್ರ ಕೊಡುಕೊಳ್ಳುವ ಸಂಬಂಧಗಳು ನಡೆಯುತ್ತವೆ. ಇವರಲ್ಲಿ ಪರಸ್ಪರ ಮದುವೆಗಳು ಸಾಧ್ಯ. ಆದರೆ ಒಂದೇ ಬೆಡಗಿನವರಲ್ಲಿ (ಉಪಪಂಗಡ) ಈ ತರಹದ ಮದುವೆಗಳು ನಡೆಯುವುದಿಲ್ಲ. ಅವರು ಒಂದೇ ಬಡೆಗಿನವರು ಸಹೋದರರಾಗುತ್ತಾರೆ ಎಂದು ನಂಬುತ್ತಾರೆ. ಚಾಪೆ ಹೆಳವರು ಮತ್ತು ಎತ್ತಿನ, ಹಂಟೆ ಹೆಳವರಲ್ಲಿ ಮದುವೆ ಸಂಬಂಧಗಳು ಜರುಗುವುದಿಲ್ಲ. ಹಾಗೇಯೇ ಹಬ್ಬ ಹರಿದಿನಗಳಲ್ಲಿಯೂ ಇವರ ನಡುವೆ ಯಾವುದೇ ರೀತಿಯ ಕೊಡುಕೊಳ್ಳುವಿಕೆಗಳು ನಡೆಯುವುದಿಲ್ಲ. ಗಂಟೆ, ಎತ್ತಿನ ಹೆಳವರು ಮುಖ್ಯವಾಗಿ ಯುಗಾದಿ, ದೀಪಾವಳಿಯಂತಹ ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ಚಾಪೆ ಹೆಳವರು ಇಂತಹದ್ದೇ ಎಂಧು ಯಾವ ಹಬ್ಬಕ್ಕೂ ಹೆಚ್ಚಿನ ಒತ್ತು ಕೊಡುವುದಿಲ್ಲ. ಸಾಮಾನ್ಯವಾಗಿ ಎಲ್ಲ ಹಬ್ಬಗಳನ್ನೂ ಆಚರಿಸುತ್ತಾರೆ. ಇವರಿಗೆ ಯಾವುದೇ ರೀತಿಯ ಪ್ರತ್ಯೇಕ ದೇವಾಲಯಗಳಿಲ್ಲ. ತಮ್ಮ ಹಟ್ಟಿಗಳಲ್ಲಿಯೇ ಚಿಕ್ಕ ಪುಟ್ಟ ಕಟ್ಟೆಗಳನ್ನು ಕಟ್ಟಿಕೊಂಡು ಕಲ್ಲನ್ನಿಟ್ಟು ಅಥವಾ ಬೇವಿನ ಮರಕ್ಕೆ ಬಟ್ಟೆಗಳನ್ನು ಸುತ್ತಿ ಪೂಜಿಸುತ್ತಾರೆ. ಆದರೆ ಎತ್ತಿನ, ಗಂಟೆ ಹೆಳವರು ಮಾತ್ರ ಅಲ್ಲಲ್ಲಿ ತಮ್ಮ ಮೂಲ ಪುರುಷ ‘ಹೆಳವಯ್ಯ’ನ ಗುಡಿಗಳನ್ನು ಕಟ್ಟಿಸಿಕೊಂಡು ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಅಲ್ಲದೆ ವೃತ್ತಾಕಾರದ ಒಂದು ಗುಡಿಸಲನ್ನು ಕಟ್ಟಿಕೊಂಡು ಅದರಲ್ಲಿ ತಮಗಿಷ್ಟ ಬಂದ ದೇವರ ಫೋಟೋಗಳನ್ನಿಟ್ಟು ಪೂಜಿಸುತ್ತಾರೆ. ಈ ಗುಡಿಸಲಿನ ರಚನೆ ವಿಶಿಷ್ಟ. ಇದರ ಬಾಗಿಲು ಪೂರ್ವಕ್ಕೇ ಇರುತ್ತದೆ. ಇದರ ಎತ್ತರ ಮೂರರಿಂದ ನಾಲ್ಕು ಅಡಿ ಮಾತ್ರ ಇದಕ್ಕೆ ಕಾರಣದೇವರ ಎದುರು ಬಾಗಿ ಹೋಗಬೇಕೆನ್ನುವುದು. ಹೆಚ್ಚಾಗಿ ಹೆಳವರು ಹಟ್ಟಿಗಳಲ್ಲಿಯೇ ಗುಂಪು ಗುಂಪಾಗಿ ವಾಸಿಸುತ್ತಾರೆ.

 

[1] ಭಗವತ್ಶರಣರಉಪಾಧ್ಯಾಯ, ಭಾರತೀಯಸಮಾಜದಐತಿಹಾಸಿಕವಿಶ್ಲೇಷಣೆ, ಪು೧೫೩, ೧೯೫೦

[2] ಡಾ. ಅಂಬೇಡ್ಕರ್, ಡಾ.ಬಾಬಾಸಾಹೇಬ್ಅಂಬೇಡ್ಕರ್ಬರಹಗಳುಮತ್ತುಭಾಷಣಗಳು. ಸಂ. ೧. ಪು. ೨೪, ೧೯೯೦

[3] Ramendranath Nandi, State Formation Agrarian Growth And Social Change In ‌Feudal South India Ad 600 – 1200, P 187, 2000

[4] Saki, Making History, Karnataka’s People And Their Past, Vol – 1, P 175, 1998

[5] ಹರಿಲಾಲ್ಪವಾರ್, ಹೆಳವರಸಂಸ್ಕೃತಿ, ಪು೧೦, ೧೯೯೩

[6] ನಾಗೇಗೌಡಎಚ್ಎಲ್, ಹೆಳವರುಮತ್ತುಅವರಕಾವ್ಯಗಳು, ಪುxii, ೧೯೮೨

[7] Mishra Pk, The Study Of Nomads, P84, 1970

[8] The Mysore Tribes And Castes, H.V Nanjundiah, Ananth Krishnna Lyer, p 310,1922

[9] The Castes And Tribes Of The H E H The Nizames Dominion, Syed Siraj Ui Hasan, p 569, 1950

[10] Guptha r, People of India, Karnataka, P623, 2003,

[11] Singh K S, Indias Communities, P 1268, 1998

[12] ತೆಳಗಡಿಬಿಎಂ, ಹೆಳವರು, ಪು, ೧೩೧, ೧೯೮೦

[13] ನಿಂಗಣ್ಣಸಣ್ಣಕ್ಕಿ, ಹೆಳವರು, ಪು೨೦, ೧೯೮೦

[14] ಪರಮಶಿವಯ್ಯಜೀಶಂ, ಹೆಳವರು, ಪು೨೦, ೧೯೮೦

[15] ನಾಗೇಗೌಡಎಚ್ಎಲ್, ಹೆಳವರುಮತ್ತುಅವರಕಾವ್ಯಗಳು, ಪುxxxiv, ೧೯೮೨

[16] ಹರಿಲಾಲ್ಪವಾರ್, ಹೆಳವರಸಂಸ್ಕೃತಿ, ಪು೧೬, ೧೭, ೧೮, ೧೯, ೨೦, ೧೯೯೩