ಪೀಠಿಕೆ

ಹಿಂದಿನ ಅಧ್ಯಾಯಗಳಲ್ಲಿ ಚರ್ಚಿಸಿದಂತೆ ಇಂಡಿಯಾದ ಜಾತಿ ಸಮುದಾಯವೆಂದರೆ ಅದೊಂದು ಸ್ವತಂತ್ರ್ಯ ಉತ್ಪಾದನ ಘಟಕ, ಪ್ರತಿಯೊಂದು ಜಾತಿ ಒಂದು ಸ್ವಯಂಪೂರ್ಣ ಉತ್ಪಾದನಾ ಘಟಕ, ಜಾತಿಯೊಂದು ತನ್ನನ್ನು ಇನ್ನೊಂದು ಜಾತಿಯಿಂದ ಬೇರ್ಪಡಿಸಿಕೊಳ್ಳುವುದು ತಾನು ಅನುಸರಿಸುವ ಪಾರಂಪರಿಕ ಕಸಬಿನಿಂದ. ಹೀಗಾಗಿ ಜಾತಿಯ ಪ್ರತ್ಯೇಕತೆಯಾಗಲಿ ಮತ್ತು ಶ್ರೇಣೀಕರಣವಾಗಲಿ ಸಮಾಜದ ಆರ್ಥಿಕತೆಯ ವಿಭಜನೆಯಿಂದಾಗಿಯೇ ರೂಪುಗೊಂಡಿವೆ. ಈ ಕಾರಣದಿಂದ ಭಾರತದ ಉತ್ಪಾದನಾ ಶಕ್ತಿಗಳನ್ನು, ಸಮಾಜದ ಒಟ್ಟು ಉತ್ಪಾದನೆಯ ವಿವಿಧ ಹಂತದಲ್ಲಿ ನಿಯುಕ್ತಗೊಳಿಸಿರುವುದರಿಂದಾಗಯೇ ಜಾತಿ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ. ಇದರ ಜೊತೆಗೆ ಉತ್ಪಾದನೆಯಲ್ಲಿನ ಶ್ರೇಷ್ಠ, ಕನಿಷ್ಠಗಳ ಪರಿಗಣನೆಯು ಸಾಮಾಜಿಕ ಶ್ರೇಣೀಕರಣವನ್ನು ಸಹಜವಾಗಿ ಹುಟ್ಟು ಹಾಕಿದೆ. ಭಾರತದಲ್ಲಿ ಇದೊಂದು ‘ಜಾತಿ’ ಎಂದು ಗುರುತಿಸಲ್ಪಡುವ ಪ್ರತಿ ಸಮುದಾಯಕ್ಕೂ ಒಂದು ಪಾರಂಪರಿಕ ಕಸುಬು ಇರುವುದು ಸಾಮಾನ್ಯ ಸಂಗತಿ. ಆದರೆ ಪ್ರತಿ ಜಾತಿಗಳೂ ಇಂಡಿಯಾದಲ್ಲಿ ನಿಶ್ಚಿತ ಸ್ವಾಲಲಂಬಿ ಆರ್ಥಿಕ ಮೂಲಗಳನ್ನು ಪಾರಂಪರಿಕವಾಗಿ ಹೊಂದಿವೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಇಂಡಿಯಾದ ಕೆಳಜಾತಿ ಸಮುದಾಯಗಳಿಗೆ ಆರ್ಥಿಕ ಸ್ವಾತಂತ್ರ್ಯವಿಲ್ಲದ ಕಾರಣಕ್ಕಾಗಿಯೇ ಅವು ಸಾಮಾಜಿಕವಾಗಿ ಕನಿಷ್ಠ ಸ್ಥಾನಮಾನಗಳನ್ನು ಹೊಂದಿರುವುದು. ಬಹುಸಂಖ್ಯಾತ ದುಡಿವ ಕೆಳಜಾತಿಗಳಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನಿರಾಕರಿಸುವ ಮೂಲಕವೇ ಇಂದಿಗೂ ಶ್ರೇಣೀಕರಣ ಜ್ವಲಂತವಾಗಿದೆ.

ಬಹುಸಂಖ್ಯಾತ ದುಡಿವ ವರ್ಗದ ಜನರ ಶ್ರಮವನ್ನು ಬಂಡವಾಳವನ್ನಾಗಿಸಿಕೊಂಡು ಬದುಕುವ ಅಲ್ಪಸಂಖ್ಯಾತ ಆಳುವ ವರ್ಗ ಯಾವುದೋ ಮಾಯೆಯ ಮೂಲಕ ಅಸಮಾನತೆಯನ್ನು ಚಿರಂತನಗೊಳಿಸಲು ಶ್ರೇಣೀಕರಣವನ್ನು ಸಮರ್ಥಿಸುವ ಪ್ರಯತ್ನಗಳು ಭಾರತದ ಸಾಮಾಜದ ಚರಿತ್ರೆಯಲ್ಲಿ ನಿರಂತರವಾಗಿ ನಡೆದು ಬಂದಿವೆ. ರಾಜಕೀಯವಾಗಿ ಆರ್ಥಿಕವಾಗಿ ಸೋತ ಸಮುದಾಯಗಳು ಆಳುವ ವರ್ಗಗಳಿಗೆ ಅಧೀನಗೊಂಡೇ ಚರಿತ್ರೆಯದ್ದಕ್ಕೂ ಬದುಕಿ ಬಂದಿವೆ. ಯಾವ ಆರ್ಥಿಕ ಚಟುವಟಿಕೆಗಳು ದುಡಿವ ವರ್ಗದ ಸಮುದಾಯಗಳಿಗೆ ಸಾಮಾಜಿಕ ಮತ್ತು ರಾಜಕೀಯ ಅಧಿಕಾರಗಳು ಲಭ್ಯವಾಗುವಂತೆ ಮಾಡಬೇಕಿತ್ತೋ ಆ ಚಟುವಟಿಕೆಳೇ ಊನಗೊಂಡಿದ್ದವು. ಭಾರತದ ಸಾಮಾಜಿ ನಿಯಮಗಳು ಪರಂಪರೆಯ ಹೆಸರಲ್ಲಿ ಬಹುಸಂಖ್ಯಾತ ದುಡಿವವರ್ಗಗಳಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನಿರಾಕರಿಸುತ್ತಲೇ ಬಂದವು. ದುಡಿವ ವರ್ಗಗಳು ಸಾಮಾಜಿಕವಾಗಿ ಸ್ವಾತಂತ್ರ್ಯವನ್ನು ನಿರಾಕರಿಸುತ್ತಲೇ ಬಂದವು. ದುಡಿವ ವರ್ಗಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಆಳುವ ವರ್ಗಗಳನ್ನು ಅವಲಂಬಿಸುವ ಅನಿವಾರ್ಯತೆ ಈ ದೇಶದಲ್ಲಿ ಯಾವತ್ತೂ ಜೀವಂತವಾಗಿ ಉಳಿದುಕೊಂಡು ಬಂದಿದೆ. ಇನ್ನೊಂದು ದುರಂತವೆಂದರೆ, ಭಾರತದ ಕೆಳಜಾತಿಗಳು ಮತ್ತು ಸ್ಪೃಶ್ಯರು ಯಾವ ಆರ್ಥಿಕ ಮೂಲಗಳಿಗೂ ಒಡೆಯರಾಗುವಂತಿಲ್ಲ ಎಂಬ ಪಾರಂಪರಿಕ ಕಾನೂನು ಈವತ್ತಿಗೂ ಜೀವಂತವಾಗಿದೆ. ಇಂತಹ ಸಂಪ್ರದಾಯಬದ್ಧ ಸಮಾಜದಲ್ಲಿ ಕೆಲಜಾತಿಗಳು ಮತ್ತು ಕುಶಲಕರ್ಮಿವರ್ಗಗಳು ಮತ್ತು ಸೇವಕ ಸಮುದಾಯಗಳು ಈ ದೇಶದ ಚರಿತ್ರೆಯುದ್ದಕ್ಕೂ ಆರ್ಥಿಕ ಸ್ವಾತಂತ್ರ್ಯವಿಲ್ಲದೆ ಬದುಕಿ ಬಂದಿವೆ.

ಅದರಲ್ಲೂ ಊಳಿಗಮಾನ್ಯ ಕಾಲಘಟ್ಟದ ಸೇವಕ ಸಮುದಾಯಗಳು ಆರ್ಥಿಕವಾಗಿ ಹೀನಾಯ ಸ್ಥಿತಿಯನ್ನು ತಲುಪಿದವು. ಜೊತೆಗೆ ಯಾವಾಗ ಊಳಿಗಮಾನ್ಯ ಸಮಾಜ ಬಂಡವಾಳವಾದಿ ಉತ್ಪಾದನಾ ವಿಧಾನವನ್ನು ಒಪ್ಪಿಕೊಂಡತೋ ಆಗ ಸೇವಕ ವರ್ಗಗಳು ದಿಕ್ಕೆಟ್ಟು ಹೋದವು. ಈ ಹಂತದಲ್ಲಿಯೇ ಅಲೆಮಾರಿಗಳೂ ರೂಪುಗೊಂಡಿರುವ ಸಾಧ್ಯತೆಗಳಿವೆ. ಅಲ್ಲದೆ ಯಾವತ್ತು ಈ ದೇಶದ ಕೃಷಿ ವ್ಯವಸ್ಥೆ ಬಂಡವಾಳಶಾಹಿ ಉತ್ಪಾದನ ಪದ್ಧತಿಯನ್ನು ಅವಲಂಬಿಸಲಾರಂಭಿಸಿತೋ, ಆಗಿನಿಂದ ಕೃಷಿ ಉತ್ಪಾದನೆಯು ತನ್ನ ಪಾರಂಪರಿಕ ಮತ್ತು ಸಾಮಾಜಿಕ ಕರುಳು ಬಳ್ಳಿ ಸಂಬಂಧಗಳನ್ನು ಕಳೆದುಕೊಂಡಿತು. ಆಗ ಪಾರಂಪರಿಕ ಕೃಷಿ ವ್ಯವಸ್ಥೆಯ ಜೊತೆ ನೇರ ಸಂಬಂಧಗಳನ್ನು ಹೊಂದಿದ್ದ ಸೇವಕ ಸಮುದಾಯಗಳು ಇದ್ದ ಬದ್ದ ಆರ್ಥಿಕ ಮೂಲಗಳನ್ನು ಕಳೆದುಕೊಂಡವು. “ಒಂದು ಕಾಲದಲ್ಲಿ ಜಮೀನ್ದಾರರು ಅನೇಕ ಕುಶಲಕರ್ಮಿಗಳನ್ನು, ಸೇವಕ ಸಮುದಾಯಗಳನ್ನು ಪೋಷಿಸಿಕೊಂಡು ಬರುತ್ತಿದ್ದರು. ಬೊಂಬೆ ಅಡಿಸುವವರನ್ನು, ಮಾಂತ್ರಿಕರನ್ನು ಮತ್ತು ದೊಂಬರಾಟವನ್ನು ಆರ್ಥಿಕವಾಗಿ ಜಮೀನ್ದಾರಿ ವ್ಯವಸ್ಥೆ ಪೋಷಿಸುವಾಗ ಈ ಸಮುದಾಯಗಳಿಗೆ ಸಾಮಾಜಿಕ ಸ್ಥಾನಮಾನಗಳೂ ಲಭ್ಯವಾಗಿದ್ದವು. ಆದರೆ ಯಾವಾಗ ಜಮೀನ್ದಾರಿ ಪದ್ಧತಿಯನ್ನು ಕಾನೂನುಗಳು ರದ್ದು ಮಾಡಿದವೋ ಅಂದಿನಿಂದ ಈ ಸಮುದಾಯಗಳಿಗೆ ಆರ್ಥಿಕ ಪೋಷಣೆ ಇಲ್ಲದಂತಾಯ್ತು. ಈ ಸಮುದಾಯಗಳು ಚದುರಿ ಹೋಗಿ ಬೇರೆ ಬೇರೆ ಕಡೆ ಪ್ರದರ್ಶನ ಮಾಡಿ ಭಿಕ್ಷೆ ಬೇಡಿ ಬದುಕಲಾರಂಭಿಸಿದವು. ಈ ಬದಲಾವಣೆಯಿಂದ ಈ ಪ್ರದರ್ಶನಕಾರ ಸಮುದಾಯಗಳಿಗೆ ನಿಶ್ಚಿತ ಪ್ರದೇಶದಲ್ಲಿ ಬದುಕಿಗೆ ಸಾಕಾಗುವಷ್ಟು ಆರ್ಥಿಕತೆ ಲಭ್ಯವಾಗದ ಕಾರಣ ಅವು ಅಲೆಮಾರಿಗಳಾಗಿ ಬದುಕಲಾರಂಭಿಸಿದವು”[1] ಮೂಲತಃ ಆರ್ಥಿಕವಾಗಿ ಜಮೀನ್ದಾರರನ್ನೇ ನಂಬಿ ಬದುಕುತ್ತಿದ್ದ ಮತ್ತು ಅವರಿಂದ ದೊರೆಯುವ ನಿಶ್ಚಿತ ಆದಾಯ ಮೂಲವನ್ನೇ ಅವಲಂಬಿಸಿದ್ದ ಈ ಸಮುದಾಯಗಳು ಬದಲಾದ ಆರ್ಥಿಕ ವ್ಯವಸ್ಥೆಯಲ್ಲಿ ತಲ್ಲಣಗೊಂಡವು ಅಲೆಮಾರಿ ಸ್ಥಿತಿ ಇವರಿಗೆ ಅನಿವಾರ್ಯವಾಯಿತು.

ಹೆಳವ ಸಮುದಾಯವೂ ಸಹ ಇದಕ್ಕೆ ಹೊರತಾಗೇನು ಇರಲಿಲ್ಲ. ಹೆಳವರು ಚಾರಿತ್ರಿಕವಾಗಿ ಆಳುವ ವರ್ಗವನ್ನು ಅವಲಂಬಿಸಿದ್ದ ಸೇವಕ ಸಮುದಾಯವಾಗಿಯೇ ರೂಪುಗೊಂಡಿರುವುದನ್ನು ನಾವು ಈಗಾಗಲೇ ಗಮನಿಸಿದ್ದೇವೆ.

ಹೆಳವ ಸಮುದಾಯದ ಪಾರಂಪರಿಕ ಕಸಬು

ಹೆಳವರಿಗೆ ಪರಂಪರೆಯಿಂದ ಬಂದ ಕಸಬು ವಂಶಾವಳಿ ಹೇಳುವುದು. ಇವರು ಸಾಂಪ್ರದಾಯಿಕ ವಂಶಾವಳಿಶಾಸ್ತ್ರಜ್ಞರು (Genologists). ಇವರ ಪಾರಂಪರಿಕ ಆರ್ಥಿಕ ಮೂಲವೂ ಇದೇ ಆಗಿದೆ. ಒಂದು ಬಗೆಯಲ್ಲಿ ಕೃಷಿಕರನ್ನು, ಅದರಲ್ಲೂ ಆಳುವ ವರ್ಗದ ಆರ್ಥಿಕ ಚಟುವಟಿಕೆಗಳನ್ನು ಆಶ್ರಯಿಸಿಯೇ ಬದುಕುವ ಅವಲಂಬಿತ ಸಮುದಾಯವಿದು. ಈ ಸಮುದಾಯದ ಎರಡು ಮುಖ್ಯ ಪಂಗಡಗಳೆಂದರೆ, ೧. ಎತ್ತಿನ ಹೆಳವು, ೨. ಗಂಟೆ ಹೆಳವರು. ಈ ಎರಡೂ ಪಂಗಡಗಳ ಮುಖ್ಯ ವೃತ್ತಿ ವಂಶಾವಳಿ ಹೇಳುವುದು.

೧. ಎತ್ತಿನ ಹೆಳವರು

ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಧಾರವಾಡ, ಬಿಜಾಪುರ, ಬೆಳಗಾಂವ್ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ಕಂಡು ಬರುತ್ತಾರೆ. ಇವರು ಈವತ್ತಿಗೂ ಅಲೆಮಾರಿಗಳಾಗಿಯೇ ಬದುಕುತ್ತಿದ್ದಾರೆ. ‘ಚಿಪ್ಪೋಡು’ ಎಂದು ಕರೆಯಲ್ಪಡುವ ಬೃಹತ್ ಪುಸ್ತಕದಲ್ಲಿ ತಾವು ಬೇಟಿ ಕೊಡುವ ಒಕ್ಕಲು ಮನೆಗಳ ಸದಸ್ಯರ ವಿವರಗಳನ್ನು ಇದರಲ್ಲಿ ದಾಖಲಿಸಿಕೊಳ್ಳುತ್ತಾರೆ. ಬಂಡಿಗಳನ್ನು ಕಟ್ಟಿಕೊಂಡು ಊರೂರಿಗೆ ಅಲೆಯುತ್ತಾ ತಮ್ಮ ಒಕ್ಕಲ ಮನೆಗಳನ್ನು ಸಂದರ್ಶಿಸುತ್ತಾರೆ. ಇವರು ಒಕ್ಕಲು ಮನೆಗಳಿಗೆ ಎತ್ತಿನ ಮೇಲೆ ಹತ್ತಿಕೊಂಡು, ಬಲಗಾಲನ್ನು ಪೂರ್ಣವಾಗಿ ಬಟ್ಟೆಯಿಂದ ಮರೆಮಾಡಿಕೊಂಡು ಚಿಪ್ಪೊಡುಗಳ ಸಮೇತ ಹೋಗುತ್ತಾರೆ. ಸಹಜವಾಗಿ ಇವರ ಒಕ್ಕಲುಗಳೆಂದರೆ ಕೃಷಿಕರು ಮತ್ತು ಪಶುಪಾಲಕರು. ಕೃಷಿಕರಲ್ಲಿ ಪ್ರಮುಖವಾಗಿ ಮಧ್ಯಮ ಜಾತಿಗಳಿಗೆ ಸೇರಿದ ಭೂಮಾಲಿಕರು ಮತ್ತು ಪಶುಪಾಲಕ ಸಮುದಾಯಗಳು. ಇವರು ಶ್ರೇಣಿಕೃತ ವ್ಯವಸ್ಥೆಯಲ್ಲಿ ತಮಗಿಂತ ಕೆಳ ಹಂತದಲ್ಲಿರುವ ಜಾತಿಗಳನ್ನು ತಮ್ಮ ಒಕ್ಕಲೆಂದು ಪರಿಗಣಿಸುವುದಿಲ್ಲ. ಸಾಮಾನ್ಯವಾಗಿ ತಮ್ಮ ಒಕ್ಕಲು ಮನೆಗಳಲ್ಲಿ ಹೆಳವರು ಧಾನ್ಯ ಇಲ್ಲವೆ ದನಕರುಗಳನ್ನು ಕೊಡುಗೆಯಾಗಿ ಸ್ವೀಕರಿಸುತ್ತಾರೆ. ಆದರೆ ಈಚೆಗೆ ಇವರ ಕುರಿತು ಒಕ್ಕಲು ಮನೆಗಳಿಗೆ ಅಂತಹ ಒಲವಾಗಲಿ, ನಂಬಿಕೆಯಾಗಲಿ ಇದ್ದಂತೆ ಕಾಣುವುದಿಲ್ಲ. ಅಲ್ಲದೆ ತಮ್ಮ ಪಾರಂಪರಿಕ ಕಸುಬನ್ನು ಉಗ್ರವಾಗಿ ವಿರೋಧಿಸುವ ಜನರೂ ಹೆಳವ ಸಮುದಾಯದಲ್ಲಿಯೇ ಇದ್ದಾರೆ.

೨. ಗಂಟೆ ಹೆಳವರು

ಇವರು ಸಾಮಾನ್ಯವಾಗಿ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಾಗಿ, ಅದರಲ್ಲೂ ಮಂಡ್ಯ ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಕಾಣಸಿಗುತ್ತಾರೆ. ಗಂಟೆ ಹೆಳವರಲ್ಲಿ ಎರಡು ವಿಧದ ಗುಂಪುಗಳನ್ನು ಜೀ.ಶಂ.ಪ ಗುರುತಿಸುತ್ತಾರೆ. ೧. ಕಂಚಿನ ಗಂಟೆಯವರು, ೨. ಮರದ ಗಂಟೆಯವರು[2]. ಎಷ್ಟೋ ಸಲ ಈ ಗಂಟೆಗಳನ್ನು ಒಕ್ಕಲುಗಳೇ ಹೆಳವರೆ ಉಡುಗೊರೆಯಾಗಿ ನೀಡುತ್ತಾರೆ. ಗಂಟೆ ಹೆಳವರೂ ಸಹ ತಮ್ಮ ಒಕ್ಕಲು ಮನೆಗಳಿಗೆ ಹೋಗಿ ವಂಶಾವಳಿ ಹೇಳುತ್ತಾರೆ. ಆದರೆ ಇವರು ಎತ್ತಿನ ಮೇಲೆ ಹೋಗದೆ ನಡೆದುಕೊಂಡೇ ಮನೆಗಳಿಗೆ ಹೋಗುತ್ತಾರೆ. ಒಟ್ಟಿನಲ್ಲಿ ತಮ್ಮ ಒಕ್ಕಲು ಮನೆಗಳ ಸದಸ್ಯರ ವಿವರಗಳನ್ನು ದಾಖಲಿಸುವುದು ಮತ್ತು ಕಾಲನಂತರ ಆ ಮನೆಗಳಿಗೆ ತೆರಳಿ ಅವರ ವಂಶದ ಸದಸ್ಯರ ಹೆಸರುಗಳನ್ನು ಹೇಳುತ್ತಾ, ಗುಣಗಾನ ಮಾಡಿ ಹಾಡುತ್ತಾ ದಾನಗಳನ್ನು ಕೊಡುವಂತೆ ಆಗ್ರಹಿಸುವುದು ಹೆಳವರ ಮೂಲ ವೃತ್ತಿಯಗಿದೆ. ಒಂದು ಅರ್ಥದಲ್ಲಿ ಮಧ್ಯಕಾಲೀನ ಕರ್ನಾಟಕದ ಚರಿತ್ರೆಯಲ್ಲಿ ಇವರು ಸೇವಕ ವರ್ಗವಾಗಿ ಬದುಕಿ ಬಂದಿರುವುದನ್ನು ಕಾಣಬಹುದಾಗಿದೆ. ಕುಶಲಕರ್ಮಿಗಲು, ಪ್ರದರ್ಶಕ ಕಲೆಗಳನ್ನು ಅವಲಂಬಿಸಿದ್ದ ಸಮುದಾಯಗಳು ಮತ್ತು ಸೇವಕ ಸಮುದಯಗಳು ಒಂದೇ ಬಗೆಯ ಆರ್ಥಿಕ ವಾತಾವರಣದಲ್ಲಿ ಬದುಕಿ ಬಂದಿರುವುದನ್ನು ಕಾಣಬಹುದಾಗಿದೆ.

ಅಲೆಮಾರಿಗಳ ಚಾರಿತ್ರಿಕ ರೂಪಾಂತರಗಳು

ಹೆಳವರಂತಹ ಸೇವಕ ವರ್ಗದ ಸಮುದಾಯಗಳು ಯಾವತ್ತೂ ಆರ್ಥಿಕವಾಗಿ ಮೇಲ್ವರ್ಗಗಳನ್ನು ಅವಲಂಬಿಸಿಕೊಂಡೇ ಬಂದವುಗಳಾಗಿವೆ. ಈ ಸಮುದಾಯಗಳು ಉತ್ಪಾದಕ ಸಮುದಾಯಗಳಾಗಿದ್ದರೂ ಸಹ ಆರ್ಥಿಕವಾಗಿ ಮೇಲ್ವರ್ಗಗಳನ್ನು ಅವಲಂಬಿಸಿಕೊಂಡೇ ಬಂದಂತಹ ಸಮುದಾಯಗಳು. ಈ ಕಾರಣದಿಂದ ಕಾಲದಿಂದ ಕಾಲಕ್ಕೆ ಬದಲಾಗುತ್ತಿದ್ದ ಆರ್ಥಿಕ ಸನ್ನಿವೇಶಗಳಿಗೆ ಅನುಗುಣವಾಗಿ ಅಲೆಮಾರಿಗಳು ತಮ್ಮ ಚುಟುವಟಿಕೆಗಳನ್ನು ರೂಪಾಂತರಿಸಿಕೊಳ್ಳುತ್ತಲೇ ಬಂದಿದ್ದಾರೆ. ಈ ಬದಲಾವಣೆ ಒಂದು ರೀತಿಯಲ್ಲಿ ಬಲವಂತದ ಬದಲಾವಣೆ. ಈ ಕಾರಣಕ್ಕಾಗಿ ಕರ್ನಾಟಕದ ಅಲೆಮಾರಿಗಳ ಬದುಕಲ್ಲಿ ಅನೇಕ ರೂಪಾಂತರಗಳು ಸಂಭವಿಸಿವೆ. ಮತ್ತು ಒಂದು ಅರ್ಥದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಭಗ್ನಗೊಂಡ ಸ್ಥಿತಿಯಲ್ಲಿ ಈ ಸಮುದಾಯಗಳು ಬದುಕುತ್ತಿವೆ.

ಇನ್ನು ಅಲೆಮಾರಿಗಳ ಆರ್ಥಿಕ ಮೂಲಗಳು ಮತ್ತು ಅವು ಬೆಳೆದು ಬರಲು ಕಾರಣವಾದ ಚಾರಿತ್ರಿಕ ಅನಿವಾರ್ಯತೆಗಳನ್ನು ಗಮನಿಸಬಹುದಾಗಿದೆ. ಅಲೆಮಾರಿಗಳನ್ನು ನಾನು ಇಲ್ಲಿ ಐದು ಭಾಗಗಳಲ್ಲಿ ವಿಂಗಡಿಸಿದ್ದೇನೆ.

೧. ಪ್ರದರ್ಶಕ ಕಲೆಗಳನ್ನು ಅವಲಂಬಿಸಿರುವ ಸಮುದಾಯಗಳು

೨. ಕರಕುಶಲ ಕಲೆಗಳನ್ನು ಅವಲಂಬಿಸಿರುವ ಸಮುದಾಯಗಳು

೩. ಧಾರ್ಮಿಕ ಸಂಬಂಧೀ ವೃತ್ತಿಗಳನ್ನು ಅವಲಂಬಿಸಿರುವವರು

೪. ಪಾರಂಪರಿಕ ಮೂಲ ವೃತ್ತಿಗಳಲ್ಲೇ ಇರವ ಸಮುದಾಯಗಳು

೫. ಬೇಟೆ, ಪಶುಪಾಲೆನ ಮತ್ತು ಆಹಾರ ಸಂಗ್ರಹಣೆಯಂತಹ ಮೂಲ ಕಸಬುಗಳನ್ನು ಇನ್ನೂ ಅವಲಂಬಿಸಿರುವವರು.

ಹೀಗೆ ಐದು ವಿಧಗಳಲ್ಲಿ ಅಲೆಮಾರಿಗಳನ್ನು ವಿಂಗಡಿಸಬಹುದು. ಈ ವಿಂಗಡಣೆಯ ಚೌಕಟ್ಟಿಗೆ ಬಾರದ ಅಲೆಮಾರಿಗಳೂ ಸಹ ಕರ್ನಾಟಕದಲ್ಲಿರಬಹುದು. ಮೊದಲನೆಯದಾಗಿ ಪ್ರದರ್ಶಕ ಕಲೆಗಳನ್ನು ಅವಲಂಬಿಸಿರುವ ಸಮುದಾಯಗಳನ್ನು ನೋಡೋಣ.

೧. ಪ್ರದರ್ಶನ ಕಲೆಗಳನ್ನು ಅವಲಂಬಿಸಿರುವವರು

ಮುಖ್ಯವಾಗಿ ಇವರು ತಮ್ಮ ಪಾರಂಪರಿಕ ಸರಂಜಾಮುಗಳನ್ನು ಬಳಸಿಯೇ ಜನರನ್ನು ರಂಜಿಸಲೆತ್ನಿಸುತ್ತಾರೆ. ಆಧುನಿಕ ಮನರಂಜನಾ ಮಾಧ್ಯಮಗಳು ವಿಧಿಸುವ ನಿಶ್ಚಿತ ಶುಲ್ಕ, ಇಲ್ಲವೆ ನಿಯಮಗಳು ಇಲ್ಲಿರುವುದಿಲ್ಲ. ಡೊಂಬರಾಟದವನಿಗೆ, ಜಾತಿಗಾರರಿಗೆ, ಕಸರತ್ತುಗಳನ್ನು ಪ್ರದರ್ಶಿಸಲು ಬೀದಿಯ ಪಕ್ಕದ ಯಾವುದೇ ಬಯಲಾದರೂ ಆದೀತು. ಇಲ್ಲಿ ಪ್ರೇಕ್ಷಕ ತನಿಗಿಚ್ಛೆ ಬಂದಂತೆ ಹಣ ನೀಡಬಹುದು. ಇಲ್ಲವೆ ನೀಡದೆಯೂ ಇರಬಹುದು. ಈ ಕಲೆಗಳನ್ನು ಅವಲಂಬಿಸಿರುವ ಸಮುದಾಯಗಳೆಂದರೆ, ಡೊಂಬರು, ಜಾತಿಗಾರು, ಕಿಳ್ಳೆಕ್ಯಾತರು, ಹಗಲುವೇಷಗಾರರು, ಕವಲೆತ್ತಿನವರು, ದೊಂಬಿದಾಸರು, ಕಿನ್ನರಿ ಜೋಗಿಗಳು, ಬುಡಬುಡಿಕೆ, ಗೊಂದಲಿಗರು, ಮೋಡಿಕಾರರು ಮುಂತದ ಸಮುದಾಯಗಳು ಈ ಗುಂಪಿಗೆ ಸೇರುತ್ತವೆ.

೨. ಕರಕುಶಲ ಕಲೆಗಳನ್ನು ಅವಲಂಬಿಸಿರುವ ಸಮುದಾಯಗಳು

ಇವರು ಪಾರಂಪರಿಕವಾಗಿ ತಮ್ಮ ಕರಕುಶಲ ವೃತ್ತಿಗಳನ್ನೇ ಅವಲಂಬಿಸಿ ಕೊಂಡಿರುವಂಥವರು. ಸಾಂಪ್ರದಾಯಿತ ಉತ್ಪಾದನಾ ಸಾಧನಗಳಿಂದ ಹಳ್ಳಿಗರಿಗೆ ಉಪಯುಕ್ತವಾಗಬಲ್ಲ, ಕೃಷಿ ಸಂಬಂಧಿ ಇಲ್ಲವೆ ಗೃಹೋಪಯೋಗಿ ಉಪಕರಣಗಳನ್ನು ತಯಾರಿಸುತ್ತಾರೆ. ಇವರಲ್ಲಿ ಪ್ರಮುಖರು ಬಯಲು ಪತ್ತರ, ಬಯಲು ಕಮ್ಮಾರ, ಮೇದರು, ಪಿಂಜಾರರು, ಮುದ್ದೆಕಮ್ಮಾರರು, ಹಂಡಿಜೋಗಿಗಳು ಮುಂತಾದ ಸಮುದಾಯಗಳು ಈ ಗುಂಪಿಗೆ ಸೇರುತ್ತವೆ.

೩. ಧಾರ್ಮಿಕ ಸಂಬಂಧೀ ವೃತ್ತಿಗಳನ್ನು ಅವಲಂಬಿಸಿರುವವರು

ಇವರು ಮುಖ್ಯವಾಗಿ ಕೆಲವು ಅನುಭಾವಿ ಪಂಥಗಳಿಗೆ ಸೇರಿದವರು. ಅಲ್ಲದೆ ಶಕ್ತಿ ಆರಾಧಕರು. ಇವರು ದಾಸರ ಮತ್ತು ಅನುಭಾವಿಗಳ ಕಾವ್ಯಗಳನ್ನು, ತತ್ವಪದಗಳನ್ನ ಹಾಡುತ್ತ ಊರೂರು ಅಲೆಯುವವುರ. ಇವರಲ್ಲಿ ದುರುಗ ಮುರುಗಿಯರು, ಗೊರವರು, ದೊಂಬಿದಾಸರು. ಸುಡುಗಾಡು ಸಿದ್ದರು. ಅರ್ಜುನಜೋಗಿಗಳು, ಭೈರಾಗಿಗಳು ಮುಂತಾದವರು ಮುಖ್ಯರು.

೪. ಪಾರಂಪರಿಕ ಮೂಲ ವೃತ್ತಿಗಳಲ್ಲೇ ಇರುವ ಸಮುದಾಯಗಳು

ಈ ಗುಂಪಿಗೆ ಸೇರಿದ ಸಮುದಾಯಗಳು ಆರ್ಥಿಕವಾಗಿ ಸಮಾಜದ ಪ್ರಬಲ ಸಮುದಾಯಗಳನ್ನು ಪಾರಂಪರಿಕವಾಗಿ ಅವಲಂಬಿಸಿರುವವರು. ಅವರಲ್ಲಿ, ಹೆಳವರು, ದಕ್ಕಲರು, ಮೊಂಡುರ ಪ್ರಮುಖರು, ಹಲವು ಪಾಳೇಗಾರರಿಗೆ, ಭೂಮಾಲಿಕರಿಗೆ ‘ಮನೆಮಕ್ಕಳಾಗಿ’ ಇವರು ಸೇವೆ ಸಲ್ಲಿಸುತ್ತಾರಲ್ಲದೆ, ಊರೂರು ಸುತ್ತಿ ಅವರ ವಂಶಾವಳಿಯನ್ನು ದಾಖಲಿಸುತ್ತಾರೆ.

೫. ಬೇಟೆ, ಪಶುಪಾಲನೆ ಮತ್ತು ಆಹರ ಸಂಗ್ರಹನೆಯಂತಹ ಮೂಲ ಕಸಬುಗಳನ್ನು ಇನ್ನು ಅವಲಂಬಿಸಿರುವವರು

ಈ ಗುಂಪಿಗೆ ಸೇರಿದ ಇನ್ನೂ ಬೇಟೆಯನ್ನು, ಪಶುಪಾಲನೆಯನ್ನು ಮತ್ತು ಆಹರ ಸಂಗ್ರಹಣೆಯನನ್ನು ನಂಬಿದವರು. ಅಡವಿ ಚೆಂಚರು, ಯಾನಾದಿಗಳು. ಹಕ್ಕಿಪಿಕ್ಕಿಗಳು ಇನ್ನೂ ಬೇಟೆಯನ್ನೇ ನಂಬಿಕೊಂಡಿದ್ದಾರೆ. ಅಲೆಮಾರಿ ಕುರುಬರು ಪಶುಪಾಲನೆಯನ್ನು, ಗೋಸರಂಗಿಗಳೂ, ಕಿಳ್ಳೆಕ್ಯಾತರು, ಒಳನಾಡ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ಇನ್ನೂ ಪಾರಂಪರಿಕ ವೈದ್ಯವನ್ನೇ ನಂಬಿರುವ ರಾಜಗೊಂಡರು ಮತ್ತು ಅಲೆಮಾರಿ ವರ್ತಕರಾಗಿಯೇ ಜೀವಿಸುತ್ತಿರುವ ೨೪ ಮನೆ ತೆಲುಗು ಶೆಟ್ಟರು ಸಹ ಕರ್ನಾಟಕದಲ್ಲಿದ್ದಾರೆ.

ಈ ವಿಂಗಡಣೆಯನ್ನು ನಾವು ಇನ್ನೂ ಸೂಕ್ಷ್ಮವಾಗಿ ಪರಿಶೀಲಿಸಬಹುದಾಗಿದೆ. ಮೇಲೆ ನಾನು ಐದು ಭಾಗದಲ್ಲಿ ಪಟ್ಟಿಮಾಡಿರುವ ಅಲೆಮಾರಿ ಸಮುದಾಯಗಳನ್ನು ಮತ್ತು ಅವರುಗಳ ಆರ್ಥಿಕ ಮೂಲಗಳನ್ನು ಗಮನಿಸಿ, ಕೆಲವು ಅಲೆಮಾರಿಗಳ ಕಸಬುಗಳನ್ನು ಕೈಗಾರಿಕೀಕರಣ ತನ್ನೆಲ್ಲ ಚಮತ್ಕಾರಿಕ ತಂತ್ರಜ್ಞಾನದ ಮೂಲಕ ಬಂಡವಾಳಶಾಹಿಗಳ ಕೈಗೆ ಒಪ್ಪಿಸಿಯಾಗಿದೆ. ಏಕೆಂದರೆ ಇಂಡಿಯಾದ ಅಸಮಾನ ಸಮಾಜದಲ್ಲಿ ಯಾವ ಬಗೆಯ ಆರ್ಥಿಕ ಅಧಿಕಾರಗಳನ್ನು ಹೊಂದದ ಇಲ್ಲಿನ ಕುಶಲಕರ್ಮಿಗಳಿಗೆ ತಮ್ಮ ಪರಂಪರಿಕ ಕೌಶಲಗಳನ್ನು ಉದ್ಯಮವಾಗಿಸುವ ಅವಕಾಶಗಳೇ ಇರಲಿಲ್ಲ. ಆಧುನಿಕ ಉದ್ಯಮಗಳು ಸ್ಥಳೀಯ ಕೌಶಲಗಳನ್ನು ಮಾತ್ರ ಅಲವಡಿಸಿಕೊಂಡು, ಆ ಕೌಶಲಗಳನ್ನು ರೂಪಿಸಿಕೊಂಡು ಬಂದಿದ್ದ ಸಮುದಾಯಗಳನ್ನು ಕೈಬಿಟ್ಟವು. ಇನ್ನು ಪ್ರದರ್ಶಕ ಕಲೆಗಳನ್ನು ನಂಬಿಕೊಂಡು ಬಂದಿದ್ದ ಸಮುದಾಯಗಳ ಕಥೆ ಇನ್ನೂ ಚಿಂತಾಜನಕವಾದದ್ದು. ಆಧುನಿಕ ಮಾಧ್ಯಮಗಳು ತಮ್ಮೆಲ್ಲ ಥಳುಕಗಳಿಂದ ಈ ಪಾರಂಪರಿಕ ಪ್ರದರ್ಶನಕಾರರನ್ನು ಮೂಲೆಗೆ ತಳ್ಳಿದವು. ಪಾರಂಪರಿಕ ಪ್ರದರ್ಶನ ಕಲೆಗಳಿಗೆ, ಆಧುನಿಕ ಮಾಧ್ಯಮಗಳು ಹಂಚುವ ರೋಮಾಂಚನಗಳನ್ನು ನೀಡಲು ಸಾಧ್ಯವಾಗಲೇ ಇಲ್ಲ. ಇನ್ನು ಊಳಿಗಮಾನ್ಯ ವ್ಯವಸ್ಥೆಯ ಭಾಗವಾಗಿ ತಮ್ಮ ವೃತ್ತಿಗಳಲ್ಲಿ ತೊಡಗಿದ್ದ ಹೆಳವರನ್ನು, ದಕ್ಕಲರನ್ನು ಸಾಕುವಷ್ಟು ಶಕ್ತಿಯನ್ನು ಊಳಿಗಮಾನ್ಯ ಪ್ರಭುಗಳು ಹಂತಹಂತವಾಗಿ ಕಳೆದುಕೊಳ್ಳುತ್ತಾ ಬಂದರು. ಇನ್ನೂ ಮುಖ್ಯವಾದ ಸಂಗತಿಯೆಂದರೆ, ಉಚಲ್ಯಾದಂತಹ ಸಮುದಾಯಗಳು ತಮಗೆ ಶಾಪದಂತೆ ಅಂಟಿಕೊಂಡು ಬಂದಿದ್ದ ತಮ್ಮ ಕಸಬುಗಳನ್ನು ತಾವೇ ಬಿಟ್ಟುಕೊಡಲು ಸಿದ್ಧವಾದವು. ಮಲ ಹೊರುವ, ಆ ಕಾರಣಕ್ಕಾಗಿಯೇ ಅಸ್ಪೃಶ್ಯರಾಗಿಯೇ ಉಳಿವ ಸಮುದಾಯಗಳು ಹೇಗೆ ತಾನೇ ತಮ್ಮ ಮೂಲವೃತ್ತಿಗಳಲ್ಲಿ ಉಳಿಯಲು ಸಾಧ್ಯ? ಒಟ್ಟಿನಲ್ಲಿ ಇಲ್ಲಿನ ಸಮುದಾಯಗಳು ಬದಲಾದ ಸಂದರ್ಭಗಳಲ್ಲೆಲ್ಲ ತಮ್ಮ ತಮ್ಮ ಪಾರಂಪರಿಕ ಆರ್ಥಿಕ ಮೂಲಗಳನ್ನು ಉಳಿಸಿಕೊಳ್ಳುವ ಇಲ್ಲವೆ ಬಿಟ್ಟು ಕೊಡುವ ಸಂದಿಗ್ಧಗಳಿಗೆ ಮುಖಾಮುಖಿಯಾಗುತ್ತಲೇ ಬಂದಿವೆ. ಹೀಗಾಗಿ ಅಲೆಮಾರಿಗಳು ಚರಿತ್ರೆಯ ಉದ್ದಕ್ಕೂ ಅತ್ಯಂತ ಅನಿಶ್ಚಿತ ಆರ್ಥಿಕ ಮೂಲಗಳನ್ನೇ ನಂಬಿಕೊಂಡು ಬಂದಿದ್ದಾರೆ.

ದುರ್ಗಮ ದಾರಿಯಲ್ಲಿ ಅಲೆಮಾರಿಗಳು

ಈವತ್ತು ಅಲೆಮಾರಿಗಳೆಂದು ಕರೆಸಿಕೊಳ್ಳುವ ಬಹುತೇಕ ಎಲ್ಲ ಸಮುದಾಯಗಳಿಗೆ ಅವುಗಳ ಚರಿತ್ರೆಯಲ್ಲಿ ನಿಶ್ಚಿತ ಆದಾಯವನ್ನು ತಂದುಕೊಡುವ ಸ್ಥಿರಾಸ್ತಿಗಳಿರಲಿಲ್ಲ. ಆರ್ಥಿಕವಾಗಿ ಅಲೆಮಾರಿಗಳು ಉತ್ಪಾದಕ ಸಮುದಾಯಗಳನ್ನು ಅವಲಂಬಿಸಲೇಬೇಕಿತ್ತು. ಭಾರತದ ಸಮುದಾಯಗಳ ಮೂಲ ಕಸುಬಾದ ಕೃಷಿಯನ್ನು ಇವರು ಕೈಗೊಳ್ಳುವ ಯಾವ ಪಾರಂಪರಿಕ ಸಿದ್ಧತೆಗಳೂ ಇಲ್ಲದ ಕಾರಣಕ್ಕಾಗಿ ಇವರು ಕೃಷಿಕರಾಗುವ ಸಾಧ್ಯತೆಗಳಿರಲಿಲ್ಲ. ಪ್ರಾಸಂಗಿಕವಾಗಿ ದತ್ತಿಯ ಮೂಲಕ ಬಂದ ಜಮೀನನ್ನು ಅವರು ಉಳುಮೆ ಮಾಡಲಿಲ್ಲ. ಅಲೆಮಾರಿ ಡೊಂಬರ ಸಮುದಾಯದಿಂದ ಪ್ರತ್ಯೇಕಗೊಂಡು, ಇನ್ನೂ ಅಲೆಮಾರಿಗಳಾಗಿರುವ ಮತ್ತು ಬೀದಿ ಬದಿಯ ಕಸರತ್ತುಗಳನ್ನೇ ಅವಲಂಬಿಸಿರುವ ಜಾತಿಗಾರರು ಈವತ್ತು ಇದೇ ಸಮಸ್ಯೆಯಿಂದ ಚಡಪಡಿಸುತ್ತಿದ್ದಾರೆ. ಯಾಔಉದೋ ಹಂತದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಡೊಂಬರೇ ಜಾತಿಗಾರರಾಗಿ ರೂಪಗೊಂಡಿದ್ದಾರೆ. ಅವರು ಸಾಹಸಗಳನ್ನು, ಕಸರತ್ತುಗಳನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡವರು. ಇವರಿಗೆ ದಾನವಾಗಿ ಕೃಷಿ ಜಮೀನು ಸಿಕ್ಕರೂ ಇವರು. ಕೃಷಿಕರಾಗಲಿಲ್ಲ. ಮಧ್ಯಕಾಲದ ಆರ್ಥಿಕ ವ್ಯವಸ್ಥೆಯೇ ಅವರನ್ನು ತಮ್ಮ ಮೂಲ ವೃತ್ತಿಯಲ್ಲೇ ಮುಂದುವರಿಯುವಂತೆ ಪ್ರೇರೇಪಿಸಿದಂತಿದೆ. ಭೂಮಿ ಸಿಕ್ಕರೂ ಅವರು ಕೃಷಿಕರಾಗಿಲ್ಲ. “ಮುಧೋಳ್ ತಾಲೂಕಿನ ಮಂಟೂರು, ಜಮಖಂಡಿ ತಾಲೂಕಿನ ಸಾವಳಗಿ, ಗೋಠೆ, ಗದ್ಯಾಳ ಮುಂತಾದ ಹಲವು ಕಡೆ ತಮ್ಮ ಜಾತಿಯಲ್ಲಿಯ ಶ್ರೇಷ್ಠರಾದ ಹಿರಿಯರಿಗೆ ಇನಾಮಾಗಿ ದೊರೆತ ಭೂಮಿಗಳಿರುವುದಾಗಿ ಈ ಜಾತಿಗಾರರಲ್ಲಿಯ ವಯೋವೃದ್ಧರು ಅತ್ಯಂತ ಅಭಿಮಾನದಿಂದ ಹೇಳುತ್ತಾರೆ. ಹೀಗೆ ಇನಾಮು ದೊರೆತ ಜಮೀನುಗಳು ಹೆಚ್ಚಾಗಿ ವಿಜಾಪುರ ಜಿಲ್ಲೆಯಲ್ಲಿಯೇ ಇರುವುದು ಗಮನಾರ್ಹ ಸಂಗತಿಯಾಗಿದೆ. ಆದರೆ ಇಂಥ ಬಹುಪಾಲು ಜಮೀನುಗಳು ಇಂದು ಅವರ ಕೈಯಲ್ಲಿ ಉಳಿದಿಲ್ಲ. ಕೆಲವನ್ನು ಇವರು ಎಂದೋ ಮಾರಿಕೊಂಡಿದ್ದಾರೆ. ಇನ್ನು ಕೆಲವು ಜಮೀನುಗಳು ರೈತರಿಗೆ ದಕ್ಕಿಹೋಗಿವೆ. ಏಕೆಂದರೆ ಜಮೀನುಗಳನ್ನು ಇನಾಮಾಗಿ ಪಡೆದ ಮೇಲೆಯೂ ಇವರಾರೂ ಸಾಮಾನ್ಯವಾಗಿ ಒಕ್ಕಲುತನ ವೃತ್ತಿಗಿಳಿದಿಲ್ಲ. ಮತ್ತು ಆ ಊರುಗಳಲ್ಲಿ ಇವರು ಶಾಶ್ವತವಾಗಿ ನೆಲೆಸಿಯೂ ಇಲ್ಲ. ತಮ್ಮ ಕಸರತ್ತು ಮತ್ತು ಸೋಗುಗಳನ್ನು ಪ್ರದರ್ಶಿಸುತ್ತ ಊರಿಂದೂರಿಗೆ ಅಲೆದಾಡುವ ವೃತ್ತಿಯನ್ನೇ ಜಾತಿಗಾರರು ಒಗ್ಗಿಸಿಕೊಂಡಿದ್ದಾರೆ”[3] ಹೀಗಾಗಿ ಇಂತಹ ಅಲೆಮಾರಿಗಳಿಗೆ ಭೂಮಿ ದಕ್ಕಿದರೂ ಅವರಿಗೆ ಅದು ಆರ್ಥಿಕ ಮೂಲವಾಗಲಿಲ್ಲ. ಅಲ್ಲದೆ “ಕೃಷಿ ಪೂರಕ ಚಟುವಟಿಕೆಗಳನ್ನು ಅವಲಂಬಿಸಿದ್ದ ಕರಕುಶಲ ಕರ್ಮಿಗಳಿಗೆ ಮತ್ತು ಮನರಂಜಕ ಸಮುದಾಯಗಳಿಗೆ ಕೊಡುತ್ತದ್ದ ಕೃಷಿ ಭೂಮಿಯು ಸ್ಥಳೀಯ ಭೂಮಾಲಿಕನ ವಿವೇಚನೆಗೆ ಒಳಪಡುತ್ತಿತ್ತು. ಮತ್ತು ಅದು ಭೂಮಾಲಿಕ ವ್ಯವಸ್ಥೆಯ ಎಲ್ಲ ಕಾನೂನುಗಳಿಗೂ ಬದ್ಧವಾಗಿರುತ್ತಿತ್ತು. ಅಲ್ಲದೆ ನಿಯಮಕ್ಕೊಳಪಟ್ಟ ಗ್ರಾಮದ ಒಟ್ಟು ಉತ್ಪಾದನಾ ಚಟುವಟಿಕೆಗಳ ಭಾಗವಾಗಿ ಈ ದಾನದ ಪ್ರಕ್ರಿಯೆ ಜಾರಿಯಲ್ಲಿರುತ್ತಿತ್ತು. ಭೂಮಾಲಿಕ ಇಚ್ಛೆಪಡದ ಸಂದರ್ಭದಲ್ಲಿ ಈ ದಾನದ ಜಮೀನು ಬೇರೆಯವರಿಗೆ ಸಂದಾಯವಾಗುತ್ತಿತ್ತು. ಇಲ್ಲವೆ ರದ್ದಾಗುತ್ತಿತ್ತು.”[4]ಮಧ್ಯಕಾಲದ ಭೂಮಾಲಿಕ ವ್ಯವಸ್ಥೆಯು, ಭೂಮಿಯನ್ನು ಮತ್ತು ಕೃಷಿಕ ಸಮುದಾಯಗಳ ಒಟ್ಟು ವ್ಯವಸಾಯೀ ಚಟುವಟಿಕೆಗಳನ್ನು, ಅಂದಿನ ಮೊಘಲ್ ಆಡಳಿತ ರೂಪಿಸಿದ್ದ ಭೂನಿಯಮಗಳನ್ನು ವಿಕೃತಗೊಳಿಸಿಕೊಂಡು ನಿಯಂತ್ರಿಸುತ್ತಿತ್ತು. ಹೀಗೆ ಈ ಬಗೆಯ ಸಮುದಾಯಗಳಿಗೆ ನೀಡುತ್ತಿದ್ದ ದಾನದ ಜಮೀನು ಸಹ ಅನೇಕ ರೀತಿಯ ನಿಯಮಗಳಿಗೆ ಬದ್ಧವಾಗಿರಬೇಕಿತ್ತು.

“ಎರಡು ಬಗೆಯಲ್ಲಿ ಭೂಮಿಯನ್ನು ದಾನ ಮಾಡಲಾಗುತ್ತಿತ್ತು. ಒಂದನೆಯದು, ಒಂದು ಗ್ರಾಮದ ಒಟ್ಟು ಕೃಷಿ ಉತ್ಪಾದನೆಯಲ್ಲಿ ಸಹಾಯಕರಾಗಿರುತ್ತಿದ್ದ ಭೂರಹಿತ ಸಮುದಾಯಗಳಿಗೆ ಕೃಷಿ ಭೂಮಿಯನ್ನು ದಾನ ಮಾಡಲಾಗುತ್ತಿತ್ತು. ಎರಡನೆಯದು, ದತ್ತಿದಾನವಾಗಿತ್ತು. ಈ ದತ್ತಿ ಭೂಮಿಯನ್ನು ಪುರೋಹಿತರಿಗೆ, ಮಠಗಳಿಗೆ ಕೊಡಲಾಗುತ್ತಿತ್ತು. ಇಂತಹದನ್ನು ಇನಾಮು ಭುಮಿ ಎಂದು ಕರೆಯಲಾಗುತ್ತದೆ. ಆದರೆ ಈ ಎರಡು ಭೂದಾನಗಳಲ್ಲಿ ಅನೇಕ ವ್ಯತ್ಯಾಸಗಳಿವೆ. ಮೊದಲನೆಯ ಭೂದಾನದಲ್ಲಿ, ಕೃಷಿಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದ ಸಮುದಾಯಗಳಿಗೆ ಮತ್ತು ವೈದ್ಯರಿಗೆಕ, ಪ್ರದರ್ಶಕ ಕಲೆಗಳನ್ನು ಅವಲಂಬಿಸಿದವರಿಎ, ಉದಾ. ಡೊಂಬರಂತಹ ಸಮುದಾಯಗಳಿಗೆ ಕೊಡುವ ದಾನವು ಪಾರಂಪರಿಕವಾಗಿ ‘ಶ್ರಮವನ್ನು ತೆಗೆದುಕೊಳ್ಳುವ ಮತ್ತು ಕೊಡುವ’ ಪ್ರಕ್ರಿಯೆಯನ್ನು ಅವಲಂಬಿಸಿರುತ್ತದೆ. ಅಂದರೆ ಇಡೀ ಗ್ರಾಮದ ಉತ್ಪಾದನೆಯಲ್ಲಿ ಪೂರಕ ಕೆಲಸಗಳನ್ನು ನಿರ್ವಹಿಸುವ ಸಮುದಾಯಗಳಿಗಿಗೆ ಕೊಡಲೇ ಬೇಕಾದ ದಾನವಾಗಿರುತ್ತದೆ. ಆದರೆ ಹಳ್ಳಿಯ ಮುಖ್ಯವಸ್ಥ ಅಥವಾ ಅಧಿಕಾರಿ ವರ್ಗ ಈ ಜಮೀನುಗಳನ್ನು ಕೆಲವು ಶರತ್ತುಗಳ ಮೇಲೇಯೇ ದಾನ ಮಾಡಿರುತ್ತದೆ. ಶರತ್ತುಗಳು ಉಲ್ಲಂಘನೆಯಾದಾಗ ಸಹಜವಾಗಿಯೆ ಅಧಿಕಾರಿ ವರ್ಗ ತನ್ನ ನಿಯಮದ ಪ್ರಕರ ದಾನ ಮಾಡಿದ ಜಮೀನನ್ನು ಮರುವಶಪಡಿಸಿಕೊಳ್ಳುವ ಅಧಿಕಾರವನ್ನೂ ಪಡೆದುಕೊಂಡಿತ್ತು”[5] ಹೀಗೆ ದಾನವಾಗಿ ಬಂದ ಕೃಷಿ ಭೂಮಿಯಿಂದ ಸಹ ಈ ಸಮುದಾಯಗಳಿಗೆ ನಿಶ್ಚಿತ ಆದಾಯ ಬರುವ ಭರವಸೆಯೇನೂ ಇರಲಿಲ್ಲ. ಈ ಜಮೀನುಗಳು ಮೇಲು ನೋಟಕ್ಕೆ ತೆರಿಗೆ ಮುಕ್ತ ಅಥವಾ ಕಂದಾಯ ರಹಿತ ಜಮೀನುಗಳಾಗಿದ್ದರೂ, ಅದರ ಎಲ್ಲ ಅನುಕೂಲಗಳನ್ನೂ ಅನುಭವಿಸುತ್ತಿದ್ದವರು ಮಾತ್ರ ಸ್ಥಳೀಯ ಭೂಮಾಲಿಕ ವರ್ಗವೇ ಆಗಿರುತ್ತಿತ್ತು. “ಹೀಗೆ ತೆರಿಗೆ ಮುಕ್ತವಾಗಿ ಸಿಕ್ಕ ಕೃಷಿ ಭೂಮಿಯನ್ನು ಈ ಕುಶಲಕರ್ಮಿ ಮತ್ತು ಮನರಂಜಕ ವರ್ಗಗಳು ಉಳುಮೆ ಮಾಡುತ್ತಿರಲಿಲ್ಲ. ದಲಿಗೆ ಇಡೀ ಹಳ್ಳಿ ಆ ಜಮೀನುಗಳ ಉಸ್ತುವಾರಿ ನೊಡಿಕೊಳ್ಳುತ್ತಿತ್ತು. ಮತ್ತು ಸುಗ್ಗಿಯ ಸಂದರ್ಭದಲ್ಲಿ ಕುಶಲಕರ್ಮಿಗಳಿಗೆ ಇಂತಿಷ್ಟು ಎಂದು ಪಾಲನ್ನು ನೀಡಲಾಗುತ್ತಿತ್ತು. ಆದರೆ ಪಾಲು ಅಥವಾ ಆಯ ಪಡೆಯುತ್ತಿದ್ದ ಈ ಅವಲಂಬಿತ ಸಮುದಾಯಗಳಲ್ಲೂ ಸಮಾನತೆ ಇರಲಿಲ್ಲ. ಇವರು ತಮ್ಮ ಗ್ರಾಮದ ಕೃಷಿಕರ ಕೃಪಾಕಟಾಕ್ಷಕ್ಕೆ ಒಳಗಾಗಿಯೇ ಬದುಕಬೇಕಿತ್ತು. ಅಲ್ಲದ ಗ್ರಾಮದ ಮುಖ್ಯಸ್ಥ ಮೇಲ್ಜಾತಿಯವನೇ ಆಗಿದ್ದರಿಂದಾಗಿ ಈ ಕೆಳಜಾತಿಯ ಜನ ಭೂಮಾಲಿಕನಿಂದ ಸತತ ಶೋಷಣೆಗೆ ಒಳಗಾಗಲೇ ಬೇಕಿತ್ತು.”[6] ಮೇಲಿನ ಉಲ್ಲೇಖಗಳನ್ನು ಗಮನಿಸಿದಾಗ ಈ ಸಮುದಾಯಗಳು ಆರ್ಥಿಕವಾಗಿ ಪರಾವಲಂಬಿಗಳಾಗಿಯೇ ಇರಬೇಕಿತ್ತು. ಭೂಮಿ ಸಿಕ್ಕರೂ ಅವರು ಅದರ ಒಡೆಯಾರಾಗುವ ಅವಕಾಶವಿರಲಿಲ್ಲ. “ಕರ್ನಾಟಕದ ಯಾವ ಶಾಸನದಲ್ಲಾಗಲಿ, ಸಾಹಿತ್ಯ ಕರತಿಯಲ್ಲಾಗಲಿ ಹೊಲೆಯರು ಭೂಮಿಗೆ ಒಡೆಯರಾಗಿದ್ದರೆಂಬುದಕ್ಕೆ ಯವುದೇ ಸೂಚನೆ ಇಲ್ಲ. ವೃತ್ತಿಯಾಗಿ ವ್ಯವಸಾಯ ಅವರಿಗೆ ನಿಷಿದ್ಧ”[7] ಈ ಬಗೆಯ ನಿಷೇಧಕ್ಕೂ ಹಿಂದೂ ಧಜರ್ಮಶಾಸ್ತ್ರಗ್ರಂಥಗಳು ಹೇಳುವ ಇಂಡಿಯಾದ ಸಾಮಾಜಿಕ ಕಾನೂನುಗಳಿಗೆ ನೇರ ಸಂಬಂಧವಿದೆ. ಕುಶಲಕರ್ಮಿ ಮತ್ತು ಪ್ರದರ್ಶಕ ಕಲೆಗಳನ್ನು ನಂಬಿದ್ದ ಸಮುದಾಯಗಳು ಯಾವತ್ತೂ ಜಾತಿ ಶ್ರೇಣೀಕರಣದ ಅಂಚಿನ ಸಮುದಯಗಳಾಗಿಯೆ ಇದ್ದವು. “ಇವರಿಗೆ ಗ್ರಾಮದ ಹೊರಗೆ ಮನೆಗಳನ್ನು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿತ್ತು. ಮತ್ತು ಇವರಿಗೆ ಕೊಡುವ ದಾನದ ಕೃಷಿ ಜಮೀನು ಸಹ ಉತ್ಕೃಷ್ಟವಾಗೇನು ಇರುತ್ತಿರಲಿಲ್ಲ. ಜೊತೆಗೆ ಈ ಜಮೀನಿನ ಮೇಲೆ ಅವರಿಗೆ ಒಡೆತನವೂ ಇರದ ಕಾರಣ, ಕೃಷಿಕರೇ ಆ ಜಮೀನನ್ನು ಉತ್ತು ಸುಗ್ಗಿಯ ಸಂದರ್ಭದಲ್ಲಿ ಇಂತಿಷ್ಟು ಎಂದು ಪಾಲು ಕೊಡುತ್ತಿದ್ದರು”[8] ಈ ಕಾರಣದಿಂದಾಗಿ ಕುಶಲಕರ್ಮಿ ಮತ್ತು ಪ್ರದರ್ಶಕ ಕಲೆಗಳನ್ನು ಅವಲಂಬಿಸಿದ್ದ ಸಮುದಾಯಗಳ ಆರ್ಥಿಕ ಸ್ಥಿತಿಗತಿಗಳನ್ನು ಇಂಡಿಯಾದ ಪಾರಂಪರಿಕ ಸಮಾಜದ ನಿಯಮಗಳ ಆಚೆಗಿಟ್ಟು ನೋಡಾಲಾಗುವುದಿಲ್ಲ. “ಈ ಸಮುದಾಯಗಳು ಹಳ್ಳಿಗಳಿಗೆ ಸಲ್ಲಿಸುತ್ತಿದ್ದ ಸೇವೆಯನ್ನು ಭೂಮಾಲಿ ವರ್ಗವುಗುತ್ತಿಗೆ ಆಳಿನ ಸೇವೆಯನ್ನು ಪಡೆದಂತೆಯೇ ಪಡೆಯುತ್ತಿತ್ತು”[9] ಸೇವೆಯನ್ನು ಪಡದುಕೊಳ್ಳುವುದಕ್ಕೆ ಪ್ರತಿಯಾಗಿ ನಿಯಮಬದ್ಧ ದಾನಗಳನ್ನು ಮಾತ್ರ ಪಡೆಯಲು ಈ ಸಮುದಾಯಗಳಿಗೆ ಸಾಧ್ಯವಿತ್ತು. ಶ್ರೇಣೀಕರನಾದ ಕೊನೆಯಲ್ಲಿರುವ ಜನ ಮೇಲ್ಜಾತಿಗಳ ಸೇವೆಯನ್ನು ಮಾಡಲೆಂದೇ ಹುಟ್ಟಿದ್ದಾರೆ ಎಂದು ಹೇಳುವ ಹಿಂದೂ ಕರ್ಮಸಿದ್ದಾಂತಕ್ಕೆ ಮೇಲಿನ ನಿಯಮ ಪೂರಕವಾಗಿಯೇ ಇದೆ. ಮಧ್ಯಕಾಲೀನ ಭೂಮಾಲಿಕ ವ್ಯೆವಸ್ಥೆ ತನ್ನನ್ನು ಸಮರ್ಥಿಸಿಕೊಳ್ಳಲು ಪರಂಪರೆಯಲ್ಲಿನ ಪುರಾವೆಗಳನ್ನೇ ಬಳಸಿಕೊಂಡಿತ್ತು. ಆದ್ದರಿಂದ “ಜಾತಿ ವ್ಯವಸ್ಥೆಯನ್ನು ಬದಿಗಿಟ್ಟು ಭೂಮಾಲಿಕ ವ್ಯವಸ್ಥೆಯನ್ನು ನೋಡಲು ಸಾಧ್ಯವಿಲ್ಲ. ಭೂಮಾಲಿಕತ್ವವು ಭಾರತದ ಶ್ರೇಣೀಕರಣದ ಅವಿಭಾಜ್ಯ ಅಂಗ”[10] ಈ ಕಾರಣಕ್ಕಾಗಿ ಸೇವೆಯನ್ನು ಒದಗಿಸುವ ಈ ಸಮುದಾಯಗಳು ಆರ್ಥಿಕವಾಗಿ ಪರಾವಲಂಬಿಗಳಾಗುವ ಅನಿವಾರ್ಯತೆಯನ್ನು ಭೂಮಾಲಿಕ ಪ್ರಧಾನ ಸಮಾಜ ಸೃಷ್ಟಿಸಿಬಿಟ್ಟಿತ್ತು.

ಮಧ್ಯಕಾಲೀನ ಭಕ್ತಿ ಚಳುವಳಿಗಳು ಮತ್ತು ಸಮಾಜ ಸುಧಾರಕ ಪಂಥಗಳು ಈ ಬಗೆಯ ಸಮುದಾಯಗಳ ಸಬಲೀಕರಣಕ್ಕೆ ಯತ್ನಿಸಿದವಾದರೂ, ಅಂತಹ ದೊಡ್ಡ ಯಶಸ್ಸನ್ನು ಅವು ಕಾಣಲಾಗಲಿಲ್ಲ. ಕಾರಣ ಈ ಚಳುವಳಿಗಳಿಗೆ ಸ್ಪಷ್ಟ ರಾಜಕೀಯ ಸಿದ್ಧಾಂತದ ತಳಹದಿಯ ಕೊರತೆ ಇತ್ತು. ಕೆಳಜಾತಿ ಸಮುದಾಯಗಳ ಬಡತನವನ್ನೇ ಅವು ವೈಭವೀಕರಿಸಿ, ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸಿದವು. ಆದರೆ ಸಾಮಾಜಿಕ ಸ್ಥಾನಮಾನಗಳನ್ನು ಉನ್ನತೀಕರಿಸುವ ಆರ್ಥಿಕತೆಯ ಕುರಿತು ಈ ಚಳುವಳಿಗಳು ಅಷ್ಟಾಗಿ ಗಮನಹರಿಸಲಿಲ್ಲ. ಇದ್ದ ವ್ಯವಸ್ಥೆಯಲ್ಲಿಯೇ ಸುಧಾರಣೆ ತರುವುದು ಈ ಚಳುವಳಿಗಳ ಮುಖ್ಯ ಉದ್ದೇಶವಾಗಿತ್ತು. ಈ ಚಳುವಳಿಗಳು “ಸಾಮಾಜಿಕ ಅಸಮಾನತೆಯನ್ನು ಖಂಡಿಸಿದಂತೆ ಆರ್ಥಿಕ ಅಸಮಾನತೆಯನ್ನು ಖಮಡಿಸಲಿಲ್ಲ. ಟೀಕೆ ಆಕ್ರೋಶ, ಕ್ರೋಧಗಳಿಗೆ ಬ್ರಾಹ್ಮಣ ಗುರಿಯಾದಂತೆ ವೈಶ್ಯನೋ ಬಣಜಿಗಣೋ ಅಧಿಕಾರಿಯೋ ರಾಜನೋ ಗುರಿಯಾಗಲಿಲ್ಲ. ಅದಕ್ಕೆ ಅಂದಿನ ಚಳುವಳಿಯ ಚೌಕಟ್ಟಿನ ಮಿತಿ ಕಾರಣ”[11] ಇದರಿಂದಾಗಿ ಕೆಳಜಾತಿ ಮತ್ತು ಕರಕುಶಲಕರ್ಮಿ ಸಮುದಾಯಗಳಿಗೆ ಒಂದು ಬಗೆಯಲ್ಲಿ ಆತ್ಮಪ್ರತ್ಯಯವನ್ನು ತರುವ ಪ್ರಯತ್ನ ಈ ಚಳುವಳಿಗಳಿಂದ ನಡೆಯಿತೇ ಹೊರತು, ಆರ್ಥಿಕ ಸಮಾನತೆಯನ್ನು ತರುವುದು ಈ ಚಳುವಳಿಗಳ ಉದ್ದೇಶವಾಗಿರಲಿಲ್ಲ. ಆರ್ಥಿಕ ಸಮಾನತೆಯು ಸಂಘರ್ಷದಿಂದ ಲಭಿಸುತ್ತದೆ. ಆದರೆ ಭಕ್ತಿ ಚಳುವಳಿಗಳು ಅತ್ಯಂತ ಸಾತ್ವಿಕ ನೆಲೆಯಲ್ಲಿ ಸಮಾಜ ಸುಧಾರಣೆಗೆ ಪ್ರತಯತ್ನಿಸಿದವು. ಇದರಿಂದಾಗಿ ಮಧ್ಯಕಾಲದಲ್ಲಿ ಕೆಳಜಾತಿಗಳು ಮತ್ತು ಆರ್ಥಿಕವಾಗಿ ಭೂಮಾಲಿಕತ್ವವನ್ನು ಅವಲಂಬಿಸಿದ್ದ ಸಮುದಾಯಗಳು “ತಮ್ಮ ಪಾರಂಪರಿಕ ಉದ್ಯೋಗಗಳನ್ನು ಕೈಬಿಡಲು ಅವರಿಗೆ ಆ ದಿನಗಳಲ್ಲಿ ಅವಕಾಶವಿರಲಿಲ್ಲ”[12] ಹೀಗಾಗಿ ಮಧ್ಯಕಾಲೀನ ಭಾರತದಲ್ಲಿ ಇಂತಹ ಸಮುದಾಯಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಸಾಧ್ಯತೆಗಳಿರಲಿಲ್ಲ. ಒಂದೆಡೆ ಹುಟ್ಟಿನ ಕಾರಣಕ್ಕಾಗಿ ಹೇರಲ್ಪಟ್ಟ ಕೆಳಜಾತಿಯ ಸ್ಥಾನಮಾನ ಮತ್ತು ಅದೇ ಕಾರಣಕ್ಕೆ ಅವಲಂಬಿಸಿದ ವೃತ್ತಿಯಿಂದಾಗಿ ಪ್ರಾಪ್ತವಾಗಿದ್ದ ಆರ್ಥಿಕ ಪರಾವಲಂಬಿತನಗಳು ಈ ಸಮುದಾಯಗಳಿಗೆ ಸ್ಥಿರತೆಯನ್ನು ತುರವುದು ಸಾಧ್ಯವಿರಲಿಲ್ಲ.

“ವೃತ್ತಿಗಾಯಕರು ಮತ್ತು ಪ್ರದರ್ಶಕ ಕಲೆಗಳನ್ನು ಅವಲಂಬಿಸಿದ್ದ ಸಮುದಾಯಗಳು ಸಾಮಂತಶಾಹಿ ಮತ್ತು ರಾಜಶಾಹಿಯನ್ನು ಮತ್ತು ರಾಜಶಾಹಿಯನ್ನು ಅವಲಂಬಿಸಿಯೇ ಬದುಕಬೇಕಿತ್ತು. ಅವರ ದತ್ತಿ ದಾನಗಳನ್ನು ಸದಾ ನಿರೀಕ್ಷಿಸುತ್ತಲೇ ಇರಬೇಕಿತ್ತು. ಶ್ರೀಮಂತರು, ಭೂಮಾಲಿಕರು ಕೆಲವು ವಿಶೇಷ ಸಂದರ್ಭಗಳಲ್ಲಿ ಈ ಕಲಾವಿದರನ್ನು ಕರೆಸಿ ಹಾಡಿಸಿ ಕುಣಿಸಿ ಆನಂದಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಕಾಣಿಕೆಗಳನ್ನು ಕೊಡುತ್ತಿದ್ದರು. ಜೊತೆಗೆ ಹಳ್ಳಿಗರು ‘ಆಯ’ ಕೊಟ್ಟು ಇವರನನ್ನು ಪೋಷಿಸುತ್ತಿದ್ದರು. ಇಂತಹ ಅವಕಾಶಗಳನ್ನು ಈ ಸಮುದಾಯಗಳು ಎದುರು ನೋಡುತ್ತಾ ಬದುಕಬೇಕಿತ್ತು. ವೃತ್ತಿ ಸಂಗೀತಗಾರರು, ವೇಷಗಾರರು, ಕಸರತ್ತುಗಳನ್ನು ಮಾಡುವರು, ಡೊಂಬರಾಟದವರು ತಮ್ಮ ಸುತ್ತಲ ಜನಸಮುದಾಯಗಳನ್ನು ರಂಜಿಸುತ್ತಲೇ ಬದುಕಿ ಬಂದರು. ಅವರಿಗೆ ರಾಜ ಇಲ್ಲವೆ ಭೂಮಾಲಿಕರಿಂದ ಊಳಿಗ ಮತ್ತು ದತ್ತಿಗಳು ಅಲ್ಪಸ್ವಲ್ಪವಾದರೂ ದಕ್ಕುತ್ತಿದ್ದವು. ಆದರೆ ಯಾವತ್ತು ಭೂಮಿ ಮುಖ್ಯ ಆರ್ಥಿಕ ಮೂಲವಾಗಿ ಪರಿಗಣಿತವಾಯಿತೋ ಅಂದಿನಿಂದ ಈ ಅವಲಂಬಿತ ‘ಅನುತ್ಪಾದಕ’ ಸಮುದಾಯಗಳೂ ಆರ್ಥಿಕವಾಗಿ ಕುಸಿದು ಹೋದವು. ನಿಶ್ಚಿತ ಆರ್ಥಿಕಮೂಲಗಳನ್ನು ಹುಡುಕಿಕೊಂಡು ಹೋಗುವುದು ಈ ಸಮುದಾಯಗಳಿಗೆ ಅನಿವಾರ್ಯವೂ ಆಯಿತು”[13] ಈ ಕಾರಣದಿಂದಾಗಿ ಇಂಡಿಯಾದ ಮಧ್ಯಕಾಲೀನ ಚರಿತ್ರೆಯುದ್ದಕ್ಕೂ ಅಲೆಮಾರಿಗಳು ಆರ್ಥಿಕವಾಗಿ ಪರಾವಲಂಬಿಗಳಾಗಿಯೂ ಮತ್ತು ಸಮಾಜದ ಒಟ್ಟು ಉತ್ಪಾದನಾ ವ್ಯವಸ್ಥೆಯಲ್ಲಿ ‘ಅನುತ್ಪಾದಕ’ ಗುಂಪುಗಳಾಗಿಯೂ ಬದುಕಿ ಬಂದವು. ಇವರ ಪಾರಂಪರಿಕ ವೃತ್ತಿಗಳು ಆಳುವ ವರ್ಗವನ್ನು ಆರ್ಥಿಕವಾಗಿ ಅವಲಂಬಿಸಲೇಬೇಕಿತ್ತು. ಆಳುವ ವರ್ಗಗಳ ದತ್ತು, ದಾನಗಳನ್ನ ಊಳಿಗವನ್ನು ನಿರೀಕ್ಷಿಸಲೇಬೇಕಿತ್ತು. ಈ ಕಾರಣದಿಂದಾಗಿ ಮಧ್ಯಕಾಲೀನ ಭಾರತದ ಕಾಲಘಟ್ಟದಲ್ಲಿ ಕರಕುಶಲ ಕರ್ಮಿಗಳು ಮತ್ತು ಪ್ರದರ್ಶಕ ಕಲೆಗಳನ್ನು ನಂಬಿದ್ದ ಸಮುದಾಯಗಳು ನಿಶ್ಚಿತ ಆರ್ಥಿಕ ಮೂಲಗಳನ್ನು ಹುಡುಕಿಕೊಂಡು ವಲಸೆ ಹೋಗುವುದು ಅನಿವಾರ್ಯವಾಯಿತು. ಏಕೆಂದರೆ ಅಲೆಮಾರಿಗಳೆಂದು ನಾವು ಈಗ ಪಟ್ಟಿ ಮಾಡಿರುವ ಸಮುದಾಯಗಳು ಆಳುವ ವರ್ಗದ ಕೆಲವು ಅನಿಶ್ಚಿತ ಆರ್ಥಿಕ ಕೊಡುಗೆಗಳನ್ನೇ ನಂಬಿಕೊಂಡು ಬಂದಿರುವುದನ್ನು ನಾವೀಗಾಗಲೇ ನೋಡಿದ್ದೇವೆ. ರಾಜರ ದತ್ತಿಗಳನ್ನು ಇನಾಮು ಭೂಮಿಗಳನ್ನು ನಂಬಿಕೊಂಡು ಬಂದ ಈ ಸಮುದಾಯಗಳ ಪಾರಂಪರಿಕ ಹಕ್ಕುಗಳನ್ನು ಇಲ್ಲವಾಗಿಸಿದವು. ಈ ಕುರಿತು ಖ್ಯಾತ ಇತಿಹಾಸಕಾರರಾದ ಇರ್ಫಾನ್ ಹಬೀಬರ ಮತ್ತು ರಷ್ಯಾದ ಲೇಖಕ ಮಿದವೊಯ್‌ರವರ ಬರಹಗಳನ್ನು ಪರಿಶೀಲಿಸಬಹುದಾಗಿದೆ. “ಮಧ್ಯಕಾಲೀನ ಮೊಘಲ್ ಆಳ್ವಿಕೆಯ ಸಂದರ್ಭದಲ್ಲಿ ವಿಶೇಷವಾಗಿ ಉತ್ತರ ಬಾರತದಲ್ಲಿ ಕೃಷಿ, ಒಟ್ಟು ರಾಜ್ಯದ ರಾಜ್ಯಾದಾಯವನ್ನು ನಿರ್ಣಯಿಸುವ ಉದ್ಯಮವಾಗತೊಡಗಿದ ಮೇಲೆ, ಕೃಷಿಗೆ ವಿಶೇಷ ಮಹತ್ವ ಒದಗತೊಡಗಿತು. ಅಲ್ಲದೆ ಹೆಚ್ಚಿನ ಭೂಮಿ ಕೃಷಿಗೆ ಒಳಪಟ್ಟಿತು.”[14] ಅಲ್ಲದೇ ಕೃಷಿ ಭೂಮಿಗೆ ಸಂಬಂಧಿಸಿದ ಮತ್ತು ಭೂಕಂದಾಯಕ್ಕೆ ಸಂಬಂಧಿಸಿದ ಕಾನೂನುಗಳು ರೂಪಗೊಂಡವು. ಮೊಘಲರ ಜಮೀನ್ದಾರಿ ಪದ್ಧತಿ ಮೊದಲ ಬಾರಿಗೆ ಭೂಮಿಯನ್ನು ಖಾಸಗಿ ಆಸ್ತಿಯನ್ನಾಗಿ ಪರಿಗಣಿಸಿತು. ರೈತರು ಕೇವಲ ಗೇಣಿದಾರರಾದರು. ಇನಾಮು ಭೂಮಿಗಳು ಜಮೀನ್ದಾರರ ವಶವಾದವು. ಏಕೆಂದರೆ ಯಾವ ಸಮುದಾಯಗಳು ಕಂದಾಯ ಪಾವತಿಸಲು ವಿಫಲವಾಗುತ್ತಿದ್ದವೋ ಆ ಸಮುದಾಯಗಳ ಜಮೀನುಗಳನ್ನು ಜಮೀನ್ದಾರರು ವಶಪಡಿಸಿಕೊಳ್ಳುತ್ತಿದ್ದರು. ಹೀಗೆ ವಶಪಡಿಸಿಕೊಂಡ ಜಮೀನುಗಳು, ಬಹುತೇಕ ಕುಶಲಕರ್ಮಿಗಳು ಮತ್ತು ಪ್ರದರ್ಶಕ ಕಲೆಗಳನ್ನು ನಂಬಿಕೊಂಡು ಬಂದ್ದ ಸಮುದಾಯಗಳು ವಂಶಪಾರಂಪರ್ಯವಾಗಿ ರಾಜರುಗಳಿಂದ ಪಡದ ಇನಮು ಜಮೀನುಗಳೇ ಆಗಿದ್ದವು. ಈ ಬಗೆಯಲ್ಲಿ ಕುಶಲಕರ್ಮಿ ಮುಂತಾದ ಕೃಷಿಯೇತರ ಸಮುದಾಯಗಳಿಗೆ ಭೂಮಿಯನ್ನು ಕಲವು ನಿಯಮಗಳ ಕೊಡಲಾಗುತ್ತಿತ್ತು. ಮಧ್ಯಕಾಲೀನ ದಕ್ಷಿಣ ಭಾರತದ ವ್ಯವಸಾಯ ಸಂರಚನೆಯ ವಿಶೇಷ ಅಧ್ಯಯನ ಮಾಡಿರುವ ಹಿರೋಷಿ ಫಕಜವಾ ಮೂರು ತರಹದ ಭೂಹಿಡುವಳಿಯನ್ನು ಉಲ್ಲೇಖಿಸುತ್ತಾನೆ. ‘ಮಿರಾಸಿಗಳೂ’, ಅಂದರೆ ಶಾಸ್ವತವಾಗಿ ಭೂಒಡೆತನವನ್ನು ವಂಶ ಪಾರಂಪರ್ಯವಾಗಿ ಹೊಂದಿದವರು. ‘ಉಪೇರರು’ ಅಂದರೆ ರೈತರು. ಇವರು ಸರಕಾರದಿಂದ ಭೂಮಿಯನ್ನು ಕೃಷಿಗಾಗಿ ಪಡೆದುಕೊಂಡು ನಿಶ್ಚಿತ ಕಂದಾಯವನ್ನು ಕಟ್ಟುವ ಸಾಮಾನ್ಯ ರೈತರು. ಮೂರನೆಯ ಗುಂಪಿನವರು ಇನಾಮ್‌ದಾರರು. ಇವರು ತೆರಿಗೆ ರಹಿತ ಮತ್ತು ಕೆಲವು ಸಲ ಅಲ್ಪ ತೆರಿಗೆ ಕಟ್ಟುವುದರ ಮೂಲಕ ಕೃಷಿ ಭೂಮಿಯನ್ನು ಸರಕಾರದಿಂದ ಪಡೆದವರು. ಇವರಿಗೂ ಕೃಷಿ ಜಮೀಣು ಅನುವಂಶಿಕವಾಗಿಯೇ ಇರುತ್ತದೆ.[15] ಆದರೆ ಈ ಬಗೆಯ ಅನುವಂಶಿಕ ಒಡೆತನಕ್ಕೆ ಅನೇಕ ನಿಯಮಗಳಿರುವುದನ್ನು ಹಿರೋಷಿ ದಾಖಲಿಸುತ್ತಾರೆ. ಈ ‘ಇನಾಮು’ದಾರರು ಸಾಮಾನ್ಯವಾಗಿ ಕರಕುಶಲ ಮತ್ತು ಪ್ರದರ್ಶಕ ಕಲೆಗಳನ್ನೇ ಅವಲಂಬಿಸಿದವರು. ಇವರು ಕೆಲವು ಸಲ ವಲಸೆ ಹೋಗುವುದು ಸಾಮಾನ್ಯ. ಇಂತಹ ಸಮುದಾಯಗಳು ದೀರ್ಘಕಾಲದವರೆಗೆ ಕಣ್ಮರೆಯಾಗುವ ಸಂದರ್ಭಗಳು ಒದಗುತ್ತವೆ. ಹಿರೋಷಿ ಇಂತಹ ಸಮುದಾಯಗಳನ್ನು ಕಣ್ಮರೆಯಾದ ಸಮುದಾಯ (Extinct Families) ಎಂದು ಕರೆಯುತ್ತಾನೆ. “ಹೀಗೆ ವಂಶ ಪಾರಂಪರ್ಯ ಒಡೆತನವಿರುವ ಭೂಮಿಯನ್ನು ಅನುಭವಿಸುವ ಕುಟುಂಬ ಕಣ್ಮರೆಯಾದರೆ, ದೀರ್ಘಕಾಲದವರೆಗೆ ಕಾಣೆಯಾದೆ ಆ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಮತ್ತು ಅದನ್ನು ತನ್ನ ಖಾಸಗಿ ಆಸ್ತಿಯನ್ನಾಗಿಸಿಕೊಳ್ಳುವ ಅಧಿಕಾರವನ್ನು ಊರ ಪಟೇಲನಿಗೆ ಅಥವಾ ಗ್ರಾಮದ ಮುಖ್ಯಸ್ಥನಿಗೆ ಕೊಡ ಮಾಡಲ್ಪಟ್ಟಿರುತ್ತದೆ. ಅಲ್ಲದೆ ಗ್ರಾಮದ ಬಂಜರು, ಇಲ್ಲವೆ ಕೃಷಿಯೇತರ ಭೂಮಿಯನ್ನೂ ಸಹ ಪಟೇಲನ ಗ್ರಾಮಾಧಿಕಾರದ ವ್ಯಾಪ್ತಿಗೆ ಅಂದಿನ ಸರಕಾರ ಒಳಪಡಿಸಿತ್ತು.”[16] ಈ ಎಲ್ಲ ಕಾರಣಗಳಿಂದಾಗಿ ಕೃಷಿಯೇತರ ಸಮುದಾಯಗಳಿಗೆ ಇನಾಮಾಗಿ ಬರುತ್ತಿದ್ದ ಕೃಷಿ ಜಮೀನಿನ ಮೇಲೆ ಯಾವ ನ್ಯಾಯಬದ್ದ ಅಧಿಕಾರಗಳಿರುತ್ತಿರಲಿಲ್ಲ. ಅದರಲ್ಲೂ ಕಂಪನಿ ಆಡಳಿತದ ಸಂದರ್ಭದಲ್ಲಿ ಕೃಷಿ ಸಂಬಂಧಗಳು ಇನ್ನೂ ನಿಯಮಕ್ಕೊಳಪಟ್ಟ ಮೇಲೆ ಮೊದಲ ಬಾರಿಗೆ ಈ ಸಮುದಾಯಗಳ ನಿಶ್ಚಿತ ಆದಾಯದ ಮೇಲೆ ಹೊಡೆತ ಬಿದ್ದಿತು. ಅವರ ಪಾಲಿಗೆ ತಮ್ಮ ಪಾರಂಪರಿಕ ವೃತ್ತಿ ಮಾತ್ರ ಆದಾಯದ ಮೇಲೆ ಹೊಡೆತ ಬಿದ್ದಿತು. ಅವರ ಪಾಲಿಗೆ ತಮ್ಮ ಪಾರಂಪರಿಕ ವೃತ್ತಿ ಮಾತ್ರ ಉಳಿಯಿತು. ಆ ಪಾರಂಪರಿಕ ವೃತ್ತಿಗಳನ್ನು ಸದರಿ ಸಮುದಾಯಗಳು ಅವಲಂಬಿಸಲೇ ಬೇಕಾಯ್ತು. ಆದ್ದರಿಂದ ಅಲೆಮಾರಿಗಳಾಗದೆ ಇವರು ಯಾವ ಸಾಧ್ಯತೆಗಳೂ ಇವರಿಗಿರಲಿಲ್ಲ.

ಇನ್ನು ಮೊಘಲ್ ಆಳ್ವಿಕೆಯ ನಂತರದ ವಸಾಹತುಶಾಹಿ ಕಾಲಘಟ್ಟದಲ್ಲಿ ಭೂಮಿ ಮತ್ತು ಭೂಕಂದಾಯಕ್ಕೆ ಸಂಬಂಧಿಸಿದ ಕಾಯ್ದೆಗಳು ಇನ್ನೂ ಕಠಿಣಗೊಂಡವು. ಏಕೆಂದರೆ ಬ್ರಿಟಿಷರು ಭಾರತದ ನೈಸರ್ಗಿಕ ವೈವಿಧ್ಯತೆಯನ್ನು ಕೊಳ್ಳೆ ಹೊಡೆಯಲೆಂದೇ ಇಲ್ಲಿಗೆ ಬಂದವರಾದ್ದರಿಂದ, ಆದಿವಾಸಿಗಳ ಮತ್ತು ಕೃಷಿಯೇತರ ಸಮುದಾಯಗಳ ಜಮೀನುಗಳನ್ನು ಹಿಂಸಾತ್ಮಕವಾಗಿಯೇ ವಶಪಡಿಸಿಕೊಂಡರು. ಮೊಘಲರ ಭೂಕಾಯ್ದೆಗೆ ೧೭೯೩ರಲ್ಲಿ ವಾರನ ಹೇಸ್ಟಿಂಗ್ಸ್ ಹಲವು ತಿದ್ದಪಡಿಗಳನ್ನು ಮಾಡಿ ಜಾರಿಗೆ ತರುತ್ತಾನೆ. ವಸಾಹತುಶಾಹಿ ಕಾಲಘಟ್ಟದ ಭಾರತದ ಆರ್ಥಿಕ ಸ್ಥಿತಿಗತಿಗಳನ್ನು ವಿಶೇಷವಾಗಿ ಅಧ್ಯಯನ ಮಾಡಿರುವ ರಷ್ಯನ ಲೇಖಕ ಎ. ಐ. ಮಿದವೋಯ್ ಅವರು ಹೀಗೆ ವಿವರಿಸುತ್ತಾರೆ.

 

[1] Mishra P K, The Study of Nomads, p 160, 1970

[2] ಪರಮಶಿವಯ್ಯಜೀಶಂ, ದಕ್ಷಿಣಕರ್ನಾಟಕದಜನಪದಕಾವ್ಯಪ್ರಕಾರಗಳು, ಪು.೨೬೫, ೧೯೭೯

[3] ಜ್ಯೋತಿಹೊಸೂರು, ಜಾತಿಗಾರರಜಾತಕ, ಪು. ೧೦೦೧೧, ೧೯೮೫

[4] Saki, Making History, Karnataka’s people and their past, Vol – 1, p 173, 1998

[5] Andre Wink, Land and Souereignty in India, Agrarian Socie p 214 – 215, 1996

[6] Irfan habib, The Agrarian System of Mughal India 1556 – 1707, p 157 – 158, 1999

[7] ಚಿದಾನಂದಮೂರ್ತಿ, ಮಧ್ಯಕಾಲೀನಕನ್ನಡಸಾಹಿತ್ಯಮತ್ತುಅಸ್ಪೃಶ್ಯತೆ, ಪು೫೬ – ೫೭. ೧೯೮೫

[8] Irfan Habib, The Agrarian System of Mughal India 1556 – 1707, p 156, 1999

[9] Saki, Making History, Karnataka’s people and their past, Vol – 1, p 175, 1998

[10] Ibid, p 175

[11] ಚಿದಾನಂದಮೂರ್ತಿ, ಮಧ್ಯಕಾಲೀನಕನ್ನಡಸಾಹಿತ್ಯಮತ್ತುಅಸ್ಪೃಶ್ಯತೆ, ಪು – ೧೦೯ – ೧೯೮೫

[12] ಅದೇ – ಪು. ೧೪೩.

[13] Stephen Fuchs, At the Bottom of Indian Society, P 127, 1981

[14] Irfan Habib, Essays on Indian History, p92, 1995

[15] Hiroshi Fukazawa, The Medieval Deccan, Peasants, Social Systems and States, Sixteenth to Eighteenth centuries, p 153, 1998

[16] Ibid, p 154