“೧೭೯೩ರಲ್ಲಿ ಜಾರಿಗೆಬಂದ ‘ಶಾಶ್ವತ ಜಮೀನ್ದಾರಿ’ ಶಾಸನವು ಕಟ್ಟುನಿಟ್ಟಾಗಿ ಜಾರಿಗೆ ಬಂದದ್ದು ಉತ್ತರ ಭಾರತದಲ್ಲಿ. ಈ ಶಾಸನದಿಂದಾಗಿ, ಇನಾಮು ಭೂಮಿಗಳನ್ನು ಪಡೆದು, ಅನುವಂಶಿಕವಾಗಿ ಅದರ ಒಡೆತನವನ್ನು ಹೊಂದಿದ್ದ ಪ್ರದರ್ಶಕ ಕಲೆ ಮತ್ತು ಕರಕುಶಲ ಕಲೆಗಳನ್ನು ಅವಲಂಬಿಸಿದ್ದ ಸಮುದಾಯಗಳ ಜಮೀನುಗಳು ಶಾಶ್ವತವಾಗಿ ಜಮೀನ್ದಾರರ ಮತ್ತು ಕಂದಾಯ ವಸೂಲಿದಾರರ ವಶವಾದವು. ಬ್ರಿಟೀಷರು ತಮ್ಮ ಕಂಪನಿಗೆ ಬರಬೇಕಿದ್ದ ಭೂಕಂದಾಯವನ್ನು ನಿರಾಯಾಸವಾಗಿ ಖಜಾನೆಗೆ ತುಂಬಿಕೊಳ್ಳುವ ನಿಟ್ಟಿನಿಲ್ಲಿ ತಂದ ಅಪ್ಪಟ ಊಳಿಗಮಾನ್ಯ ಗುಣವುಳ್ಳ ಭೂಕಾಯ್ದೆ ಇದು. ಇದರಿಂದಾಗಿ ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಓರಿಸ್ಸಾ ಮತ್ತು ಅಂಧ್ರಪ್ರದೇಶದಿಂದ ಅನೇಕ ಸಮುದಾಯಗಳು ದಕ್ಷಿಣಕ್ಕೆ ವಲಸೆ ಬರಬೇಕಾಯ್ತು. ಅಲ್ಲದೆ ಉತ್ತರ ಭಾರತವನ್ನು ದಿಢೀರನೆ ಲಗ್ಗೆ ಹಾಕಿದ ಕೈಗಾರಿಕೆಗಳಿಂದಾಗಿ ಗುಡಿಕೈಗಾರಿಕೆಗಳನ್ನು ನಂಬಿದ್ದ ಸಮುದಾಯಗಳು ವಲಸೆ ಅನಿವಾರ್ಯವೂ ಆಗಿತ್ತು.”[1] ಇದಕ್ಕೆ ಪೂರಕವಾಗಿ ಇರ್ಫಾನ್ ಹಬೀಬ್ ಅವರು “೧೮೨೦ ರಿಂದ ೧೮೫೦ರ ನಡುವೆ ಉತ್ತರ ಭಾರತದ ವಾಯುವ್ಯ ಮತ್ತು ಪಶ್ಚಿಮ ರಾಜ್ಯಗಳಲ್ಲಿ ವಿಶೇಷವಾಗಿ ಭೂಕಂದಾಯ ಅತಿ ಹೆಚ್ಚಿನ ಪ್ರಮಾಣದ್ದಾಗಿತ್ತು”[2] ಎನ್ನುತ್ತಾರೆ. ವಾಣಿಜ್ಯ ಬೆಳೆಗಳನ್ನು ಬೆಳೆಯುವ ಬ್ರಿಟಿಷರ ದುರಾಸೆಗೆ ಎಲ್ಲ ದುರ್ಬಲ ವರ್ಗಗಳ ಜಮೀನುಗಳು ವಶವಾಗಿ ಹೋದವು. ಹೀಗೆ ಮಧ್ಯ ಮತ್ತು ಉತ್ತರ ಭಾರತದ ವ್ಯವಸಾಯೀ ಸಂರಚನೆಯಲ್ಲಾದ ಬದಲಾವಣೆಗಳು ಅವಲಂಬಿತ ಸಮುದಾಯಗಳನ್ನು ತೊಂದರೆಗೀಡು ಮಾಡಿದವು. ದತ್ತಿ ಇನಾಮು ಮತ್ತು ಊಳಿಗಗಳು ನಿಂತುಹೋದ ಮೇಲೆ, ಮೊಘಲ್ ಆಡಳಿತ ಅಷ್ಟು ಪ್ರಬಲವಾಗಿಲ್ಲದಿದ್ದ ದಕ್ಷಿಣಭಾರತಕ್ಕೆ ಈ ಸಮುದಾಯಗಳು ವಲಸೆ ಬರುವುದು ಅನಿವಾರ್ಯವಾಯಿತು. ಈವತ್ತು ಕರ್ನಾಟಕ ದಲ್ಲಿರುವ ಬಹುತೇಕ ಅಲೆಮಾರಿಗಳೂ ಮಹಾರಾಷ್ಟ್ರ, ಓರಿಸ್ಸಾ, ಅಸ್ಸಾಂ, ಬಂಗಾಳ, ಗುಜರಾತ್, ರಾಜಸ್ಥಾನ ಮತ್ತು ಆಂದ್ರಪ್ರದೇಶದ ಉತ್ತರಭಾಗದಿಂದ ವಲಸೆ ಬಂದಿರುವುದಾಗಿ ಹೇಳಿಕೊಳ್ಳುತ್ತಾರೆ. ಇದಕ್ಕೆ ಮುಖ್ಯ ಕಾರಣ ವ್ಯವಸಾಯೀ ಸಂಬಂಧಗಳು ಮೊಘಲ್ ಮತ್ತು ಕಂಪನಿ ಆಡಳಿತದ ಸಂದರ್ಭದಲ್ಲಿ ಹೆಚ್ಚು ಸಂಕೀರ್ಣಗೊಂಡದ್ದು. “ಆಧುನಿಕ ಭೂಮಾಲಿಕತ್ವದಿಂದ ಕೃಷಿಯು ಹೆಚ್ಚು ವಾಣಿಜ್ಯೀಕೃತಗೊಂಡಿತು. ಭೂಮಿಯಿಂದ ಅಧಿಕ ಲಾಭ ಬರಲಾರಂಭಿಸಿದ ಮೇಲೆ, ಭೂವಿಯ ಮೇಲಿನ ಒಡೆತನದ ಕುರಿತ ನಿಯಮಗಳೂ ನಿಖರವಾದವು. ಕಂಪನಿ ಆಡಳಿತದ ಅವಧಿಯಲ್ಲಿ ಕೃಷಿ ಹೆಚ್ಚು ವಾಣಿಜ್ಯೀಕರಣಗೊಂಡ ಮೇಲೆ ಚಿಕ್ಕ ರೈತರೆಲ್ಲ ಭೂಮಿಯನ್ನು ಕಳೆದುಕೊಂಡು. ೧೯ನೇ ಶತಮಾನದ ಹೊತ್ತಿಗೆ ಭೂಮಾಲಿಕರು ಮತ್ತು ಭೂರಹಿತರು ಎಂಬ ಪ್ರಬಲ ವರ್ಗಗಳು ಬೆಳದು ನಿಂತವು”[3] ಈ ಹಂತದಲ್ಲಿಯೇ ಭಾರತದಲ್ಲಿ ಆದಿವಾಸಿಗಳ ಭೂಹೋರಾಟಗಳು ಪ್ರಾರಂಭವಾದವು. ಭೂಮಿಯನ್ನು ಕಳೆದುಕೊಂಡ ಅನೇಕ ಆದಿವಾಸಿಗಳು ಮತ್ತು ಕೆಳಜಾತಿಗಳೂ ಕಂಪನಿ ಆಡಳಿತದ ವಿರುದ್ಧ ಬಂಡೆದ್ದರು. ಇದೇ ಹೊತ್ತಿಗೆ ಉತ್ತರ ಭಾರತದಲ್ಲಿ ಮೊದಲ ಬಾರಿಗೆ ಒಂದು ಮಾರಾಣಾಂತಿಕ ಕಾಯ್ದೆಯನ್ನು ತರಲಾಯಿತು. ಅದು ೧೮೭೧ರ Criminal Tribal Act. ಈ ಅಪರಾಧಿ ಬುಡಕಟ್ಟುಗಳ ಕಾಯ್ದೆಯಡಿ ಬಂದ ಸಮುದಾಯಗಳನ್ನು ಜಿ.ಎನ್. ದೇವಿ ಹೀಗೆ ಪಟ್ಟಿ ಮಾಡಿದ್ದಾರೆ. “ಅಲೆಮಾರಿ ಗಾಯಕ ಪರಂಪರೆಯ ಸಮುದಾಯಗಳೂ, ಫಕ್ಕೀರರು, ಚಿಕ್ಕ ವರ್ತಕರು, ಪ್ರದರ್ಶನ ಕಲೆಗಳನ್ನು ಅವಲಂಬಿಸಿದ್ದ ಸಮುದಾಯಗಳು, ಸಾಮಾನು ಸರಂಜಾಮುಗಳನ್ನು ಸಾಗಿಸುತ್ತಿದ್ದವರನ್ನು ಈ ಅಪರಾಧಿ ಬುಡಕಟ್ಟುಗಳ ಕಾಯ್ದೆಯಡಿ ತರಲಾಯಿತು. ಈ ಕಾಯ್ದೆ ಮೊದಲ ಬಾರಿಗೆ ಜಾರಿಗೆ ಬಂದ್ದು ಉತ್ತರ ಭಾರತ, ಮಧ್ಯಭಾರತ ಮತ್ತು ವಾಯುವ್ಯ ಭಾರತದ ರಾಜ್ಯಗಳಲ್ಲಿ.”[4] ಕಾನೂನುಬದ್ಧ ಜಮೀನ್ದಾರಿ ಪದ್ಧತಿಯಿಂದಾಗಿ ಮತ್ತು ವಾಣಿಜ್ಯೀಕೃತ ಕೃಷಿ ಜಾರಿಗೆ ಬಂದ ಮೇಲೆ ಕರಕುಶಲ ಕರ್ಮಿಗಳು ಮತ್ತು ಪ್ರದರ್ಶಕ ಕಲೆಗಳನ್ನು ಅವಲಂಬಿಸಿದ್ದ ಸಮುದಾಯಗಳ ಆರ್ಥಿಕ ವ್ಯವಸ್ಥೆಯೇ ಕುಸಿದು ಬಿದ್ದಿತು. ಯಾವ ವರ್ಗವನ್ನು ತಾವು ಆರ್ಥಿಕವಾಗಿ ಅವಲಂಬಿಸಿದ್ದರೋ, ಆ ಆಳುವ ವರ್ಗ ಹೆಚ್ಚು ಅಮಾನವೀಯವೂ, ಯಾಂತ್ರಿಕವೂ ಆದ ಸಮಾಜವನ್ನು ರೂಪಿಸಲಾರಂಭಿಸಿದ ಮೇಲೆ ಈ ಸಮುದಾಯಗಳು ಬದುಕುಗಳ ದಿಕ್ಕೆಟ್ಟು ಹೋದವು. ಕೊಡುಕೊಳುವಿಕೆಯ ಮೇಲೆ ನಿಂತಿದ್ದ ಮತ್ತು ಹೆಚ್ಚು ಮಾನವೀಯವಾಗಿದ್ದ ಬಾರತದ ಪಾರಂಪರಿಕ ಕೃಷಿಯು ಬಂಡವಾಳಶಾಹಿ ಕೃಷಿಯಾಗಿ ಮಾರ್ಪಟ್ಟ ಮೇಲೆ, ಅದು ತನ್ನ ಪರಂಪರೆಯ ಗುಣಗಳನ್ನು ಕಳಚಿಕೊಂಡಿತು. ಬಂಡವಾಳಶಾಹಿ ಕೃಷಿಗೆ ಆಧಿಕ ಉತ್ಪಾದನೆ ಮತ್ತು ಅಧಿಕ ಲಾಭ ಮಾತ್ರ ಗುರಿಯಾಗಿತ್ತೇ ವಿನಹ, ಉಳಿದ ವಿಷಯಗಳು ಗೌಣವಾದವು. ಅಲ್ಲದೆ ಕೃಷಿಯಲ್ಲಿ ಯಂತ್ರಗಳನ್ನು ಬಳಸಲು ಪ್ರಾರಂಭಿಸಿದ ಮೇಲೆ ಕರಕುಶಲಕರ್ಮಿಗಳು, ವ್ಯವಸಾಯೀ ಸಂರಚನೆಯ ಪಾರಂಪರಿಕ ಸಂಬಂಧಗಳಿಂದ ಕಳಚಿಬಿದ್ದರು. ಅಲ್ಲದೆ ಮನರಂಜನೆಯ ಮಾಧ್ಯಮಗಳೂ ಹೆಚ್ಚು ತಾಂತ್ರೀಕೃತವಾದ ಮೇಲೆ ಪಾರಂಪರಿಕ ಮನರಂಜಕರು ಇಡಿಯಾಗಿ ತಮ್ಮ ರೂಢಿಗತ ಅವಲಂಬನೆಯಿಂದ ವಂಚಿತರಾದರು. ಈ ಹಂತದಲ್ಲಿ ಇಂತಹ ಸಮುದಾಯಗಳು ಅನಿವಾರ್ಯವಾಗಿ ಅಲೆಮಾರಿಗಳಾಗಿ ಪರಿವರ್ತನೆಗೊಂಡವು. ಅಲ್ಲದೆ ತಮ್ಮ ಪಾರಂಪರಿಕ ಅವಲಂಬನೆಯನ್ನು ನಾಶ ಮಾಡಿದ ಆಧುನಿಕ ವ್ಯವಸ್ಥೆಯ ಮೇಲೆ ಇವರು ಸಹಜವಾಗಿಯೇ ಕೋಪಗೊಂಡಿದ್ದರು, ಸಮಯ ಸಿಕ್ಕಾಗಲೆಲ್ಲ ಈ ದಿಕ್ಕೆಟ್ಟ ಸಮುದಾಯಗಳು ವ್ಯವಸ್ಥೆಯನ್ನು ಉಗ್ರವಾಗಿ ಪ್ರತಿಭಟಿಸಲಾರಂಭಿಸಿದವು. “ಉತ್ತರಭಾರತದಲ್ಲಿ ರಜಪೂತರ ಅವನತಿಯ ನಂತರ ‘ಅಪರಾಧಿ ಗುಂಪುಗಳು ತಮ್ಮ ಮೂಲವನ್ನು ರಜಪೂತರೊಂದಿಗೆ ಗುರುತಿಸಿಕೊಳ್ಳುತ್ತವೆ. ರಜಪೂತ ಆಳ್ವಿಕೆ ಕೊನೆಗೊಂಡು, ಮುಸ್ಲಿಂ ಆಳ್ವಿಕೆಯ ಮತ್ತು ಕಂಪನಿ ಆಡಳಿತದ ಸಂದರ್ಭದಲ್ಲಿ ಇಲ್ಲಿನ ಕೃಷಿಕ ಸಮುದಾಯಗಳೂ ಸಹ ತಮ್ಮ ಕೃಷಿ ಜಮೀನುಗಳನ್ನು ಕಳೆದುಕೊಂಡುವು. ರಜಪೂತ ಸೈನ್ಯದಕಲ್ಲಿ ಸೈನಿಕರಾಗಿದ್ದ ಮತ್ತು ಸೈನಿಕರಿಗೆ ಸಹಾಯಕರಾಗಿದ್ದ ಅನೇಕ ಸಮುದಾಯಗಳು ನೆಲೆಕಳೆದುಕೊಂಡವು. ಈ ನೆಲೆ ಕಳೆದುಕೊಂಡು ಸಮುದಾಯಗಳೇ ನಂತರ ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿದವು”[5] ಹೀಗೆ ಉತ್ತರ ಭಾರತದಲ್ಲಿ ತಮ್ಮ ಆರ್ಥಿಕ ನೆಲೆಗಳನ್ನು ಕಳೆದುಕೊಂಡ ಅನೇಕ ಸಮುದಾಯಗಳು ಕಂಪನಿ ಆಡಳಿತದ ವಿರದ್ಧ ಸಹಜವಾಗಿಯೇ ತಿರುಗಿಬಿದ್ದವು. ಅಲ್ಲದೆ ಸ್ಥಳೀಯ ಪಾಳೇಗಾರರ ಸೈನ್ಯದಲ್ಲಿ ಈ ಪ್ರತಿಭಟನೆಗಳು ಕಂಪನಿ ಆಡಳಿತದ ವಿರುದ್ಧ ಉಗ್ರವಾಗಿಯೇ ವ್ಯಕ್ತವಾಗತೊಡಗಿದವು. ಈ ಹಂತದಲ್ಲಿ ಕಂಪನಿ ಆಡಳಿತವು ದೇಶೀಯ ಸಂಸ್ಥಾನಗಳನ್ನು ವಶಪಡಿಸಿಕೊಳ್ಳಲು ಅನೇಕ ಕಾನೂನುಗಳನ್ನೇ ಜಾರಿಗೆ ತಂದಿತು. ಸಹಾಯಕ ಸೈನ್ಯ ಪದ್ಧತಿ, ರೌಲತ್ ಕಾಯ್ದೆ ಇವೆಲ್ಲ ಸ್ಥಳೀಐ ಸೈನ್ಯವನ್ನು ರದ್ದುಪಡಿಸುವ ಮತ್ತು ಸ್ಥಳೀಯರು. ಆಯುಧಗಳನ್ನು ಹೊಂದುವುದನ್ನು ನಿಷೇಧಿಸುವುದಕ್ಕಾಗಿಯೇ ರೂಪಗೊಂಡ ಕಾಯ್ದೆಗಳಾಗಿವೆ.

ಆಧುನಿಕಪೂರ್ವ ಕಾಲಘಟ್ಟದಲ್ಲಿ ಅಲೆಮಾರಿಗಳು

“೧೭೭೪ ಮತ್ತು ೧೮೭೧ರ ನಡುವಿನ ಇತಿಹಾಸ ಅತ್ಯಂತ ರಕ್ತಪಾತದಿಂದ ಕೂಡಿದ ಇತಿಹಾಸವಾಗಿದೆ. ಭಾರತದ ಸ್ಥಳೀಯ ರಾಜ್ಯಗಳ ವಿರುದ್ದ ಈ ಅವಧಿಯಲ್ಲಿ ಕಂಪನಿ ಆಡಳಿತವು ಅತ್ಯಂತ ಕ್ರೂರ ಯುದ್ಧಗಳನ್ನು ಮಾಡಿತು. ಆಂಗ್ಲೋ ಮರಾಠ ಯುದ್ಧ, ಮೈಸೂರು ಯುದ್ಧ, ಹೋಳ್ಕರ ಶರಣಾಗತಿ, ಪೇಶ್ವೇಗಳ ಸೋಲು, ವೆಲ್ಲೂರಿನ ಸಿಪಾಯಿದಂಗೆ ಮೈಸೂರು ಮತ್ತು ಕೂರ್ಗ್‌ಗಳನ್ನು ವಶಪಡಿಸಿಕೊಂಡಿದ್ದು, ಸಂಧ್, ಸಿಖ್, ಔಧ್ ಪ್ರದೇಶಗಳನ್ನು ಯುದ್ಧಗಳ ಮೂಲಕ ವಶಪಡಿಸಿಕೊಂಡದ್ದು ಮತ್ತು ೧೮೫೭ರಲ್ಲಿ ನಡೆದ ಸಿಪಾಯಿ ದಂಗೆಗಳು, ಹಲವು ಸ್ಥಳೀಯ ಸಮುದಾಯಗಳನ್ನು ನೆಲೆ ಇಲ್ಲದಂತೆ ಮಾಡಿದವು. ಈ ಸಮುದಾಯಗಳೇ ಮುಂದೆ ಅಲೆಮಾರಿಗಳಾಗಿ ಪರಿವರ್ತಿತ ವಾದವು.”[6] ಮುಖ್ಯವಾಗಿ ಆಧುನಿಕಪೂರ್ವ ಭಾರದ ಅನೇಕ ಪಾಳೆಪಟ್ಟುಗಳು ಮತ್ತು ಸ್ಥಳೀಯ ರಾಜರು ಅನಿವಾರ್ಯವಾಗಿ ಕಂಪನಿ ಆಡಳಿತದ ಜೊತೆ ಕೈಜೋಡಿಸಬೇಕಿತ್ತು. ಇಲ್ಲವೆ ಅವರೊಡನೆ ಕಾದಾಡಬೇಕಿತ್ತು. ಈ ಎರಡೂ ಸಂದರ್ಭದಲ್ಲಿ ದೇಶೀಯ ಶ್ರಮ ಜೀವಿಗಳು ಆರ್ಥಿಕವಾಗಿ ಕುಸಿದು ಹೋಗುವುದು ಅನಿವಾರ್ಯವಾಗಿತ್ತು. ಕಂಪನಿ ಆಡಳಿತವನ್ನು ಒಪ್ಪಿಕೊಂಡರೆ ಅದರ ಸೈನ್ಯವನ್ನು ಸ್ಥಳೀಯ ರಾಜರು ಸಾಕಬೇಕಿತ್ತು. ಅಕಸ್ಮಾತ್ ಕಂಪನಿ ಆಡಳಿತದ ವಿರುದ್ಧ ತಿರುಗಿ ಬಿದ್ದು ಕಾದಿದರೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯದಲ್ಲಿ ಇಂಡಿಯಾದ ಎಲ್ಲ ಸ್ಥಳೀಯ ಸಂಸ್ಥಾನಗಳು ಸಿಲುಕಿ ಕೊಂಡವು. ಆದರೆ ಬಹುತೇಕ ಎಲ್ಲ ಸಂಸ್ಥಾನಗಳನ್ನು ಬ್ರಿಟೀಷ್ ಆಡಳಿತ ತನ್ನ ತಂತ್ರಗಳ ಮೂಲಕ ವಶಪಡಿಸಿಕೊಳ್ಳುತ್ತಲೇ ಹೋಯಿತು. ತಿರುಗಿಬಿದ್ದ ಸಮುದಾಯಗಳನ್ನು ಕಾನೂನುಗಳ ಮೂಲಕ ಹತ್ತಿಕ್ಕಲು ಕೆಲವು ನಿಯಮಗಳನನ್ನು ರೂಪಿಸಿತು. ಈ ಹಂತದಲ್ಲಿಯೇ Criminal Tribal Act ಜಾರಿಗೆ ಬಂದಿತು.

“೧೮೭೧ರಲ್ಲಿ Criminal Tribal Act ಜಾರಿಗೆ ಬಂದರೂ, ಉತ್ತರ ಭಾರತದಲ್ಲಿ ಕಂಪನಿ ಸರಕಾರವು ೧೭೯೩ರಲ್ಲಿಯೇ ಕೆಲವು ಸಮುದಾಯಗಳನ್ನು ಪಟ್ಟಿ ಮಾಡಿ ಇನ್ನು ಅಪಾಯಕಾರಿಗಳೆಂದು ಗುರುತಿಸಿತು. ಆ ಪಟ್ಟಿ ನಮಗೆ ಈಗ ಲಭ್ಯವಿಲ್ಲ. ಆದರೆ ಅತ್ಯಂತ ಶಾಮತವಾಗಿದ್ದ, ಶ್ರಮಜೀವಿಗಳೇ ಬದುಕುತ್ತಿದ್ದ ರೋಹಿಲ್‌ಖಂಡ್‌ನ್ನು ವಶಪಡಿಸಿಕೊಳ್ಳು ಬ್ರಿಟೀಷ್‌ರು ೧೭೭೦ರಲ್ಲಿ ಒಂದು ಭೀಕರ ಯುದ್ಧವನ್ನೇ ನಡೆಸಿದರು. ಭಯಂಕರ ರಕ್ತಪಾತ ಮತ್ತು ಸಾವು ನೋವುಗಳು ಸಂಭವಿಸಿದವು. ರೋಹಿಲ್‌ಖಂಡ್ ಬ್ರಿಟೀಷ್ ವಶವಾಯಿತು. ಆದರೆ ಅಲ್ಲಿ ಮುಗ್ಧವಾಗಿ ಬದುಕಿ ಬಂದಿದ್ದ ದುಡಿಮೆಗಾರರು ದಿಕ್ಕೆಟ್ಟು ಹೋದರು. ಅಲ್ಲದೆ ಇವರು ಕಂಪನಿ ಆಡಳಿತದ ಮೇಲೆ ಉಗ್ರವಾದ ಸಿಟ್ಟನ್ನು ಬೆಳೆಸಿಕೊಂಡರು. ಬ್ರಿಟೀಷರ ಮೇಲೆ ಸೇಡುತೀರಿಸಿಕೊಳ್ಳಲು ಹವನಿಸಲಾರಂಭಿಸಿದರು. ಮತ್ತು ಇಲ್ಲಿನ ಬಹುತೇಕ ಶ್ರಮಜೀವಿಗಳು ಮತ್ತು ಆದಿವಾಸಿಗಳೂ ತಮ್ಮ ನೆಲೆಗಳನ್ನು ಕಳೆದುಕೊಂಡು ಅಲೆಮಾರಿಗಳಾದರು.”[7] ಕಂಪನಿ ಆಡಳಿತ ಪ್ರಬಲವಾಗುತ್ತಿದ್ದಂತೆ ಈ ದೇಶದ ಸ್ಥಳೀಯ ರಾಜರು ನಿವೃತ್ತರಾಗಿ ಪಿಂಚಣಿ ಪಡೆಯಲಾರಂಭಿಸಿದರು. ಭೂಮಾಲಿಕರು ರಾಜಿ ಮಾಡಿಕೊಂಡು ತಮ್ಮ ಆಸ್ತಿಗಳನ್ನು ರಕ್ಷಿಸಿಕೊಂಡರು. ಆದರೆ ಎಲ್ಲವನ್ನೂ ಕಳೆದುಕೊಂಡದ್ದು ಶ್ರಮಜೀವಿ ವರ್ಗ ಮಾತ್ರ. ಕಂಪನಿ ಆಡಳಿತದ ವಿರುದ್ಧ ಇವರು ಹೋರಾಡಲೇಬೇಕಾದ ಚಾರಿತ್ರಿಕ ಅನಿವಾರ್ಯತೆ ಏರ್ಪಟ್ಟಿತು. ಮತ್ತು ಈ ಹೋರಾಟ ಸ್ಪಷ್ಟ ರಾಜಕೀಯ ತಳಹದಿಯ ಮೇಲೆ ರೂಪಗೊಂಡಿತ್ತು. ಮನುಷ್ಯನ ಸಹಜ ಹಕ್ಕುಗಳಾದ, ಮಾತನಾಡುವ, ಪ್ರಶ್ನಿಸುವ, ಸ್ವತಃ ತಮ್ಮನ್ನು ಆಳಿಕೊಳ್ಳುವ, ತಮ್ಮ ಆಸ್ತಿ ರಕ್ಷಣೆ ಮಾಡಿಕೊಳ್ಳುವ ಮತ್ತು ತಮ್ಮ ಅನನ್ಯತೆಗಳನ್ನು ಉಳಿಸಿಕೊಳ್ಳುವ ಜನತಾಂತ್ರಿಕ ಆಶಯಗಳಿಂದಲೇ ಈ ಹೋರಾಟಗಳು ರೂಪಗೊಂಡಿದ್ದವು. ಆದರೆ ಅರಾಜಕಗೊಂಡಿದ್ದ ಭಾರತದ ರಾಜಕೀಯ ಸಂದರ್ಭವು ಶೂನ್ಯಾವಸ್ಥೆಗೆ ತಲುಪಿಬಿಟ್ಟಿತ್ತು. ಆದರೆ ಅಲ್ಲಲ್ಲಿ ಜೀವಂತವಿದ್ದ ಸ್ವಾಭಿಮಾನಿ ಸಂಸ್ಥಾನಗಳು ಮಾತ್ರ ಬ್ರಿಟೀಷ್ ಆಡಳಿತದ ವಿರುದ್ಧ ಉಗ್ರವಾಗಿಯೇ ತಿರುಗಿ ಬೀಳುತ್ತಿದ್ದವು. “ಯಾವ ಸಮುದಾಯಗಳು ಸ್ಥಳೀಯ ರಾಜರ ಸೈನ್ಯದಲ್ಲಿದ್ದು ಕಂಪನಿ ಆಡಳಿತದ ವಿರುದ್ಧ ಹೋರಾಡುತ್ತಿದ್ದವೋ ಆ ಎಲ್ಲ ಸಮುದಾಯಗಳನ್ನು ಕಂಪನಿ ಸರಕಾರ ಯುದ್ಧಾನಂತರ ಅವರ ಸೈನ್ಯವನ್ನು ಬ್ರಿಟೀಷರು ಇನ್ನಿಲ್ಲದಂತೆ ನಾಶಮಾಡಿದರು. ಅವರಿಗೆ ಭಾರತದ ಸಮಾಜದ ಕುರಿತು ಸರಿಯಾದ ಕಲ್ಪನೆಯೇ ಇರಲಿಲ್ಲ. ಅಲೆಮಾರಿ ಪಶುಪಾ”ಲಕರು, ವೃತ್ತಿ ಸಂಗೀತಗಾರರು, ಆದಿವಾಸಿಗಳು, ದೊಂಬರಾಟದವರು, ಜಿಪ್ಸಿಗಳು, ಹಾವಾಡಿಸುವವರು, ಅಲೆಮಾರಿ ವೈದ್ಯರು, ಈ ಸಮುದಾಯಗಳನ್ನು ಬ್ರೀಟೀಷ್‌ರು ಅರ್ಥಮಾಡಿಕೊಳ್ಳಲಿಲ್ಲ. ಈ ಸಮುದಾಯಗಳನ್ನು ಅವರು ಸದಾ ಅನುಮಾನಿಸುತ್ತಲೇ ಬಂದರು. ಸಹಜವಾಗಿಯೇ ಈ ಸಮುದಾಯಗಳು ಅಪರಾಧಿ ಸಮುದಾಯಗಳ ಪಟ್ಟಿಗೆ ಸೇರಿಸಲ್ಪಟ್ಟವು.”[8]

೧೮೭೧ರಲ್ಲಿ ಕ್ರಿಮಿನಲ್ ಟ್ರೈಬಲ್ ಕಾಯ್ದೆ ಸಿದ್ಧವಾಗಿ ಜಾರಿಗೆ ಬಂದಿತು. ದುರಂತವೆಂದರೆ ಈ ಪಟ್ಟಿಯಲ್ಲಿದ್ದ ಸಮುದಾಯಗಳನ್ನು ಕಂಪನಿ ಸರಕಾರವು ಜನ್ಮತಃ ಅಪರಾಧಿಗಳು (Born Criminals) ಎಂದು ಪರಿಗಣಿಸಿಬಿಟ್ಟಿತು. ಪೋಲಿಸರಿಗೆ ತರಬೇತಿ ಕೊಡುತ್ತಿದ್ದ ಸಂದರ್ಭದಲ್ಲಿ, ಅಲ್ಲಿನ ಪಠ್ಯಕ್ರಮದಲ್ಲಿ, ಅಪರಾಧಿ ಬುಡಕಟ್ಟುಗಳನ್ನು ಗುರುತಿಸುವದು ಮತ್ತು ಕಾನೂನಿನ ಮೂಲಕ ಅವರನ್ನು ಹೇಗೆ ನಿಯಂತ್ರಿಸುವುದು ಎಂಬ ಕುರಿತು ಪಾಠಗಳನ್ನು ಸೇರಿಸಿತು. ತಮಾಷೆಯೆಂದರೆ, ಸ್ವಾತಂತ್ರ್ಯ ನಂತರ ೧೯೫೨ರಲ್ಲಿ ಈ ಕಾಯ್ದೆ’ಯ ಪಾಠಗಳು ತೊಲಗಲಿಲ್ಲ. ಅವರನ್ನು ಸ್ವತಂತ್ರ ಭಾರತದ ಸರಕಾರವು ‘ಪಾರಂಪರಿಕ ಅಪರಾಧಿ ಕಾಯ್ದೆ’ಯ (Habitual Offender Act) ಅಡಿಯಲ್ಲಿ ಗುರುತಿಸಬೇಕೆಂದು ತಮ್ಮ ಪೋಲೀಸರಿಗೆ ಬೋಧಿಸಲಾರಂಭಿತು. ಸ್ವತಂತ್ರ್ಯ ಬಂದರೂ ಈವತ್ತೂ ಕೆಲವು ಸಮುದಾಯಗಳು ಅಮವಾಸೆಯ ದಿನ ಪೋಲೀಸ್ ಠಾಣೆಗೆ ಹೋಗಿ ಮಲಗುವ ನಿಯಮಗಳು ಜಾರಿಯಲ್ಲಿವೆ.

“೧೯೨೧ರಲ್ಲಿ Criminal Tribal Act ಮದ್ರಾಸ್, ಹೈದರಾಬಾದ್ ಮತ್ತು ಮೈಸೂರು ಪ್ರಾಂತ್ಯಗಳಿಗೆ ವಿಸ್ತರಿಸಲ್ಪಟ್ಟಿತು. ಭಾರತದ ಸ್ವಾತಂತ್ರ್ಯಾ ಸಂಗ್ರಾಮಕ್ಕೆ ಮಹಾತ್ಮಾ ಗಾಂಧೀಜಿಯ ಪ್ರವೇಶವಾಗುವ ಸಂದರ್ಭವದು, ಭಾರತದ ಎಲ್ಲ ನಾಗರಿಕರು ಅಪರಾಧಿ ಬುಡಕಟ್ಟುಗಳನ್ನು ನಿರ್ವಿಕಾರ ಸ್ಥಿತಿಯಲ್ಲಿಯೇ ನೋಡುತ್ತಿದ್ದರು. ಆದರೆ ವಸಾಹತು ಸರಕಾರ ದಕ್ಷಿಣದಲ್ಲೂ ಅನೇಕ ಶ್ರಮಜೀವಿಗಳನ್ನು ‘ಅಪರಾಧಿಗಳ ಪಟ್ಟಿಗೆ’ ಸೇರಿಸುತ್ತಲೇ ಹೋಯಿತು”[9]

ನಿಲ್ಲದ ಯಾತನೆಯ ಪಯಣ

ಇಂತಹ ಸಂದರ್ಭದಲ್ಲಿ ಈ ಸಮುದಾಯಗಳು ಮುಖ್ಯವಾಹಿನಿಯ ಕಣ್ಣುತಪ್ಪಿಸಿ ಊರಿಂದ ಹೊರಗೆ ಕಾಡುಗಳಲ್ಲಿ ಬದುಕಲಾರಂಭಿಸಿದವು. ಅಪರಾಧಿ ಬುಡಕಟ್ಟು ಕಾಯ್ದೆಯು, ಪೊಲಿಸರಿಗೆ ಈ ಸಮುದಾಯಗಳನ್ನು ವಿಶೇಷ ಸಂದರ್ಭದಲ್ಲಿ ಕಂಡಲ್ಲಿ ಕೊಂದು ಹಾಕುವ ಅಧಿಕಾರವನ್ನೂ ಕೊಟ್ಟುಬಿಟ್ಟಿತ್ತು. ಈ ಕಾಲಘಟ್ಟದಲ್ಲಿ ‘ಅಲೆಮಾರಿತ್ವ’ ಸಹಜವಾಗಿಬಿಟ್ಟಿತು. ಕೇವಲ ಆರ್ಥಿಕ ಮೂಲಗಳನ್ನು ಮಾತ್ರ ಈ ಸಮುದಾಯಗಳು ಕಳೆದುಕೊಳ್ಳಲಿಲ್ಲ. ಬದುಕಲು ನೆಲ ಮತ್ತು ಬದುಕುವ ಅವಕಾಶ ಎರಡನ್ನೂ ಕಳೆದುಕೊಂಡು ಸುರಕ್ಷಿತ ನೆಲೆಗಳನ್ನು ಹುಡುಕಿಕೊಂಡು ಅಲೆಯಲಾರಂಭಿಸಿದವು. “ಅಲೆಮಾರಿ ಸಮುದಾಯಗಳನ್ನು ‘ಕ್ರಿಮಿನಲ್ ಜಾತಿಗಳು’ ಎಂದು ಪರಿಗಣಿಸಿ ಅವರ ಮಾನವ ಹಕ್ಕುಗಳನ್ನು ಕಸಿದುಕೊಳ್ಳಲಾಯ್ತು. ಈ ವಿಪರೀತ ಕಾನೂನಿನ ಅಮಾನವೀಯ ನಿಯಮಗಳ ಮೂಲಕ ಸದರಿ ಸಮುದಾಯಗಳನ್ನು ನಡೆಸಿಕೊಳ್ಳಲಾಯ್ತು ಅವರ ಆರ್ಥಿಕ ಅವಲಂಬನೆಗಳು ನಾಶವಾದ ಮೇಲೆ, ಸಹಜವಾಗಗಿಯೇ ಅವರು ಅಪರಾಧಿ ಚಟುವಟಿಕಗಳಲ್ಲಿ ತೊಡಗಿದರು. ಅಪರಾಧ ಮಾಡಲು ಈ ವ್ಯವಸ್ಥೆಯೇ ಅವರನ್ನು ಪ್ರೇರೇಪಿಸಿತು.”[10] ಒಂದು ಕಾಲದಲ್ಲಿ ಇದ್ದುದರಲ್ಲಿಯೇ ಸ್ವಾವಲಂಬಿಗಳಾಗಿ, ಶ್ರಮಜೀವಿಗಳಾಗಿ ಬದುಕುತ್ತಿದ್ದ ಸಮುದಾಯಗಳು ತಾವು ಕಳೆದುಕೊಂಡಿದ್ದ ಆರ್ಥಿಕ ಮೂಲಗಳನ್ನು ಮರಳಿ ಪಡೆಯಲು ಪ್ರತಿಭಟಿಸಿದ್ದಕ್ಕಾಗಿ ಅಪರಾಧಿಗಳಾಗಿ ಬಿಟ್ಟವು. ಜಗತ್ತಿನಲ್ಲಿ, ಮಾನವಹಕ್ಕುಗಳ ಮೇಲಿನ ದಾಳಿ ಇದ್ದಕ್ಕಿಂತ ಭೀಕರವಾದದ್ದು ಇನ್ನೊಂದು ನಡೆದಿರಲು ಸಾಧ್ಯವಿಲ್ಲ. ತಮ್ಮ ಹಕ್ಕುಗಳಿಗೆ ಹೋರಾಡಿದವರನ್ನು ಕಾನೂನ ದೃಷ್ಟಿಯಲ್ಲಿ ಅಪರಾಧಿಗಳನ್ನಾಗಿಸಿ ಅವರ ಆತ್ಮಪ್ರತ್ಯಯವನ್ನು ನಾಶಪಡಿಸಲಾಯ್ತು. ಈ ಜನ ಒಂದು ಕಾಲದಲ್ಲಿ, ತನ್ನ ಸುತ್ತಲ ಜಗತ್ತನ್ನು ಕಟ್ಟಿ ಎತ್ತಿ ನಿಲ್ಲಿಸಿದವರು, ಆ ಜಗತ್ತನ್ನು ರಂಜಿಸಿದವರು, ಆ ಜಗತ್ತಿನ ಒಳಿತಿಗಾಗಿ ಬೆವರು ಹರಿಸಿದವರು, ಸೈನ್ಯದಲ್ಲಿದ್ದುಕೊಂಡು ಜೀವಕೊಟ್ಟವರು, ಕೋಟೆಗಳನ್ನು ಕಟ್ಟಿದವರು. ಆದರೆ ಅವರು ಮಾತ್ರ ‘ಕೋಟೆಯ’ ಆಚೆಗೆ ಎಸೆಯಲ್ಪಟ್ಟು ನಿರ್ಗತಿಕರಾಗಿ ಹೋದರು.

ಇದೇ ಕಾಯ್ದೆ ದಕ್ಷಿಣಕ್ಕೆ ಬಂದದ್ದು ೧೯೨೧ರಲ್ಲಿ. ನಾವು ಇಂದು ಯಾರನ್ನು ಅಲೆಮಾರಿಗಳೆಂದು ಪಟ್ಟಿ ಮಾಡುತ್ತೇವೋ ಅವರಲ್ಲಿ ಶೇ ೯೫ ಸಮುದಾಯಗಳು ಈ Criminal Tribal Act ಅಡಿಯಲ್ಲಿ ಬರುವ ಸಮುದಾಯಗಳೇ ಆಗಿವೆ. ಹೀಗಾಗಿ ಕರ್ನಾಟಕದಲ್ಲಿರುವ ಬಹುತೇಕ ಅಲೆಮಾರಿಗಳು, ವಾಯುವ್ಯ ಭಾರತ, ಮಧ್ಯಭಾರತ ಇಲ್ಲವೆ ಓರಿಸ್ಸಾ, ಆಂಧ್ರಪ್ರದೇಶಗಳಿಂದ ಇಲ್ಲಿಗೆ ವಲಸೆ ಬಂದವರೇ ಆಗಿದ್ದಾರೆ. ಇದಕ್ಕೆ ಕಾರಣಗಳೂ ತುಂಬಾ ಸ್ಪಷ್ಟವಾಗಿಯೇ ಇವೆ. ಲಂಬಾಣಿಗರು ವಾಯುವ್ಯ ರಾಜ್ಯಗಳಿಂದ ದಕ್ಷಿಣಕ್ಕೆ ವಲಸೆ ಬಂದ ವಿವರಗಳನ್ನು ಶ್ರೀ ಖಂಡೋಬ ಅವರ ‘ಕರ್ನಾಟಕದ ಲಂಬಾಣಿಗಳು ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ಕೃತಿಯಲ್ಲಿ ವಿವರವಾಗಿ ಗಮನಿಸಬಹುದಾಗಿದೆ.

ಇನ್ನು ವಸಾಹತುಶಾಹಿ ಆಡಳಿತದ ಬಾಗವಾಗಿ ಇಲ್ಲಿ ಸಂಭವಿಸಿದ ಕೈಗಾರಿಕೀರಣದಿಂದಾಗಿ ಭಾರತದ ಗುಡಿಕೈಗಾರಿಕೆಗಳು ನಾಶವಾಗಿ, ಕರಕುಶಲ ಕಲೆಗಳನ್ನು ನಂಬಿದ್ದ ಸಮುದಾಯಗಳು ಆರ್ಥಿಕವಾಗಿ ನೆಲೆ ತಪ್ಪಿಹೋದವು. ಗುಡಿಕೈಗಾರಿಕೆಗಳನ್ನು ಕರಕುಶಲ ಕಲೆಗಳನ್ನು, ಪ್ರದರ್ಶಕ ಕಲೆಗಳನ್ನು ಪಾರಂಪರಿಕವಾಗಿ ಅವಲಂಬಿಸಿಕೊಂಡ ಬಂದ ಸಮುದಾಯಗಳು ಆಧುನಿಕ ತಂತ್ರಜ್ಞಾನದ ಮುಂದೆ ಇನ್ನಿಲ್ಲದಂತೆ ಸೋತುಹೋದವು. ಬುಟ್ಟಿ ಹೆಣೆಯುವ ಮೇದರು, ಕೃಷಿಯ ಉಪಕರಣಗಳನ್ನು ತಯಾರಿಸುವ ಕಮ್ಮಾರ, ಡೊಂಬರಾಟವನ್ನೇ ಅವಲಂಬಿಸಿದ ಡೊಂಬರು, ತೊಗಲು ಬೊಂಬೆ ಕುಣಿಸುವ ಕಿಳ್ಳೆಕ್ಯಾತರು ಆಧುನಿಕ ತಂತ್ರಜ್ಞಾನ ಮತ್ತು ಮನರಂಜಕ ಎಲೆಕ್ಟ್ರಾನಿಕ್ ಮಾಧ್ಯಮಗಳ ಮುಂದೆ ಸಪ್ಪೆಯಾದರು. ವಸಾಹತುಶಾಹಿ ಕಾಲಘಟ್ಟದ ಕೈಗಾರಿಕೀಕರಣದ ಈ ಬಿರುಸಿನ ಕಾರ್ಯಾಚರಣೆಯಿಂದಾಗಿ ಭಾರತದ ಸ್ವಯಂಪೂರ್ಣ ಉತ್ಪಾದನಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾದವು. ವಸಾಹತುಶಾಹಿಗಳು ಮೂರನೇ ಜಗತ್ತಿನ ಮಾನವ ಸಂಪತ್ತು ಮತ್ತು ನೈಸರ್ಗಿಕ ಸಂಪತ್ತುಗಳನ್ನು ಕೊಳ್ಳೆ ಹೊಡೆಯಲೆಂದೇ ಇಲ್ಲಿ ತಮ್ಮ ಕೈಗಾರಿಕೆಗಳನ್ನು ಪ್ರಾರಂಭಿಸಿದರು.

ಈ ಪ್ರಕ್ರಿಯೆಯಲ್ಲಿ ಭಾರತದ ಪಾರಂಪರಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳಾದರೂ, ಈ ಬದಲಾವಣೆಗಳು ಕೇವಲ ಅನುಷಾಂಗಿಕ. ಆಧುನಿಕ ಜಗತ್ತಿನಲ್ಲಿ ತನ್ನ ಪಾರಂಪರಿಕ ಕಸುಬನ್ನು ಎತ್ತಿ ನಿಲ್ಲಿಸಲಾರದ ಜಾತಿ ಸಮುದದಾಯಗಳು ನೆಲೆ ತಪ್ಪಿಹೋದವು. ತಮ್ಮ ಪರಾರಂಪರಿಕ ಆರ್ಥಿಕ ಮೂಲಗಳನ್ನು ಆಧುನಿಕ ಜಗತ್ತಿನಲ್ಲಿ ಬಂಡವಾಳವನ್ನಾಗಿ ಪರಿವರ್ತಿಸದ ಜಾತಿಗಳು ದಿಕ್ಕೆಟ್ಟು ಹೋದವು. ಅಂತಹ ಸಮುದಾಯಗಳಲ್ಲಿ ಕರಕುಶಲ ಕಲೆಗಳನ್ನು ನಂಬಿದ್ದ ಸಮುದಾಯಗಳು ಮತ್ತು ಪ್ರದರ್ಶಕ ಕಲೆಗಳನ್ನು ರೂಢಿಸಿಕೊಂಡಿದ್ದ ಸಮುದಾಯಗಳು ಪ್ರಮುಖವಾದವು. ಆಧುನೀಕರಣ ಮತ್ತು ಕೈಗಾರಿಕೀಕರಣವು ಭಾರತದಲ್ಲಿ ಕ್ರಾಂತಿಕಾರಿ ಸಾಮಾಜಿಕ ಬದಲಾವಣೆಗಳನ್ನು ತಂದಿತು ಎನ್ನುವ ಎಂ. ಎನ್. ಶ್ರೀನಿವಾಸ್‌ರಂತಹ ಸಮುದಾಯಗಳು ಯಾವ ಬಗೆಯ ತಲ್ಲಣಗಳಿಗೆ ಒಳಗಾದವು ಎಂಬುದನ್ನು ಮರೆತುಬಿಡುತ್ತಾರೆ. ಪಾರಂಪರಿಕ ಊಳಿಗಮಾನ್ಯ ಹಿಡಿತದಿಂದ ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆಯ ಕಡೆಗೆ ಭಾರತದ ಸಮಾಜ ನಡೆದುಹೋದರೂ ಸಹ, ಭಾರತದ ಕೆಳಜಾತಿ ಸಮುದಾಯಗಳ ಸಾಮಾಜಿಕಾರ್ಥಿಕ ಸ್ಥಿತಿಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಸಂಭವಿಸಲಿಲ್ಲ. ಕೆಳಜಾತಿಗಳಿಗೆ ಆಧುನಿಕತೆಯು ಕೆಲವು ರಿಯಾಯಿತಿಗಳನ್ನು ತೋರಿದಂತೆ ಕಂಡುಬಂದರೂ ಸಹ ಭಾರತದ ಆರ್ಥಿಕ ಅಸಮಾನತೆಯಲ್ಲಿ ಯಾವ ಮೂಖ್ಯ ಬದಲಾವಣೆಗಳು ಸಂಭವಿಸಲಿಲ್ಲ. ಆಧುನಿಕತೆಯ ಕುರಿತು ನಮ್ಮಲ್ಲಿ ಅನನೇಕ ಮೂಢನಂಬಿಕೆಗಳು ಬೆಳೆದು ಬಂದಿವೆ. ಆಧುನಿಕತೆ ತನ್ನೆಲ್ಲಲ ತಂತ್ರಜ್ಞಾನದಿಂದ, ಭಾರತದ ಸಾಂಪ್ರದಾಯಿಕ ಮತ್ತು ಅಸಮಾನ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸುತ್ತದೆ. ಉತ್ಪಾದನಾ ಸಾಧನಗಳ ಕ್ರಾಂತಿಕಾರಿ ಬದಲಾವಣೆಗಳಿಂದ ಭಾರತದಂತಹ ಪಾರಂಪರಿಕ ಉತ್ಪಾದನಾ ವ್ಯವಸ್ಥೇಯ್ಲಲಿ ಆಗಾಧ ರೂಪಾಂತರಗಳು ಸಂಭವಿಸುತ್ತವೆ. ಮತ್ತು ಸಾಮಾಜಿಕ ಸಂಬಂಧಗಳ ಸ್ವರೂಪದಲ್ಲಿ ಸಹ ಅದು ನಿಚ್ಚಳ ಬದಲಾವಣೆಗಳನ್ನು ತರಬಲ್ಲದೆಂದು ನಂಬಲಾಗಿತ್ತು. ಆದರೆ ಆಧುನಿಕತೆಯು ತಂತ್ರಜ್ಞಾನದ ಜೊತೆಯಲ್ಲಿಯೇ ಬಂಡವಾಳಶಾಹಿ ಮನೋಧರ್ಮವನ್ನು ಇಂಡಿಯಾಕ್ಕೆ ಹೊತ್ತು ತಂದಿತು. ಈ ಆಧುನಿಕತೆ ಊಳಿಗಮಾನ್ಯಶಾಹಿ ಸಾಮಾಜಿಕ ಸಂಬಂಧಗಳನ್ನು, ಬಂಡವಾಳಶಾಹಿ, ಉತ್ಪಾದನಾ ವ್ಯವಸ್ಥೆಯ ಚೌಕಟ್ಟಿಗೆ ತಂದು ಜೋಡಿಸಿತು. ಹೀಗೆ ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆಗೆ ಸಮಾಜ ತನ್ನನ್ನು ಹೊಂದಿಸಿಕೊಳ್ಳುವ ಹಂತದಲ್ಲಿ, ಈ ಶ್ರೇಣೀಕೃತ ವಿಷಮ ಸಾಮಾಜಿಕ ಸಂಬಂಧಗಳಲ್ಲಿ ಕೆಲವು ಬದಲಾವಣೆಗಳು ಸಂಭವಿಸಿದವು. ಆದರೆ ಭಾರತದ ಒಟ್ಟು ಆರ್ಥಿಕ ಅಸಮಾನತೆಯಲ್ಲಿ ಯಾವ ದೊಡ್ಡ ಬದಲಾವಣೆಗಳೂ ಸಂಭವಿಸಲಿಲ್ಲ.

ಪಾರಂಪರಿಕ ಕಸಬುದಾರರ ಸ್ಥಿತಿಗತಿಗಳು

ಇಂದು ಅನೇಕ ಅಲೆಮಾರಿಗಳು ನೆಲೆನಿಂತು ಬದುಕುತ್ತಿದ್ದರೂ ಸಹ ಕೆಲವು ಗುಂಪುಗಳು ಇನ್ನೂ ಅಲೆಮಾರಿಗಳಾಗಿಯೇ ಇದ್ದುಕೊಂಡು ಪಾರಂಪರಿಕ ಕಸಬನ್ನೇ ಮುಂದುವರೆಸಿದ್ದಾರೆ. ಡೊಂಬರು, ಗೊಂದಲಿಗರು, ಕಿಳ್ಳೇಕ್ಯಾತರು. ಹಕ್ಕಿಪಿಕ್ಕಿಗಳು ಮತ್ತು ಹೆಳವರೂ ಸೇರಿದಂತೆ ಅನೇಕ ಅಲೆಮಾರಿ ಸಮುದಾಯಗಳ ಹಲವು ಗುಂಪುಗಳು ಇಂದಿಗು ಪಾರಂಪರಿಕ ವೃತ್ತಿಗಳನ್ನು ಅವಲಂಬಿಸಿ ಬದುಕುತ್ತಿವೆ. ಆರ್ಥಿಕವಾಗಿ ಈ ಸಮುಧಯಗಳು ಕಾಲದ ಪ್ರವಾಹದಲ್ಲಿ ಯಾವುದೋ ಹಮತದಲ್ಲಿ ಜಡವಾಗಿ ನೀಂತು ಬಿಟ್ಟಂತೆ ಭಾಸವಾಗುತ್ತಿದೆ. ಇಂಡಿಯಾದ ಸಮಾಜದ ನಿರಂತರ ಬದಲಾವಣೆಯ ವಿವಿಧ ಹಂತಗಳಲ್ಲಿ ಅನೇಕ ಸಮುದಾಯಗಳು ಸ್ಥಿತ್ಯಂತರಗಳಿಗೆ ತಮ್ಮನ್ನು ಒಡ್ಡಿಕೊಂಡು ಮುಖ್ಯಪ್ರವಾಹದಲ್ಲಿ ಒಂದಾಗಿದ್ದಾರೆ. ಆಧುನಿಕ ಜಗತ್ತಿನ ವಿರಾಟ್ ಅವಕಾಶಗಳಲ್ಲಿ ಪಾಲು ಪಡೆಯಲು ಎಲ್ಲಾ ಬಗೆಯ ಸಿದ್ಧತೆಗಳನ್ನು ಮಾಡಿಕೊಂಡು ಸ್ಪರ್ಧಿಸುತ್ತಿವೆ. ಆದರೆ ಇಂದಿಗೂ ಅಲೆಮಾರಿ ಸಮುದಾಯಗಳ ಹಲವು ಗುಂಪುಗಳು ಪಾರಂಪರಿಕ ಕಸಬುಗಳನ್ನೇ ಮುಂದುವರೆಸುತ್ತಿವೆ. ಹೆಳವರಲ್ಲೂ ಈ ಬಗೆಯ ಹಲವು ಗುಂಪುಗಳನ್ನು ನಾವು ಕಾಣಬಹುದಾಗಿದೆ. ಮುಖ್ಯವಾಗಿ ಬೆಳಗಾಂ, ಬೀದರ್ ಮತ್ತು ದಕ್ಷಿಣ ಕರ್ನಾಟಕದ ಎತ್ತಿನ ಹೆಳವರು, ಗಂಟೆ ಹೆಳವರು ಮತ್ತು ಚಾಪೆ ಹೆಳವರು ಹಲವು ಗುಂಪುಗಳು ಪಾರಂಪರಿಕ ವೃತ್ತಿಯಲ್ಲಿಯೇ ತೊಡಗಿರುವುದು ಕಂಡು ಬರುತ್ತದೆ. ಇದರಲ್ಲಿ ಎತ್ತಿನ ಹೆಳವ ಪಂಗಡದ ಗುಂಪುಗಳು ಹೆಚ್ಚಾಗಿ ಅಲೆಮಾರಿಗಳಾಗಿ ಬದುಕುವುದು ಕಂಡು ಬರುತ್ತದೆ.

ಭಾರತದ ಹಲವು ಕಸಬುದಾರ ಸಮುದಾಯಗಳು ತೀವ್ರವಾದ ಕೈಗಾರಿಕರಣದಿಂದ ತಮ್ಮ ಪಾರಂಪರಿಕ ಕಸಬುಗಳನ್ನು ಕಳೆದುಕೊಂಡು ಅನಿವಾರ್ಯವಾಗಿ ಪರ್ಯಾಯ ಕಸಬುಗಳನ್ನು ಅವಲಂಬಿಸಬೇಕಾಯ್ತು. ತಮ್ಮ ವೃತ್ತಿಗಳನ್ನು ಇವರು ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆಯ ಜೊತೆ ಸ್ಪರ್ಧಿಸಲಾರದೆ ಈ ಕಸಬುದಾರ ಸಮುದಾಯಗಳು ಬಿಟ್ಟು ಕೊಡಬೇಕಾಯ್ತು. ಆದರೆ ಸಾಮಾಜಿಕ ಅವಮಾನಕ್ಕೆ ಕಾರಣವಾಗುವ ವೃತ್ತಿಗಳನ್ನು ಅನುಸರಿಸುತ್ತಿದ್ದ ಕೆಳಜಾತಿಗಳು ತಮ್ಮ ಪಾರಂಪರಿಕ ಕಸಬುಗಳಲ್ಲಿ ಮುಂದುವರೆಯಲು ಬಯಸಲಿಲ್ಲ. ಅಲ್ಲದೆ ಸಾಮಾಜಿಕ ಅವಮಾನಕ್ಕೆ ಕಾರಣವಾಗುವ ತಮ್ಮ ಪಾರಂಪರಿಕ ವೃತ್ತಿಗಳನ್ನು ಬಿಟ್ಟುಕೊಡಲು ಈ ಸಮುದಾಯಗಳು ಹಾತೊರೆದವು. ವಿದ್ವಾಂಸರು ಸಂಸ್ಕೃತಿ ಚಿಂತಕರು ನಮ್ಮ ಪರಂಪರೆ, ಸಂಸ್ಕೃತಿ ವೈವಿಧ್ಯತೆಗಳೆಲ್ಲ ಉಳಿಯಬೇಕೆಂದು ಬೊಬ್ಬೆ ಹೊಡೆಯತುತ್ತಾರೆ. ಆದರೆ ‘ತಾವು ಅನುಸರಿಸುತ್ತಿರುವ ವೈತ್ತಿಯ ಕಾರಣಕ್ಕಾಗಿಯೇ ಅತ್ಯಂತ ಹೀನಯ ಸಾಮಾಜಿಕ ಅವಮಾನವನ್ನು ಶತಮಾನಗಳಿಂದ ಅನುಭವಿಸುತ್ತಿರುವ ಸಮುದಾಯಗಳು ತಮ್ಮ ಪಾರಂಪರಿಕ ವೃತ್ತಿಗಳ ಕುರಿತು ಹೇಗೆ ಯೋಚಿಸುತ್ತಿವೆ’ ಎಂಬ ಪ್ರಾಥಮಿಕ ಪ್ರಶ್ನೆಯನ್ನು ನಾವು ಕೇಳಿಕೊಂಡಿಲ್ಲ. ವೇಗವಾಗಿ ಚಲಿಸುತ್ತಿರುವ ಜಗತ್ತಿನಲ್ಲಿ ಯಾರು ಯಾವ ವೃತ್ತಿಯನ್ನಾದರೂ ಹಿಡಿಯಬಹುದು, ಹೇಗೆ ಬೇಕಾದರೂ ತಮ್ಮ ಬದುಕಿನ ವಿಧಾನಗಳನ್ನು ಬದಲಿಸಿಕೊಳ್ಳಬಹುದು. ಆರ್ಥಿಕವಾಗಿ ಸಬಲಗೊಳ್ಳಲು ಆಧುನಿಕ ಜಗತ್ತಿನ ಯಾವ ವೃತ್ತಿಯನ್ನಾದರೂ ಅವಲಂಬಿಸಬಹುದು ಎಂಬ ಸ್ವಾಂತಂತ್ರ್ಯವನ್ನು ‘ಆಧುನಿಕ ಸಮುದಾಯವನ್ನಾದರೂ ಅವಲಂಬಿಸಬಹುದು ಎಂಬ ಸ್ವಾತಂತ್ರ್ಯವನ್ನು ‘ಆಧುನಿಕ ಸಮುದಾಯಗಳು’ ಅನುಭವಿಸುತ್ತಿವೆ. ಈ ‘ಆಧುನಿಕ ಸಮಾಜಗಳು’ ಬಿಟ್ಟುಕೊಟ್ಟಿರುವ ‘ಪರಂರಪೆ’ಯ ಕುರಿತು ಯಾವ ಸಂಸ್ಕೃತಿ ಚಿಂತಕರೂ ತಲೆಕೆಡಿಸಿಕೊಳ್ಳುವುದಿಲ್ಲ. ‘ಭಾರತೀಯ ಸಂಸ್ಕೃತಿಯ’ ನಿರ್ಮಾತೃಗಳು ಮತ್ತು ಅದರ ನಿಜ ವಾರಸುದಾರರೆಂದು ಹೇಳಿಕೊಳ್ಳುವ ಅವರೇ ತಮ್ಮ ಪರಂಪರೆಯ ವೃತ್ತಿಗಳನ್ನು ಯಾವ ಮುಲಾಜು ಇಲ್ಲದೆ ಬಿಟ್ಟುಕೊಟ್ಟು, ವಿವಿಧ ಆಧುನಿಕ ವೃತ್ತಿಗಳನ್ನು ಹಿಡಿದು ಸಂತೃಪ್ತಿಯಿಂದಿದ್ದಾರೆ. ಇವರೆಲ್ಲ ಈ ದೇಶದ ಪ್ರಬಲ ಜಾತಿಗಳಿಗೆ ಸೇರಿದವರು. ಇವರನ್ನು ಯಾರೂ ನಿಮ್ಮ ಸಂಸ್ಕೃತಿಯನ್ನು ಯಾಕೆ ಬಿಟ್ಟುಕೊಟ್ಟಿರಿ? ಎಂದು ಪ್ರಶ್ನಿಸಲಾರರು. ಆದರೆ ಕೆಳಜಾತಿಗಳು, ಆದಿವಾಸಿಗಳು ‘ಆಧುನಿಕ’ವಾಗಲು ಹೊರಟವೆಂದರೆ ಸಾಕು ಈ ಪಂಡಿತರು ಚಡಪಡಿಸಲಾರಂಭಿಸುತ್ತಾರೆ ಕನ್ನಡವನ್ನು ‘ದಲಿತರು ಮಾತ್ರ ಉಳಿಸಬಲ್ಲರು’ ಎಂಬ ಒಣತರ್ಕಗಳನ್ನು ಹರಿಬಿಡುತ್ತಾರೆ. ಈ ಆಧುನಿಕೋತ್ತರ ನವ ಸಂಪ್ರದಾಯವಾದಿಗಳು ಭಾರತದ ಬಹುತ್ವ ‘ಉಳಿಯಲೇಬೇಕು’, ಅದು ಉಳಿಯಬೇಕೆಂದರೆ ಪರಂಪರೆಯ ತಿಳುವಳಿಕೆ ಮತ್ತು ಚಹರೆಗಳು ಉಳಿಯಬೇಕು ಎನ್ನುತ್ತಾರೆ. ಇದು ಬುದ್ಧಿ ಜೀವಿಗಳೆನ್ನಿಸಿಕೊಳ್ಳುವವರ ಒಳಗೇಇರುವ ಸುಪ್ತ ಮೂಲಭೂತವಾದವೇ ಆಗಿದೆ. ಭಾರತದ ಬಹುತ್ವ ಅಂದೂ ಮತ್ತು ಇಂದು ಜೀವಂತವಿರುವುದು ಈ ದೇಶದ ಶ್ರಮಜೀವಿಗಳಿಂದಾಗಿ. ಅವರೇ ಈ ದೇಶದ ನಿಜ ಸಂಸ್ಕೃತಿಯ ವಾರಸುದಾರರು. ಆಳುವ ವರ್ಗದ ಎಲ್ಲ ಬಗೆಯ ಹಿಂಸೆ, ಮತ್ತು ಕ್ರೌರ್ಯಗಳನ್ನು ಅನುಭವಿಸಿಯೂ ಈ ನೆಲದ ಅನನ್ಯತೆಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಆ ಕಾರಣಕ್ಕಾಗಿ ಸಾಮಾಜಿಕ ಮತ್ತು ರಾಜಕೀಯಾರ್ಥಿಕ ಸ್ವಾತಂತ್ರ್ಯಗಳನ್ನು ಶತಮಾನಗಳಿಂದ ಕಳೆದುಕೊಳ್ಳುತ್ತಲೇ ಬಂದಿದ್ದಾರೆ.

ಆದರೆ ಇಂದು ದುಡಿವ ವರ್ಗದ ಜನ ತಮ್ಮ ವೃತ್ತಿಗಳನ್ನು ಬಿಟ್ಟುಕೊಡಲು ಯೋಚಿಸುತ್ತಿದ್ದಾರೆ. ಕೃಷಿಕರಲ್ಲದ, ಸಾಮಾಜಿಕವಾಗಿ ‘ಹೀನ’ ವೃತ್ತಿಗಳನ್ನು ಅವಲಂಬಿಸಿರುವ ಬಹುತೇಕ ಎಲ್ಲ ಸಮುದಾಯಗಳು ಸಾಮಾಜಿಕ ಅವಮಾನವನ್ನು ಮೀರಿ ನಿಲ್ಲಲು ತಮ್ಮ ವೃತ್ತಿಗಳನ್ನು ಬಿಟ್ಟು ಕೊಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಸಮುದಾಯಗಳು, ಇಂಡಿಯಾವೆಂಬ ದೇಶವೊಂದಿದೆಯೋ ಇಲ್ಲವೋ, ಅದರ ಸಾಂಸ್ಕೃತಿಕ ಬಹುತ್ವ ಇರಬೇಕೋ, ನಾಶವಾಗಬೇಕೋ ಎಂಬುದಕ್ಕಿಂತ ಒಂದು ಹೊತ್ತಿನ ಊಟದ ಕುರಿತು ಮತ್ತು ತಲೆ ಎತ್ತಿ ನಿಲ್ಲಿಸುವ ಆತ್ಮ ಪ್ರತ್ಯಯದ ಕುರಿತು ಯೋಚಿಸುತ್ತಿವೆ. ಆಧುನಿಕ ಜಗತ್ತಿನಲ್ಲಿ ಬಿಡಿಗಾಸನ್ನೂ ತರದ ಮತ್ತು ಹಿಂಸಾತ್ಮಕ ಸಾಮಾಜಿಕ ಅವಮಾನಕ್ಕೆ ಕಾರಣವಾಗುವ ಪಾರಂಪರಿಕ ವೃತ್ತಿಗಳನ್ನು ಅವರು ಬಿಟ್ಟುಕೊಡುತ್ತಿದ್ದಾರೆ. ಆದರೆ ಅಲೆಮಾರಿಗಳಿಗೆ ಈ ಅನುಕೂಲತೆಯೂ ಇಲ್ಲ. ಈ ಸಮುದಾಯಗಳು ಒಪ್ಪೊತ್ತಿನ ಊಟಕ್ಕೆ ತಮ್ಮ ವೃತ್ತಿಗಳನ್ನು ಇನ್ನೂ ಅನುಸರಿಸಲೇ ಬೇಕಾದ ಕ್ರೂರ ಅನಿವಾರ್ಯತೆಯ ಮುಂದೆ ಮಂಡಿಯೂರಿಬಿಟ್ಟಿವೆ.

ಆದರೆ ಸ್ವಾತಂತ್ರ್ಯಾನಂತರದ ಕಾಲಘಟ್ಟದಲ್ಲಿ ಅಲೆಮಾರಿಗಳು ಶುದ್ಧ ಅಲೆಮಾರಿಗಳಾಗಿ ಉಳಿಯಲಿಲ್ಲ. ಅಲೆಮಾರಿಗಳ ಮೇಲ್‌ಸ್ತರದ ಜನ ಮುಖ್ಯಪ್ರವಾಹಕ್ಕೆ ಬರುವ ನಿಟ್ಟಿನಲ್ಲಿ ಯೋಚಿಸತೊಡಗಿದರು. ತಮ್ಮ ಪಾರಂಪರಿಕ ವೃತ್ತಿಗಳನ್ನು ಕೆಲವರು ಬಿಟ್ಟುಕೊಟ್ಟು ಕೃಷಿಕರಾಗಲು ಯತ್ನಿಸಿದರು. ಶಿಕ್ಷಣ ಪಡೆದು ಔದ್ಯೋಗಿಕ ರಂಗಗಳಲ್ಲಿ ಪ್ರವೇಶ ಪಡೆದರು. ಆದರೆ ಇವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ೧೯೫೨ರಲ್ಲಿ ಕ್ರಿಮಿನಲ್ ಟ್ರೈಬಲ್ ಆಕ್ಟ್‌ನ್ನು ರದ್ದುಗೊಳಿಸಿ, ಆ ಪಟ್ಟಿಯಲ್ಲಿದ್ದ ಸಮುದಾಯಗಳನ್ನು ಡಿನೋಟಿಫೈಡ್ ಸಮುದಾಯಗಳೆಂದು ಪರಿಗಣಿಸಲಾಯ್ತು. ಆದರೆ ಮೀಸಲಾತಿಗೆ ಸಂಬಂಧಿಸಿದಂತೆ ಇವರಿಗೆ ಯಾವ ಅನುಕೂಲತೆಗಳೂ ಇರಲಿಲ್ಲ. ಕರ್ನಾಟಕದಲ್ಲಿ ಈ ಸಮುದಾಯಗಳು ೧೯೭೮ರ ವರೆಗೂ ಸರಕಾರದ ಯಾವ ಸೌಲಭ್ಯಗಳನ್ನು ಪಡೆಯಲು ಅನರ್ಹವಾಗಿದ್ದವು. ಏಕೆಂದರೆ ಡಿನೋಟಿಫೈಡ್ ಸಮುದಾಯಗಳಿಗೆ ಕೊಡದೇ ಮಾಡುವ ಯಾವ ಕಾರ್ಯ ಕ್ರಮಗಳಾಗಲಿ, ಯೋಜನೆಗಳಾಗಲಿ ಸರಕಾರದ ಮುಂದಿರಲಿಲ್ಲ. ಬದಲಿಗೆ ಕಂಪನಿ ಆಡಳಿತ ಈ ಸಮುದಾಯಗಳನ್ನು ಹೇಗೆ ನಡೆಸಿಕೊಂಡಿತೋ ಅದೇ ಅಬೆಯಲ್ಲಿ ಸ್ವತಂತ್ರ ಭಾರತದ ಸರಕಾರವೂ ನಡೆಸಿಕೊಂಡಿತು. ಯಾವುದೇ ಊರಲ್ಲಿ ಕಳ್ಳತನವಾದರೂ ಮೊದಲು ಬಂಧಿಸುವುದು, ಆ ಊರಿನ ಹೊರಗೆ ಗುಡಿಸಲು ಹಾಕಿಕೊಂಡು ತಾತ್ಕಾಲಿಕವಾಗಿ ಬದುಕುವ ಅಲೆಮಾರಿಗಳನ್ನ. ಹೊಸಪೇಟೆ ಬಳಿ ಇರುವ ಹಕ್ಕಿಪಿಕ್ಕಿಗಳು ಸ್ವಾತಂತ್ರ ಬಂದು ೫೭ ವರ್ಷಗಳು ಕಳೆದು ಹೋಗಿದ್ದರೂ ಅಮಾವಾಸೆಯ ರಾತ್ರಿ ಪೋಲೀಸ್ ಠಾಣೆಯಲ್ಲಿ ಹೋಗಿ ಮಲಗುವ ಪರಿಸ್ಥಿತಿ ಇತ್ತು. ಹೊಟ್ಟೆ ಪಾಡಿಗೆ ಯಾರಾದರೂ ಹಕ್ಕಿಪಿಕ್ಕಿಗಳು ಯಾವುದೋ ಪಕ್ಷಿಯನ್ನು ಹೊಡೆದು ತಿಂದು ಬಿಟ್ಟರೆ ಅವರನ್ನು ಬಂಧಿಸಿ ಫೋಟೋ ತೆಗೆಸಿ ನಮ್ಮ ಪೋಲೀಸರು ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳಲು ಈಗಲೂ ಹಾತೊರೆಯುತ್ತಾರೆ. ಒಂದು ಅಮಾಯಕ ಸಮುದಾಯದ ಬದುಕನ್ನು ಹಸನು ಮಾಡದ ವ್ಯವಸ್ಥೆಗೆ ಎಷ್ಟೇ ವರ್ಷದ ಇತಿಹಾಸವಿದ್ದರೂ, ಅದಕ್ಕೆ ಮಾನವಂತ ಭವಿಷ್ಯ ರೂಪಗೊಳ್ಳಲಾರದು. ಹಕ್ಕಿಪಿಕ್ಕಿಯಂತಹ ಸಮುದಾಯಗಳಿಗೆ ಈ ದೇಶದ ಯಾವ ಹಕ್ಕುಗಳು ದಕ್ಕದೇ ಇದ್ದ ಸಂದರ್ಭದಲ್ಲಿ ಅವರನ್ನು ಕಾನೂನಿನ ಮೂಲಕ ದಂಡಿಸುವ ಯೋಚನೆಯೇ ಅತ್ಯಂತ ಅಮಾನವೀಯವಾದದ್ದು. ನಾಗರಿಕವಾಗಿ ಈ ದೇಶದ ಸಂಪತ್ತಿನಲ್ಲಿ ಅವರಿಗೆ ಸಮಪಾಲಿದೆ. ಬದುಕುವ ಹಕ್ಕು. ಶಿಕ್ಷಣ ಪಡೆವ ಹಕ್ಕು, ಮಾತನಾಡುವ ಹಕ್ಕುಗಳಿವೆ. ಆದರೆ ನಮ್ಮ ಸರ್ಕಾರ ಇನ್ನೂ ಕಂಪನಿ ಆಡಳಿತದ ಕಾನೂನುಗಳ ಗುಂಗಿನಿಂದ ಹೊರ ಬಂದಿಲ್ಲ.

ಈವತ್ತು ಒಂದು ಕಾಲದ ಅಲೆಮಾರಿಗಳು ನೆಲೆನಿಲ್ಲಲು ಇನ್ನಿಲ್ಲದಂತೆ ಯತ್ನಿಸಿದ್ದಾರೆ. ಈಗಾಗಲೆ ಬಹುತೇಕ ಅಲೆಮಾರಿಗಳು ನೆಲೆ ನಿಂತಿದ್ದಾರೆ. ಆದರೆ ಮುಖ್ಯವಾಹಿನಿಯ ಆರ್ಥಿಕ ಚಲನೆಗಳ ಜೊತೆ ಅವರಿಗೆ ಅನುಸಂಧಾನ ಸಾಧ್ಯವಾಗುತ್ತಿಲ್ಲ. ಅಲೆಮಾರಿಗಳ ವರ್ತಮಾನದ ಸ್ಥಿತಿಗತಿಗಳಿಗೂ ಮತ್ತು ಕೆಲಜತಿ ಸಮುದಾಯಗಳ ಸ್ಥಿತಿಗತಿಗಳಿಗೂ ಭಾತದ ಸಾಮಾಜಿಕ ಅಧಿಕಾರದ ಹಂಚಿಕೆಯ ವ್ಯವಸ್ಥೆಯಲ್ಲಿ ಒಂದೇ ಬಗೆಯ ಕಾರಣಗಳಿದ್ದರೂ ಸಹ, ಅಲೆಮಾರಿಗಳ ಸಮಸ್ಯೆ ತುಸು ಸಂಕೀರ್ಣವಾಗಿದೆಯೆಂದೇ ನನ್ನ ಅಭಿಪ್ರಾಯ. ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ವಲಯಗಳಲ್ಲಿ ಅರ್ಹ ಸೌಲಭ್ಯಗಳನ್ನು ಪಡೆಯುವಾಗ ಈ ಸಮುದಾಯಗಳು ತಲ್ಲಣಗೊಳ್ಳುತ್ತವೆ. ಜಾತಿಪ್ರಮಾಣ ಪತ್ರ ಪಡೆಯುವ ಪ್ರಾಥಮಿಕ ಹಂತದಿಂದಲೂ ಇವು ಹೋರಾಟ ನಡೆಸಬೇಕಿದೆ. ಇನ್ನು ಮೀಸಲಾತಿಯೊಂದಿಗೆ ಮುಖ್ಯಪ್ರವಾಹದ ವೇಗದ ಲಯಕ್ಕೆ ಅಲೆಮಾರಿಗಳು ಒಗ್ಗುವುದಕ್ಕೆ ಎಷ್ಟು ತಲೆಮಾರುಗಳು ಬೇಕು? ನಾವೆಲ್ಲ ಮತ್ತೆ ಮತ್ತೆ ಈ ಕುರಿತು ಯೋಚಿಸಬೇಕಿದೆ.

ಅಲೆಮಾರಿ ಹೆಳವರು ಈವತ್ತು ಅವರಿರುವ ಸ್ಥಿತಿಯಲ್ಲಿ ಆಧುನಿಕ ಜಗತ್ತಿನ ಯಾವ ಸವಲತ್ತುಗಳನ್ನು ಪಡೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ಒಂದು ಅರ್ಥದಲ್ಲಿ ಅಲೆಮಾರಿ ಹೆಳವರು ತಮ್ಮ ಪಾರಂಪರಿಕ ವೃತ್ತಿಗೆ ತೀವ್ರವಾಗಿ ನಿಷ್ಠರಾಗಿದ್ದಾರೆ. ಪಾರಂಪರಿಕ ಕಸಬನನ್ನು ಅತ್ಯಂತ ಭಾವುಕವಾಗಿ ವರ್ತಮಾನದಲ್ಲಿ ಮುಂದುವರಿಸುತ್ತಿರುವುದರ ಕುರಿತು ಅವರು ಮಾತನಾಡುತ್ತಾರೆ. ಭಾಗಲಕೋಟೆ ಜಿಲ್ಲೆಯ ಬೀಳಗಿ ಬಳಿಯಲ್ಲಿ ಬೀಡು ಬಿಟ್ಟದ್ದ ಅಲೆಮಾರಿ ಹೆಳವರ ಗುಂಪೊಂದನ್ನು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ನಾನು ಬೇಟೆ ಮಾಡುವ ಸಂದರ್ಭ ಬಂದಿತು.

ಒಂದು ಮಧ್ಯಾಹ್ನದ ಇಳಿ ಹೊತ್ತಿನಲ್ಲಿ ಹೊಲವೊಂದರಲ್ಲಿ ಹೆಳವರು ಊಟದ ತಯಾರಿಯಲ್ಲಿದ್ದರು. ಕಪ್ಪು ಮಣ್ಣಿನ ಹೊಲದಲ್ಲಿ ಅವರ ೨೫ ಕ್ಕೂ ಹೆಚ್ಚು ಬಂಡಿಗಳು ಬೀಡುಬಿಟ್ಟಿದ್ದವು. ಜೊತೆಗೆ ಆಕಳು, ಕುರಿಗಳು ಮತ್ತು ಕೋಳಿಗಳು ಸಹ ಇದ್ದವು. ಹೆಂಗಸರು ಅಡುಗೆ ತಯಾರಿ ಮಾಡುತ್ತಿದ್ದರೆ ಗಂಡಸರೆಲ್ಲ ಬೀಡಿ ಸೇದುತ್ತಾ ಅಲ್ಲಲ್ಲಿ ಮಾತನಾಡುತ್ತ ಕುಳಿತಿದ್ದರು. ಅವರೆಲ್ಲ ಎತ್ತಿನ ಹೆಳವ ಪಂಗಡಕ್ಕೆ ಸೇರಿದವರು. ನಾವು ಕ್ಷೇತ್ರಕಾರ್ಯಕ್ಕೆ ತೆಗೆದುಕೊಂಡು ಹೋಗಿದ್ದ ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ ಅವರ ಬಳಿ ಹೋದೆವು. ಸುಮಾರು ಐವತ್ತು ವರ್ಷದ ಬಲಿಷ್ಠ ವ್ಯಕ್ತಿ ನಮ್ಮನ್ನು ಎದುರ್ಗೊಂಡಿತು. ನಾನು ನನ್ನ ಪರಿಚಯ ಹೇಳಿಕೊಂಡು ಆತನನ್ನು ವಿಶ್ವಾಸಕ್ಕೆ ತೆಗೆದುಕೊಂಡೆ. ಲೋಕಾಭಿರಾಮದ ಚರ್ಚೆಯ ನಂತರ ನಾನು ಅವರ ಸಾಮಾಜಿಕ ಮತ್ತು ಆರ್ಥಿಕ ಬದುಕಿನ ನಿರ್ವಹಣೆಯ ಕುರಿತು ಪ್ರಶ್ನೆ ಕೇಳಲಾರಂಭಿಸಿದೆ. ಜೊತೆಗೆ ಅವರ ಬಳಿ ಇದ್ದ ಚಿಪ್ಪೋಡುಗಳನ್ನು ತೋರಿಸಲು ಕೇಳಿಕೊಂಡ ಯಾವಾಗ ನನ್ನ ಪ್ರಶ್ನೆಗಳು ಅವರ ಬದುಕಿನ ಸೂಕ್ಷ್ಮ ವಿವರಗಳನ್ನು ಕೆದಕಲು ತೊಡಗಿದವೋ ನನ್ನ ಜೊತೆ ಚರ್ಚಿಸುತ್ತಿದ್ದ ವ್ಯಕ್ತಿ ಗಂಭೀರವಾಗಿತೊಡಗಿದ. ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಮೆದುವಾಗಿಯೇ ನಿರಾಕರಿಸತೊಡಗಿದ. ಅಷ್ಟರಲ್ಲಿ ಆತ ತನ್ನ ಬಳಿ ಇದ್ದ ಚಿಪ್ಪೋಡನ್ನು ತಂದು ತೋರಿಸಿದ. ನಾನು ಅದರ ಪುಟಗಳನ್ನು ತಿರುವಿ ಹಾಕಲು ಪ್ರಯತ್ನಿಸುತ್ತಿದ್ದಂತೆ ಆ ವ್ಯಕ್ತಿ ನನ್ನ ಕೈಯಲ್ಲಿದ್ದ ಚಿಪ್ಪೋಡನ್ನು ಮೆಲಲ್ನೆ ಕಿತ್ತುಕೊಂಡ . ಅಷ್ಟರಲ್ಲಿ ಬೇರೆ ಬೇರೆ ಬಂಡಿಗಳ ಬಳಿ ಬೀಡಿ ಸೇದುತ್ತ ಕುಳಿತಿದ್ದ ಹೆಳವರ ಜನ ನಾವು ಚರ್ಚಿಸುತ್ತದ್ದ ಸ್ಥಳಕ್ಕೆ ಬಂದರು ಅಷ್ಟರಲ್ಲಿ ಆಗಲೇ ನನ್ನ ಜೊತೆ ಮಾತಾಡುತ್ತಿದ್ದ ವ್ಯಕ್ತಿಗೆ ಚರ್ಚೆ ಬೇಡವಾಗಿತ್ತು ನಾನು ಅವರ ನೆಲೆನಿಂತು ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ಪೋಷಿಸುವ ಕುರಿತು ಅವರಿಗೆ ವಿವರಿಸುತ್ತಿದ್ದೆ. ಅಷ್ಟರಲ್ಲಿ ಆಗ ತಾನೇ ನಮ್ಮನ್ನು ಸುತ್ತುವರೆದಿದ್ದ ಹೆಳವರ ಗುಂಪಿನ ಸದಸ್ಯರಲ್ಲಿ ಒಬ್ಬಾತ ಮುಂದಕ್ಕೆ ಬಂದು ಚರ್ಚಿಸತೊಡಗಿದ. ತಲೆಗೆ ಗಾಂಧೀ ಟೋಪಿ ಹಾಕಿದ್ದ ಆತ ಮೊದ ಮೊದಲು ಮೆಲುದನಿಯಲ್ಲಿಯೇ ಮಾತಾಡಿದ. ನಂತರ ಆತನ ದನಿ ಗಡುಸಾಯಿತು. ಆತ ನನ್ನನ್ನು ಅನುಮಾನಿಸತೊಡಗಿದ. ಜೊತೆಗೆ ತಮ್ಮ ಅಲೆಮಾರಿತನವನ್ನು ಆತ ಸಮರ್ಥಿಸತೊಡಗಿದ. ತಮ್ಮ ಬಳಿ ಇರುವ ಚಿಪ್ಪೊಡುಗಳಲ್ಲಿನ ದಾಖಲೆಗಳನ್ನು ಸುಪ್ರಿಂಕೋರ್ಟೇ ಒಪ್ಪಿಕೊಳ್ಳುತ್ತಿರುವುದರ ಕುರಿತು ಹೇಳಿದ. ತಮಗೆ ಬೇರೆ ಯಾವ ಉದ್ಯೋಗವೂ ಬೇಕಿಲ್ಲ. ತಮ್ಮ ವೃತ್ತಿ ಯಾವ ಕಾರಣಕ್ಕೂ ನಿಲ್ಲಿಸದೆ ಮುಂದುವರಸುವುದರ ಕುರಿತು ಆತ ಒರಟಾಗಿಯೇ ನನಗೆ ಹೇಳಿದ. ‘ನಮಗೆ ಈ ವೃತ್ತಿಯನ್ನು ದೇವರೇ ಕೊಟ್ಟಿದ್ದಾನೆ ಅದನ್ನು ನಾವು ಮುಂದುವರೆಸುತ್ತೇವೆ. ಇದರಲ್ಲಿ ನಾವು ಸುಖವಾಗಿದ್ದೇವೆ. ನಮ್ಮಲ್ಲಿನ ದಾಖಲೆಗಳನ್ನು ಕೋರ್ಟುಗಳು ನಂಬಿ ತೀರ್ಪುಕೊಡುತ್ತವೆ. ನಮ್ಮ ಒಕ್ಕಲುಗೂಳು ನಮಗೆ ಬೇಕಾದ ಎಲ್ಲವನ್ನೂ ಕೊಡುತ್ತಾರೆ. ನಾವು ಈಗಿರುವ ಸ್ಥಿತಿಯಲ್ಲಿಯೆ ಚೆನ್ನಾಗಿದ್ದೇವೆ’ ಎಂದ ಆತ ನನ್ನ ಬಳಿ ಮತ್ತೆ ಮಾತನಡಲು ಬಯಸಲಿಲ್ಲ. ನನ್ನನ್ನು ಯಾವುದೋ ಗೂಢಚಾರ ಎಂಬ ಗುಮಾನಿಯಿಂದಲೇ ಆತ ಅನುಮಾನಿಸ ತೊಡಗಿದ. ಆವರನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳು ನನ್ನೆಲ್ಲ ಬುದ್ಧಿಶಕ್ತಿ ವಿನಿಯೋಗಿಸಿದರೂ ಸಾಧ್ಯವಾಗಲೇ ಇಲ್ಲ. ಕೊನೆಗೆ ಅವರು ತಮ್ಮ ಬಳಿಯಲ್ಲಿನ ಚಿಪ್ಪೋಡುಗಳನ್ನು ಮುಚ್ಚಿಟ್ಟರು. ಅವರ ಜೊತೆ ಮತ್ತೆ ಚರ್ಚೆ ಸಾಧ್ಯವಿಲ್ಲ ಎಂದು ಹೊರಟು ಬಂದೆವು.

ನಾನು ಬೇಟಿ ಮಾಡಿ ಚರ್ಚಿಸಿದ ಹೆಳವ ಸಮುದಾಯದ ಜನರಲ್ಲಿ ನಾನು ಮೂರು ಬಗೆಯ ಗುಂಪುಗಳನ್ನು ಕಂಡುಕೊಂಡೆ.

೧. ಪಾರಂಪರಿಕ ವೃತ್ತಿಯಲ್ಲಿ ಅಪಾರ ನಿಷ್ಠೆ ಹೊಂದಿ, ಅದನ್ನು ಈವತ್ತೂ ಮುಂದುವರೆಸಿಕೊಂಡು ಬದುಕುತ್ತಿರುವ ಅಲೆಮಾರಿ ಗುಂಪುಗಳು

೨. ಪಾರಂಪರಿಕ ವೃತ್ತಿಯಲ್ಲಿ ಗೌರವವಿಟ್ಟುಕೊಂಡೂ, ಸಾಮಾಜಿಕ ಸ್ಥಾನಮಾನಗಳನ್ನು ಉನ್ನತೀಕರಿಸಿಕೊಳ್ಳಲು ಭಿನ್ನ ವೃತ್ತಿಗಳನ್ನು ಅವಲಂಬಿಸಿರುವವರು

೩. ಪಾರಂಪರಿಕ ವೃತ್ತಿಯಲ್ಲಿ ಯಾವ ಗೌರವವೂ ಇಲ್ಲದೆ ಬೇರೆ ವೃತ್ತಿಗಳನ್ನು ಉದಾ. ಕೃಷಿ ವ್ಯಾಪಾರ, ಸರ್ಕಾರಿ ಉದ್ಯೋಗದಲ್ಲಿರುವವರು.

ನನ್ನ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಕಂಡುಕೊಂಡ ಈ ಮೂರು ಗುಂಪುಗಳಲ್ಲಿ ಎರಡು ಮತ್ತು ಮೂರನೇ ಗುಂಪಿನ ಜನ ಬದಲಾವಣೆಗೆ ತೀವ್ರವಾಗಿ ಹಂಬಿಲಿಸುವವರು. ಆದರೆ ಅಲೆಮಾರಿಗಳೂ ಪಾರಂಪರಿಕ ವೃತ್ತಿಯಲ್ಲಿಯೇ ಇರುವುದರಿಂದ, ಸಾಮಾಜಿಕ ಬದುಕನ್ನು ತೀವ್ರವಾಗಿ ಬದಲಿಸುವ ಆಧುನಿಕ ಆರ್ಥಿಕ ಚುಟುವಟಿಕೆಗಳು ಅವರಿಗೆ ಸಾಧ್ಯವಾಗಿಲ್ಲ, ಈ ಕಾರಣದಿಂದ ಅವರ ಸಾಮಾಜಿಕಾರ್ಥಿಕ ಬದುಕಲ್ಲಿ ಅಂತಹ ವ್ಯತ್ಯಾಸಗಳು ಸಂಭವಿಸಿಲ್ಲ. ದುರಂತವೆಂದರೆ ನಾನು ಮೇಲೆ ಉಲ್ಲೇಖಿಸಿದ ಮೂರು ಗುಂಪಿನ ಜನ ಒಂದೇ ಮನೆಯಲ್ಲಿ ವಾಸಿಸುವ ಉದಾಹರಣೆಗಳನ್ನು ನಾನು ಬೆಳಗಾಂ ಜಿಲ್ಲೆಯಲ್ಲಿ ನೋಡಿದೆ. ಒಂದೇ ಮನೆಯಲ್ಲಿ ಅಣ್ಣತಮ್ಮಂದಿರು ಈ ಬಗೆಯ ಅಗಾಧ ಭಿನ್ನಾಭಿಪ್ರಾಯಗಳನ್ನಿಟ್ಟುಕೊಂಡು ಒಂದೇ ಸೂರಿನಡಿ ಬದುಕುತ್ತಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ. ಬೆಳಗಾಂ ಜಿಲ್ಲೆಯ ಗೋಕಾಕ್‌ನಲ್ಲಿನ ಅಮೃತ್‌ ಹೆಳವಿ ಎನ್ನುವವರು ಎಲ್ ಐ ಸಿ ಯ ಏಜೆಂಟ್ ಆಗಿ ಆರ್ಥಿಕವಾಗಿ ತಕ್ಕಮಟ್ಟಿಗೆ ಸುಸ್ಥಿತಿಯ್ಲಲಿದ್ದರೂ ಅವರ ಸ್ವಂತ ಸಹೋದರ ಊರೂರು ಸುತ್ತುತ್ತಾ ಹೆಳವ ವೃತ್ತಿಯನ್ನು ಅನುಸರಿಸುತ್ತಿದ್ದಾನೆ. ಅಮೃತ್ ಹೆಳವಿಗೆ ತಮ್ಮ ಕಸುಬಿನ ಬಗ್ಗೆ ಗೌರವವಿದೆ. ಅವರು ತಮ್ಮ ಅಣ್ಣನ ನಿಲುವನ್ನು ಗೌರವಿಸುತ್ತಾರೆ. ಆದರೆ ಇವರ ಮಾವ ತಮ್ಮ ಕುಲಕಸಬನ್ನ ಅಪಾರವಾಗಿ ತಿರಸ್ಕರಿಸುತ್ತಾರೆ. ಕೆಲವು ಒರಟು ಮಾತುಗಳನ್ನು ಬಳಸಿಯೇ ಅವರು ತಮ್ಮ ಕುಲಕಸಬನ್ನು ಜರಿಯತೊಡಗಿದರು. ಜೊತೆಗೆ ‘ಎಲ್ಲಿಯವರೆಗೆ ನಾವು ಕುಲಕಸುಬನ್ನು ಬಿಡಲಾರವೋ ಅಲ್ಲಿಯವರೆಗೆ ನಾವು ಉದ್ದಾರವಾಗಲಾರೆವು’ ಎಂದು ಅವರು ಮಾತು ಮುಗಿಸಿದರು.

ಈವತ್ತಿಗೂ ಅಲೆಮಾರಿಗಳಾಗಿ ಬದುಕುತ್ತಿರುವ ಗುಂಪಿನ ಸದಸ್ಯರಿಗೆ ತಮ್ಮ ಪಾರಂಪರಿಕ ಕುಲಕಸಬಿನ ಮೇಲೆ ಇನ್ನಿಲ್ಲದ ಗೌರವವಿರುವುದು ಮೇಲು ನೋಟಕ್ಕೇ ಕಂಡು ಬರುತ್ತದೆ. ಇದರಿಂದಾಗಿ ಈ ಸಮುದಾಯದಲ್ಲಿ ಇನ್ನೂ ಈಗಾಗಲೇ ಭಿನ್ನ ವೃತ್ತಿಗಳಲ್ಲಿದ್ದು ನೆಲೆನಿಂತಿರುವ ಸಮುದಾಯದ ಜನ, ಅಲೆಮಾರಿಗಳ ಜೊತೆ ರಕ್ತ ಸಂಬಂಧ ಬೆಳೆಸಲು ಹಿಂಜರಿಯುತ್ತಿದ್ದಾರೆ. ಆ ಗುಂಪಿನ ಜನ ಊರೂರು ತಿರುಗುತ್ತಿರುವ ಕಾರಣಕ್ಕಾಗಿ ಹೆಣ್ಣು ಕೊಡುವುದಾಗಲಿ, ಅಲ್ಲಿಂದ ಹೆಣ್ಣನ್ನು ತರುವುದಾಗಲೀ ಉಚಿತವಲ್ಲ ಎಂಬ ತೀರ್ಮಾನಕ್ಕೆ ನೆಲೆನಿಂತ ಜನ ಬಂದಿದ್ದಾರೆ. ಈ ಕಾರಣಕ್ಕಾಗಿ ಅಲೆಮಾರಿಗಳ ಸಾಮಾಜಿಕ ವ್ಯಾಪ್ತಿ ಒಂದು ಅರ್ತದಲ್ಲಿ ಕುಗ್ಗುತ್ತಿರುವ ಸೂಚನೆಗಳಿವೆ. ಏಕೆಂದರೆ ಒಂದು ಸರಕಾರಿ ಕೆಲಸದಲ್ಲಿರುವ ವ್ಯಕ್ತಿಯೊಬ್ಬ ಅಲೆಮಾರಿ ಗುಂಪಿನ ಹುಡಿಗಿಯೊಬ್ಬಳನ್ನು ಮದುವೆಯಾಗಲು ಸಹಜವಾಗಿಯೆ ತಿರಸ್ಕರಿಸುತ್ತಾನೆ. ಆಗ ಅಲೆಮಾರಿಗಳು ತಮ್ಮ ತಮ್ಮಲ್ಲಿಯೇ ರಕ್ತ ಸಂಬಂಧ ಏರ್ಪಡಿಸಿಕೊಳ್ಳಲು ತೊಡಗುತ್ತಾರೆ.

ಅಷ್ಟರ ಮಟ್ಟಿಗೆ ಅಲೆಮಾರಿಗಳ ಸಾಮಾಜಿಕ ವ್ಯಾಪ್ತಿ ಕಿರಿದಾಗುತ್ತಾ ಹೋಗುತ್ತದೆ. ಈ ಸ್ಥಿತಿ ಹೀಗೆಯೇ ಮುಂದುವರಿದರೆ ನೆಲೆನಿಂತ ಹೆಳವರು ತಮ್ಮನ್ನು ಒಂದು ಪ್ರತ್ಯೇಕ ಸಾಮಾಜಿಕ ಗುಂಪು ಎಂದು ಗುರುತಿಸಿಕೊಳ್ಳಬಹುದು. ಶಾಶ್ವತವಾಗಿ ರಕ್ತ ಸಂಬಂಧಗಳು ಏರ್ಪಡುವುದು ನಿಂತೂ ಬಿಡಬಹುದು.

 

[1] ಮಿದವೋಯ್ಎ.ಪಿ. ಭಾರತದಆರ್ಥಿಕವ್ಯವಸ್ಥೆ, ಪು. ೩೯, ೧೯೮೭

[2] Irfan Habib, Essays on Indian History, p 313, 1995

[3] Irfan Habib, The Agrarian System of Mughal India 1556 – 1707, p 143, 1999

[4] Devi G N, The Branded Tribes of India, p 1, 1998

[5] Stephen Fuchs, At the Bottom of Indian Society, p 154, 1981

[6] Mahaswetha Devi, An Act was Born, p 3, 1998

[7] Ibid, p3

[8] Ibid, p3

[9] Devi G N, The Branded Tribes Of India, p 1, 1998

[10] Stephen Fuchs, At the Bottom of Indian Society, p 55, 1981