ಚಾಪೆ ಹೆಳವರು

ಹೆಳವ ಸಮುದಾಯದಲ್ಲಿ ಇನ್ನೂ ಹಲವು ವೃತ್ತಿಗಳಲ್ಲಿ ತೊಡಗಿರುವ ಗುಂಪುಗಳಿವೆ. ಅದರಲ್ಲಿ ಇನ್ನೊಂದು ಪ್ರಮುಖ ಪಂಗಡ ಚಾಪೆ ಹೆಳವರು. ಚಾಪೆ ಹಳವರು ಬೀದರ್ ಮತ್ತು ಗುಲ್ಬರ್ಗಾ ಜಿಲ್ಲೆಯಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ. ಚಾಪೆ ಹೆಳವರು ಬೀದರ್ ಮತ್ತು ಗುಲ್ಬರ್ಗಾ ಜಿಲ್ಲೆಯಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ. ಚಾಪೆ ಹೆಳವರು ಚಾಪೆಗಳನ್ನು ಮಾರಿಯೇ ಬದುಕನ್ನು ಸಾಗಿಸಬೇಕಿದೆ. ಅಲ್ಲದೆ ಇವರು ಕಸಬರಿಗೆ, ಬುಟ್ಟಿಗಳನ್ನು ಮಾಡಿ ಮಾರುತ್ತಾರೆ… ಇದಕ್ಕೆ ಪರ್ಯಾವಾಗಿ ಇವರು ಹಂದಿ ಸಾಕಾಣಿಕೆಯನ್ನು ಮಾಡುತ್ತಾರೆ. ಇಷ್ಟೇ ಇವರ ಆದಾಯದ ಮೂಲಗಳು. ಪಟ್ಟಣ ಮತ್ತು ನಗರಗಳಿಗೆ ಹತ್ತಿರವಿರುವವರಲ್ಲಿ ಕೆಲವರು ಮಾತ್ರ ಪ್ಲಾಸ್ಟಿಕ್ ವಸ್ತುಗಳು, ಪಾತ್ರೆ ವ್ಯಾಪಾರವನ್ನು ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇದು ಒಂದೆರೆಡು ಕಡೆ ಮಾತ್ರ ಕಾಣಿಸುವುದು. ಇದಲ್ಲದೆ ಇವರು ಮೀನುಗಾರರ ಬಳಿ ಮೀನು ಹಿಡಿಯಲು ಕೂಲಿ ಮಾಡತ್ತದ್ದಾರೆ. ಇಂದಿಗೂ ಇವರು ಗುಡಿಸಲುಗಳ್ಳಲಿಯೇ ವಾಸ ಮಾಡುತ್ತಿದ್ದಾರೆ. ಗಂಟೆ ಹೆಳವರು ಮತ್ತು ಎತ್ತಿನ ಹೆಳವರಿಗಿಂತ ಚಾಪೆ ಹೆಳವರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನಿಕೃಷ್ಟ ಸ್ಥಿತಿಯಲ್ಲಿದ್ದಾರೆ.

ಹೆಳವರ ವರ್ತಮಾನದ ಇತರೆ ಕಸಬುಗಳು

ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ಯಾವುದೇ ಸೇವಕ ಸಮುದಾಯವು ಪಾರಂಪರಿಕವಾಗಿ ಆಳುವ ವರ್ಗದ ಆರ್ಥಿಕತೆಯನ್ನು ಅವಲಂಬಿಸಿಯೇ ಬದುಕಿ ಬಂದಿದೆ. ಆಳುವ ವರ್ಗದ ಆರ್ಥಿಕ ಸ್ಥಿತಿಗತಿಗಳಲ್ಲಿ ಬದಲಾವಣೆಗಳಾದಂತೆ ಸೇವಕ ಸಮುದಾಯಗಳ ಒಟ್ಟಾರೆ ಸ್ಥಿತಿಗತಿಗಳಲ್ಲಿ ರೂಪಾಂತರುಗಳು ಸಂಭವಿಸುತ್ತವೆ. ಹೆಳವರು ಯಾವತ್ತೂ ಪಾರಂಪರಿಕವಾಗಿ ಆಳುವ ವರ್ಗದ ಸೇವಕ ಸಮುದಾಯವಾಗಿಯೇ ಬದುಕಿ ಬಂದಿದೆ. ಯವತ್ತೂ ಈ ದೇಶದ ಪಾರಂಪರಿಕ ಆರ್ಥಿಕ ವ್ಯವಸ್ಥೆ ಅಮೂಲಾಗ್ರವಾಗಿ ತನ್ನ ಸ್ಥಿತಿಯನ್ನು ಮತ್ತು ಸ್ವಭಾವಗಳ್ನು ಬದಲಿಸತೋ ಆ ಸಂದರ್ಭದಲ್ಲಿ ಸೇವಕ ಸಮುದಾಯಗಳೂ ತಮ್ಮ ಸಾಮಾಜಿಕಾರ್ಥಿಕ ಚಲನೆಗಳನ್ನು ಬದಲಿಸಿಕೊಳ್ಳಬೇಕಾದ ಅನಿವಾರ್ಯತೆ ಇಂಡಿಯಾದ ಸಾಮಾಜಿಕ ಚರಿತ್ರೆಯಲ್ಲಿ ತಲೆದೋರುತ್ತಲೇ ಬಂದಿದೆ. ಊಳಿಗಮಾನ್ಯ, ಅರೆ ಊಳಿಗಮಾನ್ಯ, ಆಧುನಿಕಪೂರ್ವ ಮತ್ತು ಆಧುನಿಕ ಇಂಡಿಯಾದಲ್ಲಿ ಆಳುವ ವರ್ಗಗಳ ಆರ್ಥಿಕ ಚಟುವಟಿಕೆಗಳಲ್ಲಿ ಆದ ಬದಲಾವಣೆಗಳು ಸೇವಕ ಸಮುದಾಯಗಳ ಬದುಕಿನ ವಿಧಾನಗಳನ್ನೂ ರೂಪಾಂತರಿಸಿವೆ. ಈ ರೂಪಾಂತರ ಸೇವಕ ಸಮುದಾಯಗಳನ್ನು ಆರ್ಥಿಕವಾಗಿ ಮಾತ್ರವಲ್ಲ ಸಾಮಾಜಿಕವಾಗಿಯೂ ಪಲ್ಲಟಗೊಳಿಸಿವೆ. ನೆಲೆತಪ್ಪಿದ ಸಮುದಾಯಗಳು ಜೀವನ ನಿರ್ವಹಣೆಗೆ ಸಹಜವಾಗಿಯೇ ಅಲೆಮಾರಿಗಳಾಗಿದ್ದಾರೆ. ಜೊತೆಗೆ ಪಾರಂಪರಿಕ ಕುಲಕಸಬನ್ನೂ ಬದಲಿಸಿಕೊಳ್ಳುವ ಅನಿವಾರ್ಯತೆಯೂ ಬಂದೊದಗಿತ್ತು. ಈ ಕಾರಣದಿಂದ ಆಧುನಿಕ ಪೂರ್ವ ಭಾರತದಲ್ಲಿ ಅಲೆಮಾರಿಗಳಾಗಿ ರೂಪಾಂತರಗೊಂಡ ಸೇವಕ ಸಮುದಾಯಗಳು ಅನೇಕ ಬಗೆಯ ವಿವಿಧ ವೃತ್ತಿಗಳನ್ನು ಸಹಜವಾಗಿಯೇ ಅನುಸರಿಸಿದವು. ವಿವಿಧ ವೃತ್ತಿಗಳನ್ನು ಅನುಸರಿಸಿದ ಪಂಗಡಗಳು ಬೇರೆ ಬೇರೆ ಸಾಮಾಜಿಕ ಗುಂಪುಗಳಾಗಿಯೇ ತಮ್ಮನ್ನು ಗುರುತಿಸಿಕೊಳ್ಳಲು ಹಂಬಲಿಸಿದವು. ಇದರಿಂದಾಗಿ ಹೆಳವರಲ್ಲಿಯೂ ಅನೇಕ ಬಗೆಯ ವೃತ್ತಿ ಪಂಗಡಗಳು ರೂಪುಗೊಂಡವು. ಹರಿಲಾಲ್ ಪವಾರ್ ಅವುಗಳನ್ನು ಹೀಗೆ ಗುರುತಿಸುತ್ತಾರೆ. “ಹಂದಿ ಹೆಳವುರ, ದೂದಿ ಹೆಳವರು, ತಿತ್ತಿನೆಳವರು, ಕೂಕಣಿ ಹೆಳವರು, ಮುಂದಲ ಹೆಳವರು, ಕಂಬಿ ಹೆಳವುರ, ಅಡವಿ ಹೆಳವರು, ಊರ

ಹೆಳವರು, ಸಾದು ಹೆಳವರು, ಜಾತಿ ಹೆಳವರು, ತಂಬೂರಿ ಹೆಳವರು”

[1] ಇನ್ನು ಮುಖ್ಯ ಪಂಗಡಗಳಾಗಿ ಎತ್ತಿನ ಹೆಳವರು. ಗಂಟೆ ಹೆಳವರು ಮತ್ತು ಚಾಪೆ ಹೆಳವರು ಹೆಚ್ಚಿನ ಸಂಖ್ಯೆಯಲ್ಲಿ ಬದುಕುತ್ತಿದ್ದಾರೆ. ಮೇಲೆ ಉಲ್ಲೇಖಿಸಿದ ಹೆಳವರ ವಿವಿಧ ಉಪ ಪಂಗಡಗಳು ಬೇರೆ ಬೇರೆ ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ.

೧. ಹಂದಿ ಹೆಳವರು

ಹಂದಿ ಸಾಕಾಣಿಕೆ ಇವರ ಈವತ್ತಿನ ಕಸಬು, ಇವರು ಬೀದರ್ ಗುಲ್ಬರ್ಗಾ ಬಳ್ಳಾರಿ ಮತ್ತು ಆಂಧ್ರದ ಗಡಿಭಾಗದಲ್ಲಿ ಹೆಚ್ಚಾಗಿ ಕಾಣಸಿಗುತ್ತಾರೆ. ಹಂದಿಯ ಗೊಬ್ಬರವನ್ನು ಕೃಷಿಕರಿಗೆ ಮಾರಾಟ ಮಾಡಿ ಇವರು ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

೨. ದೂದಿ ಹೆಳವರು

ದೂದಿ ಎಂದರೆ ಹತ್ತಿ, ಈ ಹತ್ತಿಯನ್ನು ಮಾರಾಟ ಮಾಡಿ ಈ ದೂದಿ ಹೆಳವರು ಬದುಕುತ್ತಿದ್ದಾರೆ. ಜೊತೆಗೆ ಚಾಪೆ ಹೆಣೆಯುವುದು ಮತ್ತು ಹಂದಿ ಸಾಕಣಿಕೆಯನ್ನೂ ಕ್ವಚಿತ್ತಾಗಿ ಮಾಡುತ್ತಾರೆ. ಇವರು ಬಳ್ಳಾರಿ, ಗುಲ್ಬರ್ಗಾ, ಬೀದರ್ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ.

೩. ತಿತ್ತಿ ಹೆಳವರು

ಇವರು ಚರ್ಮದಿಂದ ಮಾಡಿದ ತಿತ್ತಿ ವಾದ್ಯವನ್ನು ಬಳಸಿ ಹಾಡುತ್ತಾ ಭಿಕ್ಷೆ ಬೇಡುವ ಪಂಗಡವಾಗಿವೆ. ಈ ವಾದ್ಯವು ಚರ್ಮದಿಂದ ತಯಾರಿಸಲ್ಲಪಟ್ಟಿರುತ್ತದೆ. ಒಂದು ರೀತಿಯಲ್ಲಿ ಹಾವಾಡಿಗನ ಪುಂಗಿಯು ತರಹ ಇದು ಧ್ವನಿ ಹೊರಡಿಸುತ್ತದೆ. ಇವರೂ ಸಹ ಉತ್ತರ ಕರ್ನಾಟಕದ ಆಂಧ್ರದ ಗಡಿಗಳಲ್ಲಿ ಅಲೆಮಾರಿಗಳಾಗಿ ಬದುಕುತ್ತಿದ್ದಾರೆ.

೪. ಕೂಕಣಿ ಹೆಳವರು

ಕೂಕಣಿ ಹೆಳವರು ಊರೂರು ಸುತ್ತುತ್ತಾ ಜನ ಕಿವಿಗಳಲ್ಲಿನ ಗುಗ್ಗೆ (ಕೂಕಣಿ)ಯನ್ನು ಹೊರ ತೆಗೆಯುವುದನ್ನು ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಜೊತೆಗೆ ಚಾಪೆ ಮತ್ತು ಕಸಬರಿಗೆಗಳನ್ನು ಈಚಲ ಗರಿಗಳಿಂದ ತಯಾರಿಸಿ ಮಾರುತ್ತಾರೆ. ಇವರು ರಾಯಚೂರು, ಬಳ್ಳಾರಿ, ಕೊಟ್ಟೂರು ಮತ್ತು ಕೂಡ್ಲಿಗಿ ತಾಲ್ಲೂಕುಗಳಲ್ಲಿ ವಾಸಿಸುತ್ತಿದ್ದಾರೆ.

೫. ಮಂದಲ ಹಳವರು

ಮಂದಲ ಎಂದರೆ ಮದ್ದು ಅಥವಾ ಔಷದಿ ಎಂಬ ಅರ್ಥವಿದೆ. ಈ ಪಂಗಡದವರು ಗಿಡ ಮೂಲಿಕೆಗಳಿಂದ ಔಷಧಿಗಳನ್ನು ತಯಾರಿಸಿ ಊರೂರು ತಿರುಗಿ ಮಾರುತ್ತಾ ಜೀವಿಸುತ್ತಾರೆ. ಬಳ್ಳಾರಿ, ಕೋಲಾರ, ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ಕಾಣಸಿಗುತ್ತಾರೆ. “ಮೈಸೂರು ಸಮಿಪದಲ್ಲಿರುವ ‘ಹೆಳವರ ಹುಂಡಿ’ಯ ಗಂಟೆ ಹೆಳವರು ಹೆಚ್ಚಿನ ಸಂಖ್ಯೆಯಲ್ಲಿ ಈ ವೃತ್ತಿ ಕೈಗೊಂಡಿರುತ್ತಾರೆ” ಎಂದು ಹರಿಲಾಲ್ ಪವಾರ್ ಹೇಳುತ್ತಾರೆ.[2]

೬. ಕಂಬಿ ಹೆಳವರು

ಇವರು ತಮ್ಮ ಒಕ್ಕಲು ಮನೆಗಳಿಗೆ ಹೋಗಿ ವಂಶಾವಳಿಗಳನ್ನು ಹೇಳುತ್ತಾರೆ. ಆದರೆ ಇವರು ಎತ್ತಿನ ಹೆಳವ ಮತ್ತು ಗಂಟೆ ಹೆಳವರಿಗಿಂತ ಭಿನ್ನ ರೀತಿಯವರು. ಇವರು ಹೆಗಲು ಮೇಲಿನ ಬೊಂಬಿನ ಎರಡು ತುದಿಗಳಿಗೆ ಚಾಪೆಗಳನ್ನು ಇಳಿಬಿಟ್ಟುಕೊಂಡು ತಮ್ಮ ಒಕ್ಕಲು ಮನೆಗಳಿಗೆ ಹೋಗುತ್ತಾರೆ.

೭. ಅಡವಿ ಹೆಳವರು

“ಗುಲ್ಬರ್ಗಾ ಜಿಲ್ಲೆಯ ಸುರಪುರ ತಾಲ್ಲೂಕು ಕಕೇಲಿ ಅಡವಿಯಲ್ಲಿ ‘ಅಡವಿ ಹೆಳವುರ’ ಎಂಬ ಒಂದು ಜನ ಸಮುದಾಯ ಇದೆ” ಎಂದು ಪವಾರ್ ಅವರು ಹೇಳುತ್ತಾರೆ.[3] ಇವರು ಕಾಡಲ್ಲಿದ್ದು ಈಚಲ ಗರಿಗಳಿಂದ ಚಾಪೆ ಹೆಣೆದು ಮಾರುತ್ತಾ ಜೀವನ ಸಾಗಿಸುತ್ತಾರೆ.

೮. ಊರ ಹೆಳವರು

ಊರ ಹೆಳವರು ಈಗಾಗಲೇ ನೆಲೆನಿಂತು ಕೃಷಿ ಮುಂತಾದ ಚಟುವಟಿಕೆಗಳಲ್ಲಿ ತೊಡಗಿ ಮುಖ್ಯ ಪ್ರವಾಹದ ಜೊತೆ ಬೆರೆತು ಹೋಗಿದ್ದಾರೆ. ಸಾಮಾನ್ಯವಾಗಿ ಉತ್ತರ ಕರ್ನಾಟಕದ ಹೆಳವರು ಗ್ರಾಮಗಳಲ್ಲಿ ಇತರ ಸಮುದಾಯಗಳ ಜೊತೆ ಬದುಕುತ್ತಿರುವ ಹೆಳವರು ತಮ್ಮನ್ನು ಹೀಗೆ ಕರೆದುಕೊಳ್ಳುತ್ತಾರೆ.[4]

೯. ಸಾದು ಹೆಳವರು

“ಇವರು ಸಾದುಗೌಡ ಅಂದರೆ ಸಾದು ಲಿಂಗಾಯ್ತರೆಂದು ಹೇಳುತ್ತಾರೆ. ಸಾಮಾನ್ಯವಾಗಿ ಲಿಂಗಾಯ್ತರಲ್ಲಿ ಸಾಧು ಲಿಂಗಾಯ್ತರೇ ಜಿರಾಯ್ತು ಮಾಡುವ ಜನ”[5] ಎಂದು ಎಚ್.ಎಲ್. ನಾಗೇಗೌಡರು ಈ ಪಂಗಡವನ್ನು ವಿವರಿಸುತ್ತಾರೆ.

೧೦. ಜಾತಿ ಹೆಳವರು

“ಜಾತಿ ಹೆಳವರು ಎಂಬ ವಿಶಿಷ್ಟ ವರ್ಗವಿದೆಯೆಂದು ತಿಳಿದು ಬರುತ್ತದೆ. ಇವರೂ ಊರ ಹೆಳವರೂ ಒಂದೇ ಇರಬಹುದೇ”[6] ಎಂದು ನಾಗೇಗೌಡರು ಈ ಪಂಗಡವನ್ನು ಉಲ್ಲೇಖಿಸುತ್ತಾರೆ.

೧೧. ತಂಬೂರಿ ಹೆಳವರು

ಇವರು ಆಂಧ್ರದ ಗಡಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಾರೆ. ಮೂಲತಃ ಇವರು ತೆಲುಗರು, ಇವರು ಊರೂರು ಅಲೆಯುತ್ತಾ ಆಂಧ್ರದ ರೆಡ್ಡಿ ಭೂಮಾಲಿಕರ ಮನೆಗಳಿಗೆ ಹೋಗಿ ತಂಬೂರಿ ಬಾರಿಸುತಾ ಅವರ ಕುಲದ ವಿವರಗಳನ್ನು ಹಾಡುತ್ತಾರೆ. ಜೊತೆಗೆ “ಮಲ್ಲಿಕಾರ್ಜುನ, ಸಾಸುರ ಚೆನ್ನಮ್ಮ ಮುಂತಾದ ದೇವತೆಗಳ ಮೇಲೆ ಹಡಿ ಹನ ಸಂಗ್ರಹಿಸುತ್ತಾರೆ”.[7]

ಈ ಎಲ್ಲ ಪಂಗಡಗಳು ‘ಹೆಳವ’ ಸಮಾಜದಿಂದ ಅನಿವಾರ್ಯ ಕಾರಣಗಳಿಗಾಗಿ ಬೇರೆ ಆರ್ಥಿಕ ಮೂಲಗಳನ್ನು ಹುಡಕಿಕೊಂಡು ಹೋದ ಗುಂಪುಗಳೇ ಆಗಿವೆ. ಪ್ರಾಯಶಃ ಆಧುನಿಕ ಪೂರ್ವ ಭಾರತದ ಚರಿತ್ರೆಯಲ್ಲಿ ಆದ ಅನೇಕ ರಾಜಕೀಯ ಪಲ್ಲಟಗಳಿಂದಾಗಿ ಈ ಬಗೆಯ ಅಲೆಮಾರಿ ಸಮುದಾಯಗಳು ಭಿನ್ನ ಆರ್ಥಿಕ ಚಟುವಟಿಕೆಗಳನ್ನು ರೂಢಿಸಿಕೊಳ್ಳುವುದು ಅನಿವಾರ್ಯವಾಗಿರಬಹುದು. ಮೂಲದಲ್ಲಿ ಈ ಎಲ್ಲ ಉಪಪಂಗಡಗಳು ಹೆಳವ ಸಮುದಾಯದ ವಿವಿಧ ಗುಂಪುಗಳೇ ಆಗಿವೆ.

ಬಹುತೇಕ ಹೆಳವುರ ಇಂದು ಆರ್ಥಿಕವಾಗಿ ಹಿಂದುಳಿದವರೇ ಆಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಇಂದಿಗೂ ಪಾರಂಪರಿಕ ವೃತ್ತಿಯನ್ನು ಅವಲಂಭಿಸಿರುವುದು. ಈ ವೃತ್ತಿಯ ಜೊತೆಗೆ ಇವರು ಪರ್ಯಾಯ ವೃತ್ತಿಗಳನ್ನು ಅವಲಂಭಿಸದಿರುವುದರಿಂದ ಈ ರೀತಿಯ ಸಮಸ್ಯೆಯನ್ನು ಎದುರಿಸುವಂತಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಪಾರಂಪರಿಕ ವೃತ್ತಿ ಬಿಟ್ಟು ತಮಗಿರುವ ತುಂಡು ಭೂಮಿಯಲ್ಲಿಯೇ ಕೃಷಿ ಚಟುವಟಿಕೆಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಮತ್ತೆ ಕೆಲವುರ ಬೇರೆಯವರ ಭೂಮಿಯಲ್ಲಿ ಕೂಲಿ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಮತ್ತೆ ಕೆಲವರು ಬೇರೆಯವರ ಭೂಮಿಯಲ್ಲಿ ಕೂಲಿ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ನಗರಗಳಿಗೆ ಹತ್ತಿರವಿರುವವರು ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಂಡಿದ್ದಾರೆ. ಗ್ಯಾರೇಜುಗಳಲ್ಲಿ ಕೆಲಸ ಮಾಡುವ ಯುವಕರು, ಶ್ರೀಮಂತರ ಮನೆಗಳಲ್ಲಿ ಕೆಲಸ ಮಾಡುವವರು, ಊದು ಬತ್ತಿ ಮಾಡಿ ಮಾರುವವರು, ವ್ಯಾಪಾರಿಗಳು ಹೀಗೆ ವಿವಿಧ ವೃತ್ತಿಗಳನ್ನು ಅವಲಂಭಿಸಿರುವುದು ಕಂಡು ಬರುತ್ತದೆ. ಆದರೆ ಹೆಣ್ಣು ಮಕ್ಕಳು ಮಾತ್ರ ಎಲ್ಲಿಯೂ ಕೆಲಸಕ್ಕೆ ಹೋಗುವುದುಕಂಡು ಬರುವುದಿಲ್ಲ. ಪಟ್ಟಣ, ನಗರಗಳಿಂದ ದೂರವಿರುವ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳು ಬೀಡಿಕಟ್ಟುವುದು, ಮತ್ತು ಟೈಲರಿಂಗ್ ಮಾಡುವುದು ಹೆಚ್ಚಾಗಿ ಕಂಡು ಬರುತ್ತದೆ. ಗಂಡಸರಿಲ್ಲದ ಮನೆಗಳಲ್ಲಿ ಹೆಣ್ಣು ಮಕ್ಕಳೇ ಕುಲಕೊಂಡಾಡಲು ಹೋಗುತ್ತಾರೆ. ಜೊತೆಗೆ ಇವರು ಕುರಿ, ಕೋಳಿ, ದನಕರುಗಳನ್ನು ಸಾಕಿ ಅವುಗಳಿಂದ ಆದಾಯ ಗಳಿಸುವ ಪರಿಪಾಠವೂ ಇವರಲ್ಲಿದೆ.

ಕೃಷಿ : ಭೂ ಹಿಡುವಳಿ

ಕರ್ನಾಟಕದ ಏಳು ಜಿಲ್ಲೆಗಳ ೧೩ ತಾಲೂಕುಗಳಲ್ಲಿನ ೧೦೦೦ ಕುಟುಂಬಗಳ ಗಣತಿಯನ್ನು ಪ್ರಸ್ತುತ ಅಧ್ಯಯನಕ್ಕಾಗಿ ಕೈಗೊಳ್ಳಲಾಗಿದೆ. ೧೦೦೦ ಕುಟುಂಬಗಳಲ್ಲಿ ೪೬೩೮ ಜನಸಂಖ್ಯೆಯನ್ನು ಹೊಂದಿವೆ. ಒಂದು ಸಾವಿರ ಕುಟುಂಬಗಳ ಭೂ ಹಿಡುಳಿಯ ಕೋಷ್ಟಕವನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.

ಗಣತಿಗೆ ಒಳಪಟ್ಟಿ ಒಟ್ಟು ೧೦೦೦ ಕುಟುಂಬಗಳ ಪೈಕಿ ಭೂಮಿಯನ್ನು ಹೊಂದಿರುವ ಕುಟುಂಬಗಳೂ ೨೩೯ ಮಾತ್ರ. ೭೬೧ ಕುಟುಂಬಗಳು ಭೂ ರಹಿತವಾಗಿವೆ. ಭೂಮಿಯನ್ನು ಹೊಂದಿರುವ ೨೩೯ ಕುಟುಂಬಗಳು ಒಟ್ಟು ೪೨೯ ಎಕರೆ ಜಮಿನನ್ನು ಹಂಚಿಕೊಂಡಿವೆ. ಅಂದರೆ ಪ್ರತಿ ಕುಟುಂಬ ಸರಾಸರಿ ೧.೭೯ ಎಕರೆ ಜಮೀನನನ್ನು ಕೃಷಿಗೆ ಬಳಸುತ್ತಿರುವುದು ಕಂಡು ಬರುತ್ತದೆ. ಈ ೪೨೯ ಎಕರೆ ಕೃಷಿ ಭೂಮಿಯಲ್ಲಿ ನೀರಾವರಿ ವ್ಯವಸ್ಥೆ ಇರುವುದು ಕೇವಲ ೩೩ ಎಕರೆ ಜಮೀನಿಗೆ ಮಾತ್ರ. ಈ ೩೩ ಎಕರೆ ಜಮೀನು ಇರುವುದು ಹಿರಿಯೂರು ತಾಲೂಕು, ಗೋಕಾಕ್ ಮತ್ತು ಕಡೂರು ತಾಲೂಕುಗಳಲ್ಲಿ. ಹಿರಿಯೂರು ತಾಲೂಕಿನಲ್ಲಿ ಆಣೆಕಟ್ಟೆಯಿಂದ ಕೆಲ ಜಮೀನಿಗೆ ನೀರಾವರಿ ದೊರೆತರೆ, ಗೋಕಾಕ್ ತಾಲೂಕಿನಲ್ಲಿ ನದಿ ದಂಡಯ ಜಮೀನುಗಳಿಗೆ ನೀರು ಸಿಗುತ್ತದೆ. ಅದು ಬಿಟ್ಟರೆ ಕಡೂರು ಮಲೆನಾಡಿನಲ್ಲಿ ಪ್ರದೇಶದಲ್ಲಿರುವುದರಿಂದ ಅಲ್ಲಿ ಸಹಜವಾಗಿಯೇ ನೀರಾವರಿ ವ್ಯವಸ್ಥೆಯು ಲಭ್ಯವಾಗುತ್ತದೆ.

ಇಲ್ಲಿ ಗಮನಿಸಬೇಕಾದ ಮುಖ್ಯವಾದ ಅಂಶವೇನೆಂದರೆ ರಾಜ್ಯದ ಯಾವ ಯಾವ ತಾಲೂಕುಗಳಲ್ಲಿ ಹೆಳವರು ಪಾರಂಪರಿಕ ವೃತ್ತಿಯನ್ನು ಅನುಸರಿಸುತ್ತಿದ್ದಾರೋ ಆ ತಾಲೂಕುಗಳಲ್ಲಿ ಬಹುತೇಕ ಕುಟುಂಬಗಳೂ ಭೂ ರಹಿತವಾಗಿವೆ. ಉದಾಹರಣೆಗೆ ಗೋಕಾಕ್ ತಾಲೂಕಿನ ಕುಟುಂಬಗಳು ಭೂ ರಹಿತವಾಗಿವೆ. ಉದಾಹರಣೆಗೆ, ಗೋಕಾಕ್ ತಾಲೂಕಿನ ಎತ್ತಿನ ಹೆಳವರ ೨೭೦ ಕುಟುಂಬಗಳ ಪೈಕಿ ೨೦೧ ಕುಟುಂಬಗಳು ಭೂ ರಹಿತ ಕುಟುಂಬಗಳಾಗಿವೆ. ಈ ತಾಲೂಕಿನಲ್ಲಿ ಹೆಚ್ಚಾಗಿ ಹೆಳವರು ಪಾರಂಪರಿಕ ವೃತ್ತಿಯನ್ನು (ವಂಶಾವಳಿ ಹೇಳುವುದು) ಅವಲಂಬಿಸಿದ್ದಾರೆ. ಅದೆ ರೀತಿ ಬೀದರ್ ಜಿಲ್ಲೆಯ ಬೀದರ್ ಮತ್ತು ಔರಾದ್ ತಾಲೂಕಿನ ೧೫೨ ಕುಟುಂಬಗಲಲ್ಲಿ ೧೫೦ ಕುಟುಂಬಗಳು ಭೂ ರಹಿತ ಕುಟುಂಬಳಾಗಿವೆ. ಇಲ್ಲಿಯ ‘ಚಾಪೆ ಹೆಳವರು’ ಚಾಪೆ ಹೆಣೆಯುವ ವೃತ್ತಿಯನ್ನು ಅವಲಂಬಿಸಿರುವ ಕಾರಣಕ್ಕಾಗಿ ಬೀದರ್ ಜಿಲ್ಲೆಯಲ್ಲಿ ಅತಿಹೆಚ್ಚು ಭೂರಹಿತ ಕುಟುಂಬಗಳಿವೆ. ಜೊತೆಗೆ ಮಂಡ್ಯ ಜಿಲ್ಲೆಯಲ್ಲಿ ‘ಗಂಟೆ ಹೆಳವರ’ ೭೪ ಕುಟುಂಬಗಳಲ್ಲಿ ೪೯ ಕುಟುಂಬಗಳು ಭೂ ರಹಿತವಾಗಿವೆ. ಅಲ್ಲಿ ಕೇವಲ ೧೧ ಎಕರೆ ಜಮೀನು ೨೪ ಕುಟುಂಬಗಳಿಗೆ ಹಂಚಿಕೆಯಾಗಿದೆ. ಇಲ್ಲಿಯೂ ‘ಗಂಟೆ ಹೆಳವರ’ ಕುಟುಂಬಗಳು ಪಾರಂಪರಿಕ ವೃತ್ತಿಯನ್ನು (ವಂಶಾವಳಿ ಹೇಳುವುದು) ಅವಲಂಬಿಸಿದ್ದಾರೆ. ಇನ್ನು ಗುಲ್ಬರ್ಗಾ ಜಿಲ್ಲೆಯ ೧೧೦ ಕುಟುಂಬಗಳಲ್ಲಿ ೧೦೬ ಕುಟುಂಬಗಳು ಭೂರಹಿತವಾಗಿವೆ. ಕೇವಲ ೯ ಎಕರೆ ಕೃಷಿ ಭೂಮಿಯು ಕುಟುಂಬಗಳಲ್ಲಿ ೧೦೬ ಕುಟುಂಬಗಳೂ ಭೂರಹಿತವಾಗಿವೆ. ಕೇವಲ ೯ ಎಕರೆ ಕೃಷಿ ಭೂಮಿಯು ೬ ಕುಟುಂಬಗಳಲ್ಲಿ ಹಂಚಿಕೆಯಾಗಿದೆ. ಉಳಿದಂತೆ ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲೂ ಭೂರಹಿತ ಕುಟುಂಬಗಳೇ ಹೆಚ್ಚಾಗಿವೆ.

ಕೋಷ್ಟಕ ೨: ಹೆಳವರ ಜಿಲ್ಲಾ ಮತ್ತು ತಾಲೂಕುವಾರು ಭೂ ಹಿಡುವಳಿ

ಕ್ರ ಸಂ ಜಿಲ್ಲೆ ತಾಲೂಕು ಕುಟುಂಬಗಳ ಸಂಖ್ಯೆ ಹೊಂದಿರುವ ಕೃಷಿ ಭೂಮಿ ಎಕರೆಗಳಲ್ಲಿ ಭೂ ರಹಿತರು
ಒಣ ನೀರಾವರಿ ಒಟ್ಟು
ಚಿಕ್ಕಮಗಳೂರು ಕಡೂರು ೮೦ ೨೪ ೦೬ ೩೦ ೬೨
ಚಿತ್ರದುರ್ಗ ಹಿರಿಯೂರು ೯೦ ೨೮ ೦೭ ೩೫ ೮೦
    ಚಳ್ಳಕೆರೆ ೧೩೮ ೧೧೮ ೦೧ ೧೧೯ ೮೧
ಮಂಡ್ಯ ಶ್ರೀರಂಗಪಟ್ಟಣ ೩೪ ೦೦ ೦೦ ೦೦ ೩೪
    ಪಾಂಡವಪುರ ೪೦ ೧೧ ೦೦ ೧೧ ೩೨
ಬೀದರ್ ಬೀದರ್ ೧೩೭ ೦೨ ೦೨ ೦೪ ೧೩೫
    ಔರಾದ್ ೧೫ ೦೦ ೦೦ ೦೦ ೧೫
ಗುಲ್ಬರ್ಗಾ ಗುಲ್ಬರ್ಗಾ ೫೩ ೦೫ ೦೦ ೩೫ ೪೮
    ಚಿಂಚೋಳಿ ೧೦ ೦೦ ೦೦ ೦೦ ೧೦
    ಅಳಂದ ೦೩ ೦೪ ೦೦ ೦೪ ೦೨
    ಸುರಪುರ ೪೪ ೦೦ ೦೦ ೦೦ ೪೪
ಬೆಳಗಾಂ ಗೋಕಾಕ್ ೨೭೦ ೫೭ ೧೫ ೭೨ ೨೦೧
ಹಾವೇರಿ ಹಾನಗಲ್ ೮೬ ೧೪೮ ೦೨ ೧೪೯ ೩೪
    ಒಟ್ಟು ೧೦೦೦ ೩೯೬ ೩೩ ೪೨೯ ೭೬೧

ಮೇಲಿನ ಕೋಷ್ಠಕದ ಆಧಾರದ ಮೇಲೆ ಕೆಲವು ಮುಖ್ಯ ಅಂಶಗಳ ಕುರಿತು ಚರ್ಚೆಯನ್ನು ಬೆಳೆಸಬಹುದಾಗಿದೆ. ಸಮುದಾಯಗಳ ಆರ್ಥಿಕ ಅವಲಂಬನೆ ಮತ್ತು ಉತ್ಪಾದನೆಯ ವಿಧಗಳನ್ನು ಆಧರಿಸಿ ದುಡಿಮೆಯ ಸ್ವರೂಪವನ್ನು ಪ್ರಾಥಮಿಕ ವಲಯ, ದ್ವತೀಯ ವಲಯ ಮತ್ತು ತೃತೀಯ ವಲಯ ಎಂದು ವಿಭಾಗಿಸಲಾಗಿದೆ.[8] ಪ್ರಾಥಮಿಕ ವಲಯದಲ್ಲಿ ದುಡಿಮೆಗೆ ತೊಡಗಿಕೊಂಡಿರುವ ಸಮುದಾಯಗಳು ಹೆಚ್ಚಾಗಿ ಕೃಷಿ, ಗಣಿಗಾರಿಕೆ, ಮೀನುಗಾರಿಕೆ, ಕಲ್ಲು ಹೊಡೆಯುವುದು[9] ಮುಂತಾದ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಈ ಪ್ರಾಥಮಿಕ ವಲಯದಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನ ಹೆಚ್ಚಾಗಿ ತೊಡಗಿಕೊಂಡಿರುತ್ತರೆ. ದ್ವಿತೀಯ ವಲಯವೆಂದರೆ ಸೇವಾ ವಲಯ ಮತ್ತು ತೃತೀಯ ವಲಯವೆಂದರೆ ಬಂಡವಾಳಶಾಹಿ ಉತ್ಪಾದನಾ ವಲಯ. ಈ ಸೇವಾ ವಲಯ ಮತ್ತು ಬಂಡವಾಳಶಾಹಿ ಉತ್ಪಾದನಾ ವಲಯದಲ್ಲಿ ಹೆಚ್ಚಾಗಿ ಮೇಲ್ವರ್ಗ / ಮೇಲ್ಜಾತಿಗಳು ಹೆಚ್ಚಾಗಿ ತೊಡಗಿಕೊಂಡಿರುವುದು ಕಂಡು ಬರುತ್ತದೆ. ಕೊನೆಯ ಈ ಎರಡು ವಲಯಗಳಲ್ಲಿ ಸರಕಾರದ ಮತ್ತು ಖಾಸಗಿ ಬಂಡವಾಳವು ಹೆಚ್ಚು ಸಂಚಯಗೊಂಡಿರುತ್ತದೆ. ಮತ್ತು ಈ ವಲಯದಲ್ಲಿ ಹೆಚ್ಚು ಮೇಲ್ವರ್ಗ / ಮೇಲ್ಜಾತಿಯ ಅಕ್ಷರಸ್ಥ ಜನ ಪ್ರಭಾವ ಶಾಲಿಗಳಾಗಿರುತ್ತಾರೆ. ಆದರೆ ಹೆಳವರಂತಹ ಸಮುದಾಯವು ಮೇಲೆ ಕಾಣಿಸಿದ ಯಾವ ವಲಯಗಳಲ್ಲೂ ಪ್ರಭಾವಶಾಲಿ ಸ್ಥಾನಮಾನಗಳನ್ನು ಪಡೆದಿಲ್ಲ. ಶೇ. ೭೫ ಕ್ಕೂ ಹೆಚ್ಚು ಜನ ಇನ್ನೂ ಪ್ರಾಥಮಿಕ ವಲಯವನ್ನೂ ಪ್ರವೇಶಿಸದೆ ‘ಆದಿಮ’ ಹಂತದಲ್ಲಿಯೇ ಇದ್ದಾವೆ. ಅಂದರೆ ಇಂತಹ ಜನ ಸಮುದಾಯಗಳು ನಾಡಿನ‘ಮುಖ್ಯವಾಹಿನಿಯ’ ಉತ್ಪಾದನಾ ವ್ಯವಸ್ಥೆಯ ಒಳಗೆ ಪ್ರವೇಶವನ್ನೇ ಪಡೆದಿಲ್ಲ ಅಂದರೆ ಇವರು ‘ಆದಿಮ ವಲಯ’ದ ಜನರೇ ಆಗಿದ್ದಾರೆ. ಈ ವಲಯದ ಜನ ಹೆಚ್ಚಾಗಿ ಆರ್ಥಿಕವಾಗಿ ಅವಲಂಬಿತರು. ನೆಲೆ ಇಲ್ಲದವರು ಮತ್ತು ಯಾವುದನ್ನು ನಾವು ರಾಷ್ಟ್ರೀಯ ತಲೆ ಆದಾಯ ಎಂದು ಗುರುತಿಸುತ್ತೇವೋ ಆ ಲೆಕ್ಕಾಚಾರದಿಂದ ದೂರ ಉಳಿಯುವ ಅನಾಮಿಕ ಗುಂಪಿಗೆ ಸೇರಿದವರು.

ಅಂದರೆ ಉತ್ಪಾದನೆಯ ವಿಷಯದಲ್ಲಿ ಹೆಳವರು ಇನ್ನೂ ‘ಆದಿಮ’ ಹಂತದ ಬುಡಕಟ್ಟು ಸ್ಥಿತಿಯಲ್ಲಿಯೇ ಇದ್ದಾರೆ ಎಂಬುದು ಈ ಚರ್ಚೆಯಿಂದ ಗೊತ್ತಾಗುತ್ತದೆ. ಅಂದರೆ ಅರ್ಥಶಾಸ್ತ್ರ ಮತ್ತು ಅಭಿವೃದ್ಧಿ ಸಿದ್ಧಾಂತಗಳಲ್ಲಿ ಪ್ರತಿಪಾದಿತವಾಗುತ್ತಿರುವ ಪ್ರಮೇಯವೆಂದರೆ ಯಾವ ಆರ್ಥಿಕತೆಯಲ್ಲಿ ದುಡಿಮೆಗಾರ ವರ್ಗ ಅಧಿಕವಾಗಿ ಪ್ರಾಥಮಿಕ ವಲಯವನ್ನು ಅವಲಂಬಿಸಿಕೊಂಡಿರುವುದು ಅಲ್ಲಿ ಆರ್ಥಿಕ ದುಸ್ಥಿತಿ ತೀವ್ರವಾಗಿರುತ್ತದೆ.[10] ಆದರೆ ಪ್ರಾಥಮಿಕ ವಲಯಕ್ಕೇ ಸೇರದ ಹೆಳವರಂತಹ ಸಮುದಾಯದ ಆರ್ಥಿಕತೆಯನ್ನು ಯಾವ ಅಭಿವೃದ್ಧಿ ಅರ್ಥಶಾಸ್ತ್ರದ ಮೂಲಕ ಅಳತೆ ಮಾಡಲು ಸಾಧ್ಯ? ಈ ಕಾರಣದಿಂದಾಗಿ ಭಾರತದ ಉತ್ಪಾದನ ವಲಯದ ಹಂತಗಳ ಲೆಕ್ಕಚಾರದಲ್ಲಿ ಈ ಬಗೆಯ ಸಮುದಾಯಗಳಿಗೆ ಇನ್ನೂ ಪ್ರವೇಶವೇ ಸಿಕ್ಕಿಲ್ಲ. ಹೀಗೆ ಪ್ರವೇಶ ಪಡೆಯದವರೆಂದರೆ ಅಲೆಮಾರಿಗಳು ಮತ್ತು ‘ಮುಖ್ಯವಾಹಿನಿ’ ಯಿಂದ ದೂರ ಇರುವ ಕಾಡೊಳಗಿನ ಆದಿವಾಸಿ ಸಮುದಾಯಗಳು. ಈ ಸಮುದಾಯಳು ದೇಶದ ತಲೆ ಆಧಾಯದ ಲೆಕ್ಕಾಚಾರದಲ್ಲಿ ಮಾತ್ರವಲ್ಲ ಜನಗಣತಿಯ ಸಾಮಾನ್ಯ ವರದಿಯಲ್ಲೂ ಇವರು ದಾಖಲಾಗುವುದಿಲ್ಲ.

ಹೆಳವರು ಅವಲಂಬಿಸಿರುವ ಕಸಬುಗಳು

ಈ ಮೊದಲೇ ಹೇಳಿದಂತೆ ಶೇ ೭೫ ಕ್ಕೂ ಹೆಚ್ಚು ಜನ ಹೆಳವ ಸಮುದಾಯಗಳಲ್ಲಿ ಭೂರಹಿತರಾಗಿದ್ದಾರೆ. ಅಂದರೆ ಈ ಶೇ. ೭೫ ಜನರಲ್ಲಿ ಅಲೆಮಾರಿಗಳು ಪಾರಂಪರಿಕ ವೃತ್ತಿಯನ್ನು ಅವಲಂಬಿಸಿರುವವರು ಹೆಚ್ಚಾಗಿ ಕಂಡು ಬರುತ್ತಾವೆ. ಇನ್ನು ಶೇ. ೨೫ ಜನರು ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡಿರುವುದು ಕಂಡು ಬರುತ್ತದೆ.

ಮುಂದಿನ ಪುಟದಲ್ಲಿನ ಕೋಷ್ಟಕವನ್ನು ಹೀಗೆ ವಿಶ್ಲೇಷಿಸಬಹುದಾಗಿದೆ. (ಅನುಬಂಧದಲ್ಲಿ ಹೆಳವರು ಅವಲಂಬಿಸಿರುವ ವೃತ್ತಿಗಳ ಕೋಷ್ಟಕವನ್ನು ನೀಡಲಾಗಿದೆ) ೧೦೦೦ ಕುಟುಂಬಗಳ ಸಾವಿರ ಕುಟುಂಬಗಳಲ್ಲಿ ೭೬೧ ಕುಟುಂಬಗಳು ಭೂ ರಹಿತ ಕುಟುಂಬಗಳಾಗಿವೆ. ಉಳಿದ ೨೨೯ ಕುಟುಂಬಗಳಲ್ಲಿ ೭೬೧ ಕುಟುಂಬಗಳು ಭೂ ರಹಿತ ಕುಟುಂಬಗಳಾಗಿವೆ. ಉಳಿದ ೨೯ ಕುಟುಂಬಗಳು ೪೨೯ ಎಕರೆ ಕೃಷಿಭೂಮಿಯನ್ನು ಹೊಂದಿವೆ. ಅಂದರೆ ಪ್ರತಿ ಕುಟುಂಬವು ಸರಾಸರಿ ೧.೯ ಎಕರೆ ಜಮೀನನ್ನು ಹೊಂದಿದಂತಾಗುತ್ತದೆ. ಆದರೆ ಪ್ರತಿ ಕುಟುಂಬ ತಾನು ಪಡೆಯಬಹುದಾದ ೧.೭೯ ಎಕರೆ ಕೃಷಿ ಭೂಮಿಯಲ್ಲಿ ವರ್ಷವಿಡೀ ಬದುಕಲು ಸಾಧ್ಯವಿಲ್ಲ. ಈ ಕಾರಣಕ್ಕೆ ಜಮೀನು ಹೊಂದಿದ ಕುಟುಂಬಗಳಲ್ಲಿ ಅನಿವಾರ್ಯವಾಗಿ ಕೃಷಿಕೂಲಿ, ಇಲ್ಲವೆ ಪಾರಂಪರಿಕ ವೃತ್ತಿಯನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ನಾನು ಸಂದರ್ಶಿಸಿದ ಅಲೆಮಾರಿ ಹೆಳವರಿಗೂ ಸಹ ಸ್ವಲ್ಪ ಮಟ್ಟಿಗಿನ ಕೃಷಿ ಭೂಮಿ ಇರುವುದು ಕಂಡು ಬಂತು. ಆದರೆ ತಮಗೆ ದೊರೆತ ಅಲ್ಪ ಜಮೀನಿನಲ್ಲಿ ದತ್ತವಾಗುವ ವಾರ್ಷಿಕ ಆದಾಯವು ಸಾಲದ್ದಕ್ಕಾಗಿಯೇ ತಾವು ಪಾರಂಪರಿಕ ವೃತ್ತಿಯನ್ನು ಅವಲಂಬಿಸಬೇಕಾಯಿತು. ಎಂದು ಅಲೆಮಾರಿಗಳು ಪ್ರತಿಕ್ರಿಸಯಿಸಿದ್ದಾರೆ. ಈ ಕಾರಣದಿಂದಾಗಿಯೇ ೪೬೩೮ ಜನರಲ್ಲಿ ಕೆಲವು ೭೧ ಜನ ಮಾತ್ರ ಕೃಷಿಯನ್ನು ಅವಲಂಬಿಸಿ ಬದುಕುತ್ತಿದ್ದಾರೆ. ಈ ೭೧ ಜನರಲ್ಲಿ ಹೆಚ್ಚಿನವರು ಹಾವೇರಿ, ಚಿಕ್ಕಮಗಳೂರು ಮತ್ತು ಬೆಳಗಾಂ ಜಿಲ್ಲೆಗೆ ಸೇರಿದವರು.ಉಳಿದಂತೆ ಹೆಚ್ಚಿನವರು ವಿವಿಧ ಬಗೆಯ ದಿನಗೂಲಿಗಳಾಗಿ ಮತ್ತು ಪಾರಂಪರಿಕ ವೃತ್ತಿಯನ್ನು ಅವಲಂಬಿಸಿ ಅಲೆಮಾರಿಗಳಾಗಿ ಬದುಕುತ್ತಿದ್ದಾರೆ. ಪಾರಂಪರಿಕ ವೃತ್ತಿಯನ್ನು ಅವಲಂಬಿಸಿ ಅಲೆಮಾರಿ ಜೀವನ ನಡೆಸುತ್ತಿರುವವರು ಹೆಚ್ಚಾಗಿ ಬೆಳಗಾಂ, ಮಂಡ್ಯ, ಚಿತ್ರದುರ್ಗ ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿ ಹೆಚ್ಚಾಗಿ ಸಿಗುತ್ತಾರೆ. ಸರಕಾರಿ ನೌಕರಿಯಲ್ಲಿರುವವರು (ಖಾಸಗಿ ಮತ್ತು ಸರಕರಿ ವಲಯದಲ್ಲಿ) ೨೭ ಜನ. ಚಿಕ್ಕ ಪುಟ್ಟ ವ್ಯಾಪಾರ ಮಾಡುತ್ತಿರುವವರು ೫ ಜನ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ನಾನು ಗಣತಿ ಮಾಡಿದ ೪೬೩೮ ಜನರಲ್ಲಿ ಶೇ ೪೫% ರಷ್ಟು ಜನ ಕೃಷಿಕೂಲಿ ಮತ್ತು ವಿವಿಧ ಬಗೆಯ ದಿನಗೂಲಿಗಳಲ್ಲಿ ತೊಡಗಿಕೊಂಡಿದ್ದರೆ, ಶೇ ೨೦% ರಷ್ಟು ಜನ ಪಾರಂಪರಿಕ ವೃತ್ತಿ (ವಂಶಾವಳಿ ಹೇಳುವುದು)ಯನ್ನು ಅವಲಂಬಿಸಿದ್ದಾರೆ. ಅಂದರೆ ನಮ್ಮ ಉತ್ಪಾದನಾ ವ್ಯವಸ್ಥೆಯ ಪ್ರಾಥಮಿಕ ವಲಯವನ್ನೂ ಹೆಳವ ಸಮುದಾಯದ ಶೇ ೬೫% ರಷ್ಟು ಜನ ಇನ್ನೂ ಪ್ರವೇಶಿಸಿಯೇ ಇಲ್ಲ. ಇದನ್ನು ಒಂದು ಕೋಷ್ಟಕದ ಮೂಲಕ ಸ್ಪಷ್ಟಗೊಳಿಸಿಕೊಳ್ಳಬಹುದಾಗಿದೆ. ಕರ್ನಾಟಕದ ಉತ್ಪಾದನೆಯ ವಿವಿಧ ವಲಯಗಳನ್ನು ೧೯೯೧ರ ಜನಗಣತಿ ಆಧರಿಸು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮುಂದುವರಿದ (ಶಿಷ್ಠ) ವರ್ಗ ಸಮುದಾಯಗಳನ್ನು ವಿಂಗಡಿಸಿ ಆಯಾ ವಲಯಗಳಲ್ಲಿ ದುಡಿಯುತ್ತಿರುವ ಜನರ ತೊಡಗಿಸಿಕೊಳ್ಳುವಿಕೆಯನ್ನು ಈ ಕೋಷ್ಠಕ ವಿವರಿಸುತ್ತದೆ.

ಕೋಷ್ಟಕ ೩: ಕರ್ನಾಟಕ : ದುಡಿಮೆಯ ರಾಚನಿಕ ಸ್ವರೂಪ : ಶಿಷ್ಟ – ಪರಿಶಿಷ್ಟ ನೆಲೆಗಳು ೧೯೯೧

(ಸಂಖ್ಯೆ : ಲಕ್ಷಗಳಲ್ಲಿ)

ವಿವರಗಳು ಪ್ರಾಥಮಿಕ ವಲಯ ಸಂಖ್ಯೆ ಶೇಕಡಾ ದ್ವಿತೀಯವಲಯ ಸಂಖ್ಯೆ ಶೇಕಡಾ ತೃತೀಯಾ ವಲಯ ಸಂಖ್ಯೆ ಶೇಕಡಾ ಒಟ್ಟು ಸಂಖ್ಯೆ ಶೇಕಡಾ
ಪರಿಶಿಷ್ಟರು / ದಲಿತರು ೩೧.೧೫೮೦.೨೨ ೩.೭೨೯.೫೮ ೩.೯೬೧೦.೨೦ ೩೮.೮೩೧೦೦.೦೦
ಶಿಷ್ಟರು ೮೫.೩೪೬೩.೬೪ ೧೯.೦೭೧೪.೨೨ ೨೯.೬೮೨೨.೧೪ ೧೩೪.೯೧೦೦.೦೦
ಒಟ್ಟು ೧೧೬.೪೯೬೭.೩೭ ೨೨.೭೯೧೩.೧೮೩೩.೬೪ ೧೯.೪೫ ೧೭೨.೯೨೧೦೦.೦೦

ಟಿಪ್ಪಣಿ : ಈ ವಿವರಗಳನ್ನು ೧೯೯೧ಕ್ಕೆ ಸೀಮಿತಗೊಳಿಸಿಕೊಳ್ಳಲಾಗಿದೆ. ದುಡಿಮೆಗಾರರ ವಲಯವಾರು ಹಂಚಿಕೆಯ ೨೦೦೧ರ ಜನಗಣತಿ ವಿವರಗಳು ಇನ್ನೂ ಲಭ್ಯವಾಗಿಲ್ಲ. (ಟಿ ಆರ್ ಚಂದ್ರಶೇಖರವರ ಅಸ್ಪೃಸ್ಯತೆ, ಆರ್ಥಿಕತೆ ಮತ್ತು ಅಭಿವೃದ್ಧಿ ಲೇಖನದಿಂದ ಮೇಲಿನ ಕೊಷ್ಟಕವನ್ನು ಉಲ್ಲೇಖಿಸಲಾಗಿದೆ)

ಮೇಲಿನ ಕೋಷ್ಟಕದ ಪ್ರಕಾರ ಪ್ರಾಥಮಿಕ ವಲಯ ಅಂದರೆ ಕೃಷಿ, ಗಣಿಗಾರಿಕೆ, ಇತರ ನಿತ್ಯದ ಉತ್ಪಾದನೆಯಲ್ಲಿ ತೊಡಗಿಕೊಂಡಿರುವವರು ಹೆಚ್ಚಾಗಿ ಪರಿಶಿಷ್ಟ ಜಾತಿಮತ್ತು ಪರಿಶಿಷ್ಟ ಪಂಗಡದವರು. ಅಂದರೆ ಈ ಎರಡೂ ಪಂಗಡಕ್ಕೆ ಸೇರಿದ ಸೇ ೮೦.೨೨% ರಷ್ಟು ಜನ ಹೆಚ್ಚು ಲಾಭ ತರದ ಪ್ರಾಥಮಿಕ ವಲಯದ ದುಡಿಮೆಯಲ್ಲಿ ನಿರತರಾಗಿದ್ದಾರೆ. ದ್ವಿತೀಯ ಮತ್ತು ತೃತೀಯ ವಲಯದಲ್ಲಿ ಈ ಸಮುದಾಯಗಳ ತೊಡಗಿಸಿಕೊಳ್ಳುವಿಕೆ ಬೆರಳೆಣಿಕೆ ಮಾತ್ರ ಆದರೆ ಹೆಳವರಲ್ಲಿ ಕೃಷಿಕೂಲಿಯನ್ನೂ ಸೇರಿ ಇತರೆ ಕೂಲಿ ಕೆಲಸದಲ್ಲಿ ನೂರಿತರಾಗಿದವರು ಶೇ ೪೫% ರಷ್ಟು ಜನ. ಇನ್ನೂ ಅಲೆಮಾರಿ ಸ್ಥಿತಿಯಲ್ಲಿರುವವರು ಮತ್ತು ಆರ್ಥಿಕವಾಗಿ ಭೂಮಾಲಿಕ ವ್ಯವಸ್ಥೆಯನ್ನು ಅವಲಂಬಿಸಿರುವವರು ಶೇ ೨೦% ರಷ್ಟು ಜನ. ಅಂದರೆ ಶೇ ೬೫% ರಷ್ಟು ಜನ ಇನ್ನೂ ನಿಶ್ಚಿತ ಆರ್ಥಿಕ ಮೂಲಗಳೂ ಇಲ್ಲದ ಆದಿಮ ವಲಯ್ಕಕೆ ಸೇರಿದವರು. ಆದರೆ ನಿತ್ಯದ ದುಡಿಮೆ ಮತ್ತು ಆದಾಯಗಳೆರಡೂ ಅನಿಶ್ಚಿತ ಸ್ಥಿತಿಯಲ್ಲಿಯೇ ಇರುವಂತಹ ಸ್ಥಿತಿಗಿಂತ ಅಲೆಮಾರಿ ಹೆಳವರ ಆರ್ಥಿಕ ಸ್ಥಿತಗತಿ ಉತ್ತಮವಾಗೇನೂ ಇಲ್ಲ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ.

ಹೆಳವರ ಶೈಕ್ಷಣಿಕ ಸ್ಥಿತಿಗತಿ

ಶಿಕ್ಷಣ ಭಾರತದಂತಹ ದೇಶದಲ್ಲಿ ಮೇಲ್ವರ್ಗಗಳ ಅಥವಾ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರ ಸ್ವತ್ತಾಗಿಯೇ ಉಳಿದುಬಿಟ್ಟಿದೆ. ಈವತ್ತು ಉನ್ನತ ಶಿಕ್ಷಣ ಕೇವಲ ಶ್ರೀಮಂತ ವರ್ಗಗಳಿಗೆ ಮೀಸಲು ಎಂಬ ಸ್ಥಿತಿ ನಿರ್ಮಾಣವಾಗಿದೆ. ಆದರೆ ಒಂದು ದೇಶದ ಶಿಕ್ಷಣ ವ್ಯವಸ್ಥೆಯ ಸ್ಥಿತಿಗತಿಯನ್ನು ಆ ದೇಶದಲ್ಲಿ ಬದುಕುತ್ತಿರುವ ಜನರ ಸಾಕ್ಷರತೆಯ ಮೂಲಕ, ಅಂದರೆ ಅಕ್ಷರ ಬರೆಯಲು ಮತ್ತು ಓದಲು ಬರು ‘ಪ್ರಾಥಮಿಕ ಹಂತವನ್ನು’ ಮಾನದಂಡವನ್ನಾಗಿಸಿಕೊಂಡು ಈ ಲೆಕ್ಕಾಚಾರ ಮಾಡಲಾಗುತ್ತದೆ. ಆದರೆ ಭಾರತದಂತಹ ಅಸಮಾನ ನೆಲೆಯ ಸಮಾಜದಲ್ಲಿ ಅಸಾಧಾರಣ ಏರು ಪೇರುಗಳಿವೆ. ಶಿಕ್ಷಣ ‘ಇಂತವರಿಗೆ’ ಮಾತ್ರ ‘ಮೀಸಲು’ ಎನ್ನುವ ಸಾಮಾಜಿಕ ಕಾನೂನುಗಳನ್ನು ಸಾವಿರಾರು ವರ್ಷಗಳಿಂದ ಪೋಷಿಸಿಕೊಂಡು ಬಂದ ದೇಶ ಇದು. ಇಂತಹ ದೇಶದಲ್ಲಿ ಈ ಸಮಾಜದ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಮತ್ತು ಅಂಚಿನ ಸಮುದಾಯಗಳಿಗೆ ಶಿಕ್ಷಣವೆಂಬುದು ಗಗನ ಕುಸುಮ. ಈ ಕಾರಣದಿಂದಾಗಿ ಈ ಸಮುದಾಗಳು ಕೇವಲ ಶ್ರಮದಾಯಕ ದುಡಿಮೆಗಳಲ್ಲಿ ಮಾತ್ರ ಶತಮಾನಗಳಿಂದ ತೊಡಗಿಕೊಂಡೇ ಬಂದರು. ಆದರೆ ಕಳೆದ ನೂರು ವರ್ಷಗಳಲ್ಲಿ ಈ ಸಮುದಾಯಗಳ ಶೈಕ್ಷಣಿಕ ಸ್ಥಿತಿಗತಿ ಹಂತಹಂತವಾಗಿ ಸುಧಾರಿಸುತ್ತಾ ಬಂದಿದೆ. ಆದರೆ ಒಟ್ಟಾರೆ ಭಾರತದ ಮತ್ತು ಕರ್ನಾಟಕದ ಸಾಕ್ಷರತೆಯ ಪ್ರಮಾಣದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಮತ್ತು ಅಂಚಿನ ಸಮುದಾಯಗಳ ಸಾಕ್ಷರತೆಯ ಪ್ರಮಾಣವು ನಿರೀಕ್ಷಿತ ಮಟ್ಟವನ್ನು ತಲುಪಿಲ್ಲದಿರುವುದ ಅಂಕಿಅಂಶಗಳಿಂದ ಗೊತ್ತಾಗುತ್ತದೆ. ಕರ್ನಾಟಕದ ಒಟ್ಟಾರೆಯ ಸಾಕ್ಷರತೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾಕ್ಷರತೆಯ ಪ್ರಮಾಣವನ್ನು ಈ ಕೆಳಗಿನ ಕೋಷ್ಟಕದ ಮೂಲಕ ಕಂಡುಕೊಳ್ಳಬಹುದಾಗಿದೆ. ಈ ಕೆಳಗಿನ ಅಂಕಿ ಅಂಶಗಳನ್ನು ೨೦೦೧ರ ಜನಗಣತಿಯಿಂದ ಪಡೆದುಕೊಳ್ಳಲಾಗಿದೆ.

ಕೋಷ್ಟಕ ೪: ಸಾಕ್ಷರತೆ : ಜನಗಣತಿ ಮಾಹಿತಿ : ೨೦೦೧

ಕ್ರ. ಸಂ. ವಿವರಗಳು ಒಟ್ಟು ಮಹಿಳೆಯರು ಪುರುಷರು
೧. ರಾಜ್ಯದ ಒಟ್ಟು ಜನಸಂಖ್ಯೆ ಶೇ. ೬೭.೦೪ ೫೭.೪೫ ೭೬.೨೯
೨. ಪರಿಶಿಷ್ಟ ಜಾತಿ ಶೇ. ೫೨.೯೦ ೪೧.೭೦ ೬೩.೮೦
೩. ಪರಿಶಿಷ್ಟ ವರ್ಗ ಶೇ. ೪೮.೩೦ ೩೬.೬೦ ೫೯.೭೦
೪. ಅಂತರ : ಪ. ಜಾ. (೧-೨) -೪.೧೪ -೧೫.೭೫ -೧೨.೪೯
೫. ಅಂತರ : ಪ.ಪಂ. (೧-೩) -೧೮.೭೪ -೨೦.೮೫ -೧೬.೫೯

ಈ ಕೋಷ್ಟಕದ ಪ್ರಕಾರ ಪರಿಶಿಷ್ಟೇತರ ಶಿಷ್ಟ ವರ್ಗಗಳ ಸಾಕ್ಷರತೆಯ ಪ್ರಮಾಣ ಶೇ ೬೭.೦೪ ರಷ್ಟಿದೆ. ಮಹಿಳೆಯರು ಶೆ. ೫೭.೪೫% ಮತ್ತು ಪುರುಷರು ೭೬.೨೯% ರಷ್ಟು ಸಾಕ್ಷರರಾಗಿದ್ದಾರೆ. ಆದರೆ ಪರಿಶಿಷ್ಟ ಜಾತಿಯ ಒಟ್ಟಾರೆಯ ಸಾಕ್ಷರತೆ ಶೇ. ೫೨.೯೦ ರಷ್ಟಿದ್ದರೆ. ಪುರುಷರು ಸೇ ೬೩.೮೦ ಮತ್ತ ಸ್ತ್ರೀಯರು ಸೇ. ೪೧.೭೦ ರಷ್ಟಿದೆ. ಪರಿಶಿಷ್ಟ ಪಂಗಡದ ಒಟ್ಟಾರೆ ಸಾಕ್ಷರತೆ ೪೮.೩೦. ಇವರಲ್ಲಿ ಶೇ ೫೯.೭೦ ರಷ್ಟು ಪುರುಷರು ಮತ್ತು ಶೇ. ೩೬.೬೦ ರಷ್ಟು ಸ್ತ್ರೀಯರು ಸಾಕ್ಷರತೆಯನ್ನು ಹೊಂದಿದ್ದಾರೆ. ಈ ಅಂಕೆಸಂಖ್ಯೆಗಳನ್ನು ಇಟ್ಟುಕೊಂಡು ಹೆಳವ ಸಮುದಾಯದ ಸಾಕ್ಷರತೆಯು ಸ್ಥಿತಿಗತಿಯನ್ನು ವಿವರಿಸಿಕೊಳ್ಳಬಹುದಾಗಿದೆ.

ಕೋಷ್ಟಕ ೫: ಹೆಳವರ ಸಾಕ್ಷರತೆಯ ಪ್ರಮಾಣ
ಸಾಕ್ಷರತೆ : ಜನಗಣತಿ ಮಾಹಿತಿ : ೨೦೦೧

ಕ್ರ.ಸಂ. ವಿವರಗಳು ಒಟ್ಟು ಮಹಿಳೆಯರು ಪುರುಷರು
೧. ರಾಜ್ಯದ ಒಟ್ಟು ಜನಸಂಖ್ಯೆ ಶೇ.೬೭.೦೪ ೫೭.೪೫ ೭೬.೨೯
೨. ಪರಿಶಿಷ್ಟ ಜಾತಿ ಶೇ. ೫೨.೯೦ ೪.೭೦ ೬೩.೮೦
೩. ಪರಿಶಿಷ್ಟ ವರ್ಗ ಶೇ. ೪೮.೩೦ ೩೬.೬೦ ೫೯.೭೦
೪. ಅಂತರ : ಪ.ಜಾ. (೧-೨) -೧೪.೧೪ -೧೫.೭೫ -೧೨.೪
೫. ಅಂತರ : ಪ.ಪಂ. (೧-೩) -೧೮.೭೪ -೨೦.೮೫ -೧೬.೫೯
೬. ಹೆಳವರ ಸಾಕ್ಷರತೆ ಶೇ. ೩೯.೦೦ ೨೭.೦೦ ೫೧.೦೦
೭. ಆಂತರ : (ಹೆಳವರು) -೨೮.೦೪ -೩೦.೪೫ -೨೫.೨೯

೨೦೦೧ ರ ಜನಗಣತಿಯ ಪ್ರಕಾರ ರಾಜ್ಯದ ಒಟ್ಟಾರೆಯ ಸಾಕ್ಷರತೆಯ ಪ್ರಮಾಣಕ್ಕಿಂತ ಹೆಳವರ ಸಾಕ್ಷರರ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿರುವುದು ಈ ಕೋಷ್ಟಕದಿಂದ ಕಂಡು ಬರುತ್ತದೆ. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾಕ್ಷರತೆಗಿಂತಲೂ ಹೆಳವರ ಸಾಕ್ಷರತೆಯ ಪ್ರಮಾಣವು ಅತ್ಯಂತ ಕಡಿಮೆ ಇರುವುದು ಕಂಡು ಬರುತ್ತದೆ. ಅದರಲ್ಲೂ ಮಹಿಳೆಯರು ಹೆಳವರ ಸಮುದಾಯದಲ್ಲಿ ಗಣನೀಯ ಪ್ರಮಾಣದಲ್ಲಿ ಅನಕ್ಷರಸ್ಥರಿರುವುದು ಕಂಡು ಬರುತ್ತದೆ. ಇದಕ್ಕೆ ಕಾರಣ ಈ ಸಮುದಾಯದ ಆರ್ಥಿಕ ಸ್ತಿತಿ ಎಂಬುದು ಸ್ಪಷ್ಟವಾಗುತ್ತದೆ. ಸದರಿ ಸಮುದಾಯದ ಶೇ ೬೫ರಷ್ಟು ಜನ ನಿತ್ಯದ ಬದುಕನ್ನು ನಿರ್ವಹಿಸುವಲ್ಲಿ ಮತ್ತು ಎರಡು ಹೊತ್ತಿನ ಊಟದ ಪ್ರಶ್ನೆಯೇ ಮೂಖ್ಯವಾಗಿರುವಲ್ಲಿ ಇವರು ಹೇಗೆ ಅಕ್ಷರ ಲೋಕಕ್ಕೆ ಪ್ರವೇಶ ಪಡೆಯಲು ಸಾಧ್ಯ? ಸಮುದಾಯಗಳು ಆರ್ಥಿಕವಾಗಿ ಸಬಲಗೊಳ್ಳದೆ ವಿಪರೀತ ಸ್ಪರ್ಧೆಯ ವರ್ತಮಾನವನ್ನು ಹೇಗೆ ತಾನೇ ಎದುರಿಸಲು ಸಾಧ್ಯ? ಹೆಳವರು ವಾಸಿಸುತ್ತಿರುವ ಯಾವ ಯಾವ ಜಿಲ್ಲೆಗಳಲ್ಲಿ ಸಮುದಾಯವು ಆರ್ಥಿಕವಾಗಿ ದುಸ್ಥಿತಿಯಲ್ಲಿದೆಯೋ ಆ ಎಲ್ಲ ಜಿಲ್ಲೆಗಳಲ್ಲಿ ಸದರಿ ಸಮುದಾಯದ ಸಾಕ್ಷರತೆಯ ಪ್ರಮಾಣವು ಅತ್ಯಂತ ಹೀನಾಯ ಸ್ಥಿತಿಯಲ್ಲಿರುವುದು ಕಂಡು ಬರುತ್ತದೆ. (ಅನುಬಂಧದಲ್ಲಿ ಆಯಾ ಜಿಲ್ಲೆಗಳ ಸಾಕ್ಷರತೆಯ ಪ್ರಮಾಣವನ್ನು ಕೋಷ್ಟಕಗಳಲ್ಲಿ ನೀಡಲಾಗಿದೆ) ಅದರಲ್ಲೂ ಈ ಸಮುದಾಯದ ಮಹಿಳೆಯ ಸಾಕ್ಷರತೆಯ ಪ್ರಮಾಣವು ಕಳವಳಕರಿ ಸ್ಥಿತಿಯಲ್ಲಿರುವುದನ್ನು ಗಮನಿಸಿಬಹುದಾಗಿದೆ.

ಇದಕ್ಕೆ ಕಾರಣ ಹೆಳವರಿಗೆ ನಿಶ್ಚಿತ ಆರ್ಥಿಕ ಮೂಲಗಳಿಲ್ಲದೇ ಇರುವುದು. ಯಾವ ಸಮುದಾಯವು ಕೆವಲ ಅನಿಶ್ಚಿತ ಮತ್ತು ಅವಲಂಬಿತ ಆರ್ಥಿಕ ಮೂಲಗಳನ್ನು ನೆಚ್ಚಿಕೊಂಡಿರುತ್ತದೋ, ಆ ಸಮುದಾಯವು ಸಾಮಾಜಿಕವಾಗಿ, ಮತ್ತು ಶೈಕ್ಷಣಿಕವಾಗಿ ಯಾವತ್ತೂ ಹಿನ್ನೆಡೆಯನ್ನು ಅನುಭವಿಸುತ್ತಲೇ ಇರುತ್ತದೆ. ವರ್ತಮಾನವನ್ನು ಚರಿತ್ರೆಯ ನೆನಪುಗಳಿಂದ ಎದುರಿಸುವುದು ಸಾಧ್ಯವಿಲ್ಲ. ಹೀಗಾಗಿ ಸಮುದಾಯವೊಂದಕ್ಕೆ ಸಾಂಸ್ಕೃತಿಕವಾಗಿ ಶತಮಾನಗಳ ಇತಿಹಾಸವಿದ್ದರೂ, ವರ್ತಮಾನವನ್ನು ಎದುರಿಸುವ ಆಧುನಿಕ ಕೌಶಲಗಳಿಲ್ಲದೇ ಹೋದರೆ ಅಂತಹ ಸಮುದಾಯಗಳು ಭವಿಷತ್ತಿನಲ್ಲಿ ಮೂಲೆಗುಂಪಾಗುತ್ತವೆ. ಹೆಳವರು ಆರ್ಥಿಕವಾಗಿ ಚರಿತ್ರೆಯ ಹೆಜ್ಜೆಗಳಲ್ಲಿಯೆ ತಮ್ಮ ಹೆಜ್ಜೆಗಳನ್ನು ಮೂಡಿಸಲು ಯತ್ನಿಸುತ್ತಿದ್ದಾರೆ. ಆರ್ಥಿಕವಾಗಿ ಊಲೀಗಮಾನ್ಯವ ವ್ಯವಸ್ಥೆಯನ್ನೇ ಅವಲಂಬಿಸುತ್ತಿದ್ದಾರೆ. ಆ ಕಾರಣದಿಂದಾಗಿಯೇ ಆರ್ಥಿಕವಾಗಿ ಹಿನ್ನೆಡೆ ಅನುಭವಿಸುವುದರ ಜೊತೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ರಂಗಗಳಲ್ಲಿಯೂ ಶೋಚನೀಯವಾಗಿ ಹಿಂದುಳಿದಿದ್ದಾರೆ. ಈ ಸಮುದಾಯವನ್ನು ವ್ಯವಸ್ಥಿತವಾಗಿ ಆರ್ಥಿಕವಾಗಿ ಮುನ್ನೆಡೆಸದಿದ್ದಲ್ಲಿ, ಇವರನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸಬಲೀಕರಿಸಲು ಸಾಧ್ಯವಿಲ್ಲ. ಅದರಲ್ಲೂ ಶೈಕ್ಷಣಿಕವಾಗಿ ಸಬಲಗೊಳ್ಳದ ಹೆಳವ ಸಮುದಾಯವನ್ನು ಆರ್ಥಿಕವಾಗಿ ಸಬಲಗೊಳಿಸಿದರೆ ಅದು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಸಬಲಗೊಳ್ಳಲು ಸಾಧ್ಯವಾಗುತ್ತದೆ.

 

[1] ಹರಿಲಾಲ್ ಪವಾರ್, ಹೆರವರ ಸಂಸ್ಕೃತಿ, ಪು. ೧೬, ೧೯೯೩

[2] ಅದೇ, ಪು. ೧೯, ೧೯೯೩

[3] ಅದೇ, ಪು. ೧೯, ೧೯೯೩

[4] ಅದೇ, ಪು. ೧೯, ೧೯೯೩

[5] ನಾಗೇಗೌಡಎಚ್ಎಲ್, ಹೆಳವರಮತ್ತುಅವರಕಾವ್ಯಗಳು, ಪು. xxxviii -೧೯೮೨

[6] ಅದೇಪು. ಪು. xxxiii – ೧೯೮೨

[7] ಹರಿಲಾಲ್ಪವಾರ್, ಹೆಳವರಸಂಸ್ಕೃತಿ, ಪು. ೨೦, ೧೯೯೩

[8] ನೋಡಿ, ಟಿಆರ್ಚಂದ್ರಶೇಖರ, ಅಸ್ಪೃಸ್ಯತೆ, ಆರ್ಥಿಕತೆಮತ್ತುಅಭಿವೃದ್ಧಿ, ಅಭಿವೃದ್ಧಿಅಧ್ಯಯನ, ೨೦೦೬

[9] ನೋಡಿ. ಅದೇ

[10] ಟಿಅರ್ಚಂದ್ರಶೇಖರ, ನೋಡಿ. ಅಸ್ಪೃಸ್ಯತೆ, ಆರ್ಥಿಕತೆಮತ್ತುಅಭಿವೃದ್ಧಿ, ಅಭಿವೃದ್ಧಿಅಧ್ಯಯನ, ೨೦೦೬