ಇಂಡಿಯಾದಲ್ಲಿ ಜಾತಿಯೊಂದು ಒಂದು ಸ್ವಯಂಪೂರ್ಣ ಉತ್ಪಾದನ ಘಟಕ. ಈವತ್ತು ಒಂದು ಜಾತಿ ಎಂದು ಗುರುತಿಸುವ ಪ್ರತಿ ಸಮುದಾಯವೋ ಈ ದೇಶದ ಪರಂಪರೆಯಲ್ಲಿ ಒಂದು ನಿಶ್ಚಿತ ಆರ್ಥಿಕ ಚಟುವಟಿಕೆಯನ್ನು ನಿರ್ವಹಿಸುತ್ತಲೇ ಬಂದಿದೆ. ಶ್ರಮ ವಿಭಜನೆಯ ಕಾರಣಕ್ಕೆ ಪ್ರತ್ಯೇಕಗೊಂಡ ಸಾಮಾಜಿಕ ಗುಂಪುಗಳು ಜಾತಿಗಳಾಗಿ ರೂಪಾಂತರಗೊಂಡವು. ಈ ಪ್ರತ್ಯೇಕತೆಯು ಮುಂದೊಂದು ದಿನ ಸಾಮಾಜಿಕ ನಿಯಮಗಳ ಮೂಲಕ ನಿಯಂತ್ರಣಕ್ಕೊಳಪಟ್ಟಿತು. ಶ್ರಮ ವಿಭಜನೆಯಲ್ಲಿನ ಭಿನ್ನ ವೃತ್ತಿಗಳು ಶ್ರೇಷ್ಠ, ಮಧ್ಯಮ ಮತ್ತು ಕನಿಷ್ಟಗಳ ಆಧಾರದ ಮೇಲೆ ಆಯಾ ವೃತ್ತಿಗಳನ್ನು ನಿರ್ವಹಿಸುವ ಉತ್ಪಾದಕ ಗುಂಪಗುಳ ಸಾಮಾಜಿಕ ಸ್ಥಾನಮಾನಗಳು ನಿರ್ಧರಿತವಾದವು. ಈ ಸ್ಥಾನಮಾನಗಳನ್ನು ಜೀವಂತವಾಗಿರಿಸಲು ಇಂಡಿಯಾದಲ್ಲಿ ಸಾಮಾಜಿಕ ಕಾನೂನುಗಳು ಬಿಗಿಯಾಗುತ್ತಲೇ ಹೋದವು. ಈ ಕಾನುನುಗಳನ್ನು ರೂಪಿಸುತ್ತದಿದವರು ಆಳುವ ವರ್ಗದ ಜನ. ಈ ಅಲ್ಪಸಂಖ್ಯಾತ ಆಳುವ ವರ್ಗದ ಜನ ದುಡಿವ ವರ್ಗಗಳ ಉತ್ಪಾದನೆಯ ಮೇಲೆ ನಿರಂತರ ಒಡೆತನ ಸಾಧಿಸುವ ಕಾರಣಕ್ಕಾಗಿಯೇ ಸಾಮಾಜಿಕ ನಿಯಮಗಳನ್ನು ಉಗ್ರವಾಗಿ ರೂಪಿಸಿದರು. ಜೊತೆಗೆ ದುಡಿವ ವರ್ಗದ ಸಾಮಾಜಿಕ ಗುಂಪುಗಳಿಗೆ ಆರ್ಥಿಕ ಒಡೆತನವನ್ನು ನಿರಾಕರಿಸಿದರಯು. ಈ ಕಾರಣದಿಂದ ಇಂಡಿಯಾದ ದುಡಿವ ವರ್ಗವೆಂದರೆ, ಇಲ್ಲಿನ ಕೆಳಜಾತಿಗಳು. ಈ ಕೆಳಜಾತಿಗಳಲ್ಲಿ ಬಹುತೇಕ ಸಮುದಾಯಗಳು ಉತ್ಪಾದನೆಯಲ್ಲಿ ತೊಡಗಿದ್ದರೆ, ಕೆಲವು ಸಮುದಾಯಗಳು ಸೇವಕ ವರ್ಗವಾಗಿ ರೂಪುಗೊಂಡಿದ್ದವು. ಈ ಸೇವಕ ವರ್ಗದಲ್ಲಿ ಮನರಂಜಕರು, ಊಳಿಗದವರು, ಕುಶಲಕರ್ಮಿಗಳು ಮತ್ತು ‘ಅನುತ್ಪಾದಕ ಸೇವೆಗಳ’ ಮೂಲಕ ಆಳುವ ವರ್ಗವನ್ನು ಆಶ್ರಯಿಸಿದ್ದ ಸಮುದಾಯಗಳು ಪ್ರಮುಖವಾದವು.

ಈ ಸೇವಕ ವರ್ಗ ಯಾವತ್ತೂ ಆರ್ಥಿಕವಾಗಿ ಆಳುವ ವರ್ಗವನ್ನು ಆಶ್ರಯಿಸಿಯೇ ಬದುಕಬೇಕಿತ್ತು. ಈ ಕಾರಣದಿಂದ ಆಳುವ ವರ್ಗದ ಸ್ವರೂಪ ಬದಲಾದಂತೆ ಸೇವಕ ವರ್ಗದ ಸಾಮಾಜಿಕಾರ್ಥಿಕ ಸ್ಥಿತಿಗತಿಗಳೂ ಬದಲಾಗುತ್ತಿದ್ದವು. ಈ ಸೇವಕ ವರ್ಗದಲ್ಲಿ, ಗೊಂಬೆಕುಣಿಸುವ ಕಿಳ್ಳೆಕ್ಯಾತರು, ಕಸರತ್ತುಗಳನ್ನು ಮಾಡುವ ಡೊಂಬರು ಮತ್ತು ಜಾತಿಗಾರರು, ಹಗಲು ವೇಷದವರು, ಕವಲೆತ್ತಿನವರು, ದೊಂಬಿದಾಸರು, ಕಿನ್ನರಿ ಜೋಗಿಗಳು, ಗೊಂದಲಿಗರು, ಮೋಡಿಕಾರರು, ಬುಡಬುಡಿಕೆಯವರು ಮುಖ್ಯವಾಗಿ ಮನರಂಜಕ ಸಮುದಾಯಗಳು. ಇನ್ನು ಕುಶಲಕರ್ಮಿಗಳಲ್ಲಿ ಬಯಲು ಪತ್ತಾರ, ಬಯಲು ಕುಮ್ಮಾರ, ಮೇದರು, ಪಿಂಜರರು, ಮುದ್ದೆಕಮ್ಮರರು, ಹಂಡಿ ಜೋಗಿಗಳು ಪ್ರಮುಖ ಸಮುದಾಯಗಳು. ಇನ್ನು ಊಳಿಗದವರಾಗಿ ಮತ್ತು ಅನುತ್ಪಾದಕ ಚಟುವಟಿಕೆಗಳ ಮೂಲಕ ಆಳುವ ವರ್ಗವನ್ನು ಆಶ್ರಯಿಸಿದ್ದವುರು, ಹೆಳವರು, ದಕ್ಕಲರು ಮತ್ಮತು ಮೊಂಡರು. ಇವರು ‘ಮನೆ ಮಕ್ಕಳಂತೆ’ ಆಳುವ ವರ್ಗದ ಸೇವೆ ಮಾಡುತ್ತಾ ಬದುಕಿ ಬಂದವರು. ಈ ಎಲ್ಲಾ ಸಮುದಾಯಗಳಿಗೆ ಪಾರಂಪರಿಕವಾಗಿ ನಿಶ್ಚಿತ ಆದಾಯದ ಮೂಲಗಳಿಲ್ಲ. ಇವರು ಅನಿವಾರ್ಯವಾಗಿ ಆಳುವ ವರ್ಗಗಳನ್ನು ಅವಲಂಬಿಸಲೇಬೇಕಿತ್ತು. ಜೊತೆಗೆ ಆಳುವ ವರ್ಗವೂ ಈ ಸಮುದಾಯಗಳನ್ನು ಪೋಷಿಸುತ್ತಲೂ ಬಂದಿತು. ಆದರೆ ಈ ಆಳುವ ವರ್ಗದ ಬದಲಾದ ಸ್ವರೂಪಕ್ಕೆ ತಕ್ಕಂತೆ ಆವಲಂಬಿತ ಸಮುದಾಯಗಳ ಬದುಕುಗಳೂ ರೂಪಾಂತರಗೊಳ್ಳುತ್ತಿದ್ದವು.

ಇಂಡಿಯಾದ ಮಧ್ಯಕಾಲೀನ ರಾಜಕೀಯ ಕ್ಷೇತ್ರದಲ್ಲಿ ಸಂಭವಿಸಿದ ವಿಶ್ಲೇಷಣೆಗಳ ಕಾರಣಕ್ಕಾಗಿ ಇಲ್ಲಿನ ಪಾರಂಪರಿಕ ಉತ್ಪಾದನ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ನಡೆದು ಹೋದವು. ಅದರಲ್ಲೂ ವಸಾಹತುಶಾಹಿ ಆಡಳಿತದ ಸಂದರ್ಭದಲ್ಲಿ ಭಾರತದ ಆರ್ಥಿಕ ಕ್ಷೇತ್ರವನ್ನು ಬ್ರಿಟಿಷರು ನಿರ್ಣಾಯಕವಾಗಿ ನಿಯಂತ್ರಣಕ್ಕೆ ತೆಗೆದುಕೊಂಡರು. ಆಗ ಭಾರತದ ಪಾರಂಪರಿಕ ಉತ್ಪಾದನಾ ಸಂದರ್ಭಗಳಲ್ಲಿ ಭಾರೀ ಬದಲಾವಣೆಗಳು ಸಂಬವಿಸಿದವು. ಜೊತೆಗೆ ಸಂಕೀರ್ಣಗೊಂಡ ಆರ್ಥಿಕ ಚಟುವಟಿಕೆಗಳ ಕಾರಣಕ್ಕಾಗಿ ಸೇವಕ ವರ್ಗವು ನೆಲೆತಪ್ಪಿ ಹೋಯಿತು. ತಮ್ಮನ್ನು ಪೋಷಿಸುತ್ತಿದ್ದ ಆಳುವ ವರ್ಗವೇ ಕಂಪಿ ಆಡಳಿತದಿಂದಾಗಿ ತನ್ನ ಸ್ವಭಾವವನ್ನು ಬದಲಿಸಿಕೊಂಡ ಕಾರಣಕ್ಕೆ ಈ ಸೇವಾ ವರ್ಗವು ದಿಕ್ಕೆಟ್ಟು ಹೋಯಿತು. ಆರ್ಥಿಕ ಮೂಲಗಳನ್ನು ಕಂಡುಕೊಳ್ಳಲು ಅಲೆಮಾರಿ ಬದುಕನ್ನು ರುಪಿಸಿಕೊಳ್ಳಲೇ ಬೇಕಿತ್ತು. ಇಂತಹ ಅಲೆಮಾರಿ ಸಮುದಾಯಗಳಲ್ಲಿ ಹೆಳವರ ಸಮುದಾಯವೂ ಒಂದು.

ಹೆಳವರು ಪಾರಂಪರಿಕವಾಗಿಯೆ ಊಳಿಗಮಾನ್ಯತೆಯನ್ನು ಅವಲಂಬಿಸಿದ್ದ ಮತ್ತು ಈಗಲೂ ಈ ಸಮುದಾಯದ ಅಲೆಮಾರಿ ಗುಂಪು ಊಳಿಗಮಾನ್ಯತೆಯನ್ನು ಅವಲಂಬಿಸಿಯೇ ಇದೆ. ಈ ಅಲೆಮಾರಿ ಗುಂಪುಗಳು ನಮ್ಮ ಸಾಮಾಜಿಕ ಚರಿತ್ರೆಯುದ್ದಕ್ಕೆ ಆಳುವ ವಾಗ್ವಾದವನ್ನು ಆರ್ಥಿಕವಾಗಿ ಅವಲಂಬಿಸಿಕೊಂಡೇ ಬಂದವು. ಯಾವತ್ತೂ ಭಾರತದ ಸಾಂಪ್ರದಾಯಿಕ ಉತ್ಪಾದನ ಸಂಬಂಧಗಳು ಬದಲಾದವೋ ಆಗ ಈ ಅವಲಂಬಿತ ಸಮುದಾಯಗಳ ಬದುಕುಗಳೂ ರೂಪಾಂತರಗೊಂಡವು. ಹೆಳವರು ಆಧುನಿಕಫೂರ್ವ ಕಾಲಘಟ್ಟದಲ್ಲಿ ಊಳಿಗಮಾನ್ಯ ಉತ್ಪಾದನಾ ವ್ಯವಸ್ಥೆ ನಿರಸನಗೊಂಡ ನಂತರ ಅತಂತ್ರ ಅಲೆಮಾರಿಗಳಾಗಿ ರೂಪಾಂತರಗೊಂಡಂತೆ ಕಾಣುತ್ತದೆ. ಸಹಜವಾಗಿಯೇ ತಮ್ಮ ಕುಲಕೊಂಡಾಡುವ ಮತ್ತು ವಂಶಾವಳಿಯ ವಿವರಗಳನ್ನು ದಾಖಲಿಸುತ್ತಾ ಅದನ್ನೆ ತಮ್ಮ ಆರ್ಥಿಕ ಚಟುವಟಿಕೆಯಾಗಿ ಮುಂದುವರೆಸಿದರು. ಈ ಚಟುವಟಿಕೆಯೇ ಅವರನ್ನು ಅಲೆಮಾರಿಗಳನ್ನಾಗಿಸಿತು. ಜೊತೆಗೆ ಹೆಳವರು ತಮ್ಮ ಪಾರಂಪರಿಕ ವ್ಯಕ್ತಿಯನ್ನು ಬಿಟ್ಟು ಬೇರೆ ಬೇರೆ ವೃತ್ತಿಗಳನ್ನು ಅವಲಂಬಿಸಬೇಕಾಯ್ತು. ಅದೇ ಕಾರಣಕ್ಕಾಗಿ ಹೆಳವರಲ್ಲಿ ಅನೆಕ ಪಂಗಡಗಳು ಮತ್ತು ಉಪಪಂಗಡಗಳೂ ರೂಪುಗೊಂಡವು. ಈವತ್ತು ಹೆಳವರಲ್ಲಿ ಅನೆಕ ಉಪಪಂಗಡಗಳು ಅಸ್ತಿತ್ವದಲ್ಲಿವೆ. ಆದರೆ ಇವರು ಮೂಲತಃ ಒಂದೇ ಗುಂಪಿಗೆ ಸೇರಿದವರು ಎಂಬುದಕ್ಕೆ ಅವರಲ್ಲಿ ಅನೆಕ ಎತ್ನೋಗ್ರಫಿಕಲ್ ಸಾಮ್ಯತೆಗಳು ಇಂದಿಗೂ ಉಳಿದುಕೊಂಡು ಬಂದಿವೆ.

ಭಾರತದಲ್ಲಿ ಬದಲಾದ ರಾಜಕೀಯಾರ್ಥಿಕ ಸನ್ನಿವೆಶಗಳಿಗೆ ತಕ್ಕಂತೆ ಹೆಳವರೂ ತಮ್ಮ ಸಾಮಾಜಿಕಾರ್ಥಿಕ ಸ್ಥಿತಿಗತಿಗಳನ್ನು ಬದಲಿಸಿಕೊಳ್ಳುತ್ತಲೇ ಬಂದಿದ್ದರೆ. ಈವತ್ತು ಹೆಳವರು ‘ಕ್ರೀಮ್ ಲೇಯರ್’ನ ಜನ ಆಧುನಿಕ ಶಿಕ್ಷಣ ಪಡೆದು ಸರಕಾರಿ ಉದ್ಯೋಗದಲ್ಲಿದ್ದಾರೆ. ಕೃಷಿಕರಾಗಿ ಕೆಲವುರ ಉತ್ತಮ ಸ್ಥಿತಿಯನ್ನು ತಲುಪಿದ್ದಾರೆ. ಆದರೆ ಪಾರಂಪರಿಕ ವೃತ್ತಿಯಲ್ಲಿಯೇ ಮುಂದುವರೆದಿರುವವರು ಅಲೆಮಾರಿಗಳಾಗಿಯೇ ಬದುಕುತ್ತಿದ್ದಾರೆ. ಜೊತೆಗೆ ನಿಶ್ಚಿತ ಆದಾಯ ಮೂಲಗಳಿಲ್ಲದೆ ಈ ಸಮುದಾಯದ ಜನ ಕೃಷಿಕೂಲಿಗಳಾಗಿ, ಕಾರ್ಮಿಕರಾಗಿ ಆರ್ಥಿಕವಾಗಿ ಅತ್ಯಂತ ಹೀನಯ ಸ್ಥಿತಿಯಲ್ಲಿದ್ದಾರೆ. ಈ ಸಮುದಾಯದಲ್ಲಿ ಆರ್ಥಿಕವಾಗಿ ಹೀನಯ ಸ್ಥಿತಿಯಲ್ಲಿರುವ ಜನರೇ ಹುಸಂಖ್ಯಾತರು. ಪ್ರಸ್ತುತ ಅಧ್ಯಯನವು ಹೆಳವ ಸಮುದಾಯದ ಸಾಮಾಜಿಕಾರ್ಥಿಕ ಸ್ತಿತಿಗತಿಗಳನ್ನು ವಿವರಿಸುವ ಪ್ರಯತ್ನವಾಗಿದೆ. ಈ ಅಧ್ಯಯನ ಹಲವು ಮಿತಿಗಳನ್ನು ಒಳಗೊಂಡಿದ್ದರೂ, ಈ ಶೈಕ್ಷಣಿಕ ಪ್ರಯತ್ನದ ಹಿಂದೆ ಹೆಳವ ಸಮುದಾಯದ ಜನರ ಅಭಿವೃದ್ಧಿಯ ಹಂಬಲಗಳಿವೆ.

ಅಧ್ಯಯನದ ಫಲಿತಗಳು

೧. ಭಾರತದ ಸಾಮಾಜದ ಶ್ರೇಣಿಕೃತ ವ್ಯವಸ್ಥೆಯು ಶ್ರಮ ವಿಭಜನೆಯ ನೆಪದಲ್ಲಿ ಸಮಾಜವನ್ನು ವಿಷಮಗೊಳಿಸಿತು.

೨. ಈ ವಿಷಯ ಸಮಾಜವನ್ನು ಪೋಷಿಸಲೆಂದೇ ಆರ್ಥಿಕ ಅಧಿಕಾರಗಳನ್ನು ದುಡಿವ ವರ್ಗಗಳಿಗೆ ನಿರಾಕರಿಸಲಾಯಿತು.

೩. ಉತ್ಪಾದಿತ ಮಿಗುತಾಯದ ಮೇಲೆ ಒಡೆತನ ಸಾಧಿಸಿದ ಆಳುವ ವರ್ಗವು. ಉತ್ಪಾದನಾ ಶಕ್ತಗಳನ್ನು ಜಾತಿಯ ಹೆಸರಲ್ಲಿ ಸ್ವಯಂಪೂರ್ಣಗೊಳಿಸಿ ಸಾಮಾಜಿಕ ಅಸಮಾನತೆಗೆ ಧಾರ್ಮಿಕ ನ್ಯಾಯಬದ್ಧತೆಯನ್ನು ಒದಗಿಸಿತು.

೪. ಭಾರತದ ಕೆಳಜಾತಿಗಳೆಂದರೆ ಆರ್ಥಿಕತೆಯ ಮೇಲೆ ಯವ ಒಡೆತನವನ್ನು ಹೊಂದಲಾರದ ಅಸಹಾಯಕ ದುಡಿವ ಸಮುದಾಯಗಳು.

೫. ಈ ಸಮುದಾಯಗಳಲ್ಲಿ ಸೇವಕ ವರ್ಗವಾಗಿ ಅನೆಕ ಸಮುದಾಯಗಳು ರೂಪಗೊಂಡವು. ಇವು ಆಳುವ ವರ್ಗಕ್ಕೆ ಮತ್ತು ‘ಉತ್ಪಾದಕ’ ವರ್ಗಕ್ಕೆ ಸೇತುವೆಯಂತೆ ಬದುಕಿ ಬಂದ ಸಮುದಾಯಗಳಿವು.

೬. ಈ ಸೇವಕ ಸಮುದಾಯಗಳು ಆರ್ಥಿಕವಾಗಿ ಆಳವ ವರ್ಗವನ್ನು ಅವಲಮಬಿಸಿಕೊಂಡೇ ಬಂದವು. ಈ ಸಮುದಾಯಗಳ ಆರ್ಥಿಕ ಮೂಲವೆಂದರೆ ಆಳುವ ವರ್ಗದ ಅವಲಂಬನೆ.

೭. ಈ ಕಾರಣದಿಂದ ಆಳುವ ವರ್ಗದ ಸಾಮಾಜಿಕಾರ್ಥಿಕ ಚಟುವಟಿಕೆಗಳಲ್ಲಿ ಬದಲಾವಣೆಗಳಾದಾಗೆಲ್ಲ ಸೇವಕ ಸಮುದಾಯಗಳ ಬದುಕಿನ ಸ್ವರೂಪಗಳು ಬದಲಾಗುತ್ತಾ ಬಂದವು.

೮. ಮಧ್ಯಕಾಲೀನ ಸಮಾಜವು ವಸಾಹತು ಆಡಳಿತದ ಆಳ್ವಿಕೆಯಡಿ ಬಂದ ನಂತರ ಸೇವಕ ಸಮುದಾಯಗಳನ್ನು ಪೋಷಿಸುತ್ತಿದ್ದ ಅಳುವ ವರ್ಗಗಳಲ್ಲಿ ಅನೆಕ ಬದಲಾವಣೆಗಳು ಸಂಭವಿಸಿದವು.

೯. ಭಾರತದ ಸಾಂಪ್ರದಾಯಿಕ ಆಳುವ ವರ್ಗವು ವಸಾಹತು ಆಡಳಿತದ ಸಂದರ್ಭದಲ್ಲಿ ಅನಿವಾರ್ಯವಾಗಿ ತನ್ನ ಆರ್ಥಿಕ ಚಟುವಟಿಕೆಗಳನ್ನು ಬದಲಾದ ನಿಯಮಗಳಿಗೆ ತಕ್ಕಂತೆ ರೂಪಾಂತರಿಸಿಕೊಳ್ಳಬೇಕಿತ್ತು. ಆಗ ಅದು ತನ್ನ ಸೇವಕ ವರ್ಗವನ್ನು ಬಿಟ್ಟುಕೊಡುವುದೂ ಅನಿವಾರ್ಯವಾಗಿತ್ತು.

೧೦. ಈ ಸೇವಕ ಸಮುದಾಯಗಳೇ ಮುಂದೆ ಆರ್ಥಿಕವಾಗಿ ನೆಲೆ ಇಲ್ಲದಂತಾಗಿ ಆದಾಯದ ಮೂಲಗಳನ್ನು ಹುಡುಕಿಕೊಂಡು ಅಲೆಯ ತೊಡಗಿದವು. ಈ ಕಾರಣಕ್ಕಾಗಿ ಈ ಸಮುದಾಯಗಳು ಅಲೆಮಾರಿಗಳಾಗಿ ರೂಪಾಂತರಗೊಂಡವು.

೧೧. ಸೇವಕ ಸಮುದಾಯಗಳು ಅಲೆಮಾರಿಗಳಾಗಿ ರೂಪಾಂತರಗೊಂಡಿದ್ದಕ್ಕೆ ಅವುಗಳಿಗೆ ಯಾವ ಪಾರಂಪರಿಕ ನಿಶ್ಚಿತ ಆದಾಯದ ಮೂಲಗಳಿಲ್ಲದೇ ಇರುವುದು ಮುಖ್ಯ ಕಾರಣ.

೧೨. ಈ ಕಾರಣದಿಂದಾಗಿ ಅಲೆಮಾರಿಗಳು ಭಾರತದ ಸಾಮಾಜಿಕಾರ್ಥಿಕ ವ್ಯವಸ್ಥೆಯಲ್ಲಿ ಚಾರಿತ್ರಿಕವಾಗಿ ರೂಪುಗೊಂಡಿದ್ದಾರೆ.

೧೩. ಇಂತಹ ಅಲೆಮಾರಿಗಳಲ್ಲಿ ಹೆಳವರೂ ಸೇರಿದ್ದಾರೆ, ಮೂಲತಃ ಇವರು ಊಳಿಗಮಾನ್ಯ ಜಾತಿ ವ್ಯವಸ್ಥೆಯ ಸೃಷ್ಟಿಗಳು.

೧೪. ಇವರು ತಮ್ಮನ್ನು ಫೊಷಿಸುವ ಸಮುದಾಯಗಳ ಕುಲ ಕೊಂಡಾಡುವ ಮತ್ತು ಅವುಗಳ ಕೌಟುಂಬಿಕ ವಿವರಗಳನ್ನು ದಾಖಲಿಸುವ ವೃತ್ತಿಯನ್ನು ಪಾರಂಫರಿಕವಾಗಿ ಅವಲಂಬಿಸಿಕೊಂಡು ಬಂದರು.

೧೫. ಯಾವತ್ತೂ ಊಳಿಗಮಾನ್ಯ ವ್ಯವಸ್ಥೆಯು ವಸಾಹತು ಕಾಲಘಟ್ಟದಲ್ಲಿ ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆಯಲ್ಲಿ ಸಮ್ಮಿಳನ ಗೊಂಡಿತೋ ಆಗ ಈ ದೇಶದ ಪಾರಂಪರಿಕ ಉತ್ಪಾದನಾ ವ್ಯವಸ್ಥೆಯಲ್ಲಿ ಗುರುತರ ಬದಲಾವಣೆಗಳಾದವು.

೧೬. ಈ ಬದಲಾವಣೆಗಳಿಂದ ಅವಲಂಬಿತ ಸೇವಕ ಸಮುದಾಯಗಳು ನೆಲೆ ಕಳೆದುಕೊಂಡು ಅಲೆಮಾರಿಗಳಾದವು. ಊಳೀಗಮಾನ್ಯ ವ್ಯವಸ್ಥೆಯು ಬಂಡವಾಳಶಾಹಿ ವ್ಯವಸ್ಥೆಯಾಗಿ ತನ್ನ ರೂಪವನ್ನು ಬದಲಿಸಿದ್ದು ಇದಕ್ಕೆ ಕಾರಣ.

೧೭. ಹೆಳವರು ತಮ್ಮ ‘ಪಾರಂಪರಿಕ ಪೋಷಕರನ್ನು’ ಕಳೆದುಕೊಂಡ ಮೇಲೆ ಅಲೆಮಾರಿಗಳಾದರು. ಭೀನ್ನ ವೃತ್ತಿಗಳನ್ನೂ ಅವಲಂಬಿಸಿದರು. ಇದರಿಂದಾಗಿ ಹೆಳವರಲ್ಲಿ ಅನೇಕ ಉಪಂಗಡಗಳು ರೂಪುಗೊಂಡವು.

೧೮. ಈವತ್ತು ಅಲೆಮಾರಿಗಳಾಗಿರುವವರು ವಸಾಹತು ಆಡಳಿತದ ಅವಧಿಯಲ್ಲಿ ಕ್ರಿಮಿನಲ್ ಸಮುದಾಯಗಳ ಪಟ್ಟಿಯಲ್ಲಿ ನಮೂದಾಗಿರುವ ಸಮುದಾಯಗಳು. ಆಗಿನ ಕಂಪನಿ ಆಡಳಿತ ಈ ಅಲೆಮಾರಿಗಳನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಂಡಿದೆ.

೧೯. ಕ್ರಿಮಿನಲ್ ಟ್ರೈಬಲ್ ಆಕ್ಟ್‌ನ್ನು ೧೮೯೪ ರಲ್ಲಿ ಉತ್ತರ ಭಾರತದಲ್ಲಿ ಜಾರಿಯಾದರೆ, ೧೯೧೧ ರಲ್ಲಿ ಮದ್ರಾಸ್ ಪ್ರಸಿಡೆನ್ಸಿಯಲ್ಲಿ ಜಾರಿಯಾಯಿತು. ಆದರೆ ದಕ್ಷಿಣ ಭಾರತದಲ್ಲಿ ೧೯೧೧ ರಿಂದ ಕಂಪನಿ ಆಡಳಿತವು ಈ ಅಲೆಮಾರಿ ಸಮುದಾಯಗಳನ್ನು ಎಲ್ಲಾ ವಿಧದಲ್ಲೂ ಶೋಷಣೆ ಮಾಡಿದೆ.

೨೦. ಇವರನ್ನು ಜನ್ಮತಃ ಅಪರಾಧಿ ಸಮುದಾಯಳು (Habitual oftenders) ಎಂದು ಪರಿಗಣಿಸಿದ್ದರಿಂದ ಕಂಪನಿ ಆಡಳಿತವು ಈ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಇನ್ನಿಲ್ಲದಂತೆ ನಾಶ ಮಾಡಿದೆ.

೨೧. ಸ್ವಾತಂತ್ರ್ಯ ಬಂದ ಮೇಲೆ ಸಂವಿಧಾನಾತ್ಮಕವಾಗಿ ಈ ದೇಶದ ಶೋಷಿತ ಜನರಿಗೆ ಲಭ್ಯವಾಗುವ ಸವಲತ್ತುಗಳನ್ನು, ಆಯಾ ಶೋಷಿತ ಸಮುದಾಯಗಳ ಕ್ರಮ್ ಲೇಯ್‌ನ ಜನ ಬಳಸಿಕೊಂಡರು. ಇಲ್ಲವೆ ಶೋಷಿತ ಸಮುದಾಯಗಳಲ್ಲಿನ ಪ್ರಬಲ ಜಾತಿಗಳು ಬಳಸಿಕೊಂಡವು. ಇಲ್ಲವೆ ಮೇಲ್ಜಾತಿಯ ಜನರು ಶೋಷಿತ ಸಮುದಾಯಗಳಿಗೆ ಇದ್ದ ಮೀಸಲಾತಿ ಮತ್ತು ಉಳಿದ ಸಂವಿಧಾನಿಕ ಸೌಲಭ್ಯಗಳು ಕ್ರಮವಾಗಿ ಜಾರಿಯಾಗದಂತೆ ನೋಡಿಕೊಂಡರು.

೨೨. ಕ್ರಿಮಿನಲ್ ಟ್ರೈಬಲ್ ಪಟ್ಟಿಯಲ್ಲಿದ್ದ ಹಲವು ಸಮುದಾಯಗಳನ್ನು ಅವುಗಳ ಸಾಮಾಜಿಕಾರ್ಥಿಕ ಸ್ಥಿತಿಗತಿಗಳ ಆಧಾರದ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿಸಲಾಯಿತು. ಆದರೆ ಈ ಪಟ್ಟಿಯಲ್ಲಿನ ಕೆಲವು ಸಮುದಾಯಳನ್ನು ಮೇಲಿನ ಎರಡೂ ಪಟ್ಟಿಗೂ ಸೇರಿಸಲಿಲ್ಲ. ಕ್ರಮಿನಲ್ ಟ್ರೈಬ್ ಪಟ್ಟಿಯಲ್ಲಿದ್ದು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಪಟ್ಟಿಗೆ ಸೇರಲೇ ಬೇಕಿದ್ದ ಈ ಸಮುದಾಯಗಳು ಅಂತಿಮವಾಗಿ ಆ ಪಟ್ಟಿಯಲ್ಲಿ ಜಾಗ ದೊರಕಿಸಿಕೊಳ್ಳಲಾಗಲಿಲ್ಲ.

೨೩. ಹೀಗೆ ಸಂವಿಧಾನಾತ್ಮಕ ಸೌಲಭ್ಯಗಳನ್ನು ಪಡೆಯಲು ಅರ್ಹವಾಗಿದ್ದ ಸಮುದಾಯಗಳು ಅನುಸೂಚಿತ ಪಟ್ಟಿಯಲ್ಲಿ ಜಾಗ ಪಡೆಯಲಾಗದಿದ್ದಕ್ಕೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲಗೊಳ್ಳಲಿಲ್ಲ. ಇಂತಹ ಸಮುದಾಯಗಳು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಸಮುದಾಯಗಳಿಗಿಂತ ಆರ್ಥಿಕವಾಗಿ ಹೀನಾಯ ಸ್ಥಿತಿಯಲ್ಲಿವೆ.

೨೪. ಹೆಳವರು ಇಂದು ಶುದ್ಧಾಂಗವಾಗಿ ಅಲೆಮಾರಿಗಳಾಗಿಲ್ಲ. ಇವರು ಅರೆ ಅಲೆಮಾರಿಗಳು, ಮತ್ತು ಈ ಸಮುದಾಯದ ಕ್ರೀಮ್ ಲೇಯರ್‌ನ ಜನ ಕೃಷಿಕರಾಗಿ, ವ್ಯಾಪಾರಿಗಳಾಗಿ ಮತ್ತು ಆಧುನಿಕ ಶಿಕ್ಷಣ ಪಡೆದು ಸರಕಾರ ನೌಕರಿ ಪಡೆದು ಉತ್ತಮ ಸ್ಥಿತಿಯಲ್ಲಿದ್ದಾರೆ.

೨೫. ಆದರೆ ಅಲೆಮಾರಿಗಳು ಈ ಸಮುದಾಯದಲ್ಲಿ ಅಸ್ತಿತ್ವದಲ್ಲಿರುವುದು ಮತ್ತು ಅವರು ತಮ್ಮ ಪಾರಂಪರಿಕ ವೃತ್ತಿಯನ್ನು ಸಮರ್ಥಿಸಿಕೊಂಡು ಅದನ್ನು ಮುಂದುವರೆ ಸುತ್ತಿರುವುದು ಮಾತ್ರ ಆಶ್ಚರ್ಯಕರ ಸಂಗತಿ

೨೬. ಹೆಳವರಲ್ಲಿ ಮುಖ್ಯವಾಗಿ ಮೂರು ಭಿನ್ನ ಮನಸ್ಥಿತಿಯ ಗುಂಪುಗಳನ್ನು ಕಂಡುಕೊಳ್ಳಲಾಗಿದೆ. ಪ್ರಾಯಶಃ ಎಲ್ಲ ಅಲೆಮಾರಿಗಳಲ್ಲಿ ಈ ಬಗೆಯ ಗುಂಪುಗಳು ಇರಬಹುದು.

ಅ. ಪಾರಂಪರಿಕ ವೃತ್ತಿಯಲ್ಲಿಯೇ ಮುಂದುವರೆದು ಅಲೆಮಾರಿಗಳಾಗಿ ಬದುಕುತ್ತಿರುವವರು.

ಆ. ಪಾರಂಪರಿಕ ವೃತ್ತಿಯಲ್ಲಿ ಗೌರವವನ್ನಿಟ್ಟುಕೊಂಡೂ ಸಮಾಜಿಕ ಸ್ಥಾನಮಾನಗಳನ್ನು ಉನ್ನತೀಕರಿಸಿಕೊಳ್ಳಲು ಭಿನ್ನ ವೃತ್ತಿಗಳನ್ನು ಅವಲಂಬಿಸಿರುವವರು.

ಇ. ಪಾರಂಪರಿಕ ವೃತ್ತಿಯಲ್ಲಿ ಯಾವ ಗೌರವೂ ಇಲ್ಲದೆ ಆಧುನಿಕ ಶಿಕ್ಷಣ ಪಡೆದು ಸರಕಾರಿ ಉದ್ಯೋಗದಲ್ಲಿರುವವರು, ಕೃಷಿಕರಾಗಿ, ವ್ಯಾಪಾರಿಗಳಾಗಿ ಬದುಕುತ್ತಿರುವವರು.

೨೭. ಹೆಳವರು ಸಾಮಾನ್ಯವಾಗಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅದು ಬೆಳಗಾಂ, ಬೀದರ್, ಬಳ್ಳಾರಿ, ರಾಯಚೂರು ಮತ್ತು ದಕ್ಷಿಣ ಕರ್ನಾಟಕದ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಪಾರಂಪರಿಕ ವೃತ್ತಿಯನ್ನು ಅನುಸರಿಸುತ್ತಿರುವುದು ಕಂಡು ಬರುತ್ತದೆ.

೨೮. ಹೆಳವ ಸಮುದಾಯದಲ್ಲಿ ಪ್ರಮುಖವಾಗಿ ಮೂರು ಪಂಗಡಗಳಿದ್ದು, ೧೧ ಉಪಪಂಗಡಗಳಿರುವುದು ಕಂಡು ಬರುತ್ತದೆ.

೨೯. ಚಾರಿತ್ರಿಕವಾಗಿ ಹೆಳವರು ಸೇವಕ ಸಮುದಾಯವಾಗಿದ್ದುಕೊಂಡು, ಊಳಿಗಮಾನ್ಯ ಕೃಷಿ ವ್ಯವಸ್ಥೆಯನ್ನು ಆರ್ಥಿಕವಾಗಿ ಅವಲಂಬಿಸಿಕೊಂಡು ಬಂದವರಾಗಿದ್ದಾರೆ.

೩೦. ನನ್ನ ಈ ಅಧ್ಯಯನಕ್ಕಾಗಿ ಕೈಗೊಂಡ ಗಣತಿಯಲ್ಲಿ ಶೇ. ೭೫ ಕ್ಕೂ ಹೆಚ್ಚು ಜನ ಇನ್ನೂ ದುಡಿಮೆಯ ಪ್ರಾಥಮಿಕ ವಲಯವನ್ನೂ ಪ್ರವೇಶಿಸದೆ ‘ಆದಿಮ’ ಹಂತದಲ್ಲಿಯೇ ಇದ್ದಾರೆ. ಅಂದರೆ ಇಂತಹ ಜನ ಸಮುದಾಯಗಳು ನಾಡಿನ ‘ಮುಖ್ಯವಾಹಿನಿಯ’ ಉತ್ಪಾದನಾ ವ್ಯವಸ್ಥೆಯ ಒಳಗೆ ಪ್ರವೇಶವನ್ನೇ ಪಡೆದಿಲ್ಲ. ಅಂದರೆ ಇವರು ‘ಆದಿಮ ವಲಯ’ದ ಜನರೇ ಆಗಿದ್ದಾರೆ. ಈ ವಲಯದ ಜನ ಹೆಚ್ಚಾಗಿ ಆರ್ಥಿಕವಾಗಿ ಅವಲಂಬಿತರು. ನೆಲೆ ಇಲ್ಲದವರು ಮತ್ತು ಯಾವುದನ್ನು ನಾವು ರಾಷ್ಟ್ರೀಯ ತಲೆ ಆದಾಯ ಎಂದು ಗುರುತಿಸುತ್ತಾವೋ ಆ ಲೆಕ್ಕಚಾರದಿಂದ ದೂರ ಉಳಿಯುವ ಅನಾಮಿಕ ಗುಂಪಿಗೆ ಸೇರಿದವರು.

೩೧. ಹೆಳವ ಪಂಗಡಗಳಲ್ಲಿ ಬಹು ಸಂಖ್ಯಾತ ಜನ ಆರ್ಥಿಕವಾಗಿ ಅತ್ಯಂತ ದುರ್ಬಲರಾಗಿದ್ದು ನಿಶ್ಚಿತ ಆದಾಯವನ್ನು ತರುವ ಯಾವ ಆರ್ಥಿಕ ಮೂಲಗಳೂ ಇವರಿಗೆ ಲಭ್ಯವಾಗಿಲ್ಲ.

೩೨. ರಾಜ್ಯದ ಯಾವ ಯವ ತಾಲೂಕುಗಳಲ್ಲಿ ಹೆಳವರು ಪಾರಂಪರಿಕ ವೃತ್ತಿಯನ್ನು ಅನುಸರಿಸುತ್ತಿದ್ದಾರೋ ಆ ತಾಲೂಕುಗಳಲ್ಲಿ ಬಹುತೇಕ ಕುಟುಂಬಗಳು ಭೂ ರಹಿತವಾಗಿವೆ. ಉದಾಹರಣೆಗೆ ಗೋಕಾಕ್ ತಾಲೂಕಿನ ಕುಟುಂಬಗಳು ಭೂ ರಹಿತವಾಗಿವೆ. ಉದಾಹರಣೆಗೆ, ಗೋಕಾಕ್ ತಾಲೂಕಿನ ಎತ್ತಿನ ಹೆಳವರ ೨೭೦ ಕುಟುಂಬಗಳ ಪೈಕಿ ೨೦೧ ಕುಟುಂಬಗಳೂ ಭೂ ರಹಿತ ಕುಟುಂಬಗಳಾಗಿವೆ.

೩೩. ಗಣತಿಗೆ ಒಳಪಟ್ಟ ಒಟ್ಟು ೧೦೦೦ ಕುಟುಂಬಗಳ ಪೈಕಿ ಭೂಮಿಯನ್ನು ಹೊಂದಿರುವ ಕುಟುಂಬಗಳು ೨೩೯ ಮಾತ್ರ. ೭೬೧ ಕುಟುಂಬಗಳು ಭೂ ರಹಿತವಾಗಿವೆ. ಭೂಮಿಯನ್ನು ಹೊಂದಿರುವ ೨೩೯ ಕುಟುಂಬಗಳು ಒಟ್ಟು ೪೨೯ ಎಕರೆ ಜಮೀನನ್ನು ಹಂಚಿಕೊಂಡಿವೆ. ಅಂದರೆ ಪ್ರತಿ ಕುಟುಂಬ ಸರಾಸರಿ ೧.೭೯ ಎಕರೆ ಜಮಿನನ್ನು ಕೃಷಿಗೆ ಬಳಸುತ್ತಿರುವುದು ಕಂಡು ಬರುತ್ತದೆ. ಈ ೪೨೯ ಎಕರೆ ಕೃಷಿ ಭೂಮಿಯಲ್ಲಿ ನೀರಾವರಿ ವ್ಯವಸ್ಥೆ ಇರುವುದು ಕೇವಲ ೩೩ ಎಕರೆ ಜಮೀನಿಗೆ ಮಾತ್ರ.

೩೪. ಗಣತಿಗೆ ಒಳಪಟ್ಟ ೪೬೩೮ ಜನರಲ್ಲಿ ಕೆಲವು ೭೧ ಜನ ಮಾತ್ರ ಕೃಷಿಯನ್ನು ಅವಲಂಬಿಸಿ, ಬದುಕುತ್ತಿದ್ದಾರೆ. ಈ ೭೧ ಜನರಲ್ಲಿ ಹೆಚ್ಚಿನವುರ ಹಾವೇರಿ, ಚಿಕ್ಕಮಗಳೂರು ಮತ್ತು ಬೆಳಗಾಂ ಜಿಲ್ಲೆಗೆ ಸೇರಿದವರು. ಉಳಿದಂತೆ ಹೆಚ್ಚಿನವರು ವಿವಿಧ ಬಗೆಯ ದಿನಗೂಲಿಗಳಾಗಿ ಮತ್ತು ಪಾರಂಪರಿಕ ವೃತ್ತಿಯನ್ನು ಅವಲಂಬಿಸಿ ಅಲೆಮಾರಿಗಳಗಿ ಬದುಕುತ್ತಿದ್ಧಾರೆ. ಪಾರಂಪರಿಕ ವೃತ್ತಿಯನ್ನು ಅವಲಂಬಿಸಿ ಅಲೆಮಾರಿ ಜೀವನ ನಡೆಸುತ್ತಿರುವವರು ಹೆಚ್ಚಾಗಿ ಬೆಳಗಾಂ, ಮಂಡ್ಯ, ಚಿತ್ರದುರ್ಗ ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿ ಸಿಗುತ್ತಾರೆ.

೩೫. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾಕ್ಷರತೆಗಿಂತಲೂ ಹೆಳವರ ಸಾಕ್ಷರತೆಯ ಪ್ರಮಾಣವು ಅತ್ಯಂತ ಕಡಿಮೆ ಇರುವುದು ಕಂಡು ಬರುತ್ತದೆ. ಅದರಲ್ಲೂ ಮಹಿಳೆಯರು ಹೆಳವ ಸಮುದಾಯದಲ್ಲಿ ಗಣನೀಯ ಪ್ರಮಾಣದಲ್ಲಿ ಅನಕ್ಷರಸ್ಥರಿರುವುದು ಕಂಡು ಬರುತ್ತದೆ. ಇದಕ್ಕೆ ಕಾರಣ ಈ ಸಮುದಾಯದ ಆರ್ಥಿಕ ಸ್ಥಿತಿ ಎಂಬುದು ಸ್ಪಷ್ಟವಾಗುತ್ತದೆ.

೩೬. ಹೆಳವರು ಆರ್ಥಿಕವಾಗಿ ಚರಿತ್ರೆಯ ಹೆಜ್ಜೆಗಳಲ್ಲಿಯೇ ತಮ್ಮ ಹೆಜ್ಜೆಗಳನ್ನು ಮೂಡಿಸಲು ಯತ್ನಿಸುತ್ತಿದ್ದಾರೆ. ಆರ್ಥಿಕವಾಗಿ ಊಳಿಗಮಾನ್ಯ ವ್ಯವಸ್ಥೆಯನ್ನೇ ಅವಲಂಬಿಸುತ್ತಿದ್ದಾರೆ. ಆ ಕಾರಣದಿಂದಾಗಿಯೇ ಆರ್ಥಿಕವಾಗಿ ಹಿನ್ನೆಡೆ ಅನುಭವಿಸುವುದರ ಜೊತೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ರಂಗಗಳಲ್ಲಿಯೂ ಶೋಚನೀಯವಾಗಿ ಹಿಂದುಳಿದಿದ್ದಾರೆ.

೩೭. ಹೆಳವ ಸಮುದಾಯದ ಕ್ರೀಮ್ ಲೇಯರ್‌ನ ಜನ ಮಾತ್ರ ಇಂದು ತಾವು ಅನುಸರಿಸುತ್ತಿರುವ ಭಿನ್ನ ಆರ್ಥಿಕ ಚಟುವಟಿಕೆಗಳ ಕಾರಣಕ್ಕಾಗಿ ಭಿನ್ನಾವಾದ ಸಾಮಾಜಿಕಾರ್ಥಿಕ ಅವಕಾಶದಲ್ಲಿ ಬದುಕುತ್ತಿದ್ದಾರೆ.

ಕೆಲವು ಸಲಹೆಗಳು

೧. ಅಲೆಮಾರಿತನ ಹೆಳವ ಸಮುದಾಯಗದ ಬಹುಸಂಖ್ಯಾತರನ್ನು ಆರ್ಥಿವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣವಾಗಿದೆ. ಅಲೆಮಾರಿಗಳನ್ನು ನೆಲೆಗೊಳಿಸುವ ಪ್ರಯತ್ನ ಆಗಬೇಕಿದೆ.

೨. ಅಲೆಮಾರಿಗಳನ್ನು ಅಷ್ಟು ಸುಲಭವಾಗಿ ನೆಲೆನಿಲ್ಲಿಸಲು ಸಾಧ್ಯವಿಲ್ಲ. ಏಕೆಂದರೆ ತಮ್ಮ ಪಾರಂಪರಿಕ ವೃತ್ತಿಯ ಮೇಲೆ ಅವರಿಗೆ ವಿಶೇಷವಾದ ಮೋಹವಿದೆ. ಈ ಹೆಳವ ವೃತ್ತಿಯು ಯಾವ ಕಾರಣಕ್ಕೂ ಸದರಿ ಸಮುದಾಯವನ್ನು ಸಬಲೀಕರಿಸಲು ಸಾಧ್ಯವಿಲ್ಲ. ಸರಕಾರ ಈ ಅಲೆಮಾರಿಗಳನ್ನು ನೆಲೆನಿಲ್ಲಿಸಲು ವಿಶೇಷ ಪ್ರಯತ್ನಗಳನ್ನು ಕೈಗೊಳ್ಳಬೇಕಿದೆ.

೩. ಕುಲಕೊಂಡಾಡುವ ಮತ್ತು ವಾರ್ಷಿಕ ಪಾಲನ್ನು ಬೇಡಿ ಪಡೆಯುವ ತಮ್ಮ ಕುಲವೃತ್ತಿಯನ್ನು ಅಲೆಮಾರಿ ಹೆಳವರು ವಿಚಿತ್ರ ಕಾರಣಗಳಿಗೆ ಸಮರ್ಥಿಸಿಕೊಳ್ಳುತ್ತಾರೆ. ಅಸ್ಪೃಶ್ಯ ಮತ್ತು ಕೆಳಜಾತಿಗಳ ಕುಲವೃತ್ತಿಗಳು ಹೇಯವಾಗಿರುವುದರಿಂದ ಸಾಮಾಜಿಕ ಅವಮಾನದ ಕಾರಣಕ್ಕಾಗಿ ಈ ಸಮುದಾಯಗಳು ಅವುಗಳನ್ನು ಬಿಟ್ಟುಕೊಡುತ್ತಿವೆ. ಮತ್ತು ಈ ಸಮುದಾಯಗಳು ತಮ್ಮ ಮೂಲವೃತ್ತಿಗಳನ್ನು ಬಿಟ್ಟುಕೊಡುತ್ತಿರುವ ಕಾರಣಕ್ಕಾಗಿ ಅವರ ಮೇಲೆ ಹಿಂಸೆ ಮತ್ತು ಸಾಮಾಜಿಕ ಬಹಿಷ್ಕಾರಗಳು ಮೇಲ್ಜಾತಿಗಳಿಂದ ನಿರಂತರವಾಗಿ ನಡೆಯುತ್ತಿವೆ. ಅಸ್ಪೃಶ್ಯ ಮತ್ತು ಕೆಳಜಾತಿ ಸಮುದಾಯಗಳು ತಮ್ಮ ಕುಲದ ವೃತ್ತಿಗಳನ್ನು ಬಿಟ್ಟುಕೊಡಲೇಬೇಕಿದೆ. ಆದರೆ ಹೆಳವರ ಕುಲವೃತ್ತಿಗೆ ಊಳಿಗಮಾನ್ಯ ಜಾತಿ ವ್ಯವಸ್ಥೆಯಲ್ಲಿ ಅಸ್ಪೃಶ್ಯ ಜಾತಿಗಳ ವೃತ್ತಿಗಳಿಗಿರುವಂತೆ ಅವಮಾನಗಕರವಾದ ಸ್ಥಾನಮಾನಗಳಿಲ್ಲ. ಕೆಲವು ಕಡೆ ಊಳಿಗಮಾನ್ಯತೆ ಇಂದಿಗೂ ಹೆಳವರ ಕುಲಕೊಂಡಾಡುವ ಅವರ ಕಸಬನ್ನು ಪ್ರೋತ್ಸಾಹಿಸುತ್ತಿದೆ. ಜೊತೆಗೆ ಹೆಳವರಿಗೆ ತಮ್ಮ ಮನೆಯೊಳಗೆ ಪ್ರವೇಶಿಸುವುದಕ್ಕೆ ಅವಕಾಶಕೊಟ್ಟು, ತಮ್ಮ ಪಾರಂಪರಿಕ ಗತ್ತುಗಳಿಂದ ಕುಲದ ಚರಿತ್ರೆಯನ್ನು ಕೇಳುವ ಪ್ರವೃತ್ತಿಯು ಹೆಳವರ ಕುಲಕಸಬನ್ನು ಒಂದು ಸಾಂಸ್ಕೃತಿಕ ಅವಕಾಶದಲ್ಲಿ (Space) ಗೌರವಿಸುತ್ತದೆ. ಹೆಳವರು ತಮ್ಮ ಕುಲಕಸಬನ್ನು ಈ ಕಾರಣದಿಂದಾಗಿಯೇ ಸಮರ್ಥಿಸಿಕೊಳ್ಳುವಂತೆ ಕಾಣುತ್ತದೆ.

೪. ಈಗಾಗಲೇ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲೀಕರಣಗೊಂಡ ಹೆಳವ ಸಮುದಾಯದ ಜನರನ್ನು ಮತ್ತು ಆಸಕ್ತ ಆಕ್ಟಿವಿಷ್ಟುಗಳನ್ನು ಬಳಸಿಕೊಂಡು ಅಲೆಮಾರಿ ಹೆಳವರನ್ನು ನೆಲೆನಿಲ್ಲಿಸಲು ಮನವೊಲಿಸುವ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು ಒಳ್ಳೆಯದು.

೫. ಈ ಶಿಬಿರಗಳನ್ನು ಒಂದು ಮುಕ್ತ ವಾತಾವರಣದಲ್ಲಿ ನಡೆಸುವುದರ ಜೊತೆಗೆ, ಪಾರಂಪರಿಕ ವೃತ್ತಿಯನ್ನು ಅನುಸರಿಸುತ್ತಿರುವ ಗುಂಪುಗಳ ಮನಃಪರಿವರ್ತನೆಗೆ ಬೇಕಾದ ಎಲ್ಲ ಬಗೆಯ ಅಭ್ಯಾಸ ಸಾಮಾಗ್ರಿಗಳನ್ನು ಬಳಸಿಕೊಂಡು, ಜನಪ್ರಿಯ ಮಾಧ್ಯಮಗಳ ಮೂಲಕ ಅವರಲ್ಲಿ ಅರಿವು ಮೂಡಿಸುವ ನಿರಂತರ ಶಿಬಿರಗಳು ನಡೆಯುವಂತಾಗಬೇಕು.

೬. ಅಲೆಮಾರಿಗಳಿಗಾಗಿ ಸರಕಾರದ ಯಾವ ಇಲಾಖೆಯಲ್ಲೂ ಅಭಿವೃದ್ಧಿಯ ಪ್ಯಾಕೇಜ್‌ಗಳಿರುವುದು ಕಂಡುಬರುವುದಿಲ್ಲ. ಸರಕಾರವು ಅಲೆಮಾರಿಗಳಿಗಾಗಿಯೇ ಅಭಿವೃದ್ಧಿ ಪ್ಯಾಕೇಜ್‌ನ್ನು ರೂಪಿಸಬೇಕು.

೭. ಅಲೆಮಾರಿಗಳನ್ನು ವಸ್ತುನಿಷ್ಠವಾಗಿ ಗುರುತಿಸಿ ಅವರಿಗೆ ಸಂವಿಧಾನ ಬದ್ಧ ಪ್ರತ್ಯೇಕ ಮೀಸಲಾತಿ ವ್ಯವಸ್ಥೆ ಮಾಡುವುದು.

೮. ಅಲೆಮಾರಿಗಳು ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದಿರುವುದು ಅವರಿಗೆ ನಿಶ್ಚಿತಿ ಆದಾಯದ ಮೂಲಗಳಿಲ್ಲದೇ ಇರವುದರಿಂದ. ಸರಕಾರ ಹೆಳವ ಸಮುದಾಯದ ಜನರ ಆಸಕ್ತಿಗಳಿಗೆ ಅನುಗುಣವಾಗಿ, ಕೃಷಿಭೂಮಿ, ವ್ಯಾಪಾರಕ್ಕಾಗಿ ಅಗತ್ಯ ಸಾಲ ಸೌಲಭ್ಯಗಳಂತಹ ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳದಿದ್ದರೆ ಇವರು ಸಬಲೀಕರಣಗೊಳ್ಳಲು ಸಾಧ್ಯವಿಲ್ಲ ಈ ಹೊತ್ತಿಗೆ ಅಲೆಮಾರಿಗಳಿಗೆ ನಿಶ್ಚಿತ ಆಧಾಯ ತುರವ ಆರ್ಥಿಕ ಮೂಲಗಳ ಅಗತ್ಯವಿದೆ. ಸರಕಾರವು ಈ ಕುರಿತು ಗಂಭೀರವಾಗಿ ಯೋಚಿಸಬೇಕಿದೆ.

೯. ಅಲೆಮಾರಿ ಹೆಳವ ಸಮುದಾಯ ಮಕ್ಕಳ ಶಿಕ್ಷಣಕ್ಕಾಗಿ ವಸತಿ ಶಾಲೆ ಅಥವ ಆಶ್ರಮಶಾಲೆಗಳ ಮಾದರಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಬೇಕು. ಈ ಶಾಲೆಗಳು, ಅಲೆಮಾರಿಗಳು ಈವತ್ತೂ ಸಂಚಾರ ಮಾಡುವ ಪ್ರದೇಶಗಳಲ್ಲಿ ಪ್ರಾರಂಭವಾಗಬೇಕು. ಮತ್ತು ಅಲ್ಲಿ ಸಂಪೂರ್ಣ ಉಚಿತ ಶಿಕ್ಷಣ ಸಿಗುವಂತಾಗಬೇಕು.

೧೦. ಹೆಳವರನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ನಮೂದಿಸಲಾಗಿದೆ. ಸಂವಿಧಾನವು ಹಿಂದುಳಿದ ವರ್ಗಗಳನ್ನು ಗುರುತಿಸುವ ವಿಧಾನವನ್ನು ಇಂದಿಗೂ ಮುಕ್ತವಾಗಿರಿಸಿದೆ. ಅದು ಸಂದರ್ಭ ಮತ್ತು ಅಗತ್ಯಗಗಳಿಗೆ ಅನುಗುಣವಾಗಿರಬೇಕು ಎಂಬ ಆಶಯವನ್ನು ಇದು ಪ್ರತಿನಿಧಿಸಬಹುದು. ಆದರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಅನೇಕ ಅಲೆಮಾರಿಗೂ ಸೇರಿ ಹೋಗಿದ್ದಾರೆ. ಸಂವಿಧಾನ ೧೫ (೪) ಮತ್ತು ೧೬ (೪) ನೇ ಅನುಚ್ಛೆದಗಳು ಹಿಂದುಳಿದ ವರ್ಗಗಳ ಅಭಿವೃದ್ಧಿಯ ಸಲುವಾಗಿ ಕೆಲವು ಕಾರ್ಯಕ್ರಮಗಳನ್ನು ಸೂಚಿಸುತ್ತವೆ. ಆದರೆ ಈವತ್ತು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಬಲಾಢ್ಯ ಸಮುದಾಯಗಳು ಈ ಸಂವಿಧಾನಾತ್ಮಕ ಸೌಲಭ್ಯಗಳನ್ನು ಅನಾಯಾಸವಾಗಿ ದಕ್ಕಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಯಾವ ದನಿಯೂ ಇಲ್ಲದ ಅಲೆಮಾರಿಗಳು ಸಂವಿಧಾನಾತ್ಮಕ ಸೌಲಭ್ಯಗಳನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ.

೧೧. ‘ಹಿಂದುಳಿದವರು’ ಎಂಬ ಶೀರ್ಷಿಕೆಯಡಿ ಯಾವ ಯಾವ ಸಮುದಾಯಗಳನ್ನು ಪಟ್ಟಿ ಮಾಡಬೇಕು ಎಂಬ ಬಗ್ಗೆ ಇರುವ ಗೊಂದಲಗಳು ಇಂದಿಗೂ ಮುಂದುವರೆದಿವೆ. ಆದರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿ ಹೋಗಿರುವ ಅಲೆಮಾರಿ ಸಮುದಾಯಗಳನ್ನು ಅವುಗಳ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ಸ್ಥಿತಗತಿಗಳನ್ನು ಅಭ್ಯಸಿಸಿ ಬೇರ್ಪಡಿಸುವುದು ಸುಲಭದ ಕೆಲಸವಾಗಿದೆ. ಏಕೆಂದರೆ ಇಂದಿಗೂ ಹಿಂದುಳಿದ ವರ್ಗಗಳಲ್ಲಿ ಸೇರಿ ಹೋಗಿರುವ ಅನೇಕ ಸಮುದಾಯಗಳು ಒಂದೋ ಅಲೆಮಾರಿಗಳಾಗಿ ಬದುಕುತ್ತಿವೆ. ಇಲ್ಲವೆ ಹಾಲಕ್ಕಿ ಒಕ್ಕಲಿಗೆ ಮತ್ತು ಕುಣುಬಿಯರಂತಹ ಅಪ್ಪಟ ಬುಡಕಟ್ಟು ಸಮಾಜಗಳು ಆರ್ಥಿಕವಾಗಿ ಹೀನಯವಾಗಿ ಬದುಕುತ್ತಿವೆ. ಸಿಕ್ಕಲಗಾರರಂತಹ ಸಮುದಾಯವು ಅಸ್ಪೃಶ್ಯತೆಯನ್ನು ಅನುಭವಿಸುತ್ತಿದೆ. ಇಂತಹ ಸಮುದಾಯಗಳನ್ನು ಗುರುತಿಸುವುದು ಮತ್ತು ಇವುಗಳನ್ನು ಸಮವಿಧಾನಾತ್ಮಕವಾಗಿ ವಿಶೇಷ ಕೆಟಗರಿಯ ಅಡಿಯಲ್ಲಿ ಪಟ್ಟಿ ಮಾಡುವುದು ಅಂತಹ ಕಷ್ಟದ ಕೆಲಸವೇನಲ್ಲ. ಈ ಸಮುದಾಯಗಳು ಸಹಜವಾಗಿಯೇ ಈವತ್ತಿಗೂ ಸರಕಾರದ ಮತ್ತು ಸಂವಿಧಾನಾತ್ಮಕ ಸೌಲಭ್ಯಗಳನ್ನು ಪಡೆಯುವ ಎಲ್ಲ ಅರ್ಹತೆಗಳನ್ನು ಹೊಂದಿವೆ.

೧೨. ಈ ಕಾರಣದಿಂದಾಗಿ ಅಲೆಮಾರಿಗಳನ್ನು ಒಂದು ವಿಶೇಷ ಕೆಟಗರಿ ಎಂದು ಪರಿಗಣಿಸಿ ಅವರಿಗೆ ಸಂವಿಧಾನಾತ್ಮಕ ಸೌಲಭ್ಯಗಳು ಲಭ್ಯವಾಗುವಂತೆ ಮಾಡಬೇಕು.

೧೩. ನಮ್ಮ ದೇಶದ ಜನಸಂಖ್ಯೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಹೆಳವರ ಸಮುದಾಯವೂ ಇದಕ್ಕೆ ಹೊರತಾಗಿಲ್ಲ. ನಮ್ಮ ಗಣತಿಯಲ್ಲಿ ೪೬೩೮ ಜನರಲ್ಲಿ ೨೪೮೪ ಜನ ಪುರುಷರು ಮತ್ತು ೨೧೫೪ ಜನ ಮಹಿಳೆಯರು ದಾಖಲಾಗಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಲಿಂಗ ಅಸಮಾನತೆ ತೀವ್ರವೂ ಆಗಿದೆ. ಈ ಅಸಮಾನ ಬೆಳವಣಿಗೆಯನ್ನು ಸರಿಪಡಿಸಲು ಕ್ರಮಕೈಗೊಳ್ಳಬೇಕಿದೆ.

೧೪. ಹೆಳವ ಸಮುದಾಯದಲ್ಲಿ ಮಹಿಳೆಯರ ಸಾಕ್ಷರತೆಯ ಪ್ರಮಾಣವು ಅತ್ಯಂತ ಕಳವಳಕಾರಿಯಾಗಿದೆ. ಯಾವುದೇ ಆರೋಗ್ಯಕರ ಸಮಾಜವು ತಿಳುವಳಿಕೆಯುಳ್ಳ ಮಹಿಳೆಯರಿಂದ ರೂಪುಗೊಳ್ಳುತ್ತದೆ. ಅಕ್ಷರಸ್ಥ ಮಹಿಳೆಯು ಕೇವಲ ಕುಟುಂಬಕ್ಕೆ ಮಾತ್ರ ಉಪಯುಕ್ತಳಲ್ಲ. ಸಮಾಜದ ಆರೋಗ್ಯಕರ ಬೆಳವಣಿಗೆಯಲ್ಲಿ ಆಕೆಯ ಪಾತ್ರ ಹಿರಿದು. ಈ ಕಾರಣದಿಂದ ಹೆಳವ ಸಮುದಾಯದ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸದ ಕಡೆ ಗಮನ ಹರಿಸುವ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ.

೧೫. ಅಲೆಮಾರಿ ಗುಂಪುಗಳನ್ನು ನೆಲೆನಿಲ್ಲಿಸುವ ಇನ್ನೂ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಸರಕಾರ ಮಾಡಬಹುದಾಗಿದೆ. ಅಲೆಮಾರಿ ಕುಟುಂಬಗಳ ಸ್ತ್ರೀಯರಿಗೆ ಸ್ತ್ರೀಶಕ್ತಿ ಯೋಜನೆಗಳಂತಹ ವಿಶಿಷ್ಠ ಆದಾಯದ ಮೂಲಗಳನ್ನು ಕಲ್ಪಿಸುವ ಮೂಲಕ, ಇಲ್ಲವೆ ಸ್ತ್ರೀಯರು ನಿರ್ವಹಿಸುವ ಯಾವುದೇ ಆರ್ಥಿಕ ಚಟುವಟಿಕೆಗಳನ್ನು ಕಲ್ಪಿಸುವುದರ ಮೂಲಕ ಅಲೆಮಾರಿಗಳನ್ನು ನೆಲೆ ನಿಲ್ಲಿಸಬಹುದಾಗಿದೆ. ಇದರಿಂದಾಗಿ ಸ್ತ್ರೀಯರನ್ನು ಆರ್ಥಿಕವಾಗಿ ಸಬಲೀಕರಿಸುವುದರ ಜೊತೆಗೆ ಅವಳಿಗೆ ಮುಖ್ಯವಾಹಿನಿಯ ಆರ್ಥಿಕ ಚುಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಂತಾಗುತ್ತದೆ. ಮತ್ತು ನೆಲೆನಿಂತ ಕಡೆ ಮಕ್ಕಳನ್ನು ಶಾಲೆಗೆ ಕಳುಹಿಸುವ ಅವಕಾಶವೂ ಸಿಕ್ಕುತ್ತದೆ.

೧೭. ಹೆಳವರು ಊಳಿಗಮಾನ್ಯ ವ್ಯವಸ್ಥೆಯನ್ನು ಆರ್ಥಿಕವಾಗಿ ನಂಬಿಕೊಂಡು ಬಂದ ಕಾರಣಕ್ಕಾಗಿ ಇವರು ಭೂ ಹೀನರು. ನಾವು ಗಣತಿ ಮಾಡಿದ ೧೦೦೦ ಕುಟುಂಬಗಳಲ್ಲಿ ೭೬೧ ಕುಟಂಬಗಳಿಗೆ ಕೃಷಿ ಮಾಡಲು ಭೂಮಿ ಇಲ್ಲ. ಈ ಕಾರಣದಿಂದಾಗಿ ಸರಕಾರವು ಅವಕಾಶ ಇದ್ದ ಕಡೆಯಲ್ಲೆಲ್ಲ ಹೆಳವರಿಗೆ ಕೃಷಿ ಜಮೀನು ನೀಡುವುದಲ್ಲದೆ, ಕೃಷಿಕರಿಗೆ ಬೇಕಾಗುವ ಅಗತ್ಯ ಸಾಲಸೌಲಭ್ಯ ಮತ್ತು ಸಾಧ್ಯವಾದಲ್ಲಿ ಬಡ್ಡಿರಹಿತ ಸಾಲ ಕೊಡುವ ವ್ಯವಸ್ಥೆಯಾಗಬೇಕಿದೆ.

೧೭. ಒಟ್ಟಿನಲ್ಲಿ ಅಲೆಮಾರಿ ಸಮುದಾಯಗಳನ್ನು ಸರಕಾವು ತಾಯ್ ಮನಸ್ಸಿನಿಂದ ನೋಡುವ ಅಗತ್ಯವಿದೆ. ಸಾಂಪ್ರದಾಯಿಕ ಅಭಿವೃದ್ಧಿ ಯೋಜನೆಗಳಿಂದ ಇವರು ಸಬಲೀಕರಣಗೊಳ್ಳುಲು ಸಾಧ್ಯವಿಲ್ಲ. ಸರಕಾರದ ವಿಶೇಷ ಕಾಳಜಿ ಮತ್ತು ಒಳನೋಟಗಳಿಂದ ಕೂಡಿದ ಅಭಿವೃದ್ಧಿ ಯೋಜನೆಗಳಿಂದ ಮಾತ್ರ ಅಲೆಮಾರಿಗಳನ್ನು ಸಬಲೀಕರಿಸಲು ಸಾಧ್ಯ. ಅಲೆಮಾರಿಗಳ ಮನಪರಿವರ್ತನೆ ಮಾಡುವುದರ ಜೊತೆಗೆ ಅವರ ಅಗತ್ಯಗಳನ್ನು ಸರಕಾರ ಗುರುತಿಸಿ ಸೂಕ್ತ ಯೋಜನೆಗಳನ್ನು ರೂಪಿಸುವಂತಾಗಬೇಕು.