ಮಂಗಳಾರತಿ ಹಾಡು

ಒಳಗೆ ತಳಿಗೆ ತುಂಬಿs ಬೆಳಗುವೆನಾರುತಿಯ
ತಳಮಳ ಹೊಳೆವಂತ ತಳಗಿ ಪುಟದೀವಿಗಿ
ಎತ್ತಿs ರಾರುತಿಯ
ಲಕ್ಷದಿಂದ ಬೆಳಗಿsರಾರುತಿಯ

ಅಂಬಲಿ ಮೈಬಣ್ಣ ಮುಂಬಲಿ ಝಾಂಟಿ
ಆಂಬಾರಿಯೊಳಗಿರುವ ಶಂಭು ಶಂಕರನಿಗೆ
ಎತ್ತಿsರಾರುತಿಯ
ಲಕ್ಷದಿಂದ ಬೆಳಗಿsರಾರುತಿಯ

ದೇಶದೊಳಗೆ ನನ್ನ ವಾಸುಳ್ಳ ಬೀಳಗಿ
ಗುಡಿಯ ಒಳಗೆ ಇರುವ ಒಡೆಯ ಸಿದ್ಧೇಶ್ವರಗ
ಎತ್ತಿsರಾರುತಿಯ
ಲಕ್ಷದಿಂದ ಬೆಳಗಿsರಾರುತಿಯ

ಕುಬಸದ ಸಂದರ್ಭದ ಹಾಡುಗಳು ಈಗೀಗ ಮರೆಯಾಗುತ್ತಿದ್ದರೂ ಹಳೆಯ ತಲೆಮಾರಿನ ಜನ ಇಂದಿಗೂ ಇವನ್ನು ಗುಣುಗುಣಿಸುತ್ತಾರೆ. ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಇಂಥ ಹಾಡುಗಳು ಉತ್ತರ ಕರ್ನಾಟಕದ ತುಂಬ ದೊರೆಯುತ್ತವೆ. ಹೆಚ್ಚು ಕಡಿಮೆ ಎಲ್ಲ ಸಮುದಾಯದವರು ಈ ಹಾಡುಗಳನ್ನು ಹಾಡುತ್ತಾರೆ. ಕೊನೆಯ ನುಡಿಯಲ್ಲಿರುವ ದೇವರ ಅಂಕಿತವನ್ನು ಆಯಾ ಊರಿನವರು ತಮ್ಮ ಗ್ರಾಮದೇವತೆಗೆ ಅನ್ವಯಿಸಿಕೊಳ್ಳುತ್ತಾರೆ.

ಮರಣ: ಉಳಿದ ಸಮುದಾಯಗಳಿಗಿಂತ ಭಿನ್ನವಾದ ಆಚರಣೆಗಳನ್ನೇನೂ ಹೆಳವ ಸಮಾಜದವರು ಮರಣ ಸಂದರ್ಭದಲ್ಲಿ ಆಚರಿಸುವುದಿಲ್ಲ. ಮುತ್ತೈದೆ ಮಹಿಳೆಯೊಬ್ಬಳು ತೀರಿಕೊಂಡಾಗಿನ ಆಚರಣೆಗಳು ಹೆಚ್ಚು ಆಡಂಬರವಾಗಿ, ವಿಧಿವತ್ತಾಗಿ ನಡೆಯುತ್ತವೆ. ಮಹಿಳೆ ತೀರಿಕೊಂಡ ಕೂಡಲೇ ಮೊದಲು ಹೆಣವನ್ನು ತೊಳೆಯಲಾಗುತ್ತದೆ. ತರುವಾಯ ಚಕ್ಕಳಮಕ್ಕಳ ಹಾಕಿಸಿ ಗೋಡೆಗಾನಿಸಿ ಕೂಡ್ರಿಸಲಾಗುವುದು. ಕುತ್ತಿಗೆ ಬಾಗಿ ಮುಖ ಕೆಳಗಾಗಬಾರದೆಂದು ಕೆಲವು ಕಟ್ಟಿಗೆಯನ್ನು ಮುಂದೆ ಗೋಣಿಗೆ ಆಧಾರವಾಗಿ ನಿಲ್ಲಿಸಲಾಗುತ್ತದೆ. ಅಥವಾ ಸೀರೆಯೊಂದನ್ನು ಕುತ್ತಿಗೆಗೆ ಹಾಕಿ ಅದರ ಎರಡೂ ತುದಿಗಳನ್ನು ಗೋಡೆಯ ಆಚೀಚೆಯ ಗೂಟಗಳಿಗೆ ಕಟ್ಟುತ್ತಾರೆ. ಈಗ ಕುಂಕುಮ, ದಂಡೆ ಮುಂತಾದ ಮುತ್ತೈದೆತನದ ಎಲ್ಲ ಸಡಗರದೊಂದಿಗೆ ಹೆಣವನ್ನು ಸಿಂಗರಿಸಲಾಗುತ್ತದೆ. ಇವರಲ್ಲಿ ಹುಗಿಯುವ ಪದ್ಧತಿಯಿದ್ದು ಹುಗಿಯುವ ಮುಂಚೆ ಹೆಣದ ಬಾಯಲ್ಲಿ ತುಣುಕು ಬಂಗಾರ ಹಾಕುತ್ತಾರೆ. ಸ್ಥಿರ ಊರಲ್ಲಿರುವ ಹೆಳವರಿಗೆ ಈ ಸಂದರ್ಭದ ಆಚರಣೆಗಳನ್ನು ನೆರವೇರಿಸುವಲ್ಲಿ ಯಾವ ತೊಂದರೆಗಳಿರುವುದಿಲ್ಲ. ಅವರಿಗೆ ಎಲ್ಲ ವಸ್ತುಗಳ ನೆರವಿನೊಂದಿಗೆ ತಮ್ಮ ಅಥವಾ ಅನ್ಯ ಸಮುದಾಯಗಳ ಅನೇಕ ಜನರ ಸಹಕಾರವಿರುತ್ತದೆ.

ಸಂಚಾರ ಸಂದರ್ಭದಲ್ಲಿ ಮರಣವುಂಟಾದರೆ ಅನೇಕ ಸಮಸ್ಯೆಗಳನ್ನಿವರು ಎದುರಿಸಬೇಕಾಗುತ್ತದೆ. ಮೂಲ ಸ್ಥಳದಿಂದ ದೂರುವಿರುವಾಗ ಮರಣ ಸಂಭವಿಸಿದರೆ ತಮ್ಮೂರಿಗೆ ಹೆಣವನ್ನು ಒಯ್ಯುವುದು ಸಾಧ್ಯವಾಗುವುದಿಲ್ಲ. ವಾಹನ ಸಂಚಾರದ ಕೊರತೆಯಿದ್ದ ಹಿಂದಿನ ಕಾಲದಲ್ಲಂತೂ ಸಾಧ್ಯವೇ ಇರಲಿಲ್ಲ. ಆದ್ದರಿಂದ ತಾವು ಬಿಡಾರ ಹೂಡಿರುವ ಊರಿನ ಸ್ಮಾಶಾನದಲ್ಲೇ ಶವಸಂಸ್ಕಾರವನ್ನು ಮಾಡುವುದುಂಟು. ಸಂಚಾರದ ಸಮಯದಲ್ಲಿಯೇ ದಿನಕರ್ಮಗಳು ನಡೆದು ಹೋಗುತ್ತವೆ.

ದೇವದಾಸಿ ಪದ್ಧತಿ: ಒಂದು ಕಾಲಕ್ಕೆ ಹೆಳವರಲ್ಲಿ ಪದ್ಧತಿಯಿತ್ತು. ಮೌಢ್ಯ ಮತ್ತು ಬಡತನಗಳು ಈ ಪದ್ಧತಿಯನ್ನು ಪ್ರೇರೇಪಿಸುವಲ್ಲಿನ ಪ್ರಮುಖ ಕಾರಣಗಳು. ಪರಿಶಿಷ್ಟ ವರ್ಗಕ್ಕಿಂತ ಸ್ವಲ್ಪ ಮೇಲಿರುವ ಹೆಳವ ಸಮುದಾಯ ಮತೀಯವಾಗಿ, ಆರ್ಥಿಕವಾಗಿ ಶೋಷಣೆಗೆ ಒಳಗಾಗುತ್ತಲೇ ಬಂದಿರುವ ಸಮುದಾಯ. ಈಗೇನೋ ಈ ಸಮಾಜದಲ್ಲಿ ಅನೇಕ ಜನ ಶಿಕ್ಷಣ ಪಡೆದಿದ್ದಾರೆ. ಆಧನಿಕ ಜಗತ್ತಿನ ಅನೇಕ ಸಂವೇದನೆಗಳಿಗೆ ಒಳಗಾಗಿದ್ದಾರೆ. ನೀರಾವರಿ ಅನುಕೂಲವಿರುವ ಗ್ರಾಮೀಣ ಪ್ರದೇಶಗಳಲ್ಲಿ ಕೆಲವರು ಶ್ರೀಮಂತರೂ ಆಗಿದ್ದಾರೆ. ಆದರೆ ಮುಂಚಿನ ದಿನಮಾನಗಳಲ್ಲಿ ಒಕ್ಕಲುಗಳನ್ನೇ ಆಶ್ರಯಿಸಿ ಬದುಕಬೇಕಾದ ಅನಿವಾರ್ಯತೆಯಿತ್ತು. ಬರಗಾಲವೋ ಮತ್ತೇನೋ ಕಾರಣವಾಗಿ ಬರಬೇಕಾದ ಆದಾಯದಲ್ಲಿ ಸ್ವಲ್ಪ ಏರುಪೇರಾದರೂ ದಿನದ ಊಟಕ್ಕೇ ವ್ಯತ್ಯಯವಾಗುವ ಪರಿಸ್ಥಿತಿಯಿತ್ತು. ಕಾಡುವ ಬಡತನ ಮತ್ತು ಇಂಥ ಹೀನ ಪದ್ಧತಿಯನ್ನು ಬೆಂಬಲಿಸುವ ದೇವರುಗಳಿಂದಾಗಿ ದೇವದಾಸಿ ಪದ್ಧತಿ ಹೆಳವ ಸಮಾಜವನ್ನು ಆವರಿಸಿಕೊಂಡಿರಬೇಕು. ಇಂದು ಅನೇಕರಂತೆ ಈ ಸಮಾಜದವರಿಗೂ ತಮ್ಮತನದ ಅರಿವಾಗುತ್ತಿದೆ. ತಾವೂ ಮುಂದುವರಿದ ವರ್ಗಗಳಿಗೆ ಸರೀಕರಾಗಬೇಕು. ಅದು ಇಂಥ ಕಂದಾಚಾರ, ಹೀನ ಕೃತ್ಯಗಳನ್ನು ಬಿಡುವುದರಿಂದ ಸಾಧ್ಯವಾಗುತ್ತದೆ ಎಂಬ ಅರಿವು ಕ್ರಮೇಣ ಮೂಡಿಸಿದ್ದರಿಂದ ದೇವದಾಸಿ ಪದ್ಧತಿಯಿಂದ ಹೆಳವ ಸಮಾಜ ದೂರ ಸರಿದಿದೆ. ದೇವದಾಸಿ ಪದ್ಧತಿಗೆ ಅನೇಕ ವಿಧಿನಿಷೇಧಗಳುಂಟು. ಅವನ್ನು ಬಲ್ಲ ಅನೇಕ ಜನ ಇಂದು ಇದ್ದರೂ ಅವನ್ನು ವಿವರಿಸಲಾರರು. ತಮ್ಮ ಜನಾಂಗವನ್ನು ಅವಮಾನಿಸುವ ಇಂಥ ಪದ್ಧತಿಯನ್ನು ಸುವಿವರವಾಗಿ ಹೇಳುವುದೂ ತಮಗೆ ಅಪಮಾನವೆಂದು ಭಾವಿಸಲಾಗುತ್ತಿದೆ. ಇದು ತುಂಬ ಸಂತೋಷದ ವಿಷಯ. ಶೋಷಿತ ಜನಾಂಗದ ಅಸಹಾಯಕತೆಯಿಂದಾಗಿ ತಗುಲಿದ ಕಳಂಕಗಳನ್ನು ಮತ್ತೆ ಮತ್ತೆ ಬಣ್ಣಿಸುವುದಾಗಲೀ, ವೈಭವೀಕರಿಸುವುದಾಗಲೀ ಅಸಂಗತ ವಿಷಯವೆನಿಸುತ್ತದೆ. ಇವರನ್ನು ಚುಚ್ಚುವ, ಮಾನಸಿಕವಾಗಿ ಹಿಂಸಿಸುವ ಇಂಥ ದಾಖಲೀಕರಣಗಳೂ ತ್ಯಾಜ್ಯವೆನಿಸುತ್ತವೆ. ಇಂಥ ಅನಿಷ್ಟ ಪದ್ಧತಿಗಳ ನೆನಪುಗಳೂ ಕೂಡ ಕತ್ತಲೆಗೆ ಜಾರುವಂತಾಗಬೇಕು. ಇದರಿಂದ ಇತಿಹಾಸದ ಬರವಣಿಗೆಗೆ ಯಾವ ಹಾನಿಯೂ ಉಂಟಾಗಲಾರದೆಂಬುದನ್ನು ಪ್ರಜ್ಞಾವಂತರು ಮನಗಾಣಬೇಕು.

ಉಡುಕಿ: ಹೆಳವ ಸಮಾಜದಲ್ಲಿ ಉಡಕಿ ಸಂಪ್ರದಾಯವಿದೆ. ಚಿಕ್ಕವಯಸ್ಸಿನಲ್ಲಿ ಗಂಡ ತೀರಿಕೊಂಡರೆ ಮಕ್ಕಳೂ ಇರದಿದ್ದರೆ ಅನೇಕ ಸಲ ಹಿರಿಯರೇ ಮರುಮದುವೆ (ಉಡಕಿ) ಮಾಡುವುದಿದೆ. ಬಹಳಷ್ಟು ಮುಂದುವರೆದವರೆಂದು ಹೇಳಿಕೊಳ್ಳುವ ಉಚ್ಚ ಜಾತಿಯವರಲ್ಲಿ ಉಡಕಿ ಪದ್ಧತಿಯಿಲ್ಲ. ಉಡಕಿ ಪರಿಕಲ್ಪನೆಯನ್ನು ಮೇಲು ವರ್ಣದವರು ಅಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳಲಾರರು. ವಿಧವೆಯಾದವಳು ಜೀವನದುದ್ದಕ್ಕೂ ಅನುಭವಿಸಬಹುದಾದ ಮಾನಸಿಕ ಯಾತನೆಯಾಗಲಿ, ಕಂದಾಚಾರಿಗಳಿಂದ ದಿನವೂ ಅವಳಿಗೆ ದೊರೆಯುವ ನಂಜಿನ ನೋವಾಗಲಿ ಧರ್ಮ-ಶಾಸ್ತ್ರಗಳಿಗೆ ಜೋತುಬಿದ್ದವರಿಗೆ ಸುಲಭವಾಗಿ ಅರ್ಥವಾಗುವುದಿಲ್ಲ. ಉಡಕಿಯಂತಹ ಸಾಮಾಜಿಕ ನಿಯಮವೊಂದು ಗಂಡನನ್ನು ಕಳೆದುಕೊಂಡು ನಿರಾಧಾರ ಭಾವವನ್ನು ಅನುಭವಿಸುತ್ತಿರುವವಳಿಗೆ ಸಾಂತ್ವನ ನೀಡಬಲ್ಲದು. ಶ್ರೇಷ್ಠಕುಲದವರು ದೂರಿಕರಿಸುವ ಉಡಕಿ ವಿಧಾನವನ್ನು ಒಪ್ಪಿಕೊಂಡಿರುವ ಹೆಳವ ಸಮಾಜ ಅಥವಾ ಇದನ್ನು ಬೆಂಬಲಿಸುವ ಅನೇಕ ಹಿಂದುಳಿದ ವರ್ಗಗಳು ಅತ್ಯಂತ ಪ್ರಗತಿಪರವಾಗಿ ತೋರುತ್ತವೆ.

ಕೊಂಡಾಟದಲ್ಲಿ ಮಹಿಳಾ ಪ್ರಾತಿನಿಧ್ಯ

ಹೆಳವರು ತಮ್ಮ ಒಕ್ಕಲು ಮನೆಗಳಿಗೆ ಹೋದಾಗ ಅವರ ಹಿರಿಯರನ್ನು ನಾನಾ ಬಗೆಯಾಗಿ ಕೊಂಡಾಡುತ್ತಾರೆ. ಹೆಳವರು ಹೋದಲ್ಲಿ ಆ ಮನೆತನದವರು ಪ್ರಸ್ತುತ ಊರಿನ ಮೂಲನಿವಾಸಿಗಳಾಗಿರುವುದಿಲ್ಲ. ಅವರು ಯಾವುದೋ ನಾಡಿನಿಂದ ವಲಸೆ ಬಂದವರಾಗಿರುತ್ತಾರೆ. ಈ ವಲಸಗೆ ಕಾಣರ ರಾಜಕೀಯ ವಿಪ್ಲವವಾಗಿರಬಹುದು. ಧಾರ್ಮಿಕ ಪಲ್ಲಟವಾಗಿರಬಹುದು. ಕೌಟುಂಬಿಕ ಕಲಹವಾಗಿರಬಹುದು. ಅನೇಕ ಬಾರಿ ಸಾಮಾಜಿಕ ಆಗುಹೋಗುಗಳೂ ಇಂತಹ ವಲಸೆಗೆ ಕಾರಣವಾಗುತ್ತವೆ. ಇವರು ಊರುಬಿಟ್ಟು ಬರುವ ಪೂರ್ವದಲ್ಲಿ ಆ ಊರಿನ ಗೌಡರೋ, ದಳವಾಯಿಯೋ, ಜಮೀನುದಾರರೋ ದೊಡ್ಡಕುಳಗಳೇ ಇವರಾಗಿರುತ್ತಾರೆ. ಒಕ್ಕಲು ಮನೆತನದ ಪೂರ್ವಜರನ್ನು ಹಾಡಿ ಹೊಗಳಿ ಘಟನಾವಳಿಗಳನ್ನು ವೈಭವೀಕರಿಸುವುದು ಹೆಳವರ ರೀತಿಯಾಗಿದೆ. ಪೂರ್ವಜರು ಊರು ಬಿಡುವ ಸಂದರ್ಭವನ್ನು ವಿವರಿಸುವಾಗ ಅನೇಕ ಬಾರಿ ಮಹಿಳೆಯರೂ ಅದಕ್ಕೆ ಕಾರಣವಾಗಿರುತ್ತಾರೆ. ಅಥವಾ ಅವರೇ ಪ್ರಧಾನ ಪಾತ್ರಮಾಡುತ್ತಾರೆ. ಮೊದಲಿನಿಂದಲೂ ಹೆಳವರು ಹೆಣ್ಣುಗರಳಿನವರು. ಅವರು ತಮ್ಮನ್ನು ಒಕ್ಕಲು ಮನೆತನದ ಹೆಣ್ಣುಮಗಳೆಂದು ಕರೆದುಕೊಳ್ಳುವಲ್ಲಿ ಈ ಭಾವನಾತ್ಮಕ ಸಂಬಂಧ ಹೆಚ್ಚು ಸ್ಪಷ್ಟವಾಗುತ್ತದೆ. ಹೀಗಾಗಿ ಒಕ್ಕಲು ಮನೆತನಗಳ ಪೂರ್ವಜರ ಕಥೆಗಳಲ್ಲಿ ಮಹಿಳೆಯರು ಪ್ರಧಾನಪಾತ್ರ ವಹಿಸುತ್ತಿದ್ದರೆ ಸಂದರ್ಭವನ್ನು ಅತ್ಯಂತ ಆತ್ಮೀಯವಾಗಿ, ಭಾವುಕವಾಗಿ ವರ್ಣಿಸುವುದುಂಟು. ಇಂಥ ಹಿನ್ನೆಲೆಗಳನ್ನು ಹೇಳುವಾಗ ಹೆಳವರು ಕೇವಲ ಸ್ತ್ರೀ ಪಾತ್ರದ ಮೇಲೆ ಅಭಿಮಾನವಿಟ್ಟು ಹೊಗಳುತ್ತಾರೆ. ಆ ಕತೆಗಳ ಹಿಂದಿರುವ ಮಾನವೀಯ ಸಂಬಂಧಗಳು, ಸಾಮಾಜಿಕ ಕಟ್ಟಳೆಗಳು, ಆಯಾ ಕಾಲದ ಸಾಮಾಜಿಕ ಒತ್ತಡಗಳು ಅಧ್ಯಯನಯೋಗ್ಯವೆನಿಸುತ್ತವೆ. ಸ್ತ್ರೀ ಪ್ರಧಾನ ಪಾತ್ರರಾಗಿರುವ ಮೂರು ಕತೆಗಳನ್ನು ಇಲ್ಲಿ ಸಂಗ್ರಹಿಸಿಕೊಡಲಾಗಿದೆ.

ಕತೆ ೧:

ಕೊಲ್ಲಾಪುರ ಜಿಲ್ಲೆಯ ಕಳಂಬಿ ಗ್ರಾಮದಿಂದ ಬನಗೌಡನ ಸಂತಾನ ವಲಸೆ ಬಂದ ವೃತ್ತಾಂತ ರೋಚಕವಾಗಿದೆ. ಡಾ. ಬಿ.ಬಿ.ಮಹಿಷವಾಡಿ ಅವರು ಇದನ್ನು ಹಾಡು ಸಹಿತ ವಿವರಿಸಿದ್ದಾರೆ. ಕಳಂಬಿಯಲ್ಲಿ ಬನಗೌಡನ ಮನೆತನದ ಹೆಣ್ಣುಮಗಳು ಪದ್ಮಾವತಿ. ಇವಳು ಒಂದು ದಿನ ತೋಟಕ್ಕೆ ಹೋಗಿ ಎಮ್ಮೆ ಹಾಲು, ಆಕಳು ಹಾಲು ಹಿಂಡಿಕೊಂಡು, ಹಣ್ಣಿನ ಬುಟ್ಟಿ ತುಂಬಿಕೊಂಡು ಭಾರವಾದ ಬುಟ್ಟಿಯನ್ನು ಹೊರಿಸುವವರು ಯಾರಾದರೂ ಇದ್ದಾರೆಯೇ ಎಂದು ಅತ್ತ ಇತ್ತ ನೋಡಿದಳು. ತಮ್ಮ ಆಳುಮನುಷ್ಯ ಮಲ್ಲಪ್ಪ ಕಣ್ಣಿಗೆ ಬಿದ್ದ. ಬುಟ್ಟಿ ಹೊರಿಸಲು ಅವನನ್ನೆ ಕರೆದಳು. ಆಗ ಪದ್ಮಾವತಿ ಗರ್ಭವತಿಯಾಗಿದ್ದಳು. ಬುಟ್ಟಿ ಹೊರಿಸಲು ಬಂದ ಮಲ್ಲಪ್ಪ ನಗುನಗುತ್ತ ಎಂದ: “ಅಕ್ಕಾ, ನೀ ಹೆಣ್ಣ ಹಡದರ ನನಗೆ ಕೊಡಬೇಕು, ಅಂದರ ನಾ ಹೊರಸ್ತೀನಿ”. ಅವಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಚೇಷ್ಟೆ ಮಾಡುತ್ತಿದ್ದಾನೆಂದು “ಆಗಲಿ” ಎಂದು ಸಮ್ಮತಿಸಿ ಬುಟ್ಟಿ ಹೊರಿಸಿಕೊಂಡಳು. ಮುಂದೆ ದಿನ ತುಂಬಿದ ಪದ್ಮಾವತಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟಳು. ತುಸುದಿನ ಉರುಳಿದ ಮೇಲೆ ಆಳು ಮಗ ಮಲ್ಲಪ್ಪ ಊರ ಪಂಚರನ್ನು ಕೂಡಿಸಿ ಹಿಂದಿನ ಪ್ರಸಂಗವನ್ನು ವಿವರಿಸಿ “ಹೆಣ್ಣ ಹಡದರ ಕೊಡ್ತೀನಂತ ಪದ್ಮಾವತಿ ವಚನ ಕೊಟ್ಟಾಳು. ಆ ಮಾತ ಈಗ ನಡೀಬೇಕು, ಊರ ಪಂಚರು ನಡೆಸಿಕೊಡಬೇಕು” ಎಂದು ನ್ಯಾಯ ಹೂಡಿದ. “ಪದ್ಮಾವತಿ ವಚನ ಕೊಟ್ಟುದಕ್ಕೆ ನಿನ್ನ ಹತ್ತಿರ ಏನು ಸಾಕ್ಷಿಯಿದೆ” ಎಂದು ಪಂಚರು ಪ್ರಶ್ನಿಸಿದರೆ, ಮಲ್ಲಪ್ಪ ತನ್ನ ಹತ್ತಿರ ಮೂರು ಸಾಕ್ಷಿಗಳಿವೆ ಎಂದ. ಮೊದಲನೆಯದು ತೋಟದಲ್ಲಿಯ ಗುಂಡುಕಲ್ಲು, ಎರಡನೆಯದು ಬಾಯಿ ಇಲ್ಲದ ಬಸವಣ್ಣ, ಮೂರನೆಯ ಸಾಕ್ಷಿ ಭೂಮಿ ತಾಯಿ. “ಹಾಗಾದರೆ ಇವರನ್ನೆಲ್ಲ ತಂದು ಸಾಕ್ಷಿ ಹೇಳಿಸು” ಎಂದು ಪಂಚರೆಂದರೆ ಮಲ್ಲಪ್ಪ ಅದಕ್ಕೆ ಒಪ್ಪಕೊಂಡ.

ಮಲ್ಲಪ್ಪ ಪಂಚರನ್ನೆಲ್ಲ ತೋಟಕ್ಕೆ ಕರೆದುಕೊಂಡು ಬಂದ. ತೋಟದಲ್ಲಿ ಕರಿಕಂಬಳಿ ಹಾಸಿ ಗುಂಡುಕಲ್ಲಿಗೆ ನಮಸ್ಕರಿಸಿ ಸಾಕ್ಷಿ ಕೇಳಿದನು. ಗುಂಡು ಕಲ್ಲು ಗುಡುಗುಡು ಉಳ್ಳಾಡುತ್ತ ಕಂಬಳಿ ಮೇಲೆ ಬಂದು ಬಿದ್ದಿತು. ಎರಡನೆಯ ಸಾಕ್ಷಿ ಬಾಯಿ ಇಲ್ಲದ ಬಸವಣ್ಣನನ್ನು ಕಾಲು ಬಿದ್ದು ಕೇಳುತ್ತಾನೆ. ಬಸವಣ್ಣ ಡರಿ ಹೊಡೆಯುತ್ತ ಬಂದು ಕಂಬಳಿಯ ಮೇಲೆ ಮಲಗಿಕೊಂಡನು. ಮೂರನೆಯ ಸಾಕ್ಷಿ ಭೂಮಿತಾಯಿ. ನೆಲದ ಮಣ್ಣು ಹಣೆಗೆ ಹಚ್ಚಿಕೊಂಡು ಭೂಮಿತಾಯಿಗೆ ಕೈಮುಗಿದನು. ಆಗ ಐದು ಹಿಡಿ ಮಣ್ನ ಹಾರಿ ಬಂದು ಕಂಬಳಿ ಮೇಲೆ ಬಿದ್ದತು. ಇದನ್ನು ನೋಡಿದ ಪಂಚರೆಲ್ಲ ದಂಗಾದರು. ಈ ಎಲ್ಲ ಸಾಕ್ಷ್ಯಗಳಿಂದ ಪದ್ಮಾವತಿ ವಚನ ಕೊಟ್ಟದ್ದು ನಿಜವೆಂದೂ ಅವಳು ತನ್ನ ಮಗಳನ್ನು ಮಲ್ಲಪ್ಪನಿಗೆ ಕೊಡಬೇಕೆಂದೂ ನ್ಯಾಯ ನಿರ್ಣಯಿಸಿ ಹಿರಿಯರೆಲ್ಲ ಚದುರಿದರು. ಮಲ್ಲಪ್ಪ ಹರಿಜನರವ. ಮನೆ ಆಳ ಮಲ್ಲ್ಯಾಗ ಹೆಣ್ಣು ಕೊಡುವುದು ಹ್ಯಾಂಗ ಅಂತ ರಾತ್ರೋ ರಾತ್ರಿ ಊರ ಬಿಟ್ಟು ಓಡಿ ಬಂದರು. ಊರ ಜನ ಮಲ್ಲಪ್ಪನಿಗೆ ಹೆಣ್ಣು ಹೋದರೆ ಹೋಗಲಿ, ಊರಗೌಡಿಕಿ ಹಿಡಿದುಕೊಂಡು ಕುಳಿತುಕೋ” ಎಂದರು. ಈ ಘಟನೆ ಸತ್ಯವೆಂಬಂತೆ ಕಳಂಬಿ ಗ್ರಾಮದಲ್ಲಿ ಗೌಡರು ಹರಿಜನರೇ ಆಗಿದ್ದಾರೆ.

ಪ್ರಸ್ತುತ ಕತೆಯಲ್ಲಿ ಗುಂಡುಕಲ್ಲು, ಬಸವಣ್ಣ, ಭೂಮಿತಾಯಿ ಕರಿಕಂಬಳಿಗೆ ಬಂದು ಸಾಕ್ಷಿ ಹೇಳಿದ್ದು ಅವಾಸ್ತವವೆಂದು ಬದಿಗೆ ಸರಿಸಿದರೂ ಒಟ್ಟು ಕತೆಯ ಮುಖ್ಯ ಆಶಯವನ್ನು ಸುಳ್ಳು ಎಂದು ಹೇಳಿ ತಪ್ಪಿ ಹಾಕುವಂತಿಲ್ಲ. ಕೆಳವರ್ಗದವನೊಬ್ಬ ಮೇಲುವರ್ಗದ ಹೆಣ್ಣನ್ನು ಆಸೆಪಡುವುದಾಗಲೀ, ಜಾತಿಯ ಸಂಕೋಲೆಯಲ್ಲಿ ಸಿಲುಕಿದ ಮೇಲುವರ್ಗದವರು ಇದನ್ನು ನಿರಾಕರಿಸುವುದಾಗಲೀ ಎರಡೂ ಸಹಜವೇ ಅನ್ನಿಸುತ್ತದೆ. ತನಗೆ ಅವಶ್ಯವಿರುವಾಗ ಅತ್ಯಂತ ಸಹಜವಾಗಿ ಮಲ್ಲಪ್ಪನ ಸಹಾಯವನ್ನು ಸ್ವೀಕರಿಸಿದ ಪದ್ಮಾವತಿ ವಿಷಯ ಇಷ್ಟು ಗಂಭೀರ ಸ್ವರೂಪ ತಾಳುತ್ತದೆಯೆಂದು ಎಣಿಸಿದವಳಲ್ಲ. ಪಂಚರು ಕೊಡುವ ನಿರ್ಣಯ ಅವಳಿಗೆ ಅಥವಾ ಅವಳ ಮನೆತನದವರಿಗೆ ಅತ್ಯಂತ ಅನಿರೀಕ್ಷಿತ ಹಾಗೂ ಆಘಾತಕಾರಿ ಎನ್ನಿಸಿದೆ. ಮೇಲುವರ್ಗದವರ ಅನಿಸಿಕೆ ಏನೇ ಇರಲಿ, ಊರಪಂಚರು ಮಲ್ಲಪ್ಪನ ಪರವಾಗಿ ಕೊಡುವ ನಿರ್ಣಯ ಅತ್ಯಂತ ವೈಚಾರಿಕವಾದುದು. ಹೀಗೆ ಕತೆ ಮೊದಮೊದಲು ಸ್ತ್ರೀ ಕೇಂದ್ರಿತವಾದದ್ದು. ಕೊನೆಯಲ್ಲಿ ವೈಚಾರಿಕ ನಿಲುವು ಪಡೆಯುತ್ತದೆ.

ಕತೆ ೨:

ಬೀಳಗಿಯ ರಾಮಪ್ಪ ಹೆಳವರಿ ಹೇಳುತ್ತಿದ್ದ ಕತೆ: ತಂಗಿಯ ಪುಣ್ಯದಿಂದ ಅಣ್ಣನೊಬ್ಬನಿಗೆ ಶ್ರೀಮಂತಿಕೆ ಹೇಗೆ ಉಳಿದುಕೊಂಡಿದೆಯೆಂಬುದನ್ನು ಕುರಿತಾದದ್ದು. ಸೊಕನಾದಗಿಯಲ್ಲಿ ಒಬ್ಬ ಹೆಣ್ಣುಮಗಳು, ಅವಳನ್ನೊಂದು ಊರಿಗೆ ಕೊಟ್ಟಿತ್ತು. ಗರ್ಭಿಣಿಯಾದವಳಿಗೆ ಗಂಡನ ಮನೆಯಲ್ಲಿ ಕುಬುಸವಾಯಿತು. ಕುಬಸದ ಕಾರ್ಯಕ್ರಮಕ್ಕೆ ಬಂದಿದ್ದ ಅವಳ ಅಣ್ಣ ತವರು ಮನೆಗೆ ಕರೆದುಕೊಂಡು ಹೊರಟ. ಗಂಡನ ಮನೆಯವರು ಶ್ರೀಮಂತರಾದ್ದರಿಂದ ಮೈತುಂಬ ಒಡವೆಗಳನ್ನು ಹಾಕಿಕೊಂಡು ಹೊರಟ್ಟಿದ್ದಳು. ಅರಣ್ಯದಾರಿ, ಅಣ್ಣನಿಗೆ ದುರಾಸೆ ಹುಟ್ಟಿತು. ಇವಳನ್ನು ಕೊಂದು ಈ ಎಲ್ಲ ಒಡವೆಗಳನ್ನೂ ತಾನು ತೆಗೆದುಕೊಂಡು ಹೋದರೆ ಶ್ರೀಮಂತನಾಗುತ್ತೇನೆ ಎಂದು ವಿಚಾರ ಮಾಡುತ್ತಾನೆ. “ತಂಗೀ ದಣಿದಿದ್ದೀ, ಕೂಡ್ರೋಣ ಬಾ” ಎಂದು ಒಂದು ದೊಡ್ಡ ಆಲದ ಗಿಡದ ನೆರಳಿಗೆ ಕರೆದ. ಕುಳಿತುಕೊಂಡು ಸ್ವಲ್ಪ ಹೊತ್ತಾದ ನಂತರ ಇವನು ಮೂತ್ರ ವಿಸರ್ಜನೆಗೆ ಹೋದಂತೆ ಮಾಡಿ ಒಂದು ದೊಡ್ಡ ಕಲ್ಲಿಗಾಗಿ ಹುಡುಕಾಡಿದ. ಈ ವೇಳೆಯಲ್ಲಿ ಶಿವನು ಒಂದು ಚಮತ್ಕಾರ ಮಾಡಿದ. ಇವನು ಹೋದಲ್ಲಿ ಒಂದು ವಿಭೂತಿ ಉಂಡಿಯನ್ನು ನೆಲದ ಮೇಲಿಟ್ಟು ಅದರ ಬುಡದಲ್ಲಿ ತನ್ನ ಒಂದು ಕೂದಲೆಳೆಯನ್ನು ಸೇರಿಸಿದ. ವಿಭೂತಿ ಉಂಡಿ ದೊಡ್ಡ ಕಲ್ಲಾಯಿತು. ಕೂದಲೇಳೆ ದೊಡ್ಡ ಸರ್ಪವಾಯಿತು. ಅದೇ ಕಲ್ಲಿನಿಂದ ಅಣ್ಣ ತಂಗಿಯನ್ನು ಕೊಲ್ಲಲು ಎತ್ತಬೇಕೆನ್ನುವಷ್ಟರಲ್ಲಿ ಕಲ್ಲಿನ ಬುಡದಲ್ಲಿಯ ಸರ್ಪ ಕಚ್ಚಿತು. “ಅಯ್ಯೋ ತಂಗಿ!” ಎಂದು ಚೀರಿ ಸತ್ತು ಬಿದ್ದ. ತಂಗಿ ಓಡಿ ಬಂದು ನೋಡಿದಳು. “ಅಣ್ಣನಿಗೆ ಇಂಥ ಸ್ಥಿತಿ ಬಂದಿತೇ” ಎಂದು ಭೋರಾಡಿ ಅತ್ತಳು. “ನನ್ನ ಸಲುವಾಗಿ ನೀ ತೀರಿಕೊಂಡಿದ್ದೀ, ಸತ್ತಿರುವ ನಿನ್ನನ್ನು ಬಿಟ್ಟು ನಾನು ಹೇಗೆ ಹೋಗಲಿ? ಆ ಕಡೆ ಗಂಡನ ಮನೆ, ಈ ಕಡೆ ತವರು ಮನೆ, ಅವರಿಗೆಲ್ಲ ಏನು ಹೇಳಲಿ? ಎಂದು ರೋಧಿಸತೊಡಗಿದಳು. ಶಿವಭಕ್ತಳಾದ ಅವಳು “ಶಿವ ಶಿವ, ಈ ಸ್ಥಿತಿಯನ್ನು ಏಕೆ ತಂದೆ? ಎಂದು ಹಲುಬಿ ತಾನೂ ಜೀವ ಇಡಬಾರದೆಂದು ಪ್ರಾಣಕೊಡಲು ಸಿದ್ಧಳಾದಳು. ಆಗ ಶಿವನು ಪ್ರತ್ಯಕ್ಷನಾಗಿ “ಯಾಕೆ ಪ್ರಾಣ ಕೊಡಲು ಸಿದ್ಧಳಾಗಿದ್ದೀ?” ಎಂದರೆ “ನನ್ನ ಅಣ್ಣ ಹಾವು ಕಡಿದು ಸತ್ತಿದ್ದಾನೆ. ಈ ಪ್ರಾಣ ಇಟ್ಟು ಏನು ಮಾಡಲಿ? ತಂದೆ-ತಾಯಿಗಳಿಗೆ ಮುಖವನ್ನು ಹೇಗೆ ತೋರಿಸಲಿ?” ಎಂದಳು. ಆಗ ಶಿವನು “ನಿನ್ನ ಅಣ್ಣ ಎಂಥವನು ಎಂಬುದನ್ನು ನಿನಗೆ ಹೇಳುತ್ತೇನೆ. ಕೇಳು” ಎಂದು ನಡೆದ ವಿಷಯವನ್ನೆಲ್ಲ ತಿಳಿಸುತ್ತಾನೆ. ಆದರೂ ಅವಳು “ನನ್ನಣ್ಣ ನನಗೆ ಬೇಕು” ಎಂದು ಹೇಳುತ್ತಾಲೆ. ಆಗ ಶಿವನು ಅವಳ ಭಕ್ತಿಗೆ ಒಲಿದು ಅವನಿಗೆ ಜೀವಕಳೆ ತುಂಬಿ ಎಬ್ಬಿಸುತ್ತಾನೆ. ಅವನು ಎದ್ದು ಶಿವನಿಗೆ ನಮಸ್ಕರಿಸಿ ತಂಗಿಯ ಕಡೆ ಹೊರಳಿ, “ನನ್ನದು ತಪ್ಪಾಯಿತು. ನಾನು ಆಸೆಗೆ ಬಿದ್ದು ಹೀಗೆ ಮಾಡಿದೆ” ಎಂದು ಹೇಳುತ್ತಾನೆ. ಆಗ ಅವಳು “ಇದೆಷ್ಟಾದೀತು? ಇನ್ನೂ ನಮ್ಮ ಮನೆಯಲ್ಲಿದೆ. ತಂದುಕೊಡುತ್ತಿದ್ದೆ. ಇದಕ್ಕೇಕೆ ಆಸೆ ಮಾಡಿದೆ? ಎಂದಳು. ಆಗ ಶಿವನು “ಅವನೂ ನಿನ್ನಷ್ಟೇ ಶ್ರೀಮಂತನಾಗುತ್ತಾನೆ. ಹೋಗುವಾ” ಎಂದು ಹೇಳಿ ಕರುಣಿಸಿದನು.

ಈ ಕತೆಯಲ್ಲಿ ಶಿವನ ಪ್ರತ್ಯಕ್ಷನಾಗಿ ತಂಗಿಗೆ ಅಣ್ಣನನ್ನು ಬದುಕಿಸಿಕೊಟ್ಟದ್ದನ್ನು ಬಿಟ್ಟರೆ ಅಸಹಜವಾದುದೇನಿಲ್ಲ. ತಂಗಿಯ ಆಸ್ತಿಗೆ ಅಣ್ಣನೋ ಅಣ್ಣನ ಆಸ್ತಿಗೆ ತಂಗಿಯೋ ಆಸೆ ಪಡುವುದು, ಅದಕ್ಕಾಗಿ ನಾನಾ ಬಗೆಯ ಹೊಂಚು ಹಾಕುವುದು ಅಪರೂಪವೇನಲ್ಲ. ಆದರೆ ಪ್ರಸ್ತುತ ಕತೆಯಲ್ಲಿ ಒಡವೆಗಳ ಆಸೆಗಾಗಿ ಅಣ್ಣನು ತನ್ನನ್ನು ಕೊಲ್ಲಲು ಸಿದ್ಧನಾದ ಎಂಬುದನನ್ನು ತಿಳಿದ ಮೇಲೂ ಅವನ ಬಗೆಗೆ ಮರುಕ ಪಡುವ ತಂಗಿ ವಿಶೇಷವೆನಿಸುತ್ತಾಳೆ.

ಗ್ರಾಮೀಣ ಪರಿಸರದಲ್ಲಿ ಅಣ್ಣ-ತಮ್ಮಂದಿರ ಮೇಲಿನ ಪ್ರೀತಿ, ತವರು ಮನೆಯ ಮೇಲಿನ ಹಂಬಲ, ಮಾನವೀಯ ಸಂಬಂಧಗಳನ್ನು ಪ್ರೇರೇಪಿಸಬಲ್ಲ ಭಾವನಾಂಶಗಳು, ಇದನ್ನು ಕತೆಯ ಮೂಲಕ ಉದ್ದೀಪನಗೊಳಿಸಿ ಕಲೆಯಾಗಿಸುವಲ್ಲಿ ಹೆಳವರ ಕೌಶಲ್ಯವಿದೆ.

ಕತೆ ೩ :

ಈ ಕತೆ ಬೀಳಗಿಯ ಸಿದ್ಧಲಿಂಗಪ್ಪ ಹೆಳವರು ಹೇಳುತ್ತಿದದ್ದುದು. ಇದನ್ನು ಅವರ ಪುತ್ರ ಭೀಮಪ್ಪ ಹೆಳವರ ಈಗಲೂ ಹೇಳುತ್ತಾರೆ. ಹೆಣ್ಣು ಮಗಳೊಬ್ಬಳ ಶಾಪದಿಂದ ಅವಳ ಮನೆತನದವರು ನವಣಿ ಬೆಳೆಗೆ ಶಾಶ್ವತವಾಗಿ ಎರವಾದ ಕತೆ ಇದು. ಒಂದೂರಲ್ಲಿ (ಹೆಸರು ಬಿಡಲಾಗಿದೆ) ಗೌಡಕಿ ಮನೆತನ. ಅವರ ಮನೆಯಲ್ಲಿ ಹೆಣ್ಣುಮಗಳಿದ್ದಳು. ಈ ಶ್ರೀಮಂತ ಮನೆತನದಲ್ಲಿ ಸಾಕಷ್ಟು ಆಕಳುಗಳು. ಈಗಿನಂತೆ ಆಗೆಲ್ಲ ಆಕಳುಗಳನ್ನು ಕಟ್ಟುತ್ತಿರಲಿಲ್ಲ. ಆಕಳುಗಳದೇ ಒಂದು ದೊಡ್ಡ ದೊಡ್ಡಿಯಿತ್ತು. ಪಂಚಮಿ ಹಬ್ಬದ ಸಂದರ್ಭದಲ್ಲಿ ಆ ಹೆಣ್ಣುಮಗಳನ್ನು ಆಕಳ ಪೂಜೆಗಾಗಿ ದೊಡ್ಡಿಗೆ ಕಳುಹಿಸಲಾಯಿತು. ಅವಳು ಲಗ್ನದ ವಯಸ್ಸಿಗೆ ಬಂದ ಹುಡುಗಿ. ಆರತಿ, ವಿಭೂತಿ, ಕುಂಕುಮ ಎಲ್ಲ ತೆಗೆದುಕೊಂಡು ದೊಡ್ಡಿಗೆ ಬಂದಳು. ಆ ದೊಡ್ಡಿಯ ಪ್ರವೇಶಕ್ಕೆ ದೊಡ್ಡದೊಂದು ನಾಗರಹಾವು ಬಿಡದೇ ಅಡ್ಡಿಯನ್ನುಂಟು ಮಾಡಿತು. ಈ ಸಂದರ್ಭದಲ್ಲಿ ನಾಗರಹಾವು ಆಕೆಯೊಂದಿಗೆ ಸಂಭೋಗ ಮಾಡಿತು. ಮುಂದೆ ಅವಳು ಗರ್ಭ ಧರಿಸಿದಳು. ಮನೆಯಲ್ಲಿ ಐದಾರು ಜನ ಅಣ್ಣ-ತಮ್ಮಂದಿರು. “ನೀನು ಮದುವೆಯಾಗದೇ ಹೇಗೆ ಗರ್ಭ ಧರಿಸಿದೆ?” ಎಂದು ಕೊಲ್ಲಲು ನಿಂತರು. ಇದನ್ನು ತಡೆದ ತಂದೆ ತಾಯಿಗಳು ಮಗಳನ್ನು ರಂಬಿಸಿ ಸತ್ಯಾಂಶವೇನೆಂದು ಕೇಳಿದರು. ಆಗ ಮಗಳು “ಅಪ್ಪಾ, ನಾನು ನಿಮ್ಮ ಮರ್ಯಾದೆ ಹೋಗುವ ಕೆಲಸ ಏನೇನೂ ಮಾಡಿಲ್ಲ. ನೀವು ತಪ್ಪು ತಿಳಿದುಕೊಂಡಿದ್ದೀರಿ. ಪಂಚಮಿ ದಿವಸ ನಾನು ದೊಡ್ಡಿಗೆ ಪೂಜೆಗೆ ಹೋದಾಗ ದೊಡ್ಡದೊಂದು ಸರ್ಪ ನನ್ನನ್ನು ಬರುಬಿ ನನ್ನೊಡನೆ ಸಂಭೋಗ ಮಾಡಿತು. ಅದರಿಂದ ನಾನು ಗರ್ಭವತಿಯಾದೆ” ಎಂದಳು. ಮುಂದೆ ಆಕೆ ನವಮಾಸ ತುಂಬಿ ಒಂದು ನಾಗರಹಾವನ್ನೇ ಹೆತ್ತಳು.  ಆ ಹಾವು ಅವರ ಮನೆಯಲ್ಲಿಯೇ ಇರುತ್ತಿತ್ತು. ಮನೆಯ ನಾಗೊಂದಿಗೆಯ ಮೇಲೆ ಮಲಗುತ್ತ ಕ್ರಮೇಣ ದೊಡ್ಡ ಸರ್ಪವಾಯಿತು. ಅದನ್ನು ಎಲ್ಲರೂ ಪ್ರೀತಿ ಮಾಡುತ್ತಿದ್ದರು.

ಒಮ್ಮೆ ನವಣಿಯ ದೊಡ್ಡ ಪ್ರಮಾಣದ ರಾಶಿ ಇತ್ತು. ಆ ನವಣಿಗೆ ರಾಶಿ ಬುತ್ತಿಯನ್ನು ತೆಗೆದುಕೊಂಡು ಮನೆಯವರು ಹೋದರು. ಸಂಗಡ ತಮಗೆ ಬೇಕಾದವರನ್ನು ಕರೆದೊಯ್ಯಲಾಗಿತ್ತು. ಆದರೆ ಅಳಿಯ (ಹಾವು)ನನ್ನು ಕರೆಯದೇ ಮರೆತು ಬಿಟ್ಟಿದ್ದರು. ಹೊಲದಲ್ಲಿ ಅವರ ತಂಗಿ “ನನ್ನ ಮಗನೆಲ್ಲಿ?” ಎಂದು ಕೇಳಿದಳು. ಆಗ ಎಲ್ಲರಿಗೂ ಮರೆತು ಬಂದಿದ್ದು ಮನವರಿಕೆಯಾಗಿ ಅವನನ್ನು ಕರೆದುಕೊಂಡು ಬರಬೇಕೆಂದು ಮನೆಗೆ ಓಡಿ ಬಂದರು. ಮನೆಯಲ್ಲಿ ನೋಡಿದರೆ ದಿನಾಲೂ ಮಲಗಿಕೊಳ್ಳುವ ನಾಗೊಂದಿಗೆಯ ಮೇಲೆ ಹಾವು ಇರಲಿಲ್ಲ. ಮನೆಯೆಲ್ಲ ಹುಡುಕಿದರೂ ಹಾವು ಸಿಗದೇ ಹೋದಾಗ ಹೊಲಕ್ಕೆ ಮರಳಿದರು. ಆದರೆ ಹೊಲದಲ್ಲಿ ರಾಶಿ ಬುತ್ತಿಗೆಂದು ತಂದು ಹುಗ್ಗಿಯ ಹಂಡೆಯೆಲ್ಲ ಹಸಿರಾಗಿತ್ತು. ಪರೀಕ್ಷಿಸಿ ನೋಡಿದಾಗ ಹಾವು ಹಂಡೆ ಬುಡದಲ್ಲಿ ಸಿಕ್ಕಿ ಸತ್ತು ಹೋಗಿತ್ತು. ಮಗನನ್ನು ಕಳೆದುಕೊಂಡ ದುಃಖದಲ್ಲಿ ಆ ಹೆಣ್ಣುಮಗಳು ತನ್ನ ತವರುಮನೆಯವರಿಗೆ ಶಾಪ ಕೊಡುತ್ತಾಳೆ. “ನೀವು ನವಣಿಯ ಹೊಲದಲ್ಲಿ ಹಾಯಬೇಡಿರಿ, ನವಣಿಯನ್ನು ಬಿತ್ತಬೇಡಿರಿ, ನವಣಿ ಬಿತ್ತಲೂ ಎತ್ತೂ ಕೊಡಬೇಡಿರಿ, ನವಣಿ ರಾಶಿಗೆ ಮೆಟ್ಟು ಕೊಡಬೇಡಿರಿ, ಕೊಟ್ಟರೆ ನಿಮ್ಮ ವಂಶ ನಿರ್ವಂಶವಾಗಲಿ” ಅಂದಿನಿಂದ ಅವರ ನವಣಿ ಊಟ ಮಾಡುವುದಿಲ್ಲ. ನವಣಿ ಬಿತ್ತುವುದಿಲ್ಲ.

ಈ ಕತೆ ತದ್ರೂಪ ಜನಪದ ಕತೆಯಂತಿದೆ. ಗೌಡರ ಮನೆತನದವರು ನವಣಿ ಉಣ್ಣದಿರುವುದಕ್ಕೆ, ನವಣಿ ಬಿತ್ತದಿರುವುದಕ್ಕೆ ಬೇರೆಯೇ ಕಾರಣಗಳಿರಬಹುದು. ಆ ಮನೆಯ ಹೆಣ್ಣುಮಗಳು ಹಾವಿನೊಂದಿಗೆ ಸಂಭೋಗಿಸುವುದಾಗಲೀ, ಅದನ್ನು ಎಲ್ಲರೂ ಒಪ್ಪುವುದಾಗಲೀ, ಕೊನೆಗೆ ಅವಳು ಹಾವನ್ನು ಹೆರುವುದಾಗಲೀ, ಎಲ್ಲವೂ ಅಸಂಭವನೀಯ ಅಂಶಗಳೇ. ತಾನು ಎಲ್ಲಿಯೋ ಕೇಳಿದ ಒಂದು ಜನಪದ ಕತೆಯನ್ನು ಇಲ್ಲಿಯ ಹೆಳವಪ್ಪ ಗೌಡರ ಮನೆತನಕ್ಕೆ ಆರೋಪಿಸಿ ಹೇಳುವಲ್ಲಿ ಕೇವಲ ಕೇಳುಗರಲ್ಲಿ ವಿಸ್ಮಯವನ್ನುಂಟು ಮಾಡುವ ಉದ್ಧೇಶವಿರುವಂತೆ ತೋರುತ್ತದೆ.

ಮೇಲಿನ ಮೂರೂ ಕತೆಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಪುರಾಣಾಂಶಗಳು ಬೆರೆತುಕೊಂಡು ಬಿಟ್ಟಿವೆ. ಈ ಪುರಾಣಪ್ರೀತಿ ನಮ್ಮ ಜನಪದರಿಗೆ ಅದ್ಭುತರಮ್ಯ ಲೋಕವೊಂದನ್ನು ಕಟ್ಟಿ ಕೊಟ್ಟು, ಯಾಕೆ? ಹೇಗೆ? ಎಂಬ ಪ್ರಶ್ನೆಗಳಿಂದ ಅವರನ್ನು ದೂರವಿಡುತ್ತದೆ. ಕತೆಯನ್ನು ಕೇಳುವಾಗ ಈ ಕತೆಯ ನಾಯಕ ಅಥವಾ ನಾಯಕಿ ಪಾತ್ರ ಇವರಲ್ಲಿ ಅಪಾರ ಗೌರವವನ್ನು ಬೆಳೆಸುತ್ತದೆಯೇ ಹೊರತು ಯಾವುದೇ ಬಗೆಯ ವೈಚಾರಿಕ ಪ್ರಶ್ನೆಗಳನ್ನು ಎತ್ತಲು ಇಲ್ಲಿ ಅವಕಾಶವಿಲ್ಲ. ಇವೆಲ್ಲ ಅಲೌಕಿಕ ನಡವಳಿಕೆಗಳ ಮಧ್ಯದಲ್ಲಿಯೂ ಒಂದು ಮಾತು ಸ್ಪಷ್ಟ. ಪ್ರಸ್ತುತ ಮನೆತನದ ಪೂರ್ವಜರ ಕತೆಯಲ್ಲಿ ಕೆಲವಾದರೂ ಸತ್ಯಾಂಶದ ಎಳೆಗಳು ಇದ್ದೇ ಇರುತ್ತವೆ. ಈ ಕತೆಯ ಸುತ್ತ ಕೇಳುಗರನ್ನು ಮರಳು ಮಾಡುವಂತಹ ರೋಚಕ ಆವರಣವೊಂದು ಹಣೆಯಲ್ಪಡುತ್ತದೆ.

ವಂಶಾವಳಿಯ ಪ್ರಾರಂಭದಲ್ಲಿ ಎಲ್ಲ ಕಡೆಗೆ ಇಂತಹ ಉದ್ದ ಕತೆಗಳೇ ಇರಬೇಕೆಂದಿಲ್ಲ. ಕೆಲವು ಮನೆತನಗಳಿಗೆ ಸಂಬಂಧಿಸಿದಂತೆ ಮಾತ್ರ ಇಂಥ ದೀರ್ಘ ಕತೆಗಳಿದ್ದು, ಬಹಳಷ್ಟು ಕಡೆ ಒಂದು ಘಟನೆ ಮಾತ್ರ ಪ್ರಸ್ತಾಪಿಸಲ್ಪಡುತ್ತದೆ. ಅದು ಕೌಟುಂಬಿಕ, ಆಡಳಿತಾತ್ಮಕ, ಸಾಮಾಜಿಕ ಹೀಗೆ ಯಾವುದಾದರೊಂದು ವಿಷಯಕ್ಕೆ ಸಂಬಂಧಿಸಿದ ಘರ್ಷಣೆಯಾಗಿರುತ್ತದೆ. ಇಂಥಲ್ಲಿ ಕೆಲವು ಸಲ ಮಹಿಳೆಯರೇ ಪ್ರಧಾನ ಪಾತ್ರ ವಹಿಸಿದ್ದುಂಟು. ಇಂಥ ಒಂದು ಘಟನೆಯಿಂದ ಪ್ರಸ್ತುತ ಲೇಖಕನ ಮನೆತನ (ಇಟ್ಟಣ್ಣವರ)ದವರು ಸೋರಗಾವಿಯಿಂದ ವಲಸೆ ಹೋಗಬೇಕಾಯಿತು. ಇವರು ಮೂಲತಃ ಮುಧೋಳ ತಾಲೂಕಿನ ಸೋರಗಾವಿಯ ಗೌಡಕಿ ಮನೆತನದವರು. ಹೊಲದ ಪಾಳೆಗಾಗಿ ಪೀಡಿಸಿದಾಗ ಅವರನ್ನು (ಪಾಳೆ ಬೇಡಿದವರನ್ನು) ಹಾಳ ಹಗೆಯಲ್ಲಿ ಹಾಕಿ ಸಿದ್ದವ್ವ ಮಕ್ಕಳನ್ನು ಕಟ್ಟಿಕೊಂಡು ಹೊಳೆ ದಾಟಿ ಬಂದಳು. ಸೋರಗಾವಿಯಿಂದ ಬೀಳಗಿ, ಬೀಳಗಿಯಿಂದ ಮುಧೋಳ, ಮುಧೋಳದಿಂದ ಯಾದವಾಡಕ್ಕೆ (ಗಿರಿಸಾಗರ ಓಣಿ) ಬಂದು ನಿಂತರು. ಈ ವಲಸೆಯಲ್ಲಿ ಸಿದ್ದವ್ವ ಎಂಬ ಹೆಣ್ಣು ಮಗಳು ಪ್ರಧಾನ ಪಾತ್ರ ವಹಿಸಿದ್ದು ಸ್ಪಷ್ಟವಾಗಿದೆ.

ಇಂದಿನ ಸ್ಥಿತಿಗತಿ

ಹೆಳವರು ತಮ್ಮ ಹಿರಿಯರ ಹಿರಿಮೆ-ಗರಿಮೆ ಹೇಳುತ್ತಾರೆ. ತಮ್ಮ ವಂಶದ ಮೂಲವನ್ನು ಹೇಳುತ್ತಾರೆ ಎಂಬುದರಿಂದ ಹೆಳವರ ವೃತ್ತಿಗೊಂದು ಗೌರವವಿದೆ. ಆದರೆ ಸಾಮಾಜಿಕ ಶ್ರೇಣಿಯಲ್ಲಿ ಅವರನ್ನು ಕೆಳಸ್ತರದಲ್ಲಿಯೇ ಇರಿಸಿರುವುದು ವಿಪರ್ಯಾಸದ ಸಂಗತಿ. ಇವರ ಮನೆಗಳು ಊರಲ್ಲಿ ಉಚ್ಚ ವರ್ಣದವರೊಂದಿಗಲ್ಲ. ಸ್ವಲ್ಪ ಹೆಚ್ಚು ಕಡಿಮೆ ಇದೇ ಶ್ರೇಣಿಯ ಜನರಿರುವಲ್ಲಿ ಇವರು ಮನೆ ಕಟ್ಟಿಕೊಂಡು ವಾಸ ಮಾಡುತ್ತಾರೆ. ಒಂದು ಕಾಲದಲ್ಲಿ ಮುಗಳೊಳ್ಳಿಯ ಹೆಳವರು ತುಂಬ ಶೋಚನೀಯವಾಗಿ ಬದುಕಿದ್ದಾರೆ. ಆ ಭಾಗದಲ್ಲಿ ಇವರನ್ನು ಮೇಲುವರ್ಣದವರು ಮುಟ್ಟಿಸಿಕೊಳ್ಳುತ್ತಿರಲಿಲ್ಲವಂತೆ. ಇವರು ಚಹದಂಗಡಿಗಳಿಗೆ ಹೋದರೆ ಅವೂ ಚಪ್ಪರ ಚಹದಂಗಡಿಗಳು. ಇವರಿಗೆ, ಪರಿಶಿಷ್ಟ ವರ್ಗದವರಿಗೆ ಬೇರೆ ಬೇರೆ ಕಪ್ಪುಗಳನ್ನು ಇಟ್ಟಿರುತ್ತಿದ್ದರು. ಚಹದಂಗಡಿಯ ಮಾಲಿಕ ಇವರಿಗೆ ಮೀಸಲಿರಿಸಿದ ಕಪ್ಪುಗಳಲ್ಲಿ ಚಹಾ ಹಾಕುತ್ತಿದ್ದ. ಕುಡಿದಾದ ಮೇಲೆ ಇವರು ಆ ಕಪ್ಪುಗಳನ್ನು ತೊಳೆದಿಡಬೇಕು. ಬಾವಿ ದಂಡೆಯ ಮೇಲೆ ಜಳಕ ಮಾಡಿಸಿ ಕೊಡುತ್ತಿರಲಿಲ್ಲ. ಉತ್ತಮರು ನೀರು ಸೇದಿಕೊಂಡ ತರುವಾಯವೇ ಇವರು ಸೇದಿಕೊಳ್ಳಬೇಕು. ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಮುಂಚಿನ ಸ್ಥಿತಿ ಈಗಿಲ್ಲವಾದರೂ ಇವರನ್ನು ತಮ್ಮ ಸಮಾಜ ಸ್ಕಂದರಂತೆ ನೋಡುವುದಿಲ್ಲ.

ಕ್ರಮೇಣ ಹೆಳವ ವೃತ್ತಿಗೆ ಗೌರವ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣವೆನ್ನಬಹುದಾದ ಹಲವಾರು ಅಂಶಗಳನ್ನು ನಾವು ಹೀಗೆ ಕ್ರೋಢೀಕರಿಸಬಹುದು.

೧. ಹಿಂದೆ ಒಕ್ಕಲು ಮನೆತನದವರು ಮುಗ್ಧರಾಗಿದ್ದರು. ಹೆಳವರು ಹೇಳುವ ತಮ್ಮ ವಂಶಾವಳಿಯನ್ನು ಇವರು ಭಕ್ತಿ, ಕೌತುಕಗಳಿಂದ ಕೇಳುವವರಾಗಿದ್ದರು. ಈಗ ಅಂಥ ವಾತಾವರಣ ಉಳಿದಿಲ್ಲ. ರೈತವರ್ಗದಲ್ಲಿ ಅನೇಕರು ಸುಶಿಕ್ಷಿತರಾಗಿದ್ದಾರೆ. ಹೆಳವರು ಹೇಳುವ ವಂಶಾವಳಿಯನ್ನೆಲ್ಲ ಯಥಾವತ್‌ಸ್ವೀಕರಿಸಲು ಅವರು ಇಂದು ಸಿದ್ಧರಿಲ್ಲ. ತಮ್ಮ ಹೆಳವರು ಹೇಳುವುದೆಲ್ಲ ಎಷ್ಟರಮಟ್ಟಿಗೆ ವಸ್ತುನಿಷ್ಠವಾಗಿದೆಯೆಂದು ಅವರ ಹೊತ್ತಿಗೆಗಳ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂತಾಗಿದೆ. ಮೂಲ ಪುರುಷನಿಂದ ಹಿಡಿದು ತಮ್ಮ ಕಾಲದವರೆಗೆ ಹರಿದು ಬಂದಿರುವ ವಂಶಾವಳಿ ಸರಿಯಿರಬಹುದು. ಆದರೆ ಅದರಾಚೆಗಿರುವ ಕತೆಗಳ ಬಗೆಗೆ ಇವರಿಗೆ ಗುಮಾನಿಯಿದೆ.

೨. ಹೆಳವರು ವೃತ್ತಿಯಲ್ಲಿ ಮುಂಚಿನಂತಹ ಗಾಂಭೀರ್ಯ, ಅಂದಚೆಂದವನ್ನು ಉಳಿಸಿಕೊಂಡಿಲ್ಲ. ಅಲಂಕರಿಸಿದ ಎತ್ತಿನ ಮೇಲೆ ಬಂದು ಮನೆಯ ಹೊಸ್ತಿಲಮುಂದೆ ಎತ್ತಿನ ಮೇಲೆಯೇ ಕುಳಿತು ವಂಶಾವಳಿ ಹೇಳುವಲ್ಲಿ ಒಂದು ಬಗೆಯ ಗಂಭೀರತೆಯಿತ್ತು. ಆದರೆ ಇಂದು ಒಂಟಿಯಾಗಿ ಬರುವಲ್ಲಿ ಆ ಗಂಭೀರತೆ ಇಲ್ಲದಿರುವುದರಿಂದ ಸಹಜವಾಗಿ ಹೆಳವರ ಮೇಲಿನ ಆಸಕ್ತಿ ಕಡಿಮೆಯಾಯಿತು.

೩. ಒಂದು ಕಾಲಕ್ಕೆ ಜನನ-ಮರಣ “ರಜಿಸ್ಟರ್” ಇಡುವವರೇ ಹೆಳವರಾಗಿದ್ದರು. ಈಗ ಆ ಕೆಲಸವನ್ನು ಸರಕಾರವೇ ಮಾಡಲು ಪ್ರಾರಂಭಿಸಿದ ಮೇಲೆ ಇವರ ಹಂಗಿಲ್ಲವಾಯಿತು. ಇವರ ಹೊಲ ಇಷ್ಟು ಎಂದು ಹೇಳುವವರೂ ಇವರಾಗಿದ್ದರಂತೆ. ಇಂತಹ ಎಲ್ಲ ಕೆಲಸಗಳನ್ನೂ ಸರಕಾರವೇ ನಿರ್ವಹಿಸುತ್ತಿದೆ.

೪. ಹೆಳವ ಜನಾಂಗಕ್ಕೆ ಸೇರಿದ ಕೆಲವು ಜನ ನೌಕರಿ ಮಾಡತೊಡಗಿರುವುದರಿಂದ ಸಹಜವಾಗಿ ಅವರು ತಮ್ಮ ಒಕ್ಕಲು ಮನೆಗಳಿಗೆ ಹೋಗದಂತಾಯಿತು. ವರ್ಷಕ್ಕೊಮ್ಮೆ ತಮ್ಮಲ್ಲಿಗೆ ಬರುತ್ತಿದ್ದ ಹೆಳವಪ್ಪ ಈಗ ಬರುವುದಿಲ್ಲವೆಂದ ಮೇಲೆ ಅವನ ಮೇಲಿನ ಮುಂಚಿನ ಪ್ರೀತಿಯಾಗಲಿ, ಆದರವಾಗಲಿ ಉಳಿಯಲು ಅವಕಾಶವಿಲ್ಲದಂತಾಯಿತು.

ಇಷ್ಟೆಲ್ಲ ಅಂಶಗಳನ್ನು ನೋಡಿದರೆ ಮುಂದಿನ ದಿನಮಾನಗಳಲ್ಲಿ ಕ್ರಮೇಣ ಹೆಳವ ವೃತ್ತಿಯೇ ನಿಂತು ಹೋಗುವ ಅನುಮಾನಗಳು ದಟ್ಟವಾಗುತ್ತಿವೆ. ನೀರಾವರಿ ಜಮೀನಿದ್ದರೆ ಹೆಳವ ವೃತ್ತಿಗಿಂತ ಕೃಷಿಯೇ ಹೆಚ್ಚು ವರದಾನ ತಂದುಕೊಡಬಲ್ಲದು ಎಂಬ ಭಾವ ಅನೇಕರಲ್ಲಿ ಬಲಿಯುತ್ತಿದೆ. ನೌಕರಿಗೆ ತೊಡಗಿದವರಿಗಂತೂ ಹೆಳವ ವೃತ್ತಿ ಸಾಧ್ಯವೇ ಆಗುವುದಿಲ್ಲ. ಬೀಳಗಿಯ ಭೀಮಪ್ಪ ಹೆಳವರ ಅವರ ತಂದೆ ಸಿದ್ಧಲಿಂಗಪ್ಪ ಹೆಳವ ವೃತ್ತಿಯನ್ನು ಮಾಡುತ್ತಿದ್ದವರು. ಊರೂರು ಅಲೆಯುತ್ತಿದ್ದವರು. ಅವರ ಮಗ ಭೀಮಪ್ಪ ಪ್ರಾಥಮಿಕ ಶಾಲಾ ಶಿಕ್ಷಕರಾದರು. ಇವರ ಮಕ್ಕಳೆಲ್ಲ ಇಂದು ಉಪನ್ಯಾಸಕರಾಗಿ, ಪ್ರೌಢಶಾಲಾ ಶಿಕ್ಷಕರಾಗಿ, ಇಂಜಿನೀಯರರಾಗಿ, ಪತ್ರಕರ್ತರಾಗಿ, ವಿವಿಧ ಅನ್ಯ ವೃತ್ತಿಗಳಲ್ಲಿ ತೊಡಗಿದ್ದಾರೆ. ಈಗ ಈ ಮನೆತನದಲ್ಲಿ ಹೆಳವಿಕೆ ವೃತ್ತಿ ನಿಂತು ಹೋಗಿದೆ. ಕೆಲವರು ಬಂದು “ನಿಮಗೆ ಹತ್ತು ಸಾವಿರ ರೂಪಾಯಿ ಕೊಡುತ್ತೇವೆ. ನಿಮ್ಮ ಒಕ್ಕಲು ಮನೆಗಳನ್ನು ನಮಗೆ ಒಪ್ಪಿಸಿರಿ” ಎಂದು ಕೇಳುತ್ತಿದ್ದಾರಂತೆ. ಇವರ ತಮ್ಮಂದಿರ ಮಕ್ಕಳೂ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುವವರಾಗಿದ್ದು, ಅವರೂ ಈ ವೃತ್ತಿಯನ್ನು ನಿಲ್ಲಿಸಿದ್ದಾರೆ. ಇಂದು ಸರಕಾರಿ ಸೇವೆ ಮಾಡುತ್ತ ಬೆಂಗಳೂರು, ಮೈಸೂರ, ಬೆಳಗಾವಿ, ಹುಬ್ಬಳ್ಳಿ, ಧಾರವಾಡದಂಥ ಪಟ್ಟಣಗಳಲ್ಲಿ ವಾಸಿಸುತ್ತಿರುವ ಯಾರಿಗೂ ಈ ವೃತ್ತಿಯನ್ನು ಕೈಗೊಳ್ಳುವುದು ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭಗಳಲ್ಲಿ ಸಂಪ್ರದಾಯವಾದಿಗಳಿಗೆ ಕುಲವೃತ್ತಿಯನ್ನು ಕಳೆದುಕೊಳ್ಳುತ್ತಿರುವ ವ್ಯಸನವಿದ್ದರೆ, ವಿಚಾರವಂತರು ತಮ್ಮ ಜನಾಂಗವೂ ಆಧುನಿಕ ಬದುಕನ್ನು ಮೈಗೂಡಿಸಿಕೊಳ್ಳುತ್ತಿರುವ ಬಗೆಗೆ ಸಮಾಧಾನ ಹೊಂದಿದ್ದಾರೆ.

ಒಟ್ಟು ಹೆಳವ ಸಮುದಾಯದ ಸ್ಥಿತಿಯೇ ಇಷ್ಟೊಂದು ಡೋಲಾಯಮಾನವಾಗಿರುವಾಗ ಈ ಜನಾಂಗದ ಮಹಿಳೆಯರ ಸ್ಥಿತಿಯಂತೂ ಇನ್ನೂ ಶೋಚನೀಯವಾಗಿದೆ. ಬದುಕಿನ ಸಮಗ್ರ ಅಭಿವೃದ್ಧಿಗೆ ಪೂರಕವಾಗಬಲ್ಲ ಶಿಕ್ಷಣದ ಕೊರತೆ ಹೆಳವ ಹೆಣ್ಣು ಮಕ್ಕಳನ್ನು ಇನ್ನೂ ಆಧುನಿಕ ಬದುಕಿನ ಸಂವೇದನೆಗಳಿಂದ ದೂರವಿರಿಸಿದೆ. ಊರೂರಿಗೆ ಅಲೆಯುವ ಇವರ ಕುಟುಂಬಗಳು ಅಂದಂದಿನ ಅಗತ್ಯಗಳನ್ನು ಪೂರೈಸಿಕೊಳ್ಳುವಲ್ಲಿಯೇ ತಮ್ಮೆಲ್ಲ ಶಕ್ತಿಯನ್ನು ವ್ಯಯ ಮಾಡುತ್ತವೆ. ಪುರುಷರು ಹೊತ್ತೇರುತ್ತಲೇ ತಮ್ಮ ಒಕ್ಕಲುಮನೆಗಳಿಗೆ ಓಡಬೇಕು. ಮಹಿಳೆಯರು ಅಡುಗೆಯಲ್ಲದೆ ದನ-ಕರು, ಕುರಿ-ಕೋಳಿಯೆಂದು ಒದ್ದಾಡಬೇಕು. ಇಂಥ ಒತ್ತಡದಲ್ಲಿ ಮಕ್ಕಳು ಒಳ್ಳೆಯ ಭವಿಷ್ಯ ಕುರಿತು ಯೋಚಿಸುವ ವ್ಯವಧಾನ ಯಾರಿಗಿದೆ? ಎರಡನೆಯದಾಗಿ, ವರ್ಷದಲ್ಲಿ ಸುಮಾರು ಒಂಭತ್ತು ತಿಂಗಳು ಊರಿಂದೂರಿಗೆ ಸಂಚರಿಸುತ್ತಲೇ ಇರುವಾಗ ಹುಡುಗರು ಒಂದು ಶಾಲೆಯಲ್ಲಿ ಅಥವಾ ವರ್ಗಕೋಣೆಯಲ್ಲಿ ಕುಳಿತು ಓದುವುದು ವಾಸ್ತವವಾಗಿಯೂ ಸಾಧ್ಯವಾಗಲಾರದು. ಈ ವಿಷಯದಲ್ಲಿ ಇರುವ ಇನ್ನೊಂದು ಬಹುಮುಖ್ಯವಾದ ಅಂಶವೆಂದರೆ ಹೆಳವರು ತಮ್ಮ ಗಂಡುಮಕ್ಕಳಿಗೆ ಚಿಕ್ಕವರಿರುವಾಗಲೇ ಅಕ್ಷರಭ್ಯಾಸ ಮಾಡಿಸುತ್ತಾರೆ. ಏಕೆಂದರೆ ಈ ಕಲಿಕೆಯಿಂದ ಅವನು ತಮ್ಮ ತರುವಾಯ ಚೋಪಡಿ ಓದಿ, ವಂಶಾವಳಿ ಹೇಳಿ ಸ್ವತಂತ್ರವಾಗಿ ಹೊಟ್ಟೆ ಹೊರೆದುಕೊಳ್ಳಬಲ್ಲ ಎಂಬುದು ಅವರಿಗೆ ನಿಖರವಾಗಿ ಹೊಳೆದಿರುವುದರಿಂದ ಬಾಲಕರಿಗೆ ೪-೫ ವರ್ಷವಾಗುತ್ತಲೇ “ಬಳ್ಳಿ”ಯನ್ನು ಹಾಕಿಕೊಡಲಾಗುತ್ತದೆ. ಒಮ್ಮೆ ಅವರು ತಮ್ಮಲ್ಲಿರುವ ವಂಶಾವಳಿ ವಹಿ ಓದಲು ಕಲಿತರೋ ಮುಗಿಯಿತು. ಅದನ್ನು ದಾಟಿಕೊಂಡು ಶಿಕ್ಷಣದಿಂದೊದಗುವ ಅನ್ಯ ಪ್ರಯೋಜನೆಗಳನ್ನು ಕುರಿತು ಅವರು ಯೋಚಿಸಲಾರರು. ಇಷ್ಟಾದರೆ ತಮಗೆ ನಿರಾಯಾಸದ ಜೀವನ ನಿರ್ವಹಣೆ ಸಾಧ್ಯವಾಗುತ್ತದಲ್ಲ ಎಂಬ ಧೋರಣೆ ಅವರದು. ಉಚ್ಚಶಿಕ್ಷಣ ತಮ್ಮ ಭವಿಷ್ಯದ ಪೀಳಿಗೆಗೆ ಒಂದು ಸಾಂಸ್ಕೃತಿಕ ನೆಲೆಯನ್ನು ತಂದುಕೊಡಬಲ್ಲದು ಎಂಬುದನ್ನು ಅವರು ತಿಳಿಯಲಾರರು.

ಗಂಡು ಹುಡುಗರಿಗೆ ಅಕ್ಷರ ಕಲಿಕೆಯಾಗಬೇಕು ಎಂಬುದರಲ್ಲಿ ಸ್ಪಷ್ಟವಾದ ಸ್ವಾರ್ಥವಿದೆ. ಒಕ್ಕಲು ಮನೆಗಳಿಗೆ ಹೋಗಿ ಅವರ ಮೇಲೆ ಮುಂದು ಕುಳಿತು ಹೊತ್ತಿಗೆ ತೆಗೆದು ವಂಶಾವಳಿ ಹೇಳುವವನು ಪುರುಷನೇ ಹೊರತು ಸ್ತ್ರೀಯಲ್ಲ. ಅವಳು ವಂಶಾವಳಿ ಹೇಳು ಒಕ್ಕಲು ಮನೆಗಳಿಗೆ ಹೋಗುವಂತಿಲ್ಲ. ಎಂದಾದ ಮೇಲೆ ಅವಳಿಗೇಕೆ ಕಲಿಸಬೇಕು? ಅದರಿಂದಾಗುವ ಲಾಭವೇನು? ಎಂಬುದು ಮೊದಲಾಯಿತು ಹೀಗಾಗಿ ಮನೆಯಲ್ಲಿ ವಂಶಪಾರಂಪರ್ಯವಾಗಿ ಅಕ್ಷರ ಬಳಕೆಯಿದ್ದರೂ ಇಂಥ ಒಂದು ವ್ಯಾವಹಾರಿಕ ದೃಷ್ಟಿ ಹೆಳವ ಸ್ತ್ರೀಯನ್ನು ಅಕ್ಷರವಂಚಿತೆಯನ್ನಾಗಿಸಿತು. ಶಿಕ್ಷಣದ ಕೊರತೆ ಹೆಳವ ಮಹಿಳೆಗೆ ಚಿಂತನಶೀಲ ಮನಸ್ಸನ್ನು ಕೊಡಲಿಲ್ಲ.

ಪರಿಸ್ಥಿತಿ ಇತ್ತೀಚೆಗೆ ಸುಧಾರಣೆಗೊಳ್ಳುತ್ತಿದೆ. ಸ್ಥಿರವಾಗಿ ಒಂದೆಡೆ ನಿಂತವರು ಈಗೀಗಿ ಶಿಕ್ಷಣದ ಮಹತ್ವವನ್ನು ಅರಿಯತೊಡಗಿದ್ದಾರೆ. ತಳಕಟ್ನಾಳದ ಶ್ರೀಮತಿ ರುಕ್ಮವ್ವ ಮಾರುತಿ ಹೆಳವರ ಹೇಳುವಂತೆ, ಮೇಲು ವರ್ಗದವರಂತೆ ಈ ಜನಾಂಗದವರೂ ತಮ್ಮ ಮಕ್ಕಳನ್ನು ಹೆಣ್ಣು ಮಕ್ಕಳನ್ನೂ ಸಹಿತ ಎಲ್ಲೆಲ್ಲೋ ಹೊರಗಿಟ್ಟು, ಅಂದರೆ ವಸತಿ ಶಾಲೆಗಳಲ್ಲಿಟ್ಟು ಕಲಿಸುತ್ತಿದ್ದಾರೆ. ಇದೆಲ್ಲ ತಮ್ಮಂತಹ ಅಲೆಮಾರಿಗಳಿಗೆ ಸಾಧ್ಯವಾಗುವುದಿಲ್ಲವೆಂಬುದು ರುಕ್ಮವ್ವನ ಅಳಲು. ನೌಕರದಾರರಂತೂ ತಮ್ಮ ಮಕ್ಕಳನ್ನು ಗಂಡೇ ಇರಲಿ ಹೆಣ್ಣೇ ಇರಲಿ, ಉಚ್ಚ ಶಿಕ್ಷಣ ಕೊಡಿಸುವ ಗುರಿ ಹೊಂದಿದ್ದಾರೆ. ಇವರ ಸ್ತ್ರೀ ಶಿಕ್ಷಣದ ಮಹತ್ವವನ್ನು ಅರಿತವರೇ ಆಗಿದ್ದಾರೆ. ಇಂದು ಹೆಳವ ಸಮಾಜದ ಕೆಲವರಾದರೂ ಮಹಿಳೆಯರು ಒಳ್ಳೆಯ ಶಿಕ್ಷಣವನ್ನು ಪಡೆದಿದ್ದಾರೆ. ಕೆಲವರು ನೌಕರಿಯನ್ನು ಹಿಡಿದಿದ್ದಾರೆ. ಪರಿಶೀಲಿಸಿ ನೋಡಿದರೆ ಹೀಗೆ ಶೈಕ್ಷಣಿಕವಾಗಿ ಮುಂದುವರೆದ ಮಹಿಳೆಯರು ಬಹಳಷ್ಟು ಜನ ನೌಕರದಾರರ ಕುಟುಂಬದಿಂದಲೇ ಬಂದವರಾಗಿದ್ದಾರೆ. ಇವರ ತಂದೆ ಅಥವಾ ಯಾರಾದರೊಬ್ಬ ಸಂಬಂಧಿ ಕಲಿತವರಾಗಿದ್ದು, ಇವರಿಗೆ ಒಳ್ಳೆಯ ಬದುಕನ್ನು ಹಾರೈಸಿದವರಾಗಿದ್ದಾರೆ. ಹೀಗೆ ತಂದೆ, ಪತಿ, ಸಾಮಾಜಿಕರು ಯಾರು ಯಾರದೋ ಪ್ರೇರಣೆ, ಪ್ರೋತ್ಸಾಹದಿಂದ ಶಿಕ್ಷಣ ಪಡೆದು ಸರಕಾರೀ ಉದ್ಯೋಗದಲ್ಲಿರುವ ಕೆಲವರ ಹೆಸರುಗಳನ್ನು ಶ್ರೀನಿವಾಸ ಹೆಳವರ ಅವರು ಒದಗಿಸಿದ್ದಾರೆ.

ರೇಖಾ ವ. ಹೆಳವರ ಎನ್ನುವವರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಸ್ನಾತಕೋತ್ತರ (ಎಂಎಸ್‌ಡಬ್ಲು) ಮಾಡಿಕೊಂಡು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಬೀದರದಲ್ಲಿದ್ದಾರೆ. ರೇಣುಕಾ ಜಗನ್ನಾಥ ಹೆಳವಿ ಎನ್ನುವವರು ಗುಲ್ಬರ್ಗದಲ್ಲಿ ಮಹಿಳಾ ಕಾನಸ್ಟೇಬಲ್‌ಆಗಿದ್ದಾರೆ. ಗೀತಾ ಭೈರಾಮಡಗಿ ರೈಲ್ವೆ ಇಲಾಖೆಯಲ್ಲಿದ್ದು, ಟಿಕೆಟ್ ತಪಾಸಣಾ ಅಧಿಕಾರಿ (ಟಿ.ಸಿ.) ಯೆಂದು ಗುಲ್ಬರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಷಾ ರುದ್ರಗೌಡ ಹೆಳವರ ಅವರು ಬಿ.ಇ (ಇಲೆಕ್ಟ್ರಾನಿಕ್ಸ್) ಪದವಿ ಮುಗಿಸಿಕೊಂಡು ಕೆಇಬಿಯಲ್ಲಿ ಜೂನಿಯರ್ ಇಂಜಿನೀಯರ್ ಆಗಿ ಸೇವೆ ಮಾಡುತ್ತಿದ್ದಾರೆ. ಕುಮಾರಿ ದೇವಕಿ ಎನ್ನುವವರು ಅತ್ಯಂತ ಬಡತನದಿಂದ ಬಂದವರು. ಆದರೂ ಶಿಕ್ಷಣದ ಹಂಬಲ ಹೊತ್ತು ಛಲ ಬಿಡದೇ ಎಲ್‌.ಎಲ್‌.ಬಿ. ಓದುತ್ತಿದ್ದಾರೆ. ಶ್ರೀಮತಿ ವಿಲಾಸವತಿ ಖೂಭಾ ಅವರು ದೇವಕಿ ಅವರಿಗೆ ಎಲ್ಲ ಬಗೆಯ ನೆರವನ್ನೂ ಒದಗಿಸಿದ್ದಾರೆ. ನಾಗರತ್ನಾ ಶ್ರೀನಿವಾಸ ಹೆಳವರ ಅವರು ಪದವಿಮಟ್ಟದಲ್ಲಿ ಓದುತ್ತಿದ್ದಾರೆ. ಸುಮಂಗಲಾ ಮಲ್ಲಿಕಾರ್ಜುನ ಹೆಳವರ ಅವರ ಸ್ನಾತಕೋತ್ತರ ಶಿಕ್ಷಣ ಪಡೆದಿದ್ದಾರೆ. ಇವರೆಲ್ಲ ಹೆಚ್ಚು ಕಡಿಮೆ ಬೀದರ, ಗುಲ್ಬರ್ಗದಂಥ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶದಿಂದ ಬಂದವರು. ಬೆಂಗಳೂರು ಭಾಗದಲ್ಲಿ ಸಮೀಕ್ಷೆ ಕೈಗೊಂಡರೆ ಈ ಪಟ್ಟಿ ತುಂಬ ದೊಡ್ಡದಾಗಿ ಬೆಳೆಯುತ್ತದೆ. ಮಹಿಳಾ ಶಿಕ್ಷಣದ ಬಗೆಗೆ ಸರಕಾರೀ ಸೇವೆಯಲ್ಲಿರುವವರು ಬೆಳೆಯಿಸಿಕೊಂಡಿರುವ ಶೈಕ್ಷಣಿಕ ಜಾಗೃತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕಾಗಿದೆ.