ಅಲೆಮಾರಿ ಬದುಕು: ಬಿಡುವಿರದ ಮಹಿಳೆ:

ತಮ್ಮ ಒಕ್ಕಲಿರುವಲ್ಲಿಗೆ ಹೋಗಿ ಅವರ ವಂಶಾವಳಿಯನ್ನು ಹೊಗಳುವ ಹೆಳವರು ಅಲೆಮಾರಿಗಳು ನಿಜ, ಆದರೆ ಎಲ್ಲಿಯೂ ನೆಲೆಯಿರದ ವರ್ಷದ ಹನ್ನೆರಡೂ ತಿಂಗಳು ಅಲೆಯುತ್ತಲೇ ಇರುವ ಪೂರ್ಣಾವಧಿ ಅಲೆಮಾರಿಗಳು ಇವರಲ್ಲ. ಈಗಾಗಲೇ ವಿದ್ವಾಂಸರು ಹೇಳಿರುವಂತೆ ಇವರು ಅರೆ ಅಲೆಮಾರಿಗಳು. ಅವರಿಗೆ ಅವರದೇ ಆದ ಒಂದು ಊರು, ಮನೆಯೆಂಬುದುಂಟು. ಅಲ್ಲಿ ಕೆಲವರಿಗೆ ಹೊಲ ಇರಬಹುದು, ಇರಲಿಕ್ಕಿಲ್ಲ. ಆದರೆ ತಮ್ಮದೇ ಆದ ಮನೆಯಿರುತ್ತದೆ. ಅದು ಹಂಚಿನದೋ, ಮಾಳಿಗೆಯದೋ ಅಥವಾ ಕೇವಲ ಗುಡಿಸಲೋ ಹೇಗೆ ಇರಲಿ, ಅದು ತಮ್ಮ ಮನೆ. ಹೀಗೆ ಒಂದೆಡೆ ನೆಲೆಯೂರಿರುವ ಅವರು ವರ್ಷದಲ್ಲಿ ಒಂದು ಬಾರಿ ಸಂಸಾರಸಮೇತ ಹೋರಬೀಳುತ್ತಾರೆ. ಯುಗಾದಿಗೆ ಹೊರಬೀಳುವ ಇವರು ತಮ್ಮ ಒಕ್ಕಲುಗಳನ್ನು ಕೊಂಡಾಡುತ್ತ ಊರೂರು ಅಲೆಯುತ್ತಾರೆ. ಹೀಗೆ ಹೊರಡುವ ಇವರು ಸಾಮಾನ್ಯವಾಗಿ ತಮ್ಮ ಸಂಗಡ ಹೆಂಡಿರು, ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ತಂದೆ-ತಾಯಿ ತೀರ ಮುಪ್ಪಿನವರಾಗಿದ್ದರೆ ಮೂಲ ಊರಲ್ಲಿಯೇ ಬಿಟ್ಟು ಹೋಗುತ್ತಾರೆ. ತಮ್ಮ ಪ್ರವಾಸಕಾಲದ ಮಧ್ಯದಲ್ಲಿ ಆಗೀಗಿ ಬಂದು ಅವರ ಅಗತ್ಯಗಳನ್ನು ಪೂರೈಸುತ್ತಾರೆ. ಯೊಗಕ್ಷೇಮ ವಿಚಾರಿಸುತ್ತಾರೆ. ತೀರ ಅನಿವಾರ್ಯದಲ್ಲಿ ಅವರನ್ನೂ ಕರೆದುಕೊಂಡು ಹೋಗಬಹುದು.

ಇವರು ಸಂಸಾರದ ಸಾಮಾನು ಸರಂಜಾಮುಗಳನ್ನು ಸಾಗಿಸುವುದರಿಂದ ಸಂಗಡ ಮಕ್ಕಳೂ ಇರುವುದರಿಂದ ಗಾಡಿಯೊಂದು ಇವರೊಂದಿಗಿರುತ್ತದೆ. ಇದು “ಎಕ್ಯಾಗಾಡಿ” ಒಂದೇ ಎತ್ತಿನದು. ಇದಕ್ಕೆ ಮೇಲೆ ಚವಾಳಿ ಅಥವಾ ಗುಡಾರ ಹಾಕಿ ಸವಾರಿ ಹಾಕಲಾಗಿರುತ್ತದೆ. ಇದಕ್ಕೆ ಹೂಡುವ ಎತ್ತು ಒಂದು ಕಾಲಕ್ಕೆ ಎರಡು ಅಗತ್ಯಗಳನ್ನು ಪೂರೈಸುತ್ತಿತ್ತು. ಒಂದು ಪಾತ್ರೆ-ಪರಡಿ, ಹಾಸಿಗೆ-ಹೊದಿಕೆ ಮುಂತಾಗಿ ಇವರ ಸಾಮಾನು ತುಂಬಿರುವ ಗಾಡಿಯನ್ನು ಊರಿಂದೂರಿಗೆ ಎಳೆಯುವುದು. ಎರಡನೆಯದು ವೃತ್ತಗೌರವಕ್ಕೆ ಅತಿ ಮುಖ್ಯವಾದದ್ದು, ಒಂದು ನಿಶ್ಚಿತ ಊರಲ್ಲಿ ಬೀಡಾರ ಹೂಡಿದ ಮೇಲೆ ತನ್ನ ಒಡೆಯ ಹೆಳವನನ್ನು ಬೆನ್ನ ಮೇಲೆ ಕೂಡಿಸಿಕೊಂಡು ಮನೆಯಿಂದ ಮನೆಗೆ ಸಾಗುವುದು. ಈಗ ಯಾರೂ ಎತ್ತನ್ನು ಹತ್ತಿ ಒಕ್ಕಲು ಮನೆಗಳಿಗೆ ಹೋಗುವುದಿಲ್ಲವಾದ್ದರಿಂದ ಗಾಡಿ ಎಳೆಯುವುದಷ್ಟೇ ಅದರ ಕೆಲಸವಾಗಿದೆ.

ಇವರ ಪ್ರಯಾಣ ಅಡ್ಡಾದಿಡ್ಡಿಯಾಗಿರುವುದಿಲ್ಲ. ತಮ್ಮ ಮೂಲ ಊರು ಬಿಡುವಾಗ ಒಂದು ನಿಶ್ಚಿತ, ಅಲಿಖಿತ ನಕಾಶವೊಂದು ಇವರ ಮುಂದಿರುತ್ತದೆ. ಸುಮಾರು ೨೦ ಕಿ.ಮಿ.ಗೊಮ್ಮೆ ಇವರು ವಾಸ್ತವ್ಯ ಹೂಡುತ್ತಾರೆ. ಅದರ ಸುತ್ತಲೂ ಇರುವ ಹಳ್ಳಿಗಳನ್ನು ಮುಗಿಸಿಕೊಂಡು ಮತ್ತೆ ಸಂಸಾರ ಸಮೇತ ಮುಂದಿನ ಊರಿಗೆ ಚಲಿಸುತ್ತಾರೆ. ಪ್ರತಿ ವರ್ಷ ಅಥವಾ ಎರಡು ವರ್ಷಗಳಿಗೊಮ್ಮೆ ಇವರ ಚಲನೆಯಿರುವುದರಿಂದ ಯಾವ್ಯಾವ ಊರಲ್ಲಿ ವಾಸ್ತವ್ಯ ಮಾಡಬೇಕು, ಇಳಿದುಕೊಳ್ಳಲು ಈ ಊರಲ್ಲಿಯ ಯಾವ ಸ್ಥಳ ಪ್ರಶಸ್ತವಾಗಿದೆ. ಎಲ್ಲವೂ ಪೂರ್ವ ನಿಯೋಜಿತವಾಗಿರುತ್ತದೆ. ಇವರ ಗಾಡಿ, ಇವರ ವೇಷಭೂಷಣಗಳಿಂದ ತಮ್ಮೂರಿಗೆ ಹೆಳವರು ಬಂದಿದ್ದಾರೆಂಬುದನ್ನು ಗ್ರಾಮಸ್ಥರು ಗುರುತಿಸುತ್ತಾರೆ. ಇವರು ಗುಂಪುಗೂಡಿ ೬-೮ ಚಕ್ಕಡಿಯವರು ಸಂಚರಿಸುವುದು ಹೆಚ್ಚು. ಇವರು ಪರಸ್ಪರ ಅಣ್ಣ-ತಮ್ಮರಾಗಿರಬಹುದು ಅಥವಾ ಬೀಗರಾಗಿರಬಹುದು.

ಇವರು ಒಂದು ಊರಲ್ಲಿ ಬಿಡಾರ ಹೂಡಿದ ಮೇಲೆ ಅಲ್ಲಿ ಒಂದು ವಾರ ಅಥವಾ ಎರಡು ವಾರ ತಂಗಬಹುದು. ಅದು ಆ ಊರಲ್ಲಿಯ ಒಕ್ಕಲುಗಳ ಸಂಖ್ಯೆಯನ್ನು ಅವಲಂಭಿಸಿರುತ್ತದೆ. ಇವರು ತಂಗಿರುವ ಒಂದೇ ಊರು ಮಾಡುತ್ತಾರೆಂದಲ್ಲ. ಸಮೀಪದ ಸುತ್ತಲ ಹಳ್ಳಿಗಳಲ್ಲಿ ತಮ್ಮ ಒಕ್ಕಲು ಇದ್ದರೆ ಅವನ್ನು ಮುಗಿಸುತ್ತಾರೆ. ಹೀಗೆ ಸಮೀಪದ ಹಳ್ಳಿಗಳನ್ನು ಮಾಡುವಾಗ ಮುಂಚೆ ಕಾಲ್ನಡಿಗೆಯಲ್ಲಿಯೇ ಹೋಗುತ್ತಿದ್ದರು. ಈಗ ಎಂಥ ಹಳ್ಳಿಗಳಿಗೂ ಬಸ್‌, ಟೆಂಪೊಟ್ರಾಕ್ಸ್‌ಸಾರಿಗೆಯಿರುವುದರಿಂದ ನಡೆಯುವುದು ತಪ್ಪಿದೆ.

ಪೂರ್ವ ಯೋಜನೆಯಂತೆ ಒಕ್ಕಲು ಅಥವಾ ಊರುಗಳನ್ನು ಮುಗಿಸಿಕೊಂಡು ನಿಶ್ಚಿತ ದಿನದಂದು ಹೆಚ್ಚು ಕಡಿಮೆ ಎಲ್ಲರೂ ಕೂಡಿಯೇ ಮುಂದಿನ ಊರಿಗೆ ಪ್ರಯಾಣ ಬೆಳೆಸುತ್ತಾರೆ. ಆಕಸ್ಮಿಕ ಒಬ್ಬನದು ಒಂದೆರಡು ಒಕ್ಕಲು ದೊಡ್ಡವು ಉಳಿದಿದ್ದರೆ ಒಂದು ದಿನ ಹೆಚ್ಚಿಗೆ ಉಳಿದು ಅವನ್ನು ತೀರಿಸಿಕೊಂಡು ಒಂದು ಅಥವಾ ಎರಡು ದಿನ ತಡಮಾಡಿ ಪ್ರಯಾಣ ಹೊರಟು ಈ ಮುಂಚೆ ಹೊರಟವರು ಬಿಡಾರ ಹೂಡಿರುವ ಊರನ್ನು ತಲುಪುತ್ತಾರೆ. ಹೆಳವರು ಹೀಗೆ ಗುಂಪುಗೂಡಿ ಸಂಚರಿಸುವಲ್ಲಿ ಸಹಜ ಜೀವನ ಸುಖ ಹಾಗೂ ಸುರಕ್ಷತೆ ಎರಡೂ ಇವೆ.

ಹೆಳವರು ಯಾವುದೇ ಊರಲ್ಲಿ ಬಿಡಾರ ಹೂಡುವುದು ಊರ ಹೊರಗೆ ಬಯಲಿನಲ್ಲಿ ಸಾಮಾನ್ಯವಾಗಿ ಶಾಲೆಗಳ ಅಥವಾ ಸಮುದಾಯ ಭವನಗಳ ಹಿಂದೆ ಅಥವಾ ಮಗ್ಗುಲಲ್ಲಿ ಇವರು ಠಿಕಾಣಿ ಹೂಡುತ್ತಾರೆ. ಇವರು ಇಳಿದುಕೊಳ್ಳಬೇಕಾದ ಸ್ಥಳ ತಲುಪಿದ ಕೂಡಲೇ ಮೊದಲು ಮಾಡುವ ಕೆಲಸವೆಂದರೆ ಸ್ಥಳವನ್ನು ಸ್ವಚ್ಚಮಾಡಿಕೊಳ್ಳುವುದು. ಗಾಡಿಯನ್ನು ಬಿಟ್ಟು ಹತ್ತಿರವೇ ಒಲೆ, ಸ್ವಲ್ಪ ದೂರದಲ್ಲಿ ಎತ್ತು ಕಟ್ಟುವ ಜಾಗೆ. ಹೀಗೆ ಇವರ ಸಂಸಾರವೆಲ್ಲ ಗಾಡಿಯ ಸುತ್ತಮುತ್ತಲೇ ಹರಡಿಕೊಳ್ಳುತ್ತದೆ. ಬಿಸಿಲು-ಮಳೆ, ಚಳಿಯ ರಕ್ಷಣೆಗಾಗಿ ತಾತ್ಪೂರ್ತಿಕ ಡೇರೆಯೊಂದನ್ನು ಹಾಕಲಾಗುತ್ತದೆ. ಮುಂದೆ ಸಿಂದಿಪರಕೆ, ಹರಕು ಬಟ್ಟೆಗಳನ್ನು ಹೊದಿಸಿ ಜೋಪಡಿಗಳನ್ನು ಚಾಟಿಗೆಂದು ನಿರ್ಮಿಸಲಾಗುತ್ತಿತ್ತು. ಆದರೆ ಈಗ ಗೊಬ್ಬರ ಚೀಲ ನಿರ್ಮಿತ ಹೊದಿಕೆಯಿಂದ ಅಥವಾ ಅದಕ್ಕಿಂತಲೂ ಉತ್ತಮವಾದ ಪ್ಲಾಸ್ಟಿಕ್‌ಹೊದಿಕೆಯಿಂದ ಟೆಂಟನ್ನು ನಿರ್ಮಿಸಲಾಗುತ್ತದೆ. ಗಾಡಿಯ ಮೇಲೆ ಉದ್ದಕ್ಕೂ ಬರುವಂತೆ ಸುಮಾರು ೮ ಫೂಟು ಎತ್ತರದಲ್ಲಿ ಭೂಮಿಗೆ ಸಮಾನಾಂತರ ಕೋಲನ್ನು ನಿಲ್ಲಿಸಿ ಅದರ ಮೇಲಿಂದ ಗಾಡಿಯ ಆಚೀಚೆ ಎಳೆದು ತಂದು ನಾಲ್ಕೂ ಬದಿಗೆ ಭೂಮಿಯಲ್ಲಿ ಹುಗಿದ ಕಬ್ಬಿಣದ ಛಡಿಗೆ, ಹೊದಿಕೆಯನ್ನು ಒದಗಿಸುತ್ತಾರೆ. ವಿಶೇಷವೆಂದರೆ ಈ ಟೆಂಟ್‌ಅಥವಾ ಡೇರೆ ಇಷ್ಟೊಂದು ಸುಧಾರಿಸಿದ್ದರೂ ಹೆಳವರ ಬಾಯಿಂದ ಇನ್ನೂ ಪೂರ್ವದ “ಜೋಡಪಿ” ಎಂಬ ಶಬ್ದ ಹೋಗಿಲ್ಲ.

ಹೀಗೆ ಒಂದು ಊರಲಿ ವಾಸ್ತವ್ಯ ಹೂಡಿದ ಮರುದಿನದಿಂದಲೇ ಹೆಳವರು ವಾಸ್ತವ್ಯ ಹೂಡಿದ ಊರೋ, ಸಮೀಪದ ಹಳ್ಳಿಗೋ ವೃತ್ತಿಗೆ ಹೊರಡುತ್ತಾರೆ. ಮುಂಜಾನೆ ತುಂಬ ಅವಸರವಾಗಿ ಇವರು ಸಿದ್ಧಗೊಳ್ಳುತ್ತಾರೆ. ಅಷ್ಟೇ ವೇಗದ ನಡಿಗೆಯಿಂದ ವಾಹನ ತಾಣಗಳನ್ನು ತಲುಪುತ್ತಾರೆ. ಈ ಅವರಸಕ್ಕೆ ಕಾರಣವೇನೆಂದರೆ ಎಷ್ಟು ಸಾಧ್ಯವೋ ಅಷ್ಟು ಬೇಗ ತಮ್ಮ ಒಕ್ಕಲು ಮನೆಗಳನ್ನು ತಲುಪುವುದು. ನಿಧಾನವಾದರೆ ರೈತರು ತಮ್ಮ ಉದ್ಯೋಗಗಳಿಗೆ ಹೋಗಿ ಬಿಡುತ್ತಾರೆ. ಹೀಗಾದಲ್ಲಿ ತಾವು ಹೋಗಿಯೂ ವ್ಯರ್ಥವಾಗುತ್ತದೆ. ಸಾಧ್ಯವಾದಷ್ಟು ಬೇಗನೇ ಅವರ ಮನೆಯ ಬಾಗಿಲಲ್ಲಿ ಹಾಜರಿರುವುದು ಇವರ ಗುರಿ.

ಗಂಡಸರು ಒಮ್ಮೆ ಅತ್ತ ಹೋಗಿಬಿಟ್ಟರೆ ಇಲ್ಲಿಯ ಮುಂದಿನ ಜವಾಬ್ದಾರಿಯೆಲ್ಲ ಹೆಳವ ಹೆಣ್ಣುಮಕ್ಕಳಿಗೇ ಸೇರಿದ್ದು. ಹೆಳವರು ಅಲೆಮಾರಿ ದಿನಗಳಲ್ಲಿ ಎಲ್ಲೆಲ್ಲಿ ತಾತ್ಪರ್ತಿಕವಾಗಿ ನೆಲೆಸಬೇಕೋ ಅಲ್ಲಲ್ಲಿ ತಮ್ಮ ಸಂಸಾರಕ್ಕೊಂದು ಸ್ಥಾನಿಕ ವ್ಯವಸ್ಥೆಯನ್ನು ಮಾಡಿಕೊಂಡು ಕುಟುಂಬ ವ್ಯವಸ್ಥೆಯ ಎಲ್ಲ ವಹಿವಾಟುಗಳನ್ನು ನೋಡಿಕೊಳ್ಳುವವರೇ ಹೆಳವ ಹೆಣ್ಣುಮಕ್ಕಳು. ಯಾವುದೇ ಹೊಸ ಊರಿಗೆ ಹೋದಾಗ ಗಂಡಸರು ಎತ್ತಿನ ಕೊಳ್ಳು ಹರಿದು ಗಾಡಿ ಉದ್ದಿಗೆಯನ್ನು ಭೂಮಿಗೆ ತಗುಲಿಸಿಬಿಟ್ಟರೆ ಇವರ ಜವಾಬ್ದಾರಿ ಮುಗಿಯಿತು. ಮುಂದಿನ ವ್ಯವಸ್ಥೆಯ ಬಹುಪಾಲು ನೋಡಿಕೊಳ್ಳುವವರು ಮಹಿಳೆ. ಮೊದಲು ಹಿಂದಿನ ನೆಲೆಯಿಂದ ತಂದ ಗಂಟುಗಳನ್ನು ಬಿಚ್ಚಿ ಗಾಡಿಯ ಬುಡದಲ್ಲಿ ಹೊಂದಿಸಿಕೊಳ್ಳಬೇಕು. ಒಲೆ ಹೂಡಬೇಕು, ಅಡಿಗೆ ಪದಾರ್ಥಗಳು, ವಿವಿಧ ಪಾತ್ರೆಗಳು, ಹಾಸಿಗೆ, ಹೊದಿಕೆ ಏನೆಲ್ಲವನ್ನು ಪ್ರತಿ ನೆಲೆಯಲ್ಲಿ ಹೊಂದಿಸಿಕೊಳ್ಳುವಲ್ಲಿ ಈ ಸ್ತ್ರೀಯರು ತೋರುವ ಕಾಳಜಿ ಅಸಾಧಾರಣವಾದುದು.

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಗಂಡಸಿನಂತೆ ಅವಳದೇ ಆದ ಒಂದು ವೃತ್ತಿಯಿರುವ ಸಾಧ್ಯತೆಗಳು ತುಂಬ ಕಡಿಮೆ. ವೃತ್ತಿಯೊಂದಿಗೆ ಪುರುಷ ಪ್ರತಿಷ್ಠಾಪಿಸಿಕೊಳ್ಳುವ Identity ಯನ್ನು ಸ್ತ್ರೀ ಸಾಧಿಸುವುದು ಅಪರೂಪ. ಹೀಗಾಗಿ ಪುರುಷ ಪ್ರಧಾನವಾದ ಈ ಸಮುದಾಯಗಳಲ್ಲಿ ಮಹಿಳೆಯ ಅಸ್ತಿತ್ವ ತೀರ ಗೌಣವೆಂದೇ ಭಾವಿಸಬೇಕು. ಮಹಿಳಾ ಶಿಕ್ಷಣದ ಕೊರತೆಯೇ ಈ ಗೌಣ ಅಸ್ತಿತ್ವಕ್ಕೆ ಪ್ರಮುಖ ಕಾರಣ. ಕೌಟುಂಬಿಕ ಹಿನ್ನೆಲೆಯಲ್ಲಿ ಆರ್ಥಿಕ ಸ್ವಾತಂತ್ರ್ಯ ಇವಳಿಗಿಲ್ಲ. ಇವಳ Identity ಏನಿದ್ದರೂ ಸಾಮಾಜಿಕ ಹಿನ್ನೆಲೆಯಲ್ಲಿ “ಕುಲಸ್ತ್ರೀ” ಎಂಬ ಭಾವನಾತ್ಮಕದ್ದು.

ಮಾಡುವ ಕೆಲಸದ ಹಿನ್ನೆಲೆಯಲ್ಲಿ ಹೆಳವ ಮಹಿಳೆಯರನ್ನು ಎರಡು ರೀತಿಯಾಗಿ ವಿಂಗಡಿಸಬಹುದು: ೧. ಮೂಲ ಊರು ಅಥವಾ ಮನೆಯಲ್ಲಿದ್ದು, ಹೊಲ-ಮನೆ ನೋಡಿಕೊಳ್ಳುವವರು, ೨. ಊರೂರು ಹೋಗುವ ಹೆಳವರೊಂದಿಗೆ ಹೋಗಿ ಅವರ ಉಸ್ತುವಾರಿ ನೋಡಿಕೊಳ್ಳುವವರು. ಊರಲ್ಲಿರುವ ಹೆಳವ ಸ್ತ್ರೀಯರು ಅನ್ಯ ಕೃಷಿಕ ಸಮುದಾಯದ ಸ್ತ್ರೀಯರಿಗಿಂತ ಭಿನ್ನವಾಗೇನೂ ತೋರುವುದಿಲ್ಲ. ಮುಂಜಾನ ನಸುಕಿನೊಂದಿಗೇ ಇವರ ಕಾರ್ಯಚಟುವಟಿಕೆಗಳು ಆರಂಭಗೊಳ್ಳುತ್ತವೆ. ಕಸ-ಮುಸುರೆ ಮಾಡುವುದು, ನೀರು ತರುವುದು ಇತ್ಯಾದಿ, ತರುವಾಯ ನ್ಯಾರೆ ತಯಾರಿಸುವುದು, ಅಡಿಗೆ ಮಾಡಿಕೊಂಡು ಹೊಲಕ್ಕೆ ಹೋಗುವುದು, ಅಲ್ಲಿ ಗಂಡಸರೊಂದಿಗೆ ದುಡಿಯುವುದು, ಹೊಲದಿಂದ ಮರಳಿದ ಮೇಲೆ ಮತ್ತು ಸಂಜೆಯ ಅಡಿಗೆ ಸಜ್ಜುಗೊಳಿಸುವುದು. ಇದು ದೈನಂದಿನ ಚಕ್ರ. ಇದಕ್ಕಿಂತಲೂ ಭಿನ್ನವಾದದ್ದು ಅಲೆಮಾರಿ ಮಹಿಳೆಯ ದೈನಂದಿನ ಚಟುವಟಿಕೆ. ತಮ್ಮ ಮೂಲ ಊರಿನಿಂದ ಗಾಡಿ ನಾಳೆ ಹೊರಡುವುದೆಂದರೆ ಬೇಕಾಗುವ ಪಾತ್ರೆ-ಪರಡಿಗಳನ್ನು ಸಜ್ಜುಗೊಳಿಸಿಕೊಳ್ಳುತ್ತಾರೆ. ನಿಶ್ಚಿತ ಉರನ್ನು ತಲುಪಿದ ಮೇಲೆ ತನ್ನ ನಿತ್ಯದ ಸಾಂಸಾರಿಕ ಹೊಣೆಗೆ ಹೆಗಲು ಕೊಡುತ್ತಾಳೆ. ಹೆಳವ ಪುರುಷ ಕರಾರುವಕ್ಕಾಗಿ ತನ್ನ ಕೆಲಸ ಹೆಳವಿಕೆಗೆ ಮಾತ್ರ ಎಂದು ಭಾವಿಸುತ್ತಾನೆ. ಹೀಗಾಗಿ ಇಡೀ ದಿನ ಮಹಿಳೆಯೊಬ್ಬಳೇ ನೀರು-ನಿಡಿ, ಊಟ-ಉಪಚಾರ ಎಂದು ಎಲ್ಲ ವ್ಯವಸ್ಥೆಯನ್ನೂ ನೋಡಿಕೊಳ್ಳಬೇಕು. ಅವನಿಗೆ ಚಹ ಮಾಡಿಕೊಡುವುದು, ನೀರು ಕಾಯಿಸಿಕೊಡುವುದು, ತಕ್ಕ ಮಟ್ಟಿಗೆ ನಾಷ್ಟಾದ ವ್ಯವಸ್ಥೆ ಮಾಡಿಕೊಡುವುದು ಇದೆಲ್ಲ ಒಮ್ಮೆ ಗಂಡಸು ಹೊರಗೆ ಹೋದ ಮೇಲೆ ಹೆಣ್ಣುಮಗಳು ಕ್ರಮೇಣ ಕುಟುಂಬದ ಅಂದಂದಿನ ಪೂರೈಕೆಗಾಗಿ ಶ್ರಮಿಸಬೇಕಾಗುತ್ತದೆ. ಮೊದಲು ನೀರಿನ ಸಂಗ್ರಹವಾಗಬೇಕು. ಸಮೀಪದಲ್ಲಿರುವ ನಲ್ಲಿ ಅಥವಾ ಕೆರೆ, ಭಾವಿಗೆ ಹೋಗಿ ನೀರು ಸಂಗ್ರಹಿಸಬೇಕಾಗುತ್ತದೆ. ತರುವಾಯ ತಾವು ಸ್ನಾನ ಮಾಡಿಕೊಂಡು ಗಾಡಿಯಲ್ಲಿ ಜೊತು ಹಾಕಿರುವ ದೇವರ ಫೋಟೊಗಳಿಗೆ ಪೂಜೆ ಸಲ್ಲಿಸಿ ಅಡುಗೆಗೆ ಸಿದ್ಧಗೊಳ್ಳಬೇಕು. ಮೂರು ಗುಂಡು ಕಲ್ಲುಗಳನ್ನಿಟ್ಟು ಮಾಡಿಕೊಂಡಿರುವ ತಾತ್ಪೂರ್ತಿಕ ಒಲೆಯೇ ಇವರ ಎಲ್ಲಾ ಬಗೆಯ ಆಹಾರ ಪದಾರ್ಥಗಳನ್ನು ಬೇಯಿಸಬೇಕು. ಸಾಮಾನ್ಯವಾಗಿ ಜೋಳದ ರೊಟ್ಟಿ-ಅನ್ನ ಇವರ ಪ್ರಮುಖ ಆಹಾರ. ಮೊದಲೇನೋ ಅನ್ನದ ಬದಲಾಗಿ ನುಚ್ಚು ಇರುತ್ತಿತ್ತು. ಆದರೆ ಇಂದು ಅಡುಗೆಗೆ ಸರಳವೆನಿಸಿದ ಅಕ್ಕಿ ಅನ್ನ ಇವರ ಆಹಾರ ಪದಾರ್ಥಗಳಲ್ಲಿ ಪ್ರಾಮುಖ್ಯತೆ ಪಡೆದಿದೆ. ತಮ್ಮ ಮೂಲ ಊರು ಬಿಡುವಾಗ ಐದಾರು ಸೇರು ಹಿಟ್ಟು ಕಟ್ಟಿಕೊಂಡು ಬರಲಾಗುತ್ತದೆ. ತರುವಾಯ ಒಕ್ಕಲು ಮನೆಯವರು ಕೊಡುವ ಆಹಾರ ಧಾನ್ಯಗಳೇ ಇವರ ನಿತ್ಯದ ಊಟಕ್ಕೆ ಆಸರೆಯಾಗುತ್ತವೆ. ಹೀಗೆ ಕೊಡಮಾಡುವ ಧಾನ್ಯಗಳಲ್ಲಿ ಉತ್ತರ ಕರ್ನಾಟಕದಲ್ಲಿ ಜೋಳ ಅಥವಾ ರಾಗಿಯಾಗಿದ್ದರೆ ಗಿರಣಿಗೆ ಹೋಗಿ ಹಿಟ್ಟು ಸಜ್ಜುಗೊಳಿಸಿಕೊಳ್ಳಬೇಕು. ಊರಲ್ಲಿ ಹೋದ ಹೆಳವಪ್ಪ ಮಧ್ಯಾಹ್ನದ ಊಟಕ್ಕೆ ಬರಬಹುದು. ಬರಲಿಕ್ಕಿಲ್ಲ. ಏಕೆಂದರೆ ಒಕ್ಕಲು ಮನೆಯಲ್ಲಿ ಮಧ್ಯಾಹ್ನದ ಊಟವಾಗುವ ಸಾಧ್ಯತೆಯಿರುತ್ತದೆ. ಏನಿದ್ದರೂ ಹೆಣ್ಣು ಮಗಳು ಮಧ್ಯಾಹ್ನದ ಅಡುಗೆ ಸಿದ್ಧಗೊಳಿಸಬೇಕು. ಗಂಡ ಬರದಿದ್ದರೂ ತನಗೆ, ಮಕ್ಕಳಿಗೆ ಊಟಕ್ಕೆ ಬೇಕಲ್ಲ. ಹೀಗಾಗಿ ಅಡುಗೆ ತಯಾರಾಗಬೇಕು. ಮಧ್ಯಾಹ್ನ ಬಿಡಾರಕ್ಕೆ ಹಿಂದಿರುಗಿದ ಹೆಳವಪ್ಪ ಸಾಯಂಕಾಲ ಒಕ್ಕಲು ಮನೆಗಳಿಗೆ ಹೋಗಬಹುದು. ಹೊಗದೇ ವಿಶ್ರಾಂತಿಯನ್ನೇ ತೆಗೆದುಕೊಳ್ಳಬಹುದು. ಆದರೆ ಹೆಣ್ಣುಮಕ್ಕಳಿಗೆ ಬಿಡುವೆಂಬುದಿರುವುದಿಲ್ಲ. ಮಧ್ಯಾಹ್ನದಲ್ಲಿ ಅಡುಗೆಗೆ ಬೇಕಾಗುವ ಕಟ್ಟಿಗೆ ಅಥವಾ ಕುಳ್ಳನ್ನು ಶೇಖರಿಸಿಕೊಳ್ಳಬೇಕಾಗುತ್ತದೆ. ಬಿಡಾರಕ್ಕೆ ಸಮೀಪದಲ್ಲಿರುವ ಹೊಲದ ಬದುವುಗಳಲ್ಲಿ ಸಂಚರಿಸಿ ಇವನ್ನು ಆರಿಸಿಕೊಂಡು ಬರಲಾಗುತ್ತದೆ.

ಎತ್ತಿನ ಉಸ್ತುವಾರಿಯನ್ನು ಹೆಚ್ಚು ಕಡಿಮೆ ಮಹಿಳೆಯೇ ನೋಡಿಕೊಳ್ಳಬೇಕು. ಮೊದಲಿನಂತೆ ಈಗ ಎತ್ತು ಹೆಳವನ ಸಂಗಡ ರೈತನ ಮನೆಗೆ ಹೋಗುವುದಿಲ್ಲವಾದ್ದರಿಂದ ಹೆಳವರು ಇಳಿದುಕೊಂಡಿರುವ ಸ್ಥಳದಲ್ಲಿಯೇ ಎತ್ತನ್ನು ಕಟ್ಟಿ ಉಸ್ತುವಾರಿ ನೋಡಿಕೊಳ್ಳಲಾಗುತ್ತದೆ. ಅದಕ್ಕೆ ನೀರು ಕುಡಿಸಬೇಕು, ಮೇವು ಹಾಕಬೇಕು. ಈ ಮೇವನ್ನು (ಕಣಿಕೆ) ಒಕ್ಕಲು ಮನೆಯಿಂದ ಹೆಳವನು ತಂದಿರುತ್ತಾನೆ. ಆದರೆ ವೇಳೆ ವೇಳೆಗೆ ಇದನ್ನು ಹಾಕಿ ಮೇಯಿಸುವುದು ಹೆಂಡತಿಯ ಕೆಲಸ. ಎತ್ತಲ್ಲದೇ ರೈತರು ಕೊಟ್ಟಿರುವ ಆಕಳು, ಎಮ್ಮೆಯ ಕರುಗಳು, ಆಡು, ಕುರಿ ಎಲ್ಲವೂ ಬಿಡಾರದ ಸುತ್ತಮುತ್ತ ಕಟ್ಟಲ್ಪಟ್ಟಿರುತ್ತವೆ. ಇವೆಲ್ಲವನ್ನೂ ಹೆಳವರು ತಮ್ಮ ಉರಿಗೆ ಹೊಡೆದುಕೊಂಡು ಹೋಗುವುದಿಲ್ಲ. ಹೆಚ್ಚಾಗಿ ಅಲ್ಲಲ್ಲಿಗೇ ಮಾರುತ್ತಾರೆ. ಮಾರಲಿರುವುದಕ್ಕೆ ಒಳ್ಳೆಯ ಬೆಲೆ ಬರಬೇಕು ಎಂದರೆ ಅವು ದಷ್ಟಪುಷ್ಟವಾಗಿರುವಂತೆ ನೋಡಿಕೊಳ್ಳಬೇಕು. ಹೆಳವರು ರೈತರಿಂದ ಕಾಣಿಕೆಯನ್ನು ತರಬಹುದು. ಆದರೆ ಅವರಿಂದ ಹಸಿಮೇವು ಸಿಗುವುದು ಅಪರೂಪ. ಆದ್ದರಿಂದ ಹೆಳವ ಹೆಣ್ಣುಮಕ್ಕಳು ಕಟ್ಟಿಗೆ, ಕುಳ್ಳು ತರಲು ಹೊಲದ ಕಡೆಗೆ ಹೋದಾಗ ಅವುಗಳ ಸಂಗಡ ಅಷ್ಟಿಷ್ಟು ಹಸಿ ಹುಲ್ಲನ್ನೂ ತರುವುದುಂಟು. ಒಕ್ಕಲು ಮನೆಗಳಿಂದ ಕಾಡಿ, ಬೇಡಿ ದನ-ಕರುಗಳನ್ನು ತರುವುದು ಗಂಡಸರ ಕೆಲಸವಾದರೆ, ತಮ್ಮ ಸಂಪತ್ತೆನಿಸಿದ ಅವು ಸೊರಗದಂತೆ ನೋಡಿಕೊಳ್ಳುವವಳು ಮಹಿಳೆ. ಕುಟುಂಬದ ವರಮಾನವನ್ನು ಈ ರೀತಿಯಲ್ಲಿ ತನ್ನ ಕೈಲಾದ ಮಟ್ಟಿಗೆ ಹೆಚ್ಚಿಸಬೇಕೆಂಬ ತುಡಿತ ಅವಳಲ್ಲಿರುತ್ತದೆ. ರೈತರು ಕೊಡುವ ಕಾಳು ಕಡಿಯನ್ನೆಲ್ಲ ಸ್ವಚ್ಚ ಮಾಡಿಕೊಂಡು ಚೀಲ, ಚಿಪ್ಪಡಿಗಳಲ್ಲಿ ಓರಣವಾಗಿ ಇಟ್ಟುಕೊಳ್ಳುವುದೂ ಅವರ ಕೆಲಸ. ಕಾಳು ಹೆಚ್ಚು ಕೂಡಿದ್ದರೆ ಅವನ್ನೂ ಮಾರುವುದಿದೆ. ಹೀಗೆ ಹೆಳವ ಮಹಿಳೆ ನಿರಂತರ ಕುಟುಂಬದ ಆರ್ಥಿಕ ಅಂಶಕ್ಕೂ ಸ್ಪಂದಿಸುತ್ತಾ, ಬಿಡಾರದಲ್ಲಿ ಉಳಿದಿರುವ ಮಕ್ಕಳ ಆರೋಗ್ಯ, ಹಿರಿಯರ ಆರೋಗ್ಯ ಗಮನಿಸಿ ಉಪಚರಿಸುವ ಹೊಣೆಯೂ ಮಹಿಳೆಯ ಮೇಲಿದೆ. ಕೇವಲ ಅಡಿಗೆ ಮಾಡುವುದಷ್ಟಕ್ಕೇ ಅವಳ ಕೆಲಸ ಸೀಮಿತಗೊಂಡಿಲ್ಲ. ಹಿಂದೆ ನೋಡಿದಂತೆ ಹೆಳವರಿಗಿರುವ ಅನೇಕ ಉಪವೃತ್ತಿಗಳಲ್ಲಿ ಸ್ತ್ರೀಯರದೇ ಪ್ರಧಾನ ಪಾತ್ರ. ದೂದಿ ಹೆಳವ ಸಮುದಾಯಕ್ಕೆ ಸೇರಿದ ಮಹಿಳೆಯರು ಈಚಲುಗರಿಗಳಿಂದ ಚಾಪೆ ಹಾಗೂ ಕಸಬರಿಗೆಗಳನ್ನು ಮಾಡುತ್ತಾರೆ. ಕೇವಲ ಇವುಗಳ ತಯಾರಿಕೆಯಲ್ಲ, ಇವನ್ನು ಸಮೀಪದ ಪೇಟೆಗಳಿಗೆ ಒಯ್ದು ಮಾರಾಟ ಮಾಡುವ ಕೆಲಸವನ್ನೂ ಮಹಿಳೆಯರು ನಿರ್ವಹಿಸುತ್ತಾರೆ. ಹಂದಿ ಹೆಳವರ ಸ್ತ್ರೀಯರು ಹಂದಿಯ ಕೊಬ್ಬನ್ನು ಪಾತ್ರೆಯಲ್ಲಿ ತುಂಬಿಕೊಂಡು ಹಳ್ಳಿ, ಪಟ್ಟಣಗಳಿಗೊಯ್ದು ಮಾರಾಟ ಮಾಡುತ್ತಾರಂತೆ.

ಬಹಳಷ್ಟು ಸಮುದಾಯಗಳಲ್ಲಿ ಆಯಾ ಸಮುದಾಯದ ಪ್ರಧಾನ ವೃತ್ತಿಯಲ್ಲಿಯೇ ಸ್ತ್ರೀ ಮಾಡುವ ಕೆಲಸಗಳು ಸಾಕಷ್ಟಿರುತ್ತವೆ. ಉದಾಹರಣೆಗೆ ಕೃಷಿಕರಲ್ಲಿ ಕಸ ತೆಗೆಯುವುದು, ಅಕ್ಕಡಿ ಹಾಕುವುದು, ಭತ್ತದ ನಾಟಿ ಮಾಡುವುದು, ಜೋಳ ಕೀಳುವುದು, ಹೀಗೆ ಹತ್ತಾರು ಕೆಲಸಗಳಲ್ಲಿ ಮಹಿಳೆ ಕೈಗೂಡಿಸಬಲ್ಲಳು. ಹೀಗೆ ನೇಕಾರ, ಕುಂಬಾರ ಮುಂತಾದ ಸಮುದಾಯಗಳಲ್ಲಿ ಮಹಿಳೆಗೆ ಅವಕಾಶವಿಲ್ಲ. ಮೈತುಂಬ ಕೆಲಸವುಂಟು. ಆದರೆ ಹೆಳವರ ಕುಲವೃತ್ತಿಯಲ್ಲಿ ಮಹಿಳೆಗೆ ಅವಕಾಶವಿಲ್ಲ. ಹೀಗಾಗಿ ಚಾಪೆ ಹಣೆಯುವುದು, ದೂದಿ ಮಾರುವುದು ಮುಂತಾದ ವೃತ್ತಿಗಳಲ್ಲಿ ಹೆಳವ ಮಹಿಳೆಯರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ತಮ್ಮ ಈ ಅಲೆದಾಟದಲ್ಲೂ ಹೆಳವರು ದೇವಭಾವವನ್ನು ಕಳೆದುಕೊಂಡವರಲ್ಲ. ಯುಗಾದಿ, ನಾಗಪಂಚಮಿ, ದಸರಾ, ದೀಪಾವಳಿಗಳಂಥ ಹಬ್ಬಗಳನ್ನು ಎಲ್ಲರಂತೆ ಇವರೂ ಸಡಗರದಿಂದಲೇ ಆಚರಿಸುತ್ತಾರೆ. ಈ ಹಬ್ಬಗಳಲ್ಲಿ ವಿಶೇಷ ಅಡಿಗೆ ಮಾಡುವುದರಿಂದ ಹಿಡಿದು ಪೂಜೆ ಪುನಸ್ಕಾರಗಳಿಗೆ ಸಂಬಂಧಿಸಿದ ಎಲ್ಲ ಆಚರಣೆಗಳನ್ನು ಆಚರಿಸುವಲ್ಲಿ ಈ ಮಹಿಳೆಯರು ಪ್ರಧಾನ ಪಾತ್ರವಹಿಸುತ್ತಾರೆ. ಇವರ ಸಂಚಾರದ ದಿನಗಳಲ್ಲಿ ಬರುವ ದೊಡ್ಡ ಹಬ್ಬವೆಂದರೆ ದಸರಾ. ಈ ಸಂದರ್ಭದಲ್ಲಿ ಬಂಡಿಪೂಜೆ, ಕುಡಗೋಲು ಪೂಜೆಯಲ್ಲದೇ ಅವುಗಳೊಂದಿಗೆ ಜೋಡಪಿ ಪೂಜೆಯನ್ನೂ ಮಾಡಲಾಗುತ್ತದೆ. ಎಲ್ಲವನ್ನೂ ಒಳಗೊಂಡಂತೆ ಇದಕ್ಕೆ “ಹತಾರ ಪೂಜೆ”ಯೆಂದು ಕರೆಯಲಾಗುತ್ತದೆ. ಈ ಪೂಜೆಯನ್ನು ತಮ್ಮ ತಮ್ಮ ಗಾಡಿಬುಡದಲ್ಲಿಯೇ ನಡೆಸುತ್ತಾರೆ.

ಹೆಳವ ಮಹಿಳೆ : ಸಂಪ್ರದಾಯದ ಚೌಕಟ್ಟಿನಲ್ಲಿ

ಹೆಳವ ಜನಾಂಗದ ಕೌಟುಂಬಿಕ ಹಿನ್ನೆಲೆಯಲ್ಲಿ ಅವರವೇ ಆದ ಸಂಪ್ರದಾಯ-ಆಚರಣೆಗಳುಂಟು. ನಮ್ಮ ದೇಶದ ಬಹುತೇಕ ಸಮುದಾಯಗಳಂತೆ ಹೆಳವ ಜನಾಂಗದ ಕೌಟುಂಬಿಕ ಸಂಪ್ರದಾಯಗಳು ಕೂಡ ಮಹಿಳೆಯರಿಗೇ ಅಂಟಿಕೊಂಡಿವೆ. ಈ ಸಂಪ್ರದಾಯ ಆಚರಣೆಗಳನ್ನು ಮಹಿಳೆಯರು ಕೇವಲ ಕರ್ತವ್ಯ ಭಾವದಿಂದ ನಿಭಾಯಿಸುವುದಿಲ್ಲ. ಅವರಿಗೆ ಅದರಲ್ಲಿ ಸಂತೋಷವಿದೆ. ಸಡಗರವಿದೆ. ಹೆಳವರು ಊರಿಂದೂರಿಗೆ ಅಲೆಯುತ್ತಿರುವುದರಿಂದ ಗಂಡಸರು ಹಗಲು ಹೊತ್ತೆಲ್ಲ ತಮ್ಮ ವೃತ್ತಿಗೆಂದು ಹೋಗಿರುವುದರಿಂದ ತಾವಷ್ಟೇ ಜೋಡಪಿಯಲ್ಲಿದ್ದುಕೊಂಡು ದೈನಂದಿನ ಬದುಕಿನ ಎಲ್ಲ ಹೊರೆ ಹೊರಬೇಕಾಗಿರುವುದರಿಂದ ಅವರ ವ್ಯಕ್ತಿತ್ವದಲ್ಲಿ ಏನುಬಂದರೂ ನಿಸ್ತರಿಸುವ ಶಕ್ತಿ-ಗುಣ ಸ್ವಾಭಾವಿಕವಾಗಿ ಬಂದುಬಿಡುತ್ತದೆ. ಚಳಿ-ಮಳೆ-ಗಾಳಿಗಳನ್ನೆದುರಿಸುತ್ತಲೇ ಇರುವ ಸೀಮಿತ ಅವಕಾಶಗಳಲ್ಲಿ ಕೌಟುಂಬಿಕ, ಸಾಮಾಜಿಕ ಸಂಪ್ರದಾಯಗಳನ್ನು ಅವರು ನಿರಂತರ ರೂಢಿಸಿಕೊಂಡು ಬಂದಿರುವುದನ್ನು ನೋಡಿದರೆ ಎರಡು ಅಂಶಗಳು ನಮಗೆ ಸ್ಪಷ್ಟವಾಗುತ್ತವೆ. ೧. ನಿತ್ಯದ ಜಂಜಾಟದ ಮಧ್ಯದಲ್ಲಿಯೂ ಇವರ ಬದುಕಿನಲ್ಲಿ ಸಂಪ್ರದಾಯಗಳು ಆಳವಾಗಿ ಬೇರುಬಿಟ್ಟ ಬಗೆ. ೨. ಸಂಪ್ರದಾಯ ಆಚರಣೆಗಳ ವಿಷಯದಲ್ಲಿ ಮಹಿಳೆಯರು ಇರಿಸಿಕೊಂಡುಬಂದಿರುವ ಪ್ರೀತಿ. ಅದೇ ಸಂಚಾರ, ಅದೇ ಹಬ್ಬ, ಅದೇ ಹೆರಿಗೆ, ಅದೇ ಮಕ್ಕಳ ಪೋಷಣೆ ಈ ಉರುಳು ಚಕ್ರ ಆಧುನಿಕ ಕಣ್ಣಿಗೆ ರೂಢಿ ಮೌಢ್ಯವಾಗಿ ಕಾಣಬಹುದು. ಆದರೆ ಬಹುಕಾಲದ ಅಲೆಮಾರಿ ಬದುಕಿಗೆ ಹೊಂದಿಕೊಂಡು ಬಾಳುತ್ತಿರುವ ಹೆಳವ ಮಹಿಳೆಗೆ ಅದೇ ಬದುಕು. ಸ್ವಾರಸ್ಯ ಏನೆಲ್ಲ!

ಹೆಳವರ ಬಹಳಷ್ಟು ಸಂಪ್ರದಾಯಗಳು ಲಿಂಗಾಯತ ಅಥವಾ ಕುರುಬರ ಸಂಪ್ರದಾಯಗಳನ್ನೇ ಹೋಲುತ್ತವೆ. ಇವರ ಅಲೆಮಾರಿ ಬಾಳಿಗೆ ಅನಿವಾರ್ಯವಾಗಿ ಇರಬಹುದು. ಅಲ್ಲೊಂದು ಇಲ್ಲೊಂದು ಸಂಗತಿಗಳು ಬೇರೆಯಾಗಬಹುದು.

ಜನನ: ಹೆರಿಗೆ ಸಂದರ್ಭದಲ್ಲಿ ತಾವು ತಾವೇ ಕೂಡಿ ಬಂದಿರುವ ಕುಟುಂಬದ ಮಹಿಳೆಯರು ಸಹಾಯಕವಾಗಿರುತ್ತಾರೆ. ಎಂತಹ ಕಠಿಣ ಹೆರಿಗೆಯಾದರೂ ನಿಸ್ತರಿಸುವ ಮಟ್ಟಿಗೆ ಇವರು ಪರಿಣಿತರಾಗಿತ್ತಾರೆ. ಅಥವಾ ಅನಿವಾರ್ಯ ಪರಿಸ್ಥಿತಿ ಅವರಿಗೆ ಈ ಮನೋಧೈರ್ಯವನ್ನು ತಂದುಕೊಟ್ಟಿರುತ್ತದೆ. ಮೊದಲಂತೂ ದವಾಖಾನೆಗಳ ವಿಶೇಷ ಸೌಲಭ್ಯವಿರಲಿಲ್ಲ. ಇತ್ತೀಚೆಗೆ ತೀರ ಅನಿವಾರ್ಯ ಪ್ರಸಂಗಗಳಲ್ಲಿ ಸಮೀಪದ ವೈದ್ಯರ ಅಥವಾ ಆಸ್ಪತ್ರೆಯ ಸಹಾಯವನ್ನಿವರು ಪಡೆಯುತ್ತಾರೆ.

ಕೂಸು ಹುಟ್ಟಿದ ಮೂರನೆಯ ದಿನಕ್ಕೆ ಕೊಂತಿ ಪೂಜೆಯನ್ನು ಮಾಡಲಾಗುತ್ತದೆ. ಪೂಜೆಯ ಸಂದರ್ಭದಲ್ಲಿ ಜಾತೇಲಿ, ಸೂಜಿ, ಕ್ಯಾರ ಎಲ್ಲವನ್ನು ಮುಂದಿಟ್ಟುಕೊಂಡಿರುತ್ತಾರೆ. ಪೂಜೆಯ ಒಂದಂಗವಾಗಿಯೇ ಚರಿಗೆಯಲ್ಲಿ ನೀರು ಹಾಕಿ ಅದರಲ್ಲಿ ಗಣಕೋಳಿ (ದಂಟಿನ ತುಂಡು) ಇಡಲಾಗುವುದು. ಕೊಂತಿ ಪೂಜೆಯ ಸಂದರ್ಭದಲ್ಲಿ ವಿಶೇಷ ಅಡುಗೆಯೇನಿರುವುದಿಲ್ಲ.

ಕೂಸು ಹುಟ್ಟಿದ ೯ ಅಥವಾ ೧೫ ದಿನಕ್ಕೆ ಹೆಸರಿಡುವ ಕಾರ್ಯಕ್ರಮ ಜರುಗಿಸಲಾಗುತ್ತದೆ. ಕೂಸಿಗೆ ಹೆಸರಿಡುವವಳು ಕೂಸಿನ ಸೋದರತ್ತೆ. ತಮ್ಮೊಂದಿಗಿರುವ ಗುಂಪುಗಳಲ್ಲಿ ಸೋದರತ್ತೆ ಇದ್ದರೆ ಸರಿ, ಇರದಿದ್ದರೆ ಅವಳು ಸದ್ಯಕ್ಕೆ ವಾಸವಾದ ಊರಿಗೆ (ಬಿಡಾರಕ್ಕೆ) ಹೇಳಿಕಳಿಸಲಾಗುತ್ತದೆ. ಅವಳು ಅಲ್ಲಿಂದ ಹೆಸರಿಡಲು ಬರುತ್ತಾಳೆ. ಗಾಡಿಯ ಕೆಳಗೇ ತೊಟ್ಟಿಲನ್ನು ಕಟ್ಟಲಾಗುತ್ತದೆ. ಸೋದರತ್ತೆ ಇವರ ಎಲ್ಲ ದೇವರ ಹೆಸರುಗಳನ್ನು ಮೊದಲು ಕೂಸಿನ ಕಿವಿಯಲ್ಲಿ ಹೇಳುತ್ತ ಪ್ರತಿಸಲುವೂ “ಕುರ‍್ರ” ಎನ್ನುತ್ತಾಳೆ. ಕರೆಯಬೇಕೆಂದಿರು ಹೆಸರನ್ನು ಕೊನೆಯಲ್ಲಿ ಹೇಳಲಾಗುತ್ತದೆ. ಈ ಸಮಯದಲ್ಲಿ ಎಲ್ಲರಿಗೂ ಗುಗ್ಗರಿ ಹಂಚಲಾಗುತ್ತದೆ. ಹೆಸರಿಡುವ ಸಂದರ್ಭದಲ್ಲಿ ಕೂಸನ್ನು ತೊಟ್ಟಿಲ ಬುಡದಲ್ಲಿ ಹಾಸಿ ಆಚೀಚೆ ತೆಗೆದುಕೊಳ್ಳುವ ಪದ್ಧತಿ ಹೆಳವರಲ್ಲಿಯೂ ಉಂಟು. ಈ ಸಂದರ್ಭದಲ್ಲಿ ಊಟಕ್ಕೆ ಸಜ್ಜಕ, ಹುಗ್ಗಿ, ಹೋಳಿಗೆ ಮಾಡಲಾಗುತ್ತದೆ. ಅನುಕೂಲವಿದ್ದವರು ಬುಂದೆ ತರಬಹುದು. ಹೆಸರಿಡಲು ಬಂದ ಸೋದರತ್ತೆಗೆ ಹೊಸ ಸೀರೆ, ಜಂಪರುಗಳನ್ನು ಕಾಣಿಕೆಯಾಗಿ ಕೊಡಲಾಗುತ್ತದೆ.

ಕೂಸಿಗೆ ತಿಂಗಳು ಅಥವಾ ಮೂರು ತಿಂಗಳು ತುಂಬುವ ಹೊತ್ತಿಗೆ ಸೆಟಗವ್ವನಿಗೆ ಮಾಡಲಾಗುತ್ತದೆ. ಅಂದಿನ ಅಡುಗೆಯ ಪದ್ಧತಿ ಎಲ್ಲ ಬೆಡಗಿನವರಲ್ಲಿ ಒಂದೇ ಬಗೆಯಾಗಿಲ್ಲ. ಕೆಲವು ಬೆಡಗಿನವರು ಅಂಬಲಿ-ಕಿಚಡಿ ಮಾಡುತ್ತಾರೆ. ಇನ್ನು ಕೆಲವು ಬೆಡಗಿನವರು “ಬ್ಯಾಟಿ” ಮಾಡುತ್ತಾರೆ.

ಋತುಶಾಂತಿ: ಹೆಳವರು ಸಂಚಾರ ಬಂದಲ್ಲಿ ಹುಡುಗಿಯೊಬ್ಬಳು ದೊಡ್ಡವಳಾದರೆ ಆಗಲೂ ಸಂಪ್ರದಾಯ, ಆಚರಣೆಗಳನ್ನು ನಿರ್ವಹಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಂಡಿಯ ಸುತ್ತಲೂ ಚಾಟುಮಾಡಿ ಹುಡಿಗಿಯನ್ನು ಕೂಡ್ರಿಸಲಾಗುತ್ತದೆ. ಹುಡುಗಿಯನ್ನು ಬಹಳಷ್ಟು ಜನ ೯ ಅಥವಾ ೧೧ ದಿನಗಳ ಕಾಲ ಕೂಡ್ರಿಸುತ್ತಾರೆ. ಕೆಲವರು ೧೫ ದಿನಗಳ ಕಾಲ ಪಾಲಿಸುವುದಿದೆ. ಅಷ್ಟು ದಿನಗಳ ಕಾಲ ಹುಡುಗಿಗೆ ಸಿಹಿ ಅಡುಗೆ ಉಣ್ಣಿಸುವುದಿದೆ. ಈ ಅಡುಗೆಯನ್ನು ಮನೆಯವರೇ ಮಾಡಬಹುದು. ಅಥವಾ ಸಂಬಂಧಿಕರು ಮಾಡಿ ತರಬಹುದು. ಸುದ್ದಿಯನ್ನು ಬೀಗರಾದವರಿಗೆ ಹೇಳಿಕಳಿಸುವುದುಂಟು. ಕೆಲವರು ಹೇಗೋ ಸುದ್ದಿ ಹತ್ತಿ ತಮ್ಮ ಬಿಡಾರಗಳಿಂದ ಬರಬಹುದು. ಹೀಗೆ ಬಂದವರು ಹಿಟ್ಟು, ಅಕ್ಕಿ, ಬೇಳೆ, ಬೆಲ್ಲ ಎಂದು “ಹಿಟ್ಟಕ್ಕಿ”ಯಲ್ಲದೆ ಕೊಬ್ಬರಿಯನ್ನೂ ತಂದಿರುತ್ತಾರೆ. ಬಂದವರು ಹುಡುಗಿಗೆ ಸೀರೆ, ಜಂಪರು ಆಹೇರ ಮಾಡುವುದುಂಟು. ಹುಡುಗಿಯನ್ನು ಎಬ್ಬಿಸುವ ದಿನ ಎಲ್ಲರಿಗೂ ವಿಶೇಷ ಸಿಹಿ ಊಟ ಉಂಟು.

ಮದುವೆ: ಮದುವೆಯೆನ್ನುವುದು ವ್ಯಕ್ತಿ ಜೀವನದಲ್ಲಿ ಮಹತ್ವದ ಘಟ್ಟವಾದರೂ ಆಯ್ಕೆಯ ಸ್ವಾತಂತ್ರ್ಯ ಹೆಣ್ಣಿಗಿಲ್ಲ. ಹಿರಿಯರು ಯಾವ ವರನನ್ನು ಆರಿಸುತ್ತಾರೋ ಅವನನ್ನೇ ಮದುವೆಯಾಗಬೇಕು. ಶಿಕ್ಷಣದ ಅವಕಾಶವಿಲ್ಲದ ಅಲೆಮಾರಿ ಬದುಕಿನಲ್ಲಿ ಸ್ವಾತಂತ್ರ್ಯದಮಾತನಾಡುವುದು ಅವಳ ವಿಚಾರಕ್ಕೆ ನಿಲುಕದ್ದು, ವ್ಯಕ್ತಿತ್ವಕ್ಕೆ ಮೀರಿದ್ದು. ಹುಡುಗಿಯೊಬ್ಬಳು ಮದುವೆಯ ವಯಸ್ಸಿಗೆ ಬರುತ್ತಿದ್ದಂತೆ ಕುಟುಂಬದಲ್ಲಿ ವರನ ಆಲೋಚನೆ ಆರಂಭವಾಗುತ್ತದೆ. ಈ ಕುಟುಂಬದ ಪರಿಚಯವಿರುವ ಅಥವಾ ಆಪ್ತರೇ ಆಗಿರುವ ಗಂಡಿನ ಕಡೆಯ ಇನ್ನೊಂದು ಕುಟುಂಬದ ಹಿರಿಯರು ಆ ಹುಡುಗಿಯ ಮೇಲೆ “ನೆದರು” ಇಟ್ಟಿರಬಹುದು. ಹೀಗಿರುವಲ್ಲಿ ಗಂಡಿನ ಕಡೆಯವರೇ ಹೆಣ್ಣಿನವರಲ್ಲಿಗೆ ಬಂದು ಮದುವೆಯ ಪ್ರಸ್ತಾಪ ಮಾಡುವುದುಂಟು. ಇನ್ನು ಕೆಲವು ಸಲ ಅನ್ಯರ ಮುಖಾಂತರ ಹೆಣ್ಣಿನವರೇ ಬೀಗತನ ಮಾಡುವ ಆಸೆಯನ್ನು ವ್ಯಕ್ತಪಡಿಸಬಹುದು. ಮದುವೆಗೆ ಮೊದಲು ಪ್ರಸ್ತಾಪಕ್ಕೆ ಬರುವುದು ಬೆಡಗು. ಭಿನ್ನ ಬೆಡಗಿನವರಲ್ಲಿ ಮಾತ್ರ ಪರಸ್ಪರ ಮದುವೆಗೆ ಅವಕಾಶವಿದೆ. ಮದುವೆಯ ಮಾತುಕತೆಗಳು ಆಯಾ ಕುಟುಂಬಗಳು ಎಲ್ಲೆಲ್ಲಿ ಬಿಡಾರ ಹೂಡಿರುತ್ತವೆಯೋ ಅಲ್ಲಲ್ಲೆ ನಡೆಯುತ್ತವೆ. ಪರಸ್ಪರ ಮಾತುಕತೆಗಳಾದ ಮೇಲೆ, ಎಲ್ಲ ಹೊಂದಾಣಿಕೆಯಾಗುವುದೆಂದು ಅನ್ನಿಸಿದ ಮೇಲೆ ಒಂದು ನಿಶ್ಚಿತ ದಿನದಂದು ಹೆಣ್ಣಿನ ಮನೆಗೆ ಹೋಗಿ ಹೆಣ್ಣು ಗಟ್ಟಿ ಮಾಡಲಾಗುತ್ತದೆ. ಇದು ಮದುವೆಗೆ ಮುಂಚೆ ತಿಂಗಳೋ ವರ್ಷಾರು ತಿಂಗಳೋ  ಮೊದಲೇ ನಡೆಯುತ್ತದೆ. ನಿಶ್ಚಯದ ದಿನ, ಮದುವೆಯ ಮಾತುಕತೆ ಮುಗಿದುದರ ಸಂಕೇತವಾಗಿ ವೀಳ್ಯೆ ಹಂಚಲಾಗುವುದು. ವೀಳ್ಯ ಹಂಚುವುದೆಂದರೆ ಮಾತುಕತೆಗೆ ಕೂಡಿದವರೆಲ್ಲರಿಗೆ ಎಲೆ-ಅಡಿಕೆ ಕೊಡುವುದು. ಆಗ ಹುಡುಗಿಗೆ ಹೊಸ ಸೀರೆ, ಬಳೆ ಮಾಡುವ ಎಲ್ಲ ಪದ್ಧತಿಗಳನ್ನು ಮಾಡಲಾಗುವುದು. ಮುಂದೆ ಅನುಕೂಲವಾದ ಒಂದು ದಿನವನ್ನು ಮದುವೆಗೆ ನಿಶ್ಚಯಿಸಲಾಗುವುದು. ಮದುವೆಯನ್ನು ಇಂಥಲ್ಲಿಯೇ ಮಾಡಬೇಕೆಂಬ ನಿಯಮವೇನಿಲ್ಲ. ಅದು ಮೂಲ ಊರಲ್ಲಾಗಬಹುದು. ಹೆಳವಿಕೆಗೆ ಹೋದಲ್ಲಿ ಜೋಪಡಿಯೊಂದರಲ್ಲಾಗಬಹುದು. ಅಥವಾ ಆ ಊರಿನ ಯಾವುದಾದರೊಂದು ಗುಡಿಯಲ್ಲಾಗಬಹುದು.

ಮದುವೆಯನ್ನು ಸಂಪ್ರದಾಯಬದ್ಧವಾಗಿಯೇ ಮಾಡಲಾಗುವುದು. ಮದುವೆಯನ್ನು ಮನೆ ಅಥವಾ ಜೋಪಡಿ ಎದುರಲ್ಲಿ ಜರುಗಿಸುವುದೆಂದಾದರೆ ಮುಂಚಿತವಾಗಿ ಹಂದರ ಹಾಕಲಾಗುವುದು. ಮೊದಲೆಲ್ಲ ತೆಂಗಿನಗರಿ, ಮಾವಿನ ತಳಿರು, ಹುಲುಲಿ ತಪ್ಪಲ ತಂದು ಹಂದರ ಹಾಕಲಾಗುತ್ತಿತ್ತು. ಈಗ ಪೆಂಡಾಲ್‌ಬಂದಿದೆ. ಮದುವೆಗೆ ೨-೩ ದಿನ ಮುಂಚಿತವಾಗಿ ದೇವಕಾರ್ಯ ಮಾಡಲಾಗುವುದು. ದೇವತಾ ಕಾರ್ಯಕ್ಕೇನೂ ಬೀಗರು, ಬಿಜ್ಜರನ್ನು ಕರೆಯಲಾಗುವುದಿಲ್ಲ. ತಾವು ಎಷ್ಟು ಕುಟುಂಬದವರು ಅಲ್ಲಿ ಬಿಡಾರ ಹೂಡಿರುತ್ತಾರೊ ಅಷ್ಟೇ ಜನ ಆಗ ಹಾಜರಿರುತ್ತಾರೆ. ದೇವತಾ ಕಾರ್ಯದ ದಿನ ಮರಿಬ್ಯಾಟಿಯ ಮಾಂಸದಡಿಗೆ, ಹೋಳಿಗೆ ಎರಡನ್ನೂ ಮಾಡಲಾಗುವುದು.

ಅಲೆಮಾರಿಗಳಾದ ಹೆಳವರಲ್ಲಿ ಮದುವೆ ತುಂಬ ಸಂಕ್ಷಿಪ್ತವಾಗಿರುತ್ತದೆ. ಇತ್ತೀಚೆಗೆ ಇವರಲ್ಲಿಯೂ ಲಗ್ನ ಪತ್ರ ಛಾಪಿಸುವುದು ರೂಢಿಗೆ ಬಂದಿದೆ. ಸಂಬಂಧಿಕರು ಇದ್ದಲ್ಲಿಗೆ ಹೋಗಿ ಲಗ್ನಪತ್ರ ಕೊಟ್ಟು ಆಮಂತ್ರಿಸಲಾಗುತ್ತದೆ. ವಿವರವಾಗಿ, ವೈಭವಯುತವಾಗಿ ಲಗ್ನ ಮಾಡಲು ಇಲ್ಲಿ ಅನುಕೂಲತೆಗಳಿರುವುದಿಲ್ಲ. ಒಂದೇ ದಿನದ ಮದುವೆ, ಎಲ್ಲ ಕಾರ್ಯಕ್ರಮಗಳು ಅವಸರವಸರವಾಗಿ ನಡೆಯುತ್ತವೆ. ಬೀಗರು ಬಂದಾಗ ಆಚೆ ಈಚೆ ಐದೈದು ಮಂದಿಯನ್ನು ಕೂಡಿಸಿ ಇದಿರುಗೊಳ್ಳಲಾಗುತ್ತದೆ. ಪರಸ್ಪರ ವಿಭೂತಿ, ಕುಂಕುಮ ಹಚ್ಚುತ್ತಾರೆ. ಇದಿರುಗೊಳ್ಳುವುದಾದ ಮೇಲೆ ಅರಿಷಿಣ ಹಚ್ಚಿ, ಸುರಗಿ ನೀರು ಹಾಕಿ, ಅಕ್ಕಿ ಕಾಳು ಒಗೆಯಲಾಗುತ್ತದೆ. ಮದುವೆ ಸಂದರ್ಭದ ಎಲ್ಲ ಆಚರಣೆಗಳೂ ಮುಗಿಯಬೇಕು. ಮದು ಮಕ್ಕಳು ಹಿರಿಯರು ಹೇಳ್ಹೇಳಿದಂತೆ ಕೇಳುತ್ತ ಹೋಗಬೇಕು. ಅವರಿಗೆ ನಾಚಿಕೊಳ್ಳಲೂ ಬಿಡುವಿರುವುದಿಲ್ಲ. ಊಟವಾದ ಮೇಲೆ ಮದುವೆ ಮುಗಿಯಿತು. ಮದುವೆಯಲ್ಲಿ ಹೆಣ್ಣು ಗಂಡಿನ ಬೀಗರು ಪರಸ್ಪರ ಆಹೇರು ಮಾಡುತ್ತಾರೆ. ಬೀಗರಾಗುವವರೂ ಆಹೇರು ಮಾಡುತ್ತಾರೆ. ಹೆಣ್ಣಿನ ಕಡೆಯವರು ತಮ್ಮ ಯೋಗ್ಯತಾನುಸಾರ “ಸುರಗಿ ಸಾಮಾನು” ಕೊಡುತ್ತಾರೆ. ಇರುವ ಬಿಡಾರದಿಂದಲೇ ಹೆಣ್ಣು ಮಗಳು ಗಂಡನ ಮನೆಗೆ-ಗಂಡನಿರುವ ಬಿಡಾರಕ್ಕೆ ಹೋಗುತ್ತಾಳೆ. ಅಂದೇ ಹೋಗಬೇಕೆಂಬ ನಿಯಮವೇನಿಲ್ಲ. ಕೆಲವು ದಿನಗಳಾದ ಮೇಲೂ ಅವಳನ್ನು ಗಂಡನ ಮನೆಗೆ ಕಳಿಸಬಹುದು. ಅದು ಅವರವರ ಅನುಕೂಲತೆಯನ್ನವಲಂಬಿಸಿದೆ.

ಹಾವೇರಿ ಜಿಲ್ಲೆಯ ಸೋಮಸಾಗರದ ಸುತ್ತಮುತ್ತ ಮದುವೆ ಸಂದರ್ಭದಲ್ಲಿ ಅಕ್ಕಿ ಕಾಳಿನ ಹಿಂದಿನ ದಿನ ರೂಢಿಯಲ್ಲಿರುವ ಎಲೆ ಹಂಚುವ ಕಾರ್ಯಕ್ರಮ ವಿಶಿಷ್ಟವಾದುದು. ಇದು ಒಂದೂರಲ್ಲಿ ಸ್ಥಿರವಾಗಿ ನಿಂತಿರುವ ಹೆಳವ ಸಮುದಾಯದ ಪದ್ಧತಿ. ಅಕ್ಕಿ ಕಾಳಿನ ಹಿಂದಿನ ಸಂಜೆ ಮದುವೆ ಮನೆಯವರು ಇಡೀ ಊರ ಮಂದಿಯನ್ನು ಕರೆಸುತ್ತಾರೆ. ಮೂರು-ನಾಲ್ಕುನೂರು ಪುಟದ ನೋಟ್‌ಬುಕ್ಕಿನಲ್ಲಿ ಯಾರು ಯಾರಿಗೆ ಎಲೆ ಕೊಡಬೇಕೆನ್ನುವುದನ್ನೆಲ್ಲ ಬರೆದಿಡಲಾಗಿದೆ. ಅದರ ಪ್ರಕಾರ ಹೇಳಿಕಳಿಸಿದಂತೆ ಜನರೆಲ್ಲ ಮದುವೆ ಮನೆಗೆ ಹಾಜರಾಗುತ್ತಾರೆ. ಮೊಟ್ಟಮೊದಲು ಬ್ರಾಹ್ಮಣರು, ಆಯಗಾರರು-ಬಡಿಗೇರರು, ಕುಂಬಾರರು, ಬಳೆಗಾರರು, ಗೌಡರು ಇಂಥವರಿಗೆಲ್ಲ ಎಲೆ ಹಂಚಲಾಗುತ್ತದೆ. ಈ ಸಂಪ್ರದಾಯದಲ್ಲಿ ಒಂದು ಸಾವಿರ ಎಲೆ, ಒಂದು ಕಿಲೋ ಅಡಿಕೆ ಒಟ್ಟಾರೆ ಬಂದವರಿಗೆಲ್ಲ ಸಾಲುವಷ್ಟು ೧೨೦ ರೂಪಾಯಿ, ಇವನ್ನೆಲ್ಲ ಗಂಡಿನವರೇ ವ್ಯವಸ್ಥೆ ಮಾಡಬೇಕು. ಎಲೆ-ಅಡಿಕೆ ಸ್ವೀಕರಿಸಬೇಕು. ಒಬ್ಬರಿಗೆ ಒಂದು ಅಡಿಕೆ ಎರಡು ಎಲೆ-ಮುಂದಿ ಬಹಳವಿದ್ದರೆ ಒಂದೇ ಎಲೆ. ಎಲ್ಲರದೂ ಮುಗಿದ ಮೇಲೆ ಹೆಳವರದು ಪ್ರಾರಂಭಿಸುತ್ತಾರೆ. ಮೊದಲು ಆ ಊರಿನ ಬೇರೆ ಬೇರೆ ಬೆಡಗಿನ ಬಹಳ ಜನರಿದ್ದರೆ ಎಲ್ಲರಿಗೂ ಎಲೆ ಕೊಡುವುದಿಲ್ಲ. ಒಬ್ಬನಿಗೇ ಹಿರಿಯನನ್ನು ನೋಡಿ ಕೊಡಲಾಗುತ್ತದೆ. ಊರವರು ಮುಗಿದ ಮೇಲೆ ಪರವೂರಿನವರಿಗೆ ಎಲೆ ಹಂಚುವುದೂ ಇದೆ. ಆಗಲೂ “ನಿಂದು ಯಾವ ಬೆಡಗು?” ಎಂದು ಕೇಳಿಯೇ ಎಲೆ ಹಂಚಲಾಗುತ್ತದೆ. ಒಂದೇ ಬೆಡಗಿನವರು ಬೇರೆ ಬೇರೆ ತಳ (ಸ್ಥಳ)ದಲ್ಲಿದ್ದರೆ ಎಲ್ಲರಿಗೂ ಎಲೆ ಕೊಡಲ್ಪಡುತ್ತವೆ. ಇದೇ ರೀತಿ ಮದುವೆಗೆ ಹಿಂದಿನ ದಿನ ಬಂದವರಿಗೂ ಎಲೆ ಅಡಿಕೆ ಕೊಡುತ್ತಾರೆ. ಇದೇ ಸಂದರ್ಭದಲ್ಲಿ ನೆರೆದ ಎಲ್ಲರಿಗೂ ಸಕ್ಕರಿ ಹಂಚುವ ಸಂಪ್ರದಾಯವೂ ಉಂಟು. ಇದೆಲ್ಲ ಮುಗಿದ ಮೇಲೆ ಲಗ್ನದ ಮುಂದಿನ ಕಾರ್ಯಕ್ರಮಗಳು ಪ್ರಾರಂಭಗೊಳ್ಳುತ್ತವೆ.

ಇತ್ತೀಚೆಗೆ ಕರ್ನಾಟಕದ ಎಲ್ಲ ಪ್ರದೇಶಗಳ ಹೆಳವರಲ್ಲಿ ಮದುವೆ ಸಂದರ್ಭದ ಆಚರಣೆಗಳು ಅತ್ಯಂತ ಶೀಘ್ರಗತಿಯಲ್ಲಿ ಬದಲಾವಣೆಗೊಳ್ಳುತ್ತಿವೆ. ಮುಖ್ಯವಾಗಿ ಲಿಂಗಾಯುತ ಸಮಾಜದ ಸ್ವಾಮಿಗಳೊಬ್ಬರನ್ನು ಕರೆಯಿಸಿಕೊಂಡು ಅವರ ಸಮ್ಮುಖದಲ್ಲಿ ಮದುವೆ ಜರುಗಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಸ್ಥಿರ ಊರಲ್ಲಿ ಇರುವ ಹೆಳವರಿಗೆ ಇದು ಅತ್ಯಂತ ಸರಳ. ಯಾಕೆಂದರೆ ಎಂಥ ಚಿಕ್ಕ ಊರಲ್ಲಿಯೂ ಒಬ್ಬರು ಸ್ವಾಮೀಜಿಗಳು ಸಿಕ್ಕೇ ಸಿಗುತ್ತಾರೆ. ಆದರೆ ಊರಿಂದೂರಿಗೆ ಅಲೆಯುವವರಿಗೆ ಹೀಗೆ ಒಮ್ಮೆಲೇ ದೊರೆಯುವುದು ಕಷ್ಟವಾದರೂ ತಾವು ಇಳಿದುಕೊಂಡ ಗ್ರಾಮದಲ್ಲಿ ಸ್ವಾಮಿಗಳ ಪತ್ತೆಹಚ್ಚಿ ಅವರನ್ನು ಆಹ್ವಾನಿಸುವುದು ತೀರ ಕಷ್ಟದ ಕೆಲಸವೇನೂ ಅಲ್ಲ. ವಂಶಾವಳಿ ಹೇಳುತ್ತ ಊರಿಂದೂರಿಗೆ, ಮನೆಯಿಂದ ಮನೆಗೆ ಸದಾ ಸಂಚರಿಸುವ ಇವರಿಗೆ ಯಾವ ಯಾವ ಓಣಿಯಲ್ಲಿ ಸ್ವಾಮಿಗಳಿದ್ದಾರೆ. ಯಾರು ಸುಲಭವಾಗಿ ಲಭ್ಯವಾಗಬಲ್ಲರು ಎಂಬ ವಿಷಯಗಳೆಲ್ಲ ತಿಳಿದೇ ಇರುತ್ತವೆ. ಲಗ್ನದ ಒತ್ತಡದ ದಿನಗಳಲ್ಲಿ ಸ್ವಾಮಿಗಳಿಗೂ ಇವರಿಗೂ ದಿನದ ಹೊಂದಾಣಿಕೆಯಾಗಬೇಕು ಅಷ್ಟೇ. ಇದೇ ಸಂಪ್ರದಾಯ ವ್ಯವಸ್ಥೆ ಹೆಳವ ಸಮಾಜದಲ್ಲಿ ಈಗೀಗ ದಟ್ಟವಾಗುತ್ತಿದೆ.

ಆದರೆ ಹೆಳವ ಸಮಾಜದ ಅನೇಕ ಹಿರಿಯರು ಹೇಳುವಂತೆ ಹೆಳವ ಸಮಾಜಕ್ಕೇ ವಿಶೇಷವೆನ್ನಬಹುದಾದದ್ದು “ಪಟ್ಟದವನ” ವಿಷಯ. ಹಿಂದಿನ ದಿನಗಳಲ್ಲಿ ಸ್ವಾಮಿಗಳನ್ನು ಕರೆಸುತ್ತಲೇ ಇರಲಿಲ್ಲವಂತೆ. ಆದರೂ ಹಿರಿಯನೊಬ್ಬನ ಹಿರಿತನದಲ್ಲಿ ಮದುವೆಯ ಕ್ರಿಯಾಚರಣೆಗಳೆಲ್ಲ ನೆರವೇರುತ್ತಿದ್ದವು.  ಆ ಹಿರಿಯನೇ “ಪಟ್ಟದವ” ಬೀಗತನವಾಗುವಾಗ ಗಂಡು-ಹೆಣ್ಣಿನ ಕಡೆಯವರು ಭಿನ್ನ ಬೆಡಗಿನವರಾಗಿರುತ್ತಾರೆ. ಲಗ್ನ ಸಂದರ್ಭದಲ್ಲಿ ಸಮಾಜದ ಹಿರಿಯರು, ಬಂಧು-ಬಳಗ, ಬೀಗರು-ಬಿಜ್ಜರು ಎಲ್ಲರೂ ಕೂತಿರುವಾಗ ಮನೆಯ ಯಜಮಾನ ಗಂಡು-ಹೆಣ್ಣಿನ ಬೆಡಗಿನವರನ್ನು ಹೊರತುಪಡಿಸಿ ಬೇರೊಂದು ಬೆಡಗಿನವನನ್ನು ಪಟ್ಟದವನನ್ನಾಗಿ ಆರಿಸುತ್ತಾನೆ. ಆರಿಸಲ್ಪಡುತ ಈತ ಸಾಮಾನ್ಯವಾಗಿ ಹಿರಿಯ ವಯಸ್ಸಿನವನೂ ತಿಳಿವಳಿಕೆಯುಳ್ಳವನೂ ಆಗಿರುತ್ತಾನೆ. ಪಟ್ಟದವನನ್ನು ಆರಿಸಿಯಾದ ಮೇಲೆ ವಿಭೂತಿ ತರಿಸಲಾಗುತ್ತದೆ. ಪಟ್ಟದವನು ತಾನು ಮೊದಲು ವಿಭೂತಿಯನ್ನು ಹಚ್ಚಿಕೊಳ್ಳುತ್ತಾನೆ. ಹಚ್ಚಿಕೊಂಡಾದ ಮೇಲೆ ಕೂಡಿರುವವರೆಲ್ಲ “ಸಾಗಲ್ರೆಪಾ” ಎನ್ನುತ್ತಾರೆ. ಆ ತರುವಾಯ ಪಟ್ಟದವ ಬಂದವರಿಗೆಲ್ಲ ವಿಭೂತಿ ಹಚ್ಚುತ್ತಾನೆ. ಮದುವೆಯ ಮುಂದಿನ ಕಾರ್ಯಕ್ರಮಗಳೆಲ್ಲ ಹೀಗೆ ಹಿರಿಯರು ಮಾಡಿದ ಪಟ್ಟದವನ ನೇತೃತ್ವದಲ್ಲಿಯೇ ನಡೆಯುತ್ತವೆ.

ಬಹುಶಃ ಹೆಳವರಲ್ಲಿ ಮಾತ್ರವಿರುವ ಈ ಪಟ್ಟದವನ ಪರಿಕಲ್ಪನೆ ತುಂಬ ಕುತೂಹಲಕಾರಿಯಾದದು. ಈಗೇನೋ ಬ್ರಾಹ್ಮಣ ಹಾಗೂ ವಿಶ್ವಕರ್ಮ ಸಮುದಾಯಗಳನ್ನು ಹೊರತುಪಡಿಸಿ ಉಳಿದೆಲ್ಲ ಸಮುದಾಯಗಳಲ್ಲಿ ಒಬ್ಬ ಲಿಂಗಾಯತ ಸ್ವಾಮಿ ಅಥವಾ ಕುಲಗುರು ಮದುವೆಯ ಪೌರೋಹಿತ್ಯ ವಹಿಸುತ್ತಾನೆ. ಇದು ಹೆಳವರ ಸಂಚಾರಿ ಬದುಕಿನಲ್ಲಿ ಸಾಧ್ಯವಿರಲಿಲ್ಲ. ಮದುವೆಗೆ ಮುಖ್ಯವಾಗಿ ಬೇಕಾಗಿರುವುದು ಸಾಮಾಜಿಕ ಒಡಂಬಡಿಕೆ. ಈ ಹಿನ್ನೆಲೆಯಲ್ಲಿ ಒಬ್ಬ “ಪುರೋಹಿತ”ನಿಗಿಂತ ಸಾಮಾಜಿಕನಿಗೇ ಪಟ್ಟಗಟ್ಟಿ ಅವನನ್ನು ಸಮಾಜದ ಪ್ರಾತಿನಿಧಿಕ ಸಾಕ್ಷಿಯನ್ನಾಗಿರಿಸಿ, ಅವನ ನೇತೃತ್ವದಲ್ಲಿ ಮದುವೆಯನ್ನು ಸಾಂಗಗೊಳಿಸುವುದು ಹೆಚ್ಚು ಅರ್ಥಪೂರ್ಣವೆನಿಸುತ್ತದೆ. ಅದರೀಗ ಹೆಳವರು ತಮ್ಮ ಲಗ್ನ ಪ್ರಸಂಗದಲ್ಲಿ ಅನ್ಯ ಸ್ವಾಮಿಗಳನ್ನು ಕರೆತರುತ್ತಿರುವುದು ಅವರು ಭಾವಿಸುವ ಸಂಸ್ಕೃತೀಕರಣದ ಹೆಜ್ಜೆಯೆನಿಸುತ್ತದೆ.

ಮೊದಲೆಲ್ಲ ಮದುವೆಯ ಕಾರ್ಯಕ್ರಮಗಳು ಮೂರು ನಾಲ್ಕು ದಿನಗಳ ಕಾಲ ನಡೆಯುತ್ತಿದ್ದವು. ಈಗೆಲ್ಲ ಸಂಕ್ಷಿಪ್ತಗೊಂಡು ಒಂದೇ ದಿನಕ್ಕೆ ಇಳಿದಿವೆ. ಇಂದು ಮದುವೆಯ ಸ್ವರೂಪ ಎಷ್ಟೇ ಬದಲಾಗಿದ್ದರೂ ಮುಂಚಿನ ಅನೇಕ ಸಂಪ್ರದಾಯಬದ್ಧ ಆಚರಣೆಗಳು ಸಂಪೂರ್ಣವಾಗಿ ಮರೆಯಾಗಿಲ್ಲ ಎಂಬುದು ಗಮನಾರ್ಹ ಸಂಗತಿ. ಮದುವೆ ಹಂದರದಲ್ಲಿ ಹಾಲಗಂಬ ಕಟ್ಟುವುದು, ಅದನ್ನು ಬೀಗನೇ ತರುವುದು, ಗಂಡು ಹೆಣ್ಣಿಗೆ ಅರಿಷಿಣ ಹಚ್ಚಿ ನೀರು ಹಾಕುವ ಸಂದರ್ಭದಲ್ಲಿ ಸುರಿಗೆ ಸುತ್ತುವವರು ಬೇರೆ ಬೆಡಗಿನವರೇ ಆಗಿರುವುದು, ಗಂಡು ಹೆಣ್ಣಿಗೆ ಹತ್ತಿ ಕಂಕಣ ಕಟ್ಟುವುದು ಇವೆಲ್ಲ ಮೂಲ ಸ್ವರೂಪದಲ್ಲಿ ತೋರುವ ಕೆಲವು ವಿಶೇಷ ಆಚರಣೆಗಳು. ಮೊದಲಿನವೆರಡು ಬಹುತೇಕ ಸಮುದಾಯಗಳಲ್ಲಿ ತೋರುವ ಆಚರಣೆಗಳಾದರೆ, ತರುವಾಯವೆರಡೂ ಹತ್ತಿ ಕಂಕಣದ ಕುರುಬರಲ್ಲಿ ತೋರುವ ವಿಶೇಷಾಂಶಗಳು. ಹೆಳವರು ಮದುವೆಯಲ್ಲಿ ಹತ್ತಿ ಕಂಕಣವನ್ನು ಬಳಸುವುದರಿಂದ ತಾವು ಹತ್ತಿ ಕಂಕಣದ ಕುರುಬರಿಗಿಂತ ಭಿನ್ನರಲ್ಲವೆಂಬುದು ಗೋಕಾಕ ತಾಲೂಕಿನ ಬೆಣಚಮರಡಿಯ ಸಿದ್ದಪ್ಪ ಅಲಗೂರ ಅವರ ಅಭಿಪ್ರಾಯ. ಮದುವೆಯ ಕ್ರಿಯಾಚರಣೆಗಳನ್ನು ಹುದುಗಿಸಿಕೊಂಡಿದ್ದ ಮದುವೆಯ ಹಾಡುಗಳು, ಎಲ್ಲ ಸಮುದಾಯಗಳಲ್ಲಿ ಮರೆಯಾಗುತ್ತಿರುವಂತೆ ಇಲ್ಲಿಯೂ ಮರೆಯಾಗುತ್ತಿವೆ. ಮೊದಲೆಲ್ಲ ಮದುವೆಯ ಊಟವೆಂದರೆ ಹುಗ್ಗಿ-ಹೋಳಿಗೆಯಾಗಿದ್ದವು. ಈಗ ಶಿರಾ, ಬುಂದೆ ಮದುವೆಯೂಟದ ಪ್ರಮುಖ ಆಕರ್ಷಣೆಗಳಾಗಿವೆ.

ಮದುವೆಯೆನ್ನುವುದು ಸಾಂಸಾರಿಕ ಜೀವನದ ಮೊದಲ ಹಾಗೂ ಮಹತ್ವದ ಹಂತ. ಆದರೆ ಅನೇಕ ಸಲ ಬೇಗ ಮದುವೆ ಮಾಡಿ ಬದುಕಿನ ನೊಗ ಹೊರಿಸುವ ಹಿರಿಯರು ಕನ್ಯೆಯ ಭಾವನೆಗಳನ್ನು ಕುರಿತು ಯೋಚಿಸಲಾರರು. ಇವಳೂ ಅಷ್ಟೇ, ಅಕ್ಷರಾಭ್ಯಾಸವಿಲ್ಲದೆ ತನ್ನ ಬಗ್ಗೆ ತಾನು ಆಳವಾಗಿ ಯೋಚಿಸಲಾರಳು. ಹೆಳವ ಸಮಾಜವೂ ಸೇರಿದಂತೆ ಅನೇಕ ಅನೇಕ ಹಿಂದುಳಿದ ಸಮುದಾಯಗಳ ಮಹಿಳೆಗೆ ಸ್ವತಂತ್ರ ವ್ಯಕ್ತಿತ್ವವಿಲ್ಲ, ಯೋಚನೆಗಳಿಲ್ಲ. ಮದುವೆಯಂಥ ಸಂದರ್ಭದಲ್ಲಿಯೂ ಶಿಕ್ಷಣದ ಕೊರತೆ ಹೆಳವ ಮಹಿಳೆಗೆ ಚಿಂತನಶೀಲ ಮನಸ್ಸನ್ನು ಕೊಡಲಿಲ್ಲ. ಮೇಲಾಗಿ “ತೆರೆ” ಮಾಯವಾಗಿ ವರದಕ್ಷಿಣೆಯ ಉರುಳು ಸಮಾಜವನ್ನು ಸುತ್ತುಹಾಕಿಕೊಳ್ಳುತ್ತಿದೆ.

ಕುಬಸ ಮಾಡುವುದು: ಗೋಕಾಕ ತಾಲೂಕಿನ ತಳಕಟ್ನಾಳದ ರುಕಮವ್ವ ಮಾರುತಿ ಹೆಳವರ ಹೇಳುವಂತೆ ಕುಬಸದ ಆಚರಣೆ ಹೆಳವರಲ್ಲಿಯೇ ಕೆಲವರಲ್ಲಿದೆ. ಕೆಲವರಲಿಲ್ಲ. ಅಂದರೆ ಈ ಐಚ್ಛಿಕತೆ ಕೇವಲ ಬೆಡಗನ್ನೂ ಅವಲಂಬಿಸಿಲ್ಲ. ಪ್ರಸ್ತುತ ವಕ್ತೃ ರುಕಮವ್ವನ ಬೆಡಗು ಇಮ್ಮಡಿ ಬೀಳಗಿ ಹೆಳವರ ಮನೆತನದ ಬೆಡಗು ಇಮ್ಮಡಿ. ಆದರೆ ರುಕಮವ್ವರ ಮನೆತನದಲ್ಲಿ ಕುಬಸ ಮಾಡುವ ಪದ್ಧತಿಯಿಲ್ಲ. ಬೀಳಗಿಯವರ ಮನೆತನದಲ್ಲಿದೆ. ಅಷ್ಟೇ ಅಲ್ಲ, ಬೀಳಗಿಯ ಗಂಗಾಬಾಯಿ ಬಿ.ಹೆಳವರ ಈ ಸಂಪ್ರದಾಯದ ಎಲ್ಲ ವಿವರಗಳನ್ನೂ ಒದಗಿಸುತ್ತಾರೆ. ಇದು ಅನ್ವಯಿಸುವುದು ಉರಲ್ಲಿ ಸ್ಥಿರವಾಗಿ ವಾಸಿಸುವವರಿಗೆ, ಗರ್ಭನಿಂತು ಮೂರು ತಿಂಗಳಾದ ಮೇಲೆ ಕಳ್ಳ ಕಬಸ ಮಾಡಲಾಗುತ್ತದೆ. ಕಳ್ಳಕುಬುಸದ ಸಂದರ್ಭದಲ್ಲಿ ಗಡಿಗೆಯೊಂದನ್ನು ಸಿಂಗರಿಸಿ ಗರ್ಭಿಣಿಯ ಮುಂದೆ ಇಡಲಾಗುತ್ತದೆ. ಇದು “ಎಂಬಲ ಗಡಿಗೆ” ಎಂದು ಕರೆಯಲ್ಪಡುತ್ತದೆ. ಎಂಬಲ ಗಡಿಗೆಯನ್ನು ಹೊಸ ಜಂಪರು, ಅರಿವೆ, ದಂಡಗಳಿಂದ ಅಲಂಕಾರ ಮಾಡಿರುತ್ತಾರೆ. ಕುಬುಸ ಮಾಡಿಸಿಕೊಳ್ಳುವವಳೂ ದಂಡೆ, ಹಸಿರು ಸೀರೆ, ಹಸಿರು ಬಳೆಗಳಿಂದ ಶೋಭಿಸುತ್ತಾಳೆ. ಕುಬಸದ ಸಂದರ್ಭದಲ್ಲಿ ಮುತ್ತೈದೆಯರು ಆರುತಿ ಮಾಡುತ್ತಾರೆ. ಕುಬಸದ ಕಾರ್ಯಕ್ರಮ ಮುಗಿಯುವವರೆಗೂ ಅಂದು ಅವಳು ಊಟ ಮಾಡುವಂತಿಲ್ಲ. ಕಳ್ಳಕುಬಸ ಗಂಡನ ಮನೆಯಲ್ಲಿಯೇ ನೆರವೇರುತ್ತದೆ. ಇದನ್ನು ತವರು ಮನೆಯವರು ಬಂದು ಮಾಡುತ್ತಾರೆ. ದಂಡೆ ಉಡಕ್ಕಿ ಸಾಮಾನು, ಬಳೆ ಮುಂತಾದವುಗಳನ್ನೆಲ್ಲ ತವರು ಮನೆಯವರೇ ತರುತ್ತಾರೆ.

ದೊಡ್ಡ ಕುಬುಸವೂ ಗಂಡನ ಮನೆಯಲ್ಲಿಯೇ ನಡೆಯುತ್ತದೆ. ಇದನ್ನು ಮಾಡುವವರೂ ತವರು ಮನೆಯವರೇ. ದೊಡ್ಡಕುಬುಸಕ್ಕೆ ಸಂಬಂಧಿಸಿದ ಎಲ್ಲ ಮಂಗಲ ವಸ್ತುಗಳನ್ನು, ಬೀಗರ ಮನೆಗಾಗುವಷ್ಟು ಹಿಟ್ಟಕ್ಕಿಯನ್ನೂ ಅವರೇ ತರುತ್ತಾರೆ. ಗಂಡನ ಮನೆಯವರು ಊರಲ್ಲಿ ತಮಗೆ ಬೇಕಾದವರಿಗೆಲ್ಲ ಆಮಂತ್ರಣ ಕೊಟ್ಟು ದೊಡ್ಡ ಪ್ರಮಾಣದ ಅಡುಗೆಯನ್ನೇ ಮಾಡುತ್ತಾರೆ. ಮಧ್ಯಾಹ್ನ ಆಮಂತ್ರಿತರೆಲ್ಲರ ಊಟವಾದ ಮೇಲೆ ಸಾಯಂಕಾಲ ಪ್ರಸ್ತುತ ಹೆಣ್ಣುಮಗಳಿಗೆ ಸೀಮಂತ ಮಾಡುತ್ತಾರೆ. ಕೆಲವರು ಗರ್ಭಿಣಿ ಹೆಣ್ಣು ಮಗಳನ್ನಷ್ಟೇ ಮಂಚದ ಮೇಲೆ ಕೂಡ್ರಿಸಿ ಸೀಮತ ಮಾಡಿದರೆ, ಇನ್ನು ಕೆಲವರು ಹೆಂಡತಿಯ ಮಗ್ಗಲು ಗಂಡನನ್ನೂ ಕೂಡ್ರಿಸುತ್ತಾರೆ. ಈಗ ಹೆಣ್ಣುಮಗಳ ಕಡೆಯವರು ಗಂಡನಿಗೆ ಆಹೇರಿ ಮಾಡುತ್ತಾರೆ. ಮೊದಲೆಲ್ಲ ಅರಿವೆಗೆ ಸೀಮಿತವಾಗಿದ್ದ ಆಹೇರಿ ಈಗ ಬಂಗಾರದ ಉಂಗುರ ಅಥವಾ ಚೈನುಗಳಿಗೆ ಬಂದು ನಿಂತಿದೆ. ಕುಬಸ ಮುಗಿದ ಮೇಲೆ ಗಂಡ-ಹೆಂಡತಿ ಇಬ್ಬರನ್ನೂ ಸಮೀಪದ ಹನುಮಂತದೇವರ ಗುಡಿಗೆ ಕರೆದುಕೊಂಡು ಹೋಗಿ ದರ್ಶನ ಮಾಡಿಸಿಕೊಂಡು ಬರುತ್ತಾರೆ. ಕಳ್ಳಕುಬಸದ ಸಂದರ್ಭದಲ್ಲಿ ಕುಬಸದ ಹಾಡುಗಳನ್ನು ಹಾಡಬಹುದು. ಅಥವಾ ಬಿಡಬಹುದು. ದೊಡ್ಡಕುಬಸದ ಸಂದರ್ಭದಲ್ಲಿ ಕುಬಸದ ಹಾಡುಗಳನ್ನು ಹಾಡದೇ ಬಿಡುವುದಿಲ್ಲ. ಇತ್ತೀಚೆಗೆ ಸೋಬಾನದ ಹಾಡುಗಳು ಮರೆಯಾಗುತ್ತಿವೆ. ಒಂದೆರಡು ದೇವರ ಪದಗಳನ್ನು ಹೇಳಿ ಮುಗಿಸುವುದುಂಟು.

ಉದಾಹರಣಗಾಗಿ ೧. ಕುಬಸದ ಹಾಡನ್ನು ಒಂದು ಮಂಗಳಾರತಿ ಪದವನ್ನೂ ಇಲ್ಲಿ ನೋಡಬಹುದು.

ಕುಬುಸದ ಹಾಡು (ಉಡಿತುಂಬುವ ಹಾಡು)

ಹಳ್ಳದ ನೀರೊಂದ ಹರದಾರಿ ತಂದ
ಹರದಾರಿ ತಂದ ನೀವು ಎರದೀರಿ ಬಂದ
ಉಡಿಯ ತುಂಬಿರಿ ನಾರಿ ಮಡದಿ ರುಕ್ಮಿಣಿಗೆ
ಮಡದಿ ರುಕ್ಮಿಣಿಗೆ ಜಗದ. ಒಡೆಯನ ರಾಣಿಗೆ

ಬಾವಿಯ ನೀರೊಂದು ಬಾಲೇರು ತಂದ
ಬಾಲೇರು ತಂದ ನೀವು ಎರದೀರಿ ಬಂದ
ಉಡಿಯ ತುಂಬಿರಿ ನಾರಿ ಮಡದಿ ರುಕ್ಮಿಣಿಗೆ
ಮಡದಿ ರುಕ್ಮಿಣಿಗೆ ಜಗದ ಒಡೆಯನ ರಾಣಿಗೆ.

ಏಕಾವಳಿ ಸರವೊಂದ ಜ್ವಾಕ್ಯಾಗಿ ಹಾಕಿ
ಜ್ವಾಕ್ಯಾಗಿ ಹಾಕಿ ನೀನು ಏಕಾಗಿ ನಡಿಯೆ
ಉಡಿಯ ತುಂಬಿರಿ ನಾರಿ ಮಡದಿ ರುಕ್ಮಿಣಿಗೆ
ಮಡದಿ ರುಕ್ಮಿಣಿಗೆ ಜಗದ ಒಡೆಯನ ರಾಣಿಗೆ

ಹಸರ ಪೈಟನಸೀರಿ ಹಸನಂಗಿ ಉಡ
ಹಸನಂಗಿ ಉಡ ನೀನು ಶಿಶುವಿನ ಪಡಿಯೆ
ಉಡಿಯ ತುಂಬಿರಿ ನಾರಿ ಮಡದಿ ರುಕ್ಮಿಣಿಗೆ
ಮಡದಿ ರುಕ್ಮಿಣಿಗೆ ಜಗದ ಒಡೆಯನ ರಾಣಿಗೆ

ಮಲ್ಲಿಗಿ ಹೂವಿನ ದಂಡಿ ಎಲ್ಲಾರು ತಂದ
ಎಲ್ಲಾರು ತಂದ ನೀನು ಬಲ್ಲವರು ಕೊಡೆ
ಉಡಿಯ ತುಂಬಿರಿ ನಾರಿ ಮಡದಿ ರುಕ್ಮಿಣಿಗೆ
ಮಡದಿ ರುಕ್ಮಿಣಿಗೆ ಜಗದ ಒಡೆಯನ ರಾಣಿಗೆ