ಕರ್ನಾಟಕದ ಜನಪದ ಸಂಸ್ಕೃತಿಯನ್ನು ರೂಪಿಸಿದ ಅನೇಕ ಸಮುದಾಯಗಳಲ್ಲಿ ಹೆಳವ ಸಮುದಾಯವೂ ಒಂದು. ಊರಿಂದೂರಿಗೆ ಹೋಗಿ ಬೇರೆ ಬೇರೆ ಸಮುದಾಯಗಳಿಗೆ ಸೇರಿದ ಮನೆತನಗಳ ವಂಶಾವಳಿಯನ್ನು ಹೊಗಳುವುದು ಇವರ ವೃತ್ತಿ. ದಕ್ಷಿಣ ಕರ್ನಾಟಕದ ಹೆಳವರು ಹಾಡುಗಳನ್ನು ಹಾಡುವುದರಿಂದ ಇವರನ್ನು ದೊಂಬಿದಾಸರು, ಕಿನ್ನರಿ ಜೋಗಿಗಳ, ಕರಪಾಲದವರೊಂದಿಗೆ ಲೌಕಿಕ ವೃತ್ತಿಗಾಯಕರ ಗುಂಪಿಗೆ ಸೇರಿಸಲಾಗಿದೆ. ಈ ಭಾಗದ ಹೆಳವರು ಚಾಮುಂಡಿ ಪುರಾಣ, ಕರಿಭಂಟನ ಕತೆ, ಹುಲಿಕೆರೆಯಮ್ಮ, ಚುಂಚನಗಿರಿ ಭೆರವ ಮಾಳವ್ವ ಮುಂತಾದವುಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ. ನಿಜ: ಆದರೆ ಇದೇ ಮಾತು ಉತ್ತರ ಕರ್ನಾಟಕದ ಹೆಳವರಿಗೆ ಅನ್ವಯಿಸುವುದಿಲ್ಲ. ಇವರು ಹಾಡು ಹೇಳುವುದಿಲ್ಲ. ವಂಶಪಾರಂಪರ್ಯವಾಗಿ ಕಾಯ್ದುಕೊಂಡು ಬಂದ ಜೋಪಡಿಗಳೊಂದಿಗೆ ಊರೂರು ಅಲೆಯುತ್ತ ತಮ್ಮ ನಿಗದಿತ ಒಕ್ಕಲು ಮನೆತನಗಳಿರುವಲ್ಲಿಗೆ ಹೋಗಿ ಅವರ ವಂಶಾವಳಿಯ ಹಿರಿಮೆ ಗರಿಮೆಗಳನ್ನು ಕೊಂಡಾಡುವುದು ಉತ್ತರ ಕರ್ನಾಟಕದ ಹೆಳವರ ವೃತ್ತಿ. ಈ ವಂಶಾವಳಿಯನ್ನು ಕೇವಲ ಗದ್ಯದಲ್ಲಿ ಹೇಳದೆ ಒಂದು ವಿಶಿಷ್ಟ ಧ್ವನಿಯಲ್ಲಿ ರಾಗವಾಗಿ ಎಳೆದಳೆದು ವಾಚಿಸುವುದು ಇವರ ರೂಢಿ. ಇದಕ್ಕೆ ಪ್ರತಿಫಲವಾಗಿ ಆ ಮನೆತನದವರು ಸಂತೋಷದಿಂದ ಕೊಡುವ ಕಾಳುಕಡಿಯಿಂದ ಜೀವನೋಪಾಯವನ್ನಿವರು ಕಂಡುಕೊಂಡಿದ್ದಾರೆ. ಇದು ತಮ್ಮ ಹಕ್ಕು ಎಂದೇ ಅವರು ಭಾವಿಸುತ್ತಾರೆ. ದಕ್ಷಿಣ ಕರ್ನಾಟಕದ ಹೆಳವರೇ ಇರಲಿ, ಉತ್ತರ ಕರ್ನಾಟಕದ ಹೆಳವರೇ ಇರಲಿ, ಇವರ ಮುಖ್ಯ ಉದ್ಯೋಗ ವಂಶಾವಳಿಯನ್ನು ಕೊಂಡಾಡುವುದು ಎಂಬುದು ಸ್ಪಷ್ಟ.

ಬಹುಶಃ ಹೆಳವರು ಮನೆಮನೆಗೆ ಹೋಗಿ ಹಣ, ಕಾಳು, ಕಡಿ, ವಸ್ತ್ರ ಮುಂತಾದವುಗಳನ್ನು ತೆಗೆದುಕೊಳ್ಳುವುದನ್ನು ನೋಡಿಯೇ ಎಡ್ಗರ್ ಥರ್ಸ್ಟನ್ ಇವರನ್ನು ಭಿಕ್ಷುಕರ ಗುಂಪಿಗೆ ಸೇರಿಸಿದ. ಆದರೆ ಆರ್.ಇ. ಎಂತೋವನ್ ಇವರನ್ನು ಧಾರ್ಮಿಕ ಭಿಕ್ಷಕರು ಎನ್ನುತ್ತಾನೆ. ಇವರ ಭಿಕ್ಷೆ ಬೇಡಿ ಬದುಕುವವರಲ್ಲ, ಇವರಿಗೆ ತಮ್ಮದೇ ಆದ ವೃತ್ತಿಗೌರವವಿದೆ ಎಂಬುದನ್ನು ಬಿ.ವಿ. ಮಹಿಷವಾಡಿಯವರು ಮೊದಲ ಬಾರಿಗೆ ಸ್ಪಷ್ಟಪಡಿಸಿದರು. “ಉಳಿದ ಭಿಕ್ಷುಕರಂತೆ ಇವರಲ್ಲ. ೪-೬ ಸೇರು ಜೋಳ ವಸೂಲು ಮಾಡುತ್ತಾರೆ. ೪-೫ ರೂಪಾಯಿ ಗಿಟ್ಟಿಸುತ್ತಾರೆ. ಹಳೆ ಬಿಳಿ ಅಂಗಿ ಧೋತರ ಚದ್ದರ-ಶಾಲು ಇಲ್ಲವೆ ಕಂಬಳಿಗಳನ್ನು ಪಡೆಯುತ್ತಾರೆ. ಆದರೂ ಅವರಿಗೆ ತೃಪ್ತಿ ಇಲ್ಲ. ಎತ್ತು ತಂದಿದ್ದರೆ ಎತ್ತಿಗೆ ಕಾಣಿಕೆ ಬೇಡುತ್ತಾರೆ. ಎತ್ತು ಇಲ್ಲದಿದ್ದರೆ ಎಳೆ ಹೋರಿಯನ್ನೋ, ಕರುವನ್ನೋ ಕಾಡಿಬೇಡಿ ಇಸಿದುಕೊಂಡು ಹೋಗುತ್ತಾರೆ. ಇಷ್ಟೊಂದು ಸಾಮಗ್ರಿಗಳನ್ನು ರೈತನಿಂದ ಗಿಟ್ಟಿಸುವ ಇವರನ್ನು ಭಿಕ್ಷುಕರೆಂದು ಹೇಗೆ ಹೇಳುವುದು? ಎಚ್‌.ಎಲ್‌.ನಾಗೇಗೌಡ, ಬಿ.ಎಂ. ತೆಳಗಡಿ, ಡಾ. ಹರಿಲಾಲ್ ಪವಾರ ಅವರೂ ಇದೇ ಮಾತನ್ನು ಪುಷ್ಟೀಕರಿಸುತ್ತಾರೆ.

ಆದರೆ ಎಂತೋವನ್‌ಹೆಳವರನ್ನು ಧಾರ್ಮಿಕ ಭಿಕ್ಷುಕರು ಎಂದೇಕೆ (Religious beggars) ಕರೆದಿರಬಹುದುದೆಂಬುದನ್ನು ಇನ್ನಷ್ಟು ಪರಿಶೀಲಿಸಬಹುದೆಂದು ತೋರುತ್ತದೆ. ಇಂದಿಗೂ ಕೆಲವು ಸಂಪ್ರದಾಯಗಳಲ್ಲಿ ಈ “ಭಿಕ್ಷೆ”ಯೆಂಬುದು ತಿರುಪೆಯವರು ಬೇಡುವ ಭಿಕ್ಷೆಗಿಂತ ಭಿನ್ನವಾಗಿ ವಿಶಿಷ್ಟವಾದ ರೀತಿಯಲ್ಲಿ ಬಳಸಲ್ಪಡುವುದನ್ನು ನಾವು ನೋಡುತ್ತೇವೆ. ವೀರಶೈವ ಸಂಪ್ರದಾಯದಲ್ಲಿ ಸ್ವಾಮಿಗಳು ಮನೆಮನೆಗೆ ಹೋಗಿ ಹಿಟ್ಟು ನೀಡಿಸಿಕೊಂಡು ಬರುವುದು “ಭಿಕ್ಷೆ”ಯೇ ಎಂದೆನಿಸುತ್ತದೆ. ಆದರೆ ಇದೊಂದು ಧಾರ್ಮಿಕ ಸಂಪ್ರದಾಯವೇ ಹೊರತು ಸಾಮಾನ್ಯ ಭಿಕ್ಷೆಯಲ್ಲ. ಇದನ್ನು ಬೇಡುವವರು ಭಿಕ್ಷುಕರೂ ಅಲ್ಲ. ಇದಕ್ಕೆ ಸಂಬಂಧಿಸಿದಂತೆ ಬೇರೊಂದು ವಿಷಯವನ್ನು ಇಲ್ಲಿ ಪ್ರಸ್ತಾಪಿಸಬಹುದು. ಉತ್ತರ ಕರ್ನಾಟಕದಲ್ಲಿ ಕೆಲವು ದೇವರ ಪಲ್ಲಕ್ಕಿಗಳು ಯುಗಾದಿಯಿಂದ ಕಾರಹುಣ್ಣಿಮೆಯವರೆಗೆ ನಾಡ ಮೇಲೆ “ಭಿಕ್ಷೆ”ಗೆ ಹೋಗುತ್ತೇವೆ. ಹೀಗೆ ಹೋದಾಗ ಪಲ್ಲಕ್ಕಿಗಳೊಂದಿಗಿರುವ ಪೂಜಾರಿಗಳು ಭಕ್ತರನ್ನು ಹೆಚ್ಚು ಹೆಚ್ಚು ಭಿಕ್ಷೆ ಕೊಡುವಂತೆ ಒತ್ತಾಯಿಸುತ್ತಾರೆ. ಹೀಗೆ ಒತ್ತಾಯಿಸುವುದು, ಕಾಡಿಬೇಡಿ ತೆಗೆದುಕೊಳ್ಳುವುದು ತಮ್ಮ ಹಕ್ಕು ಎಂದು ಅವರು ಭಾವಿಸುತ್ತಾರೆ. ಭಕ್ತರೂ ಅಷ್ಟೇ ಇವರ ಈ ಕಾಟವನ್ನು ಪ್ರೀತಿಯಿಂದಲೇ ಸಹಿಸಿಕೊಂಡು ಕೊನೆಗೆ ಅತ್ಯಂತ ಹಾರ್ದಿಕ ರೀತಿಯಲ್ಲೇ ಭಿಕ್ಷೆ ಸಲ್ಲಿಸುತ್ತಾರೆ. ದೇವರ ಪೂಜಾರಿಗಳು ಸ್ವೀಕರಿಸುವ ಕಾಣಿಕೆಗೂ ಹೆಳವರು ಸ್ವೀಕರಿಸುವ ಕಾಣಿಕೆಗೂ ಹೆಚ್ಚಿನ ಅಂತರವೇನಿಲ್ಲ. ಪೂಜಾರಿಗಳ ಭಿಕ್ಷೆಗೆ ಧಾರ್ಮಿಕ ಮನ್ನಣೆಯಿದ್ದರೆ, ಹೆಳವರ ಭಿಕ್ಷೆಗೆ ಸಾಮಾಜಿಕ ಮನ್ನಣೆಯಿದೆ.

ಕರ್ನಾಟಕದ ಹೆಳವರ ಬಗೆಗೆ ಅಪಾರ ಕ್ಷೇತ್ರಕಾರ್ಯ ಮಾಡಿ ಮಹಾಪ್ರಬಂಧ ರಚಿಸಿರುವ ಡಾ. ಹರಿಲಾಲ್‌ಪವಾರ ಅವರು ಕರ್ನಾಟಕದ ಹೆಳವರನ್ನು ಎತ್ತಿನ ಹೆಳವರು, ಗಂಟೆಯ ಹೆಳವರು, ಚಾಪೆಯ ಹೆಳವರೆಂದು ಮುಖ್ಯವಾಗಿ ಮೂರು ವಿಧವಾಗಿ ವಿಂಗಡಿಸಿದ್ದಾರೆ. ಇದಲ್ಲದೆ ಹಂದಿ ಹೆಳವರು, ತಿತ್ತಿ ಹೆಳವರು, ಕೊಕಣಿ ಹೆಳವರು, ದುಂಬಿ ಹೆಳವರು, ಮಂದಲ ಹೆಳವರು, ಕಂಬಿ ಹೆಳವರು ಎಂದು ಮುಂತಾಗಿ ಬೇರೆ ಉಪಪಂಗಡಗಳಿರುವುದಾಗಿ ಉಲ್ಲೇಖಿಸಿದ್ದಾರೆ.

ಉತ್ತರ ಕರ್ನಾಟಕದ ತುಂಬ ವ್ಯಾಪಿಸಿರುವ ಎತ್ತಿನ ಹೆಳವರಿಗೆ ಈ ಹೆಸರು ಬರಲು ಕಾರಣ, ಅವರು ತಮ್ಮ ವೃತ್ತಿಗೆ ಹೋಗುವಾಗ ಸಂಗಡ ತೆಗೆದುಕೊಂಡು ಹೋಗುವ ಎತ್ತು. ಈಗ ಎತ್ತಿನ ಮೇಲೆ ಕುಳಿತುಕೊಂಡು ಹೋಗುವ ಪರಿಪಾಠ ಇಲ್ಲವಾದರೂ ಹಿಂದೆಲ್ಲ ತಮ್ಮ ಒಕ್ಕಲು ಮನೆಗಳಿಗೆ ಹೋಗುವ ಸಂದರ್ಭದಲ್ಲಿ ಎತ್ತಿನ ಮೇಲೆಯೇ ಹೋಗುವ ಸಂಪ್ರದಾಯವಿತ್ತು. ಗಂಟೆಯ ಹಳವರು ತೆಂಗಿನ ಕಾಯಿ ಗಾತ್ರದ ಗಂಟೆಯೊಂದನ್ನು ಕೈಯಲ್ಲಿ ಹಿಡಿದುಕೊಂಡು ತಮ್ಮ ಒಕ್ಕಲುಗಳಿರುವಲ್ಲಿಗೆ ಹೋಗಿ ಅವರ ವಂಶಾವಳಿಯನ್ನು ಹೊಗಳುವುದಲ್ಲದೆ, ಅದನ್ನು ಬಾರಿಸುತ್ತ ಸುಶ್ರಾವ್ಯವಾದ ರೀತಿಯಲ್ಲಿ ಅನೇಕ ಕಥಾನಕಗಳನ್ನು ಹೇಳುವುದೂ ಉಂಟು. ಇವರು ದಕ್ಷಿಣ ಕರ್ನಾಟಕದ ತುಂಬ ವ್ಯಾಪಿಸಿದ್ದಾರೆ. ಚಾಪೆ ಹೆಳವರು ಇಂದು ಸಂಪೂರ್ಣ ಚಾಪೆ ಹಣೆಯುವ ವತ್ತಿಯನ್ನೇ ಅವಲಂಭಿಸಿದ್ದಾರೆ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ತಮ್ಮ ಒಕ್ಕಲುಮನೆಗಳನ್ನು ಕೊಂಡಾಡಲು ಹೋಗುತ್ತಿರಬೇಕು. ಇನ್ನುಳಿದಂತೆ ಹಂದಿಹೆಳವರು ಹಂದಿ ಸಾಕಣೆ ಮಾಡುತ್ತಾರೆ.

ದುಂಬಿ ಹೆಳವರು ದುಂಬಿ ಮಾರುವ ವೃತ್ತಿಯನ್ನು ಅವಲಂಬಿಸಿದ್ದಾರೆ. ತಿತ್ತಿ ಹೆಳವರು ತಮ್ಮ ಹಾಡಿಕೆಯಲ್ಲಿ ಉಪಯೋಗಿಸುವ “ತಿತ್ತಿ” ಎಂಬ ಚರ್ಮವಾದ್ಯದಿಂದ ಅವರಿಗೆ ಆ ಹೆಸರು ಬಂದಿದೆ. ಕೊಕಣಿ ಹೆಳವರು ಕಿವಿಯಲ್ಲಿಯ ಕೂಕಣಿ ತೆಗೆಯುತ್ತಾರೆ.

ಇಂದಿಗೂ ಕುಲವನ್ನು ಕೊಂಡಾಡುವ ವೃತ್ತಿಯನ್ನು ಉಳಿಸಿಕೊಂಡವರಲ್ಲಿ ಪ್ರಮುಖರಾದವರು ಎತ್ತಿನ ಹೆಳವರು ಮತ್ತು ಗಂಟೆಯ ಹೆಳವರು. ಇವರು ಒಕ್ಕಲಿಗರು, ರೆಡ್ಡಿಗಳು, ಲಿಂಗಾಯತರು, ಕುರುಬರು ಮುಂತಾದ ಸಮುದಾಯಗಳಲ್ಲಿಗೆ ಹೋಗಿ ಅವರ ವಂಶಗಳನ್ನು ಹೊಗಳುತ್ತಾರೆ.

ಹೆಳವ ಶಬ್ದದ ವ್ಯ್ರತ್ಪತ್ತಿ, ಅರ್ಥವಿವರಣೆ ಕೊಡುವಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವರು ಹೆಳವರ ಮೂಲ ಪುರುಷ ಹೆಳವನಿದ್ದ. ಅವನಿಂದ ಆ ಹೆಸರು ಬಂದಿದೆ ಎಂದು ಹೇಳಿದರೆ, ಇನ್ನು ಕೆಲವರು ವಂಶಾವಳಿಯನ್ನು “ಹೇಳುವ”ವವರೇ ಹೆಳವರೆನ್ನುತ್ತಾರೆ. ಈ ಎರಡೂ ಬಗೆಯನ್ನು ಹೇಳುವವರಲ್ಲಿ ವಿದ್ವಾಂಸರಿರುವಂತೆ ಸಿದ್ದಪ್ಪ ಭೀಮಪ್ಪ ಆಲಗೂರ (ಬೆಣಚಿನ ಮರಡಿ ತಾ.ಗೋಕಾಕ) ಅವರಂಥ ಹೆಳವ ವೃತ್ತಿಯಲ್ಲಿರುವ ಜನಪದರೂ ಇದ್ದಾರೆ.

ಹೆಳವರ ಮೂಲ ಪುರುಷನ ಬಗೆಗೆ ಅನೇಕ ಕತೆಗಳಿವೆ. ಇಂತಹ ಪ್ರಮುಖ ನಾಲ್ಕು ಕತೆಗಳನ್ನು ಡಾ. ಹರಿಲಾಲ್‌ಪವಾರ ಅವರು ತಮ್ಮ ಪ್ರಬಂಧದಲ್ಲಿ ಸಂಗ್ರಹಿಸಿದ್ದಾರೆ. ಈ ಎಲ್ಲ ಕತೆಗಳು, ಪುರಾಣ, ಇತಿಹಾಸಗಳನ್ನು ತಳಕು ಹಾಕಿಕೊಂಡಿವೆ. ಹೆಳವರ ಮೂಲ ಪುರುಷನನ್ನು ಕುರಿತಾಗಿ ಬೀಳಗಿಯ ಬಿ.ಎಸ್‌.ಹೆಳವರ ಅವರ ಹೇಳುವ ಕತೆ ಹೀಗಿದೆ.

ಶಿವನ ಆಸ್ಥಾನದಲ್ಲಿ ಶೃಂಗಿ, ಭೃಂಗಿ ಎಂಬ ಇಬ್ಬರು ಶಿವನನ್ನು ಹೊಗಳುವ ಭಟ್ಟಂಗಿಗಳಿದ್ದರು. ಭೃಂಗಿಯು ದಿನಾಲು ಶಿವನಿಗೆ ಮಾತ್ರ ನಮಸ್ಕರಿಸುತ್ತಿದ್ದ. ಒಂದು ದಿನ ನಾರದ ಪಾರ್ವತಿಗೆ ಹೇಳಿದ: “ಅಮ್ಮಾ, ಭೃಂಗಿ ನಿಮಗೆ ನಮಸ್ಕಾರ ಮಾಡದೆ ಶಿವನಿಗೆ ಮಾತ್ರ ನಮಸ್ಕಾರ ಮಾಡುತ್ತಾನೆ” ಪಾರ್ವತಿಗೆ ಇದುವರೆಗೂ ಹಾಗೆ ಅನ್ನಿಸಿರಲಿಲ್ಲ. “ನಾವಿಬ್ಬರೂ ಕೂಡಿಯೇ ಸಿಂಹಾಸನದ ಮೇಲೆ ಕುಳಿತಿರುತ್ತೇವೆ. ಇಬ್ಬರಿಗೂ ಕೂಡಿಯೇ ಭೃಂಗಿ ನಮಸ್ಕಾರ ಮಾಡುತ್ತಾನೆ” ಎಂದಳು. “ನಾಳೆ ಲಕ್ಷ್ಯಗೊಟ್ಟು ನೋಡಿರಿ” ಎಂದ ನಾರದ. ಮರುದಿನ ಲಕ್ಷ್ಯಗೊಟ್ಟು ನೋಡಿದರೆ ಭೃಂಗಿ ಶಿವನಿಗೊಬ್ಬನಿಗೇ ನಮಸ್ಕಾರ ಮಾಡಿ ಹೋಗಿ ನಿಂತ. “ಯಾಕೆ, ನೀನು ನನಗೆ ನಮಸ್ಕಾರ ಮಾಡುವುದಿಲ್ಲವೇ?” ಎಂದಳು ಪಾರ್ವತಿ. “ಇಲ್ಲ, ನನ್ನ ತಂದೆ ಶಿವನಿಗಷ್ಟೇ ನಮಸ್ಕರಿಸುತ್ತೇನೆ” ಎಂದ ಭೃಂಗಿ. ಅದಕ್ಕೆ ಪಾರ್ವತಿ “ಅಲ್ಲೋ ನಾನು ಶಕ್ತಿ ದೇವತೆ, ನನ್ನಿಂದಲೇ ನಿನಗೆ ಶಕ್ತಿ, ಎಲ್ಲ ಇದೆ. ನೀನು ಈ ರೀತಿ ಮಾಡಿದರೆ ನಿನ್ನ ಶಕ್ತಿಯನ್ನೆಲ್ಲ ನಾನು ತೆಗೆದುಕೊಳ್ಳುತ್ತೇನೆ” ಎಂದಳು. ಅದಕ್ಕೆ ಭೃಂಗಿ “ತೆಗೆದುಕೊಂಡರೂ ಚಿಂತೆಯಿಲ್ಲ. ನಾನು ನನ್ನ ತಂದೆಗಷ್ಟೇ ನಮಸ್ಕಾರ ಮಾಡುತ್ತೇನೆ. ನಿನಗೆ ಮಾಡುವುದಿಲ್ಲ” ಎಂದು ಉತ್ತರಿಸಿದ. ಕೋಪಗೊಂಡ ಪಾರ್ವತಿ ಅವನಲ್ಲಿರುವ ಎಲ್ಲ ಶಕ್ತಿಯನ್ನೂ ಹೀರಿಕೊಂಡುಬಿಟ್ಟಳು. ಆಗ ಅವನಲ್ಲಿ ಕೇವಲ ಎಲುಬು, ಚರ್ಮ ಉಳಿದವು. ಭೃಂಗಿ ಕೆಳಗೆ ಬೀಳುವ ಸ್ಥಿತಿಯಿತ್ತು. ಆ ವೇಳೆಯಲ್ಲಿ ಶಿವನು ಒಂದು ಕೋಲನ್ನು ಕೊಟ್ಟು ಅವನನ್ನು ನೆಟ್ಟಗೆ ನಿಲ್ಲಿಸಿದ. ಆಗ ಮುಗುಳ್ನಗೆ ನಗುತ್ತಿದ್ದ ಶಿವನನ್ನು ಅಲ್ಲಿ ಕೂಡಿರುವವರೆಲ್ಲ ಕೇಳಿದರು. “ಅಲ್ಲ ಶಿವನೇ, ನೀನು ಎಲ್ಲರಿಗೂ ತಂದೆಯಾದಂಥವನು. ನಿನ್ನನ್ನೇ ತಂದೆಯೆಂದು ನಿನ್ನ ಮೇಲೆ ಭಕ್ತಿಯಿಟ್ಟವನು ಭೃಂಗಿ. ತಾಯಿ ಪಾರ್ವತಿ ಎಲ್ಲವನ್ನೂ ಕಸಿದುಕೊಂಡಿಬಿಟ್ಟಳು. ಮತ್ತೆ ಈಗವನ ಗತಿಯೇನು? ಅವನು ಸಾಯುತ್ತಾನೆ!” ಆಗ ಶಿವನು “ಅವಳು ಶಕ್ತಿಯನ್ನು ತೆಗೆದುಕೊಂಡರೂ ಚಿಂತೆಯಿಲ್ಲ. ನನ್ನ ನಂದಿಯನ್ನು ಅವನಿಗೆ ಹತ್ತಲು ಕೊಡುತ್ತೇನೆ.” ಎಂದು ಹೇಳಿ ನಂದಿಯನ್ನು ಕೊಟ್ಟನು. ಮುಂದೆ ಆ ಭೃಂಗಿಗೆ ಆದಿಗೊಂಡ ಮುಂತಾದ ಆರುಜನ ಮಕ್ಕಳಾದರು. ಅವರ ಪೈಕಿ ಸಿದ್ಧಗೊಂಡ ಒಬ್ಬ. ಅವನು ಕಾಲಿಲ್ಲದ ಹೆಳವನಾಗಿದ್ದ.ಅವನಿಗೆ ಎತ್ತು ಹತ್ತಿಕೊಂಡು ವಂಶಾವಳಿ ಹೇಳುತ್ತ ಹೊಟ್ಟೆ ತುಂಬಿಕೊಳ್ಳಲು ಹೇಳಿದರು. ಅವರ ಇನ್ನೊಬ್ಬ ಸೋದರನಿಗೆ ಕುರಿ ಕಾಯ್ದು ಜೀವನ ಸಾಗಿಸಲು ಹೇಳಿದರು. ಇವರೆಲ್ಲರಿಗೂ ಗುರು ರೇವಣಸಿದ್ಧೇಶ್ವರ.

ಡಾ. ಹರಿಲಾಲ ಪವಾರ ಅವರ ಪ್ರಬಂಧದಲ್ಲಿ ಸಂಗ್ರಹಗೊಂಡ ಬೇರೊಂದು ಕತೆ ಹೀಗಿದೆ: ಒಂದಾನೊಂದು ಕಾಲದಲ್ಲಿ ಶಿವ-ಪಾರ್ವತಿಯರು ಕುರಿಗಳನ್ನು ಸೃಷ್ಟಿಮಾಡಿ ಅವುಗಳನ್ನು ಭೂಲೋಕದಲ್ಲಿ ಕಾಯುತ್ತಿದ್ದರು. ಒಂದು ದಿನ ಕುರಿಗಳನ್ನು ಕಾಯ್ದು ಧಣಿದಿದ್ದ ಶಿವನು ಪಾರ್ವತಿಯ ತೊಡೆಯ ಮೇಲೆ ತಲೆಯಿಟ್ಟು ನಿದ್ರೆ ಹೋದನು. ಆಗ ಶಿವನ ಮುಖದ ಮೇಲೆ ಬಂದಿದ್ದ ಬೆವರನ್ನು ಪಾರ್ವತಿಯು ತನ್ನ ಸೆರಗಿನಿಂದ ಒರೆಸುವ ಸಂದರ್ಭದಲ್ಲಿ ಅವಳ ಎದೆಹಾಲು ಭೂಮಿಯ ಮೇಲೆ ಚಿಮ್ಮಿತು. ಈ ಹಾಲಿನಿಂದ ತೊಯ್ದ ಮಣ್ಣನ್ನು ತೆಗೆದುಕೊಂಡ ಪಾರ್ವತಿ ಎರಡು ಗೊಂಬೆಗಳನ್ನು ಮಾಡಿ, ಅವಕ್ಕೆ ಜೀವಕಳೆ ತುಂಬಿ ಮುದ್ದಾಯಿ, ಮುದುಗೊಂಡ ಎಂದು ಹೆಸರಿಟ್ಟಳು. ಈ ಮುದ್ದಾಯಿ, ಮುದಗೊಂಡವರಿಗೆ ಕೆಂಚನ ಖ್ಯಾಮಗೊಂಡ, ಮುತ್ತಿನ ಜ್ಯೋತಿಗೊಂಡ, ಕುಚು ಒಕ್ಕಲಗೇರಿ ದ್ಯಾಮಗೊಂಡ, ಸಸ ಬೆಟ್ಟದ ಧೀರಗೊಂಡ, ಮಾದೇವನೊಲಿಸಿದ ಮಾರಗೊಂಡ, ಕಾಲಿಲ್ಲದ ಲಕ್ಕಗೊಂಡ, ಮತ್ತು ಉಂಡಾಚ ಪದಮಗೊಂಡ ಎಂಬ ಏಳು ಜನ ಗಂಡು ಮಕ್ಕಳಾದರು. ಕಾಲಿಲ್ಲದ ಲಕ್ಕಗೊಂಡನನ್ನುಳಿದು ಆರೂ ಜನ ಸಹೋದರರ ಮದುವೆಯಾಯಿತು. ತಮ್ಮ ಆಸ್ತಿಯಲ್ಲಿ ಅವರು ಲಕ್ಕಗೊಂಡನಿಗೆ ಪಾಲು ಕೊಡಲಿಲ್ಲ. ಅವನು ದಿನಕ್ಕೊಬ್ಬರ ಮನೆಯಲ್ಲಿ ಊಟ ಮಾಡಿಕೊಂಡು ಕಾಲ ಕಳೆಯುತ್ತಿದ್ದ. ಕಾಲಾಂತರದಲ್ಲಿ ಲಕ್ಕಗೊಂಡನಿಗೆ ಮದುವೆಯಾಯಿತು. ಮಕ್ಕಳೂ ಆದರು. ಈ ಲಕ್ಕಗೊಂಡನ ವಂಶಜರೇ ಹೆಳವರಾಗಿ ಇವರಿಂದ ಕುಲ ಕೊಂಡಾಡುವ ವೃತ್ತಿ ಮುಂದುವರೆಯಿತು.

ಮೇಲಿನ ಈ ಎರಡೂ ಕತೆಗಳಲ್ಲಿ ಹೆಳವರ ಮೂಲಪುರುಷ ಕಾಲಿಲ್ಲದವ ಹೆಳವನಾಗಿದ್ದಾನೆ. ಮೊದಲನೆಯ ಕತೆಯಲ್ಲಿ ಈತನ ಹೆಸರು ಸಿದ್ದಗೊಂಡನೆಂದಿದ್ದರೆ, ಎರಡನೆಯ ಕತೆಯಲ್ಲಿ ಲಕ್ಕೊಂಡನೆಂದಿದೆ. ಗುಲಬರ್ಗಾ ಜಿಲ್ಲೆಯ ಮುದರಾಬಿ ಗ್ರಾಮದ ಭೀಮಶ್ಯಾ ದುಂಡಪ್ಪ ಹೆಳವರ ಅವರೂ ಈ ಮೂಲಪುರುಷನ ಹೆಸರು ಸಿದ್ಧಗೊಂಡನೇ ಎಂದಿದ್ದಾರೆ.

ಇಂದಿಗೂ ಹೆಳವರು ತಾವು ಕೂಡ ಒಕ್ಕಲಿಗರಿಗೆ, ಕುರುಬರಿಗೆ ಅಣ್ಣ-ತಮ್ಮಂದಿರಾಗಬೇಕು ಎಂದು ಹೇಳಿಕೊಳ್ಳುತ್ತಾರೆ. ಇದನ್ನು ಸಮರ್ಥಿಸುವ ರೀತಿಯಲ್ಲಿ ಅನೇಕ ಬೆಡಗುಗಳು ಕುರುಬರಿಗೆ, ಹೆಳವರಿಗೆ ಒಂದೇ ಆಗಿವೆ. ಪರಂಪರಾಗತವಾದ ಸೋದರ ಸಂಬಂಧದ ಈ ಹೇಳಿಕೆಗೆ ಪುರಾಣಕತೆಗಳ ಬೆಂಬಲವೂ ಇದೆ. ರಸ್ತಾಪುರ ಭೀಮಕವಿಯ “ಹಾಲ್ಮತೋತ್ತೇಜಕ ಪುರಾಣದಲ್ಲಿ ಆದಿಗೊಂಡನೆಂಬವನಿಗೆ ಆಯ್ಗೊಂಡ, ಪಾಯ್ಗೊಂಡ, ಮರಗೊಂಡ, ಜಾಯ್ಗೊಂಡ, ಶಿವಪದ್ಮ ಎಂದು ಐದು ಜನ ಮಕ್ಕಳು. ಇವರೆಲ್ಲ ಕುಡ ಒಕ್ಕಲಿಗ ಜಾತಿಗೆ ಸೇರಿದವರು. ಇವರಲ್ಲಿ ನಾಲ್ವರು ಅಣ್ಣಂದಿರು ಒಕ್ಕಲು ತನ ಮಾಡುತ್ತಿದ್ದರೆ, ತಮ್ಮ ಶಿವಪದ್ಮ ಕುರಿ ಕಾಯುತ್ತಿದ್ದ. ಹಾಲ್ಮತೋತ್ತೇಜಕ ಪುರಾಣದಲ್ಲಿ ಬರುವ ಶಿವಪದ್ಮ ಮತ್ತು ಮೇಲೆ ಉಲ್ಲೇಖಿಸಿದ ಎರಡನೆಯ ಕತೆಯಲ್ಲಿ ಬರುವ ಉಂಡಾಡ ಪದಮಣ್ಣ ಭಿನ್ನರಲ್ಲ. “ಹೆಳವರಲ್ಲಿ ಉಂಡಾಡು ಪದುಮಣ್ಣನ ಕತೆ ಸಾಮಾನ್ಯವಾಗಿ ಕಂಡುಬರುತ್ತದೆ. ಅವನೊಬ್ಬ ಸಾಂಸ್ಕೃತಿಕ ಕಾವ್ಯದ ಕಥಾ ನಾಯಕನಾಗಬಲ್ಲ ಎಲ್ಲ ಲಕ್ಷಣಗಳನ್ನೂ ಉಂಡಾಡು ಪದುಮಣ್ಣನಿಗೆ ಆರೋಪಿಸುತ್ತಾರೆ. ಕುರುಬರ ಮೂಲಪುರುಷ ಉಂಡಾಡು ಪದುಮಣ್ಣ” ಎಂಬ ಎಚ್‌.ಎಲ್‌.ನಾಗೇಗೌಡರ ಮಾತು ಪ್ರಸ್ತುತ ಚರ್ಚೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈಗ ಹಾಲ್ಮತೋತ್ತೇಜಕ ಪುರಾಣ ಕತೆ ಮತ್ತು ಪರಂಪರಾಗತ ಮೌಖಿಕ ಕತೆ ಎರಡನ್ನೂ ಬೆರೆಸಿ ಹೇಳುವುದಾದರೆ ಎರಡೂ ಕತೆಗಳಲ್ಲಿ ಬರುವ ಸೋದರರು ಮೂರು ಭಿನ್ನ ವೃತ್ತಿಗಳನ್ನು ಕೈಕೊಂಡರು. ಕಾಲಿಲ್ಲದ ಲಕ್ಕೊಂಡ (ಸಿದ್ಧಗೊಂಡ) ಹಳವಿಕೆ ಮಾಡುತ್ತಿದ್ದ. ಉಂಡಾಡು ಪದುಮಣ್ಣ ಕುರಿ ಕಾಯುತ್ತಿದ್ದ. ಉಳಿದವರು ಒಕ್ಕಲುತನ ಅವಲಂಭಿಸಿದರು. ಹೆಳವರು ಹೇಳುವ ಈ ಸೋದರ ಸಂಬಂಧದ ಮೌಖಿಕ ಹೇಳಿಕೆಯಲ್ಲಿ ವೃತ್ತಿಗಳೇ ಜಾತಿಗಳಾದ ಸತ್ಯವಿದೆ. ಇದನ್ನು ಸುಲಭವಾಗಿ ತಳ್ಳಿಹಾಕದ ರೀತಿಯಲ್ಲಿ ಸಾಂಸ್ಕೃತಿಕ ಎಳೆಗಳು ತಳುಕು ಹಾಕಿಕೊಂಡಿವೆ. “ಗ್ರಾಮಾಂತರ ಇತಿಹಾಸ ಸಂರಕ್ಷಕರಾದ ಇವರು ತಮ್ಮಲ್ಲಿ ೨೪ ಗೋತ್ರಗಳನ್ನು ವಿಂಗಡಿಸಿಕೊಳ್ಳುತ್ತಾರೆ. ಇವರ ಸಂಪ್ರದಾಯಗಳು, ನಂಬಿಕೆಗಳು, ಆಚಾರಗಳು ಬಹುಮಟ್ಟಿಗೆ ಒಕ್ಕಲಿಗ ಜನಾಂಗದ ಹತ್ತಿರಕ್ಕೆ ಇವರ ಸಂಬಂಧವನ್ನು ಕಲ್ಪಿಸುತ್ತವೆ. ತಾವೂ ಒಕ್ಕಲಿಗರ ಒಂದು ವರ್ಗವೆಂದೇ ಇವರು ನಂಬುತ್ತಾರೆ” ಎಂಬ ಜೀ.ಶಂ. ಪರಮಶಿವಯ್ಯನವರ ಮಾತು ಇಲ್ಲಿ ಉಲ್ಲೇಖನಾರ್ಹ.

ಡಾ. ಪವಾರ ಅವರು ಕೊಂಡಮಾಮ, ಮೋಡಿಕಾರ ಮುಂತಾದ ಜನಪದ ವೃಂದಗಳು ಆಂಧ್ರಪ್ರದೇಶದಿಂದ ಕನ್ನಡ ನಾಡಿಗೆ ವಲಸೆ ಬಂದು ರೀತಿಯಲ್ಲಿಯೇ ಹೆಳವರೂ ಅಲ್ಲಿಂದಲೇ ಬಂದವರಾಗಿದ್ದು, ಅವರು ಆಂಧ್ರದ ಪಿಚ್ಚುಕುಂಟಲ ಜಾತಿಗೆ ಸೇರಿದವರೆಂದೂ ಅವರ ಮನೆಮಾತು ತೆಲುಗು ಎಂದೂ ಹೇಳುತ್ತಾರೆ. ಇಂದು ತೆಲುಗು ದೇಶದ ಹೆಳವರು ತಮ್ಮನ್ನು ಮಲ್ಲಬತ್ಲು (ಮಲ್ಲಭಕ್ತನು) ಎಂದು ಕರೆದುಕೊಳ್ಳುತ್ತಾರೆ. “ಶ್ರೀಶೈಲದಲ್ಲಿ ಇವರ (ಹೆಳವರ) ಮೂಲ ಮಠವಿರುವುದರಿಂದ ಜನಪದ ಕತೆಯಂತೆ ಇವರ ಮೂಲ ಪುರುಷ ಶ್ರೀಶೈಲಕ್ಕೆ ಹೋಗಿ ಅಲ್ಲಿನ ಗುರುವಿನಿಂದ ಆಶೀರ್ವಾದ ಪಡೆದು ಬಂದವನಾಗಿದ್ದರಿಂದ “ಮಲ್ಲ ಭಕ್ತಲು” ಎಂಬ ಮಾತು ಉಚಿತವಾಗಿ ಒಪ್ಪುವುದಾದರೂ ಕರ್ನಾಟಕದ ಹೆಳವರಿಗೆ ಈ ಬಗೆಯ ಹೆಸರುಗಳಿದ್ದಂತೆ ತೋರುವುದಿಲ್ಲ” ಎಂಬ ಮಾತು ವಿಚಾರಾರ್ಹವಾಗಿ ತೋರುತ್ತದೆ. ಕರ್ನಾಟಕದ ಹೆಳವರಿಗೆ ಮಲ್ಲಭಕ್ತರು ಅನ್ನಲಿಕ್ಕಿಲ್ಲ. ಇಲ್ಲಿಯ ಕೆಲವು ಹೆಳವ ಮನೆತನದವರು ಶ್ರೀಶೈಲ ಮಲ್ಲಯನ ಭಕ್ತರಾಗಿದ್ದಾರೆ ಎಂಬುದೊಂದು ಪ್ರಮುಖ ಅಂಶವಾಗಿ ತೋರುತ್ತದೆ.

ಬೀಳಗಿಯ ಹೆಳವರ ಮನೆದೇವರಲ್ಲಿ ಮಲ್ಲಯ್ಯನೂ ಒಬ್ಬ. ತಾವು ಮುಂಜಾನೆ ಎದ್ದಕೂಡಲೇ ಮನೆಮಂದಿಯೆಲ್ಲ ವಿಭೂತಿ ಹೆಚ್ಚಿಕೊಳ್ಳುತ್ತೇವೆ. ನಾವೆಲ್ಲ ಶಿವನ ಭಕ್ತರೇ ಎನ್ನುತ್ತಾರೆ. ಇವರು ಮಹಾನವಮಿಯಲ್ಲಿ ಬೀಳಗಿಯ ಹೆಳವ ಸಮಾಜದಲ್ಲಿ ಮಹತ್ವದ್ದಾಗಿ ತೋರುತ್ತದೆ. ಮಹಾನವಮಿಯಲ್ಲಿ ಈ ಸಮುದಾಯದವರು ಘಟಸ್ಥಾಪನೆ ಮಾಡುತ್ತಾರೆ. ಎರಡು ಮಡಿಕೆ ನೀರು ತುಂಬಿಟ್ಟು ಅದರ ಮುಂದೆ ನಂದಾದೀವಿಗೆ ಹಚ್ಚಲಾಗುತ್ತದೆ. ಇದರಲ್ಲಿ ಕೆಲವರು ಎರಡು ದಿನ, ಕೆಲವರು ಐದು ದಿನ ಇದನ್ನು ಆಚರಿಸುತ್ತಾರೆ. ನೀರು ತುಂಬಿದ ಎರಡೂ ಮಡಿಕೆಯ ಮೇಲೆ ಒಂದೊಂದು ತೆಂಗಿನಕಾಯಿ ಇಟ್ಟಿರಲಾಗುತ್ತದೆ. ಒಂದಕ್ಕೆ ಹೆಣ್ಣುಮಕ್ಕಳು ಹಾಕುವ ಬೋರಮಾಳ, ಗುಂಡ ಮುಂತಾದ ಒಡವೆಗಳನ್ನು ಹಾಕಿದ್ದರೆ, ಇನ್ನೊಂದಕ್ಕೆ ಪುರುಷರು ಧರಿಸುವ ಬೆಳ್ಳಿ ಉಡದಾರ, ಚೈನ್‌ಹಾಕಲಾಗುತ್ತದೆ. ಈ ಅವಧಿಯ ಎಲ್ಲಾ ದಿನಗಳ ಕಾಲ ಮನೆಯ ಒಬ್ಬ ಹೆಣ್ಣುಮಗಳು ಒಂದು ಹೊತ್ತು ಉಪವಾಸವಿರುತ್ತಾಳೆ. ವಿಜಯದಶಮಿಯಂದು ಅಂಗಳ ಸಾರಿಸಲಾಗುತ್ತದೆ. ಸುತ್ತಲೂ ಅದಕ್ಕೆ ಅರಿಶಿಣ, ಕುಂಕುಮ ಹಚ್ಚುತ್ತಾರೆ. ತರುವಾಯ ಔಡಲ ಅಥವಾ ಕುಂಬಳ ಎಲೆಯಲ್ಲಿ ಹೋಳಿಗೆ, ಅನ್ನ ಮುಂತಾಗಿ ಮಾಡಿದ ಅಡುಗೆಯನ್ನು ನೈವೇದ್ಯವೆಂದು ಅಲ್ಲಿ ಇಡಲಾಗುತ್ತದೆ. ಇವರ ಮನೆಯಲ್ಲೊಂದು ಮಲ್ಲಯ್ಯನ ದೀವಟಿಗೆಯಿದೆ. ಅದಕ್ಕೆ ದೀಪ ಹಚ್ಚಿ ಅದನ್ನು ಮನೆಯ ಮುಖಂಡ ಕೈಯಲ್ಲಿ ಹಿಡಿದುಕೊಂಡು ಏಳುಕೋಟೆ ಏಳು ಕೋಟಿ ಎನ್ನುತ್ತ ಮನೆಯಂಗಳದ ಆ ಪೂಜಾಸ್ಥಾನವನ್ನು ಸುತ್ತು ಹಾಕತೊಡಗುತ್ತಾನೆ. ಮನೆ ಮಂದಿಯೆಲ್ಲ ಅವನ ಬೆನ್ನು ಹಿಂದಿನಿಂದ “ಏಳು ಕೋಟಿ ಏಳು ಕೋಟಿ” ಎನ್ನುತ್ತ ಅವರೂ ಸುತ್ತು ಹಾಕುತ್ತಾರೆ. ಇದು ಐದು ಸುತ್ತು ಆಗಬೇಕು. ಈ ಸಂದರ್ಭದಲ್ಲಿ ಇವರಿಗೆ ಬೀಗನಾಗಿರುವ ಒಬ್ಬ ಹುಡುಗ ಐದು ಸುತ್ತು ಮುಗಿಯುವುದರೊಳಗಾಗಿ ಅಲ್ಲಿಟ್ಟ ನೈವೇದ್ಯವನ್ನು ಅಂಬೆಗಾಲೂರಿ ಬಾಯಿಂದ ಜಗ್ಗಿಕೊಳ್ಳುತ್ತಾನೆ. ಆಗ ಉಳಿದವರೆಲ್ಲ “ಹಚಾ ಹಚಾ” ಎಂದು ಅವನನ್ನು ಬೆದರಿಸುತ್ತಾರೆ. ಅಲ್ಲಿ ಇಟ್ಟಿರುವ ದಕ್ಷಿಣೆಯನ್ನೂ ಹೋಳಿಗೆಯನ್ನೂ ಹುಡುಗ ತೆಗೆದುಕೊಳ್ಳುತ್ತಾನೆ.

ಮಲ್ಲಯ್ಯನನ್ನು ಮನೆದೇವರೆಂದು ಒಪ್ಪಿಕೊಂಡು ಇಂಥ ಆಚರಣೆಗಳನ್ನು ರೂಢಿಗೆ ತಂದುಕೊಂಡಿರುವ ವಿಧಾನವನ್ನು ನೋಡಿದರೆ, ಇದು ತೆಲುಗು ಮೂಲದ ಪಳೆಯುಳಿಕೆಯೇ ಎಂಬ ಸಂಶಯಕ್ಕೆ ಎಡೆಮಾಡಿಕೊಡುತ್ತದೆ. ಆದರೆ ಇಂದು ಕರ್ನಾಟಕದ ಬಹಳಷ್ಟು ಜನ ಹೆಳವರು ತಾವು ಕನ್ನಡದವರೇ, ತಮ್ಮ ಭಾಷೆ ಕನ್ನಡವೇ ಎನ್ನುತ್ತಾರೆ. ಸ್ಫುಟವಾಗಿ ಕನ್ನಡ ಮಾತನಾಡುವ ಇವರ ದೈನಂದಿನ ಆಚರಣೆ, ಸಂಪ್ರದಾಯಗಳು. ಕರ್ನಾಟಕದ ಅನೇಕ ಸಮುದಾಯಗಳನ್ನು ಹೋಲುತ್ತವೆ. ಮೇಲೆ ಉಲ್ಲೇಖಿಸಿದ ಮಲ್ಲಯ್ಯನ ಆಚರಣೆ ಮೂಲತಃ ತೆಲುಗು ಸಂಪ್ರದಾಯದಿಂದ ಬಂದುದೇ ಅಥವಾ ಕರ್ನಾಟಕದಲ್ಲಿರುವ ಇತರ ಸಮುದಾಯದ ಮಲ್ಲಯ್ಯನ ಭಕ್ತರಿಂದ ಅನುಕರಣೆಯಾಗಿ ಬಂದಿದ್ದೇ ಎಂಬುದು ಇನ್ನೂ ಸ್ಪಷ್ಟವಾಗಬೇಕು. ಒಂದು ಗಮನಾರ್ಹ ಅಂಶವೆಂದರೆ ಶ್ರೀಶೈಲ ಮಲ್ಲಿಕಾರ್ಜುನ ಕರ್ನಾಟಕದ ಎಲ್ಲ ಹೆಳವರಿಗೆ ಮನೆದೇವರಾಗಿಲ್ಲ. ಗುಲ್ಬರ್ಗ ಜಿಲ್ಲೆಯ ಮದರಾ ಬಿ ಯ ಭೀಮಶ್ಯಾ ಹೆಳವರ ಅವರ ಮನೆದೇವರು ಜಟ್ಟಿಂಗರಾಯ ಮತ್ತು ಸವದತ್ತಿ ಯಲ್ಲಮ್ಮ, ತಳಕಟ್ನಾಳದ (ತಾ. ಗೋಕಾಕ) ಯಮನಪ್ಪ ಲಕ್ಷ್ಮಣ ಹೆಳವರ ಅವರ ಮನೆದೇವರು ಲಕ್ಷ್ಮಿದೇವಿ.

ಶಕೆ ೧೧೨೬ (ಕ್ರಿ.ಶ. ೧೨೦೪)ರ ಕುಂಚು ಶಾಸನವೊಂದನ್ನಾಧರಿಸಿ ಹೆಳವರು ಶೈವ ಪರಂಪರೆಗೆ ಸೇರಿದವರು ಎನ್ನಲಾಗುತ್ತಿದೆ. ಯಾವುದೇ ಜನಾಂಗದ ಮೂಲ, ಚಲನವಲನಗಳನ್ನು ನಿರ್ಧರಿಸುವಲ್ಲಿ ಆಯಾ ಜನಾಂಗದ ಮನೆದೇವರು, ಕುಲದೇವರು, ಗ್ರಾಮದೇವರು ಮಹತ್ವದ ಪಾತ್ರವಾಡುತ್ತವೆ. ಮೊದಲೆಲ್ಲೋ ವಾಸವಾಗಿದ್ದ ಒಂದು ಮನೆತನ ಕಾಲಾಂತರದಲ್ಲಿ ಬೇರೆ ಪ್ರದೇಶಕ್ಕೆ ವಲಸೆ ಬಂದಾಗ ಮೂಲಸ್ಥಳದ ದೇವರೊಂದಿಗೆ ಹೊಸದಾಗಿ ನೆಲೆಸಿದ ಪ್ರದೇಶದ ದೇವರನ್ನು ಮನೆದೇವರನ್ನಾಗಿ ಸ್ವೀಕರಿಸುವುದಿದೆ. ಹೀಗಾಗಿ ಕ್ರಮೇಣ ಮನೆತನದ ಮೂಲ ಸ್ಥಳವನ್ನು ಗುರುತಿಸುವುದು ಕಷ್ಟವಾಗುತ್ತಿದೆ. ಕರ್ನಾಟಕದ ಹೆಳವರಲ್ಲಿಯೂ ಹೀಗಾಗಿ ವಿಷಯ ಸಂಕೀರ್ಣಗೊಂಡಿದೆ. ಇದನ್ನೆಲ್ಲ ಮನಗಂಡರೆ ಈ ದಿಸೆಯಲ್ಲಿ ಇನ್ನೂ ಅಭ್ಯಾಸ ಮುಂದುವರಿಯುವ ಅವಶ್ಯಕತೆಯಿದೆ.

ಕುಲವೃತ್ತಿ:

ಹೆಳವರು ತಮ್ಮ ಒಕ್ಕಲುಮನೆಗಳಿಗೆ ಹೋಗುವುದು ವರ್ಷದಲ್ಲಿ ಒಂದು ಬಾರಿ ಮಾತ್ರ. ಗುಲ್ಬರ್ಗ ಜಿಲ್ಲೆಯಲ್ಲಿ ಒಕ್ಕಲು ಮನೆ ಎನ್ನುವ ಬದಲು “ಭಕ್ತರ ಮನೆ” ಎನ್ನುತ್ತಾರೆ. ಈ ಒಕ್ಕಲು ಮನೆಗಳು ಪೂರ್ವಕಾಲದಿಂದಲೇ ನಿರ್ಧರಿಸಲ್ಪಟ್ಟಿದೆ. ದೂರದೂರದವರೆಗೂ ಇವರ ಒಕ್ಕಲು ಮನೆಗಳು ಪೂರ್ವಕಾಲದಿಂದಲೇ ನಿರ್ಧರಿಸಲ್ಪಟ್ಟಿವೆ. ದೂರದೂರದವರೆಗೂ ಇವರ ಒಕ್ಕಲು ಮನೆಗಳಿರುತ್ತವೆ. ಒಕ್ಕಲುಮನೆಯ ಅಣ್ಣ-ತಮ್ಮಂದಿರು ಬೇರೆಯಾಗಿ ಅವರಲ್ಲಿ ಯಾರೋ ಒಬ್ಬರು ನೌಕರಿಗಾಗಿಯೋ ಮತ್ತಾವ ಕಾರಣಕ್ಕೋ ದೂರ ದೂರ ನೆಲೆಸಿದ್ದರೆ ಅದು ಎಷ್ಟೇ ದೂರವಾದರೂ ಸರಿ, ಇವರು ಅಲ್ಲಿಗೆ ಹೋಗಿ ತಮ್ಮ ಹಕ್ಕಿನ ಕಾಣಿಕೆಯನ್ನು ತರುತ್ತಾರೆ. ಇನ್ನು ಒಂದೆ ಬಡ್ಡಿಯ ಹೆಳವ ಅಣ್ಣ-ತಮ್ಮಂದಿರು ಬೇರೆಯಾದರೆ ಅವರೂ ತಮ್ಮ ಒಕ್ಕಲುಗಳನ್ನು ಹಂಚಿಕೊಳ್ಳುತ್ತಾರೆ. ಸಾಮಾನ್ಯವಾಗಿ ಯುಗಾದಿಯಿಂದ ದೀಪಾವಳಿವರೆಗೆ ಇವರು ತಮ್ಮ ಒಕ್ಕಲು ಊರುಗಳಲ್ಲಿ ಸಂಚರಿಸುತ್ತಾರೆ.

ಹೆಳವರಿಗೆ ತಮ್ಮ ಮನೆತನದ ವಂಶಸ್ಥರಿಂದ ಬಂದ ಬಹುದೊಡ್ಡ ಆಸ್ತಿಯೆಂದರೆ ಒಕ್ಕಲುಗಳ ವಂಶಾವಳಿಯನ್ನು ಬರೆದಿಟ್ಟ ಪುಸ್ತಕಗಳು. ಈ ಪುಸ್ತಕಗಳಿಗೆ ವಹಿ, ಚೋಪಡಿ, ಚಪ್ಪೋಡ ಎಂದು ಬೇರೆ ಬೇರೆ ಹೆಸರುಂಟು. ಇತ್ತಿತ್ತಲಾಗಿ “ಬುಕ್ಕು” ಎಂದೂ ಇದನ್ನು ಕರೆಯಲಾಗುತ್ತದೆ. ಈ ಪುಸ್ತಕದಲ್ಲಿ ವಂಶಾವಳಿಗಳನ್ನು ನಾವಿಂದು ಕಥೆ, ಕಾದಂಬರಿಗಳನ್ನು ಬರೆಯುವಂತೆ ಬರೆದಿರುವುದಿಲ್ಲ. ವಂಶದ ಅಣ್ಣ-ತಮ್ಮಂದಿರ ಸಂಖ್ಯೆ ಬೆಳೆಬೆಳೆದಂತೆ ತಂದೆ-ಮಕ್ಕಳ ಹೆಸರುಗಳನ್ನು ಗೆರೆಗಳನ್ನು ಕೊರೆದು ಕೆಳಮುಖವಾಗಿ ಬರೆಯಲಾಗುತ್ತದೆ. ಇದು ಹೆಚ್ಚು ಕಡಿಮೆ ಇತಿಹಾಸಕಾಲದ ರಾಜರ ವಂಶಾವಳಿಯನ್ನು ಗುರುತಿಸುವ ಮಾದರಿಯಲ್ಲಿ ಇರುತ್ತದೆ. ಪ್ರಸ್ತುತ ಯಾವುದೋ ಒಂದು ಮನೆತನದ ವಂಶಾವಳಿಯನ್ನು ಹೇಳುವ ಪ್ರಾರಂಭದಲ್ಲಿ ಒಂದು ಕಥಾ ಮಾದರಿಯ ಘಟನೆ ಇರುತ್ತದೆ. ಆ ಘಟನೆಯನ್ನು ಇವರು ಟಿಪ್ಪಣಿ ಮಾಡಿಟ್ಟುಕೊಂಡಿರುತ್ತಾರೆ. ಮೊದಲು ಅದನ್ನು ಹೇಳಿ, ತರುವಾಯ ಬೆಳೆಯುತ್ತ ಹೋಗುವ ವಂಶದ ಅಣ್ಣ-ತಮ್ಮಂದಿರನ್ನು ಹೊಗಳುತ್ತ ಹೋಗುತ್ತಾರೆ.

ವಂಶಾವಳಿ ಹೇಳುವ ಹೆಳವರಲ್ಲಿ ಬಹಳಷ್ಟು ಜನ ಅಕ್ಷರವಂತರು, ಮೊದಲೆಲ್ಲ ವಂಶಾವಳಿಗಳನ್ನು ಹೇಳುತ್ತಿದ್ದರು. ವಂಶಾವಳಿಯನ್ನು ಹೇಳುವ ಹೆಳವರು ಅಕ್ಷರವಂತರೆಂದರೂ ಯಾವುದೇ ಉಚ್ಚ ಶಿಕ್ಷಣ ಪಡೆದ ಪದವೀಧರರಲ್ಲ. ತಮ್ಮ ಒಕ್ಕಲು ಮನೆಯ ವಂಶಸ್ಥರ ಹೆಸರುಗಳನ್ನು ಓದುವಷ್ಟರ ಮಟ್ಟಿಗೆ ಇವರ ಶಿಕ್ಷಣ. ಈ ಶಿಕ್ಷಣವೂ ಶಾಲೆಗೆ ಹೋಗಿ ಪಡೆದದ್ದಲ್ಲ. ಮನೆಯಲ್ಲಿಯೇ ತಂದೆಯೋ ಅಜ್ಜನೋ ಹೇಳಿಕೊಟ್ಟದ್ದು. ಹುಡುಗರು ಐದಾರು ವರ್ಷದವರಾಗುತ್ತಲೇ ಅವರಿಗೆ ಅಕ್ಷರಭ್ಯಾಸ ಮಾಡಿಸಲಾಗುತ್ತಿತ್ತು. ಇಂದು ಹೆಳವರ ಚೋಪಡಿಗಳೆಲ್ಲ ಕನ್ನಡ ಭಾಷೆಯಲ್ಲಿಯೇ ಇವೆ. ನೂರು ವರ್ಷಗಳ ಹಿಂದೆ ಬ್ರಾಹ್ಮಣರನ್ನು ಬಿಟ್ಟರೆ ಉಳಿದ ಸಮುದಾಯದವರು ಕಲಿತದ್ದು ಬೆರಳೆಣಿಕೆಯಷ್ಟು. ಹಿಂದುಳಿದ ಸಮಾಜಗಳಲ್ಲಂತೂ ಅಕ್ಷರವಂತರ ಸಂಖ್ಯೆ ಶೂನ್ಯವಾಗಿತ್ತೆಂದೇ ಹೇಳಬೇಕು. ಅಂಥ ಹೊತ್ತಿನಲ್ಲಿ ತಮ್ಮ ಒಕ್ಕಲು ವಂಶಗಳನ್ನು ಹೊಗಳುವ ವೃತ್ತಿಗೆ ಅನಿವಾರ್ಯವಾದ ಅಕ್ಷರ ಅಭ್ಯಾಸವನ್ನು ಇವರು ಹಿರಿಯ ತಲೆಮಾರಿನವರಿಂದ ರೂಢಿಸಿಕೊಂಡದ್ದು ಪ್ರಗತಿಪರ ವಿಚಾರವೆಂದೇ ಹೇಳಬೇಕು.

ಹೆಳವರೆಂದರೆ ರೈತರಿಗೆ ತುಂಬ ಪ್ರೀತಿ, ಗೌರವ. ತಮ್ಮ ವಂಶದ ಹಿರಿಯರ ಹತ್ತಾರು ತಲೆಮಾರುಗಳ ವಿಷಯವನ್ನು ಇವರ ಬಾಯಿಂದ ಕೇಳುವುದೆಂದರೆ ಅಭಿಮಾನದ ವಿಷಯ. ಹೀಗಾಗಿ ಹೆಳವರು ಬಂದರೆಂದರೆ ಮಾಡುವ ಕೆಲಸ ಬಿಟ್ಟು ಒಕ್ಕಲಿಗರು ಇವರೆದುರು ಕುಳಿತುಕೊಳ್ಳುತ್ತಾರೆ. ಸುಮಾರು ಐವತ್ತು ವರ್ಷಗಳ ಹಿಂದಿನ ತನಕ ಹೆಳವರು ಎತ್ತನ್ನು ಹತ್ತಿಕೊಂಡೇ ಒಕ್ಕಲು ಮನೆಗಳಿಗೆ ಹೋಗುತ್ತಿದ್ದರು. ತಮ್ಮ ಮೂಲ ವಂಶಸ್ಥ ಹೆಳವನಿದ್ದ ಕುರುಹಿಗಾಗಿ ಎತ್ತಿನ ಮೇಲೆ ಕುಳಿತು ಇಳಿಬಿಟ್ಟ ಒಂದು ಕಾಲನ್ನು ಕಂಬಳಿಯಿಂದ ಮುಚ್ಚಲಾಗುತ್ತಿತ್ತಂತೆ. ಇವರು ವಂಶಾವಳಿ ಹೇಳಲು ಬಂದ ಹೆಳವರು ಎಂಬುದನ್ನು ಗುರುತಿಸುವ ಮಟ್ಟಿಗೆ ಹೆಳವರಿಗೆ ಅವರದೇ ಆದ ವೇಷ-ಭೂಷಣಗಳಿವೆ.

ಅಂಗಿ, ಧೋತ್ರ, ಪಟಕ, ಕರಿಕೋಟು ತೊಟ್ಟು ಹೆಗಲ ಮೇಲೊಂದು ಗುಲಾಬಿ ಬಣ್ಣದ ಶಾಲು ಹಾಕಿಕೊಳ್ಳುವುದು ಹೆಳವರ ರೀತಿ. ಗುಲಾಬಿ ವರ್ಣದ ಈ ಶಾಲೇ ಹೆಳವರನ್ನು ಇತರರಿಂದ ಪ್ರತ್ಯೇಕಿಸುತ್ತದೆ. ಎತ್ತು ಹತ್ತಿ ಹೋಗುವ ಹೆಳವರು ಒಂದು ಕಾಲಕ್ಕೆ ಎತ್ತನ್ನು ತುಂಬ ಆಕರ್ಷಕವಾಗಿ ಸಿಂಗರಿಸುತ್ತಿದ್ದರು. ಎತ್ತಿನ ಬೆನ್ನಮೇಲೆ ಸಬರ ಹಾಕಿ ಅದರ ಮೇಲೊಂದು ಚೆಂದದ ಅರಿವೆಯನ್ನು ಹಾಕಲಾಗುತ್ತಿತ್ತು. ಮತ್ತದರ ಮೇಲೆ ಆಚೀಚೆ ಹಸಿಬಿಯಂತಹ ಚೀಲಗಳನ್ನು ಇಳಿಬಿಡಲಾಗುತ್ತಿತ್ತು. ಇವು ಮೊದಮೊದಲು ಚಾಪೆಯವಿದ್ದು, ಕ್ರಮೇಣ ನೂಲಿನ ಗಟ್ಟಿಮುಟ್ಟಾದ ಚೀಲಗಳು ಬಂದವು. ಒಕ್ಕಲಿಗರು ಕೊಟ್ಟ-ಕಾಳು ಕಡಿಯನ್ನು ಇದರಲ್ಲಿ ಹಾಕಲಾಗುತ್ತಿತ್ತು. ಈ ಚೀಲಕ್ಕೆ “ಬುಂಗಿ” ಎಂದು  ಕರೆಯಲಾಗುತ್ತಿತ್ತು. ಇದು ಭೃಂಗಿಯ ತದ್ಭವರೂಪ. ಭೃಂಗಿ ತಮ್ಮ ಮೂಲಪುರುಷನಾಗಿರುವುದರಿಂದ ಆ ಹೆಸರು ಇಲ್ಲಿ ಹೀಗೆ ಉಳಿದುಕೊಂಡು ಬಂದಿದೆಯೆಂದು ಹೇಳುತ್ತಾರೆ. ಎತ್ತಿನ ಕೋಡುಗಳಿಗೆ ಸಾಮಾನ್ಯವಾಗಿ ಕೊಂಬಣಸು ಹಾಕಿಸಲಾಗುತ್ತಿತ್ತು. ಎತ್ತಿನ ಕೊರಳಲ್ಲಿ ಸಣ್ಣನೆಯ ಗೆಜ್ಜೆಯಲ್ಲದೆ ಬಣ್ಣ ಬಣ್ನದ ಲಡ್ಡು, ಸರಪಳಿಗಳನ್ನು ಹಾಕುತ್ತಿದ್ದರು. ಎತ್ತಿಗೆ ಮೂಗುದಾಣ, ಮಕಾಡಗಳಂತೂ ಸಾಮಾನ್ಯವಾಗಿರುತ್ತಿದ್ದವು. ಕೆಲವರು ಎತ್ತಿಗೆ ಸುಂದರವಾದ ಹಣೆಪಟ್ಟಿಯನ್ನು ಹಾಕುತ್ತಿದ್ದರು. ಎತ್ತಿನ ಕೋಡಿನ ಹಿಂದೆ ಮುಗುದಾಣ, ಮಕಾಡುಗಳಿಗೆ ಕಟ್ಟಿದ ಹಣೆಹಗ್ಗದ ಇನ್ನೊಂದು ತುದಿ ಎತ್ತಿನ ಮೇಲೆ ಕುಳಿತ ಹೆಳವಪ್ಪನ ಕೈಯಲ್ಲಿರುತ್ತಿತ್ತು. ಇಲ್ಲಿ ಬಹಳ ಮುಖ್ಯವಾದುದೆಂದರೆ ಎತ್ತಿನ ಕೊರಳಲ್ಲಿ ನೇತಾಡುವ ದೊಡ್ಡದೊಂದು ಗಂಟೆ. ಇದು ಹೆಳವರ ವೃತ್ತಿಗೌರವದ ಸೂಚಕ.

ಹೆಳವಪ್ಪ ತುಂಬ ನಸುಕಿನಲ್ಲಿಯೇ ಎತ್ತನ್ನು ಸಿದ್ದಪಡಿಸಿಕೊಂಡು ತನ್ನ ಒಂದು ಒಕ್ಕಲು ಮನೆಯೆದುರು ಎತ್ತಿನ ಮೇಲೆ ಕುಳಿತುಕೊಂಡು ಹಾಜರಾಗುತ್ತಿದ್ದ. ಆಗ ಒಕ್ಕಲು ಹೆಣ್ಣು ಮಕ್ಕಳು ಎತ್ತಿನ ಪಾದಕ್ಕೆ ನೀರು ಹಾಕಿ, ವಿಭೂತಿ ಕುಂಕುಮ ಹಚ್ಚಿ ಆರುತಿ ಮಾಡಿ ಬರಮಾಡಿಕೊಳ್ಳುತ್ತಿದ್ದರು. ಹೆಳವಪ್ಪನ ಮನೆಯ ಮುಂದೆ ಎತ್ತಿನ ಮೇಲೆ ಕುಳಿತಿರುವಂತೆಯೇ ಆ ಮನೆಮಂದಿ ಮನೆಹೊರಗಿನ ಕಟ್ಟೆಯ ಮೇಲೆ, ದಂದಕ್ಕಿಯ ಕಟ್ಟೆಯ ಮೇಲೆ, ಒಳಬಾಗಿಲಲ್ಲಿ ಕುಳಿತುಕೊಂಡೋ ನಿಂತುಕೊಂಡೇ ತಮ್ಮ ವಂಶಾವಳಿ ಹಿರಿಮೆಯನ್ನು ಕಾತರದಿಂದ ಕೇಳಲು ಸಜ್ಜುಗೊಳ್ಳುತ್ತಿದ್ದರು. ಎಲ್ಲರೂ ತನ್ನತ್ತ ಗಮನವಿಟ್ಟು ನಿರೀಕ್ಷಿಸಿಕೊಂಡಿರುವಂತೆ ಇವನು ಆರಂಭದಲ್ಲಿ ಸ್ತುತಿಗೈದು, ವಂಶಾವಳಿ ಹೇಳಲು ಮೊದಲು ಮಾಡುತ್ತಿದ್ದ. ಇಡೀ ವಂಶಾವಳಿಯನ್ನು ಎತ್ತಿನ ಮೇಲೆ ಕುಳಿತುಕೊಂಡೇ ಹೇಳಲಾಗುತ್ತಿತ್ತು. ಕೊರ್ತಿಗೌಡರ ವಂಶಾವಳಿಯೊಂದು ಹೀಗೆ ಆರಂಭಗೊಳ್ಳುತ್ತದೆ.

ಯಾದಿಯ ವಂಶಾವಳಿ ಶಾಲಿವಾಹನ ಶಕೆ ೧೧೨೫
ಇವರ ಬೆಡಗು ಕರಕನವರು
ಮನೆ ದೇವರು ಬಸವಣ್ಣನವರು
ಪೂರ್ವಿ ಸ್ಥಳ ಶಾಲ ಬಿದರಿ ಕೋಟಿ ಭೂಮಿಗೌಡ್ರು
ಬಿಟ್ಟು ಭೀಮಾನದಿ ಹೊಳಿಗೆ ಬಂದ್ರು
ಅಲ್ಲಿಂದು ಬಿಟ್ಟು ಬೂದ್ಯಾಳ ದೇಸಗತಿ ಗಳಿಸಿದರು
ಅದನೂ ದೇಸಗಿ ಬಿಟ್ಟು ಕೊರ್ತಿ ಗ್ರಾಮಕ ಬಂದು
ಗೌಡಕಿ ಗಳಿಸಿದರು.

-ಹೀಗೆ ಹೇಳುವ ವಂಶಾವಳಿಗಳು ಕೆಲವು ದೀರ್ಘಕಾಲಮಾನದವಿದ್ದರೆ, ಕೆಲವು ಅಲ್ಪಾವಧಿ ಕಾಲಮಾನದವು. ಕೆಲವು ಸಲ ದೇಶದಲ್ಲಿ ಅಥವಾ ನಾಡಿನಲ್ಲಿ ಜರುಗಿದ ಪ್ರಮುಖ ಘಟನೆಗಳು. ಆರಂಭದಲ್ಲಿ ಮುಖದೋರುತ್ತವೆ. ಅದರಿಂದ ಆ ವಂಶದ ಇತಿಹಾಸದ ಆರಂಭವನ್ನು ಅರಿಯಬಹುದು. ಸಾಮಾನ್ಯವಾಗಿ ಎಲ್ಲಾ ವಂಶಾವಳಿಯ ಮೂಲ ದೊಡ್ಡವರಿಂದಲೆ ಆರಂಭಗೊಳ್ಳುತ್ತದೆ. ಪ್ರಸ್ತುತ ಮನೆತನದ ವಂಶಾವಳಿಯ ಈಗಿನ ವಂಶಸ್ಥರು ಎಂಥ ಸಾಮಾನ್ಯರೇ ಇರಲಿ, ಅವರ ಮೂಲವಂಶಸ್ಥರು ಮಾತ್ರ ಯಾವುದೋ ರಾಜನ ಅಥವಾ ಬಾದಶಹನ ಕಾಲದಲ್ಲಿ ಯಾವುದೋ ಪ್ರಮುಖ ಹುದ್ದೆಯಲ್ಲಿ ಇದ್ದವರೇ ಆಗಿರುತ್ತಾರೆ. ಇವರ ಬಹಳಷ್ಟು ಜನರ ಗೌಡಕಿ ಅಥವಾ ದೇಸಗತಿಯನ್ನು ಮಾಡಿಬಂದವರಾಗಿದ್ದು, ಮುನ್ನೂರು ಕೂರಿಗೆ ಭೂಮಿಯ ಒಡೆಯರೇ ಆಗಿರುತ್ತಾರೆ. ಇದನ್ನು ನೋಡಿದರೆ ಯಾರ ಮೂಲವೂ ಸಾಮಾನ್ಯ ರೀತಿಯದೇ ಅಲ್ಲ. ಎಲ್ಲರೂ ಒಂದು ಕಾಲಕ್ಕೆ ಅಸಾಮಾನ್ಯರೇ, ವಸ್ತುಸ್ಥಿತಿ ನೋಡಿದರೆ ಇದರಲ್ಲಿ ಎಲ್ಲವೂ ಸತ್ಯವಲ್ಲ, ಎಲ್ಲವೂ ಸುಳ್ಳಲ್ಲ ಎಂಬಂತೆ ತೋರುತ್ತದೆ. ಮನುಷ್ಯನ ಸ್ವಭಾವವೇ ಹೀಗೆ. ನಾವು ಯಾರೂ ಸಾಮಾನ್ಯ ಮನೆತನದವರೆಂದು ಹೇಳಿಕೊಳ್ಳಲು ಸಿದ್ದರಿರುವುದಿಲ್ಲ. ನಾವೀಗ ಎಂಥ ಹೀನಾಯ ಸ್ಥಿತಿಯಲ್ಲಿದ್ದರೂ ನಮ್ಮ ಪೂರ್ವಜರ ಬಗೆಗೆ ಹೇಳಿಕೊಂಡು ಜಂಭ ತಾಳುತ್ತೇವೆ. ಅಂಥದರಲ್ಲಿ ನಿಮ್ಮ ಪೂರ್ವಜರೆಲ್ಲ ದನ ಕಾಯುತ್ತಿದ್ದರು. ಕುರಿಕಾಯುತ್ತ ಕಷ್ಟ ಪಡುತ್ತಿದ್ದರು ಎಂದರೆ ನಾವಾರೂ ಹೆಳವರಿಗೆ ಮುಕ್ಕು ಜೋಳ ಹಾಕುವುದಿಲ್ಲ. ಆದ್ದರಿಂದಲೇ ಹೆಳವನೆದುರು ಕೂತ ಎಲ್ಲರೂ ಮೂಲ ಪುರುಷರೂ ಶ್ರೇಷ್ಠರೇ ಆಗಿದ್ದಾರೆ! ಸತ್ಯ ಯಾವುದೇ ಇರಲಿ, ಇಂಥ ಹೊಗಳುವಿಕೆಯಿಂದ ಯಾರಿಗೇನೂ ತೊಂದರೆ ಇಲ್ಲವಲ್ಲ ಎಂಬ ನಿಲುವು ಹೆಳವರದ್ದಾಗಿರಬೇಕು.

ಹೊಗಳುವುದಾದ ಮೇಲೆ ಹೆಳವಪ್ಪ ಹೇಳುತ್ತಾನೆ. “ಹೂಂ ಹಾಕರಿ ಹೆಣ್ಣ ಮಗಳಿಗೆ ಉಡಕ್ಕಿ, ಗೋಧಿ ಬರ್ಲಿ, ಕಡ್ಲಿ ಬರ್ಲಿ, ಜ್ವಾಳ ಬರ್ಲಿ, ಅಕ್ಕಡಿಹಾಳ ಬರ್ಲಿ ಹಾಕ್ರಿ” ಹೀಗೆ ಅವನ ಬೇಡಿಕೆಯ ಪಟ್ಟಿ ಬಹು ದೊಡ್ಡದಾಗಿಯೇ ಇರುತ್ತದೆ. ಈ ಸಂದರ್ಭದಲ್ಲಿ ಹೆಳವಪ್ಪನ ಮಾತು, ರೀತಿ ತುಂಬ ಆತ್ಮೀಯವಾಗಿರುತ್ತದೆ. ಅವನು ತನ್ನನ್ನು ತಾನು ಮನೆಯ ಹೆಣ್ಣುಮಗಳೆಂದು ಕರೆದುಕೊಳ್ಳವಲ್ಲಿ ತನ್ನ ಹಾಗೂ ಒಕ್ಕಲು ಮನೆತನದೊಂದಿಗೆ ಇರುವ ಮಧುರ ಸಂಬಂಧ ವ್ಯಕ್ತವಾಗುತ್ತದೆ. ಹೆಣ್ಣುಮಗಳೆಂಬುದಕ್ಕೆ ಗ್ರಾಮೀಣ ಪರಿಸರದಲ್ಲಿ ವಿಶೇಷ ಅರ್ಥವಿದೆ. ಇದು ಕೇವಲ ಸ್ತ್ರೀ ಎಂಬ ಸಾಮಾನ್ಯ ಅರ್ಥದ್ದಲ್ಲ. ಒಂದು ಮನೆಯಲ್ಲಿ ಮಗಳಾಗಿ ಹುಟ್ಟಿದವಳು ಆ ಕುಟುಂಬದ ಹೆಣ್ಣುಮಗಳೆನಿಸುತ್ತಾಳೆ. ಅವಳು ಗಂಡನ ಮನೆಗೆ ಹೋದ ಮೇಲೂ ತವರುಮನೆಯೊಂದಿಗಿನ ತನ್ನ ಸಂಬಂಧವನ್ನು ಅತ್ಯಂತ ಆತ್ಮೀಯವಾಗಿಯೇ ಉಳಿಸಿಕೊಳ್ಳುತ್ತಾಳೆ. ಆಗೀಗ ತವರಿಗೆ ಬಂದು ಒಮ್ಮೊಮ್ಮೆ ಸಹಜವಾಗಿ, ಒಮ್ಮೆಮ್ಮೆ ಕಾಡಿಬೇಡಿ ಉಡುಗೊರೆಗಳನ್ನು ಒಯ್ಯುತ್ತಲೇ ಇರುತ್ತಾಳೆ. ಗ್ರಾಮೀಣ ಪರಿಸರದಲ್ಲಿ ಇದೆಲ್ಲ ನಿರ್ವ್ಯಾಜ್ಯ ಪ್ರೀತಿಯ ನೆಲೆಯಲ್ಲಿ ಸಾಗುವ ಸರಳ ಪ್ರಕ್ರಿಯೆ. ಇಂಥದೇ ಪ್ರೀತಿಯ ಸಂಬಂಧವನ್ನು ಒಕ್ಕಲುಮನೆತನಗಳ ಸಂಗಡ ಹೆಳವರು ಉಳಿಸಿಕೊಂಡಿರುತ್ತಾರೆ.

ಹೆಳವರು ತೆಗೆದುಕೊಳ್ಳುವ ಕಾಣಿಕೆ ಕೇವಲ ಹಣದ ರೂಪದಲ್ಲಿರುವುದಿಲ್ಲ. ಹೇರಳ ಪ್ರಮಾಣದಲ್ಲಿ ಜೋಳವಲ್ಲದೇ ಆಡು, ಕುರಿ, ಕರು ಮುಂತಾದವನ್ನೆಲ್ಲ ಬೇಡಲಾಗುತ್ತದೆ. ಮುಖ್ಯವಾದ ಕಾಣಿಕೆ ಮುಗಿದ ಮೇಲೆ ಮನೆಯವರು ಉಟ್ಟುಬಿಟ್ಟ ಬಟ್ಟೆಗಳನ್ನೂ ಕೇಳುತ್ತಾರೆ. ಆ ವರ್ಷ ಲಗ್ನವೇನಾದರೂ ಆ ಮನೆತನದಲ್ಲಿ ಆಗಿದ್ದರೆ, ಒಕ್ಕಲು ದೊಡ್ಡದಾಗಿದ್ದರೆ ತೊಲೆ, ಅರ್ಧತೊಲೆ ಬಂಗಾರ, ಹೊಸ ಸೀರೆ, ಜಂಪರು, ಅಂಗಿ, ವಲ್ಲಿ, ಪಟಕಾಗಳನ್ನು ಕಾಣಿಕೆಯಾಗಿ ಪಡೆಯಲಾಗುತ್ತದೆ. ಮನೆಯ ಹಿರಿಯನೇನಾದರೂ ತೀರಿಕೊಂಡಿದ್ದರೆ ಅವರ ಬಟ್ಟೆಬರೆ, ಅವನ ಊಟ ಮಾಡುತ್ತಿದ್ದ ತಾಟು, ತಂಬಿಗೆ ಇಂಥವನ್ನೂ ಹೆಳವರಿಗೆ ಕೊಡಲಾಗುತ್ತದೆ. ಇದನ್ನೆಲ್ಲ ಹೆಳವಪ್ಪ ತುಂಬ ಪ್ರೀತಿಯಿಂದ ಕೇಳುತ್ತಾನೆ. ಇವರೂ ಅಷ್ಟೇ. ತಮ್ಮ ಮನೆಯ ಹೆಣ್ಣುಮಗಳಿಗೆ ಕೊಟ್ಟಷ್ಟೇ ಪ್ರೀತಿಯಿಂದ ಕೊಡುತ್ತಾರೆ. ಕೊನೆಯಲ್ಲಿ ಮೊರದ ತುಂಬ ಜೋಳ ಅಥವಾ ಗೋಧಿಯನ್ನು ತುಂಬಿ, ಉಡೆಕ್ಕಿ ಹಾಕಲಾಗುತ್ತದೆ. ಉಡೆಕ್ಕಿ ಹಾಕಿದ ಮೇಲೆ ಹೆಳವಪ್ಪ ತಪ್ಪದೆ ಹರಕೆ ಹೇಳುತ್ತಾನೆ:

ಹಾಲು ಹಣ್ಣಾಗಲೀ
ಬೆಳ್ಳಿ ಬಟ್ಟಲಾಗಲೀ
ತೂಗು ತೊಟ್ಟಿಲಾಗಲೀ
ಮಣ್ಣ ಹಿಡಿದಲ್ಲಿ ಚಿನ್ನವಾಗಲೀ
ಹಾಲು ಉಕ್ಕೇರಿದಂಗ ಉಕ್ಕೇರಲಿ
ಮನೆದೇವರು ಬಸವಣ್ಣ ಹೆಚ್ಚು ಕೊಡಲಿ

– ಕೊನೆಯ ಚರಣದಲ್ಲಿ ಬಂದಿರುವ ಬಸವಣ್ಣ ಎಲ್ಲ ಮನೆಯವರಿಗೂ ಆಗಬೇಕಿಲ್ಲ. ಅವರವರ ಮನೆ ದೇವರು ಯಾರು, ಆ ದೇವರು ಇವನ ಹರಕೆಯ ಕೊನೆಯಲ್ಲಿರುತ್ತಾನೆ. ಎಲ್ಲ ಕಾಣಿಕ ಸ್ವೀಕರಿಸಿ ಹರಕೆಯ ಪದ್ಯವಾದ ಮೇಲೆಯೇ ಹೆಳವಪ್ಪ ಎತ್ತಿನ ಮೇಲಿನಿಂದ ಇಳಿಯುತ್ತಿದ್ದ. ಹೆಳವ ಎತ್ತು ಹತ್ತಿ ರೈತನ ಮನೆಗೆ ಹೋದಾಗ ಅವನು ಬಾಯಿ ಹಾಕಿದ್ದನ್ನು ರೈತ ಕೊಡಲೇಬೇಕು. ಕೊಡುವುದಿಲ್ಲ ಎಂದು ಮೊಂಡತನ ಹಚ್ಚಿ ತಪ್ಪಿಸಿಕೊಳ್ಳಲು ಯತ್ನಿಸಿದರೆ ನಡೆಯುತ್ತಿರಲಿಲ್ಲ. ಕೊಡುವವರೆಗೂ ಎತ್ತಿನಿಂದ ಇಳಿಯುತ್ತಿರಲಿಲ್ಲ. ಎತ್ತಿನಿಂದ ಇಳಿಸುವುದು ರೈತನ ಕರ್ತವ್ಯ ಅದು ಎಷ್ಟೊತ್ತಾಗುತ್ತದೋ ಹೇಳಲು ಬಾರದು. ಹತ್ತುವ ಪರವಾನಿಗಿ ಹೆಳವನದು. ಇಳಿಸುವ ಕೆಲಸ ರೈತನದು. ಈ ಜಗ್ಗಾಟ ಬಹಳ ಹೊತ್ತಾಗಿ ಎತ್ತು ಮಲಗಿಕೊಂಡು ಬಿಟ್ಟರೆ ಅಲ್ಲಿಗೆ ಈ ಮನೆತನದ ಹಳವಿಕೆ ನಿಂತು ಬಿಡುತ್ತಿತ್ತು. ಹೀಗೆ ಎತ್ತು ಮಲಗಿಕೊಳ್ಳುವುದನ್ನು ರೈತರು ಅಪಶಕುನವೆಂದು ಬರೆಯುತ್ತಿದ್ದರು. ಆ ಮನೆತನ ಮುಂದೆಂದೂ ಮೇಲೇರುವುದಿಲ್ಲ. ಬದಲಾಗಿ ಸರ್ವನಾಶವಾಗುತ್ತದೆ ಎಂಬ ನಂಬಿಕೆ ರೈತರಲ್ಲಿ ಬೇರೂರಿತ್ತು. ಇಂಥ ಘಟನೆಯ ತರುವಾಯ ಹೆಳವಪ್ಪ ಆ ಮನೆತನದ ಹೆಳವಿಕೆ ಮುಂದುವರಿಸುವುದಿಲ್ಲ. ಮುಂದೆಂದೂ ಅವರ ಮನೆಗೆ ಹೋಗುವಂತಿರಲಿಲ್ಲ. ಏನು ಕೊಡುತ್ತೇವೆಂದರೂ ತೆಗೆದುಕೊಳ್ಳುತ್ತಿರಲಿಲ್ಲ.

ಈಗ ಹೆಳವರು ರೈತನ ಮನೆಬಾಗಿಲಿಗೆ ಎತ್ತಿನ ಸಂಗಡ ಹೋಗದೇ ಒಬ್ಬರೇ ಹೋಗಿ ವಂಶಾವಳಿ ಹೇಳಿ ಬರುತ್ತಾರೆ. ಹೆಳವರ ವೇಷದಲ್ಲಿಯೂ ಸ್ವಲ್ಪ ಬದಲಾವಣೆಯಾಗಿದೆ. ಆಧುನಿಕ ಕಾಲದವರಾರೂ ಈಗ ಕೋಟನ್ನು ಹಾಕುವುದಿಲ್ಲ. ಕೆಲವರು ಪಟಕಾದ ಬದಲು ಟೊಪ್ಪಿಗೆಯನ್ನು ಹಾಕುತ್ತಿದ್ದಾರೆ. ಆಗೇನೋ ಮನೆಯ ತಲೆಬಾಗಿಲಿನ ಮುಂದೆ ಎತ್ತಿನ ಮೇಲೆ ಕುಳಿತುಕೊಂಡು ವಂಶಾವಳಿಯನ್ನು ಹೇಳಲಾಗುತ್ತಿತ್ತು. ಈಗ ಸಾಮಾನ್ಯವಾಗಿ ಮನೆಯ ಪಡಸಾಲೆಯಲ್ಲಿ ಕುಳಿತುಕೊಂಡು ಹೊಗಳಲಾಗುತ್ತದೆ. ಮುಂಚಿನಂತೆ ಈಗಲೂ ಹರಕೆಯಾದ ಮೇಲೆ ಹೆಳವಪ್ಪನಿಗೆ ಊಟ ಹಾಕಲಾಗುತ್ತದೆ. ಊಟ ತಪ್ಪಿದರೆ ಚಹಾನೋ, ತಿನಿಸೋ ಏನಾದರೊಂದು ಇರುತ್ತದೆ.

ಎತ್ತಿನ ಹೆಳವರಲ್ಲಿ ಬಹಳಷ್ಟು ಮಂದಿ ಸಂಸಾರ ಸಮೇತ ಅಲೆಯುತ್ತಾರೆ. ಆದರೆ ಬೀಳಗಿಯ ಹೆಳವರು ಸಂಸಾರವನ್ನು ಸಂಗಡ ಕಟ್ಟಿಕೊಂಡು ಹೋಗದೇ ಕೇವಲ ಕೊಂಡಾಡುವ ಹೆಳವ ವ್ಯಕ್ತಿಯೊಬ್ಬನೇ ತನ್ನ ಎತ್ತಿನ ಸಂಗಡ ಹೋಗುತ್ತಿದ್ದ. ಬಹಳವಾದರೆ ಒಕ್ಕಲು ಮನೆತನಗಳ ಪರಿಚಯವಾಗಲೆಂದು ಸಂಗಡ ಮಗನನ್ನು ಕರೆದುಕೊಂಡು ಹೋಗುತ್ತಿದ್ದುದುಂಟು. ಹೀಗೆ ಹೋಗುವವ ಸುಮಾರು ಎಂಟ್ಹತ್ತು ದಿನಗಳ ಕಾಲ ಒಂದು ಊರಲ್ಲಿ ತಂಗುತ್ತಿದ್ದ. ಅದನ್ನು ಮುಗಿಸಿದ ಮೇಲೆ ಅತ್ತಿಂದತ್ತಲೇ ಮುಂದಿನ ಊರಿಗೆ ಹೋಗುತ್ತಿರಲಿಲ್ಲ. ಒಂದೂರಿನಲ್ಲಿ ಸಂಗ್ರಹಿಸಿದ ಕಾಣಿಕೆಗಳನ್ನು ಮರಳಿ ತನ್ನ ಊರಿಗೆ ಒಯ್ದು ಮುಟ್ಟಿಸಿ ಮತ್ತೆ ಮರುದಿನವೋ, ಎರಡು ಮೂರು ದಿನ ಬಿಟ್ಟೋ ತನ್ನೂರಿನಿಂದ ಬೇರೊಂದು ಗ್ರಾಮಕ್ಕೆ ಪ್ರಯಾಣ ಮುಂದುವರೆಸುತ್ತಿದ್ದ. ಹೀಗೆ ಹೋಗುವ ಹೆಳವಪ್ಪ ಹಿಂದಿನ ದಿನವೇ ತನ್ನ ಎತ್ತಿನೊಂದಿಗೆ ಒಕ್ಕಲು ಊರಿಗೆ ವಸ್ತಿ ಹೋಗುತ್ತಿದ್ದ. ಇವನು ಎತ್ತನ್ನೂ ಕಟ್ಟಿಕೊಳ್ಳುತ್ತಿದ್ದರು. ಎಂಟ್ಹತ್ತು ದಿನಗಳ ಕಾಲ ಎತ್ತು ರಾತ್ರಿ ಹೊತ್ತು ದೊಡ್ಡವರ ಮನೆಯಲ್ಲಿಯೇ ಹೊಟ್ಟು, ಕಣಿಕೆ ಮೆಯ್ದುಕೊಂಡಿರುತ್ತಿತ್ತು. ತಮ್ಮ ಎತ್ತುಗಳ ಸಂಗಡ ಇವರ ಎತ್ತಿನ ನೀರು-ನಿಡಿ ಎಲ್ಲವನ್ನೂ ಗಮನಿಸಲಾಗುತ್ತಿತ್ತು. ಅಷ್ಟೇ ಅಲ್ಲ, ಇವನ ಎತ್ತಿನ ಮೈಯನ್ನೂ ಅವರು ತೊಳೆಯುತ್ತಿದ್ದರು. ಇವನ ಭಕ್ತರ ಕಾಣಿಕೆಯನ್ನು ದಿನಾಲೂ ಶೇಖರಿಸುತ್ತಿರಲಿಲ್ಲ. ಕೊನೆಯ ಒಂದೆರಡು ದಿನಗಳನ್ನು ಅದಕ್ಕಾಗಿಯೇ ಮೀಸಲಾಗಿರಿಸಿ ಎಲ್ಲವನ್ನೂ ಕಟ್ಟಿಕೊಂಡು ತನ್ನ ಊರಿಗೆ ಹೋಗುತ್ತಿದ್ದ.

ಗಂಟೆ ಹೆಳವರ ಪ್ರಧಾನ ವೃತ್ತಿಯೂ ಒಕ್ಕಲು ಮನೆಗಳ ವಂಶಾವಳಿಗಳನ್ನು ಕೊಂಡಾಡುವುದೇ ಇವರು ಜನಪದ ಕಥಾನಕಗಳಲ್ಲಿ ಹಾಡುವುದನ್ನು ಉಪವೃತ್ತಿಯನ್ನೆಷ್ಟುವರ ಮಟ್ಟಿಗೆ ರೂಢಿಸಿಕೊಂಡಿದ್ದಾರೆ. ಆಕರ್ಷಕ ಘಟನೆಗಳನ್ನೊಳಗೊಂಡ ರಮ್ಯ ಕಥೆಗಳು, ಈ ಕಥೆಗಳಿಗೆ ಸುಶ್ರಾವ್ಯವಾಗಿ ಹೊಂದಿಕೊಳ್ಳುವ ಲಯಗಾರಿಕೆ ಜನಪದರನ್ನು ರಂಜಿಸಿ, ಗಂಟೆಯ ಹೆಳವರಿಗೆ ವಿಶಿಷ್ಟ ಸ್ಥಾನ ಕಲ್ಪಿಸಿಕೊಟ್ಟಿದೆ. ಎತ್ತಿನ ಹೆಳವರಂತೆ ಇವರೂ ತಮ್ಮ ಒಕ್ಕಲು ಇರುವಲ್ಲಿಗೆ ಹೋಗಿ ಕಾಡಿ, ಬೇಡಿ ಕಾಣಿಕೆ ಪಡೆಯುವುದುಂಟು. ಚಾಪೆ ಹೆಳವರು ಹೆಳವಿಕೆಯಲ್ಲದೇ ಉಪವೃತ್ತಿಯಾಗಿ ಚಾಪೆಯನ್ನು ಹಣೆಯುವುದರಿಂದ ಅವರಿಗೆ ಈ ಅಭಿಧಾನ ಪ್ರಾಪ್ತವಾಗಿದೆ. ಗಂಡಸರು ಊರೂರಿಗೆ ಅಲೆದು ತಮ್ಮ ಕುಲಗಳನ್ನು ಹೊಗಳುತ್ತ ಹೋದರೆ, ಈ ಹೆಣ್ಣು ಮಕ್ಕಳು ಚಾಪೆ ಹೆಣೆಯುತ್ತಾರೆ. ಈ ಚಾಪೆಗಳನ್ನು ಹೊತ್ತು ಮಾರುತ್ತಾರೆ. ಕಳಕಟ್ನಾಳದ ಯಮನಪ್ಪ ಹೆಳವರ ಎನ್ನುವವರು ಕೌದಿ ಹೆಳವರೂ ಇದ್ದಾರೆ ಎಂದರು. ಅದು ಹೇಗೆ ಎಂಬುದಕ್ಕೆ ಇವರ ಕೌದಿ ಹೊಲೆದು ಮಾರುತ್ತಾರಂತೆ. ಹೀಗೆಯೇ ಹೆಳವರು ಅನೇಕ ಉಪವೃತ್ತಿಗಳನ್ನು ಅವಲಂಭಿಸಿದ್ದಾರೆ. ಇದನ್ನೆಲ್ಲ ನೋಡಿದರೆ ಮೊದಮೊದಲು ಹೆಳವರೆಲ್ಲ ಒಂದೇ ಆಗಿರಬೇಕು. ಆದರೆ ಕ್ರಮೇಣ ವೃತ್ತಿಯನ್ನವಲಂಬಿಸಿ ತರ ತಮಭಾವ ಉದ್ಭವಿಸಿರಬೇಕು. ಈ ತರ್ಕವನ್ನು ಬಿ.ಎಸ್‌. ಹೆಳವರ ಅವರು ಬೆಂಬಲಿಸುತ್ತಾರೆ. ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ಬಿ.ಎಸ್‌. ಹೆಳವರ ಅವರ ತಾಯಿಯ ತವರು ಮನೆ, ಇವರ ತಾಯಿಯ ಕುಟುಂಬದವರು ಚಾಪೆ ಹಣೆದು ಅವುಗಳನ್ನು ಹೊತ್ತು ಮಾರುತ್ತಿದ್ದರು. ಮುಗಳೊಳ್ಳಿಯಿಂದ ಬೀಳಗಿಗೆ (ಗಂಡನ ಮನೆಗೆ) ಬಂದ ಇವರ ತಾಯಿ ಇಲ್ಲಿಯೂ ಚಾಪೆ ಹಣೆಯುತ್ತಿದ್ದರು. ಆದರೆ ಇವರು ಚಾಪೆ ಹಣೆಯುವುದು ವ್ಯಾಪಾರ ಮಾಡಲು ಅಲ್ಲ: ವರ್ಷದಲ್ಲಿ ಒಂದೆರಡು ಚಾಪೆಗಳನ್ನು ಮನೆಯ ಉಪಯೋಗಕ್ಕಾಗಿ ಮಾತ್ರ ಹಣೆಯುತ್ತಿದ್ದರು. ಪತಿ ಸಿದ್ಧಲಿಂಗಪ್ಪ ಸಿಂದಿ ಗಿಡಗಳಿಂದ ಗರಿ ತಂದು ಕೊಡುತ್ತಿದ್ದರು. ಇವರ ಅರ್ಥದಲ್ಲಿ ಚಾಪೆ ಹೆಳವರು ಎಂಬುದು ಒಂದು ಕುಲವಲ್ಲ. ಅದು ಉದ್ಯೋಗದಿಂದ ಬಂದದ್ದು. ಭಾರತದ ಅನೇಕ ಸಮುದಾಯಗಳಲ್ಲಿ ವೃತ್ತಿಭೇದಗಳು ಜಾತಿ, ಪಂಗಡಗಳನ್ನು ಸೃಷ್ಟಿಸಿರುವಂತೆ ಇಲ್ಲಿಯೂ ಅದೇ ಆಗಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇವರೆಲ್ಲ ಮೂಲತಃ ಒಂದೇ ಆಗಿರಬಹುದು ಎಂಬುದಕ್ಕೆ ಮುಗಳೊಳ್ಳಿ ಹೆಳವರು ಎತ್ತಿನ ಹೆಳವರಾದ ಬೀಳಗಿಯವರೊಂದಿಗೆ ಬೀಗತನ ಬೆಳೆಸಿರುವುದೇ ಆಧಾರವಾಗುತ್ತದೆ. ಯಾಕೆಂದರೆ ಮುಗಳೊಳ್ಳಿಯವರು ಚಾಪೆ ಹಣೆಯುವವರಾದರೂ ಅದನ್ನು ಬೀಳಗಿ ಮನೆತನದವರು ಗಂಭೀರವಾಗಿ ಪರಿಗಣಿಸಿಲ್ಲ.

ಹೆಳವನು ಮನೆಬಾಗಲಿಗೆ ಬಂದು ವಂಶಸ್ಥರನ್ನು ಹೊಗಳಿದಾಗ ನಾನಾ ಬಗೆಯ ಬೆಲೆಯುಳ್ಳ ವಸ್ತುಗಳ ಕಾಣಿಕೆ ಕೊಡುವುದನ್ನು ಈ ಹಿಂದ ಪ್ರಸ್ತಾಪಿಸಲಾಗಿದೆ. ಕೆಲವು ರೈತರಂತೂ ತಮ್ಮ ಹೆಳವರ ಮೇಲಿನ ಪ್ರೀತಿಗೆ ಭೂಮಿಯನ್ನೇ ಕಾಣಿಕೆಯಾಗಿ ಕೊಟ್ಟ ಉದಾಹರಣೆಗಳುಂಟು. ಬೀಳಗಿಯ ಅವಟಿ ಮನೆತನದವರು ತಮ್ಮ ಮನೆತನದ ಹೆಳವಿಕೆ ಮಾಡುತ್ತಿದ್ದ ಸಿದ್ಧಲಿಂಗಪ್ಪನ ಹಿಂದಿನ ತಲೆಮಾರಿನವರಿಗೆ ಒಂದು ಎಕರೆ ಭೂಮಿಯನ್ನೇ ದಾನವಾಗಿ ಕೊಟ್ಟಿದ್ದಾರೆ. ಕೆಲವರು ಈ ವೃತ್ತಿಮೂಲಕವೇ ಗಳಿಕೆ ಮಾಡುತ್ತಾ ಭೂಮಿ ಹಿಡಿದಿರುವ ಉದಾಹರಣೆಗಳಿವೆ. ವಿಶೇಷವಾಗಿ ಗೋಕಾಕ ತಾಲೂಕಿನ ತಳಕಟ್ನಾಳ, ಜಕಾನಟ್ಟಿಯಂಥ ಗ್ರಾಮಗಳಲ್ಲಿ ನೀರಾವರಿ ಜಮೀನು ಮಾಡಿಕೊಂಡು ಅನುಕೂಲಸ್ಥರಾಗಿದ್ದಾರೆ. ತೀರ ಅನುಕೂಲಗೊಂಡವರು ಕ್ರಮೇಣ ಈ ವೃತ್ತಿಗೆ ವಿದಾಯ ಹೇಳುತ್ತಿದ್ದಾರೆ. ಇನ್ನೂ ಕೆಲವರು ಹೀಗೆ ಜಮೀನು ಇದ್ದೂ ಊರೂರು ಹೆಳವಿಕೆಗೆ ಹೋಗುವವರು ತಾವೇ ಒಕ್ಕಲುತನ ಮಾಡುವುದಿಲ್ಲ. ಅನ್ಯರಿಗೆ ವರ್ಷ, ಎರಡು ವರ್ಷ ಮಾಡಲು ಕೊಡುತ್ತಾರೆ. ಇಂಥವರಿಗೆ ಹೊಲದಿಂದ ಬರುವ ಉತ್ಪನ್ನವಂತೂ ಹೆಚ್ಚುವರಿ ಆದಾಯವೇ ಆಗುತ್ತದೆ.