ತಮ್ಮ ಸಮಾಜದ ಶ್ರೇಯೋಭಿವೃದ್ದಿಯನ್ನ ಹಾರೈಸಿ ಕೆಲವು ಜನ ವಿಚಾರವಂತರು ರಾಜ್ಯಮಟ್ಟದಲ್ಲಿ ಅಖಿಲ ಕರ್ನಾಟಕ ಹೆಳವ ಸಮಾಜ (ರಿ) ಎಂಬ ಸಂಘಟನೆಯನ್ನು ಹುಟ್ಟುಹಾಕಿದ್ದಾರೆ. ಈ ಸಂಘಟನೆಯಲ್ಲಿ ಬೇರೆ ಬೇರೆ ಸರಕಾರಿ ಇಲಾಖೆಗಳಲ್ಲಿ ವಿವಿಧ ಹುದ್ದೆಗಳಲ್ಲಿರುವ ಪ್ರಜ್ಞಾವಂತರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಶಿಕ್ಷಕರಿದ್ದಾರೆ, ಇಂಜಿನಿಯರರಿದ್ದಾರೆ, ಡಾಕ್ಟರರಿದ್ದಾರೆ, ಕೌನ್ಸಲರರಿದ್ದಾರೆ, ನ್ಯಾಯಾಧೀಶರಿದ್ದಾರೆ, ನ್ಯಾಯವಾದಿಗಳಿದ್ದಾರೆ. ಸದ್ಯ ಮಾಜಿ ಕೌನ್ಸಲರರಾದ ಈ. ಕೃಷ್ಣಪ್ಪ ಪ್ರಸ್ತುತ ಸಂಘಟನೆಯ ರಾಜ್ಯಾಧ್ಯಕ್ಷರಾಗಿದ್ದಾರೆ. ಈ ಸಂಘಟನೆಯ ಮೂಲಕ ಹೆಳವ ಸಮಾಜ ತನ್ನ ಅಸ್ತಿತ್ವವನ್ನು ಹೆಚ್ಚು ಅರ್ಥಪೂರ್ಣವಾಗಿ ಪ್ರಕಟಗೊಳಿಸಿಕೊಳ್ಳಲು ತವಕಪಡುತ್ತಿದೆ. ಇದುವರೆಗೆ ಕೆಲವು ಸಮಾವೇಶಗಳನ್ನು ಹೆಳವ ಸಮಾಜದವರು ಸಂಘಟಿಸಿದ್ದಾರೆ. ಇಂಥ ಸಂಘಟನೆಗಳು ಎಷ್ಟೇ ಶ್ರಮವಹಿಸಿದರೂ ಪ್ರಾರಂಭದಲ್ಲಿ ಉದ್ದೇಶಿತ ಯಶಸ್ಸು ತೋರುವುದಿಲ್ಲ. ಶ್ರೀನಿವಾಸ ಹೆಳವರ ಅವರು ಇಲ್ಲಿರುವ ತೊಂದರೆಗಳನ್ನು ದಿ. ೦೫-೦೫-೨೦೦೭ ರಂದು ಗುಲ್ಬರ್ಗದಲ್ಲಿ ಜರುಗಿದ ಹೆಳವ ಸಮಾವೇಶ ಸಂದರ್ಭದಲ್ಲಿ ಹೊರತಂದ “ಹೆಳವನ ಕೂಗು” ಪುಸ್ತಕದಲ್ಲಿ ದಾಖಲಿಸಿದ್ದಾರೆ.

“ನಮ್ಮಲ್ಲಿ ಸಂಘಟನೆಯೇ ಇಲ್ಲವೆಂದಲ್ಲ. ನಮ್ಮಲ್ಲೂ ಸಮಾಜಕ್ಕಾಗಿ ದುಡಿಯುವ ಹಲವಾರು ಮುಖಂಡರಿದ್ದಾರೆ. ಹಲವಾರು ಸಮಾವೇಶಗಳು ನಡೆದಿವೆ. ಆದರೂ ನಿರೀಕ್ಷಿತ ಯಶಸ್ಸು ದೊರೆತಿಲ್ಲ. ಅದಕ್ಕೆ ಹಲವಾರು ಕಾರಣಗಳಿವೆ. ನಮ್ಮ ಜನಾಂಗದಲ್ಲಿ ಹೆಚ್ಚಿನವರು ಅಶಿಕ್ಷಿತರು, ಅಲೆಮಾರಿಗಳು, ಅಂಧಾನುಕರುಣೆ, ಮೂಢನಂಬಿಕೆ ಹೊಂದಿದ್ದಾರೆ. ಭಿಕ್ಷೆ ಬೇಡಿ ಬದುಕುವುದೇ ನಮ್ಮ ಜೀವನ ಎಂದು ತಿಳಿದಿದ್ದಾರೆ. ಇವರು ಆರ್ಥಿಕವಾಗಿಯೂ ತುಂಬಾ ಹಿಂದುಳಿದಿದ್ದಾರೆ. ಇನ್ನು ನಮ್ಮ ಜನಾಂಗದಲ್ಲಿಯೇ ಸುರಕ್ಷಿತರಾದ ಮತ್ತು ತಕ್ಕಮಟ್ಟಿಗೆ ಮುಂದುವರೆದ ಜನರು ಇಂಥ ಹೋರಾಟಗಳಿಗೆ ಸರಿಯಾದ ಸಹಕಾರ ನೀಡದಿರುವುದು, ಇನ್ನೂ ತೀರಾ ಹಿಂದುಳಿದಿರುವ ಮತ್ತು ಅಲೆಮಾರಿಗಳಾಗಿರುವ, ಹೆಳವರಿಗೆ ಇಂಥ ಸಮಾವೇಶಗಳು ನಡೆಯುತ್ತಿವೆ ಎಂಬ ಜ್ಞಾನವೇ ಇರದಿರುವುದು. ಇನ್ನು ಕೆಲವು ಮುಖಂಡರಲ್ಲಿರುವ ಭಿನ್ನಾಭಿಪ್ರಾಯಗಳು, ನಮ್ಮಲ್ಲಿಯೇ ಕೆಲವು ಸ್ಥಿತಿವಂತರಿಗೆ ತೀರಾ ಹಿಂದುಳಿದಿರುವ ಹೆಳವರ ಬಗ್ಗೆ ಇರುವ ಅಜ್ಞಾನ ಮತ್ತು ತಿರಸ್ಕಾರ. ನಮ್ಮಲ್ಲಿಯ ಸಂಘಟನೆಯ ಕೊರತೆ. ಇನ್ನು ಕೆಲವು ಸಂಘಟಕರು ಮುಂದುವರಿಯಬೇಕೆಂದರೆ ಅವರಿಗೆ ಆರ್ಥಿಕ ಬೆಂಬಲವಿಲ್ಲ. ಆದರೂ ಕೂಡ ಸಮಾಜಕ್ಕೆ ಏನನ್ನಾದರೂ ಮಾಡಲು ಮುಂದಾದರೆ ಅಂಥವರ ಕಾಲೆಳೆಯುವ ಹಲವು ಮಂದಿಯಿದ್ದಾರೆ. ಇವೆಲ್ಲ ಕಾರಣಗಳಿಂದ ಸಮಾಜದ ಪ್ರಗತಿಗೆ ತೊಂದರೆಯುಂಟಾಗಿದೆ”

ಯಾವುದೇ ಹಿಂದುಳಿದ ಸಾಮಜ ಸಂಘಟನೆಗೊಳ್ಳುವ ಆರಂಭದ ದಿನಗಳಲ್ಲಿ ಭಿನ್ನಾಭಿಪ್ರಾಯ, ಹಿಂಜರಿತ, ಅನುಮಾನಗಳೆಲ್ಲ ಸಹಜವೇ. ಇಂದು ಮುಂದುವರೆದ ಸಂಘಟಿತ ಸಮುದಾಯಗಳೆನಿಸಿದುವೆಲ್ಲ ಒಂದು ಕಾಲಕ್ಕೆ ಇಂಥ ತೊಂದರೆಗಳನ್ನು ಎದುರಿಸಿಯೇ ಮೇಲೆ ಬಂದಿವೆ. ಅಂತೆಯೇ ಹೆಳವ ಸಮಾಜದವರು ಮತ್ತೆ ಮತ್ತೆ ಸಮಾವೇಶಗಳನ್ನು ನಡೆಸಿ ಸಂಘಟಿತರಾಗಲು ಯತ್ನಿಸುತ್ತಿರುವುದು ಅಪೇಕ್ಷಣೀಯವೆನ್ನಿಸಿದೆ.

೨೦೦೭ ಮೇ ೫ ನೇಯ ತಾರೀಕಿನಂದು ಗುಲಬರ್ಗಾದಲ್ಲಿ ಕರೆದ ಹೆಳವ ಸಮಾಜದ ಸಮಾವೇಶವನ್ನು ಈ. ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು ಇಡೀ ದಿನ ಹೆಳವ ಸಮಾಜದ ಪ್ರಸ್ತುತ ಸ್ಥಿತಿಗತಿಯನ್ನು, ಭವಿಷ್ಯದ ಸುಧಾರಣೆಗಳ ರೂಪುರೇಷೆಗಳನ್ನು ಕುರಿತು ಚರ್ಚಿಸಲಾಯಿತು. ಗುಲಬರ್ಗಾ ಜಿಲ್ಲಾ ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಿ.ಎಚ್‌. ಹೆಳವರ ಅವರ ವಿಶೇಷ ಮುತುವರ್ಜಿಯಿಂದ ಸಮ್ಮೇಳನವು ಯಶಸ್ವಿಯಾಗಿ ಜರುಗಿತು. ಇಂಥ ಸಮ್ಮೇಳನಗಳಲ್ಲಿ ಸಮಾಜ ಅಭಿವೃದ್ಧಿಗೆ ಪೂರಕವಾದ ಅನೇಕ ವಿಚಾರಗಳು ಮಂಥನಗೊಳ್ಳುತ್ತವೆ. ಅನೇಕ ವಿಧಾಯಕ ಕಾರ್ಯಗಳು ರೂಪ ಪಡೆಯುತ್ತವೆ. ಆದ್ದರಿಂದ ಸಮಾಜದ ಸಮಾವೇಶಗಳಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಪಾಲ್ಗೊಳ್ಳಬೇಕು. ಈ ಸಂಖ್ಯೆ ಹೆಚ್ಚಿದಷ್ಟೂ ಸಮಾಜ ಗೌರವ ಹೆಚ್ಚಾಗುತ್ತದೆ. ಕುಟುಂಬ ನೆಲೆಯಿಂದ ಆರಂಭಗೊಳ್ಳುವ ಸ್ತ್ರೀಶಕ್ತಿ ಯಾವುದೇ ಸಮಾಜ ಜೀವ ಜಲ. ಎಷ್ಟೋ ವರ್ಷಗಳಿಂದ ಅಂಧಕಾರದಲ್ಲಿ ಕಳೆದುಹೋದ ಹೆಳವ ಜನಾಂಗದಂಥ ಹಿಂದುಳಿದ ವರ್ಗಕ್ಕೆ ಸ್ತ್ರೀ ಶಿಕ್ಷಣ ಸಂಜೀವಿನಿಯಾಗಬಲ್ಲದು. ಈ ಶೈಕ್ಷಣಿಕ ಪ್ರಯೋಜನ ಕುರಿತು ನಾವು ಎರಡು ನಿಟ್ಟಿನಿಂದ ಯೋಚಿಸಬಹುದು. ಒಂದು, ಹೆಳವ ಹೆಣ್ಣುಮಕ್ಕಳಿಗೆಲ್ಲ ಶಿಕ್ಷಣ ದೊರೆಯುವಂತಾದರೆ ಅವರು ತಮ್ಮ ಕೌಟುಂಬಿಕ ಸ್ತರದಲ್ಲೇ ಅಗಾಧ ಪ್ರಗತಿಯನ್ನು ಸಾಧಿಸಬಲ್ಲರು. ಎರಡು, ಉಚ್ಚ ಶಿಕ್ಷಣ ಪಡೆದ ಸ್ತ್ರೀಯರು ಸಮಾಜದ ವಿವಿಧ ರೀತಿಯ ಸಂಘಟನೆಗಳ ಮುಖಾಂತರ ಜನಜಾಗೃತಿಯನ್ನುಂಟು ಮಾಡಬಲ್ಲರು.

ಸರಕಾರ ಇಂದು ಹೆಳವ ಸಮುದಾಯವನ್ನು ಮೀಸಲಾತಿ ಪಟ್ಟಿಯಲ್ಲಿ ಪ್ರವರ್ಗ ೧ರ ಗುಂಪಿನಲ್ಲಿರಿಸಿದೆ. ತಾವು ಅನೇಕ ಅವಕಾಶಗಳಿಂದ ವಂಚಿತರಾದವರೆಂದೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಗುಂಪಿನಲ್ಲಿ ಹೆಳವ ಸಮುದಾಯವನ್ನು ಸೇರಿಸಬೇಕೆಂದೂ ಈ ಸಮುದಾಯದ ಅನೇಕ ಪ್ರಜ್ಞಾವಂತರು ಸರಕಾರವನ್ನು ಆಗ್ರಹ ಪಡಿಸಿದ್ದಾರೆ. “ಸದ್ಯದಲ್ಲಿ ನಮಗಿಂತ ಹೆಚ್ಚಿನ ಗುಂಪಿನವರು ನಮ್ಮ ಗುಂಪಿಗೆ ಸೇರಿದ್ದಾರೆ. ಮುಂದೆ ಅವರೂ ಸಹ ಎಸ್‌.ಸಿ., ಎಸ್‌.ಟಿ. ಗುಂಪಿಗೆ ಹೋಗಬಹುದು. ಆದರೆ ನಾವು ಮಾತ್ರ ಸರಕಾರದ ಹಲವು ಸೌಲಭ್ಯಗಳಿಂದ ವಂಚಿತರಾಗಿಯೇ ಉಳಿಯಬೇಕಾಗಿದೆ. ಈಗಾಗಲೇ ೧೯೯೭ರಲ್ಲಿ ಇದರ ಬಗ್ಗೆ ಪ್ರಸ್ತಾಪವನ್ನು ಅಗಿನ ಸಮಾವೇಶದಲ್ಲಿ ಘನ ಸರಕಾರದ ಮುಂದಿಡಲಾಗಿತ್ತು. ಆದರೂ ಯಾವುದೇ ಬದಲಾವಣೆ ಆಗಿಲ್ಲ. ಅದಕ್ಕಾಗಿ ಎಲ್ಲರೂ ಒಂದಾಗೋಣ, ನಮ್ಮ ಅಳಲನ್ನು ಸರಕಾರದ ಮುಂದಿಡೋಣ, ಸುಂದರ ಸಮಾಜ ಕಟ್ಟೋಣ” ಎಂಬುದು ಮಲ್ಲಿಕಾರ್ಜುನ ಬಿ.ಎಚ್‌. ಹೆಳವರ ಅವರು ಆಡಿದ ಮಾತು ಗುಲ್ಬರ್ಗದಲ್ಲಿ ಜರುಗಿದ ಹೆಳವ ಸಮಾಜ ಸಮಾವೇಶದ ಸಂದರ್ಭದಲ್ಲಿ ಉಲ್ಲೇಖಗೊಂಡ ಅವರ ಈ ಮಾತುಗಳು ದೃಷ್ಟಿಯಿಂದ ಮಹತ್ವದವುಗಳಾಗಿವೆ. ಹಿಂದುಳಿದ ಸಮಾಜವೊಂದು ತನ್ನ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಆರ್ಥಿಕ ನೆರವನ್ನು ಸರಕಾರದಿಂದ ನಿರೀಕ್ಷಿಸುವುದು ತಪ್ಪೇನಿಲ್ಲ. ಇದು ಆ ಸಮಾಜದ ಪ್ರಗತಿಪರ ಹಂಬಲವನ್ನು ವ್ಯಕ್ತಪಡಿಸಿದಂತೆ. ಶಿಕ್ಷಣದ ಕೊರತೆ, ಆರ್ಥಿಕ ಹಿನ್ನಡೆಗಳು ಕಣ್ಣ ಮುಂದಿನ ಸತ್ಯವೇ ಆಗಿರುವಾಗ ತಮ್ಮನ್ನು ಕುರಿತು ಸರಕಾರ ಯೋಚಿಸಬೇಕೆಂಬುದು ಹೆಳವ ಸಮಾಜದ ಬಲವತ್ತರವಾದ ಆಸೆ. ಸರಕಾರ ಹೆಳವ ಸಮಾಜದ ಮಕ್ಕಳಿಗೆ, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ಸವಲತ್ತುಗಳು ಸಿಗುವಂತೆ ಯೋಜನೆಗಳನ್ನು ರೂಪಿಸಬೇಕು. ಸರಕಾರದ ಯೋಜನೆಗಳಿಗೆ ಸ್ಪಂದಿಸುವ ಮನಸ್ಸನ್ನು ಹೆಳವ ಸಮಾಜದವರು ಮಾಡಬೇಕು.

ಹೆಳವ ಸಮಾಜಕ್ಕೆ ಇದುವರೆಗೆ ವಿಶೇಷ ರಾಜಕೀಯ ಸ್ಥಾನಮಾನಗಳೇನೂ ದೊರೆತಿಲ್ಲ. ಹೆಳವ ಹೆಣ್ಣುಮಕ್ಕಳಿಗಂತೂ ರಾಜಕೀಯವೆನ್ನುವುದು ಅಜ್ಞಾತ ವಲಯವೆನಿಸಿದೆ. ಇದಕ್ಕೆ ಕಾರಣಗಳನ್ನು ಹೀಗೆ ಕೊಡಬಹುದು.

೧. ಅತ್ಯಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಹೆಳವ ಸಮಾಜ ರಾಜಕೀಯವಾಗಿ ಪ್ರಾಬಲ್ಯ ಹೊಂದುವುದು ತುಂಬ ಕಷ್ಟ ಮಾತು.

೨. ಅಲೆಮಾರಿಗಳಾಗಿರುವ ಹೆಳವ ಸಮುದಾಯದವರು ಇತರ ಸಮುದಾಯಗಳಿಂದ ವರ್ಷದ ಮುಕ್ಕಾಲು ದಿನಗಳ ಕಾಲ ದೂರವೇ ಇರುತ್ತಾರೆ. ಈ ಅಸ್ಥಿರತೆಯಿಂದಾಗಿ ರಾಜಕೀಯ ಸಂಘಟನೆ ಸುಲಭವಾಗಿ ಇವರಿಗೆ ಸಾಧಿಸುವುದಿಲ್ಲ.

೩. ಶಿಕ್ಷಣದ ಕೊರತೆಯಿಂದಾಗಿ ಮಾಧ್ಯಮಗಳ ಮುಖಾಂತರವಾಗಿಯಾದರೂ ತಲುಪಬಹುದಾದ ರಾಜಕೀಯ ಆಗುಹೋಗುಗಳು ಇವರಿಗೆ ತಲುಪುವುದಿಲ್ಲ.

೪. ಕೌಟುಂಬಿಕ ಮಿತಿಯಲ್ಲಿ ಬದುಕುತ್ತ ದಿನದ ಬದುಕಿನ ಹೊಂದಾಣಿಕೆಗೇ ಕೇಂದ್ರ ಗಮನವಿರಿಸಿಕೊಂಡಿರುವ ಬಹುತೇಕ ಮಹಿಳೆಯರು ರಾಜಕೀಯದ ಬಗೆಗೆ ಯೋಚಿಸಲಾರರು.

ಇಷ್ಟೆಲ್ಲ ಅಂಶಗಳು ಹೆಳವ ಮಹಿಳೆಯ ರಾಜಕೀಯ ಪ್ರಜ್ಞೆ, ಪ್ರವೇಶಗಳ ತಡೆಗೆ ಕಾರಣವಾಗಿದ್ದರೂ ಇತ್ತೀಚೆಗೆ ಅಲ್ಲಲ್ಲಿ ಬೆರಳೆಣಿಕೆಯ ಮಹಿಳೆಯರು ರಾಜಕೀಯ ರಂಗಕ್ಕೆ ಕಾಲಿರಿಸುತ್ತಿದ್ದಾರೆ. ಸರಕಾರ ಕೆಲವು ವರ್ಷಗಳಿಂದ ಗ್ರಾಮ ಪಂಚಾಯಿತಿಯಿಂದ ಸಂಸತ್ತಿನವರೆಗೂ ಚುನಾವಣೆಗಳನ್ನು ಮೀಸಲಾತಿ ಪ್ರಕ್ರಿಯೆಗೆ ಒಳಪಡಿಸಿದೆ. ಪರಿಶಿಷ್ಟ ಜಾತಿ, ಪಂಗಡ ಮುಂತಾದವುಗಳಿಗಿರುವ ಮೀಸಲಾತಿಯಂತೆ ಮಹಿಳಾ ಮೀಸಲಾತಿಯೂ ಒಂದು. ಈ ಮೀಸಲಾತಿಗೆ ಅನುಗುಣವಾಗಿ ಮಹಿಳೆಯರು ಮೊದಮೊದಲು ಅರ್ಧ ಮುಜುಗರದಿಂದ, ಅರ್ಧ ಪುರುಷರ ಒತ್ತಾಯದಿಂದ ರಾಜಕೀಯ ಪ್ರವೇಶ ಮಾಡತೊಡಗಿದರು. ತೀರ ಇತ್ತೀಚೆಗೆ ಸ್ವಯಂ ಪ್ರೇರಣೆಯಿಂದಲೇ ಮಹಿಳೆಯರು ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ರಾಜಕೀಯ ಮುಜುಗರ ಬಹಳಷ್ಟು ಕಾಡುವುದು ಮೇಲುವರ್ಗದ ಮಹಿಳೆಯರನ್ನು. ಇವರನ್ನು ಕಾಡುವ ಸಂಕೋಚ, ಬಿಗುಮಾನಗಳು ತಳವರ್ಗದ ಮಹಿಳೆಯರನ್ನು ಕಾಡುವುದಿಲ್ಲ. ಪುರುಷರಿಗೆ ಹೆಗಲೇಣಿಯಾಗಿ ಅತ್ಯಂತ ಸರಳ ರೀತಿಯಲ್ಲೇ ಇವರು ರಾಜಕೀಯದಲ್ಲಿ ವ್ಯವಹರಿಸುತ್ತಾರೆ. ರಾಜಕೀಯದಲ್ಲಿ ಮಹಿಳಾ ಪ್ರಾಬಲ್ಯ ಹೆಚ್ಚಾದಷ್ಟು ಹಿಂದುಳಿದ ಸಮಾಜಗಳ ಅಂತಃಶಕ್ತಿ ಬೆಳೆಯುತ್ತದೆ.

ಈಗಿರುವ ಅವಕಾಶಗಳನ್ನು ನೋಡಿದರೆ ಹೆಳವ ಮಹಿಳೆಯ ಪಾಲು ರಾಜಕೀಯದಲ್ಲಿ ಕಡಿಮೆಯೆಂದೇ ಹೇಳಬೇಕು. ಆದರೂ ಇತ್ತೀಚೆಗೆ ಹಳ್ಳಿಗಳಲ್ಲಿ ರಾಜಕೀಯ ಪ್ರವೇಶಕ್ಕೆ ಇವರ ಮನಸ್ಸು ಮಾಡುತ್ತಿದ್ದಾರೆ. ಶ್ರೀಮತಿ ಸುನಂದಾ ಹೆಳವರ ಬೇವನೂರಿನಲ್ಲಿ (ತಾ. ಇಂಡಿ) ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದಾರೆ. ಮನೆಯವರಿಂದ ದೊರೆತ ಪ್ರೇರಣೆಯ ಕಾರಣವಾಗಿ ಸುನಂದಾ ಅವರು ಗ್ರಾಮ ಮಟ್ಟದಲ್ಲಾದರೂ ಸರಿಯೇ, ರಾಜಕೀಯ ಮುಖಾಂತರ ತಮ್ಮ ಸಮಾಜದ ಅಸ್ತಿತ್ವವನ್ನು ಸಾದರಪಡಿಸುತ್ತಿದ್ದಾರೆ. ಇದೇ ರೀತಿ ಹುನಗುಂದ ತಾಲೂಕಿನ ಗಂಜಾಳದಲ್ಲಿ ಶ್ರೀಮತಿ ಶಕುಂತಲಾ ಎನ್ನುವವರೂ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದಾರಂತೆ. ಹೀಗೆ ರಾಜ್ಯದ ತುಂಬ ಪರಿವೀಕ್ಷಣಾ ಕಾರ್ಯವನ್ನು ಕೈಗೊಂಡರೆ ರಾಜಕೀಯದಲ್ಲಿ ಹೆಳವ ಜನಾಂಗದ ಮಹಿಳೆಯರ ಸಂಖ್ಯೆ ನಿಖರವಾಗಿ ತೋರಿಸಬಹುದು. ಇವರ ಸಂಖ್ಯೆ ಸದ್ಯಕ್ಕೆ ಅಲ್ಪವಾಗಿದೆ. ಈ ಸಂಖ್ಯೆಯನ್ನು ಬೆಳೆಸಬೇಕು. ಮಹಿಳೆಯರ ರಾಜಕೀಯ ಇಚ್ಛಾಶಕ್ತಿ ಒಂದು ಜನಾಂಗವನ್ನು ರೂಪಿಸಬಲ್ಲದು. ಅವರಿಗೊಂದು ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಡಬಲ್ಲದು.

ಜಾತಿ ಅಥವಾ ಜನಾಂಗಕ್ಕೊಬ್ಬರು ಧರ್ಮಗುರುಗಳು ಬೇಕು ಎಂಬ ತುಡಿತ ಇದುವರೆಗೆ ಧರ್ಮಗುರುಗಳಿಲ್ಲದ ಅನೇಕ ಸಮುದಾಯಗಳಲ್ಲಿ ಆರಂಭವಾಗಿರುವಂತೆ ಇವರಲ್ಲಿಯೂ ಆರಂಭವಾಗಿ ಶ್ರಿ ಬಸವ ಭೃಂಗೇಶ್ವರ ಸ್ವಾಮಿಗಳನ್ನು ತಮ್ಮ ಗುರುಗಳನ್ನಾಗಿ ಸ್ವೀಕರಿಸಿದ್ದಾರೆ. ಧರ್ಮಗುರುಗಳ ಮುಖಾಂತರ ಸಮಾಜ ಒಗ್ಗಟ್ಟಾಗುತ್ತಿದೆ. ತನ್ಮೂಲಕ ತಮ್ಮ ಸಮಾಜವನ್ನು ಇನ್ನೂ ಮಹತ್ತರವಾದ ರೀತಿಯಲ್ಲಿ ಪುನರಪಿ ಕಟ್ಟಬಹುದು ಎಂಬ ಮಹದಾಸೆ ಇಂಥ ಸಮುದಾಯಗಳದ್ದು. ಎಷ್ಟೋ ವರ್ಷಗಳಿಂದ ಆಶ್ರಿತ ಭಾವನೆಯಲ್ಲೇ ಬೆಳೆದುಬಂದ ಹೆಳವ ಸಮಾಜ ಇಂದು ಆಧುನಿಕ ಗಂಧಗಾಳಿಗೆ ತನ್ನನ್ನು ತೆರೆದುಕೊಳ್ಳುತ್ತಿದೆ. ಧರ್ಮಪೀಠವೊಂದು ಆಧ್ಯಾತ್ಮಿಕ ಅಭೀಪ್ಸೆಯನ್ನು ತಣಿಸುವುದರೊಂದಿಗೆ ಶಿಕ್ಷಣ, ವೈಚಾರಿಕತೆಗಳನ್ನು ಜನರಲ್ಲಿ ಬೆಳೆಸಿ ಹೊಸ ಜನಾಂಗವೊಂದನ್ನು ಕಟ್ಟಿಕೊಡುವುದಾದರೆ ಅದು ಸ್ವಾಗತಾರ್ಹವೇ. ಇದು ಮಕ್ಕಳ ಹಾಗೂ ಮಹಿಳಾ ನೆಲೆಯಿಂದ ಆರಂಭಗೊಳ್ಳುವುದಾದರೆ ಇನ್ನೂ ಸಂತೋಷದ ವಿಷಯ.

* * *

ಅ. ಆಕರ ಗ್ರಂಥಗಳು:

೧.       ಹೆಳವರು ಮತ್ತು ಅವರ ಕಾವ್ಯಗಳು (೨೦೦೫)
ಎಚ್.ಎಲ್‌. ನಾಗೇಗೌಡ
ಪ್ರ. ಅಖಿಲ ಕರ್ನಾಟಕ ಹೆಳವ ಸಮಾಜ
ನಂ. ೧೦೬೪, ೭ನೆಯ ಬ್ಲಾಕ್‌, ೮ನೆಯ ಅಡ್ಡ ರಸ್ತೆ,
ಎಚ್‌.ಎಂ.ಟಿ. ಬಡಾವನೆ, ವಿದ್ಯಾರಣ್ಯಪುರ
ಬೆಂಗಳೂರು-೫೬೦೦೯೭.

೨.       ಕರ್ನಾಟಕ ಹೆಳವರು : ಒಂದು ಜಾನಪದೀಯ ಅಧ್ಯಯನ (೧೯೯೫೦
ಡಾ. ಹರಿಲಾಲ್‌ಕೆ. ಪವಾರ
ಪ್ರ. ಕನ್ನಡ ಸಾಹಿತ್ಯ ಪರಿಷತ್ತು
ಬೆಂಗಳೂರು – ೧೮

೩.       ದಕ್ಷಿಣ ಕರ್ನಾಟಕ ಜನಪದ ಮಹಾಕಾವ್ಯಗಳು (೧೯೭೯)
ಡಾ. ಜೀ.ಶಂ. ಪರಮಶಿವಯ್ಯ
ಪ್ರ. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ
ಮೈಸೂರು – ೧೨

೪.       ಹೆಳವರ ಕೂಗು (೨೦೦೭)
ಶ್ರೀನಿವಾಸ ಭೀ. ಹೆಳವರ
ಪ್ರ. ಅಖಿಲ ಕರ್ನಾಟಕ ಹೆಳವ ಸಮಾಜ (ರಿ)
ಜಿಲ್ಲಾ ಘಟಕ, ಗುಲಬರ್ಗಾ

೫.       ಹಾಲ್ಮತೋತ್ತೇಜಕ ಪುರಾಣ (೧೯೮೨)
ರಸ್ತಾಪುರ ಭೀಮಕವಿ
ಸಂ. ಭಾಗೂತನಯ ನವಿಲು.

ಆ. ಲೇಖನಗಳು

೧.       ಹೆಳವರ ಹಾಡುಗಳು
ಡಾ|| ಬಿ.ಬಿ. ಮಹಿಷವಾಡಿ
ಜಾನಪದ ಸಾಹಿತ್ಯ ದರ್ಶನ – ೪ (೧೯೭೮)
ಸಂ. ಡಾ|| ಎಂ.ಎಸ್‌. ಸುಂಕಾಪುರ
ಪ್ರ. ಪ್ರಸಾರಂಗ ಕ.ವಿ.ವಿ. ಧಾರವಾಡ ೦ ೩

೨.       ಹೆಳವರು
ಪ್ರೊ. ಬಿ.ಎಂ. ತೆಳಗಡಿ
ಜಾನಪದ ಸಾಹಿತ್ಯ ದರ್ಶನ ಭಾಗ-೬ (೧೯೮೦)
ಸಂ. ಡಾ|| ಎಂ.ಎಸ್‌. ಸುಂಕಾಪುರ
ಪ್ರ. ಪ್ರಸಾರಾಂಗ ಕ.ವಿ.ವಿ. ಧಾರವಾಡ-೩.

 

ಇ. ಸಂದರ್ಶಿಸಿದ ವ್ಯಕ್ತಿಗಳು:

೧.       ಶ್ರೀ ಬಿ.ಎಸ್‌. ಹೆಳವರ
ಬೀಳಗಿ, ಜಿ. ಬಾಗಲಕೋಟ

೨.       ಶ್ರೀಮತಿ ಗಂಗೂಬಾಯಿ ಭೀ. ಹೆಳವರ
ಬೀಳಗಿ, ಜಿ. ಬಾಗಲಕೋಟ

೩.       ಶ್ರೀ ಭೀಮಣ್ಣ ದುಂಡಪ್ಪ ಹೆಳವರ
ಮದರಾ ಬಿ.ಜಿ. ಗುಲಬರ್ಗಾ

೪.       ಶ್ರೀ ಯಮನಪ್ಪ ಲಕ್ಷ್ಮಣ ಹೆಳವರ
ತಲಕಟ್ನಾಳ, ತಾ. ಗೋಕಾಕ

೫.       ಶ್ರೀ ಸಿದ್ದಪ್ಪ ಭೀಮಪ್ಪ ಆಲಗೂರ
ಬೆಣಚನ ಮರಡಿ, ತಾ. ಗೋಕಾಕ

೬.       ಮಾರುತಿ ಫಕ್ಕಿರಪ್ಪ ಹೆಳವರ
ತಳಕಟ್ನಾಳ, ತಾ. ಗೋಕಾಕ

೭.       ಶ್ರೀಮತಿ ರುಕಮವ್ವ ಮಾರುತಿ ಹೆಳವರ
ತಳಕಟ್ನಾಳ, ತಾ. ಗೋಕಾಕ.