ಸಂಘರ್ಷಗಳ ಕಾಲದಲ್ಲಿ ಹುಟ್ಟುವ ಕವಿಗಳು ಸುದೈವಿಗಳು. ಯಾಕೆಂದರೆ ಸಂಘರ್ಷಗಳ ಚಿತ್ರಣವನ್ನು ತಮ್ಮ ಕಾವ್ಯದಲ್ಲಿ ಪುನರ್ ಸೃಷ್ಟಿಸುವ ಅವಕಾಶವನ್ನು ಪಡೆದಿರುತ್ತಾರೆ. ಆದರೆ ಚರಿತ್ರೆಯ ಭೀಕರ ಕಾಲಘಟ್ಟದಲ್ಲಿ ಬದುಕುವ ಕವಿಗಳ ಬೆನ್ನಮೇಲೆ ಅನೇಕ ಸವಾಲುಗಳಿರುತ್ತವೆ. ಬಂದೊದಗುವ ಸಾಂಸ್ಕೃತಿಕ ಸವಾಲುಗಳನ್ನು ಎದುರಿಸುವ ಜವಾಬ್ದಾರಿಯನ್ನು ಕವಿಗಳು ಪ್ರಾಮಾಣಿಕವಾಗಿ ಹೊತ್ತು ನಿಭಾಯಿಸಬೇಕು. ಅಂದಾಗ ಮಾತ್ರ ಕವಿಗಳಿಗೆ ಘನತೆ ಬರುತ್ತದೆ. ಅವರ ಕಾವ್ಯಕ್ಕೂ ಘನತೆಯಿರುತ್ತದೆ. ಪಂಪ, ಬಸವಣ್ಣ, ಅಲ್ಲಮ, ಕುಮಾರವ್ಯಾಸ, ಕನಕದಾಸ, ಶಿಶುನಾಳ ಶರೀಫ ಮುಂತಾದವರು ಚರಿತ್ರೆಯ ಸ್ಥಿತ್ಯಂತರದ ಕಾಲಘಟ್ಟದಲ್ಲಿ ಬದುಕಿದ್ದರಿಂದಲೇ ಅವರ ಕಾವ್ಯಕ್ಕೆ ಶಕ್ತಿ ಬಂದಿದೆ. ತಮ್ಮ ತಮ್ಮ ಕಾಲದ ಪ್ರಭುತ್ವವನ್ನು, ಧಾರ್ಮಿಕ ಮೂಲಭೂತವಾದವನ್ನು ವಿರೋಧಿಸಿರುವುದರಿಂದಲೇ ಪ್ರಬುದ್ಧ ಕಾವ್ಯವನ್ನು ರಚಿಸಲು ಅವರಿಗೆಲ್ಲ ಸಾಧ್ಯವಾಗಿದೆ ಎಂಬುದನ್ನು ಮರೆಯುವಂತಿಲ್ಲ.

ಈ ಪ್ರಾಂತದಲ್ಲಿ, ಸ್ವಾತಂತ್ರ್ಯಪೂರ್ವದ ಕೊನೆಯ ೩೦೦ ವರ್ಷಗಳು ಚರಿತ್ರೆ ಕಂಡ ಭೀಕರ ವರ್ಷಗಳಾಗಿವೆ. (ಈ ಮಾತು ಭಾರತದ ಸಂದರ್ಭಕ್ಕೂ ಅನ್ವಯಿಸಬಹುದು) ೧೬ನೇ ಶತಮಾನದ ಕೊನೆಯ ಭಾಗದಲ್ಲಿ ಮೊಗಲರ ದಾಳಿಯಿಂದ ಆದಿಲ್‍ಶಾಹಿಗಳು ಪತನವಾದ ಮೇಲೆ ಈ ಪ್ರಾಂತ ಹೇಳದಷ್ಟು ದುಸ್ಥಿತಿಗೆ ಈಡಾಯಿತು. ಜನಸಮುದಾಯಗಳ ಬದುಕು ಬೇಗುದಿಯ ಬೀಡಾಯಿತು. ಹಾಗೆ ನೋಡಿದರೆ ಈ ಪ್ರಾಂತದಲ್ಲಿ ೧೩ನೇ ಶತಮಾನದಿಂದಲೇ ಅನ್ಯ ಪ್ರಭುತ್ವಗಳು, ಧರ್ಮಗಳು, ಭಾಷೆಗಳು, ಸಂಸ್ಕೃತಿಗಳು, ಪ್ರವೇಶಿಸಿ ನೆಲೆ ಪಡೆಯಲಾರಂಭಿಸಿದವು. ಅವು ಈ ಪ್ರಾಂತದ ಸ್ಥಳೀಯ ಧಾರ್ಮಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಿದ್ಯಮಾನಗಳ ಜತೆ ಕೂಡಿಕೊಂಡವು. ಅದರ ಫಲವಾಗಿ ರೂಪುಗೊಂಡ ಸಂಕರ ಸಂಸ್ಕೃತಿಯು ಕಳೆದ ನಾಲ್ಕೈದು ಶತಮಾನಗಳಿಂದ ಬೆಳೆದು ನಿಂತಿದೆ. ಈ ಬೆಳವಣಿಗೆಯು ಸುಲಭವಾಗಿ ಸರಳವಾಗಿ ಏರ್ಪಟ್ಟಿದ್ದಲ್ಲ. ಜನ ಸಮುದಾಯಗಳಲ್ಲಿ ಬಿಕ್ಕಟ್ಟುಗಳನ್ನು, ಸಂಘರ್ಷಗಳನ್ನು ಉಂಟುಮಾಡಿದೆ. ಒತ್ತಡ, ಅಸಹಾಯಕತೆ, ಅನಿವಾರ್ಯಗಳಿಂದ ಬದುಕನ್ನು ಕಟ್ಟಿಕೊಂಡಿದ್ದರಿಂದ ಸಂಕರ ಸಂಸ್ಕೃತಿ ರೂಪುಗೊಂಡಿದೆ. ಜನಸಮುದಾಯಗಳು ಪ್ರಭುತ್ವಗಳ ಎಲ್ಲ ಬಗೆಯ ಕ್ರೌರ್ಯಗಳನ್ನು ಈ ಕಾಲಘಟ್ಟದಲ್ಲಿ ಅನುಭವಿಸಿವೆ. ಧರ್ಮಗಳು ನೀಡಿರುವ ಹೊಡೆತಗಳನ್ನು ಎದುರಿಸಿ, ಬದುಕುವುದನ್ನು ಕಲಿತಿವೆ.

ಈ ಪ್ರಾಂತದಲ್ಲಿ ಕಾಣಿಸಿಕೊಂದ ಧಾರ್ಮಿಕ ಪಂಥಗಳನ್ನು ಗಮನಿಸಿದರೆ ದಿಗ್ಭ್ರಮೆಯಾಗುತ್ತದೆ. ಮತಾಂತರಗಳು, ಒಳ ಮತಾಂತರಗಳು ಬೇಕಾದಷ್ಟು ನಡೆದಿವೆ. ನಾಥರು, ಸಿದ್ಧರು, ಆರೂಢರು, ಸೂಫಿಗಳು, ದರ್ವೇಶಿಗಳು, ದೀನ್ ದಾರ್ ಚನ್ನಬಸವಣ್ಣ ಮುಂತಾದ ಹತ್ತಾರು ಪಂಥಗಳೂ ಅಲ್ಲದೆ, ಸ್ಥಳೀಯ ದೈವಗಳೇ ಒಂದೊಂದು ಧಾರ್ಮಿಕ ಪಂಥಗಳಂತೆ ಬೆಳೆದಿವೆ. ಧರ್ಮಗಳು ಸಂಸ್ಥೆಗಳಾಗುವ ಸಂದರ್ಭದಲ್ಲಿ ಕಾಣಿಸಿಕೊಂಡ ಅಸಮಾಭಾನಗಳಿಂದ ಈ ಬಗೆಯ ಪಂಥಗಳು ಬೆಳೆಯಲು ಕಾರಣಗಳಾಗಿರಬೇಕು. ಈ ಎಲ್ಲ ಬೆಳವಣಿಗೆಗಳು ತೀವ್ರ ಸಂಘರ್ಷಗಳಿಂದಾಗಿರುತ್ತವೆ ಎಂಬುದು ಸಹಜ. ಈ ಕಾಲಾವಧಿಯಲ್ಲಿ ಫ್ರೆಂಚರು, ಬ್ರಿಟುಷರು, ನಿಜಾಮರು, ಮರಾಠರು, ಹೈದರಾಲಿ ಅಧಿಕಾರಕ್ಕಾಗಿ ನಡೆಸಿದ ಯುದ್ಧಗಳು ಒಂದು ಕಡೆಯಾದರೆ, ದಂಗೆ, ದೊಂಬಿಗಳು ಇನ್ನೊಂದು ಕಡೆ. ಲೂಟಿಕೋರರು, ದಾಳಿಕೋರರುಗಳಿಂದ ಈ ಪ್ರಾಂತದ ಜನಸಮುದಾಯಗಳು ತತ್ತರಿಸಿಹೋಗಿದ್ದವು. ಸಮಾಜದಲ್ಲಿ ನೆಮ್ಮದಿ ಎನ್ನುವುದು ಕನಸಿನ ಮಾತಾಗಿತ್ತು. ಇದೊಂದು ಸುದೀರ್ಘ ಬೇಗುದಿಯ ಕಾಲವಾಗಿತ್ತು. ಈ ಎಲ್ಲ ಬಗೆಯ ಸಂಕಷ್ಟಗಳು ಈ ಪ್ರಾಂತದಲ್ಲಿ ತುಂಬಿದ್ದವು. ಜನಸಮುದಾಯಗಳು ಅನುಭವಿಸಿದ ಈ ಬಗೆಯ ತಲ್ಲಣಗಳ ಚಿತ್ರಣ ಈ ಪ್ರಾಂತದಲ್ಲಿ ಹುಟ್ಟಿದ ಸಾಹಿತ್ಯದಲ್ಲಿ ಒಡ ಮೂಡಿದೆಯೇ? ಈ ಪ್ರಶ್ನೆ ಸಹಜವಾಗಿಯೆ ಹುಟ್ಟುತ್ತದೆ. ಸಮಾಜ ಮತ್ತು ಸಾಹಿತ್ಯದ ಸಂಬಂಧವನ್ನು ತೀವ್ರವಾಗಿ ಪರಿಗಣಿಸುವ ಈ ಹೊತ್ತಿನಲ್ಲಿ ಈ ಪ್ರಶ್ನೆ ಪ್ರಮುಖವಾಗಿ ಕಾಣುತ್ತಿದೆ. ಮಹಾಕಾವ್ಯಕ್ಕೆ ಬೇಕಾದ ಅಪಾರ ಅನುಭವ ಈ ಕಾಲಘಟ್ಟದಲ್ಲಿತ್ತು. ಆದರೆ ಮಹಾಕಾವ್ಯ ಹುಟ್ಟಲಿಲ್ಲ. ಈ ಸಂದರ್ಭದಲ್ಲಿ ಭೀಕರ ಅನುಭವಗಳು ಸಾಹಿತ್ಯದಲ್ಲಿ ಕಾಣಿಸಿಕೊಳ್ಳಲಿಲ್ಲ. ಕವಿಗಳಿಗೆ ಚರಿತ್ರೆಯ ಭೀಕರ ಘಟ್ಟಗಳ ಅನುಭವಗಳೇ ಅಭಿವ್ಯಕ್ತಿಗೆ ಸುವರ್ಣಾವಕಾಶಗಳು. ವಿಚಿತ್ರವೆಂದರೆ ಕವಿಗಳಿಗೆ ವಸಂತಋತು ಎಂಬಂತೆ ಈ ಕಾಲವಿತ್ತು. ಆದರೆ ಹಾಡುವ ಹಕ್ಕಿಗಳಿದ್ದರೆ ವಸಂತಋತುವಿಗೂ ಶೋಭೆ. ಹಾಗೆ ನೋಡಿದರೆ ‘೧೭೦೦ – ೧೯೦೦ರ ತನಕದ ಕನ್ನಡ ಸಾಹಿತ್ಯವನ್ನೇ ನೋಡಿ, ಅ ಅವಧಿಯ ಭಾರತೀಯ ಸಮಾಜ ಎದುರಿಸಿದ ಅಲ್ಲೋಲ ಕಲ್ಲೋಲಗಳ, ಹೃದಯ ವಿದ್ರಾವಕ ಬೆಳವಣಿಗೆಗಳ ಚಿತ್ರಣವೇ ನಮ್ಮಲಿಲ್ಲ’

[1] ಎಂಬ ಮಾತು ಯೋಚನೆಗೆ ಈಡುಮಾಡುತ್ತದೆ.

ಈ ಪ್ರಾಂತದಲ್ಲಿ ನೂರಾರು ಜನ ತತ್ವಪದಕಾರರಿದ್ದಾರೆ. ಹತ್ತಾರು ಪುಟಾಣಿಗಳ, ಸಣ್ಣಾಟಗಳ ರಚನಾಕಾರರಿದ್ದಾರೆ. ಲಾವಣಿಕಾರರು, ಶಾಹಿರರು, ಜನಪದ ಕಥೆಗಾರರು ಇದ್ದಾರೆ. ಇವರೆಲ್ಲರು ರಚಿಸಿದ, ಕಟ್ಟಿದ ಸಾಹಿತ್ಯವಿದೆ. ಈ ಎಲ್ಲ ಬಗೆಯ ಸಾಹಿತ್ಯದಲ್ಲಿ ಈ ಕಾಲಘಟ್ಟದ ‘ಅಲ್ಲೋಲ ಕಲ್ಲೋಲಗಳ ಹೃದಯ ವಿದ್ರಾವಕ ಬೆಳವಣಿಗೆಗಳ ಚಿತ್ರಣ’ ಇದೆಯೇ? ಈ ಪ್ರಶ್ನೆಗೆ ಉತ್ತರ ಸರಳವಾಗಿ, ನೇರವಾಗಿ ಸಿಗಲಾರದು. ೧೩ನೇ ಶತಮಾನದಿಂದ ೧೫ನೇ ಶತಮಾನದ ಚಾರಿತ್ರಿಕ ಪಲ್ಲಟದ, ಸಾಂಸ್ಕೃತಿಕ ಬೆಳವಣಿಗೆಗಳಿಗೂ ಕುಮಾರವ್ಯಾಸನ ‘ಗದುಗಿನ ಭಾರತ’ಕ್ಕೂ ಸಂಬಂಧವಿಲ್ಲವೇ? ಕುಮಾರವ್ಯಾಸ ನಂತರ ಕಾಲಘಟ್ಟದ ಮೂರ್ನಾಲ್ಕು ಶತಮಾನಗಳಂತೂ ಮತ್ತೊಂದು ಮಹಾಭಾರತಕ್ಕೆ ಬೇಕಾದ ಲೋಕವಿತ್ತು. ಈ ಲೋಕವನ್ನು ಕಾವ್ಯದಲ್ಲಿ ಒಡಮೂಡಿಸುವ ಕವಿಗಳು ಕಾಣಿಸಿಕೊಳ್ಳಲಿಲ್ಲ. ‘ಸಾಹಿತ್ಯ ಚರಿತ್ರೆಯೊಂದರ ಬಗೆಗೆ ಮಾತನಾಡುವಾಗ ಇರದುದರೆಡೆಗೆ ತುಡಿಯುವುದು ಒಂದು ದೃಷ್ಟಿಯಿಂದ ಹುಚ್ಚುತನ ನಿಜ. ಆದರೆ ಸಮಾಜವೊಂದು ಸಾಹಿತ್ಯ ಹಿಡಿದಿಟ್ಟಿರುವ ಅನುಭವ ಸಮೃದ್ಧಿಯ ದೃಷ್ಟಿಯಿಂದ ಇಲ್ಲದಿರುವ ಸಂಗತಿಗಳು ಆ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಪರಿಣಾಮಕಾರಿಯಾದ ಸತ್ಯಗಳನ್ನು ಹೇಳುತ್ತವೆ.’[2] ಹೀಗಾಗಿ ಅಯಾ ಕಾಲಘಟ್ಟದ ಸಾಹಿತ್ಯವನ್ನು ಗಮನಿಸುವಾಗ ಚರಿತ್ರೆಯಲ್ಲಿರುವ ಸಂಗತಿಗಳು ನೆನಪಾಗುತ್ತವೆ. ಸಾಹಿತ್ಯದಲ್ಲಿ ಯಾವುದು ಗೈರುಹಾಜರಿಯಾಗಿರುತ್ತದೆಯೋ ಅದರತ್ತ ಗಮನ ಹರಿಸುವುದು ಅನಿವಾರ್ಯವಾಗುತ್ತದೆ. ಗಮನಹರಿಸುವ ಒತ್ತಡವನ್ನು ಅದೇ ಸಾಹಿತ್ಯ ಸೃಷ್ಟಿಸುತ್ತದೆ.

ಈ ಪ್ರಾಂತದಲ್ಲಿ, ಸಾಹಿತ್ಯ ರಚನೆಗೆ ಬೇಕಾದ ಸಮೃದ್ಧ ಕಾಲಘಟ್ಟ ಇದಾಗಿದ್ದು, ಕವಿಗಳಿಗೆ ಕನ್ಯೆನೆಲವಾಗಿತ್ತು. ಆದರೆ ಬಿತ್ತಿ ಬೆಳೆದದ್ದು ಎಷ್ಟು? ಈ ಕೊರಗನ್ನು ದೊಡ್ದ ಪ್ರಮಾಣದಲ್ಲಿ ಇಟ್ಟುಕೊಳ್ಳುವಷ್ಟು ನಿರಾಶೆ ಪಡಬೇಕಾಗಿಲ್ಲವೆಂದು ಕಾಣುತ್ತದೆ. (ಈ ಮಾತು ೧೯೦೦ರ ಕಾಲಘಟ್ಟಕ್ಕೆ ಅನ್ವಯಿಸುವುದು ಕಷ್ಟ) ತತ್ವಪದಕಾರರಲ್ಲಿ ಕಡಕೋಳ ಮಡಿವಾಳಪ್ಪ, ರಾಮಾಪುರದ ಬಕ್ಕಪ್ಪಯ್ಯ, ಮೋಟ್ನಹಳ್ಳಿ ಹಸನಸಾಬ, ಕೂಡಲೂರ ಬಸಲಿಂಗಪ್ಪ ಮುಂತಾದ ತತ್ವಪದಕಾರರ ಪ್ರತಿಭೆಯನ್ನು ನಿರಾಕರಿಸಲು ಸಾಧ್ಯವಾಗುವುದಿಲ್ಲ. ಚರಿತ್ರೆಯ ಅನುಭವಗಳು ಸಾಮಾನ್ಯವಾಗಿದ್ದಾಗಲೂ ದೊಡ್ಡಮಟ್ಟದ ಪ್ರತಿಭೆಗಳು ಕಾಣಿಸಿಕೊಂಡರೆ ಸಾಹಿತ್ಯ ಸೂಕ್ಷ್ಮತೆಗಳಿಂದ ಸಮೃದ್ಧವಾಗಿ ಕಾಣಬಹುದು. ಚರಿತ್ರೆಯ ಅನುಭವಗಳು ಭೀಕರವಾಗಿದ್ದರಂತೂ ದೊಡ್ಡಮಟ್ಟದ ಪ್ರತಿಭೆಗಳಿದ್ದರೆ ಸಾಹಿತ್ಯ ಸುವರ್ಣಯುಗವಾಗುತ್ತದೆ. ಚರಿತ್ರೆಯ ಅನುಭವಗಳು ಹೃದಯ ವಿದ್ರಾವಕವಾಗಿದ್ದರೆ ಸಣ್ಣಮಟ್ಟದ ಪ್ರತಿಭೆಗಳಿಗೂ ಸೃಜನಶೀಲ ಶಕ್ತಿ ಒರಟಾಗಿಯಾದರೂ ಪ್ರಾಪ್ತವಾಗುತ್ತದೆ. ಉನ್ನತಮಟ್ಟದ ಪ್ರತಿಭೆ ಕುಮಾರವ್ಯಾಸನದು ಒಂದು ಬಗೆ. ಕಡಿಕೋಳ ಮಡಿವಾಳಪ್ಪ ಮುಂತಾದವರೂ ಸಾಂಸ್ಕೃತಿಕವಾಗಿ ಮುಖ್ಯರಾಗುತ್ತಾರೆ.

೧೭೦೦ – ೧೯೦೦ ಅವಧಿಯ ತತ್ವಪದಕಾರರು ‘ಹಾದರ’, ‘ಗಾಂಜಾ’, ‘ಅಲಾವಿ’, ‘ಮೂಗುತಿ’ ಮತ್ತು ‘ಚೇಳು ಕಡಿತ’ ಎನ್ನುವ ರೂಪಕಗಳನ್ನು ಹೆಚ್ಚು ಬಳಸಿದ್ದಾರೆ. ಈ ಕಾಲಘಟ್ಟದ ಪ್ರಭುತ್ವದ ದಾಹ, ಧಾರ್ಮಿಕ ಮೂಲಭೂತವಾದ ಮತ್ತು ಸಾಮಾಜಿಕ ನಡವಳಿಕೆಗಳನ್ನು ಈ ರೂಪಕಗಳು ಮೂಲಕ ಹಿಡಿದಿಡಲು ಪ್ರಯತ್ನಿಸಿದ್ದಾರೆ. ವ್ಯಕ್ತಿಗತ ನೆಲೆಯಲ್ಲಿ ಈ ರೂಪಕಗಳು ಹುಟ್ಟಿಕೊಂಡಂತೆ ಕಂಡರೂ ಅವುಗಳಿಗೆ ವ್ಯಾಪಕತೆಯಿದೆ. ರಾಜಕೀಯ ಪ್ರಭುತ್ವಗಳನ್ನು, ಧಾರ್ಮಿಕ ಪ್ರಭುತ್ವಗಳನ್ನು. ಆರ್ಥಿಕ ಪ್ರಭುತ್ವಗಳನ್ನು ನೇರವಾಗಿ ಎದುರಿಸುವ ಅನೇಕ ತತ್ವಪದಕಾರರಿದ್ದಾರೆ. ನೇರವಾಗಿ ವಿರೋಧಿಸುವುದು ಕೆಲವರಿಗೆ ಸಾಧ್ಯವಾಗಿಲ್ಲ ಎಂಬಮ್ತೆ ಮೇಲು ನೋಟಕ್ಕೆ ಕಾಣುತ್ತದೆ. ಆದರೆ ತತ್ವಪದಕಾರರು ಬಡತನದ ವೈಭವೀಕರಣದ ಉದ್ದೇಶವೇ ಎಲ್ಲ ಬಗೆಯ ಪ್ರಭುತ್ವವನ್ನು ಎದುರಿಸಲು ಹುಡುಕಿಕೊಂಡ ದಾರಿಯಾಗಿದೆ. ರಾಜಕಾರಣ ಮತ್ತು ಧರ್ಮದ ಮೂಲಕ ಅಧಿಕಾರವನ್ನು ಪಡೆಯಬೇಕೆಂಬ ಹುಚ್ಚು ಈ ಕಾಲಘಟ್ಟದಲ್ಲಿ ಹೆಚ್ಚಾಗಿದ್ದುದನ್ನು ಕಂಡ ತತ್ವಪದಕಾರರು ಅಧ್ಯಾತ್ಮದ, ಅನುಭಾವದ ಹುಚ್ಚನ್ನು ಹಚ್ಚಿಕೊಳ್ಳುವ ಮೂಲಕ ಪರ್ಯಾಯ ಮಾರ್ಗಗಳನ್ನು ಶೋಧಿಸಿದರು. ಆರ್ಥಿಕವಾಗಿ ದುರ್ಬಲವಿದ್ದ ವರ್ಗ, ಕೆಳವರ್ಗದ ಜನರು ತತ್ವಪದಕಾರರ ಬೆನ್ನುಬಿದ್ದು ಒಂದು ಬಗೆಯ ಬಲವನ್ನು ಪಡೆದು ಜೀವಿಸಲು ಶಕ್ತರಾದರು.

ಕಡಕೋಳ ಮಡಿವಾಳಪ್ಪ ಕಾವ್ಯದ ಯಾವ ಸೂಕ್ಷ್ಮತೆಯನ್ನು ಇಟ್ಟುಕೊಳ್ಳದೆ ಗಡುಸಾಗಿ, ಒರಟಾಗಿ ಈ ಕಾಲಘಟ್ಟದ ರಾಜಕೀಯ, ಧಾರ್ಮಿಕ ಮತ್ತು ಆರ್ಥಿಕ ಪ್ರಭುತ್ವಗಳನ್ನು ಖಂಡಿಸಿದ್ದಾನೆ. ‘ಮಾನಗೇಡಿ ಮಂದಿ ಹುಟ್ಟಿ, ಮರ್ತ್ಯಾ ಕೆಡಿಸ್ಯಾರೋ’, ‘ಏನಾಗತಾದ ಏಂಥಾಗತಾದ’ ಎನ್ನುವ ತತ್ವಪದಗಳಲ್ಲಿ ಮಡಿವಾಳಪ್ಪ ಅಪ್ಪಟ ದೇಶಿನುಡಿಗಟ್ಟಿನಲ್ಲಿ ಸಮಾಜದಲ್ಲಿ ದುರ್ಬಲರ ಮೇಲೆ ಉಳ್ಳವರು ನಡೆಸುವ ದಬಾಳಿಕೆಯನ್ನು ನೇರವಾಗಿ ಅಭಿವ್ಯಕ್ತಿಸಿದ್ದಾನೆ.

ರಾಮಾಪುರದ ಬಕ್ಕಪ್ಪಯ್ಯನು ಮಡಿವಾಳಪ್ಪನಷ್ಟು ಗಡಸು – ಒರಟುತನವನ್ನು ತೋರಿಸುವುದಿಲ್ಲ. ಆದರೆ ಒಗಟು, ಬೆಡಗು ಹಾಗೂ ರೂಪಕಗಳಲ್ಲಿ ಅನುಭಾವದ ಎತ್ತರವನ್ನು ಸಾಧಿಸುವ ಸೂಕ್ಷ್ಮಗಳನ್ನು ಅಭಿವ್ಯಕ್ತಿಸಿದ್ದಾನೆ. ದೇಶಿ ನುಡುಗಟ್ಟಿನಲ್ಲಿ ಭಾಷಿಕ ಲಯಗಾರಿಕೆಯನ್ನು ಉಳಿಸಿಕೊಂಡು ಲೋಕದ ಬದುಕಿನ ಜಂಜಡವನ್ನು ನೀಗಿಸಿಕೊಳ್ಳಲು ಅನುಭಾವದ ಮೊರೆಹೋಗುವ ದಾರಿಗಳನ್ನು ಬಕ್ಕಪ್ಪಯ್ಯ ಹೆಚ್ಚು ಬಗೆದು ತೋರಿಸುತ್ತಾನೆ. ಸಂಸಾರ ಬದುಕಿನ ತಾಪತ್ರಯಗಳನ್ನು ತಿಳಿಯಾದ ಹಾಸ್ಯದಲ್ಲಿ ವ್ಯಕ್ತಪಡಿಸಿದರೂ ಗಾಢವಾದ ವಿಷಾದ ಮನಸ್ಸಿನಲ್ಲಿ ಮೂಡುತ್ತದೆ. ಪ್ರಭುತ್ವದ ಅಧಿಕಾರದ ಹುಚ್ಚಿಗೆ ಎದುರಾಗಿ ಸಾಮಾನ್ಯರ ಆಧ್ಯಾತ್ಮದ ಹುಚ್ಚನ್ನು ನಿಲ್ಲಿಸಿದಂತಿದೆ. ‘ಚೇಳು ಕಡಿತ’ ಎನ್ನುವ ರೂಪಕ ಇದನ್ನು ಬಿಂಬಿಸುತ್ತದೆ. ಚೇಳಿನ ವಿಷ ಮೈ – ಮನ್ನಸ್ಸನ್ನು ಆವರಿಸಿದಂತೆ, ಆಧ್ಯಾತ್ಮದ ಕಾಣುತ್ತಿದೆ.

‘ಗಿಡನೋಡ ತಂಗೆಮ್ಮ ಬುಡಮೇಲನಾಗ್ಯಾದ’ ಎಂದು ಹಾಡಿದ ಕೂಡಲೂರು ಬಸಲಿಂಗಪ್ಪ ಸಾಮಾಜಿಕ ನೈತಿಕತೆಯನ್ನು ಎತ್ತಿ ಹಿಡಿದಿದ್ದಾನೆ. ಆತ ಬಳಸುವ ‘ಮೂಗುತಿ’ ನೈತಿಕತೆ ಸಂಕೇತವಾಗಿಯೆ ಬರುತ್ತದೆ. ರಮ್ಯತೆ, ನವಿರುತನ ಬಸವಲಿಂಗಪ್ಪನ ತತ್ವಪದಗಳಲ್ಲಿದ್ದು ನವೋದಯ ಕಾವ್ಯಕ್ಕೆ ಮುನ್ಸೂಚನೆಯಂತೆ ತೋರುತ್ತಿವೆ. ಮೋಟ್ನಹಳ್ಳಿ ಹಸನಸಾಬ ಮಠಮಾನ್ಯ ಪರಿಸರದಲ್ಲಿ ಬೆಳೆದಂತೆ ಕಾಣುತ್ತದೆ. ಲಿಂಗಾಯತ ಧರ್ಮದ ಪರಿಭಾಷೆ ಮತ್ತು ಆಶಯಗಳು ಆತನ ತತ್ವಪದಗಳಲ್ಲಿ ಕಾಣುತ್ತವೆ. ಹೀಗಾಗಿ ಇನ್ನಿತರ ತತ್ವಪದಕಾರರಿಗಿಂತ ಸ್ವಲ್ಪ ಶಿಷ್ಟತೆ ಹೆಚ್ಚುಕಾಣುತ್ತದೆ. ಸಹಜತೆಗಿಂತ ಪ್ರಭಾವಕ್ಕೆ ಒಳಗಾದಂತೆ ಕಾಣುತ್ತದೆ. ಅಂದರೆ ಅವರ ಗುರುಗಳು ಲಿಂಗಾಯತ ಮಠಮಾನ್ಯಪರಿಸರಕ್ಕೆ ಸಂಬಂಧಿಸಿದವರೇ ಆಗಿರುವುದು ಕಂಡುಬರುತ್ತದೆ.

ಸ್ವಾತಂತ್ರ್ಯಪೂರ್ವದ ಕೊನೆಯ ಅರ್ಧ ದಶಕದ ಕಾಲಘಟ್ಟವೂ ಹೆಚ್ಚು ಪ್ರಕ್ಷುಬ್ಧವಾಗಿತ್ತು. ನಿಜಾಮ ಆಳ್ವಿಕೆ, ಉರ್ದು ಹೇರಿಕೆ, ಸ್ವಾತಂತ್ರ್ಯಕ್ಕಾಗಿ ಹೋರಾಟ, ರಜಾಕಾರರ ಹಾವಳಿ ಇಂಥ ರಾಜಕೀಯ ಬೆಳವಣಿಗೆಗಳಿಂದ ಸಮಾಜದಲ್ಲಿ ಬಿಕ್ಕಟ್ಟುಗಳು ಹೆಚ್ಚಾಗಿದ್ದವು. ಸಾಮಾಜಿಕವಾಗಿ ಭೂಮಾಲೀಕರ ಹಿಡಿತದಲ್ಲಿ ದುಡಿಯುವ ಬಡವರಿಗೆ, ಕೆಳವರ್ಗದವರಿಗೆ ನಿತ್ಯದಪಾಡು ಇದ್ದೇಯಿತ್ತು. ಇವರಿಗೆ ‘ಮುಕ್ತಿ’ ಎಂಬುದು ಇರಲಿಲ್ಲ. ಈ ಕಾಲಾವಧಿಯಲ್ಲಿ ಭಯಾನಕ ಕ್ಷಾಮ, ಬರಗಾಲ ಮೇಲಿಂದ ಮೇಲೆ ಕಾಣಿಸಿಕೊಂಡು ಜನಸಮುದಾಯಗಳನ್ನು ದುಸ್ಥಿತಿಗೆ ತಳ್ಳಿತ್ತು. ೧೯೪೮ರ ವರ್ಷವಂತೂ ನಿಜಾಮರ ರಾಜಕೀಯ ದಾಹ, ರಜಾಕಾರರ ದೌರ್ಜನ್ಯ, ಪೊಲೀಸ್ ಕಾರ್ಯಾಚರಣೆ ಈ ಎಲ್ಲ ಸಂದರ್ಭದಲ್ಲಿ ಹತ್ಯಾಕಾಂಡವೇ ನಡೆದು ಹೋಯಿತು. ಮನುಷ್ಯನಿಗೆ ಅಸ್ತಿತ್ವವೇ ಇಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಇಂಥ ಹೃದಯವಿದ್ರಾವಕ ಘಟನೆಗಳು ಸಂಭವಿಸುತ್ತಿದ್ದ ಕಾಲಘಟ್ಟವಿದು. ಇದರ ನಡುವೆಯೇ ಉರ್ದುಭಾಷೆಯಲ್ಲಿಯಾದರೂ ಆಧುನಿಕ ಶಿಕ್ಷಣ ದೊರೆಯಲಾರಂಭಿಸಿತ್ತು. ವಿದ್ಯಾವಂತರ ಸಂಖ್ಯೆ ಮಂದಗತಿಯಲ್ಲಿ ಬೆಳೆಯುತ್ತಿದ್ದರೂ ಸಮಾಜದಲ್ಲಿ ಜಾಗೃತಿ ಮೂಡತೊಡಗಿತ್ತು. ರಾಜಕೀಯ ಸ್ವಾತಂತ್ರ್ಯ ಬರುವುದಕ್ಕಿಂತ ಮೊದಲೇ ಭಾಷಾವಾರು ಪ್ರಾಂತಗಳ ವಿಭಜನೆಯ ಕಾವು ಏರಿತ್ತು. ಬೀದರ, ಗುಲಬರ್ಗಾ ಜಿಲ್ಲಾಪ್ರದೇಶಗಳಲ್ಲಿಯೆ ಅರ್ಧ ಮಹಾರಾಷ್ಟ್ರಕ್ಕೆ, ಅರ್ಧ ಆಂಧ್ರಪ್ರದೇಶಕ್ಕೆ ಹರಿದು ಹಂಚಿಹೋಗುತ್ತದೆಂಬ ಭೀತಿ ಸ್ಥಳೀಯ ಕನ್ನಡಿಗರಿಗೆ ಹುಟ್ಟಿತ್ತು. ಬಳ್ಲಾರಿ, ಹೊಸಪೇಟೆ ತಾಲ್ಲೂಕುಗಳು, ಆಂಧ್ರದ ಕೆಲವು ಭಾಗಗಳು ಒಟ್ಟುಗೂಡಿ ‘ರಾಯಲು ಸೀಮೆ’ ಆಗುತ್ತದೆಂಬ ಭಯವಿತ್ತು. ಇನ್ನೊಂದೆಡೆ ಸಂಸ್ಥಾನವೇ ಇನ್ನೊಂದು ಪಾಕಿಸ್ತಾನದಂತೆ ಪ್ರತ್ಯೇಕಗೊಳ್ಳುತ್ತದೆಂಬ ವದಂತಿಗಳು ಹುಟ್ಟಿಕೊಂಡು ವಾತಾವರಣವನ್ನು ಇನ್ನಷ್ಟು ಪ್ರಕ್ಷುಬ್ದತೆ ಮೂಡಿತ್ತು. ಇಂಥ ಹಲವಾರು ಸಂಗತಿಗಳಿಂದ ಜನರು ನೆಮ್ಮದಿಯನ್ನು ಕಳೆದುಕೊಳ್ಳುತ್ತ ಭಯಭೀತಿಯಿಂದ ಜೀವ ಕೈಯಲ್ಲಿಡಿದು ಬದುಕುವಂತಾಗಿತ್ತು. ಇಂಥ ಪ್ರಕ್ಷುಬ್ದ ಕಾಲಘಟ್ಟದ ಅನುಭವಿಗಳು ಯಾವತ್ತೂ ಸಾಹಿತ್ಯಕ್ಕೆ ಹೇಳಿ ಮಾಡಿಸಿದಂತಿರುತ್ತವೆ. ಸಾಹಿತ್ಯ ರಚನೆಗೆ ಸಮೃದ್ಧ ಕನ್ಯೆನೆಲದಂತಿರುತ್ತದೆ. ಆದರೆ ಈ ಪ್ರಾಂತದಲ್ಲಿ ಕಾವ್ಯವನ್ನು ಬಿತ್ತಿ ಬೆಳೆಯಲು ಕವಿಗಳಿಗೆ ಸಾಧ್ಯವಾಗಿಲ್ಲ. ಕವಿಗಳೆಲ್ಲ ಬಿರುಗಾಳಿಗೆ ಸಿಕ್ಕ ಹಕ್ಕಿಗಳಂತೆ ಜರ್ಜರಿತರಾಗಿದ್ದರೇ? ಆಧುನಿಕ ಕಾಲಘಟ್ಟದಲ್ಲಿಯೂ ಈ ಪ್ರಶ್ನೆ ಇದ್ದೇ ಇರುತ್ತದೆ. ೧೭೦೦-೧೯೦೦ರ ತನಕ ತತ್ವಪದಕಾರರಾದರೂ ಸಮೃದ್ಧ ಸಾಹಿತ್ಯವನ್ನು ಬೆಳೆಸಲಿಲ್ಲ ಎಂದರೂ ಕಡೆಗಣಿಸಲಾಗದ ಸಾಹಿತ್ಯವನ್ನು ನೀಡಿದರು. ಆದರೆ ೧೯೦೦-೬೦ರ ನಡುವಿನ ಆಧುನಿಕ ಕವಿಗಳು ಈ ಕನ್ಯೆನೆಲದಲ್ಲಿ ಬೆಳೆದದ್ದೆಷ್ಟು? ಏನನ್ನು ಬೆಳೆದರು?

‘ಇಂಥ ಭೀಕರ ಕಾಲಘಟ್ಟದಲ್ಲಿ ನಾವು ಬದುಕಿ ಉಳಿದಿದ್ದೇ ದೊಡ್ಡ ಮಾತು’ ಎಂದು ಹಿರಿಯ ಕವಿಗಳು ಹೇಳುತ್ತಾರೆ. ಅಡ್ಡಿ ಆತಂಕಗಳು ನೂರಾರು ಇದ್ದವೆಂಬುದು ಒಪ್ಪಬೇಕಾಗುತ್ತದೆ. ಕನ್ನಡ ಭಾಷೆ ಶಿಕ್ಷಣದಲ್ಲಿ ಇರಲಿಲ್ಲವೆಂಬುದು ಸರಿ. ಆದರೂ ೨೦ನೇ ಶತಮಾನದ ಆದಿಭಾಗದಲ್ಲಿ ಹತ್ತಾರು ಪುರಾಣಗಳ ಕನ್ನಡದಲ್ಲಿ ರಚನೆಯಾಗಿವೆ. ತಕ್ಕಮಟ್ಟಿಗೆ ಶಾಸ್ತ್ರಸಾಹಿತ್ಯವೂ ರಚನೆಯಾಗಿದೆ. ಕಾವ್ಯವೂ ಹುಟ್ಟಿದೆ. ರಚನೆಯಾದ ಸಾಹಿತ್ಯದಲ್ಲಿ ಈ ಪ್ರಾಂತದ ಬದುಕು ವ್ಯಕ್ತವಾಗಿದೆಯೇ? ಸಾಂಪ್ರದಾಯಿಕ ಸಾಹಿತ್ಯ ರಚನಕಾರರನ್ನು ಈ ಪ್ರಶ್ನೆಯಿಂದ ಹೊರಗಿಡಬಹುದು. ಆಧುನಿಕ ಕವಿಗಳು ಈ ಪ್ರಶ್ನೆಯನ್ನು ಎದುರಿಸಬೇಕಾಗಿದೆ.

ಸೃಜನಶೀಲತೆಗೂ ಪ್ರಾದೇಶಿಕತೆಗೂ ಸಂಬಂಧ ಇರುವುದರಿಂದ ಈ ಪ್ರಶ್ನೆ ಇದ್ದೇ ಇರುತ್ತದೆ. ಹಾಗೆಂದು ಕವಿತೆಯಲ್ಲಿ ಪ್ರಾದೇಶಿಕಯನ್ನು ಹುಡುಕುವ ಪ್ರಯತ್ನ ಇದಲ್ಲ. ಭಾಷೆಯ ಬಳಕೆ ಮಾತ್ರ ಪ್ರಾದೇಶಿಕತೆ ಅಲ್ಲ. ಬದುಕಿನ ಆಶಯಗಳು ಅಭಿವ್ಯಕ್ತಿ ಪಡೆದಿರಬೇಕೆಂದು ಆಪೇಕ್ಷಿಸುವುದು ತಪ್ಪಲ್ಲವೆಂದು ಕಾಣುತ್ತದೆ. ಸಿದ್ಧಯ್ಯ ಪುರಾಣಿಕರ ‘ಸಲಾಮ್ ಸಾಬ’, ಶಾಂತರಸರ ‘ಬೇಗಂ ಪಾಕಿಸ್ತಾನ’ ಎಂಬ ಸ್ವಾತಂತ್ರ್ಯಪೂರ್ವದ ಈ ಕವನಗಳಲ್ಲಿ ಈ ಕಾಲಘಟ್ಟದ ಆತಂಕಗಳು ವ್ಯಕ್ತವಾಗಿವೆ. ಆದರೆ ೧೯೦೦-೬೦ರ ವರೆಗಿನ ಕಾವ್ಯದಲ್ಲಿ ಒಡಮೂಡಿದ್ದು ಎನು? ಕಾವ್ಯದ ತುಡಿತ, ಹಂಬಲಗಳೇನು ಎಂದು ಹುಡುಕಿದರೆ ನಿರಾಶೆಯಾಗುತ್ತದೆ. ‘ಮೊಗ್ಗಿನ ಮಾಲೆ’ (೧೯೩೭). ‘ಶ್ರೀಕಾರ’ (೧೯೫೪) ಎಂಬ ಎರಡು ಸಂಕಲನಗಳಿವೆ. ಹೈದರಾಬಾದ್ ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈ ಪ್ರಾಂತದ ಆಧುನಿಕ ಕವಿಗಳ ಕವಿತೆಗಳು ಈ ಸಂಕಲನದಲ್ಲಿ ಸೇರಿವೆ. ಇವು ಅಂಥಾಲಜಿಗಳೇ. ೩೦ರ ದಶಕದಲ್ಲಿ ಬರೆದಿರಬಹುದಾದ ಜೆ.ಕೆ. ಪ್ರಾಣೇಶಾಚಾರ್ಯರ ‘ಸ್ವಾಗತ’ ಎನ್ನುವ ಒಂದು ಕವನ ಚಾರಿತ್ರಿಕವಾಗಿ ಗಮನಿಸುವಂಥದ್ದು.

            ನಮ್ಮ ನಾಡಿಂಗೆ ಓಡಿ ಬನ್ನಿ,
            ನಿಮ್ಮವರ ನೋಡ ಬನ್ನಿ.
            ಕಕ್ಕುಲತೆಯಿಂದ ಮಾತಾಡ ಬನ್ನಿ,
            ಎಮ್ಮೊಡನೆ ಕೂಡ ಬನ್ನಿ.                       | |

            ‘ತುಂಗನಾಳಿದ ತಿರುಳುಗನ್ನಡದ ನಾಡು,
            ದಾಸರಿಂ ಪಾವನತೆಯೊಂದಿದೀ ನಾಡು,
            ಇಕ್ಕೆಲದ ಸೆಳೆತಕ್ಕೆ ಶೀಳಾಗಿ ಪಾಡು
            ವಿಂಗಡಿಸಿ ಹೇಗಾಗಿ ಹೋಗಿಹುದು ನೋಡು. | |      

            ಕಳೆದುದಕೆ ಅಳುತಳುತ ಕುಳಿತ ಫಲವೇನು?
            ಮೊಳೆತಿರಲು ತನ್ನರಿಹು ಸಾಲದೇನು?
            ಮೊಳಿಕೆ ಕಮರದ ತೆರದಿ ಮಳೆಗರೆದು ನೀನು,
            ಪಾಲಿಸೈ, ಲಾಲಸೈ, ಕೇಳಲಿನ್ನೇನು?            | |

            ಬಿಸಿಲ ಬೇಗೆಗೆ ಬೆಂದು ಬಾಡುತಿದೆ ನಾಡು
            ‘ಆಚಾರ್ಯನಿನಗೆ ಮೊರೆಹೊಗುತಲಿದೆ ಕಾಡು.
            ಬೇಗ ಬಾ, ಬೇಗ ಬಾ, ಬಂದು ಕಾಪಾಡು.
            ಶುಷ್ಕಹೃದಯಕೆ ತಂಪಕಂಪನೀಡು.      | |

            ಮಂದ ಮಾರುತವಾಗಿ ತೇಲಿ ಬಾರೈ
            ಹರಿವ ಹೊಳೆಯಾಗಿ ನೀ ಸಾಗಿ ಬಾರೈ
            ಭೋರ್ಗರೆವ ಮಳೆಯಾಗಿ ಮೊರೆದು ಬಾರೈ
            ಸುಸ್ವಾಗತವು ನಿನಗೆ ಶ್ರೀಯೆ ಬಾರೈ.        | |

ಕವಿ ಈ ನಾಡಿನ ಪರಿಸ್ಥಿತಿಯನ್ನು ಬಿ.ಎಂ.ಶ್ರೀ. ಅವರಿಗೆ ಅಪಾರ ನೋವಿನಿಂದಲೇ ನಿವೇದಿಸಿಕೊಂಡಿದ್ದಾನೆ. ಬಿ.ಎಂ.ಶ್ರೀ. ಅವರು ನವೋದಯ ಕಾವ್ಯಮಾರ್ಗದ ಹರಿಕಾರರು. ಕನ್ನಡ ಕಟ್ಟುವ ನಾಯಕರು. ಅವರು ಈ ಪ್ರಾಂತದ ಆಧುನಿಕ ಕವಿಗಳಿಗೆ ಆದರ್ಶಪ್ರಾಯವಾಗಿದ್ದುದು ಸಹಜವೇ. ವಿಚಿತ್ರವೆಂದರೆ ‘ಸ್ವಾಗತ’ ಕವಿತೆಯಲ್ಲಿ ಈ ನಾಡಿನ ದುಸ್ಥಿತಿಯನ್ನು ಬಿ.ಎಂ.ಶ್ರೀ. ಅವರಿಗೆ ನಿವೇದಿಸಿ ಕೈತೊಳೆದುಕೊಂಡರೇ ವಿನಹ ಈ ನಾಡಿನ ಅಂದರೆ ನಿಂತ ನೆಲದ ಜನರ ಪಾಡನ್ನು, ತುಡಿತಗಳನ್ನು ತಮ್ಮ ಕವಿತೆಗಳಲ್ಲಿ ಅಭಿವ್ಯಕ್ತಿಸುವುದನ್ನು ಮರೆತು, ಆಕಾಶ ನೋಡಿ ಬರೆಯತೊಡಗಿದ್ದುದು ದುರ್ದೈವದ ಸಂಗತಿ ಎನ್ನದೆ ವಿಧಿಯಿಲ್ಲ. ‘ಸ್ವಾಗತ’ ಕವಿತೆಯ ಕೊನೆಯ ನುಡಿ ಗಮನಿಸಿದರೆ, ಈ ಪ್ರಾಂತದಲ್ಲಿ ಕಾವ್ಯದ ಸೆಲೆ ಬತ್ತಿಹೋಗಿದೆ. ಒಂದು ವೇಳೆ ಬತ್ತಿದ ಸೆಲೆ ಜಿನ್ಗಬೇಕಾದರೆ ಬಿ.ಎಂ.ಶ್ರೀ. ಅವರು ಈ ನಾಡಿಗೆ ಮಳೆಯಾಗಿ ಬರಬೇಕು. ಇದನ್ನು ಗಮನಿಸಿದರೆ ಈ ನಾಡಿನ ಆರಂಭದ ಕವಿಗಳು ವವೋದಯ ಕಾವ್ಯ ಮಾರ್ಗವನ್ನು ಹಿಡಿಯಲು ಬಿ.ಎಂ.ಶ್ರೀ. ಅವರಿಂದ ದೀಕ್ಷೆ ಪಡೆದಂತೆ ಕಾಣುತ್ತದೆ. ಹೀಗಾಗಿ ನಿಂತ ನೆಲ ಭುಗಿಲೆದ್ದು ಉರಿಯುತ್ತಿದ್ದರೂ ಕನಸು, ಆದರ್ಶ, ರಮ್ಯತೆಗಳಿಂದ ಕೂಡಿದ ಕವಿತೆಗಳು ಈ ಕಾಲಘಟ್ಟದಲ್ಲಿ ರಚನೆಯಾಗಿವೆ. ‘ಮೊಗ್ಗಿನ ಮಾಲೆ’ ಮತ್ತು ‘ಶ್ರೀಕಾರ’ ಎರಡು ಅಂಥಾಲಜಿಯಲ್ಲಿ ಸುಮಾರು ೫೦ ಕವಿಗಳ ಕವಿತೆಗಳಿವೆ. ಈ ಕವಿತೆಗಳು ಈ ಪ್ರಾಂತದ ಯಾವ ನೆನಪುಗಳನ್ನು ಹೊತ್ತಂತೆ ಕಾಣುವುದಿಲ್ಲ. ಆದರೆ ಈ ಕವಿತೆಗಳು ಚೆನ್ನಾಗಿಲ್ಲವೆಂದು ಹೇಳಲು ಬರುವುದಿಲ್ಲ. ನವೋದಯ ಕಾವ್ಯ ಸಂಪ್ರದಾಯದಲ್ಲಿ ಸೇರಿಕೊಳ್ಳಲು ಅರ್ಹತೆಯನ್ನು ಖಂಡಿತ ಪಡೆದಿವೆ. ರಮ್ಯ ಕಾವ್ಯಕ್ಕೆ ಇರಬೇಕಾದ ತಾಂತ್ರಿಕಾಂಶಗಳೆಲ್ಲವೂ ಈ ಕವಿತೆಗಳಲ್ಲಿವೆ.

ಆದರೂ ಈ ಕಾಲಘಟ್ಟದಲ್ಲಿ ಅಲ್ಲೊಂದು, ಇಲ್ಲೊಂದು ಈ ಪ್ರಾಂತದ ಜನರ ತುಡಿತಗಳು, ಹಂಬಲಗಳು ವ್ಯಕ್ತವಾಗುವ ಕವಿತೆಗಳು ಸಿಗುತ್ತವೆ. ಸಿದ್ಧಯ್ಯಪುರಾಣಿಕರ ‘ಸಲಾಮ್ ಸಾಬ’ ಎಂಬ ಕವಿತೆಯ ೪೦ರ ದಶಕದಲ್ಲೇ ರಚನೆಯಾಗಿದೆ. ಇದೊಂದು ಕಥನಕವನ ಭಾರತ ಒಡೆದು, ಒಂದು ಭಾಗ ಪಾಕಿಸ್ತಾನ ಆಗುವ ಅಲ್ಲೋಲ ಕಲ್ಲೋಲದ ಸಂದರ್ಭ. ಭಾರತದಿಂದ ಪ್ರತ್ಯೇಕವಾಗಿ ಪಾಕಿಸ್ತಾನ ಎಂಬ ದೇಶವೊಂದು ರೂಪುಗೊಳ್ಳುತ್ತದೆ ಎಂಬ ಸುದ್ದಿಗಳು ಈ ಪ್ರಾಂತದಲ್ಲಿ ವಿಚಿತ್ರ ಬಗೆಯಲ್ಲಿ ಭೀತಿಯನ್ನುಂಟುಮಾಡಿದೆ. ಹೈದರಾಬಾದು ಸಂಸ್ಥಾನವೂ ಹಾಗೇ ಇನ್ನೊಂದು ‘ದೇಶ’ವಾಗುವ ವದಂತಿಗಳಿಂದ ಪ್ರಜ್ಞಾವಂತ ದೇಶಿಗರು ತಲ್ಲಣಿಸಿದ್ದರು. ವಿಭಜನೆ ಎಂಬ ಭಯದ ಭೂತ ಕಾಡಿರುವುದಕ್ಕೆ ಸಾಹಿತ್ಯದಲ್ಲಿ ಬೇಕಾದಷ್ಟು ಪುರಾವೆಗಳು ಸಿಗುತ್ತವೆ. ಭಾರತೀಯರು ಮುಸ್ಲಿಮರನ್ನು ‘ಮನೆಮುರುಕರು’ ಎಂದು ಪರಿಗಣಿಸಿ ದ್ವೇಷಿಸುತ್ತಿದ್ದರು. ‘ಸಲಾಮ್ ಸಾಬ’ ಕವಿತೆಯಲ್ಲಿ ಬಡ ಮುಸ್ಲಿಮನೊಬ್ಬ ಭಿಕ್ಷೆ ಬೇಡುತ್ತಾನೆ. ‘ಮನೆಮುರುಕ ತುರುಕ’ ನಿಗೆ ಭಿಕ್ಷೆ ನೀಡುವುದಕ್ಕೆ ಕವಿಗೆ (ನಿರೂಪಕ) ಮನಸ್ಸು ಬರುವುದಿಲ್ಲ. ಮರುಕ ಹುಟ್ಟಿ ಮನಸ್ಸು ಹೊಯ್ದಾಡುತ್ತದೆ. ಆದರೂ ಸಮಯ ಸಾಧಕರು, ಸ್ವಾರ್ಥಿಗಳು ಪಾಕಿಸ್ತಾನ ಬೇಕೆಂದು ಹೊಂಚು ಹಾಕುತ್ತಿದ್ದಾರೆಯೇ ಹೊರತು ‘ಬಡತುರುಕ ಬೇಡುವುದು ಅನ್ನ – ಅಲ್ಲ ಪಾಕಿಸ್ತಾನ’ ಎಂದು ನಾಲ್ಕಾಣೆ ನೀಡುತ್ತಾನೆ ಕವಿ. ಶಾಂತರಸರ ‘ಬೇಗಂ ಪಾಕಿಸ್ತಾನ’ ಎನ್ನುವ ಕವನ ಕೂಡ ಇಂಥದ್ದೇ ಸಂದರ್ಭದಲ್ಲಿ ರಚನೆಯಾದದ್ದು. ಪಾಕಿಸ್ತಾನ ಬೇಕೆಂದು ಬಯಸುವವರನ್ನು ಖಂಡಿಸಿ ಬುದ್ಧಿ ಹೇಳುವುದು ಕವಿತೆಯ ಮುಖ್ಯ ಉದ್ದೇಶವಾಗಿದೆ. ಈ ಕವಿತೆಗಳ ಹಿಂದಿನ ಆಶಯಗಳು ಕವಿಗಳದ್ದೇ ಆದರೂ ಈ ಕಾಲಘಟ್ಟದಲ್ಲಿ ಜನರ ಮನೋಭಾವ, ರಾಜಕೀಯ ವಿದ್ಯಮಾನಗಳಿಗೆ ಜನರ ಪ್ರತಿಕ್ರಿಯೆಗಳು ಇಲ್ಲಿ ಕಾಣಿಸುತ್ತವೆ. ಶಾಂತರಸರು ರಾಜಕೀಯ, ಸಾಮಾಜಿಕ ಬೆಳವಣಿಗೆಗಳಿಗೆ ತಮ್ಮದೇ ಆದ ನಿಲುವಿನಲ್ಲಿ ಪ್ರತಿಕ್ರಿಯಿಸುವ ಗುಣ ಹೊಂದಿದವರು. ಆದರೆ ಸಿದ್ಧಯ್ಯ ಪುರಾಣಿಕರು ಹಾಗಲ್ಲ. ಅವರು ವ್ಯವಸ್ಥೆಯನ್ನು ವಿರೋಧಿಸುವ, ಪ್ರಭುತ್ವವನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ಅವರ ಕಾವ್ಯ ಮಾನವೀಯ ಆದರ್ಶಗಳಿಂದ ತುಂಬಿದೆ. ‘ಸಲಾಮ್ ಸಾಬ’ ಕವಿತೆ ಬರೆದು ಪೇಚೆಗೆ ಸಿಲುಕಿದಂತೆ ಕಾಣುತ್ತದೆ. ಈ ಪೇಚೆಗೆ ಕಾರಣವೆಂದರೆ ಕವಿತೆ ಬರೆದ ಬೆನ್ನಲ್ಲೇ ಅವರು ನಿಜಾಮ್ ಸರಕಾರದಲ್ಲಿ ತಹಸೀಲ್ದಾರರಾಗಿ ನೇಮಕಗೊಂಡದ್ದು. ಈ ಕವಿತೆಯನ್ನು ‘ಮುಸುಕ ತೆರೆ’ ಕೃತಿಯಲ್ಲಿ ಪ್ರಕಟಿಸಬಾರದೆಂದು ರಾಯಚೂರಿನ ಸಂಗಡಿಗರ ಸಮಿತಿಗೆ ಅವರು ಮನವಿ ಮಾಡಿಕೊಳ್ಳುತ್ತಾರೆ. ಆದರೆ ಆ ಕೃತಿ ಅಷ್ಟೊತ್ತಿಗೆ ಪ್ರಕಟವಾಗಿರುತ್ತದೆ.[3] ಮುಂದೆ ಇಂಥ ಕವಿತೆಗಳನ್ನು ಅವರು ಬರೆಯಲಿಲ್ಲ. ಹಿರಿಯ ತಲೆಮಾರುಗಳಲ್ಲಿ ಕಲಾನಂದ ಗೂಗಲ್ಲು ಉತ್ತಮ ಪದ್ಯಗಳನ್ನು ಬರೆದಿದ್ದಾರೆ. ಅವರ ಕವಿತೆಗಳ ಸಂಗ್ರಹ ಹೊರ ಬಂದಂತೆ ಕಾಣುವುದಿಲ್ಲ. ಅವರ ಕವಿತೆಗಳಲ್ಲಿ ರಾಜಕೀಯ, ಸಾಮಾಜಿಕ ಪ್ರಜ್ಞೆ ಜಾಗೃತವಾಗಿರುವುದು ಕಂಡುಬರುತ್ತದೆ. ಇನ್ನೊಬ್ಬರು ಹನುಮಂತಾಚಾರ್ಯ ಉಪಾಧ್ಯಾಯರ ಕವಿತೆಗಳಲ್ಲಿ ನೆಹರು ಅವರ ಸಮಾಜವಾದ, ಭವ್ಯಭಾರತದ ಕನಸು, ಆದರ್ಶಗಳು ವ್ಯಕ್ತವಾಗಿವೆ.

೬೦ – ೭೦ರ ದಶಕದಲ್ಲಿ ಬರೆಯುತ್ತಿದ್ದ ಕವಿಗಳ ಕಾವ್ಯ ‘ಬೆನ್ನ ಹಿಂದಿನ ಬೆಳಕು’ ಎಂಬ ಅಂಥಾಲಜಿಯಲ್ಲಿದೆ. ಈ ಅವಧಿಯ ಕವಿಗಳ ಮೇಲೆ ನವ್ಯಸಾಹಿತ್ಯದ ಪ್ರಭಾವವಿದೆ. ವಿಚಿತ್ರವೆಂದರೆ ಈ ಕವಿಗಳು ಹಳ್ಳಿಯಲ್ಲಿ ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಮಾಡಲು ಪಟ್ಟಣದಲ್ಲಿದ್ದರೂ ಈ ಕವಿಗಳ ವ್ಯಕ್ತಿತ್ವ ಹಳ್ಳಿಯ ಜಾಯಮಾನದ್ದೇ ಆಗಿದೆ. ಆಧುನಿಕ ಬದುಕಿನ ಯಾವ ಸಂವೇದನೆ ಪಡೆಯದ ಈ ಕವಿಗಳು ಕಾಲದ ಒತ್ತಡಕ್ಕೆ ನವ್ಯಕಾವ್ಯದ ಬೆನ್ನುಹತ್ತಿ ಅನಾಥಪ್ರಜ್ಞೆ, ಅಸಂಗತ ಮನಸ್ಸಿನ ತುಮುಲ, ಉಸಿರುಗಟ್ಟುವ ಸಾಂಪ್ರದಾಯಿಕ ಬದುಕಿನ ಬಗ್ಗೆ ವಿರೋಧ ಮುಂತಾದವುಗಳನ್ನು ಆರೋಪಿಸಿಕೊಂಡು ಕವಿತೆಗಳನ್ನು ರಚಿಸಿದ್ದಾರೆ. ಆದರೆ ಈ ಕವಿಗಳು ಇದಕ್ಕೆ ವಿರುದ್ಧವಾದ ಸಾಮೂಹಿಕ ಬದುಕನ್ನು, ಹಳ್ಳಿಯ ಸತ್ವ ಸೊಗಡನ್ನು ಅನುಭವಿಸಿದವರು. ಅಂದರೆ ಹಳ್ಳಿ, ಸಮಾಜದ ಭಾಗವಾಗಿದ್ದವರೇ ಹೊರತು ಪ್ರತ್ಯೇಕ ಅಸ್ತಿತ್ವ ಕಂಡುಕೊಂಡವರಲ್ಲ. ಈ ಹೊತ್ತಿಗೂ ಈ ಪ್ರಾಂತದಿಂದ ಆಧುನಿಕ ಬದುಕನ್ನು ಪ್ರತಿನಿಧಿಸುವ ಸಾಹಿತ್ಯ ಕೃತಿಗಳು ಹೊರಬಂದಿಲ್ಲ. ಈ ಹೊತ್ತಿಗೂ ಇದು ನಿಜ. ಮನುಷ್ಯನ ಒಳ ಜಗತ್ತನ್ನು ಅರಿಯುವ ಆಸಕ್ತಿಗಿಂತ ಹೊರ ಜಗತ್ತನ್ನೇ ಅರಿಯುವ ಆಸಕ್ತಿಯೇ ಹೆಚ್ಚಾಗಿ ಕಾಣುತ್ತದೆ. ಹೀಗಾಗಿ ನವ್ಯ ಕಾವ್ಯದ ವಾತಾವರಣದ ಒತ್ತಡಕ್ಕೆ ನವ್ಯ ಕಾವ್ಯವನ್ನು ರಚಿಸಲು ಪಟ್ಟ ಪಾಡು ಈ ಅವಧಿಯಲ್ಲಿ ರಚನೆಯಾದ ಕಾವ್ಯದಿಂದ ವ್ಯಕ್ತವಾಗಿದೆ. ಈ ಬೆಳವಣಿಗೆಯಿಂದ ಈ ಪ್ರಾಂತದಲ್ಲಿ ಕವಿಗಳು ಬಿಕ್ಕಟ್ಟಿಗೆ ಸಿಲುಕಿದಂತೆ ಕಾಣುತ್ತದೆ. ಬರೆದರೆ ನವ್ಯಕಾವ್ಯ ಬರೆಯಬೇಕು. ಬೇರೊಂದು ದಾರಿಯನ್ನು ಕಂಡುಕೊಳ್ಳುವಷ್ಟು ಎತ್ತರದ ಪ್ರತಿಭೆಗಳು ಇರಲಿಲ್ಲ. ಆದರೂ ಕವಿತೆಗಳನ್ನು ರಚಿಸಿದರು. ಅದು ನವ್ಯವೂ ಅಲ್ಲ. ನವೋದಯಕ್ಕೆ ಸೇರಿಸಿಕೊಳ್ಳಲು ಮೂಲಭೂತ ಗುಣಗಳು ಕವಿತೆಗಳಲ್ಲಿ ಇರಲಿಲ್ಲ. ಆಶಾದಾಯಕ ಸಂಗತಿಯೆಂದರೆ ನವ್ಯದ ಬೆನ್ನ ಹಿಂದೆಯೇ ಅರಂಭವಾದ ಬಂಡಾಯ ಸಾಹಿತ್ಯ ಚಳುವಳಿಯಲ್ಲಿ ಸೇರಿಕೊಂಡು ಕೆಲವರು ಬಿಡುಗಡೆ ಪಡೆದರು. ಚೆನ್ನಣ್ಣ ವಾಲೀಕಾರ, ಶಿವಶರಣ ಪಾಟೀಲ ಜವಳಿ, ಜಂಬಣ್ಣ ಅಮರಚಿಂತ ಮುಂತಾದವರು ನವ್ಯ ಧೋರಣೆಯಿಂದ ಉಸಿರುಗಟ್ಟಿ ಹೋಗಿದ್ದರು. ಬಂಡಾಯ ಸಾಹಿತ್ಯ ಚಳುವಳಿ ಆರಂಭವಾದದ್ದು. ಈ ಕವಿಗಳಿಗೆ ಶಕ್ತಿ ಬಂದಂತಾಯಿತು. ಆದರೆ ನವ್ಯ ಕಾವ್ಯವನ್ನು ಅದು ಹೇಗೋ ರಚಿಸುತ್ತಿದ್ದ ಮೇಲ್ವರ್ಗಗಳ ಕವಿಗಳಿಗೆ ಬಂಡಾಯ-ದಲಿತ ಸಾಹಿತ್ಯ ಚಳುವಳಿಯನ್ನು ಸೇರಲು ಅಸಾಧ್ಯವಾಯಿತು. ಅಂಥವರು ಕಾವ್ಯ ಬರೆಯುವುದನ್ನೇ ನಿಲ್ಲಿಸಿಬಿಟ್ಟರು. ನವ್ಯಸಾಹಿತ್ಯ ಚಳುವಳಿ ಈ ಪ್ರಾಂತದಲ್ಲಿ ದೊಡ್ಡ ಬಿಕ್ಕಟ್ಟನ್ನೇ ಉಂಟುಮಾಡಿತು. ಈ ಬಿಕ್ಕಟ್ಟು ಕವಿಗಳ ಅಭಿವ್ಯಕ್ತಿ ಸಾಧ್ಯತೆಯನ್ನೇ ಕುಂಠಿತಗೊಳಿಸಿತು.

೧೯೦೦-೫೦ರ ನಡುವೆ ಕಾವ್ಯ ರಚನೆಯಾದಷ್ಟೂ ಕಥನ ಸಾಹಿತ್ಯ ರಚನೆಯಾಗಲಿಲ್ಲ. ಬೆರಳು ಮಡಿಕೆಯಷ್ಟು ಕೃತಿಗಳು ಸಿಗುವುದು ಕಷ್ಟ. ಚಪನಹಳ್ಳಿ ಹನುಮಂತರಾವ್ ದೇಸಾಯಿ, ಸಗರ ಕೃಷ್ಣಾಚಾರ್ಯ, ಎ.ಬಿ.ಮುತ್ತಾಳ ಮುಂತಾದ ಕೆಲವೇ ಕಥೆಗಾರರು ಕಾಣಿಸುತ್ತಾರೆ. ಆರಂಭದ ಕವಿಗಳು ಬಿ.ಎಂ.ಶ್ರೀ. ಅವರನ್ನು ಆದರ್ಶವಾಗಿಟ್ಟುಕೊಂಡಂತೆ, ಕಥೆಗಾರರು ಅನಕೃ ಅವರನ್ನು ಅನುಸರಿಸಿರುವುದು ಕಂಡುಬರುತ್ತದೆ. ಗುಲಬರ್ಗಾದಿಂದ ಹೊರಬಂದ ‘ಸನ್ಮಾನ’ (೧೯೬೮) ಎನ್ನುವ ಪ್ರಾತಿನಿಧಿಕ ಕಥಾಸಂಕಲನ (ಅಂಥಾಲಜಿ)ವನ್ನು ಅನಕೃ ಅವರನ್ನು ಸಂಭ್ರಮದಿಂದ ಸ್ವಾಗತಿಸಿ ಅವರಿಗೆ ಅರ್ಪಿಸಲಾಗಿದೆ. ‘ಸನ್ಮಾನ’ ಸಂಕಲನದ ೧೦ ಕತೆಗಳು, ‘ಒರೆಗಲ್ಲು’ ಸಂಕಲನದ ೧೦ ಕಥೆಗಳು ಸೇರಿದಂತೆ ಎಲ್ಲವುಗಳ ಮೇಲೆ ಪ್ರಗತಿಶೀಲ ಸಾಹಿತ್ಯ ಚಳುವಳಿಯ ಪ್ರಭಾವ, ಪ್ರೇರಣೆಯಿದೆ. ಹಿಂದಿಯ ಪ್ರೇಮಚಂದ್ರ, ಕನ್ನಡದ ಅನಕೃ ಅವರಿಂದ ಈ ಕಥೆಗಾರರು ಪ್ರಭಾವಿತರಾಗಿರುವುದು ಕಂಡುಬರುತ್ತದೆ. ಭಾರತದೇಶ ವಿಭಜನೆಯಾದಾಗ ನಡೆದ ಮತೀಯ ಗಲಭೆಗಳು, ಎರಡು ಮಹಾಯುದ್ಧಗಳು ಸಂಭವಿಸಿದಾಗ ಹುಟ್ಟಬಹುದಾದ ಭೀತಿ ಮತ್ತು ದೇಶಭಕ್ತಿ-ದೇಶಸೇವೆ, ಕವಿ ಕಲಾವಿದರ ಗೋಳಿನ (ಆದರ್ಶದ) ಕಥೆ, ಭಗ್ನ ಪ್ರೇಮ, ಬಡತನ-ದಾರಿದ್ರ್ಯಗಳ ನಡುವೆ ಮೆರೆಯುವ ಮಾನವೀಯತೆ ಮುಂತಾದವುಗಳು ಮೊದಲ ಘಟ್ಟದ ಕಥೆಗಳಲ್ಲಿ ವ್ಯಕ್ತಗೊಂಡಿವೆ. ದೇಶ ವಿಭಜನೆಯಿಂದಾದ ದುರಂತವನ್ನು ಮನಗಂಡಿದ್ದ ಈ ಪ್ರಾಂತದ ಜನತೆ, ತಮ್ಮ ನಿಂತ ನೆಲ ವಿಭಜನೆಯಾಗುತ್ತದೆಂಬ ಭೀತಿಗೆ ಒಳಗಾಗಿದ್ದರು. ಇಂಥ ಸಂದರ್ಭಗಳಲ್ಲಿ ಸಮಯ ಸಾಧಕರ ವಿಚ್ಚಿದ್ರಕಾರಕ ಕೆಲಸಗಳು ತೀವ್ರಗೊಂಡು ಸಮಾಜವನ್ನು ದುರಂತಕ್ಕೀಡು ಮಾಡುತ್ತವೆ. ಈ ದುರಂತದ ಹಲವು ಮುಖಗಳ ತಕ್ಕಮಟ್ಟಿನ ಚಿತ್ರಣ ಕಥನ ಸಾಹಿತ್ಯದಲ್ಲಿದೆ.

ಪ್ರಾದೇಶಿಕತೆಗೂ ಸೃಜನಶೀಲತೆಗೂ ಇರುವ ಸಂಬಂಧವನ್ನು ೭೦ ರಿಂದೀಚೆಗೆ ರಚನೆಯಾದ ಕಥನ ಸಾಹಿತ್ಯದಲ್ಲಿ ಇನ್ನೂ ಹೆಚ್ಚು ಕಾಣಬಹುದು. ರಜಾಕಾರರ ಹಾವಳಿಯ ಸಂದರ್ಭದಲ್ಲಿ ಸಮಾಜದಲ್ಲಿ ಉಂಟಾದ ಭೀಕರ ಪತಿಸ್ಥಿತಿಯನ್ನು ಸಂಕೀರ್ಣವಾಗಿ ಹಿಡಿಯಲು ಸಾಧ್ಯವಾಗಿಲ್ಲವೆಂದರೂ ಅದರ ಚಿತ್ರಣ ಏಕಮುಖವಾಗಿದೆ ಎಂದು ಹೇಳಲು ಬರುವುದಿಲ್ಲ. ಅದೊಂದು ರಾಜಕೀಯ ಪ್ರೇರಿತ ಹಾವಳಿಯಾದರೂ ಸಮಾಜದಲ್ಲಿ ಅದು ಪಡೆದುಕೊಂಡ ಸ್ವರೂಪವನ್ನು ಕಥನಸಾಹಿತ್ಯದಲ್ಲಿ ಹಿಡಿದಿಡಲಾಗಿದೆ. ಬಹಳ ಮುಖ್ಯವಾಗಿ, ಪ್ರಭುತ್ವದ ದಬ್ಬಾಳಿಕೆ, ಅದನ್ನು ಅನುಭವಿಸುವ, ಎದುರಿಸುವ ವರ್ಗಗಳ ನಡುವಿನ ಸಂಘರ್ಷವು ಕಥನಸಾಹಿತ್ಯದಲ್ಲಿದೆ. ಸಾಮಾಜಿಕವಾಗಿ ಊರಗೌಡ, ಸಾಹುಕಾರ, ಪಟೇಲ, ಕಲಕರ್ಣಿ, ಮಠಾದೀಶ ಮುಂತಾದವರು ಬಡವರನ್ನು, ಕೆಳವರ್ಗದವರನ್ನು ಶೋಷಣೆಗೀಡು ಮಾಡುವುದನ್ನು ಎತ್ತಿ ತೋರಿಸುವುದು ಕಥನಸಾಹಿತ್ಯದ ಸ್ಥಾಯಿಗುಣ ಎಂಬಂತೆ ಕಾಣುತ್ತಿದೆ. ಮೇಲುನೋಟಕ್ಕೆ ಬಂಡಾಯ-ದಲಿತ ಸಾಹಿತ್ಯ ಚಳುವಳಿಯ ಪ್ರಭಾವ ಇರಬೇಕೆಂದು ಕಾಣುತ್ತದೆ. ಇದನ್ನು ಸಂಪೂರ್ಣ ನಿರಾಕರಿಸಲಾಗುವುದಿಲ್ಲ. ಆದರೂ ಈ ಪ್ರಾಂತದ ಬದುಕೇ ಹೀಗಿರುವುದರಿಂದ ಇದು ಸಂಪೂರ್ಣ ನಿರಾಕರಿಸಲಾಗುವುದಿಲ್ಲ. ಆದರೂ ಈ ಪ್ರಾಂತದ ಬದುಕೇ ಹೀಗಿರುವುದುರಿಂದ ಇದು ಸಹಜವಾಗಿ ವ್ಯಕ್ತವಾಗಿದೆ. ಕಾಕತಳೀಯ ಎಂಬಂತೆ ಬಂಡಾಯ – ದಲಿತ ಸಾಹಿತ್ಯ ಚಳುವಳಿ ಆರಂಭದ ಹೊತ್ತಿನಲ್ಲಿಯೇ ಈ ಪ್ರಾಂತದ ಕಥನಸಾಹಿತ್ಯ ಬೆಳೆಯುತ್ತಿತ್ತು. ಒಂದಕ್ಕೊಂದು ಪೂರಕವಾದವು ಅಷ್ಟೆ. ಯಾಕೆಂದರೆ ‘ಬೆಳ್ಯ’ (ಚೆನ್ನಣ್ನ ವಾಲೀಕರ) ಕಾದಂಬರಿ ಬಹಳ ಹಿಂದೆ ಪ್ರಕಟವಾಗಿತ್ತು. ಬಂಡಾಯ ಸಾಹಿತ್ಯ ಚಳುವಳಿಗಿಂತ ಮೊದಲೇ ‘ಸಣ್ಣಗೌಡಸಾನಿ’ (ಶಾಂತರಸ), ‘ಕುರುಮಯ್ಯ ಮತ್ತು ಅಂಕುಶದೊಡ್ಡಿ’ (ಜಂಬಣ್ಣ ಅಮರಚಿಂತ) ಎಂಬ ದೊಡ್ಡ ಗಾತ್ರದ ಕಾದಂಬರಿಗಳು ರಚನೆಯಾಗಿದ್ದರೂ ಪ್ರಕಾಶಕರ ಕೊರತೆಯಿಂದ ಅವು ಪ್ರಕಟವಾಗಿರಲಿಲ್ಲ. ಹತ್ತಾರು ವರ್ಷಗಳ ನಂತರ, ಅದೂ ಸಂಕ್ಷಿಪ್ತ ರೂಪದಲ್ಲಿ ಪ್ರಕಟವಾದವು. ‘ಬೆಳ್ಯ’ ಕಾದಂಬರಿ ಭಾಷೆಯ ತೊಡಕಿನಿಂದ ನಿರ್ಲಕ್ಷಕ್ಕೆ ಒಳಗಾಯಿತು. ಕಾದಂಬರಿಯಲ್ಲಿ ನಾಗರೀಕ ಸಮಾಜಕ್ಕಿರುವ ಯಾವ ಮುಜುಗರ, ಸೂಕ್ಷ್ಮತೆಗಳು ಇಲ್ಲದ ಸಮಾಜವೊಂದರಲ್ಲಿ ಮನುಷ್ಯ ಸಂಬಂಧಗಳು ಎಷ್ಟು ಭೀಕರವಾಗಿರುತ್ತವೆ ಎಂಬ ಚಿತ್ರಣವಿದೆ.

‘ಸಣ್ಣಗೌಡಸಾನಿ’ ಕಾದಂಬರಿಯಲ್ಲಿ, ಮುಸ್ಲಿಮ್ ಸಮುದಾಯದ ಒಂದು ಪಂಗಡವಾದ ‘ಜಾತಿಗೇರ’ ಜನಾಂಗದ ಚಿತ್ರಣವಿದೆ. ಜಾತಿಗೇರರು ಹಾಡುಗಾರಿಕೆ, ಅಭಿನಯ ಬಲ್ಲ ಅಲೆಮಾರಿ ಕಲಾವಿದರು. ಊರೂರು ಅಲೆಯುತ್ತ ಹೆಂಗಸರು, ಗಂಡಸರು ಕೂಡಿಯೇ ಸಣ್ಣಾಟಗಳನ್ನು ಆಡುತ್ತಾರೆ. ಇದರಿಂದಲೇ ಉಪಜೀವನ. ಮೈಮಾರಿಕೊಳ್ಳುವುದು ಕಾಣುತ್ತದೆ. ಸುಂದರ ಮಹಿಳೆಯರನ್ನು ಹಣವಂತರು ತಮ್ಮಲ್ಲೇ ಇಟ್ಟುಕೊಳ್ಳುತ್ತಾರೆ. ಇಂಥ ಜನಾಂಗದ ಬದುಕಿನ ಪೂರ್ಣ ಚಿತ್ರಣ ಕಾದಂಬರಿಯಲ್ಲಿ ಬರುವುದಿಲ್ಲ. ಬದಲಾಗಿ ‘ಜಾತಿಗೇರ’ ಜನಾಂಗದ ಮಾಬಿ (ಮೆಹಬೂಬ ಜಾನ್) ಎನ್ನುವ ಸುಂದರ ಹೆಣ್ಣನ್ನು ಹಳ್ಳಿಯೊಂದರಲ್ಲಿ ದಕ್ಕಿಸಿಕೊಳ್ಳುವುದಕ್ಕೆ, ಪ್ಯುಡಲ್ ವ್ಯವಸ್ಥೆಯ ಒಳಗಡೆ ನಡೆಯುವ ಪೈಪೋಟಿಯಿಂದ ಅದ್ಭವವಾಗುವ ವೈಷಮ್ಯ, ಜಗಳಗಳ ನಡುವೆ ಅಂತಿಮವಾಗಿ ಮಾಬಿ ಎಂಬ ಮಹಿಳೆಯೇ ದುರಂತವನ್ನು ಅನುಭವಿಸಬೇಕಾಗುತ್ತದೆ. ಇಟ್ಟುಕೊಂಡವನ ಬಳಿ ನೆಲೆ ಪಡೆದು, ತನ್ನ ವ್ಯಕ್ತಿತ್ವದಿಂದ ‘ಸಣ್ಣಗೌಡಸಾನಿ’ ಎಂದು ಕರೆಸಿಕೊಂಡರೂ ಮಾಬಿ ದುರಂತಕ್ಕಿಡಾಗುವುದು ಈ ಜನಾಂಗದಲ್ಲಿ ಹೆಣ್ಣುಗಳ ಸ್ಥಿತಿ ಸಂಕೇತ ಎಂಬಂತೆ ಕಾಣುತ್ತಿದೆ.

‘ಕುರುಮಯ್ಯ ಮತ್ತು ಅಂಕುಶದೊಡ್ಡಿ’ ಕೊರವ ಜನಾಂಗದ ಕಥೆಯನ್ನು ಒಳಗೊಂಡಿದೆ. ಸಮಾಜದ ಅಂಚಿನಲ್ಲಿದ್ದು, ತಮ್ಮದೇ ಬದುಕಿನ ಕಟ್ಟುಪಾಡುಗಳ ಒಳಗೇ ಬಾಳುತ್ತ ಅನೇಕ ಸಂಕಷ್ಟಗಳಿಗೆ ಗುರಿಯಾಗುತ್ತಾರೆ. ಅಲ್ಲದೆ ನಾಗರಿಕ ಸಮಾಜದಿಂದ ದೂರವಿದ್ದರೂ ಕೊರವರಿಗೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಉದ್ಭವಿಸುತ್ತದೆ. ಸ್ಥಳೀಯ ಪ್ಯುಡಲ್ ಶಕ್ತಿಗಳ ರಾಜಕೀಯಕ್ಕೆ ಕೊರವರು ಬಲಿಯಾಗುವುದು, ಬೆಳೆಯುತ್ತಿರುವ ಆಧುನಿಕ ಸಮಾಜದಿಂದಲೂ ಅನೇಕ ಬಿಕ್ಕಟ್ಟುಗಳನ್ನು ಈ ಜನಾಂಗ ಅನುಭವಿಸುತ್ತಿದೆ ಎಂಬುದನ್ನು ಕಾದಂಬರಿ ಹೇಳುತ್ತದೆ.

‘ಗತಿ’ (ಬಿ.ಟಿ. ಲಲಿತಾನಾಯಕ) ಕಾದಂಬರಿಯಲ್ಲಿಯೂ ಲಂಬಾಣಿ ಜನಾಂಗದ ಚಿತ್ರಣವಿದೆ. ಕೊರವರು, ಲಂಬಾಣಿಗಳು ತನ್ನ ಸಮಾಜದ ‘ಅನಾಗರೀಕ’ ವ್ಯವಸ್ಥೆಯಿಂದಲೇ ತನ್ನ ಒಳಗೆ ‘ವಿಕಾರ’ಗಳನ್ನು ಕಟ್ಟಿಕೊಳ್ಳುತ್ತ ದುರಂತವನ್ನು ಅನುಭವಿಸುತ್ತಿರುವುದು, ಹೆಣ್ಣಿನ ಬದುಕು ದಾರುಣವಾಗಿರುವುದು ಈ ಕಾದಂಬರಿಗಳಿಂದ ಕಂಡುಬರುತ್ತದೆ. ಗೀತಾ ನಾಗಭೂಷಣ ಅವರು ಕೂಡ ಜೋಗಿಣಿಯರು ಬದುಕಿನಲ್ಲಿ ಅನುಭವಿಸುವ ಶೋಷಣೆಗಳನ್ನು ಕಟ್ಟಿಕೊಡುತ್ತಾರೆ. ಕೆಳವರ್ಗದ ಮಹಿಳೆಯರು ಪುರುಷರು ದಬ್ಬಾಳಿಕೆಗೆ ಒಳಗಾಗುವುದನ್ನು ತೋರಿಸುವ ಸರಮಾಲೆಯೇ ಅವರ ಕಾದಂಬರಿಗಳಲ್ಲಿದೆ. ಎಲ್ಲ ಕಾದಂಬರಿಗಳಲ್ಲಿ ಈ ಪ್ರಾಂತದ ದಾರುಣ ಬದುಕನ್ನು ಕಾಣುತ್ತೇವೆ.

ಈ ಪ್ರಾಂತದ ಕಥನಸಾಹಿತ್ಯದಲ್ಲಿ ಕಾಣುವ ಪ್ರಧಾನ ಅಂಶವೆಂದರೆ ಹೆಣ್ಣಿನ ಚಿತ್ರಣ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲವಿರುವ ವರ್ಗಗಳಲ್ಲಿ ಪುರುಷರಿಗಿಂತ ಮಹಿಳೆಯೇ ಹೆಚ್ಚು ದಬ್ಬಾಳಿಕೆಗೆ ಒಳಗಾಗುತ್ತಾಳೆ. ಇಡೀ ಕಥನ ಸಾಹಿತ್ಯದಲ್ಲಿ ಮಹಿಳೆಯ ದೌರ್ಬಲ್ಯ ಮತ್ತು ಶಕ್ತಿಯ ಪಪಾಕಾಷ್ಟೆಯ ಚಿತ್ರಣವಿದೆ. ಈ ಪ್ರಾಂತದ ಕೆಳವರ್ಗದ ಸಾಮಾಜಿಕ ಬದುಕನ್ನು ಗಮನಿಸಿದರೆ, ಬದುಕನ್ನು ಕಟ್ಟಿಕೊಂಡು ನಿಭಾಯಿಸುವ ಶಕ್ತಿ ಪಡೆದುಕೊಂಡಿರುವುದೇ ಮಹಿಳೆ. ಬದುಕನ್ನು ಕೆಡಿಸುವ ಪುರುಷನ ಮುಂದೆಯೇ ಪೌರುಷದಿಂದ ಜೀವಿಸುವ ಎದೆಗಾರಿಕೆ ತೋರಿಸುವ ಮಹಿಳೆಯರನ್ನು ಚಿತ್ರಿಸದ ಕಥನಕಾರರೇ ಈ ಪ್ರಾಂತದಲ್ಲಿ ವಿರಳ. ಇದರಿಂದಾಗಿ ‘…ಇವೆಲ್ಲವನ್ನು ಬರೆಯುತ್ತಿರುವವರು ಹಲವರಲ್ಲ, ಒಬ್ಬರೇ’[4] ಎನ್ನುವ ಎಚ್.ಎಸ್. ರಾಘವೇಂದ್ರರಾವ್ ಅವರ ಮಾತು ಸಹಜವಾಗಿದೆ. ಈ ಪ್ರಾಂತದ ಸಾಮಾಜಿಕ ವಾಸ್ತವವೇ ಕಥನ ಸಾಹಿತ್ಯದಲ್ಲಿದೆ.

ಈಚಿನ ವರ್ಷಗಳಲ್ಲಿ ಈ ಪ್ರಾಂತದ ಕಥೆಗಾರರು ಮುಂಚೂಣಿಯಲ್ಲಿರುವುದು ಸಹಜವಾಗಿದೆ. ಕಥನಕಾರರಿಗೆ ಈ ಪ್ರಾಂತ ಕನ್ಯೆನೆಲವಾಗಿಯೇ ಇದೆ. ‘ಗ್ರಾಮಾಯಣ’ ಎಂಬ ಕಾದಂಬರಿ ಉತ್ತರ ಕರ್ನಾಟಕದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಹುಟ್ಟಿತು. ಕೃಷ್ಣಾನದಿಯ ದಂಡೆಮೇಲೆ ಅದರ ರಚನೆಯಾಗಿದೆ. ಹೈದರಾಬಾದು ಕರ್ನಾಟಕದಲ್ಲಿ ಇನ್ನೊಂದು ‘ಗ್ರಾಮಾಯಣ’ ಹುಟ್ಟಬೇಕಾಯಿತು. ಸ್ವಾತಂತ್ರ್ಯಾನಂತರ ಕಾಲದಲ್ಲಿಯಾದರೂ ಕಾಣಿಸಬೇಕಾಗಿತ್ತು. ಇನ್ನೂ ಕಾಲ ಮೀರಿಲ್ಲ. ಈಚಿನ ಕಥನಕಾರರು ಒಲವು ತೋರಿಸಬೇಕು. ಸ್ವಾತಂತ್ರ್ಯಾನಂತರದಲ್ಲಿ ವಲಸೆ ಹೋಗುವವರ ಬವಣೆಗಳು, ಹೆಚ್ಚು ನೀರಾವರಿ ಯೋಜನೆಗಳು ಚಾಲ್ತಿಯಲ್ಲಿದ್ದು ಅಣೆಕಟ್ಟಿನಿಂದ ಮುಳುಗಡೆಗೆ ಒಳಗಾಗುವ ಜನಸಮುದಾಯಗಳ ಸಾಂಸ್ಕೃತಿಕವಾದ ಅವನತಿ, ನೀರಾವರಿ ಬರುತ್ತದೆಂದು ೩೦ ವರ್ಷಗಳಿಂದ ತಮ್ಮ ಹೊಲಗಳಿಗೆ ನೀರು ಬರುವುದನ್ನೇ ಕಾಯ್ದು ಕರಕಲಾಗುತ್ತಿರುವ ರೈತರು, ಜಾಗತೀಕರಣದಿಂದ ಉಂಟಾಗಿರುವ ರೈತರ ಸಾವುಗಳು, ಉದ್ದಿಮೆಗಳು ಮುಚ್ಚಿ ಬೀದಿಗೆ ಬೀಳುತ್ತಿರುವ ಕಾರ್ಮಿಕರ ಪರಿಸ್ಥಿತಿ, ಜಾತಿ, ಕೋಮು ಸಂಘರ್ಷಗಳು ಮುಂತಾದ ಸಂಕಷ್ಟಗಳಿಂದ ಇಡೀ ಪ್ರಾಂತ ಜ್ವಲಂತ ಸಮಸ್ಯಗಳಿಂದ ತುಂಬಿದೆ. ಆದರೂ ಜನಸಮುದಾಯಗಳಿಗೆ ಬದುಕುವ ಶಕ್ತಿಯಿದೆ, ಬದುಕುತ್ತಿವೆ. ಬದುಕುತ್ತಿರುವುದರಿಂದ ಪ್ರೀತಿ, ಮಾನವೀಯತೆಯನ್ನು ಉಡಿಯಲ್ಲಿಟ್ಟುಕೊಂಡು ಮುನ್ನಡೆದಿವೆ.[1] ಡಿ.ಆರ್. ನಾಗರಾಜ : ಸಾಹಿತ್ಯ ಕಥನ (೧೯೮೬) ಪುಟ-೩೨೬

[2] ಡಿ.ಆರ್. ನಾಗರಾಜ : ಸಾಹಿತ್ಯ ಕಥನ (೧೯೮೬) ಪುಟ-೩೨೬

[3] ಚನ್ನಬಸವಪ್ಪ ಬೆಟ್ಟದೂರು : ಸಂಗಡಿಗರ ಸಾಂಗತ್ಯದಲ್ಲಿ ಶಾಂತರಸರು (ರಾಯಚೂರು ವಾಣಿ – ಸಾ.ಸ. ೧.೧೨.೦೩) ಪುಟ – ೧

[4] ಎಚ್.ಎಸ್. ರಾಘವೇಂದ್ರರಾವ್ : ಮುನ್ನುಡಿ (ಬಿಸಿಲ ಹನಿಗಳು ೧೯೯೫) ಪುಟ – XXII