ಉಳೇನೂರು ಏತ ನೀರಾವರಿ ಯೋಜನೆ ಕಥೆ : ಸಿಂಧನುರು ತಾಲೂಕಿನ ಉಳೇನೂರು ಏತನೀರಾವರಿ ಯೋಜನೆಯನ್ನು ೧೯೭೫ರಲ್ಲಿ ಸಂಸದ ಎಚ್.ಜಿ. ರಾಮುಲು ಅವರ ಆಸಕ್ತಿ ಮೇರೆಗೆ ಸಿದ್ಧವಾಯಿತೆಂದು ತಿಳಿದು ಬರುತ್ತದೆ. ಸುಮಾರು ೭೨೫ ಎಕರೆಗೆ ನೀರೊದಗಿಸುವ ಗುರಿ ಹೊಂದಿದ ಈ ಯೋಜನೆಗೆ ಆರಂಭದಲ್ಲಿ ಕೇವಲ ೬೦ ಲಕ್ಷ ರೂ. ಅಂದಾಜು ಮಾಡಿದ್ದರಿಂದ ಕೆಲಸಕ್ಕೆ ಚಾಲನೆ ದೊರೆಯಿತು. ಒಂದಿಷ್ಟು ಕೆಲಸವು ನಡೆಯಿತು. ಏನೇನೋ ನೆಪಗಳಿಂದ ೨೫ ವರ್ಷಗಳಾದರೂ ಈ ಯೋಜನೆ ಪೂರ್ತಿಯಾಗಿಲ್ಲ. ೧೯೯೯ರಲ್ಲಿ ಪುನಃ ಈ ಯೋಜನೆಗೆ ಜೀವ ನೀಡುವ ಪ್ರಯತ್ನ ನಡೆಯಿತು. ಅಂದಾಜು ವೆಚ್ಚ ೨.೫೨ ಕೋಟಿ ರೂ. ಮಾಡಲಾಯಿತು ಅಷ್ಟೆ. ಕೆಲಸ ಮುಂದುವರಿದಿಲ್ಲ. ಈ ಭಾಗದ ಶಾಸಕರಿಗೆ ಕಾಳಜಿಬೇಕು. ಇಲ್ಲ ರೈತರು ಹೋರಾಡಿ ಮಾಡಿಸಿಕೊಳ್ಳಬೇಕು. ಎರಡೂ ಇಲ್ಲದ ಕಾರಣ ಈ ಯೋಜನೆ ಅರ್ಧಕ್ಕೆ ನಿಂತಿದೆ. ಒಂದು ಹಳ್ಳಿಯ ಜನರಾದರೂ ಜಾಗೃತವಾಗಿ ಈ ಯೋಜನೆಯನ್ನು ಪೂರ್ತಿ ಮಾಡಿಸಿಕೊಂಡಿದ್ದರೆ ೭೨೫ ಎಕರೆಗೆ ನೀರು ಒದಗುತ್ತಿತ್ತು. ರಾಯಚೂರು ಜಿಲ್ಲೆಯ ನೀರಾವರಿ ಯೋಜನೆಗಳ ವಾಸ್ತವ ಪರಿಸ್ಥಿತಿ ಹೇಗಿದೆಯೋ ಅದೇ ರೀತಿ ಗುಲಬರ್ಗಾ, ಬೀದರ ಜಿಲ್ಲೆಯ ನೀರಾವರಿ ಯೋಜನೆಗಳ ಸ್ಥಿತಿಯಿದೆ. ಭೀಮಾನದಿಗೆ ಒದಗಿದ ದುರಂತವನ್ನು ಈಗಾಗಲೇ ವಿವರಿಸಲಾಗಿದೆ. ಅಮರಜಾ ನೀರಾವರಿ ಯೋಜನೆ ೧೯೭೨ರಲ್ಲಿ ಆರಂಭವಾಯಿತು. ಗುಲಬರ್ಗಾ ಜಿಲ್ಲೆಯ ಅಳಂದ ತಾಲೂಕಿನ ಸಂಗೊಳ್ಳಿ ಗ್ರಾಮದ ಹತ್ತಿರ ಅಮರ್ಜಾ ನದಿಗೆ ಅಣೆಕಟ್ಟು ಕಟ್ಟಲಾಗುತ್ತಿದೆ. ಅಫಜಲಪುರ ಹಾಗೂ ಅಳಂದ ತಾಲೂಕಿನ ಒಟ್ಟು ೮,೯೯೩ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ಗುರಿ ಹೊಂದಿದೆ. ೫.೭೦ ಕೋಟಿ ರೂ. ಆರಂಭದ ಅಂದಾಜು ವೆಚ್ಚದಲ್ಲಿ ಕೆಲಸಕ್ಕೆ ಚಾಲನೆ ಸಿಕ್ಕಿತು. ಈಗ ಪರಿಷ್ಕೃತ ಅಂದಾಜು ವೆಚ್ಚವಾಗಿ ೧೦೭.೭೧ ಕೋಟಿಗೆ ಏರಿ ನಿಂತಿದೆ. ರೈತರಿಗೆ ನೀರನ್ನು ಇನ್ನೂ ಒದಗಿಸಲಾಗಿಲ್ಲ.

ಇದೇ ಜಿಲ್ಲೆಯ ಇನ್ನೊಂದು ಪ್ರಮುಖ ಯೋಜನೆಯೆಂದರೆ ೧೯೭೨ರಲ್ಲಿ ಆರಂಭವಾದ ಬೆಣ್ಣೆತೊರೆ ನೀರಾವರಿ ಯೋಜನೆ. ಬೆಣ್ಣೆತೊರೆ ನದಿ ಮಹಾರಾಷ್ಟ್ರದಲ್ಲಿ ಹುಟ್ಟಿ, ಹರಿದು ಬಂದು ಅಳಂದ ತಾಲೂಕಿನ ಮೂಲಕ ಗುಲಬರ್ಗಾ ಜಿಲ್ಲೆಯನ್ನು ಸೇರಿ, ಮುಂದೆ ಸೇಡಂ ತಾಲೂಕಿನ ಸಂಗಾವಿ ಗ್ರಾಮದ ಬಳಿ ಕಾಗಿಣಾ ನದಿಯನ್ನು ಕೂಡುತ್ತದೆ. ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ಮತ್ತು ಸೇಡಂ ತಾಲೂಕುಗಳ ಒಟ್ಟು ೨೦,೨೪೩ ಹೆಕ್ಟೇರ್ ಭೂಮಿಗೆ ನೀರು ಒದಗಿಸುವ ಉದ್ದೇಶದಿಂದ ಖರ್ದಾಹಳ್ಳಿ ಹತ್ತಿರ ಅಣೆಕಟ್ಟು ನಿರ್ಮಿಸಲಾಗುತ್ತಿದೆ. ೧೯೭೨ರಲ್ಲಿ ಈ ಯೋಜನೆಗೆ ಅಂದಾಜು ವೆಚ್ಚವೆಂದು ಕೇವಲ ೧೬ ಕೋಟಿ ರೂ. ಎಂದು ನಿರ್ಧರಿಸಲಾಗಿತ್ತು. ೧೯೯೭ರ ತನಕ ೭೪.೦೩ ಕೋಟಿ ರೂ. ಖರ್ಚುಮಾಡಲಾಗಿದೆ. ಈ ಯೋಜನೆ ಪೂರ್ತಿಯಾಗಿಲ್ಲ.

ಬೆಣ್ಣೆತೊರೆಯ ಉಪನದಿ ಗಂಡೋರಿನಾಲಾ ಯೋಜನೆಯಿಂದ ಚಿತ್ತಾಪುರ ಮತ್ತು ಗುಲಬರ್ಗಾ ತಾಲೂಕುಗಳ ಒಟ್ಟು ೮೦೯೪ ಹೆಕ್ಟೇರ್ ಭೂಮಿಗೆ ನೀರು ಒದಗಿಸುವ ಗುರಿ ಹೊಂದಲಾಗಿದೆ. ೧೯೯೩ರಲ್ಲಿ ಯೋಜನೆ ಆರಂಭವಾದಾಗ, ಅದರ ಆರಂಭದ ಅಂದಾಜು ವೆಚ್ಚ ಕೇವಲ ೬೬ ಕೋಟಿ ರೂ. ಇಲ್ಲಿ ತನಕ ೧೩೨.೯೫ ಕೋಟಿ ರೂ. ತಗುಲಿದೆ. ಇದು ಕೃಷ್ಣಾ ಕೊಳ್ಳದ ಅಡಿಯಲ್ಲಿ ಬರುವುದರಿಂದ ೨೦೦೦ದ ಒಳಗೆ ಮುಗಿಯಬೇಕಾಗಿತ್ತು. ಎಲ್ಲಾ ಯೋಜನೆಗಳಂತೆ ಇದೂ ಸಂಪೂರ್ಣ ಮುಗಿದಿಲ್ಲ. ಆದರೂ ೨೫೦೦ ಎಕರೆ ಭೂಮಿಗೆ ನೀರು ಒದಗಿಸಲು ಸಜ್ಜಾಗಿದೆ ಎಂದು ವರದಿಯಾಗಿದೆ.

ಬೀದರ ಜಿಲ್ಲೆಯ ನೀರಾವರಿ ಯೋಜನೆಗಳಲ್ಲಿ ಕಾರಂಜಾ ಯೋಜನೆ ಪ್ರಮುಖವಾಗಿದೆ. ಗೋದಾವರಿ ಕೊಳ್ಳದ ಮಾಂಜರಾ ನದಿಯ ಉಪನದಿ ಕಾರಾಂಜಾ ನದಿಗೆ ಭಾಲ್ಕಿ ತಾಲೂಕಿನ ಬಾಲ್ಯಹಳ್ಳಿ ಹತ್ತಿರ ಅಣೆಕಟ್ಟು ನಿರ್ಮಿಸಲಾಗಿದೆ. ಬೀದರ ಜಿಲ್ಲೆಯ ಕೆಲವು ತಾಲೂಕುಗಳಿಗೆ ನೀರೊದಗಿಸುವ ಗುರಿಯಿಟ್ಟುಕೊಂಡ ಈ ಯೋಜನೆಯು ಬರಗಾಲದ ಪರಿಹಾರ ಕಾಮಗಾರಿಯಾಗಿ ೧೯೭೨ರಲ್ಲಿ ಅಣೆಕಟ್ಟಿನ ಕೆಲಸ ಆರಂಭವಾಯಿತು. ೮೮.೦೦೦ ಸಾವಿರ ಎಕರೆಗೆ ನೀರುಣಿಸಬಹುದಾದ ಈ ಯೋಜನೆಯ ಆರಂಭದ ವೆಚ್ಚ ೯.೯೦ ಕೋಟಿ ರೂ. ಇತ್ತು. ಈಗ ಇದರ ಅಂದಾಜು ಪರಿಷ್ಕೃತ ವೆಚ್ಚ ೯೮.೦೦ ಕೋಟಿ ರೂ.ಗೆ ಬಂದು ನಿಂತಿದೆ. ೩೦ ವರ್ಷಗಳಿಂದ ಈ ಯೋಜನೆ ನಡೆದಿದ್ದರೂ ಸಧ್ಯ ಒಂದು ಅಂದಾಜಿನ ಪ್ರಕಾರ ೩೦೦ ಎಕರೆ ಭೂಮಿಗೆ ಮಾತ್ರ ನೀರು ಒದಗಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಸ್ತಾಪುರ ಹಳ್ಳಿಯ ಹತ್ತಿರ ಚುಳಕಿನಾಲಾ ಯೋಜನೆ ನಿರ್ಮಾಣ ಹಂತದಲ್ಲಿದೆ. ಚುಳಕಿನಾಲಾ ಯೋಜನೆಯಿಂದ ೧೦,೦೦೦ ಎಕರೆಗೆ ನೀರು ಒದಗಲಿವೆ. ೧೯೭೬ರಲ್ಲಿ ೩.೮೦ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆರಂಭವಾಯಿತು. ಬಸವಕಲ್ಯಾಣ, ಭಾಲ್ಕಿ ತಾಲೂಕುಗಳಲ್ಲಿ ತಕ್ಕಮಟ್ಟಿಗೆ ನೀರನ್ನು ಈಗ ಒದಗಿಸಲಾಗುತ್ತಿದೆ. ಆದರೂ ಈ ನೀರಾವರಿ ಯೋಜನೆ ಸಂಪೂರ್ಣ ಮುಗಿದಿಲ್ಲ.

ಇದೇ ತಾಲೂಕಿನ ಮಠಾಳ ಹಳ್ಳಿಯಲ್ಲಿ ಹುಟ್ಟುವ ಮುಲ್ಲಾಮಾರಿ ನದಿಗೆ ಖೇರಡಾ ಬಳಿ ಅಣೆಕಟ್ಟು ಕಟ್ಟಲಾಗಿದೆ. ಮುಲ್ಲಾಮಾರಿ ಮೇಲ್ದಂಡೆ ಯೋಜನೆ ಎಂದು ಕರೆಯಲಾಗುವ ಈ ಯೋಜನೆಯಿಂದ ಕಲಬುರ್ಗಿ ಜಿಲ್ಲೆಯ ೧೧, ಬೀದರಿನ ೯ ಹಳ್ಳಿಗಳ ಒಟ್ಟು ೮೧೦೦ ಎಕರೆಗೆ ನೀರು ಒದಗಿಸುವ ಗುರಿಯನ್ನು ಹೊಂದಲಾಗಿದೆ. ೧೯೭೬ರಲ್ಲಿ ಈ ಯೋಜನೆಗೆ ೩.೨೮ ಕೋಟಿ ರೂ. ಅಂದಾಜು ಎಂದು ನಿಗದಿಮಾಡಿತ್ತು. ಈಗಿನ ಪರಿಷ್ಕೃತ ವೆಚ್ಚ ಎಷ್ಟಾಗಿದೆಯೋ ತಿಳಿದಿಲ್ಲ. ೩೦ ವರ್ಷಗಳಿಂದ ಕೆಲಸ ಮುಂದುವರಿದಿದೆ.

ಇನ್ನೊಂದು ಮುಲ್ಲಾಮಾರಿ ಕೆಳದಂಡೆ ನೀರಾವರಿ ಯೋಜನೆ ೧೯೭೪ರಲ್ಲಿ, ೮.೩೬ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಚಿಂಚೋಳಿ ತಾಲೂಕಿನ ನಾಗರಹಾಳ ಗ್ರಾಮದ ಬಳಿ ಮುಲ್ಲಾಮಾರಿ ನದಿಗೆ ಅಣೆಕಟ್ಟು ನಿರ್ಮಿಸಲು ಆರಂಭವಾಯಿತು. ಚಿಂಚೋಳಿ ತಾಲೂಕಿನ ೮.೧೦೦ ಹೆಕ್ಟೇರ್ ಭೂಮಿಗೆ ನೀರುಣಿಸುವ ಈ ಯೋಜನೆ ೧೯೯೭ರ ವರೆಗೆ ೧೦೦ ಕೋಟಿ ರೂ. ವೆಚ್ಚವಾಗಿದೆ. ೧೯೯೯ರ ವೇಳೆಗೆ ಮುಗಿಸುವ ಗುರಿ ಹೊಂದಿತ್ತು. ಸಧ್ಯ ಅದು ಸಾಧ್ಯವಾಗಿಲ್ಲ. ಕೃಷ್ಣಾಕೊಳ್ಳದ ವ್ಯಾಪ್ತಿಯಲ್ಲಿ ಬರುವ ಭೀಮಾ ಏತನೀರಾವರಿ ಯೋಜನೆಯಿಂದ ಅಫಜಲಪುರ ತಾಲೂಕಿನ ೨೪.೨೯೨ ಹೆಕ್ಟೇರ್ ಭುಮಿಗೆ ನೀರೊದಗಲಿವೆ. ೨೦೦೦ದ ಒಳಗೆ ಮುಗಿಯಬೇಕಾಗಿತ್ತು. ಈ ಯೋಜನೆಯ ಅಂದಾಜು ವೆಚ್ಚ ೧೦,೭೭೦ ಲಕ್ಷ ರೂ. ಇದುವರೆಗೆ ೧೫,೦೮೦ ಲಕ್ಷ ರೂ. ವೆಚ್ಚವಾಗಿದೆ. ಯೋಜನೆ ಪೂರ್ತಿಯಾಗಿಲ್ಲ. ಚಿಂಚೋಳಿ ರಾಜಕೀಯ ಪ್ರಮುಖ ಮುಖಂಡರಾದ ವೀರೇಂದ್ರ ಪಾಟೀಲರ ತಾಲೂಕಾಗಿದೆ.

ಇಷ್ಟೆಲ್ಲ ನೀರಾವರಿ ಯೋಜನೆಗಳು ಈ ಪ್ರಾಂತದಲ್ಲಿ ಆರಂಭಗೊಂಡು ೩೦ ವರ್ಷಗಳಾಗುತ್ತ ಬಂದಿವೆ. ಯಾವ ಯೋಜನೆಗಳೂ ನಿಗದಿತ ವರ್ಷಗಳಲ್ಲಿ ಮುಗಿದು ರೈತರಿಗೆ ನಾಡಿಗೆ ಸಂತಸ ತಂದಿಲ್ಲ. ಹಿಂದುಳಿದ ಈ ಪ್ರಾಂತದ ಅಭಿವೃದ್ಧಿಗೆ ಕಾರಣವಾಗುವ ಈ ನೀರಾವರಿ ಯೋಜನೆಗಳನ್ನು ಪೂರ್ತಿಗೊಳಿಸುವ ರಾಜಕೀಯ ಇಚ್ಛಾಸಕ್ತಿ ಯಾವ ಸರಕಾರಕ್ಕೂ ಮೂಡಲಿಲ್ಲ. ಈ ಪ್ರಾಂತದಲ್ಲಿ ‘ಭೂ ಹಂಚಿಕೆ’ ವ್ಯವಸ್ಥಿತವಾಗಿ ಆಗಲಿಲ್ಲ. ಹೀಗಾಗಿ ೧೦೦ ರಿಂದ ೫೦೦ ಎಕರೆ ಭೂಮಿ ಇರುವವರೇ ಈ ಪ್ರಾಂತದಲ್ಲಿ ಬಡವರು. (ಎಪ್ಪತ್ತು ಕೂರಿಗೆ ಭೂಮಿ ಇದ್ದರೂ ಒಪ್ಪತಿಗಿಲ್ಲ – ಎಂಬ ಮಾತು ಈ ಪ್ರಾಂತದಲ್ಲಿ ಜನಜನಿತವಾಗಿದೆ.) ೫೦೦ ರಿಂದ ೧೦೦೦ ಎಕರೆ ಇರುವವರು ಅದಕ್ಕಿಂತ ಮೇಲ್ಪಟ್ಟು ಇರುವವರು ರಾಜಕೀಯದಲ್ಲಿ ಸೇರಿಕೊಂಡು ಅಧಿಕಾರ ಹಿಡಿದು ತಣ್ಣಗಿದ್ದಾರೆ. ಹೀಗಾಗಿ ಭೂಮಿ ಕೆಲವರ ಸೊತ್ತಾಗಿದೆ. ಇಲ್ಲದವರ ಸಂಖ್ಯೆ ದೊಡ್ಡದಿದೆ. ಇದರಿಂದಾಗಿ ನೀರಾವರಿ ಯೋಜನೆಗಳು ಬಹುಬೇಗ ಮುಗಿಸುವುದಕ್ಕೆ ಸರಕಾರದ ವಿರುದ್ಧ ಹೋರಾಟ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ಹೊಟ್ಟೆಪಾಡಿಗಾಗಿ ದುಡಿಯುವ ಈ ಪ್ರಾಂತದ ಜನಸಮುದಾಯಳಿಗೆ ಹೋರಾಟದ ಕನಿಷ್ಠ ಅರಿವು ಇಲ್ಲ. ಗುಳೆ ಹೋಗುವುದು, ವಲಸೆ ಹೋಗುವುದೇ ಈ ಜನರ ಪಾಡಾಗಿರುವಾಗ ಸಂಘಟಿತರಾಗಿ ಹೋರಾಡುವುದು ಕನಸಿನ ಮಾತಾಗಿದೆ. ಮೇಲಾಗಿ ಪ್ರಮುಖ ರೈತ ಮುಖಂಡರ ಕೊರತೆಯಿದೆ. ಇರುವ ರೈತ ಸಂಘಟನೆಗಳು ಒಗ್ಗಟ್ಟಾಗಿ ಹೋರಾಡುವ ಗುಣ ಬೆಳೆಸಿಕೊಳ್ಳಲಿಲ್ಲ. ಹೀಗಾಗಿ ಪ್ರತಿ ಸರಕಾರಗಳಲ್ಲಿ. ಈ ಪ್ರಾಂತದ ಶಾಸಕರಲ್ಲಿ ಹತ್ತಾರು ಜನರು ಮಂತ್ರಿಗಳಾಗಿದ್ದರೂ ಪ್ರಯೋಜನವಾಗಿಲ್ಲ. ಪ್ರಸ್ತುತ ಗುಲಬರ್ಗಾ ಜಿಲ್ಲೆಯ ೧೩ ಶಾಸಕರಲ್ಲಿ ೬ ಶಾಸಕರು ಮಂತ್ರಿಗಳಾಗಿದ್ದರೂ ಈ ಪ್ರಾಂತ ಹಿಂದುಳಿದಿದೆ. ಅದರಲ್ಲೂ ಆರ್ಥಿಕವಾಗಿ, ಶೈಕ್ಷಣಿಕವಾಗಿ ಈ ಪ್ರಾಂತ ತುಂಬ ದುರ್ಬಲ ಸ್ಥಿತಿಯಲ್ಲಿದೆ.

ಕಾರ್ಖಾನೆಗಳ ಅವಸಾನ : ನಿರ್ಗತಿಕರಾಗುತ್ತಿರುವ ಕಾರ್ಮಿಕರು

ಗುಲಬರ್ಗಾ ಜಿಲ್ಲೆಯಲ್ಲಿ ಹತ್ತಿ ಬೆಳೆಗೆ ಮೊದಲ ಸ್ಥಾನವಿದ್ದು, ತೊಗರಿಗೆ ಎರಡನೆ ಸ್ಥಾನವಿತ್ತು. ಸ್ವಾತಂತ್ರ್ಯಾಪೂರ್ವದಲ್ಲಿ ಈ ಭಾಗದಲ್ಲಿ ಬೆಳೆಯುತ್ತಿದ್ದ ಹತ್ತಿಯನ್ನು ಹೈದರಾಬಾದು, ಅಹಮದಾಬಾದು, ಮುಂಬಯಿ, ಮದ್ರಾಸ್ ಮುಂತಾದ ನಗರಗಳ ಮಿಲ್ಲಿಗೆ ಸಾಗಿಸಲಾಗುತ್ತಿತ್ತು. ಇದನ್ನು ತಪ್ಪಿಸಲು ಯೋಚಿಸಿದ ನಿಜಾಮ ಸರಕಾರ ೧೮೮೪ರಲ್ಲಿ ಎಂ.ಎಸ್.ಕೆ.ಮಿಲ್ (ಮೆಹಬೂಬ್ ಶಾಹಿ, ಕಲಬುರ್ಗಿ) ಆರಂಭವಾಯಿತು. ಗುಲಬರ್ಗಾದ ಕಾರ್ಮಿಕರಿಂದ ಈ ಮಿಲ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿತು. ಈ ಮಿಲ್ಲಿನಿಂದ ಸಿದ್ಧವಾದ ಬಟ್ಟೆ ರಷ್ಯಾ ದೇಶಕ್ಕೂ ರಫ್ತಾಗುವ ಹಂತ ತಲುಪಿತ್ತು. ನಾಲ್ಕೈದು ಸಾವಿರ ಕಾರ್ಮಿಕರು ಈ ಮಿಲ್ಲಿನಿಂದ ಜೀವನ ನಡೆಸುತ್ತಿದ್ದರು. ೧೯೬೮ರಿಂದ ಈ ಮಿಲ್ ಆಧುನಿಕವಾಗಿ ಪುನರ್ ಅಭಿವೃದ್ಧಿ ಹೊಂದಲಾರದೆ ಹಿನ್ನಡೆ ಕಂಡಿತು. ಅಲ್ಲಿಂದ ಅನೇಕ ಅಡ್ಡಿಗಳಿಂದ ಕೊನೆಗೆ ಈ ಮಿಲ್ಲನ್ನು ಮುಚ್ಚಲಾಯಿತು. ಸಾವಿರಾರು ಜನ ಕಾರ್ಮಿಕರು ಹೊರಬಂದಿದ್ದಾರೆ.

ಗುಲಬರ್ಗಾ ಜಿಲ್ಲೆ ಅಪಾರ ನೈಸರ್ಗಿಕ ಸಂಪತ್ತನ್ನು ಹೊಂದಿದೆ. ಸುಣ್ಣದ ಕಲ್ಲಿನಂತಹ ಸಿಮೆಂಟಿಗೆ ಬೇಕಾಗುವ ಮೂಲ ಕಚ್ಚಾವಸ್ತು ಈ ಜಿಲ್ಲೆಯ ಶಹಬಾದಿನಲ್ಲಿ ಸಿಗುವುದರಿಂದ ೧೯೨೪ರಲ್ಲಿ ಎಸಿಸಿ ಸಿಮೆಂಟ್ ಕಾರ್ಖಾನೆ ಆರಂಭವಾಯಿತು. ದಕ್ಷಿಣ ಭಾರತದಲ್ಲೇ ಮೊದಲ ಸಿಮೆಂಟ್ ಕಂಪೆನಿ ಸ್ಥಾಪಿಸಿದ್ದು ಎಸಿಸಿಯೇ. ಐದಾರು ಸಾವಿರ ಜನರಿಗೆ ಉದ್ಯೋಗವನ್ನು ಈ ಕಂಪೆನಿ ಒದಗಿಸಿತ್ತು. ೧೯೯೦ರಿಂದ ಆಡಳಿತ ವರ್ಗ ಬದಲಾಯಿತು. ಎಚ್.ಎಂ.ಪಿ. ಎಂಬ ಹೆಸರಿನಿಂದ ಕಾರ್ಖಾನೆ ಕಾರ್ಯನಿರ್ವಹಿಸತೊಡಗಿದರೂ ಮೊದಲಿನಂತೆ ಉಜ್ವಲವಾಗಿ ನಡೆಯಲಿಲ್ಲ. ತಾಂತ್ರಿಕ ತೊಂದರೆಗಳನ್ನು ಮುಂದೊಡ್ಡಿ ಸ್ಥಗಿತಗೊಳಿಸಲಾಗಿದೆ. ಉದ್ಯೋಗಿಗಳು ಹೊರಬರಬೇಕಾಯಿತು. ಐದಾರು ಸಾವಿರ ಕಾರ್ಮಿಕರೆಂದರೆ ಅಷ್ಟು ಕುಟುಂಬಗಳ ಎಷ್ಟೋ ಸದಸ್ಯರು ನಿರ್ಗತಿಕರಾಗುವುದನ್ನು ಯಾರೂ ಊಹಿಸಬಹುದು. ಈಗ ಕಾರ್ಖಾನೆ ಮುಚ್ಚಲಾಗಿದೆ.

ಕಲ್ಲು ಪಾಲಿಶ್ ಮಾಡುವ ನೂರಾರು ಘಟಕಗಳು ಗುಲಬರ್ಗಾ ಜಿಲ್ಲೆಯಲ್ಲಿವೆ. ‘ಶಹಬಾದು ಹೊಳಪು ಕಲ್ಲು’ ಎಂದೇ ಪ್ರಸಿದ್ಧಿ ಪಡೆದ ಈ ಕಲ್ಲುಗಳು ಚಿಂಚೋಳಿ, ಸೇಡಂ, ಚಿತ್ತಾಪುರ, ಶಹಬಾದು ತಾಲೂಕುಗಳಲ್ಲಿ ಸುಮಾರು ೧೭೭ ಕೋಟಿ ಘನ ಮೀಟರುಗಳಷ್ಟು ಇದ್ದು, ಇಲ್ಲಿಯವರೆಗೆ ಕೇವಲ ೫೬.೭೧ ಲಕ್ಷ ಚದರ ಅಡಿಯಷ್ಟು ಕಲ್ಲುಗಳನ್ನು ಗಣಿಗಳಿಂದ ತೆಗೆಯಲಾಗಿದೆ. ಈ ಜಿಲ್ಲೆಯಲ್ಲಿ ಸುಮಾರು ೨.೫೦೦ ಕಲ್ಲು ಗಣಿಗಳಿದ್ದು, ಈ ಕಲ್ಲುಗಳನ್ನು ಪಾಲಿಶ್ ಮಾಡುವ ನೂರಕ್ಕೂ ಹೆಚ್ಚು ಘಟಕಗಳಿವೆ. ಈ ಉದ್ಯಮದಲ್ಲಿ ಸಾವಿರಾರು ಕುಟುಂಬಗಳು ಉದ್ಯೋಗಿಗಳಾಗಿದ್ದಾರೆ. ಶಹಬಾದು ಹೊಳಪುಕಲ್ಲುಗಳನ್ನು ಮನೆಗಳಿಗೆ, ನೀರಾವರಿ ಕಾಲುವೆಗಳಿಗೆ ಹೆಚ್ಚು ಬಳಸಲಾಗುತ್ತಿದೆ. ಆಂಧ್ರ, ಮಹಾರಾಷ್ಟ್ರ, ಗೋವಾ, ದೂರದ ಮುಂಬಯಿ ನಗರಗಳಿಗೆ ರಫ್ತಾಗುತ್ತಿದೆ. ಆದರೆ ಈಗ ಈ ಉದ್ಯಮ ಗಂಡಾಂತರದಲ್ಲಿದೆ. ಇದಕ್ಕೆ ಉದಾರೀಕರಣ ನೀತಿಯೇ ಕಾರಣ. ರಾಜಸ್ಥಾನದಿಂದ ಮಾರ್ಬಲ್ ಹಾಸು ಕಲ್ಲುಗಳು ಈ ಪ್ರಾಂತಕ್ಕೆ ಬರುತ್ತಿವೆ. ಕಡಿಮೆ ಬೆಲೆಯಲ್ಲಿಯೂ ದೊರೆಯುತ್ತಿವೆ. ಇದರಿಂದ ಶಹಬಾದು ಹೊಳಪು ಕಲ್ಲುಗಳಿಗೆ ಹೊಡೆತ ಬಿದ್ದಿವೆ. ಹೀಗಾಗಿ ಗಣಿಗಳು, ಪಾಲಿಶ್ ಮಾಡುವ ಘಟಕಗಳು ಮುಚ್ಚುವ ಹಂತದಲ್ಲಿವೆ. ಕಾರ್ಮಿಕರು ಭೀತಿಯಿಂದ ಆತಂಕದಲ್ಲಿದ್ದಾರೆ. ಈ ಕಲ್ಲುಗಳನ್ನು ಸಾಗಿಸಲು ಸಾವಿರಾರು ಲಾರಿಗಳು ದುಡಿಯುತ್ತಿದ್ದವು. ಈಗ ಈ ಸಂಖ್ಯೆ ನೂರಕ್ಕೆ ಇಳಿದಿದೆ ಎಂದು ತಿಳಿದು ಬರುತ್ತಿದೆ. ಉದಾರೀಕರಣದಿಂದ ಈ ಉದ್ದಿಮೆಯ ಮೇಲೆ ತೂಗುಕತ್ತಿ ನೇತಾಡುತಿದೆ.

ರಾಯಚೂರು ಜಿಲ್ಲೆಯ ಹಟ್ಟಿಯ ಚಿನ್ನದ ಗಣಿ ಭಾರತದಲ್ಲಿಯೇ ಹೆಸರುವಾಸಿಯಾದದ್ದು. ೧೯೪೬ರಲ್ಲಿ ಕ್ರಿಯಾಶೀಲವಾಗಿ ಈ ಗಣಿ ಆರಂಭವಾಯಿತು. ಹಾಗೆ ನೋಡಿದರೆ ಪ್ರಾಚೀನ ಕಾಲದಲ್ಲಿ ಈ ಗಣಿಯಿಂದ ಬಂಗಾರ ತಯಾರಿಸಿದ್ದ ಬಗ್ಗೆ ಉತ್ಪನನದಿಂದ ತಿಳಿದುಬಂದಿದೆ. ೧೯೯೧ರಲ್ಲಿ ೧೦೫೦ ಕೆ.ಜಿ. ಬಂಗಾರವನ್ನು ಉತ್ಪಾದಿಸಿ ದಾಖಲೆಯನ್ನು ಮಾಡಿದ ಹಟ್ಟಿಯ ಚಿನ್ನದ ಗಣಿಯೂ ಈಗ ಮೊದಲಿನಷ್ಟು ಕ್ರಿಯಾಶೀಲವಾಗಿಲ್ಲ. ಈ ಕಂಪನಿಯ ಕಾರ್ಮಿಕರ ನೆತ್ತಿಯ ಮೇಲೆ ಕತ್ತಿ ತೂಗುತ್ತಲಿದೆ. ಬೃಹತ್ ಉದ್ದಿಮೆಗಳು ಈಗ ಈ ಸ್ಥಿತಿ ತಲುಪುವುದಕ್ಕೆ ನಮ್ಮ ಸರಕಾರಗಳೂ, ಜಾಗತೀಕರಣವು ಕಾರಣವಾಗುತ್ತಿವೆ.

ಅಭಿವೃದ್ಧಿಯಲ್ಲಿ ಅಸಮತೋಲನ

‘ಅಭಿವೃದ್ಧಿ’ ಎಂಬ ಪರಿಕಲ್ಪನೆಯೇ ವಿಚಿತ್ರವಾಗಿ ಪರಿಣಮಿಸುತ್ತಿದೆ. ಯಾವುದನ್ನು ಪ್ರಭುತ್ವ ‘ಅಭಿವೃದ್ಧಿ’ ಎಂದು ಗ್ರಹಿಸಿ ಒಂದು ದೇಶದ, ನಾಡಿನ, ಪ್ರಾಂತಗಳಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳು ಬಡತನವನ್ನು ಕಮ್ಮಿ ಮಾಡಿವೆಯೇ? ಭಾರತದಂತಹ ಮೂರನೇ ಜಗತ್ತಿನ ದೇಶದಲ್ಲಿ ‘ಅಭಿವೃದ್ಧಿ’ ಎಂಬುದು ಜನರ ಜೀವನ ಮಟ್ಟವನ್ನು ಸುಧಾರಿಸಿದೆಯೇ? ಕಾರ್ಖಾನೆಗಳು ಸ್ಥಾಪಿತವಾದ ಊರುಗಳಲ್ಲಿ ತಲಾ ಆದಾಯ ಹೆಚ್ಚಾಗಿದ್ದುದು ಕಂಡು ಬಂದರೂ, ಜೀವನ ಮಟ್ಟದಲ್ಲಿ ಸುಧಾರಣೆಗೆ ಆದಾಯ ಸಹಾಯಕವಾಗಿಲ್ಲದಿರುವುದು ಅಧ್ಯಯನಗಳಿಂದ ತಿಳಿದುಬರುತ್ತಿದೆ. ಹೀಗಿರುವಾಗಲೂ ಅಭಿವೃದ್ಧಿಯನ್ನು ನಿರಾಕರಿಸುವಂತಿಲ್ಲ. ಆದರೆ ಅಭಿವೃದ್ಧಿಯ ಪರಿಕಲ್ಪನೆ ಬೇರೆಯಾಗಬೇಕಾಗಿದೆ. ದುಡಿವ ವರ್ಗಕ್ಕೆ, ಮಧ್ಯಮ ವರ್ಗಕ್ಕೆ ಅಭಿವೃದ್ಧಿ ಪೂರಕವಾಗಬೇಕಾಗಿದೆ.

ಉತ್ತರ ಕರ್ನಾಟಕದಲ್ಲಿ ಒಟ್ಟು ರಸ್ತೆ ಮಾರ್ಗ ೪೬,೩೩೫ ಕಿ.ಮೀ. ಇದ್ದರೆ, ದಕ್ಷಿಣ ಕರ್ನಾಟಕದಲ್ಲಿ ೮೩,೧೩೫ ಕಿ.ಮೀ. ಇದೆ. ಪಕ್ಕಾ ರಸ್ತೆ ಉತ್ತರ ಕರ್ನಾಟಕದಲ್ಲಿ ೧,೫೧೫ ಕಿ.ಮೀ. ಇದ್ದರೆ, ದಕ್ಷಿಣ ಕರ್ನಾಟಕದಲ್ಲಿ ೧,೬೭೯ ಕಿ.ಮೀ. ಇದೆ. ರೈಲ್ವೆ ನಿಲ್ದಾಣಗಳ ಸಂಖ್ಯೆ ಉತ್ತರ ಕರ್ನಾಟಕದಲ್ಲಿ ೧೬೮ ಇದ್ದರೆ, ದಕ್ಷಿಣ ಕರ್ನಾಟಕದಲ್ಲಿ ೨೨೨ ಇವೆ. ರೆವೆನ್ಯೂ ಜಿಲ್ಲೆಗಳ ಸಂಖ್ಯೆ ಉತ್ತರ ಕರ್ನಾಟಕದಲ್ಲಿ ೧೨ ಇದ್ದರೆ, ದಕ್ಷಿಣ ಕರ್ನಾಟಕದಲ್ಲಿ ೧೫ ಇವೆ. ರೆವೆನ್ಯೂ ತಾಲೂಕುಗಳ ಸಂಖ್ಯೆ ಉತ್ತರ ಕರ್ನಾಟಕದಲ್ಲಿ ೮೦ ಇದ್ದರೆ, ದಕ್ಷಿಣ ಕರ್ನಾಟಕದಲ್ಲಿ ೯೫ ಇವೆ. ರೆವೆನ್ಯೂ ಹೋಬಳಿಗಳು ಉತ್ತರ ಕರ್ನಾಟಕದಲ್ಲಿ ೩೧೨ ಇದ್ದರೆ ದಕ್ಷಿಣ ಕರ್ನಾಟಕದಲ್ಲಿ ೪೩೩ ಇವೆ. ಗ್ರಾಮ ಪಂಚಾಯಿತಿಗಳು ಉತ್ತರ ಕರ್ನಾಟಕದಲ್ಲಿ ೨,೫೧೧ ಇದ್ದರೆ, ದಕ್ಷಿಣ ಕರ್ನಾಟಕದಲ್ಲಿ ೩,೧೮೧ ಇವೆ. ಕಾಲೇಜುಗಳು ಉತ್ತರ ಕರ್ನಾಟಕದಲ್ಲಿ ೪೨೫ ಇದ್ದರೆ, ದಕ್ಷಿಣ ಕರ್ನಾಟಕದಲ್ಲಿ ೭೪೫ ಇವೆ. ವಿಶ್ವವಿದ್ಯಾಲಯಗಳ ಸಂಖ್ಯೆ ಉತ್ತರ ಕರ್ನಾಟಕದಲ್ಲಿ ಕೇವಲ ೨ ಇದ್ದರೆ, ದಕ್ಷಿಣ ಕರ್ನಾಟಕದಲ್ಲಿ ೪ ಇವೆ. ಇನ್ನು ಹೈದರಾಬಾದು ಕರ್ನಾಟಕ ಒಂದನ್ನು ಪರಿಗಣಿಸಿ ನೋಡಿದರೆ ಚಿಂತಾಜನಕ ಸ್ಥಿತಿಯಲ್ಲಿರುವುದು ಕಂಡುಬರುತ್ತದೆ.

ಒಟ್ಟಾರೆ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಹೈದರಾಬಾದು ಕರ್ನಾಟಕದ ಕಲ್ಬುರ್ಗಿ, ರಾಯಚೂರು, ಬೀದರ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳು ತೀರಾ ಹಿಂದೆ ಬಿದ್ದಿವೆ. ಅದರಲ್ಲಿಯೂ ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿಗೆ ರಾಜ್ಯದಲ್ಲಿಯೇ ೧೭೪ನೆಯ ಸ್ಥಾನವಿದ್ದರೆ ರಾಯಚೂರು ಜಿಲ್ಲೆಯ ದೇವದುರ್ಗಕ್ಕೆ ಕೊನೆಯ ೧೭೫ನೆಯ ಸ್ಥಾನವಿರುತ್ತದೆ.

ಅಚ್ಚರಿಯ ಸಂಗತಿ ಎಂದರೆ ತಲಾ ಆದಾಯದಲ್ಲಿ ಸೇಡಂ ತಾಲೂಕು ರಾಜ್ಯದಲ್ಲಿ ೩೩ನೇ ಸ್ಥಾನದಲ್ಲಿದೆ. ಚಿತ್ತಾಪುರ ತಾಲೂಕು ೫೬ನೇ ಸ್ಥಾನ ಪಡೆದು ಮುಂದಿವೆ. ಇದಕ್ಕೆ ಮುಖ್ಯ ಕಾರಣ ಈ ಎರಡೂ ತಾಲೂಕಿನಲ್ಲಿ ಇರುವ ಸಿಮೆಂಟ್ ಮತ್ತಿತರ ಕೈಗಾರಿಕೆಗಳು. ಆದರೆ ಈ ಆದಾಯ ಅಲ್ಲಿನ ಜನರ ಜೀವನ ಮಟ್ಟ ಸುಧಾರಣೆಗೆ ಯಾವುದೇ ರೀತಿಯಲ್ಲಿ ನೆರವಾಗಿಲ್ಲ.

ತಲಾ ಆದಾಯ ಸೂಚ್ಯಂಕದಂತೆ ಸುರಪುರ ೧೦೯, ಕಲ್ಬುರ್ಗಿ ೧೧೩, ಚಿಂಚೋಳಿ ೧೧೬, ಶಹಾಪುರ ೧೨೭, ಆಳಂದ ೧೪೪, ಯಾದಗಿರಿ ೧೫೧, ಜೇವರ್ಗಿಗೆ ೧೫೪ನೇ ಸ್ಥಾನ.

ಪ್ರತಿ ೧೦೦ ಕಿ.ಮೀ. ಭೌಗೋಳಿಕ ವಿಸ್ತೀರ್ಣಕ್ಕೆ ೬೮ ಕಿ.ಮೀ. ರಸ್ತೆ ಇರಬೇಕು. ಅದನ್ನು ಮಾನದಂಡವಾಗಿ ಹಿಡಿದರೆ ಜಿಲ್ಲೆಯ ೮ ತಾಲೂಕು ಅತಿ ಹಿಂಡುಳಿದ, ೨ ತಾಲೂಕು ಹಿಂದುಳಿದ ಪಟ್ಟಿಯ ಕೊನೆಯಲ್ಲಿದೆ.

ಸಮಗ್ರ ಅಭಿವೃದ್ಧಿ ಸೂಚ್ಯಂಕದಂತೆ ಕಲ್ಬುರ್ಗಿ ತಾಲೂಕಿಗೆ ರಾಜ್ಯದಲ್ಲಿ ೩೨ನೇ ಸ್ಥಾನ. ಚಿತ್ತಾಪುರ ೧೦೬, ಸೇಡಂ ೧೧೨, ಸುರಪುರ ೧೨೬, ಶಹಾಪುರ ೧೬೩, ಅಫಜಲಪುರ ೧೬೪, ಯಾದಗಿರಿ ೧೬೭, ಆಳಂದ ೧೬೮, ಚಿಂಚೋಳಿ ೧೭೧ ಮತ್ತು ಜೇವರ್ಗಿ ಕಟ್ಟ ಕಡೆಯ ಅಂದರೆ ೧೭೪ನೇ ಸ್ಥಾನದಲ್ಲಿದೆ.

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಅಫಜಲಪುರ ೧೦೯, ಚಿತ್ತಾಪುರಕ್ಕೆ ೧೪೫, ಆಳಂದ ೧೫೧, ಸುರಪುರ ೧೫೬, ಚಿಂಚೋಳಿ ೧೫೮, ಜೇವರ್ಗಿ ೧೬೧, ಯಾದಗಿರಿಗೆ ೧೬೩ನೇ ಸ್ಥಾನ. ೧ ಲಕ್ಷ ಜನಸಂಖ್ಯೆ ೯೩ ಶಾಲೆಗಳಿರಬೇಕು ಎಂಬುದನ್ನು ಮಾನದಂಡವಾಗಿ ಹಿಡಿದರೆ ಚಿತ್ತಾಪುರ, ಕಲ್ಬುರ್ಗಿ, ಶಹಾಪುರ, ಆಳಂದ, ಯಾದಗಿರಿ, ಅಫಜಲಪೂರ ಮತ್ತು ಜೇವರ್ಗಿ ತೀರಾ ಹಿಂದುಳಿದ ತಾಲೂಕು ಪಟ್ಟಿಯಲ್ಲಿವೆ. ಅದೇ ರೀತಿ ಸಾಕ್ಷರತೆಯಲ್ಲಿ ಕಲ್ಬುರ್ಗಿ ಬಿಟ್ಟರೆ ಉಳಿದ ೯ ತಾಲೂಕುಗಳನ್ನು ತೀರಾ ಹಿಂದುಳಿದ ಪಟ್ಟಿಗೆ ಸೇರಿಸಲಾಗಿದೆ.

ಪ್ರಾದೇಶಿಕ ಅಸಮತೋಲನ ನಿವಾರಣಾ ಅಧ್ಯಯನ ಸಮಿತಿ ಸದಸ್ಯರಾದ ಬಳ್ಳಾರಿಯ ಡಾ. ಶೇಷಾದ್ರಿ ಅವರು ನೀಡಿದ ಅಂಕಿ ಅಂಶಗಳಿಂದ ಈ ವಿಷಯ ತಿಳಿದುಬರುತ್ತಿದೆ.

ಈ ಪ್ರಾಂತದಲ್ಲಿ ಇನ್ನೂ ೪೯೨ ಗ್ರಾಮಗಳಿಗೆ ಸಾರಿಗೆ ಸಂಪರ್ಕವಿಲ್ಲ. ಸರಕಾರದ ದಾಖಲೆಗಳ ಪ್ರಕಾರ ೪,೧೭೦ ಹಳ್ಳಿಗಳ ಪೈಕಿ, ೩,೬೭೮ ಹಳ್ಳಿಗಳು ಬಸ್ ಸೌಲಭ್ಯವನ್ನು ಕಂಡಿವೆ. ರಸ್ತೆಗಳಿಲ್ಲದ ಕಾರಣ ೪೯೨ ಹಳ್ಳಿಗಳು ಸರಕಾರಿ ಬಸ್ಸುಗಳನ್ನು ನೋಡಲಾಗಿಲ್ಲ. ರಾಯಚೂರು ಜಿಲ್ಲೆಯಲ್ಲಿ ೨೧೧ ಹಳ್ಳಿಗಳು, ಗುಲಬರ್ಗಾ ಜಿಲ್ಲೆಯಲ್ಲಿ ೧೮೦ ಹಳ್ಳಿಗಳು, ಬಸ್ಸಿನ ಸೌಕರ್ಯವನ್ನು ಪಡೆದಿಲ್ಲ. ವಿಚಿತ್ರವೆಂದರೆ ಬಸ್ಸು ಅಥವಾ ಸಾರಿಗೆ ಸಂಪರ್ಕವನ್ನು ಹೊಂದಲು ಕೆಲವು ಹಳ್ಳಿಗಳಿಗೆ ೨-೩ ಕಿ.ಮೀ. ರಸ್ತೆಯಾದರೆ ಸಾಕು. ಅಷ್ಟನ್ನೂ ಈ ಹಳ್ಳಿಗಳು ಇನ್ನೂ ಪಡೆದುಕೊಂಡಿಲ್ಲ. ಅಂಕಿ ಅಂಶಗಳ ಪ್ರಕಾರ, ಈ ಪ್ರಾಂತದಲ್ಲಿ ಎಲ್ಲ ಹಳ್ಳಿಗಳು ಸಾರಿಗೆ ಸಂಪರ್ಕ ಹೊಂದಲು ಬೇಕಾಗಿರುವ ರಸ್ತೆಯ ದೂರ ೧೩೦೪ ಕಿ.ಮೀ. ಇದಕ್ಕೆ ತಗಲುವ ವೆಚ್ಚ ೩೯.೧೨ ಕೋಟಿ ಎಂದು ಅಂದಾಜು ಮಾಡಲಾಗಿದೆ.

ಇಡೀ ಕರ್ನಾಟಕವನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡುವಾಗ ಸಿಗುವ ಅಭಿವೃದ್ಧಿ ನೋಟ ಒಂದಾದರೆ, ಉತ್ತರ ಮತ್ತು ದಕ್ಷಿಣ ಕರ್ನಾಟಕಗಳ ಅಭಿವೃದ್ಧಿಯಲ್ಲಿ ಅಸಮತೋಲನವಿರುವುದು ಇನ್ನೊಂದು. ಅದರಲ್ಲೂ ಹೈದರಾಬಾದು ಕರ್ನಾಟಕ ಪ್ರಾಂತವೊಂದನ್ನೇ ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಅಸಮಾನತೆ ಇನ್ನೂ ಎದ್ದು ಕಾಣುತ್ತಿದೆ. ಮೇಲೆ ಕಾಣಿಸಿದ ಅಂಕಿ ಅಂಶಗಳು ತೀರಾ ಕಮ್ಮಿ. ಎಲ್ಲ ರಂಗಗಳಲ್ಲಿ ಹುಡುಕಿ ನೋಡಿದರೆ ಸಮಗ್ರ ಚಿತ್ರ ಸಿಕ್ಕೀತು. ನಿದರ್ಶನಕ್ಕಾಗಿ ಕೆಲವನ್ನು ಮಾತ್ರ ಇಲ್ಲಿ ಕೊಡಲಾಗಿದೆ. ಈ ಅಸಮತೋಲನವನ್ನು ಮುಂದೊಡ್ಡಿ ಈಚಿನ ಕೆಲವು ವರ್ಷಗಳಿಂದ ‘ಪ್ರತ್ಯೇಕ ಹೈದರಾಬಾದು ಕರ್ನಾಟಕ ರಾಜ್ಯ’ಕ್ಕಾಗಿ ರಾಜಕೀಯ ವಲಯದಲ್ಲಿರುವ ಕೆಲವರು ಹೋರಾಟವನ್ನು ಸಂಘಟಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗೆ ನೋಡಿದರೆ ಈ ಅಸಮತೋಲನದ ನಿವಾರಣೆಗಾಗಿ ಒಂದೂವರೆ ದಶಕದ ಹಿಂದೆಯೇ ಸರಕಾರವು ‘ಹೈದರಾಬಾದು ಕರ್ನಾಟಕ ಪ್ರದೇಶಾಭಿವೃದ್ಧಿ ಮಡಳಿ’ಯನ್ನು ಗುಲಬರ್ಗಾದಲ್ಲಿ ಸ್ಥಾಪಿಸಿ. ಅದಕ್ಕೆ ವಿಶೇಷ ಹಣಕಾಸಿನ ನೆರವನ್ನು ನೀಡಲು ಪ್ರಯತ್ನಿಸಿತ್ತು. ಆದರೆ ಇದರಿಂದ ಕನಿಷ್ಠ ಮಟ್ಟದ ಅಸಮತೋಲನ ನಿವಾರಣೆಯಾಗಲಿಲ್ಲ. ಯಾಕೆಂದರೆ ‘ಹೈದರಾಬಾದು ಕರ್ನಾಟಕ ಅಭಿವೃದ್ಧಿ’ಗೆ ನಿಗದಿತ ಕಾರ್ಯಸೂಚಿಗಳು ಇರಲಿಲ್ಲ ಮತ್ತು ಮುಖ್ಯವಾಗಿ ಅವುಗಳಿಗೆ ಕಾಲಮಿತಿಯೂ ಇರಲಿಲ್ಲ. ನಾಗರಿಕ ಸೌಲಭ್ಯಗಳಾದ ಕುಡಿಯುವ ನೀರು, ಆರೋಗ್ಯ, ರಸ್ತೆ ಮುಂತಾದ ಕೆಲಸಗಳಿಗಾದರು ಈ ಮಂಡಳಿ ಸರಿಯಾಗಿ ದುಡಿದಿದ್ದರೂ ಎಷ್ಟೋ ಅಭಿವೃದ್ಧಿ ಆದಂಅತಾಗುತ್ತಿತ್ತು. ೧೯೯೦-೨೦೦೦ದ ವರೆಗೆ ಈ ಮಂಡಳಿಗೆ ನೀಡಿದ ಹಣ ೫೬೭.೦೩ ಕೋಟಿ ರೂ. ಖರ್ಚಾಗಿದೆ. ರಸ್ತೆ, ಸೇತುವೆಗಳಿಗೆ ೩೦೮.೩೮ ಕೋಟಿ ಖರ್ಚು ಮಾಡಲಾಗಿದೆ. ಶಿಕ್ಷಣಕ್ಕೆ ೩೧.೮೮ ಕೋಟಿ, ಆರೋಗ್ಯಕ್ಕಾಗಿ ೧೭.೬೦ ಕೋಟಿ, ಕುಡಿಯುವ ನೀರಿಗಾಗಿ ೩೭.೯೨ ಕೋಟಿ ಖರ್ಚು ಮಾಡಲಾಗಿದೆ. ಕೇವಲ ಕಾಮಗಾರಿಗಾಗಿ ಅಧಿಕ ಹಣ ಖರ್ಚು ಮಾಡಲಾಗಿದೆ. ಉದ್ಯೋಗವನ್ನು ಸೃಷ್ಟಿಮಾಡುವ ಯೋಜನೆಗಳು ಯಾವೂ ಇಲ್ಲ. ಈ ಕಾಮಗಾರಿಗಳು ಸರಿಯಾಗಿ ನಡೆದಿವೆಯೇ? ಉದಾಹರಣೆಗೆ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅಂದಾಜು ವೆಚ್ಚ ೫೨.೭೪ ಲಕ್ಷ ಮಾಡಲಾಗಿತ್ತು. ಸರಿಯಾಗಿ ಕೆಲಸ ಮಾಡದೆ ವಿಳಂಬವಾಗಿ ಪುನಃ ಪರಿಷ್ಕೃತ ವೆಚ್ಚವೆಂದು ೫೦ ಲಕ್ಷ ಹಣವನ್ನು ಹೆಚ್ಚಾಗಿ ಬಳಸಲಾಗಿದೆ. ಕಾಲಮಿತಿ ಇಲ್ಲದಿರುವುದು ಕಂಡುಬರುತ್ತದೆ. ಅಭಿವೃದ್ಧಿಗಾಗಿ ವಿಶೇಷ ಮಂಡಳಿ ರಚಿಸಿದ ಮೇಲೆ ನೀಡಿದ ಅನುದಾನದಲ್ಲಿ ಸಮರ್ಪಕವಾಗಿ ಹಣ ವಿನಿಯೋಗವಾಗಬೇಕು. ಹೀಗಾದರೆ ಹೊಣೆ ಯಾರದು? ವಿಚಿತ್ರವೆಂದರೆ ‘ಹೈದರಾಬಾದು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ಯ ಮುಖ್ಯ ಕಚೇರಿ ಗುಲಬರ್ಗಾದಲ್ಲಿದೆ. ಸಭೆಗಳು ಇಲ್ಲಿಯೇ ನಡೆಯಬೇಕು. ಇಲ್ಲಿಯವರೆಗೆ ನಡೆದ ಸಭೆಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದ ಸಭೆಗಳೆಲ್ಲವೂ ಬೆಂಗಳೂರಿನಲ್ಲಿ ನಡೆದಿವೆ. ಒಂದು ಸಲ ಮಾತ್ರ ಗುಲ್ಬರ್ಗಾದಲ್ಲಿ ನಡೆದಿದೆ. ಆ ಸಭೆಯಲ್ಲಿ ಹಾಜರಿದ್ದ ಸದಸ್ಯರು ಮೂವ್ವರು ಮಾತ್ರ. ಬೆಂಗಳೂರಿನಲ್ಲಿ ನಡೆಯುವ ಸಭೆಗಳಲ್ಲಿ ೩೫ ರಿಂದ ೪೫ ಸದಸ್ಯರು ಹಾಜರಿರುತ್ತಾರೆ. ಇದನ್ನು ಹೇಗೆ ಗ್ರಹಿಸಬೇಕು? ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಈ ಮಂಡಳಿ ಕೆಲಸಮಾಡದೇ ಇರುವುದಕ್ಕೆ ಪ್ರಮುಖ ಕಾರಣವಾಗಿದೆ. ಈ ಮಂಡಳಿ ಈಗಲೂ ನಾಮಕೇ ವಾಸ್ತೆ ಇದ್ದಂತಿದೆ. ರಾಜಕೀಯ ಒತ್ತಡಗಳಿಗೆ ತಕ್ಕಂತೆ ಮಂಡಳಿ ಕೆಲಸಮಾಡುವಂತೆ ತೋರುತ್ತಿದೆ.

ಸ್ವಾತಂತ್ರ್ಯಪೂರ್ವದಿಂದಲೂ ಈ ಪ್ರಾಂತ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ. ಈ ಪ್ರಾಂತದಂತೆ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶದ ‘ತೆಲಂಗಾಣ’ ಪ್ರಾಂತ ಹಾಗೂ ಮಹಾರಾಷ್ಟ್ರದ ‘ವಿದರ್ಭ’ ಪ್ರಾಂತಗಳು ತೀರಾ ಹಿಂದುಳಿದಿದ್ದವು. ಅಲ್ಲಿನ ಆಡಳಿತಾರೂಢ ಸರಕಾರಗಳು ಶ್ರಮವಹಿಸಿ ಕೇಂದ್ರದಿಂದ ವಿಶೇಷ ಸ್ಥಾನಮಾನ ಪಡೆಯಲು, ಸರಕಾರಿ ಹುದ್ದೆಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಈ ಪ್ರಾಂತದ ಜನರಿಗೆ ಪ್ರಾದೇಶಿಕ ಮೀಸಲಾತಿ ಕಲ್ಪಿಸಲು ಸಂವಿಧಾನದ ೩೭೧ನೇ ಪರಿಚ್ಛೇದದ ಪ್ರಯೋಜನ ಪಡೆದವು. ಇದರಿಂದಾಗಿ ನೆರೆಯ ರಾಜ್ಯಗಳಲ್ಲಿ ಹಿಂದುಳಿದ ಪ್ರಾಂತಗಳ ಅಭಿವೃದ್ಧಿಗೆ ಕೇಂದ್ರದ ನೆರವನ್ನು ಬಹಳ ಹಿಂದೆಯೇ ಪಡೆಯಲಾರಂಭಿಸಿದವು. ದುರ್ದೈವದ ಸಂಗತಿಯೆಂದರೆ ಹೈದರಾಬಾದು ಕರ್ನಾಟಕಕ್ಕೆ ಈ ಅವಕಾಶ ಲಭ್ಯವಾಗಲಿಲ್ಲ. ಈಗ ಜನತೆಯ ಒತ್ತಾಯಕ್ಕೆ ೨೦೦೨ರಲ್ಲಿ ಸರಕಾರ ಪ್ರಯತ್ನಿಸಿದರೂ ಕೇಂದ್ರ ಇದಕ್ಕೆ ಒಪ್ಪಿಗೆ ನೀಡದೆ ತಿರಸ್ಕರಿಸಿತು. ಕೇಂದ್ರದ ನೆರವನ್ನು ಪಡೆಯಲು ಯಾವ ಸರಕಾರಗಳೂ, ರಾಜಕೀಯ ಮುಖಂಡರೂ ಸರಿಯಾಗಿ ಪ್ರಯತ್ನಿಸಲಿಲ್ಲ. ಈ ಪ್ರಾಂತದ ರಾಜಕೀಯ ಮುಖಂಡರಿಗೂ, ಶಾಸಕರಿಗೂ, ಮಂತ್ರಿಗಳಿಗೂ ಈ ಬಗ್ಗೆ ಹೆಚ್ಚಿನ ಕಾಳಜಿ, ಅರಿವು ಬೇಗ ಮೂಡಲಿಲ್ಲ. ಈಗಲೂ ಈ ಮಾತು ಅನ್ವಯಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ಹಕ್ಕೊತ್ತಾಯ ಮಾಡಿ ಅಗತ್ಯವಾದದ್ದನ್ನು ಪಡೆಯುವ ಅರಿವು ಜನಸಮುದಾಯಗಳಲ್ಲಿ ಇನ್ನೂ ಬಂದಿಲ್ಲ. ಹೀಗಾಗಿ ಸ್ವಾತಂತ್ರ್ಯ ಬಂದು ೫೫ ವರ್ಷಗಳಾದರೂ ಈ ಪ್ರಾಂತ ತೀರಾ ಹಿಂದುಳಿದಿದೆ.

ಹುಬ್ಬಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ಉತ್ತರ ಕರ್ನಾಟಕದ ೧೨ ಜಿಲ್ಲೆಗಳನ್ನೊಳಗೊಂಡು ಒಂದು ಪ್ರತ್ಯೇಕ ರಾಜ್ಯವಾಗಬೇಕೆಂಬ ಕೂಗು ಪ್ರಬಲವಾಗಿಯೇ ಎದ್ದಿತ್ತು. ಈ ಕೂಗಿಗೆ ಕಾರಣವೆಂದರೆ ದಕ್ಷಿಣ ಕರ್ನಾಟಕಕ್ಕೆ ಎಲ್ಲ ರಾಜಕೀಯ ಸೌಲಭ್ಯಗಳು ದೊರೆಯುತ್ತಿವೆ. ಅಭಿವೃದ್ಧಿಗೆ ಬೇಕಾಗುವ ಎಲ್ಲ ಉದ್ದಿಮೆಗಳು ಅಲ್ಲಿಯೇ ನೆಲೆಗೊಳ್ಳುತ್ತಿವೆ ಎಂಬುದು. ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೇ ವಲಯ ಕಚೇರಿ ನೆಲೆಗೊಳ್ಳಬೇಕು ಎಂದು ಸುಪ್ರೀಮ್ ಕೋರ್ಟು ಅನುಮತಿ ನೀಡಿದ್ದರೂ ಆಳುವ ಸರಕಾರವು ಹಿಂದೇಟು ಹಾಕಿತು. ಹೈಕೋರ್ಟು ಪೀಠದ ಸ್ಥಾಪನೆ ವಿಷಯದಲ್ಲಿಯೂ ಸರಕಾರ ಮೌನವಹಿಸಿತು. ಇದರಿಂದಾಗಿಯೇ ಉತ್ತರ ಕರ್ನಾಟಕದ ಪ್ರಜ್ಞಾವಂತರು ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮುಂದಿಟ್ಟು ಹೋರಾಟಕ್ಕೆ ಪ್ರಯತ್ನಿಸಿದರು. ಇದೇ ಮಾದರಿಯಲ್ಲಿ ಹೈದರಾಬಾದು ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಬೇಡಿಕೆಯನ್ನಿಟ್ಟು ಹೋರಾಟಕ್ಕೆ ಇಲ್ಲಿಯ ಕೆಲವು ರಾಜಕೀಯ ಮುಖಂಡರು ಪ್ರಯತ್ನಿಸುತ್ತಿರುವುದು ಈಗ ಕಂಡುಬರುತ್ತಿದೆ. ಪ್ರತ್ಯೇಕ ರಾಜ್ಯದ ಕೂಗಿಗೆ ಜನ ಬೆಂಬಲ ಸಿಕ್ಕಿಲ್ಲ. ಸಿಗುವುದು ಸುಲಭದ ವಿಷಯವಾಗಿಲ್ಲ. ಅಭಿವೃದ್ಧಿಗಾಗಿ ಬೇಡಿಕೆಯನ್ನಿಟ್ಟು ಹೋರಾಡಲು ಜನರನ್ನು ಸಂಘಟಿಸುವುದೇ ಉಚಿತವಾದ ಮಾರ್ಗವಾಗಿದೆ. ಯಾಕೆಂದರೆ ಈ ಪ್ರಾಂತಕ್ಕಾಗಿ ಕುಡಿಯುವ ನೀರು, ರಸ್ತೆ, ಆರೋಗ್ಯ ಮತ್ತು ಶಿಕ್ಷಣ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಬಜೆಟ್‍ನಲ್ಲಿ ನಿಗದಿಮಾಡಿದ ಹಣದಲ್ಲಿ ಅರ್ಧದಷ್ಟೂ ವಿನಿಯೋಗವಾಗದೆ ಪ್ರತಿವರ್ಷ ಉಳಿಯುತ್ತಿದೆ. ಇದು ಅಭಿವೃದ್ಧಿಯಾಗದೇ ಇರುವುದಕ್ಕೆ ಮುಖ್ಯ ಕಾರಣವಾಗಿದೆ. ಹೀಗೆ ಉಳಿಯುವ ಹಣದ ಪ್ರಮಾಣವು ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರದಲ್ಲೆ ಅತಿ ಹೆಚ್ಚು ಎಂಬುದು ಅಂಕಿ ಅಂಶಗಳಿಂದ ತಿಳಿದು ಬರುತ್ತಿದೆ. ಹಣದ ವಿನಿಯೋಗವು ಸರಿಯಾಗಿ, ಸಕಾಲದಲ್ಲಿ ಆಗಲು ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಒತ್ತಡ ತರಬೇಕಾಗಿದೆ. ಶಾಸಕರು, ಸಂಸದರು ಮತ್ತು ಸಚಿವರ ಗಮನಕ್ಕೆ ಮೇಲಿಂದ ಮೇಲೆ ಅಸಮತೋಲನದ ಅಂಕಿ ಅಂಶಗಳನ್ನು ತೋರಿಸಬೇಕು. ಈ ಪ್ರಾಂತದ ಅಭಿವೃದ್ಧಿಗೆ ಯಾವ ಕೆಲಸಗಳು ಆಗಬೇಕು ಎಂಬುದನ್ನು ಸರಕಾರಕ್ಕೆ ಮೇಲಿಂದ ಮೇಲೆ ಒತ್ತಾಯ ಮಾಡಬೇಕು. ಇಂಥದ್ದನ್ನು ಮಾಡುವುದಕ್ಕೆ ಜನಬೆಂಬಲ ಸಿಗುತ್ತದೆಯೇ ಹೊರತು ಪ್ರತ್ಯೇಕ ರಾಜ್ಯ ಮಾಡುತ್ತೇವೆ ಎನ್ನುವ ಹೋರಾಟಕ್ಕೆ ಜನ ಬೆಂಬಲ ಸಿಗುವುದಿಲ್ಲ, ಸಿಗಲೂಬಾರದು. ಈಗಾಗಲೇ ಈ ಪ್ರಾಂತದ ಜನಸಮುದಾಯಗಳು ಜಾಗೃತವಾಗಿವೆ ಎಂಬುದು ಸರಕಾರದ ಗಮನಕ್ಕೆ ಬಂದಿವೆ. ಬಂದಿರುವುದರಿಂದಲೇ ಪ್ರಾದೇಶಿಕ ಅಸಮಾನತೆಯನ್ನು ಸರಿಪಡಿಸಲು ಸರಿಯಾದ, ಖಚಿತವಾದ ಮಾಹಿತಿಯನ್ನು ಪಡೆಯಲು ಸರಕಾರವೇ ಡಾ. ಎಂ.ಡಿ.ನಂಜುಡಪ್ಪ ಸಮಿತಿಯನ್ನು ನೇಮಿಸಿತು. ಈ ಸಮಿತಿಯು ಸಮಗ್ರ ವರದಿಯನ್ನು ಈಗಾಗಲೇ ಸರಕಾರಕ್ಕೆ ನೀಡಿದೆ. ಸಮಿತಿಯ ಪ್ರಕಾರ ಉತ್ತರ ಕರ್ನಾಟಕದ ೨೬ ತಾಲೂಕುಗಳು ಅತ್ಯಂತ ಹಿಂದುಳಿದಿವೆ ಎಂದು ಗುರುತಿಸಿದೆ. (ದಕ್ಷಿಣ ಕರ್ನಾಟಕದಲ್ಲಿ ೧೨ ತಾಲೂಕುಗಳು ಅತ್ಯಂತ ಹಿಂದುಳಿದಿವೆ)

ಈ ಸಮಿತಿಯು ವರದಿಯಲ್ಲಿ ಹಿಂದುಳಿದ ಪ್ರಾಂತಗಳಲ್ಲಿ ತುರ್ತಾಗಿ ಕೈಗೊಳ್ಳಬಹುದಾದ ಯೋಜನೆಗಳನ್ನು ಸರಕಾರಕ್ಕೆ ಸೂಚಿಸಿದೆ. ಬಹಳ ಮುಖ್ಯವಾಗಿ, ದುಡುಯುವ ವರ್ಗವು ವಲಸೆ ಹೋಗುವುದನ್ನು ತಡೆಯಬೇಕು. ನಿಧಾನಗತಿಯಲ್ಲಿ ಸಾಗಿದ ಎಲ್ಲ ನೀರಾವರಿ ಯೋಜನೆಗಳನ್ನು ತೀವ್ರವಾಗಿ ಪೂರ್ತಿಗೊಳಿಸಬೇಕು. ಶಿಕ್ಷಣಕ್ಕಾಗಿ ವಿಶೇಷ ಯೋಜನೆಗಳನ್ನು ರೂಪಿಸಿ ಕಾರ್ಯಗತಮಾಡಬೇಕು. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಜೈವಿಕ – ತಾಂತ್ರಿಕ, ವಿಜ್ಞಾನ, ತಂತ್ರಜ್ಞಾನ ವಿಷಯಗಳಲ್ಲಿ ಪದವಿಗಳನ್ನು ಪಡೆಯಲು ಸಂಸ್ಥೆಗಳನ್ನು ಸ್ಥಾಪಿಸಬೇಕು. ಬೀದರಿನಲ್ಲಿ ಪಶುವೈದ್ಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು. ಹೆಚ್ಚುವರಿ ಬ್ಯಾಂಕುಗಳನ್ನು ಹಿಂದುಳಿದ ತಾಲೂಕುಗಳಲ್ಲಿ ತೆರೆಯಬೇಕು. ಅತಿ ಹಿಂದುಳಿದ ತಾಲೂಕುಗಳ ಪ್ರತಿನಿಧಿಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯವನ್ನು ಕಲ್ಪಿಸಬೇಕು. ಒಟ್ಟಿನಲ್ಲಿ ೮ ವರ್ಷಗಳ ಅವಧಿಯಲ್ಲಿ ಅಭಿವೃದ್ಧಿಗಾಗಿ ೧೮ ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂದು ಶಿಫಾರಸ್ಸು ಮಾಡಿದೆ. ಈ ಸಮಿತಿಯು ಸೂಚಿಸಿದ ಈ ಅಂಶಗಳನ್ನು ಸರಕಾರವು ಗಮನಿಸಿ ಕೆಲಸಕ್ಕೆ ತೊಡಬೇಕಾಗಿರುವುದು ಅದರ ಕರ್ತವ್ಯವಾಗಿದೆ. ಈ ಕರ್ತವ್ಯಕ್ಕೆ ಅಣಿಯಾಗುವಂತೆ ಸರಕಾರವನ್ನು ಎಚ್ಚರಿಸುವುದು ಈ ಪ್ರಾಂತದ ಜನ ಸಮುದಾಯಗಳ ಕರ್ತವ್ಯವೂ ಅಗಿದೆ. ಇದನ್ನು ಹೊರತು ಪಡಿಸಿ ಬೇರೆ ದಾರಿಯನ್ನು ಹುಡುಕುವುದು ಉಚಿತವಲ್ಲ. ಈ ವಿಷಯಕ್ಕೆ ಸಂಬಂಧಿಸಿ ಪ್ರಜಾವಾಣಿಯು (ದಿ. ೨-೧೧-೨೦೦೧) ಗಮನಾರ್ಹ ಸಂಪಾದಕೀಯ ಲೇಖನ ಪ್ರಕಟಿಸಿದೆ. ‘ಪ್ರತ್ಯೇಕತೆಯ ಕೂಗಿಗೆ ಈಗ ಬೆಂಬಲ ಇಲ್ಲ ಎಂಬುದು ರಾಜ್ಯ ಸರ್ಕಾರವನ್ನು ಮತ್ತೆ ನಿದ್ದೆಗೆ ತಳ್ಳಬಾರದು. ಅಭಿವೃದ್ಧಿಯಲ್ಲಿನ ಅಸಮಾನತೆ ನಿವಾರಣೆಗೆ ಕಾಲಬದ್ಧ ಕಾರ್ಯಸೂಚಿಯನ್ನು ಹಾಕಿಕೊಂಡು ಕಾರ್ಯ ಪ್ರವೃತ್ತವಾಗಬೇಕು. ಜನರಿಗೆ ಆರೋಗ್ಯ, ಶಿಕ್ಷಣ, ಉದ್ಯೋಗಾವಕಾಶ, ಸಂಪರ್ಕ – ಸಂವಹನ ವ್ಯವಸ್ಥೆಗಳನ್ನು ಒದಗಿಸುವ ಮೂಲಕ ಅಂತರವನ್ನು ಶೀಘ್ರಾತಿಶೀಘ್ರ ನಿವಾರಣೆ ಮಾಡುವ ಸಂಕಲ್ಪ ತೊಡಬೇಕು. ಅಸಮಾನತೆಯನ್ನು ಕಡಿಮೆ ಮಾಡಲು ಮಾಡಿದ ಪ್ರಯತ್ನಗಳಾದ ಅಭಿವೃದ್ಧಿ ಮಂಡಲಿ ರಚನೆ, ಆಯೋಗಗಳ ನೇಮಕ – ಇವುಗಳೆಲ್ಲ ಅಷ್ಟೇನೂ ಫಲ ನೀಡಿಲ್ಲ. ಅವುಗಳ ಶಿಫರಾಸುಗಳು ಪ್ರಾಮಾಣಿಕವಾಗಿ ಜಾರಿಗೊಂಡಿಲ್ಲ. ಅಸಮಾನತೆಯ ನಿವಾರಣೆ ಬರೇ ಬಾಯುಪಚಾರವಾದರೆ ಸಮಗ್ರ ಕರ್ನಾಟಕದ ಏಕತೆಯೂ ಅಮೂರ್ತವಾಗಿಯೇ ಉಳಿಯುವ ಅಪಾಯವುಂಟು.’