ಮೊಗಲರ ವಶವಾದ ಈ ಪ್ರಾಂತದಲ್ಲಿ ಕಮರುದ್ದೀನ್ ಎಂಬ ಸುಬೇದಾರ ೧೭೨೪ರಲ್ಲಿ ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಮೇಲೆ ಕರ್ನಾಟಕದ ಉತ್ತರ ಭಾಗವು ಇವನ ಅಧೀನಕ್ಕೆ ಒಳಗಾಯಿತು. ನಿಜಾಮರ ಆಳ್ವಿಕೆ ಇಲ್ಲಿಂದ ಆರಂಭವಾಯಿತು. ಕರ್ನಾಟಕದ ದಕ್ಷಿಣ ಭಾಗದಲ್ಲಿ ಹೈದರಲಿ ಅಧಿಕಾರಕ್ಕೆ ಬರಲಿದ್ದ. ಮಹಾರಾಷ್ಟ್ರದಲ್ಲಿ ಪೇಶ್ವೆಗಳು ಆಳ್ವಿಕೆ ನಡೆಸಿದ್ದರು. ನಿಜಾಮರು, ಮರಾಠರು, ಹೈದರಲಿ ಅಧಿಕಾರದಲ್ಲಿದ್ದಾಗ ಫ್ರೆಂಚರು, ಬ್ರಿಟಿಷರು ನೆಲೆಗೊಂಡು ಅಧಿಕಾರ ಹಿಡಿಯಲು ಹೊಂಚು ಹಾಕುತ್ತಿದ್ದರು. ಈ ಪ್ರಾಂತದಲ್ಲಿ ಅಧಿಕಾರಕ್ಕೆ ಬಂದ ಮೊದಲ ನಿಜಾಮ ಮರಣ ಹೊಂದಲು, ಬೆನ್ನ ಹಿಂದೆಯೇ ಅಧಿಕಾರಕ್ಕೆ ಬರಲು ಅಂತಃ ಕಲಹಗಳು ತೀವ್ರವಾಗಿ ನಡೆದವು. ಈ ಅವಧಿಯಲ್ಲಿ ದಂಗೆಗಳು ಹೇಳ ತೀರದಷ್ಟು ಉಲ್ಬಣಗೊಂಡವು. ದಂಗೆಯ ಯುಗವೇ ಈ ಪ್ರಾಂತದಲ್ಲಿ ಆರಂಭವಾಯಿತು. ಯಾರ ನಿಯಂತ್ರಣವೂ ಇರಲಿಲ್ಲ. ಇದೇ ಸರಿಯಾದ ಸಮಯವೆಂದು ಫ್ರೆಂಚರು ಮತ್ತು ಬ್ರಿಟಿಷರು ನಿಜಾಮರ ಅಂತಃಕಲಹದಲ್ಲಿ ಕೈ ಹಾಕಿದರು. ಮೊದಲ ನಿಜಾಮನ ಮಗ ನಾಸಿರಜಂಗನಿಗೂ ಹಾಗೂ ಮಗಳ ಮಗ ಮುಜಫರ ಜಂಗನಿಗೂ ಅಧಿಕಾರಕ್ಕಾಗಿ ತೀವ್ರ ಪೈಪೋಟಿ ನಡೆಯಿತು. ಫ್ರೆಂಚರು ಮುಜಫರ ಜಂಗನಿಗೆ, ಬ್ರಿಟಿಷರು ನಾಸಿರಜಂಗನಿಗೆ ಬೆಂಬಲವಾಗಿ ನಿಂತರು. ಮುಜಫರಜಂಗ ಫ್ರೆಂಚರ ಬೆಂಬಲದಿಂದ ಅಧಿಕಾರಕ್ಕೆ ಬಂದರೂ ಇದೇ ಕಲಹದಲ್ಲಿ ಸಾವಿಗೀಡಾದ. ಮುಂದೆ ನಾಸಿರಜಂಗನ ತಮ್ಮ ಸಲಬತ್ ಜಂಗನು ಅಧಿಕಾರಕ್ಕೆ ಬಂದನು. ಈ ಸಂದರ್ಭದಲ್ಲಿ ಫ್ರೆಂಚರ ಪ್ರಾಬಲ್ಯ ಹೆಚ್ಚಾಗಿತ್ತು. ಫ್ರೆಂಚರ ಬೆಂಬಲಿತ ಸಲಬತ್ ಜಂಗ್ ಅಧಿಕಾರದಲ್ಲಿದ್ದಾಗ ಇವನ ತಮ್ಮನಾದ ನಿಜಾಮಲಿಖಾನ ಬಂಡಾಯ ಹೂಡಿದ. ಆಗ ಸಲಬತ್ ಜಂಗನು ಬ್ರಿಟಿಷರ ಮೊರೆಹೋದ. ಇದೇ ಸಂದರ್ಭವನ್ನು ಬ್ರಿಟಿಷರು ಸರಿಯಾಗಿ ಉಪಯೋಗಿಸಿಕೊಂಡು ಅವನನ್ನು ಅಧಿಕಾರಕ್ಕೆ ತಂದರು. ಇಲ್ಲಿಂದಲೇ ನಿಜಾಮರು ಬ್ರಿಟಿಷರ ಹಿಡಿತಕ್ಕೆ ಒಳಗಾದರು. ಈ ಅವಧಿಯಲ್ಲಿ ಹೈದರಲಿ ಮೈಸೂರು ಪ್ರಾಂತವನ್ನು ಆಳುತ್ತಿದ್ದ. ಹೈದರಲಿಗೆ ಅಧಿಕಾರ ಹಿಡಿಯಲು ಹಕ್ಕಿಲ್ಲವೆಂದು ನಿಜಾಮಲಿಖಾನ್ ದ್ವೇಷಿಸತೊಡಗಿದ. ಬ್ರಿಟಿಷರು ನಿಜಾಮರ, ಮರಾಠರ ಬೆಂಬಲವನ್ನು ನಿರಂತರವಾಗಿ ಪಡೆದರು. ಕರ್ನಾಟಕದಲ್ಲಿ ಬ್ರಿಟಿಷರ ವಸಾಹತುಶಾಹಿ ಆಡಳಿತವನ್ನು ವಿರೋಧಿಸಿದ ಟಿಪ್ಪುಸುಲ್ತಾನನಿಗೆ ನಿಜಾಮರು, ಮರಾಠರು ಬೆಂಬಲ ನೀಡಲಿಲ್ಲ. ಬದಲಾಗಿ ಬ್ರಿಟಿಷರಿಗೆ ಅನೇಕ ರೀತಿಯ ನೆರವನ್ನು ನೀಡಿ ಬೆಂಬಲಿಸಿದರು. ಅವನನ್ನು ಬ್ರಿಟಿಷರು ನಿರ್ನಾಮ ಮಾಡುವವರೆಗೆ ಬೆಂಬಲ, ನೆರವು ನೀಡಿದರು. ಒಂದು ವೇಳೆ ಬ್ರಿಟಿಷರ ವಸಾಹತುಶಾಹಿ ಆಡಳಿತವನ್ನು ನಿರ್ನಾಮ ಮಾಡಬೇಕೆಂದು ಛಲ ತೊಟ್ಟಿದ್ದ ಟಿಪ್ಪುಸುಲ್ತಾನನಿಗೆ ನಿಜಾಮ (ಮತ್ತು ಮರಠರು) ಬೆಂಬಲ ನೀಡಿದ್ದರೆ ಕರ್ನಾಟಕದ ಚರಿತ್ರೆ ಬೇರೆ ಒರುತ್ತಿತ್ತೇನೋ! ಟಿಪ್ಪುಸುಲ್ತಾನ ನಿಜಾಮರ ಜತೆ ವೈವಾಹಿಕ ಸಂಬಂಧವನ್ನು ಬೆಳೆಸಲು ಪ್ರಯತ್ನಿಸಿದ. ಅದು ಸಾಧ್ಯವಾಗಲಿಲ್ಲ. ಶಾಹಿರಾಜ್ಯಗಳು ನಾಷವಾದದ್ದು ಅದೇ ಇಸ್ಲಾಮ್ ಧರ್ಮದ ಮೊಗಲ್ ಔರಂಗಜೇಬನಿಂದ. ಇಲ್ಲೂ ಅದು ಮರಕಳಿಸಿದಂತಾಯಿತು. ಅಧಿಕಾರ ದಾಹಕ್ಕೆ ಧರ್ಮ ಅಡ್ಡಿಬರುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಬ್ರಿಟಿಷರ ‘ಸಹಾಯಕ ಸೈನ್ಯ ಪದ್ಧತಿ’ಯನ್ನು ಮೊದಲು ಒಪ್ಪಿಕೊಂಡವನೇ ನಿಜಾಮನು. ಟಿಪ್ಪುವಿನ ಅಧೀನದಲ್ಲಿದ್ದ ಪ್ರದೇಶಕ್ಕೆ ಬಳ್ಳಾರಿಯನ್ನು ಸೇರಿಸಿ ಅದನ್ನೆಲ್ಲ ಮದ್ರಾಸ್ ಪ್ರಾಂತಕ್ಕೆ ಒಳಪಡಿಸಿದರು. ೧೮೧೮ರಲ್ಲಿ ಪೇಶ್ವೆಗಳು ಆಳ್ವಿಕೆಯನ್ನು ಮುಕ್ತಾಯಗೊಳಿಸಿದ ಬ್ರಿಟಿಷರು, ಅವರ ಅಧೀನದ ಪ್ರದೇಶಗಳನ್ನು ಮುಂಬೈ ಪ್ರಾಂತಕ್ಕೆ ಸೇರಿಸಿದರು. ಕೆಲವು ಚಿಕ್ಕ ಚಿಕ್ಕ ಸಂಸ್ಥಾನಗಳಲ್ಲಿ ಪೇಶ್ವೆಮನೆತನದವರಿಗೆ ಅಧಿಕಾರ ನೀಡಿದನು. ನಿಜಾಮನ ಸಂಸ್ಥಾನದಲ್ಲಿ ಕೊನೆಗೆ ಕರ್ನಾಟಕದ ಬೀದರ, ಗುಲಬರ್ಗಾ ಮತ್ತು ರಾಯಚೂರು ಜಿಲ್ಲಾ ಪ್ರದೇಶಗಳು ಸೇರಿಕೊಂಡಿದ್ದವು. ದಕ್ಷಿಣದ ಮೈಸೂರು ಸಂಸ್ಥಾನ ಸೇರಿದಂತೆ ಕರ್ನಾಟಕವನ್ನು ೨೦ಕ್ಕೂ ಹೆಚ್ಚು ಭಾಗಗಳನ್ನಾಗಿ ಮಾಡಿ, ಒಡೆದು ಆಳುವ ನೀತಿಯನ್ನು ಬ್ರಿಟಿಷರು ವ್ಯವಸ್ಥಿತವಾಗಿ ಮಾಡಿದರು. ಮೈಸೂರು ಸಂಸ್ಥಾನದಲ್ಲಿ ಮಾತ್ರ ಕನ್ನಡ ಭಾಷೆಗೆ ಉತ್ತಮ ಸ್ಥಾನವಿತ್ತು. ನಿಜಾಮ ಪ್ರಾಂತದಲ್ಲಂತೂ ಉರ್ದು ಭಾಷೆಗೆ ಹೆಚ್ಚಿನ ಸ್ಥಾನ ದೊರೆಯಿತು. ಉಳಿದ ಸಂಸ್ಥಾನಗಳಲ್ಲಿ ಮರಾಠಿ ಆಡಳಿತ ಭಾಷೆಯಾಯಿತು. ಮದ್ರಾಸ್ ಪ್ರಾಂತಕ್ಕೆ ಸೇರಿದ ಬಳ್ಳಾರಿಯಲ್ಲಿ ತೆಲುಗಿಗೆ ಗೌರವವಿತ್ತು.

ಅನುಭಾವಿಗಳತತ್ವಪದಕಾರರ ಚಳುವಳಿ

ಆದಿಲ್ ಶಾಹಿಗಳ ಆಳ್ವಿಕೆ ನಿಂತುಹೋದ ಮೇಲೆ ಈ ಪ್ರಾಂತದಲ್ಲಿ ಅರಾಜಕತೆ ಹುಟ್ಟಿ ಕೊಂಡಿತಷ್ಟೆ. ಯಾವುದೇ ಪ್ರಮುಖ ಧರ್ಮ ಜನಸಮುದಾಯಗಳನ್ನು ಮುನ್ನಡೆಸುವಷ್ಟು ಕ್ರಿಯಾಶೀಲವಾಗಿರಲಿಲ್ಲ. ಶಾಹಿರಾಜ್ಯಗಳ ಆಳ್ವಿಕೆಯಲ್ಲಿ ಬ್ರಾಹ್ಮಣರಾಗಲಿ, ಲಿಂಗಾಯತರಾಗಲಿ ತಮ್ಮ ತಮ್ಮ ನಿರ್ದಿಷ್ಟ ವಲಯದೊಳಗೆ ಸಂಪ್ರದಾಯಗಳೊಂದಿಗೆ ಬದುಕುತ್ತಿದ್ದರು. ಇಸ್ಲಾಮ್ ಧರ್ಮವು ಕ್ರಿಯಾಶೀಲವಾಗಿದ್ದರೂ ಅದಕ್ಕೂ ಕೆಲವು ಮಿತಿಗಳು ಇದ್ದವು. ಪ್ರಮುಖ ಧರ್ಮಗಳು ಈ ಕಾಲಾವಧಿಯಲ್ಲಿ ಜಡವಾಗಿದ್ದವು ಎಂದೇ ಕಾಣುತ್ತದೆ. ಆದರೆ ಕೆಲವು ಪಂಥಗಳು ಚುರುಕಾಗಿದ್ದವು. ಇದಕ್ಕೆ ಕಾರಣವೆಂದರೆ ಈ ಪಂಥಗಳ ವ್ಯಕ್ತಿಗಳು ಬಡವರನ್ನು, ಕೆಳವರ್ಗದವರನ್ನು ಆಕರ್ಷಿಸಿದ್ದುದು. ಈ ಪಂಥಗಳ ವ್ಯಕ್ತಿಗಳು ಸೂಫಿಗಳು, ಅವಧೂತರು, ಆರೂಢರು, ಸಿದ್ಧರು ಆಗಿದ್ದರು. ಆದಿಲ್ ಶಾಹಿಗಳ ಆಳ್ವಿಕೆ ಕೊನೆಗೊಂಡ ಕಾಲಕ್ಕೆ ಸೂಫಿಗಳ ಪ್ರಭಾವ ಇಳಿಮುಖವಾಗಿತ್ತು. ಇದ್ದವರೆಲ್ಲ ಪ್ರಭುತ್ವದ ಜತೆ ಗುರುತಿಸಿಕೊಂಡು ಆಸ್ತಿವಂತರಾಗಿ ಸಾಂಸ್ಥಿಕಗೊಂಡಿದ್ದರು. ಆದರೂ ಸೂಫಿಸಂತರ ದರ್ಗಾಗಳು ಕೆಳವರ್ಗದವರ (ಪಿಂಜಾರರು, ಜಾತಿಗಾರರು, ಕಲಾಯಿಗಾರರು ಮತ್ತು ಮುಸ್ಲಿಮೇತರರಾದ ದಲಿತರು) ಆರಾಧನ ಕೇಂದ್ರಗಳಾಗಿ ಜೀವಂತಿಕೆಯಿಂದಿದ್ದವು.

ಯೌಗಿಕ ಪಂಥಗಳ ಅವಧೂತರು, ಆರೂಢರು, ಸಿದ್ಧರು, ನಾಥರು ಎಂದು ಕರೆಸಿಕೊಳ್ಳುವ ಸಂತರು, ಅನುಭಾವಿಗಳು ೧೭-೧೯ನೇ ಶತಮಾನದಲ್ಲಿ ತಮ್ಮ ಅನುಭಾವಿಕ ವ್ಯಕ್ತಿತ್ವದಿಂದಲೇ ಜನಸಾಮಾನ್ಯರನ್ನು ಆಕರ್ಷಿಸಿದರು. ಸಮಾಜದಲ್ಲಿ ತುಂಬಿದ್ದ ಅರಾಜಕತೆಯನ್ನು ಕಮ್ಮಿ ಮಾಡಲು ಇವರು ಪರೋಕ್ಷವಾಗಿ ಕಾರಣರಾದರು. ಹಾಗೆ ನೋಡಿದರೆ ಈ ಸಂತ ಪರಂಪರೆಯವರು ವ್ಯಕ್ತಿಗತವಾಗಿ ದೇವರನ್ನು (ತಮ್ಮ ಸಾಧನೆಯಿಂದ ದಕ್ಕಿಸಿಕೊಳ್ಳುವ ಅನುಭಾವಿಕ ಶಕ್ತಿ) ಸಾಕ್ಷಾತ್ಕರಿಸಿಕೊಳ್ಳಬಹುದೆಂದು ನಂಬಿದವರು. ಅಂಥ ಅನುಭವಕ್ಕಾಗಿ ಬೇಕಾಗುವ ತನ್ಮಯತೆಯನ್ನು ಪಡೆಯಲು ಲೌಕಿಕದ ಕಟ್ಟೂಪಾಡುಗಳನ್ನು ಬದಿಗೊತ್ತಿ ತಮ್ಮ ‘ಒಳದನಿ’ಗೆ ಮಾತ್ರ ಓಗೊಡುವ ಸ್ಥಿತಿಗೆ ಬದ್ಧರಾದವರು. ತಾವು ಸಾಧನೆಯಿಂದ ದಕ್ಕಿಸಿಕೊಳ್ಳುವ ಅನುಭಾವಿಕ ಶಕ್ತಿಗೆ ಶರಣಾಗಿ, ಅದರ ಜತೆ ಮೌನ ಸಂಧಾನವನ್ನು ನಿರಂತರವಾಗಿ ನಡೆಸಿ ಅನುಭಾವದ ಆಂತ್ಯಂತ್ಮಿಕ ಗತಿಗೆ ಯತ್ನಿಸಿದವರು. ತಮ್ಮ ಸಾಧನೆಗೆ ಆರಂಭದಲ್ಲಿ ಗುರುವಿನ ನೆರವನ್ನು ಉತ್ಕಟವಾಗಿ ಬಯಸಿದವರು. ವ್ಯಕ್ತಿಗತವಾಗಿ ತಮ್ಮ ಆತ್ಮೋನ್ನತಿಗಾಗಿ ಧ್ಯಾನ, ಯೋಗದಲ್ಲಿ ನಿರತರಾಗಿ ಲೈಕಿಕದ ವ್ಯಾಮೋಹವನ್ನು ಕಳೆದುಕೊಂಡು ಯೋಗಿಗಳಾದವರು. ಇಂಥ ಯೋಗಿಗಳು ಯಾವುದೇ ‘ಧರ್ಮ’ವನ್ನು ಪ್ರತಿಪಾದಿಸಲಿಲ್ಲ. ಅವರು ಯಾವುದೋ ಜಾತಿಯಲ್ಲಿ ಹುಟ್ಟಿರಬಹುದು. ಆ ಜಾತಿ-ಧರ್ಮವನ್ನು ಅವರು ಪ್ರಚಾರ ಮಾಡುವ ಯಾವುದೇ ಕೆಲಸಕ್ಕೆ ಕೈಹಾಕಲಿಲ್ಲ. ಅಧಿಕಾರ, ಸಂಪತ್ತು, ಭೋಗವನ್ನು ಖಂಡಿಸಿದರು. ಮತ್ತು ಅಂಥ ‘ವ್ಯವಸ್ಥೆ’ ಯನ್ನು ತಮ್ಮ ಅನುಭಾವದಿಂದ ನಿಯಂತ್ರಿಸಿದರು. ಯೌಗಿಕ ಪಂಥದ ಈ ಅನುಭಾವಿಗಳು ‘ಗುರು-ಶಿಷ್ಯ’ ಸಂಪ್ರದಾಯದವರು. ವೀರಶೈವ ಧರ್ಮದಲ್ಲಿ ಲಿಂಗದೀಕ್ಷೆ ಸಂಪ್ರದಾಯವಿದ್ದು ಅದೂ ಗುರುವಿನಿಂದಲೇ ನಡೆಯುತ್ತದೆ. ಗುರು ಅಂದರೆ ಇಲ್ಲಿ ಜಂಗಮ. ಈ ಜಂಗಮವೇನೂ ನಿಜವಾದ ಅರ್ಥದಲ್ಲಿ ಜಂಗಮನಾಗಿ ಜಾತ್ಯಾತೀತನಾಗಿರುವುದಿಲ್ಲ. ಲಿಂಗವಂತನಾಗಿದ್ದು ಅವರಲ್ಲೆ ಗುರುಸ್ಥಾನವನ್ನು ಪಡೆದಿರುತ್ತಾನಷ್ಟೆ. ಯೌಗಿಕ ಪಂಥಗಳ ಅನುಭಾವಿಗಳು ಜಾತ್ಯಾತೀತ ಗುರುವನ್ನು ಶ್ರಮವಿಹಿಸಿ ಹುಡುಕಿ ಪಡೆದುಕೊಳ್ಳುತ್ತಾರೆ. ಗುರು ಯಾವುದೋ ಜಾತಿಗೆ ಸೇರಿದ್ದರೂ ಯೋಗ್ಯತೆಯೇ ಇಲ್ಲಿ ಮಾನದಂಡವಾಗುತ್ತದೆ. ಈ ಪ್ರಾಂತದ ಬಹುತೇಕ ಮುಸ್ಲಿಮ ತತ್ವಪದಕಾರರಿಗೆ ಮುಸ್ಲಿಮೇತರರೇ ಗುರುಗಳಾಗಿದ್ದರೆ. ಈ ದೃಷ್ಟಿಯಿಂದ ಅನುಭಾವಿಗಳು ಜಾತ್ಯಾತೀತರಾಗಿರುತ್ತಾರೆ. ಅಂಥ ಅನನ್ಯ ನಿಲವನ್ನು ಹೊಂದಿದ್ದ ಸಂತರನ್ನು ಬಡವರು, ದಲಿತರು, ಕೆಳವರ್ಗದವರು ತಮ್ಮ ಅನೇಕ ಬಂಧನಗಳಿಂದ ಕಳಚಿಕೊಳ್ಳಲು ಬೆನ್ನುಹತ್ತಿದರು. ಹರಿದಾಸರಿಗೆ ಈ ಮಾತನ್ನು ಅನ್ವಯಿಸುವುದು ಕಷ್ಟವಾಗುತ್ತದೆ.

ಇಂಥವರ ಪರಂಪರೆಗೆ ಸೇರಿದವರಲ್ಲಿ ಅನೇಕರು ಹಾಡುಗಳನ್ನು ಕಟ್ಟಿದವರಿದ್ದಾರೆ. ಅವರನ್ನು ತತ್ವಪದಕಾರರು ಎಂದು, ಅವರ ಹಾಡುಗಳನ್ನು ತತ್ವಪದಗಳೆಂದು ಕರೆಯಲಾಗುತ್ತಿದೆ. ಈ ಪ್ರಾಂತದಲ್ಲಿ ವಚನ ಸಾಹಿತ್ಯಕ್ಕಿಂತ, ಹೆಚ್ಚು ಜನಪ್ರಿಯವಾದದ್ದು ಈ ತತ್ವಪದ ಸಾಹಿತ್ಯವೇ. ಯಾಕೆಂದರೆ ತತ್ವಪದಗಳು ಸಮುದಾಯ ರಚನೆಗಳಾಗಿ ಪರಿಣಮಿಸಿದವು. ೧೮ ರಿಂದ ೨೦ನೇ ಶತಮಾನದ ಮಧ್ಯಭಾಗದವರೆಗೆ ಈ ಪ್ರಾಂತದಲ್ಲಿ ಜನಸಮುದಾಯಗಳ ನಾಲಿಗೆ ಮೇಲೆ ಇದ್ದದ್ದು ಈ ತತ್ವಪದಗಳು ಮತ್ತು ದಾಸರ ಹಾಡುಗಳು ಮಾತ್ರ. (ದಾಸರ ಪದಗಳು ಬ್ರಾಹ್ಮಣರ ಒಲಯದಲ್ಲಿ ಮಾತ್ರ ಇದ್ದವು) ೧೨ನೇ ಶತಮಾನದ ವಚನಗಳು ಲಿಂಗಾಯತರ ಮನೆ, ಮಠಮಾನ್ಯಗಳನ್ನು ಸೇರಿದ್ದವು. ೧೫ನೇ ಶತಮಾನದ ಕೊಡೇಕಲ್ಲು ಸಾಹಿತ್ಯ, ಅದು ರಚನೆಯದರೂ ಜನರಿಗೆ ಲಭ್ಯವಾಗುತ್ತಿರಲಿಲ್ಲ. ಗುಪ್ತವಾಗಿಡುವ ಒತ್ತಡಕ್ಕೆ ಒಳಗಾಗಿತ್ತು. ನಂತರ ಪೆಟ್ಟಿಗೆಗೆ ಸೇರಿಬಿಟ್ಟಿತ್ತು. ಕೊಡೇಕಲ್ಲು ಬಸವಣ್ಣನ ಜಾತ್ರೆಯಲ್ಲಿ ಜಾತ್ರೆಯ ಒಂದು ದಿನ, ಒಂದು ನುಡಿಯನ್ನು ತೆಗೆದು ಓದಿ ಪುನಃ ಪೆಟ್ಟಿಗೆಗೆ ಸೇರಿಸುತ್ತಿದ್ದರು. ಆದರೆ ೧೮ನೇ ಶತಮಾನದಿಂದ ೨೦ನೇ ಶತಮಾನದ ಆದಿ ಭಾಗದವರೆಗೂ ರಚನೆಯಾದ ತತ್ವಪದಗಳು ಮಾತ್ರ ಮೂರು ಶತಮಾನಗಳಿಂದ ನಿರಂತರವಾಗಿ ಜನಸಮುದಾಯಗಳ ಬದುಕಿನ ಹಾಡಾಗಿ ಹರಿಯುತ್ತ ಬಂದಿವೆ. ‘ಹಳ್ಳಿಹಳ್ಳಿಗಳಲ್ಲಿ ತತ್ವಪದಗಳ ಹಾಡು, ತಂಬೂರಿನ ನಾದ ಬತ್ತಿದ ದಿನಗಳಿಲ್ಲ’ ಎಂಬ ಹಿರಿಯರ ಮಾತಿನಲ್ಲಿ ಉತ್ಪ್ರೇಕ್ಷೆಯಿಲ್ಲ. ಈ ಪ್ರಾಂತದ ಹಿರಿಯ ಸಾಹಿತಿ ಸಿದ್ಧಯ್ಯ ಪುರಾಣಿಕರು ‘ಆಧುನಿಕ ವಚನ’ಗಳನ್ನು ಬರೆದಿರುವವರಾದರೂ, ಅವರೇ ಹೇಳಿಕೊಂಡಂತೆ (ಆತ್ಮ ಚರಿತ್ರೆಯಲ್ಲಿ ) ತಮ್ಮ ಮನೆಪರಿಸರದಲ್ಲಿ ನಿಜಗುಣ ಶಿವಯೋಗಿ, ಮಹಾಂತ ಶಿವಯೋಗಿ, ಸರ್ಪಭೂಷಣ ಶಿವಯೋಗಿ, ಘನಮಠದ ಶಿವಯೋಗಿ ಮುಂತಾದವರ ಹಾಡುಗಳನ್ನು ಹಾಡುತ್ತಿದ್ದರಂತೆ. ಶಾಂತರಸರ ಬಾಲ್ಯದಲ್ಲಿ, ಅವರ ಮನೆಗಳಲ್ಲಿ ತತ್ವಪದಗಳ ಚರ್ಚಾಗೋಷ್ಠಿ (ವಿಚಾರಕ್ಕೆ ಹಾಕುವುದು)ಗಳು ಬೆಳಗಾಗುವವರೆಗೆ ನಡೆಯುತ್ತಿದ್ದವಂತೆ. ‘ತತ್ವಪದಗಳೇ ನಾನು ಕಲಿತ ಕನ್ನಡ ಮೊದಲ ಪಾಠ’

[1] ಎಂದು ದೇವೇಂದ್ರಕುಮಾರ ಹಕಾರಿ ಹೇಳಿಕೊಂಡಿದ್ದಾರೆ. ‘ಅಮ್ಮನಿಗೆ ನಿಜಗುಣ, ಕೂಡಲೂರೇಶ, ಸಪ್ಪಣ್ಣಪ್ಪ ಇವರ ಹಾಡುಗಳು ನಾಲಿಗೆಯ ಮೇಲಿದ್ದವು.’[2] ಎಂದು ಶೈಲಜಾ ಉಡಚಣ ಹೇಳಿದ್ದಾರೆ. ೧೮ನೇ ಶತಮಾನದಿಂದ ಆರಂಭವಾದ ಈ ಸಾಹಿತ್ಯವನ್ನು ಕಟ್ಟಿದವರಲ್ಲಿ ರಾಮಪುರದ ಬಕ್ಕಪ್ಪಯ್ಯ, ಕೂಡಲೂರು ಬಸವಲಿಂಗಪ್ಪ, ಈ ಸಾಹಿತ್ಯವನ್ನು ಮಡಿವಾಳಪ್ಪ, ಮೊಟ್ನಹಳ್ಳಿ ಹಸನನಾಬ, ನೀರಲಕೇರಿ ಬಸವಲಿಂಗಪ್ಪ, ನಿಡುವಂಚಿ ಭದ್ರೇಶ್ವರ ಮಂತಾದ ನೂರಾರು ಸಂತರಿದ್ದಾರೆ. ಇವರ ಹಾಡುಗಳನ್ನು ಹಾಡುವವರು ಹಳ್ಳಿಹಳ್ಳಿಗಳಲ್ಲಿ ತುಂಬಿದ್ದಾರೆ. ಜನಸಮುದಾಯವೇ ಈ ತತ್ವಪದಗಳನ್ನು ಈ ಒಡಲಲ್ಲಿಟ್ಟುಕೊಂಡು ಪೋಷಿಸುತ್ತ ಬಂದಿದೆ. ಕಳೆದ ಒಂದೂವರೆ ದಶಕದಿಂದ ಈ ಸಾಹುತ್ಯವನ್ನು ಸಂಗ್ರಹಿಸಿ ಪ್ರಕಟಿಸಲಾಗುತ್ತಿದೆ. ಇಂಥ ಚಳುವಳಿಯೂ ನಡೆದದ್ದು ಈ ಪ್ರಾಂತದಲ್ಲಿಯೇ.

೧೩ನೇ ಶತಮಾನದಲ್ಲಿ ಹರಿದಾಸರು ಈ ಪ್ರಾಂತದಲ್ಲಿ ಕಾಣಿಸಿಕೊಂಡರು. ದ್ವೈತ ತತ್ವದ ಮಧ್ವಾಚಾರ್ಯ ಶಿಷ್ಯ ಬಳಗದ ನರಹರಿತೀರ್ಥನೇ ಹರಿದಾಸ ಸಾಹಿತ್ಯ ಪರಂಪರೆಗೆ ಮೊದಲಿಗನಾದ. ಮಧ್ವಾಚಾರ್ಯ, ಶ್ರೀಪಾದರಾಯ, ವ್ಯಾಸರಾಯ ಇವರೆಲ್ಲ ಮಠಾದಿಪತಿಗಳಾಗಿದ್ದರು. ಬಹಳ ಪ್ರಮುಖರಾಗಿ ಪುರಂದರದಾಸ, ಕನಕದಾಸ ಹರಿದಾಸ ಸಾಹಿತ್ಯಕ್ಕೆ ಬಹು ಆಯಾಮಗಳನ್ನು ಕಲ್ಪಿಸಿದರು. ವಿಜಯನಗರ ಪತನವಾದ ಬಳಿಕ ರಾಯಚೂರು ಜಿಲ್ಲಾ ಪ್ರದೇಶದಲ್ಲಿ ಹರಿದಾಸರು ಹುಟ್ಟಿದರು. ೩ನೇ ಹಂತದಲ್ಲಿ ಈ ಸಾಹಿತ್ಯಕ್ಕೆ ಕಾರಣರಾದ ವಿಜಯದಾಸ, ಗೋಪಾಲದಾಸ, ಜಗನ್ನಾಥದಾಸರು ರಾಯಚೂರು ಜಿಲ್ಲೆಗೆ ಸೇರಿದವರಾಗಿದ್ದಾರೆ. ಹಾಗೆ ನೋಡಿದರೆ ತುಂಗಭದ್ರ – ಕೃಷ್ಣಾ ನದಿಗಳ ನಡುವಣ ಪ್ರದೇಶದಲ್ಲಿ ಪ್ರಮುಖ ದಾಸರು ಕಾಣಿಸಿಕೊಂಡರು. ಕೃಷ್ಣಾನದಿ ಮೇಲುಗಡೆಗೆ ಗುಲಬರ್ಗಾ, ಬೀದರ ಜಿಲ್ಲಾ ಪ್ರದೇಶದಲ್ಲಿ ದಾಸರು ಕಾಣಿಸಿಕೊಳ್ಳಲಿಲ್ಲ. (ತತ್ವಪದಕಾರರು ಈ ಭಾಗದಲ್ಲಿ ಹೆಚ್ಚಿಗೆ ಕಾಣಿಸಿಕೊಂಡರು) ಇದಕ್ಕೆ ರಾಜಕೀಯ, ಧಾರ್ಮಿಕ ಕಾರಣಗಳಿವೆ. ಸುರಪುರದ ಆನಂದದಾಸ, ಶಾಮಸುಂದರದಾಸ, ಪ್ರಾಣೇಶದಾಸ, ರಾಮದಾಸ (ಪಿಂಜಾರ ಕುಟುಂಬದಲ್ಲಿ ಹುಟ್ಟಿದ ಬಡೇ ಸಾಬನು) ಮುಂತಾದ ಅನೇಕ ದಾಸರು ಈ ಪ್ರಾಂತಕ್ಕೆ ಸೇರಿದವರು. ವೈದಿಕ ಪರಿಸರದಲ್ಲಿ ಈ ದಾಸರು ಹೆಚ್ಚು ಮನ್ನಣೆ ಪಡೆದರು. ಆದರೆ ಈ ದಾಸರು ಸರಳ, ಸಾತ್ವಿಕ ಜೀವನ ಕ್ರಮದಿಂದ ಜನರ ಮೇಲೆ ಪ್ರಭಾವ ಬೀರಿದರು.

ಕೃಷ್ಣನನ್ನ ಆರಾಧಿಸುವ ಭಾಗವತ ಪಂಥಕ್ಕೆ ಸೇರಿರುವ ಕುಮಾರವ್ಯಾಸ, ಲಕ್ಷ್ಮೀಶ ಇಬ್ಬರೂ ಪ್ರಮುಖ ಜನಪ್ರಿಯ ಕವಿಗಳು. ಇಬ್ಬರು ಕಾಲವನ್ನು ಸುಮಾರು ೧೪ – ೧೫ನೇ ಶತಮಾನವೆಂದು ಗುರುತಿಸಲಾಗಿದೆ. ಕೃಷ್ಣಾನದಿಯ ಕೆಳಗಡೆ ತಿರುಳ್ಗನ್ನಡ ನಾಡಿನ ಗದಗಿನಲ್ಲಿ ಕುಮಾರವ್ಯಾಸ ಹುಟ್ಟಿದರೆ, ಕೃಷ್ಣಾನದಿ ಮೇಲುಗಡೆ ಸುರಪುರ ತಾಲೂಕಿನ ದೇವಪುರದಲ್ಲಿ ಲಕ್ಷ್ಮೀಶ ಹುಟ್ಟಿದ್ದಾನೆ. ವಿದ್ಯುತ್ ಪರಂಪರೆ ಮತ್ತು ಜಾನಪದ ಪರಂಪರೆಯನ್ನು ಮೇಳೈಸಿಕೊಂಡು ಕುಮಾರವ್ಯಾಸ ತನ್ನ ‘ಗದುಗಿನ ಭಾರತ’ವನ್ನು ಬರೆದಿದ್ದಾನೆ. ಓದುವ ವಿದ್ವಾಂಸರಿಗೂ ಈ ಕಾವ್ಯ ಪ್ರಿಯವಾಗುತ್ತದೆ. ಕೇಳುವ ಜನಪದರಿಗೂ ಈ ಕಾವ್ಯ ಪ್ರಿಯವಾಗುತ್ತದೆ. ಓದುವ ವಿದ್ವಾಂಸರು ‘ಗದುಗಿನ ಭಾರತ’ ವನ್ನು ಕೇವಲ ಓದಿ ಆಸ್ವಾದಿಸಲೂ ಸಾಧ್ಯವಿಲ್ಲ. ಅದನ್ನು ಕೇಳುವ ಮೂಲಕವೆ ಆಸ್ವಾದಿಸಬೇಕು. ಅಂಥ ಅನನ್ಯ ಕಾವ್ಯವನ್ನು ಕುಮಾರವ್ಯಾಸ ಕಟ್ಟಿದ್ದಾನೆ. ಕೃಷ್ಣ ಭಕ್ತನಾದ ಲಕ್ಷ್ಮೀಶನ ‘ಜೈಮಿನಿ ಭಾರತ’ವು ಈ ಪ್ರಾಂತದಲ್ಲಿ ಅತ್ಯಂತ ಜನಪ್ರಿಯ ಕಾವ್ಯವಾಗಿದೆ. ಸ್ವಾತಂತ್ರ್ಯಾಪೂರ್ವದಲ್ಲಿ ‘ಜೈಮಿನಿ ಭಾರತ ಓದಿದವರು ಉನ್ನತ ಪದವಿಧರರು’ ಎಂಬ ಖ್ಯಾತಿಗೆ ಒಳಗಾಗುತ್ತಿದ್ದರು. ಇದು ಲಿಖಿತ ಕಾವ್ಯವಾದರೂ, ಇದನ್ನು ಕಂಠಪಾಠ ಮಾಡುತ್ತಿದ್ದರು. ಲಿಂಗಾಯತ ಮಠಮಾನ್ಯ ಪರಿಸರದಲ್ಲಿಯೂ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ‘ಜೈಮಿನಿ ಭಾರತ’ ಕಡ್ಡಾಯವಾಗಿತ್ತು. ವಿಚಿತ್ರವೆಂದರೆ ಅಯ್ಯನವರ ಶಾಲೆಗಳಲ್ಲಿ ‘ವೀರಶೈವ ಕಾವ್ಯ’ಗಳಾದ ‘ಪ್ರಭುಲಿಂಗ ಲೀಲೆ’, ‘ಶೂನ್ಯ ಸಂಪಾದನೆ’, ‘ಬಸವ ಪುರಾಣ’ ಮುಂತಾದ ಕಾವ್ಯಗಳನ್ನು ಪಠ್ಯವಾಗಿ ಓದಿಸುತ್ತಿದ್ದರೂ ‘ಜೈಮಿನಿ ಭಾರತ’ ವನ್ನು ವಿಶೇಷವಾಗಿ ಓದಿಸುತ್ತಿದ್ದರು. ೧೨ನೇ ಶತಮಾನದಿಂದ ಮೌಖಿಕ ಸಾಹಿತ್ಯ ಪರಂಪರೆ ಬಲವಾಗಿ ಬೆಳೆಯಿತಷ್ಟೆ. ‘ಕೇಳುವ’ ಕ್ರಿಯೆ ಹೆಚ್ಚಾಗಿದ್ದ ಕಾಲದಲ್ಲಿ ಕುಮಾರವ್ಯಾಸ, ಲಕ್ಷ್ಮೀಶರು ಲಿಖಿತಕಾವ್ಯ ರಚಿಸಿದರೂ ಈ ಎರಡು ಕಾವ್ಯಗಳನ್ನು ಜನ ‘ಕೇಳುವ’ ಕಾವ್ಯಗಳನ್ನಾಗಿಯೇ ಸ್ವೀಕರಿಸಿದ್ದಾರೆ. ಯಾಕೆಂದರೆ ‘ಜೈಮಿನಿ ಭಾರತ’ ವನ್ನು ಓದಿ ಕಂಠಪಾಠ ಮಾಡುತ್ತಿದ್ದರು. ‘ಗದುಗಿನ ಭಾರತ’ ಕೇಳಿದರೆ ಸಾಕು ಮನಸ್ಸಿನಲ್ಲಿ ನೆಲೆಗೊಳ್ಳುತ್ತಿತ್ತು. ೧೩ನೇ ಶತಮಾನದಿಂದ ಈ ಪ್ರಾಂತದಲ್ಲಿ ಬಹುಭಾಷೆ – ಸಂಸ್ಕೃತಿಗಳ ‘ಸಂಕರ ಸಂಸ್ಕೃತಿ’ ಬೆಳೆದ ಮೇಲೆ, ಕನ್ನಡ ಭಾಷೆ ಹಿನ್ನೆಲೆಗೆ ಸರಿದ ಮೇಲೆ ಲಿಖಿತ ಸಾಹಿತ್ಯ ಪರಂಪರೆ ನಿಂತುಹೋಯಿತು. ಲಿಖಿತ ಸಾಹಿತ್ಯ ರಚನೆ ಮತ್ತು ಅದನ್ನು ಓದುವ ಪರಂಪರೆ ಎರಡೂ ಆತಂಕ ಸ್ಥಿತಿಯಲ್ಲಿದ್ದಾಗ ಸಹಜವಾಗಿ ‘ಕೇಳುವ’ ಮತ್ತು ‘ನೋಡುವ’ ಪರಂಪರೆಯನ್ನು ಜನಸಮುದಾಯಗಳು ರೂಢಿಸಿಕೊಂಡವು. ಕನ್ನಡದ ಬಳಕೆ ಸಾಹಿತ್ಯ ರಚನೆಯಲ್ಲಿ ಕುಂಠಿತವಾದಾಗ, ಬಾಯಿಮಾತಿನಲ್ಲಿದ್ದ ಕನ್ನಡ ‘ಮೌಖಿಕ ಸಾಹಿತ್ಯ’ ರಚನೆಗೆ ಬಳಕೆಯಾಗುತ್ತಿತ್ತು. ಜನಸಮುದಾಯಗಳು ಸಾಹಿತ್ಯವನ್ನು ಓದುವುದನ್ನು ಬಿಟ್ಟು, ಕೇಳುವ, ನೋಡುವ ಕಡೆ ಒಲಿದರು. ಹಾಗೆ ನೋಡಿದರೆ ಸಾಹಿತ್ಯರಂಭದಿಂದಲೂ ಜನರು ಕೇಳುವ, ನೋಡುವ ಕಡೆಗೆ ಸಾಹಿತ್ಯವನ್ನು ಒಳಗುಮಾಡಿತ್ತು. (ಕೇಳುವ = ದಾಸರ ಹಾಡು, ತತ್ವಪದ, ಲಾವಣಿ, ಗೀಗೀ ಪದ ಮುಂತಾದ ಸಾಹಿತ್ಯವನ್ನು ಕೇಳುವುದು. ಇದರಲ್ಲಿ ಅಭಿನಯವೂ ಸೇರುವುದರಿಂದ ನೋಡುವುದೂ ಇದೆ. ನೋಡುವ = ದೊಡ್ಡಾಟ, ಸಣ್ಣಾಟ, ಗೊಂದಲಿಗರ ಆಟ ಮುಂತಾದ ಪ್ರದರ್ಶನ ಕಲೆಗಳು.)

ವಚನಕಾರರು, ಕೊಡೇಕಲ್ಲು ಪರಿವಾರದವರು, ದಾಸರು ಮತ್ತು ತತ್ವಪದಕಾರರು ಎಲ್ಲರೂ ಮೌಖಿಕ ಪರಂಪರೆಗೆ ಸೇರಿದವರು. ೧೨ನೇ ಶತಮಾನದಿಂದಲೇ ಲಿಖಿತ ಸಾಹಿತ್ಯ ಪರಂಪರೆ ಈ ಪ್ರಾಂತದಲ್ಲಿ ಕಮ್ಮಿಯಾಯಿತು. ನಿಂತೇ ಹೋಯಿತು ಎಂದರೆ ತಪ್ಪಿಲ್ಲ. ವಚನಗಳನ್ನು ೧೫ನೇ ಶತಮಾನದಲ್ಲಿ ಸಂಕಲಿಸಲಾಯಿತಷ್ಟೆ. ಅದರೆ ಅವು ಜನರ ಓದಿಗೆ ಸಿಕ್ಕಿದ್ದು ೨೦ನೇ ಶತಮಾನದಲ್ಲಿ. ಕೊಡೇಕಲ್ಲು ಸಾಹಿತ್ಯ ಮೌಖಿಕವಾಗಿದ್ದುದು ಯಾಕೋ ಲಿಖಿತಕ್ಕೆ ಸೇರಿತು. ಲಿಖಿತಕ್ಕೆ ಸೇರಿದ್ದಷ್ಟೇ ಅಲ್ಲದೆ ಪೆಟ್ಟಿಗೆಯನ್ನು ಸೇರಿತೇ ಹೊರತು ಓದುಗರಿಗೆ ಸಿಗಲಿಲ್ಲ. ಸಿಕ್ಕಿದ್ದು ಸ್ವಲ್ಪಮಟ್ಟಿಗೆ ೨೦ನೇ ಶತಮಾನದ ಕೊನೆಯ ದಶಕದಲ್ಲಿ. ತತ್ವಪದಗಲು ಅವು ಹುಟ್ಟಿಗೊಂಡಂತೆಯೇ ಜನರು ಹಾಡುತ್ತ ಬಂದಿದ್ದಾರೆ. ಈಗ ಅವು ಸಂಗ್ರಹಗೊಂಡು ಅಕ್ಷರ ಮಾಧ್ಯಮದಲ್ಲಿ ಕಾಣಿಸುತ್ತಿವೆ. ಶಾಹಿರಾಜ್ಯಗಳು ಆಳ್ವಿಕೆಗೆ ಬಂದ ಮೇಲೆ ಈ ಪ್ರಾಂತದಲ್ಲಿ ಬಹುಭಾಷೆಗಳ, ಬಹುಸಂಸ್ಕೃತಿಗಳ ಯುಗವೇ ಆರಂಭವಾಯಿತು. ಫಾರಸಿ, ಮರಾಠಿ, ದಖನಿ-ಉರ್ದು ಭಾಷೆಗಳಲ್ಲಿ ಸಾಹುತ್ಯ ರಚನೆಯಾಯಿತು. ಆದರೆ ಕನ್ನಡದಲ್ಲಿ ಸಾಹಿತ್ಯ ರಚನೆ ೧೩ನೇ ಶತಮಾನದಿಂದಲೇ ನಿಂತುಹೋಯಿತು, ೧೮-೧೯ನೇ ಶತಮಾನದಲ್ಲಿ ಸಮಕಾಲೀನ ‘ಮಹಾಪುರುಷ’ ರ ಮೇಲೆ ಮಠಮಾನ್ಯ ಪರಿಸರದಲ್ಲಿ ಪುರಾಣಗಳು ರಚನೆಯಾಗಿವೆ. ಬಸವಪ್ಪಶಾಸ್ತ್ರಿ ಮಸ್ಕಿ (ಶ್ರೀ ನಾಗಭೂಷಣ ಶಿವಯೋಗಿಗಳ ಪುರಾಣ), ಚೆನ್ನಕವಿ ದ್ಯಾಂಪುರ (ಶ್ರೀ ಬಾಲಲೀಲಾ ಮಹಾಂತೇಶ್ವರ ಪುರಾಣ), ಕಲ್ಲಿನಾಥಶಾಸ್ತ್ರಿ ದ್ಯಾಂಪುರ (ಶ್ರೀ ಶರಣಬಸವೇಶ್ವರ ಪುರಾಣ), ಎಂ. ಚಂದ್ರಶೇಖರಶಾಸ್ತ್ರಿ ರಾಯಚೂರು (ಶ್ರೀ ಚರಬಸವೇಶ್ವರ ಪುರಾಣ), ಶಾಂತವೇರಿ ಶಿವಾಚಾರ್ಯಸ್ವಾಮಿ (ಶ್ರೀ ಚೆನ್ನಬಸವಸ್ವಾಮಿ ಪುರಾಣ), ವೆಂಕಯ್ಯ ದಿನ್ನಿ (ಶ್ರೀ ಅಮರೇಶ್ವರ ಪುರಾಣ) ಮುಂತಾದ ಅನೇಕ ಪುರಾಣಕಾರರಿದ್ದಾರೆ. ಕಲ್ಲೂರಿನ ಲಿಂಗಣ್ಣ ಒಡೆಯ (ಬಾರಮಾಸ ಎಂಬ ಕಾವ್ಯ ರಚಿಸಿದವನು) ಗಣೇಕಲ್ಲಿನ ಸಂಗವಿಭು, ಮಾವನೂರು ಚೆನ್ನಬಸವ, ವೀರಭದ್ರ ಕವಿ ಮುಂತಾದವರು ಶತಕ, ಚಂಪೂ, ಷಟ್ಪದಿ ಕಾವ್ಯರೂಪಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಶ್ರೀಕೃಷ್ಣಪಾರಿಜಾತ ನಾಟಕವನ್ನು ರಾಯಚೂರಿಗೆ ಸೇರಿದ ಅಪರಾಳ ತಮ್ಮಣ್ಣ ಬರೆದಿದ್ದಾನೆ. ಇಂತಹ ತಕ್ಕಮಟ್ಟಿನ ಚಟುವಟಿಕೆಗಳನ್ನು ಹೊರತು ಪಡಿಸಿದರೆ ಕನ್ನಡ ಭಾಷೆಯನ್ನು ಬಳಸಿ ಲಿಖಿತರೂಪದಲ್ಲಿ ಯಾವುದೇ ಸಾಹಿತ್ಯ ಚಟುವಟಿಕೆಗಳು ಬಿರುಸಿನಿಂದ ನಡೆದಂತೆ ಕಾಣುವುದಿಲ್ಲ. ಕುತೂಹಲದ ಸಂಗತಿಯೆಂದರೆ ಸಣ್ಣಪುಟ್ಟ ವ್ಯವಹಾರಗಳಲ್ಲಿ ಕನ್ನಡ ಭಾಷೆ ಬಳಕೆಯಾದರೂ ಲಿಪಿ ಮಾತ್ರ ಮೋಡಿಯಲ್ಲಿರುವುದು ರೂಢಿಗೆ ಬಂದು ಸರ್ವೆಸಾಮಾನ್ಯವಾಯಿತು. ಶಾಹಿರಾಜ್ಯಗಳು ಮರಾಠಿ, ದಖನಿ-ಉರ್ದು ಭಾಷೆಯನ್ನು ಸ್ವೀಕರಿಸಿದಂತೆ ಮೋಡಿಲಿಪಿಗೆ ಸ್ಥಾನವನ್ನು ಕೊಟ್ಟವು. ಜನಸಾಮಾನ್ಯರಂತೂ ತಮ್ಮ ನಿತ್ಯ ವ್ಯಾಪಾರ-ವ್ಯವಹಾರಗಳಿಗೆ ಮರಾಠಿ, ದಖನಿ, ಕನ್ನಡ, ತೆಲಗು ಭಾಷೆಗಳನ್ನು ಬಳಸಿದರೂ ಈ ಭಾಷೆಗಳನ್ನು ಮೋಡಿಲಿಪಿಯಲ್ಲಿ ಅಡಗಿಸಿದರು. ಇದರಿಂದ ಕನ್ನಡ ಲಿಖಿತ ಭಾಷೆಯಾಗಿ ಅಭಿವೃದ್ಧಿ ಹೊಂದದೆ ಕೇವಲ ಮೌಖಿಕವಾಗಿ ಚಾಲ್ತಿಯಲ್ಲಿ ಉಳಿಯಿತು. ಲಿಂಗಾಯುತ ಮಠಮಾನ್ಯಗಳ ಪರಿಸರದಲ್ಲಿ ಕನ್ನಡ ಭಾಷೆ ಲಿಖಿತವಾಗಿ ಚಾಲ್ತಿಯಲ್ಲಿತ್ತು. ಅಕ್ಷರ ಕಲಿಕೆ ಮಠಗಳಲ್ಲಿ ನಡೆಯುತ್ತಿತ್ತು. ವ್ಯಾಪಾರಸ್ಥರು, ವ್ಯವಸಾಯಗಾರರು ಮಾತನಾಡುತ್ತಿದ್ದರೆ ಹೊರತು ಅವರಿಗೆ ಕನ್ನಡ ಲಿಪಿಗಳ ಪರಿಚಯ ಮರೆತುಹೋಗಿತ್ತು. ಮೋಡಿ ಲಿಪಿಯಲ್ಲಿ ಬರೆಯುವ ಸಂಪ್ರಾದಯ ಆರಂಭವಾದ ಮೇಲೆ ಕನ್ನಡಕ್ಕೆ ಮತ್ತು ಕನ್ನಡ ಲಿಪಿಗೆ ಈ ಅವಸ್ಥೆ ಒದಗಿತು. ವಿಜಾಪುರ, ಬೀದರ, ಗುಲಾಬರ್ಗಾ ಜಿಲ್ಲಾ ಪ್ರದೇಶಗಳಲ್ಲಿ ಲೆಕ್ಕಪತ್ರಗಳ ವ್ಯವಹಾರದಲ್ಲಿ ಮರಾಠಿ ಭಾಷೆಯದರೂ ಲಿಪಿ ಮೋಡಿಯದು. ರಾಯಚೂರು ಜಿಲ್ಲಾಪ್ರದೇಶದ ಕೆಲವು ತಾಲೂಕುಗಳಲ್ಲಿ ಅಂದರೆ ತುಂಗಭದ್ರದಿಂದ ದಕ್ಷಿಣದ ಕಡೆಗೆ ಕನ್ನಡ ಭಾಷೆ ಬಳಸಿದರೂ ಲಿಪಿ ಮೋಡಿಯದು. ಪೇಶ್ವೆಗಳ ರಾಜ್ಯಾಡಾಳಿತದ ಮುಖ್ಯ ದಾಖಲೆಗಳೆಲ್ಲ ಮೋಡಿ ಲಿಪಿಯಲ್ಲಿದ್ದವು ಎಂದರೆ ಈ ಮೋಡಿ ಲಿಪಿ ಎಷ್ಟು ವ್ಯಾಪಾಕವಾಗಿ ಜನಪ್ರಿಯವಾಗಿತ್ತು ಎಂಬುದನ್ನು ಊಹಿಸಬಹುದು. ಕೃಷ್ಣಾ ನದಿಯ ಉತ್ತರದ ಕಡೆಗೆ ಸಿಕ್ಕ ತತ್ವಪದಗಳ ಹಸ್ತಪ್ರತಿಗಳು ಮೋಡಿ ಲಿಪಿಯಲ್ಲಿವೆ.

ಮೋಡಿ ಲಿಪಿಯ ಹುಟ್ಟುಬಳಕೆ

ದೇವಗಿರಿಯ ಯಾದವರ ಕಾಲದಲ್ಲಿ ಈ ಲಿಪಿ ಹುಟ್ಟಿತೆಂದು ಹೇಳುತ್ತಾರೆ. ಹೇಮಾಡಿಪಂಥ ಎಂಬ ಅಧಿಕಾರಿ ಇದನ್ನು ಬಳಕೆಗೆ ತಂದನು. ದೇವನಾಗರಿ ಲಿಪಿಯ ಮರಾಠಿ ಭಾಷೆಯನ್ನು ಲಿಖಿತಕ್ಕೆ ಬಳಸುವಾಗ ಕಷ್ಟವಾಗುತ್ತಿತ್ತು. ಅದನ್ನು ಸುಲಭ ಮತ್ತು ಸರಳಗೊಳಿಸಲು ಮೋಡಿಯ ಲಿಪಿಗಳನ್ನು ಬರಹಕ್ಕೆ ತಂದನು. ಫಾರಸಿ ಭಾಷೆಯನ್ನು ಬೇಗ ಬರೆಯಲು ಶಿಕಸ್ತಾ ಎಂಬ ಲಿಪಿಯನ್ನು ಬಳಸುತ್ತಿದ್ದರಂತೆ. ಅದೇ ಲಿಪಿಯನ್ನು ಮೂಲವಾಗಿಟ್ಟುಕೊಂಡು ಮೋಡಿಲಿಪಿಯನ್ನು ರೂಪಿಸಿದನೆಂದು ಹೇಳುತ್ತಾರೆ. ಇದು ಬಹುಬೇಗ ಜನಪ್ರಿಯವಾಗಿರಬೇಕು. ರಾಜ್ಯಾಡಳಿತಕ್ಕೂ, ಸಾಹಿತ್ಯರಚನೆಗೂ ಮತ್ತು ಜನಸಾಮಾನ್ಯರ ವ್ಯವಹಾರಗಳಿಗೆ ಮೋಡಿಲಿಪಿ ಒಗ್ಗಿಹೋಯಿತೆಂದು ಕಾಣುತ್ತದೆ. ಮೋಡಿ ಎಂಬ ಶಬ್ದಕ್ಕೆ ಬೇರೆ ಅರ್ಥಗಳೂ ಇವೆ. ರಹಸ್ಯ ಕಾಪಾಡುವುದಕ್ಕೆ ಈ ಲಿಪಿ ಹುಟ್ಟಿತೇನೋ ತಿಳಿಯದು. ಅಮರಗನ್ನಡ ಲಿಪಿಯಾಗಲಿ (ಕೊಡೇಕಲ್ಲು) ಮೋಡಿಲಿಪಿಯಾಗಲಿ ಹುಟ್ಟಿಕೊಳ್ಳಲು ಚಾರಿತ್ರಿಕ-ಸಾಂಸ್ಕೃತಿಕ ಒತ್ತಡಗಳು ಇರಲೇಬೇಕು. ಈ ಬಗೆ ಸಂಶೋಧನೆ ನಡೆಯಬೇಕಾಗಿದೆ. ಈ ಪ್ರಾಂತದಲ್ಲಿ ಮೋಡಿಲಿಪಿ ಸಾಮಾನ್ಯರ ಬಳಕೆಗೆ ಗುರಿಯಾಯಿತಷ್ಟೆ. ‘ಮದ್ರಾಸು ಮತ್ತು ಮೈಸೂರು ಸಂಸ್ಥಾನಗಳಲ್ಲಿ ಕಳೆದ ಶತಮಾನದಲ್ಲಿ ಸರಕಾರಿ ಆಡಳಿತ ಪತ್ರವ್ಯವಹಾರವು ಇದೇ ಮೋಡಿ ಲಿಪಿಯಲ್ಲಿ ಇದ್ದದ್ದು ತಿಳಿದು ಬರುತ್ತದೆ. ಈಸ್ಟ್ ಇಂಡಿಯಾ ಕಂಪನಿಯ ಮೊದಲಿನ ಸರಕಾರಿ ಆದೇಶ ಪತ್ರಗಳು ಮೋಡಿಯಲ್ಲೇ ಇದ್ದವು. ಕ್ರಿಶ್ಚಿಯನ್ ಧರ್ಮ ಪ್ರಚಾರಕರು ಮರಾಠಿಯಲ್ಲಿ ಬರೆದ ಮೊದಲಿನ ಪುಸ್ತಕಗಳಲ್ಲಿ ಮೋಡಿ ಲಿಪಿಯಲ್ಲಿವೆ’[3] ದಕ್ಷಿಣ ಕರ್ನಾಟಕದಲ್ಲಿ ಸಂಸ್ಥಾನಗಳ ಆಡಳಿತ ಪತ್ರಗಳಲ್ಲಿ ಮೋಡಿ ಬರವಣಿಗೆ ಕಂಡು ಬರುವುದಕ್ಕೆ ವೈದಿಕರ ವಲಸೆಯೇ ಕಾರಣವಿರಬೇಕು. ಹೈದರಲಿ ಅಧಿಕಾರಕ್ಕೆ ಬಂದಾಗ ಇದು ನಡೆಯಿತು. ‘ಸ್ಥಳೀಯ ಆಡಳಿತವರ್ಗವು ಪದಚ್ಯುತ ಮೈಸೂರಿನ ರಾಜರಿಗೆ ನಿಷ್ಠವಾಗಿದೆಯೆಂಬ ಕಾರಣಕ್ಕಾಗಿ ಅನೇಕ ಮರಾಠಿ ಜನರನ್ನು ಹೈದರಲಿ ಮುಖ್ಯ ಹುದ್ದೆಗಳಿಗೆ ನೇಮಕ ಮಾಡಿದ…. ಉತ್ತರ ಕರ್ನಾಟಕ ಪ್ರದೇಶದಲ್ಲಿ ಪೇಶ್ವೆಯರ ಕಾಲದ ಆಡಳಿತದಲ್ಲಿ ಚಿತ್ಪಾವನರಿಗೆ ಪ್ರಾಶಸ್ತ್ಯ ಬಂದುದರಿಂದ, ಅಲ್ಲಿನ ದೇಶಸ್ಥ ಬ್ರಾಹ್ಮಾಣರನೇಕರು ಇತ್ತ ಮೈಸೂರಿಗೆ ಬಂದರು (ಬಾದಾಮಿ, ಅಣ್ಣಿಗೇರಿ ಕುಟುಂಬಗಳ ಉದಾಹರಣೆಯುಂಟು). ಇದೇ ರೀತಿ ನಿಜಾಮನ ರಾಜ್ಯದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಇದೇ ವರ್ಗದ ಜನ ಮೈಸೂರಿಗೆ ಬಂದರು.’[4] ಇದನ್ನು ಗಮನಿಸಿದರೆ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಈ ಪ್ರಾಂತದ ಸ್ಥಳೀಯರು ಉದ್ಯೋಗಿಗಳಾಗಿ ಸೇರಿರಬೇಕು. ಇಂಥವರು ಮೋಡಿಯನ್ನು ಬಳಸಿರಬೇಕು. ಕ್ರಿಶ್ಚಿಯನ್ನರು ತಮ್ಮ ಧರ್ಮ ಪ್ರಚಾರಕ್ಕೆ ಮರಾಠಿ ಭಾಷೆಯ, ಮೋಡಿ ಲಿಪಿಯಲ್ಲಿ ಪುಸ್ತಕ ಬರೆದಿರುವುದು ಸಹಜವಾಗಿದೆ. ಯಾಕೆಂದರೆ ಜನಸಾಮಾನ್ಯರೂ ಈ ಲಿಪಿಯನ್ನು ಬಲ್ಲವರಾಗಿದ್ದರಿಂದ ಅವರಿಗೆ ತಲುಪಿಸಲು ಬರೆಸಿರಬೇಕು.

೧೮೧೮ರಲ್ಲಿ ಪೇಶ್ವೆಯರ ಆಡಳಿತವನ್ನು ಕೊನೆಗೊಳಿಸಿ, ಅವರ ಅಧೀನದಲ್ಲಿದ್ದ ಪ್ರದೇಶವನ್ನು ಬ್ರಿಟಿಷರು ಸಣ್ಣಪುಟ್ಟ ಸಂಸ್ಥಾನಗಳನ್ನಾಗಿ ಮಾಡಿದರು. ಮರಾಠಿ ಪೇಶ್ವೆಗಳ ವಂಶಸ್ಥರನ್ನು, ಸಂಬಂಧಿಕರನ್ನು ಈ ಸಂಸ್ಥಾನಗಳಲ್ಲಿ ಅಧಿಕಾರಕ್ಕೆ ಕೂಡಿಸಿದರು. ಕನ್ನಡ ಪ್ರಾಂತಕ್ಕೆ ದೇರಿದ ಅಕ್ಕಲಕೋಟೆ, ಕೊಂದರವಾಡ, ಜತ್ತು, ಕಿರಿಮಿರಜು, ಮುಧೋಳ, ರಾಮದುರ್ಗ, ಸಾಂಗಲಿ, ಸವಣೂರು ಮುಂತಾದವು ಸಂಸ್ಥಾನಗಳಾದವು. ಆದರೆ ಸಂಸ್ಥಾನಗಳ ಒಡೆತನ ಮರಾಠಿಗರದ್ದೆ ಆದ್ದರಿಂದ ಮರಾಠಿ ಭಾಷೆ-ಸಂಸ್ಕೃತಿಯ ಒತ್ತಡಕ್ಕೆ ಕನ್ನಡಿಗರು ಒಳಗಾದರು. ಔಂಧ, ಕೊಲ್ಲಾಪುರ, ಮೀರಜ್, ಜಮಖಂಡಿ, ಸಂಸ್ಥಾನಗಳಲ್ಲಿಯೂ ಬಹುಸಂಖ್ಯಾತರು ಕನ್ನಡಿಗರೇ ಇದ್ದರು. ಬ್ರಿಟಿಷ್ ಆಳ್ವಿಕೆಗಿಂತ ಪೂರ್ವದಿಂದಲೂ ಪೇಶ್ವೆಯವರು ಅಧಿಕಾರ ಹಿಡಿದಿದ್ದರು. ಅಂದಿನಿಂದಲೇ ಮರಾಠಿ ಸಂಸ್ಕೃತಿಯನ್ನು ಅನುಸರಿಸುವ ಒತ್ತಡಕ್ಕೆ ಒಗ್ಗಿಹೋಗಿದ್ದರು. ವೈದಿಕರಂತೂ ಮರಾಠಿ ಭಾಷೆ-ಸಂಸ್ಕೃತಿಯನ್ನು (ಪೇಶ್ವೆ) ತಮ್ಮದೆಂಬಂತೆ ಸ್ವೀಕರಿಸಿದ್ದರು. ಹೈದರಾಬಾದು ಸಂಸ್ಥಾನಕ್ಕೆ ಸೇರಿದ ಈ ಪ್ರಾಂತದಲ್ಲಿ ೧೯ನೇ ಶತಮಾನದ ಆರಂಭದಿಂದಲೂ ಬ್ರಾಹ್ಮಣರು ಉರ್ದು ಭಾಷೆಯನ್ನು ಕಲಿಯಲು ಮನಸ್ಸು ಮಾಡಿದರು. ಕೊನೆಯ ನಿಜಾಮನ ಕಾಲದ ಹೊತ್ತಿಗೆ ಬ್ರಾಹ್ಮಣರು ಉರ್ದು ಭಾಷೆಯಲ್ಲಿ ಶಿಕ್ಷಣ ಪಡೆದು ಕನ್ನಡವನ್ನು ಮರೆತರು. (ಚಂದ್ರಕಾಂತ ಕುಸನೂರು ತಮ್ಮ ‘ಗೋಹರ ಜಾನ್ ಮಾಲತಿ ಮತ್ತು ನಾನು’ ಕಾದಂಬರಿಯಲ್ಲಿ ಈ ಪ್ರಾಂತದ ಅನೇಕ ಬ್ರಾಹ್ಮಾಣರಿಗೆ ಕನ್ನಡ ಮಾತಾಡಲು, ಬರೆಯಲು ಬರುತ್ತಿರಲಿಲ್ಲವೆಂದು ಸನ್ನೆವೇಶ ಒಂದರಲ್ಲಿ ವ್ಯಕ್ತಪಡಿಸಿದ್ದಾರೆ.)

ಕಪಟರಾಳ ಕೃಷ್ಣರಾವ್ ಹೇಳುವಂತೆ ಕನ್ನಡ ಭಾಷೆಯ ಅವಸ್ಥೆ, ‘ಕನ್ನಡಿಗರ ರಾಜ್ಯವು ಹೋದೊಡನೆ ರಾಜಕೀಯ ಸಂಸ್ಥೆಗೆ ಸಂಬಂಧಪಟ್ಟ ಪಾರಿಭಾಷಿಕ ಶಬ್ದಗಳನ್ನು ಜನರು ಮರೆತುಬಿಟ್ಟರು….. ಪೇಶ್ವೆ ರಾಜ್ಯದ ಉದಯದಿಂದ ಮರಾಠಿಯೇ ಸಾರ್ವತ್ರಿಕವಾಗಿ ಬರೆಹದ ಭಾಷೆಯಾಯಿತು. ಕನ್ನಡವು ಬರೇ ಮಾತನಾಡುವ ಭಾಷೆಯಾಗಿ ಸಂತೆ, ಪೇಟೆ, ಹಳ್ಳಿ ಮನೆಮಾರುಗಳಲ್ಲಿ ಮಾತ್ರ ಉಳಿಯಿತು. ಬಾಲಕರ ಅಕ್ಷರಭ್ಯಾಸವಾಗುವುದು ಕೂಡ ಮೋಡಿಯಲ್ಲಿ ಮೊದಲಾಯಿತು. ಇದರಿಂದ ಜನರಿಗೆ ಕನ್ನಡ ಅಕ್ಷರಭ್ಯಾಸವೂ ಇಲ್ಲದಂತಾಯಿತು. ಸಮಾಜದ ಮೇಲ್ತರಗತಿಯವರಾದ ದೇಶಮುಖ, ದೇಶಪಾಂಡೆ, ಗೌಡ, ಕುಲಕರ್ಣಿಯರು ವ್ಯಾಪಾರಿಗಳು ವ್ಯವಹಾರಿಕ ದೃಷ್ಟಿಯಿಂದ ಮರಾಠಿಯನ್ನು ತಕ್ಕ ಮಟ್ಟಿಗೆ ಕಲಿತುಕೊಳ್ಳುತ್ತಿದ್ದರು. ಕನ್ನಡವು ಇವರಿಗೆ ಅನಾವಶ್ಯಕ. ಪೇಶ್ವೆಯರ ಕಾಲದಿಂದೀಚೆಗೆ ಬ್ರಾಹ್ಮಣರು ಮರಾಠಿಗೆ ಮನಸೋತವರಾಗಿ ಕನ್ನಡವೆಂದರೆ ಲಿಂಗಾಯುತರ ಭಾಷೆಯೆಂದು ತಿಳಿದರು. ವೈದಿಕ ಅಭ್ಯಾಸ ಮಾಡುವ ಬ್ರಾಹ್ಮಣರಿಗೆ ಕನ್ನಡವೆಂದರೆ ಒಂದು ತಿರಸ್ಕಾರ……. ಮಠಗಳಲ್ಲಿಯ ಜಂಗಮರು ಪುರಾಣ ಹೇಳುವ ಅಯ್ಯನವರು ಮಾತ್ರ ಅಲ್ಲೊಬ್ಬ ಇಲ್ಲೊಬ್ಬ ಕನ್ನಡ ಅರಿತವರು ಇರುತ್ತಿದ್ದರು. ಅವರಿಗೆ ಅದು ಉಪಜೀವನದ ಸಾಧನವಾದುದರಿಂದ ಅವರು ಪುರಾನ ಹೇಳುವಷ್ಟರ ಮಟ್ಟಿಗೆ ಕನ್ನಡವನ್ನು ಕಲಿತುಕೊಳ್ಳುತ್ತಿದ್ದರು.’[5] ಜಂಗಮರು ಮಠಗಳಲ್ಲಿ ಪುರಾಣವನ್ನು ಓದಿ ಹೆಳುವುದು ಅಂದರೆ ಪ್ರವಚನ ಮಾಡಲು ಮತ್ತು ಗುಡಿಯನ್ನೋ, ಮಠವನ್ನೋ ಶಾಲೆಮಾಡಿಕೊಂಡು ಕನ್ನಡ ಕಲಿಸುವ ಕಾಯಕವನ್ನು ಮಾಡುತ್ತಿದ್ದರು. ಇದು ಕೂಡ ಕೃಷ್ಣಾನದಿ ಮೇಲುಗಡೆ ಗುಲಬರ್ಗಾ, ಬೀದರ ಜಿಲ್ಲಾ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರಲಿಲ್ಲ. ಇದು ಏನಿದ್ದರೂ ಕೃಷ್ಣಾ ನದಿ ಕೆಳಗಿನ ರಾಯಚೂರು ಜಿಲ್ಲಾ ಪ್ರದೆಶದಲ್ಲಿ ಕಂಡು ಬರುತ್ತಿತ್ತು. ಬೀದರ್, ಲಾತೂರು, ಉದಗಿರಿ, ಭಾಲ್ಕಿ, ಔರಾದ ಮುಂತಾದ ಈ ಹೊತ್ತಿನ ಮಹಾರಾಷ್ಟ್ರ, ಆಂಧ್ರ ಗಡಿ ಭಾಗದಲ್ಲಿ ಜಂಗಮರು ಕೂಡ ವಚನಗಳನ್ನು ಮೋಡಿ ಲಿಪಿಯಲ್ಲಿ ಬರೆದುಕೊಂಡು ಬಳಸುತ್ತಿದ್ದರು. ಭಾಷೆ ಕನ್ನಡ (ಮತ್ತೂ ಮರಾಠಿ)ವಾಗಿದ್ದರೂ ಲಿಪಿ ಮಾತ್ರ ಮೋಡಿಯಲ್ಲೆ ಇರುತ್ತಿತ್ತು. ಜಂಗಮರು ಇಂಥ ಮೋಡಿಲಿಪಿಯ ವಚನಗಳನ್ನು ಜೋಳಿಗೆಯಲ್ಲಿಟ್ಟುಕೊಂಡು ಮನೆಮನೆಗೆ ಕಂತೆ ಭಿಕ್ಷೆಗೆ ಹೋಗಿ, ಅಲ್ಲಿ ವಚನಗಳನ್ನು ಲಿಂಗಾಯತರ ಮನೆಗಳಲ್ಲಿ ಓದಿಹೇಳಿ, ನಂತರ ತಮ್ಮ ಕಾಯಕಕ್ಕೆ ಫಲ ಪಡೆದು ಮರಳುತ್ತಿದ್ದರು. ಕನ್ನಡ ಭಾಷೆಯ ಉತ್ಕ್ರಷ್ಟ ರಚನೆಗಳಾದ ವಚನಗಳು ಮೋಡಿಲಿಪಿಯಲ್ಲಿ ಅಡಗಿರಬೇಕಾಯಿತು. ಈ ಕಾಲಾವಧಿಯಲ್ಲಿ ಕನ್ನಡ ಲಿಪಿಯಲ್ಲಿ ವ್ಯವಹಾರ ನಡೆದಿರಲಿಕ್ಕಿಲ್ಲ. ಸಾಹಿತ್ಯವೂ ಮೋಡಿಲಿಪಿಯಲ್ಲಿ ರಚಿಸಲಾಯಿತೆಂದು ಕಾಣುತ್ತದೆ ‘ಮೋಡಿ ಲಿಪಿಯಲ್ಲಿ ಕನ್ನಡ ಕಾವ್ಯಗಳನ್ನು, ಗ್ರಂಥಗಳನ್ನು ರಚಿಸಿದರು. ಕನ್ನಡಕ್ಕೆ ಹೊರತಾದ ಮೋಡಿಯಂಥ ಬೇರೊಂದು ಲಿಪಿಯಲ್ಲಿ ಈ ಸಾಹಿತ್ಯ ರಚನೆಯಾಗಿರುವುದರಿಂದ ಇದುವರೆಗೆ ಯಾವ ವಿದ್ವಾಂಸರು ಅ ಕಡೆಗೆ ಗಮನ ಹರಿಸಲಿಲ್ಲ. ಆ ಎಲ್ಲ ಕೃತಿಗಳು ಬೆಳಕಿಗೆ ಬರಬೇಕಾಗಿದೆ.’[6] ಇದು ವಿಚಿತ್ರ ಅನ್ನಿಸಬಹುದು. ಆದರೆ ತಳ್ಳಿಹಾಕುವಂತಿಲ್ಲ. ಇದುವರೆಗೆ ಯಾವ ಗ್ರಂಥಗಳು ಲಭ್ಯವಾಗಿಲ್ಲ. ಲಭ್ಯವಿರುವ ಹಸ್ತಪ್ರತಿಗಳು ಮಾತ್ರ ಮೋಡಿ ಲಿಪಿಯಲ್ಲಿವೆ. ಆದರೆ ಅವೆಲ್ಲವೂ ತತ್ವಪದ, ಮೊಹರಮ್ ಪದ, ಬುಲಾಯಿ ಹಾಡು, ಸವಾಲ್ ಜವಾಬ್ ಹಾಡು ಮುಂತಾದವುಗಳಾಗಿವೆ. ಮೌಖಿಕವಾಗಿರುವ ಈ ಎಲ್ಲ ಸಾಹಿತ್ಯವನ್ನು ಜನರು ಸಂದರ್ಭಕ್ಕೆ ಅನುಗುಣವಾಗಿ ಬಳಸಿಕೊಳ್ಳುವುದಕ್ಕಾಗಿ ಬರೆದಿಟ್ಟುಕೊಳ್ಳುತ್ತಿದ್ದರು. ಆಗ ಮೋಡಿಲಿಪಿಯನ್ನು ಉಪಯೋಗಿಸುತ್ತಿದ್ದರು.

ಇನಾಮ್ಜಂಗನ ಯೋಜನೆ

೧೯ನೇ ಶತಮಾನದ ಮಧ್ಯಭಾಗದಲ್ಲಿ ನಿಜಾಮರು ಆಡಳಿತದಲ್ಲಿ ಕೆಲವು ಬದಲಾವಣೆಗಳನ್ನು ತಂದರು. ಜಿಲ್ಲೆ, ತಾಲೂಕುಗಳು ಎಂದು ವಿಭಾಗಿಸಲಾಯಿತು. ಈ ಪ್ರಾಂತವನ್ನು ನಳದುರ್ಗ (ಉಸ್ಮಾನಾಬಾದ್), ಕಲಬುರ್ಗಿ, ರಾಯಚೂರು, ಲಿಂಗಸೂಗೂರು ಎಂಬ ಜಿಲ್ಲೆಗಳನ್ನಾಗಿ ವಿಭಾಗಿಸಲಾಯಿತು. ಈ ವಿಭಾಗಗಳಿಗೆ ಆಡಳಿತವನ್ನು ನೋಡಿಕೊಳ್ಳಲು ಸುಬೇದಾರರನ್ನು ನೇಮಿಸಲಾಯಿತು. ಬೀದರ ಜಿಲ್ಲೆಯ ಪ್ರದೇಶವು ನಳದುರ್ಗದಲ್ಲಿ ಸೇರಿಕೊಂಡಿತು. ಈ ಜಿಲ್ಲಾ ಪ್ರದೇಶದಲ್ಲಿ ಮರಾಠಿ, ಉರ್ದು, ಭಾಷೆ ಬಿಟ್ಟರೆ ಬೇರೆ ಭಾಷೆಗೆ ಸ್ಥಾನವಿರಲಿಲ್ಲ. ಕನ್ನಡ ಭಾಷೆ ಆಡುಮಾತಾಗಿ ಉಳಿದಿದ್ದರೂ, ಅದು ಅನ್ಯ ಭಾಷೆಗಳ ಒತ್ತಡಕ್ಕೆ ಬಲಿಯಾಗಿ ಸಂಕರಗೊಂಡು ಕನ್ನಡ ಅನ್ನುವಂತೆಯೇ ಇರಲಿಲ್ಲ. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಇಂಥ ಕನ್ನಡ ಜೀವಂತವಾಗಿ ಉಳಿದಿದೆ. ಕಲಬುರ್ಗಿ ಜಿಲ್ಲಾ ಪ್ರದೇಶಗಳಲ್ಲಿ ಮರಾಠಿ, ಉರ್ದು ಭಾಷೆಗಳ ಜತೆಗೆ ತೆಲುಗು ಭಾಷೆ ವ್ಯವಹಾರದಲ್ಲಿತ್ತು. ರಾಯಚೂರು ಜಿಲ್ಲಾ ಪ್ರದೇಶಗಳಲ್ಲಿಯೂ ತೆಲುಗು ಜತೆಗೆ ಕನ್ನಡ ಭಾಷೆ ವ್ಯವಹಾರದಲ್ಲಿ ಬಳಕೆಯಾಗುತ್ತಿತ್ತು. ಉರ್ದು (ಮತ್ತು ಮರಾಠಿ ಕೂಡ) ಭಾಷೆಯಂತೂ ಸರಿ. ಯಾಕೆಂದರೆ ಅದು ಆಳರಸರ ಭಾಷೆಯಾಗಿತ್ತು. ರಾಜ್ಯಾಡಳಿತದ ಭಾಷೆಯಾಗಿಯೂ ಇತ್ತು. ಶಿಕ್ಷಣದ ಭಾಷೆಯಾಗುವುದರಲ್ಲಿತ್ತು. ಲಿಂಗಸೂಗೂರು ಜಿಲ್ಲಾ ಪ್ರದೇಶದಲ್ಲಿ ಹೆಚ್ಚಾಗಿ ಕನ್ನಡ ಭಾಷೆಯೇ ಇತ್ತು. ಕಪಟರಾಳ್ ಕೃಷ್ಣರಾವ್ ಹೇಳುವಂತೆ, ಇನಾಮ್ ಜಂಗ್ ಎಂಬ ಸುಬೇದಾರ ಈ ಜಿಲ್ಲೆಗಳಲ್ಲಿ ವ್ಯವಹಾರಕ್ಕಿರುವ ಭಾಷೆಗಳನ್ನು ಪರಿಶೀಲಿಸಿ, ಆಡಳಿತಕ್ಕೆ ಅನುಕೂಲವಾಗುವಂತೆ ಸ್ಥಳೀಯ ಭಾಷೆಗಳಿಗೆ ಅವಕಾಶ ಕಲ್ಪಿಸಲು ಪ್ರಯತ್ನ ನಡೆಸಿದನಂತೆ. ಅದು ಸಾಧ್ಯವಾಗಲಿಲ್ಲ. ಯಾಕೆಂದರೆ ಸ್ಥಳೀಯ ಭಾಷೆಗಳಾದ ಕನ್ನಡ, ತೆಲುಗು ಭಾಷೆಗಳು ಕೇವಲ ಕೆಲವು ಪ್ರದೇಶಗಳಲ್ಲಿ ಬಾಯಿ ಮಾತಿನಲ್ಲಿ ಇಳಿದಿದ್ದವು. ಗೌಡ, ಕುಲಕರ್ಣಿ, ದೇಸಾಯಿ ಮುಂತಾದ ಸ್ಥಳೀಯ ಮುಖಂಡರು ಕನ್ನಡವನ್ನಾಗಲಿ, ತೆಲುಗನ್ನಾಗಲಿ ಆಡಳಿತದಲ್ಲಿ ಬಳಸುತ್ತಿರಲಿಲ್ಲ. ರಾಯಚೂರು, ಲಿಂಗಸೂಗೂರು, ಜಿಲ್ಲಾ ಪ್ರದೇಶಗಳಲ್ಲಿಯೂ ಕೆಲವರು ಮರಾಠಿಯನ್ನು ಬಳಸುತ್ತಿದ್ದರಂತೆ. ಇದನ್ನು ಕಂಡು ಆಡಳಿತದಲ್ಲಿ ಉರ್ದು, ಮರಾಠಿ ಭಾಷೆಗಳ ಜತೆಗೆ ಕೆಲವು ಕಡೆ ತೆಲುಗನ್ನು, ಕೆಲವು ಕಡೆ ಕನ್ನಡವನ್ನು ಬಳಸಲು ಈ ಅಧಿಕಾರಿ ಆಲೋಚಿಸಿ, ಸಂಬಂಧಿಸಿದವರಿಗೆ ಕ್ರಿಯಾಶೀಲರಾಗಲು ಒತ್ತಾಯಿಸಿದನಂತೆ. ಇದು ಸುಗಮವಾಗಿ ನಡೆಯಲು ಕೆಳ ಹಂತದ ನೌಕರರನ್ನು ಆಡಳಿತದಲ್ಲಿ ಆಯ್ಕೆ ಮಾಡಿಕೊಳ್ಳುವಾಗ, ಮುಖ್ಯವಾಗಿ ಆಡಳಿತ ಭಾಷೆ ಉರ್ದುವಿನೊಂದಿಗೆ ಸ್ಥಳೀಯ ಭಾಷೆಯನ್ನು ಬಲ್ಲವರಿಗೆ ಅವಕಾಶಗಳನ್ನು ನೀಡಲಾಯಿತು. ಇದರಿಂದ ಕೆಲವು ಜಿಲ್ಲಾ ಪ್ರದೇಶಗಳಲ್ಲಿ ದ್ವಿಭಾಷಿ, ತ್ರಿಭಾಷಿ ನೌಕರರನ್ನು ನೇಮಿಸಿಕೊಳ್ಳಲಾಯಿತು. ಸ್ಥಳೀಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದ ಗೌಡ, ಕುಲಕರ್ಣಿ, ಸಾಹೂಕಾರ, ದೇಶಪಾಂಡೆ ಮುಂತಾದವರಿಗೆ ಕನ್ನಡವನ್ನು ಕಲಿಯಲು ಒತ್ತಾಯಿಸಲಾಯಿತು. ಇವರಿಗೆ ಕನ್ನಡ ಭಾಷೆ ಮಾತಾಡಲು ಮಾತ್ರ ಬರುತ್ತಿತ್ತು. ಬರೆಯುವ ಸಂದರ್ಭ ಬಂದಾಗ ಮೋಡಿ ಲಿಪಿಯನ್ನು ಬಳಸುತ್ತಿದ್ದರು. ಇದನ್ನು ಸುಗಮಗೊಳಿಸಲು ಸುರುಪುರ, ಶಹಪುರ, ಯಾದಗಿರಿ, ಕಲ್ಬುರ್ಗಿ, ಮಹಾಗಾಂವ, ಚಿಂಚೋಳಿ ಮತ್ತು ಸೇಡಂ ತಾಲೂಕುಗಳ ಗೌಡ, ಕುಲಕರ್ಣಿ ಮುಂತಾದವರಿಗೆ ಮೂರು ವರ್ಷಗಳ ಅವಧಿಯೊಳಗಾಗಿ ಕನ್ನಡವನ್ನು ಕಲಿಯಬೇಕೆಂದು ಅಪ್ಪಣೆ ನೀಡಲಾಯಿತು. ಒಳ ಹಳ್ಳಿಗಳಲ್ಲಿ ಗೌಡ, ಶಾನುಭೋಗ, ಕುಲಕರ್ಣಿ ಮುಂತಾದವರಿಗೆ ಅಕ್ಷರ ಜ್ಞಾನವೇ ಇರಲಿಲ್ಲ. ಆದರೆ ಈ ಯೋಜನೆಯಿಂದ ಆರಂಭದಲ್ಲಿ ತೊಡಕಾಯಿತು. ಈ ಅಧಿಕಾರಿ ತರಲು ಯತ್ನಿಸಿದ ಬದಲಾವಣೆಗಳು ಆಡಳಿತಾತ್ಮಕವಾಗಿ ಅಡ್ಡಿಯನ್ನುಂಟುಮಾಡಿ ವಿಳಂಬಕ್ಕೆ ದಾರಿಯಾಯಿತೆಂದು ನೆಪ ನೀಡಿ ಈ ಯೋಜನೆಯನ್ನೇ ನಿರಾಕರಿಸಿ ಕೈ ಬಿಡಲಾಯಿತು. ಇದಕ್ಕಾಗಿ ಶ್ರಮಿಸಿದ ಸುಬೇದಾರರನ್ನು ವರ್ಗ ಮಾಡಲಾಯಿತು. ಕೊನೆಗೆ ಉರ್ದು ಭಾಷೆಯೇ ಆಡಳಿತದಲ್ಲಿ ಮುಂದುವರಿಯಿತು. ಒಂದು ವೇಳೆ ಈ ಯೋಜನೆ ಜಾರಿಗೆ ಬಂದು ನಿರಾತಂಕವಾಗಿ ಮುಂದುವರಿದಿದ್ದರೆ ಕೆಲವು ಜಿಲ್ಲಾ ಪ್ರದೇಶಗಳಲ್ಲಾದರೂ ಕನ್ನಡ ಭಾಷೆ ಆಡಳಿತದಲ್ಲಿ ಸೇರಿಕೊಳ್ಳುತ್ತಿತ್ತು. ಇದರಿಂದ ಸರಕಾರಿ ನೌಕರಿಗೆ ಸೇರಲು ಬಯಸುವವರು ಕನ್ನಡವನ್ನು ಕಲಿಯಲು ಇಚ್ಛಿಸುತ್ತಿದ್ದರು. ಇದು ಯಶಸ್ವಿಯಾಗಿದ್ದರೆ ೧೯ನೇ ಶತಮಾನದಿಂದಲಾದರೂ ಪುನಃ ಕನ್ನಡಕ್ಕೆ ಜೀವ ಬರಬಹುದಿತ್ತು.[1] ದೇವೇಂದ್ರಕುಮಾರ ಹಕಾರಿ : ಸಂಸ್ಕೃತಿ – ಸಾಹಿತ್ಯಗಳ ಮಾಂತ್ರಿಕತೆ ಮತ್ತು ‘ಉರ್ದೂ’ ಶಿಕ್ಷಣ ಮಾಧ್ಯಮ, ತಿರುಳ್ಗನ್ನಡ (೧೯೯೩), ಪುಟ-೧೦

[2] ಶೈಲಜಾ ಉಡಚಣ : ನನ್ನ ಶಿಕ್ಷಣ, ತಿರುಳ್ಗನ್ನಡ (೧೯೯೩), ಪುಟ-೨೬

[3] ಭಾಲಚಂದ್ರ ಜಯಶೆಟ್ಟಿ : ಕನ್ನಡ ಅಧ್ಯಯನ – ಸಂಪುಟ ೬ ಸಂಚಿಕೆ ೨ (೧೯೯೯), ಪುಟ-೧೮

[4] ಸೂರ್ಯನಾಥ ಕಾಮತ್ : ಮುಸ,ಲ್ಮಾನರ ಮತ್ತು ಆಂಗ್ಲರ ಆಡಳಿತ ಕಾಲ : ಕನ್ನಡ ನಾಡು ನುಡಿಗಳ ಸ್ಥ್ತಿ ಸಂಶೋಧನ        (ಚಿದಾನಂದ ಮೂರ್ತಿ ಅಭಿನಂದನ ಗ್ರಂಥ), ಪುಟ-೬೯೫

[5] ಕಪಟರಾಳ ಕೃಷ್ಣರಾವ್ : ಕರ್ನಾಟಕ ಸಂಸ್ಕೃತಿಯ ಸಂಶೋಧನೆ (೧೯೭೦) ಪುಟ-೨೬

[6] ಭಾಲಚಂದ್ರ ಜಯಶೆಟ್ಟಿ : ಸಮ್ಮೇಳನಾಧ್ಯಾಕ್ಷರ ಭಾಷಣ (೧೯೯೮),ಪುಟ-೯