ವಿಮೋಚನೆಗಾಗಿ ಹೋರಾಟ

‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಕ್ಕಿಂತ ಮುನ್ನವೇ ಈ ಪ್ರಾಂತದಲ್ಲಿ ಜಮೀನುದಾರರು ನಿಜಾಮ-ಬ್ರಿಟಿಷರ ವಿರುದ್ಧ ಹೋರಾಟಕ್ಕೆ ತೊಡಗಬೇಕಾಯಿತು. ಇದನ್ನು ಸ್ವಾತಂತ್ರ್ಯ ಹೋರಾಟ ಎಂದು ಕರೆಯಲಾಗದಿದ್ದರೂ ತಮ್ಮ ಹಿತಾಸಕ್ತಿಗಾಗಿ ಸರಕಾರದ ಜತೆ ಭೂ ಮಾಲೀಕರು ನಡೆಸಿದ ಸಂಘರ್ಷ ಎಂದು ಕರೆಯಬಹುದು. ಬ್ರಿಟಿಶರು ನಿಜಾಮ-ಮರಾಠರ ಸಹಾಯದಿಂದ ಟಿಪ್ಪುಸುಲ್ತಾನನನ್ನು ಸೋಲಿಸಿದ ಮೇಲೆ, ಅವರಿಗೆ ಪುನಃ ಎದುರಾದ ದೊಡ್ಡಶಕ್ತಿ ಧೋಂಡಿಯ ವಾಘ್. ದೋಂಡಿಯ ವಾಘ್ ಮರಾಠಿ ಮೂಲದವನು. ಕೊಲ್ಹಾಪುರ, ಧಾರವಾಡ ಮುಂತಾದ ಕಡೆ ಸಂಸ್ಥಾನಗಳಲ್ಲಿ ದುಡಿದು ನಂತರ ಹೈದರಲಿ ಸೈನ್ಯದಲ್ಲಿ ಸೇರಿಕೊಂಡನು. ಟಿಪ್ಪುವಿನ ಕಾಲದಲ್ಲಿ ಸೆರೆಮನೆ ಸೇರಿದ್ದ. ಅಲ್ಲಿಂದ ಬಿಡುಗಡೆಯಾಗಿ ಬ್ರಿಟಿಶರ ವಿರೋಧಿಯಾಗಿ ಬೆಳೆದ. ಮೈಸೂರು ಸಂಸ್ಥಾನವು ಬ್ರಿಟಿಷರಿಗೆ ವಾರ್ಷಿಕ ಕಾಣಿಕೆಯನ್ನು ಒಪ್ಪಿಸುವ ಸಲುವಾಗಿ ರೈತರ ಮೇಲೆ ಕರ ಹೇರಿದಾಗ, ರೈತರು ದೋಂಡಿಯಾ ವಾಘನನ್ನು ಬೆಂಬಲಿಸಿದರು. ಆರಂಭದಲ್ಲಿ ಅವನ ಸಂಘಟನೆ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿದ್ದು, ಬ್ರಿಟಿಷರು ಬಿನ್ನುಹತ್ತಿದಾಗ ನಿಜಾಮ ಪ್ರಾಂತಕ್ಕೆ ಬಂದು ಸೇರಿದ. ರಾಯಚೂರಿನ ಕೃಷ್ಣಾನದಿ ಸರಹದ್ದಿನಲ್ಲಿ ಅವನನ್ನು ಬ್ರಿಟಿಷರು ನಿಜಾಮನ ನೆರವಿನೊಂದಿಗೆ ಸೆರೆಹಿಡಿದರು.

ನಿಜಾಮ ಸಿಕಂದರ್ ಜಾ (೧೮೦೩-೨೯) ಅಳ್ವಿಕೆಗೆ ಬಂದಾಗ ಈ ಪ್ರಾಂತದಲ್ಲಿ ಅರಾಜಕತೆ ತುಂಬಿತ್ತು. ಆರ್ಥಿಕ ತೊಂದರೆಗಳು ಉಲ್ಬಣಗೊಂಡವು. ಸಂಸ್ಥಾನದಲ್ಲಿ ವಾರ್ಷಿಕ ಬಜೆಟ್ ಎಂಬುದೇ ಇರಲಿಲ್ಲ. ಈ ಸಮಯದಲ್ಲಿ ಪಿಂಡಾರಿಗಳು, ಭಿಲ್ಲರು ಮತ್ತು ಭಾರಿ ಜಮೀನುದಾರರು ದಂಗೆ ಏಳತೊಡಗಿದರು. ಆದರೆ ನಿಜಾಮ ಈಸ್ಟ್ ಇಂಡಿಯಾ ಕಂಪೆನಿಯ ಅಧೀನಕ್ಕೆ ಒಳಗಾಗಿದ್ದ. ಎರಡನೇ ಮರಾಠಾ ಯುದ್ಧ ನಡೆದಾಗ ನಿಜಾಮ ಸರಿಯಾಗಿ ತಮಗೆ (ಬ್ರಿಟಿಷರಿಗೆ) ಸಹಕರಿಸಲಿಲ್ಲ ಎಂಬ ನೆಪವನ್ನು ಒಡ್ಡಿ ಇನ್ನೊಂದು ಒಪ್ಪಂದ ಮಾಡಿಕೊಂಡರು. ಪ್ರಾಂತದಲ್ಲಿ ಶುರುವಾದ ದಂಗೆಗಳನ್ನು ಹತ್ತಿಕ್ಕದೆ ಸುಮ್ಮನಿರುವಂತಿಲ್ಲ ಬ್ರಿಟಿಷರು ಈ ಸಮಯದಲ್ಲಿ ಮತ್ತೊಂದು ‘ಬ್ರಿಗೇಡ್’ ಎಂಬ ಸೈನ್ಯವನ್ನು ಗೊತ್ತುಮಾಡಿ ಸ್ಥಳೀಯ ದಂಗೆಗಳನ್ನು ನಿಯಂತ್ರಿಸಲು ನಿಜಾಮನಿಗೆ ಒಪ್ಪಿಸಿದರು. ಇದರಿಂದ ವೀರಪ್ಪ ದೇಸಾಯಿ, ಹಮ್ಮಿಗೆ ಕೆಂಚನಗೌಡ, ಮುಂಡರಗಿ ಭೀಮರಾಯ, ಅನೇಕ ಜಮೀನುದಾರರು ಬಲಿಯಾದರು. ಸಿಂದಗಿಯ ಬಂಡಾಯ ಸುರಪುರದ ದಂಗೆ, ಹಲಗೇರಿಯ ಬೇಡರು, ಭಾಲ್ಕಿಯ ರಾಮರಾಯ, ಬಾದಾಮಿ-ನಿಪ್ಪಾಣಿ ರಘುನಂದರಾವ್, ಕಲಕೇರಿ ತಿಮ್ಮಾಪುರ ದೇಸಾಯಿ, ಸೊರಟೂರು ದೇಸಾಯಿ, ಬೀದರಿನ ಸುಳಿಹಳ್ಳಿ ಶಿವಲಿಂಗಯ್ಯ ದೇಶ್ ಮುಖ್, ಕೃಷ್ಣಾಪುರದ ತಿರುಮಲರಾವ್ ದೇಶಮುಖ್, ಮೇಘರಾವ್ ಮುಂತಾದ ಜಮೀನುದಾರರನ್ನು ಹತ್ತಿಕ್ಕಲು ಬ್ರಿಗೇಡ್ ಸೈನ್ಯವನ್ನು ಬಳಸಿದರು. ಇವರೆಲ್ಲರು ಈ ಪ್ರಾಂತದವರೇ. ತಮ್ಮ ತಮ್ಮ ಹಿತಾಸಕ್ತಿಗೆ ಹೋರಾಡಿದರೂ ಕೂಡ ಇದು ಮುಂದೆ ಸ್ವಾತಂತ್ರ್ಯಕ್ಕಾಗಿ ಹೊರಾಡಲು ಪ್ರೇರಣೆಯಾಯಿತು. ಈ ಮುಖಂಡರಿಗೆ ಬೆಂಬಲ ನೀಡಿದ ನೆಪಕ್ಕೆ ದುಡಿವ ಜನರು ತಪ್ಪಿತಸ್ಥರಾಗಿ ನಿಜಾಮರಿಂದ-ಬ್ರಿಟಿಷರಿಂದ ಶಿಕ್ಷೆಗೆ ಒಳಗಾದರು. ಹಮ್ಮಿಗೆ ಕೆಂಚನಗೌಡ, ಮುಂಡರಗಿ ಭೀಮರಾಯನಿಗೆ ಬೆಂಬಲ ನೀಡಿದ, ಅವರ ಪರವಾಗಿ ಹೋರಾಡಿದ ಕೆಳವರ್ಗದ ಜನರು ನೋವು-ಸಾವಿಗೆ ಒಳಗಾದರು. ಸೆರೆ ಸಿಕ್ಕು ಶಿಕ್ಷೆಗೆ ಒಳಗಾದವರಲ್ಲಿ, ‘೭೭ ಕ್ರಾಂತಿಕಾರರಿಗೆ ಮರಣದಂಡನೆ,೪೦ ಜನರಿಗೆ ೧೪ ವರ್ಷಗಳ ಕಠಿಣಶಿಕ್ಷೆ, ೮ ಜನರಿಗೆ ೫ ವರ್ಷ ಶಿಕ್ಷೆ, ೧೨ ಜನರಿಗೆ ಒಂದು ವರ್ಷ ಶಿಕ್ಷೆ ಹೀಗೆ ೧೩೯ ಜನರನ್ನು ತಪ್ಪಿತಸ್ಥರನ್ನಾಗಿ ಮಾಡಿದರು.’

[1] ಇಂಥ ಉದಾಹರಣೆಗಳು ಬೇಕಾದಷ್ಟು ಸಿಗಬಹುದು. ಜಮೀನುದಾರರ ಹಿತಾಸಕ್ತಿಗಾಗಿ ಕೆಳವರ್ಗದವರು ಹೋರಾಡಿ ಬಲಿಯಾಗಬೇಕಾಯಿತು.

೧೯ನೇ ಶತಮಾನದಲ್ಲಿ ದೇಸಾಯಿ, ದೇಶಮುಖ, ದೇಶಪಾಂಡೆ ಇವರೆಲ್ಲ ಭಾರಿ ಭೂಮಿಯನ್ನು ಹೊಂದಿದ್ದರಷ್ಟೆ. ಅತ್ತ ಪೇಶ್ವೆ, ಇತ್ತ ನಿಜಾಮರ ಜತೆ ಹೊಂದಾಣಿಕೆ ಮಾಡಿಕೊಂಡು ಸ್ಥಳೀಯವಾಗಿ ಎಲ್ಲ ಅಧಿಕಾರ ಹೊಂದಿದ್ದರು. ಬ್ರಿಟಿಷರು ಬಂದು ಅನೇಕ ಪದ್ಧತಿಗಳನ್ನು ಜಾರಿಗೆ ತಂದರು. ಅದರಲ್ಲಿ ‘ಇನಾಮ್ ಕಮೀಶನ್’ ಒಂದು. ಇದರ ಪ್ರಕಾರ ಕಂದಾಯ ವಸೂಲಿ ಮಾಡಲು ನೇರ ಬ್ರಿಟಿಷ್ ಅಧಿಕಾರ ಹೊಂದಿದ್ದ ಕಲೆಕ್ಟರ್, ಮಾಮಾಲೇದಾರ, ಶೇಕಸನದಿ ಮುಂತಾದವರು ಕಂದಾಯ ವಸೂಲಿ ಕೆಲಸಕ್ಕೆ ನಿಂತರು. ಈ ಮೊದಲು ಜಮೀನುದಾರರ ಈ ಅಧಿಕಾರವಿತ್ತು. ಈಗ ಕಂದಾಯ ವಸೂಲಿ ಕೈ ತಪ್ಪಿ ಹೋಯಿತು. ಮೇಲಾಗಿ ಈ ಜಮೀನುದಾರರ ವತನಗಳನ್ನು ಮರಳಿ ಪಡೆಯಲು ಬ್ರಿಟಿಷರು ಹೊಂಚುಹಾಕಿ ಕರ್ನಲ್ ಏಥ್ರಿಜ್ ಮುಖಂಡತ್ವದಲ್ಲಿ ಒಂದು ಆಯೋಗವನ್ನು ಮಾಡಿದರು. ಇದೇ ‘ಇನಾಮ್ ಕಮೀಶನ್’ ಎಂಬ ಹೆಸರಿನಿಂದ ೧೮೪೨ರಿಂದ ತೀವ್ರವಾಗಿ ಕೆಲಸಕ್ಕೆ ಅರಂಭಿಸಿತು. ಇದು ಈಸ್ಟ್ ಇಂಡಿಯಾ ಕಂಪನಿಗೆ ಆದಾಯ ತರುವ ಆಯೋಗವೇ ಆಗಿತ್ತು. ಇದನ್ನು ಜಮೀನುದಾರರು ವಿರೋಧಿಸಿ ಹೋರಾಡಲು ನಿಲ್ಲಬೇಕಾಯಿತು. ಈ ಬ್ರಿಗೇಡ್ ಎಂಬ ಸೈನ್ಯದಿಂದಲೇ ಇಂತಹ ಹೋರಾಟವನ್ನು ನಿಜಾಮ ಹತ್ತಿಕ್ಕಿದ. ಈ ಬ್ರಿಗೇಡ್ ಸೈನ್ಯವನ್ನು ಮುಂದೆ ಕಂಟಿಂಜೆಂಟಿ ಎಂದು ಕರೆಯಲಾಯಿತು. ಇದನ್ನು ಸಂಸ್ಥಾನದ ರೆಸಿಡೆಂಟನಾದ ಹೆನ್ರಿರಸೆಲ್ ರೂಪಿಸಿದ್ದ. ಇದರಿಂದ ನಿಜಾಮನ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಯುರೋಪಿಯನ್ ಬ್ಯಾಂಕುಗಳಿಂದ ಹೆಚ್ಚಿನ ಬಡ್ಡಿಗೆ ಸಾಲ ಮಾಡಬೇಕಾಯಿತು. ಪಾಮರ್ ಎಂಡ್ ಕಂಪನಿ ಎಂಬ ಒಂದು ಹಣಕಾಸಿನ ಸಂಸ್ಥೆಯಿಂದಲೂ ಸಾಲ ತೆಗೆಯಬೇಕಾಯಿತು. ಇದರ ಪರಿಣಾಮ ಪ್ರಾಂತದ ಜನರ ಮೇಲೆ ಗಂಭೀರ ಪರಿಣಾಮ ಬೀರಿತು. ‘೧೮೨೦ರಲ್ಲಿ ಸರ್ ಚಾರಲ್ಸ್ ಮೆಟ್ಕಾಫ್ ಹೈದರಾಬಾದಿಗೆ ರೆಸಿಡೆಂಟ್ ಆಗಿ ಬಂದನು. ಈ ಪರಿಸ್ಥಿತಿಯನ್ನು ಸುಧಾರಿಸಲು ನಿಜಾಮನಿಗೆ ಕಲ್ಕತ್ತಾದಲ್ಲಿ ೬೦% ಬಡ್ಡಿಯ ಮೇಲೆ ಸಾಲವನ್ನು ಕೊಡಿಸಿ, ಪಾಮರ್ ಎಂಡ್ ಕಂಪನಿಯ ಸಾಲವನ್ನು ತೀರಿಸಿಬಿದುವಂತೆ ಮಾಡಲು ಬಯಸಿದರು. ೧೮೨೦ರಲ್ಲಿ ಅವನು ರೆಸಿಡೆಂಟ್ ಅಗಿ ಅಧಿಕಾರ ವಹಿಸಿಕೊಂಡಾಗ, ನಿಜಾಮನ ರಾಜ್ಯದ ಆರ್ಥಿಕ ಸ್ಥಿತಿ ತೀರಾ ಶೋಚನೀಯವಾಗಿತ್ತು. ರಾಜ್ಯದಲ್ಲಿ ಸರಿಯಾದ ಆಡಳಿತವೇ ಇರಲಿಲ್ಲ. ರೆವೆನ್ಯೂ ಅಧಿಕಾರಿಗಳ ದಬಾಳಿಕೆ ದೌರ್ಜನ್ಯಗಳನ್ನು ತಾಳಲಾರದೆ ಗ್ರಾಮಸ್ಥರು ನೆರೆಯ ರಾಜ್ಯಗಳಿಗೆ ಓಡಿಹೋದರು. ಇದರಿಂದ ಕೃಷಿ ಭೂಮಿಗಳಿ ಬೀಳುಬಿದ್ದು, ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಅಲ್ಲದೆ ಸರಕಾರ ಪಾಮರ್ ಎಂಡ್ ಕಂಪನಿಯಂತಹ ಸ್ಥಳೀಯ ಬ್ಯಾಂಕುಗಳಿಂದ ಹಣವನ್ನು ಸಾಲವಾಗಿ ಪಡೆದ ಮೇಲೆ ೧೮೧೪ರಿಂದ ಮುಂದಕ್ಕೆ ತೆರಿಗೆ ಸಂಗ್ರಹಣೆಯ ಕೆಲಸವನ್ನು ಗುತ್ತಿಗೆದಾರಾರಿಗೆ ವಹಿಸಿಕೊಡಲಾಯಿತು. ಯಾರು ಅತಿಹೆಚ್ಚು ಪಾವತಿ ಮಾಡಿದರೋ ಅವರಿಗೆ ಆ ಗುತ್ತಿಗೆಯನ್ನು ನೀಡಲಾಯಿತು. ಈ ಗುತ್ತಿಗೆದಾರರು ಬೇಗ ಲಾಭ ಮಾಡಿಕೊಳ್ಳಲು ರೈತರಿಗೆ ಹಿಂಸೆ ಕೊಡತೊಡಗಿದರು.’[2]

೧೮೪೮ರಲ್ಲಿ ಡಾಲ್ ಹೌಸಿ ಗವರ್ನರ್ ಜನರಲ್ ಆಗಿ ಬಂದಾಗ, ನಿಜಾಮನಿಂದ ಬರಬೇಕಾಗಿದ್ದ ಹಣದ ಮೊತ್ತ ೬೪ ಲಕ್ಶಕ್ಕೆ ಏರಿತ್ತು. ಇದು ಸಹಾಯಕ ಸೈನ್ಯ, ಬ್ರಿಗೇಡ್ ಸೈನ್ಯ ಮುಂತಾದ ಕೆಲಸಗಳ ನಿರ್ವಹಣೆಗಾಗಿ ಆದ ವೆಚ್ಚವಾಗಿತ್ತು. ನಿಜಾಮ ಪ್ರಾಂತದ ಹಲವು ಮೂಲಗಳಿಂದ ಹಣವನ್ನು ವಸೂಲಿ ಮಾಡಿ ಬ್ರಿಟಿಷರಿಗೆ ಕೊಟ್ಟಿದ್ದರೂ ಬಾಕಿ ಉಳಿದಿತ್ತು. ಇದಕ್ಕಾಗಿ ನಿಜಾಮ ಉಸ್ಮಾನಾಬಾದ್ (ಬೀರಾರ್ ಪ್ರಾಂತ), ರಾಯಚೂರಿನ ‘ದೋ ಆಬ್’ ಪ್ರದೇಶವನ್ನು ಕೊಡಬೇಕಾಯಿತು. ಈ ದೋಆಬ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಹತ್ತಿಯ ಮೇಲೆ ಬ್ರಿಟಿಷರ ಕಣ್ಣಿತ್ತು. ಯಾಕೆಂದರೆ ಹತ್ತಿಯನ್ನು ಇಂಗ್ಲೆಂಡಿಗೆ ಕಳಿಸಬೇಕಿತ್ತು. ಅಮೆರಿಕನ್ ಸಿವಿಲ್ ವಾರ್ ಸಮಯದಲ್ಲಿ ಅಮೆರಿಕಾದ ಹತ್ತಿಯು ಇಂಗ್ಲೆಂಡಿಗೆ ರಫ್ತಾಗುವುದು ನಿಂತಿತು. ಆಗ ಈ ಪ್ರಾಂತದ ಹತ್ತಿಯನ್ನು ಇಂಗ್ಲೆಂಡಿಗೆ ಬ್ರಿಟಿಷರು ಕಳಿಸತೊಡಗಿದರು. ಅಲ್ಲಿಂದ ಸಿದ್ಧ ಉಡುಪುಗಳಾಗಿ ಭಾರತಕ್ಕೆ ಬರುತ್ತಿದ್ದವು. ನಿಜಾಮ್ ಸಂಸ್ಥಾನವೂ ಸೇರಿದಂತೆ ಮುಂಬೈ ಪ್ರಾಂತವನ್ನು ಒಳಗೊಂಡು ಈ ಭಾಗದಲ್ಲಿ ಬೆಳೆಯುತ್ತಿದ್ದ ಹತ್ತಿಯನ್ನು ಅಪಾರವಾಗಿ ಲಂಕಾಶೈರ್, ಮ್ಯಾಂಚೆಸ್ಟರ್ ಗಳಿಗೆ ಕಳಿಸಲಾಗುತ್ತಿತ್ತು. ಇದರಿಂದ ಈ ಪ್ರಾಂತದಲ್ಲಿ ಸಣ್ಣ ಕೈಮಗ್ಗದ ಉದ್ದಿಮೆಗಳೆಲ್ಲ ಕುಸಿದವು. ಬ್ರಿಟಿಷರ ಪವರ್ ಲೂಮ್‍ಗಳಿಂದ ಸ್ಥಳೀಯ ಉದ್ಯೋಗಿಗಳು ನಷ್ಟ ಅನುಭವಿಸಿದರು. ಸೀರೆ, ಪಂಚೆ, ರುಮಾಲು, ಹಾಸಿಗೆ, ಚಾದರ್, ಕೈವಸ್ತ್ರ ಮುಂತಾದವುಗಳನ್ನು ನೇಯುತ್ತಿದ್ದ ಬಹುತೇಕ ಊರುಗಳ ಕೈಗಾರಿಕೆಗಳು ತೊಂದರೆಗೆ ಸಿಲುಕಿದವು. ಯಂತ್ರದಿಂದ ತಯಾರಿಸಿದ ವಸ್ತುಗಳು ಮಾರುಕಟ್ಟೆಗೆ ಬಂದವು. ಕೈಮಗ್ಗದಿಂದ ನೇಯ್ದು ಹೊರಬರುತ್ತಿದ್ದ ಎಲ್ಲ ಬಗೆಯ ಬಟ್ಟೆಗಳಿಗಿಂತ ಮಿಲ್‍ನಲ್ಲಿ ತಯಾರಾಗಿ ಬರುವ ಬಟ್ಟೆಗಳು ಉತ್ತಮವಾಗಿ ಕಾಣುತ್ತಿದ್ದವು. ಜನರು ಮಿಲ್ ಬಟ್ಟೆಗಳಿಗೆ ಒಲಿದಿದ್ದರಿಂದ ಈ ಪ್ರಾಂತದ ಕೈ ಮಗ್ಗ ಕೈಗಾರಿಕೆ ಕುಸಿದು ಹೋಯಿತು.

೨೦ನೇ ಶತಮಾನದ ಆರಂಭದಿಂದ ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಸಿಗುವವರೆಗೆ ಈ ಪ್ರಾಂತದಲ್ಲಿ ಬ್ರಿಟಿಷ್-ನಿಜಾಮರ ವಿರುದ್ಧ ಹೋರಾಟಗಳು ನಡೆದವು. ಸ್ವಾತಂತ್ರ್ಯ್ ಬಂದ ಮೇಲೆ ‘ನಿಜಾಮ ಸಂಸ್ಥಾನ’ ಸ್ವತಂತ್ರವಾಗಿ ಉಳಿಯಿತು. ಈ ಸಂಸ್ಥಾನಕ್ಕೂ ನಿಜಾಮನಿಂದ ವಿಮೋಚನೆ ಸಿಗುವವರೆಗೆ ಈ ಪ್ರಾಂತದಲ್ಲಿ ಪುನಃ ನಿಜಾಮ-ರಜಾಕಾರರ ವಿರುದ್ಧ ಹೋರಾಟಗಳು ತೀವ್ರವಾಗಿ ನಡೆದವು. ಅಸಂಖ್ಯಾತ ಅಕ್ಷರ ಜ್ಞಾನವಿಲ್ಲದ ಈ ನಾಡಿನ ಜನರಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಮಾನಸಿಕವಾಗಿ ಸಿದ್ಧಗೊಳಿಸುವುದು ಒಂದು ದೊಡ್ಡ ಸವಾಲೇ ಆಯಿತು. ಯಾಕೆಂದರೆ ಈ ಪ್ರಾಂತದ ಜನರಲ್ಲಿ ಕೇವಲ ಹೊಟ್ಟೆ ಪಾಡಿಗಾಗಿ ದುಡಿಯುವವರ ಸಂಖ್ಯೆಯೇ ವಿಪರೀತವಾಗಿತ್ತು. ಉಳ್ಳವರ ಅಧೀನದಲ್ಲಿ ದುಡಿಯುವುದೇ ಬಹುಸಂಖ್ಯಾತರ ಪಾಡಾಗಿತ್ತು. ಬ್ರಿಟಿಷರ ಅಧೀನದಲ್ಲಿ ನಿಜಾಮಾರು, ನಿಜಾಮರ ಅಧೀನದಲ್ಲಿ ಜಹಗೀರುದಾರರು, ಇವರ ಅಧೀನದಲ್ಲಿ ದೇಶಮುಖ, ದೇಸಾಯಿ, ಪಟೇಲ್-ಗೌಡ-ಸಾಹೂಕಾರರು ಇದ್ದರು. ಇವರ ಅಧೀನದಲ್ಲಿ ಬಡವರು, ಕೆಳವರ್ಗದವರು ದುಡಿದು ಬದುಕುತ್ತಿದ್ದರು. ಇಅವರಿಗೆ ಸ್ವಾತಂತ್ರ್ಯದ ಕಲ್ಪನೆ ಬರಲು ಅಸಾಧ್ಯವಾಗಿತ್ತು. ಹಳ್ಳಿಗಳಲ್ಲಿ ಯಥಾಸ್ಥಿತಿ ಮುಂದುವರಿದಿತ್ತು. ನಗರಗಳಲ್ಲಿ ವಿದ್ಯಾವಂತರು, ವ್ಯಾಪಾರಸ್ಥರು, ವಿದ್ಯಾರ್ಥಿಗಳು ನಿಜಾಮ ಸರಕಾರದ ವಿರುದ್ಧ ಹೋರಾಡಲು ಸಂಘಟಿತರಾಗಬೇಕಾಯಿತು. ರಾಷ್ಟ್ರದ ನಾಯಕರು ಮತ್ತು ನಾಡಿನ ಮುಖಂಡರು ಈ ಪ್ರಾಂತಕ್ಕೆ ಬಂದು ಸ್ವಾತಂತ್ರ್ಯಕ್ಕಾಗಿ ಕರೆ ನೀಡಿದಾಗ ಈ ಪ್ರಾಂತದಲ್ಲಿ ಸಂಘಟನೆಗಳು ಹುಟ್ಟಿಕೊಂಡು ನಿಜಾಮ ಸರಕಾರವನ್ನು ವಿರೋಧಿಸುವ ಚಟುವಟಿಕೆಗಳನ್ನು ಶುರುಮಾಡಿದರು. ಕೊನೆಯ ಮೀರ ಉಸ್ಮಾನ್ ಅಲಿಖಾನ್ (೧೯೧೧-೧೯೪೮) ಕಾಲದಲ್ಲಿ ಹೋರಾಟವನ್ನು ತೀವ್ರವಾದವು. ಮುಸ್ಲಿಮ್ ಆಳ್ವಿಕೆ. ಇದ್ದದ್ದಕ್ಕಾಗಿ ಮೇಲ್ವರ್ಗದವರು ಹೋರಾಟವನ್ನು ಚುರುಕುಗೊಳಿಸಿದರು. ‘ಹೈದಾರಾಬಾದು ರಾಜಕೀಯ ಪರಿಷತ್ತು’, ‘ಹೈದಾರಾಬಾದು ಸ್ವದೇಶಿ ಲೀಗ್’, ‘ನಿಜಾಮ ಪ್ರಜಾ ಪರಿಷತ್ತು’, ‘ನಿಜಾಮ ಕರ್ನಾಟಕ ಪರಿಷತ್ತು’, ‘ಹಿಂದೂ ಸಿವಿಲ್ ಲಿಬರ್ಟೀಸ್ ಲೀಗ್’ ಮುಂತಾದ ಸಂಘಟನೆಗಳು ರಚನೆಗೊಂಡು ಹೋರಾಟ ನಡೆಸಿದವು. ಪಂಡಿತ ತಾರಾನಾಥ ನಿಜಾಮನ ವಿರುದ್ಧ ‘ಇಂಡಿಯನ್ ಡಯ್ಯಾರ್’ ಎಂಬ ಉಗ್ರಲೇಖನವನ್ನು ಬರೆದರು. ‘ಇಂರೋಜ್’ ಎಂಬ ಉರ್ದು ಪತ್ರಿಕೆಯ ಸಂಪಾದಕರಾದ ಶೋಯೆಬುಲ್ಲಾ ಖಾನ್ ‘ಸ್ವಾತಂತ್ರ್ಯದ ಪರಿಕಲ್ಪನೆ’, ‘ಜಮೀನ್ದಾರಿ ಪದ್ಧತಿಯ ದೋಷಗಳು’, ‘ತೆಲಂಗಾಣದ ಸಮತಾವಾದಿಗಳ ಸಿದ್ಧಾಂತ’ ಮುಂತಾದ ಲೇಕನಗಳನ್ನು ಬರೆದರು. ಇವು ನಿಜಾಮನ ಆಳ್ವಿಕೆಯ ವಿರುದ್ಧ ಹೋರಾಡಲು ಪ್ರೇರಣೆ ನೀಡಿದವು.

ಹೈದರಾಬಾದು ನಗರದಲ್ಲಿ ‘ಇತ್ತೇಹಾದುಲ್ ಮುಸಲ್ಮೀನ್’ ಎಂಬ ಮತೀಯವಾದಿಗಳ ಸಂಘಟನೆಯೊಂದು ಕಾಶಿಂರಜ್ವಿ ಮುಂದಾಳತ್ವದಲ್ಲಿ ರೂಪುಗೊಂಡಿತು. ಇದರ ಚಟುವಟಿಕೆಗಳಿಗೆ ನಿಜಾಮನ ಬೆಂಬಲ ದೊರೆಯಿತು. ಈ ಸಂಘಟನೆ ಸಂಸ್ಥಾನದಲ್ಲಿ ಅಲ್ಪಸಂಖ್ಯಾತರಾಗಿದ್ದ ಮುಸ್ಲಿಮರನ್ನು ‘ಇಸ್ಲಾಂ ಖತರೇಮೇಹೈ’ ಎಂಬ ವಾದವನ್ನು ಮುಂದುಮಾಡಿ ಕೆರಳಿಸಲಾಯಿತು. ನಿಜಾಮ ಸಂದಿಗ್ಧ ಸ್ಥಿತಿಗೆ ಸಿಕ್ಕು ಈ ಸಂಘಟನೆಯನ್ನು ಬೆಂಬಲಿಸಿದ. ಈ ಸಂಘಟನೆಯಲ್ಲಿ ಕೆಲಸಮಾಡುವ ಕಾರ್ಯಕರ್ತರನ್ನು ‘ರಜಾಕಾರರು’ (ಸ್ವಯಂ ಸೇವಕರು) ಎಂದು ಕರಯಲಾಯಿತು. ಈ ಸಂದರ್ಭದಲ್ಲಿ ನಿಜಾಮ ಒಂದು ಫರ್ಮಾನವನ್ನು ಹೊರಡಿಸಿದ. ಮುಸಲ್ಮಾನರು ಬೇರೆ ಜಾತಿಯವರಿಂದ ಜಮೀನನ್ನು ಖರೀದಿಸಬಹುದು. ಆದರೆ ಬೇರೆ ಜಾತಿಯವರು ಮುಸಲ್ಮಾನರ ಜಮೀನನ್ನು ಖರೀದಿಸಬಾರದು. ಜಮೀನು ಒತ್ತೆ ಹಾಕಿ ಸಾಲ ಮಾಡಿದ ಮುಸಲ್ಮಾನರು ಸಾಲದಿಂದ ಮುಕ್ತರು. ಸಾಲಮಾಡಿದ ಬಡವರು ಮತಾಂತರವಾದರೆ ಸಾಲದಿಂದ ಮುಕ್ತರು. ಈ ಪ್ರಾಂತದಲ್ಲ್ಲಿ ಇದರ ಪರಿಣಾಮ ಕೆಟ್ಟದ್ದಾಯಿತು. ದಲಿತರಿಗೆ ಮತಾಂತರವಾಗಲು ಆಶೆ ಹುಟ್ಟಿಸಿತು. ಮತಾಂತರಗಳು ನಡೆದಂತೆ ‘ಆರ್ಯಸಮಾಜ’ ಹೋರಾಟವನ್ನು ತೀವ್ರಗೊಳಿಸಿತು. ನಗರವಾಸಿ ಮುಸ್ಲಿಮರಲ್ಲಿ ಆಸ್ತಿ ಅಲ್ಪಸ್ವಲ್ಪ ಇದ್ದಿರಬಹುದು. ಗ್ರಾಮಾಂತರ ಪ್ರದೇಶಗಳಲ್ಲಿದ್ದ ಮುಸ್ಲಿಮರು ಜಮೀನು, ಆಸ್ತಿಯನ್ನು ಹೊಂದಿರಲಿಲ್ಲ. ಅವರಲ್ಲಿ ಭೂಮಿ ಇದ್ದರೆ ಮಾತ್ರ ಇನ್ನೊಬ್ಬರ ಕೇಳುವ ಪ್ರಶ್ನೆ ಹುಟ್ಟುವುದು? ಇದರಿಂದ ಮುಸ್ಲಿಮರಿಗೇನೂ ಸಹಾಯವಾಗಲಿಲ್ಲ. ಬದಲಾಗಿ ಮುಸ್ಲಿಮೇತರರಲ್ಲಿ ದ್ವೇಷಕ್ಕೆ ಕಾರಣವಾಯಿತು.

ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ ತೀವ್ರವಾದಾಗ ಬ್ರಿಟಿಷರು ಹಿಂದಿರುಗುವ ಸ್ಥಿತಿಯಲ್ಲಿದ್ದರು. ಅವರು ಭಾರತವನ್ನು ತೊರೆದು ಹೋಗುವ ಮುನ್ನ ಸಂಸ್ಥಾನಿಕರಿಗೆ ‘ಸ್ವತಂತ್ರ ಭಾರತದಲ್ಲಿ ವಿಲೀನವಾಗಬಹುದು, ಇಲ್ಲ ಸ್ವತಂತ್ರವಾಗಿಯೇ ಇದ್ದು ರಾಜ್ಯಾಡಳಿತ ನಡೆಸಬಹುದು’ ಎಂಬ ಹೇಳಿಕೆಯನ್ನು ಹೊರಡಿಸಿದರು. ಭಾರತದಲ್ಲಿಯೇ ದೊಡ್ಡ ಸಂಸ್ಥಾನವನ್ನು ಹೊಂದಿದ್ದ ನಿಜಾಮ ಇದರಿಂದ ಪ್ರೇರಿತನಾಗಿ ‘ಹೈದರಾಬಾದು ಸಂಸ್ಥಾನವು ಸ್ವತಂತ್ರವಾಗಿಯೇ ಮುಂದುವರಿಯುವುದು. ಪ್ರಜೆಗಳು ಸಂಸ್ಥಾನಕ್ಕೆ ನಿಷ್ಠೆಯಿಂದಿರಬೇಕು’ ಎಂದು ಜೂನ್ ೨೬, ೧೯೪೭ರಂದು ಫರ್ಮಾನು ಹೊರಡಿಸಿದ. ಮುಂದೆ ಆಗಸ್ಟ್ ೧೫, ೧೯೪೭ರಂದು ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಬಂದರೂ ಹೈದರಾಬಾದು ಸಂಸ್ಥಾನಕ್ಕೆ ಬರಲಿಲ್ಲ. ನಿಜಾಮ ರಾಜಕೀಯ ಮುಂದುವರಿಯಿತು.

ಆಗಸ್ಟ್ ೧೫, ೧೯೪೭ರಿಂದ ಸೆಪ್ಟೆಂಬರ್ ೧೭, ೧೯೪೮ರವರೆಗೆ ಹೈದರಾಬಾದು ಸಂಸ್ಥಾನವು ಬುಗಿಲೆದ್ದಿತು. ಕರ್ನಾಟಕದ ಬೀದರ್, ಗುಲಬರ್ಗಾ, ರಾಯಚೂರು ಜಿಲ್ಲೆಗಳ ಜನರು ಅಪಾರ ನೋವು-ಸಾವನ್ನು ಅನುಭವಿಸಿದರು. ನಿಜಾಮ ಸರಕಾರವನ್ನು ರಕ್ಷಿಸುವ ಹೊಣೆಯನ್ನು ‘ಇತ್ತೇಹಾದುಲ್ ಮುಸಲ್ಮೀನ್’ ಸಂಘಟನೆಯು ಹೊರಲು ಕಟಿ ಬದ್ಧವಾಯಿತು. ಈ ಸಂಘಟನೆಯ ಸದಸ್ಯರಾದ ರಜಾಕಾರರು ನಿಜಾಮ ಸರಕಾರದ ಸವಲತ್ತುಗಳನ್ನು ಸ್ವೇಚ್ಛೆಯಿಂದ ಬಳಸುತ್ತ ಮತಾಂಧರಾಗಿಯೂ, ದಾಳಿಕೋರರಾಗಿಯೂ ಬೆಳೆಯತೊಡಗಿದರು. ನಿಜಾಮ ಪ್ರಭುತ್ವವನ್ನು ಒಪ್ಪಿಕೊಳ್ಳುವಂತೆ ಜನರನ್ನು ಒತ್ತಾಯಿಸುತ್ತ ಸ್ವೆಚ್ಛಾಚಾರಕ್ಕಿಳಿದರು. ಕಾಶಿಂ ರಜ್ವಿ ತನ್ನ ಅಧೀನದಲ್ಲಿದ್ದ ರಜಾಕಾರರಿಗೆ ಸಂಸ್ಥಾನದಲ್ಲೆಲ್ಲ ಕಾರ್ಯನಿರ್ವಹಿಸಲು ಹರಿಬಿಟ್ಟನು. ರಜಾಕಾರರು ತಮ್ಮ ಪಡೆಗೆ ಜನರನ್ನು ಒತ್ತಾಯದಿಂದ ಸೇರಿಸಿಕೊಳ್ಳತೊಡಗಿದರು. ಅವರ ಜತೆ ಪಠಾಣರು, ನಿಜಾಮ ಪೋಲಿಸರು ಸೇರಿಕೊಂಡು ಹಳ್ಳಿಹಳ್ಳಿಗಳಲ್ಲಿ ದಾಳಿ ಮಾಡಿದರು. ಅತ್ಯಾಚಾರಗಳು, ದರೋಡೆಗಳು, ಕೊಲೆಗಳು ಈ ಪ್ರಾಂತದಲ್ಲಿ ನಿತ್ಯ ನಡೆದವು. ರಜಾಕಾರರ ದಬ್ಬಾಳಿಕೆಯನ್ನು ಖಂಡಿಸಿದ ‘ಇಂರೋಜ್’ ಪತ್ರಿಕೆಯ ಸಂಪಾದಕನನ್ನು ಕೊಲ್ಲಲಾಯಿತು. ಪಂಡಿತ ತಾರಾನಾಥರು ಗಡಿದಾಟಿ ಹೋಗಬೇಕಾಯಿತು. ರಜಾಕಾರರ ಹೆಸರಿನಲ್ಲಿ ಸ್ಥಳೀಯ ಮಟ್ಟದಲ್ಲಿ ಸಮಯ ಸಾಧಕರು ಹುಟ್ಟಿಕೊಂಡು ದಾಳಿ ನಡೆಸಿದರು. ಹಳ್ಳಿಯ ಜನರು ಪಕ್ಕದ ಗಡಿಗಳಿಗೆ ವಲಸೆ ಹೋಗತೊಡಗಿದರು. ಈ ಪದ್ಧತಿಯನ್ನು ಅರಿತು ಭಾರತದ ಸರಕಾರವು ನಿಜಾಮ ಸರಕಾರಕ್ಕೆ ಮೊದಲು ಹಿಂಸೆ, ಅತ್ಯಾಚಾರ, ದಬ್ಬಾಳಿಕೆಯನ್ನು ನಿಲ್ಲಿಸಲು ಸೂಚಿಸಲಾಯಿತು. ಆದರೆ ಇದು ನಿಜಾಮನಿಂದ ಸಾಧ್ಯವಾಗಲಿಲ್ಲ. ಯಾಕೆಂದರೆ ನಿಜಾಮನೇ ರಜಾಕಾರರ ಕೈಗೊಂಬೆಯಾಗಿ ಅಸಹಾಯಕನಾಗಿದ್ದ. ರಜಾಕಾರರು ಸಾರಿಗೆ, ಸೈನ್ಯ, ಶಸ್ತ್ರಾಸ್ತ್ರವನ್ನು, ಆಕಾಶವಾಣಿಯನ್ನು ಸ್ವತಂತ್ರವಾಗಿ ಬಳಸುವಷ್ಟು ಶಕ್ತಿ ಪಡೆದುಕೊಂಡಿದ್ದರು.

ಈ ಪ್ರಾಂತದಲ್ಲಿ ಜನರು ರಜಾಕಾರರನ್ನು ನಿಯಂತ್ರಿಸಲು ಹಳ್ಳಿಹಳ್ಳಿಗಳಲ್ಲಿ ಸಂಘಟಿತರಾದರು. ಸಾವಿರಾರು ಜನ ವಲಸೆ ಹೋಗುವುದನ್ನು ತಡೆಯುವ ಪ್ರಯತ್ನ ಮಾಡಿದರು. ರಜಾಕಾರರನ್ನು ಎದುರಿಸಲು ಜನರು ಶಿಬಿರಗಳನ್ನು ಸ್ಥಾಪಿಸಿಕೊಂಡರು. ಈ ಶಿಬಿರಗಳಲ್ಲಿ ಯುವಕರು ಸೇರಿಕೊಂಡು ಯುದ್ಧ ತರಬೇತಿಯನ್ನು ಪಡೆದರು. ಶಸಸ್ತ್ರವಾಗಿ ಹೋರಾಟ ನಡೆಸಿದರು. ಶಿಬಿರಗಳಿಗೆ ಜನರು ಆರ್ಥಿಕ ನೆರವು ನೀಡಿದರು. ಶಿಬಿರಾರ್ಥಿಗಳ ಹೋರಾಟದಿಂದ ರಜಾಕಾರರು ಭಯಗೊಂಡರು. ನೂರಾರು ಶಿಬಿರಗಳು ಸಂಸ್ಥಾನದಲ್ಲಿ ಹುಟ್ಟಿಕೊಂಡು ಒಂದಕ್ಕೊಂದು ಪೂರಕ ನೆರವಿನೊಂದಿಗೆ ರಜಾಕಾರರನ್ನು, ನಿಜಾಮ ಪೋಲೀಸರನ್ನು ಹತ್ತಿಕ್ಕಿದರು. ಮುಂಡರಗಿ, ಗಜೇಂದ್ರದಡ, ಸಿಂಧಗಿ, ದುಧನಿ, ತಾಳಿಕೋಟೆ, ಮೈಂದರಗಿ, ತುಂಗಭದ್ರ, ಕಂಪ್ಲಿ, ಮಂತ್ರಾಲಯ ಮುಂತಾದ ಕಡೆಗಳಲ್ಲಿ ಮುಖ್ಯ ಶಿಬಿರಗಳ ಶಿಬಿರಾರ್ಥಿಗಳು ರಜಾಕಾರರ ವಿರುದ್ಧ ಕೆಲವು ಕಡೆ ಯುದ್ಧದ ರೀತಿಯಲ್ಲಿ ಹೋರಾಡಿದರು. ಸಾವಿರಾರು ಜನ ಸಾವಿಗೀಡಾದರು. ಬೀದರ್, ಗುಲಬರ್ಗಾ ಜಿಲ್ಲಿಗಳಂತೂ ಉರ್ದು ಹೋದವು. ಕೊಪ್ಪಳದ ಸರಹದ್ದಿನಲ್ಲಿ ಎಷ್ಟೋ ಹಳ್ಳಿಗಳು ಸ್ವಯಂ ಸ್ವಾತಂತ್ರ್ಯವನ್ನು ಘೋಷಿಸಿಕೊಂಡವು. ಪಂಚಾಯಿತಿ ಮಾದರಿಯಲ್ಲಿ ಸ್ಥಳೀಯವಾಗಿ ಸರಕಾರಗಳು ಹುಟ್ಟಿಕೊಂಡವು. ಇದೊಂದು ಅಪೂರ್ವ ಘಟನೆಯಾಗಿ ಹೋಯಿತು. ಇಡೀ ಪ್ರಾಂತದಲ್ಲಿ ಅರಾಜಕತೆ, ಕೊಲೆ-ಸುಲಿಗೆ ಮತ್ತು ವಲಸೆ ಕಂಡು ಭಾರತ ಸರಕಾರವು ನಿಜಾಮ ಸರಕಾರದ ವಿರುದ್ಧ ಪೋಲೀಸ್ ಕಾರ್ಯಾಚರಣೆ ನಡೆಸಲು ತೀರ್ಮಾನಿಸಿತು. ಉಪ ಪ್ರಾಧಾನಿಯಾಗಿದ್ದ ಸರದಾರ ವಲ್ಲಭಬಾಯಿ ಪಟೇಲರು ಜನರಲ್ ಚೌಧರಿಯವರ ನೇತೃತ್ವದಲ್ಲಿ ಭಾರತೀಯ ಸೇನೆಯನ್ನು ಸೆಪ್ಟೆಂಬರ್ ೧೩, ೧೯೪೮ರಂದು ಸಂಸ್ಥಾನಕ್ಕೆ ಕಳಿಸಿದರು. ‘ಹೈದರಾಬಾದು ಸಂಸ್ಥಾನ’ ವನ್ನು ಹೊಕ್ಕ ಭಾರತೀಯ ಸೈನ್ಯವು ರಜಾಕಾರರ ದೌರ್ಜನ್ಯವನ್ನು ಅಡಗಿಸಿತು. ನಿಜಾಮ ೧೯೪೮, ಸೆಪ್ಟೆಂಬರ್-೧೭ ರಂದು ಶರಣಾಗತನಾಗಿ ಅಧಿಕಾರದಿಂದ ಕೆಳಗಿಳಿದ. ಸ್ವತಂತ್ರ ಭಾರತದಲ್ಲಿ ಸಂಸ್ಥಾನವು ವಿಲೀನವಾಯಿತು.

ಈ ಪ್ರಾಂತದಲ್ಲಿ ರಜಾಕಾರರು ದೌರ್ಜನ್ಯವೆಸಗಿದ್ದು ಅತಿಯಾದಾಗ ಜನರೇ ಅವರನ್ನು ಎದುರಿಸಿ ಬಗ್ಗು ಬಡಿಯಲು ತೊಡಗಿದ್ದರು. ಪೋಲೀಸ್ ಕಾರ್ಯಾಚರಣೆಗೆ ಮುನ್ನಾದಿನಗಳ ಹೊತ್ತಿಗೆ ರಜಾಕಾರರು ಭಯಗ್ರಸ್ಥರಾಗಿ ಎದೆ ಗುಂದಿದ್ದರು. ೧೯೪೮ರ ವರ್ಷದ ಉದ್ದಕ್ಕೂ ಸಂಘರ್ಷಗಳು ನಡೆಯುತ್ತಲೇ ಬಂದಿದ್ದವು. ಈ ಸಂದರ್ಭದಲ್ಲಿ ಸ್ಥಳೀಯವಾಗಿ ಮುಸ್ಲಿಮರು ಅಡಕತ್ತಿನಲ್ಲಿ ಸಿಕ್ಕಂತೆ ಬಿಗಿ ಉಸಿರಿನೊಂದಿಗೇ ಬದುಕಬೇಕಾಯಿತು. ಮತಾಂಧರಾದ ರಜಾಕಾರರ ಒತ್ತಡ ಒಂದುಕಡೆ. ಅವರ ಜತೆ ಸೇರದಿದ್ದರೆ ‘ಗದ್ದಾರ್’ ಪಟ್ಟಿಯಲ್ಲಿ ಸೇರಿ ಪೀಡೆಗೆ ಒಳಗಾಗುತ್ತಿದ್ದರು. ಧೈರ್ಯವಹಿಸಿ ಮುಸ್ಲಿಮೇತರರ ಜತೆ ಸೇರಿಕೊಳ್ಳಲೂ ಕಷ್ಟವಾಯಿತು. ಸೇರಿಕೊಳ್ಳಲು ಮುಸ್ಲಿಮೇತರರ ಸಂಘಟನೆಗಳೂ ಅನುಮಾನಿಸಿದವು. ಹೀಗಾಗಿ ಈ ಸಂಘರ್ಷದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಗಳು ಮೂಕವೇದನೆಯನ್ನು ಅನುಭವಿಸಿದವು. (ಸ್ವಾತಂತ್ರ್ಯ ಬಂದ ೫೦ನೇ ವರ್ಷಾಚರಣೆಯ ಸಮಯದಲ್ಲಿ, ಈ ಪ್ರಾಂತದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ‘ವೀರಗಾಥೆ’ ಹೇಳುವ ಪುಸ್ತಕಗಳು ಬಿಡುಗಡೆಯಾದವು. ಜಿಲ್ಲಾ ಆಡಳಿತಗಳೇ ಈ ಪುಸ್ತಕಗಳನ್ನು ಹೊರತಂದವು. ರಜಾಕಾರರ ವಿರುದ್ಧ ಹೋರಾಡಿದವರ ಸಾವಿರಾರು ಹೆಸರುಗಳಲ್ಲಿ ಮುಸ್ಲಿಮರ ಹೆಸರುಗಳು ಒಂದೋ ಎರಡೋ ಕಾಣಿಸುತ್ತವೆ. ಮುಸ್ಲಿಮರಲ್ಲಿ ಯಾರೂ ಹೋರಾಡಲಿಲ್ಲ ಎಂಬ ತಪ್ಪು ಕಲ್ಪನೆ ಇದರಿಂದ ಬರಬಹುದು) ರಜಾಕಾರರ ದಾಳಿಯ ಸಂದರ್ಭದಲ್ಲಿ ಸಮಯಸಾಧಕರು ಜಾತಿಭೇದವಿಲ್ಲದೆ ಸೇರಿಕೊಂಡು ರಜಾಕಾರರನ್ನು ಮೀರಿಸುವ ಹಾಗೆ ನಡೆದುಕೊಂಡಿರುವ ನಿದರ್ಶನಗಳು ಬೇಕಾದಷ್ಟಿವೆ.

ಈ ಸಂದರ್ಭದಲ್ಲಿ ಸ್ಥಳೀಯವಾಗಿ ಹೆಂಗಸರ ಪಾತ್ರವೂ ಗಮನಾರ್ಹವಾದದ್ದು, ದುರ್ಬಲ ಸಮುದಾಯಗಳ ಹೆಂಗಸರು ಜೀವ-ಮಾನ ರಕ್ಷಣೆಗೆ ಸ್ವತಃ ಹೋರಾಟಕ್ಕಿಳಿದರು. ಅಲ್ಲದೆ ರಜಾಕಾರರ ವಿರುದ್ಧ ಹೋರಾಡುವ ಗಂಡಸರ ಗುಂಪುಗಳಿಗೆ, ಶಿಬಿರಾರ್ಥಿಗಳಿಗೆ ಅನೇಕ ಬಗೆಯಲ್ಲಿ ನೆರವು ನೀಡಿರುವುದು ದೊಡ್ಡ ಸಹಾಯವಾಗಿ ಪರಿಣಮಿಸಿದೆ. ಈ ಸಂಘರ್ಷ ಕಾಲದಲ್ಲಿ ಸ್ಥಳೀಯ ಮುಸ್ಲಿಮರು ಅನುಭವಿಸಿದ ಸಂಕಷ್ಟ ಮತ್ತು ಸ್ಥಳೀಯ ಹೆಂಗಸರು ಎದುರಿಸಿದ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಬೇಕಾಗಿದೆ.

ಈ ಸಂಘರ್ಷದ ಸಂದರ್ಭದಲ್ಲಿ ಮರೆಯಾಗಿರುವ ಇನ್ನೊಂದು ದೊಡ್ಡ ಘಟನೆಯಿದೆ. ಇಡೀ ಪ್ರಾಂತದಲ್ಲಿ ಪೋಲೀಸ್ ಕಾರ್ಯಚರಣೆಯ ನಾಲ್ಕೈದು ದಿನಗಳಲ್ಲೆ ಮುಸ್ಲಿಮ್ ಸಮುದಾಯಗಳು ಅನುಭವಿಸಿದ ಜೀವಹಾನಿಗೆ ಲೆಕ್ಕವಿಲ್ಲ. ರಜಾಕಾರರಿಂದ ದೌರ್ಜನ್ಯಕ್ಕೆ ಒಳಗಾದ ಜನ ಸಮುದಾಯಗಳು ದ್ವೇಷದಿಂದ ಮುಸ್ಲಿಮ್ ಸಮುದಾಯಗಳ ಮೇಲೆ ತೀವ್ರವಾದ ದಾಳಿ ನಡೆಸಿ ಸೇಡು ತೀರಿಸಿಕೊಂಡದ್ದು ಬೇಕಾದಷ್ಟಿದೆ. ಮುಸ್ಲಿಮರೆಂಬ ಅಲ್ಪಸಂಖ್ಯಾತ ರಜಾಕಾರರ ಗುಂಪು ಮಾಡಿದ ತಪ್ಪಿಗಾಗಿ ಇಡೀ ಮುಸ್ಲಿಮ್ ಸಮುದಾಯವೇ ಸೇಡಿಗೆ ಒಳಗಾಗಬೇಕಾಯಿತು. ಅ ಸಂದರ್ಭದಲ್ಲಿ ಸೇಡು ತೀರಿಸಿಕೊಳ್ಳುವವರನ್ನು ತಡೆಯುವ ಪ್ರಯತ್ನವನ್ನು ಭಾರತೀಯ ಸೇನೆಯೂ ಮಾಡಲಿಲ್ಲ. ಅಂಕಿ ಅಂಶಗಳ ಪ್ರಕಾರ ಗಡಿಭಾಗಗಳಲ್ಲಿ ಲಕ್ಷಾಂತರ ಮುಸ್ಲಿಮರು ಹಲ್ಲೆಗೀಡಾಗಿ ಹೋದರು. ಪ್ರತೀಕಾರದ ಸಂದರ್ಭದಲ್ಲಿ ಜನಸಮುದಾಯಗಳ ಒಳಗೇ ಇರುವ ಸಹಜವಾದ ಜೀವಪರ ಕಾಳಜಿಯಿಂದಾಗಿ ಒಂದು ಸಮುದಾಯವನ್ನು ಇನ್ನೊಂದು ಸಮುದಾಯವು ತಾಯಿತನದಿಂದ ಕಾಪಾಡಿದ ನೂರಾರು ನಿದರ್ಶನಗಳು ಈ ಪ್ರಾಂತದ ಜನರ ಮನಸ್ಸಿನಲ್ಲಿ ಇನ್ನೂ ಉಳಿದು ನಿಂತಿವೆ. ಇದರಿಂದಾಗಿ ಜೀವಹಾನಿ ಕಮ್ಮಿಯಾಗಿದೆ ಎಂದು ಹೇಳುತ್ತಾರೆ.

ಈ ಪ್ರಾಂತದಲ್ಲಿ ಭಾರತೀಯ ಸೇನೆ ಬಂದ ಸಂದರ್ಭದಲ್ಲಿ, ಸಿದ್ಧಯ್ಯ ಪುರಾಣಿಕರು ಗುಲಬರ್ಗಾ ಜಿಲ್ಲೆಯಲ್ಲಿ ನಿಜಾಮ ಸರಕಾರದ ಅಧಿಕಾರಿಗಳಾಗಿದ್ದರು. ತಹಸೀಲ್ದಾರಾಗಿದ್ದರೆಂದು ಕಾಣುತ್ತದೆ. ಅವರು ತಮ್ಮ ಅತ್ಮಚರಿತ್ರೆಯಲ್ಲಿ (ಕಾವ್ಯಾನಂದ ಎಂಬ ಅಭಿನಂದನಾ ಗ್ರಂಥದಲ್ಲಿ) ಈ ಸನ್ನಿವೇಶವನ್ನು ಕುರಿತು ಬರೆದಿದ್ದಾರೆ. ಪೋಲೀಸ್ ಕಾರ್ಯಾಚರಣೆಯ ಸಂದರ್ಭದಲ್ಲಿ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ಬೆನ್ನು ಹತ್ತಿದ ಗುಂಪನ್ನು ತಡೆದು ವಿವೇಕ ಹೇಳಲು ಪ್ರಯತ್ನಿಸಿದರು. ಆಗ ‘ಗುಂಪಿನಲ್ಲಿದ್ದ ಉಗ್ರವಾದಿಯೊಬ್ಬ ಸಿಟ್ಟಿನಿಂದ ಕೇಳಿದ. ಇಷ್ಟುದಿನ ನಾವು ನಿತ್ಯವೂ ಕಣ್ಣೀರು ಕೂಳು ಏಕಮಾಡಿ ತಿನ್ನಿತ್ತಿದ್ದಾಗ ನೀವೆಲ್ಲಿದ್ದೀರಿ? ಏನು ಮಾಡುತ್ತಿದ್ದೀರಿ? ನಾವು ಸಿಟ್ಟಾಗದೆ ಸಮಾಧಾನ ಹೇಳಿದೆವು. ‘ನೀವೆಂದುದು ನಿಜ; ನಾವಿಲ್ಲಿ ಅಧಿಕಾರಿಗಳಾಗಿದ್ದಾಗಲೂ ನಿಮ್ಮ ಪಾಲಿಗೆ ಇಲ್ಲದಂತಾಗಿದ್ದೆವು. ನಾವೂ ನಿಮ್ಮ ಸ್ಥಿತಿಯಲ್ಲಿಯೇ ಇದ್ದೆವು. ಈಗ ನಾವು ಗೆದ್ದಿದ್ದೇವೆ. ಗೆದ್ದವರು ಸೋತವರನ್ನು ಔದಾರ್ಯದೊಡನೆ ನಡೆಸಿಕೊಳ್ಳಬೇಕು. ದಯವಿಟ್ಟು ಈ ಮುಸಲ್ಮಾನ ಬಾಂಧವರನ್ನು ಬಿಟ್ಟುಬಿಡಿ. ಅತ್ಯಾಚಾರ ಮಾಡಿದವರು ಇವರಲ್ಲ…..’(ಪುಟ-೯೭)

‘ಪೋಲೀಸ್ ಕಾರ್ಯಾಚರಣೆಯಲ್ಲಿ ನಿಮ್ಮ ಪಾತ್ರವೇನು?’ ಎಂಬ ಪ್ರಶ್ನೆಯೊಂದಕ್ಕೆ ಸ್ವಾತಂತ್ರ್ಯ ಹೋರಾಟಗಾರರಾದ ಶಿವಮೂರ್ತಿಸ್ವಾಮಿ ಅಳವಂಡಿ ಅವರು ಉತ್ತರಿಸಿದ್ದು ಹೀಗಿದೆ: ಕಾರ್ಯಾಚರಣೆಯ ನಂತರ ಅಮಾಯಕ ಮುಸಲ್ಮಾನರ ಮೇಲೆ ಪ್ರತೀಕಾರದ ಕ್ರಮವಾಗದಂತೆ ಈ ಭಾಗದಲ್ಲಿ ಯಶಸ್ವಿಯಾಗಿ ತಡೆದವು. ಲೂಟಿಗಳನ್ನು ತಡೆದವು. ಮಸೀದಿಗಳ ಧ್ವಂಸವನ್ನು ನಿಲ್ಲಿಸಿದೆವು.’[3]

ಮಹಾರಾಷ್ಟ್ರ – ಕರ್ನಾಟಕ ಗಡಿಭಾಗದ ಮರಾಠಿ ಲೇಖಕ ಶರಣಕುಮಾರ ನಿಂಬಾಳೆ ಅವರ ಅತ್ಮಚರಿತ್ರೆ ‘ಅಕ್ರಮ ಸಂತಾನ’ ದಲ್ಲಿ ಈ ವಿವರ ಇದೆ : ‘ಭಾರತ ಸ್ವತಂತ್ರವಾದ ಸಮಯದ ಕಥೆ. ಹಿಂದೂ ಮುಸಲ್ಮಾನರ ದಂಗೆ ಆರಂಭವಾಗಿತ್ತು. ಹೈದರಾಬಾದ ಸಂಸ್ಥಾನವನ್ನು ಬಿಡುಗಡೆ ಮಾಡುವ ಸಲುವಾಗಿ ಸೈನ್ಯ ಬಂದಿತ್ತು. ಮೊಗಲಾಯಿಯಲ್ಲಿ ಪೋಲೀಸರಿಂದ ಹಿಡಿದು ಜನರವರೆಗೆ ಎಲ್ಲರೂ ಮುಸಲ್ಮಾನರ ಮೇಲೆ ಅತ್ಯಾಚಾರ ಮಾಡಿದರು. ಮುಸಲ್ಮಾನರನ್ನು ತರಿದು ಹಾಕಿದರು. (ಪುಟ – ೫೨, ೧೯೯೨)’ ಒಂದು ಸನ್ನಿವೇಶವೂ ಬರುತ್ತದೆ. ಅದರಲ್ಲಿ ಪೋಲೀಸ್ ಕಾರ್ಯಾಚರಣೆ ದಿನಗಳಲ್ಲಿ ಪ್ರತೀಕಾರ ಎಂಬಂತೆ ಮುಸ್ಲಿಮರನ್ನು ಒಂದುಕಡೆ ನಿಲ್ಲಿಸಿ ಸಾಮೂಹಿಕವಾಗಿ ಕೊನೆಗಾಣಿಸಿದ್ದ ಜಾಗವನ್ನು ಮುದುಕನೊಬ್ಬ ಯುವಕನಿಗೆ ತೋರಿಸುತ್ತಾನೆ.

ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯು ೧೭.೯.೧೯೯೮ರಂದು ‘ಹೈದರಾಬಾದ್ ವಿಮೋಚನೆ ಸ್ವರ್ಣ ಮಹೋತ್ಸವ ವಿಶೇಷ ಪುರವಣಿ’ ಯನ್ನು ಪ್ರಕಟಿಸಿದೆ. ಅದರಲ್ಲಿ ‘ರಜಾಕಾರರ ರಾಕ್ಷಸೀ ದೌರ್ಜನ್ಯಗಳು’ ಎಂಬ ಲೇಖನವಿದೆ. (ಬರೆಸವರ ಹೆಸರು ಇಲ್ಲ) ಆ ಲೇಖನದ ಕೊನೆಯ ಸಾಲುಗಳು ಹೀಗಿವೆ: ‘…..ಸೆ. ೧೭ ರಂದು ರಾತ್ರಿ ೮-೩೦ಕ್ಕೆ ನಿಜಾಮ ಶರಣಾಗಿದ್ದಾನೆಂಬ ವರದಿ ಆಕಾಶವಾಣಿಯಿಂದ ಬಿತ್ತರವಾಗುತ್ತಲೇ ರಜಾಕಾರರ ಜಂಘಾಬಲ ಉಡುಗಿತು. ಇವರ ನೆಲೆಗಳ ಮೇಲೆ ಜನರೇ ದಾಳಿ ಮಾಡಿ ಕೊಚ್ಚಿಹಾಕಿದರು. ರಜಾಕಾರರ ವಿರುದ್ಧ ನಡೆದ ಪ್ರತೀಕಾರದ ದಾಳಿಯಲ್ಲೂ ರಜಾಕಾರರು ಮಾತ್ರವಲ್ಲದೆ, ಅಮಾಯಕರೂ ಬಲಿಯಾಗಿ ಆಸ್ತಿ-ಪಾಸ್ತಿ ಕಳೆದುಕೊಂಡರೆಂಬುದು ಅಕ್ಷರಶಃ ಸತ್ಯ.’ ದಾಖಲೆಗೊಂಡ ಇಂಥ ವಿವರಗಳಿಂದ ನೈಜಸ್ಥಿತಿಯನ್ನು ಅರಿಯಬಹುದು.

೧೯೪೮ರ ಸೆಪ್ಟೆಂಬರ್ ೧೩ ರಿಂದ ೧೭ ರವರೆಗೆ ಪೋಲೀಸ್ ಕಾರ್ಯಾಚರಣೆ ನಡೆಯಿತು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಎರಡು ದೊಡ್ಡ ದುರಂತಗಳು ನಡೆದಿವೆ ಎಂದು ಈಚಿನ ಅಧ್ಯಯನಗಳು ತಿಳಿಸುತ್ತವೆ. ಸಂಸ್ಥಾನದಲ್ಲಿದ್ದ ಮುಸ್ಲಿಮರ ಸಂಖ್ಯೆ ಗಣನೀಯವಾಗಿ ಇಳಿಯಿತು ಎಂಬುದು ಒಂದಾದರೆ, ತೆಲಂಗಾಣದಲ್ಲಿ ಭಾರೀ ಜಮೀನ್ದಾರರ ವಿರುದ್ಧ ಬಡವರು, ಕೂಲಿಕಾರರು, ಕಸುಬುದಾರರು ಸಂಘಟಿತರಾಗಿ ಹೋರಾಡಿದ ರೈತ ಹೋರಾಟಗಾರರನ್ನು ಹತ್ತಿಕ್ಕಿದ್ದು ಇನ್ನೊಂದು. ಭಾರತೀಯ ಸೇನೆ ೧೯೪೮ ರಿಂದ ೧೯೫೧ರ ವರೆಗೆ ತೆಲಂಗಾಣದಲ್ಲಿಯೇ ಇತ್ತೆಂದು ವರದಿಗಳು ತಿಳಿಸುತ್ತವೆ. ಪುಚ್ಚಲಪಲ್ಲಿ ಸುಂದರಯ್ಯ ಬರೆದ ‘ತೆಲಂಗಾಣ ಪೀಪಲ್ಸ್ ಸ್ಟ್ರಗಲ್ ಅಂಡ್ ಇಟ್ಸ್ ಲೆಸನ್ಸ್’ (೧೯೭೨) ಪುಸ್ತಕದಲ್ಲಿ ಭೂಮಾಲೀಕರ ವಿರುದ್ಧ ತೆಲಂಗಾಣಾದಲ್ಲಿ ನಡೆದ ರೈತ ಹೋರಾಟದ ಬಗ್ಗೆ ವಿವರವಾದ ಮಾಹಿತಿಯಿದೆ. ಈ ಕೃತಿ ತೆಲುಗಿನಲ್ಲಿದೆ.

ನಿಜಾಮರು ಆಳ್ವಿಕೆ ಇದ್ದರೂ ಆಂಧ್ರದ ತೆಲಂಗಾಣದಲ್ಲಿ ಜಹಗೀರ, ದೇಶ್ ಮುಖ, ಸರ್ ದೇಸಾಯಿ, ದೇಸಾಯಿಗಳು ಎಂಬ ಹೆಸರಿನ ಭೂಮಾಲೀಕರು ತಮ್ಮ ತಮ್ಮ ಸರಹದ್ದಿನಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಹತ್ತು ಸಾವಿರ ಭೂಮಿಯಿಂದ ಹಿಡಿದು ಒಂದೂವರೆ ಲಕ್ಷ ಎಕರೆ ಭೂಮಿಯನ್ನು ಉಳ್ಳವರಾಗಿದ್ದ ಇವರು ಕಂದಾಯ ವಸೀಲಿಗೆ ಅಧಿಕಾರಿಗಳನ್ನು ತಾವೇ ನೇಮಿಸಿಕೊಳ್ಳುತ್ತಿದ್ದರು. ೧೦ ಹಳ್ಳಿಗಳಿಂದ ಹಿಡಿದು ೪೦ ಹಳ್ಳಿಗಳ ಸರಹದ್ದಿನಲ್ಲಿ ಪಾಳೇಗಾರಿಕೆಯಂತೆ ಅಧಿಕಾರ ಚಲಾಯಿಸುತ್ತಿದ್ದರು. ಬಡರೈತರನ್ನು, ಕಸುಬುದಾರರನ್ನು, ಕೂಲಿಕಾರರನ್ನು ಕರೆಸಿಕೊಂಡು ‘ಬಿಟ್ಟಿಚಾಕರಿ’ ಮಾಡಿಸಿಕೊಳ್ಳುತ್ತಿದ್ದರು. ಭೂಮಾಲೀಕತ್ವವನ್ನು, ‘ಬಿಟ್ಟಿಚಾಕರಿ’ಯನ್ನು ವಿರೋಧಿಸುವ ಬಣ ‘ಆಂಧ್ರಮಹಾಸಭೆ’ ಎಂಬ ಹೆಸರಿನಲ್ಲಿ ೧೯೨೮ರ ಹೊತ್ತಿಗೆ ರೂಪುಗೊಂಡು ಬಲವಾಗಿಯೇ ಬೆಳೆಯಿತು. ಈ ಬಣದ ಯುವಕರು ಕಮ್ಯುನಿಸ್ಟ್ ತತ್ವಗಳಿಗೆ ಮಾರುಹೋಗಿ ಗಟ್ಟಿಗೊಂಡಿದ್ದರು. ಬಡರೈತರು, ಕಸುಬುದಾರರು, ಕೂಲಿಕಾರರು ಈ ಬಣವನ್ನು ಬೆಂಬಲಿಸುತ್ತ ಸೇರಿಕೊಂಡರು. ಭೂಮಾಲೀಕರು ಬಾಡಿಗೆದಾರರಿಂದ ಈ ಬಣವನ್ನು ಬಗ್ಗು ಬಡಿಯಲು ಪ್ರಯತ್ನಿಸಿತು. ಈ ಬಣವೂ ಶಸಸ್ತ್ರ ಹೋರಾಟಕ್ಕೆ ಹಿಂಜರಿಯಲಿಲ್ಲ. ಭೂ ಹೀನರಿಗೆ ಭೂಮಾಲೀಕರಿಂದ ಭೂಮಿಯನ್ನು ಪಡೆದು ವಿತರಿಸಿತು. ಸಾವಿರಾರು ಗ್ರಾಮಗಳಲ್ಲಿ ಸ್ವರಾಜ್ಯವನ್ನು ಸ್ಥಾಪಿಸಿತು. ಇದು ಭೂಮಾಲೀಕರಿಗೂ, ನಿಜಾಮರಿಗೂ ಭೀತಿಯನ್ನುಂಟು ಮಾಡಿತು. ಸ್ವಾತಂತ್ರ್ಯಾ ನಂತರದ ವರ್ಷವೇ ನಿಜಾಮ ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಭಾರತೀಯ ಸೇನೆ ಬಂದು ಅದು ರಜಾಕಾರರನ್ನು, ನಿಜಾಮರನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಅಷ್ಟೆ ಅಲ್ಲ. ಭೂಮಾಲೀಕರ ವಿರುದ್ಧ ಹೋರಾಡಿದ ಬಡರೈತರು, ಕಸುಬುದಾರರು, ಕೂಲಿಕಾರರು ಕೂಡ ದಮನಕ್ಕೆ ಒಳಗಾದರು. ಈ ವಿಷಯವು ‘ವೀರ ತೆಲಂಗಾಣಾ ವಿಪ್ಲವ ಪೋರಾಟಂ – ಗುಣ ಪಾಟಾಲು’ ಕೃತಿಯಿಂದ ತಿಳಿಯುತ್ತದೆ. ತೆಲಂಗಾಣ ರೈತ ಹೋರಾಟವು, ‘ಯಾವುದೇ ಮತೀಯ ಇಲ್ಲವೇ ಜಾತಿಯ ಧ್ವನಿಯಿಲ್ಲದೆ, ಬಡರೈತರ ಆರ್ಥಿಕ – ಸಾಮಾಜಿಕ ಸಮಸ್ಯೆಗಳನ್ನು ರಾಜಕೀಯ ಸನ್ನಿವೇಶಗಳಿಗೆ ಕೂಡಿಸಿ, ನಡೆಸಿದ ಹೋರಾಟವಿದು’[4] ಎಂದು ಬುದ್ಧಿಜೀವಿಗಳು ಅರ್ಥೈಸಿದ್ದಾರೆ.

೨೦೦೧, ಮಾರ್ಚ್ ೧೬ರ ‘ಫ್ರಂಟ್‍ಲೈನ್’ ಪತ್ರಿಕೆಯಲ್ಲಿ ಎ.ಜಿ.ನೂರಾನಿ ಅವರ ‘ಆಫ್ ಎ ಮೆಸಾಕ್ರ ಅನ್ ಟೋಲ್ಡ್ ’ ಎಂಬ ಲೇಖನವೊಂದು ಪ್ರಕಟವಾಗಿದೆ. ಈ ಲೇಖನದಲ್ಲಿ ೧೯೪೮ರ ಪೊಲೀಸ್ ಆಕ್ಶನ್ ಸಂದರ್ಭದಲ್ಲಿ ನಡೆದ ದುರಂತದ ಬಗ್ಗೆ ವಿವರವಾದ ಮಾಹಿತಿಯಿದೆ. ಪೊಲೀಸ್ ಕಾರ್ಯಾಚರಣೆ ಸಂದರ್ಭದಲ್ಲಿ ಹತ್ಯೆಗಳು, ಅದರಲ್ಲೂ ಮುಸ್ಲಿಮರ ಹತ್ಯೆಗಳು ನಡೆದ ದುರಂತದ ಬಗ್ಗೆ ಅನೇಕ ವಿದ್ವಾಂಸರು ಅಸಮಾಧಾನ ವ್ಯಕ್ತಪಡಿಸಿ ಲೇಖನಗಳನ್ನು ಬರೆಯುತ್ತಾರೆ. ಆಗ ಭಾರತ ಸರಕಾರವು ಒಂದು ಸಮಿತಿಯನ್ನು ರಚಿಸುತ್ತದೆ. ಅದೇ ‘ಸುಂದರಲಾಲ್ ಸಮಿತಿ’. ಅದು ಸಂಸ್ಥಾನದಲ್ಲಿ ಕ್ಷೇತ್ರಕಾರ್ಯಮಾಡಿ ವಿವರವಾದ ವರದಿಯನ್ನು ಭಾರತ ಸರಕಾರಕ್ಕೆ ಒಪ್ಪಿಸುತ್ತದೆ. ಅದನ್ನು ವಲ್ಲಭಬಾಯಿ ಪಟೇಲರು ಒಪ್ಪುವುದಿಲ್ಲ. ಹೀಗಾಗಿ ಅದು ಬಹಿರಂಗಗೊಂಡಿಲ್ಲ. ಆ ವರದಿಯ ಕೆಲವು ಮಾಹಿತಿಯನ್ನು ‘ಆಫ್ ಎ ಮೆಸಾಕ್ರ ಅನ್ ಟೋಲ್ಡ್ ’ ಲೇಖನದಲ್ಲಿ ಕೊಡಲಾಗಿದೆ.

ಟು,

೧. ದಿ ಹಾನರಬಲ್ ದಿ ಪ್ರೈಮ್ ಮಿನಿಸ್ಟರ್ ಗೌವರ್ನ್ ಮೆಂಟ್ ಆಫ್ ಇಂಡಿಯಾ, ನ್ಯೂಡೆಲ್ಲಿ

೨. ದಿ ಹಾನರಬಲ್ ದಿ ಸ್ಟೇಟ್ಸ್ ಮಿನಿಸ್ಟರ್ ಗೌವರ್ನ್ ಮೆಂಟ್ ಆಫ್ ಇಂಡಿಯಾ, ನ್ಯೂಡೆಲ್ಲಿ

ಸರ್,

ಭಾರತ ಸರಕಾರವು ಕೇಳಿಕೊಂಡ ಮೇರೆಗೆ ನಾವು ಹೈದರಾಬಾದ್ ರಾಜ್ಯದಲ್ಲಿ ಸೌಹಾರ್ದತೆಯನ್ನು ಉಂಟುಮಾಡುವ ಸಲುವಾಗಿ ಪ್ರವಾಸ ಮಾಡಿದೆವು. ನಮ್ಮ ಜವಾಬ್ದಾರಿ ಮುಗಿದ ಮೇಲೆ ಅದರ ವರದಿಯನ್ನು ಒಪ್ಪಿಸುತ್ತಿದ್ದೇವೆ.

೧. ಈ ಸಮಿತಿಯಲ್ಲಿ ಸುಂದರಲಾಲ್, ಖಾಜಿ ಅಬ್ದುಲ್ ಗಫರ್ ಮತ್ತು ಮೌಲಾನಾ ಅಬ್ದುಲ್ ಮಿಶ್ರಿ ಇದ್ದರು. ೨೯ ನವೆಂಬರ್ ಹೈದರಾಬಾದ್ ಬಂದು ಡಿಸೆಂಬರ್ ೨೧ರಂದು (೧೯೪೮) ದೆಹಲಿಗೆ ಹಿಂದಿರುಗಿದೆವು. ಈ ಸಂದರ್ಭದಲ್ಲಿ ರಾಜ್ಯದ ೧೬ ಜಿಲ್ಲೆಗಳ ಪೈಕಿ ೯ ಜಿಲ್ಲೆಗಳಿಗೆ, ಏಳು ಜಿಲ್ಲಾ ಕೇಂದ್ರಗಳಿಗೆ, ೨೧ ನಗರಗಳಿಗೆ, ೨೩ ಹಳ್ಳಿಗಳಿಗೆ ಭೇಟಿನೀಡಿದೆವು. ಅದರೊಂದಿಗೆ ೧೦೯ ಹಳ್ಳಿಗಳ ೫೦೦ ಮಂದಿಯನ್ನು ಭೇಟಿಯಾಗಿದ್ದೇವೆ. ಅಷ್ಟೇ ಅಲ್ಲದೆ ೩೧ ಸಾರ್ವಜನಿಕ ಸಭೆಗಳು, ಜಮಾತೆ ಇಸ್ಲಾಂ, ಇತ್ತೇಹಾದುಲ್ ಮುಸ್ಲಿಮ್ ಸಂಘಟನೆಗಳು, ವಿದ್ಯಾಸಂಸ್ಥೆಗಳ ಅಧ್ಯಾಪಕರು, ವಿದ್ಯಾರ್ಥಿಗಳು ಪ್ರೊಗ್ರೆಸ್ಸಿವ್ ಆರ್ಗನೈಜೇಷನ್ ರೈಟರ್ಸ್‌ನ ಪದಾಧಿಕಾರಿಗಳು, ಹಿಂದೂಸ್ತಾನಿ ಸಭಾದ ಸದಸ್ಯರೊಂದಿಗೆ ಭೇಟಿ ನಡೆಸಿದ್ದೇವೆ. ೨೭ ಖಾಸಗಿ ಸಭೆಗಳಲ್ಲಿ ಪಾಲ್ಗೊಂಡಿದ್ದೇವೆ.

ನಾವು ಭೇಟಿಯಾದ ಮುಖ್ಯ ವ್ಯಕ್ತಿಗಳೆಂದರೆ, ಹೈದಾರಾಬಾದಿನ ನಿಜಾಮ, ಮೇಜರ್ ಜನರಲ್ ಚೌದ್ರಿ, ಬಕಾಲೋ, ಚೀಫ್ ಸಿವಿಲ್ ಆಡ್ಮಿನಿಸ್ಟ್ರೇಟರ್, ಸ್ವಾಮಿ ರಮಾನಂದ ತೀರ್ಥ, ಡಾ.ಮೇಲುಕೋಟೆ, ರಾಮಚಂದ್ರರಾವ್, ರಾಮಚಾರಿ, ಕೆ.ವೈದ್ಯ ವೆಂಕಟರಾವ್, ಅಬ್ದುಲ್ ಹಸನ್ ಸೈಯ್ಯದ್ ಅಲಿ, ನವಾಬ್ ಅಲಿ ಯಾರ್ ಜಂಗ್, ನವಾಬ್ ಜೈನ್ ಯಾರ ಜಂಗ್, ರಾಜ ದೊಂಡೆರಾಜ, ಮೌಲಾನ ಅಬು ಯೂಸೂಫ್, ಮೌಲ್ವಿ ಅಬ್ದುಲ್ ಖಯ್ಯಾರ್, ಮೌಲ್ವಿ ಹಮೀದ ಉದ್ದೀನ ಖಮರ್ ಫೌರೂಖಿ ಮುಖ್ಯರಾಗಿದ್ದಾರೆ.

ನಾವು ಮಾಡಿದ ಎಲ್ಲಾ ಸಭೆ ಮತ್ತು ಸಂದರ್ಶನಗಳಲ್ಲಿ ಸಮುದಾಯದ ನಡುವೆ ಶಾಂತಿ ಮತ್ತು ಸೌಹಾರ್ದ ಸ್ಥಾಪಿಸುವುದರ ಬಗ್ಗೆ ಚರ್ಚಿಸಲಾಯಿತು. ನಾಗರಿಕ ಹಕ್ಕುಗಳನ್ನು ರಕ್ಷಿಸುವುದು, ಜಾತ್ಯಾತೀತ ಸರಕಾರದ ಸ್ಥಾಪನೆಗೆ ಹೆಚ್ಚಿನ ಒತ್ತನ್ನು ಕೊಡಲಾಯಿತು. ಇಲ್ಲಿ ನಡೆಸಿದ ಶೋಧನೆಯನ್ನು ತಮ್ಮ ಮುಂದೆ ಮಂಡಿಸುತ್ತಿದ್ದೇವೆ.

೨. ಹೈದರಾಬಾದ್ರಾಜ್ಯದಲ್ಲಿ ೧೬ ಜಿಲ್ಲೆಗಳಿದ್ದು, ೨೨,೦೦೦ ಹಳ್ಳಿಗಳಿವೆ. ಅವುಗಳಲ್ಲಿ ಮೂರು ಜಿಲ್ಲೆಗಳು ಮಾತ್ರ ಸುರಕ್ಷಿತವಾಗಿವೆ. ಇದರಲ್ಲಿ ಹೆಚ್ಚು ಬಾಧಿತವಾದ ಜಿಲ್ಲೆಗಳೆಂದರೆ ಉಸ್ಮಾನಬಾದ, ಬೀದರ್, ಗುಲ್ಬರ್ಗಾ ಈ ಜಿಲ್ಲೆಗಳಲ್ಲಿ ಪೊಲೀಸ್ ಕಾರ್ಯಾಚರಣೆಯ ಮತ್ತು ನಂತರದಲ್ಲಿ ಸತ್ತವರ ಸಂಖ್ಯೆ ಕದಿಮೆಯೆಂದರೆ, ೧೮,೦೦೦ಕ್ಕಿಂತಲೂ ಹೆಚ್ಚು. ಔರಂಗಬಾದ್, ನಲಗುಂಡ, ಮೆಡಕದಲ್ಲಿ ೫೦೦೦ ಜನ ಸತ್ತಿದ್ದಾರೆ. ನಾವು ಸರಿಸುಮಾರು ಅಂದಾಜು ಮಾಡುವುದಾದರೆ. ೨೭,೦೦೦ ದಿಂದ ೪೦,೦೦೦ ಮಂದಿ ಪೊಲೀಸ್ ಕಾರ್ಯಾಚರಣೆಯ ವೇಳೆಯಲ್ಲಿ, ಅನಂತರ ಮೃತರಾಗಿದ್ದಾರೆ. ಉಸ್ಮಾನಬಾದ್, ಗುಲ್ಬರ್ಗಾ, ಬೀದರ್ ಮತ್ತು ನಾಂದೇಡ ಹೆಚ್ಚು ಬಾಧಿತವಾಗಿವೆ. ಈ ನಾಲ್ಕು ಜಿಲ್ಲೆಗಳಲ್ಲಿ ರಜಾಕಾರರು ಹೆಚ್ಚು ಬಲಿಷ್ಠರಾಗಿದ್ದರಿಂದ ಅವರಿಂದ ಜನಗಳು ತುಂಬಾ ತೊಂದರೆಗಳಿಗೆ ಒಳಗಾದರು. ಲಾತೂರ್ ನಗರದಲ್ಲಿ ೨೦ ದಿನಗಳವರೆಗೆ ನಿರಂತರವಾಗಿ ಹತ್ಯಾಕಾಂಡ ನಡೆಯಿತು. ೧೦,೦೦೦ ಜನಸಂಖ್ಯೆಯಿದ್ದ ಈ ನಗರದಲ್ಲಿ ಈಗ ಕೇವಲ ಮೂರುಸಾವಿರ ಜನರಷ್ಟೇ ಉಳಿದಿದ್ದಾರೆ. ಸಾವಿರದಷ್ಟು ಸಂಖ್ಯೆಯಲ್ಲಿ ಜನರನ್ನು ಕೊಲ್ಲಲಾಯಿತು. ಅಲ್ಲದೆ ಉಳಿದವರು ಬಹುಶಃ ಓಡಿ ಹೋಗಿದ್ದಾರೆ.

೩. ಗಲಭೆಗೊಳಗಾದ ಪ್ರದೇಶಗಳಲ್ಲಿ ಹೆಂಗಸು ಮಕ್ಕಳಾದಿಯಾಗಿ ಕೊಲೆಗಳು ನಡೆದಿವೆ. ಅಲ್ಲದೆ ಬಲತ್ಕಾರ, ಒತ್ತಾಯದ ಮತಾಂತರ, ಮಸೀದಿ, ಧ್ವಂಸ, ಲೂಟಿ ಮುಂತಾದ ಕೃತ್ಯಗಳು ನಡೆದವು. ಇವುಗಳಲ್ಲಿ ನೊಂದವರು ಅಲ್ಪಸಂಖ್ಯಾತ ಮುಸ್ಲಿಮರಾಗಿದ್ದಾರೆ. ಈ ದೊಂಬಿಯಲ್ಲಿ ರಜಾಕಾರರಷ್ಟೇ ಅಲ್ಲದೆ ಹೈದರಾಬಾದು ಗಡಿಯಾಚೆಯಿಂದ ಬಂದ ಶಸ್ತ್ರಸಜ್ಜಿತ ಅಥವಾ ಶಸ್ತ್ರ ಹೊಂದಿಲ್ಲದ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪು ನೆರವಾಗಿದೆ. ಇವರು ಭಾರತ ಸರಕಾರದ ಸೈನ್ಯಕ್ಕೆ ಪ್ರೋತ್ಸಾಹ ನೀಡಲು ಬಂದವರಾಗಿದ್ದರು. ನಮಗೆ ಸಿಕ್ಕ ಸ್ಪಷ್ಟವಾದ ಮಾಹಿತಿಯಂತೆ ಸೊಲ್ಲಾಪುರ ಮತ್ತು ಇತರ ನಗರಗಳಿಂದ ಶಸ್ತ್ರ ಸಜ್ಜಿತರಾದ ಮೇಲ್ಜಾತಿ ಕೋಮುವಾದಿ ಸಂಘಟನೆಗಳು ಇದರಲಿ ಪಾಲ್ಗೊಂಡಿವೆ. ಹಾಗೆಯೇ ಸ್ಥಳೀಯ ಮತ್ತು ಹೊರಗಿನ ಮತೀಯವಾದಿಗಳು ಈ ದಂಗೆಯಲ್ಲಿ ನೇರವಾಗಿ ಪಾಲ್ಗೊಂಡಿದ್ದರು.

೪. ನಮ್ಮ ಕರ್ತವ್ಯದ ನಿಮಿತ್ತ ಕೆಲವು ಅತ್ಯಂತ ಅಮಾನುಷವಾದ ಘಟನೆಗಳನ್ನು ಹೇಳಬೇಕಾಗಿದೆ. ಭಾರತದ ಪಡೆಗಳು ಸೈನಿಕರು ಹಾಗೂ ಸ್ಥಳೀಯ ಪೊಲೀಸರು ಕೂಡಿ ಲೂಟಿ ಮತ್ತು ಇತರ ಅಪರಾಧಗಳಲ್ಲಿ ತೊಡಗಿದ್ದು ಎಂಬುದಕ್ಕೆ ನಮಗೆ ಅಧಾರಗಳು ದೊರೆತಿವೆ. ನಮ್ಮ ಗಮನಕ್ಕೆ ಬಂದಂತೆ ಅನೇಕ ಸ್ಥಳಗಳಲ್ಲಿ ಸೈನಿಕರು ಮುಸ್ಲಿಮ್ ಅಂಗಡಿಗಳನ್ನು ಲೂಟಿ ಮಾಡುವುದಕ್ಕೆ ಹಿಂದೂ ಜನರನ್ನು ಒತ್ತಾಯಿಸಿದ್ದು ವರದಿಯಾಗಿದೆ. ಹಿಂದೂ ನೇತಾರರೊಬ್ಬರ ಪ್ರಕಾರ ಮುಸ್ಲಿಮ್ ಅಂಗಡಿಗಳನ್ನು ಸಾಮಾನ್ಯವಾಗಿ ಸೈನಿಕರು ಲೂಟಿ ಮಾಡಿದ್ದಾರೆ. ಇನ್ನೊಂದು ಜಿಲ್ಲೆಯಲ್ಲಿ ಮುನ್ಸೀಫರ ಮನೆಯನ್ನು ಲೂಟಿ ಮಾಡಿದ್ದಲ್ಲದೆ ತಹಶೀಲ್ದಾರರ ಪತ್ನಿಯೊಬ್ಬರನ್ನು ಬಲತ್ಕರಿಸಲಾಯಿತು. ಸಿಖ್ ಸೈನಿಕರಿಂದ ಅತ್ಯಾಚಾರ ಮತ್ತು ದೌರ್ಜನ್ಯಕ್ಕೆ ಒಳಗಾದವರ ಬಗ್ಗೆ ಉಲ್ಲೇಖರ್ಹವಾದ ಮಾಹಿತಿಯಿದೆ. ಹಣ, ಚಿನ್ನ, ಬೆಳ್ಳಿಯನ್ನು ಮಿಲಟರಿಯವರು ಲೂಟಿ ಮಾಡಿದ್ದಲ್ಲದೆ. ಗುಂಪು ಗುಂಪಿಗೆ ಹಂಚಲಾಗಿದೆ. ಈ ಸಂದರ್ಭದಲ್ಲಿ ಸೈನಿಕರು ಕೋಮುವಾದಿ ಭಾವನೆಯಿಂದ ಹೊರಗುಳಿಯಲಿಲ್ಲ. ಇದೊಂದು ಸೇಡಿನ ಕಾರ್ಯಚರಣೆಯಾಗಿತ್ತು. ಜನರಲ್ ಚೌಧರಿ ಸದ್ಯ ಸೈನ್ಯಾಧಿಕಾರಿಯಾಗಿದ್ದರು. ನಮಗೆ ಮುಸ್ಲಿಮರಿಗೆ ವರದಿ ಮಾಡಿದಂತೆ ಹಿಂದುಗಳು ತಮ್ಮ ನೆರೆಯ ಮುಸ್ಲಿಮರಿಗೆ ಜೀವವನ್ನು ಪಣವಾಗಿಟ್ಟು ರಕ್ಷಣೆ ನೀಡಿದ್ದು ಇದೆ. ಸಹೋದ್ಯೋಗಿ ಹಿಂದೂ ಮುಸ್ಲಿಮರಲ್ಲಿ ಈ ಸ್ನೇಹ ಬಾಂಧವ್ಯ ಇನ್ನೂ ಆಳವಾದುದು. ಒಂದು ಕಡೆಯಲ್ಲಿ ಹಿಂದು ನೇತಾರರು ಜೀವದ ಹಂಗುತೊರೆದು ತಮ್ಮ ಸಹೋದ್ಯೋಗಿ ಮುಸ್ಲಿಮರಿಗೆ ರಕ್ಷಣೆ ಕೊಟ್ಟುದ್ದುಂಟು. ಅನೇಕ ಹಿಂದುಗಳು ದೌರ್ಜನ್ಯಕ್ಕೊಳಗಾದ ಮುಸ್ಲಿಮರಿಗೆ ಸಹಾಯ ಹಸ್ತ ನೀಡಿದ್ದಾರೆ.

೫. ಈ ದೌರ್ಜನ್ಯಗಳು ರಜಾಕಾರರು ಹಿಮ್ಮೆಟ್ಟಿದ ಮೇಲೆ, ಆ ಬಳಿಕ ಪೊಲೀಸ್ ಕಾರ್ಯಾಚರಣೆಯ ನಂತರದಲ್ಲಿ ನಡೆದ ಘಟನೆಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಮುಸ್ಲಿಮರಿಗೆ ಹಿಂದೆ ರಜಾಕಾರರಿಂದ ತೊಂದರೆಗೊಳಗಾದ ಹಿಂದೂಗಳ ಸ್ಥಿತಿಯೇ ತಮಗೂ ಒದಗಿರುವುದು ಗಮನಕ್ಕೆ ಬಂತು. ರಜಾಕಾರರಿಗೆ ಹೈದರಾಬಾದಿನಲ್ಲಿ ಹೆಚ್ಚಿನ ಮುಸ್ಲಿಮರು ಒಲವು ತೋರಿದ್ದರು. ಅವರಿಗೆ ಎದುರು ನುಡಿದವರು ಗುಂಡಿಗೆ ಬಲಿಯಾಗುತ್ತಿದ್ದರು. ಸಹಜವಾಗಿಯೇ ಆ ಕಾರಣದಿಂದ ರಜಾಕಾರರಿಗೆ ಬೆಂಬಲ ನೀಡಿದರೆಂದು ಮುಸ್ಲಿಮ್ ಸಮುದಾಯವನ್ನು ಹಿಂಸಿಸಲಾಯಿತು.[1] ಗೋವಿಂದಮೂರ್ತಿ ದೇಸಾಯಿ : ಮುಂಡರಗಿ ನಾಡ ಸ್ವಾತಂತ್ರ್ಯ ಹೋರಾಟ (೨೦೦೦) ಪುಟ-೯೯

[2] ಪರ್ವಿನಾ ಸುಲ್ತಾನ : ರಾಜನೀತಿ, ಸಮಾಜ ಮತ್ತು ಆರ್ಥಿಕತೆ- ಹೈದರಾಬಾದ ಕರ್ನಾಟಕ, ಕರ್ನಾಟಕ ಚರಿತ್ರೆ, ಸಂಪುಟ ೬ (೧೯೯೭), ಪುಟ-೧೬೮

[3] ಶಿವಮೂರ್ತಿಸ್ವಾಮಿ ಅಳವಂಡಿ : ವಿಮೋಚನೆ (೧೯೯೯) ಪುಟ-೧೧೩

[4] ಎನ್.ಪಿ. ಶಂಕರನಾರಾಯಣ ರಾವ್ : ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು (೧೯೯೬) ಪುಟ-೨೮೫