ದಖನ್ ಪ್ರಾಂತದ ಮೇಲೆ ಅಲ್ಲಾವುದ್ದೀನ್ ಖಿಲ್ಜಿ, ಮಲ್ಲಿ ಕಾಫರ್, ಮಹಮ್ಮದ್ ಬಿನ್ ತುಘಲಕ್ ಇವರ ದಾಳಿಗಳು ನದೆದಾಗಲೆಲ್ಲ ಉತ್ತರ ಭಾರತದವರು ದಕ್ಷಿಣದ ಕಡೆ ಬಂದು ಬಂದು ನೆಲೆಸತೊಡಗಿದರು. ಅರಬರು, ಟರ್ಕರು, ಆಫ್ಘನ್ನರು, ಫರ್ಷಿಯನ್ನರು ಮತ್ತು ಮೊಗಲರು ಇದರಲ್ಲಿ ಸೇರಿದ್ದರು. ಸಾಮಾನ್ಯ ಸೈನಿಕನಿಂದ ಹಿಡಿದು ಆಡಳಿತಗಾರರು, ವಿದ್ವಾಂಸರು, ಕವಿಗಳು, ಸೂಫಿಗಳು ಮತ್ತು ಕುಶಲಕರ್ಮಿಗಳು ಇದ್ದು ಇವರೆಲ್ಲರೂ ಮುಂದೆ ಶಾಹಿರಾಜ್ಯಗಳಲ್ಲಿ ನೆಲೆಪಡೆದರು. ಇದಕ್ಕಿಂತ ಪೂರ್ವದಲ್ಲಿಯೇ ಅಂದರೆ ೧೩೧೬-೧೭ರಲ್ಲಿ ಮುಂಬಯಿಯ ಚಾಲ್ ಎಂಬಲ್ಲಿ ೧೦,೦೦೦ ಜನ ಅರೇಬಿಯಾ, ಇರಾಕ್ ಗಳಿಂದ ಬಂದವರು ಮೆಣಸು ಮಾರುತ್ತಿದ್ದರೆಂದು ಅರಬ್ಬೀ ಪ್ರವಾಸಿ ಮಸೂದನು ಹೇಳಿದ್ದಾನೆ. ಇವರು ದಕ್ಷಿಣ ಪ್ರಾಂತದಲ್ಲಿ ಮುಸ್ಲಿಮ್ ರಾಜ್ಯಗಳು ಉದಯಿಸುವ ಮೊದಲು ಈ ಪ್ರಾಂತದಲ್ಲಿ ಬಂದು ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿದ್ದರು. ೧೩೪೨ರಲ್ಲಿ ಬಂದಿದ್ದ ಇಬ್ನ್-ಎ-ಬತೂತನು ದಖನ್ ಪ್ರಾಂತದಲ್ಲಿ ಅರಬರ ನೆಲೆಗಳನ್ನು ಪ್ರಸ್ತಾಪಿಸಿದ್ದಾನೆ. ಮಹಮ್ಮದ್ ಬಿನ್ ತುಘಲಕನು ದೆಹಲಿಯಿಂದ ದೇವಗಿರಿಗೆ (ದೌಲತಾಬಾದು) ರಾಜಧಾನಿಯನ್ನು ವರ್ಗಾಯಿಸಿದಾಗ ಇಲ್ಲಿಗೆ ಬಮ್ದು ನೆಲೆಸಿದ ಜನವರ್ಗದ ಬೆಂಬಲದಿಂದಲೇ ಅಲ್ಲವುದ್ದೀನ್ ಹಸನ್ ಗಂಗೂನಿಗೆ ಬಹಮನಿ ರಾಜ್ಯವನ್ನು ಸ್ಥಾಪಿಸಲು ಸಾಧ್ಯವಾಯಿತು. ಈ ಪ್ರಾಂತದಲ್ಲಿ ಶಾಹಿರಾಜ್ಯ ನೆಲೆಗೊಂಡ ಮೇಲಂತೂ ಉತ್ತರದಿಂದ ಎಲ್ಲ ಬಗೆಯ ಜನ ಬರತೊಡಗಿದರು. ೧೪ನೇ ಶತಮಾನದ ಅಂತ್ಯದಲ್ಲಿ ತೈಮೂರನು ದೆಹಲಿಗೆ ದಾಳಿ ಮಾಡಿದ್ದು ಕೂಡ ಪರಿಣಾಮ ಮಾಡಿತು. ‘೧೩೦೦ರಲ್ಲಿ ದೆಹಲಿಯ ಖ್ವಾಜಾ ನಿಜಾಮುದ್ದೀನ್ ಔಲಿ ಆದೇಶದಂತೆ ೭೦೦ ಜನ ಸೂಫಿಗಳು ದಕ್ಷಿಣಕ್ಕೆ ಬಂದು ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಿದರು ಎಂಬ ಪ್ರತೀತಿಯಿದೆ. ಬುರ್ಹಾನುದ್ದೀನ್ ಉಫಾರಿಬ್‍ನ ಮಟ್ಟದ ಹಿರಿಯ ಸೂಫಿ ಸಂತರು ದಕ್ಷಿಣದಲ್ಲಿ ಇಸ್ಲಾಮನ್ನು ಹರಡುವ ಕಾರ್ಯವನ್ನು ಕೈಗೊಂಡರು.’

[1] ಚಿಸ್ತಿ ಪಂಥಕ್ಕೆ ಸೇರಿದ್ದ ಖ್ವಾಜಾ ಬಂದೇನವಾಜ್ ಸೂಫಿಸಂತ ಗುಲಬರ್ಗಾಕ್ಕೆ ಬಂದು ನೆಲೆಸಿದ್ದು ಬಹಮನಿ ಕಾಲದಲ್ಲಿ. ಪ್ರಭುತ್ವವು ಈತನಿಗೆ ವಿಶೇಷ ಮನ್ನಣೆ ನೀಡಿತು. ಹೀಗೆ ಉತ್ತರದಿಂದ ಅನೇಕ ಬಗೆಯ ಜನವರ್ಗವು ವಿಜಾಪುರ, ಗುಲಬರ್ಗಾ, ಬೀದರ, ರಾಯಚೂರು ನಗರಗಳಿಗೆ ಬಂದು ನೆಲೆಸಿದರು. ದಖನ್ ಪ್ರಾಂತದ ಭಾಷೆಗಳು, ಧರ್ಮಗಳು, ಮತ್ತು ಸಂಸ್ಕೃತಿಗಳು ಇಸ್ಲಾಮಿನೊಡನೆ ಮುಖಾಮುಖಿಯಾದವು. ಮರಾಠಿ, ಕನ್ನಡ, ತೆಲುಗು ಭಾಷಿಗರು ಪ್ರಭುತ್ವದ ಭಾಷೆಯಾದ ಅರಬ್ಬಿ, ಫಾರಸಿ ಭಾಷೆಗಳ ಜತೆ ಅನಿವಾರ್ಯವಾಗಿ ಹೊಂದಾಣಿಕೆ ಮಾಡಿಕೊಳ್ಳುವ ಸಂದರ್ಭಗಳು ನಿರ್ಮಾಣವಾದವು. ಹೀಗಾಗಿ ‘ಹಿಂದೂ-ಮುಸ್ಲಿಮ್’ ಜನ ಸಮುದಾಯಗಳು ಅನೇಕ ಕಾರಣಗಳಿಗೆ ಒಂದು ಕಡೆ ಸೇರಿಕೊಳ್ಳವ, ಕೂಡುವ ಒತ್ತಡಗಳಿಗೆ ಒಳಗಾದವು. ಈ ಪ್ರಕ್ರಿಯೆಯಿಂದ ಕನ್ನಡ ಭಾಷೆ-ಸಂಸ್ಕೃತಿ ಸಂಕರವಾಯಿತು. ಇಸ್ಲಾಮ್ ಸಂಸ್ಕೃತಿ ಕೂಡ. ಈ ಪ್ರಾಂತದಲ್ಲಿ ಸಂಕರ ಸಂಸ್ಕೃತಿಯೇ ನಿರ್ಮಾಣವಾಯಿತು. ಬಹಮನಿ ಅರಸರಿಗೆ ಈ ಪ್ರಾಂತದಲ್ಲಿ ನೆಲೆ ನಿಲ್ಲುವ ಅಕಾಂಕ್ಷೆಯಿತ್ತು. ಇದರಿಂದಾಗಿ ಸ್ಥಳೀಯ ಮಟ್ಟದಿಂದ ಇಡೀ ಪ್ರಾಂತದ ಜನಸಮುದಾಯಗಳ ಜತೆ ಸಹಮತದಿಂದ ಬಾಳಲು ಕ್ರಿಯಾಶೀಲರಾದರು. ಆದ್ದರಿಂದ ಬಹಮನಿಗಳು ಈ ಪ್ರಾಂತದಲ್ಲಿ ನೆಲೆನಿಂತ ಮೇಲೆ, ‘ದೆಹಲಿ ಸುಲ್ತಾನರಂತಲ್ಲದೆ ಬಹಮನಿಗಳು ತಾವು ಬಾಗ್ದಾದಿನ ಖಲೀಫರಿಂದ ಸ್ವತಂತ್ರರು ಎಂದು ಹೇಳಿಕೊಂಡರು.’[2]

ಮರಾಠಿ ಭಾಷೆಯ ವೈದಿಕರು ಶಾಹಿರಾಜ್ಯಗಳ ಆಡಳಿತದಲ್ಲಿ ಸೇರಿಕೊಂಡರು. ಅದರಲ್ಲೂ ಆದಿಲ್ ಶಾಹಿಗಳ ಕಾಲದಲ್ಲಿ ವೈದಿಕರು ರಾಜ್ಯದ ಮುಖ್ಯ ಸ್ಥಾನಗಳಲ್ಲಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಹಮನಿಗಳ ಕಾಲದಿಂದಲೂ ಕಂದಾಯ, ಲೆಕ್ಕ ಪತ್ರ ವಿಭಾಗಗಳಲ್ಲಿ ಹಿಂದೂಗಳೇ ಕೆಲಸ ಮಾಡುತ್ತಿದ್ದರು. ಯೂಸುಫ್ ಆದಿಲ್ ಶಾಹನು ಮರಾಠಿ ವೈದಿಕ ಕನ್ಯೆಯನ್ನು ಮದುವೆಯಾಗಿದ್ದ. ಈಕೆ ಮುಂದೆ ಬೀಬೀಜಿ ಖಾನಮ್ ಎಂಬ ಹೆಸರನ್ನು ಹೊಂದಿ ಆದಿಲ್ ಶಾಹಿ ರಾಜ್ಯಾಡಳಿತವನ್ನು ನಿಯಂತ್ರಿಸಿದಳು. ಅಧಿಕಾರಕ್ಕಾಗಿ ಶಾಹಿ ವಂಶಸ್ಥರಲ್ಲಿ ಅಂತಕಲಹಃ ಉಂಟಾದ ಸಂದರ್ಭಒಂದರಲ್ಲಿ ಈ ಮಹಿಳೆ ಪ್ರಧಾನ ಜವಾಬ್ದಾರಿಯನ್ನು ವಹಿಸಿ ರಾಜ್ಯವನ್ನು ಮುನ್ನಡೆಸಿದಳು. ರಾಜ್ಯಾಡಾಳಿತದಲ್ಲಿ ಇತರ ಜನವರ್ಗದವರೂ ಪಾಲ್ಗೊಂಡರು. ಯಾಕೆಂದರೆ ಉತ್ತರದಲ್ಲಿ ಬಂದ ಸೂಫಿಗಳು ಕೆಳಸಮುದಾಯಗಳ ಮೇಲೆ ಪ್ರಭಾವ ಬೀರಿದರು. ಇಸ್ಲಾಮ್ ಧರ್ಮವನ್ನು ಹರಡಬೇಕೆಂಬ ಗುರಿಯನ್ನು ಹೊತ್ತು ಬಂದ ಸೂಫಿಗಳ ಗುಂಪು ಒಂದೆಡೆಯಿತ್ತು. ಇವರು ಅರೆಬಿಕ್ ಭಾಷೆಯನ್ನು ಬಳಸಿ ಕುರಾನ್ ಗ್ರಂಥ ಪಠಿಸುತ್ತ ಮಸೀದಿಗಳಲ್ಲಿ ತಂಗಿದ್ದರೂ ಕೂಡ ರಾಜರ ಬೆಂಬಲದಿಂದ ಸಮಾಜದಲ್ಲಿ ಗಣ್ಯರೇ ಆಗಿದ್ದರು. ಆದರೆ ಚಿಷ್ತಿ ಗುಂಪಿಗೆ ಸೇರಿದ ಸೂಫಿಗಳು ಮೂಲತಃ ನೆಲೆ ನಿಲ್ಲುವ ವ್ಯಕ್ತಿತ್ವದವರಾಗಿರಲಿಲ್ಲ. ತಮ್ಮದೇ ಮುಕ್ತ ಧಾರ್ಮಿಕ ವ್ಯಕ್ತಿತ್ವದಿಂದ ಸ್ಥಳೀಯ ಕೆಳವರ್ಗದವರನ್ನು ಆಕರ್ಷಿಸಿ ಸಹಬಾಳ್ವೆಯನ್ನು ರೂಢಿಸಿದರು. ಈ ವರ್ಗವನ್ನು ಆದಿಲ್ ಶಾಹಿಗಳು ಹೆಚ್ಚು ಪ್ರೋತ್ಸಾಹಿಸಿದರು. ಸ್ಥಳೀಯರನ್ನು ಅದರಲ್ಲೂ ಕೆಳವರ್ಗದವರನ್ನು ಮತಾಂತರಗೊಳಿಸುವಂತೆ ಪ್ರಭುತ್ವ ಒತ್ತಾಯಿಸಲಿಲ್ಲ. ಇದು ಸೂಫಿಗಳ ಕಾರ್ಯಚಟುವಟಿಕೆಯನ್ನು ಅವಲಂಬಿಸಿತ್ತು. ಸ್ಥಳೀಯರು ಅದರಲ್ಲೂ ಕೆಳವರ್ಗದವರು ಮೇಲ್ವರ್ಗಗಳ ಧರ್ಮಪದ್ಧತಿ, ಜಾತಿ ಪದ್ಧತಿಯಿಂದ ಬೇಸತ್ತಿದ್ದರು. ಅಸ್ಪೃಶ್ಯರು ಅವಮಾನಿತರಾಗಿ ಬದುಕುವ ಕ್ರಮದಿಂದ ಬಿಡುಗಡೆಯಾಗಲು ಬಯಸುತ್ತಿದ್ದರು. ಇವರ ಹಂಬಲಗಳು ಮತಾಂತರಿಗಳಿಗೆ ಪ್ರಚೋದನೆ ನೀಡಿದವು. ಇಸ್ಲಾಮ್ ಧರ್ಮಕ್ಕೆ ಸೇರುವುದರಿಂದ ಈ ಕಾಲಾವಧಿಯಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಉತ್ತಮ ಬಾಳು ನಡೆಸಲು ಅವಕಾಶಗಳನ್ನು ಪಡೆಯುತ್ತಿದ್ದರು. ಬಿ.ಷೇಕ್ ಅಲಿ ‘ಒಬ್ಬ ವ್ಯಕ್ತಿಯು ಇಸ್ಲಾಂ ಧರ್ಮದ ತೆಕ್ಕೆಗೆ ಬಂದನೆಂದರೆ ಅವನಿಗೆ ಉತ್ತಮ ಉದ್ಯೋಗಾವಕಾಶ ದೊರೆಯುತ್ತಿತ್ತು. ಅವನ ಸಾಮಾಜಿಕ ಸ್ಥಾನಮಾನ ಮೇಲೇರುತ್ತಿದ್ದುದು ಮಾತ್ರವಲ್ಲದೆ, ಸರಕಾರಿ ಉದ್ಯೋಗದಿಂದಲೋ ಇಲ್ಲವೆ, ಯಾವುದಾದರೂ ಕಲೆಯನ್ನೊ, ಕಸುಬನ್ನೋ ಕಲಿಯುವ ಮೂಲಕವಾಗಿಯೋ ಅವನ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತಿತ್ತು. ಆ ಮೊದಲು ಅವನು ಕೇವಲ ಒಬ್ಬ ಜೀತದಾಳು ಆಗಿರುತ್ತಿದ್ದನು.’[3] ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮತಾಂತರದ ಪ್ರಕ್ರಿಯೆ ನಡೆದಿರಬಹುದು. ೧೪-೧೬ನೇ ಶತಮಾನದಲ್ಲಿ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡ ‘ಹಿಂದೂ’ಗಳು ಮೂಲ ಇಸ್ಲಾಮನ್ನು ಸೇರಿಕೊಂಡಿರಬಹುದು. ಆದರೆ ೧೭-೧೮ನೇ ಶತಮಾನದ ನಂತರ ಸೇರಿರಬಹುದಾದ ಕೆಳವರ್ಗವು ಈ ಹೊತ್ತಿನಲ್ಲಿ ಕಾಣುವ ಪಿಂಜಾರರು, ಜಾತಿಗಾರರು, ಕಟುಕರು, ಕಲಾಯಿಗಾರರು ಮುಂತಾದ ಪಂಗಡಗಳಾಗಿ ‘ಮುಸ್ಲಿಮರು’ ಎಂದೇ ಕರೆಯುವ ಈ ಪಂಗಡದವರು ಮೂಲ ಇಸ್ಲಾಮಿಗೆ ಸೇರಿಕೊಳ್ಳಲಾಗಿಲ್ಲ. ಮುಸ್ಲಿಮರಲ್ಲಿ ಈ ಪಂಗಡಗಳು ಕೆಳ ಸ್ಥಾನದಲ್ಲಿವೆ. ಇಂಥಹ ಜನ ಸಮೂಹಗಳಿಂದ ಈ ಪ್ರಾಂತದಲ್ಲಿ ಸಂಕರ ಸಂಸ್ಕೃತಿ ನಿರ್ಮಾಣವಾಯಿತು. ‘ಸಹಬಾಳ್ವೆ’ ಏರ್ಪಟ್ಟಿದ್ದರೆ ಅದು ಇಂಥವರಿಂದ ಎಂಬುದನ್ನು ಕಾಣುತ್ತೇವೆ. ಯಾಕೆಂದರೆ ಇಂಥವರು ಅತ್ತ ಇಸ್ಲಾಮನ್ನು ನಿಜವಾದ ಅರ್ಥದಲ್ಲಿ ಸೇರಿಕೊಳ್ಳುದೆ, ಇತ್ತ ತಮ್ಮ ಮೂಲ ಜಾತಿ, ನಂಬಿಕೆಗಳನ್ನು ಕೈ ಬಿಡದೆ ಎರಡೂ ಸಂಸ್ಕೃತಿಗಳನ್ನು ಒಂದುಮಾಡಿಕೊಂಡು ಜೀವಿಸುವ ಕಲೆ ರೂಢಿಸಿಕೊಂಡರು.ಈ ಪಾತ್ರದಲ್ಲಿ ಆದ ಈ ಪ್ರಕ್ರಿಯೆಯನ್ನು ಕಪಟರಾಳ ಕೃಷ್ಣರಾವ್, ‘ಮುಸಲ್ಮಾನ ಫಕೀರರು ಗುರುಗಳಾದರು. ವೇದವು ಕುರಾನವು ಒಂದೇಯಾಯಿತು. ಈ ಫಕೀರರ ಗೋರಿಗಳೆ ದೇವಸ್ಥಾನಗಳಾದವು. ಕನ್ನಡಿಗರಿಗೆ ಗೋರಿಗಳು ಕುಲದೈವತಗಳಾದವು. ಸಮಾಜದ ಮಾರ್ಗದರ್ಶಿಗಳಾದ ಮೇಲ್ತರಗತಿಯ ಜನರ ಸ್ಥಿತಿಯು ಈ ರೀತಿಯಾಗಿ ಮಾನಸಿಕ ಬದಲಾವಣೆಯಾದಲ್ಲಿ ಸಮಾಜದ ಸಾಮಾನ್ಯ ಜನರು ಲಾಡಿ ಕಟ್ಟಿಕೊಂಡು ದೀನದೀನ ಎನ್ನುತ್ತ ಗೋರಿಗಳಿಗೂ, ಪೀರರಿಗೂ ನೈವೇದ್ಯವನ್ನು ಕೊಡುವುದು ರೂಢಿಯಾದ್ದೇನು ಆಶ್ಚರ್ಯದ ಮಾತಲ್ಲ’[4] ಎಂದು ಹೀಗೆ ಗ್ರಹಿಸಿದ್ದಾರೆ. ‘ಹಿಂದು-ಮುಸ್ಲಿಮ’ರಿಗೆ ದೇವಸ್ಥಾನ-ದರ್ಗಾಗಳು ಭೇದವಿಲ್ಲದೆ ಆರಾಧಿಸುವ ಧಾರ್ಮಿಕ ಕೇಂದ್ರಗಳಾದವು. ಈ ಹೊತ್ತಿನಲ್ಲೂ ಕೆಳವರ್ಗದವರು ದರ್ಗಾಗಳಿಗೆ ನಡೆದುಕೊಳ್ಳುತ್ತಾರೆ. ಪಿಂಜಾರರು, ಜಾತಿಗಾರರು, ಕಟುಕರು ‘ಹಿಂದೂ’ಗಳ ಗುಡಿ, ಮಠಮಾನ್ಯಗಳಿಗೆ ನಡೆದುಕೊಳ್ಳುತ್ತರೆ. ಈ ಪ್ರಾಂತದಲ್ಲಿ ವೈದಿಕ, ಲಿಂಗಾಯುತ ಮತ್ತು ಮುಸ್ಲಿಮ್ ಧರ್ಮಗಳು ಪ್ರಮುಖವಾಗಿದ್ದರೂ ಈ ಧರ್ಮಗಳ ಮೂಲಭೂತ ವಾದಿತ್ವವನ್ನು ನಿರಾಕರಿಸಿ ಹೊರಬಂದು ಬೇರೆ ಪಂಥಗಳಾಗಿ ಬೆಳೆದವುಗಳೂ ಇವೆ. ಈ ಪಂಥಗಳು ಅಂಥ ಜಾತಿಭೇದಗಳನ್ನು ಇಟ್ಟುಕೊಂಡಿಲ್ಲ. ಪ್ರಮುಖ ಧರ್ಮಗಳು ಅವುಗಳ ಉಪ ಪಂಥಗಳ ಆಚೆಯೂ ಸಮುದಾಯಗಳು ಸ್ಥಳೀಯ ದೈವಗಳನ್ನು ಧರ್ಮಾತೀತವಾಗಿ, ಜಾತ್ಯಾತೀತವಾಗಿ ಆರಾಧಿಸಿ ಬದುಕುತ್ತಲೇ ಬಂದಿವೆ. ಬಹುಸಂಸ್ಕೃತಿಗಳಿಗೆ ಎಂದಿನಿಂದಲೂ ಈ ಪ್ರಾಂತದಲ್ಲಿ ಮಾನ್ಯತೆಯಿದೆ. ಇಂಥ ಸಂಕರ ಸಂಸ್ಕೃತಿಯ ಬೆಳವಣಿಗೆಗೆ ಈ ಪ್ರಾಂತವೇ ನೆಲೆಯಾಗಿದೆ.

೧೫-೧೬ನೇ ಶತಮಾನದಲ್ಲಿ ಇನ್ನೊಂದು ಪ್ರಮುಖ ಬೆಳವಣಿಗೆ ಈ ಪ್ರಾಂತದಲ್ಲಿ ಕಾಣಿಸಿತು. ಬಹಮನಿ-ಆದಿಲ್ ಶಾಹಿಗಳು ಈ ಪ್ರಾಂತದಲ್ಲಿ ಆಳ್ವಿಕೆ ನಡೆಸುವ ಕಾಲದಲ್ಲಿ ವಿಜಾಪುರ, ಗುಲಬರ್ಗಾ, ರಾಯಚೂರು, ಬೀದರ, ಹುಬ್ಬಳ್ಳಿ, ಅಥಣಿ, ರಾಯಬಾಗ್ ಮುಂತಾದ ಊರುಗಳೆಲ್ಲ ನಗರಗಳಾಗಿ ಅಭಿವೃದ್ಧಿ ಹೊಂದಿದವು. ಅರಸರು ವಾಸಿಸುವ ಸ್ಥಳಗಳಾಗಿ, ರಾಜಧಾನಿಗಳಾಗಿ ಪರಿವರ್ತನೆ ಹೊಂದಿದ ಬಳಿಕ ಇಲ್ಲಿ ವ್ಯಾಪಾರ, ಕೈಗಾರಿಕೆಗಳು ಬೆಳೆದು ಈ ನಗರಗಳಿಗೆ ಸಾಂಸ್ಕೃತಿಕ ಮಹತ್ವ ಬಂತು. ಹಿಂದೆ ಬಾದಾಮಿ, ಮಳಖೇಡ ಮತ್ತು ಕಲ್ಯಾಣ ನಗರಗಳಿಗೆ ಇದ್ದ ಸ್ಥಾನಮಾನವನ್ನು ನೆನೆಯಬಹುದು. ಆದರೆ ಶಾಹಿರಾಜ್ಯಗಳು ಬಂದು ನೆಲೆಗೊಳ್ಳುವ ಪೂರ್ವಕಾಲವಧಿಯಲ್ಲಿ ಈ ಪ್ರಾಂತದ ಜನ ಸಮುದಾಯಗಳು ತಮ್ಮ ವಂಶಪಾರಂಪರಿಕ ವೃತ್ತಿಯನ್ನೇ ಅವಲಂಬಿಸಿದ್ದರು. ಅದನ್ನು ಸಂಪ್ರದಾಯ ಎಂಬಂತೆ ನಿಭಾಯಿಸಿಕೊಂಡು ಬರುತ್ತಿದ್ದರು. ಕೃಷಿಕರು ವ್ಯವಸಾಯದಲ್ಲಿ, ಕಸುಬುದಾರರು ತಮ್ಮ ತಮ್ಮ ಕುಲಕಸುಬುಗಳಲ್ಲಿ ಮುಂದುವರಿದಿದ್ದರೆ ಹೊರತು ಬೇರೆ ವೃತ್ತಿ, ಕಸುಬನ್ನು ಅವಲಂಭಿಸಿರುವುದು ಅಷ್ಟಾಗಿ ಕಂಡುಬರುವುದಿಲ್ಲ. ಶಾಹಿರಾಜ್ಯಗಳ ಕಾಲದಲ್ಲಿ ನಗರಗಳ ಬೆಳೆದಂತೆ, ಅವು ವ್ಯಾಪಾರ ಕೇಂದ್ರಗಳಾಗಿ ಅಭಿವೃದ್ಧಿ ಹೊಂದಿದವು. ಪ್ರವಾಸಿಗಳು ಈ ನಗರಗಳಲ್ಲಿ ದೊರೆಯುವ ಎಲ್ಲ ಬಗೆಯ ಭೋಗೋಪಯೋಗಿ ಸರಕಿಗೆ ಆಕರ್ಷಿತರಾಗುತ್ತಿದ್ದರು. ಇದರಿಂದ ಗ್ರಾಮಾಂತರ ಪ್ರದೇಶಗಳ ವೃತ್ತಿಗಾರರು, ಕೃಷಿಕರು ಮುಂತಾದ ಉತ್ಪನ್ನದಾರರು ತಮ್ಮ ಉತ್ಪಾದನೆಗಳನ್ನು ನಗರಗಳಿಗೆ ಒಯ್ದು ವ್ಯಾಪಾರ, ವ್ಯವಹಾರ ನಡೆಸತೊಡಗಿದರು. ಯಾವ ವಸ್ತುಗಳಿಗೆ ಬೇಡಿಕೆ ತೀವ್ರವಾಗಿರುತ್ತದೆಯೋ ಅಂತಹ ಬೇಡಿಕೆಗಳನ್ನು ಪೂರೈಸಲು ತೊಡಗಿದರು. ಇದರಿಂದ ಜನರು ತಮ್ಮ ಪರಂಪರಾಗತ ಕುಲಕಸುಬುಗಳಿಂದ ಬೇರೆ ಕಸುಬುಗಳಿಗೆ ಅನಿವಾರ್ಯವಾಗಿ ತೊಡಗಿಕೊಂಡರು. ನಗರ ವ್ಯಾಪಾರಕ್ಕೆ ಹೊಂದುವಂತಹ ಕಸುಬುಗಳನ್ನು ಕಲಿತು ಉತ್ಪಾದಿಸತೊಡಗಿದರು. ಈ ಬದಲಾವಣೆ ಸಾಂಸ್ಕೃತಿಕವಾಗಿ ಮಹತ್ವದ್ದಾಗಿ ಪರಿಣಮಿಸಿತು. ಈ ಪರಿವರ್ತನೆಗೆ ಶಾಹಿರಾಜ್ಯಗಳು ಕಾರಣವಾದವು. ಈ ಹೊತ್ತಿನಲ್ಲಿಯೂ ಮುಸ್ಲಿಮರಿಗೆ ಇಂಥದ್ದೇ ಒಂದು ವೃತ್ತಿ, ಕಸುಬು ಎಂದಿರುವುದಿಲ್ಲ. ಅನುಕೂಲಕ್ಕೆ ತಕ್ಕಂತೆ ಎಲ್ಲ ಬಗೆಯ ವ್ಯಾಪಾರಗಳಲ್ಲಿ ನಿರತರಾಗಿರುತ್ತಾರೆ. ಇದು ಮುಸ್ಲಿಮೇತರಲ್ಲಿಯೂ ಬೆಳೆಯಲು ಕಾರಣವಾಯಿತು.

ದಖನಿಉರ್ದು ಭಾಷೆಯ ಹುಟ್ಟು ಬೆಳವಣಿಗೆ

ಮಧ್ಯ ಯುಗದಿಂದ ದಖನ್ ಪ್ರಾಂತಕ್ಕೆ ಉತ್ತರದಿಂದ ಬಂದ ಸೈನಿಕರ ಜತೆಗೆ ಅರಬರು, ಟರ್ಕಿಗಳು, ಅಫ್ಘನ್ನರು, ಪರ್ಷಿಯನ್ನರು ಇದ್ದರಷ್ಟೆ. ಅನೇಕ ಬಗೆಯ ಜನವರ್ಗದವರು ಬಂದು ನೆಲೆಸತೊಡಗಿದರು. ಈ ಜನವರ್ಗದಲ್ಲಿ ಸೈನಿಕರಾದಿಯಾಗಿ ಮತಾಂತರಿಗಳು, ಸೂಫಿಸಂತರು, ವ್ಯಾಪಾರಿಗಳು, ವೃತ್ತಿಗಾರರು, ಅಧಿಕಾರಿಗಳು, ಕವಿ-ಕಲಾವಿದರು ಸೇರಿಕೊಂಡಿದ್ದರು. ಅರಬ್ಬಿ, ತುರ್ಕಿ, ಫಾರಸಿ, ಪುಷ್ತು ಮುಂತಾದ ಭಾಷೆಗಳನ್ನು ಮಾತನಾಡುವವರಾಗಿದ್ದ ಇವರೆಲ್ಲ ಈ ಪ್ರಾಂತದಲ್ಲಿ ಒಂದೆಡೆ ಬಾಳಬೇಕಾಯಿತು. ಜತೆಗೆ ಈ ಪ್ರಾಂತದ ಸ್ಥಳೀಯ ಮರಾಠಿ, ಕನ್ನಡ, ತೆಲುಗು, ಭಾಷಿಗರ ಜತೆ ಒಡನಾಟ ಅನಿವಾರ್ಯವಾಯಿತು. ಉತ್ತರದಿಂದ ಬಂದ ಭಿನ್ನ ಭಾಷಿಗರ ನಡುವೆ ಮತ್ತು ಈ ಭಿನ್ನ ಭಾಷೆಗಳು ಸ್ಥಳೀಯ ಭಾಷಿಗರ ನಡುವೆ ವ್ಯವರಿಸುವಾಗ ಭಾಷಿಕ ತೊಡಕು ಉಂಟಾದದ್ದು ಸಹಜವೆ. ಸಂಪರ್ಕ-ಸಂವಹನವು ಈ ಜನವರ್ಗಗಳ ನಡುವೆ ಕೇವಲ ತಾತ್ಕಾಲಿಕವಾಗಿರಲಿಲ್ಲ. ಸುಮಾರು ೨೦೦ ವರ್ಷಗಳ ಹೊತ್ತಿಗೆ ಈ ಭಿನ್ನ ಭಾಷಿಗರು ಈ ಪ್ರಾಂತದಲ್ಲಿದ್ದು ಒಡನಾಡಿದ ಫಲವಾಗಿ ‘ದಖನಿ’ ಎಂಬ ಭಾಷೆಯನ್ನು ಸೃಷ್ಟಿಸಿಕೊಂಡರು. ಈ ‘ದಖನಿ’ ಮಿಶ್ರಭಾಷೆಗಳಿಂದ ರೂಪಗೊಂಡರೂ, ಇದು ಸಂವಹನ ತೊಡಕನ್ನು ನಿವಾರಿಸಿತು. ಆದರೂ ಈ ದಖನಿ ಭಾಷೆಯನ್ನು ಬೀದಿ ಭಾಷೆಯೆಂದು, ಸೈನಿಕರು ಮಾಡಿಕೊಂಡ ಒರಟು ಭಾಷೆಯೆಂದು, ಕಲಬೆರಿಕೆ ಭಾಷೆಯೆಂದು ಮತ್ತು ಅದನ್ನು ಸುಶಿಕ್ಷಿತರು ಬಳಸುವುದು ಅಗೌರವವೆಂದು, ಅಪರಾಧವೆಂದು ಮಡಿವಂತರು, ಮೂಲಭೂತವದಿಗಳು ಹೀಗೆಳೆದರು. ಅದರೆ ಈ ಭಾಷೆ ೧೫-೧೬ನೇ ಶತಮಾನಗಳಲ್ಲಿ ಸಾಂಸ್ಕೃತಿಕವಾಗಿಯೇ ಮಹತ್ವದ್ದಾಗಿ ಪರಿಣಮಿಸಿತು. ಅದು ಅನೇಕ ವರ್ಗದ ಜನರಿಗೆ ಬೇಕಾಗಿತ್ತು. ಸೈನಿಕರು, ವ್ಯಾಪಾರಿಗಳು, ಸೂಫಿಗಳು ಮುಜುಗರವಿಲ್ಲದೆ ಬಳಸತೊಡಗಿದರು. ಮತಾಂತರಿಗಳಿಗೆ ಈ ಭಾಷೆಯ ಅಗತ್ಯ ಹೆಚ್ಚಾಗಿಯೇ ಕಂಡಿತು. ದಿನ ಕಳೆದಂತೆ ದಖನಿ ಭಾಷೆ ಜನ ಭಾಷೆಯಾಗಿ ಪರಿಣಮಿಸಿತು. ಆದಿಲ್ ಶಾಹಿಗಳೂ ಈ ಭಾಷೆಯನ್ನು ಬಳಸುವುದಕ್ಕೆ ಹಿಂಜರಿಯಲಿಲ್ಲ. ಎರಡನೇ ಇಬ್ರಾಹಿಂ ಶಾ ಈ ಭಾಷೆಯನ್ನು ಅರಮನೆಯೊಳಗೆ ಬಿಟ್ಟುಕೊಂಡನು. ಅಲ್ಲಿಯವರೆಗೆ ಧಾರ್ಮಿಕ ಕಾರಣಗಳಿಗೆ ಅರಬ್ಬಿ ಭಾಷೆಯಿತ್ತು. ಆಡಳಿತ ಭಾಷೆಯಾಗಿ ಫಾರಸಿ-ಮರಾಠಿ ಭಾಷೆಗಳಿದ್ದವು. ಆದಿಲ್ ಶಾಹಿಗಳು ದಖನಿಯನ್ನು ಪುರಸ್ಕರಿಸಿದರು ಎಂದರೆ ಜನಸಾಮಾನ್ಯರನ್ನು ಪುರಸ್ಕರಿಸಿದರು ಎಂದಂತಾಯಿತು. ಉತ್ತರದಿಂದ ಬಂದ ಸೂಫಿಸಂತ ಖ್ವಾಜಾಬಂದೇ ನವಾಬ್ ದಖನಿ ಭಾಷೆಯನ್ನೇ ಬಳಸಿ ತನ್ನ ಅನುಭಾವ ಸಾಹಿತ್ಯ ರಚಿಸಿದ. ದಖನಿ ಭಾಷೆಯಲ್ಲಿ ಸಾಹಿತ್ಯವನ್ನು ರಚಿಸುವುದು ದೊಡ್ಡ ಸವಾಲಾಗಿಯೂ, ಕ್ರಾಂತಿಕಾರಿಯಾಗಿಯೂ ಪರಿಣಮಿಸಿತು. ಸ್ವತಃ ೨ನೇ ಇಬ್ರಾಹಿಮ್ ‘ಕಿತಾಬೆ-ನೌರಸ್’ ಎಂಬ ಸಂಗೀತಕ್ಕೆ ಸಂಬಂಧಿಸಿದ ಗ್ರಂಥವನ್ನು ಈ ಭಾಷೆಯಲ್ಲಿ ಬರೆದ. ವಲಿ ಔರಂಗಬಾದ್ (೧೬೬೮-೧೭೪೧) ದಖನಿಯಲ್ಲಿ ಸಮರ್ಥವಾಗಿ ಕಾವ್ಯ ರಚಿಸಿ ಉತ್ತರ ಭಾರತದ ವಿದ್ವಾಂಸರಿಗೆ ಬೆರಗನ್ನುಂಟುಮಾಡಿದೆ. ಮುಂದೆ ಉತ್ತರ ಭಾರತದ ದೆಹಲಿ, ಲಖನೌಗಳಲ್ಲಿ ಈ ಭಾಷೆ ಪರಿಷ್ಕಾರಗೊಂಡು ಉರ್ದು ಭಾಷೆಯಾಗಿ ಜನಪ್ರಿಯವಾಯಿತು. ಇತ್ತ ಔರಂಗಬಾದ್, ಹೈದರಾಬಾದ್ ನಗರಗಳಲ್ಲಿ ಈ ಭಾಷೆ ನೆಲೆಗೊಂಡು, ಈ ಭಾಷೆಯ ಸಾಹಿತ್ಯ-ಕಲೆ-ಸಂಸ್ಕೃತಿಯ ಕೇಂದ್ರಗಳಾಗಿ ಬೆಳೆದವು. ಸುಮಾರು ಮೂರುವರೆ ನಾಲ್ಕು ಶತಮಾನಗಳ ಪುಟ್ಟ ಚರಿತ್ರೆ ಈ ಭಾಷೆಗಿದೆ. ಇಂಥ ದಖನಿ ಭಾಷೆ ಈ ಪ್ರಾಂತದಲ್ಲಿ ಹುಟ್ಟಿಕೊಂಡಿತು. ಈ ಪ್ರಾಂತದಲ್ಲಿ ಇದೇ ಭಾಷೆಯಲ್ಲಿ ಸಾಹಿತ್ಯ ರಚನೆಯಾಯಿತು. ಇಲ್ಲಿಂದಲೇ ಉತ್ತರಕ್ಕೆ ಹೋಗಿ ಅಭಿವೃದ್ಧಿಯಾಯಿತು. ಆದಿ‍ಲ್‍ಶಾಹಿ ಗಳನ್ನು ಬದಿಗೊತ್ತಿ ಬಂದ ಮೊಗಲರ ಕಾಲದಲ್ಲಿ ಈ ಭಾಷೆಗೆ ಹಿನ್ನಡೆ ಕಂಡಂತಾದರೂ ಹೈದರಾಬಾದ್ ನಿಜಾಮರ ಕಾಲದಲ್ಲಿ ಈ ಭಾಷೆಯೇ ರಾಜ್ಯಾಡಳಿತ ಭಾಷೆಯಾಗಿ, ಶಿಕ್ಷಣದ ಭಾಷೆಯಾಗಿ ಘನತೆಯನ್ನು ಪಡೆಯಿತು. ಆದರೆ ಈ ಪ್ರಾಂತದ ಜೀವ ಭಾಷೆಯಾದ ಕನ್ನಡ ಭಾಷೆ, ಅದರಲ್ಲಿ ರಚಿತವಾದ ಸಾಹಿತ್ಯದ ದೊಡ್ಡ ಪರಂಪರೆ ಇದೆ ಎಂಬ ಅರಿವು ಈ ಪ್ರಾಂತದ ಜನರಿಗೆ ಇರಲಿಲ್ಲವೆಂದರೆ ಆಶ್ಚರ್ಯವೇನಲ್ಲ. ೨೦ನೇ ಶತಮಾನದ ಆದಿ ಭಾಗದಲ್ಲಿ ಈ ಪ್ರಾಂತದ ಜನರಿಗೆ ಶರಣರ ವಚನಗಳ ಬಗ್ಗೆ ಸರಿಯಾದ ತಿಳುವಳಿಕೆಯೇ ಇರಲಿಲ್ಲ.

ಬಹಮನಿ-ಆದಿಲ್ ಶಾಹಿಗಳ ಕಾಲದಲ್ಲಿ ಈ ಪ್ರಾಂತ ಅಭಿವೃದ್ಧಿ ಹೊಂದಿತು. ವಿಜಾಪುರ ಸೇರಿದಂತೆ ಈ ಪ್ರಾಂತದಲ್ಲಿ ೧೫ ವಜ್ರದ ಗಣಿಗಳಿದ್ದವು. ಇವುಗಳಲ್ಲಿ ರಾಯಚೂರು ಜಿಲ್ಲೆಯ ರಾವುಲುಕೊಂಡದ ಬಳಿ ದೊಡ್ಡ ವಜ್ರದ ಗಣಿಯಿತ್ತು. ವಜ್ರದ, ಚಿನ್ನದ, ಕಬ್ಬಿಣದ ನಿಕ್ಷೇಪಗಳಿಗಾಗಿಯೇ ಯುದ್ಧಗಳು ಮೇಲಿಂದ ಮೇಲೆ ಸಂಭವಿಸುತ್ತಿದ್ದವು. ಗೋಲ್ಕೊಂಡವು ವಜ್ರ ನಿಕ್ಷೇಪವನ್ನು ಹೊಂದಿತ್ತು. ವಿಜಾಪುರ, ರಾಯಚೂರು ಪ್ರದೇಶಗಳ ಗಣಿಗಳಲ್ಲಿ ದೊರೆಯುತ್ತಿದ್ದ ವಜ್ರಕ್ಕಿಂತ ಗೋಲ್ಕೊಂಡ ಗಣಿಯ ವಜ್ರ ಶ್ರೇಷ್ಠ ಗುಣಮಟ್ಟವನ್ನು ಪಡೆದಿತ್ತು. ‘ಜಗತ್ತಿನಲ್ಲೇ ಅತ್ಯಂತ ದೊಡ್ಡ ವಜ್ರವಾದ ಕೋಹ್-ಎ-ನೂರ್ ವಜ್ರ ಗೋಲ್ಕೊಂಡದಿಂದ ಬಂದದ್ದು.’[5] ಹತ್ತಿ ಬಟ್ಟೆ, ರೇಷ್ಮೆ ಬಟ್ಟೆಗಳು ವಿದೇಶಗಳಿಗೆ ರಫ್ತಾಗುತ್ತಿದ್ದವು. ಕ್ಯಾಲಿಕೋಗಳು, ಮಸ್ಲಿನ್ ಬಟ್ಟೆಗಳಿಗೆ ಯುರೋಪಿನ ಜನ ಬೆರಗಾಗಿ ಹಂಬಲಿಸುತ್ತಿದ್ದರೆಂದು ವಿದೇಶಿ ಪ್ರವಾಸಿಗರು ಉಲ್ಲೇಖಿಸಿದ್ದಾರೆ. ಇರಾನ್, ಮೊಜಾಂಬಿಕ್, ಅರೇಬಿಯಾ, ಪೂರ್ವ ಆಫ್ರಿಕಾಗಳಿಗೆ ಹತ್ತಿಬಟ್ಟೆ, ರೇಷ್ಮೆ ಬಟ್ಟೆಗಳು ಹೇರಳವಾಗಿ ರಫ್ತಾಗುತ್ತಿದ್ದವು. ಬಟ್ಟೆ ನೇಯುವ ಉದ್ಯಮ ಅಭಿವೃದ್ಧಿ ಹೊಂದಿತ್ತು. ಹುಬ್ಬಳ್ಳಿ, ಲಕ್ಷ್ಮೇಶ್ವರಗಳು ನೇಯುವ ದೊಡ್ಡ ಕೇಂದ್ರಗಳಾಗಿದ್ದವು. ಕಬ್ಬಿಣ, ಪೆಟ್ಲುಪ್ಪು, ಅರಿಸಿನ, ಶುಂಟಿ ವಿದೇಶಕ್ಕೆ ರವಾನೆಯಾಗುತ್ತಿತ್ತು. ರಾಯಬಾಗ, ಅಥಣಿ ಮುಂತಾದ ಮುಖ್ಯ ಮೆಣಸಿನ ವ್ಯಾಪಾರ ಕೇಂದ್ರಗಳಾಗಿ ಇಲ್ಲಿಂದಲೇ ಮೆಣಸು ಪೋರ್ಚುಗಲ್ಲಿಗೆ ರಫ್ತಾಗುತ್ತಿತ್ತು. ಈ ಪ್ರಾಂತದ ಪೆಟ್ಲುಪ್ಪು ಪ್ರಸಿದ್ಧಿಯನ್ನು ಪಡೆದಿತ್ತು. ಮುಂದೆ ಬ್ರಿಟಿಷರು ಇದನ್ನು ಅಭಿವೃದ್ಧಿ ಪಡಿಸಿ ವಾಣಿಜ್ಯ ಉತ್ಪನ್ನವಾಗಿ ಮಾಡಿ ಇಂಗ್ಲೆಂಡಿಗೆ ಕಳಿಸಿ ಲಾಭ ಮಾಡಿಕೊಂಡರು.

ಕೊಡೇಕಲ್ಲು ಪರಿವಾರದ ಸಾಹಿತ್ಯ, ಸಂಸ್ಕೃತಿ

‘ಸುರಪುರ ತಾಲೂಕಿನ ಕೊಡೇಕಲ್ ಗ್ರಾಮದ ಬಸವಣ್ಣನ ಗುಡಿಯಲ್ಲೊಂದು ಗ್ರಂಥಕ್ಕೆ ಪೂಜೆ ಸಲ್ಲುತ್ತದೆ. ಅದನ್ನು ಪೂಜಾರಿಯೂ ಸ್ನಾನಮಾಡಿ ಮುಟ್ಟಬೇಕು. ಅವನೂ ಅದನ್ನು ತೆಗೆದು ನೋಡುವಂತಿಲ್ಲ, ಒಳಗೆ ಏನಿದೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಯಾರೋ ಹೇಳಿದರಂತೆ, ಅಂದಿನ ಅಲ್ಲಿಯ ವರಿಷ್ಠ (ಅರಿಷ್ಠ?) ಅಧಿಕಾರಿಗಳಿಗೆ – ಆ ಗ್ರಂಥದಲ್ಲಿ ನಿಜಾಮರ ಭವಿಷ್ಯ ಬರೆದಿದೆಯೆಂದು. ಸರಿ, ಪೋಲಿಸರನ್ನು ಕಳಿಸಿದರು. ಆ ಗ್ರಂಥವನ್ನು ಕಿತ್ತು ತರಲು! ಅವರು ಕಾಲ್ಮರಿಗಳನ್ನೂ ಕೂಡ ತೆಗೆಯದೆ ಒಳಹೊಕ್ಕು ಆ ಗ್ರಂಥವನ್ನು ಪೂಜಾರಿ ಕೈ ಮುಗಿದು ಬೇಡಿಕೊಂಡರೂ ಕೇಳದೆ ಕಸಿದು ತಂದರಂತೆ. ಆ ಅಸುರೀ ಆಡಳಿತ ಕೊನೆಗೊಳ್ಳುವವರೆಗೆ ಅನ್ನ ಮುಟ್ಟುವುದಿಲ್ಲವೆಂದು ಪೂಜೆ ಮಾಡುವ ಜಂಗಮ ಘೋಷಿಸಿ ಬಿಟ್ಟನಂತೆ. ಆ ಗ್ರಂಥ ಅವಲೋಕನೆಗಾಗಿ ಮಾನ್ವಿ ನರಸಿಂಗರಾಯರ ಮತ್ತು ನನ್ನ ಬಳಿಗೆ ಬಂದಿತು. ಇಬ್ಬರೂ ಸ್ನಾನಮಾಡಿ ಬಿಚ್ಚಿದೆವು. ಅದನ್ನು ಸುತ್ತಿದ್ದ ರೇಷ್ಮೆ ಬಟ್ಟೆಯನ್ನು ಒಂದಾದ ಮೇಲೊಂದರಂತೆ ಏಳು ಬಟ್ಟೆಗಳನ್ನು ಸುತ್ತಿದ್ದರದಕ್ಕೆ. ಏಳು ಸುತ್ತಿನ ಕೋಟೆಯೊಳಗೆ ಇದ್ದ ಆ ಗ್ರಂಥದಲ್ಲಿ ಏನಿರಬಹುದೋ ಎಂಬ ಕುತೂಹಲ ಒಂದೊಂದು ಬಟ್ಟೆಯನ್ನು ಬಿಚ್ಚುತ್ತಲೂ ಹೆಚ್ಚುತ್ತ ನಡೆದಿತು. ಕೊನೆಗೊಮ್ಮೆ ಗ್ರಂಥ ಕಣ್ಣಿಗೆ ಬಿದ್ದಾಗ ಕುತೂಹಲದ ಗರುಡ ಗರಿಗೆದರಿ ಹಾರಿದಂಥ ಅನುಭವ. ಸಾವಧಾನವಾಗಿ ಓದಿದಾಗ ಅದು ಬಸವಣ್ಣನವರ ಬಗ್ಗೆ ಬರೆದಿದ್ದ ವಚನಗಳು, ಸ್ವರವಚನಗಳ, ಹಾಡುಗಳ ಸಂಕಲನವೆಂಬುದು ಗೊತ್ತಾಯಿತು. ನಮ್ಮ ವರದಿಯೊಡನೆ ಆ ಗ್ರಂಥವನ್ನು ಮೇಲಾಧಿಕಾರಿಗಳಿಗೆ ಕಳಿಸಿ ಕೊಟ್ಟೆವು.’[6] ಇದು ಸಿದ್ದಯ್ಯ ಪುರಾಣಿಕರಿಗೆ ಆದ ಅನುಭವ ಕಥನ. ಸು. ೧೫-೧೬ನೇ ಶತಮಾನದ ಮಧ್ಯಭಾಗದಲ್ಲಿ ಈ ಪ್ರಾಂತದ ಕೊಡೇಕಲ್ಲಿನಲ್ಲಿ ಕೊಡೇಕಲ್ಲು ಬಸವಣ್ಣ ಮತ್ತು ಆತನ ಪರಿಸರದ ಸಾಹಿತ್ಯವನ್ನು ೨೦ನೇ ಶತಮಾನದ ಕೊನೆಯ ದಶಕದವರೆಗೂ ಜಗುಲಿಯ ಮೇಲಿಡಲಾಗಿತ್ತು. ಇದೇ ಪರಿಸರಕ್ಕೆ ಸಂಬಂಧಿಸಿದವನೆಂದು ಹೇಳಲಾಗುತ್ತಿರುವ ಮಂಟೇಸ್ವಾಮಿಯ ಗುಡಿ (ಗದ್ದುಗೆ) ಇರುವ ಬೊಪ್ಪೇಗೌಡನ ಪುರ (ಮಳವಳ್ಳಿ-ಮಂಡ್ಯ)ದಲ್ಲಿಯೂ ಇದೇ ರೀತಿಯಲ್ಲಿ ಈಗಲೂ ಗ್ರಂಥಗಳ ಕಟ್ಟನ್ನು ಗದ್ದುಗೆಯ ಮೇಲಿರಿಸಿ ಪೂಜೆ ಮಾಡಲಾಗುತ್ತಿದೆ. ಈ ಗ್ರಂಥಗಳ ಕಟ್ಟಿನಲ್ಲಿ ಏನಿದೆ ಎಂಬುದನ್ನು ಈ ಹೊತ್ತಿನವರೆಗೂ ತೆಗೆದು ನೋಡಲಾಗಿದ್ದಿಲ್ಲ. ಸಿದ್ದಯ್ಯ ಪುರಾಣಿಕರು ತೆಗೆದು ನೋಡಿದರೂ ಅದರ ಬಗ್ಗೆ ಗಮನ ಹರಿಸಲಿಲ್ಲ. ಆದರೆ ಕೊಡೇಕಲ್ಲಿನಲ್ಲಿ ಬಸವಣ್ಣನ ಗುಡಿಯಲ್ಲಿಟ್ಟು ಪೂಜೆ ಮಾಡುತ್ತಿದ್ದ ಗ್ರಂಥಗಳನ್ನು ತೆಗೆದು ಈಗ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದೆ. (ಮೊದಲು ಕೊಡೇಕಲ್ಲು ಬಸವಣ್ಣನ ಮೇಲೆ ಬಸವಲಿಂಗ ಸೊಪ್ಪಿಮಠರು ಪಿಎಚ್.ಡಿ.ಗಾಗಿ ಅಧ್ಯಯನ ಮಾಡಿದರು. ಅದು ಕೊಡೇಕಲ್ಲು ಮಠದ ವತಿಯಿಂದ ೧೯೯೫ರಲ್ಲಿ ಪ್ರಕಟವಾಗಿದೆ.) ‘ಕೊಡೇಕಲ್ಲು ವಚನವಾಕ್ಯ’ (ಸಂ:ಡಾ.ಬಸವಲಿಂಗ ಸೊಪ್ಪಿಮಠ), ‘ರಾಚಪ್ಪಯ್ಯನ ಕೃತಿಗಳು’ (ಸಂ: ಶಿವಾನಂದ ಎಸ್. ವಿರಕ್ತಮಠ) ಹಾಗೂ ‘ವಚನ-ಸ್ವರವಚನ’ (ಸಂ: ಶಿವಾನಂದ ಎಸ್. ವಿರಕ್ತಮಠ) ಈ ಮೂರು ಸಂಪಾದನ ಗ್ರಂಥಗಳು (ಕ್ರಮವಾಗಿ ೧೯೯೮, ೧೯೯೯, ೨೦೦೦ರಲ್ಲಿ) ಪ್ರಕಟವಾಗಿವೆ. ಕೊಡೇಕಲ್ಲು ಪರಿವಾರಕ್ಕೆ ಸೇರಿದ ಬಸವಣ್ಣ, ರಾಚಪಯ್ಯ, ಸಂಗಪ್ಪಯ್ಯ, ವೀರಸಂಗಪ್ಪಯ್ಯ, ನೀಲಮ್ಮ, ತಿಂಥಿಣಿ ಮೋನಪ್ಪಯ್ಯ, ಸಾಲೋಟಗಿ ಶಿವಯೋಗಿಶ್ವರ, ನಾಗಾವಿ ಈರಪ್ಪಯ್ಯ, ಮಂಟೇಸ್ವಾಮಿ, ಮುಂತಾದವರಲ್ಲದೆ ಅನಾಮಧೇಯರೂ ಸೇರಿದಂತೆ ೧೫-೧೬ನೇ ಶತಮಾನದ ಇವರೆಲ್ಲರ ಸಾಹಿತ್ಯ ಪ್ರಕಟವಾಗುವುದರ ಜತೆಗೆ, ಈ ಪರಿವಾರದವರ ಬಗ್ಗೆ ಸಂಶೋಧನೆಯೂ ನಡೆಯಬೇಕಾಗಿದೆ. ಯಾಕೆಂದರೆ ಕೊಡೇಕಲ್ಲು ಪರಿವಾರದವರು ಬದಲಾದ ರಾಜಕೀಯ, ಸಾಂಸ್ಕೃತಿಕ ಬಿಕ್ಕಟ್ಟುಗಳ ನಡುವೆ ನಿಗೂಢವಾಗಿ ತಮ್ಮ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿದಂತೆ ಕಾಣುತ್ತದೆ.

ಕಲ್ಯಾಣದಲ್ಲಿ ಉದ್ಭವವಾದ ಸಾಂಸ್ಕೃತಿಕ ಬಿಕ್ಕಟ್ಟನ್ನು ಎದುರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಶರಣರು ಚದುರಿ ಹೋದರಷ್ಟೆ. ಕೃಷ್ಣಾನದಿಯಿಂದ ಹಿಡಿದು ಕಾವೇರಿ ನದಿಯ ನಡುವಿನ ಆಯಕಟ್ಟಿನ ಸ್ಥಳಗಳಲ್ಲಿ ಶರಣರು ನೆಲೆಪಡೆದುಕೊಂಡರು. ಶರಣರ ಪರಂಪರೆ ಮುಂದುವರಿದು ಎರಡು ಶತಮಾನಗಳ ಕಾಲ ಬದಲಾದ ರಾಜಕೀಯ, ಧಾರ್ಮಿಕ, ಸಾಮಾಜಿಕ ಬದುಕಿನೊಂದಿಗೆ ಸಂಘರ್ಷ ನಡೆಸುತ್ತ ನೆಲೆಗೊಂಡರು. ಕೊಡೇಕಲ್ಲು, ಜಲದುರ್ಗ, ಹಂಪೆ, ಎಡೆಯೂರು, ಉಳವಿ ಮುಂತಾದ ಸ್ಥಳಗಳಲ್ಲಿ ಪರಿಸರದಲ್ಲಿ ವೀರಶೈವರಲ್ಲಿದ್ದ ಬಹುಪಾಲು ಜಂಗಮರು ದಕ್ಷಿಣದ ಪ್ರಭುತ್ವಗಳ ಜತೆ ಸಂಘರ್ಷವನ್ನು ಕಟ್ಟಿಕೊಂಡು ಆತಂಕದಲ್ಲಿ ಬದುಕಿದಂತೆ ಕಾಣುತ್ತದೆ. ಕಲ್ಯಾಣದಲ್ಲಿ ಪ್ರಭುತ್ವದ ವಿರುದ್ಧ ಒಂದು ಶಕ್ತಿಯಾಗಿ ಹೋರಾಟ ಮಾಡಿದ ಚರಿತ್ರೆ ಈ ಜಂಗಮರಿಗಿದ್ದುದು ಮುಂದಿನ ಪ್ರಭುತ್ವಗಳಿಗೆ ಭಯವನ್ನುಂಟು ಮಾಡಿರಬೇಕು. ಅಲ್ಪಸಂಖ್ಯಾತರಾದ ಜಂಗಮರು ನೆಲೆ ಪಡೆದಲ್ಲೆಲ್ಲ ತಮ್ಮ ಅಸ್ತಿತ್ವಕ್ಕಾಗಿ ಸಂಘಟಿತವಾಗಿಯೂ ಕೆಲಸ ಮಾಡಿರಬೇಕು. ಇದು ಬಹುಸಂಖ್ಯಾತ ಇತರ ಜಾತಿ-ಧರ್ಮದವರ ಕೋಪಕ್ಕೂ ಕಾರಣವಾಗಿರಬೇಕು. ಒಟ್ಟಿನಲ್ಲಿ ದಕ್ಷಿಣ ಕರ್ನಾಟಕದಲ್ಲಿದ್ದ ಪ್ರಭುತ್ವಗಳು ಈ ಜಂಗಮರನ್ನು ಆಘಾತಕ್ಕೀಡುಮಾಡಿದ ಉದಹರಣೆಗಳಿವೆ. ‘೧೬೮೫ರಲ್ಲಿ ಅರಸನಾಗಿದ್ದ ಚಿಕ್ಕದೇವರಾಜ ಒಡೆಯರ್ ವೀರಶೈವರನ್ನು ಧಮನ ಮಾಡಿದನು. ಹೊಸ ತೆರಿಗೆ ವಿರುದ್ಧ ಸಂಘಟಿತವಾಗಿದ್ದ ಪ್ರತಿಭಟನೆಯಲ್ಲಿ ವೀರಶೈವ ಜಂಗಮರು ಪ್ರಧಾನ ಪಾತ್ರವಹಿಸಿದ್ದರು. ಒಂದು ದೇವಾಲಯದಲ್ಲಿ ರಾಜವನ್ನು ಬೇಟಿಯಾಗಲು ಬರಬೇಕೆಂದು ಮೋಸದಿಂದ ಆಹ್ವಾನಿಸಲಾಯಿತು. ಕೊಲೆಗಡುಕರು ದೇವಾಲಯದಲ್ಲಿ ಕಾದಿದ್ದು ಒಳಗೆ ಪ್ರವೇಶಿಸಿದ ಸುಮಾರು ೪೦೦ ಜಂಗಮರನ್ನು ಕೊಲೆಗೈದರು. ಅದೇ ದಿನ ರಾಜನ ಆಜ್ಞೆಯ ಮೇರೆಗೆ ೭೦೦ಕ್ಕೂ ಹೆಚ್ಚು ವೀರಶೈವ ಮಠಗಳನ್ನು ವಿಧ್ವಂಸ ಮಾಡಲಾಯಿತು.’[7] ಇಂಥ ಘಟನೆಗಳನ್ನು ಗಮನಿಸಿದರೆ, ಈ ಮೊದಲೆ ೧೫ನೇ ಶತಮಾನದಲ್ಲಿ ಕೊಡೇಕಲ್ಲು ಬಸವಣ್ಣ ಮತ್ತು ಅವನ ಪರಿವಾರವು ಪ್ರಭುತ್ವದ ವಿರೋಧವನ್ನು ಎದುರಿಸಬಹುದು. ರಾಜಕೀಯ ಸ್ಥಿತ್ಯಂತರಗಳಿಂದ ಬದಲಾದ ಸಾಂಸ್ಕೃತಿಕ ಬಿಕ್ಕಟ್ಟುಗಳ ನಡುವೆ ಈ ಪರಿವಾರವು ಬದುಕಿದೆ. ಇದಕ್ಕೆ ಅವರ ಕಾಲಜ್ಞಾನ ಸಾಹಿತ್ಯದ ರಚನೆ ಕೂಡ ಸಾಕ್ಷಿಯಾಗಬಹುದು. ಮೌಖಿಕವಾಗಿದ್ದ ಅವರ ಸಾಹಿತ್ಯವು ಅಕ್ಷರ ಪರಂಪರೆಗೆ ಬಂದುದ್ದಾಗಲಿ, ಅದನ್ನು ಪುನಃ ನಿಗೂಢವಾದ ಅಮರಗನ್ನಡ ಲಿಪಿಗೆ ಬದಲಿಸಿದ್ದು ಇವೆಲ್ಲ ಏನನ್ನು ಹೇಳುತ್ತವೆ? ಈಗಿನ ಕೊಡೇಕಲ್ಲು ಬಸವೇಶ್ವರ ಗುಡಿ-ಮಠ ಮತ್ತು ಅಲ್ಲಿನ ಧಾರ್ಮಿಕ ಚಟುವಟಿಕೆಗಳ ರೀತಿ ರಿವಾಜುಗಳು ಎಲ್ಲವೂ ಅವರು ಎದುರಿಸಿದ ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ತೋರಿಸುತ್ತಿವೆ.

ನೂರೊಂದು ವಿರಕ್ತರು, ಕೊಡೇಕಲ್ಲು ಪರಿವಾರವೂ

ಅನೇಕ ವೀರಶೈವ ಕವಿಗಳು ವಿಜಯನಗರದಲ್ಲಿ, ಅದರಲ್ಲೂ ಪ್ರೌಢದೇವರಾಯನ (೧೪೨೪-೧೪೪೬) ಅಶ್ರಯದಲ್ಲಿದ್ದು ವಚನಗಳನ್ನು, ಸಂಕಲಿಸುವ ಕೆಲಸ ಮಾಡಿದರಷ್ಟೆ. ಕೊಡೇಕಲ್ಲು ಬಸವಣ್ಣ (ಸು. ೧೪೮೯)ನೂ ಕೂಡ ಹಂಪೆಯಿಂದ ಕೊಡೇಕಲ್ಲು ಕಡೆ ಹೋದವನೆಂದು ಹೇಳಲಾಗುತ್ತದೆ. ಕಲ್ಯಾಣದ ಬಸವಣ್ಣನ ಕನಸಿನ ಹೊಸ ಧಾರ್ಮಿಕ ಜೀವನಕ್ರಮವು ಕೊಡೇಕಲ್ಲು ಬಸವಣ್ಣನ ಕಾಲಕ್ಕಾಗಲೇ ಬದಲಾಗಿತ್ತು. ವಿಜಯನಗರ ಅರಸ ಪ್ರೌಢದೇವರಾಯನ ಆಶ್ರಯದಲ್ಲಿ ನಡೆದ ವಚನ ಸಂಕಲನ ಕಾರ್ಯಚಟುವಟಿಕೆಗಳೆಲ್ಲವು ವೀರಶೈವರಿಗೆ ಒಂದು ಧಾರ್ಮಿಕ ಚೌಕಟ್ಟನ್ನು ನಿರ್ಮಿಸಿ ಮಿತಿಯನ್ನು ಹೇರಿದಂತೆ ಕಾಣುತ್ತಿದ್ದವು. ೧೫ನೇ ಶತಮಾನದಲ್ಲಿ ಆರೂಢಪಂಥ ಬೆಳೆಯುತ್ತಿದ್ದುದು ಕಂಡುಬರುತ್ತದೆ. ಆರೂಢ ಪಂಥದ ಬಗ್ಗೆ ಪ್ರತ್ಯೇಕ ಅಧ್ಯಯನಗಳು ನಡೆದಿರುವುದು ಕಮ್ಮಿ. ‘ಆರೂಢ’ ಶಬ್ದವೇ ಸೂಚಿಸುವ ಹಾಗೆ ಏರುವುದು, ಎತ್ತರದ ಸ್ಥಾನಗಳಿಸಿ ರಮಿಸುವುದು ಎಂದರ್ಥ. ಆರೂಢರು ಬಂಧನಗಳಿಂದ ಮುಕ್ತರಾದವರು. ಜೀವನ್ಮುಕ್ತರು, ಮೌನಕ್ಕೆ ಹೆಚ್ಚು ಗಮನವಿರಿಸಿದವರು ಎಂದೆಲ್ಲ ಹೇಳಲಾಗುತ್ತದೆ. ದೇಹ, ಮನಸ್ಸು, ಆತ್ಮದ ಶುದ್ಧೀಕರಣವೇ ಇವರ ಗುರಿ ಎಂದು ಸ್ಥೂಲವಾಗಿ ಹೇಳಬಹುದು. ಧರ್ಮ, ಜಾತಿ, ಅವುಗಳನ್ನು ಪ್ರತಿನಿಧಿಸುವ ಸಂಕೇತಗಳನ್ನು ನಿರಾಕರಿಸಿದ ಪಂಥವಿದು. ಕೊಡೇಕಲ್ಲು ಬಸವಣ್ಣನ ಗುರು ಸಂಗಮೇಶ್ವರನು ಆರೂಢ ಪಂಥದವನು. ಕೊಡೇಕಲ್ಲು ಬಸವಣ್ಣನೂ ಆರೂಢ ಪಂಥವನ್ನು ಬೆಳೆಸಲು ಹಂಪೆಯ ಪರಿಸರದಿಂದ ಕೊಡೇಕಲ್ಲಿಗೆ ಬಂದು ನೆಲೆ ನಿಂತು ತನ್ನ ಚಟುವಟಿಕೆಗಳನ್ನು ಆರಂಭಿಸಿರಬೇಕು. ಅಂದರೆ ೧೫ನೇ ಶತಮಾನದಲ್ಲಿ ಈ ಪ್ರಾಂತದ ತುಂಗಭದ್ರ ನದಿಯ (ಹಂಪೆಯ) ಪರಿಸರದಲ್ಲಿ ‘ನೂರೊಂದು ವಿರಕ್ತರ’ ಚಟುವಟಿಕೆಗಳನ್ನು ನಿರಾಕರಿಸಿ ಅಂದರೆ ಲಿಂಗದೀಕ್ಷೆಯನ್ನು ವಿರೋಧಿಸಿ ಕೃಷ್ಣಾನದಿ ಪ್ರದೇಶದ ಕೊಡೇಕಲ್ಲಿಗೆ ಬಂದು ಆರೂಢ ಪಂಥವನ್ನು ಬೆಳೆಸಲು ಕೊಡೇಕಲ್ಲು ಬಸವಣ್ಣ ಪ್ರಯತ್ನಿಸಿರಬೇಕು. ಆದರೆ ಇದೇ ಪ್ರಾಂತದ ಉತ್ತರ ಭಾಗದಲ್ಲಿ ಶಾಹಿರಾಜ್ಯಗಳ ಆಳ್ವಿಕೆಯಲ್ಲಿ ಇಸ್ಲಾಮ್ ಧರ್ಮವನ್ನು ಕೈಬಿಟ್ಟು, ಇತ್ತ ಮೂಲ ಇಸ್ಲಾಮ್ ಧರ್ಮವನ್ನೂ ಎದುರಿಸಿದ ಕೊಡೇಕಲ್ಲು ಬಸವಣ್ಣ ತನ್ನ ಆರೂಢ ಮತ್ತು ಉತ್ತರದಿಂದ ಬಂದು ನೆಲೆಯೂರುತ್ತಿದ್ದ ಸೂಫಿ ಪಂಥದ ಜತೆ ಸಖ್ಯ ಬೆಳೆಸಿಕೊಂಡು ಆಧ್ಯಾತ್ಮಿಕ ಬದುಕನ್ನು ಕಟ್ಟಿಕೊಂಡಿರಬೇಕು. ಸೂಫಿಗಳು ಕೂಡ ಮೂಲ ಇಸ್ಲಾಂ ಧರ್ಮದಿಂದ ಬೇರೆಯಾಗಿ ಪ್ರೇಮತತ್ವವನ್ನು ಸಾರುವುದಕ್ಕೆ ಪ್ರಯತ್ನಿಸಿದವರು. ರಹಮತ್ ತರೀಕೆರೆ ಗುರುತಿಸಿದಂತೆ ‘ಲಿಂಗಕಟ್ಟುವ ಶರಣರ ಪ್ರಭಾವ ತಗ್ಗಿದಂತೆ ಯೌಗಿಕ ಪಂಥಗಳು ಮತ್ತೆ ಚೈತನ್ಯ ಪಡೆದವು. ಸೂಫಿಗಳು ಸಹಜವಾಗಿ ಇಂಥ ಅನುಭಾವ ಪಂಥಗಳ ಜತೆ ಸೇರಿಕೊಂಡರು. ನಿರಾಕಾರವಾದಿ ಇಸ್ಲಾಮಿಗೂ ಇದು ಪ್ರಿಯವಾದ ಚಿಂತನೆ ಆಗಿತ್ತು. ಹೀಗೆ ಬದಲಾದ ರಾಜಕೀಯ, ಧಾರ್ಮಿಕ ಸನ್ನಿವೇಶದಲ್ಲಿ ಕೊಡೇಕಲ್ಲು ಬಸವಣ್ಣ ರೂಪುಗೊಂಡನು’[8] ಎಂಬುದು ಸರಿಯಾಗಿದೆ. ಕೊಡೇಕಲ್ಲು ಪರಿವಾರವು ಇಸ್ಲಾಂ ಧರ್ಮದಿಂದಲೂ ಪ್ರೇರಿತವಾದಂತೆ ಕಂಡರೂ ಅದು ರಾಜಕೀಯ ಒತ್ತಡದಿಂದ ಆಗಿರಬಹುದು. ಕಲ್ಯಾಣದ ಬಸವಣ್ಣನ ವೀರಶೈವ ಧರ್ಮಕ್ಕೆ ಜನಬೆಂಬಲ ಸಿಕ್ಕಿತು. ಅದರಿಂದಾಗಿ ಅದು ಬೆಳೆಯಿತು. ಮುಂದೆ ಅದರ ಸ್ವರೂಪ ಬೇರೆಯಾಯಿತು. ಕೊಡೇಕಲ್ಲು ಬಸವಣ್ಣನ ಆರೂಢ ಪಂಥ ಜನ ಸಮುದಾಯಗಳ ಒಡಲನ್ನು ಸೇರಿ ಜನಪ್ರಿಯವಾಗಲು ಸಾಧ್ಯವಾಗಲಿಲ್ಲ ಎಂದು ಕಾಣುತ್ತದೆ. ಈ ಮಾತು ಸೂಫಿ ಪಂಥಕ್ಕೂ ಅನ್ವಯಿಸುತ್ತದೆ. ಈ ಪಂಥಗಳು ವ್ಯಕ್ತಿಗಳ ಸಾಧನೆಯನ್ನು ಅವಲಂಭಿಸಿವೆ. ಅಂದರೆ ಬೌದ್ಧ, ಜೈನ, ವೀರಶೈವ ಧರ್ಮಗಳಂತೆ ವ್ಯಾಪಕವಾಗಿ ಮತ್ತು ಬಹಿರಂಗವಾಗಿ ಬೆಳೆದು ನಿಲ್ಲಲಿಲ್ಲ. ಮೇಲಾಗಿ ಆರೂಢ ಮತ್ತು ಸೂಫಿ ಪಂಥಗಳು ಪ್ರಧಾನ ಧರ್ಮಗಳಿಂದ ಬೇರ್ಪಟ್ಟು ಉಪಧರ್ಮಗಳಾಗಿ ಅಥವಾ ಪಂಥಗಳಾಗಿ ಬೆಳೆದವುಗಳಾಗಿವೆ. ಈ ಪಂಥಗಳು ನಿಗೂಢತೆಯನ್ನು ಹೊಂದಿವೆ. ವ್ಯಕ್ತಿಗತ ಬೆಳವಣಿಗೆಗೆ ಬೆಂಬಲ ನೀಡುತ್ತವೆ.ಜಾತಿ, ಧರ್ಮವನ್ನು ನಿರಾಕರಿಸುವ ‘ಗುರು-ಶಿಷ್ಯ’ತನವನ್ನು ರೂಢಿಸಿಕೊಂಡಿವೆ. ಹೀಗಾಗಿ ಈ ಪಂಥಗಳು ಬಹಿರಂಗವಾಗಿ ವ್ಯಾಪಕವಾಗಿ ಕಾಣುವ ಬದಲು, ಅಂತರ್ಗತವಾದ ನೆಲೆಯಲ್ಲಿ ಅಂತರಗಾಮಿಯಾಗಿಯೇ ವ್ಯಾಪಕವಾಗಿ ಬೆಳೆದವು. ಕೊಡೇಕಲ್ಲು ಬಸವಣ್ಣನ ಗುರು ಸಂಗಮನಾಥ (ಜಲದುರ್ಗ), ಸಂಗಮನಾಥ ಗುರು ಪರಮಾನಂದ ಪ್ರಭು (ಅಲ್ಲಮ ಪ್ರಭುವಿನ ಅವತಾರವೆಂದು ಕರೆಸಿಕೊಂಡಿರುವವನು) ಇವರೆಲ್ಲ ಆರೂಢ ಪಂಥಕ್ಕೆ ಸೇರಿದವರು. ಮುಂದೆ ಕೊಡೇಕಲ್ಲು ಬಸವಣ್ಣನ ಶಿಷ್ಯರಾಗಿ ಅಥವಾ ಪರಂಪರೆಯಲ್ಲಿ ಮಂಟೇಸ್ವಾಮಿ ವಡಬಾಳದ ನಾಗನಾಥ, ತಿಂಥಿಣಿ ಮೋನಪ್ಪಯ್ಯ, ಮಳೆಯ ಪ್ರಭು, ನಾಗಾವಿ ಈರಪ್ಪಯ್ಯ, ಸಾಲೋಟಗಿ ಶಿವಯೋಗಿ ಮುಂತಾದವರು ಮುನ್ನೆಡೆದರು. ಇವರೆಲ್ಲ ಅಲ್ಲಮ ಪ್ರಭುವಿನ ಮಾರ್ಗವನ್ನು ಹಿಡಿದವರು. ಕುತೂಹಲದ ಸಂಗತಿಯೆಂದರೆ ಈ ಬಗೆಯ ಪಂಥದವರು ಅಥವಾ ವ್ಯಕ್ತಿತ್ವದವರು ಸಾಹಿತ್ಯವನ್ನು ರಚಿಸಿದ್ದಾರೆ. ಕೊಡೇಕಲ್ಲು ಪರಿವಾರದವರು ರಚಿಸಿದ ಸಾಹಿತ್ಯ ಐದಾರು ಸಾವಿರ ಪುಟಗಳಷ್ಟು ಇರಬಹುದು. ಇವರೆಲ್ಲರ ಸಾಹಿತ್ಯವನ್ನು ತಾತ್ವಿಕ ನೆಲೆಯಿಂದ, ಚಾರಿತ್ರಿಕ ನೆಲೆಯಿಂದ, ಭಾಷಿಕ ನೆಲೆಯಿಂದ, ಸಾಂಸ್ಕೃತಿಕ ನೆಲೆಯಿಂದ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಅತ್ತ ವಚನಕಾರರಂತೆ (ಶರಣರಂತೆ ಬದುಕದೆ) ಬರೆಯದೆ, ಇತ್ತ ಹರಿಹರ, ಚಾಮರಸರಂತೆ ಬರೆಯದೆ ಭಿನ್ನವಾಗಿ ಬರೆದಿದ್ದಾರೆ. ಈ ಭಿನ್ನತೆಯ ಸಾಧ್ಯತೆಗಳನ್ನು ಕುರಿತು ಅಧ್ಯಯನಗಳು ನಡೆಯಬೇಕಾಗಿದೆ. ಕೊಡೇಕಲ್ಲು ಪರಿವಾರವು ಎದುರಿಸಿದ ಸಾಂಸ್ಕೃತಿಕ ಬಿಕ್ಕಟ್ಟು ಅವರು ರಚಿಸಿದ ಕಾವ್ಯಗಳಲ್ಲಿ, ಬಳಸಿದ ಕಾವ್ಯರೂಪ ಮತ್ತು ಕನ್ನಡ ಭಾಷೆಯಲ್ಲಿಯೂ ಇದೆ. ಇಂಥಹ ಬೆಳವಣಿಗೆಯೂ ಇದೇ ಪ್ರಾಂತದಲ್ಲಿ ನಡೆದಿದೆ.

ಅರಾಜಕತೆ

೧೬೮೬ರಲ್ಲಿ ಆದಿಲ್ ಶಾಹಿಗಳ ವಿಜಾಪುರ್ ಮೊಗಲರ ವಶವಾಯಿತು. ಮೊಗಲ ದೊರೆ ಔರಂಗಜೇಬನು ದಖನ್ ಪ್ರಾಂತದ ಮೇಲೆ ದಾಳಿಯ ಮೇಲೆ ದಾಳಿ ಮಾಡಿ ಕೊನೆಗೂ ಆದಿಲ್ ಶಾಹಿಗಳ ಸ್ರಾಮಾಜ್ಯವನ್ನು ಕೊನೆಗಾಣಿಸಿದನು. ಆದಿಲ್ ಶಾಹಿಗಳು ೨೦೦ ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು. ಅವರು ಕಟ್ಟಿದ ಸಾಂಸ್ಕೃತಿಕ ಪರಿಸರವನ್ನು ಮೊಗಲರು ಕದಡಿದರು. ಬಹಮನಿಯ ಫಿರೋಜ್ ಶಾ, ಆದಿಲ್ ಶಾಹಿಯ ೨ನೇ ಇಬ್ರಾಹಿಮ್ ಮುಂತಾದ ಅರಸರು ಈ ಪ್ರಾಂತದ ಬಹುಭಾಷೆಯ, ಬಹುಸಂಸ್ಕೃತಿಯ ಜನಸಮುದಾಯಗಳನ್ನು ಒಟ್ಟುಗೂಡಿಸಿ ಮುನ್ನಡೆಯುವಂತೆ ಶ್ರಮಿಸಿದರು. ಆದರೆ ಔರಂಗಜೇಬನು ಈ ಪ್ರಾಂತದಲ್ಲಿ ಉಳಿದು, ನೆಲೆನಿಂತು ಆಳ್ವಿಕೆ ಮಾಡುವ ಸ್ಥಿತಿಯಲ್ಲಿರಲಿಲ್ಲ. ಮರಾಠರ ಹಾವಳಿಗೆ ಈ ಪ್ರಾಂತ ತತ್ತರಿಸತೊಡಗಿತ್ತು. ಔರಂಗಜೇಬನಿಂದಲೂ ಮರಾಠರ ದಾಳಿಯನ್ನು ನಿಯಂತ್ರಿಸಲಾಗಲಿಲ್ಲ. ೧೭ನೇ ಶತಮಾನ ಮುಗಿಯುತ್ತಿದ್ದಂತೆ ಈ ಪ್ರಾಂತದಲ್ಲಿ ಅರಾಜಕತೆ ಉಲ್ಬಣಿಸಿತು. ನೆಲೆನಿಂತು ಆಳುವ ಪ್ರಭುತ್ವಗಳು ಇರಲಿಲ್ಲ. ನಾಯಕತ್ವದ ಕೊರತೆಯಿಂದ ಜನಸಮುದಾಯಗಳು ಆತಂಕದಲ್ಲಿ ಬದುಕುತ್ತಿದ್ದವು. ದಾಳಿಗಳ ಮೇಲೆ ದಾಳಿಗಳ ನಡೆದವು. ಜೊತೆಗೆ ಈ ಕಾಲದಲ್ಲಿಯೇ ಬರಗಾಲ, ಪ್ಲೇಗು ಒಟ್ಟಿಗೆ ಬಂದು ಇಡೀ ಪ್ರಾಂತ ದುಃಸ್ಥಿತಿಗೆ ಈಡಾಯಿತು. ವಿಜಾಪುರ ನಗರವೇ ಪಾಳು ಬೀಳುವಂತಾಯಿತು. ಅಹಮದ್ ನಗರ, ಗುಲಬರ್ಗಾ, ರಾಯಚೂರು, ಮುಂತಾದ ನಗರಗಳು ಮೊಗಲರ ವಶವಾದ ಮೇಲೆ, ಅವರೇನೂ ಈ ನಗರಗಳನ್ನು ಆಡಳಿತ ಕೇಂದ್ರಗಳನ್ನಾಗಿ ಮಾಡಿಕೊಳ್ಳಲಿಲ್ಲ. ಹೀಗಾಗಿ ನಿರ್ಲಕ್ಷ್ಯಕ್ಕೀಡಾಗಿ ವ್ಯಾಪಾರ ವಹಿವಾಟುಗಳೂ ಕ್ಷೀಣಿಸಿದವು. ಈ ಕಾಲಾವಧಿಯಲ್ಲಿ ಬಂದ ಬರ ಭೀಕರವಾಗಿತ್ತೆಂದು ವಿಜಾಪುರದ ಅದಿಲ್ ಶಾಹಿಗಳ ಚರಿತ್ರೆ ಬರೆದ ಮಹಮ್ಮದ್ ಇಬ್ರಾಹಿಮ್ ಜುಬೇರಿ ಹೀಗೆ ವರ್ಣಿಸಿದ್ದಾನೆ: ‘ಒಂದು ಅಗುಳು ಅನ್ನ ದೊರೆಯುತ್ತಿರಲಿಲ್ಲ. ಅದರಿಂದ ಅನೇಕ ಜನರು ಗವತಿಯ ಬೀಜಗಳನ್ನು ಮತ್ತು ಪ್ರತಿಯೊಂದು ಮರಗಳ ಬೀಜಗಳನ್ನು ತಿಂದು ರಸ್ತೆಯಲ್ಲಿ ಸಾಯುತ್ತ ಬಿದ್ದುದ್ದನ್ನು, ಬಿದ್ದ ಪ್ರೇತಗಳನ್ನು ಕಾಣುತ್ತಿದ್ದರು. ಇನ್ನು ಕೆಲವರು ನಾಯಿ-ಬೆಕ್ಕುಗಳನ್ನು ಕತ್ತರಿಸಿ ತಿಂದು ಪ್ರಾಣ ಉಳಿಸಿಕೊಂಡವರೂ ಇದ್ದರು. ಕೊನೆಗೆ ಅವರೂ ಸತ್ತರು. ಇನ್ನೂ ಕೆಲವರು ಈ ಬರದಲ್ಲಿ ಪ್ರಾಣ ಉಳಿಸಿಕೊಂಡು ಬದುಕಿದವರು ಬೇನೆಗಳಿಂದ ಸತ್ತರು. ಹೀಗೆ ಲಕ್ಷಾವಧಿ ಜನರು ಈ ಬರದಲ್ಲಿ ಸತ್ತರು. ಕೆಲ ಜನರು ಕಫನ-ದಫನಗಳಿಲ್ಲದೆ ಹಾಗೆಯೇ ಸತ್ತು ಭೂಮಿಯ ಮೇಲೆ ಬಿದ್ದರು. ಅ ಪ್ರೇತಗಳನ್ನು ಕಾಗೆ-ಹದ್ದುಗಳು ಹರಿದು ತಿಂದವು. ಬಹಳ ದಿನಗಳವರೆಗೆ ಅರಣ್ಯದಲ್ಲಿ ಜನರ ಎಲುಬುಗಳು ಹಾಸಿಗೆ ಹಾಸಿದಂತಿತ್ತು. ಎಲ್ಲೆಲ್ಲಿ ಹಳ್ಳಿ-ಪಳ್ಳಿಗಳಲ್ಲಿ, ಗ್ರಾಮ-ಗ್ರಾಮಗಳಲ್ಲಿ ಹೋದರೂ ಮನುಷ್ಯರ ತಲೆಗಳು, ಸೊಂಟಗಳು, ಕೈಗಳು, ಕಾಲುಗಳ ಎಲುಬಿನ ಹೊರತು ಖಾಲಿ ಸ್ಥಳ ಕಾಣುತ್ತಿರಲಿಲ್ಲ.’[9]

ಈ ವರ್ಣನೆ ಉತ್ಪ್ರೇಕ್ಷೆ ಅನ್ನಿಸಬಹುದು. ಆದರೆ ೧೮-೧೯ನೇ ಶತಮಾನದಲ್ಲಿ ಕ್ಷಾಮ, ಬರ, ಪ್ಲೇಗು ಮುಂತಾದವುಗಳಿಂದ ಈ ಪ್ರಾಂತ ತಲ್ಲಣಿಸಿ ಹೋದುದ್ದರ ಬಗ್ಗೆ ಪ್ರಸ್ತಾಪಗಳು ಕಾವ್ಯ, ಪುರಾಣ ತತ್ವಪದ, ಜನಪದ ಸಾಹಿತ್ಯದಲ್ಲಿ ಬಹಳ ಕಡೆ ವ್ಯಕ್ತವಾಗಿದೆ. ೧೭೧೩, ೪೭, ೮೭ ಹಾಗೂ ೧೮ನೇ ಶತಮಾನದಲ್ಲಿ ಸುಮಾರು ೧೦-೧೨ ಸಲ ಬರಗಾಲ ಕಾಣಿಸಿಕೊಂಡ ಬಗ್ಗೆ ಪ್ರಸ್ತಾಪಗಳಿವೆ. ೧೮೭೫-೭೭ರ ಚಾರಿತ್ರಿಕವಾದಂಥ ಕ್ಷಾಮವಂತು ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿತು. ೨೦ನೇ ಶತಮಾನದಲ್ಲಿ ೧೯೩೦ರಲ್ಲಿ ಕಾಣಿಸಿಕೊಂಡ ಬರಗಾಲ ಮುಂದೆ ೧೯೩೩, ೩೫, ೩೭ ಹಾಗೂ ೧೯೪೦ರಲ್ಲಿಯೂ ಮುಂದುವರಿಯಿತು. ಕೊಪ್ಪಳ ಪ್ರಾಂತದಲ್ಲಿ ಈ ಭೀಕರ ಬರಗಾಲವನ್ನು ತಾಳದ ಜನರು ಅದರ ಪರಿಹಾರಕ್ಕೆ ತುಂಗಭದ್ರ ನದಿಗೆ ಅಣೆಕಟ್ಟು ಕಟ್ಟುವ ಕೆಲಸ ಆರಂಭಿಸುವಂತೆ ಹೈದರಾಬಾದು ನಿಜಾಮನ ಮೇಲೆ ಒತ್ತಾಯತಂದರು. ಇದಕ್ಕಾಗಿ ದೊಡ್ಡ ಹೋರಾಟವೇ ನಡೆಯಿತು. ಪ್ರಕೃತಿಯ ವೈಪರಿತ್ಯದಿಂದ ಜನಸಮುದಾಯಗಳು ಆಹಾರ, ನೀರುಗಳಿಲ್ಲದೆ ಬಳಲಿದವು. ರಾಜಾಕೀಯವಾಗಿ ಮರಾಠರು ಮೇಲಿಂದ ಮೇಲೆ ದಾಳಿ ಮಾಡುವುದು, ಅವರನ್ನು ಮೊಗಲರು ತಡೆಯಲು ಪ್ರತಿದಾಳಿ ನಡೆಸುವುದು ಈ ಕಾಲದಲ್ಲಿ ನಿರಂತರವಾಗಿ ಸಾಗಿತು. ಈ ಕಾಲಾವಧಿಯಲ್ಲಿ ಫ್ರೆಂಚರು, ಬ್ರಿಟಿಷರು ಅಧಿಕಾರ ಹಿಡಿಯಲು ಹವಣಿಸುತ್ತಿದ್ದರು. ಹೀಗಾಗಿ ರಾಜಕೀಯ ಹಾಹಾಕಾರವೂ ಬಲವಾಯಿತು. ೧೮ನೇ ಶತಮಾನದಲ್ಲಿ ಈ ಪ್ರಾಂತದ ಸ್ಥಿತಿಯ ಬಗ್ಗೆ ಬಿ. ಷೇಕ್ ಅಲಿ ಹೀಗೆ ವ್ಯಕ್ತಪಡಿಸಿದ್ದಾರೆ: ನಿರಂತರವಾಗಿ ರಾಜಕೀಯ ತಂತ್ರಗಳು ಮತ್ತು ದೈಹಿಕ ಬಲ ಇವುಗಳನ್ನು ಎಲ್ಲ ಪಕ್ಷಗಳೂ ತಮ್ಮ ವಿರೋಧಿಗಳನ್ನು ಅಡಗಿಸಲು ಬಳಸುತ್ತಿದ್ದವು. ಪರಿಣಾಮವಾಗಿ ಇಡೀ ದೇಶವೇ ಕುದಿಯುವ ಕುಲಮೆಯಾಗಿತ್ತು. ದೇಶವಿಡೀ ರಣಭೂಮಿಯಾಗಿ ಪರಿವರ್ತನೆಗೊಂಡು ಒಂದಿಷ್ಟು ಸ್ಥಳವೂ ಶಾಂತಿ ನೆಮ್ಮದಿಗಾಗಿ ಉಳಿಯದಂತಾಗಿತ್ತು. ಈ ಪಕ್ಷಗಳಿಗೆ ಅವರು ಮರಾಠರಾಗಲಿ, ನಿಜಾಮನಾಗಲಿ, ಫ್ರೆಂಚರಾಗಲಿ, ಇಂಗ್ಲಿಶರಾಗಲಿ ಅಥವಾ ಹೈದರ್ ಆಗಲಿ ಮುಖ್ಯ ವರಮಾನ ಮೂಲವೆಂದರೆ ಯುದ್ಧ ವಿಜಯಗಳಿಂದ ದೊರಕುವ ಫಲ. ಯಾರಾದರೊಬ್ಬರು ಶಾಂತಿಯಿಂದ ಇರಬಯಸಿದರೂ, ಮಿಕ್ಕವರು ಆ ಸುಖವನ್ನು ಸವಿಯಲು ಅವರನ್ನು ಬಿಡುತ್ತಿರಲಿಲ್ಲ. ಎಲ್ಲರಲ್ಲೂ ಒಂದು ಹುಚ್ಚು ಆವೇಶ, ಸಾಧ್ಯವಾದಷ್ಟು ಭೂಮಿಯನ್ನು ಕಸಿದುಕೊಳ್ಳಬೇಕು, ಕೊಳ್ಳೆಹೊಡೆಯಬೇಕು, ಸಾಧ್ಯವಾದಷ್ಟು ಸಂಪಾದಿಸಬೇಕು. ಅಧಿಕಾರದ ಕಿತ್ತಾಟ ಈ ಹಂತದಲ್ಲಿ ಯಾವುದೇ ಬಗೆಯ ರಚನಶೀಲ ಅಥವಾ ಸಾಂಸ್ಕೃತಿಕ ಬೆಳವಣಿಗೆ ಎನ್ನುವುದು ಸಾಧ್ಯವೇ ಇಲ್ಲದ ವಿಚಾರ. ಇಡೀ ಶತಮಾನವೇ ಒಂದು ಬೇಗುದಿಯ ಸುದೀರ್ಘ ಅವಧಿ. ದಂಗೆ-ಕ್ರಾಂತಿ ಇವು ದಿನದ ಮಾತಾಗಿದ್ದವು. ಯುದ್ಧವೆನ್ನುವುದು ಈ ಕಾಲದ ಸಾಮಾನ್ಯ ಚಟುವಟಿಕೆಯೇ ಆಗಿ ಹೋಯಿತು.[10] ಈ ಅಭಿಪ್ರಾಯವನ್ನು ಹಾಗೂ ಬರವನ್ನು ಕುರಿತು ಮಹಮ್ಮದ್ ಇಬ್ರಾಹಿಮ್ ಜುಬೇರಿ ವರ್ಣನೆಯನ್ನು ಗಮನಿಸದರೆ ಸಾಕು ೧೮ನೇ ಶತಮಾನದಲ್ಲಿ ಈ ಪ್ರಾಂತದ ಜನಸಮುದಾಯಗಳು ಹೇಗೆ ಬದುಕನ್ನು ನಿಭಾಯಿಸಿಕೊಂಡಿರಬಹುದು? ಈ ಎಲ್ಲದಕ್ಕೂ ತುತ್ತಾದವರು ಈ ಪ್ರಾಂತದ ಜನಸಾಮಾನ್ಯರು.[1] ಬಿ. ಷೇಕ್ ಅಲಿ: ಕರ್ನಾಟಕ ಚರಿತ್ರೆ ಸಂಪುಟ=೪ (೧೯೯೭), ಪುಟ-೨೦

[2] ಬಿ. ಷೇಕ್ ಅಲಿ: ಕರ್ನಾಟಕ ಚರಿತ್ರೆ ಸಂಪುಟ=೪ (೧೯೯೭), ಪುಟ-೨೫೭

[3] ಬಿ. ಷೇಕ್ ಅಲಿ: ಕರ್ನಾಟಕ ಚರಿತ್ರೆ ಸಂಪುಟ=೪ (೧೯೯೭), ಪುಟ-೨೨೪-೨೫

[4] ಕಪಟರಾಳ ಕೃಷ್ಣರಾವ್ : ಕರ್ನಾಟಕ ಸಂಸ್ಕೃತಿಯ ಸಂಶೋಧನೆ (೧೯೭೦) ಪುಟ-೨೬

[5] ಬಿ. ಷೇಕ್ ಅಲಿ: ಕರ್ನಾಟಕ ಚರಿತ್ರೆ ಸಂಪುಟ=೪ (೧೯೯೭), ಪುಟ-೨೧೯

[6] ಕಾವ್ಯಾನಂದ : ಕಾವ್ಯಾನಂದ (ಸಿದ್ಧಯ್ಯ ಪುರಾಣಿಕರ ಅಭಿನಂದನ ಗ್ರಂಥ) (೧೯೭೦) ಪುಟ-೧೯೩

[7] ಜಾನ್ ಪೀಟರ್ ಶೌಟನ್ : ಅನುಭಾವಿಗಳ ಕ್ರಾಂತಿ (ಅನು : ಟಿ.ಆರ್. ಚಂದ್ರಶೇಖರ) ಪುಟ-೧೮

[8] ರಹಮತ್ ತರೀಕೆರೆ : ಕರ್ನಾಟಕದ ಸೂಫಿಗಳು (೧೯೯೮) ಪುಟ-೮೨

[9] ಮಹಮ್ಮದ್ ಇಬ್ರಾಹಿಮ್ ಜುಬೇರಿ : ಬುಸಾತಿನೆ ಸಲಾತೀನೆ (೧೯೯೯) (ಅನು : ಕೃಷ್ಣ ಕೊಲ್ಹಾರ ಕುಲಕರ್ಣಿ), ಪುಟ-೫೨೯

[10] ಬಿ. ಷೇಕ್ ಅಲಿ: ಕರ್ನಾಟಕ ಚರಿತ್ರೆ ಸಂಪುಟ=೪ (೧೯೯೭), ಪುಟ-೩,೪