ಈ ಪ್ರಾಂತದಲ್ಲಿ ಇಷ್ಟೆಲ್ಲ ಕೋಮುಗಲಭೆ ೧೯೪೮ರಲ್ಲಿ ನಡೆದ ಮುಗಿದ ಮೇಲೆ, ಅಲ್ಲಿಂದ ಈಚೆಗೆ ಹಿಂದೂ – ಮುಸ್ಲಿಮ್ ನಡುವೆ ಕೋಮು ಗಲಭೆಗಳು ನಡೆದಿಲ್ಲವೆಂದು ಹೇಳಬಹುದು. ಭಾಷಾವಾರು ಪ್ರಾಂತಗಳ ರಚನೆಯ ಹಿನ್ನೆಲೆಯಲ್ಲಿ ಗಲಭೆಗಳಾಗಿವೆಯೇ ಹೊರತು ಮತೀಯ ಗಲಭೆಗಳು ನಡೆದಿಲ್ಲ. ಈಚಿನ ಮೂರು ನಾಲ್ಕು ವರ್ಷಗಳಿಂದ ಈ ಪ್ರಾಂತದಲ್ಲಿ ‘ಹೈದರಾಬಾದ್ ಕರ್ನಾಟಕ ವಿಮೋಚನ ದಿನ’ ವೆಂದು ಸೆಪ್ಟೆಂಬರ್ – ೧೭ರಂದು ‘ಸ್ವಾತಂತ್ರ್ಯೋತ್ಸವ’ವನ್ನು ಆಚರಿಸಲಾಗುತ್ತಿದೆ. ಈ ಆಚರಣೆಯ ಸಮಯದಲ್ಲಿ ನಿಜಾಮನ ವಿರುದ್ಧ, ರಜಾಕಾರರ ವಿರುದ್ಧ ಹೋರಾಡಿದ ನೆನಪುಗಳನ್ನು ಉತ್ಸಾಹದಿಂದ ಕೆದಕಲಾಗುತ್ತಿದೆ. ಇದರಿಂದ ಮುಸ್ಲಿಮ್ ಸಮುದಾಯಕ್ಕೆ ಮುಜುಗರವನ್ನುಂಟು ಮಾಡಲಾಗುತ್ತಿದೆ. ಮೇಲಾಗಿ ಸರ್ದಾರ ವಲ್ಲಭಾಯಿ ಪಟೇಲರ ಮೂರ್ತಿಗಳನ್ನು ಸ್ಥಾಪಿಸಿರುವುದು ಒಳ್ಳೆಯ ಬೆಳವಣಿಗೆಯಾಗಿ ಕಾಣುವುದಿಲ್ಲ. ಕೋಮುವಾದ ಚುರುಕಾಗಿರುವ ಈ ದಿನಗಳಲ್ಲಿ ಇದು ಬೇರೊಂದು ರೂಪ ಪಡೆಯುವ ಸಾಧ್ಯತೆಯಿದೆ. ಈ ಪ್ರಾಂತದಲ್ಲಿ ಕೋಮುವಾದ ಚಿಗುರಬಾರದು. ಇಲ್ಲಿ ಸಹಬಾಳ್ವೆ ಸಹಜ ರೀತಿಯ ಹಾಸುಹೊಕ್ಕಾಗಿ ಬೆಸೆದುಕೊಂಡಿದೆ. ಬಹುಸಂಸ್ಕೃತಿಯೇ ಈ ಪ್ರಾಂತದ ಜೀವಾಳವಾಗಿದೆ.

‘ಹೈದರಾಬಾದು ಕರ್ನಾಟಕ’ವು ೧೯೪೮, ಸೆಪ್ಟೆಂಬರ್ ೧೭ರಂದು ಸ್ವತಂತ್ರ ಭಾರತದಲ್ಲಿ ವಿಲೀನವಾದ ಮೇಲೆಯೂ ಅನೇಕ ಸಮಸ್ಯೆಗಳು ಉದ್ಭವಿಸಿದವು. ಹೊಸದಾಗಿ ರೂಪುಗೊಂಡ ಹೈದರಾಬಾದು ರಾಜ್ಯದಲ್ಲಿ ವಿವಿಧ ಭಾಷಿಗರ ನಡುವೆ ರಾಜಕೀಯ ಸಮಸ್ಯೆಗಳು ತಲೆ ಎತ್ತಿದವು. ತೆಲುಗು ಭಾಷೆಯನ್ನಾಡುವ ಜನ ಭಾಷಾವಾರು ಪ್ರಾಂತ ರಚನೆಗಾಗಿ ಪ್ರತ್ಯೇಕ ಆಂಧ್ರಕ್ಕಾಗಿ ಚಳುವಳುಯನ್ನು ಆರಂಭಿಸಿದರು. ಕನ್ನಡ ಭಾಷೆಯನ್ನು ಜನರೂ ಈ ದಿಸೆಯಲ್ಲಿ ಹೋರಾಟಕ್ಕೆ ಅಣಿಯಾದರು. ಭಾಷಾವರು ಪ್ರಾಂತ ರಚನೆಗಾಗಿ ಈ ಹಿಂದಿನಿಂದಲೂ ಚಲುವಳಿಗಳು ಶುರುವಾಗಿದ್ದವು. ಅದರಲ್ಲೂ ಉರ್ದು ಭಾಷೆಯಿದ್ದ ಈ ಪ್ರಾಂತದ ಜನರಲ್ಲಿ ಅಸಮಾಧಾನವಿತ್ತು. ಕನ್ನಡ ಭಾಷೆಯನ್ನಾಡುವ ಜನರ ಚಲುವಳಿ ತೀವ್ರವಾದಾಗ ಹೈದರಾಬಾದು ರಾಜ್ಯದಲ್ಲಿದ್ದ ಬೀದರ, ರಾಯಚೂರು, ಗುಲಬರ್ಗಾ ಜಿಲ್ಲೆಗಳು ಹೊಸದಾಗಿ ರಚನೆಯಾಗಿದ್ದ ಮೈಸೂರು ರಾಜ್ಯದಲ್ಲಿ ೧೯೫೬ರಲ್ಲಿ ಸೇರಿಕೊಂಡವು. ಕರ್ನಾಟಕದ ನಿಜಾಮ ಪ್ರಾಂತವನ್ನು ಅತಿ ಹಿಂದುಳಿದ ಪ್ರದೇಶವೆಂದು, ಮೊಗಲಾಯಿ ಜನರೆಂದು, ಅವಿದ್ಯಾವಂತರ ಪ್ರಮಾಣ ಹೆಚ್ಚಿದೆಯೆಂದು ಹೀಗೆಳೆದು ಮೈಸೂರು ರಾಜ್ಯದಲ್ಲಿ ಸೇರಿಸಿಕೊಳ್ಳಲು ಆ ಭಾಗದ ಜನರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದರೂ ಸೇರಿಕೊಂಡಿತು. ಮುಂದೆ ೧೯೭೦ರಲ್ಲಿ ‘ಕರ್ನಾಟಕ ರಾಜ್ಯ’ವಾಯಿತು. ಈಚೆಗೆ ಆಡಳಿತದ ಅನುಕೂಲಕ್ಕಾಗಿ ‘ಗುಲಬರ್ಗಾ ವಿಭಾಗ’ವನ್ನು ಮಾಡಿ, ಈ ಮೂರು ಜಿಲ್ಲೆಗಳ ಜತೆಗೆ ಮದ್ರಾಸ್ ಪ್ರಾಂತಕ್ಕೆ ಸೇರಿದ್ದ ಬಳ್ಳಾರಿಯನ್ನು ಸೇರಿಸಲಾಯಿತು. ಈಚೆಗೆ ರಾಯಚೂರು ಜಿಲ್ಲೆ ಒಡೆದು ಕೊಪ್ಪಳ ಜಿಲ್ಲೆ ರಚನೆಯಾಯಿತು. ಹೀಗಾಗಿ ‘ಹೈದರಾಬಾದು ಕರ್ನಾಟಕ’ ಎಂದರೆ ಮೂರು ಜಿಲ್ಲೆಗಳಿಗೆ ಬದಲಾಗಿ ಈಗ ಐದು ಜಿಲ್ಲೆಗಳಾಗಿವೆ.

ಬಹಮನಿ, ಆದಿಲ್ ಶಾಹಿ, ಮೊಗಲ್, ಮರಾಠ ಮತ್ತು ನಿಜಾಮರ ಅಳ್ವಿಕೆಯವರೆಗೆ ಸುಮಾರು ೬೦೦ ವರ್ಷಗಳ ಉದ್ದಕ್ಕೂ ಈ ಪ್ರಾಂತದ ಜನ ಸಮುದಾಯಗಳು ತಮ್ಮ ಕನ್ನಡ, ತೆಲುಗು ಭಾಷೆಗಳ ಜತೆಗೆ ಮರಾಠಿ, ಫಾರಸಿ, ಉರ್ದು ಭಾಷೆಗಳ ಒಡನಾಟದಲ್ಲಿ ಬದುಕುತ್ತ ಬಂದವು. ಮರಾಠ ಪೇಶ್ವೆಯರ ಆಳ್ವಿಕೆಯಲ್ಲಿ ಅವರ ಭಾಷೆ-ಸಂಸ್ಕೃತಿ ಈ ಪ್ರಾಂತದ್ ಬ್ರಾಹ್ಮಣರ ಮೇಲೆ ತೀವ್ರ ಪ್ರಭಾವ ಬೀರಿತು. ಲಿಂಗಾಯತ ಮತ್ತು ಇತರ ಜನವರ್ಗದ ವ್ಯವಹಾರಗಳಲ್ಲಿ ಮರಾಠಿ ಭಾಷೆ ಮಾತ್ರ ಸೇರಿಕೊಂಡಿತು. ಪೇಶ್ವೆಯರ ಆಳ್ವಿಕೆ ಅಂತ್ಯಗೊಂಡರೂ ಪುನಃ ಕನ್ನಡ ಪ್ರದೇಶಗಳಾದ ಮತ್ತು ಬಹುಸಂಖ್ಯಾತ ಕನ್ನಡ ಮಾತಾಡುವವರು ತುಂಬಿರುವ ಅಕ್ಕಲಕೋಟೆ, ಜಮಖಂಡಿ, ಸವಣೂರು, ರಾಮದುರ್ಗ, ಸಾಂಗಲಿ, ಮುಧೋಳ, ಕುಂದರವಾಡ, ಮೀರಜ್ (ಬುಧಗಾಂವ), ಜತ್ತು ಮುಂತಾದ ೧೩ ಸಣ್ಣ ಸಂಸ್ಥಾನಗಳಲ್ಲಿ ಅಧಿಕಾರಸ್ಥರಾಗಿ ಮರಾಠರೇ ಸ್ವಾತಂತ್ರ್ಯ ಬರುವ ಕಾಲದವರೆಗೆ ಮುಂದುವರಿದರು. ಬ್ರಾಹ್ಮಣರಿಗೆ ಪೇಶ್ವೆಗಳ ಭಾಷೆ-ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಲು ಮತ್ತಷ್ಟು ಅವಕಾಶ ದೊರೆಯಿತು. ಈ ಸಂಸ್ಥಾನದಲ್ಲಿ ಲಿಂಗಾಯತರು ಮರಾಠಿ ಭಾಷೆಯನ್ನು ಕಲಿತರೂ ಕನ್ನಡ ಭಾಷೆಯನ್ನು ಜೀವಂತವಾಗಿ ಉಳಿಸಿಕೊಂಡೇ ಬಂದರು.

ನಿಜಾಮರ ಆಳ್ವಿಕೆಯಲ್ಲಿ ಬೀದರ, ಗುಲಬರ್ಗಾ ಜಿಲ್ಲಾ ಪ್ರದೇಶಗಳಲ್ಲಿ ಬ್ರಾಹ್ಮಣರು ಮರಾಠಿ ಭಾಷೆಯ ಜತೆಗೆ ಉರ್ದುವನ್ನು ಕೇವಲ ಶೈಕ್ಷಣಿಕ ಭಾಷೆಯನ್ನಾಗಿ, ಮುಂದೆ ಉಒದ್ಯೋಗಿಗಳಾಗಿ ಆಡಳಿತಾತ್ಮಕ ಭಾಷೆಯನ್ನಾಗಿ ಸ್ವೀಕರಿಸಿದರು. ಲಿಂಗಾಯತರು ಮತ್ತು ಕೆಳವರ್ಗದವರು ಬೇರೆ ಭಾಷೆಗಳನ್ನು ಕಲಿತರೂ ಕನ್ನಡವನ್ನು ಬಿಟ್ಟಿರಲಿಲ್ಲ. ರಾಯಚೂರು ಜಿಲ್ಲಾ ಪ್ರದೇಶದಲ್ಲಿ ಮೇಲ್ವರ್ಗದ ಬ್ರಾಹ್ಮಣರು, ಲಿಂಗಾಯತರು ಕನ್ನಡವನ್ನು ಬಿಡದೆ ನಿತ್ಯವ್ಯವಹಾರಗಳಲ್ಲಿ ಬಳಸುತ್ತ ಬಂದರು. ಉರ್ದು ಭಾಷೆಯನ್ನು ಶೈಕ್ಷಣಿಕ ಅವಶ್ಯಕತೆಗಾಗಿ ಕಲಿತರು. ನಂತರ ಸರಕಾರಿ ಉದ್ಯೋಗಿಗಳೂ ಆದರು. ಕೆಳವರ್ಗದವರು ಮಾತ್ರ ತಮ್ಮ ಕನ್ನಡ ತೆಲಗು (ಗಡಿಭಾಗಕ್ಕೆ ಹೊಂದಿದವರು) ಭಾಷೆಯಲ್ಲೇ ಬದುಕುತ್ತಿದ್ದರು. ಈ ಮಾತು ಗ್ರಾಮಾಂತರ ಪ್ರದೇಶಗಳ ಮುಸ್ಲಿಮರಿಗೂ ಅನ್ವಯಿಸುತ್ತದೆ.

ಗಡಿ ಪ್ರದೇಶಕ್ಕೆ ಸಂಬಂಧಿಸಿದಂತೆ ಆಂಧ್ರದ ಉಸ್ಮಾನಾಬಾದು, ಜಹೀರಾಬಾದು, ನಾಂದೇಡು, ಮೆಹಬೂಬು ನಗರ ಪ್ರದೇಶಗಳಲ್ಲಿ ಕನ್ನಡ ಮಾತೃಭಾಷೆಯ ಜನರು ಹೆಚ್ಚಾಗಿದ್ದರು. ಅವರೆಲ್ಲ ತೆಲುಗು, ಉರ್ದು ಭಾಷೆಯನ್ನು ರೂಢಿಸಿಕೊಂಡರು. ಆದವಾನಿ, ಆಲೂರು, ಅನಂತಪುರ, ಎಮ್ಮಿಗನೂರು, ರಾಯದುರ್ಗ ಮುಂತಾದ ತಾಲೂಕು ಪ್ರದೇಶಗಳಲ್ಲಿ ಕನ್ನಡ ಮಾತೃಭಾಷೆಯ ಜನರೇ ಬಹುಸಂಖ್ಯಾತರು. ಈಗಲೂ ಈ ಸರಹದ್ದಿನಲ್ಲಿ ಕನ್ನಡ ಶಾಲೆಗಳು ಹೆಚ್ಚಾಗಿದ್ದು, ಕನ್ನಡ ಕಲಿಯುವ ಮಕ್ಕಳ ಸಂಖ್ಯೆ ಹೆಚ್ಚಾಗಿಯೇ ಇದೆ. ಆದವಾನಿ, ಆಲೂರು, ಕೌತಾಳಂ ಮಂಡಲಗಳಲ್ಲಿ ಕನ್ನಡ ಶಾಲೆಗಳಿಗಾಗಿ ಜನರು ಹೋರಾಟ ಮಾಡುತ್ತಿರುತ್ತಾರೆ. ಸಂಘ-ಸಂಸ್ಥೆಗಳು ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ. ಕನ್ನಡ ಕಲಿತು, ಮುಂದಿನ ಕಲಿಕೆಗೆ ತೊಂದರೆ ಅನುಭವಿಸಿದರೂ ಈ ಭಾಗಗಳಲ್ಲಿ ಕನ್ನಡ ಕಲಿಯಲು ಉತ್ಸಾಹವನ್ನು ಕಳೆದುಕೊಂಡಿಲ್ಲ. ಆದರೆ ಆಂಧ್ರ-ಕರ್ನಾಟಕ ಸರಕಾರಗಳು ಕನ್ನಡ ಕಲಿಯುವ ಮಕ್ಕಳ ಸಂಕಷ್ಟಗಳನ್ನು ಪರಿಶೀಲಿಸಿ ಯಾವುದೇ ದೃಢ ನಿಲುವುಗಳನ್ನು ಪ್ರಕಟಿಸಿಲ್ಲವೆಂದು ಈ ಭಾಗದ ಜನರ ಕೊರಗು ಈ ಹೊತ್ತಿಗೂ ಮುಂದುವರೆದಿದೆ. ಈ ಪ್ರಾಂತದ ಜನಸಮುದಾಯಗಳಿಗೆ ಅವರ ಭಾಷೆ-ಸಂಸ್ಕೃತಿಗೆ ದೀರ್ಘ ಪರಂಪರೆಯಿದ್ದರೂ ನಡುನಡುವೆ ಬೇರೆ ಭಾಷೆಗಳು-ಸಂಸ್ಕೃತಿಗಳು ಸೇರಿಕೊಂಡವು. ಒತ್ತಡ, ಪ್ರಭಾವಗಳಿಂದ ಈ ಪ್ರಾಂತದ ಬಹುಭಾಷೆ-ಬಹುಸಂಸ್ಕೃತಿಗಳ ಬೀಡಾಗಿ ಸಂಕರ ಸಂಸ್ಕೃತಿ ರೂಪುಗೊಂಡಿತು. ಹೀಗಿರುವಾಗ ಆಧುನಿಕತೆ ಕಾಲಿರಿಸಿದಾಗ ಈ ಪ್ರಾಂತದ ಜನಸಮುದಾಯಗಳು ಹೇಗೆ ಮುಖಾಮುಖಿಯಾದವು? ಅವುಗಳ ಸಂಕಷ್ಟವೇನು? ಎಂಬುದೇ ಒಂದು ಕಥನವಾಗಿ ನಿಂತಿದೆ.

ಉರ್ದು ಭಾಷೆಯನ್ನು ಕಲಿಯುವ ಕಷ್ಟವೂ ಖುಷಿಯೂ

ಉರ್ದು ಶಾಲೆಗಳು ಆರಂಭವಾದ ಮೇಲೆ, ಉರ್ದು ಭಾಷೆಯಲ್ಲೇ ಕಲಿಯುವುದನ್ನು ಸರಕಾರ ಕಡ್ಡಾಯ ಮಾಡಿದ್ದರಿಂದ, ಉರ್ದು ಭಾಷೆಯ ಕಲಿಕೆಯೇ ಮಕ್ಕಳಿಗೆ ದೊಡ್ಡ ಕುತ್ತಾಗಿ ಪರಿಣಮಿಸಿತು. ಉರ್ದು ಭಾಷೆಯ ಶಬ್ದಗಳ ಉಚ್ಚಾರಣೆಯೇ ದೊಡ್ಡ ಸಮಸ್ಯೆಯಾಯಿತು. ‘ಕೂಬ್‍ಸೂರತ್ – ಎಂಬುದನ್ನು ಕುಬಸೂರತ ಎಂದು, ಅದನ್ನು ಸರಿಯಾಗಿ ಉಚ್ಚರಿಸಲು ಬಾರದ ನಮಗೆ ಇಡೀ ಓದನ್ನು (ಆರೋಗ್ಯಶಾಸ್ತ್ರ, ಲೆಕ್ಕ, ಚರಿತ್ರೆ, ಭೂಗೋಳ, ಪೌರನೀತಿ, ಉರ್ದು) ಉರ್ದು ಮಾಧ್ಯಮದಲ್ಲೇ ಓದುವುದೆಂದರೆ ಆಕಾಶವೇ ಕಳಚಿ ಬಿದ್ದಂತಾಯಿತು. ನನ್ನ ಹಿಂದೂ ಗೆಳತಿಯರೆಲ್ಲ ಅನೇಕರು ಶಾಲೆಗೆ ಶರಣು ಹೊಡೆದರು.’

[1] ‘ಫೈಜಲಿ ಸಾಹೇಬ-ಅಂದದ್ದನ್ನು ಕೇಳಿದ ಉರ್ದು ಶಿಕ್ಷಕ ಪುನಃ ಅದನ್ನೇ ವಿದ್ಯಾರ್ಥಿಯಿಂದ ಹೇಳಿಸಿದರು. ಆ ವಿದ್ಯಾರ್ಥಿ ಮೊದಲಿನ ಹಾಗೇ ಹೇಳಿದಾಗ ಶಿಕ್ಷಕ ಕಪಾಳಕ್ಕೆ ಹೊಡೆದು ‘ಬರಖುರ್ದಾರ, ಫಾಯಜ್ ಅಲಿ ಬೋಲೋ ಎಂದು ತಿದ್ದಿದರು.’[2] ಈ ಪ್ರಾಂತದಲ್ಲಿ ಉರ್ದು ಕಲಿಯುವವರ ಆರಂಭದ ಅನುಭವಗಳು ಇವು. ಕನ್ನಡ ಭಾಷೆ ಗೊತ್ತಿದ್ದ ಮಕ್ಕಳು ಉರ್ದು ಭಾಷೆಯನ್ನು ಕಲಿಯುವ ಕಷ್ಟಕ್ಕೆ ಒಳಗಾಗಿ ಎಷ್ಟೋ ವಿದ್ಯಾರ್ಥಿಗಳು ಶಾಲೆಯನ್ನೇ ಬಿಡುತ್ತಿದ್ದರೆಂದು ಹಿರಿಯರು ಹೇಳುತ್ತಾರೆ. ಆದರೂ ಆರಂಭದ ಇಂಥ ಫಜೀತಿಯನ್ನು ಅನುಭವಿಸುತ್ತಲೇ ಉರ್ದು ಭಾಷೆಯನ್ನು ಅದರ ನಾದ, ಲಯ, ವ್ಯಾಕರಣ, ಸತ್ವದೊಂದಿಗೆ ಅತ್ಯುತ್ತಮವಾಗಿ ಕಲಿತ ನೂರಾರು ಜನರು ಈ ಪ್ರಾಂತದಲ್ಲಿದ್ದು ಅವರೆಲ್ಲ ಮೇಲ್ವರ್ಗಕ್ಕೆ ಸೇರಿದವರಾಗಿದ್ದಾರು.

ನಿಜಾಮರ ಉರ್ದು ಮಾಧ್ಯಮ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಯುವವರಿಗೆ ಹೆಚ್ಚು ಪ್ರೋತ್ಸಾಹವಿದ್ದುದು ಕಂಡು ಬರುತ್ತದೆ. ಮೆಚ್ಚಲೇಬೇಕಾದ ಒಂದು ವ್ಯವಸ್ಥೆಯೆಂದರೆ, ಶಾಲೆಗಳಲ್ಲಿ ಉರ್ದು ಕಲಿತರೂ ಸರಿಯೇ, ಖಾಸಗಿಯಾಗಿ ಉರ್ದು ಕಲಿತರೂ ಸರಿಯೇ, ಉತ್ತಮ ಗುಣಮಟ್ಟ ಕಂಡರೆ ಅಂಥ ವಿದ್ಯಾರ್ಥಿಗಳನ್ನು ಪರೀಕ್ಷಿಸುತ್ತಿದ್ದರು. ಪರೀಕ್ಷೆಯಲ್ಲಿ ಗೆದ್ದರೆ, ಅಂಥ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಕಳಿಸುತ್ತಿದ್ದರು. ದಿ. ಡಿ.ಕೆ. ಭೀಮಸೇನರಾಯರಿಗೆ ನಾಲ್ಕನೇ ತರಗತಿಯಿಂದ ಆರನೇ ತರಗತಿಗೆ ಪ್ರವೇಶ ಸಿಕ್ಕಿತಂತೆ. ಶಾಂತರಸರು ಮೂರನೆ ತರಗತಿಯಿಂದ ಪರೀಕ್ಷೆಗೆ ಒಳಗಾಗಿ ಒಮ್ಮೆಲೆ ಆರನೆಯ ತರಗತಿಗೆ ಹೋದರಂತೆ.[3] ಬಿ. ವಿರೂಪಾಕ್ಷಪ್ಪ ‘ಆರನೆಯ ತರಗತಿಯಿಂದ ನೇರವಾಗಿ ಎಂಟನೆಯ ತರಗತಿಗೆ ಹೋದದ್ದು ಒಂದು ದಾಖಲೆಯೇ ಸರಿ’[4] ಎಂದಿದ್ದಾರೆ. ‘ಎರಡನೆಯ ವರ್ಗದಿಂದ ನಾಲ್ಕನೆಯ ವರ್ಗಕ್ಕೂ ಡಬಲ್ ಪ್ರಮೋಷನ್. ನಾಲ್ಕನೇ ವರ್ಗದಿಂದ ಆರನೇ ವರ್ಗಕ್ಕೆ ಮತ್ತೆ ಡಬಲ್ ಪ್ರಮೋಷನ್ ಆದಾಗ ನಾನು ನಮ್ಮೂರ ಪ್ರಾಥಮಿಕ ಶಾಲೆ ದಾಟಿ ಗಂಗಾವತಿಗೆ ಮಿಡ್ಲಸ್ಕೂಲಿಗೆ ಬಂದಿದ್ದೆ. ನನಗಾಗ ಹತ್ತು ವರುಷ ವಯಸ್ಸು ಸಹ ಇರಲಿಲ್ಲ.’[5] ಇದು ಜಯತೀರ್ಥ ರಾಜಪುರೋಹಿತರಿಗಾದ ಅನುಭವ. ಡಬಲ್ ಪ್ರಮೋಷನ್ ಗಳ ವ್ಯವಸ್ಥೆಯ ಹಿಂದೆ ನಿಜಾಮ ಸರಕಾರಕ್ಕೆ ಉರ್ದು ಭಾಷೆಯನ್ನು, ಉರ್ದು ಶಿಕ್ಷಣವನ್ನು ಬೆಳೆಸಬೇಕೆಂಬ ರಾಜಕೀಯ ಉದ್ದೇಶ ಇರಬೇಕೆಂದು ಅನ್ನಿಸಬಹುದು. ಅಂಥ ಉದ್ದೇಶವಿರಲಿಲ್ಲ ಎಂಬುದಕ್ಕೆ ಉದಾಹರಣೆಗಳು ಇವೆ. ಸೀತಾರಾಮ ಜಾಗೀರದಾರ ಅವರು ಮೂರನೇ ತರಗತಿಗೆ ಸೇರಬೇಕಾಗಿತ್ತು. ಉರ್ದು ಸರಿಯಾಗಿ ಕಲಿತಿಲ್ಲವೆಂದು ಎರಡನೇ ತರಗತಿಗೆ ಸೇರಿಸಿದರಂತೆ.[6] ಶಾಂತರಸರು ಒಂದು ಸಂದರ್ಭದಲ್ಲಿ ನಾಲ್ಕನೇ ತರಗತಿಗೆ ಸೇರಬೇಕಾಗಿತ್ತಂತೆ. ಆದರೆ ಮೂರನೇ ತರಗತಿಗೆ ಸೇರಿಕೊಂಡರು. ಅವರೇ ‘ನಾನು ಕಲಿತ ಉರ್ದು ಭಾಷೆಯ ದೃಷ್ಟಿಯಿಂದ ನನಗೆ ನಾಲ್ಕನೆಯ ಕ್ಲಾಸಿನಲ್ಲಿ ಪ್ರವೇಶ ದೊರೆಯಬೇಕಾಗಿತ್ತು. ಆದರೆ ಇತರ ವಿಷಯಗಳಾದ ಗಣಿತ, ಇತಿಹಾಸ ಮುಂತಾದವುಗಳನ್ನು ನಾನು ಉರ್ದು ಭಾಷೆಯಲ್ಲಿ ಕಲಿತಿರಲಿಲ್ಲ’[7] ಅಂದಿದ್ದಾರೆ. ಶಾಲೆಗಳಲ್ಲಿ ಉರ್ದು ಕಲಿಯುವ ಪ್ರತಿಭಾವಂತ ಮಕ್ಕಳಿಗೆ ಶಿಕ್ಷಕರೇ ಹೆಚ್ಚು. ಅವರಲ್ಲಿ ಬಹುತೇಕ ಮಂದಿ ಹೊರ ರಾಜ್ಯದಿಂದ ಬಂದವರು. ಕಲಿಯುವ ವಿದ್ಯಾರ್ಥಿಗಳಲ್ಲಿ ‘ಮುಸ್ಲಿಮೇತರ’ ವಿದ್ಯಾರ್ಥಿಗಳೇ ಹೆಚ್ಚು. ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮುಸ್ಲಿಮ್ ಶಿಕ್ಷಕರು ಮಾತ್ರ ಯಾವ ತಾರತಮ್ಯವನ್ನು ಮಾಡದೆ ಓದಲು ಪ್ರೇರೇಪಿಸುತ್ತಿದ್ದರೆಂದು ಬಹುತೇಕ ಹಿರಿಯರ ಅಭಿಪ್ರಾಯವಾಗಿದೆ. ಕನ್ನಡ ಮಾತೃಭಾಷೆಯ ವಿದ್ಯಾರ್ಥಿಗಳು ಶ್ರಮವಹಿಸಿ ಓದಿ ಮುಸ್ಲಿಮ್ ಅಧಿಕಾರಿಗಳ ಮಕ್ಕಳಿಗಿಂತ ಹೆಚ್ಚು ಅಂಕ ಗಳಿಸಿದಾಗ, ಅಂಥ ಕನ್ನಡ ಮಾತೃಭಾಷೆಯ ಮಕ್ಕಳನ್ನು ಅಭಿನಂದಿಸಿ ಅಭಿಮಾನ ವ್ಯಕ್ತಪಡಿಸುತ್ತಿದ್ದರೆಂದು ಹೇಳುತ್ತಾರೆ. ‘ನಮ್ಮ ಉರ್ದು ಶಿಕ್ಷಕರಾದ ಫೈಯಜಲಿಯವರು ವ್ಯಾಕರಣಶಾಸ್ತ್ರ ಪ್ರವೀಣರು. ಅವರಿಗೆ ಮಾತೃಭಾಷೆಯಲ್ಲಿರುವ ಪ್ರಾವೀಣ್ಯತೆ ನಮ್ಮನ್ನು ಬೆರಗುಗೊಳಿಸುತ್ತಿತ್ತು. ೬ನೇ ತರಗತಿಯಲ್ಲಿ ಹಳ್ಳಿಯವನಾದ ನಾನು ಹೈದರಾಬಾದಿನಿಂದ ಬಂದ ತಹಶೀಲ್ದಾರರ ಮಗ ಶ್ರೀ ಅಲ್ತಾಫ ಹುಸೇನರನ್ನು ಮೀರಿಸಿ ಉರ್ದುವಿನಲ್ಲಿ ಪ್ರಥಮ ಸ್ಥಾನ ಪಡೆದಾಗ ನಮ್ಮ ಶಿಕ್ಷಕರಾದ ಫೈಯಜಲಿಯವರಿಗೆ ಅಚ್ಚರಿಯೇ ಅಚ್ಚರಿ. ಅವರಿಂದ ಶಾಬಾಷ್‌ಗಿರಿ ಪಡೆದ ನಾನು ಡಬಲ್ ಪ್ರಮೋಷನ್ ಪಡೆದೆ’[8] ಎಂದಿದ್ದಾರೆ ಬಿ. ವಿರೂಪಾಕ್ಷಪ್ಪ.ತಾಲೂಕಿನಿಂದ ಜಿಲ್ಲೆಗೆ, ಜಿಲ್ಲೆಯಿಂದ ಹೈದರಾಬಾದು ನಗರಕ್ಕೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಹೋಗುವಾಗ ಈ ಶಿಕ್ಷಕರು ಅನೇಕ ರೀತಿಯಲ್ಲಿ ನೆರವು ನೀಡುತ್ತಿದ್ದರು. ಅವರ ನೆರವಿನಿಂದ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುವುದು, ಫೀಸ್ ಮನ್ನವಾಗುವುದು, ಹಾಸ್ಟೆಲ್ ವ್ಯವಸ್ಥೆ ಸಿಗುವುದು, ಸ್ಕಾಲರ್ ಶಿಪ್ ಪಡೆಯುವುದಕ್ಕೆ ಸುಲಭವಾಗುವುದು ಇಂಥ ಸಹಾಯಗಳನ್ನು ಈ ಪ್ರಾಂತದ ವಿದ್ಯಾವಂತರು ಪಡೆದುಕೊಂಡದ್ದನ್ನು ಹಿರಿಯರು ನೆನೆಸಿಕೊಂಡಿದ್ದಾರೆ. ಶೈಕ್ಷಣಿಕವಾಗಿ ನಿಜಾಮ ಸರಕಾರ, ಅವರ ಬೋಧಕ ಸಿಬ್ಬಂದಿ ವರ್ಗದವರು ನೀಡಿದ ಸಹಕಾರದಿಂದ ಈ ಪ್ರಾಂತದ ಕನ್ನಡಿಗರು, ಬಿ.ಎ. ಮತ್ತು ಸ್ನಾತಕೋತ್ತರ ಪದವಿಗಳನ್ನು ಉನ್ನತ ದರ್ಜೆ(ರ್ಯಾಂಕ)ಗಳಲ್ಲಿ ಪಡೆದಿದ್ದಾರೆ. ಸಿದ್ಧಯ್ಯ ಪುರಾಣಿಕ, ಬಿ. ವಿರೂಪಾಕ್ಷಪ್ಪ, ಜಯತೀರ್ಥ ರಾಜಪುರೋಹಿತ ಮುಂತಾದ ಅನೇಕರು ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಪ್ರಥಮ ಗಳಿಸಿದವರಾಗಿದ್ದಾರೆ. ಇದು ಸಣ್ಣ ಸಂಗತಿಯಲ್ಲ. ಹೈದರಾಬಾದು ನಗರದ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಓದುವ ಪದವಿ ವಿದ್ಯಾರ್ಥಿಗಳಲ್ಲಿ ಅನೇಕರು ಉನ್ನತ ಅಧಿಕಾರಿಗಳ, ನಿಜಾಮ ವಂಶಸ್ಥರ, ಅವರ ಸಂಬಂಧಿಕರ, ವಿದ್ವಾಂಸರ ಮಕ್ಕಳಿರುವುದು ಸಹಜ. ಆ ಮಕ್ಕಳೆಲ್ಲರ ಮಾತೃಭಾಷೆ ಉರ್ದು, ಮತ್ತು ಸಂಸ್ಕಾರ ಹೊಂದಿದವರು. ಸರಕಾರದ ಬೆಂಬಲವಿರುವವರು. ಇಂಥವರ ಮಧ್ಯ (ಕೀಳರಿಮೆಯಲ್ಲಿ) ಈ ಪ್ರಾಂತದ ಕನ್ನಡ ವಿದ್ಯಾರ್ಥಿಗಳು ಉರ್ದುವಿನಲ್ಲಿ ಓದಿ ಉನ್ನತ ದರ್ಜೆಗಳಲ್ಲಿ ಪದವಿ ಗಳಿಸಿರುವುದು ಗಮನಾರ್ಹವಾದ ಸಂಗತಿಯೇ ಸರಿ.

ಹೈದರಾಬಾದು ಸಂಸ್ಥಾನದಲ್ಲಿ ಉರ್ದು ಭಾಷೆಯನ್ನೇ ದೇಶಿಭಾಷೆಯನ್ನಾಗಿ ಮಾಡಬೇಕೆಂದು ನಿಜಾಮರು ಛಲ ತೊಟ್ಟಿದ್ದರು. ರಾಜ್ಯಾಡಳಿತ, ಶಿಕ್ಷಣದಲ್ಲಿ ಉರ್ದು ಭಾಷೆಯನ್ನು ಕಡ್ಡಾಯ ಮಾಡಿದ್ದರಷ್ಟೆ. ಅದಕ್ಕೆ ಪೂರಕವಾಗುವಂತೆ ಉರ್ದು ಭಾಷೆಯನ್ನು ಅಭಿವೃದ್ಧಿ ಪಡಿಸಲು ಸರಕಾರ ಸರಕಾರ ಶ್ರಮಿಸಿತು. ಇಂಗ್ಲಿಶ್ ಭಾಷೆಯನ್ನು ಕಲಿಯಲು ಅವಕಾಶವಿದ್ದರೂ ಉನ್ನತ ಪದವಿ ಪರೀಕ್ಷೆಗಳನ್ನು ಉರ್ದು ಭಾಷೆಯಲ್ಲೇ ಬರೆಯಬೇಕೆಂಬ ಕಡ್ದಾಯವಿತ್ತು. ಸರಕಾರ ಇಂಗ್ಲಿಶ್ ಭಾಷೆಯಿಂದ ಉರ್ದುವಿಗೆ ಭಾಷಾಂತರಿಸಲು ಒಂದು ವಿಭಾಗವನ್ನೇ ತೆರೆದು ಅದನ್ನು ನಿರಂತರ ಕ್ರಿಯಾಶೀಲವಾಗಿರುವಂತೆ ಎಚ್ಚರವಹಿಸಿದ್ದರು. ವಿದ್ಯಾರ್ಥಿಗಳು ಕೂಡ ಇಂಗ್ಲಿಶ್ ಪುಸ್ತಕಗಳನ್ನು ಓದಿ ಉರ್ದುವಿನಲ್ಲಿ ನೋಟ್ಸ್ ಮಾಡಿಕೊಳ್ಳುತ್ತಿದ್ದರು. ‘ವಿಶ್ವವಿದ್ಯಾನಿಲಯವು ರಚಿಸಿದ ಪಾರಿಭಾಷಿಕ ಪದಕೋಶಗಳು ನಮಗೆ ಮಾರ್ಗದರ್ಶನ ಮಾಡುತ್ತಿದ್ದವು. ವಿಜ್ಞಾನ, ತಂತ್ರಜ್ಞಾನ, ವೈದ್ಯಶಾಸ್ತ್ರ, ಕಾನೂನು ಹೀಗೆ ಪ್ರತಿಯೊಂದು ವಿಷಯಕ್ಕೂ ಪದಕೋಶಗಳು ತಯಾರಿಸಲ್ಪಟ್ಟಿದ್ದವು’[9] ಎಂಬುದನ್ನು ಗಮನಿಸಿದರೆ, ಉರ್ದು ಭಾಷೆಯನ್ನು ಅಭಿವೃದ್ಧಿ ಪಡಿಸಿದ ನಿಜಾಮರ ನೀತಿ ಉಳಿದವರಿಗೆ ಮಾದರಿಯಾಗಿದೆ ಎಂದು ಸಿದ್ಧಯ್ಯ ಪುರಾಣಿಕರು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ ಉರ್ದು ಭಾಷೆ ರೂಪಗೊಂಡಿದ್ದೇ ೩೦೦ ವರ್ಷಗಳ ಹಿಂದೆ ಅಷ್ಟೇ. ಒಂದೂವರೆ ಸಾವಿರ ವರ್ಷಗಳ ಪರಂಪರೆ ಇರುವ ಕನ್ನಡ ಭಾಷೆಯನ್ನು ಈಗಿನ ಸರಕಾರಗಳು ಆಡಳಿತದಲ್ಲಿ, ಶಿಕ್ಷಣದಲ್ಲಿ ಕಡ್ಡಾಯ ಮಾಡಲು ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಲಾಗುತ್ತಿಲ್ಲ. ಕನ್ನಡ ಭಾಷೆಯನ್ನು ಅಭಿವೃದ್ಧಿ ಪಡಿಸುವುದೆಂದರೆ ಕೋಶ, ಪದಕೋಶ, ಪಾರಿಭಾಷಿಕ ಪದಕೋಶಗಳನ್ನು ಸಿದ್ಧಪಡಿಸಿದರೆ ಸಾಲದು. ಅವುಗಳನ್ನು ಬಳಕೆ ಮಾಡಲು ಸಾಂಸ್ಕೃತಿಕ ಒತ್ತಡಗಳು ಇಲ್ಲದೇ ಹೋದರೆ ಅವುಗಳಿಂದ ಯಾವ ಪ್ರಯೋಜನಗಳು ಇರುವುದಿಲ್ಲ. ನಿಜಾಮರು ಸಂಸ್ಥಾನದಲ್ಲಿ ಕೇವಲ ೧೨ರಷ್ಟು ಉರ್ದು ಭಾಷೆಯನ್ನಾಡುವ ಜನವರ್ಗವಿತ್ತು. ಮಾದರಿಯಾಗುವಷ್ಟು ಅಭಿವೃದ್ಧಿ ಪಡಿಸಿದರು. ಉಸ್ಮಾನೀಯಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಜಗತ್ಪ್ರಸಿದ್ಧ ವಿಜ್ಞಾನಿ ಡಾ. ಸರ್. ಸಿ.ವಿ ರಾಮನ್ ಅವರೇ ಉರ್ದುವಿನಲ್ಲಿ ವಿಜ್ಞಾನ ಬೋಧನೆಯನ್ನು ಕಣ್ಣಾರೆ ಕಂಡು, ಕಿವಿಯಾರೆ ಕೇಳಿ ಬೆರಗಾದರಂತೆ.

ಉರ್ದು ಭಾಷೆಯನ್ನೇ ದೇಶಿಭಾಷೆಯನ್ನಾಗಿ ಮಾಡಲು ಈ ಭಾಷೆಯನ್ನು ಅಭಿವೃದ್ಧಿ ಪಡಿಸಿದರು ಎಂಬುದು ನಿಜ. ಆದರೆ ಸಂಸ್ಥಾನದ ನಿಜವಾದ ದೇಶಿಭಾಷೆಗಳು ಕನ್ನಡ, ತೆಲುಗು, ಮರಾಠಿ ಆಗಿದ್ದವು. ಈ ಪ್ರಾಂತದಲ್ಲಿ ಅಕ್ಷರ ಕಲಿಯಲು ಅನುಕೂಲವಿದ್ದವರು ಆರಂಭದಲ್ಲಿ ಗೊಂದಲಗೊಂಡರು. ಪರಂಪರಾಗತವಾಗಿ ಬಂದ ಭಾಷೆ-ಸಂಸ್ಕೃತಿಯನ್ನು ಬದಿಗೊತ್ತಿ ಉರ್ದು ಭಾಷೆಯನ್ನು ಕಲಿಯುವುದು ‘ಧರ್ಮಸಂಕಟ’ಕ್ಕೆ ಗುರಿಯಾದಂತಾಗಿತ್ತು. ಆದರೂ ಕಾಲದ ಒತ್ತಡಕ್ಕೆ ಮಣಿಯಲೇಬೇಕಾಯಿತು. ಈ ಪ್ರಾಂತದ ಖ್ಯಾತ ಸಂಶೋಧಕರಾದ ಕಪಟರಾಳ ಕೃಷ್ಣರಾವ್ ಕನ್ನಡ ಕಲಿಯಲು ಇಚ್ಛಿಸಿದಾಗ, ‘ಬಣಜಿಗರಂತೆ ಕನ್ನಡೇನು ಕಲೀತಿ’[10] ಎಂಬ ಪ್ರಶ್ನೆಯನ್ನು ಎದುರಿಸಬೇಕಾಯಿತು. ಈ ಪ್ರಶ್ನೆ ಕೇಳುವವರು ಈ ಪ್ರಾಂತದ ಬ್ರಾಹ್ಮಣರಾಗಿದ್ದರು. ಮರಾಠಿಯನ್ನು ಮೈಗೂಡಿಸಿಕೊಂಡಿದ್ದರು. ‘ಕಲಿತರೆ ಮರಾಠಿ ಕಲಿ, ಇಲ್ಲ ಉರ್ದು ಕಲಿ’ ಎಂಬ ಧೋರಣೆ ಉಳ್ಳವರಾಗಿದ್ದರು. ಮೇಲಾಗಿ ‘ಕಲಬುರ್ಗಿ ಮತ್ತು ಬೀದರ ಜಿಲ್ಲೆಯ ದೇಶಮುಖ, ದೇಶಪಾಂಡೆಯರು ವಿಶೇಷವಾಗಿ ಮರಾಠಿ ಮಾತನ್ನೇ ಆಡುವರು. ಹಲವು ವರ್ಷಗಳ ಹಿಂದೆ ಧನಿಕ ಬ್ರಾಹ್ಮಣ ಸಮಾಜವು ಮರಾಠಿ ಮಾತನ್ನಾಡುವುದು ಸುಧಾರಣೆಯ ಲಕ್ಷಣವೆಂದು ತಿಳಿಯುತ್ತಿದ್ದರು.’[11] ಇವರಂಥ ಮನೋಭಾವದವರು ನಿಜಾಮನ ಕಾಲದಲ್ಲಿ ಉರ್ದುವನ್ನು ಕಲಿಯುವುದರಲ್ಲಿ ಮುಂಚೂಣಿಯಲ್ಲಿದ್ದರು.

ಅವರ ಮಾತಿನಲ್ಲಿ ಅಡಗಿರುವ ಇನ್ನೊಂದು ಅಂಶವೆಂದರೆ, ಕನ್ನಡ ಬಣಜಿಗರ ಭಾಷೆಯಾಗಿತ್ತು. ಅಂದರೆ ಕನ್ನಡ ಭಾಷೆ ಲಿಂಗಾಯುತರಿಗೆ ಮಾತ್ರ ಸಂಬಂಧಿಸಿದ್ದು. ಜಯತೀರ್ಥ ರಾಜಪುರೋಹಿತರು ಸ್ವಾತಂತ್ರ್ಯ ನಂತರ ತಹಶೀಲದಾರರಾಗಿ ಬೀದರಿಗೆ ವರ್ಗವಾಗಿ, ಹೋದಾಗ, ಬೀದರಿನಲ್ಲಿ ಬ್ರಾಹ್ಮಣರು ಮರಾಠಿ ಭಾಷಿಗರಾಗಿದ್ದರು. ರಾಜಪುರೋಹಿತರು ಕನ್ನಡದಲ್ಲಿ ಮಾತಾಡುವುದನ್ನು ಕಂಡು, ‘ನೀವು ವಾಣಿ ಜನರೇನ್ರೀ’[12] ಎಂದು ಜನರು ಕೇಳುತ್ತಿದ್ದರಂತೆ. ‘ವಾಣಿ’ ಜನರೆಂದರೆ ವ್ಯಾಪಾರ ಮಾಡುವ ಬಣಜಿಗರು (ಲಿಂಗಾಯತರು) ಎಂದರ್ಥ. ಭಾಲಚಂದ್ರ ಜಯಶೆಟ್ಟಿಯವರು ಸಹಜವಾಗಿಯೇ ಮರಾಠಿಯಲ್ಲಿ ಅಕ್ಷರ ಕಲಿಯಲು (ಶಿಕ್ಷಣ) ಆರಂಭಿಸಿದ್ದನ್ನು ಕಂಡ ಕನ್ನಡಾಭಿಮಾನಿ ಮರಾಠಿ ಶಿಕ್ಷಕರೊಬ್ಬರು ಕನ್ನಡದಲ್ಲಿ ಅಭ್ಯಾಸ ಮಾಡಲು ಒತ್ತಾಯಿಸಿದರಂತೆ. ಭವಿಷ್ಯದ ದೃಷ್ಟಿಯಿಂದ ಸಹಜವಾಗಿಯೇ ಜಯಶೆಟ್ಟಿಯವರು ನಿರಾಕರಿಸಿದಾಗ, ‘ನೀನು ಕನ್ನಡ ಕಲೀದಿದ್ರೆ ಬಸವಣ್ಣನವರ ವಚನಗಳನ್ನು ಯಾರು ಓದಬೇಕು?’[13] ಎಂದು ಶಿಕ್ಷಕರು ಆಕ್ರೋಶಗೊಂಡರಂತೆ. ಬೀದರ ಭಾಗದಲ್ಲಿ ಅಭಿಮಾನಿ ಲಿಂಗಾಯತರು ಮರಾಠಿ ಕಲಿತು (ವಿದ್ಯಾವಂತರು ಲಿಖಿತವಾಗಿಯು, ಉಳಿದವರು ಮೌಖಿಕವಾಗಿ) ಮರಾಠಿ ಭಾಷೆಯ ಮೋಡಿ ಲಿಪಿಯಲ್ಲಿ ಶರಣರ ವಚನಗಳನ್ನು ಬರೆದಿಟ್ಟುಕೊಂಡು ತಕ್ಕಮಟ್ಟಿಗೆ ಪ್ರಚಾರ ಮಾಡುತ್ತಿದ್ದರು. ಇಂಥವರು ಕನ್ನಡ ಕಲಿಕೆಯನ್ನು ವಚನ ಓದುವಿಕೆಗೆ ಸಂಬಂಧವನ್ನು ಬೆಸೆಯುವುದರ ಹಿಂದೆ ಚರಿತ್ರೆಯೇ ಅಡಗಿದೆ. ಆದರೆ ಕಾಲದ ಒತ್ತಡ ಬೇರೆಯಿತ್ತು. ‘ಉರ್ದು ಕಲಿಯದಿದ್ದರೆ ನೌಕರಿ ಏಕೆ, ಮೋಕ್ಷವೂ ಇಲ್ಲವೆಂಬ ಪರಿಸ್ಥಿತಿಯಿತ್ತು’[14] ಈ ಪ್ರಾಂತದಲ್ಲಿ. ‘ಉರ್ದು ಕಲಿಸು ಇಲ್ಲದಿದ್ದರೆ ನಿನ್ನ ಮಗ ಗೌಡರ ಮನೆಯಲ್ಲಿ ನೀರು ಹೊತ್ತು ಬದುಕಬೇಕಾಗುತ್ತದೆ’[15] ಶಾಂತರಸರಿಗೆ ಹಿರಿಯರೊಬ್ಬರು ಹೇಳಿದ ಈ ಮಾತು, ಕುವೆಂಪು ಅವರ ಇಂಥದ್ದೇ ಹೇಳಿಕೆಯೊಂದನ್ನು (ಇಂಗ್ಲಿಶ್ ಕಲಿಯದಿದ್ದರೆ ಬ್ರಾಹ್ಮಣರ ಮನೆಯಲ್ಲಿ ಸಗಣಿ ಹೊರಬೇಕಾಗುತ್ತದೆ) ನೆನಪಿಗೆ ತರುತ್ತದೆ. ಶಾಂತರಸರ ಮಾತು ಕುವೆಂಪುನಿಂದ ಪ್ರೇರಿತವಾದದ್ದು ಎಂದು ಕಾಣಿಸಬಹುದು. ಆದರೂ ಈ ಮಾತಿನಲ್ಲಿ ಈ ಭಾಗದ ಚರಿತ್ರೆ ಅಡಗಿದೆ. ಈ ಪ್ರಾಂತದಲ್ಲಿ ಗೌಡರ ಮನೆಗೆ ನೀರು ಹೊರವವರು ಕೆಳವರ್ಗದವರಲ್ಲ. ಮೇಲ್ವರ್ಗದವರೇ ಆಗಿರುತ್ತಾರೆ. ಅವರು ತೀರಾ ಬಡವರಾಗಿರುತ್ತಾರೆ. (ಬಡತನದಿಂದ ಮೇಲ್ವರ್ಗಗಳ ಬಡಕುಟುಂಬಗಳು ಗೌಡರ ಮನೆಯಲ್ಲಿ ನೀರು ಹೊರುವಂತಹ, ಅಡಿಗೆ ಮಾಡುವಂತಹ ದುಡಿಮೆ ಮಾಡುವುದು ಅನಿವಾರ್ಯವಾಗಿತ್ತು) ಈ ಪ್ರಾಂತದಲ್ಲಿ ಮೇಲ್ವರ್ಗಗಳು ತಮ್ಮ ಕನ್ನಡ ಭಾಷೆ, ಸಂಸ್ಕೃತಿಯನ್ನು ಬದಿಗೊತ್ತಿ ಫ್ರಭುತ್ವದ ಮರಾಠಿ, ಉರ್ದು ಭಾಷೆಯನ್ನು ಕಲಿಯುವ ಒತ್ತಡಗಳಿಗೆ ಒಳಗಾದವು. ಬಡವರು ಮತ್ತು ಕೆಳವರ್ಗಗಳು ಮಾತ್ರ ತಮ್ಮ ತಾಯಿ ಭಾಷೆಯಲ್ಲಿ ಬದುಕುತ್ತಿದ್ದವು.

ವಿದ್ಯಾರ್ಥಿ ವರ್ಗದ ವಿದ್ಯಾಭ್ಯಾಸವೂ ಸ್ವಾತಂತ್ರ್ಯಕ್ಕಾಗಿ ಹೋರಾಟವೂ

ಆದರೂ ಈ ಪ್ರಾಂತದಲ್ಲಿ ಉರ್ದು ಕಲಿಯುವ ಕನ್ನಡ ವಿದ್ಯಾರ್ಥಿ ವರ್ಗವು ಪ್ರಭುತ್ವದ ಆಳ್ವಿಕೆಯನು ವಿರೋಧಿಸಿತು. ಅಂದರೆ ನಿಜಾಮ ಸರಕಾರವನ್ನು ವಿರೋಧಿಸುವ ಸ್ವಾತಂತ್ರ್ಯ ಹೋರಾಟಗಾರರ ಜತೆ ಕೈಗೂಡಿಸಿದರು. ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿಗಳು ‘ವಂದೇ ಮಾತರಂ’, ‘ಭಾರತ ಬಿಟ್ಟು ತೊಲಗಿ’, ‘ಅಸಹಕಾರ’ ಮುಂತಾದ ಚಳುವಳಿಯ ಸಂದರ್ಭಗಳಲ್ಲಿ ತಕ್ಕಮಟ್ಟಿಗೆ ಸ್ಪಂದಿಸತೊಡಗಿ, ಸ್ವಾತಂತ್ರ್ಯನಂತರ ರಜಾಕಾರರ ಹಾವಳಿಯನ್ನು ತಡೆಯಲು ವಿದ್ಯಾರ್ಥಿ ವರ್ಗವು ತಮ್ಮ ಓದನ್ನು ತೊರೆಯಬೇಕಾಯಿತು. ನಿಜಾಮ ಪ್ರಭುತ್ವ ಕೊನೆಗೊಂಡು ಪ್ರಜಾಪ್ರಭುತ್ವ ಬರಲಿ ಎಂದು ವಿದ್ಯಾರ್ಥಿವರ್ಗ ಹೋರಾಟಕ್ಕೆ ಅಣಿಯಾದರು. ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಬೇಕೆಂದು ರಾಷ್ಟ್ರಮಟ್ಟದ ಹೋರಾಟವು, ಸಂಸ್ಥಾನಗಳಿಗೂ ಹಬ್ಬಿತು. ಬಹುಸಂಖ್ಯಾತ ಮುಸ್ಲಿಮೇತರರಿರುವ ಹೈದರಾಬಾದು ಸಂಸ್ಥಾನವನ್ನು ಆಳುತ್ತಿದ್ದ ನಿಜಾಮ, ಸ್ವಾತಂತ್ರ್ಯಹೋರಾಟವನ್ನು ಪ್ರಜ್ಞಾಪೂರ್ವಕವಾಗಿ ಹತ್ತಿಕ್ಕಲು ಪ್ರಯತ್ನಿಸಿದ. ರಾಜಕೀಯ ಸ್ವಾತಂತ್ರ್ಯಕ್ಕಾಗಿ ನಡೆಯುವ ಹೋರಾಟದಲ್ಲಿ ನಿಜಾಮ್ ರಾಜ್ಯಾಡಳಿತದಲ್ಲಿದ್ದ ಮುಸ್ಲಿಮೇತರ ಅಧಿಕಾರಿಗಳಿಗೆ ನಾಡು-ನುಡಿ-ಧರ್ಮದ ಅಭಿಮಾನವಿದ್ದರೂ ಮೌನವಹಿಸಬೇಕಾಯಿತು. ವಿದ್ಯಾರ್ಥಿಗಳೂ ತಮ್ಮ ಶೈಕ್ಷಣಿಕ ಬದುಕಿಗೆ ಹೊಡೆತ ಬೀಳುತ್ತದೆಂಬ ಭಯಕ್ಕೆ ಕುಗ್ಗಿದರು. ಆದರೆ ರಾಜಕೀಯ ನಾಯಕರು, ಅವರ ಬೆಂಬಲಿಗರು ನಡೆಸಿದ ಹೋರಾಟವು ಪ್ರೇರಣೆ ನೀಡತೊಡಗಿತ್ತು. ವಿದ್ಯಾರ್ಥಿ ವರ್ಗವು ಮೆಲ್ಲನೆ ಸರಕಾರದ ಬಗ್ಗೆ ವಿರೋಧಿ ಭಾವನೆಯನ್ನು ತಾಳತೊಡಗಿತು. ನಾಡು-ನುಡಿ-ಮತದ ಅಭಿಮಾನವಂತೂ ಸರಿಯೇ. ಹೊರಗಿನ ಮತ್ತು ಒಳಗಿನ ಒತ್ತಡಗಳೂ ಕಾರಣವಾದವು. ಸರಕಾರಿ ಉರ್ದು ಶಾಲೆಗಳಲ್ಲಿ ಪಾಠ ಶುರುವಾಗುವುದಕ್ಕಿಂತ ಮುನ್ನ ಪ್ರಾರ್ಥನಾ ಗೀತೆಯೊಂದನ್ನು ಮಕ್ಕಳು ಹಾಡಬೇಕಿತ್ತು. ಅದು ನಿಜಾಮನನ್ನು ಸ್ತುತಿಸುವ ಗೀತೆಯಾಗಿತ್ತು. ‘ಸೃಷ್ಟಿಕರ್ತನಾದ ಪರಮಾತ್ಮನು ಈ ಸಂಸ್ಥಾನವನ್ನು ವಿಶ್ವದ ಅಂತ್ಯದವರೆಗೆ ರಕ್ಷಿಸಲಿ’ ಎಂದಿತ್ತು. (ತಾಬದೆ ಖಾಲಕೆ ಆಲಮ್ ಏ ರಿಯಾಸತ್ ರಾಖೆ! ತುಝುಕೋ ಬಸದಿಜಲಾಲ ಸಲಾಮತ್ ರಾಖೆ) ಪ್ರಾರ್ಥನೆಯ ಪ್ರತಿ ಸಾಲಿನ ಕೊನೆಗೆ ರಾಖೆ (ರಕ್ಷಿಸಲಿ) ಎಂಬುದನ್ನು ನರಾಖೆ (ರಕ್ಷಿಸದಿರಲಿ) ಎಂದು ಹಾಡುವುದನ್ನು ಕನ್ನಡ ಭಾಷೆಯ ಮಕ್ಕಳು ರೂಢಿಸಿಕೊಂಡರಂತೆ.[16] ಬದಲಿಗೆ ‘ವಂದೇ ಮಾತರಂ’ ಗೀತೆಯನ್ನು ಹಾಡಲು ಪ್ರಯತ್ನಿಸುವುದು ನಡೆಯತೊಡಗಿದವು. ‘ನಮ್ಮ ಕ್ಲಾಸ್ ಟೀಚರ್ ಜಕೀರಾಬೇಗಂ ಟೈಮ್ ಟೇಬಲ್ ತಯಾರಿಸಿಕೊಂಡು ಬರಲು ನನಗೆ ಹೇಳಿದರು. ನಾನು ಮನೆಯಲ್ಲಿ ಲಕ್ಷ್ಯಕೊಟ್ಟು ಸುಂದರವಾಗಿ ಬಣ್ಣದ ಪೆನ್ಸಿಲ್‍ಗಳಿಂದ ಗೆರೆ ಹಾಕಿ, ಅಕ್ಕಪಕ್ಕದ ಬಳ್ಳಿ ಬಿಡಿಸಿ ಮೇಲೆ ‘ಜೈಹಿಂದ್’ ಎಂದು ಬರೆದಿದ್ದೆ. ಉಸ್ತಾದ್ ಅದನ್ನು ನೋಡಿ ಮುಖ ಉಬ್ಬಿಸಿದರು. ಅದು ಎಲ್ಲರ ಕೈಯಲ್ಲಿ ಹಾದು ಬಂದಂತೆ ಎಲ್ಲರೂ ಗಂಭೀರರಾದರು. ನನಗೆ ಅರ್ಥವಾಗಲಿಲ್ಲ. ಕ್ಲಾಸ್ ಟೀಚರ್ ಹತ್ತಿರ ಕರೆದು ‘ಜೈಹಿಂದ್’ ತೋರಿಸಿ ಹೀಗೇಕೆ ಬರೆದೆ? ಎಂದು ಸಿಡುಕಿದರು. ಉಳಿದ ಗೆಳತಿಯರೆಲ್ಲ ನಿನಗೆ ಸಜಾ ಕಾದಿದೆ ಎಂದರು. ‘ಪಾಕಿಸ್ತಾನದಲ್ಲಿ ಆಗಿದ್ದರೆ ನಿನಗೇನು ಮಾಡುತ್ತಿದ್ದರು ಗೊತ್ತಾ?’ ಎಂದರು. ಕೊನೆಗೆ ಹೆಡ್ ಮಿಸ್ ಮಹಮುದಾಲತೀಫ್ ಅವರ ಹತ್ತಿರ ಕರೆದೊಯ್ದರು. ವಿಚಾರಣೆ ನಡೆಯಿತು. ಎಲ್ಲರನ್ನು ಕಳಿಸಿದ ಹೆಚ್.ಎಂ. ಏಕೆ ಬರೆದೆ ಹಾಗೆ? ಎಂದು ಕೇಳಿದರು. ಸುಮ್ಮನೆ ಚಂದಕ್ಕಾಗಿ ಎಂದೆ. ಅವರು ಒಂದೆರ‍ಡು ಕ್ಷಣ ಸುಮ್ಮನ್ನಿದ್ದು ‘ಹೋಗು, ಇದನ್ನು ಹರಿದು ಹಾಕು. ಇನ್ನೊಂದು ಬರೆದುಕೊಂಡು ಬಾ. ಜೈಹಿಂದ್ ಬರೆಯಬೇಡ’ ಎಂದು ಕಳಿಸಿದರು. ಷರಬತ್ ಕೊಟ್ಟು, ‘ಕುಡಿ, ಇದೇ ನಿನಗೆ ಸಜಾ’ ಎಂದರು. ಆ ದಿನದಿಂದ ನನ್ನ ಗೆಳತಿಯರಿಗೆ ತುಸು ನಾನು ‘ಗದ್ದಾರ್’ ಎನಿಸಿದೆ.[17] ಸ್ಥಳೀಯ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನಲ್ಲಿ ಇಂಥ ಘಟನೆಗಳು ಉದ್ಭವಿಸಿದವು. ಅವು ಮುಂದೆ ಬೆಳೆಯುತ್ತ ಹೋರಾಟಕ್ಕೆ ಮಾನಸಿಕವಾಗಿ ಅಣಿಮಾಡತೊಡಗಿದವು. ಆದರೂ ಕೆಲವರು ಭವಿಷ್ಯವನ್ನು ಗಣನೆಗೆ ತೆಗೆದುಕೊಂಡು ಸಹಿಸಿಕೊಂಡರು. ‘ಒಂದು ಕೋಣೆಯಲ್ಲಿ ಹಿಂದುಗಳಿದ್ದರೆ, ಪಕ್ಕದ ಕೋಣೆಯಲ್ಲಿ ಮುಸಲ್ಮಾನರು. ಕಾಮನ್ ರೂಮುಗಳಲ್ಲಿ ಪತ್ರಿಕೆಗಳು. ಅಲ್ಲಿ ಇಬ್ಬರೂ ಕುಳಿತು ಓದುತ್ತಿದ್ದೆವು. ನಾವೆಲ್ಲ ಪ್ರಯತ್ನಪೂರ್ವಕವಾಗಿ ನಮ್ಮ ಸಲ್ಲಾಪಗಳು ಕವಿ-ಕಲಾವಿದರಿಗೆ, ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿರುವಂತೆ, ಧರ್ಮ-ನಿಜಾಮ, ಸಂಸ್ಥಾನದ ರಾಜಕೀಯ ವಿಷಯಗಳು ನುಸುಳಿ ಬರದಂತೆ ನೋಡಿಕೊಳ್ಳುತ್ತಿದ್ದೆವು. ಅಕ್ಕಪಕ್ಕದಲ್ಲಿಯೇ ಕುಳಿತಿದ್ದರೂ ನಡುವೆ ಯಾವುದೋ ಅಡ್ಡಗೋಡೆ’[18] ಇಂಥ ಇಕ್ಕಟ್ಟುಗಳನ್ನು ವಿದ್ಯಾರ್ಥಿಗಳು ಎದುರಿಸಬೇಕಾಗುತ್ತಿತ್ತು. ನಿಜಾಮ ಸರಕಾರದಲ್ಲಿ ಶಿಕ್ಷಣವನ್ನು ಉರ್ದು ಮಾಧ್ಯಮದಲ್ಲಿ ಕಲಿಯಲು ವಿದ್ಯಾರ್ಥಿಗಳಿಗೆ ಅನೆಕ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು. ಅಧಿಕಾರಿಗಳಿಂದ, ಬೋಧಕ ವರ್ಗದಿಂದ ನೆರವು ದೊರೆಯುತ್ತಿತ್ತು. ವಿದ್ಯಾರ್ಥಿಗಳು ಅದೆಲ್ಲವನ್ನು ಗೌರವದಿಂದ ಕಂಡರೂ, ಅವರಲ್ಲಿ ತಮ್ಮ ಭಾಷೆ-ಸಂಸ್ಕೃತಿಯ ಬಗ್ಗೆ ಅಭಿಮಾನ ಸದಾ ಜಾಗೃತವಾಗಿರುತ್ತಿತ್ತು. ವಿಮರ್ಶಾತ್ಮಕ ಬುದ್ಧಿ ತನ್ನಷ್ಟಕ್ಕೆ ತಾನೇ ಜಾಗೃತಗೊಳ್ಳುತ್ತಿತ್ತು. ‘ರಾಜ್ಯಮಟ್ಟದಲ್ಲಿ ಉರ್ದುವನ್ನು ಆಡಳಿತ ಭಾಷೆಯನ್ನಾಗಿಟ್ಟುಕೊಂಡು ಪ್ರಾಂತೀಯ ಮಟ್ಟಗಳಲ್ಲಿ ಆಯಾ ಪ್ರಾಂತಗಳಲ್ಲಿ ಆಯಾ ಪ್ರಾಂತಗಳ ಭಾಷೆಗಳಾದ ಕನ್ನಡ, ತೆಲುಗು, ಮರಾಠಿ ಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಮಾಡುವ ಔದಾರ್ಯವನ್ನು ಸರಕಾರ ತೋರಿಸಬಹುದಾಗಿತ್ತು. ಇಲ್ಲಿ ಸರಕಾರವು ತನ್ನ ಸರ್ವಾಧಿಕಾರತ್ವವನ್ನು ಉಪಯೋಗಿಸಿ ಅರಸೊತ್ತಿಗೆಯನ್ನು ದುರುಪಯೋಗಪಡಿಸಿಕೊಂಡಿತು’[19] ಎಂಬ ವಿವೇಚನೆ ವಿದ್ಯಾರ್ಥಿಗಳಲ್ಲಿ ಮೂಡುತ್ತಿತ್ತು. ಈ ಬಗ್ಗೆಯ ಆಲೋಚನೆ ಮಾಡುವ ವಿದ್ಯಾರ್ಥಿ ವರ್ಗವು ಗ್ರಾಮಾಂತರ ಪ್ರದೇಶಗಳಿಂದ ಬಂದವರಾಗಿದ್ದರು. ಅವರ ಗ್ರಾಮಗಳಲ್ಲಿ ಅವರ ಬಂಧುಗಳಿಗೆ ನಿಜಾಮ ಸರಕಾರದಿಂದ ಆಗುವ ಅನ್ಯಾಯವನ್ನು ಗ್ರಹಿಸತೊಡಗಿದ್ದರು. ಇಂಥಹ ಬಿಕ್ಕಟ್ಟಿನ ಸಂದರ್ಭದಲ್ಲಿಯೇ ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿತು. ಆದರೆ ನಿಜಾಮನ ಹೈದರಾಬಾದು ಸಂಸ್ಥಾನವು ಸ್ವತಂತ್ರ ಭಾರತದಲ್ಲಿ ವಿಲೀನವಾಗಲಿಲ್ಲ. ನಿಜಾಮ ತನ್ನ ಸಂಸ್ಥಾನವು ಸ್ವತಂತ್ರವಾಗಿ ಮುಂದುವರೆಯುತ್ತದೆಂದು ಘೋಷಿಸಿದ. ಇದನ್ನು ರಜಾಕಾರರು ಬೆಂಬಲಿಸಿದರು. ‘ಪಾಕಿಸ್ತಾನದಂತೆ ಹೈದರಾಬಾದು ಸಂಸ್ಥಾನ ಸ್ವತಂತ್ರ ದೇಶ’ ಎಂಬ ಭಯಾನಕ ವದಂತಿಗಳು ಹುಟ್ಟಿಕೊಂಡವು. ರಜಾಕಾರರ ದಾಳಿ ಇಡೀ ಪ್ರಾಂತದಲ್ಲಿ ಆರಂಭವಾಯಿತು. ಸಂಸ್ಥಾನವೇ ಅರಾಜಕತೆಯಲ್ಲಿ ಮುಳುಗಿತು. ವಿದ್ಯಾರ್ಥಿವರ್ಗವು ತಮ್ಮ ತಮ್ಮ ಊರುಗಳಿಗೆ ಚದುರಿ ಹೋಯಿತು. ನೂರಾರು ವಿದ್ಯಾರ್ಥಿಗಳು ಪ್ರಾಂತದ ಅನೇಕ ಕಡೆ ನಾಯಕತ್ವ ವಹಿಸಿಕೊಂಡು ಹೋರಾಟಕ್ಕೆ ನಿಂತರು. ಒಂದು ವರ್ಷವಿಡೀ ರಜಾಕಾರರ, ನಿಜಾಮ ಪೊಲೀಸರ ವಿರುದ್ಧ ಶಸಸ್ತ್ರ ಹೋರಾಟ ಮಾಡಬೇಕಾಯಿತು. ಅನೇಕರು ಸಾವಿಗೀಡಾದರು. ಪೊಲೀಸ್ ಕಾರ್ಯಾಚರಣೆಯ ನಂತರ ಸಂಸ್ಥಾನವು ಸ್ವತಂತ್ರ ಭಾರತದಲ್ಲಿ ವಿಲೀನವಾಯಿತು. ‘ಹೈದರಾಬಾದು ರಾಜ್ಯ’ ರಚನೆಯಾಯಿತು. ಅರ್ಧಕ್ಕೆ ನಿಂತುಹೋದ ಶಿಕ್ಷಣವನ್ನು ಪೂರ್ಣಗೊಳಿಸಲು ವಿದ್ಯಾರ್ಥಿಗಳಿಗೆ ಅವಕಾಶವನ್ನು ಕೊಡಲಾಯಿತು. ವಿದ್ಯಾರ್ಥಿ ವರ್ಗವು ಪುನಃ ಓದನ್ನು ಮುಂದುವರಿಸಿತು. (ಶಿವಮೂರ್ತಿಶಾಸ್ತ್ರಿ ಅಳವಂಡಿ, ಪಂಚಾಕ್ಷರಿ ಹಿರೇಮಠ, ಜಯತೀರ್ಥ ರಾಜಪುರೋಹಿತ, ಶಾಂತರಸ, ಶಂಕರಗೌಡ ಬೆಟ್ಟದೂರು, ಶಿರೂರು ವೀರಭದ್ರಪ್ಪ, ಚುರ್ಚಿಹಾಳಮಠ, ಬಿ. ವಿರೂಪಾಕ್ಷಪ್ಪ ಮುಂತಾದ ಬರಹಗಾರರು ರಜಾಕಾರರ ವಿರುದ್ಧ ನಡೆಸಿದ ತಮ್ಮ ಹೋರಾಟವನ್ನು ಅನೇಕ ಕಡೆ ಬರೆದುಕೊಂಡಿದ್ದಾರೆ.)

ಕನ್ನಡ ಪಠ್ಯಪುಸ್ತಕಗಳ ಆಮದು

ಸ್ವಾತಂತ್ರ್ಯಪೂರ್ವದಲ್ಲಿ ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಮದ್ರಾಸು ಕರ್ನಾಟಕ ಈ ಪ್ರಾಂತಗಳ ಸ್ಥಿತಿಗಿಂತ ಹೈದರಾಬಾದು ಕರ್ನಾಟಕದ ಪರಿಸ್ಥಿತಿ ಭಿನ್ನವಾಗಿತ್ತು ಎಂಬುದು ಮೇಲಿನ ವಿವರಗಳಿಂದ ತಿಳಿಯುತ್ತದೆ. ಈ ಶತಮಾನದ ಆರಂಭದ ಹೊತ್ತಿಗಾಗಲೇ ಬ್ರಿಟಿಶ್ ವಸಾಹತುಶಾಹಿ ಅಡಳಿತದಿಂದ ವಿದ್ಯಾವಂತರಿಗೆ, ಪ್ರಜ್ಞಾವಂತರಿಗೆ ಪಶ್ಚಿಮ ದೇಶಗಳಿಗೆ ಸಂಪರ್ಕ ಸಾಧ್ಯವಾಗಿತ್ತು. ಇಂಗ್ಲಿಶ್ ಸಾಹಿತ್ಯ ಅಧ್ಯಯನದಿಂದ ಪಶ್ಚಿಮದ ಹೊಸ ಚಿಂತನ ಕ್ರಮಗಳು ಲಭ್ಯವಾಗ ತೊಡಗಿದ್ದವು. ಶೈಕ್ಷಣಿಕವಾಗಿ ಅನೇಕ ಶಾಸ್ತ್ರಗಳ ಜ್ಞಾನವು ನಮ್ಮ ಶಿಕ್ಷಣದಲ್ಲಿ ಬೆರೆಯತೊಡಗಿತ್ತು. ಇದರಿಂದ ನಮ್ಮ ಅನೇಕ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹೊಸ ವಾತಾವರಣ ಮೂಡಿತು. ಭಿನ್ನ ಆಯಾಮಗಳೊಂದಿಗೆ ಅಧ್ಯಯನಗಳು ಬೆಳೆಯತೊಡಗಿದ್ದವು. ಸಾಹಿತ್ಯ-ಕಲೆಗಳಿಗೂ ಅದು ಪ್ರೇರಕವಾಗಿತ್ತು. ಹೊಸ ಸಾಹಿತ್ಯ ಕುಡಿಯೊಡೆದಿತ್ತು. ಸಮಾಜದಲ್ಲಿಯೂ ಆಧುನಿಕತೆ ಮೂಡಿ ಪರಿವರ್ತನೆಗಳು ಕಾಣಿಸಿಕೊಂಡಿದ್ದವು. ಈ ಹೊಸ ಸಾಂಸ್ಕೃತಿಕ ಗಾಳಿ ಹೈದರಾಬಾದು ಕರ್ನಾಟಕ ಪ್ರಾಂತದೊಳಗೆ ನುಗ್ಗಲು ಸಾಧ್ಯವಾಗಲಿಲ್ಲ. ಈ ಪ್ರಾಂತದ ಒಡಲೊಳಗೇ ಅನೇಕ ಬಿಕ್ಕಟ್ಟುಗಳು ದಿನೇದಿನೇ ಉದ್ಭವವಾಗತೊಡಗಿದ್ದವು. ೨೦ನೇ ಶತಮಾನದ ಮೊದಲ ತಲೆಮಾರಿನವರಿಗೆ ಶಿಕ್ಷಣ ದೊರೆಯಲಿಲ್ಲ. ಎರಡನೇ ತಲೆಮಾರಿನವರಿಗೆ ಅದು ಉರ್ದು ಮಾಧ್ಯಮದಲ್ಲಿ ದೊರೆಯತೊಡಗಿತು. ಉರ್ದು ಭಾಷೆಯನ್ನು ಕಲಿಯುವುದೇ ಒಂದು ಗಂಡಾಂತರವಾಗಿ ಪರಿಣಮಿಸಿತು. ಮೇಲಾಗಿ ಕಲಿಯುವವರ ಪ್ರಮಾಣವೇ ಅತ್ಯಲ್ಪವಾಗಿತ್ತು. ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯುವ ಬದಲಾಗಿ ಬೇರೊಂದು ಭಾಷೆಯಲ್ಲಿ ಶಿಕ್ಷಣ ದೊರೆತರೆ ಅಂತ ಒಂದು ಜನಾಂಗ, ಆ ಜನಾಂಗದ ಪ್ರಾಂತ ಸಾಂಸ್ಕೃತಿವಾಗಿ ಕುಸಿದುಹೋಗುತ್ತದೆ ಎಂಬುದಕ್ಕೆ ಹೈದರಾಬಾದು ಕರ್ನಾಟಕವೇ ಸಾಕ್ಷಿ. ಬೀದರ, ಗುಲಬರ್ಗಾದ ಎರಡನೇ ತಲೆಮಾರಿನವರು ಆರಂಭದಲ್ಲಿ ಕನ್ನಡವನ್ನು (ಅಲ್ಪಸ್ವಲ್ಪ ಕಲಿತರೂ ಕಲಿತಿರಬಹುದು) ಕಲಿಯದೆ ಮರಾಠಿ, ನಂತರ ಉರ್ದು ಕಲಿತಿದ್ದರ ಪರಿಣಾಮವಾಗಿ ಸ್ವಾತಂತ್ರ್ಯಾನಂತರವೂ ಶಕ್ತ ಬರಹಗಾರರು ಕಾಣಿಸಿಕೊಳ್ಳಲಿಲ್ಲ. ಕಪಟರಾಳ ಕೃಷ್ಣರಾವ್ ಕಾಣಿಸಿಕೊಂಡದ್ದು ಒಂದು ಪವಾಡವೇ ಸರಿ. ರಾಯಚೂರು ಭಾಗದಲ್ಲಿ ಆರಂಭದಲ್ಲಿ ಕನ್ನಡ ತಕ್ಕಮಟ್ಟಿಗೆ ಕಲಿಯುತ್ತಿದ್ದರು. ನಂತರ ಉರ್ದು ಭಾಷೆಯಲ್ಲಿ ಶಿಕ್ಷಣವನ್ನು ಮುಗಿಸಿದ ಮೇಲೆ ಪುನಃ ಕನ್ನಡ ಸಾಹಿತ್ಯ ಅಧ್ಯಯನ ಮಾಡಿದ್ದರ ಫಲವಾಗಿಯೂ ಮತ್ತು ಮನೆತನಗಳ ಸಂಸ್ಕಾರದ ನೆರವಿನಿಂದಲೂ ಡಿ.ಕೆ. ಭೀಮಸೇನರಾವ್, ಮಾನ್ವಿ ನರಸಿಂಗರಾವ್, ದೇಸಾಯಿ ಪಾಂಡುರಂಗರಾಯ, ಸೀತಾರಾಮ್ ಜಾಗೀರದಾರ್, ಸಿದ್ಧಯ್ಯ ಪುರಾಣಿಕ್, ರಾಘವೇಂದ್ರಾಚಾರ್ಯ ಇಟಗಿ, ಇಂದಿರೇಶ, ಹನುಮಂತಾಚಾರ್ಯ ಉಪಾಧ್ಯಾಯ, ಶಾಂತರಸ, ಶೈಲಜಾ ಉಡಚಣ, ಕೆ. ಮುದ್ದಣ, ಮಲ್ಲವಾದಿ ವೀರಭದ್ರಪ್ಪ, ಗದ್ವಾಲ ಶಂಕ್ರಪ್ಪ, ಜಯತೀರ್ಥ ರಾಜಪುರೋಹಿತ, ವಸಂತ ಕುಷ್ಟಗಿ, ಜೆ.ಬಿ. ವಿಸಾಜಿ, ದೇವೇಂದ್ರಕುಮಾರ ಹಕಾರಿ, ಪಂಚಾಕ್ಷರಿ ಹಿರೇಮಠ, ಚನ್ನಬಸಪ್ಪ ಬೆಟ್ಟದೂರು ಮುಂತಾದವರು ಬರಹಗಾರರಾಗಿ ಕಾಣಿಸಿಕೊಂಡರು. ಕಲಬುರ್ಗಿ ಜಿಲ್ಲೆಯವರಾದ ಚಂದ್ರಕಾಂತ ಕುಸನೂರು, ಚೆನ್ನಣ್ಣ ವಾಲೀಕಾರ ಅವರಿಗೆ ರಾಯಚೂರು ವಾತಾವರಣದಲ್ಲಿ ಬೆಳೆಯಲು ಸಾಧ್ಯವಾಯಿತು. ಸಾಹಿತ್ಯದ ಬೆಳವಣಿಗೆ ಉನ್ನತ ಮಟ್ಟದಲ್ಲಿ ಇಂತಹ ವಿದ್ಯಾರ್ಥಿಗಳಿಂದ ಆಗಬೇಕಾಗಿತ್ತು. ಆದರೆ ಇಂಥ ಯುವ ಪೀಳಿಗೆಯು ೨೦ನೇ ಶತಮಾನದ ಆದಿಯಿಂದಲೇ ಹುಟ್ಟಿಕೊಂಡ ಅನೇಕ ಬಗೆಯ ಬಿಕ್ಕಟ್ಟುಗಳ ಸುಳಿಯಲ್ಲಿ ಸುತ್ತುವಂತಾಯಿತು.

ಈ ಪ್ರಾಂತದಲ್ಲಿ ಉರ್ದು ಶಾಲೆಗಳು ಆರಂಭವಾದರೂ, ಶಿಕ್ಷಣದಲ್ಲಿ ಕನ್ನಡ ಒಂದು ಭಾಷಾ ವಿಷಯವಾಗಿ ಕಲಿಯಲು ಅವಕಾಶ ಇತ್ತು. ಆದರೆ ಅದು ಅವಗಣನೆಗೆ ಗುರಿಯಾಗಿತ್ತು. ಈ ಹೊತ್ತಿನ ಇಂಗ್ಲಿಶ್ ಮಾಧ್ಯಮ ಶಾಲೆಗಳಲ್ಲಿಯೂ ಕನ್ನಡ ಒಂದು ಭಾಷಾವಿಷಯವಾಗಿ ಇರುತ್ತದೆ. ಇಂಗ್ಲಿಶ್ ಕಲಿಯುವ ಭರಾಟೆಯಲ್ಲಿ ಅದನ್ನು ನಾಮಕೇವಾಸ್ತೆ ಕಲಿಸುವಂತೆ ಕಲಿಯುವಂತೆ, ಈ ಪ್ರಾಂತದ ಮಕ್ಕಳೂ ನಾಮಕೇ ವಾಸ್ತೆ ಕನ್ನಡ ಕಲಿಯುತ್ತಿದ್ದರೆಂದೇ ಕಾಣುತ್ತದೆ. ಇರುವ ಒಂದು ಕನ್ನಡ ವಿಷಯಕ್ಕೆ ಕನ್ನಡ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವುದಕ್ಕೆ ನಿಜಾಮ ಸರಕಾರವು ವ್ಯವಸ್ಥೆ ಮಾಡಿರಲಿಲ್ಲ. ಬದಲಾಗಿ ಮೈಸೂರು ಸಂಸ್ಥಾನದಲ್ಲಿ ಸಿದ್ಧಪಡಿಸಿದ ಕನ್ನಡ ಪಠ್ಯಪುಸ್ತಕಗಳನ್ನೇ ಈ ಪ್ರಾಂತದಲ್ಲಿ ತಂದು ಪಠ್ಯವನ್ನಾಗಿ ಗೊತ್ತುಮಾಡಲಾಗುತ್ತಿತ್ತು. ಈ ಪ್ರಾಂತಕ್ಕೆ ಮೈಸೂರಿನ ಶಿಕ್ಷಣ ಇಲಾಖೆಯಿಂದ ಪಠ್ಯಗಳನ್ನು ತರಿಸಿಕೊಳ್ಳುವುದರಿಂದ ಈ ಪ್ರಾಂತದಲ್ಲಿ ಕನ್ನಡ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವ ಅವಕಾಶ ಇಲ್ಲದಂತಾಯಿತು. ಶೈಕ್ಷಣಿಕವಾಗಿ ಕನ್ನಡ ಭಾಷೆಯ ಅಭಿವೃದ್ಧಿಗೆ ಇದರಿಂದ ಮಾರಕವಾಯಿತು. ಮೈಸೂರು ಸಂಸ್ಥಾನದಿಂದ ಬಂದ ಕನ್ನಡ ಪಠ್ಯಪುಸ್ತಕಗಳನ್ನು ಓದುವ ಈ ಪ್ರಾಂತದ ವಿದ್ಯಾರ್ಥಿಗಳು ‘ಹಳೆಯ ಮೈಸೂರಿನ ಭಾಷೆಯ ಸೊಗಸು’[20] ಎಂದು ಆ ಭಾಷೆಯನ್ನು ಮೆಚ್ಚಿಕೊಳ್ಳುವಂತಾಯಿತು ಎಂದು ತೋರುತ್ತದೆ. ಇದು ಸಣ್ಣ ವಿಷಯವಾಗಿ ಕಾನುವುದಿಲ್ಲ. ಯಾಕೆಂದರೆ ಈ ಪ್ರಾಂತದ ಮೂರು ಜಿಲ್ಲೆಗಳ ಕನ್ನಡ ಭಾಷೆಯಲ್ಲಿ ಪ್ರಾದೇಶಿಕ ಭಿನ್ನತೆಗಳಿವೆ. ಈ ಭಿನ್ನತೆಗಳನ್ನು ‘ಕಲಬರಿಕೆ’, ‘ವರಟು’, ‘ಮೊಗಲಾಯಿ’ ಎಂದು ಕರೆದು ಈ ಭಾಷೆ ಸಾಹಿತ್ಯಕ್ಕೆ ಯೋಗ್ಯವಲ್ಲ ಎಂಬ ನಿಲುವಿಗೆ ಬಂದಂತೆ ಕಾಣುತ್ತದೆ. ಮೇಲಾಗಿ ಕರ್ನಾಟಕದಲ್ಲಿ ವಿದ್ವಾಂಸರು ಪ್ರಾದೇಶಿಕ ಭಿನ್ನತೆಯನ್ನು ಕೈಬಿಟ್ಟು ‘ಗ್ರಾಂಥಿಕ ಭಾಷೆ’ ಯೊಂದನ್ನು ರೂಪಿಸುವ ಅವಶ್ಯಕತೆಯನ್ನು ಪ್ರತಿಪಾದಿಸುತ್ತಿದ್ದ ಕಾಲವೇ ಅದಾಗಿತ್ತು. ಕರ್ನಾಟದಲ್ಲಿರುವ ಕನ್ನಡ ಭಾಷೆಯ ಪ್ರಾದೇಶಿಕ ಭಿನ್ನತೆಯನ್ನು ಉಳಿಸಿಕೊಳ್ಳಬೇಕು ಎಂದು ವಾದಿಸುವವರು ಇದ್ದರು. ಬೇಡವೆಂದು ಮತ್ತು ‘ಗ್ರಾಂಥಿಕ ಭಾಷೆ’ ಯೊಂದನ್ನು ರೂಪಿಸಬೇಕೆಂದು ವಾದಿಸುವವರು ಇದ್ದಂತೆ ಕಾಣುತ್ತದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಈ ವಿಷಯ ಕೆಲವು ವರ್ಷಗಳವರೆಗೆ ಚರ್ಚೆಯಾದಂತೆಯೂ ಕಾಣುತ್ತದೆ. ‘ಇತರ ಭಾಷೆಗಳಲ್ಲಿರುವಂತೆ ಕನ್ನಡದಲ್ಲಿಯೂ ಆಡುವ ಭಾಷೆಗಳಲ್ಲಿ ಭೇದಗಳಿವೆ. ಅವುಗಳಲ್ಲಿ ಕೆಲವು ಗ್ರಾಮ್ಯ,ಕೆಲವು ಪ್ರತ್ಯಯ ಭೇಧಗಳುಳ್ಳವು. ಲೂಥರ್ ಎಂಬಾತನು ಜರ್ಮನ ಗ್ರಾಮ್ಯ ಭಾಷೆಯೊಂದರಲ್ಲಿ ಬೈಬಲನ್ನು ಬರೆದು ಜರ್ಮನಿಯು ಒಂದು ಭಾಷಾಭಿಮಾನವನ್ನು ಪಡೆಯುವಂತೆ ಮಾಡಿದನು. ಕೊರೇಸ್ ಎಂಬಾತನು ಗ್ರೀಸ್ ದೇಶದ ಎಲ್ಲ ಗ್ರಾಮ್ಯ ಶಬ್ದಗಳನ್ನು ಸಂಗ್ರಹಿಸಿ ಗ್ರೀಕ್ ಭಾಷೆಯ ಮಾನದಂಡದಿಂದ ಗ್ರೀಕರ ಸ್ವಾತಂತ್ರ್ಯಕ್ಕೆ ಹಾದಿ ಹಾಕಿಕೊಟ್ಟನು. ಮತ್ತೆ ಇಂಗ್ಲಿಷಿಗೆ ಕೂಡ ಒಂದು ಮಾನದಂಡವಿದೆ. ಇಷ್ಟಾಗಿದ್ದರೂ ಆ ದೇಶಗಳಲ್ಲಿ ಇಂದಿಗೂ ಸ್ಥಳೀಯ ಪದಭೇದಗಳು ಇದ್ದೇ ಇವೆ. ಹೀಗಿರುವಾಗ ಶಬ್ದಕೋಶ, ವಾಕ್ಯವಿನ್ಯಾಸ, ಉಚ್ಛಾರ, ಸಾಹಿತ್ಯಕ ಸಂಪ್ರದಾಯ ಮುಂತಾದ ವಿಚಾರಗಳಲ್ಲಿ ನಾವು ಕನ್ನಡಕ್ಕೂ ಒಂದು ಅಳತೆಯನ್ನು ಶೀಘ್ರದಲ್ಲಿಯೇ ನಿರ್ಧರಿಸುವುದು ನಮಗೆ ಎಷ್ಟು ಮಟ್ಟಿಗೆ ಸಾಧ್ಯ?’[21] ಈ ಅಭಿಪ್ರಾಯದಲ್ಲಿ ಗ್ರಾಂಥಿಕ ಭಾಷೆಯೊಂದನ್ನು ರೂಪಿಸುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಪ್ರಾದೇಶಿಕ ಭಿನ್ನತೆ ಇರಲಿ ಎಂಬ ಇಂಗಿತವಿದೆ. ಆದರೆ ಆ ಕಾಲದಲ್ಲಿ ‘ಗ್ರಾಂಥಿಕ ಭಾಷೆ’ ಯನ್ನು ರೂಪಿಸುವ ಚಟುವಟಿಕೆಗಳು ತೀವ್ರವಾಗಿದ್ದವೆಂದು ಕಾಣಿಸುತ್ತದೆ. ‘ದೇಶಭೇದದಿಂದುಂಟಾದ ಈ ಭಾಷಾ ಭೇದಗಳನ್ನು ಸಂಪೂರ್ಣವಾಗಿ ಹೋಗಲಾಡಿಸುವುದು ಸಾಧ್ಯವೆಂದು ನಾನು ನಂಬಲಾರೆನು. ಇದಲ್ಲದೆ ಬೇರೆ ಬೇರೆ ಪ್ರಾಂತಗಳಲ್ಲಿ ಪ್ರಚಾರದಲ್ಲಿರುವ ಭಾಷಾ ಪ್ರಭೇದಗಳಲ್ಲಿ ಕಾಣಬರುವ ಆಯಾ ಪ್ರಾಂತದ ವೈಲಕ್ಷಣ್ಯಗಳನ್ನು ಸಂಸರ್ಗಗಳನ್ನು ದೂರಮಾಡುವುದು ಅವಶ್ಯಕವಲ್ಲವೆಂದೂ ತೋರುತ್ತದೆ.’[22] ಮೈಸೂರಿನವರ ಈ ಅಭಿಪ್ರಾಯಗಳಿಗೆ ವಿಜಾಪುರದ ಫ.ಗು.ಹಳಕಟ್ಟಿಯವರು, ‘ಕರ್ನಾಟಕವು ಬೇರೆ ಬೇರೆ ಪ್ರಾಂತಗಳಿಗೆ ಸೇರ್ಪಡೆಯಾಗಿರುವುದರಿಂದ, ಅವುಗಳಲ್ಲಿ ಪ್ರಚಲಿತವಿರುವ ಭಾಷೆಗಳಲ್ಲಿಯೂ ಭಿನ್ನತೆಗಳು ತಲೆದೋರುತ್ತವೆ. ಈ ತರದ ಭಿನ್ನತೆಗಳು ಇರುವುದರಿಂದ ಒಂದು ಪ್ರಾಂತದ ಪುಸ್ತಕಗಳು ಬೇರೊಂದು ಕಡೆಗೆ ಪ್ರಸಾರವಾಗುವುದಕ್ಕೆ ತೊಂದರೆಯಾಗುತ್ತವೆ. ಈ ಭಿನ್ನತೆಗಳು ಶಬ್ದ ಪ್ರಯೋಗ, ವಾಕ್ಯರಚನೆ ಮತ್ತು ವ್ಯಾಕರಣ ನಿಯಮಗಳಲ್ಲಿ ಸಹ ಕಂಡುಬರುತ್ತದೆ. ಆದ್ದರಿಂದ ಈ ತರದ ಭೇದಗಳನ್ನು ಆದಷ್ಟು ಮಟ್ಟಿಗೆ ನಾವು ದೂರಮಾಡುವುದು ಅವಶ್ಯಕವಿರುತ್ತದೆ.’[23] ಹೀಗೆ ವ್ಯಕ್ತಪಡಿಸಿದ್ದು ವಿಚಿತ್ರವಾಗಿ ಕಾಣುತ್ತದೆ. ಯಾಕೆಂದರೆ ಇವರು ಗ್ರಂಥಸಂಪಾದನೆ, ಶಾಸ್ತ್ರ, ಸಂಶೋಧನೆಗಳಿಗೆ ಒಲಿದವರು. ಮೇಲಾಗಿ ವಿಜಾಪುರವನ್ನು ಒಳಗೊಂಡು, ಹೈದರಾಬಾದು ಪ್ರಾಂತದಲ್ಲಿ ಸಂಕರಗೊಂಡ ಭಾಷೆಯನ್ನು ‘ಒಂದು ಭಾಷೆ’ ಎಂದು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಅದಕ್ಕಾಗಿಯೇ ಒಮ್ದು ಶುದ್ಧವಾದ, ಅದು ‘ಗ್ರಾಂಥಿಕ ಭಾಷೆ’ ಯನ್ನು ಬೇಕೆಂದು ಅಪೇಕ್ಷಿಸಿದಂತಿದೆ. ಆದರೆ ‘ಸೃಜನಶೀಲ’ ಬರಹಗಾರರಿಗೆ ಪ್ರಾದೇಶಿಕ ಭಿನ್ನತೆಯೇ ಒಂದು ಶಕ್ತವಾದ ಭಾಷೆಯಾಗಿ, ಅನನ್ಯವಾದ ಭಾಷೆಯಾಗಿ ಕಂಡಿದೆ. ಚೆನ್ನಣ್ಣ ವಾಲೀಕಾರರು ‘ಬೆಳ್ಯ’ ಕಾದಂಬರಿಯನ್ನು ಬರೆದದ್ದು ದೇಶಿಭಾಷೆಯಲ್ಲಿ. ಒಂದು ಭಾಷೆಯಲ್ಲಿ ಸಹಜವಾಗಿರುವ ಪ್ರಾದೇಶಿಕ ಭಿನ್ನತೆಯನ್ನು ಶಾಸ್ತ್ರಕಾರ ‘ಕವಿರಾಜಮಾರ್ಗ’ದ ಶ್ರೀವಿಜಯನೇ ೮ನೇ ಶತಮಾನದಲ್ಲಿ ನಿರಾಕರಿಸದಿದ್ದರೂ ಅದು ಆಡಳಿತಕ್ಕೆ ಅನುಕೂಲವಲ್ಲವೆಂದು ಭಾವಿಸಿದ್ದಂತೆ ತೋರುತ್ತದೆ. ಈ ಸಮಸ್ಯೆಯನ್ನು ಸರಿಪಡಿಸಲು ಒಂದು ಭಾಷೆಯನ್ನು ರೂಪಿಸಿ, ಅದನ್ನು ಆಡಳಿತಕ್ಕೂ ಸಾಹಿತ್ಯಕ್ಕೂ ಬಳಸಲು ಆಗಿನಿಂದಲೇ ಪ್ರಯತ್ನಿಸಲಾಯಿತು. ಆದರೂ ಈ ಕನ್ನಡ ಭಾಷೆಯ ಪ್ರಾದೇಶಿಕ ಭಿನ್ನತೆಗಳು ಜೀವಂತವಾಗಿ ಜನಸಮುದಾಯಗಳಲ್ಲಿ ಉಳಿದು ಬೆಳೆಯುತ್ತಲೇ ಬಂದಿವೆ. ೨೦ನೇ ಶತಮಾನದ ಕೊನೆಯವರೆಗೆ ಪ್ರಾದೇಶಿಕ ಭಾಷೆ ‘ಸೃಜನಶೀಲ’ ಬರಹಗಾರರಿಗೆ ನೆರವಾಗಿದೆ. ಈ ಪ್ರಾಂತದಲ್ಲಿ ಪ್ರಾದೇಶಿಕ ಭಾಷೆಯ ತೊಡಕು ಆಧುನಿಕ ಯುಗದ ಜತೆಗೆ ಕಾಣಿಸಿಕೊಂಡಿದೆ. ಅದನ್ನು ಸಾಹಿತ್ಯಕ್ಕೆ ಬಳಸುವುದು ಉಚಿತವಲ್ಲ ಎಂದು ತಿಳಿದಂತೆ ಕಾಣುತ್ತದೆ. ಯಾಕೆಂದರೆ ಮೈಸೂರು ಸಂಸ್ಥಾನದಲ್ಲಿ ಕಾಣಿಸಿಕೊಂಡ ಆಧುನಿಕ ವಿದ್ವಾಂಸರು ರೂಡಿಸಿಕೊಂಡಿದ್ದ ಭಾಷಾಶೈಲಿಗಳನ್ನು ಮತ್ತು ‘ಸೃಜನಶೀಲ’ ಸಾಹಿತಿಗಳಾದ ಮಾಸ್ತಿ, ಕುವೆಂಪು, ಕಾರಂತ ಮುಂತಾದವರ ಭಾಷಾಶೈಲಿಗಳನ್ನು ಓದತೊಡಗಿದ್ದರು. ಇದರಿಂದ ಅವರ ಭಾಷೆಯೇ ಸಾಹಿತ್ಯಕ್ಕೆ ಉತ್ತಮ ಮಾದರಿಯ ಭಾಷೆ ಎಂಬುದನ್ನು ಒಪ್ಪಿಕೊಂಡಂತೆ ತೋರುತ್ತದೆ. ಇದರಿಂದ ಮೈಸೂರು ಶಿಕ್ಷಣ ಇಲಾಖೆಯಿಂದ ಹೊರಬಂದ ಪಠ್ಯಪುಸ್ತಕಗಳ ಭಾಷೆ ‘ಸೊಗಸಾಗಿ’ ಕಂಡಿರಬೇಕು. ಅಂಥಹ ಭಾಷೆಯೊಂದು ಸೃಷ್ಟಿಸಿಕೊಂಡು ಈ ಪ್ರಾಂತದಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವುದು ಕಠಿಣವಾಗಿ ಕಂಡರೂ ನಂತರದ ವರ್ಷಗಳಲ್ಲಿ ಮನೋಭಾವ ಬದಲಾದಂತೆ ಕಾಣುತ್ತದೆ. ಮೈಸೂರು ಪ್ರಾಂತದ ಕ್ರಮಿಕ ಪುಸ್ತಕಗಳು ಸುಲಭವಾದ ಶೈಲಿಯಲ್ಲಿ ಇಲ್ಲ. ನಮ್ಮ ಪ್ರಾಂತಕ್ಕೆ ತಕ್ಕಂತೆ ನಮ್ಮಲ್ಲಿಯೆ ಪಠ್ಯಗಳು ಸಿದ್ಧವಾಗಬೇಕೆಂದು ಮಾನ್ವಿಯಲ್ಲಿ ನಡೆದ. ‘ಹೈದರಾಬಾದ್ ಪ್ರದೇಶ ಕನ್ನಡ ಸಾಹಿತ್ಯ ಪರಿಷತ್ತಿ’ನ ಸಾಹಿತ್ಯ ಸಮ್ಮೇಳನ (೧೯೪೬) ದಲ್ಲಿ ಚಂದ್ರಶೇಖರ ಶಾಸ್ತ್ರಿಗಳು ಹೇಳಿದರು. ಮುಂದೆ ಹೈದರಾಬಾದಿನಲ್ಲಿ ಕನ್ನಡ ವಿದ್ವಾಂಸರು ಕನ್ನಡ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿ ಪ್ರಕಟತೊಡಗಿದರೂ ಅದು ಸಣ್ಣ ಪ್ರಮಾಣದಲ್ಲಿತ್ತು.

ಸ್ವಾತಂತ್ರ್ಯೋತ್ತರದಲ್ಲಿಯೂ ಪಠ್ಯಪುಸ್ತಕಗಳ ಗುಣಮಟ್ಟ ಬೇಗ ಸುಧಾರಿಸಲಿಲ್ಲ. ಕನ್ನಡ ವಿದ್ವಾಂಸರು ಪಠ್ಯಪುಸ್ತಕಗಳ ಬಗ್ಗೆ ತಕರಾರುಗಳನ್ನು ತೆಗೆಯುತ್ತಲೇ ಇದ್ದರು. ಚೆನ್ನಬಸವಪ್ಪ ಬೆಟ್ಟದೂರು ಅವರು ಯಾದಗಿರಿಯಿಂದ ಪ್ರಕಟವಾಗುತ್ತಿದ್ದ ‘ಹೈದರಾಬಾದು ಕರ್ನಾಟಕ’ ಎಂಬ ಪತ್ರಿಕೆಯಲ್ಲಿ ಚಾಲ್ತಿಯಲ್ಲಿದ್ದ ಪಠ್ಯಪುಸ್ತಕಗಳ ಲೋಪದೋಷಗಳನ್ನು ಕುರಿತು ಬರೆದು ಸರಕಾರದ ಗಮನಕ್ಕೆ ತಂದರು. ಕರ್ನಾಟಕ ಸರಕಾರವು ಶಾಂತರಸ, ಚೆನ್ನಬಸವಪ್ಪ, ಜೆ. ಡಬ್ಲ್ಯೂ ಗರಿಷ್ಯಾಂ, ಕೆ.ರಾಘವೇಂದ್ರರಾವ್ ಸೇರಿದ ಸಮಿತಿಯನ್ನು ರಚಿಸಿತು. ಈ ಸಮಿತಿ ೭, ೮, ೯ನೇ ತರಗತಿಗಳಿಗೆ ಕನ್ನಡ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿತು. ಈ ಪಠ್ಯಗಳು ಜನಪ್ರಿಯವಾದವು. ವಿಜಾಪುರದ ಕೆಲವು ತಾಲ್ಲೂಕುಗಳ ಶಾಲೆಗಳಿಗೂ ಈ ಪಠ್ಯಪುಸ್ತಕಗಳನ್ನು ಬೋಧಿಸಲಾಯಿತು ಎಂದು ತಿಳಿದುಬರುತ್ತದೆ.[1] ಶೈಲಜಾ ಉಡಚಣ : ನನ್ನ ಶಿಕ್ಷಣ, ತಿರುಳ್ಗನ್ನಡ (೧೯೯೩), ಪುಟ-೨೪

[2] ಎಸ್.ಎನ್. ಪಾಟೀಲ್ : ಹೈದರಾಬಾದು ಶಿಕ್ಷಣದ ಹಿನ್ನೋಟ : ಇಂದಿಗೂ ಹಸಿರು ಹಸಿರು, ತಿರುಳ್ಗನ್ನಡ (೧೯೯೩) ಪುಟ-೩೧

[3] ಶಾಂತರಸ : ನನ್ನ ಶಿಕ್ಷಣ – ಒಂದು ಹಿನ್ನೋಟ , ತಿರುಳ್ಗನ್ನಡ (೧೯೯೩) ಪುಟ-೫

[4] ಬಿ. ವಿರೂಪಾಕ್ಷಪ್ಪ : ತಿರುಳ್ಗನ್ನಡ (೧೯೯೩) ಪುಟ-೨೯

[5] ಜಯತೀರ್ಥ ರಾಜಪುರೋಹಿತ : ಜಯತೀರ್ಥ. ಪುಟ-೭

[6] ಸೀತಾರಾಮ ಜಾಗೀರದಾರ್ : ನನ್ನ ಶಿಕ್ಷಣದ ಹಿನ್ನೋಟ , ತಿರುಳ್ಗನ್ನಡ (೧೯೯೩) ಪುಟ-೨೧

[7] ಶಾಂತರಸ : ನನ್ನ ಶಿಕ್ಷಣ – ಒಂದು ಹಿನ್ನೋಟ , ತಿರುಳ್ಗನ್ನಡ (೧೯೯೩) ಪುಟ-೫

[8] ಬಿ. ವಿರೂಪಾಕ್ಷಪ್ಪ : ಹಳೇ ಹೈದರಾಬಾದ್ ಶಿಕ್ಷಣದ ಹಿನ್ನೋಟ : ಅ ಬದುಕಿನ ನೆನೆಪುಗಳು, ತಿರುಳ್ಗನ್ನಡ (೧೯೯೩) ಪುಟ-೨೮

[9] ಬಿ. ವಿರೂಪಾಕ್ಷಪ್ಪ : ಹಳೇ ಹೈದರಾಬಾದ್ ಶಿಕ್ಷಣದ ಹಿನ್ನೋಟ : ಅ ಬದುಕಿನ ನೆನೆಪುಗಳು, ತಿರುಳ್ಗನ್ನಡ (೧೯೯೩) ಪುಟ-೨೯

[10] ಕಪಟರಾಳ ಕೃಷ್ಣರಾವ್ : ಕರ್ನಾಟಕ ಸಂಸ್ಕೃತಿಯ ಸಂಶೋಧನೆ (೧೯೭೦)

[11] ಪದ್ಮನಾಭಾಚಾರ್ಯ ಪುರಾಣಿಕ : ಹೈದರಾಬಾದ್ ಕರ್ನಾಟಕ (೧೯೪೧) ಪುಟ-೫೧

[12] ಜಯತೀರ್ಥ ರಾಜಪುರೋಹಿತ : ಜಯತೀರ್ಥ. ಪುಟ-೩೫

[13] ಭಾಲಚಂದ್ರ ಜಯಶೆಟ್ಟಿ : ಸಮ್ಮೇಳನಾಧ್ಯಾಕ್ಷರ ಭಾಷಣ (೧೯೯೮) ಪುಟ-೨

[14] ಶಾಂತರಸ : ನನ್ನ ಶಿಕ್ಷಣ – ಒಂದು ಹಿನ್ನೋಟ , ತಿರುಳ್ಗನ್ನಡ (೧೯೯೩) ಪುಟ-೫

[15] ಶಾಂತರಸ : ನನ್ನ ಶಿಕ್ಷಣ – ಒಂದು ಹಿನ್ನೋಟ , ತಿರುಳ್ಗನ್ನಡ (೧೯೯೩) ಪುಟ-೬

[16] ಎಸ್.ಎನ್. ಪಾಟೀಲ್ : ಹೈದರಾಬಾದು ಶಿಕ್ಷಣದ ಹಿನ್ನೋಟ : ಇಂದಿಗೂ ಹಸಿರು ಹಸಿರು, ತಿರುಳ್ಗನ್ನಡ (೧೯೯೩) ಪುಟ-೩೨

[17] ಶೈಲಜಾ ಉಡಚಣ : ನನ್ನ ಶಿಕ್ಷಣ, ತಿರುಳ್ಗನ್ನಡ (೧೯೯೩), ಪುಟ-೨೫

[18] ಸಿದ್ಧಯ್ಯ ಪುರಾಣಿಕ : ಹೈದರಬಾದಿನ ವಿದ್ಯಾರ್ಥಿ ಜೀವನದತ್ತ ಹೊರಳು ನೋಟ, ತಿರುಳ್ಗನ್ನಡ (೧೯೯೩) ಪುಟ-೩

[19] ಬಿ. ವಿರೂಪಾಕ್ಷಪ್ಪ : ಹಳೇ ಹೈದರಾಬಾದ್ ಶಿಕ್ಷಣದ ಹಿನ್ನೋಟ : ಅ ಬದುಕಿನ ನೆನೆಪುಗಳು, ತಿರುಳ್ಗನ್ನಡ (೧೯೯೩) ಪುಟ-೨೮

[20] ಬಿ. ವಿರೂಪಾಕ್ಷಪ್ಪ : ಹಳೇ ಹೈದರಾಬಾದ್ ಶಿಕ್ಷಣದ ಹಿನ್ನೋಟ : ಅ ಬದುಕಿನ ನೆನೆಪುಗಳು, ತಿರುಳ್ಗನ್ನಡ (೧೯೯೩) ಪುಟ-೨೮

[21] ಎಸ್.ಎನ್. ಸುಬ್ಬರಾಯ : ಕನ್ನಡ ಸಾಹಿತ್ಯ ಮತ್ತು ಕಾಲಗತಿ, ಅಧ್ಯಕ್ಷರ ಭಾಷಣಗಳು (೧೯೭೦) ಪುಟ-೨೩

[22] ಎಚ್.ವಿ. ನಂಜುಡಯ್ಯ : ಅಧ್ಯಕ್ಷರ ಭಾಷಣಗಳು ಸಂಪುಟ-೨ (೧೯೭೨) ಪುಟ-೧೬

[23] ಫ.ಗು. ಹಳಕಟ್ಟಿ : ಅಧ್ಯಕ್ಷರ ಭಾಷಣಗಳು ಸಂಪುಟ-೨ (೧೯೭೨) ಪುಟ-೨೨೫