ಪ್ರತ್ಯೇಕತೆಯ ದನಿಗಳು

ಈ ಪ್ರಾಂತದಲ್ಲಿ ಪ್ರಾಂತದ ಜನರಿಂದಲೇ ಸ್ಥಾಪನೆಯಾದ ‘ನೂತನ ವಿದ್ಯಾಲಯ’ (ಗುಲಬರ್ಗಾ), ‘ಹಮದರ್ದ ಶಾಲೆ’ (ರಾಯಚೂರು), ‘ವಿದ್ಯಾನಂದ ಗುರುಕುಲ’ (ಕುಕನೂರು) ಮುಂತಾದ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಆರಂಭದಲ್ಲಿ ಇರಲಿಲ್ಲ. ವಿದ್ಯಾವಂತ ಮರಾಠಿ ಭಾಷೆಯ ಕನ್ನಡಿಗರು ಕನ್ನಡ ಮಾಧ್ಯಮವನ್ನು ವಿರೋಧಿಸಿದರು. ರಾಯಚೂರಿನಲ್ಲಿ ಆರಂಭವಾದ ಹಮದರ್ದ ಶಾಲೆಯಲ್ಲಿ ಕನ್ನಡ ಮಾಧ್ಯಮವನ್ನು ಕನ್ನಡಿಗರೇ ವಿರೋಧಿಸಿದರೆಂದು ಪಂಡಿತ ತಾರಾನಾಥರೇ ಹೇಳಿಕೊಂಡಿದ್ದಾರೆ. ಭಾಲ್ಕಿಯಂಥ ಮರಾಠಿಮಯ ಪ್ರದೇಶದಲ್ಲಿ ಚೆನ್ನಬಸವ ಪಟ್ಟದ್ದೇವರು ಕನ್ನಡದ ಮೇಲಿನ ಅಭಿಮಾನದಿಂದ ಹೊರಗೆ ‘ಉರ್ದು ಮಾಧ್ಯಮ’ ಎಂದು ಬೋರ್ಡ್ ಹಾಕಿಕೊಂಡು ಒಳಗೆ ಕನ್ನಡ ಅಕ್ಷರಭ್ಯಾಸ ಮಾಡಿಸಿದರು. ನಿಜಾಮರ ಭಯ ಒಂದು ಕಡೆಯಾದರೆ, ಮರಾಠಿ ಕನ್ನಡಿಗರ ಭಯ ಇನ್ನೊಂದು ಕಡೆ. ಈ ಪ್ರಾಂತದಲ್ಲಿ ಕನ್ನಡ ವಿರೋಧಿ ಬೆಳವಣಿಗೆಗಳು ಮುಂದೆ ಬೇರೆ ದಾರಿಗೆ ತಿರುಗಿದವು. ೨೦ನೇ ಶತಮಾನದ ಆರಂಭದ ದಶಕಗಳಿಂದ ಕಲಬುರ್ಗಿ ಭಾಗದಲ್ಲಿ ಕನ್ನಡ ವಾತಾವರಣಕ್ಕೆ ಅಡ್ಡಿಯನ್ನುಂಟು ಮಾಡಿದವರು ಮರಾಠಿ ಭಾಷೆ-ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬಮ್ದ ಕನ್ನಡಿಗರು. ಅಷ್ಟೇ ಅಲ್ಲ ಕಲಬುರ್ಗಿ ಜಿಲ್ಲೆಯ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಬೇಕೆಂದು, ಅದಕ್ಕೆ ಸಂಬಂಧಿಸಿದ ಪೂರಕ ಇತಿಹಾಸವನ್ನು ಮುಂಚೂಣಿಗೆ ತಂದು ಪ್ರದರ್ಶಿಸಲು ಮತ್ತು ಚಳುವಳಿ ಮಾಡಲು ಪ್ರಯತ್ನಗಳು ನಡೆದವು. ಬೆಳಾಗಂವ ಜಿಲ್ಲಾ ಪ್ರದೇಶದಿಂದ ತುಂಗಭದ್ರಾ ನದಿಯವರೆಗೆ ಮರಾಠಿಯೇ ಮೂಲಭಾಷೆಯಾಗಿತ್ತು. ‘ಕನ್ನಡವೇ ಆಗಂತುಕ’ ವಾಗಿ ಬಂದು ನೆಲೆಸಿತು ಎಂದು ವಿದ್ಯಾವಂತರು ವಾದಿಸಿದರಂತೆ. ಅಷ್ಟೇ ಅಲ್ಲ ‘ಮಹಾರಾಷ್ಟ್ರ ವಿಶ್ವವಿದ್ಯಾನಿಲಯವು ಇನ್ನೂ ಅಸ್ತಿತ್ವದಲ್ಲಿ ಬಾರದಿದ್ದರೂ ಅದರ ಪುರಸ್ಕೃತರು ಮಹಾರಾಷ್ಟ್ರಕ್ಕೆ ಹೊಂದಿಕೊಂಡ ಕನ್ನಡದ ಗಡಿಗಳನ್ನಷ್ಟೇ ಏಕೆ, ಅದಕ್ಕೆ ಹತ್ತಿದ ಒಳನಾಡ ಭಾಗಗಳಲ್ಲಿ ತಮ್ಮ ಭಾವೀ ವಿಶ್ವವಿದ್ಯಾಲಯದ ಕಾರ್ಯಕ್ಷೇತ್ರದಲ್ಲಿ ಬರುವ ಯೋಜನೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಅದೇ ರೀತಿ ಮದ್ರಾಸ್ ಪ್ರಾಂತದಲ್ಲಿ ಈಗಾಗಲೇ ಸ್ಥಾಪಿತವಾಗಿರುವ ಆಂಧ್ರ ವಿಶ್ವವಿದ್ಯಾಲಯದ ಗಡಿಗಳನ್ನು ಬಳ್ಳಾರಿ ಮುಂತಾದ ಕನ್ನಡ ಜಿಲ್ಲೆಗಳನ್ನು ಒಳಗೊಳ್ಳುವಂತೆ ವಿಸ್ತರಿಸಬೇಕೆಂಬ ಹಂಚಿಕೆಯೂ ಇತ್ತೀಚೆಗೆ ಪ್ರಕಟವಾಗಿದೆ.’

[1] ಇಂಥ ಪ್ರಯತ್ನಗಳು ಒಂದು ಕಡೆ ಕಾಣಿಸಿಕೊಂಡಿದ್ದರೆ, ಇನ್ನೊಂದು ಕಡೆ ಮದ್ರಾಸ್ ಪ್ರಾಂತಕ್ಕೆ ಸೇರಿದ್ದ ಬಳ್ಳಾರಿ ಜಿಲ್ಲಾ ಪ್ರದೇಶವೂ ಸೇರಿದಂತೆ ಆಂಧ್ರದ ಗಡಿಯ ಭಾಗಗಳು ಒಟ್ಟಾಗಿ, ‘ನಮಗೆ ಆಂಧ್ರವೂ ಬೇಡ, ಕರ್ನಾಟಕವೂ ಬೇಡ. ನಾವು ‘ರಾಯಲಸೀಮೆ’ಯನ್ನು ಪ್ರತ್ಯೇಕ ಮಾಡಿಕೊಂಡು ಬಾಳುತ್ತೇವೆಂದು ವಾದಿಸುವ ಪ್ರಯತ್ನಗಳು ನಡೆದವು. ಇದರಿಂದಾಗಿ ಹೊಸಪೇಟೆಯಲ್ಲಿದ್ದ ಕನ್ನಡ ವಾತಾವರಣ ಕದಡಿತು. ಶಾಲೆಗಳಲ್ಲಿ ತೆಲಗು, ಇಂಗ್ಲಿಶ್ ಬೋಧಿಸಲು ಒತ್ತಾಯ ತರಲಾಯಿತು. ೧೯೨೦ರಲ್ಲಿ ಹೊಸಪೇಟೆಯಲ್ಲಿ ನಡೆದ ೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ರೊದ್ದ ಶ್ರೀನಿವಾಸರಾಯರು ‘ಈ ಜಿಲ್ಲೆಯ ಮುಖ್ಯ ಭಾಷೆಯು ಕನ್ನಡವೆಂಬುದಕ್ಕೆ ಎಳ್ಳಷ್ಟೂ ಸಂಶಯವಿರುವುದಿಲ್ಲ. ಆದರೆ ಇಲ್ಲಿ ಶಾಲೆಗಳಲ್ಲಿ ತೆಲಗು ಭಾಷೆಯಲ್ಲಿ ಕಲಿಸುವುದೂ ಇಲ್ಲಿಯ ಕಚೇರಿಗಳಲ್ಲಿ ತೆಲಗು ಭಾಷೆಯೇ ಪ್ರಚಾರದಲ್ಲಿರುವುದೂ ಏನು ಕಾರಣ? ಈ ಜಿಲ್ಲೆಯ ಆಡಳಿತೆಯ ಅಧಿಕಾರ ಸೂತ್ರಗಳೆಲ್ಲವೂ ಮದ್ರಾಸಿನಲ್ಲಿ ಕೇಂದ್ರೀಕೃತವಾಗಿವೆ. ಮತ್ತು ಆ ಕೇಂದ್ರ ಸ್ಥಾನದಲ್ಲಿ ದುರ್ದೈವಿಯಾದ ಬಡ ಕನ್ನಡದ ಪರವಾಗಿ ಒಂದೇ ಒಂದು ಶಬ್ದವನ್ನಾಡಲೂ ಒಂದೇ ಒಂದು ವ್ಯಕ್ತಿಯು ದೊರೆಯುವಂತಿಲ್ಲ’[2] ಎಂದು ವ್ಯಥೆಯಿಂದ ಹೇಳಿದ್ದಾರೆ. ಆದರೆ ರಾಯಚೂರಿನ ಗಡಿಗೆ ಹೊಂದಿಕೊಂಡಿದ್ದ ಆದವಾನಿ, ಆಲೂರು, ರಾಯದುರ್ಗ ತಾಲೂಕುಗಳು ಕರ್ನಾಟಕಕ್ಕೆ ಸೇರಿಕೊಳ್ಳಬೇಕೆಂದು ಅಲ್ಲಿಯ ಕನ್ನಡಿಗರು ಹಂಬಲಿಸಿದರು. ಮುಂದೆ ‘ಮೈಸೂರು ರಾಜ್ಯ’ಕ್ಕೆ ಸೇರಿಕೊಳ್ಳಬೇಕೆಂದು ಅಲ್ಲಿಯ ಜನತೆ ಪ್ರಯತ್ನಿಸಿದರು. ಆದರೂ ಆ ತಾಲೂಕುಗಳು ಆಂಧ್ರಕ್ಕೆ ಸೆರಿಹೋದವು. ಈ ಹೊತ್ತಿಗೂ ಈ ತಾಲೂಕುಗಳು ಕನ್ನಡಮಯವಾಗಿವೆ. ಬೀದರ ಜಿಲ್ಲಾ ಪ್ರದೇಶ ಮತ್ತು ಆಂಧ್ರದ ಗಡಿಗೆ ಹೊಂದಿಕೊಂಡಿರುವ ಜಹೀರಾಬಾದ್, ನಿಜಾಮಬಾದ್, ನಾಂದೇಡ, ಕರೀಮನಗರ ಮುಂತಾದ ತಾಲೂಕುಗಳು ಆಂಧ್ರಕ್ಕೆ ಸೇರುತ್ತವೆ ಎಂಬ ಕೂಗೂ ಕೇಳಿ ಬಂದವು. ಬೀದರ ಜಿಲ್ಲೆಯ ಪ್ರದೇಶ ಆಂಧ್ರಕ್ಕೆ ಸೇರುತ್ತದೆಂಬ ಭಯ ಅಲ್ಲಿನ ಕನ್ನಡಿಗರಿಗೆ ತಗುಲಿತು. ಈ ಎಲ್ಲ ಸಂಗತಿಗಳಿಗಿಂತ ಭಯಾನಕವಾದ ಸುದ್ದಿಯೊಂದು ಈ ಪ್ರಾಂತದ ಜನರನ್ನು ಅಲುಗಾಡಿಸಿತು. ‘ಹೈದರಾಬಾದು ಸಂಸ್ಥಾನ’ ವೇ ಒಂದು ಪ್ರತ್ಯೇಕ ‘ಮುಸ್ಲಿಮ್ ದೇಶ’ವಾಗುತ್ತದೆ ಎಂಬುದೇ ಆ ಸುದ್ಧಿ. ಇಡೀ ಪ್ರಾಂತವೇ ಹೀಗೆ ವಿಭಜನೆಯ ಸುಳಿಗೆ ಸಿಕ್ಕು ಜನರು ತಲ್ಲಣಿಸಿದರು. ಈ ಪ್ರಾಂತದ ಜನರು ಯಾರು ಯಾವ ರಾಜ್ಯಕ್ಕೆ ಹೋಗಿ ಸೇರಿಕೊಳ್ಳುತ್ತವೆಯೋ ಎಂಬ ಆತಂಕದಲ್ಲಿ ಮುಳುಗಿದರು. ಈ ಎಲ್ಲ ಚಟುವಟಿಕೆಗಳು ಅಂದಿನ ವಿದ್ಯಾರ್ಥಿ ಸಮುದಾಯದ ಮೇಲೆಯೂ ಒತ್ತಡ ಹೇರಿದವು. ಪ್ರಾಂತ ವಿಭಜನೆಯ ಸಂಕಟವನ್ನು ಅನುಭವಿಸಿದ ಅಂದಿನ ವಿದ್ಯಾರ್ಥಿಗಳು ಕರ್ನಾಟಕ ಏಕೀಕರಣ ಚಳುವಳಿಯನ್ನು ತೀವ್ರವಾಗಿ ಬೆಂಬಲಿಸಿದರು.

ಹೈದರಾಬಾದು ನಗರದಲ್ಲಿ ಕನ್ನಡ ಸಾಹಿತ್ಯ ಚಟುವಟಿಕೆಗಳು

ಈ ಪ್ರಾಂತದ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣಕ್ಕಾಗಿ ಹೈದರಾಬಾದು ನಗರಕ್ಕೆ ಹೋಗಬೇಕಾಗುತ್ತಿತ್ತಷ್ಟೆ. ಉನ್ನತ ಪದವಿ ಶಿಕ್ಷಣಕ್ಕೆ ಹೋಗುವ ಮುನ್ನವೇ ಕನ್ನಡ ಮತ್ತು ತೆಲುಗು ಭಾಷೆಗಳಂತೂ ಸರಿಯೇ, ಮರಾಠಿ, ಉರ್ದು, ಇಂಗ್ಲಿಶ್, ಹಿಂದಿ ಹೀಗೆ ಬಹುಭಾಷೆಗಳನ್ನು ಕಲಿತುಕೊಂಡಿರುತ್ತಿದ್ದರು. ಈ ಭಾಷೆಯ ಜ್ಞಾನ ಬಹುತೇಕ ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗಿರುತ್ತಿತ್ತು. ವಿದ್ಯಾರ್ಥಿಗಳು ಕನ್ನಡ ಭಾಷೆ-ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹೈದರಾಬಾದಿನಲ್ಲಿ ಶೈಕ್ಷಣಿಕವಾಗಿ ಕಲಿಯಲು ಸಾಧ್ಯವಾಗುತ್ತಿರಲಿಲ್ಲ. ಆಸಕ್ತಿ ಅಭಿಮಾನಗಳಿಂದ ಮಾತ್ರ ಸ್ಪಂದಿಸಬೇಕಾಗಿತ್ತು. ಸರಕಾರದ ನಿರ್ಬಂಧಗಳನ್ನು ಅನುಲಕ್ಷಿಸಿ ಸೀಮಿತ ನೆಲೆಯಲ್ಲಿ ವಿದ್ಯಾರ್ಥಿಗಳು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಸಿದ್ಧಯ್ಯ ಪುರಾಣಿಕರು ಹೈದರಾಬಾದಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಅಲ್ಲಿಯ ಲಿಂಗಪ್ಪಲ್ಲಿಯ ಸಾಂಬಯ್ಯ ಮಠದ ಜತೆ ಸಂಪರ್ಕ ಬೆಳೆಸಿಕೊಂಡಿದ್ದರು. ಅಲ್ಲಿರುವ ಮಠದ ವಿದ್ಯಾರ್ಥಿಗಳು ಹೈದರಾಬಾದು ಕರ್ನಾಟಕ ಪ್ರಾಂತಕ್ಕೆ ಸೇರಿದವರು. ಅವರ ಜತೆ ಸೇರಿ ಕನ್ನಡ ಲೋಕವನ್ನು ಸೃಷ್ಟಿಸಿಕೊಳ್ಳುತ್ತಿದ್ದರು. ಆ ಮಠದ ವಾರ್ಷಿಕೋತ್ಸವದಲ್ಲಿ ಸಿದ್ಧಯ್ಯ ಪುರಾಣಿಕರು ತಮ್ಮ ಮೊದಲ ನಾಟಕ ಕೃತಿ ‘ಆತ್ಮಾರ್ಪಣ’ ಬರೆದರು. ಅದನ್ನು ರಂಗದ ಮೇಲೆ ಪ್ರಯೋಗಿಸಿದರು. ಆ ಪ್ರಯೋಗದ ಬಗ್ಗೆ, ‘ಹಲವು ಗಣ್ಯರ ಸಮ್ಮುಖದಲ್ಲಿ ನಾಟಕ ಪ್ರಯೋಗ. ಕನ್ನಡ ಬಾರದ ಹಾಸ್ಟೇಲಿನ ಹುಡುಗರೂ ನಾಟಕ ಮುಗಿಯುವವರೆಗೆ ನಿಂತೇ ಬೆಕ್ಕಸ ಬೆರಗಾಗಿ ನೋಡಿದರು. ಉಳಿದವರಂತೂ ಮಂತ್ರಮುಗ್ಧರಾದಂತಿದ್ದರು. ನಾಟಕ ಮುಗಿದರೂ ಮೇಲೇಳುವ ಮಾತಿಲ್ಲ! ಮರುದಿನ ನಗರದ ಬಹುಭಾಗಗಳಲ್ಲಿ ನಾಟಕದ ಪ್ರಶಂಸೆಯೇ’[3] ಎಂದು ಅವರೇ ಹೇಳಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಚಟುವಟಿಕೆಗಳು ಹೀಗೆ ಹೈದರಾಬಾದು ನಗರದಲ್ಲಿ ಈ ಪ್ರಾಂತದ ಆಸಕ್ತಿ ವಿದ್ಯಾರ್ಥಿಗಳಿಂದ ಆರಂಭವಾದವು. ನಗರದಲ್ಲಿದ್ದ ‘ಕರ್ನಾಟಕ ಸಾಹಿತ್ಯ ಮಂದಿರ’ ಒಂದು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯಿತು. ಅಲ್ಲಿ ಡಿ.ಕೆ. ಭೀಮಸೇನರಾವ್, ಮಾನ್ವಿ ನರಸಿಂಗರಾವ್, ಜಿ.ಎಸ್. ಮೇಲುಕೋಟೆ ಮುಂತಾದವರು ಅಲ್ಲಿ ಕನ್ನಡ ಸಾಂಸ್ಕೃತಿಕ ವಾತಾವರಣವನ್ನು ಕಟ್ಟಲು ಪ್ರಯತ್ನಿಸುತ್ತಿದ್ದರು. ಆದರೆ ಕನ್ನಡ ನಾಡು-ನುಡಿ-ಸಂಸ್ಕೃತಿ ಕುರಿತಾದ ಚಟುವಟಿಕೆಗಳನ್ನು ಒಡೆದು ಕಾಣುವಂತೆ ಮಾಡಲು ಎಲ್ಲರಿಗೂ ಭಯ. ಸಿದ್ಧಯ್ಯ ಪುರಾಣಿಕರ ಇನ್ನೊಂದು ನಾಟಕ ‘ಸಮರತಿ’ ಎಂಬ ಅಕ್ಕಮಹಾದೇವಿಯನ್ನು ಕುರಿತ ನಾಟಕವನ್ನು ಬಾಲಕಿಯರೇ ರಂಗದ ಮೇಲೆ ಪ್ರಯೋಗಿಸುವ ಸಂದರ್ಭದಲ್ಲಿ ನವಕಲ್ಯಾಣ ಮಠದ ಕುಮಾರ ಸ್ವಾಮಿಗಳು ಉದ್ಘಾಟಿಸಲು ಬರುವಂತೆ ವ್ಯವಸ್ಥೆ ಮಾಡಿದ್ದರು. ಆದರೆ ಸರಕಾರ ಅದನ್ನು ರದ್ದು ಪಡಿಸಿತು. ‘ಅಂದಿನ ಸರಕಾರದ ಅವಿವೇಕತನಕ್ಕೆ ಇದು ಒಂದು ನಿದರ್ಶನ. ಇಂಥವುಗಳನ್ನು ಎಷ್ಟು ಬೇಕಾದರೂ ಉದಾಹರಿಸಬಹುದು’ ಎಂದು ಸಿದ್ಧಯ್ಯ ಪುರಾಣಿಕರು ನೊಂದು ಹೇಳಿಕೊಂಡಿದ್ದಾರೆ. ಆದರೂ ಈ ಪ್ರಾಂತದ ವಿದ್ಯಾರ್ಥಿಗಳು ಹೈದರಾಬಾದು ನಗರದಲ್ಲಿ ಸಾಹಿತ್ಯಕ ಪರಿಸರವನ್ನು ಕಾಯ್ದುಕೊಳ್ಳಲು ದೂರದ ಮೈಸೂರು, ಧಾರವಾಡ ನಗರಗಳಿಂದ ಸಾಹಿತ್ಯ ಸಮ್ಮೇಳನ, ನಾಡಹಬ್ಬ, ವಾರ್ಷಿಕೋತ್ಸವ, ಉದ್ಘಾಟನೆ ಎಂಬ ನೆಪದಲ್ಲಿ ಮಾಸ್ತಿ, ಬಿ.ಎಂ. ಶ್ರೀ, ಶ್ರೀರಂಗ, ಎ.ಆರ್. ಕೃಷ್ಣಶಾಸ್ತ್ರಿ, ಆನಂದಕಂದ ಮುಂತಾದವರನ್ನು ಕರೆಸಿ ಅವರಿಂದ ಭಾಷಣ, ಚರ್ಚೆ, ಸಂವಾದ, ಸಂಪರ್ಕಗಳನ್ನು ಸಾಧಿಸಿಕೊಳ್ಳುತ್ತಿದ್ದರು. ಆದರೆ ಸಾಹಿತ್ಯದ ಅಧ್ಯಯನ ಶಿಕ್ಷಣದಿಂದ ಹೊರಗಿತ್ತು. ಡಿ.ಕೆ. ಭೀಮಸೇನರಾವ್, ಮಾನ್ವಿ ನರಸಿಂಹರಾವ್, ರಾಮಚಂದ್ರರಾವ್ ಪಟ್ವಾರಿ ಮುಂತಾದವರು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಹೋಗಿ ಕನ್ನಡದಲ್ಲಿ ಎಂ.ಎ. ಪದವಿ ಪಡೆದುಕೊಂಡು ಬರಬೇಕಾಯಿತು. ಹೈದರಾಬಾದು ಪ್ರಾಂತವನ್ನು ಬಿಟ್ಟು ಹೊರಗಡೆ ಇರುವ ವಿಶ್ವವಿದ್ಯಾಲಯಗಳಿಗೆ ಹೋಗಿ ಎಂ.ಎ. ಪದವಿಗಳನ್ನು ಪಡೆದುಕೊಂಡು ಬರುವುದು ಕೂಡ ಸುಲಭದ ಕೆಲಸವಾಗಿರಲಿಲ್ಲ. ಅದಕ್ಕೆ ಅಡ್ಡಿ ಆತಂಕಗಳು ಇದ್ದೇ ಇದ್ದವು. ಡಿ.ಕೆ. ಭೀಮಸೇನರಾವ್ ೧೯೨೬ರಲ್ಲಿ ಬಿ.ಎ. ಮುಗಿಸಿ, ಕನ್ನಡ ಎಂ.ಎ. ಓದಬೇಕೆಂದು ಹಂಬಲಿಸಿದರು. ಮದ್ರಾಸ್ ಮತ್ತು ಮುಂಬಯಿ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಎಂ.ಎ. ಓದಲು ಪ್ರಯತ್ನಿಸಿದರೂ ಅವಕಾಶಗಳು ದೊರೆಯಲಿಲ್ಲ. ಯಾಕೆಂದರೆ ಈ ವಿಶ್ವವಿದ್ಯಾಲಯಗಳು ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಪದವಿಗಳನ್ನು ಮಾನ್ಯ ಮಾಡುತ್ತಿರಲಿಲ್ಲ. ಇದಕ್ಕೆ ಬಲವಾದ ಕಾರಣವೆಂದರೆ ಈ ವಿಶ್ವವಿದ್ಯಾಲಯದ ಕಲಿಕೆಯ ಮಾಧ್ಯಮ ಉರ್ದು ಭಾಷೆಯಾಗಿದ್ದರಿಂದಲೇ ಇರಬೇಕು. ೧೯೨೭ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಕನ್ನಡ ತರಗತಿಯನ್ನು ಆರಂಭಿಸಿದಾಗ, ಡಿ.ಕೆ. ಭೀಮಸೇನರಾವ್ ಪ್ರಯತ್ನಿಸಿದಾಗಲೂ ತಕರಾರುಗಳು ಎದುರಾದವಂತೆ. ‘ಕೆಲವು ಜನರಿಂದ ಶಿಫಾರಸು ಪತ್ರಗಳನ್ನು ತೆಗೆದುಕೊಂಡು, ಮೈಸೂರು ವಿಶ್ವವಿದ್ಯಾಲಯದ ಕೌನ್ಸಿಲ್ ಸದಸ್ಯರನ್ನು ಕಂಡು, ಐಚ್ಛಿಕ ವಿಷಯಗಳು ಭಾಷೆಗಳು ಎಂದರೆ ಕನ್ನಡ ಸಂಸ್ಕೃತ ಆಗಿದ್ದುದರಿಂದ ಶಿಕ್ಷಣದ ಮಾಧ್ಯಮದ ಪ್ರಶ್ನೆ ಬರುವುದಿಲ್ಲವೆಂದು ಹೇಳಿ, ಅವರಿಗಿದ್ದ ತಪ್ಪು ತಿಳುವಳಿಕೆಯನ್ನು ದೂರ ಮಾಡಿದರು. ಅವರ ಸಮ್ಮತಿಯಂತೆ ಆಗಿನ ವೈಸ್ ಛಾನ್ಸಲರ್ ಆಗಿದ್ದ ಡಾ. ಬ್ರಜೇಂದ್ರನಾಥ್ ಸೀಲ್ ಅವರನ್ನು ಸಂದರ್ಶಿಸಿ, ವಸ್ತುಸ್ಥಿತಿಯನ್ನು ವಿವರಿಸಿ, ಅವರಿಂದ ಮನ್ನಣೆಯನ್ನು ಪ್ರಶ್ನೆಯನ್ನು ಪುನಃ ಪರಿಶೀಲಿಸಲು ಒಪ್ಪಿಗೆಯನ್ನು ಪಡೆದರು. ಮತ್ತೆ ಮೈಸೂರು ವಿಶ್ವವಿದ್ಯಾನಿಲಯವು ಇವರ ವಿಷಯವನ್ನು ಚರ್ಚೆಗೆ ತೆಗೆದುಕೊಂಡು, ಪಠ್ಯವಿಷಯಗಳಲ್ಲಿ ಇವರನ್ನು ಪರೀಕ್ಷಿಸಿ ಸಂತೃಪ್ತಿ ಪಡೆದ ಮೇಲೆ ಪ್ರವೇಶ ಕೊಡಬೇಕೆಂದು ಕಂದಪದ್ಯದ ಲಕ್ಷಣವನ್ನು ಹೇಳಿರೆಂದು ಕೇಳಿದರು. ದೈವವಶಾತ್ ಅವರಿಗೆ ಆಗ ಜ್ಞಾಪಕವಿತ್ತಮ್ತೆ, ಲೀಲಾಜಾಲವಾಗಿ ಹೇಳಿಬಿಟ್ಟರಂತೆ. ಶ್ರೀಯವರಿಗೆ ಸಂತೋಷವಾಯಿತಂತೆ. ಅನಂತರ ‘ಕನ್ನಡಿಗರಿಗೆ ಇಳ್ಳೆಯ ಸಾಹಿತ್ಯ’ ಎಂಬ ಒಂದು ಪ್ರಬಂಧವನ್ನು ಬರೆಯಲು ಕೊಟ್ಟರು. ಅದನ್ನು ಚೆನ್ನಾಗಿ ಬರೆದಿದ್ದರಿಂದ, ಅದರ ಮೇಲೆಯೇ ಇವರಿಗೆ ಪ್ರವೇಶ ಕೊಡಬೇಕೆಂದು ಬರೆದರಂತೆ.’[4] ಹೀಗೆ ಇವರು ಕನ್ನಡ ಎಂ.ಎ. ತರಗತಿಯಲ್ಲಿ ಪ್ರವೇಶವನ್ನು ಪಡೆದರು. ಇವರೆಲ್ಲ ಪುನಃ ಹೈದರಾಬಾದಿನಲ್ಲಿ ಸಾಹಿತ್ಯ ವಟುವಟಿಕೆಗಳನ್ನು ಆರಂಭಿಸಿದರೂ ಆಧುನಿಕ ಸಾಹಿತ್ಯವನ್ನು ಬೋಧಿಸುವುದಾಗಲಿ, ಚರ್ಚೆ, ಸಂವಾದಗಳ ಮೂಲಕವಾಗಲಿ ಬೆಳೆಸುವುದಾಗಲಿಲ್ಲ. ಯಾಕೆಂದರೆ ಈ ಹಿರಿಯರಿಗೆ ‘ಸೃಜನಶೀಲ ಬರವಣಿಗೆ’ ಯಲ್ಲಿ ಆಸಕ್ತಿ ಇರಲಿಲ್ಲ. ‘ಸೃಜನಶೀಲ ಸಾಹಿತ್ಯ ರಚನೆ, ಪ್ರಚೋದನೆ ಎಲ್ಲ ಸಾಧ್ಯವಿತ್ತು. ಆದರೆ ಆರಂಭದಿಂದಲೇ ಅವರ ಕ್ಷೇತ್ರ ಬೇರೆಯಾಗಿ ಸಾಹಿತ್ಯೇತರ ಮತ್ತು ಶಿಕ್ಷಣೇತರ ವಿಷಯಗಳಲ್ಲಿ ಅವರ ಶಕ್ತಿ ಕಳೆದುಹೋಯಿತು. ಹೀಗಾಗಿ ಪ್ರೊ. ಗೋಕಾಕರು ಹೈದರಾಬಾದಿಗೆ ಬಂದಾಗ ಲೇಖಕರಾಗ ಬಯಸುವ ಕಿರಿಯರಿಗೆ ಒಂದು ಆಶಾಕಿರಣ ಮೂಡಿತು’[5] ಎಂದು ಜಯತೀರ್ಥ ರಾಜಪುರೋಹಿತ ತಮ್ಮ ಆತ್ಮಕಥನದಲ್ಲಿ ಹೇಳಿಕೊಂಡಿದ್ದಾರೆ. ಗೋಕಾಕರು ಉಸ್ಮಾನಿಯ ವಿಶ್ವವಿದ್ಯಾಲಯಕ್ಕೆ ಇಂಗ್ಲಿಶ್ ಪ್ರಾಧ್ಯಾಪಕರಾಗಿ ಬಮ್ದ ಮೇಲೆ, ಅಲ್ಲಿಯ ಸಾಹಿತ್ಯಸಕ್ತರಿಗೆ, ಬರಹಗಾರರಿಗೆ ಉತ್ಸಾಹ ಕಾಣಿಸಿಕೊಂಡಿತು. ‘ಅವರ ಸುತ್ತ ನಾವು ಕೆಲವು ಮಿತ್ರರು ಸೇರಿದೆವು. ‘ಜಿಜ್ಞಾಸುಕೂಟ’ ವೆಂದು ಅವರೇ ಕರೆದ ಕೂತವಾಯಿತು. ಪದೇ ಪದೇ ಚರ್ಚೆಗಳಾದವು. ಅವರ ಅಧ್ಯಯನದ ಎತ್ತರ ಬಿತ್ತರಗಳ ಪರಿಚಯ, ಲಾಭವಾಗ ತೊಡಗಿತು. ಕೃತಿರಚನೆಗೆ ಚಾಲನೆ ಸಿಕ್ಕಿತು. ಅವರೂ ಬರೆದರು. ‘ಹೊಸಗನ್ನಡ ಕಾವ್ಯದ ಗೊತ್ತುಗುರಿಗಳು’ ಗೋಕಾರರ ಈ ಗ್ರಂಥ ಆಗ ನಡೆದ ಚರ್ಚೆ, ವಿವೇಚನೆಗಳ ಫಲ. ನಾವೇ ಅದನ್ನು ಪ್ರಕಟಿಸಿದೆವು. ಅವರ ‘ಯುಗಾಂತರ’ ನಾಟಕ ರಂಗದ ಮೇಲೆ ತರಬೇಕೆಂದಾಯಿತು. ಅದರಲ್ಲಿ ನಾನು ‘ಮೃಣಲಾನಿ’, ಅವರು ‘ನಾಟಕ’ ಪಾತ್ರದಲ್ಲಿ. ಈ ಸುಮಾರಿಗೆ ಕೊಪ್ಪಳ ಗೆಳೆಯರ ಗುಂಪು ಸಹ ಹೈದರಾಬಾದಿನ ಕನ್ನಡ ಚಟುವಟಿಕೆಗಳಲ್ಲಿ ಚುರುಕಾಗಿತ್ತು.’[6]

ಈ ಪ್ರಾಂತದ ವಿದ್ಯಾರ್ಥಿಗಳು ನಿಜಾಮ ಸರಕಾರದ ನಿರ್ಬಂಧಗಳ ನಡುವೆ, ಅನ್ಯಭಾಷೆ-ಸಂಸ್ಕೃತಿಯ ನಗರವಾದ ಹೈದರಾಬಾದಿನಲ್ಲಿ ಗುಂಪು ಗುಂಪುಗಳಾಗಿ ಹೊರಗಿನಿಂದ ಬಂದ ಹಿರಿಯ ಕನ್ನಡ ಸಾಹಿತಿಗಳ ಜತೆ ಕನ್ನಡ ಭಾಷೆ-ಸಾಹಿತ್ಯ-ಸಂಸ್ಕೃತಿಯನ್ನು ಕುರಿತು ಸಂವಾದ ನಡೆಸುತ್ತಿದ್ದರು. ಮೈಸೂರು, ಧಾರವಾಡ ನಗರಗಳಲ್ಲಿ ಹೊಸ ಸಾಹಿತ್ಯ ಆರಂಭವಾಗಿತ್ತು. ಅದನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ೨೦ನೇ ಶತಮಾನದ ಆರಂಭದಿಂದಲೇ ಈ ಪ್ರಾಂತದಲ್ಲಿ ಅನೇಕ ಸಮಸ್ಯೆಗಳು ಉದ್ಭವವಾಗಿ ಪ್ರಭುತ್ವದ ಜತೆ ಹೋರಾಟ, ಹರತಾಳ, ಸತ್ಯಾಗ್ರಹ ನಡೆಯುತ್ತಿದ್ದವು. ಪ್ರಭುತ್ವ ಅದನ್ನು ದಮನ ಮಾಡುತ್ತಿತ್ತು. ಹೀಗೆ ಆತಂಕ, ಭಯದ ನೆರಳಿನಲ್ಲಿ ಬದುಕುವಂತಾಯಿತು. ಆದರೂ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಕುರಿತು ಸಾಮೂಹಿಕ ಪ್ರಯತ್ನಗಳಿಂದ ಚಿಂತಿಸಲು ಹೆಣಗಾಡಿದರು. ಕಲಬುರಗಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (೧೯೨೮) ಬಿ.ಎಂ.ಶ್ರೀ ಅವರು ‘ಕನ್ನಡ ನುಡಿಗೆ ಲಿಪಿಯುಂಟೆಂದೂ, ಒಳ್ಳೆಯ ಸಾಹಿತ್ಯವೂ ಸಾಹಿತಿಗಳುಂಟೆಂದು’ ಹೇಳಿದರಂತೆ. ಈ ಮಾತನ್ನು ಕೇಳಿದ ಕಪಟರಾಳ ಕೃಷ್ಣರಾವ್ ಅವರು ಬಿ.ಎಂ.ಶ್ರೀ ಅವರ ಭಾಷಣದಿಂದ ಕನ್ನಡ ಜನರಿಗೆ ಕನ್ಣಿಗೆ ಅಂಜನ ಹಚ್ಚಿದಂತಾಯಿತು ಎಂದು ಹೇಳಿದರು.[7] ಹೈದರಾಬಾದಿನಲ್ಲಿ ನಡೆದ ೨೬ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (೧೯೪೧) ಅಧ್ಯಕ್ಷರಾದ ಎ.ಆರ್. ಕೃಷ್ಣಶಾಸ್ತ್ರಿಯವರು ‘ಹೈದರಾಬಾದು ಪ್ರಾಂತ ಕನ್ನಡಿಗರಿಗೆ ಹೆಮ್ಮೆಯ ಪ್ರಾಂತ; ಕನ್ನಡ ಸಾಹಿತ್ಯ ಗಂಗೆಯ ಗಂಗೋತ್ರಿ; ತಿರುಳ್ಗನ್ನಡ ಕನ್ನಡಿ; ಕಲಾರತ್ನಗಳ ಖನಿ; ಭಕ್ತಶಿರೋಮಣಿಗಳ ತವರ್ಮನೆ ’ ಎಂದು ಈ ಪ್ರಾಂತದ ಸಾಂಸ್ಕೃತಿಕ ಹಿರಿಮೆಯನ್ನು ಹೇಳಬೇಕಾಯಿತು. ಈ ಹಿರಿಯ ಸಾಹಿತಿಗಳ ಮಾತುಗಳು ಈ ಪ್ರಾಂತದ ಸಾಹಿತ್ಯಾಸಕ್ತರಿಗೆ ಪ್ರೇರಣೆಯಾಗುತ್ತಿದ್ದವು. ಆದರೆ ಅದೇ ಕಾಲದಲ್ಲಿ. ಈ ಪ್ರಾಂತದ ಪರಿಸ್ಥಿತಿಯನ್ನು ಕಪಟರಾಳ ಕೃಷ್ಣರಾವರು ‘ವಿದ್ಯಾರ್ಥಿಗಳು ತಮ್ಮ ತಮ್ಮೊಳಗೆ ಮನೆಯಲ್ಲಿ ಬೀದಿಯಲ್ಲಿ ಉರ್ದು ಮಾತನಾಡುತ್ತಿರುವುದು ಸಾಮಾನ್ಯವಾದ ದೃಶ್ಯ. ಮನೆಯಲ್ಲಿ ಚಿಕ್ಕ ಮಕ್ಕಳೊಡನೆ ಉರ್ದುವಿನಲ್ಲಿ ಮಾತನಾಡುವುದೆಂದರೆ ಹೆಮ್ಮೆಯ ವಿಷಯವಾಗಿದೆ. ಕೆಲವರಿಗೆ ಅದೆಂತಹ ಮರುಳುತನವು! ತಾಯ್ನುಡಿಗೆ ಸಲ್ಲಿಸುತ್ತಿರುವ ಮರ್ಯಾದೆ ಇದು. ಪರಕೀಯರು ದ್ರೋಹವನ್ನು ಮಾಡಲಾರರು. ಇನ್ನು ಮೇಲೆ ಮನೆಯಲ್ಲಿಯ ಹೆಂಗಸರು ಉರ್ದು ಕಲಿಯಬೇಕಂತೆ ಈಗ. ಇದು ಸರಕಾರಿ ಶಿಕ್ಷಣ ಇಲಾಖೆಯವರು ಕೊಟ್ಟ ಹುಕುಮು. ಪಂಪ, ಪೊನ್ನ, ರನ್ನ, ನೃಪತುಂಗ, ತೈಲಪ, ಅರಿಕೇಸರಿಯ ವಂಶಜರು ಇವರು – ಕಾಲಾಯ ತಸ್ಮೈನಮ.’[8] ಈ ಮಾತಿನಲ್ಲಿ ವ್ಯಂಗ್ಯ, ವಿಷಾದ ಮತ್ತು ವ್ಯಥೆ ಅಡಗಿದೆ. ಆದರೆ ಈ ಪ್ರಾಂತದ ಜನಸಮುದಾಯಗಳ ಒಡಲಿಲ್ಲ ಕನ್ನಡ ಜೀವಂತವಾಗಿತ್ತು. ಪಟ್ಟಣ-ನಗರಗಳಲ್ಲಿ ಮೇಲ್ವರ್ಗದವರಲ್ಲಿ ಕನ್ನಡ ನುಡಿಗೆ ಸ್ಥಾನವಿರಲಿಲ್ಲ. ‘ತಮ್ಮ ಮನೆಗಳಲ್ಲಿಯೂ ಕನ್ನಡಿಗರು ಕೂಡಿದರೆ ಸಾಕು, ಮಾತೃಭಾಷೆಯಾದ ಕನ್ನಡ ಮರೆತುಹೋಗಿ ಉರ್ದು ಭಾಷೆಯಲ್ಲಿಯೇ ಮಾತುಕತೆ ನಡೆಯುತ್ತಿತ್ತು’ ಎಂದು ಶಾಂತರಸರು ಹೇಳುತ್ತಾರೆ. ಇಂತಹ ವಾತಾವರಣದಲ್ಲಿಯೂ ಹೈದರಾಬಾದು ಕರ್ನಾಟಕದ ಸಾಹಿತ್ಯಸಕ್ತರು, ಬರಹಗಾರರು, ಅಭಿಮಾನಿಗಳು ಬಿ.ಎಂ.ಶ್ರೀ ಅವರ ಸಂಪರ್ಕದಿಂದ ನವೋದಯ ಸಾಹಿತ್ಯ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸಿದರು. ನಂತರ ಅ.ನ.ಕೃ ಅವರ ಸಂಪರ್ಕದಿಂದ ಪ್ರಗತಿಶೀಲ ಸಾಹಿತ್ಯ ಚಳುವಳಿಗೆ ಒಲಿದರು. ಗೋಕಾಕರ ಸಂಪರ್ಕದಿಂದ ನವ್ಯ ಸಾಹಿತ್ಯದ ಜತೆ ಕೈ ಜೋಡಿಸಿದರು. ಆದರೆ ಇವರ ನಡಿಗೆಯೆಲ್ಲ ಬಾಲ ನಡಿಗೆಯಾಯಿತು ಎಂಬುದು ಸಹಜ.

೧೯೩೭ರಲ್ಲಿ ಹೈದರಾಬಾದಿನ ಸಾಹಿತ್ಯಾಸಕ್ತ ‘ತರುಣರ ತಂಡ’ವು ‘ಮೊಗ್ಗಿನ ಮಾಲೆ’ ಎಂಬ ಕವನ ಸಂಕಲನವನ್ನು ಪ್ರಕಟಿಸುತ್ತದೆ. ನಾಡಹಬ್ಬದ ಸಮಾರಂಭಕ್ಕೆ ಬಿ.ಎಂ.ಶ್ರೀ. ಅವರನ್ನು ಆಹ್ವಾನಿಸಿ, ಆ ಸಂದರ್ಭದಲ್ಲಿ ಈ ಕವನ ಸಂಕಲವನ್ನು ಸಿದ್ಧಪಡಿಸಿ ಅವರಿಗೆ ಅರ್ಪಿಸುತ್ತಾರೆ. ಜೆ.ಕೆ. ಪ್ರಾಣೇಶಾಚಾರ್ಯ, ರಾಘವ, ಸ್ವಾಮಿ, ವೆಂಕಟೇಶ, ಶಿ.ಭಾ. ಶಾಸ್ತ್ರಿ, ಅ.ಕೃ. ಕಟ್ಟಿ, ಜಾಗೀರದಾರ, ಕಮತಗಿ, ನಾಡಿಗ, ಮಾಬ್ವಿ ಮುಂತಾದವರ ೧೪ ಕವಿತೆಗಳಿರುವ ಒಂದು ಅಂಥಾಲಜಿಯದು. ಜೆ.ಕೆ. ಪ್ರಾಣೇಶಾಚಾರ್ಯರ ‘ಸ್ವಾಗತ’ ಎನ್ನುವ ಕವಿತೆ ಗಮನ ಸೆಳೆಯುತ್ತದೆ. ಈ ಕವಿತೆಯ ವಸ್ತು ಬಿ.ಎಂ.ಶ್ರೀ ಅವರನ್ನು ಸ್ವಾಗತಿಸುವ ಕುರಿತಿದೆ. ಅನೇಕ ಬಿಕ್ಕಟ್ಟುಗಳ ನಡುವೆ ನಾವಿದ್ದೇವೆ. ಬಂದು ಕಕ್ಕುಲಾತಿಯಿಂದ ನಮ್ಮನ್ನು ಉದ್ಧರಿಸು ಎಂಬ ಮೊರೆ ಕವಿತೆಯಲ್ಲಿ ತುಂಬಿದೆ. ಈ ಪ್ರಾಂತದ ಕವಿಗಳ ಅಸಹಾಯಕತೆ ಈ ಕವಿತೆ ಬಿಂಬಿಸುತ್ತದೆ. ಕವಿಗಳು ನವೋದಯ ಕಾವ್ಯಮಾರ್ಗದಲ್ಲಿ ತಮ್ಮನ್ನು ಜತೆಗೆ ಕರೆದುಕೊಂಡು ಹೋಗಬೇಕೆಂದು ಹಂಬಲಿಸಿದ್ದಾರೆ. ಈ ಸಂಕಲನದ ಕವಿತೆಗಳಲ್ಲಿ ದಾಸರ ಹಾಡುಗಳ ಪ್ರಭಾವ ಸ್ವಲ್ಪಮಟ್ಟಿಗೆ ಕಾಣುತ್ತದೆ. ಸಂಕಲನದ ಶೀರ್ಷಿಕೆಯೇ ‘ಮೊಗ್ಗಿನ ಮಾಲೆ’. ಮೊಗ್ಗುಗಳು ಅರಳಬೇಕಾಗಿದೆ ಎಂಬುದನ್ನು ಹೇಳುತ್ತಿದೆ.

೧೯೫೪ರಲ್ಲಿ ಹೈದರಾಬಾದಿನ ಕರ್ನಾಟಕ ಸಾಹಿತ್ಯ ಮಂದಿರದ ವತಿಯಿಂದ ‘ಶ್ರೀಕಾರ’ ಎನ್ನುವ ಇನ್ನೊಂದು ಕವನಗಳ ಅಂಥಾಲಜಿ ಪ್ರಕಟವಾಯಿತು. ಇದರ ಶೀರ್ಷಿಕೆಯೂ ಕವಿಗಳ ಕಾವ್ಯ ಕೃಷಿಯ ಆರಂಭವನ್ನು ಸೂಚಿಸುತ್ತಿದೆ. ಇದರಲ್ಲಿ ೬೯ ಕವಿತೆಗಳಿವೆ. ೨೦ನೇ ಶತಮಾನದ ಆದಿಭಾಗದಲ್ಲಿ ಪುರಾಣಗಳ ರಚನೆ ಹೆಚ್ಚಾಗಿ ಕಂಡುಬರುತ್ತದೆ. ವಿಶೇಷವೆಂದರೆ ಈ ಅಂಥಾಲಜಿಯಲ್ಲಿ ಆರು ಪುರಾಣಗಳಿಂದ ಆಯ್ದು ಭಾಗಗಳನ್ನೂ ಸೇರಿಸಲಾಗಿದೆ. ಸ್ವಾತಂತ್ರ್ಯಪೂರ್ವ ಕೊನೆಯ ಅರ್ಧ ದಶಕದ ಕಾಲಘಟ್ಟದಲ್ಲಿ ಕಾಣಿಸಿಕೊಂಡ ಕವಿಗಳ ಕವಿತೆಗಳು ಇಲ್ಲಿ ಸೇರಿವೆ. ಕನ್ನಡ ನವೋದಯ ಕಾವ್ಯಕ್ಕೆ ‘ಹೈದರಾಬಾದು ಕರ್ನಾಟಕ ಪ್ರಾಂತದ ಕವಿಗಳ ಕೊಡುಗೆ’ ಎಂಬಂತೆ ಈ ಎರಡು ಅಂಥಾಲಜಿಗಳಿವೆ. ಆದರೆ ಹೈದರಾಬಾದು ನಗರ ಬಿಟ್ಟು ಈ ಕವಿತೆಗಳು ಹೊರಬಂದಂತೆ ಕಾಣುವುದಿಲ್ಲ. ಕಾಲಕಾಲಕ್ಕೆ ಹೊರಬಂದ ರಾಜ್ಯಮಟ್ಟದ ಕನ್ನಡ ಕವಿತೆಗಳ ಯಾವ ಅಂಥಾಲಜಿಗಳಲ್ಲಿ ಈ ಪ್ರಾಂತದ ಕವಿಗಳ ಕವನಗಳು ಸೇರಿಕೊಳ್ಳಲಿಲ್ಲ. ‘ಶ್ರೀಕಾರ’ ಕೃತಿಗೆ ಮುನ್ನುಡಿ ಬರೆದಿರುವ ಮಾಸ್ತಿವೆಂಕಟೇಶ ಅಯ್ಯಂಗಾರ್, ‘ಕನ್ನಡದ ಕೆಲಸಕ್ಕೆ ಸ್ವಲ್ಪವೂ ಸೌಕರ್ಯ, ಉತ್ತೇಜನ ಎನ್ನುವುದು ಇಲ್ಲದೆ, ಎಲ್ಲ ವಿಧದ ಅಡಚಣೆ ಇರುವ, ಹೈದರಾಬಾದಿನ ಪ್ರಾಂತದ ಕವಿತೆ ಎಂದರೆ ಯಾವ ಕನ್ನಡಿಗ ಅದಕ್ಕೆ ಸ್ವಾಗತ ಕೊಡದೆ ಇದ್ದಾನು?…..ಇವು ನಮ್ಮ ಜನರ ಸಾಹಿತ್ಯ ಶಕ್ತಿಗೆ ಸಾಕ್ಷಿಗಳಾಗಿವೆ. ಹೀಗೆ ಹೇಳಿದ್ದಾರೆ. ಮಾಸ್ತಿಯವರ ಈ ಮಾತು ಈ ಪ್ರಾಂತದ ಹೊರಗಿರುವ ಯಾವ ಸಾಹಿತಿಗಳಿಗೂ ತಟ್ಟಲಿಲ್ಲ.’

ರಾಯಚೂರಿನ ಸಂಗಡಿಗರ ಸಮಿತಿಯು ‘ಮುಸುಕು ತೆಗೆ’ (೧೯೪೭) ಎಂಬ ಸಂಕೀರ್ಣ ಕೃತಿಯನ್ನು ಪ್ರಕಟಿಸಿದೆ. ಶಾಂತರಸರು ಇದರ ಸಂಪಾದಕರು. ಈ ಕೃತಿಯಲ್ಲಿ ಕವಿತೆಗಳು, ಪ್ರಬಂಧಗಳು, ಕಥೆಗಳು ಸೇರಿವೆ. ಸಿದ್ಧಯ್ಯ ಪುರಾಣಿಕರ ‘ಸಲಾಮ್ ಸಾಬ’ ಶಾಂತರಸರ ‘ಬೇಗಂ ಪಾಕಿಸ್ತಾನ’, ಶಿವಲೆಂಕರ ‘ಮುಸುಕು ತೆಗೆ’ ಕಲಾನಂದ ಗೂಗಲ್‍ರ ‘ಪರಮಾಣು ಬಾಂಬು’ ಎಂಬ ಕವಿತೆಗಳು ಗಮನ ಸೆಳೆಯುತ್ತವೆ. ಈ ಭಾಗದ ಯುವ ಬರಹಗಾರರಿಗೆ ಪ್ರೇರಣೆ ಶಕ್ತಿಯಾಗಿದ್ದ ಸೂಗವೀರ ಶರ್ಮರಿಗೆ ಈ ಕೃತಿಯನ್ನು ಅರ್ಪಿಸಲಾಗಿದೆ.

೧೯೫೩ರಲ್ಲಿ ಹೊರಬಂದ ‘ಒರೆಗಲ್ಲು’ ಎನ್ನುವ ಕಥಾಸಂಕಲನ ಗಮನಾರ್ಹವಾದುದು. ಹೈದರಾಬಾದಿನ ‘ಸುದ್ದಿ ಮತ್ತು ಸಾರ್ವಜನಿಕ ಸಂಬಧಗಳ ಖಾತೆ’ ಈ ಕೃತಿಯನ್ನು ಪ್ರಕಟಿಸಿದೆ. ‘೧೯೫೨ರಲ್ಲಿ ಕನ್ನಡ ಸಣ್ಣ ಕಥೆಗಳ ಮೇಲಾಟವನ್ನೇರ್ಪಡಿಸಿತ್ತು. ಈ ಸ್ಪರ್ಧೆಗೆ ಸುಮಾರು ೧೪೦ ಕಥೆಗಳು ಬಂದಿದ್ದೆವು. ಇವುಗಳಲ್ಲಿ ಮಹಿಳೆಯರ ೨೫ ಕಥೆಗಳು ಇದ್ದುವು. ಪರೀಕ್ಷಕರು ಇವುಗಳನ್ನು ಪರೀಕ್ಷಿಸಿ ‘ಒರೆಗಲ್ಲು’ ಮತ್ತು ‘ವಿದ್ಯೆಗಾಗಿ’ ಕಥೆಗಳಿಗೆ ಅನುಕ್ರಮವಾಗಿ ಪ್ರಥಮ ಮತ್ತು ದ್ವೀತಿಯ ಬಹುಮಾನಗಳನ್ನು ಕೊಡಬೇಕೆಂದು ನಿರ್ಣಯಿಸಿದರು.’ ಈ ಕೃತಿಯ ಅರಿಕೆ ಭಾಗದಲ್ಲಿ ಹೀಗೆ ಹೇಳಲಾಗಿದೆ. ಮೇಲಾಟ (ಸ್ಪರ್ಧೆ)ಕ್ಕೆ ಬಂದ ೧೪೦ ಕಥೆಗಳಲ್ಲಿ ೧೦ ಕಥೆಗಳನ್ನು ಸೇರಿಸಿ ಈ ಅಂಥಾಲಜಿಯನ್ನು ಪ್ರಕಟಿಸಲಾಗಿದೆ. ‘ಒರೆಗಲ್ಲು’ (ದೇವೆಂದ್ರಕುಮಾರ ಹಕಾರಿ), ವಿದ್ಯೆಗಾಗಿ (ನರಸಿಂಹ ಕಠಾವಿ), ‘ಟೊಳ್ಳು ಬುರುಜ’ (ಕುಸುಮಾಕರ ದೇಸಾಯಿ) ಎನ್ನುವ ಕಥೆಗಳು ಈ ಕಾಲಘಟ್ಟದ ದುರಂತ ಘಟನೆಗಳನ್ನು ನೆನಪಿಸುತ್ತವೆ. ‘ಒರೆಗಲ್ಲು’ ಕಥೆಯಲ್ಲಿ ಭಾರತ-ಪಾಕಿಸ್ತಾನ ಇಬ್ಭಾಗವಾದಾಗ, ದೇಶದಲ್ಲಿ ನಡೆದ ಮತೀಯ ಗಲಭೆಗೆ ಲಾಹೋರಿನ ಹಿಂದೂ ಕುಟುಂಬವೊಂದು ಬಲವಾದ ಬುಕ್ಕಟ್ಟಿಗೆ ಸಿಲುಕುತ್ತದೆ. ಸಮಯ ಸಾಧಕರ ಕ್ರೌರ್ಯಕ್ಕೆ ಮನೆಯ ಮಂದಿಯೆಲ್ಲ ಬಲಿಯಾಗುತ್ತಾರೆ. ಕಮಲೆ ಎಂಬ ಗೃಹಿಣಿ ಮಾತ್ರ ಉಳಿಯುತ್ತಾಳೆ. ಅವಳಿಗೆ ಮಹಮೂದ ಎನ್ನುವ ವ್ಯಕ್ತಿ ಬೆನ್ನಬೀಳುತ್ತಾನೆ. ಕಮಲೆ ಹುಸೇನಬೀ ಎಂಬ ಮಹಿಳೆಯ ಸಹಾಯದಿಂದ ಲಾಹೋರ್ ಎನ್ನುವ ಪಾಕಿಸ್ತಾನದಿಂದ, ದಿಲ್ಲಿ ಎಂಬ ಭಾರತಕ್ಕೆ ಬಂದರೂ ಅವಳ ಮಾನ ರಕ್ಷಣೆಗೆ ಕುತ್ತು ಬರುತ್ತದೆ. ಮಾನವೀಯ ನೆಲೆಯಲ್ಲಿ ಕಥೆಯನ್ನೂ ಹೆಣೆಯಲಾಗಿದೆ. ‘ವಿದ್ಯೆಗಾಗಿ’ ಎನ್ನುವ ಕಥೆ ಗಮನಾರ್ಹವಾದದ್ದು. ಯಾಕೆಂದರೆ ಈ ಕಥೆ ‘ಮಾದಿಗರ ಹನುಮ’ ಎಂಬ ಕೇರಿಯ ದಲಿತ ಹುಡುಗನನ್ನು ಕುರಿತದ್ದು. ದಲಿತ ಕಾಳಜಿ, ದಲಿತ ಪ್ರಜ್ಞೆ ಕನ್ನಡದಲ್ಲಿ ಕಾಣಿಸಿಕೊಳ್ಳುವ ಪೂರ್ವದಲ್ಲಿಯೇ ಈ ಕಥೆ ರಚನೆಯಾಗಿದೆ. ಅಕ್ಷರ ಕಲಿಯಲು ಕೇರಿಯ ಆರು ವರ್ಷದ ಚಿಕ್ಕ ಹುಡುಗ ಯಾರ ಪ್ರೇರಣೆಯಿಲ್ಲದೆ ಹಂಬಲಿಸುತ್ತಾನೆ. ಊರ ಹುಡುಗರು ಶಾಲೆಯಲ್ಲಿ ಅಕ್ಷರ ತಿದ್ದುವುದನ್ನು, ಗುರುಗಳು ಹೇಳಿ ಕೊಡುತ್ತಿರುವುದನ್ನು ದೂರನಿಂತು ಕೇಳಿಸಿಕೊಂಡು ಅಕ್ಷರ ಕಲಿಯಲು ಪ್ರೇರಿತನಾಗುತ್ತಾನೆ. ಆದರೆ ದನಕಾಯುವ ‘ಮಾದಿಗರ ಹನುಮ’ ಶಾಲೆಗೆ ಹೋದರೆ ಗೌಡರ ಮನೆಯ ದನಗಳನ್ನು ಕಾಯುವವರು ಯಾರು? ಎನ್ನುವ ಪ್ರಶ್ನೆ ಅವನ ಬೆನ್ನಿಗೆ ಹೊರಿಸಲಾಗುತ್ತದೆ. ಕೊನೆಗೆ ಚೆನ್ನೆಬಸಪ್ಪಗೌಡರಿಂದ ದಮನಕ್ಕೆ ಒಳಗಾಗಿ ಸಾವಿಗೀಡಾಗುತ್ತಾನೆ. ಈ ಕಥೆಯನ್ನು ಓದುವಾಗ ‘ದನಿಯರ ಸತ್ಯನಾರಾಯಣ’ (ಕೊರಡ್ಕಲ್ ಶ್ರೀನಿವಾಸರಾವ್) ‘ಅಮಾಸ’ (ದೇವನೂರ ಮಹಾದೇವ) ಕಥೆಗಳು ನೆನಪಾಗುತ್ತವೆ. ಈ ಪ್ರಾಂತದಲ್ಲಿ ಕಥೆಗಳು ಕಾಣಿಸಿಕೊಂಡದ್ದೇ ತಡವಾಗಿ. ಆರಂಭದಲ್ಲಿಯೇ ‘ವಿದ್ಯೆಗಾಗಿ’ ಎನ್ನುವ ಕಥೆ ರಚನೆಯಾಗಿರುವುದು ವಿಶೇಷವಾಗಿದೆ. ‘ಟೊಳ್ಳು ಬುರುಜು’ ಕಥೆಯಲ್ಲಿ, ದಿಲ್ಲಿಯ ಟಾಂಗಾವಾಲ ರಾಮಸಿಂಗನಿಗೆ ತನ್ನ ದಂಧೆಯಿಂದ ಸಂಸಾರವನ್ನು ನಿಭಾಯಿಸುವುಸು ಅಸಾಧ್ಯವಾಗಿರುತ್ತದೆ. ಒಂದು ಸಂದರ್ಭದಲ್ಲಿ ದೊಡ್ಡ ಮುಸ್ಲಿಮ್ ಅಧಿಕಾರಿಗೆ ರಾಮಸಿಂಗನ ಪ್ರಾಮಾಣಿಕತೆ ಅರಿವಿಗೆ ಬರುತ್ತದೆ. ಅವನ ಸಾಂಸಾರಿಕ ಕಷ್ಟಗಳನ್ನು ನೀಗಿಸಲು ಸರಕಾರಿ ನೌಕರಿಯನ್ನು ಕೊಡುವುದಾಗಿ ಅಧಿಕಾರಿ ಆಶ್ವಾಸನೆ ಕೊಡುತ್ತಾನೆ. ಇನ್ನೇನು ನೌಕರಿ ಸಿಗುವ ಸಮಯ. ಆದರೆ ಅದೇ ಸಮಯದಲ್ಲಿ ದೇಶ ಇಬ್ಭಾಗವಾಗುತ್ತದೆ. ಮುಸ್ಲಿಮ್ ಅಧಿಕಾರಿ ಪಾಕಿಸ್ತಾನಕ್ಕೆ ಹೋಗಿಬಿಡುತ್ತಾನೆ. ರಾಮಸಿಂಗ ದಿಲ್ಲಿಯಲ್ಲೇ ಉಳಿಯುತ್ತಾನೆ.

ಪ್ರಗತಿಶೀಲ ಸಾಹಿತ್ಯದ ಆಶಯಗಳು ಇರುವ ಈ ಸಂಕಲನದಲ್ಲಿ ಸುಶೀಲಾ ಬಾಡಗಂಡಿ, ಕೃಷ್ಣರಾಯ ನಿಲೋಗಲ್ಲು, ವಾಗೀಶ್ವರಿ ನಾರಾಯಣ, ಎಚ್.ಬಿ.ಕುಲಕರ್ಣಿ, ಎಸ್.ಜಿ. ಬಿರಾದಾರ, ಶ್ಯಾಮಪ್ರಸಾದ ಮುದ್ಗಲ್ಲು ಮತ್ತು ಸಿದ್ಧಯ್ಯ ಪುರಾಣಿಕ ಇವರೆಲ್ಲರ ಕಥೆಗಳಿವೆ. ಈ ಕಥೆಗಾರರು ಮುಂದೆ ಕಥಾಸಾಹಿತ್ಯದಲ್ಲಿ ಮುಂದುವರಿದಿರುವ ಬಗ್ಗೆ ಮಾಹಿತಿಯಿಲ್ಲ. ಮೇಲಾಟ (ಸ್ಪರ್ಧೆ)ಕ್ಕೆ ಬಂದ ೧೪೦ ಕಥೆಗಳಲ್ಲಿ ೨೫ ಕಥೆಗಳನ್ನು ಮಹಿಳೆಯರು ಬರೆದಿರುವುದು ಆಶ್ಚರ್ಯವನ್ನುಂಟು ಮಾಡುತ್ತದೆ. ಮಹಿಳೆಯರು ೫೦ರ ದಶಕದಲ್ಲಿ ಕಥೆಗಳನ್ನು ಬರೆಯುತ್ತಿದ್ದರು ಎಂದರೆ ದಿಗ್ಬ್ರಮೆಯಾಗುತ್ತದೆ. ಯಾಕೆಂದರೆ ಈ ಪ್ರಾಂತದಲ್ಲಿ ಮಹಿಳೆಯರ ಸಾಕ್ಷರತೆಯ ಪ್ರಮಾಣವು ೪೦-೫೦ರ ದಶಕದಲ್ಲಿ (೦.೬) ಅತ್ಯಲ್ಪವಾಗಿತ್ತು. ಈ ಮಹಿಳೆಯರು ಮುಂದೆ ಕಥೆಗಳನ್ನು ಬರೆದಿರುವ ಬಗ್ಗೆಯೂ ಮಾಹಿತಿಯಿಲ್ಲ. ಈ ಪ್ರಾಂತದಲ್ಲಿ ಬರಹಗಾರರ ಸಾಹಿತ್ಯವನ್ನು ಪ್ರಕಟಿಸಿ ಬೆಲೆಸುವ ಪತ್ರಿಕೆಗಳು ಇರಲಿಲ್ಲ. ರಾಜ್ಯಮಟ್ಟದ ಯಾವ ಪತ್ರಿಕೆಗಳೂ ಈ ಪ್ರಾಂತದ ಬರಹಗಾರರ ರಚನೆಗಳನ್ನು ಪ್ರಕಟಿಸುವ ಔದಾರ್ಯವನ್ನು ತೋರಿಸುತ್ತಿರಲಿಲ್ಲವೆಂದು ಹಿರಿಯ ಬರಹಗಾರರು ವಿಷಾದಪಡುತ್ತಾರೆ. ೬೦ರ ದಶಕದವರೆಗೆ ಪ್ರಕಟವಾದ ಇಂಥ ಕೃತಿಗಳಲ್ಲಿ ನಯೋದಯ ಪ್ರಗತಿಶೀಲ ಸಾಹಿತ್ಯದ ಆಶಯಗಳು ವ್ಯಕ್ತವಾಗಿವೆ. ಈ ಎಲ್ಲ ಬರಹಗಾರರಲ್ಲಿ ಮುಸ್ಲಿಮರು ಮತ್ತು ದಲಿತರು ಒಬ್ಬರೂ ಕಾಣುವುದಿಲ್ಲ.

ಇಷ್ಟಾಗಿಯೂ ಈ ಪ್ರಾಂತದ ಬಹುತೇಕ ಬರಹಗಾರರ ಮೇಲೆ ಶರಣರ, ದಾಸರ, ಅನುಭಾವಿಗಳ ಪ್ರಭಾವ ಇದ್ದೇ ಇತ್ತು. ಬರಹಗಾರರೇ ಹೇಳಿಕೊಂಡಂತೆ ಅನುಭಾವಿಗಳ ತತ್ವಪದಗಳು, ದಾಸರ ಹಾಡುಗಳು ಹಳ್ಳಿಹಳ್ಳಿಗಳ ಮನೆಗಳಲ್ಲಿ, ಗುಡಿ – ಮಠಗಳಲ್ಲಿ, ಚಾವಡಿಗಳಲ್ಲಿ, ಭಜನಾ ಮೇಳಗಳಲ್ಲಿ ತುಂಬಿ ಹೋಗಿದ್ದವು. ಆದರೆ ಈ ಪ್ರಾಂತದ ಯಾವ ಬರಹಗಾರರ ಸಾಹಿತ್ಯದಲ್ಲಿ ೧೭-೧೯ನೆ ಶತಮಾನದ ಅನುಭಾವಿಗಳ ಪ್ರಭಾವ ಕಾಣುವುದಿಲ್ಲ. ಮಧುರಚೆನ್ನ, ಬೇಂದ್ರೆ ಅವರು ಅನುಭಾವಿಗಳಿಂದ ಕಲಿತ ಜ್ಞಾನವನ್ನು ತಮ್ಮ ಕಾವ್ಯಕ್ಕೆ ಮೂಡಿಸಿಕೊಂಡರು. ಇದು ಈ ಪ್ರಾಂತದ ಯಾವ ಕವಿಯಲ್ಲಿಯೂ ಕಾಣುವುದಿಲ್ಲ.

ಕನ್ನಡ ಕವಿಗಳಿಗೆ ಮಾಶಾಸನ ಇಲ್ಲ

ಬಹಮನಿ, ಆದಿಲ್‍ಶಾಹಿಗಳ ಆಡಳಿತದಲ್ಲಿ ಮುಸ್ಲಿಮೇತರರು ಸೇರಿಕೊಂಡಿದ್ದರು. ಹೆಚ್ಚಾಗಿ ಮರಾಠಿ, ಫಾರಸಿ ಬಲ್ಲ ವಿದ್ಯಾವಂತರು, ವಿದ್ವಾಂಸರು ಜವಾಬ್ದಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕವಿ-ಕಲಾವಿದರೂ ಆಶ್ರಯಪಡೆದಿದ್ದರು. ಶಾಹಿ ಅರಸರಲ್ಲೇ ಅನೇಕರು ವಿದ್ವಾಂಸರು, ಕವಿಗಳು ಆಗಿದ್ದರು. ಮಹಮ್ಮದ್ ಶಾಹನ ದರ್ಬಾರಿನಲ್ಲಿ ಮಹಿಪತಿರಾಯ ದೊಡ್ದ ವಿದ್ವಾಂಸ-ಆಡಳಿತಗಾರನೆಂದು ಹೆಸರು ವಾಸಿಯಾಗಿದ್ದ. ಮುಂದೆ ಹರಿದಾಸನಾಗಿ ಹಾಡುಗಳನ್ನು ರಚಿಸಿದ. ಇಂತಹ ಮುಸ್ಲಿಮೇತರರು ಶಾಹಿ ಅರಸರ ಕಾಲದಲ್ಲಿ ದರ್ಬಾರನ್ನು ಸೇರಿ ಅನೇಕರು ದುಡಿದಿರಬಹುದು. ಮೊಗಲರು ವಿಜಾಪುರವನ್ನು ವಶಪಡಿಸಿಕೊಂಡಾಗ ಜಸವಂತರಾಯ ಎಂಬ ಫಾರಸಿ, ಉರ್ದು ಭಾಷೆಯ ಕವಿ ಆಸ್ಥಾನದಲ್ಲಿದ್ದುದನ್ನು ಔರಂಗಜೇಬನು ಕಾಣುತ್ತಾನೆ. ‘ಹೈದರಾಬಾದು ಸಂಸ್ಥಾನ’ದಲ್ಲಿ ನಿಜಾಮರು ವಿದ್ವಾಂಸರಿಗೆ, ಕವಿಗಳಿಗೆ ಮಾಸಿಕ ವೇತನವನ್ನು ಕಾಣಿಕೆಯಾಗಿ ಕೊಡುತ್ತಿದ್ದರು. ಷಾದಾನ್ (೧೭೬೬-೧೮೪೫) ಎಂಬ ಅಂಕಿತ ಇಟ್ಟುಕೊಂಡಿದ್ದ ರಾಜಾಚಂದೂಲಾಲ್ ಕವಿಯೂ ಆಗಿದ್ದನು. ಸಂಸ್ಥಾನದಲ್ಲಿ ಪ್ರಧಾನಮಂತ್ರಿಯೂ ಆಗಿದ್ದ. ಫಾರಸಿ, ಉರ್ದು ಭಾಷೆಗಳಲ್ಲಿ ಕವಿತೆಗಳನ್ನು ಬರೆದಿದ್ದಾನೆ. ‘ಈತನ ಕಾಲದಲ್ಲಿ ಹೈದರಾಬಾದಿನಲ್ಲಿ ಸುಮಾರು ೩೦೦ ಕವಿಗಳಿದ್ದರು. ಆ ಕವಿಗಳಿಗೆ ನೂರರಿಂದ ಸಾವಿರದವರೆಗೆ ಮಾಸಿಕ ವೇತನವು ದೊರೆಯುತ್ತಿದ್ದಿತು.’[9] ಚಂದೂಲಾಲ್ ಮನೆತನದಲ್ಲಿ ಮುಂದೆ ಕೆಲವರು ಕವಿಗಳಾಗಿ, ಸಂಸ್ಥಾನದಲ್ಲಿ ಪ್ರಧಾನ ಮಂತ್ರಿಯಾದನು. ದಾಗ್ (೧೮೩೧-೧೯೦೫), ಷಿಬ್ಲಿ (೧೮೫೭-೧೯೧೪), ಹಾಲಿ (೧೮೩೭-೧೯೧೪) ಮುಂತಾದ ಅನೆಕ ಕವಿಗಳಿಗೆ ನಿಜಾಮರು ಆಶ್ರಯ ನೀಡಿದ್ದರು. ದಾಗ್ ಕವಿಗೆ ೧೫೦೦ ಮಾಸಿಕ ವೇತನ ನೀಡಲಾಗುತ್ತಿತ್ತು. ೬ನೇ ನಿಜಾಮ ಮೀರ್ ಮಹಬೂಬ್ ಅಲೀಖಾನ್ (೧೮೬೬-೧೯೧೨) ಈ ದಾಗನ ಶಿಷ್ಯ. ಈ ನಿಜಾಮನ ಕಾವ್ಯಕ್ಕೆ ದಾಗನೆ ಗುರುವಾಗಿದ್ದ. ಮೀರ್ ಮಹಬೂಬ್ ಅಲೀಖಾನ್ ಒಳ್ಳೆಯ ಕವಿಯೆಂದು ಹೆಸರು ಪಡೆದಿದ್ದ. ಈ ಕವಿಯ ಕಾವ್ಯದ ಕೆಲವು ಸಾಲುಗಳು ಹೀಗಿವೆ:

೧.       ಆಸಿಫಿಕೋ ಜಾನ ಮಾಲಸೆ ಆಪ್ನೇ ನಹೀ ದರೇಗ್
            ಗರ್ ಕಾಮ್ ಆಯೆ ಖಲ್ಕ ಕಿ ರಾಹತ್ ಕೆ ವಾಸ್ತೇ
            (ಆಸಿಫನಿಗೆ ಧನ ಪ್ರಾಣಗಳ ಲಕ್ಷ್ಯವಿಲ್ಲ. ಪ್ರಜೆಗಳಿಗೆ ಸುಖವೊಂದು ಲಭಿಸಿದರೆ ಸಾಕು)

೨.       ಐಸೊ ಲೋಗೋ ಮೆ ನಹೀ ಹಮ್ ಜೊ ಕಹೇ ಅವರ್ ಕರೇ
            ಮರ್ದ ಜೋ ಕಹತೆ ಹೈ ಕರ್ಕೆ ದಿಖಾದೇತೇ ಹೈ
            (ಆಡಿ ಮಾಡುವವನೇ ಮನುಷ್ಯನು. ಅಡಿ ಮಾಡದವರಲ್ಲಿ ನಾನಿಲ್ಲ)

೩.       ಕರೇ ಬುತ್ಕದೇಸೇ ಅಬಸ್ ಕಸ್ದೆ ಕಾಬಾ
            ಯಹಾಭೀ ಖುದಾ ಹೈ ವಹಾಭೀ ಖುದಾಹೈ
            (ಮಂದಿರದಿಂದ ಮಸೂತಿಗೆ ಏಕೆ ಹೋಗುವುದು. ಇಲ್ಲಿಯೂ ದೇವರಿದ್ದಾನೆ. ಅಲ್ಲಿಯೂ ದೇವರಿದ್ದಾನೆ.)

ಮೀರ್ ಮಹಬೂಬ್ ಅಲೀಖಾನ್ ನಿಜಾಮನ ಶಿಷ್ಯನೇ ರಾಜಾ ಕಿಷನ್ ಪ್ರಸಾದ್ (೧೮೬೪) ಕವಿಯೂ ಪ್ರಧಾನ ಮಂತ್ರಿಯೂ ಅಗಿದ್ದನು. ಇವನು ಉರ್ದು, ಅರಬ್ಬಿ, ತೆಲಗು, ಮರಾಠಿ, ಇಂಗ್ಲಿಶ್ ಭಾಷೆಗಳನ್ನು ಬಲ್ಲವನಾಗಿದ್ದ. ೪೦ ಗ್ರಂಥಗಳನ್ನು ಬರೆದಿದ್ದಾನೆ. ಸೂಫಿ ಪಂಥದ ವಿಚಾರಕ್ಕೆ ಒಲಿದಿದ್ದನು. ಇವನ ಸಂಬಂಧಿಯಾದ ರಾಜಾ ಗಿರಿಧರ ಪ್ರಸಾದ (ಬಾಕಿ) ಕೂಡ ಕವಿಯಾಗಿದ್ದ.

ಇಷ್ಟೆಲ್ಲ ಹೇಳಲು ಕಾರಣವೆಂದರೆ, ನಿಜಾಮರು ಕವಿಗಳಿಗೆ ಆಶ್ರಯ ನೀಡುತ್ತಿದ್ದರು. ಎಂಬುದಕ್ಕೆ ಮುಸ್ಲಿಮೇತರರಲ್ಲಿ ಕವಿಗಳಾಗಿದ್ದವರೂ ಆಶ್ರಯ ಪಡೆಯುತ್ತಿದ್ದರು. ಆದರೆ ಅವರೆಲ್ಲ ಫಾರಸಿ, ಉರ್ದುವಿನಲ್ಲಿ ಕಾವ್ಯ ರಚಿಸುವವರೇ ಆಗಿದ್ದರು ಎಂದು ಕಾಣುತ್ತದೆ. ಸಂಸ್ಥಾನದಲ್ಲಿ ದೇಶಿ ಭಾಷೆಗಳಾದ ಮರಾಠಿ, ಕನ್ನಡ, ತೆಲಗು ಭಾಷೆಗಳಲ್ಲಿ ಕಾವ್ಯ ರಚಿಸಿದವರಿಗೆ ಆಶ್ರಯ ನೀಡಿದ ಉದಾಹರಣೆಗಳು ಕಾಣುವುದಿಲ್ಲ. ರಾಜಾ ಕಿಷನ್ ಪ್ರಸಾದ್ ಉರ್ದು, ಅರಬ್ಬಿ, ಮರಾಠಿ, ಇಂಗ್ಲಿಶ್, ತೆಲಗು ಭಾಷೆಗಳನ್ನು ಬಲ್ಲವನಾಗಿದ್ದರೂ ಕಾವ್ಯ ಬರೆದದ್ದು ಉರ್ದು,ಫ್ರಸಿ ಭಾಷೆಗಳಲ್ಲಿ ಮಾತ್ರ. ದೇಶಿ ಭಾಷೆಗಳಾದ ಮರಾಠಿ, ತೆಲಗು ಭಾಷೆಗಳು ತಿಳಿದಿದ್ದರೂ ಅ ಭಾಷೆಯಲ್ಲಿ ಕಾವ್ಯ ರಚಿಸಲಿಲ್ಲ. ೨೦ನೇ ಶತಮಾನದ ಆದಿಯಲ್ಲಿ ಸಂಸ್ಥಾನದಲ್ಲಿ ಕಾಲೇಜು, ವಿಶ್ವವಿದ್ಯಾಲಯ ಆರಂಭವಾದಾಗ ಉತ್ತರದಿಂದ ಅನೇಕ ವಿದ್ವಾಂಸರು ಬಂದು ಬೋಧಕರಾದರು. ಕೆಲವರು ದರಬಾರಿನಲ್ಲಿಯೇ ಆಶ್ರಯ ಪಡೆದರು. ಆದರೆ ಈ ಪ್ರಾಂತದ ದೇಶಿ ವಿದ್ವಾಂಸರಿಗೆ, ಕವಿಗಳಿಗೆ ನಿಜಾಮರು ಆಶ್ರಯ ನೀಡಿ ಬೆಳೆಸಲಿಲ್ಲ. ಗಂಗಾವತಿಯ ರಾಘವೇಂದ್ರರಾವ್ ಜಜ್ಬ (೧೮೯೪) ಉರ್ದುವಿನಲ್ಲಿ ಕಾವ್ಯ ರಚಿಸಿದ ಪ್ರಸಿದ್ಧ ಕವಿ. ದೆಹಲಿ, ಲಖ್ನೌಗಳಲ್ಲಿ ಈ ಕವಿಯ ಕಾವ್ಯ ಹೆಸರು ಮಾಡಿತ್ತು. ಈತನು ಕನ್ನಡದ ಸೋಮೇಶ್ವರ ಶತಕವನ್ನು ಉರ್ದುವಿಗೆ ಅನುವಾದಿಸಿದ್ದಾನೆ. ಇಂಥಹ ಕವಿ ಹೈದರಾಬಾದಿನ ನಿಜಾಮರ ರ್ದರಬಾರಿನಲ್ಲಿ ಆಶ್ರಯ ಪಡೆದಿರಲಿಲ್ಲ. ಇಂಥವರಿಗೂ ಆಶ್ರಯ ದೊರೆಯುತ್ತಿದ್ದಿಲ್ಲವೆಂದು ಕಾಣುತ್ತದೆ. ಕನ್ನಡ, ತೆಲುಗು, ಮರಾಠಿ ಮುಂತಾದ ದೇಶಿ ಭಾಷೆಯ ಕವಿಗಳಿಗೆ ಅಶ್ರಯ ನೀಡಿದ್ದರೆ. ದೇಶಿ ಭಾಷೆಯಲ್ಲಿ ಸಾಹಿತ್ಯ ಬೆಳೆಯುತ್ತಿತ್ತು. ಈ ಅವಕಾಶದಿಂದ ಈ ಪ್ರಾಂತದ ಕನ್ನಡ ಕವಿಗಳು ವಂಚಿತರಾದರು ನಿಜಾಮರು ಉರ್ದು ಫಾರಸಿ ಕವಿಗಳಿಗೆ ಆಶ್ರಯ ನೀಡುವಂತೆ ಸಂಸ್ಥಾನದ ಮಾತೃಭಾಷೆಯ ಕವಿಗಳಿಗೆ ಆಶ್ರಯ ನೀಡಬೇಕಾದದ್ದು ಕರ್ತವ್ಯವೇ ಆಗಿತ್ತು. ಆದರೆ ನಿಜಾಮರು ಅದನ್ನು ಮಾಡಲಿಲ್ಲ.[1] ಶಿ.ಶಿ. ಬಸವನಾಳ : ಅಧ್ಯಕ್ಷರ ಭಾಷಣಗಳು ಸಂಪುಟ-೨ (೧೯೭೨) ಪುಟ-೨೫೩

[2] ರೊದ್ದ ಶ್ರೀನಿವಾಸರಾಯ : ಅಧ್ಯಕ್ಷರ ಭಾಷಣಗಳು ಸಂಪುಟ-೨ (೧೯೭೨) ಪುಟ-೦೦

[3] ಸಿದ್ಧಯ್ಯ ಪುರಾಣಿಕ : ಹೈದರಬಾದಿನ ವಿದ್ಯಾರ್ಥಿ ಜೀವನದತ್ತ ಹೊರಳು ನೋಟ, ತಿರುಳ್ಗನ್ನಡ (೧೯೯೩) ಪುಟ-೩

[4] ಕೆ. ರಾಘವೇಂದ್ರರಾವ್ : ಪ್ರೊ. ಡಿ.ಕ್ವ್. ಭೀಮಸೇನರಾಯ (೨೦೦೧), ಪುಟ-೪

[5] ಜಯತೀರ್ಥ ರಾಜಪುರೋಹಿತ : ಜಯತೀರ್ಥ (ಅಭಿನಂದನ ಗ್ರಂಥ) ಪುಟ-೩೧

[6] ಜಯತೀರ್ಥ ರಾಜಪುರೋಹಿತ : ಜಯತೀರ್ಥ (ಅಭಿನಂದನ ಗ್ರಂಥ) ಪುಟ-೩೨

[7] ಕಪಟರಾಳ ಕೃಷ್ಣರಾವ್ : ಕರ್ನಾಟಕ ಸಂಸ್ಕೃತಿಯ ಸಂಶೋಧನೆ (೧೯೭೦) ಪುಟ-೨೧೮

[8] ಕಪಟರಾಳ ಕೃಷ್ಣರಾವ್ : ಕರ್ನಾಟಕ ಸಂಸ್ಕೃತಿಯ ಸಂಶೋಧನೆ (೧೯೭೦) ಪುಟ-೨೨೦

[9] ರಾಘವೇಂದ್ರರಾವ್ (ಜಜ್ಟ್), ಉರ್ದು ಮತ್ತು ಫಾರಸಿ ಸಾಹಿತ್ಯ (೧೯೬೪) ಪುಟ-೧೪೯