ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವ ಪೂರ್ಣವೂ ಆದ ವಿಶಿಷ್ಟ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವವಿಜ್ಞಾನವನ್ನು ಕನ್ನಡ ಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪನೆಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ. ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸ್ವತ್ವ ಮತ್ತು ಸತ್ಯದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಹೈದ್ರಾಬಾದ್ ಕರ್ನಾಟಕವೆಂದು ವಿಚಿತ್ರವಾಗಿ ಕರೆಸಿಕೊಳ್ಳುತ್ತಿರುವ ಒಂದು ವಿಶಿಷ್ಟ ಪ್ರದೇಶಕ್ಕೆ ಸಂಬಂಧಿಸಿದ ಗಂಭೀರವಾದ ಒಂದು ಚಿಂತನೆ ಮತ್ತು ಸಂಶೋಧನೆಯ ಫಲ ಈ ಕೃತಿ. ಬಸವಣ್ಣನ ಜನನ ಮತ್ತು ಕಾರ್ಯಕ್ಷೇತ್ರಗಳ ದಟ್ಟವಾದ ಪ್ರಭಾವವನ್ನು ಹೊಂದಿರುವ ಈ ಪ್ರದೇಶ ನ್ಯಾಯವಾಗಿ ಬಸವ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕ ಎಂಬ ಸಾರ್ಥಕ ಅಭಿಧಾನವನ್ನು ಪಡೆಯಬೇಕಾಗಿತ್ತು. ಈ ಪ್ರದೇಶವು ಹೈದ್ರಾಬಾದಿನೊಡನೆ ಹೊಂದಿರುವ ನಂಟು ಮತ್ತು ಗಂಟುಗಳು ತುಂಬ ಶಿಥಿಲವಾಗುತ್ತ ಕಣ್ಮರೆಯಾಗುತ್ತಿದ್ದರೂ, ಅದೇ ಹೆಸರಿನಿಂದ ಕರೆಯಲ್ಪಡುತ್ತಿರುವುದು ಒಂದು ವಿಪರ್ಯಾಸ. ಫಲವತ್ತಾದ ನೆಲ, ದಲಿತ ಮತ್ತು ಹಿಂದುಳಿದ ವರ್ಗಗಳ ವ್ಯಾಪಕ ಕರ್ಮಭೂಮಿ, ವಚನ ಸಾಹಿತ್ಯ ದಾಸ ಸಾಹಿತ್ಯಗಳ ಸಿರಿ ಫಸಲು, ಭಕ್ತಿ ಮತ್ತು ಅಧ್ಯಾತ್ಮಗಳ ವಿಶೇಷ ಅರಿವು, ದೇಹ ಪರಿಶ್ರಮಕ್ಕೆ ಪರ್ಯಾಯ ಹೆಸರಾಗಿರುವ ಕಷ್ಟಸಹಿಷ್ಣು ರೈತಾಪಿ ಜನಾಂಗ, ಮಣ್ಣನ್ನು ಚಿನ್ನ ಮಾಡುವ ಸಾಹಸಶೀಲತೆಯ ಜೊತೆಗೆ ಪ್ರಾಮಾಣಿಕ ಮುಗ್ಧತೆಯ ನೆಲೆವೀಡು, ಬಗೆ ಬಗೆಯ ವಿಭೂತಿ ಪುರುಷರ, ತತ್ವವಿದರ, ಅನನ್ಯ ಪ್ರತಿಭಾವಂತ ಜನಪದ ಕಲಾವಿದರ ಪುಣ್ಯ ಸಂಪದ ಇಲ್ಲಿದ್ದರೂ ಈ ಪ್ರದೇಶ ಇಲ್ಲಿನ ರಾಜಕೀಯ ನಾಯಕರ, ಸಮಾಜ ಮುಖಂಡರ ಹಾಗೂ ಆಳಿದ ವಿವಿಧ ಸರಕಾರಗಳ ನಿಸ್ಸೀಮ ಉದಾಸೀನದ ಕಾರಣದಿಂದಾಗಿ ಇಂದು ಕರ್ನಾಟಕದ ಅತ್ಯಂತ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಯನ್ನು ಕಟ್ಟಿಕೊಂಡು ಪ್ರಗತಿಪರ ದೇಶಗಳೆದುರು ಮ್ಲಾನವಾಗಿ ತಲೆತಗ್ಗಿಸಿ ನಿಂತುಕೊಂಡಿದೆ. ಅನಕ್ಷರತೆ, ಬಡತನ, ಅಸೀಮ ಮುಗ್ಧತೆ, ಪರಂಪರಾಗತವಾದ ದೈನ್ಯ, ಅನ್ಯಾಯಕ್ಕೆ ಎದುರಾಗಿ ಸೆಟೆದು ನಿಲ್ಲದ ದೌರ್ಬಲ್ಯ ಇವುಗಳಿಂದಾಗಿ ಸರ್ಕಾರದ ನಿಯಮಾವಳಿಗಳಿಗೆ ಅನುಸಾರವಾಗಿಯೇ ದೊರಕಬೇಕಾದ ಹತ್ತಾರು ಬಗೆಯ ಸಹಜ ಸೌಲಭ್ಯಗಳಿಂದ ಈ ನೆಲ ವಂಚಿತವಾಗಿಬಿಟ್ಟಿದೆ. ಬಡವರ ಬೆವರನ್ನು ಕುಡಿದು, ಮುಗ್ಧರ ಮೈ ಎಲುಬುಗಳನ್ನು ಮುರಿದು ಅವರ ಬುದ್ಧಿ ಮತ್ತು ಪ್ರತಿಭಟನಾಶೀಲತೆಗಳಿಗೆ ಕತ್ತಲ ಪರದೆಯನ್ನು ಮುಚ್ಚಿದ ಸ್ವಾರ್ಥ ಮುಖಂಡರು, ಎಲ್ಲಿಂದಲೋ ಬಂದ ಶೋಷಕ ಕೈಗಾರಿಕೋದ್ಯಮಿಗಳು ಇವರ ನೆಲ, ಜಲಗಳನ್ನು, ಅವಕಾಶಗಳನ್ನು ಬಾಚಿಕೊಂಡಿರುವುದು ಮಾತ್ರವಲ್ಲದೆ, ಅವರ ಆತ್ಮಗೌರವವನ್ನೂ ದೋಚಿಕೊಂಡು ಬಿಟ್ಟಿದ್ದಾರೆ. ಹೀಗಾಗಿ ಇಲ್ಲಿನ ಬಹುಜನ ಶ್ರಮಿಕ ವರ್ಗ ಊರಿಗೇ ಊರೇ ವರ್ಷವರ್ಷ ಅನ್ನ ನೀಡುವ ಬೇರೆ ಪ್ರದೇಶಗಳಿಗೆ ಗುಳೆ ಹೋಗುವ ದಾರುಣ ದೃಶ್ಯ ನೋಡುಗರ ಕಣ್ಣನ್ನು ಮುತ್ತುತ್ತದೆ. ನಿಜಾಮಶಾಹಿ ಕಾಲದ ಕ್ರೂರ ದಬ್ಬಾಳಿಕೆ ಈ ಜನರನ್ನು ನೆಲಮಟ್ಟಗೊಳಿಸಿದರೆ, ಅವಿದ್ಯೆಯ ಕತ್ತಲಲ್ಲಿ ಹುದುಗಿಸಿದ್ದರೆ, ಪ್ರತಿಭಟನೆಯ ಸೊಲ್ಲನ್ನು ಉಡುಗಿಸಿದ್ದರೆ, ಸ್ವಾತಂತ್ರ್ಯದ ಅನಂತರವೂ ಮತ್ತು ರಾಜ್ಯ ಪುನರ್ ವಿಂಗಡನೆಯ ನಂತರವೂ ಇವರ ಬದುಕು ಸುಧಾರಿಸಿಲ್ಲ.

ಕನ್ನಡ ಭಾಷೆ ಮತ್ತು ಭಾಷಿಗರು ಹಾಗೂ ಇಲ್ಲಿನ ದೇಶೀ ಸಂಸ್ಕೃತಿ ನಿರಂಕುಶ ಪ್ರಭುತ್ವದ ಅಡಿಯಲ್ಲಿ ಉಸಿರುಗಟ್ಟಿದ್ದವು. ಇಲ್ಲಿನ ಮೂಲ ಭಾಷೆ ಮತ್ತು ಸಂಸ್ಕೃತಿಗಳ ಕತ್ತನ್ನು ಅಮುಕಿದ್ದವು. ಆದರೂ ಇಲ್ಲಿನ ಜನರ ಅಂತರಂಗದಲ್ಲಿ ಸುಪ್ತವಾಗಿಯಾದರೂ ಹರಿಯುತ್ತಿದ್ದ ಸಾಹಿತ್ಯ, ಸಂಸ್ಕೃತಿಗಳ ಸೆಲೆಗಳು ಬತ್ತಿರಲಿಲ್ಲ. ಕ್ಷೀಣವಾಗಿ ಆದರೂ ಅವು ಉಸಿರಾಡುತ್ತಿದ್ದವು. ವೈಯಕ್ತಿಕ ಛಲ ಮತ್ತು ಸಂಸ್ಕೃತಿ ನಿಷ್ಠೆಗಳು ಅವು ಜೀವ ಹಿಡಿದುಕೊಂಡಿರಲು ಕಾರಣವಾಗಿದ್ದವು. ಇತಿಹಾಸದುದ್ದಕ್ಕೂ ಬೇರೆ ಬೇರೆ ರಾಜಮನೆತನಗಳ ಆಳ್ವಿಕೆಯಲ್ಲಿ ನೊಂದ, ಬೆಂದ ಮತ್ತು ಹಲವೊಮ್ಮೆ ವೈಭವದ ಸಿರಿಯಿಂದ ತಲೆಯೆತ್ತಿ ಬದುಕಿದ ಇಲ್ಲಿನ ಸಮಾಜ ಮತ್ತು ಕಲಾ ವೈಶಿಷ್ಟ್ಯಗಳು ವಿಸ್ತಾರವಾದ ಅಧ್ಯಯನ ಮತ್ತು ಸಂಶೋಧನೆಗೆ ಆಹಾರ ಒದಗಿಸುತ್ತವೆ. ಹಲವು ಸಂಸ್ಕೃತಿಗಳ ಮಿಶ್ರಣ ಇಲ್ಲಿದ್ದರೂ ಅವುಗಳ ಸಹಜ ಬೆಳವಣಿಗೆಗೆ ಅಗತ್ಯವಾದಷ್ಟು ನೀರು ಮೇವುಗಳು ಅನಂತರದ ಕಾಲದಲ್ಲೂ ಸರಿಯಾಗಿ ದೊರೆಯಲಿಲ್ಲವೆಂದೇ ಹೇಳಬೇಕು.

ಉತ್ತರ ಕರ್ನಾಟಕದಲ್ಲಿ ಅಪಾರವಾದ, ಸಮೃದ್ಧವಾದ ಜನಪದ ಸಾಹಿತ್ಯ ಮತ್ತು ಕಲೆಗಳು ಅಡಗಿವೆ. ಆದರೆ, ಅವುಗಳನ್ನು ಕೆದಕಿ ಬೆದಕಿ ಹೊರತೆಗೆಯುವ, ಪರಿಶೋಧಿಸುವ ಪ್ರಕಟಿಸುವ ವೇಗಶಾಲಿಯಾದ ತೀವ್ರ ಪ್ರಯತ್ನಗಳು ನಡೆದಿಲ್ಲ. ಅದ್ಭುತವಾದ ರಂಗಕಲೆಗಳು, ಗಾನ ಮತ್ತು ನೃತ್ಯ ವೈವಿದ್ಯಗಳು ಇಲ್ಲಿ ಇನ್ನೂ ಕುಟುಕು ಜೀವವಾಡಿಸುತ್ತಿವೆ. ಅವುಗಳನ್ನು ಹೊರತೆಗೆದು ಅವುಗಳಿಗೆ ಅರ್ಹವಾದ ನೆಲೆ ಬೆಲೆಗಳನ್ನು ಕಲ್ಪಿಸುವ ಪ್ರಾದೇಶಿಕ ಸಂಸ್ಕೃತಿ ಮಹಾಸಂಶೋಧನಾ ಶಾಖೆಯೊಂದು ಆರಂಭವಾಗಬೇಕಾಗಿದೆ. ಕಾಲದ ಧಾಳಿಗೆ ಸಿಕ್ಕಿ ಮತ್ತು ಆಧುನಿಕ ಭ್ರಮೆಗಳಿಗೆ ಒಳಗಾಗಿ ಶರವೇಗದಲ್ಲಿ ನಶಿಸುತ್ತಿರುವ ಅವುಗಳನ್ನು ಕೈಹಿಡಿದು ಮೇಲೆತ್ತಬೇಕಾಗಿದೆ. ಇಲ್ಲಿನ ಜಲಸಂಪತ್ತು ಅಗಾಧವಾಗಿದ್ದರೂ, ನೆಲ ಸತ್ವಪೂರ್ಣವಾಗಿದ್ದರೂ ಅವುಗಳೆರಡನ್ನೂ ಒಂದುಗೂಡಿಸುವ ಕ್ರಿಯಾಶೀಲತೆ ಇಲ್ಲವಾದ ಕಾರಣ ಬಡತನ ಬೆನ್ನು ಹತ್ತಿದೆ. ಶಿಷ್ಟಸಾಹಿತ್ಯದ ಪರಿಯೂ ಇದೆ ರೀತಿಯದು. ಇಲ್ಲಿನ ಲೇಖಕರಿಗೆ ಸರಿಯಾದ ಪ್ರೋತ್ಸಾಹವಿಲ್ಲ. ಹಿಂಜರಿಕೆಯ ನಂಜಿನಲ್ಲಿ ನರಳುತ್ತಿರುವ ಇವರ ಆಂತರ್ಯದ ಪ್ರತಿಭೆಯ ಕಿಡಿಗಳನ್ನು ಮೇಲೇಳಿಸುವ ರಚನಾತ್ಮಕ ಪ್ರಯತ್ನವಿಲ್ಲ. ಈ ಸಾಹಿತ್ಯದ ಪ್ರಕಟಣೆ, ಪ್ರಚಾರ ಮತ್ತು ಪ್ರಸಾರಗಳಿಗೆ ಆದ್ಯ ಗಮನ ನೀಡಿಲ್ಲ. ಆದಕಾರಣ ಕನ್ನಡ ನಾಡಿನ ಇತರ ಭಾಗಗಳ ಸಾಹಿತ್ಯದ ಸಿರಿಬೆಳೆಸು ಇಲ್ಲಿ ಸಾಧ್ಯವಾಗಿಲ್ಲ. ಎಲ್ಲ ಇದ್ದರೂ ಏನೂ ಇಲ್ಲದ ಶ್ರೀಮಂತ ವಿಧವೆಯಂತಾಗಿದೆ ಇಲ್ಲಿನ ಜನದ, ಜಲದ, ನೆಲದ ಪಾಡು. ಈ ಸಂಪುಟ ಈ ಪ್ರದೇಶದ ಅಂತರಂಗ ಸಮೃದ್ಧಿಯನ್ನು, ಬಹಿರಂಗ ದಾರಿದ್ರ್ಯವನ್ನು, ಇಚ್ಛಾಶಕ್ತಿಯ ಕೊರತೆಯನ್ನು ಮತ್ತು ಅದರಿಂದ ಅಧುನಿಕ ಜೀವನದ ಮೇಲೆ ಉಂಟಾಗುತ್ತಿರುವ ಅಹಿತಕರ ಪರಿಣಾಮಗಳನ್ನು ತೀವ್ರವಾದ ಮತ್ತು ಪ್ರಾಮಾಣಿಕವಾದ ನೋವಿನಿಂದ ಉದ್ದಕ್ಕೂ ಗುರುತಿಸುತ್ತಾ ಹೋಗಿದೆ. ಡಾ. ಅಮರೇಶ ನುಗಡೋಣಿ ಅವರು ಈ ಪ್ರದೇಶದ ವೈವಿಧ್ಯಮುಖಿಯಾದ ಹಾಡು ಪಾಡುಗಳ ಚಿತ್ರಣವನ್ನು ತುಂಬ ಹೃದಯಸ್ಪರ್ಶಿಯಾಗಿ ಇಲ್ಲಿ ಕಂಡರಿಸಿದ್ದಾರೆ. ಈ ಪುಟ್ಟ ಕೃತಿ ಚರಿತ್ರೆಯೂ ಹೌದು, ಸಂಸ್ಕೃತಿ ಕಥನವೂ ಹೌದು, ವ್ಯಥೆಯ ಕಥೆಯೂ ಹೌದು. ಇಂಥದೊಂದು ವಿಶಿಷ್ಟ ಕೃತಿಯನ್ನು ರಚಿಸಿದ ಡಾ. ಅಮರೇಶ ನುಗಡೋಣಿ ಅವರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಡಾ. ಎಚ್.ಜೆ. ಲಕ್ಕಪ್ಪಗೌಡ
ಕುಲಪತಿಯವರು