ಭೂರಚನಾಶಾಸ್ತ್ರಜ್ಞರ ಅಭಿಪ್ರಾಯದಂತೆ ದಖನ್ ಪ್ರಾಂತವೇ ಮನುಷ್ಯನ ಪುರಾತನ ವಾಸಸ್ಥಾನವಾಗಿದೆ. ಈ ಪ್ರಾಂತದಲ್ಲಿ ನಡೆದ ಪ್ರಾಚ್ಯಸಂಶೋಧನೆಗಳಿಂದ ಇದು ತಿಳಿದು ಬಂದಿದೆ. ಭೌಗೋಳಿಕವಾಗಿ, ಪ್ರಾಕೃತಿಕವಾಗಿ ಮತ್ತು ಹವಾಗುಣಗಳಿಂದಲೂ ಈ ದಖನ್ ಪ್ರಾಂತ ಮಾನವನ ನೆಲೆಗೆ ಅನುಕೂಲಕರವಾಗಿತ್ತು. ಗೋದಾವರಿ ಮತ್ತು ನರ್ಮದಾ ನದಿಗಳ ಪ್ರದೇಶವು ಜನ ಸಮುದಾಯಗಳ ಬದುಕಿಗೆ ಆಸರೆಯಾಗಿತ್ತು. ನವಶಿಲಾಯುಗದ ಹೊತ್ತಿಗೆ ಜನರು ಕೃಷಿಕರಾಗಿದ್ದರು. ಸಾಮೂಹಿಕವಾಗಿ ವ್ಯವಸಾಯ, ಪಶುಪಾಲನೆ, ಅದಕ್ಕೆ ಬೇಕಾದ ತಂತ್ರಜ್ಞಾನವನ್ನು ರೂಢಿಸಿಕೊಂಡಿದ್ದರು. ದಖನ್ ಪ್ರಾಂತಕ್ಕೆ ಸೇರಿದ ಕರ್ನಾಟಕದ, ಅದರಲ್ಲೂ ಉತ್ತರ ಕರ್ನಾಟಕದ ಮಸ್ಕಿ, ಸನ್ನತಿ, ಸಂಗನಕಲ್ಲು, ಕೋಡೆಕಲ್ಲು, ಪಿಕ್ಲಿಹಾಳ, ಬ್ರಹ್ಮಗಿರಿ ಮುಂತಾದ ಸ್ಥಳಗಳು ನವಶಿಲಾಯುಗದ ಜನರ ವಾಸಸ್ಥಾನಗಳಾಗಿದ್ದವು. ಇತಿಹಾಸ ಪೂರ್ವದ ಕಾಲಕ್ಕೆ ಈ ಪ್ರಾಂತದಲ್ಲಿ ಕಬ್ಬಿಣ, ಚಿನ್ನ, ತಾಮ್ರ, ಕಂಚು ತಯಾರಿಸುವ ಕಲೆಯನ್ನು ಕಲಿತಿದ್ದರು. ಅದು ಉತ್ಪಾದನಾ ಸಾಧನವಾಗಿ ಪರಿಣಮಿಸಿತ್ತು. ನರ್ಮದಾ-ಗೋದಾವರಿ, ಗೋದಾವರಿ-ಕೃಷ್ಣ, ಕೃಷ್ಣ-ತುಂಗಭದ್ರ ನದಿಗಳ ನಡುವಣ ಪ್ರದೇಶಗಳು ಹಲವೆಡೆ ಕೆಂಪುಮಣ್ಣು, ಹಲವೆಡೆ ಎರೆಮಣ್ಣು, ಎರೆ-ಕೆಂಪು ಮಿಶ್ರಿತ ಮಣ್ಣು ಫಲವತ್ತಾಗಿದ್ದು ಜೋಳ, ಭತ್ತ, ಗೋಧಿ, ಹತ್ತಿ, ಶೇಂಗಾ, ಔಡಲ ಮುಂತಾದ ಆಹಾರ ಮತ್ತು ಎಣ್ಣೆಬೀಜಗಳ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಈ ಪ್ರಾಂತದಲ್ಲಿ ಮಳೆಯ ಪ್ರಮಾಣ ಕಮ್ಮಿ. ವ್ಯವಸಾಯದ ಉತ್ಪಾದನೆ, ಪಶುಪಾಲನೆಯ ಉತ್ಪಾದನೆ, ಗಣಿಗಾರಿಕೆಯ ಉತ್ಪಾದನೆ ಉತ್ತಮವಾಗಿತ್ತು. ಹೀಗಾಗಿ ಸಾಮ್ರಾಜ್ಯಗಳು ಉದಯವಾಗಿ ಬೆಳೆಯುತ್ತಿದ್ದಂತೆ ದಖನ್ ಪ್ರಾಂತದ ಕಡೆ ವಿಸ್ತರಿಸಿಕೊಳ್ಳುವ ಹಂಬಲಗಳು ಕಾಣಿಸಿದವು. ಇಲ್ಲಿಯ ಸಂಪತ್ತನ್ನು ಬಳಸಿಕೊಳ್ಳಲು ಬಹು ದೀರ್ಘ ವರ್ಷಗಳ ಹಿಂದಿನಿಂದಲೂ ಪ್ರಯತ್ನಗಳು ನಡೆದಿವೆ.

ಮೌರ್ಯರ ಆಳ್ವಿಕೆಗೆ ಈ ಪ್ರಾಂತ ಒಳಪಟ್ಟಿತ್ತು ಎಂಬುದಕ್ಕೆ ಅಶೋಕನ (ಕ್ರಿ.ಪೂ.೨೭೪-೨೩೩) ಧರ್ಮ ಶಾಸನಗಳು ರಾಯಚೂರಿನ ಮಸ್ಕಿ, ಪಾಲ್ಕಿಗುಂಡ, ಗವಿಮಠ, ಬಳ್ಳಾರಿಯ ನಿಟ್ಟೂರು, ಉದೆಗೊಳಂ, ಕಲಬುರ್ಗಿಯ ಸನ್ನತಿ ಮತ್ತಿತರ ಜಿಲ್ಲಾ ಪ್ರದೇಶಗಳಲ್ಲಿಯೂ ದೊರೆತಿವೆ. ಅಶೋಕನು ತನ್ನ ಬೌದ್ಧ ಧರ್ಮದ ಪ್ರಚಾರಕ್ಕೆ ಈ ಶಾಸನಗಳನ್ನು ಬರೆಸಿರಬೇಕು. ಶಾಸನಗಳು ದೊರೆತಿರುವ ಈ ಸ್ಥಳಗಳು ಆ ಕಾಲದಲ್ಲಿ ದಖನ್ ಪ್ರಾಂತದ ಮುಖ್ಯ ಧಾರ್ಮಿಕ ಕೇಂದ್ರಗಳಾಗಿರಬೇಕು. ಬೌದ್ಧ ಸಂಘಗಳನ್ನು ಇಲ್ಲಿ ಸ್ಥಾಪಿಸಿ, ಬೌದ್ಧಧರ್ಮವನ್ನು ಪ್ರಚಾರಮಾಡಿ ನೆಲೆಗೊಳಿಸಲು ಶ್ರಮಿಸಿರಬೇಕು. ಮಸ್ಕಿಯ ಹಳೆಯ ರೂಪವು ‘ಮಾಸಂಗಿ’ ಎಂದಿತ್ತು. ಮೂಲ ‘ಮಹಾಸಂಘ’ ಎಂಬುದು ‘ಮಾಸಂಗಿ’ಯಾಗಿರಬೇಕೆಂದು ಹೇಳುತ್ತಾರೆ. ಅಶೋಕನ ಈ ಶಾಸನಗಳು ಪ್ರಾಕೃತ ಭಾಷೆಯಲ್ಲಿದ್ದು, ಬ್ರಾಹ್ಮಿಲಿಪಿಯಲ್ಲಿವೆ. ಈ ಪ್ರಾಂತದ ಜನರಿಗೆ ಪಾಲಿಭಾಷೆ ತಿಳಿದಿರಬಹುದು. ಅದಕ್ಕಾಗಿ ಅಶೋಕ ಆ ಭಾಷೆಯಲ್ಲಿ ಬರೆಸಿರಬೇಕು. ಈ ಅವಧಿಯಲ್ಲಿ ಕನ್ನಡ ಭಾಷೆ ಜನ ಸಮುದಾಯಗಳಲ್ಲಿ ಇತ್ತೋ ಇಲ್ಲವೋ ಊಹಿಸುವುದು ಕಷ್ಟ. ‘ಕನ್ನಡ ಭಾಷೆ ಮತ್ತು ಲಿಪಿಗಳು ಮನೆಯೊಳಗೆ ಮಾತ್ರ ಹೆಚ್ಚಾಗಿ ಬಳಕೆಯಲ್ಲಿದ್ದು, ಹೊರಗೆ ಆಗಿನ ಆಡಳಿತ ವರ್ಗದ ಲಿಪಿ ಮತ್ತು ಭಾಷೆಗಳು ಹೆಚ್ಚಾಗಿ ಬಳಸಲ್ಪಡುತ್ತಿದ್ದವು ಎಂದು ತಿಳಿಯಬೇಕಾಗಿದೆ.’

[1] ಮೌರ್ಯರು ಈ ಪ್ರಾಂತದಲ್ಲಿ ಸಾಮ್ರಾಜ್ಯವನ್ನು ವಿಸ್ತರಿಸುವುದಕ್ಕೆ ಹಲವು ಕಾರಣಗಳಿವೆ. ವಿಸ್ತರಣಾ ದಾಹ ಎಲ್ಲ ಸಾಮ್ರಾಜ್ಯಶಾಹಿಗಳಿಗೆ ಇರುವ ಮೂಲಗುಣ. ಮೌರ್ಯರು ತಮ್ಮ ಬೌದ್ಧಧರ್ಮವನ್ನು ಪ್ರಚಾರ ಮಾಡಲು ಮತ್ತು ಅದನ್ನು ನೆಲೆಗೊಳಿಸಲು ಮಾತ್ರ ಬರಲಿಲ್ಲ. ಈ ಪ್ರಾಂತದ ಸಂಪತ್ತನ್ನು ಬಳಸಿಕೊಳ್ಳಲು ಮುಂದಾಗಿದ್ದರು. ಈ ‘ಕರ್ನಾಟಕದಲ್ಲಿಯೇ ಇದ್ದ ಆರ್ಥಿಕ ವ್ಯವಸ್ಥೆಯಿಂದ ಪ್ರಯೋಜನವನ್ನು ಪಡೆಯುವುದೇ ಮೌರ್ಯ ಸಾಮ್ರಾಜ್ಯಶಾಹಿ ಧೋರಣೆಯಾಗಿತ್ತೆ ಹೊರತು ಕರ್ನಾಟಕದಲ್ಲಿ ಹೊಸದಾಗಿ ಆರ್ಥಿಕ ಬಲವನ್ನು ತರುವುದು ಅಥವಾ ಕರ್ನಾಟಕದ ಆರ್ಥಿಕ ವ್ಯವಸ್ಥೆಯನ್ನು ಮಾರ್ಪಡಿಸುವುದು ಮೌರ್ಯ ಸಾಮ್ರಾಜ್ಯದ ಧೋರಣೆಯಾಗಿರಲಿಲ್ಲ. ಮೌರ್ಯ ಸಾಮ್ರಾಜ್ಯವು ಕರ್ನಾಟಕದ ಬಗೆಗೆ ವಸಾಹತುಶಾಹೀ ಧೋರಣೆಯನ್ನು ತಳೆದಿತ್ತು.’[2] ಹೈದರಾಬಾದು ಕರ್ನಾಟಕ ಪ್ರಾಂತವು ಮೌರ್ಯರ ಆಳ್ವಿಕೆಗೆ ಒಳಗಾಗಿ ಇಲ್ಲಿಯ ಸಂಪತ್ತು ಉತ್ತರ ಭಾರತದ ಸಾಮ್ರಾಜ್ಯಗಳಿಗೆ ದಕ್ಕುತ್ತಿತ್ತು. ಅಷ್ಟೇ ಅಲ್ಲ ಇದಕ್ಕಿಂತ ಎಷ್ಟೋ ವರ್ಷಗಳ ಪೂರ್ವದಿಂದಲೂ ಇದು ನಡೆಯುತ್ತಿತ್ತೆಂದು ಕಾಣುತ್ತದೆ. ‘ಕಲ್ಲೂರಿನಲ್ಲಿ (ರಾಯಚೂರು ಹತ್ತಿರ) ಕಂಡುಬಂದು ತಾಮ್ರ ಖಡ್ಗಗಳ ಸಂಕಲನ ಮತ್ತು ಗಂಗಾನದಿ ಕೊಳ್ಳದಲ್ಲಿ ಕಂಡುಬರುವ ತಾಮ್ರದ ಉಪಕರಣಗಳ ನಡುವೆ ಎದ್ದು ಕಾಣುವ ಹೋಲಿಕೆ ಇದ್ದು, ಉತ್ತರ ಭಾರತದ ಹಾಗೂ ಡೆಕ್ಕನ್ ಪ್ರದೇಶಗಳ ನಡುವಿನ ಸಂಬಂಧವನ್ನು ಕ್ರಿ.ಪೂ.೨೦೦೦ ವರ್ಷಗಳ ಹಿಂದಿನ ಪರಿಸ್ಥಿತಿಯನ್ನು ಅರಿಯಲು ಸಹಕಾರಿಯಾಗಿದೆ.’[3] ಈ ಪ್ರಾಂತದ ಕಲ್ಲೂರು ತಾಮ್ರದ ನಿಕ್ಷೇಪ ಹೊಂದಿರುವ ಸ್ಥಳವಾಗಿದೆ. ಮಾನ್ವಿ ತಾಲ್ಲೂಕಿನಲ್ಲಿರುವ ಈ ಕಲ್ಲೂರಿನಲ್ಲಿ ತಾಮ್ರದ ನಿಕ್ಷೇಪ ಇರುವುದನ್ನು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಪರೀಕ್ಷಿಸಿದ್ದಾರೆ. ಆದರೆ ಗಣಿಗಾರಿಕೆ ಆರಂಭವಾಗಿಲ್ಲ. ಒಂದುವೇಳೆ ಗಣಿಗಾರಿಕೆ ಆರಂಭವಾದರೆ ‘ದಿನವೊಂದಕ್ಕೆ ೧೦೦ ಟನ್ ಅದಿರನ್ನು ಉತ್ಪಾದಿಸಿದರೆ ಈ ಗಣಿಯು ಸುಮಾರು ೩೦-೪೦ ವರ್ಷಗಳ ಕಾಲ ಕೆಲಸ ಮಾಡಬಲ್ಲದು’[4] ಎಂಬುದು ಶೋಧನೆಯಿಂದ ತಿಳಿದುಬಂದಿದೆ. ತಾಮ್ರದ ಗಣಿಗಾರಿಕೆಯು ಪ್ರಾಚೀನ ಕಾಲದಿಂದಲೂ ಇಲ್ಲಿ ನಡೆಯುತ್ತಿದೆ ಎಂಬುದಕ್ಕೆ ಇದೇ ತಾಲೂಕಿನ ವಟಗಲ್ಲಿನಲ್ಲಿ ಈಚೆಗೆ ನಡೆದ ಆದಿಮಾನವನ ವಾಸಸ್ಥಳದ ಉತ್ಖನನ ಕಾರ್ಯದಲ್ಲಿ ತಾಮ್ರದ ವಸ್ತುಗಳು ಲಭ್ಯವಾಗಿರುವುದೇ ಸಾಕ್ಷಿಯಾಗಿದೆ.

ಮೌರ್ಯರ ನಂತರ ಬಂದ ಶಾಂತವಾಹನರು ೩ನೇ ಶತಮಾನದವರೆಗೆ ಆಳ್ವಿಕೆ ನಡೆಸಿದರು. ಕಲಬುರ್ಗಿ, ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ ಮುಂತಾದ ಜಿಲ್ಲೆಗಳಲ್ಲಿ ಇವರ ಅಧಿಕಾರವಿತ್ತೆಂದು ಉತ್ಖನನಗಳು ತಿಳಿಸುತ್ತವೆ. ಇವರ ಕಾಲದ ಶಾಸನಗಳೂ ಪ್ರಾಕೃತ ಭಾಷೆಯ ಬ್ರಾಹ್ಮಿಲಿಪಿಯಲ್ಲಿವೆ. ಶಾತವಾಹನರು ಗೋದಾವರಿ ನದಿಯ ಮೇಲಣ ಪ್ರದೇಶದಲ್ಲಿ ಅಧಿಕಾರವನ್ನು ಹಿಡಿದ ನಂತರ ಕರ್ನಾಟಕ, ಆಂಧ್ರ ಪ್ರದೇಶಗಳ ಕಡೆ ಅಧಿಕಾರವನ್ನು ಸ್ಥಾಪಿಸಿದರೆಂದು ಹೇಳಲಾಗುತ್ತದೆ. ಶಾತವಾಹನರ ಗೌತಮಿ ಪುತ್ರ ಶಾತಕರ್ಣಿ (ಕ್ರಿ.ಶ. ೧೦೬-೧೩೦) ರಾಜನು ಚಾತುವರ್ಣ ಪದ್ಧತಿಯನ್ನು ಬೆಂಬಲಿಸಿದನೆಂದು ಹೇಳಲಾಗುತ್ತದೆ. ಆರಂಭದಲ್ಲಿ ಶಾತವಾಹನರು ಬೌದ್ಧರಿಗೂ, ಜೈನರಿಗೂ ಪ್ರೋತ್ಸಾಹ ನೀಡಿದ್ದರು. ಗೋದಾವರಿ ಮತ್ತು ಕೃಷ್ಣಾ ನದಿಗಳ ನಡುವಣ ಪ್ರದೇಶದಲ್ಲಿ ಭತ್ತ ಮತ್ತು ಹತ್ತಿ ಪ್ರಮುಖ ಬೆಳೆಗಳಾಗಿದ್ದವು. ಶಾತವಾಹನರು ಕರ್ನಾಟಕ, ಆಂಧ್ರಗಳಲ್ಲಿ ಅಧಿಕಾರ ಸ್ಥಾಪಿಸಿದ್ದುದು ಈ ಕಾರಣಕ್ಕಾಗಿ ಇರಬಹುದು. ಅಲ್ಲದೆ ‘ಕರೀಂನಗರ ಮತ್ತು ವಾರಂಗಲ್ ಜಿಲ್ಲೆಗಳಲ್ಲಿ ಕಬ್ಬಿಣದ ಅದಿರು ಅಗೆದಿರಬೇಕು. ಆ ಜಿಲ್ಲೆಗಳಲ್ಲಿ ಬೃಹತ್ ಶಿಲಾ ಸಮಾಧಿಗಳ ಕಾಲದಲ್ಲೇ ಕಬ್ಬಿಣ ತೆಗೆಯುತ್ತಿದ್ದ ಕುರುಹುಗಳಿವೆ. ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ಕ್ರಿಸ್ತಶಕದ ಆರಂಭಕ್ಕೂ ಮುಂಚೆಯೇ ಚಿನ್ನ ತೆಗೆಯುತ್ತಿದ್ದ ಸೂಚನೆಗಳಿವೆ.’[5] ಈ ಪ್ರಾಂತದಲ್ಲಿರುವ ತಾಮ್ರ, ಚಿನ್ನ, ವಜ್ರ, ಕಬ್ಬಿಣ, ಬಳಪದಕಲ್ಲುಗಳು ಮುಂತಾದ ನಿಕ್ಷೇಪಗಳು ಹೇರಳವಾಗಿ ಇರುವುದರಿಂದ ಗಣಿಗಾರಿಕೆಗಳು ಪ್ರಾಚೀನ ಕಾಲದಲ್ಲಿ ನಡೆದಿರಬೇಕು. ಉತ್ಖನನ ಮತ್ತು ಶೋಧನೆಗಳಿಂದ ಇದು ತಿಳಿದು ಬರುತ್ತಿದೆ. ‘ಈ ಪ್ರದೇಶದಲ್ಲಿ ಸುಮಾರು ೧೮೦೦ – ೩೦೦೦ ವರ್ಷಗಳಾಚೆ ಚಿನ್ನದ ಅದಿರನ್ನು ಗಣಿಗಳ ಮೂಲಕ ತೆಗೆದು ಪುಡಮಾಡಿ ಚಿನ್ನವನ್ನು ಪಡೆಯಲಾಗುತ್ತಿತ್ತೆಂಬುದಕ್ಕೆ ಹಲವು ಆಧಾರಗಳಿವೆ. ಹಟ್ಟಿಯಲ್ಲಿ ಸುಮಾರು ಇನ್ನೂರು ಅಡಿ ಆಳದಲ್ಲಿ ಸಿಕ್ಕಿರುವ ಕಟ್ಟಿಗೆಯ ಕಾಲವನ್ನು ಕಾರ್ಬನ್ ೧೪ರ ವಿಧಾನದಲ್ಲಿ ಸುಮಾರು ೧೯೦೦ ವರ್ಷಗಳೆಂದು ನಿರ್ಧರಿಸಲಾಗಿದೆ. ಅಷ್ಟು ಪುರಾತನ ಕಾಲದಲ್ಲಿ ನಮ್ಮ ಪುರಾತನರು ಆಳದವರೆಗೆ ಗಣಿ ಕೆಲಸ ಮಾಡಿರುವುದನ್ನು ಅಚ್ಚರಿ.’[6] ಈ ಪ್ರಾಂತದ ನೈಸರ್ಗಿಕ ಸಂಪತ್ತನ್ನು ಶಾತವಾಹನರೂ ಬಳಸಿಕೊಂಡರು. ಅವರು ರೋಮ್, ಗ್ರೀಕ್ ದೇಶಗಳೊಡನೆ ವ್ಯಾಪಾರ ಸಂಬಂಧಗಳನ್ನು ಹೊಂದಿದ್ದರು. ದಕ್ಷಿಣ ಪ್ರಾಂತದಿಂದ ಅದರಲ್ಲೂ ಕರ್ನಾಟಕದ ಈ ಪ್ರಾಂತದ ಉತ್ಪನ್ನಗಳನ್ನೂ ರಫ್ತು ಮಾಡಲಾಗುತ್ತಿತ್ತು.

ಮೌರ್ಯರ ಮತ್ತು ಶಾತವಾಹನರ ಕಾಲದಲ್ಲಿ ಈ ಪ್ರಾಂತದಲ್ಲಿ ಬೌದ್ಧ ಮತ್ತು ಜೈನರು ತಮ್ಮ ಧರ್ಮವನ್ನು ನೆಲೆಗೊಳಿಸಲು ಪ್ರಯತ್ನಿಸಿದರು. ಶಾತವಾಹನರ ಆಳ್ವಿಕೆಯ ಕಾಲಕ್ಕಾಗಲೇ ಬೌದ್ಧರು ಹಿನ್ನೆಲೆಗೆ ಸರಿಯತೊಡಗಿದರು. ಬೌದ್ಧ ಭಿಕ್ಷುಕರು ವರ್ತಕರ ಜತೆ, ಕೃಷಿಕರ ಜತೆ ಸಂಬಂಧವನ್ನು ಬೆಳೆಸಿ, ವಿಹಾರಗಳನ್ನು ಕಟ್ಟಿಸಿಕೊಂಡು ವಿರಾಮದ ಜೀವನಕ್ಕೆ ಅಂಟಿಕೊಂಡರು. ಬೌದ್ಧರ ವಿಹಾರಗಳನ್ನು ಆರಂಭದಲ್ಲೇ ಭೋಗದ ತಾಣಗಳಾಗಿ ನಂತರ ಸಂಪತ್ತುಗಳ ನೆಲೆಯಾಗಿ ಪರಿಣಮಿಸಿದವು. ಬುದ್ಧನ ಸಿದ್ಧಾಂತಗಳು ಬೌದ್ಧಭಿಕ್ಷುಕರಲ್ಲಿ ಬೇರೆ ಸ್ವರೂಪವನ್ನು ಪಡೆದವು. ಜನಸಾಮಾನ್ಯರ ಪಾಲಿಭಾಷೆಯನ್ನು ಬಳಸದೆ ಸಂಸ್ಕೃತವನ್ನು ಬಳಸಿದರು. ಮೂರ್ತಿಪೂಜೆಗೆ ಮುಂದಾದರು. ಬೌದ್ಧಧರ್ಮದ ಪ್ರಭಾವದಿಂದ ಹಿನ್ನೆಲೆಗೆ ಸರಿದಿದ್ದ ವೈದಿಕ ಧರ್ಮವು ತನ್ನಲ್ಲಿ ಸುಧಾರಣೆಗಳನ್ನು ತಂದುಕೊಂಡಂತೆ ತೋರಿಸಿಕೊಂಡು ರಾಜರ ಬೆಂಬಲವನ್ನು ಪಡೆದು ಬಲಗೊಳ್ಳತೊಡಗಿತು. ಶಾತವಾಹನರ ಪ್ರಸಿದ್ಧ ದೊರೆ ಗೌತಮಿ ಪುತ್ರ ಶಾತಕರ್ಣಿ ವೈದಿಕ ಧರ್ಮವನ್ನು ಪುನಃ ಬಲಪಡಿಸಲು ಹೆಚ್ಚಿನ ಪ್ರೋತ್ಸಾಹ ನೀಡಿದನು. ಎರಡು-ಮೂರನೇ ಶತಮಾನದಿಂದ ಪ್ರಭುತ್ವಗಳು ಸಂಸ್ಕೃತವನ್ನು ಬೆಂಬಲಿಸತೊಡಗಿದವು. ದೇವಸ್ಥಾನ, ಪುರೋಹಿತಶಾಹಿ ಬಲಗೊಳ್ಳತೊಡಗಿದವು. ಕರ್ನಾಟಕದಲ್ಲಿ ಇದೇ ಹೊತ್ತಿನಲ್ಲಿ ಜೈನಧರ್ಮ ಬಲಗೊಂಡು ಅದೂ ಬಸದಿ, ಜಿನಾಲಯಗಳನ್ನು ನಿರ್ಮಿಸಿಕೊಂಡಿತು.

ಕರ್ನಾಟಕದಲ್ಲಿ ನಾಲ್ಕನೇ ಶತಮಾನದ ಹೊತ್ತಿಗೆ ಕದಂಬರು ಅಧಿಕಾರಕ್ಕೆ ಬಂದರು. ‘ಕನ್ನಡ ಪ್ರಾಂತ’ವನ್ನು ಆಳಿದ ಮೊದಲ ‘ಕನ್ನಡ ಅರಸ’ರೆಂದು, ಇವರು ಸ್ಥಾನಗುಂದೂರಿನ ಮೂಲದವರೆಂದು, ಅದು ಈಗಿನ ತಾಳಗುಂದವೆಂದು, ಮಯೂರ ವರ್ಮ (೩೨೫) ನನ್ನು ಕನ್ನಡಿಗನೆಂದು, ಅವನೇ ರಾಜ್ಯವನ್ನು ಕಟ್ಟಿದನೆಂದು ಹೇಳಲಾಗುತ್ತಿದೆ. ಈ ವಂಶದ ಕಾಕುಸ್ಥವರ್ಮನ ಕಾಲದಲ್ಲಿ ರಾಜ್ಯವು ಬಳ್ಳಾರಿ, ಬೆಳಗಾವಿ, ಶಿವಮೊಗ್ಗ, ಉತ್ತರ ಕನ್ನಡ, ಚಿತ್ರದುರ್ಗ ಜಿಲ್ಲಾ ಪ್ರದೇಶಗಳನ್ನು ಒಳಗೊಂಡಿತ್ತು. ಇವನ ಕಾಲದ ‘ಹಲ್ಮಿಡಿ ಶಾಸನ’ (೪೫೦)ವು ಮೊದಲ ಕನ್ನಡ ಶಾಸನವೆಂದು ಕರೆಸಿಕೊಂಡಿದೆ. ಕದಂಬರು ಪ್ರಾಕೃತ ಭಾಷೆಯನ್ನು ಬಿಟ್ಟು ಸಂಸ್ಕೃತ ಭಾಷೆಗೆ ಮಹತ್ವ ನೀಡಿದರು. ಇವರ ಕಾಲದಲ್ಲಿ ಲಭ್ಯವಾದ ೫೧ ಶಾಸನಗಳಲ್ಲಿ ಬಹಳಷ್ಟು ಶಾಸನಗಳು ಸಂಸ್ಕೃತ ಭಾಷೆಯಲ್ಲಿವೆ. ಬಹುಶಃ ಈ ಹೊತ್ತಿಗೆ ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳ ನಡುವೆ ಪೈಪೋಟಿಯಿದ್ದು, ಇವುಗಳ ನಡುವೆ ಕನ್ನಡ ಭಾಷೆಗೂ ಅವಕಾಶ ಸಿಕ್ಕು ಮುನ್ನೆಲೆಗೆ ಬರಲು ಸಾಧ್ಯವಾಗಿರಬೇಕು. ‘ಹಲ್ಮಿಡಿ ಶಾಸನ’ದ ಬರೆಹ ಕನ್ನಡ ಭಾಷೆಯಲ್ಲಿದ್ದರೂ ಅದು ಸಂಸ್ಕೃತಮಯವಾಗಿದೆ. ನಂತರ ಸಿಗುವ ತಗರೆಯ ಶಾಸನ, ಮಲ್ಲೋಹಳ್ಳಿ ಶಾಸನ, ಬಿಸನಳ್ಳಿ ಶಾಸನ ಮುಂತಾದವುಗಳಲ್ಲಿ ಕನ್ನಡ ಸಾಲುಗಳು ಕಾಣಿಸಿವೆ. ಮುಂದಿನ ತಮ್ಮಟಕಲ್ಲು ಶಾಸನ, ಸಿರಿಗುಂದ ಶಾಸನ, ಕೊಪ್ಪಳ ಶಾಸನ, ಸಿರಗುಪ್ಪಿ ತರುಗೊಳ್ ಶಾಸನ, ಕೆಲಗುಂಡ್ಲಿ ಶಾಸನ, ಕಂಪ್ಲಿ ಶಾಸನ, ಬಾದಾಮಿ ಶಾಸನ ಈ ಪ್ರಾಚೀನ ಶಾಸನಗಳಲ್ಲಿರುವ ಕನ್ನಡವನ್ನು ಅವಲೋಕಿಸಿದರೆ ಈ ಕಾಲದಲ್ಲಿ ಆಡಳಿತವನ್ನು ನಿರ್ವಹಿಸಲು ಕನ್ನಡ ಭಾಷೆಯನ್ನು ಬಳಸಲಾಗಿದೆ ಮತ್ತು ಕನ್ನಡ ಭಾಷೆ ಅಭಿವೃದ್ಧಿಯಾಗುವ ಹಂತದಲ್ಲಿದೆ ಎಂದು ಕಾಣುತ್ತದೆ. ೫-೬ನೇ ಶತಮಾನದಲ್ಲಿ ಆಡುಮಾತಿಗೆ ಸೀಮಿತವಾಗಿದ್ದ ಕನ್ನಡ ಭಾಷೆಯು ದಾಖಲೆಯ ಬರೆಹಕ್ಕೆ ಶಕ್ತವಾಗಿರಬೇಕು. ‘ಬಾಯಿ ಮಾತಿನ ಸಂಪ್ರದಾಯ ಮರೆಯಾಗಿ ಲಿಖಿತ ಸಂಪ್ರದಾಯ ಸಾಹಿತ್ಯದಲ್ಲಿ ಕಾಲಿಟ್ಟಿತು.’[7] ಅಂದರೆ ಈ ಸಂದರ್ಭದಲ್ಲಿ ಕನ್ನಡವು ಜನಸಾಮಾನ್ಯರಿಂದ ರಾಜರ ಭಾಷೆಯಾಗುತ್ತ ಸಾಗಿತ್ತು. ಆದರೂ ಕದಂಬರು ಸಂಸ್ಕೃತ ಭಾಷೆಗೆ ಮತ್ತು ವೈದಿಕ ಧರ್ಮಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದರು. ಸರಿ ಸುಮಾರು ಇದೇ ಕಾಲಾವಧಿಯಲ್ಲಿ ಕನ್ನಡ ನಾಡಿನ ದಕ್ಷಿಣ ಭಾಗದಲ್ಲಿ ಗಂಗರು ರಾಜ್ಯ ಕಟ್ಟಿ ಆಳಿದರು. ಕ್ರಿ.ಶ. ೩೨೫-೧೦ನೇ ಶತಮಾನದವರೆಗೆ (ರಾಷ್ಟ್ರಕೂಟರ ಮಾಂಡಲಿಕರಾಗಿಯೂ) ದೀರ್ಘಕಾಲ ಆಳ್ವಿಕೆಯಲ್ಲಿದ್ದರು. ಇವರೂ ಕನ್ನಡ ಭಾಷೆಯನ್ನು ಒಪ್ಪಿಕೊಂಡು ಬಳಸಿದರು. ಕದಂಬರು ಮತ್ತು ಗಂಗರು ತಮ್ಮ ಆಳ್ವಿಕೆಯಲ್ಲಿ ಜೈನ, ಶೈವ ಮತಗಳಿಗೆ ಪ್ರೋತ್ಸಾಹ ನೀಡಿದರೂ ಅವರ ಒಲವು ವೈದಿಕ ಮತದ ಕಡೆಗಿತ್ತು. ಈ ಹೊತ್ತಿಗಾಗಲೇ ವೈದಿಕ ಧರ್ಮ ಬೇರೆ ಮತಗಳೊಂದಿಗೆ ಸಂಘರ್ಷ ನಡೆಸಿದ್ದರೂ ಅದು ೪-೫ನೇ ಶತಮಾನದಲ್ಲಿ ಪ್ರಬಲವಾಗಿ ಪುನಃ ಬೆಳೆದಿತ್ತು.

೬ನೇ ಶತಮಾನದಲ್ಲಿ ಬಾದಾಮಿಯ ಚಾಲುಕ್ಯರು ಅಧಿಕಾರಕ್ಕೆ ಬಂದು, ಇಬ್ಭಾಗವಾಗಿದ್ದ ಕನ್ನಡ ಪ್ರಾಂತವನ್ನು ಒಗ್ಗೂಡಿಸಿದರೆಂದು, ಅಷ್ಟೇ ಅಲ್ಲ ಕಾವೇರಿಯಿಂದ ನರ್ಮದಾ ನದಿಯವರೆಗೆ ರಾಜ್ಯವನ್ನು ವಿಸ್ತರಿಸಿದರೆಂದು, ‘ಕರ್ನಾಟಕ ಬಲ’ ಎಂಬ ಸೈನ್ಯವನ್ನು ಕಟ್ಟಿದರೆಂದು ಇವರನ್ನೂ ಪ್ರಶಂಶಿಸಲಾಗಿದೆ. ಈ ವಂಶದ ಪ್ರಸಿದ್ಧ ಅರಸ ಇಮ್ಮಡಿ ಪುಲಕೇಶಿ (೬೧೦-೬೪೨) ಉತ್ತರದ ಹರ್ಷವರ್ಧನನನ್ನು ನರ್ಮದಾ ನದಿಯ ಮೇಲೆ ಸೋಲಿಸೊದ್ದರಿಂದ ಉತ್ತರದ ಅರಸರು ದಕ್ಷಿಣದ ಅರಸರ ಬಗ್ಗೆ ಭಯದ ನಿಲುವನ್ನು ತಾಳಿದರೆಂದು ಹೇಳಲಾಗಿದೆ. ಭತ್ತ, ಜೋಳ ಬೆಳೆಯುವ ಫಲವತ್ತಾದ ಕೃಷ್ಣಾ ಮತ್ತು ಗೋದಾವರಿ ನದಿಗಳ ನಡುವಣ ಪ್ರದೇಶವನ್ನು ಪುಲಕೇಶಿ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದಂತೆ, ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ನಡುವಣ ಪ್ರದೇಶವು ಇನ್ನೂ ಫಲವತ್ತಾಗಿದ್ದು ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದನು. ಕೃಷ್ಣಾ ಮತ್ತು ತುಂಗಭದ್ರಾ ನಡುವಿನ ಪ್ರದೇಶಕ್ಕಾಗಿ ಬಾದಾಮಿಯ ಚಾಳುಕ್ಯರಿಗೂ, ಪಲ್ಲವರಿಗೂ ನಿರಂತರ ಯುದ್ಧಗಳು ಸಂಭವಿಸಿದವು. ಈ ಫಲವತ್ತಾದ ಬಯಲು ಭೂಮಿಯನ್ನು ಗೆದ್ದು ಅಧಿಪತ್ಯ ಸ್ಥಾಪಿಸಲು ಮುಂದೆ ವಿಜಯನಗರ ಸಾಮ್ರಾಜ್ಯದ ಅರಸರು, ಬಹಮನಿ-ಆದಿಲ್‍ಶಾಹಿ ಸಾಮ್ರಾಜ್ಯದ ಅರಸರೂ ನಿರಂತರ ಸಂಘರ್ಷವನ್ನು ನಡೆಸಬೇಕಾಯಿತು. ದೋ ಆಬ್ ಎಂದೇ ಹೆಸರುವಾಸಿಯಾಗಿರುವ ಈ ಪ್ರದೇಶವು ಹತ್ತಿ, ಜೋಳ, ಸಜ್ಜೆ, ಔಡಲ ಮುಂತಾದ ಆಹಾರ ಮತ್ತು ಎಣ್ಣೆಬೀಜಗಳ ಬೆಳೆಗೆ ಮತ್ತು ಖನಿಜಗಳ ಉತ್ಪನ್ನಗಳಿಗೆ, ಕುರಿ, ಮೇಕೆ, ಪಶು ಸಂಪತ್ತುಗಳ ಪಾಲನೆಗೆ ಯೋಗ್ಯವಾಗಿತ್ತು.

ಬಾದಾಮಿಯ ಚಾಳುಕ್ಯರು ವೈದಿಕ ಮತಕ್ಕೆ ಹೆಚ್ಚು ಮನ್ನಣೆ ನೀಡಿದರು. ಈ ಹೊತ್ತಿಗೆ ದೇವಾಲಯಗಳನ್ನು ನಿರ್ಮಿಸುವ ಸಂಸ್ಕೃತಿ ಬಲಗೊಂಡಿತ್ತು. ಬಾದಾಮಿ ಚಾಳುಕ್ಯರ ಆಳ್ವಿಕೆಯ ಕಾಲಾವಧಿಯಲ್ಲಿ ಐಹೊಳೆ, ಬಾದಾಮಿ, ಪಟ್ಟದಕಲ್ಲು ಸ್ಥಳಗಳಲ್ಲಿ ನೂರಾರು ದೇವಾಲಯಗಳನ್ನು ನಿರ್ಮಿಸಿದರು. ಐಹೊಳೆಯಲ್ಲಿ ೭೦ ದೇವಾಲಯಗಳಿವೆ ಎಂದು ಹೇಳಲಾಗುತ್ತದೆ. ಶೈವ, ಜೈನ, ವೈಷ್ಣವ ಮತಗಳು ಬೃಹತ್ ದೇವಾಲಯಗಳನ್ನು ಹುಟ್ಟುಹಾಕಿದವು. ಈ ದೇವಾಲಯಗಳನ್ನು ನಿಭಾಯಿಸಲು ರಾಜರು ಭೂಮಿಗಳನ್ನು ದತ್ತಿಯಾಗಿ ನೀಡಬೇಕಾಯಿತು. ದೇವಾಲಯಗಳು ಹಣ, ಆಸ್ತಿ, ಪುರೋಹಿತರನ್ನು ಹೊಂದಿ ಶ್ರೀಮಂತವಾದವು. ಅವುಗಳ ರಕ್ಷಣೆಯೂ ಭಾರವಾಯಿತು. ಈ ಭಾರ ಜನಸಾಮಾನ್ಯರ ಮೇಲೆ ಬಿತ್ತು. ಕಲೆ, ಸಾಹಿತ್ಯ, ಸಂಸ್ಕೃತಿಗಳ ಪೋಷಣೆಗೆ ಬೇಕಾದ ಹಣವನ್ನು ರೈತಾಪಿ ವರ್ಗದಿಂದ ಕರಗಳ ರೂಪದಲ್ಲಿ ಪಡೆಯುತ್ತಿದ್ದರು. ಬ್ರಾಹ್ಮಣರು ಕರಗಳಿಂದ ಮುಕ್ತರಾಗಿದ್ದರು. ವ್ಯಾಪಾರಸ್ಥರು ಶ್ರೀಮಂತರಾಗಿದ್ದು ಅವರು ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡಿದ್ದರು. ‘ಐಯ್ಯಾವೊಳೆ ಐನೂರ್ವರು’ ಎಂಬ ಪ್ರತಿಷ್ಠಿತ ಸಂಸ್ಥೆಯು ಐಹೊಳೆಯಲ್ಲಿತ್ತು. ಎಣ್ಣೆ, ಅರಿಸಿನ, ಸಕ್ಕರೆ, ಮುಂತಾದ ನಿತ್ಯ ಬಳಕೆಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಬಾದಾಮಿಯಲ್ಲಿದ್ದವು. ಈ ವ್ಯಾಪಾರಸ್ಥರು ಜೈನರಾಗಿದ್ದರು. ವಾರಕ್ಕೆ ಒಮ್ಮೆ ಸಂತೆಗಳು ಹುಟ್ಟಿಕೊಂಡವು. ಈ ಸಂತೆಗಳು ಈ ವಣಿಕರಿಂದ ನಿಯಂತ್ರಣಗೊಂಡಿರುತ್ತಿದ್ದವು. ‘ಅಯ್ಯಾವೊಳೆ ಐನೂರ್ವರು’ ಎಂಬ ವರ್ತಕರ ಸಂಘವು ಬಾದಾಮಿ ಚಾಳುಕ್ಯರ ಕಾಲದಿಂದ ವಿಜಯನಗರ ರಾಜ್ಯದವರೆಗೆ ತನ್ನ ವ್ಯಾಪಾರ ಚಟುವಟಿಕೆಗಳನ್ನು ನಡೆಸಿರುವುದು ಶಾಸನಗಳಲ್ಲಿ ಮಾಹಿತಿ ಸಿಗುತ್ತದೆ. ತಮಿಳುನಾಡು, ಕೇರಳದ ವ್ಯಾಪಾರಸ್ಥರೂ ಈ ಸಂಘದಲ್ಲಿ ಸದಸ್ಯತ್ವ ಪಡೆದಿದ್ದರು. ಫ್ರಭುತ್ವಗಳು ಇವರಿಗೆ ವಿಶೇಷ ಮನ್ನಣೆ ನೀಡುತ್ತಿದ್ದವು. ‘ಇವರು ಹಸುಂಬೆಯಲ್ಲಿ ಅಮೂಲ್ಯ ವಸ್ತುಗಳನ್ನು ತುಂಬಿಕೊಂಡು ಚೇರ, ಜೋಳ, ಮಲಯ, ಮಗಧ, ಕೌಶಲ, ಸೌರಾಷ್ಟ್ರ, ಕಾಂಭೋಜ, ಗೌಳ, ಲಾಳ, ಪಾರಸ, ನೇಪಾಳ ಎಂಬ ನಾನಾ ದೇಶಗಳಲ್ಲಿ ಗ್ರಾಮ, ನಗರ, ಬೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖ, ಸಂವಾಹನವೆಂಬ ದಿಗುದಂತಿ ಪಟ್ಟಣಗಳನ್ನು ಸಂಚರಿಸಿ ಸರಕುಗಳನ್ನು ಕೊಳ್ಳುವ ಮತ್ತು ಮಾರುವ ಕಾರ್ಯದಲ್ಲಿ ತೊಡಗಿದ್ದರು. ಅಂತರ್ದೇಶಿಯ ಸಾಗಾಣಿಕೆಗೆ ಕುದುರೆ, ಎತ್ತು, ಕತ್ತೆ, ಕೋಣ, ಒಂಟೆ, ಆನೆಗಳನು ಉಪಯೋಗಿಸುತ್ತಿದ್ದರು. ದ್ವೀಪಾಂತರಗಳಿಗೆ ಹಡಗುಗಳ ಮುಖಾಂತರ ಹೋಗಿಬರುತ್ತಿದ್ದರು. ಈ ವರ್ತಕರು ಬಟ್ಟೆ, ಬತ್ತ, ಹತ್ತಿ, ಸಕ್ಕರೆ, ಗೋಧಿ, ಅಡಕೆ, ಸಾಸುವೆ, ಜೀರಿಗೆ, ಮೆಣಸು, ಅರಿಸಿನ, ಇಂದ್ರನೀಲ, ಚಂದ್ರಕಾಂತ ಮತ್ತು ಮಾಣಿಕ್ಯ, ವಜ್ರವೈಡೂರ್ಯ, ಗೋಮೇಧಿಕ, ಪುಷ್ಯರಾಳ, ಪದ್ಮರಾಳ, ಹವಳ, ಮರಕತ, ಕರ್ಕೇತನ, ಚಂದನ, ಕಸ್ತೂರಿ, ಕುಂಕುಮ ಮೊದಲಾದ ವಸ್ತುಗಳನ್ನು ಅವು ದೊರೆಯುವ ಪ್ರದೇಶಗಳಲ್ಲಿ ಕೊಂಡು ಅವಶ್ಯಕತೆಯಿದ್ದ ಪ್ರದೇಶಗಳಿಗೆ ಸಾಗಿಸಿ ಮಾರುತ್ತಿದ್ದರು.’[8] ಬಹುದೊಡ್ಡ ಜಾಲಹೊಂದಿದ್ದ ಈ ಸಂಘ ಹೊಯ್ಸಳರ ಕಾಲಾವಧಿಯಲ್ಲಿಯೂ ಇದ್ದದ್ದು ಶಾಸನಗಳಿಂದ ತಿಳಿಯುತ್ತದೆ. ವಿಜಯನಗರ ಮತ್ತು ಈ ಪ್ರಾಂತದ ಶಾಹಿರಾಜ್ಯಗಳ ಕಾಲದಲ್ಲಿ ಈ ಸಂಘದ ಚಟುವಟಿಕೆಗಳು ಕಮ್ಮಿಯಾದವೆಂದು ಕಾಣುತ್ತದೆ. ಉಲ್ಲೇಖಗಳು ದೊರೆಯುವುದಿಲ್ಲ. ೧೪ನೇ ಶತಮಾನದಿಂದ ಉದ್ಭವಿಸಿದ ರಾಜಕೀಯ ಬಿಕ್ಕಟ್ಟುಗಳ ಪರಿಣಾಮ ಈ ಸಂಘದ ಮೇಲೆ ಆಗಿರಬಹುದೆ? ಬಿ. ಷೇಕ್ ಅಲಿ, ‘ಮುಂದೆ ಬಹಮನಿ ಮತ್ತು ಆದಿಲ್‍ಶಾಹಿ ಕಾಲಗಳಲ್ಲೂ ಅವರು ತಮ್ಮ ವಹಿವಾಟನ್ನು ಹಾಗೆಯೇ ಮುಂದುವರಿಸಿದರು ಎಂಬುದನ್ನು ಸಂಶಯಿಸುವುದಕ್ಕೆ ಕಾರಣಗಳಿಲ್ಲ’ ಎಂದಿದ್ದಾರೆ.[9] ೭ ಮತ್ತು ೮ನೇ ಶತಮಾನದಲ್ಲಿ ಮುಖ್ಯವಾಗಿ ವಿಷ್ಣು ಮತ್ತು ಶಿವನ ಆರಾಧನೆ ಹೆಚ್ಚಾಗಿ ಕಂಡುಬರುತ್ತದೆ. ಆಳ್ವಾರರೆಂಬ ಸಂತರು ವಿಶ್ಣುವನ್ನು, ನಾಯನಾರರೆಂಬ ಸಂತರು ಶಿವನನ್ನು ಪೂಜಿಸುವ ಇವರು ಭಕ್ತಿಪಂಥವನ್ನು ಹುಟ್ಟುಹಾಕಿದರು. ಇದು ತಮಿಳುನಾಡಿನಲ್ಲಿ ಆರಂಭವಾಯಿತು. ಮುಂದೆ ಕರ್ನಾಟಕಕ್ಕೆ ಪ್ರಭಾವ ಬೀರಿತು.

ಕವಿರಾಜಮಾರ್ಗದ ಮಹತ್ವ

ಬಾದಾಮಿಯ ಚಾಲುಕ್ಯರನ್ನು ಬದಿಗೊತ್ತಿ ಅಧಿಕಾರಕ್ಕೆ ಬಂದವರು ಮಳಖೇಡದ ರಾಷ್ಟ್ರಕೂಟರು. ಇವರು ಮಹಾರಾಷ್ಟ್ರದ ಉಸ್ಮಾನಾಬಾದು ಜಿಲ್ಲೆಯ ಲಾತೂರಿನ ಮೂಲದವರು. ಕಲಬುರ್ಗಿ ಜಿಲ್ಲೆಯಲ್ಲಿರುವ ಮಾನ್ಯಖೇಟ (ಮಳಖೇಡ) ವನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು. ರಾಷ್ಟ್ರಕೂಟರು ಕನ್ನಡಿಗರು, ಅವರ್ ಹೆಸರುಗಳೆಲ್ಲ ಕನ್ನಡದವು. ಶಾಸನಗಳೆಲ್ಲ ಕನ್ನಡದಲ್ಲಿವೆ. ಜಬ್ಬಲಪುರದ ಸಮೀಪವಿರುವ ಜುರಾಲಾ (ಮಧ್ಯಪ್ರದೇಶ)ದಲ್ಲಿ ಸಿಕ್ಕಿರುವ ಶಾಸನವು ಕನ್ನಡದಲ್ಲಿದೆ. ಅವರ ಮೂಲದ ಮಾನಪುರ, ಲಾತೂರು, ಅಚಲಾಪುರ ಮುಂತಾದವು ಕನ್ನಡ ಪ್ರದೇಶವಾಗಿವೆ. ಇವರ ಕಾಲದಲ್ಲಿ ರಚಿತವಾದ ಮತ್ತು ಕನ್ನಡದ ಮೊದಲ ಕೃತಿ ಎಂಬ ಖ್ಯಾತಿಗೆ ಒಳಗಾದ ಶ್ರೀವಿಜಯನ ‘ಕವಿರಾಜಮಾರ್ಗ’ (೮೧೪-೮೭೭) ಅನೇಕ ಮಹತ್ವದ ಸಂಗತಿಗಳನ್ನು ತಿಳಿಸುತ್ತದೆ. ಸಾಂಸ್ಕೃತಿಕ ನಗರವಾದ ಮಾನ್ಯಖೇಟದಲ್ಲಿ ಈ ಕೃತಿ ರಚನೆಯಾಗಿದೆ. ಇದು ಒಂದು ಅಲಂಕಾರಗ್ರಂಥ. ಕವಿಗಳಿಗೆ ಕಾವ್ಯದ ಲಕ್ಷಣವನ್ನು ಹೇಳುವಂಥದ್ದು. ಕಾವ್ಯ ಹೇಗಿರಬೇಕು, ಅದರ ಪರಿಕರಗಳು ಯಾವುವು, ಕಾವ್ಯದ ಮಹತ್ವ, ಅದರ ಗುಣ-ದೋಷಗಳು ಯಾವುವು, ಕಾವ್ಯದ ಪ್ರಯೋಜನಗಳು ಮುಂತಾದ ಸಂಗತಿಗಳನ್ನು ತಿಳಿಸುತ್ತದೆ. ಇಂಥ ಕಾವ್ಯಶಾಸ್ತ್ರವನ್ನು ಹೇಳುವ ಕೃತಿ ಹುಟ್ಟುವುದು ಯಾವಾಗಲೂ ಒಂದು ಸಮೃದ್ಧ ಸಾಹಿತ್ಯ ಪರಂಪರೆ ಇದ್ದಾಗ ಎನ್ನುವುದು ಯಾರಿಗೂ ತಿಳಿದಿರುವ ಸಂಗತಿ. ೮ನೇ ಶತಮಾನದ ಹೊತ್ತಿನಲ್ಲಿ ಗದ್ಯಕವಿಗಳು, ಪದ್ಯಕವಿಗಳು ಇದ್ದರು. ಕಾವ್ಯ ಪ್ರಕಾರಗಳು ಇದ್ದವು ಎಂದು ಶ್ರೀವಿಜಯನೇ ಹೇಳುತ್ತಾನೆ. ಈ ಸಾಹಿತ್ಯ ಕನ್ನಡಿಗರಿಗೆ ಲಭ್ಯವಾಗಿಲ್ಲ. ಆದರೆ ‘ಕವಿರಾಜಮಾರ್ಗ ಪೂರ್ವದ ಕನ್ನಡದಲ್ಲಿ ಶಾಸ್ರ್ತವಿಷಯವೂ ಕೂಡಿ ನೂರಾರು ಗ್ರಂಥಗಳು ರಚನೆಯಾಗಿದ್ದಿರಬೇಕು’[10] ಈ ನೂರಾರು ಗ್ರಂಥಗಳ ರಚನೆಗೆ ಈ ಪ್ರಾಂತ ನೆಲೆಯಾಗಿದೆ.

ಈ ಕೃತಿಯಲ್ಲಿ ಹೇಳಿದ ‘ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್’ ಎಂಬುದು ಇನ್ನೊಂದು ಮುಖ್ಯ ಸಂಗತಿಯಾಗಿದೆ. ಬಾದಾಮಿ ಚಾಳುಕ್ಯರ ಕಾಲದಲ್ಲಿ ನರ್ಮದಾ ನದಿವರೆಗಿದ್ದ ‘ಕನ್ನಡ ನಾಡು’ ರಾಷ್ಟ್ರಕೂಟರ ಕಾಲಕ್ಕೆ ಗೋದಾವರಿ ನದಿವರೆಗೆ ಕುಗ್ಗಿತು. ಕಾವೇರಿ-ಗೋದಾವರಿ ನದಿಗಳ ನಡುವಿನ ನಾಡನ್ನು ‘ಕನ್ನಡ ನಾಡು’ ಎಂದು ರಾಷ್ಟ್ರಕೂಟರ ಕಾಲದಲ್ಲಿ ಗುರುತಿಸಲಾಯಿತು. ಈ ಕೃತಿಯಲ್ಲಿ ನಾಡಿನ ಸೀಮೆಯನ್ನು ಗುರುತಿಸಿದಂತೆ, ನಾಡಿನ ಜನರ ಅನನ್ಯತೆಯನ್ನು ಹೇಳಲಾಗಿದೆ. ಈ ಅಂಶಗಳನ್ನು ಗಮನಿಸಿದರೆ ಈ ಕಾಲವು ಸಾಂಸ್ಕೃತಿಕವಾಗಿ ಸಂಘರ್ಷಗಳ ಸಂದರ್ಭವಾಗಿ ರಾಷ್ಟ್ರಕೂಟರಿಗೆ ಪರಿಣಮಿಸಿರಬೇಕು. ೮ನೇ ಶತಮಾನದ ಹೊತ್ತಿಗೆ ದಖನ್ ಪ್ರಾಂತದಲ್ಲಿ ರಾಜ್ಯಗಳು ಮತ್ತು ಭಾಷೆ-ಲಿಪಿಗಳು ರೂಪುಗೊಂಡವು. ಇದೇ ಕಾಲಾವಧಿಯಲ್ಲಿ ಮರಾಠಿ ಮತ್ತು ತೆಲುಗು ಭಾಷಿಕ ರಾಜ್ಯಗಳು ತಲೆ ಎತ್ತುವ ಸಿದ್ಧತೆಯಲ್ಲಿದ್ದವು. ಇದು ರಾಷ್ಟ್ರಕೂಟರಿಗೂ ತಮ್ಮ ಒಂದು ಭಾಷಿಕ ರಾಜ್ಯವನ್ನು ಕಟ್ಟುವ ಒತ್ತಡಕ್ಕೆ ಪ್ರೇರೇಪಿಸಿತು. ಕೆ.ವಿ.ಸುಬ್ಬಣ್ಣನವರು, ಕನ್ನಡ ನಾಡು, ಆ ನಾಡಿನ ಜನರು ಒಟ್ಟುಗೂಡಲು ಭಾಷಿಕ ರಾಜ್ಯವೊಂದನ್ನು ಕಟ್ಟಲು ನೃಪತುಂಗ (ರಾಜ) ಮತ್ತು ಶ್ರೀವಿಜಯ (ಕವಿ) ಪ್ರಯತ್ನಿಸಿದರು. ಕವಿ ಮತ್ತು ರಾಜ ಕೂಡಿ ಆಲೋಚಿಸಿದ ಕೃತಿ ‘ಕವಿರಾಜಮಾರ್ಗ’, ಕನ್ನಡ ಪ್ರಾಂತದಲ್ಲಿ ಅನೇಕ ದೇಶಿಗಳು (ಸ್ಥಳೀಯ ಕನ್ನಡ ಭಾಷೆಗಳು) ಇದ್ದು, ಅವುಗಳನ್ನು ಒಂದುಗೂಡಿಸಿ ಒಂದು ಪ್ರಮಾಣ ಭಾಷೆಯನ್ನು ಸೃಷ್ಟಿಸಿ, ಅದನ್ನೇ ರಾಜ್ಯಾಡಳಿತಕ್ಕೂ, ಕಾವ್ಯಕ್ಕೂ ಬಳಸಲು ಪ್ರಯತ್ನಿಸಿದರೆಂದು ತಮ್ಮ ಈಚಿನ ಕೃತಿ (ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು)ಯಲ್ಲಿ ಅಭಿಪ್ರಾಯಪಡುತ್ತಾರೆ. ‘ಮುಖ್ಯವಾಗಿ ಕನ್ನಡವನ್ನು ಕಾವ್ಯಭಾಷೆಯಾಗಿಸಲು ಪ್ರಯತ್ನಿಸಬೇಕಾಗಿತ್ತು. ಕನ್ನಡ ಸ್ವತಂತ್ರವಾಗಿ ಬೆಳೆದು ಬರಲು ಕೆಲವು ನಿಯಮಗಳನ್ನು ರೂಪಿಸಬೇಕಾಗಿತ್ತು ಮತ್ತು ಆಗ ಇದ್ದ ಕೆಲವು ನಿಯಮಗಳನ್ನು ಉಲ್ಲಂಘಿಸಬೇಕಾಗಿತ್ತು. ಶಬ್ದ, ಅರ್ಥ, ಭಾವ, ಅಲಂಕಾರ, ರಸ ಮೊದಲಾದವುಗಳ ಬಗ್ಗೆ ಹೊಸದಾಗಿ ವಿಚಾರ ಮಾಡಬೇಕಾಗಿತ್ತು’[11] ಎಂದು ಕುರ್ತಕೋಟಿಯವರು ಹೇಳುತ್ತಾರೆ. ಒಂದು ನಾಡು, ಆ ನಾಡಿಗೆ ಒಂದು ಭಾಷೆ, ಜನರನ್ನು ಒಂದುಗೂಡಿಸಿ ರಾಜ್ಯವಾಳಲು ರಾಷ್ಟ್ರಕೂಟರು ಶ್ರಮಿಸಿದರು.

ಕಾವೇರಿ-ಗೋದಾವರಿ ನದಿಗಳ ನಡುವಿನ ವಿಸ್ತಾರವಾದ ಪ್ರದೇಶದಲ್ಲಿ ‘ತಿರುಳ್ಗನ್ನಡ ನಾಡು’ ಒಂದು ಇತ್ತೆಂದು ಶ್ರೀವಿಜಯ ಹೇಳುತ್ತಾನೆ. ಕಿಸುವೊಳಲು (ಪಟ್ಟದಕಲ್ಲು), ಕೊಪಣನಗರ (ಕೊಪ್ಪಳ), ಪುಲಿಗೆರೆ (ಲಕ್ಷ್ಮೇಶ್ವರ), ಒಕುಂದ (ಒಕ್ಕುಂದ) ಈ ನಗರಗಳನ್ನೊಳಗೊಂಡ ಪ್ರದೇಶವೇ ‘ತಿರುಳ್ಗನ್ನಡ’ ನಾಡಾಗಿತ್ತು. ಈ ನಾಡಿನ ಸತ್ವಯುತವಾದ ಕನ್ನಡ ಭಾಷೆ ಮತ್ತು ಜನಪದರ ಅನನ್ಯತೆಯನ್ನು ಶ್ರೀವಿಜಯ ಅಭಿಮಾನದಿಂದ ಹೇಳಿದ್ದಾರೆ. ‘ಕುರಿತೋದದೆಯಂ’ ಕಾವ್ಯವನ್ನು ಕಟ್ಟುವುದರಲ್ಲಿ ಈ ಜನ ಪರಿಣಿತರು ಎಂಬ ಮಾತು ಜನಜನಿತವಾಗಿದೆ. ಗದ್ಯ ಕವಿಗಳಾದ ವಿಮಲೋದಯ, ನಾಗಾರ್ಜುನ, ಜಯಬಂಧು ಮತ್ತು ಪದ್ಯಕವಿಗಳಾದ ಕವೀಶ್ವರ, ಪಂಡಿತ ಚಂದ್ರ, ಲೋಕಪಾಲ ಇವರೆಲ್ಲ ಈ ಕಾಲದವರು ಮತ್ತು ಈ ಪ್ರಾಂತದವರು. ಈ ಮೊದಲೇ ಹೇಳಿದಂತೆ ಈ ಹೊತ್ತಿಗೆ ನೂರಾರು ಗ್ರಂಥಗಳು ಈ ಪ್ರಾಂತದಲ್ಲಿ ರಚನೆಗೊಂಡಿರಬೇಕು. ಆದರೆ ರಾಷ್ಟ್ರಕೂಟರನ್ನು ಬದಿಗೊತ್ತಿ ಅಧಿಕಾರಕ್ಕೆ ಬಂದ ಕಲ್ಯಾಣಿಯ ಚಾಲುಕ್ಯರ ೩ನೇ ತೈಲನು ಯುದ್ಧದಲ್ಲಿ ರಾಷ್ಟ್ರಕೂಟರನ್ನು ಸೋಲಿಸಿ, ಸಾಂಸ್ಕೃತಿಕ ಕೇಂದ್ರವಾದ ಮಾನ್ಯಖೇಟವನ್ನು ಸುಡಲಾಯಿತೆಂದು ಹೇಳಲಾಗುತ್ತದೆ.[12] ‘ಮಾನ್ಯಖೇಟವನ್ನು ಕ್ರಿ.ಶ. ೯೭೧ರಲ್ಲಿ ಮಾಳವದ ಪರಮಾರ ಸೀಯಕ ಶ್ರೀಹರ್ಷನು ಸುಟ್ಟು ಲೂಟಿ ಮಾಡಿದನು.’[13] ಇದರಿಂದ ‘ಕವಿರಾಜಮಾರ್ಗ’ ಕಾಲದ ಹೊತ್ತಿಗೆ ರಚನೆಗೊಂಡ ಸಮೃದ್ಧ ಸಾಹಿತ್ಯ ಈ ದಾಳಿಗೆ ಬಲಿಯಾಗಿರಬೇಕು. ‘ಕವಿರಾಜಮಾರ್ಗ’ ಮತ್ತು ಈ ಕೃತಿಯ ಹಿಂದಿನದೋ, ಮುಂದಿನದೋ ಸರಿಯಾಗಿ ತಿಳಿದು ಬಂದಿಲ್ಲವಾದರೂ ‘ವಡ್ಡಾರಾಧನೆ’ (೯೨೦) ಮಾತ್ರ ಕನ್ನಡಿಗರಿಗೆ ದೊರೆತಿದೆ. ‘ವಡ್ಡಾರಾಧನೆ’ಯ ಶಿವಕೋಟ್ಯಾಚಾರ್ಯನು ಕೊಗಳಿ (ಬಳ್ಳಾರಿ)ಯವನೋ, ಹಳ್ಳಿಖೇಡ (ಬೀದರ)ದವನೋ ವಿವಾದವಿದೆ. ಆದರೂ ಈ ಎರಡು ಸ್ಥಳಗಳು ಈ ಪ್ರಾಂತಕ್ಕೆ ಸೇರಿವೆ.

ರಾಷ್ಟ್ರಕೂಟರ ಕಾಲದಲ್ಲಿ ಭೂಮಾಲೀಕರು ಪ್ರಬಲರಾಗಿ ಪ್ರಭುತ್ವ ಮತ್ತು ಸಮಾಜದ ನಡುವೆ ಮಧ್ಯವರ್ತಿಯಾಗಿ ನಿಂತರು. ನೇರವಾಗಿ ಪ್ರಭುತ್ವವನ್ನು ನಿಯಂತ್ರಿಸುವಷ್ಟು ಭೂಮಾಲೀಕರು ಗಟ್ಟಿಯಾಗಿದ್ದರು. ಇವರು ಅನೇಕ ಉತ್ಪನ್ನಗಳ ಮೇಲೆ ಹಿಡಿತ ಸಾಧಿಸಿದ್ದರು. ‘ಸಾಮಾನ್ಯವಾಗಿ ಸರಕಾರದ ಹಕ್ಕಾದ ಗಣಿಗಾರಿಕೆ, ರಾಜಾದಾಯ ನಿಗದಿ, ಪ್ರಾಕೃತಿಕ ಉತ್ಪನ್ನಗಳು, ಬಿಟ್ಟಿ ಚಾಕರಿ ಪಡೆಯುವುದು ಇತ್ಯಾದಿ ಹಕ್ಕುಗಳು ಅವರಿಗೆ ದೊರಕುತ್ತಿದ್ದವು.’[14] ವಣಿಕ ವರ್ಗವಂತೂ ಈ ಕಾಲಾವಧಿಯಲ್ಲಿ ನಾಡು ಮತ್ತು ಭಾಷೆಗಳ ಗಡಿಯನ್ನು ಮೀರಿ ತಮ್ಮ ವಾಣಿಜ್ಯ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿದ್ದರು. ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡು ಪ್ರಬಲರಾಗಿದ್ದರು. ಆಗ್ನೇಯ ಏಷ್ಯಾದ ದೇಶಗಳಿಗೆ, ಪಶ್ಚಿಮ ಏಷ್ಯಾ ಮತ್ತು ಮೆಡಿಟರೇನಿಯನ್ ವರೆಗೆ ಈ ವ್ಯಾಪಾರಸ್ಥರು ಸಂಬಂಧಗಳನ್ನು ಬೆಳೆಸಿಕೊಂಡಿದ್ದರು. ಇವರೆಲ್ಲ ಸಾಮಾನ್ಯವಾಗಿ ಜೈನರೇ ಆಗಿದ್ದರು. ಕಸುಬುದಾರರು, ಕುಶಲ ಕರ್ಮಿಗಳೂ ಈ ಕಾಲದಲ್ಲಿ ಉತ್ಪಾದಕರಾಗಿ ಗಟ್ಟಿಯಾಗಿ ಬಲಗೊಂಡು ಸಂಘಟಿತರಾದರು.

ರಾಷ್ಟ್ರಕೂಟರ ಕಾಲದಲ್ಲಿ ವರ್ಣವ್ಯವಸ್ಥೆಯೇ ಪ್ರಧಾನವಾಗಿತ್ತು. ದುಡಿವ ವರ್ಗ ಮತ್ತು ಶೂದ್ರರೂ ಸೈನ್ಯಕ್ಕೆ ಸೇರಬಹುದಾಗಿತ್ತು. ಇವರ ಕಾಲದಲ್ಲಿ ಯುದ್ಧದಲ್ಲಿ ಮಡಿದವರಿಗೆ ವೀರಪಟ್ಟಕಟ್ಟಿ ಸ್ಮಾರಕಗಳನ್ನು ನಿರ್ಮಿಸಿ, ಮೀರಗಲ್ಲುಗಳೆಂದು ಕರೆದು ನಿಲ್ಲಿಸಲಾಯಿತು. ಇದರಿಂದಾಗಿ ಸಹಗಮನ ಪದ್ಧತಿಯೂ ಜಾರಿಯಾಯಿತು. ಸಾಹಿತ್ಯದಲ್ಲಿ ೧೦ನೇ ಶತಮಾನವನ್ನು ‘ವೀರಯುಗ’ ಎಂದು ಕರೆಯುವುದರ ಹಿಂದೆ ಯುದ್ಧಗಳು, ಆತ್ಮಾರ್ಪಣೆಗಳು, ಸತಿಸಹಗಮನಗಳು ಕಾಣಿಸುತ್ತವೆ. ಕದಂಬರ ಕಾಲದಿಂದಲೂ ಇವು ನಡೆಯುತ್ತ ಬಂದಿವೆ.

ರಾಷ್ಟ್ರಕೂಟರ ಕಾಲದಲ್ಲಿ ಈ ಪ್ರಾಂತದ ವ್ಯಾಪಾರೋದ್ಯಮಗಳು ಅಭಿವೃದ್ಧಿ ಹೊಂದಿದ್ದವು. ‘ಹತ್ತಿ ಬಟ್ಟೆಗಳಿಗೆ ಹಾಕುವ ನೀಲಿ, ತೇಗ, ತೆಂಗು ಮುಂತಾದ ಪದಾರ್ಥಗಳನ್ನು ಪರದೇಶಗಳಿಗೆ ಕಳಿಸುತ್ತಿದ್ದರು. ಜೋಳ, ಹತ್ತಿ, ಬತ್ತ, ದ್ವಿದಳಧಾನ್ಯ, ಕಸುಬೆ, ಹರುಳು, ಎಳ್ಳು, ಹಲಸು, ನೇರಳೆ, ಲವಂಗ, ಏಲಕ್ಕಿ, ಮೆಣಸು, ಕಬ್ಬು, ಮುಂತಾದ ಬೆಳೆಗಳನ್ನು ಬೇಳೆಯುತ್ತಿದ್ದರು. ಕನ್ನಡನಾಡಿಗೆ ಅರೇಬಿಯಾ, ಈಜಿಪ್ತ, ರೋಮ್ ಮುಂತಾದ ಪಾಶ್ಚಾತ್ಯ ದೇಶಗಳು ಕೂಡ ವ್ಯಾಪಾರ ವಾಣಿಜ್ಯ ಸಂಪರ್ಕವಿದ್ದಿತ್ತು.’[15][1] ಎಚ್.ಎಸ್. ಗೋಪಾಲ್ರಾವ್ : ಕರ್ನಾಟಕ ಏಕೀಕರಣ ಇತಿಹಾಸ (೧೯೯೬), ಪುಟ-೪

[2] ರವಿ ಕೋರಿಶೆಟ್ಟರ್, ಆರ್.ಎಂ. ಗಿರಜಿ : ಪರಿಸರ ಮತ್ತು ಸಂಸ್ಕೃತಿ, ಕರ್ನಾಟಕ ಚರಿತ್ರೆ-೧(೧೯೯೭), (ಸಂ: ಅ. ಸುಂದರ) ಪುಟ-          ೭೮

[3] ರವಿ ಕೋರಿಶೆಟ್ಟರ್, ಆರ್.ಎಂ. ಗಿರಜಿ : ಪರಿಸರ ಮತ್ತು ಸಂಸ್ಕೃತಿ, ಕರ್ನಾಟಕ ಚರಿತ್ರೆ-೧(೧೯೯೭), (ಸಂ: ಅ. ಸುಂದರ) ಪುಟ-          ೭೯

[4] ಎಸ್.ಚಂದ್ರಶೇಖರ್ : ರಾಯಚೂರು ಜಿಲ್ಲೆಯ ನೈಸರ್ಗಿಕ ಸಂಪನ್ಮೂಲಗಳು ಮತ್ತು ಅವುಗಳ ಬಳಕೆಯ ಸ್ಥಿತಿಗತಿ ಮತ್ತು      ಮುನ್ನೋಟ, ತಿರುಳ್ಗನ್ನಡ (೧೯೯೩), ಪುಟ-೩೭

[5] ಆರ್.ಎಸ್.ಶರ್ಮ : ಪ್ರಾಚೀನ ಭಾರತ (೧೯೯೭), (ಅನು: ಎನ್.ಪಿ. ಶಂಕರನಾರಾಯಣ ರಾವ್) ಪುಟ-೧೭೦

[6] ಎಚ್.ಚಂದ್ರಶೇಖರ್ : ರಾಯಚೂರು ಜಿಲ್ಲೆಯ ನೈಸರ್ಗಿಕ ಸಂಪನ್ಮೂಲಗಳು ಮತ್ತು ಅವುಗಳ ಬಳಕೆಯ ಸ್ಥಿತಿಗತಿ ಮತ್ತು      ಮುನ್ನೋಟ, ತಿರುಳ್ಗನ್ನಡ (೧೯೯೩), ಪುಟ-೩೭

[7] ಕೀರ್ತಿನಾಥ ಕುರ್ತಕೋಟಿ: ಕನ್ನಡ ಸಾಹಿತ್ಯ ಸಂಗಾತಿ (೧೯೯೫), ಪುಟ-೨

[8] ಜಿ.ಆರ್. ರಂಗಸ್ವಾಮಯ್ಯ: ಐಯ್ಯಾಹೊಳೆ ಐನೂರ್ವರ್, ಕರ್ನಾಟಕ ಕನ್ನಡ ವಿಷಯ ವಿಶ್ವಕೋಶ (೧೯೭೯), ಪುಟ-೨೨

[9] ಬಿ. ಷೇಕ್ ಅಲಿ: ಕರ್ನಾಟಕ ಚರಿತ್ರೆ ಸಂಪುಟ=೪ (೧೯೯೭), ಪುಟ-೨೨೧

[10] ಕೆ.ವಿ. ಸುಬ್ಬಣ್ಣ : ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು (೨೦೦೦), ಪುಟ-೧೨

[11] ಕೀರ್ತಿನಾಥ ಕುರ್ತಕೋಟಿ: ಕನ್ನಡ ಸಾಹಿತ್ಯ ಸಂಗಾತಿ (೧೯೯೫), ಪುಟ-೩

[12] ಆರ್.ಜಿ. ಜಾಗೀರದಾರ, ಲಿಂಗಸೂಗೂರು ವಿಠ್ಠಲರಾವ್ : ಹೈದರಾಬಾದ್ ಕರ್ನಾಟಕ (೧೯೪೧), ಪು-೫

[13] ಕಮಲಾ ಹಂಪನಾ : ಬಿತ್ತರ (೧೯೯೮), ಪುಟ-೩೭

[14] ವಿ.ಎಸ್. ಎಲಿಜಬತ್ : ರಾಷ್ಟ್ರಕೂಟ ಪ್ರಾಬಲ್ಯದ ಸಮಯದಲ್ಲಿದ್ದ ಕರ್ನಾಟಕದ ರಾಜಕೀಯ ಸ್ವರೂಪ, ಕರ್ನಾಟಕ ಚರಿತ್ರೆ-೩ (೧೯೯೭), (ಪ್ರ.ಸಂ : ಬಿ.ಷೇಕಲಿ) ಪುಟ-೩೨

[15] ಎಂ. ನಂಜಮ್ಮಣಿ ; ಪ್ರಾಚೀನ ಭಾರತದ ಸಾಮಾಜಿಕ ಇತಿಹಾಸ, ಪುಟ-೧೬೬