ಕನ್ನಡ ಸಾಹಿತ್ಯ ಚರಿತ್ರೆಯ ಆರಂಭ

೧೦ನೇ ಶತಮಾನದಲ್ಲಿ ಕಲ್ಯಾಣಿ ಚಾಳುಕ್ಯರು ಅಧಿಕಾರಕ್ಕೆ ಬಂದರೂ ಮಾವ್ಯಖೇಟದಲ್ಲಿ ಸಾಂಸ್ಕೃತಿಕ ಪರಿಸರ ಜೀವಂತವಾಗಿ ಮುಂದುವರೆದಿರಬೇಕು. ಕಲ್ಯಾಣಿ ಚಾಳುಕ್ಯರು ಕಲ್ಯಾಣವನ್ನು ರಾಜಧಾನಿಯಾಗಿ ಮಾಡಿಕೊಂಡು ಅದನ್ನು ಸಾಂಸ್ಕೃತಿಕ ನಗರವನ್ನಾಗಿ ಮಾಡಲು ಪ್ರಯತ್ನಿಸಿದರು. ಕನ್ನಡಿಗರು ಹೆಮ್ಮೆ ಪಡುವಂಥ ಕವಿಗಳು ಇವರ ಕಾಲದಲ್ಲಿ, ಇದೇ ಪ್ರಾಂತದಲ್ಲಿ ಕಾಣಿಸಿಕೊಂಡರು. ಆದಿಕವಿ ಎಂದು ಖ್ಯಾತಿ ಪಡೆದ ಪಂಪ (೯೦೨) ಹುಟ್ಟಿದ್ದು, ಬೆಳೆದಿದ್ದು ವೆಂಗಿಪಳು ಎಂಬ ಸ್ಥಳ ಕಲ್ಯಾಣಕ್ಕೆ ಹತ್ತಿರವಾಗಿದೆ. ಪಂಪನು ಆಶ್ರಯ ಪಡೆದದ್ದು ಕನ್ನಡ ಸೀಮೆಗೆ ಹೊಂದಿಕೊಂಡಿರುವ ಕರೀಮನಗರ ಜಿಲ್ಲೆಯ ಇಂದಿನ ವೇಮಲವಾಡವನ್ನು ಆಳುತ್ತಿದ್ದ ಚಾಳುಕ್ಯ ವಂಶದ ೨ನೇ ಅರಿಕೇಸರಿ ಎಂಬ ಸಾಮಂತನಲ್ಲಿ. ಅರಿಕೇಸರಿಯ ವಂಶದ ಮೂಲ ಪುರುಷ ಯುದ್ಧಮಲ್ಲನ ರಾಜಧಾನಿ ಬೋಧನವು ಕನ್ನಡ ಪ್ರದೇಶವೇ ಆಗಿದೆ. ಶ್ರೀವಿಜಯ ಹೇಳುವಂತೆ, ಕನ್ನಡ ನಾಡಿನ ಸೀಮೆಯಾದ ಗೋದಾವರಿ ನದಿ ಪ್ರದೇಶವು ನಾಂದೇಡ, ನಿಜಾಮಾಬಾದು, ಕರೀಮನಗರ ಜಿಲ್ಲೆಗಳನ್ನು ಒಳಗೊಂಡಿದೆ. ‘ವೆಂಗಿಪಳು’ ಎಂಬುದು ಗೋದಾವರಿಯಿಂದ ಹಿಡಿದು ಮುಸಾ ನದಿಗಳ ನಡುವಿನ ವಿಸ್ತಾರದಲ್ಲಿದೆ ಎಂದು ಹೇಳುತ್ತಾರೆ. ಪಂಪನ ಸಮಾಧಿ ‘ಪರಭಣಿ’ಯಲ್ಲಿ ಸಿಕ್ಕ ಬಗ್ಗೆ ಈ ಹಿಂದೆ ಪತ್ರಿಕೆಯಲ್ಲಿ ವರದಿಯಾಗಿತ್ತು. ಪರಭಣಿ ಕನ್ನಡ ಪ್ರಾಂತಕ್ಕೆ ಸೇರಿದೆ. ಪಂಪಕವಿಯ ಹುಟ್ಟೂರು, ಬೆಳೆದ ಊರು, ಅಲೆದಾಡಿದ ಊರುಗಳಾದ ವೆಂಗಿಪಳು, ಪುಲಿಗೆರೆ, ಅಣ್ಣಿಗೇರಿ, ಬನವಾಸಿ ಎಲ್ಲವೂ ಈ ಪ್ರಾಂತಕ್ಕೆ ಸೇರಿವೆ. ವೆಂಗಿಪಳು ಸಾಂಸ್ಕೃತಿಕವಾಗಿ ಪ್ರಸಿದ್ಧಿ ಪಡೆದಿರಬೇಕು. ‘ಆಗಿನ ಕಾಲದ ಎಲ್ಲ ಕವಿಗಳು ವೆಂಗಿಪಳುವಿನೊಡನೆ ಸಂಬಂಧವಿಟ್ಟುಕೊಂಡವರಾಗಿದ್ದರು.’

[1] ಒಂದನೇ ನಾಗವರ್ಮ, ಪೊನ್ನ ಮುಂತಾದವರು ವೆಂಗಿಪಳುವಿನ ಜತೆ ಸಂಪರ್ಕವಿರಿಸಿಕೊಂಡಿದ್ದರು. ‘ಪಂಪಭಾರತ’, ‘ಆದಿಪುರಾಣ’ ಕಾವ್ಯಗಳು ಈ ಪ್ರಾಂತದಲ್ಲಿ ರಚನೆಯಾಗಿವೆ. ‘ಸಾಜದ ಪುಲಿಗೆರೆಯ ತಿರುಳ್ಗನ್ನಡದೋಳ್’ ಎಂಬ ಪಂಪನ ಮಾತು ಮತ್ತು ‘ಕನ್ನಡ ಮೆರಡರುನೂರರ ಕನ್ನಡ ಮಾ ತಿರಿಳುಕನ್ನಂಡ’ ಎಂಬ ರನ್ನರ ಮಾತು ‘ತಿರುಳ್ಗನ್ನಡ’ ನಾಡಿನ ಭಾಷೆಯ ಅನನ್ಯತೆಯನ್ನು ಹೇಳುತ್ತವೆ. ಪಂಪ ಒಂದು ಲೌಕಿಕ ಕಾವ್ಯವನ್ನು (ಪಂಪಭಾರತ), ಒಂದು ಆಗಮಿಕ ಕಾವ್ಯವನ್ನು (ಆದಿಪುರಾಣ) ಬರೆದಿರುವುದು ಒಂದನೆಯ ಗುಣವರ್ಮ (ಸು.೯೦೦)ನ ಪ್ರಭಾವದಿಂದ ಎಂದು ಹೇಳಲಾಗುತ್ತದೆ. ಈ ಕವಿಯ ‘ಹರಿವಂಶ’ ಮತ್ತು ‘ಶೂದ್ರಕ’ ಕಾವ್ಯಗಳು ಈಗ ಲಭ್ಯವಿಲ್ಲವಾದರೂ ಇವು ಒಂದು ಲೌಕಿಕ, ಒಂದು ಆಗಮಿಕ ಕಾವ್ಯಗಳಾಗಿರಬೇಕು. ಇವನ್ನೇ ೧೦ನೇ ಶತಮಾನದಿಂದ ಜೈನಕವಿಗಳು ಮುಂದುವರಿಸಿದರೆಂದು ಕಾಣುತ್ತದೆ. ಈ ಕಾವ್ಯಗಳು ಕೂಡ ಈ ಪ್ರಾಂತದಲ್ಲಿ ರಚನೆಯಾಗಿವೆ.

೩ನೇ ಕೃಷ್ಣನ ಆಶ್ರಯದಲ್ಲಿದ್ದ ಪೊನ್ನನು (೯೯೮) ವೆಂಗಿಪಳು ಪ್ರಾಂತದವನು. ಪೊನ್ನನಿಂದ ‘ಶಾಂತಿ ಪುರಾಣ’ವನ್ನು ಬರೆಸಿದ ಮಲ್ಲಪ್ಪ-ಪುನ್ನಿಮಯ್ಯ ಈ ಪ್ರಾಂತದವರು. ೩ನೇ ತೈಲನ ಮಗ ಸತ್ಯಾಶ್ರಯನ ಆಶ್ರಯದಲ್ಲಿದ್ದ ರನ್ನಕವಿ (೯೯೦) ಹುಟ್ಟಿದ್ದು ಜಮಖಂಡಿ ನಾಡಿನ ಮುದುವೊಳಲಿನಲ್ಲಿ. ರನ್ನನ ಸಾಹಿತ್ಯ ಚಟುವಟಿಕೆಗೆ ನೆಲೆಯಾದದ್ದು. ಮಾನ್ಯಖೇಟ. ಈ ಕವಿಗೆ ಪ್ರೋತ್ಸಾಹ-ಗೌರವ ನೀಡಿದ ಅತ್ತಿಮಬ್ಬೆಯ ಊರು ಲಕ್ಕುಂಡಿ. ದುರ್ಗಸಿಂಹ (೧೦೩೦) ಸತ್ಯಾಶ್ರಯನ ತಮ್ಮನ ಮಗನಾದ ೩ನೇ ಜಯಸಿಂಹನ ಆಶ್ರಯದಲ್ಲಿದ್ದು ಸಂಧಿವಿಗ್ರಹಿ ಆಗಿದ್ದನು. ಇವನು ಧಾರವಾಡ ಜಿಲ್ಲೆಯ ಸಯ್ಯಡಿ ಊರಿನವನು. ಇದೇ ಊರಿನವನೆಂದು ಹೇಳಲಾದ ಒಂದನೇ ನಾಗವರ್ಮ (೯೫೦) ಮುಂದೆ ವೆಂಗಿಪಳುವಿನ ಜತೆ ‘ಕವಿಯಶಃಪ್ರಾರ್ಥಿಗಾಗಿ’ ಸಂಪರ್ಕ ಬೆಳೆಸಿಕೊಂಡನು. ‘ಶಾಂತಿಪುರಾಣ’, ‘ಗದಾಯುದ್ಧ’, ‘ಪಂಚತಂತ್ರ’, ‘ಕರ್ನಾಟಕ ಕಾದಂಬರಿ’ ಮುಂತಾದ ಮಹತ್ವದ ಕನ್ನಡ ಕೃತಿಗಳು ರಚನೆಯಾದದ್ದು ಈ ಪ್ರಾಂತದಲ್ಲಿ.

ಚಾಲುಕ್ಯ ಆಹವಮಲ್ಲ ೧ನೇ ಸೋಮೇಶ್ವರನ ಆಶ್ರಯದಲ್ಲಿದ್ದ ‘ಜಾತಕ ತಿಲಕ’ ಎಂಬ ಮೊಟ್ಟ ಮೊದಲ ಜ್ಯೋತಿಷ್ಯಶಾಸ್ತ್ರವನ್ನು ರಚಿಸಿದ ಶ್ರೀಧರಾಚಾರ್ಯನು, ‘ಲೋಕೋಪಕಾರ’ ಎಂಬ ಜ್ಯೋತಿಷ್ಯ, ವಾಸ್ತು, ವೈದ್ಯ, ಸೂಪಶಾಸ್ತ್ರಕ್ಕೆ ಸಂಬಂಧಿಸಿದ ಕೃತಿಯನ್ನು ರಚಿಸಿದ ಚಾವುಂಡರಾಯ, ಮುಳಗುಂದ (ಧಾರವಾಡ)ದಲ್ಲಿ ಜನಿಸಿದ ‘ಧರ್ಮಾಮೃತ’ದ ನಯಸೇನ, ಪೊಟ್ಟಳಕೆರೆಯಲ್ಲಿ ಜನಿಸಿದ ‘ಸಮಯ ಪರೀಕ್ಷೆ’ ಯ ಬ್ರಹ್ಮಶಿವ (ಪೊಟ್ಟಳಕೆರೆ ಎಂಬುದು ಹೈದರಾಬಾದಿಗೆ ಹತ್ತಿರದ ಪಟ್ಟಣಚೆರವು ಆಗಿದೆ) ಮುಂತಾದ ಮಹತ್ವದ ಕವಿಗಳಿಗೆ ಈ ಪ್ರಾಂತ ನೆಲೆಯಾಗಿದೆ.

ಚಾಳುಕ್ಯ ಅರಸನಾದ ೬ನೇ ವಿಕ್ರಮಾದಿತ್ಯನ ಕಾಲದಲ್ಲಿದ್ದ, ಹಿಂದೂ ನ್ಯಾಯಾಂಗಕ್ಕೆ ಸಂಬಂಧಿಸಿದ ‘ಮಿತಾಕ್ಷರ’ ಎಂಬ ಕೃತಿ ರಚಿಸಿದ ವಿಜ್ಞಾನೇಶ್ವರನು ಹುಟ್ಟಿದ್ದು ಬೀದರ ಜಿಲ್ಲೆಯ ಮಾಸೆಮಡು ಎಂಬ ಊರಿನಲ್ಲಿ. ೬ನೇ ವಿಕ್ರಮಾದಿತ್ಯನು ಜ್ಞಾನೇಶ್ವರನ ಪಾಂಡಿತ್ಯಕ್ಕೆ ಮನ್ನಣೆ ನೀಡಿ ಜಮೀನನ್ನು ನೀಡಿದ ಬಗ್ಗೆ ೧೧೨೪ನೇ ಇಸವಿಯ ಶಾಸನವೊಂದು ಕಲಬುರ್ಗಿ ಸಮೀಪದ ಮರ್ತೂರಿನ ಶಿವ ದೇವಾಲಯದಲ್ಲಿದೆ. ‘ಯಾಜ್ಞವಲ್ಕ ಸ್ಮೃತಿಯನ್ನು ವಿಜ್ಞಾನೇಶ್ವರ ತನ್ನ ‘ಮಿತಾಕ್ಷರ’ ಕೃತಿಯಲ್ಲಿ ವಿಸ್ತಾರವಾಗಿ ವ್ಯಾಖ್ಯಾನಿಸಿದ್ದಾನೆ. ಅದನ್ನು ಪಶ್ಚಿಮ ಬಂಗಾಲ ಬಿಟ್ಟು ಉಳಿದೆಲ್ಲ ರಾಜ್ಯಗಳು ಅಧಿಕೃತವಾಗಿ ಒಪ್ಪಿಕೊಂಡಿವೆ. ಅವಿಭಕ್ತ ಕುಟುಂಬ ಆಸ್ತಿ ಹಕ್ಕು, ಹಿಂದು ಕಾನೂನಿಗೆ ಸಂಬಂಧಿಸಿದ ಸಣ್ಣಪುಟ್ಟಬದಲಾವಣೆ ಹೊರತು ಪಡಿಸಿ ಬಹುಪಾಲು ವಿಷಯದಲ್ಲಿ ಮಿತಾಕ್ಷರವೇ ಈಗಲೂ ಕಾನೂನಾಗಿ ಮುಂದುವರಿದಿದೆ.’[2] ವಿಜ್ಞಾನೇಶ್ವರ ಕಲ್ಯಾಣದಲ್ಲಿದ್ದನು. ಇದೇ ಕಾಲದಲ್ಲಿ ಕಾಶ್ಮೀರದಿಂದ ಬಂದ ಕವಿ ಬಿಲ್ಹಣನು ಕಲ್ಯಾಣದಲ್ಲಿ ಆಶ್ರಯ ಪಡೆದು ‘ವಿಕ್ರಮಾಂಕದೇವ ಚರಿತೆ’ ಎಂಬ ಕೃತಿಯನ್ನು ರಚಿಸಿದನು. ೬ನೇ ವಿಕ್ರಮಾದಿತ್ಯನ ದಂಡನಾಯಕನಾಗಿದ್ದ ಕೊಂಡಗುಳಿ ಕೇಶಿರಾಜ ಪ್ರಮುಖ ಕವಿಯಾಗಿರಬೇಕೆಂದು ಹೇಳುತ್ತಾರೆ. ವಿಕ್ರಮಾದಿತ್ಯನ ಕಾಲದಲ್ಲಿ ಶಾಸನಗಳು ಹೇರಳವಾಗಿ ರಚನೆಯಾದವು. ಅವುಗಳ ಮಾಹಿತಿ, ಬರೆಹ ಕೂಡ ಸಾಹಿತ್ಯ ಹಾಗೂ ಆಕರ ಸಾಮಗ್ರಿಯಾಗಿ ಅನನ್ಯವೆನಿಸಿವೆ. ಇಂಥ ಸಾಂಸ್ಕೃತಿಕ ಚಟುವಟಿಕೆಗಳೆಲ್ಲ ಕಲ್ಯಾಣದಲ್ಲಿ ನಡೆದವು. ಕಲ್ಹಣನ ‘ರಾಜತರಂಗಿಣಿ’ ಎಂಬ ಕೃತಿ ಕಾಶ್ಮೀರದ ಅಧಿಕೃತ ಚರಿತ್ರೆಯ ಆಕರ ಗ್ರಂಥವೆಂದು ಮನ್ನಣೆ ಪಡೆದಿದೆ. ಈ ಕಲ್ಹಣ ಕವಿಯು ಕಲ್ಯಾಣ ಪ್ರಾಂತದ ಕನ್ನಡಿಗರ ಸಂಸ್ಕೃತಿಯನ್ನು ಅಭಿಮಾನದಿಂದ ವ್ಯಕ್ತಪಡಿಸಿದ್ದಾನೆ. ಕಾಶ್ಮೀರದ ಅರಸ ಹರ್ಷನು ಕಲ್ಯಾಣ ಪ್ರಾಂತದ ೬ನೇ ವಿಕ್ರಮಾದಿತ್ಯನ ಕಾಲದ ಜೀವನ ಕ್ರಮಗಳನ್ನು ಅನುಸರಿಸುತ್ತಿದ್ದನೆಂದು ವಿವರಿಸಲಾಗಿದೆ. ಈ ಪ್ರಾಂತದ ಕನ್ನಡಿಗರ ಸಂಸ್ಕೃತಿಯು ಅನ್ಯಪ್ರಾಂತದ ಜನರಿಗೆ ಅನುಕರಣನೀಯವಾಗಿತ್ತು ಎಂಬುದು ಇದರಿಂದ ಗುರುತಿಸಬಹುದು.

೯ನೇ ಶತಮಾನದಿಂದ ೧೧ನೇ ಶತಮಾನದ ನಡುವೆ ರಚನೆಯಾದ ಜೈನ, ಶೈವರ ಕನ್ನಡ ಸಾಹಿತ್ಯಕ್ಕೆ ನೆಲೆಯಾಗಿದ್ದುದು ಈ ಪ್ರಾಂತವೇ. ಪಂಪಪೂರ್ವಯುಗದ ಕವಿಗಳೆಂದು ಕರೆಯಲಾಗುವ ಅಸಗ, ಗುಣನಂದಿ, ಗುಣವರ್ಮ, ಗುಣಭದ್ರಾಚಾರ್ಯ, ಮಹಾವೀರಾಚಾರ್ಯ, ಶಾಕವಾಯನ ಮುಂತಾದ ಪ್ರಾಕೃತ, ಸಂಸ್ಕೃತ ಕವಿಗಳೂ ಈ ಪ್ರಾಂತದವರೇ ಆಗಿದ್ದಾರೆ. ಅಂದರೆ ಈ ಪ್ರಾಂತದಿಂದಲೇ ಸಾಹಿತ್ಯ ಹುಟ್ಟಿ ಬೆಳೆಯಿತು, ಅದರ ಚರಿತ್ರೆ ಆರಂಭವಾಯಿತು ಎಂಬುದು ಮಹತ್ವದ ಸಂಗತಿಯಾಗಿದೆ.

ಈ ಪ್ರಾಂತದಲ್ಲಿ ಈ ಹೊತ್ತಿಗೂ ಹಳ್ಳಿಗಳಲ್ಲಿ ಪ್ರದರ್ಶನಗೊಳ್ಳುವ (ಜನಪದ ಕಲೆ) ದೊಡ್ಡಾಟ ಅಥವಾ ಬಯಲಾಟಗಳನ್ನು ಗಮನಿಸಿದರೆ ೧೦ನೇ ಶತಮಾನದ ಲೌಕಿಕ ಕೃತಿಗಳು ನೆನಪಾಗುತ್ತವೆ. ಹಳ್ಳಿಗಳಲ್ಲಿ ಕಾಣುವ ದೊಡ್ಡಾಟಗಳು ರಾತ್ರಿಯಿಡೀ ನಡೆಯುತ್ತವೆ. ಕಥಾವಸ್ತು, ಪಾತ್ರಗಳ ವೇಷಭೂಷಣ, ಭಾಷಾಶೈಲಿ, ಆರ್ಭಟದ ಕುಣಿತ, ವೀರಾವೇಶ, ಯುದ್ಧಗಳು ಅಂತ್ಯದಲ್ಲಿ ಶಿಷ್ಟರಕ್ಷಣೆ, ದುಷ್ಟ, ನಿಗ್ರಹ, ಧರ್ಮಕ್ಕೆ ಜಯ ಮುಂತಾದ ಅಂಶಗಳಿಂದ ಈ ಬಯಲಾಟಗಳು ‘ಪಂಪ ಭಾರತ’, ‘ಗದಾಯುದ್ಧ’, ‘ಗಿರಿಜಾಕಲ್ಯಾಣ’ ಮುಂತಾದ ಕೃತಿಗಳನ್ನು ಹೋಲುತ್ತವೆ. ಮಹಾಭಾರತವನ್ನು, ಅದರ ಉಪಕಥೆಗಳನ್ನು ಜನಪದರು ದೊಡ್ಡಾಟದಲ್ಲಿ ಅಳವಡಿಸಿಕೊಂಡು ಆಡುತ್ತಿದ್ದರೆಂದು ಕಾಣುತ್ತದೆ. ದೊಡ್ಡಾಟಗಳು ಪ್ರಾಚೀನ ಕಾಲದಿಂದ ಪ್ರಯೋಗದಲ್ಲಿದ್ದವೆಂದು ಜಾನಪದ ತಜ್ಞರು ಹೇಳುತ್ತಾರೆ. ೧೦ನೇ ಶತಮಾನದ ಕವಿಗಳಿಗೆ ವ್ಯಾಸನ ಭಾರತವೇ ಮೂಲವಾದರೂ ಜನಪದರು ಆಡುತ್ತಿದ್ದ ದೊಡ್ಡಾಟಗಳೂ ಪ್ರೇರಣೆ ನೀಡಿವೆ ಎಂದರೆ ಉತ್ಪ್ರೇಕ್ಷೆಯಾದೀತೆ? ಅಥವಾ ೧೦ನೇ ಶತಮಾನದ ಕನ್ನಡ ಮಹಾಭಾರತದ ಕಾವ್ಯಗಳು ಶಿಷ್ಟ ವಲಯದಲ್ಲಿ ಅಥವಾ ಪಂಡಿತ ವಲಯದಲ್ಲಿದ್ದರೆ ಅದಕ್ಕೆ ಪರ್ಯಾಯವಾಗಿ ಜನಪದರು ದೊಡ್ಡಾಟಗಳನ್ನು ಕಟ್ಟಿಕೊಂಡಿರಬಹುದೇ? ನಮಗೆ ನೂರ ಐವತ್ತು ವರ್ಷಗಳ ಈಚೆಗೆ ಸಿಗುವ ದೊಡ್ಡಾಟ-ಬಯಲಾಟಗಳ ಚಿತ್ರವನ್ನು ಗಮನಿಸಿದರೆ ಪ್ರಾಚೀನ ಕಾಲದಿಂದಲೂ ಶಿಷ್ಟ ಸಾಹಿತ್ಯದ ಜತೆ ಜತೆಗೇ ಈ ಜನಪದ ಕಲೆ ಬೆಳೆದು ಬಂದಿದೆ. ಯಾವುದು ಯಾವುದಕ್ಕೆ ಪ್ರೇರಣೆ ಎಂದು ನಿಖರವಾಗಿ ಹೇಳುವುದು ಈಗ ಕಷ್ಟವಾದೀತು. ಪ್ರದರ್ಶನಗೊಳ್ಳುವ ಬಯಲಾಟಗಳು ಕೃತಿ ರೂಪದಲ್ಲಿ ಸಿಗುತ್ತವೆ. ಭೀಮವಿಲಾಸ, ವೀರ ಅಭಿಮನ್ಯು, ಬಬ್ರುವಾಹನ, ದ್ರೌಪದಿ ವಸ್ತ್ರಾಪಹರಣ, ಮಹಿಷಾಸುರ ಮರ್ದಿನಿ, ಮೈರಾವಣ, ಬಾಣಾಸುರ, ಸುಭದ್ರಾ ಕಲ್ಯಾಣ, ಕರ್ಣಾರ್ಜುನ ಕಾಳಗ, ಗಿರಿಜಾಕಲ್ಯಾಣ, ದಕ್ಷಬ್ರಹ್ಮ, ಘಟೋದ್ಗಚ ಮುಂತಾದ ಹೆಸರಿನ ದೊಡ್ಡಾಟಗಳನ್ನು ಈ ಪ್ರಾಂತದಲ್ಲಿ ಮಾತ್ರ ಕಾಣಲು ಸಾಧ್ಯ. ಚಂಪೂ ಕಾವ್ಯಗಳ ಭಾಷಾಶೈಲಿಯಂತೆ ಈ ದೊಡ್ಡಾಟಗಳ ಭಾಷಾಶೈಲಿಯೂ ಗಂಭೀರವಾಗಿರುತ್ತದೆ. ಯುದ್ಧಗಳಿಲ್ಲದ ಬಯಲಾಟಗಳು ಇರುವುದಿಲ್ಲ. ಜನಪದರು ಗಂಭೀರ ಶೈಲಿಯ ಹಳಗನ್ನಡವನ್ನು ಬಾಯಿಪಾಠ ಮಾಡಿ ಅಭಿನಯಿಸುತ್ತಾರೆ. ಇಂಥ ಬಯಲಾಟಗಳು ಪ್ರಾಚೀನ ಕಾಲದಲ್ಲಿಯೂ ಪ್ರಯೋಗದಲ್ಲಿ ಇರುವುದರಿಂದಲೇ ಕವಿರಾಜಮಾರ್ಗಕಾರ ಜನಪದರನ್ನು ಹಾಡಿ ಹೊಗಳಿರಬೇಕು. ೧೨ನೇ ಶತಮಾನದಿಂದ ಈಚೆಗೆ ಶರಣರು, ದಾಸರು, ತತ್ವಪದಕಾರರು, ಶಾಹೀರರು ಮತ್ತು ಇತರರು ಭಕ್ತಿ ಮೂಲವಾಗಿ ರಚಿಸಿದ ಸಾಹಿತ್ಯದ ಜತೆಜತೆಯಲ್ಲಿ ಜನಪದರು ಅದನ್ನೇ ಪ್ರದರ್ಶನ ಕಲೆಯಲ್ಲಿ ವ್ಯಕ್ತಪಡಿಸಿದ್ದಾರೆ. ದೊಡ್ಡಾಟದ ಬದಲಿಗೆ ಮಧ್ಯಕಾಲಾವಧಿಯಲ್ಲಿ ಸಣ್ಣಾಟಗಳು ಪ್ರಯೋಗವಾಗುತ್ತಿದ್ದವು. ಹರಿಹರನ ಕಥಾನಾಯಕರು, ಭಾಗವತರ ಕೃಷ್ಣ, ಪುರಾಣಗಳ ನಾಯಕ-ನಾಯಕಿಯರ ಕಥಾನಕಗಳು ಸಣ್ಣಾಟಗಳಲ್ಲಿ ರೂಪಾಂತರ ಪಡೆದು ರಂಗದ ಮೇಲೆ ಪ್ರಯೋಗವಾಗುತ್ತಿದ್ದವು. ತಿರುನೀಲಕಂಠ, ಅರಬರಾಟ, ಭೂಕೈಲಾಸ, ಚಿತ್ರಕೇತು, ಬಸವೇಶ, ಪುರಂದರ, ರಾಧಾನಾಟ, ಕಬೀರ, ಹೇಮರೆಡ್ಡಿ ಮಲ್ಲಮ್ಮ, ಎಲ್ಲಮ್ಮ ಮುಂತಾದ ಸಣ್ಣಾಟಗಳು ಮಧ್ಯಕಾಲದಿಂದ ಪ್ರಯೋಗದಲ್ಲಿದ್ದವೆಂದು ಕಾಣುತ್ತದೆ. ಕವಿಗಳ ಸಾಹಿತ್ಯ ರಚನೆ ಒಂದು ಕಡೆಗಿದ್ದರೆ, ಅದರ ರಂಗ ಪ್ರಯೋಗ ಜತೆಯಲ್ಲಿ ಸೃಷ್ಟಿಯಾಗಿದೆ. ಯಾವುದು ಯಾವುದಕ್ಕೆ ಪ್ರೇರಣೆ ಎಂಬುದಕ್ಕಿಂತ ಅವು ಜತೆಜತೆಗೆ ಸೃಷ್ಟಿಯಾಗುತ್ತಿದ್ದವು ಎಂಬುದೇ ಉಚಿತವಾಗಿ ಕಾಣುತ್ತದೆ.

ವಚನ ಚಳುವಳಿ

ಕಲ್ಯಾಣ ಚಾಲುಕ್ಯರನ್ನು ಬದಿಗೊತ್ತಿ ಕಲಚೂರ್ಯರು (೧೧೬೩-೧೧೮೪) ಅಧಿಕಾರಕ್ಕೆ ಬಂದರು. ಕಲ್ಯಾಣವನ್ನೇ ರಾಜಧಾನಿಯನ್ನಾಗಿ ಮಾಡಿಕೊಂಡು ಕೇವಲ ೨೨ ವರ್ಷಗಳ ಕಾಲ ಆಳಿದರು. ಈ ಮನೆತನದ ಬಿಜ್ಜಳನ ಆಳ್ವಿಕೆಯ ಕಾಲದಲ್ಲಿ ನಡೆದ ಸಾಂಸ್ಕೃತಿಕ ಸಂಘರ್ಷಗಳು, ಅದರಿಂದಾದ ಪರಿವರ್ತನೆ, ಪರಿಣಾಮಗಳಿಂದ ಮಧ್ಯಯುಗದ ಕರ್ನಾಟಕ ಚರಿತ್ರೆಯನ್ನು ಅನನ್ಯವಾಗಿಸಿದೆ. ಬಿಜ್ಜಳನ ಮಂತ್ರಿಯಾಗಿದ್ದ ಬಸವಣ್ಣನ ಮುಂದಾಳುತನದಲ್ಲಿ ಹೊಸ ಧಾರ್ಮಿಕ ಜೀವನ ಕ್ರಮವೊಂದು ರಚನೆಯಾಯಿತು. ಅದನ್ನು ಲಿಂಗಾಯುತ ಅಥವಾ ವೀರಶೈವಧರ್ಮ ಎಂದು ಕರೆಯಲಾಗಿದೆ. ಈ ಹೊಸ ಧರ್ಮಕ್ಕೆ ಕೈ ಜೋಡಿಸಿ ಬಲಪಡಿಸಿದ ಜನಸಮುದಾಯವನ್ನು ‘ಶರಣರು’ ಎಂದು ಕರೆಯಲಾಗುತ್ತಿದೆ. ಈ ಶರಣರು ಒಟ್ಟುಗೂಡಿ ಒಂದು ಚಳುವಳಿಯನ್ನು ರೂಪಿಸಿದರು. ಚಳುವಳಿಯ ಭಾಗವಾಗಿ ವಚನಗಳನ್ನೂ ಕಟ್ಟಿದರು. ಈ ವಚನಗಳು ರಚನೆಯ ದೃಷ್ಟಿಯಿಂದ, ಭಾಷೆ, ಆಲೋಚನೆ ಮತ್ತು ತಾತ್ವಿಕವಾಗಿ ಹೊಸ ಪರಂಪರೆಯನ್ನೇ ಸೃಷ್ಟಿಸಿದವು. ಈ ಶರಣರು ನಡೆಸಿದ ಸಾಂಸ್ಕೃತಿಕ ಆಂದೋಲನದಿಂದ ಹುಟ್ಟಿಕೊಂಡ ಜಾತ್ಯಾತೀತ ಸಮಾಜವಾಗಲಿ, ಹೊಸ ಧಾರ್ಮಿಕ ಜೀವನ ಕ್ರಮವಾಗಲಿ ಅವುಗಳ ಮೂಲ ತಾತ್ವಿಕತೆಯಿಂದ ಈಗ ಛಿದ್ರಗೊಂಡಿದ್ದರೂ ಕೂಡ, ಶರಣರು ನಡೆಸಿದ ಸಾಂಸ್ಕೃತಿಕ ಸಂಘರ್ಷಗಳ ಸಂವಾದದಂತಿರುವ ವಚನಗಳು ಮಾತ್ರ ಉಳಿದು ಇಂದಿನವರೆಗೂ ಪ್ರಜ್ಞಾವಂತರನ್ನು ಕಾಡುತ್ತಿವೆ. ಹೊಸಹೊಸ ಚಿಂತನೆಗೆ ದಾರಿಮಾಡಿಕೊಡುತ್ತಿವೆ. ಹೊಸ ಸಾಹಿತ್ಯದ ರಚನೆಗೆ ಪ್ರೇರಣೆ ನೀಡುವಷ್ಟು ಶಕ್ತಿಯನ್ನು ಉಳಿಸಿಕೊಂಡಿವೆ.

೧೨ನೇ ಶತಮಾನದ ಹೊತ್ತಿಗಾಗಲೇ ಕರ್ನಾಟಕದ ಬೌದ್ಧಧರ್ಮ ಕಣ್ಮರೆಯಾಗಿ ಹೋಗಿತ್ತು. ಜೈನಧರ್ಮ ಪ್ರಬಲವಾಗಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಉಳಿದಿತ್ತು. ವೈದಿಕ ಧರ್ಮ ಕಾಲಕಾಲಕ್ಕೆ ಪುನರ್ ಸೃಷ್ಟಿಗೊಳ್ಳುತ್ತ ಪ್ರಬಲವಾಗಿಯೇ ಇತ್ತು. ಈ ಶತಮಾನದ ಕಾಲಾವಧಿಯಲ್ಲಿ ಜೈನಧರ್ಮ ಅತಿಯಾದ ಅಹಿಂಸೆ, ಅದರ ಕಟ್ಟುನಿಟ್ಟಿನ ಜೀವನ ಕ್ರಮ ಮತ್ತು ಮಹಿಳೆಯನ್ನು ಕಡೆಗಣಿಸಿದ್ದು, ಕೆಳವರ್ಗಗಳನ್ನು ಗಣನೆಗೆ ತೆಗೆದುಕೊಳ್ಳಲಾರದ್ದು ಇಂತಹ ಗುಣಗಳಿಂದ ಜನ ಸಾಮಾನ್ಯರಿಗೆ ದೂರವಾಗಿತ್ತು. ಅದು ಒಂದು ಕಡೆ ವಾಣಿಜ್ಯ ಮನೋಭಾವದಿಂದ, ಇನ್ನೊಂದು ಕಡೆ ಅತಿಯಾದ ಧಾರ್ಮಿಕ ನೀತಿ-ನಿಯಮಗಳಿಂದ ಸಮಾಜದಲ್ಲಿ ವೈರುಧ್ಯವನ್ನು ಸೃಷ್ಟಿಮಾಡಿಕೊಂಡಿತ್ತು. ವೈದಿಕ ಧರ್ಮವು ವರ್ಣಾಶ್ರಮ ಪದ್ಧತಿಯನ್ನು ಅನುಸರಿಸುವ ಮೂಲಕ ದುಡಿವ ವರ್ಗವನ್ನು ಕೀಳಾಗಿ ಕಂಡಿತ್ತು. ದೇವಾಲಯಗಳು, ಅಧಿಕ್ಕೆ ಹೊಂದಿಕೊಂಡ ಮಠಮಾನ್ಯಗಳು ಸಂಪದ್ಭರಿತವಾಗಿ ಸಮಾಜದಲ್ಲಿ ಅಧಿಕಾರವನ್ನು ತಮ್ಮಲ್ಲಿಟ್ಟುಕೊಂಡಿದ್ದವು. ೭-೮ನೇ ಶತಮಾನದದಿಂದಲೇ ಹುಟ್ಟಿಕೊಂಡ ಭೂಮಾಲೀಕರು ೯-೧೦ನೇ ಶತಮಾನದ ಹೊತ್ತಿಗೆ ಪ್ರಭುತ್ವ ಮತ್ತು ಸಮಾಜದ ನಡುವೆ ಮಧ್ಯವರ್ತಿಗಳಾಗಿ ಪ್ರಬಲರಾಗಿದ್ದರು. ೧೨ನೇ ಶತಮಾನದ ಹೊತ್ತಿಗಾಗಲೇ ಈ ಪುರೋಹಿತ ಶಾಹಿ ಶಕ್ತಿ, ಭೂಮಾಲೀಕತ್ವದ ಶಕ್ತಿಗಳು ಸೇರಿಕೊಂಡು ದುಡಿವ ವರ್ಗವನ್ನು ಮತ್ತು ಕಸುಬುದಾರರನ್ನು ಶೋಷಣೆಗೆ ಗುರುಮಾಡಿದ್ದವು. ದೇವಸ್ಥಾನ ವ್ಯವಸ್ಥೆಯು ಕಸುಬುದಾರರನ್ನು ಸುಲಿಯುತ್ತಿತ್ತು. ಮಧ್ಯವರ್ತಿ ಭೂಮಾಲೀಕ ವ್ಯವಸ್ಥೆಯು ರೈತರನ್ನು, ದುಡಿವ ವರ್ಗವನ್ನು ಸುಲಿಯುತ್ತಿತ್ತು. ಇದರಿಂದ ಬೇಸತ್ತ ದುಡಿವ ವರ್ಗವಾದ ರೈತರು, ಕಸುಬುದಾರರು ವೀರಶೈವ ಧರ್ಮಕ್ಕೆ ಬೆಂಬಲವಿತ್ತು ಸೇರಿಕೊಂಡರು. ಚರಿತ್ರೆಕಾರರಾದ ಆರ್.ಎನ್. ನಂದಿಯವರು, ‘ನೇಕಾರರು, ಸಿಂಪಿಗರು ಮತ್ತು ಗಾಣಿಗರು ಪುರೋಹಿತ ಮಧ್ಯವರ್ತಿಗಳು ಮತ್ತು ರಾಜ್ಯದ ರಾಜರುಗಳ ಶೋಷಣೆಯಿಂದ, ಅತಿಯಾದ ಕಂದಾಯ ವಸೂಲಿಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವೀರಶೈವ ಚಳುವಳಿಯನ್ನು ಸೇರಿದರು’[3] ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅವರು ಮುಂದುವರಿದು, ‘೧೦-೧೩ರ ಶತಮಾನಗಳಲ್ಲಿ ವಾಣಿಜ್ಯ ಮತ್ತು ಹಣಕಾಸಿನ ಆರ್ಥಿಕ ಪರಿಸ್ಥಿತಿಯ ಏಳಿಗೆಯಿಂದ ಅನೇಕ ಉತ್ಪಾದಕರಿಗೆ, ಕಸಬುದಾರರಿಗೆ ಮತ್ತು ವರ್ತಕರಿಗೆ ಬಹಳ ಲಾಭವಾಗಿತ್ತು. ಆದರೆ ಪರಂಪರಾನುಗತ ಮಧ್ಯವರ್ತಿಗಳನ್ನು ಬೆಳೆಸಿದ್ದು ಇದರ ಬೆಳವಣಿಗೆಗೆ ಮಾರಕವೆನಿಸಿತು. ಭೂಮಾಲೀಕರು ರೈತರನ್ನು ಮತ್ತು ಕಾರ್ಮಿಕರನ್ನು ಶೋಷಿಸುತ್ತಿದ್ದಲ್ಲದೆ, ವ್ಯವಸಾಯದ ಬೆಳೆಗಳನ್ನು ಮತ್ತು ಉತ್ಪನ್ನಗಳನ್ನು ತಮ್ಮ ಇಚ್ಛಾನುಸಾರಿಯಾಗಿ ಅಧೀನಕ್ಕೊಳಪಡಿಸಿಕೊಳ್ಳುತ್ತಿದ್ದರು. ಇಲ್ಲವೆ ಬೇರೆ ಉದ್ದೇಶಗಳಿಗಾಗಿ ಬಳಸುತ್ತಿದ್ದರು. ವ್ಯಾಪಾರಿ ಹಾಗೂ ಉತ್ಪಾದಕ ವರ್ಗಗಳ ಹಿತಾಸಕ್ತಿಯನ್ನು ಬಲಿತೆಗೆದು ಕೊಂಡಿತು. ವ್ಯವಸಾಯಗಾರರನ್ನು, ಕಾರ್ಮಿಕರನ್ನು ಅಧೀನಕ್ಕೆ ಒಳಪಡಿಸಿದ ದೇವಸ್ಥಾನಗಳು ಮತ್ತು ಇದನ್ನು ಬೆಂಬಲಿಸಿದ ಸಂಪ್ರದಾಯ ಬ್ರಾಹ್ಮಣತ್ವವು ಬಹಳಷ್ಟು ಜನ ವರ್ತಕರ, ಉತ್ಪಾದಕರ, ಕಸುಬುದಾರರ ಅತೃಪ್ತಿಗೆ ಅಸಮಾಧಾನಕ್ಕೆ ಕಾರಣವಾದವು.’[4] ಇವರೆಲ್ಲರು ತಮ್ಮ ಮೂಲ ಸಮಾಜವನ್ನು ತೊರೆದು ಅದೇ ತಾನೇ ಸಂಘಟಿತವಾಗುತ್ತಿದ್ದ ವೀರಶೈವ ಸಮಾಜದೊಂದಿಗೆ ಗುರುತಿಸಿಕೊಂಡರು. ಇದನ್ನು ಗಮನಿಸಿದರೆ, ವಾಣಿಜ್ಯ ಚಟುವಟಿಕೆಗಳಲ್ಲಿ ಮುಂದಿದ್ದ ಜೈನರೂ ವೀರಶೈವ ಧರ್ಮಕ್ಕೆ ಸೇರಿಕೊಂಡಿರುವ ಸಾಧ್ಯತೆಗಳಿವೆ. ಯಾಕೆಂದರೆ ಈ ಹೊತ್ತಿನ ಸಾದರ ಲಿಂಗಾಯತರು ಒಂದು ಕಾಲದಲ್ಲಿ ಜೈನರಾಗಿದ್ದರು ಎಂಬ ಅಭಿಪ್ರಾಯವೂ ಇದೆ. ಶರಣರಲ್ಲಿ ಅನೇಕ ಬಗೆಯ ಕಸುಬುದಾರರು ಇರುವುದನ್ನು ಕಾಣುತ್ತೇವೆ. ಶೋಷಣೆಗೆ ಒಳಗಾಗುತ್ತಿದ್ದ ಅಂದಿನ ಜನ ವರ್ಗವು ವೀರಶೈವ ಧರ್ಮಕ್ಕೆ ಸೇರಿ ಬೆಂಬಲಿಸಿದರು. ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು ಮುಂತಾದ ಮಹತ್ವದ ಶರಣರು ಕರ್ನಾಟಕದಲ್ಲಿ ಅದರಲ್ಲೂ ಬಸವಕಲ್ಯಾಣವನ್ನು ಕೇಂದ್ರಮಾಡಿಕೊಂಡು ಹೊಸ ಜೀವನ ಕ್ರಮ ಒಂದನ್ನು ರೂಪಿಸಲು ಶ್ರಮಿಸಿದರು. ಅದು ಭಾರತೀಯ ಭಕ್ತಿ ಚಳುವಳಿಗಳಲ್ಲಿಯೂ ಪ್ರಮುಖವಾಯಿತು.

ಶೈವಧರ್ಮದ ಲಕುಲೀಶ, ಪಾಶುಪತ ಎಂಬ ಪಂಥಗಳು ಕರ್ನಾಟಕದಲ್ಲಿ ಅದರಲ್ಲೂ ಮಧ್ಯ ಯುಗದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದವು. ಬಸವಣ್ಣ ತನ್ನ ಮೂಲ ಧರ್ಮವನ್ನು ತೊರೆದು ವೀರಶೈವ ಧರ್ಮಕ್ಕೆ ಚಾಲನೆ ನೀಡಿದರು. ಬಸವಣ್ಣನ ಗುರು ಈಶಾನ್ಯರು ಪಾಶುಪತಕ್ಕೆ ಸೇರಿದವರೆಂದು ಹೇಳಲಾಗುತ್ತದೆ. ಬಸವಣ್ಣನ ಮುಂದಾಳು ತನದಲ್ಲಿ ಒಂದುಗೂಡಿದ ಜನ ಸಮುದಾಯಕ್ಕೆ ‘ವೀರಶೈವರು’ ಎಂದು ಕರೆಯಲಾಗುತ್ತದೆ. ವ್ಯಾಪಾರಸ್ಥರು, ಕಸುಬುದಾರರು, ರೈತರು, ದುಡಿವ ಕೆಲವರ್ಗಗಳು ವೀರಶೈವ ಧರ್ಮಕ್ಕೆ ಸೇರಿಕೊಂಡು ಸಾಂಸ್ಕೃತಿಕವಾಗಿ ಸಮಾಜವನ್ನು ಪರಿವರ್ತಿಸಿ,ಹೊಸ ಸ್ವರೂಪವನ್ನು ಕೊಡಲು ಶ್ರಮಿಸಿದರು. ಜಾತಿಯನ್ನು ಖಂಡಿಸಿ ನಿರಾಕರಿಸಿದರು. ಪ್ರತಿಯೊಬ್ಬನಿಗೂ ದುಡಿಮೆಯನ್ನು ಕಡ್ಡಾಯ ಮಾಡಿದರು. ವೃತ್ತಿ ಆಧಾರಿತ ದುಡಿಮೆಯಲ್ಲಿ ಸಮಾನ ಸ್ಥಾನವನ್ನು ಪ್ರಜ್ಞಾಪೂರ್ವಕವಾಗಿ ನೀಡಿದರು. ದುಡಿಮೆಯಲ್ಲಿ ಪ್ರಾಮಾಣಿಕತೆಗೆ ಹೆಚ್ಚಿನ ಒತ್ತು ಕೊಟ್ಟರು. ‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ಪ್ರತಿಪಾದಿಸಿದರು. ದೇವಾಲಯಗಳನ್ನು ನಿರಾಕರಿಸಿದರು. ಸ್ತ್ರೀಯರಿಗೆ ಸಾಂಸ್ಕೃತಿಕವಾಗಿ ಮಹತ್ವದ ಸ್ಥಾನವನ್ನು ಕಲ್ಪಿಸಿದರು. ಇದನ್ನು ಬಳಸಿಕೊಂಡ ಮಹಿಳೆಯರು ತಮ್ಮ ಪ್ರತಿಭೆಯನ್ನು ಈ ಚಳುವಳಿಗೆ ನೀಡಿ ಬಲಪಡಿಸಿದರು. ಈ ಚಳುವಳಿಯಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸಿದ ಜನವರ್ಗವು ತಮ್ಮ ತಮ್ಮ ಭಿನ್ನ ತಾತ್ವಿಕ ನಿಲುವುಗಳನ್ನು ವ್ಯಕ್ತಪಡಿಸುವ ಅವಕಾಶವನ್ನು ಪಡೆಯಿತು ಮತ್ತು ಭಿನ್ನ ತಾತ್ವಿಕ ನಿಲುವುಗಳನ್ನು ಗೌರವಿಸುವಂತೆ ಬೆಳೆಯಿತು. ಹೊಸ ಧಾರ್ಮಿಕ ಜೀವನ ಕ್ರಮದ ರಚನೆಗೆ ಅನೇಕ ಪ್ರಯೋಗಗಳನ್ನು ಮಾಡಿತು. ಸಮಾಜದಲ್ಲಿ ‘ಜಾತ್ಯಾತೀತ’ ಬದುಕು ಕಾಣಿಸಿದಂತೆ ಕಂಡಿತು. ಇದನ್ನು ಸಹಿಸದ ಮೂಲಭೂತವಾದಿಗಳು, ಅವರನ್ನು ನಂಬಿದ್ದ ಪ್ರಭುತ್ವವು ಶರಣರ ಹೊಸ ಬದುಕನ್ನು ಅನುಮಾನದಿಂದ ನೋಡುತ್ತ ಕೊನೆಗೆ ವಿರೋಧಿಸತೊಡಗಿತು. ಶರಣರು ಜಾತಿ ನಿರ್ಮೂಲನದ ಪ್ರಯೋಗವೆಂಬಂತೆ ಬ್ರಾಹ್ಮಣ ಮಧುವರಸನ ಮಗಳಿಗೂ, ಹೊಲೆ ಯರ ಹರಳಯ್ಯನ ಮಗನಿಗೂ ಮದುವೆ ಮಾಡಲು ನಡೆಸಿದ ಪ್ರಯತ್ನವು ದುರಂತದಲ್ಲಿ ಕೊನೆಯಾಯಿತು. ಪ್ರಭುತ್ವಕ್ಕೂ ಮತ್ತು ಶರಣರಿಗೂ ಸಂಘರ್ಷಗಳು ನಡೆದು ರಕ್ತಪಾತದಲ್ಲಿ ಮುಕ್ತಾಯವಾಯಿತು. ಮನುಷ್ಯ ಮನುಷ್ಯರ ನಡುವೆ ‘ಸಮಾನ ಬಾಳು’ ಸೃಷ್ಟಿಸಲು ನಡೆದ ಪ್ರಯತ್ನವು ರಕ್ತಪಾತದಲ್ಲಿ ಛಿದ್ರವಾದದ್ದು ಕರ್ನಾಟಕದಲ್ಲಿ ಮೊದಲನೆಯದಿರಬೇಕು. ಈ ಪ್ರಾಂತದ ಬಸವಕಲ್ಯಾಣದಲ್ಲಿ ನಡೆದ ಈ ಸಾಂಸ್ಕೃತಿಕ ಸಂಘರ್ಷವು ಯುದ್ಧದ ರೀತಿಯಲ್ಲಿ ನಡೆದು ಶರಣರು ನೆಲೆ ಕಳೆದುಕೊಂಡರು. ಅವರು ಕಟ್ಟಬಯಸಿದ ಸಮಾಜವು ಪುನಃ ಜಾತಿಯಿಂದ ಬೆಳೆಯಿತು. ಆದರೆ ವಚನಕಾರರ ಚಿಂತನೆಗಳು ಅವರ ವಚನಗಳಲ್ಲಿ ವ್ಯಕ್ತವಾಗಿವೆ. ಅವು ಯಾವತ್ತೂ ಸಮಾಜದ ಪರಿವರ್ತನೆಗೆ ಶಕ್ತಿಯನ್ನು ನೀಡುವಷ್ಟು ಶಕ್ತವಾಗಿವೆ. ಬಸವ, ಅಲ್ಲಮ, ಅಕ್ಕಮಹಾದೇವಿ, ಸಿದ್ಧರಾಮ, ಮುಕ್ತಾಯಕ್ಕ, ಚೆನ್ನಬಸವಣ್ಣನವರಂತೂ ಸರಿಯೇ. ಅಂಬಿಗರ ಚೌಡಯ್ಯ, ನುಲಿಯ ಚಂದ್ರಯ್ಯ, ಮೋಳಿಗೆ ಮಾರಯ್ಯ, ಆಯ್ದಕ್ಕಿ ಮಾರಯ್ಯ, ಘಟ್ಟಿವಾಳಯ್ಯ, ಢಕ್ಕೆಯ ಬೊಮ್ಮಣ್ಣ, ಡೋಹರ ಕಕ್ಕಯ್ಯ, ಊರಿಲಿಂಗ ಪೆದ್ದಿ, ಸೂಳೆ ಸಂಕವ್ವೆ ಮುಂತಾದ ಸುಮಾರು ಮುನ್ನೂರು ವಚನಕಾರರು-ವಚನಕಾರ್ತಿಯರು ಬೇರೆ ಬೇರೆ ವರ್ಗಕ್ಕೆ, ಜಾತಿಗೆ ಸೇರಿದವರು ಈ ಚಳುವಳಿಯಲ್ಲಿದ್ದು ಈ ಪ್ರಾಂತದಲ್ಲಿ ಕಾಣಿಸಿಕೊಂಡಿದ್ದಾರೆ.

ವಚನಕಾರರು ಅಂದಿನ ದಿನಮಾನಗಳಲ್ಲಿ ಪ್ರಬಲವಾಗಿದ್ದ ವೈದಿಕ, ಜೈನಧರ್ಮಗಳನ್ನು ಎದುರಿಸಲು ಭಕ್ತಿ, ದಾಸೋಹ, ಜಾತಿ ನಿರಸನ ಮತ್ತು ದೇವಾಲಯ ನಿರಾಕರಣೆ ಎಂಬ ತತ್ವಗಳನ್ನು ಪರ್ಯಾಯವಾಗಿ ರಚಿಸಿದರು. ಜನಸಮುದಾಯಗಳ ಸಂಸ್ಕೃತಿ ಮೇಲೆ ದಾಳಿ ಮಾಡುತ್ತಿರುವ ಜಾಗತೀಕರಣವನ್ನು ಎದುರಿಸಲು ಪರ್ಯಾಯಗಳನ್ನು ರಚಿಸಿಕೊಳ್ಳುವ ಅಗತ್ಯವಿದೆ. ಪರ್ಯಾಯಗಳಿಲ್ಲದೆ ಬರೀ ವಿರೋಧಿಸುವುದು ಫಲನೀಡುವುದಿಲ್ಲ. ೧೩ನೇ ಶತಮಾನದಿಂದ ಈ ಪ್ರಾಂತದಲ್ಲಿ ರಾಜಕೀಯ ಸ್ಥಿತ್ಯಂತರಗಳು ನಡೆದು ಸಮಾಜದಲ್ಲಿ ಬಿಕ್ಕಟ್ಟುಗಳು ತಲೆದೋರಿದಾಗ ದಾಸರು, ತತ್ವಪದಕಾರರೂ ಕೂಡ ಪರ್ಯಾಯ ತತ್ವಗಳನ್ನು ರೂಪಿಸಿದರು. ಅವು ಸಾಂಸ್ಕೃತಿಕ ಬದಲಾವಣೆಗೆ ಕಾರಣವಾದವು.

೫-೬ನೇ ಶತಮಾನದಲ್ಲಿ ಮೌಖಿಕವಾಗಿದ್ದ ಕನ್ನಡ ಭಾಷೆ ಲಿಖಿತಕ್ಕೆ ಬಂದಿತ್ತಷ್ಟೆ. ಶಾಸನಗಳಿಗೆ ಕನ್ನಡ ಭಾಷೆ ಬಳಕೆಯಾಗುತ್ತ ನಂತರ ೮ನೇ ಶತಮಾನದಿಂದ ಸಾಹಿತ್ಯಕ್ಕೆ ಬಳಸಲಾಯಿತು. ಇದರಿಂದ ಕನ್ನಡ ಭಾಷೆ ಲಿಖಿತ ಪರಂಪರೆಗೂ ಸೇರಿತ್ತು. ಅದು ಜೈನರ ಕನ್ನಡ ಸಾಹಿತ್ಯದಲ್ಲಿ ಪ್ರಬುದ್ಧವಾಗಿ ಬೆಳೆಯಿತು. ಪುನಃ ೧೨ನೇ ಶತಮಾನದಲ್ಲಿ ವಚನಕಾರರಿಂದ ಕನ್ನಡ ಭಾಷೆ ಮೌಖಿಕವಾಗಿಯೂ ಮುಂದುವರಿಯಿತು. ಈ ಮೌಖಿಕ ಸಾಹಿತ್ಯ ಪರಂಪರೆ ಬಲವಾಗಿ ಬೆಳೆಯಿತು. ವಚನಕಾರರ ನಂತರ ದಾಸರು, ತತ್ವಪದಕಾರರು, ಲಾವಣಿಕಾರರು, ಶಾಹೀರರು ಈ ಪರಂಪರೆಗೆ ಸೇರಿದವರಾಗಿದ್ದಾರೆ. ಇವರೆಲ್ಲ ರಾಜಾಶ್ರಯದಿಂದ ದೂರವಿದ್ದು, ಜನಸಾಮನ್ಯರ ಆಶ್ರಯದಲ್ಲಿ ಬೆಳೆದವರಾಗಿದ್ದಾರೆ.

ಉತ್ತರ ಭಾರತದ ಅರಸರ ಸೈನಿಕ ದಾಳಿಗಳು

೧೩ನೇ ಶತಮಾನದಿಂದ ಕರ್ನಾಟಕದ ಉತ್ತರ ಭಾಗದಲ್ಲಿ ಸೇವುಣರು, ದಕ್ಷಿಣದಲ್ಲಿ ಹೊಯ್ಸಳರು ಅಧಿಕಾರಕ್ಕೆ ಬಂದರು. ಇವರು ಸೇರಿದಂತೆ ದಕ್ಷಿಣ ಭಾರತದಲ್ಲಿ ಕಾಕತೀಯರು, ಚೋಳರು, ಪಾಂಡ್ಯರು ೧೩-೧೪ನೇ ಶತಮಾನದವರೆಗೆ ಆಳಿದರು. ಇವರೆಲ್ಲರ ನಡುವೆ ಯುದ್ಧಗಳು ನಿರಂತರವಾಗಿ ನಡೆದಿದ್ದವು. ಈ ಪ್ರಾಂತದಲ್ಲಿ ಯುದ್ಧಗಳು ೧೩ನೇ ಶತಮಾನದಿಂದ ಹೆಚ್ಚಾಗತೊಡಗಿದವು. ದಖನ್ ಪ್ರಾಂತದಲ್ಲಿಯೇ ನಾಲ್ಕು-ಐದು ರಾಜಮನೆತನಗಳು ಅಧಿಕಾರಕ್ಕಾಗಿ, ಆಳ್ವಿಕೆಗಾಗಿ ನಡೆಸಿದ ಸಂಘರ್ಷಗಳ ಫಲವಾಗಿ ಈ ಯುದ್ಧಗಳು ಸಂಭವಿಸತೊಡಗಿದ್ದವು. ಇದನ್ನು ಗಮನಿಸುತ್ತಿದ್ದ ಉತ್ತರ ಭಾರತದ ಅರಸರಿಗೆ ರಾಜ್ಯ ವಿಸ್ತರಣೆಯ ದಾಹಕ್ಕೆ ಬಲಬಂದಿತು. ಉತ್ತರ ಭಾರತದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯೇನೂ ಇನ್ನೂ ದೆಹಲಿ ಸಿಂಹಾಸನವನ್ನು ಹಿಡಿದಿರಲಿಲ್ಲ. ಅವನಿಗೆ ಸಂಪತ್ತಿನ ಅಗತ್ಯವಿತ್ತು. ಮೊದಲಸಲ ೧೨೯೬ರಲ್ಲಿ ಸೇವುಣರ ಮೇಲೆ ದಾಳಿ ಮಾಡಿದ. ಇಲ್ಲಿಂದ ದಕ್ಷಿಣ ಭಾರತದ ಮೇಲೆ ಅದರಲ್ಲೂ ಕರ್ನಾಟಕದ ಉತ್ತರ ಭಾಗದ ಮೇಲೆ ಸೈನಿಕ ದಾಳಿಗಳು ಆರಂಭವಾದವು. ಸೇವುಣರ ರಾಮಚಂದ್ರನ ದೇವಗಿರಿ ಅಲ್ಲಾವುದ್ದೀನನ ಹಿಡಿತಕ್ಕೆ ಬಂದಾಗ ವಾರ್ಷಿಕ ಕಾಣಿಕೆಯನ್ನು ಕೊಡಲು ರಾಮಚಂದ್ರ ಒಪ್ಪಿದ. ಈ ಒಪ್ಪಂದದ ಪ್ರಕಾರ, ‘೬೦೦ ಮಣ ಮುತ್ತುಗಳು, ೨ ಮಣ ವಜ್ರಗಳು, ೧೦೦ ಮಣ ಬೆಳ್ಳಿ ಮತ್ತು ೪೦೦೦ ರೇಷ್ಮೆ ವಸ್ತ್ರಗಳು ಇವುಗಳನ್ನು ರಾಮಚಂದ್ರನು ಅಲ್ಲಾವುದ್ದೀನನಿಗೆ ಒಪ್ಪಿಸಿದನು.’[5] ಇದರ ಜತೆಗೆ ಎಲಿಚ ಪುರದ ವಾರ್ಷಿಕ ಆದಾಯವನ್ನು ಕೊಡಲು ಒಪ್ಪಲಾಯಿತು. ಜೊತೆಗೆ ಖಿಲ್ಜಿಯ ಸೈನ್ಯದ ತುಕಡಿಯೊಂದು ರಾಜ್ಯದಲ್ಲಿ ನೆಲಿಯೂರಿತು. ಸೇವುಣ ರಾಜ್ಯದಿಂದ ಪಡೆದ ಅಪಾರ ಸಂಪತ್ತಿನ ಸಹಾಯದಿಂದಲೇ ಅಲ್ಲಾ ಉದ್ದೀನ್ ಖಿಲ್ಜಿ ದೆಹಲಿಯ ಸಿಂಹಾಸನವನ್ನು ಏರಿದ್ದು ಎಂದು ಇತಿಹಾಸದಿಂದ ತಿಳಿಯುತ್ತದೆ. ಖಿಲ್ಜಿ ಇಷ್ಟರಿಂದಲೇ ತೃಪ್ತನಾಗದೆ ದೇವಗಿರಿಯ ಮೇಲೆ ಆಕ್ರಮಣ ಮಾಡುವುದನ್ನು ಮೇಲಿಂದ ಮೇಲೆ ನಡೆಸಿದ. ಸೇವುಣರು ಅಪಾರ ಸಂಪತ್ತುಳ್ಳವರಾಗಿದ್ದರು ಎಂದು ಮುಸ್ಲಿಮ್ ಚರಿತ್ರೆಗಾರರ ಬರಹಗಳು ತಿಳಿಸುತ್ತವೆ. ಪೂರ್ವಕಾಲದಿಂದಲೂ ಕೃಷ್ಣಾ-ಗೋದಾವರಿ (-ನರ್ಮದಾ) ನಡುವಣ ಪ್ರದೇಶವು ಸೇವುಣರ ಅಧೀನದಲ್ಲಿತ್ತು. ನೈಸರ್ಗಿಕವಾಗಿ ಸಂಪದ್ಭರಿತವಾಗಿತ್ತು. ‘ಕಬ್ಬು, ಕದಂಬಕ, ತೆಂಗು, ಅಡಿಕೆ, ನಿಂಬೆ, ಹಲಸು, ಸೇಬು, ಕಿತ್ತಳೆ, ಲವಂಗ, ವಿಳ್ಳೇದೆಲೆ, ಸುರಹೊನ್ನೆ, ಪಾರಿಜಾತ, ಪುನ್ನಾ ಮುಂತಾದವುಗಳನ್ನು ಹೇರಳವಾಗಿ ಬೆಳೆಯುತ್ತಿದ್ದರು.’[6] ರೇಷ್ಮೆ ಬಟ್ಟೆಗಳಿಗೆ ಸೇವುಣರ ರಾಜ್ಯ ಹೆಸರು ಗಳಿಸಿತ್ತು. ಆಭರಣಗಳನ್ನು ತಯಾರಿಸುವ ಕಲೆಯಲ್ಲಿ ಪರಿಣಿತರಾಗಿದ್ದರೆಂದು, ವಿದೇಶಿ ಪ್ರವಾಸಿಗರು ಉಲ್ಲೇಖಿಸುತ್ತಾರೆ. ಈ ರಾಜ್ಯದ ಬಣ್ಣ ಬಣ್ಣದ ಚಾಪೆಗಳು ಹೊರ ದೇಶಗಳಿಗೆ ರಫ್ತಾಗುತ್ತುದ್ದವೆಂದು ಮಾರ್ಕೊ ಪೋಲೋ ಹೇಳಿದ್ದಾನೆ. ಇಲ್ಲಿಯ ಸಂಪತ್ತನ್ನು ದೋಚಲು ಮತ್ತೆ ಮತ್ತೆ ದಾಳಿಗಳು ನಡೆದವು. ಖಿಲ್ಜಿಯ ಸೇನಾಪತಿ ಮಲಿಕಾಫರ್ ನೇತೃತ್ವದಲ್ಲಿ ೧೩೦೭ರಲ್ಲಿ ಮತ್ತೆ ದಾಳಿ ನಡೆಯಿತು. ಸೇವುಣರು ಸಂಪೂರ್ಣವಾಗಿ ಖಿಲ್ಜಿಯ ಹಿಡಿತಕ್ಕೆ ಸೇರಿದರು. ಸೇವುಣರ ರಾಮಚಂದ್ರನ ಸಹಾಯದಿಂದಲೇ ಮಲ್ಲಿಕಾಫರನು ಓರಂಗಲ್ಲಿನ ಮೇಲೆ ೧೩೦೯ರಲ್ಲಿ ದಾಳಿ ಮಾಡಿ ಕಾಕತೀಯರನ್ನು ಸೋಲಿಸಿ, ಅಲ್ಲಿಂದ ಅಪಾರ ಸಂಪತ್ತನ್ನು ಪಡೆದನು. ೧೩೧೧ರಲ್ಲಿ ಹೊಯ್ಸಳರ ರಾಜ್ಯಕ್ಕೆ ದಾಳಿ ಮುಂದುವರಿಯಿತು. ದೋರಸಮುದ್ರವನ್ನು ಮುತ್ತಿಗೆ ಹಾಕಿ ಮೂರನೇ ಬಲ್ಲಾಳನಿಂದ ಸಂಪತ್ತನ್ನು ಪಡೆಯಲಾಯಿತು. ಈ ದಾಳಿಯಲ್ಲಿ ಮಧುರೆಯನ್ನು ಬಿಡಲಿಲ್ಲ. ೧೨೯೬ರಿಂದ ೧೩೧೨ರವರೆಗೆ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಮೇಲೆ ಉತ್ತರದ ಅರಸರು ಮತ್ತೆಮತ್ತೆ ದಾಳಿ ಮಾಡಿದರು. ಇದೊಂದು ಸೈನಿಕ ದಾಳಿ. ಸಿಕ್ಕದ್ದನ್ನು ಸಿಕ್ಕಷ್ಟನ್ನು ದೋಚುವುದೇ ಈ ಸೈನ್ಯದ ಗುರಿಯಾಗಿತ್ತು. ದೆಹಲಿಯಲ್ಲಿ ಅಲ್ಲವುದ್ದೀನ್ ಖಿಲ್ಜಿಯನ್ನು ಬದಿಗೊತ್ತಿ ತುಘಲಕ್‌ ಮನೆತನ ಸಿಂಹಾಸನಕ್ಕೆ ಬಂದಿತು. ಮಹಮ್ಮದ್ ಬಿನ್ ತುಘಲಕನು ಕರ್ನಾಟಕದ ಮೇಲೆ ದಾಳಿಯನ್ನು ಆರಂಭಿಸಿದ. ಇಲ್ಲಿಂದ ಎರಡನೇ ಹಂತದ ಸೈನಿಕ ದಾಳಿ ಕರ್ನಾಟಕದ ಮೇಲೆ ನಡೆಯಿತು. ತುಘಲಕನ ಸೈನಿಕ ದಾಳಿಯಿಂದ ಸೇವುಣರು, ಕಾಕತೀಯರು, ಹೊಯ್ಸಳರು ಸೋತು ಶರಣರಾದರು. ಕಂಪಿಲಿಯ ಕಂಪಿಲರಾಯನೂ ತುಘಲಕನಿಗೆ ಸೋತುಹೋದ. ಕರ್ನಾಟಕದಲ್ಲಿ ತುಘಲಕನ ಸೈನ್ಯದ ತುಕಡಿಗಳು ನೆಲೆಯೂರಿದವು. ಹೊಯ್ಸಳ ಸಂತತಿಯು ಮಾತ್ರ ಜೀವದಿಂದ ಉಳಿದಿತ್ತು. ಉಳಿದ ದಕ್ಷಿಣ ಭಾರತದ ರಾಜ ಮನೆತನಗಳು ತುಘಲಕ್‌ನ ಕಾಲದಲ್ಲಿ ಕಣ್ಮರೆಯಾದವು. ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯವರೆಗೆ ಅಂದರೆ ೧೩೩೬ರವರೆಗೆ ಕರ್ನಾಟಕದ ಈ ಪ್ರಾಂತ ಸೈನಿಕ ದಾಳಿಗೆ ತುತ್ತಾಯಿತು. ೧೩೪೭ರಲ್ಲಿ ಬಹಮನಿ ರಾಜ್ಯ ಸ್ಥಾಪನೆಯಾಯಿತು. ಈ ಎರಡು ಸಾಮ್ರಾಜ್ಯಗಳಿಗೆ ತುಂಗಭದ್ರಾ-ಕೃಷ್ಣಾನದಿಗಳ ಪ್ರದೇಶವು ಗಡಿಯಾಯಿತು. ರಾಯಚೂರೂ ಸೇರಿದಂತೆ ಕರ್ನಾಟಕದ ಉತ್ತರ ಭಾಗದ ಕಲುಬುರ್ಗಿ, ಬೀದರ, ವಿಜಾಪುರ ಜಿಲ್ಲಾ ಪ್ರದೇಶಗಳು ಬಹಮನಿ, ನಂತರದ ಆದಿಲ್ ಶಾಹಿ ರಾಜ್ಯಾಡಳಿತಕ್ಕೆ ಒಳಪಟ್ಟವು. ತುಂಗಭದ್ರಾ ನದಿಯಿಂದ ಕರ್ನಾಟಕದ ದಕ್ಷಿಣದ ಕಡೆ ವಿಜಯನಗರ ಅರಸರ ಅಧೀನಕ್ಕೆ ಸೇರಿತು.

೯ನೇ ಶತಮಾನದಿಂದ ೧೨ನೇ ಶತಮಾನದವರೆಗೆ ಕೃಷ್ಣಾನದಿಯ ಮೇಲಿನ ಪ್ರದೇಶದಲ್ಲಿ (ಕೃಷ್ಣಾ-ಗೋದಾವರಿ ನಡುವಿನ ಪ್ರದೇಶವೆಂದರೂ ಸರಿಯೆ) ನಿರಂತರವಾಗಿ ಸಾಹಿತ್ಯ ಸೃಷ್ಟಿಯಾಯಿತು. ಈ ಕಾಲಾವಧಿಯಲ್ಲಿ ರಚನೆಗೊಂಡ ಸಾಹಿತ್ಯವು ವಸ್ತು, ಭಾಷೆ, ಮೌಲ್ಯಗಳ ದೃಷ್ಟಿಯಿಂದ ಸತ್ವಪೂರ್ಣವಾದದ್ದು. ಮಳಖೇಡ, ಕಲ್ಯಾಣ ಮತ್ತು ಇವುಗಳಿಂದ ಮುಂಚೆ ಬದಾಮಿ (ಐಹೊಳೆ, ಪಟ್ಟದಕಲ್ಲು) ಈ ನಗರಗಳು ಸಾಹಿತ್ಯ-ಕಲೆಗಳಿಗೆ ಕೇಂದ್ರಗಳಾಗಿ ಮಹತ್ವದ ಪಾತ್ರವನ್ನು ನಿರ್ವಹಿಸಿದವು. ವಚನಕಾರರ ನಂತರ ರಾಜಕೀಯ ಸ್ಥಿತ್ಯಂತರಗಳು ನಡೆಯತೊಡಗಿದವು. ಕರ್ನಾಟಕದ ಉತ್ತರ ಭಾಗದಲ್ಲಿ ಬಹಮನಿರಾಜ್ಯ ಸ್ಥಾಪನೆಯಾಗುವವರೆಗೆ ಈ ಪ್ರಾಂತವು ಉತ್ತರದ ಸೈನಿಕ ದಾಳಿಗೆ ತುತ್ತಾಗಿ ತಲ್ಲಣಿಸಿತು. ೧೩ನೇ ಶತಮಾನದಿಂದ ಅನ್ಯ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿದ್ದ ಉತ್ತರದ ಅರಸರ ಅಧೀನಕ್ಕೆ ಒಳಗಾದ ಈ ಪ್ರಾಂತ ೧೯೪೮ರವರೆಗೆ ಅವರ ಕೈಯಲ್ಲಿಯೇ ಉಳಿಯಿತು. ಇದರಿಂದ ಕನ್ನಡ ಭಾಷೆ ಹಿನ್ನೆಲೆಗೆ ಸರಿಯಿತು. ಭಾಷೆ ಹಿನ್ನೆಲೆಗೆ ಸರಿದ ಮೇಲೆ ಸಾಹಿತ್ಯ ರಚನೆಯು ನಿಂತು ಹೋಯಿತು. ಮೌಖಿಕವಾಗಿ ಮಾತ್ರ ಕನ್ನಡ ಭಾಷೆ, ಸಾಹಿತ್ಯ ಗುಟುಕು ಜೀವದಿಂದ ಉಳಿದಿತ್ತು. ಅನ್ಯಭಾಷೆ-ಸಂಸ್ಕೃತಿಯ ಜತೆ ಸಹಬಾಳು ನಡೆಸಿದ ಈ ಪ್ರಾಂತದ ಕನ್ನಡ ಭಾಷೆ-ಸಂಸ್ಕೃತಿ ಸಂಕರವಾಯಿತು.

ಕರ್ನಾಟಕದಲ್ಲಿ ಸೇವುಣರ ಆಳ್ವಿಕೆಯಿದ್ದ ಕಾಲದಲ್ಲಿ ಅವರ ಶಾಸನಗಳು ಕನ್ನಡದಲ್ಲಿವೆ. ಆದರೂ ಅವರು ಮರಾಠಿ ಸಾಹಿತ್ಯ-ಸಂಸ್ಕೃತಿಗೆ ಪ್ರೋತ್ಸಾಹ ನೀಡಿದರೂ ಸಾಹಿತ್ಯ ರಚನೆಯಾದದ್ದು ಮಾತ್ರ ಕಮ್ಮಿ. ೧೩ ರಿಂದ ೧೭ನೇ ಶತಮಾನದವರೆಗೆ ಮಹಾರಾಷ್ಟ್ರದಲ್ಲಿ ವಾರಕರಿ ಸಂಪ್ರದಾಯ ಎಂಬ ಭಕ್ತಿ ಚಳುವಳಿ ನಡೆಯಿತು. ಈ ಭಕ್ತಿ ಚಳುವಳಿಯಲ್ಲಿ ಅನೇಕ ಜಾತಿಗಳು ಸೇರಿಕೊಂದಿದ್ದವು. ಈ ಭಕ್ತಿ ಚಳುವಳಿಯ ಭಾಗವಾಗಿ ಭಕ್ತಿಗೀತೆಗಳು ರಚನೆಯಾದದ್ದು ಬಿಟ್ಟರೆ ಮಹತ್ವದ ಸಾಹಿತ್ಯ ಕೃತಿಗಳು ರಚನೆಯಾಗಲಿಲ್ಲ. ಉತ್ತರದ ದಾಳಿ ಆರಂಭವಾದ ಮೇಲೆ ಮರಾಠಿ ಭಾಷೆಯಲ್ಲಿ ಸಾಹಿತ್ಯ ರಚನೆ ನಿಂತು ಹೋಗಿರಬೇಕು. ‘ಹೆಸರು ಹೇಳಬೇಕಾದಂತಹ ಉತ್ತಮ ಮಟ್ಟದ ಯಾವುದೇ ಕೃತಿಯು ಮರಾಠಿಯಲ್ಲಿ ಹದಿನಾಲ್ಕನೇ ಶತಮಾನದಲ್ಲಿ ರಚಿತವಾಗಲಿಲ್ಲ.[7] ಬಹಮನಿ-ಆದಿಲ್ ಶಾಹಿ ರಾಜ್ಯಗಳ ಆಳ್ವಿಕೆಯಲ್ಲಿ ಫಾರಸಿ, ಮರಾಠಿ, ದಖನಿಯಲ್ಲಿ ಸಾಹಿತ್ಯ ರಚನೆಯಾಗಿದೆ. ಆದರೆ ಕೃಷ್ಣಾ ನದಿಯ ಕೆಳಗೆ ಕರ್ನಾಟಕದ ದಕ್ಷಿಣ ಭಾಗದ ಪ್ರಾಂತದಲ್ಲಿ ಕನ್ನಡ ಸಾಹಿತ್ಯ ರಚನೆಯಾಯಿತು. ವಿಜಯನಗರ ಅರಸರು ಈ ಭಾಗದಲ್ಲಿ ಸಾಹಿತ್ಯ-ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ಹರಿಹರ, ರಾಘವಾಂಕ, ಚಾಮರಸ, ಭೀಮಕವಿ, ಷಡಕ್ಷರಿ, ಸರ್ವಜ್ಞ, ಕುಮಾರವ್ಯಾಸ, ರತ್ನಾಕರ ಮುಂತಾದವರು ಲಿಖಿತ ಪರಂಪರೆಯನ್ನು ಮುಂದುವರಿಸಿದರು. ಇವರಲ್ಲಿ ಕೆಲವರು ರಾಜಾಶ್ರಯದಲ್ಲಿ, ಕೆಲವರು ಸ್ವತಂತ್ರವಾಗಿ ಇದ್ದವರಿದ್ದಾರೆ. ಇವರೆಲ್ಲರೂ ಈ ಪ್ರಾಂತದ ತಿರುಳ್ಗನ್ನಡ ನಾಡಿಗೆ ಸೇರಿದವರೇ ಆಗಿದ್ದಾರೆ.

೧೩೪೭ರಲ್ಲಿ ಬಹಮನಿ ರಾಜ್ಯ ಅಸ್ತಿತ್ವಕ್ಕೆ ಬಂದಿತಷ್ಟೆ. ಬಹಮನಿ ಸುಲ್ತಾನರು ಮೊದಲು ಕಲಬುರ್ಗಿ, ನಂತರ ಬೀದರ ನಗರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು. ಕೆಲವು ವರ್ಷಗಳ ನಂತರ ಬಹಮನಿ ರಾಜ್ಯ ಒಡೆದು ಆದಿಲ್‍ಶಾಹಿ (ವಿಜಾಪುರ), ಇಮಾಮ್‍ಶಾಹಿ (ಅಹಮದ್ ನಗರ), ನಿಜಾಮ್‍ಶಾಹಿ (ಗೋಲ್ಕೊಂಡ), ಕುತುಬ್ ಶಾಹಿ (ಗುಲಬರ್ಗಾ) ಹಾಗೂ ಬರೀದ್ ಶಾಹಿ (ಬೀದರ) ಎಂಬ ಐದು ರಾಜ್ಯಗಳಾದವು. ವಿಜಯನಗರ ರಾಜ್ಯ ಪತನವಾಗುವವರೆಗೆ ಇವು ಅಧಿಕಾರದಲ್ಲಿದ್ದು ನಂತರ, ಪ್ರಬಲವಾಗಿದ್ದ ಆದಿಲ್‍ಶಾಹಿ ರಾಜ್ಯದಲ್ಲಿ ಸೇರಿಕೊಂಡವು. ಮುಂದೆ ಮರಾಠರು ಪ್ರಬಲರಾಗುವವರೆಗೂ ಸೇವುಣರ ಪ್ರಾಂತವೂ ಆದಿಲ್‍ಶಾಹಿಗಳ ಅಧೀನದಲ್ಲಿತ್ತು. ವಿಜಾಪುರ, ಗುಲಬರ್ಗಾ, ಬೀದರ, ರಾಯಚೂರು ಜಿಲ್ಲಾ ಪ್ರದೇಶಗಳು ಈ ಶಾಹಿರಾಜ್ಯಗಳ ಹಿಡಿತದಲ್ಲಿದ್ದವು. ಮೊದಲು ಬಹಮನಿ ನಂತರ ಆದಿಲ್‍ಶಾಹಿ ರಾಜ್ಯಗಳ ಸುಲ್ತಾನರು, ವಿಜಯನಗರ ಅರಸರು ರಾಜಕೀಯ ಕಾರಣಗಳಿಗಾಗಿ ನಿರಂತರವಾಗಿ ಯುದ್ಧದಲ್ಲಿ ತೊಡಗಿದ್ದವು. ಹಾಗೆಯೇ ಅವುಗಳ ನಡುವೆ ಅನಿವಾರ್ಯ ಕಾರಣಗಳಿಂದಾಗಿ ಸಾಂಸ್ಕೃತಿಕವಾದ ವಿನಿಮಯವೂ ನಡೆದಿತ್ತು. ಎಲ್ಲವೂ ರಾಜಕೀಯ ದಾಹದಿಂದಲೇ ಘಟಿಸಿದವೇ ಹೊರತು ಮತೀಯ ಕಾರಣಗಳು ಕಮ್ಮಿ. ಈ ಎರಡು ರಾಜ್ಯಗಳ ನಡುವಿದ್ದ ‘ದೋ ಆಬ್’ ಎನ್ನುವ ಪ್ರದೇಶಕ್ಕಾಗಿ ನಿರಂತರ ಯುದ್ಧಗಳು ಸಂಭವಿಸಿದವು. ಕೃಷ್ಣಾ-ತುಂಗಭದ್ರಾ ನದಿಗಳ ನಡುವಿದ್ದ ವಿಶಾಲ ಪ್ರದೇಶ ಫಲವತ್ತಾಗಿದ್ದು, ಅಲ್ಲಿ ಆಹಾರ ಧಾನ್ಯಗಳು, ಎಣ್ಣೆ ಬೀಜಗಳು, ಖನಿಜ ಸಂಪತ್ತಿನಿಂದ ಆದಾಯ ತರುವ ನಾಡಾಗಿತ್ತು. ಈ ಕಾರಣಕ್ಕಾಗಿಯೇ ಚರಿತ್ರೆಯ ಉದ್ದಕ್ಕೂ ಈ ನಾಡಿಗಾಗಿ ರಾಜ್ಯ ರಾಜ್ಯಗಳ ನಡುವೆ ಯುದ್ಧಗಳು ನಡೆದವು. ವಿಜಯನಗರ ರಾಜ್ಯ ಪತನ ಆಗುವವರೆಗೆ ಈ ನಾಡಿಗಾಗಿ ಯುದ್ಧಗಳು ಸಾಮಾನ್ಯ ಎನಿಸಿಬಿಟ್ಟವು. ೧೩೫೧ರಲ್ಲಿ ಬಹಮನಿಯ ಅಲ್ಲಾವುದ್ದೀನ್ ಮತ್ತು ವಿಜಯನಗರ ಹರಿಹರ ನಡುವೆ ಮೊದಲ ಯುದ್ಧ ಆರಂಭವಾಯಿತು. ಇಲ್ಲಿಂದ ಸುಮಾರು ಹದಿನೈದು ದೊಡ್ಡಯುದ್ಧಗಳು ರಾಯಚೂರು-ಮುದಗಲ್ಲು ಗಡಿಯಗುಂಟ ಸಂಭವಿಸಿವೆ. ಕೃಷ್ಣಾ ನದಿಯ ಆಚೆ ಮತ್ತು ಕೃಷ್ಣಾ ನದಿಯ ಈಚೆಗೆ ಈ ಎರಡು ರಾಜ್ಯಗಳ ನಡುವೆ ನಡೆದ ಸಣ್ಣಪುಟ್ಟ ಯುದ್ಧಗಳನ್ನು ಹೊರತು ಪಡಿಸಿದರೆ ಸುಮಾರು ಐವ್ವತ್ತು ದೊಡ್ಡ ಯುದ್ಧಗಳು (೧೩೫೧ರಿಂದ ೧೫೦೫ರವರೆಗೆ) ಸಂಭವಿಸಿದವು. ಒಂದೊಂದು ಸಲ ವರ್ಷವಿಡೀ ಯುದ್ಧ ಘಟಿಸಿವೆ. ೧ನೇ ದೇವರಾಯನು ಮುದಗಲ್ಲಿನ ರೈತನೊಬ್ಬನ ಮಗಳ ಚಲುವಿಗೆ ಮನಸೋತು ಅವಳನ್ನು ಪಡೆಯಲು ಪ್ರಯತ್ನಿಸಿದ. ಬಹಮನಿಗಳು ಬಿಡಲಿಲ್ಲ. ಯುದ್ಧವೇ (೧೪೦೬-೭) ನಡೆದು ಹೋಯಿತು. ೧ನೇ ದೇವರಾಯ ಸೋತು ಅಪಮಾನಕರ ಕರಾರುಗಳಿಗೆ ಒಪ್ಪಬೇಕಾಯಿತು. ಇಂಥ ಯುದ್ಧವೂ ಈ ಯುದ್ಧಗಳಲ್ಲಿ ಸೇರಿದೆ. ಆದಿಲ್‍ಶಾಹಿ ಮತ್ತು ಇತರ ಶಾಹಿರಾಜ್ಯಗಳ ನಡುವೆಯೂ ಯುದ್ಧಗಳು ನಡೆದವು. ಈ ಪ್ರಾಂತದ ಜನಸಮುದಾಯಗಳು ಯುದ್ಧಗಳ ನೆರಳಿನಲ್ಲಿ ಬದುಕುತ್ತ ಬಂದವು.

ವಿಜಯನಗರದಲ್ಲಿ, ಅದರಲ್ಲೂ ಪ್ರೌಢದೇವರಾಯನ ಕಾಲದಲ್ಲಿ ಸಾಹಿತ್ಯ ಚಟುವಟಿಕೆಗಳು ಸಂಘಟಿತವಾಗಿ ನಡೆದವು. ಕಲ್ಯಾಣದ ಶರಣರು ಕಲ್ಯಾಣವನ್ನು ತೊರೆದು ಹೋಗಿ ಎಲ್ಲೆಲ್ಲೊ ನೆಲೆಪಡೆದುಕೊಂಡರಷ್ಟೆ ಹಂಪೆಯ ಪರಿಸರದಲ್ಲೂ ನೆಲೆಯೂರಿರಬಹುದು. ಮುಂದೆ ಶರಣರ ವಚನಗಳನ್ನು ಸಂಕಲಿಸುವ ಕಾರ್ಯ ಹಂಪೆಯಲ್ಲೇ ನಡೆಯಿತು. ‘ನೂರೊಂದು ವಿರಕ್ತರು’ ವೀರಶೈವ ಧರ್ಮವನ್ನು ಪುನಃ ಬಲಪಡಿಸಲು ಪ್ರಯತ್ನಿಸಿದರು. ವಚನಕಾರರ ಸಾಂಸ್ಕೃತಿಕ ಚಳುವಳಿಯ ಸಂವಾದವಾಗಿ ರಚನೆಯಾದ ವಚನಗಳನ್ನೇ ಆಧಾರವಾಗಿಟ್ಟುಕೊಂಡು ‘ವೀರಶೈವ ಸಿದ್ಧಾಂತ’ವನ್ನು ನಿರೂಪಿಸಲು ಯತ್ನಿಸಿದರು. ಮಹಾಲಿಂಗದೇವ (ಏಕೋತ್ತರ ಶತಸ್ಥಲ), ಕಲ್ಲು ಮಠದ ಪ್ರಭುದೇವ (ಲಿಂಗಲೀಲಾವಿಲಾಸ ಚಾರಿತ್ರ), ಕರಸ್ಥಲದ ಮಲ್ಲಿಕಾರ್ಜುನೊಡೆಯ (ಬ್ರಹ್ಮಾದ್ವೈತ ಸಿದ್ಧಾಂತ ಷಟ್ ಸ್ಥಲಾಭರಣ), ಜಕ್ಕಣ್ಣ (ನೂರೊಂದು ಸ್ಥಲ) ಮುಂತಾದವರು ವಚನಗಳನ್ನು ಸ್ಥಲಕಟ್ಟುಗಳಲ್ಲಿ ವಿಂಗಡಿಸಿ ಸಂಕಲಿಸಿದರು. ವಚನಕಾರರ ವಚನಗಳನ್ನು ರಕ್ಷಿಸಿ ಸಂಕಲಿಸಿದ್ದುದೇ ಇವರ ಸಾಧನೆಯಾಯಿತು. ಆದರೆ ವಚನಕಾರರ ಮೂಲ ಧೋರಣೆ, ತಾತ್ವಿಕತೆಗೆ ಈ ಸ್ಥಲಕಟ್ಟು ಸಂಕಲನಗಳು ಅಡ್ಡಿಯನ್ನುಂಟುಮಾಡಿವೆ. ಶರಣರ ಸಾಂಸ್ಕೃತಿಕ ಚಳುವಳಿಯನ್ನು ಪುನರ್ ಸಂಘಟಿಸಿ ನಡೆಸುವ ಬದಲು, ಶರಣರ ವಚನಗಳನ್ನು ಆಧಾರವಾಗಿಟ್ಟುಕೊಂಡು ‘ವೀರಶೈವೀ ಕರಣ’ ಮಾಡುವ, ‘ವೀರಶೈವ ಸಿದ್ಧಾಂತ’ವನ್ನು ನಿರೂಪಿಸುವ ಕೆಲಸ ಕೈಗೊಂಡಿತು. ಅದು ವಚನಕಾರರನ್ನು ಒಂದು ಮಿತಿಗೆ ಒಳಗಾಗುವಂತೆ ಮಾಡಿತು. ವಚನಗಳಿಗೆ ಬಹು ಆಯಾಮಗಳಿವೆ. ಈ ಆಯಾಮಗಳನ್ನು ಅರಿಯುವ ಪ್ರಯತ್ನಗಳಾಗದೆ ಸೀಮಿತ ಚೌಕಟ್ಟಿಗೆ ತರುವ ಪ್ರಯತ್ನಗಳಾದವು. ‘ಏಕೆಂದರೆ ಬದುಕಿನ ಕ್ರಮಗಳು ಅನುಭವಾವದ ಕ್ಷಣಗಳು, ಇವೆಲ್ಲವನ್ನು ಕೃತಕ ಶಿಸ್ತಿಗೆ ಗುರಿಪಡಿಸುವ ಕ್ರಮಗಳಿಂದ ವಚನಕಾರರ ಹಾಗೂ ವಚನಗಳ ಅಧ್ಯಯನಕ್ಕೆ ಮಿತಿಯನ್ನು ತಂದಹಾಗೆ ಆಗುತ್ತದೆ.’[8] ವಚನಗಳನ್ನು ಮುಕ್ತವಾಗಿ ಓದುವುದಕ್ಕೆ ಈ ಸ್ಥಲಕಟ್ಟುಗಳ ಸಂಕಲನಗಳು ತೊಡಕನ್ನುಂಟು ಮಾಡುತ್ತವೆ. ಆಧುನಿಕ ಓದುಗರ ವಚನಗಳನ್ನು ತಮಗೆ ಬೇಕಾದ ರೀತಿಯಲ್ಲಿ ಮುಕ್ತವಾಗಿ ಓದುತ್ತ ನಡೆದಿದ್ದಾರೆ. ಜನಸಮುದಾಯಗಳ ನಡುವೆ ಹುಟ್ಟಿದ ವಚನ ಸಾಹಿತ್ಯವನ್ನು ವಿಜಯನಗರ ಕಾಲದ ಸಂಕಲನಕಾರರು ಅದನ್ನು ಮಠಗಳ ಒಳಗೆ ಒಯ್ದದ್ದು ಈ ಕಾಲದಲ್ಲಿ ನಡೆದ ಬೆಳವಣಿಗೆಯಾಗಿದೆ.

ಕೃಷ್ಣಾನದಿಯ ಕೆಳಗೆ, ತುಂಗಭದ್ರ ನದಿಯ ಮೇಲೆ ಹಂಪೆ ಪರಿಸರದಲ್ಲಿ ಮೊದಲಿಗೆ ಹರಿಹರ, ರಾಘವಾಂಕ ನಂತರ ಚಾಮರಸ, ಲಕ್ಕಣ್ಣ ದಂಡೇಶ, ಮೊಗ್ಗೆಯ ಮಾಯಿದೇವ, ಗುರುಬಸವ, ಕರಸ್ಥಲದ ವೀರಣ್ಣೊಡೆಯ, ಕರಸ್ಥಲದ ನಾಗಿದೇವ ಮುಂತಾದವರು ಕಾವ್ಯಗಳನ್ನು ರಚಿಸಿದರು. ಈ ಬಗ್ಗೆಯ ಚಟುವಟಿಕೆಗಳು ಹಂಪೆಯ ಪರಿಸರದಲ್ಲಿ ನಡೆಯುತ್ತಿದ್ದಾಗಲೇ, ಕೃಷ್ಣಾ ನದಿಯ ಮೇಲೆ ಉತ್ತರದ ಕಡೆ ಬಹಮನಿ-ಆದಿಲ್ ಶಾಹಿಗಳ ಆಡಳಿತದ ಕಾಲದಲ್ಲಿ ಇನ್ನೊಂದು ಬಗೆಯಲ್ಲಿ ಸಾಂಸ್ಕೃತಿಕ ಬೆಳವಣಿಗೆಗಳು ನಡೆದವು.[1] ಕೀರ್ತಿನಾಥ ಕುರ್ತಕೋಟಿ: ಕನ್ನಡ ಸಾಹಿತ್ಯ ಸಂಗಾತಿ (೧೯೯೫), ಪುಟ-೩೧

[2] ಎಂ. ರಾಮಾಜೋಯಿಸ : ಪ್ರಜಾವಾಣಿ ದಿನ ಪತ್ರಿಕೆ (೩-೬-೨೦೦೧)

[3] ಆರ್.ಎನ್.ನಂದಿ : ವೀರಶೈವ ಚಳುವಳಿಯ ಹುಟ್ಟು (ಕನ್ನಡ ಅಧ್ಯಯನ-ಬಿಸಿಲು ಸಂಚಿಕೆ-೨೦೦೧), ಪು-೫೮

[4] ಆರ್.ಎನ್.ನಂದಿ : ವೀರಶೈವ ಚಳುವಳಿಯ ಹುಟ್ಟು (ಕನ್ನಡ ಅಧ್ಯಯನ-ಬಿಸಿಲು ಸಂಚಿಕೆ-೨೦೦೧), ಪು-೫೯-೬೦

[5] ಎ.ವಿ. ನರಸಿಂಹಮೂರ್ತಿ: ಕರ್ನಾಟಕ ಸೇವುಣರ ಇತಿಹಾಸ, ಪುಟ-೭೨

[6] ಎ.ವಿ. ನರಸಿಂಹಮೂರ್ತಿ: ಕರ್ನಾಟಕ ಸೇವುಣರ ಇತಿಹಾಸ, ಪುಟ-೯೬

[7] ಎ.ವಿ. ನರಸಿಂಹಮೂರ್ತಿ: ಕರ್ನಾಟಕ ಸೇವುಣರ ಇತಿಹಾಸ, ಪುಟ-೯೬

[8] ಬಸವರಾಜ ಕಲ್ಗುಡಿ : ಅನುಭಾವ : ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ (೧೯೯೭) ಪುಟ-೫೧